೧೫

ಮಿಂಗೇಲಿ ಶಿವಮೊಗ್ಗಗೆ ಹೋಗಿದ್ದ. ವಿಮಲಳನ್ನೂ ಚಂದುವನ್ನೂ ಕರೆದುಕೊಂಡು ಹೋಗಿ ನೆಲಸಲು ಮನೆಯನ್ನು ಸಿದ್ಧಪಡಿಸಬೇಕಿತ್ತು. ಮಂಜಯ್ಯ ಕಟ್ಟಿಸಿದ ಬಂಗಲೆಯಲ್ಲೇ ಅವರು ಸಿನಿಮಾ ನೋಡಿ ಇಳಿದುಕೊಳ್ಳುತ್ತಿದ್ದುದು. ಅದನ್ನೇ ಮನೆಯಾಗಿ ಪರಿವರ್ತಿಸಿ, ಪೆಟ್ರೋಲು ಬಂಕಿನ ವ್ಯವಹಾರವನ್ನು ಕೈಗೆ ತೆಗೆದುಕೊಂಡು, ಒಂದು ಅತ್ಯಾಧುನಿಕವಾದ ಗ್ಯಾರೇಜನ್ನೂ ಶುರುಮಾಡುವ ಯೋಚನೆಯಲ್ಲ ಅವನಿದ್ದ. ಒಳ್ಳೆ ಲಾಭದಾಯಕವಾದ ಉದ್ಯಮ ಅದು. ಕಾರನ್ನೂ ಸ್ಕೂಟರನ್ನೂ ಕೊಂಡು ಮಾರಿದರೇ ಸಾಕು, ಲಾಭವಾಗುತ್ತದೆ. ಮಂಜಯ್ಯನವರ ಅಳಿಯನೆಂದು, ಈಗ ದೊಡ್ಡ ಹೆಸರು ಮಾಡುತ್ತಿರುವ ಘನಶ್ಯಾಮನ ಭಾವನೆಂದು ತನಗೆ ಅಗತ್ಯವಾದ ಲೈಸೆನ್ಸ್‌ಗಳೆಲ್ಲವೂ ಸಿಕ್ಕೇಸಿಗುತ್ತವೆ. ಘನಶ್ಯಾಮನ ಒಪ್ಪಿಗೆಯೂ ಈ ಕಾರು ಸ್ಕೂಟರುಗಳ ಗ್ಯಾರೇಜು ತೆರೆಯಲು ಅವನಿಗೆ ಸಿಕ್ಕಿತ್ತು.

ವಿಮಲ ಇನ್ನೊಂದು ತಿಂಗಳಾದರೂ ಮಗುವಿನ ಜೊತೆ ದೇವನಹಳ್ಳಿಯಲ್ಲೇ ಇರುವುದೆಂದು ನಿರ್ಧರಿಸಿದ್ದಳು. ಮಗು ಅಕ್ಕುವನ್ನೂ ಗೌರಿಯನ್ನೂ ಹಚ್ಚಿಕೊಂಡಿತ್ತು. ಅಕ್ಕುವಾಗಲೀ ಗೌರಿಯಾಗಲೀ ಶಿವಮೊಗ್ಗೆಗೆ ಬಂದು ತನ್ನ ಜೊತೆ ಇರಲಾರರು. ಗೌರಿಯನ್ನಾದರೂ ಕರೆದುಕೊಂಡು ಹೋಗಬಹುದು. ಅಕ್ಕುವನ್ನು ಆಗದು. ಅವಳು ವಿಚಾರದಲ್ಲಿ ಧಾರಾಳಿಯಾಗಿರಬಹುದು; ಆದರೆ ಆಚಾರದಲ್ಲಿ ಅವಳು ಮಡಿ ಹೆಂಗಸೇ.

ಕೇಶವನೂ ಬಲು ಗೆಲುವಿನಲ್ಲಿದ್ದ. ಇನ್ನು ಮುಂದೆ ಅವನು ಎಲ್ಲಿ ಬೇಕೆಂದರಲ್ಲಿ ಓಡಾಡಿಯಾನು. ನಿತ್ಯ ಭೂವರಾಹ ಪೂಜೆ ಮಾಡಲು ಅವನು ದೇವನಹಳ್ಳಿಯಲ್ಲಿ ಇರಲೇ ಬೇಕೆಂದಿಲ್ಲ. ಆಸುಪಾಸಿನಲ್ಲಿ ಇನ್ನು ಯಾವ ಪೂಜೆ ಬ್ರಾಹ್ಮಣನೂ ಅಲ್ಲಿ ಇದ್ದಿಲ್ಲವಾಗಿ, ಕೇಶವ ಒಂದು ದಿನವಾದರೂ ಹೊರಗಿದ್ದು ಬರುವುದು ಸಾಧ್ಯವಾಗಿರಲಿಲ್ಲ. ಉಡುಪಿಗೆ ಪರ್ಯಾಯ ನೋಡಲು ಹೋಗಬೇಕೆಂದು ಆಸೆಯಾಗಿತ್ತು; ಹೋಗಿರಲಿಲ್ಲ. ಯಾರಾದರೂ ಮೇಳದವರು ತೀರ್ಥಹಳ್ಳಿಗೆ ಬಂದರೆ ಮಾತ್ರ ಅವನು ಆಟವನ್ನು ನೋಇಡ, ಬೆಳಗಿನ ಬಸ್ಸು ಹಿಡಿದು ಬಂದು ಪೂಜೆಗೆ ಅಣಿಯಾಗಬೇಕಾಗಿತ್ತು. ಇನ್ನೆಲ್ಲಿ ಮೇಳದವರು ಬಂದರೂ ಅವನು ಹೋಗಲಾರ. ಪ್ರವಚನಕಾರನೆಂದು ದೊಡ್ಡ ಹೆಸರು ಮಾಡಬಹುದಿತ್ತು. ಅದಕ್ಕೂ ಭೂವರಾಹ ಅಡ್ಡಬಂದಿದ್ದ.

ಚಿಕ್ಕ ಸಾಹುಕಾರರು ತನ್ನನ್ನು ಭೂವರಾಹ ದಾಸ್ಯದಿಂದ ಪಾರುಮಾಡಿದರು ಎಂದು ಅವನು ಈಗ ಖುಷಿಯಾಗಿದ್ದಾನೆ. ಈ ಬಿಡುಗಡೆಯಿಂದ ತನಗೆ ಹೆಚ್ಚು ಗೆಲುವಾಗಿದೆ ಎಂಬುದನ್ನು ಗೌರಿಯ ಹತ್ತಿರವೂ ಶಾಸ್ತ್ರಿಗಳ ಹತ್ತಿರವೂ ಅವನು ಕೊಂಚ ಆತಂಕಪಡುತ್ತಲೇ ಹೇಳಿಕೊಂಡಿದ್ದಾನೆ. ಅಕ್ಕುಗೂ ಇದು ಗೊತ್ತಾಗಿದೆ.

ಭೂವರಾಹ ಸಾಹುಕಾರರ ಮನೆಯ ಗೋಡೆಯ ಚಂದಕ್ಕೊಂದು ಬೊಂಬೆಯಾದ್ದನ್ನು ತಾನು ನೋಡಿದೆನೆಂದು ಹೇಳಲು ಆಗ ಶಾಸ್ತ್ರಿಗಳು ಇಷ್ಟಪಟ್ಟಿರಲಿಲ್ಲ. ಎಲ್ಲರಿಗೂ ಇದರಿಂದ ನೋವಾದೀತು; ಪೂಜೆ ತಪ್ಪಿದ್ದರಿಂದ ಕೇಶವ ಪಡುತ್ತಿದ್ದ ಸಂತೋಷ ಈ ಸುದ್ದಿಯಿಂದ ಕಲುಷಿತಗೊಂಡೀತು.

ಪುಣ್ಯಕ್ಕೆ ತನ್ನನ್ನು ಬಿಟ್ಟರೆ ಇನ್ನು ಯಾರಿಗೂ ಭೂವರಾಹನಿಗೆ ಒದಗಿದ ಅಪದೆಸೆ ತಿಳಿದಂತಿರಲಿಲ್ಲ. ಹೊರಗಿನವರಿಗೆ ತೋರಿಸಿಕೊಳ್ಳಲೆಂದೇ, ಪ್ರಾಯಶಃ ಪತ್ರಿಕೆಗಳಲ್ಲಿ ಅದೊಂದು ಚಿತ್ರವಾಗಲೆಂದೇ, ಕ್ರಾಂತಿಮಾಡಲಿಕ್ಕೆ ಹೊರಟ ಈ ಮಹಾರಾಯ ರಾಜಕಾಣಿ ಅದನ್ನು ಅಲ್ಲಿ ಕಾಣುವಂತೆ ಇಟ್ಟಿರುವುದು.

ಒಂದೋ ಪಾಷಂಡಿಗಳು, ಅಥವಾ ಬಾಯಿಬಡುಕ ಭಕ್ತರು ವಿಜೃಂಭಿಸುವ ಕಾಲ ಬಂದಿರುವಂತೆ ತೋರುತ್ತದೆ. ದೇವರಿಗಿನ್ನು ಗರ್ಭಗುಡಿಯ ಕತ್ತಲು ಇಲ್ಲ; ಕಣ್ಣುಕೋರೈಸುವಂತೆ ಜಗಜಗಿಸುವ ತಿರುಪತಿಯ ತಿಮ್ಮಪ್ಪನಿಗೂ ಇಲ್ಲ. ಅವರೇ ಕಂಡಿಲ್ಲವೆ? ಎಲ್ಲೆಲ್ಲೂ ಕಣ್ಣುಕುಕ್ಕುವ ಬಣ್ಣಬಣ್ಣದ ಶಿಖರಗಳೇ. ಅನ್ನಪೂರ್ಣೆಯನ್ನು ಹಣತೆದೀಪದಲ್ಲಿ ನೋಡಿ ಕಣ್ಣೊಳಗೆ ತುಂಬಿಕೊಳ್ಳುವ ಪುಣ್ಯ ಇನ್ನೆಷ್ಟು ದಿನ ಉಳಿದಿರುತ್ತದೋ.

* * *

ಕೇಶವ ವಿನೋದಿನಿಯ ಸಂಸ್ಕೃತ ಅಧ್ಯಾಪಕನಾಗಿ ಅರಳಲು ತೊಡಗಿದ್ದ. ಒಂದೇ ಒಂದು ದಿನವೂ ಪಾಠ ತಪ್ಪುತ್ತಿರಲಿಲ್ಲ. ಕಾಳಿದಾಸನ ಕುಮಾರ ಸಂಭವದಿಂದಲೇ ಅವನು ಪ್ರಾರಂಭಿಸಿದ್ದ. ಕಾಲೇಜಿನಲ್ಲಿ ಸಂಸ್ಕೃತ ಕಲಿತ ವಿನೋದಿನಿಗೆ ಕೇಶವನ ಪಾಠದ ಕ್ರಮ ವ್ಯಾಕರಣ ಅನ್ವಯ ಇತ್ಯಾದಿಗಳ ಗೋಜಿಗೆ ಹೋಗದ ರಸಾನುಭವದ ಪಾಠವೇ ಆಗಿತ್ತು. ‘ಮಾವಯ್ಯನಿಗೆ ಈ ಪಾಠ ಹೇಳುವುದೂ ಭೂವರಾಹ ಪೂಜೆಯಂತಾಗಿಯೇ ಬಿಟ್ಟಿತು’ ಎಂದು ಗೌರಿ ತುಂಟಾಗಿ ನಕ್ಕು ಕೇಶವನನ್ನು ರೇಗಿಸಿದ್ದಳು.

ಮಾವಯ್ಯನ ಇನ್ನೊಂದು ಗುಟ್ಟು ಗೌರಿಗೆ ಮಾತ್ರ ರಟ್ಟಾಗಿತ್ತು. ತನ್ನ ಈಚಿನ ಟ್ರಸ್ಟ್ ಸೆಕ್ರೆಟರಿ ಚೀಲದಲ್ಲಿ ಅವನು ಒಂದು ಹೊಸ ಕನ್ನಡಿಯನ್ನು ಕೊಂಡು ಇಟ್ಟುಕೊಂಡಿದ್ದ. ಅಕ್ಕುಗೆ ಕಾಣದಂತೆ ಅದರಲ್ಲಿ ಅವನು ಒಮ್ಮೆ ಮನೆಯ ಅಂಗಳದಲ್ಲಿ, ಉಣುಗೋಲಬಳಿ ನಿಂತು, ಮುಖವನ್ನು ನೋಡಿಕೊಳ್ಳುತ್ತಿದ್ದಾಗ ಗೌರಿ ಹಿಂದಿನಿಂದ ಬಂದು ಅವನ ಜುಟ್ಟನ್ನು ಎಳೆದು ಅವನು ನಾಚಿ ಕೆಂಪಾಗುವಂತೆ ಮಾಡಿದ್ದಳು.

ವಿನೋದಿನಿ ಸ್ಕೂಲನ್ನು ಮುಗಿಸಿ ನಿತ್ಯ ಪಾಠಕ್ಕೆ ದೈನೆಮನೆಯಲ್ಲೇ ಹಾಜರು. ಅಕ್ಕುಗೆ ವಿನೋದಿನಿ ಬಲು ಇಷ್ಟದವಳಾದಳು. ಅಕ್ಕು ಅವಳನ್ನು ವಿನೋದ ಎಂದೇ ಕರೆಯುವುದು. ಅಡುಗೆ ಮನೆಯಲ್ಲಿ ಅಲ್ಲ, ಆದರೆ ಅದರ ಬಾಗಿಲಲ್ಲಿ ತಾನು ನಿಂತಿರಬಹುದೆಂದು ವಿನೋದಿನಿ ಊಹಿಸಿ ಪಾಠವಾದ ಮೇಲೆ ಅಲ್ಲೇ ನಿಂತಿದ್ದು ಅಕ್ಕುವನ್ನು ಮಾತಾಡಿಸಿಕೊಂಡು, ಅವಳಿಗೆ ಮೆಟ್ಟುಕತ್ತಿಯಿಂದ ತರಕಾರಿಯನ್ನು ಕೆಲವು ಸಾರಿ ಹೆಚ್ಚಿಯೂ ಕೊಟ್ಟು, ಗೌರಿಯ ಜೊತೆ ಬಾವಿಯಿಂದ ಬಚ್ಚಲಿನ ಹಂಡೆಗೆ ನೀರನ್ನು ಸೇದಿಕೊಟ್ಟು ಮನೆಗೆ ಹೋಗುವಳು. ಈಗವಳು ವಿಮಲ ಕೊಟ್ಟ ಬಂಗಾರದ ಸರವನ್ನು ಧರಿಸುವಳು; ಒಳ್ಳೊಳ್ಳೆಯ ಸೀರೆಗಳನ್ನು ಉಡುವಳು. ಆದರೆ ದೈನೆಗೆ ಬರುವಾಗ ಸಣ್ಣದಾಗಿ ಇಟ್ಟ ಕುಂಕುಮವನ್ನು ದೊಡ್ಡದು ಮಾಡಿ, ಜಡೆಯನ್ನು ಬಿಗಿಯಾಗಿ ಕಟ್ಟಿಕೊಂಡು ಬರುವಳು.

ಶಾಸ್ತ್ರಿಗಳು ಹೊರಡುವೆನೆಂದರೆ ಅಕ್ಕು ಬಿಡಳು. ಮನೆಯಲ್ಲಿ ಏನೋ ಆಗುವುದಿದೆ, ಅವರು ಇರುವುದು ಬೇಕು ಎಂದು ಅವಳಿಗೆ ಅನ್ನಿಸುವುದು. ಕೇಶವ ವಿನೋದಿನಿಯನ್ನು ಹಚ್ಚಿಕೊಳ್ಳುತ್ತಿದ್ದಾನೆಂಬುದು ಗೊತ್ತಾಗಿ ಅವಳು ಗಲಿಬಿಲಿಗೊಂಡಿದ್ದಳು. ಅವಳನ್ನು ಕೇಶವ ಮದುವೆಯಾದರೆ ಅವನನ್ನು ಯಾರೂ ಪೌರೋಹಿತ್ಯಕ್ಕೆ ಕರೆಯರು. ವಿನೋದಿನಿ ಅಡುಗೆ ಮಾಡಿ ಬಡಿಸುವಂತಿಲ್ಲ. ಕೇಶವನ ಮಕ್ಕಳಿಗೆ ಶ್ರಾದ್ಧದ ಹಕ್ಕಿರುವುದಿಲ್ಲ. ವೈದಿಕವೃತ್ತಿ ಮುಂದುವರಿಯುವುದಿಲ್ಲ.

ಆದರೆ ಈಗ ಘನಶ್ಯಾಮನ ನಿರ್ಣಯಗಳಿಂದಾಗಿ ತಮ್ಮ ಜೀವನ ಕ್ರಮವೇ ಬದಲಾಗಲು ಶುರುವಾಗಿದೆ. ಕೇಶವ ತಕಲಿ ಹಿಡಿದು ಕೂರುವುದು ಕಡಿಮೆಯಾಗಿದೆ. ಜನಿವಾರವನ್ನು ಬದಲಾಯಿಸಲೇ ಬೇಕಾದ ವಿಧಿಗಳು ಕಮ್ಮಿಯಾಗುತ್ತ ಹೋಗಿವೆ. ಯಾರಾದರೂ ಜಾತಕ ತೋರಿಸಲು ಬರುವುದುಂಟು; ಮದ್ದು ಕೇಳಲು ಬರುವುದುಂಟು. ಅದೂ ಯಾಕೆಂದರೆ ಗೌರಿಯಿಂದ ಮದ್ದನ್ನು ಮುಟ್ಟಿಸಿಕೊಂಡು ಹೋಗಬಹುದೆಂದು. ಪೂಜೆ ಮಾಡಲು ಕೇಶವನನ್ನು ಕರೆಯಲು ಹಿಂಜರಿಯುತ್ತಾರೆ; ಅವನ ಮಟ್ಟವೇ ಟ್ರಸ್ಟಿನ ಸೆಕ್ರೆಟರಿ ಆದಮೇಲೆ ಏರಿಬಿಟ್ಟಿದೆ. ಅವನ ಪತ್ರವ್ಯವಹಾರಗಳು ಹೆಚ್ಚಾಗಿವೆ; ಹಿಂದೆ ಅವನಿಗೆ ಒಂದೇ ಒಂದು ಕಾಗದವನ್ನಾದರೂ ಅಂಚೆಯಲ್ಲಿ ಹಾಕಬೇಕಾದ ಪ್ರಮೇಯ ಬಂದಿರಲಿಲ್ಲ. ಈಗ ಬರೆಯುವುದೇ ಅವನ ನಿತ್ಯದ ಕೆಲಸ. ಬರೆಯುವುದು ಮತ್ತು ಯಾರೋ ಬರೆದ ಪತ್ರಕ್ಕೆ ಉತ್ತರ ಕೊಡುವುದು.

ಟ್ರಸ್ಟಿನ ಮೆಂಬರುಗಳಲ್ಲಿ ಒಬ್ಬಳಾದ ಸರಸ್ವತಿ ಆಗೀಗ ಬರುವಳು. ಸಾರ್ವಜನಿಕ ಕಾರ್ಯಗಳಿಗಾಗಿ ಅವಳು ಓಡಾಡುವಾಗ ಅವಳ ಪುಟ್ಟ ಮಗಳನ್ನು ತಾಯಿ ನೋಡಿಕೊಳ್ಳುತ್ತಾಳೆ. ಸರಸ್ವತಿ ಸಾಹುಕಾರರಿಗೆ ಆಪ್ತಳಾದ ಕಾರ್ಯಕರ್ತೆಯಾಗಿದ್ದಾಳೆ. ಅಂಚೆ ಮತ್ತು ತೆರಪಿನ ಶಿಕ್ಷಣ ಪಡೆಯುತ್ತಿದ್ದಾಳೆ – ಅದೂ ಸಾಹುಕಾರರ ಪ್ರೇರಣೆಯಿಂದ. ಗಲ್ಲಿಗೇರಲಿದ್ದ, ಅಪ್ಪನೆಂದು ಒಂದು ಸಾರಿಯಾದರೂ ಅವಳ ಬಾಯಲ್ಲಿ ಬಾರದ, ಗಣಪಯ್ಯ ಕ್ರೌರ್ಯದಲ್ಲಿ ಗಳಿಸಿ ತಿಜೋರಿಯಲ್ಲಿ ಮುಚ್ಚಿಟ್ಟಿದ್ದ ಹಣದಲ್ಲಿ ಒಂದು ಲಕ್ಷ ರೂಪಾಯನ್ನು ಅವಳ ತಾಯಿಯ ಬಯಕೆಯಂತೆ ದುರುಗಪ್ಪನ ಹೆಸರಿನಲ್ಲಿ ಹೊಸ ಆಸ್ಪತ್ರೆಯ ನಿರ್ಮಾಣಕ್ಕೆ ಕೊಟ್ಟಿದ್ದಾಳೆ. ಜೀಪಿನಲ್ಲಿ ಅವಳನ್ನು ಮೀಟಿಂಗಿಗೆ ಕರೆದುಕೊಂಡುಬರುವುದು ಮತ್ತು ಕಳಿಸುವುದು ಈಗ ಕೇಶವನ ಕೆಲಸ. ಹಳ್ಳಿಗಳಲ್ಲಿ ಅವನ ಓಡಾಟವೆಲ್ಲ ಈಗ ಜೀಪಿನಲ್ಲೇ.

ಘನಶ್ಯಾಮ ಮನೆಯಲ್ಲಿದ್ದ ಗಂಗಾರದಲ್ಲಿ ಒಂದಿಷ್ಟನ್ನು ಅವನ ಇಬ್ಬರು ತಂಗಿಯರಿಗೆಂದು ಉಳಿಸಿಕೊಂಡು, ಉಳಿದದ್ದನ್ನು ಆಸ್ಪತ್ರೆ ಕಟ್ಟಿಸಲು ಬಳಸುವುದೆಂದು ತೀರ್ಮಾನಿಸಿದ್ದಾನೆ. ಹಾಗೆ ಪತ್ರಿಕೆಗಳಲ್ಲೂ ಪ್ರಕಟವಾಗಿದೆ. ತಂಗಿಯರು ಇದಕ್ಕೆ ಒಪ್ಪಿರುವುದಷ್ಟೇ ಅಲ್ಲ, ವಿನೋದಿನಿ ತನ್ನ ಪಾಲಿನದನ್ನೂ ಆಸ್ಪತ್ರೆಗೆ ಕೊಡುವುದೆಂದು ತನ್ನಲ್ಲೇ ನಿರ್ಧರಿಸಿದ್ದಾಳೆ. ಕೇಶವನಿಗೆ ಅದನ್ನು ಹೇಳಿ ಅವನ ಮೆಚ್ಚುಗೆ ಗಳಿಸಿಕೊಂಡಿದ್ದಾಳೆ.

ಘನಶ್ಯಾಮನ ಕೀರ್ತಿ ಹಬ್ಬಿದೆ. ಆಳುವ ಪಕ್ಷ ಅವನನ್ನು ತನ್ನ ನಾಯಕವರ್ಗದಲ್ಲಿ ಸೇರಿಸಿಕೊಳ್ಳಲೇ ಬೇಕಾಗಿಬರುವಷ್ಟು ಹಬ್ಬಿದೆ ಎಂಬುದು ಸುದ್ದಿಯಾಗಿದೆ. ಸಮಾಜ ಸೇವಕರಿಗಾಗಿ ಇರುವ ಮೇಲ್ಮನೆಯ ನಾಮಕರಣದ ಸದಸ್ಯತ್ವನ್ನು ಘನಶ್ಯಾಮನಿಗೆ ಕೊಡಬೇಕೆಂದು ಪಕ್ಷದ ವರಿಷ್ಠರು ನಿರ್ಣಯಿಸಿದ್ದರು. ಅವನ ಅಪ್ಪನ ಸಾವಿನಿಂದಾಗಿ ಖಾಲಿಯಾದ್ದು ಅದು. ಆದರೆ ಘನಶ್ಯಾಮ ಮುಂದಾಲೋಚನೆಯ ಜಾಣನಲ್ಲವೆ? ತನಗದು ಬೇಡವೆಂದು ಸುದ್ದಿಯಾಗಿದ್ದಾನೆ. ತಾನು ಚುನಾವಣೆಗೆ ನಿಂತು ಗೆಲ್ಲುವೆನೆಂದು ಯುವಜನರ ಮೆಚ್ಚಿಕೆಗೆ ಒಳಗಾಗಿದ್ದಾನೆ. ಅವನ ಮಹತ್ವಾಕಾಂಕ್ಷೆಯ ತ್ಯಾಗಗಳು ಪಕ್ಷದ ಹಿರಿಯರಿಗೆ ಅರಿವಾಗಿ ಕಸಿವಿಸಿಯಾಗಿದೆ. ಅವನಿಗೆ ಅಭಿಮಾನಿಗಳೂ ದೊರೆತಿದ್ದಾರೆ; ವೈರಿಗಳೂ ಹುಟ್ಟಿಕೊಂಡಿದ್ದಾರೆ. ದೆಹಲಿಯ ವರಿಷ್ಠರ ಜೊತೆ ಘನಶ್ಯಾಮ ಎಲ್ಲರಿಗಿಂತ ಹೆಚ್ಚು ಸುಲಭವಾಗಿ ಗೆಳೆತನಬೆಳೆಸಿಕೊಂಡು ಪಕ್ಷಕ್ಕೆ ಆಸ್ತಿಯೂ ಆಗಿ, ಸಮಸ್ಯೆಯೂ ಆಗಿದ್ದಾನೆ. ಒಟ್ಟಿನಲ್ಲಿ, ರಾಜಕಾರಣದಲ್ಲಿ ಘನಶ್ಯಾಮನಿಗಿರುವ ಸದಭಿರುಚಿಯನ್ನೂ, ಅವನ ಎನರ್ಜಿಯನ್ನೂ ಮೆಚ್ಚಿಕೊಂಡವರೇ ಹೆಚ್ಚುಜನ ಎನ್ನುವಂತಾಗಿದೆ.

ಅವನು ಸುದ್ದಿಯಾಗದ ದಿನವೇ ಇಲ್ಲವೆನ್ನುವಂತಾದ ಮೇಲೆ ಒಂದು ದಿನ ಒಂದು ಘಟನೆಯಾಯಿತು.

ವಿಮಲ ಮನೆಯಲ್ಲಿ ಇರಲಿಲ್ಲ; ಶಿವಮೊಗ್ಗಕ್ಕೆ ಹೋಗಿದ್ದಳು. ಮಗುವನ್ನು ಅಕ್ಕು ಜೊತೆ ಬಿಟ್ಟುಹೋಗಿದ್ದಳು. ಶಾಸ್ತ್ರಿಗಳು ಆ ದಿನ ದೈನೆಗೆ ಬಂದಿದ್ದರು. ಅವರ ಜೊತೆ ಪುಟ್ಟೇಗೌಡ ಮಾತಾಡುತ್ತ ಕೂತಿದ್ದ. ಕೇಶವ ತಾಲೂಕು ಆಫೀಸಿನ ಕೆಲಸವಿದೆಯೆಂದು ತೀರ್ಥಹಳ್ಳಿಗೆ ಹೋಗಿದ್ದ. ಘನಶ್ಯಾಮ ಗೌರಿಯನ್ನು ಬರುವಂತೆ ಕೇಳಿ ಜೀಪನ್ನು ಕಳುಹಿಸಿದ. ಆಗ ಮಧ್ಯಾಹ್ನ ಮೂರು ಗಂಟೆಯಿರಬೇಕು.

ಗೌರಿ ಸ್ವಲ್ಪ ತಡೆದು ಬರುತ್ತೇನೆಂದು ಜೀಪನ್ನು ಹಿಂದಕ್ಕೆ ಕಳುಹಿಸುವುದರಲ್ಲಿ ಇದ್ದಳು. ಅಕ್ಕು ‘ಅದೇನು ತುರ್ತಿನ ಕೆಲಸವಿದೆಯೋ? ಕೇಶವ ಇಲ್ಲ. ನೀನೇ ಬೇಕೋ ಏನೋ, ಹೋಗು’ ಎಂದು ಒತ್ತಾಯಿಸಿದಳು. ಗೌರಿ ಹೋದಳು.

ಘನಶ್ಯಾಮ ಕಾದು ನಿಂತಿದ್ದ. ಪಡಸಾಲೆಯಲ್ಲಿ ಅವಳನ್ನು ಕೂರಿಸಿಕೊಂಡ. ಅದೂ ಇದೂ ಮಾತಾಡಿ, ಸಂಕೋಚದಲ್ಲಿ ಕೇಶವನಿಗೂ ವಿನೋದಿನಿಗೂ ಬೆಳೆಯುತ್ತಿದ್ದ ಸಖ್ಯದ ಬಗ್ಗೆ ಗೌರಿಯ ಅಭಿಪ್ರಾಯ ಕೇಳಿದ. ಗೌರಿ ಮೌನವಾಗಿದ್ದೇ ತನ್ನ ಒಪ್ಪಿಗೆಯನ್ನು ಸೂಚಿಸಿದಳು. ಘನಶ್ಯಾಮ ವೈದಿಕ ಕುಟುಂಬವೊಂದರ ವಿಶಾಲ ಮನೋಭಾವನೆಯನ್ನು ಹೊಗಳಿ ಹಿಂದೆ ಮಾಡಿದ್ದ ತಪ್ಪನ್ನೇ ಮತ್ತೆ ಮಾಡಿದ. ಆದರೆ. ಗೌರಿ ಪ್ರತಿಕ್ರಿಯಿಸದೆ ಸುಮ್ಮನೆ ಕೇಳಿಸಿಕೊಂಡಳು. ಘನಶ್ಯಾಮ ದೇಶದ ರಾಜಕಾರಣದಲ್ಲಿ ತಾನು ಮಾಡಬೇಕೆಂದಿರುವ ಬದಲಾವಣೆಗಳ ಬಗ್ಗೆ ಮಾತಾಡುತ್ತ ತಾನು ಬರೆದ ಏನನ್ನೋ ಗೌರಿಗೆ ತೋರಿಸಬೇಕೆಂದು ಒಂದು ದೊಡ್ಡ ತಪ್ಪನ್ನು ಮಾಡಿಬಿಟ್ಟ – ಅದೆಂದರೆ, ತನ್ನ ಆಫೀಸು ರೂಮಿಗೆ ಗೌರಿಯನ್ನು ಕರೆದುಕೊಂಡು ಹೋದದ್ದು.

ಆಫೀಸು ರೂಮಿನಲ್ಲಿ ಗೌರಿ ಕಾಲಿಟ್ಟದ್ದೇ, ಮೀಸೆ ಗಡ್ಡಗಳ ದರ್ಪಿಷ್ಟ ಮೋರೆಯ ಚಿತ್ರದ ಕೆಳಗೆ ಗೋಡೆಯ ಅಲಂಕಾರಕ್ಕೆಂದು ಇಟ್ಟಿದ್ದ ಭೂವರಾಹ ವಿಗ್ರಹವನ್ನು ನೋಡಿಬಿಟ್ಟಳು. ನೋಡಿದ್ದೇ ಅವಳಿಗೆ ಕಣ್ಣು ಕತ್ತಲೆಯಾದಂತಾಗಿ ಕೂತುಬಿಟ್ಟಳು.

ಘನಶ್ಯಾಮ ಬೆಚ್ಚಿದ. ನೀರನ್ನು ತಂದು ಅವಳಿಗೆ ಕುಡಿಯಲು ಕೊಟ್ಟ.

‘ಐನೂರು ವರ್ಷಗಳಿಂದ ನಿತ್ಯ ಪೂಜಿಸಿದ ಒಂದು ವಿಗ್ರಹಾನ್ನ ಹೀಗೆ ಗೋಡೆಯ ಚಂದಕ್ಕೇಂತ ಇಟ್ಟಿದೀರಲ್ಲ – ನಿಮಗೆ ಹೇಗೆ ಇದು ಸಾಧ್ಯವಾಯ್ತು? ನೀವೇನು ಮನುಷ್ಯರ? ಮಾವಯ್ಯನಂತೆಯೇ ಅವನ ಹಿಂದೆ ನೂರಾರು ಜನ ಅರ್ಚಕರು ನಿತ್ಯ ಇದನ್ನು ಪೂಜಿಸಲಿಕ್ಕೆ ಅಂತ ಏನೇನು ಮಾಡ್ತ ಇದ್ದರು ನಿಮಗೆ ಅದರ ಕಲ್ಪನೆ ಏನಾದರೂ ಇದೆಯ? ಅವರೆಲ್ಲರ ಸಂಕಲ್ಪದಿಂದ ಈ ಲೋಹದ ಒಂದು ವಿಗ್ರಹ ದೇವರೂಂತ ಅನ್ನಿಸ್ತ ಇದ್ದದ್ದು – ಇಲ್ಲೇ, ಈ ಮನೇಲೇ, ಅರ್ಚಕರ ಕಣ್ಣಲ್ಲಿ; ನಿಮ್ಮ ಪಿತೃಗಳ ಕಣ್ಣಲ್ಲಿ. ನಿಮಗದು ಹಾಗೆ ಅನ್ನಿಸದೆ ಇದ್ದರೆ ಅನ್ನಿಸಬೇಕೂಂತ ನಾನೇನೂ ಹೇಳ್ತ ಇಲ್ಲ. ನಂಬಿದರೆ ಉಂಟು, ನಂಬದೇ ಇದ್ದರೆ ಇಲ್ಲ. ನಿಮಗೆ ಪೂಜೆ ಬೇಡಾಂದ್ರೆ ಬೇಡ. ವಿಗ್ರಹಾನ್ನ ಬಿಸಾಕಿ ಬೇಕಾದರೆ. ಯಾರಿಗಾದರೂ ಮಾರಿಬಿಡಿದ ಬೇಕಾದರೆ. ಅದು ನಿಮ್ಮ ಸಾಹುಕಾರಿಕೇಲಿ ನೀವು ಪಡೆದ ಒಂದು ವಸ್ತು. ನಿಮ್ಮ ವಸ್ತು.

ಆದರೆ ಈ ಮನೇ ಪೂಜಿಸಿಕೊಂಡದ್ದು ನಿಮ್ಮ ವಸ್ತು ಅಲ್ಲ. ಅದು ವರಾಹರೂಪಿಯಾದ ಶ್ರೀವಿಷ್ಣು; ಭೂಮಾತೆಯನ್ನು ಸೊಂಟದ ಮೇಲೆ ಎತ್ತಿಕೊಂಡು ರಕ್ಷಿಸಿದ ಸ್ವಾಮಿ ಅವನು. ಗೋಡೆ ಮೇಲೆ ಚೆಂದಾಗಿ ಕಾಣಿಸತ್ತ ಅಂತ ಅವನನ್ನ ಇಲ್ಲಿ, ಅವನನ್ನ ನಿತ್ಯಪೂಜಿಸಿದ ಈ ಮನೇಲೇ ಇಡೋದು, ಬಂದವರಿಗೆಲ್ಲ ಅದನ್ನ ತೋರ‍್ಸಿಕೊಳ್ಳೋದು ನೋಡಿದರೆ ನನಗೆ ಹೇಸಿಗೆಯಾಗತ್ತೆ. ನನ್ನ ಮಾವಯ್ಯನಿಗೆ ನೀವು ಮಾಡ್ತ ಇರೋ ಅಪಚಾರ ಇದು. ನನ್ನ ಮಾವಯ್ಯನಿಗೂ ಈ ಭೂವರಾಹನ ಸೌಂದರ್ಯಬೋಧೆ ಆಗೋ ಹಾಗೆ ಮಾಡಿದಿರಾ?’

ಗೌರಿಯ ಕೊನೆಯ ಮಾತಿಗೆ ಘನಶ್ಯಾಮ ಗದರಿಸಿದಾಗ ಶಾಲೆಯ ಹುಡುಗನೊಬ್ಬ ಇಲ್ಲವೆಂದು ತಲೆಯಾಡಿಸುವಂತೆ ತಲೆಯಾಡಿಸಿದ.

ಗೌರಿಯ ಕಣ್ಣುಗಳಲ್ಲಿ ನೀರು ಆಡುತ್ತಿತ್ತು. ಏನು ಮಾಡಲು ತೋಚದೆ ಘನಶ್ಯಾಮ ಪೆಕರನಂತೆ ನಿಂತಿದ್ದ. ಗೌರಿಗೆ ತನ್ನ ಅಪಾರವಾದ ಪ್ರೀತಿಯನ್ನು ನಿವೇದಿಸಿ ಅವಳನ್ನ ಮದುವೆಯಾಗುವಂತೆ ಕೇಳಲು ಏನೇನು ಹೇಳಬೇಕೆಂದು ಮೊದಲೇ ಯೋಚಿಸಿ ಅವಳನ್ನು ಜೀಪಿನಲ್ಲಿ ಕರೆಸಿಕೊಂಡಿದ್ದ ಘನಶ್ಯಾಮ ಈಗ ಮಾತುಬಾರದವನಂತೆ ನಿಂತ ರೀತಿ ನೋಡಿ ಗೌರಿಗೆ ಅವನ ಮೇಲೆ ಹೇಸಿಗೆಯೂ ಕನಿಕರವೂ ಒಟ್ಟಾಗಿ ಹುಟ್ಟಿತು.

‘ಸಾರಿ. ಅವಮಾನ ಮಾಡುವ ಉದ್ದೇಶ ನನಗೆ ಇರಲಿಲ್ಲ. ನಿಮ್ಮ ಮಾವಯ್ಯನಿಗೆ ಪೂಜೆ ತಪ್ಪಿ ಒಳ್ಳೇದೆ ಆಗಿದೆ ಅಂತ ನಾನು ತಿಳಿದಿದ್ದೆ.’

ಗೌರಿ ಎದ್ದು ನಿಂತಳು. ಅವನನ್ನು ದಿಟ್ಟಿಸಿ ನೋಡುತ್ತ,

‘ನಿಜ, ಮಾವಯ್ಯನಿಗೆ ಪೂಜೆ ತಪ್ಪಿದ್ದರಿಂದ ಒಳ್ಳೇದೇ ಆಗಿದೆ. ಆದರೆ ಕೆಲವು ವಿಷಯ ನಿಮಗೆ ಅರ್ಥವೇ ಆಗಲ್ಲಾಂತ ಅನ್ನಿಸ್ತ ಇದೆ. ಹೆಸರಿಗಾಗಿ ಈ ಕಾಲದಲ್ಲಿ ಏನಾದರೂ ಮಾಡಿಬಿಡೋವ್ರು ನೀವು.’

ಜೀಪು ಬೇಡವೆಂದು ಗೌರಿ ನಡೆದುಬಿಟ್ಟಳು. ಘನಶ್ಯಾಮ ಭೂವರಾಹನನ್ನು ಗೋಡೆಯಿಂದ ತೆಗೆದು ಒಂದು ಪೆಟ್ಟಿಗೆಯಲ್ಲಿ ಸುತ್ತಿ ಇಟ್ಟ. ಇಷ್ಟು ಭಯಂಕರವಾದ ಅವಮಾನ ಅವನಿಗೆ ಈ ಹಿಂದೆ ಆಗಿರಲಿಲ್ಲ.

೧೬

ಒಂದು ಗಂಟೆ ತಡೆದು ಘನಶ್ಯಾಮನೇ ಗೌರಿಯ ಮನೆಗೆ ಹೋದ. ಅವಳು ಬರುವ ತನಕ ಚಿಟ್ಟೆಯ ಮೇಲೆ ಕೂತು ಕಾದಿರುವೆ ಎಂದು, ಮಣಿಗಿಣಿ ಇನ್ನು ಮುಂದೆ ತನಗೆ ಬೇಕಿಲ್ಲವೆಂದು ಕಾಲುಗಳನ್ನು ಎಲ್ಲರಂತೆ ಮಡಿಚಿ ಕೂತು ತೋರಿಸಿದ. ಅವನು ಬೇಡವೆಂದರೂ ಅಕ್ಕು ಕಾಯಿಸಿದ ಹಾಲನ್ನು ಕುಡಿಯಲು ಕೊಟ್ಟಳು. ‘ನಮ್ಮ ಮನೇಲಿ ದಾಕ್ಷಿಣ್ಯ ಮಾಡಬಾರದು ನೀವು. ಈ ಹಾಲು ನಿಮ್ಮ ಮನೆಯ ದನದ್ದೇ’ ಎಂದು ಉಪಚರಿಸಿದಳು. ತನ್ನನ್ನು ಇನ್ನೂ ಸಾಹುಕಾರರೆ ಎಂದು ಕರೆದು ನಾಚಿಕೆಯಾಗುವಂತೆ ಮಾಡುವ ಕೇಶವ ಮತ್ತು ಶಾಸ್ತ್ರಿಗಳಿಗೆ ‘ನಾನು ಬಂದೆನೆಂದು ನೀವು ಮಾತು ನಿಲ್ಲಿಸಬೇಕಿಲ್ಲ’ ಎಂದ. ಎಲೆಯಡಿಕೆ ಹರಿವಾಣಕ್ಕೆ ಅವನಾಗಿ ಕೈಯೊಡ್ಡಿ, ‘ಅಡಿಕೆಯನ್ನು ಬೆಳೆದರೂ ಅದರ ಅಭ್ಯಾಸವೇ ನನಗೆ ಆಗಲಿಲ್ಲ. ನಾನು ಈ ಹಳ್ಳೀಲಿ ಬೆಳೀಲೇ ಇಲ್ಲ ನೋಡಿ.’ ಎಂದು ತನ್ನ ತಾಯಿ ತಾನು ಚಿಕ್ಕವನಿರುವಾಗಲೇ ಸತ್ತದ್ದು, ತಾನು ಹೊರಗೇ ಇದ್ದು ಓದಿದ್ದು, ಇತ್ಯಾದಿ ಇತ್ಯಾದಿ ಮಾತಾಡುತ್ತ, ಒಂದು ಹಸ ಅಡಿಕೆಯನ್ನು ಬಾಯಲ್ಲಿ ಹಾಕಿ ಚೀಪುತ್ತ, ಗೌರಿಗಾಗಿ ಕಾದ. ಸಾಹುಕಾರರು ಹೀಗೆ ಆರಾಮಾಗಿ ಕೂತು ತಮ್ಮ ಜೊತೆ ಮಾತಾಡಿದ್ದೇ ಇಲ್ಲವಲ್ಲ ಎಂದು ಕೇಶವ ಆಶ್ಚರ್ಯಪಟ್ಟ. ಸರ್ವಗ್ರಾಹಿಯಾದ ಶಾಸ್ತ್ರಿಗಳಿಗೂ, ಸೂಕ್ಷ್ಮ ಗ್ರಾಹಿಯಾದ ಅಕ್ಕುವೂ ಘನಶ್ಯಾಮನ ಘನೋದ್ದೇಶವನ್ನು ಊಹಿಸಿ ಪರಸ್ಪರ ನೋಡಿಕೊಂಡರು.

೧೭

ಗೌರಿ ಗುಡ್ಡದ ಮೇಲೆ ಯಾವಾಗಲೂ ಕರಿಯನ ಜೊತೆ ಕೂತಿರುತ್ತಿದ್ದಲ್ಲಿ ಹೋಗಿ ಕೂತಳು. ಸಂಜೆಯ ಸೂರ್ಯನ ಬಣ್ಣದ ವೈಭವ ನೋಡುತ್ತ ಕರಿಯ ಹೇಗೆ ಹುಲಿಯುಗುರನ್ನು ತನಗೆ ಕೊಡಲು ಬಯಸಿದ್ದಿರಬಹುದೆಂದು ಕಲ್ಪಿಸಿಕೊಂಡಳು. ಅದೇ ಅವನ ದೊಗಳೆಯಾದ ಹರಕು ಚಡ್ಡಿಯಲ್ಲಿ ಕೊಳಲನ್ನು ಸಿಕ್ಕಿಸುವಲ್ಲೆ ಮುಚ್ಚಿಟ್ಟು ತಂದಿರುತ್ತಿದ್ದ. ‘ಇಕಾ ಅವ್ವ ಕೊಟ್ಟದ್ದು, ತಕಳ್ಳಿ’ ಎಂದು ಅಷ್ಟು ದೂರದಲ್ಲಿಟ್ಟು, ತನ್ನ ಒಪ್ಪಿಗೆಗೆ ಕಾಯದೆ, ಅವನ ಅಜ್ಜನ ಅಜ್ಜನ ಸಾಹಸದ ಕಥೆ ಹೇಳಲು ಶುರುಮಾಡುತ್ತಿದ್ದ. ರೇಷ್ಮೆಯ ದಾರದಲ್ಲಿ ಅದನ್ನು ಕಟ್ಟಿದ್ದಾದ್ದರಿಂದ ಅದು ಮೈಲಿಗೆಯಲ್ಲ ಎಂದು ತನಗೆ ಗೊತ್ತೆಂದು ಅವನಿಗೆ ಗೊತ್ತು; ಹುಲಿಯುಗುರಂತೂ ಇಬ್ಬರಿಗೂ ಪವಿತ್ರ. ಅವನ ಮನೆಯಲ್ಲಿದ್ದ ಅಪರೂಪದ ಒಂದು ವಸ್ತುವನ್ನು ತಾನು ಹುಲ್ಲಿನ ಮೇಲಿಂದ ಎತ್ತಿ ಸವರಿ ನೋಡಿ, ಇಷ್ಟಪಟ್ಟು, ಕುತ್ತಿಗೆಗೆ ಕಟ್ಟಿಕೊಳ್ಳುವುದನ್ನು ಬಿಡುಗಣ್ಣಾಗಿ, ಕೊಂಚ ಬಾಯಿ ಕಳೆದು ನೋಡುತ್ತ ತುದಿಗಾಲಲ್ಲಿ ತನ್ನೆದುರೇ ಕೂತಿರುತ್ತಿದ್ದ. ಖುಷಿಯಾಗಿ ಯಾವುದೋ ಮರದ ಮೇಲೆ ಯಾವ ಅಪರೂಪದ ಪಕ್ಷಿ ಕಂಡೆ, ಯಾವುದೋ ಹೊಂಡದಲ್ಲಿ ಎಷ್ಟು ಗೊಜಮಟ್ಟೆ ಕಂಡೆ – ಹೀಗೆ ಮಾತಿಗೆ ಮಾತು ಬೆಳಸಿ, ಅಷ್ಟು ಬಣ್ಣಗಳನ್ನೂ ತಾನು ಕಂಡೇಹೋಗುವಂತೆ ಸೂರ್ಯನನ್ನು ಮುಳುಗಿಸುತ್ತಿದ್ದ!

ಗೌರಿಯನ್ನು ಗುಡ್ಡದ ಮೇಲೆ ದನಕರುಗಳು ನೀರು ಕುಡಿಯುವ ಹೊಂಡದ ಬಳಿ ಕಂಡ ಆಳು ಹೆಂಗಸೊಬ್ಬಳು ತನ್ನ ಮಗುವನ್ನೆತ್ತಿಕೊಂಡು ಓಡೋಡಿ ಬಂದಳು. ಆ ದಿನ ತಾನೇ ಮಗುಚಿಕೊಂಡಿತ್ತು ಅದು. ಅವಳ ಈ ಗಂಡು ಕೂಸು ಎರಡು ಸತ್ತ ಮೇಲೆ ಹುಟ್ಟಿ ಉಳಿದದ್ದು. ಹುಟ್ಟಿದಾಗ ಕಾಡಿ ಬೇಡಿ ಗೌರಿಯಿಂದ ಮುಟ್ಟಿಸಿಕೊಂಡದ್ದು. ಮಗುಚಿಕೊಂಡು ಖುಷಿಪಡಿಸಿದ ಕೂಸನ್ನು ಗೌರಿಯಿಂದ ಇನ್ನೊಮ್ಮೆ ಮುಟ್ಟಿಸಿಕೊಳ್ಳಲೆಂದು ಓಡೋಡಿಬಂದಳು. ಗೌರಿಯ ಪ್ರಾಯದವಳೇ. ಆದರೆ ಒಂದಾದ ಮೇಲೊಂದರಂತೆ ಮೂರು ಮಕ್ಕಳನ್ನು ಹೆತ್ತವಳು. ಜಲಜಳ ಜೊತೆಯವಳು.

ದೂರದ ಸಹ್ಯಾದ್ರಿ ಬೆಟ್ಟಗಳ ಅಸ್ಪಷ್ಟವಾದ ಅಂಚನ್ನು ಬತ್ತಲಾಗುತ್ತಿದ್ದ ಬಾನಿನಲ್ಲಿ ನೋಡುತ್ತ ಕೂತ ಗೌರಿಯನ್ನು ಅವಳೂ ಮುಟ್ಟಿ, ಮಗುವನ್ನೂ ಅವಳಿಗೆ ಮುಟ್ಟಿಸಿ ಗಲಿಬಿಲಿಗೊಳಿಸಿದವಳ ಕಣ್ಣುಗಳು ಆನಂದದಿಂದ ಒದ್ದೆಯಾಗಿದ್ದವು. ಎಡಗೈಯಲ್ಲಿ ಗಾಬರಿಗೊಂಡು ಅಳುವ ಮಗುವನ್ನವಚಿ, ಬಲಗೈಯಲ್ಲಿ ತಾನು ಸೀರೆಯ ಸೆರಗಿನಲ್ಲಿ ಅವಸರದಲ್ಲಿ ಕಟ್ಟಿತಂದ ಒಂದಷ್ಟು ನೆಲ್ಲಿಕಾಯಿಯನ್ನು ಬಿಚ್ಚಿ ಗೌರಿಯ ಸೆರಗಿಗೆ ಸುರಿದಳು.

ತನಗಿನ್ನು ಇಲ್ಲಿ ಏಕಾಂತದ ಸುಖ ಸಿಗದೆಂದು ಗೌರಿ ಎದ್ದುನಿಂತಳು. ಅಳುತ್ತಿದ್ದ ಮಗುವಿನ ಬೆನ್ನು ಸವರಿದಳು. ಸೀರೆಯ ಸೆಗನ್ನು ಕತ್ತಿನಸುತ್ತ ಎಳೆದು ಅದರ ತುದಿಯಲ್ಲಿ ದಕ್ಷಿಣೆಯಾಗಿ ತನಗೆ ಸಿಕ್ಕ ನೆಲ್ಲಿಕಾಯಿಯನ್ನು ಗಂಟುಮಾಡಿ ಕಟ್ಟಿಕೊಂಡಳು. ಮತ್ತೇನೂ ಮಾತಾಡದೆ ಹೊರಟಳು.

ಅಕ್ಕುಗೆ ಉಪ್ಪಿನ ಕಾಯಿ ಹಾಕಲು ನೆಲ್ಲಿ ಸಿಕ್ಕಿತೆಂದು ಖುಷಿಯಾಗುತ್ತದೆ. ‘ಯಾಕೆ ಇಳಿಸಂಜೆಯಲ್ಲಿ ಗುಡ್ಡದ ಮೇಲೆ ಅಲೀತೀಯೇ’ ಎಂದು ಅಕ್ಕು ಇವತ್ತು ಬಯ್ಯಲಾರಳು. ತಲೆಯ ಮೇಲೆ ಸೆರಗೆಳೆದು ಸಿಡುಕುವ ಅಕ್ಕುಗೆ ನೆಲ್ಲಿ ಕಾಯಿ ಕಂಡು ಆಗುವ ಸಂತೋಷ ಊಹಿಸಿ ಗೌರಿ ನಸುನಕ್ಕಳು. ಎದೆಯ ಮೇಲೆ ನೆಲ್ಲಿಯ ಪುಟ್ಟ ಗಂಟನ್ನು ಹೊತ್ತು, ಅದರಿಂದ ತೆಗೆದ ಒಂದು ನೆಲ್ಲಿ ಕಾಯಿಯನ್ನು ಶಾಲೆಗೆ ಹೋಗುವ ಹುಡುಗಿಯಂತೆ ಬಾಯಲ್ಲಿ ಚೀಪುತ್ತ, ಬೀಸುವ ಕೈಯಲ್ಲಿ ಬಳೆಯ ಸದ್ದು ಮಾಡುತ್ತ, ಗೌರಿ ಗುಡ್ಡವನ್ನು ಇಳಿದಳು.

ಮನೆಯ ಅಂಗಳದಲ್ಲಿ ತುಳಸಿಕಟ್ಟೆಯ ಹಿಂದೆ ನಿಂತು, ಇಳಿ ಸಂಜೆಯ ಹಿತವಾದ ಬೆಳಕಿನಲ್ಲಿ ಅವಳು ಕಂಡದ್ದು ಕಾಲುಮಡಚಿ ಕೂತ ಘನಶ್ಯಾಮ! ತನ್ನಷ್ಟಕ್ಕೇ ನಕ್ಕಳು. ನೆಲ್ಲಿಕಾಯಿಯನ್ನು ಚೀಪುತ್ತಲೇ ಅವನ ಹತ್ತಿರ ಹೋಗಿ, ಅವನ ಪಕ್ಕವೇ ಕೂತಳು. ಇಬ್ಬರೂ ಏನೂ ಮಾತಾಡಲಿಲ್ಲ. ಅವಳ ಕ್ಷಮೆಯನ್ನು ಪಡೆದೆನೆಂದು ಘನಶ್ಯಾಮನಿಗೆ ಮನವರಿಕೆಯಾಯಿತು. ಅವಳೊಬ್ಬ ದೇವಿಯೇ ಎಂದು ಅವನಿಗೆ ಅನ್ನಿಸಿದರೂ, ‘ಕ್ಷಮಾಗುಣದಲ್ಲಿ’ ಎಂದು ಒಂದು ಅಧಿಕಮಾತನ್ನು ಈ ‘ದೇವಿ’ ಶಬ್ದಕ್ಕೆ ಸೇರಿಸಿಕೊಂಡು ಜೀಪನ್ನು ತಾನೇ ನಡೆಸಿಕೊಂಡು ದೇವನಹಳ್ಳಿಗೆ ಹೋದ.

೧೮

ಬೆಂಗಳೂರಿಂದ ಅವನ ಈಚಿನ ರಾಜಕೀಯ ಅಭಿಮಾನಿಯೊಬ್ಬ, ರಿಯಲ್ ಎಸ್ಟೇಟ್ ಬಿಸಿನೆಸ್‌ನಲ್ಲಿದ್ದವ, ದೇವನಹಳ್ಳಿಗೆ ಬಂದು ಘನಶ್ಯಾಮನಿಗೆ ಕಾದಿದ್ದ. ಅವನೂ ಘನಶ್ಯಾಮನ ವಾರಿಗೆಯ ತರುಣ. ಘನಶ್ಯಾಮನಿಗೆ ಸಂತೋಷವಾಯಿತು. ಗಂಟೆಯ ಹಿಂದೆಯೇ ಬಂದು ಕಾದಿರಬೇಕು. ಶಿವಮೊಗ್ಗಕ್ಕೆ ರೈಲಿನಲ್ಲಿ ಬಂದು ಟ್ಯಾಕ್ಸಿಯಲ್ಲಿ ಬಂದಿದ್ದಾನೆಯೆಂದರೆ ಏನೋ ಒಳ್ಳೆಯ ಸುದ್ದಿ ತಂದಿರಬೇಕು. ಆಫೀಸಿಗೆ ಕರೆದುಕೊಂಡು ಹೋಗಿ ಕೂರಿಸಿ, ‘ಕಾಫಿ ಮಾಡಿಸಲ?’ ಎಂದ. ರಾಮಸ್ವಾಮಿ ‘ಈ ಚಳೀ ಹೊತ್ತಲ್ಲಿ ಕಾಫಿ ಕುಡೀತಾರ?’ ಎಂದು ನಕ್ಕ. ಅದರರ್ಥ ತಿಳಿದು ಘನಶ್ಯಾಮ ಎರಡು ಗ್ಲಾಸುಗಳನ್ನು ಬೀರುವಿನಿಂದ ತೆಗೆದು, ಇನ್ನೊಂದು ಬೀರುವಿನಿಂದ ಬ್ಲಾಕ್ ಲೇಬಲ್‌ನ ಹೊಸ ಬಾಟಲಿಯಿಂದ ಎರಡು ಗ್ಲಾಸುಗಳಲ್ಲೂ ವಿಸ್ಕಿಯನ್ನು ಸುರಿದ.

‘ಲುಕ್, ಇದು ಓಪನ್ ಆಗದ ವಿಸ್ಕಿ. ನಿಮಗಾಗಿ ಓಪನ್ ಮಾಡಿದೀನಿ. ಈ ಮನೇಲಿ ನಾನು ಕುಡಿಯೋದು ತುಂಬ ಅಪರೂಪ. ಇಲ್ಲಾಂತಲೇ ಅನ್ನಬಹುದು. ಬಟ್ ಫಾರ್ ಯುವರ್ ಹೆಲ್ತ್ ಅಂಡ್ ಸಕ್ಸೆಸ್ ಇನ್ ಬಿಸಿನೆಸ್, ಚಿಯರ್ಸ್‌’

‘ವೈ?’ ಎಂದ, ವಿಸ್ಕಿಯನ್ನು ನಾಲಗೆಯ ತುದಿಯಲ್ಲಿ ರಾಮಸ್ವಾಮಿ ಸವಿದು.

‘ಈ ಮನೆ ಫುಲ್ ಆಫ್ ಮೆಮೋರಿಸ್ ಆಫ್ ವರ್ಶಿಪ್ ಆಫ್ ಎ ಭೂರಕ್ಷಕ ದೇವರು. ಡು ಯು ನೋ ದಿ ಸ್ಟೋರಿ ಆಫ್ ದಿಸ್ ಭೂವರಾಹ?’

‘ಎಸ್‌ಐನೋ. ಆದರೆ, ಚಂದಮಾಮಾದಲ್ಲಿ ಇವನ್ನೆಲ್ಲ ನಾನು ಓದಿರೋದು.’ ಎಂದು ತನ್ನ ಅಲ್ಪ ಜ್ಞಾನವನ್ನು ಗೇಲಿ ಮಾಡಿಕೊಂಡು ರಾಮಸ್ವಾಮಿ ಹೇಳಿದ: ‘ಏನು ಹೇಳಲಿಕ್ಕೆ ಬಂದೆ ಅಂದ್ರೆ ಈ ಸಾರಿ ನೀವು ಬೇಡ ಅನ್ನಬಾರದು. ನಿಮ್ಮನ್ನ ದೆಹಲಿಯ ರಾಜ್ಯಸಭೆಯ ಮೆಂಬರ್ ಮಾಡಬೇಕೂಂತ ಹೈಕಮಾಂಡ್ ಆದೇಶ ಇದೇಂತ ಸುದ್ದಿ. ಸೀಎಮ್ ಬಾಯಿ ಮುಚ್ಚಿಕೊಂಡು ಒಪ್ಪಿಕೋಬೇಕಾಗತ್ತೆ. ಚುನಾವಣೇಲಿ ನಿಂತು ಗೆಲ್ಲೋದು ತುಂಬ ಕಷ್ಟ. ಮೊದಲು ರಾಜ್ಯ ಸಭೇಲಿ ಇದ್ದು ಊರಿಕೋ ಬೇಕು. ಆಮೇಲೆ ಚುನಾವಣೇಗೆ ನಿಲ್ಲಬಹುದು. ದೆಹಲಿಗೆ ನೀವು ಇನ್ನೊಂದು ವಾರದಲ್ಲಿ ಹೋಗಬೇಕು. ಎಲ್ಲರಿಗೂ ಹೇಳಿ ಗೀಳಿ ಅತೀನೂ ಮಾಡಬಾರ‍್ದು; ಏನೂ ಮಾಡದೇನೂ ಇರಬಾರದು. ಪ್ಲೇ ಇಟ್ ಕೂಲ್. ಆದರೆ, ಪ್ಲೇ ಇಟ್’

ರಾತ್ರೆ ದೀರ್ಘ ಕಾಲ ಅವರಿಬ್ಬರೂ ದೇಶದ ರಾಜಕೀಯ ವಿದ್ಯಮಾನಗಳನ್ನು ಅನ್ಯೋನ್ಯವಾದ ವಿಶ್ವಾಸದಲ್ಲಿ ಚರ್ಚಿಸಿದ್ದರು. ಘನಶ್ಯಾಮ ತನ್ನ ತಾತ್ವಿಕ ನಿಲುವುಗಳನ್ನು ಗೆಲ್ಲಿಸಲು ರಾಮಸ್ವಾಮಿಯ ವ್ಯಾವಹಾರಿಕ ಜ್ಞಾನದಿಂದ ಹುಟ್ಟಿದ ಉಪಾಯಗಳನ್ನು ಅನುಮಾನಿಸುತ್ತಲೇ ಆಶ್ರಯಿಸಬಹುದೇನೊ ಎನ್ನುವಂತೆ ಮಾತಾಡಿದರೆ, ರಾಮಸ್ವಾಮಿ ಅವನ ವ್ಯವಹಾರ ಕುದುರಿಸಿಕೊಳ್ಳಲು ಬಂದವನಂತೆ ತೋರಿಸಿಕೊಳ್ಳದೆ, ಘನಶ್ಯಾಮನ ಉದಾತ್ತ ನಿಲುವುಗಳನ್ನೂ, ತಾತ್ವಿಕ ಕ್ಲಾರಿಟಿಯನ್ನೂ ಮೆಚ್ಚುವವನಂತೆ ಮಾತಾಡಿ ಅವನನ್ನು ಗೆದ್ದಿದ್ದೇನೆ ಎಂದುಕೊಂಡಿದ್ದ.

೧೯

ಘನಶ್ಯಾಮ ಹೋದ ಸ್ವಲ್ಪ ಹೊತ್ತಿನ ನಂತರ, ಅದು ಇನ್ನೇನು ಊಟಕ್ಕೆ ಏಳಬೇಕಾದ ಹೊತ್ತಾದರೂ, ಶಾಸ್ತ್ರಿಗಳು,

‘ಕೇಶವಯ್ಯನವರು ದಯಮಾಡಿ ಕಾಫಿ ಕರುಣಿಸಬಹುದೋ ಅಂತ ಈ ಮುದುಕ ಹಂಬಲಿಸುತಾ ಇದಾನೆ.’ ಎಂದು ನಕ್ಕರು.

ಇದೇನು ಎಂದು ಎಲ್ಲರಿಗೂ ಆಶ್ಚರ್ಯವಾಯಿತು. ಖುಷಿಯಾಗಿ ಗೌರಿ ಕಾಫಿ ಮಾಡಲು ಹೋದಳು.

ಸ್ವಲ್ಪ ಹೊತ್ತು ಅದೂ ಇದೂ ಮಾತಾಡಿ, ಸರಿಯಾದ ಮುಹೂರ್ತಕ್ಕೆ ಕಾದಿದ್ದು ಶಾಸ್ತ್ರಿಗಳು ಇಳಿಧ್ವನಿಯಲ್ಲಿ ಕೇಶವನನ್ನೂ ಅಕ್ಕುವನ್ನೂ ಕರೆದು ತನ್ನ ಬಳಿ ಕೂರಿಸಿಕೊಂಡು ಹೇಳಿದರು:

‘ಸಾವಿತ್ರಿ ಕೇಳು. ಎಲ್ಲ ಕೂಡಿ ಬಂದಿದೆ. ವಿನೋದಿನಿಯನ್ನು ತಮ್ಮಯ್ಯನಿಗೆ ಮದುವೆ ಮಾಡು; ಗೌರಿಯನ್ನು ಘನಶ್ಯಾಮನಿಗೆ ಕೊಟ್ಟು ಮದುವೆ ಮಾಡು.

ಘನಶ್ಯಾಮಿಗೆ ಈ ಪ್ರಾಣಿಗ್ರಹಣ ದಿವ್ಯ ಹಿಡಿದಂತೆ. ನಿನ್ನ ತಮ್ಮಯ್ಯನಿಗೆ ಗೊತ್ತಿರಬೇಕು. ರತ್ಯುತ್ಸಾಹದ ಶಂತನು ಸತ್ಯವತಿಯ ಕೈಯನ್ನು ದಿವ್ಯ ಹಿಡಿದಂತೆ ಹಿಡಿದ ಎಂದು ಭಾರತದಲ್ಲಿ ಒಂದು ಮಾತಿದೆ. ಘನಶ್ಯಾಮ ಆಧುನಿಕ ಕಾಲದ ಅವಸರದ ಮರುಳ. ತತ್ಕಾಲ ಮಾತ್ರ ಈ ಧೀರನಿಗೆ ಇರೋದು; ಗೌರಿಯೋ ಶಾಶ್ವತದಲ್ಲಿ ಇರೋ ದೇವಿ. ಯವುದೋ ಪೂರ್ವಜನ್ಮದ ಸಂಸ್ಕಾರದಿಂದಾಗಿ ಅವನಲ್ಲಿ ತನಗೆ ಗೌರಿ ಬೇಕೆಂಬ ಆಸೆ ಹುಟ್ಟಿಕೊಂಡಿದೆ; ಗೌರಿ ಘನಶ್ಯಾಮನನ್ನು ಮದುವೆಯಾಗುವುದರಲ್ಲಿ ಒಂದು ದೈವಸಂಕಲ್ಪವಿದೆ ಎಂದು ನನಗೆ ತೋರುತ್ತಿದೆ.

ಈ ವಿನೋದಿನಿಯೋ! ಏನು ಹೇಳಿದರೂ ಸಾಲದು; ಪರಮ ಸಾತ್ವಿಕ ಹೆಣ್ಣು ಅವಳು. ಈ ನಿಮ್ಮ ಪರಮ ಭಾಗವತ ತಮ್ಮಯ್ಯನಿಗೆ ಶ್ರೀಕೃಷ್ಣನನ್ನೇ ಹಡೆದುಕೊಡುತ್ತಾಳೆ.

ನಾನೇ, ಈ ಅಂಗಳದಲ್ಲೇ, ಅಗ್ನಿ ಸಾಕ್ಷಿಯಾಗಿ ಈ ಎರಡು ಮದುವೆಗಳನ್ನೂ ಒಟ್ಟಾಗಿ ಮಾಡಿಸುತ್ತೇನೆ. ನಾಡಿದ್ದು ಪ್ರಾತಃಕಾಲ ಒಳ್ಳೆಯ ಮುಹೂರ್ತವಿದೆ.

ವಿನೋದಿನಿಯೂ ಕೇಶವನೂ ನಿನಗೆ ಹೇಳಿಕೊಳ್ಳಲಾರದೆ ನಾಚಿ ಕಾದಿದ್ದಾರೆ. ಆದರೆ ಗೌರಿಗೂ ಘನಶ್ಯಾಮನಿಗೂ ಮದುವೆ ಮಾಡಬೇಕೆಂಬ ಸಂಕಲ್ಪವನ್ನು ನೀನು ಮೊದಲು ಮಾಡಿಕೊಳ್ಳಬೇಕು. ಘನಶ್ಯಾಮ ಈ ಮದುವೆಯನ್ನು ಬಯಸಿದ್ದಾನೆ. ಆದರೆ ಗೌರಿಯ ಮನಸ್ಸನ್ನು ಹೊಕ್ಕು ನೋಡುವಷ್ಟು ತಪಃಶಕ್ತಿ ನನ್ನಲ್ಲಿಲ್ಲ.’

ಗೌರಿ ಕಾಫಿಯನ್ನು ಲೋಟದಿಂದ ಲೋಟಕ್ಕೆ ಹೊಯ್ದು, ಆರಿಸಿ, ನೊರೆಬರಿಸುತ್ತ ಶಾಸ್ತ್ರಿಗಳ ಮಾತನ್ನು ಕೇಳಿಸಿಕೊಂಡಿದ್ದಳು. ಆಗಬಹುದು ಎನ್ನುವಂತೆ ಮುಗುಳ್ನಕ್ಕಳು.

ಕಾಫಿಯ ಲೋಟವನ್ನು ಅವಳ ಕೈಯಿಂದ ತೆಗೆದುಕೊಳ್ಳುತ್ತ ಶಾಸ್ತ್ರಿಗಳೂ ಮುಗುಳ್ನಕ್ಕು,

‘ಇಷ್ಟು ಬೇಗ?’ ಎಂದರು.

ಮತ್ತೆ ಗೌರಿ ಆಗಲಿ ಎನ್ನುವಂತೆ ನಾಚಿದಳು.

‘ಅದನ್ನಲ್ಲ ಮಗೂ ನಾನು ಕೇಳಿದ್ದು. ನಿನ್ನ ಒಪ್ಪಿಗೆ ಕೇಳೋ ಅಧಿಕಾರ ಇರೋದು ನಿನ್ನ ಅಕ್ಕುಗೆ. ನಾನು ಕೇಳಿದ್ದು ಕಾಫೀನ ಇಷ್ಟು ಬೇಗ ಹೇಗೆ ಮಾಡಿದೆ ಅಂತ.’

ಅಕ್ಕು ನಕ್ಕಳು. ಅವಳು ಹೀಗೆ ನಕ್ಕಿದ್ದೇ ಇಲ್ಲ.

ಯು.ಆರ್.ಅನಂತಮೂರ್ತಿ
೧೮-೦೫-೦೧

* * *