ಮೂರು ತಿಂಗಳಕಾಲ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಮತ್ತು ಎರಡು ತಿಂಗಳು ಲಂಡನ್‌ನಲ್ಲಿ ಈ ಕೃತಿ ರೂಪಪಡೆಯಿತು. ‘ಭವ’ ಬರೆದು ಹಲವು ವರ್ಷಗಳ ನಂತರ ಈ ಕಾದಂಬರಿ ಬರೆದಿದ್ದೇನೆ.

ಕಾದಂಬರಿಯೊಂದನ್ನು ಬರೆಯುವುದೆಂದರೆ ಇಷ್ಟರವರೆಗೆ ವ್ಯಕ್ತವಾದ್ದನ್ನೆಲ್ಲ ಬೆನ್ನಿಗಿಟ್ಟುಕೊಂಡೇ ಅಗೋಚರವಾದ್ದಕ್ಕೆ, ಅವ್ಯಕ್ತಕ್ಕೆ ಕೈಚಾಚುವುದು. ನಮ್ಮ ಹಠದ ವೈಚಾರಿಕೆಯನ್ನು ವಿಮರ್ಶೆಗೆ ಗುರಿಪಡಿಸಿ ಅನುಮಾನಿಸುವುದು. ನಮ್ಮೊಳಗಿನ ಪಿಸುಮಾತಿಗೆ ಕಿವಿಕೊಟ್ಟು ಆಲಿಸುವುದು. ಅಂದರೆ, ಮನಸ್ಸಿಗೆ ಹಿತಕರವಾದ ‘ಒಪೀನಿಯನ್’ಗಳನ್ನೂ, ಈ ಕಾಲದಲ್ಲಿ ಸುಲಭವಾಗಿ ಸಲ್ಲುವಂತೆ ತೋರುವ ಅಭಿಪ್ರಾಯಗಳನ್ನೂ ನಮ್ಮ ಏಕಾಂತದಲ್ಲಿ ಮೀರುವ ಧೈರ್ಯಮಾಡದೆ ಇದು ಸಾಧ್ಯವಾಗಲಾರದು. ನನಗೆ ಈ ಕೃತಿಯಲ್ಲಿ ಇದು ಎಷ್ಟು ಸಾಧ್ಯವಾಗಿರಬಹುದು ಎಂಬುದನ್ನು ಓದುಗರು ಹೇಳಬೇಕು.

ಸುಮಾರು ಮೂವತ್ತೈದು ವರ್ಷಗಳ ಕೆಳಗೆ ನಾನು ಇಂಗ್ಲೆಂಡಲ್ಲಿ ವಿದ್ಯಾರ್ಥಿಯಾಗಿದ್ದಾಗ ‘ಸಂಸ್ಕಾರ’ ಕಾದಂಬರಿಯನ್ನು ಬರೆದದ್ದು. ಈಗ ಪರಸ್ಥಳದಲ್ಲಿದ್ದ ನನಗೆ, ಆ ಕಾಲದ ನನ್ನ ಕಾಣುವಿಕೆಗೆ, ನನ್ನ ಬಾಲ್ಯದ ನೆನಪುಗಳು ಜೀವಂತವಾಗಿ ಒದಗಿಬಂದಂತೆಯೇ, ಕಾಲದಲ್ಲಿ ಇನ್ನೂ ದೂರದಲ್ಲಿರುವ ಈಗಿನ ನನಗೆ, ನನ್ನ ತೀರ್ಥಹಳ್ಳಿ ಪರಿಸರದ ಬಾಲ್ಯದ ನೆನಪುಗಳೂ, ಎಳೆ ವಯಸ್ಸಿನ ಶಿವಮೊಗ್ಗದ ನೆನಪುಗಳೂ ಹೊಸದಾದ ನನ್ನ ಈಚಿಕ ಕಾಣುವಿಕೆಗೂ ಹಿಂದಿನಷ್ಟೇ ಸಮೃದ್ಧವೆನ್ನಿಸುವ ದ್ರವ್ಯವಾಗುವಂತೆ ಉಳಿದಿದೆ. ನನ್ನಲ್ಲಿ ಈಗಲೂ ಅಚ್ಚರಿಯನ್ನೂ ಹೊಸ ಅರ್ಥಗಳನ್ನೂ ಮಲೆನಾಡಿನ ಪರಿಸರಕ್ಕೆ ನಾನು ಋಣಿಯಾಗಿದ್ದೇನೆ.

ಯು.ಆರ್. ಅನಂತಮೂರ್ತಿ
೨೪ – ೫ – ೨೦೦೧