ಒಂದು ಅಂಚೆ ಚೀಟಿ ಬಿಡುಗಡೆಯಾಯಿತು.

ದೆಹಲಿಯಲ್ಲಿ ಭಾರತ ಸರಕಾರದ ವಿದೇಶಾಂಗ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರು ಅದನ್ನು ೧೯೭೮ ಮೇ ೫ನೇ ತಾರೀಕು ಬಿಡುಗಡೆ ಮಾಡಿದರು.  ದೇಶದ ಪ್ರಮುಖ ನಗರಗಳಲ್ಲೆಲ್ಲಾ ಅದರ ಬಿಡುಗಡೆ ಸಮಾರಂಭಗಳು ನಡೆದವು. ಬೆಂಗಳೂರು, ಧಾರವಾಡಗಳಲ್ಲಿಯೂ ಸಹ. ಕೇಂದ್ರ ಸರಕಾರದ ಅಂಚೆ ಮತ್ತು ತಂತಿ ಇಲಲಾಖೆ ಅವುಗಳನ್ನು ಏರ್ಪಡಿಸಿತ್ತು.

“ನವೋಜ್ವಲ ಭಾರತದ ಮಹಾನಾಯಕ” ಎಂದು ಆ ಅಂಚೆ ಚೀಟಿಯಲ್ಲಿ ಅಚ್ಚಾಗಿದ್ದ ವ್ಯಕ್ತಿಯನ್ನು ಪ್ರಶಂಶಿಸಲಾಗಿತ್ತು.

ವ್ಯಕ್ತಿತ್ವ

ತೆಳುವಾದ ಶರೀರ, ಗುಂಡಾದ ಚಪ್ಪಟ್ಟೆ ಮುಖ, ಬೊಗಸೆ ಕಣ್ಣುಗಳು, ಉದ್ಧವಾದ ಮೂಗು, ಕಿವಿ ಅಗಲವಾದ ಹಣೆ, ಬಾಯಿ, ದಪ್ಪ ಧ್ವನಿ, ತುಂಬ ಉದ್ಧ ಅಲ್ಲದಿದ್ದರೂ ಉದ್ಧವಾದ ಕ್ರಾಪು.

ಒರಟಾದ ಬಟ್ಟೆಯ ಜುಬ್ಬ. ಅಂತಹುದೇ ಬಿಳಿ ಧೋತಿ. ಕೆಲವು ವೇಳೆ ಅದರ ಮೇಲೆ ಶಾಲು. ಅವು ಇಸ್ತ್ರೀಯನ್ನು ಕಾಣುತ್ತಿದ್ದುದು ಕಮ್ಮಿ. ಒಟ್ಟಿನಲ್ಲಿ ಸರಳ, ತೀರ ಸರಳ ಉಡುಪು.

ಸದಾ ಏನೋ ಯೋಚಿಸುವಂತಿದ್ದ ಮುಖಭಂಗಿ. ಸೌಮ್ಯ ಆತ್ಮೀಯತೆ ಸೂಸುವ ನಿಲುವು. ತನ್ನ ಕುರಿತು ಭಾಷಣಗಳಲ್ಲಾಗಲಿ, ಸಂಭಾಷಣೆಗಳಲ್ಲಾಗಲೀ ಹೇಳಿಕೊಳ್ಳುತ್ತಿದ್ದ ವಿರಳ. ಗುಂಪಿನ ಮಧ್ಯೆ ಅಥವಾ ವೇದಿಕೆಯ ಮಧ್ಯ ಮುನ್ನುಗ್ಗಿ ತೋರಿಸಿಕೊಳ್ಳುವ ಸ್ವಭಾವ ಅಲ್ಲ.

ಭಾಷಣ ಕಾರರ, ಲೇಖನ, ಪತ್ರಕರ್ತ, ರಾಜಕಾರಣಿ , ನಾಯಕ ಮಿಲಿಗಾಗಿ ಚಿಂತಕ. ಬದುಕಿನುದ್ದಕ್ಕೂ ದೇಶ. ಜನ ಅದರ ಸಮಸ್ಯೆಗಳೂ, ಇದರ ಚಿಂತನೆಯಲ್ಲಿ ಮಗ್ನ. ಆಜನ್ಮ ಬ್ರಹ್ಮಚಾರಿ.

ಸ್ನೇಹ ಪ್ರೀಯ,  ವಿನೋದಪ್ರೀಯ, ಮಕ್ಕಳಿಂದ ಮುದುಕರವರೆಗೂ ಗೆಳೇಯರು, ಮಧುರವಾದ ನಡವಳೀಕೆ, ದರ್ಪ, ಬಿಂಕ, ಪ್ರತಿಷ್ಠೆಗಳು ಆತನ ಹತ್ತಿರವೂ ಸುಳಿಯುತ್ತಿರಲಿಲ್ಲ.

ಆತನ ಬರಹ ಭಾಷಣಗಳಲ್ಲಿ ಮೌಲಿಕ ವಿಚಾರಗಳಿದ್ದವು. ರಸವಂತಿಕೆಯಿತ್ತು. ಅವರ ಮಾತು ಕೇಳಿದ ಮೇಲೆ ತೃಪ್ತಿ ತುಂಬಿ ಬರುತ್ತಿತ್ತು. ಮಾತು ಮಾಣಿಕ್ಯ, ಎಂಬುವುದು ಎಷ್ಟು ನಿಜ ಅನಿಸುತ್ತಿತ್ತು.

ಮಲಗಿರುವವರು ಕಲಿಯುಗದವರು ಹಾಸಿಗೆ ಬಿಟ್ಟು ಎದ್ದವರು ದ್ವಾಪರಯುಗದವರು.

ಎದ್ದು ನಿಲ್ಲುವವರು ತ್ರೇತಾಯುಗವನ್ನು ನಿರ್ಮಿಸುವವರು.

ಮುಂದೆ ನಡೆಯುವವರು ಕೃತಯುಗವನ್ನು ಕಡೆಯುವವರು.

ಆದ್ದರಿಂದಲೇ ನಡೆಮುಂದೆ; ನಡೆ ಮುಂದೆ

ಚರೈವೇತಿ , ಚರೈವೇತಿ.

ಈ ಮೇಲಿನ ಮಾತುಗಳಲ್ಲಿ ಆಗಾಗ್ಗೆ ಹೇಳುತ್ತಿದ್ದವರು ಯಾರು ಗೊತ್ತೇ? ಮೇಲಿನ ವರ್ಣನೆಯೆಲ್ಲ ಯಾರದ್ದು ಗೊತ್ತೇ? ಅವರೇ :”ನವೊಜ್ವಲ ಭಾರತದ ಮಹಾನಾಯಕ ” ಪಂಡಿತ ದೀನದಯಾಳ ಉಪಾಧ್ಯಾಯರು.

ಬಡ ಸಂಸಾರ

ಹುಟ್ಟಿದ್ದು, ಬಡತನದ ಮನೆತನದಲ್ಲಿ, ಪ್ರಸಿದ್ಧ ಜ್ಯೋತಿಷಿಗಳಾದ ಪಂಡಿತ ಹರಿರಾಮ ಉಪಾಧ್ಯಾಯರ ವಂಶದಲ್ಲಿ. ಹುಟ್ಟೂರು ಮಥುರಾ ಜಿಲ್ಲೆಯ ನಾಗ್ಲಾ ಚಂದ್ರಭಾನ್ ಎಂಬ ಕುಗ್ರಾಮ, ಉತ್ತರ ಪ್ರದೇಶದಲ್ಲಿದೆ.

೧೯೧೬ ಸೆಪ್ಟೆಂಬರ್ ೨೫ : ಸೋಮವಾರ ಸುರ್ಯೊದಯವಾಗುತ್ತಿದ್ದಂತೆಯೇ ರಾಮಪ್ಯಾರಿ  ದೀನ ದಯಾಳರಿಗೆ ಜನ್ಮ ಕೊಟ್ಟಳು. “ದೀನಾ” ಎಂದು ಎಲ್ಲರೂ ಮಗುವನ್ನು  ಪ್ರೀತಿಯಿಂದ ಕರೆಯತೊಡಗಿದರು. ದೀನ ದಯಾಳರ ತಂದೆ ಭಗವತ ಪ್ರಸಾದರು ರೇಲ್ವೆ ನೌಕರರು. ನೌಕರಿ ದೆಸೆಯಿಂದ ಹೆಚ್ಚು ಹೊಸಲಾಚೆಯೇ. “ದಿನಾ: ವಿನ ಜಾತಕವನ್ನು ನೋಡಿ ಜ್ಯೋತಿಷಿಗಳು ಹೊಗಳಿದರಂತೆ. ಹುಡುಗ ವಿಧ್ವಾಂಸನಾಗುತ್ತಾನೆ. ನಿಸ್ವಾರ್ಥ ಕಾರ್ಯಕರ್ತನಾಗುತ್ತಾನೆ.  ಅವನಿಗೆ ದೀನ ದರಿದ್ರರನ್ನು ಕಂಡರೆ ಪ್ರೀತಿ ಅಪಾರ ಮತ್ತು ಮಹಾನಾಯಕನಾಗುತ್ತಾನೆ, ಆದರೆ ಮದುವೆಯಾಗುವುದಿಲ್ಲ  ಒಂದು ಕಡೆ ಆನಂದ; ಇನ್ನೊಂದು ಕಡೆ ದುಃಖ.

ತಂದೆಯೂ ಇಲ್ಲ, ತಾಯಿಯೂ ಇಲ್ಲ

“ದೀನ” ನಿಗೆ ಶಿವದಯಾಳ್ ಎಂಬ ತಮ್ಮನೂ ಹುಟ್ಟಿದ್ದ. “ಶಿಬು” ಆರು ತಿಂಗಳ ಮಗುವಾಗಿದ್ದಾಗ ಭಗವತಿ ಪ್ರಸಾದರು, ಹೆಂಡತಿ  ಮಕ್ಕಳನ್ನೆಲ್ಲಾ ತವರು ಮನೆಗೆ ಕಳುಹಿಸಿದರು. ಮನೆಯಲ್ಲಿ ತಾತ ಚುನಿಲಾಲ್ ಮತ್ತು ಮಾವ ರಾಧಾರಮಣ. ಇದ್ದಕಿದ್ದಂತೆ ತಂದೆ ತೀರಿಹೋದರು ಎಂಬ ಸುದ್ಧಿಯು ಸಿಡಿಲು ಹೊಡೆಯಿತು. ವಿಪರೀತ ದುಃಖದಿಂದ ತಾಯಿಯ ಆರೋಗ್ಯ ಕೆಟ್ಟಿತು. ಕ್ಷಯರೋಗವು ಹತ್ತಿಕೊಂಡಿತು.  ನಾಲ್ಕು ವರ್ಷಗಳ ನಂತರ ಆಕೆಯೂ ಸಹ ಸತ್ತು ಹೋದಳು. ಇಬ್ಬರು ಮಕ್ಕಳು ಈಗ ಅನಾಥರು. ತಾಯಿಯ ವಿರಹ ಮಕ್ಕಳ ಮೇಲೆ ತುಂಬ  ಕೆಟ್ಟ ಪ್ರಭಾವ ಬೀರಿತು. ತಾತ ಪರಿಸ್ಥಿತಿಯ ಒತ್ತಡದಿಂದ ನೌಕರಿ ಬಿಟ್ಟು, ತಮ್ಮ ಹಳ್ಳಿಗೆ ಮಕ್ಕಳನ್ನೆಲ್ಲಾ ಕಟ್ಟಿಕೊಂಡು ಹಿಂದಿರುಗಿದಳು. ಅಜ್ಜಿ ತಾಜನ ಪ್ರೀತಿಯೇ ಈಗ  ಈ ಅನಾಥ ಮಕ್ಕಳಿಗೆ ಆಧಾರ.

ಕಳ್ಳರಿಗೆ ಜಗ್ಗದ ಹುಡುಗ

ಒಂದು ದಿನ ವಿಚಿತ್ರ  ಘಟನೆಯು ನಡೆಯಿತು. ಈ ಸಮಯದಲ್ಲಿ ರಾತ್ರಿ ಸುಮಾರು ೧೧-೧೨ ಘಂಟೆಯಿರಬಹುದು. ದೀನಾ ತನ್ನ ಸೋದರತ್ತೆಯ ತೊಡೆಯ ಮೇಲೆ ಕೂತು ಹರಟೆ ಹೊಡೆಯುತ್ತಿದ್ದ ಮನೆಯ ಉಳಿದ ಹೆಂಗಸರು ಸುತ್ತಲೂ ಕೂತು ಮಾತನಾಡುತ್ತಿದ್ದರು.  ಇದ್ದಕ್ಕಿಂದ್ದಂತೆಯೇ ೧೦-೧೨ ಜನ ಕಳ್ಳರು ಮನೆಯ ಮೇಲೆ ದಾಳಿಯಿಟ್ಟರು. “ದೀನ”ನನ್ನು ಎಳೆದುಕೊಂಡು, ನೆಲದ ಮೇಲೆನೂಕಿ ಅವನ ಎದೆಯ ಮೇಲೆ ತುಳಿಯುತ್ತಾ ಕೊಲ್ಲುವುದಾಗಿ ಬೆದರಿಕೆ ಹಾಕಿದರು.  “ಹೇಳು” ಎಲ್ಲಿವೆ ಮನೆಯ ಆಭರಣಗಳು!” ಕೊಡು ಇಲ್ಲವಾದರೆ ಕೊಲ್ಲುವೆವು”.  ಆಗ ದೀನದಯಾಳ್ ತನ್ನದೇ ಆದ ಶೈಲಿಯಲ್ಲಿ “ಕಳ್ಳರು ಉಳ್ಳವರನ್ನು ಲೂಟಿ ಮಾಡಿ ಇಲ್ಲದವರವನ್ನು ರಕ್ಷಿಸುವಿರೆಂದು ಕೇಳಿದ್ದೇನೆ. ಆದರೆ ಬಡವನಾದ ನನ್ನನ್ನು ಕೊಲ್ಲುತ್ತಿದ್ದೀರಿ. ಇದೇನಾರ್ಶ? ಎಂದ. ಆ ಕಳ್ಳರ ಗುಂಪಿನ ನಾಯಕನ ಮನಸ್ಸು ತಲ್ಲಣಿಸಿತು. “ದೀನ” ನನ್ನು ಬಿಟ್ಟು ತನ್ನ ಗುಂಪಿನೊಂದಿಗೆ ಹಿಂತಿರುಗಿದ.

ತಾತ ಚುನಿಲಾಲರು ವಿದ್ಯಾಭ್ಯಾಸಕೋಸ್ಕರ ಮಕ್ಕಳನ್ನೆಲ್ಲಾ ಮಾವ ರಾಧಾರಮಣರ ಮನೆಗೆ ಗಂಗಾಪೂರಕ್ಕೆ ಕಳೂಹಿಸಿದರು.  ಇಲ್ಲಿ “ದೀನಾ”ನ ಪ್ರಾಥಮಿಕ ವಿದ್ಯಾಭ್ಯಾಸ ಆರಂಭವಾಯಿತು. ಅವನಿಗೆ ೯ ವರ್ಷ. ಶಾಲೆಗೆ ಹೋಗಲು ಈಗ ಶುರು ಮಾಡಿದ.

"ಇದೇನಾಶ್ಚರ್ಯ"

ಧೀರ

೧೯೨೬ನೇ ಸೆಪ್ಟೆಂಬರ್ ತಿಂಗಳಲ್ಲಿ ತಾತ ಚುನಿಲಾಲರು ತೀರಿಹೋದರು. ಮಾವ ರಾಧಾರಮಣರಿಗೆ ಅನೇಕ ಸಮಸ್ಯೆಗಳು ಮುತ್ತಿದವು. ದೀನಾ ಶಿಬೂ, ಹಾಗೂ ತಮ್ಮ ಮಕ್ಕಳು  ಇವರುಗಳ ಆರೈಕೆ , ಶಿಕ್ಷಣ, ಮೊದಲಾದ ಚಿಂತನೆ, ದೌರ್ಭಾಗ್ಯದಿಂದ ರಾಧಾರಮಣರಿಗೂ ಕ್ಷಯರೋಗ ಕಾಣಿಸಿಕೊಂಡಿತು. ಬದುಕುವುದು ಕಷ್ಟ ಎಂದು ವೈದ್ಯರು ಹೇಳಿದರು. ಸ್ವಂತ ಊರಲ್ಲಿ, ಭರತಪುರ, ಆಗ್ರಾಗಳಲ್ಲಿಯೂ ಅವರಿಗೆ ಚಕಿತ್ಸೆ ಕೊಡಲು ಎಲ್ಲರೂ ನಿರಾಕರಿಸಿದರು. ಏನೂ ಮಾಡುವುದು ? ಕೊನೆಗೆ ಲಕ್ನೋದಲ್ಲಿ ಅವರ ಸೋದರ ಸಂಬಂಧಿಯೊಬ್ಬರು ಚಕಿತ್ಸೆಗಾಗಿ ಬರಹೇಳಿದರು. ಆದರೆ ಕರೆದುಕೊಂಡು ಹೋಗುವವರಾರು? ಆ ಕೆಟ್ಟ ಕಾಯಿಲೆಯ ತಮಗೆಲ್ಲಿ ಅಂಟಿಕೊಳ್ಳುವುದೋ ಎಂಬ ಭಯದಿಂದ ಯಾರೂ ಹತ್ತಿರಬರಲಿಲ್ಲ. ಆದರೆ “ದೀನಾ”ಗೆ ಕೇವಲ ೧೧  ವರ್ಷ. ಅವನು ತಾನು ಜೊತೆಗೆ ಬರುವೆನೆಂದು ಮುಂದಾದ. ವಿಧಿ ಇಲ್ಲದೆ ಮಾವ ಒಪ್ಪಿಕೊಂಡರು. ಆದರೆ ದೀನದಯಾಳನಿಗೆ ಪರೀಕ್ಷೆಗಳು ಹತ್ತಿರ ಬರುತ್ತಿತು. ಮಾವನ ಸೇವೆಯಲ್ಲಿ “ದೀನಾ”ನಿಗೆ ಯಾವುದರ ಗಮನವೂ ಇರಲಿಲ್ಲ. ರಾಧಾರಮಣರ ಕಾಯಿಲೆ ಸ್ವಲ್ಪ ಗುಣಮುಖವಾದಂತೆ ಕಾಣಿಸಿತು. ದೀನದಯಾಳ್ ಗಂಗಾಪುರಕ್ಕೆ ವಾಪಸಾಗಿ ಪರೀಕ್ಷೆಗೆ ಹೋದ. ಎಲ್ಲರಿಗೂ ಆಶ್ಚರ್ಯ, ಆನಂದ. ದೀನದಯಾಳ್ ಪ್ರಥಮ ರಾಂಕಿನಲ್ಲಿ ಉತ್ತಿರ್ಣನಾಗಿದ್ದ.

ವಿಶಿಷ್ಟ ವಿದ್ಯಾರ್ಥಿ

ಗಂಗಾಪುರದಲ್ಲಿ ಶಾಲೆ ಇರಲಿಲ್ಲ. ಅದರಿಂದ ದೀನ ದಯಾಳ್ ಕೋಟ ಎಂಬ ಊರಿಗೆ ಐದನೇ ತರಗತಿಗೆ ಸೇರಿದ. ಅಲ್ಲಿಂದ ರಾಜಘರ್ ಗೆ ಹೋಗಿ ೮ ಮತ್ತು ೯ನೇ ತರಗತಿಗಳನ್ನು ಮುಗಿಸಿದ.  ಬನವಾರಿಲಾಲ್ ಅವರ ಮಾವನ ಮಗನೂ “ದೀನ”ನ ತರಗತಿಯಲ್ಲಿಯೇ ಓದುತ್ತಿದ್ದ.  ಅವನು ಓದಿನಲ್ಲಿ ಸ್ವಲ್ಪ ಹಿಂದು. ಪಠ್ಯಪುಸ್ತಕಗಳನ್ನೆಲ್ಲಾ ಅವನೇ ಇಟ್ಟುಕೊಳ್ಳುತ್ತಿದ್ದ.  ದೀನದಯಾಳನಿಗೆ ಬೇರೆ ಪುಸ್ತಕಗಳಿರಲಿಲ್ಲ. ಆದರೆ ಎಂದೂ ಅದಕ್ಕಾಗಿ ಜಗಳಕಾಯಲಿಲ್ಲ.  ಜುಗುಪ್ಸೆಗೊಳ್ಳಲಿಲ್ಲ. ಬದಲಾಗಿ ಬನವಾರಿಲಾಲ್ ಮಲಗಿದ್ದಾಗ ಅಥವಾ ಅವನು ಓದದೇ ಇದ್ದಾಗ ಪುಸ್ತಕಗಳನ್ನು ತೆಗೆದುಕೊಂಡು ಓದಿ ಮುಗಿಸುತ್ತಿದ್ದ.

ದೀನದಯಳ ಈಗ ೯ನೇ ತರಗತಿ. ತಮ್ಮನಾದ ಶಿವದಯಾಳ ವಿಷಮ ಶೀತ ಜ್ವರದಿಂದ ತೀರಿಹೋದ. ಅಣ್ಣ ತಮ್ಮಂದಿರಲ್ಲಿ ಗಾಢವಾದ ಪ್ರೇಮ ಇದ್ದುದರಿಂದ ದೀನ ದಯಾಳನಿಗೆ ತೀವ್ರ ದುಃಖವಾಯಿತು.

ರಾಜಘರ‍್ದಿಂದ ದೀನದಯಾಳ್ ಸೀಕರ ಹೈಸ್ಕೂಲ್ಗೆ ಕಲಿಯಲು ಹೋದ.ಅವನ ಶಿಕ್ಷಕರು ಅವರ ಶಾಲೆ ಬಿಡಬೇಡವೆಂದು ಎಷ್ಟೋ ಕೇಳಿಕೊಂಡರು. ಇಂತಹ ಬುದ್ಧಿವಂತ ವಿದ್ಯಾರ್ಥಿ ಅವರ ಶಾಲೆಯಲ್ಲಿಯೇ ಇದ್ದರೆ ಅವರಿಗೂ ಅವರ ಶಾಲೆಗೂ ಕೀರ್ತಿ ಅಲ್ಲವೇ? ಮೆಟ್ರಿಕ್ಯೂಲೇಷನ್ ಪರೀಕ್ಷೆಗೆ ಕೆಲವು ತಿಂಗಳ ಮುನ್ನ ದೀನದಯಾಳ್ ರೋಗಪೀಡಿತನಾದ. ಆದರೂ ಆ ಪ್ರದೇಶದ ಎಲ್ಲ ವಿದ್ಯಾರ್ಥಿಗಳನ್ನು  ಮೀರಿಸಿ ಪ್ರತಿ ವಿಷಯದಲ್ಲಿಯೂ ಪ್ರಥಮನಾಗಿ ಒಂದು ದಾಖಲೆಯನ್ನು ನಿರ್ಮಿಸಿದ.  ಗಣಿತ ಅವನಿಗೆ ಪ್ರೀಯವಾದ ವಿಷಯ. ಅವನು ರೇಖಾಗಣಿತದ ಉತ್ತರ ಪತ್ರಿಕೆಯನ್ನು ಒಂದು  ಮಾದರಿಯ ಪತ್ರಿಕೆಯಂದು ಅನೇಕ ವರ್ಷಗಳಿಂದ ಕಾದಿರಿಸಿಟ್ಟಿದ್ದರು.

ಸೀಕರ್ ಮಹಾರಾಜರಿಗೆ ಈ ಬುದ್ಧಶಾಲಿ ವಿದ್ಯಾರ್ಥಿ ಕುರಿತು ಗೊತ್ತಾಯಿತು. ದೀನದಯಾಳರನ್ನು ಕರೆಸಿದರು. “ನಿನಗೇನು ಬಹುಮಾನ ಬೇಕು” ಎಂದು ಕೇಳಿದರು.” ನಿಮ್ಮ ಅಶಿರ್ವಾದ ಮಾತ್ರ ಸಾಕು” ಎಂದ. ಮಹಾರಾಜರಿಗೆ ಸಂತೋಷವಾಗಿ ಒಂದು ಚಿನ್ನದ ಪದಕ, ಪುಸ್ತಕಗಳಿಗಾಗಿ ೨೫೦ ರೂ. ಮತ್ತು ಪ್ರತಿ ತಿಂಗಳು ಹತ್ತು ರೂಪಾಯಿ ವಿದ್ಯಾರ್ಥಿ ವೇತನವನ್ನು ಉಡುಗೊರೆಯಾಗಿ ಕೊಟ್ಟು ಕಳುಹಿಸಿದರು.

ಸೊನ್ನೆ ಸಂಘ

ರಾಧಾರಮಣನ ಕುಟುಂಬದಲ್ಲಿ ಇದುವರೆಗೂ ಯಾರೂ ಕಾಲೇಜು ಓದಿರಲಿಲ್ಲ. ದೀನದಯಾಳನೇ ಈಗ ಮೊದಲನೆಯವನು. ಪಿಲಾನೀಗೆ ಹೋಗಿ ಕಾಲೇಜಿಗೆ ಸೇರಿಕೊಂಡ.

ಕಾಲೇಜಿನಲ್ಲಿ ಅವನು ಎಲ್ಲರಿಗಿಂತಲೂ ಓದಿನಲ್ಲಿ ಮೊದಲಿ. ಆದರೆ ಉಳಿದ ವಿದ್ಯಾರ್ಥಿ ಗೆಳೆಯರ ಹಿತ ಕುರಿತೇ ಅವನ ಚಿಂತೆ.  ಹಿಂದೆ ಬಿದ್ದ ಅನೇಕ ವಿದ್ಯಾರ್ಥಿಗಳು ಅವನಿಂದ ಪಾಠ ಹೇಳಿಸಿಕೊಳ್ಳಲು ಬರುತ್ತಿದ್ದರು.  ಸ್ನೇಹದಿಂದ ಅವರೆಲ್ಲರಿಗೂ ದೀನದಯಾಳ್ ಓರ್ವ ಆಧಾರನಾದ. ಹೀಗೆ ಬರುವವರ ಸಂಖ್ಯೆ ಹೆಚ್ಚಾದರಿಂದ ಅವರೆಲ್ಲರನ್ನೂ ಸೇರಿಸಿ ಒಂದು ಗೆಳೆಯರ ಸಂಸ್ಥೆಯನ್ನು ಸ್ಥಾಪಿಸಿದ. ಅದಕ್ಕೆ “ಜೀರೋ:” ಅಸೊಸಿಯೇಷನ್ಸ” (ಸೊನ್ನೆ ಸಂಘ) ಎಂದು ಹೆಸರಿಟ್ಟ. ಕಮ್ಮಿ ಅಂಕಗಳನ್ನು ಪಡೆಯುವವರ ಸಂಘ ಅದು. ಅದಕ್ಕೆ ದೀನದಯಳ್ ಸಹ ಸದಸ್ಯ!

ಎಲ್ಲರ ಕಣ್ಣು ಸೆಳೆದ ವಿದ್ಯಾರ್ಥಿ

೧೯೩೭ರಲ್ಲಿ ದೀನದಯಾಳ್, ಇಂಟರಮಿಡಿಯೇಟ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ಒಂದು ಹೊಸ ದಾಖಲೆಯನ್ನೇ ನಿರ್ಮಿಸಿದ. ಇಲ್ಲಿಯವರೆಗೆ ಬಿ‌ರ್ಲಾ ಕಾಲೇಜಿನಲ್ಲಿ ಯಾರೂ ಇಷ್ಟು  ಹೆಚ್ಚು ಅಂಕಗಳನ್ನು ಪಡೆದಿರಲಿಲ್ಲ.  ದೀನದಯಾಳನಸಾಧನೆಗೆ ಮೆಚ್ಚಿ ಘನಶ್ಯಾಮದಾಸ ಬಿರಲಾ ಅವರು ಒಂದು ಚಿನ್ನದ ಪದಕವನ್ನು ಬಹುಮಾನವಾಗಿ ಕೊಟ್ಟರು. ಇಂಟರಮಿಡಿಯೆಟ್ ಬೋರ್ಡ ಕೂಡ ಇನ್ನೊಂದು ಬಹುಮಾನವನ್ನು ಕೊಟ್ಟಿತು. ಬಿರ್ಲಾ ತಮ್ಮ ಸಂಸ್ಥೆಯಲ್ಲಿ ಒಂದು ಒಳ್ಳೆಯ ಉದ್ಯೋಗವನ್ನು ದೀನದಯಾಳರಿಗೆ ಕೊಡುತ್ತೇನೆಂದು ಹೇಳಿದರು. ತನ್ನ ವಿಧ್ಯಾಭ್ಯಾಸ ಪೂರ್ತಿ ಆಗುವವರೆಗೆ ಬೇಡವೆಂದು ವಿನಯದಿಂದ ತಿರಸ್ಕರಿಸಿದ.  “ಎಂದಾದರೂ ನಮ್ಮ ಸಂಸ್ಥೆಯಲ್ಲಿ ನಿನಗಾಗಿ ಕೆಲಸ ಕಾದೇ ಇರುತ್ತದೆ” ಎಂದು ಬಿರ್ಲಾ  ಆಶ್ವಾಸನೆ ನೀಡಿದರು. ಆದರೆ ದೀನದಯಾಳಜೀ ಅವರಿಗೆ ಬಿರ್ಲಾ ಅವರನ್ನು ಕೆಲಸಕ್ಕಾಗಿ ಬೇಡುವ ಸಂದರ್ಭ ಜೀವನದಲ್ಲಿಯೇ ಬರಲಿಲ್ಲ.

ಬಿ.ಎ. ಓದಲು ದೀನದಯಾಳ್ ಪಿಲಾನಿಯಿಂದ ಕಾನ್ಪುರಕ್ಕೆ ಹೋದರು. ಅಲ್ಲಿ  ಎಸ್.ಡಿ.ಕಾಲೇಜ್ ಸೇರಿದರು. ವಿದ್ಯಾರ್ಥಿನಿಲಯದಲ್ಲಿ ವಾಸ್ತವ್ಯ. ಅವರ ಜೊತೆಗೆಯಲ್ಲಿದ್ದವರಲ್ಲಿ ಬಲವಂತ ಮಹಾಶೀಂಧೆ, ಮತ್ತು ಸುಂದರ ಸಿಂಗ್ ಭಂಡಾರಿ ಪ್ರಮುಖರು. ಬಲವಂತ ಮಹಾಶಿಂಧೆಯವರ ಪ್ರಯತ್ನದಿಂದ ದೀನದಯಾಳಜೀ ರಾಷ್ಟ್ರೀಯ ಸ್ವಯಂ ಸೇವಕಸಂಘದ ಕಾರ್ಯದಲ್ಲಿ ಅಭಿರುಚಿ ತಾಳಲು ಆರಂಭಿಸಿದರು.  ದೇಶಸೇವೆ ಮಾಡಬೇಕೆಂದು ಅಂತರಿಕ ಆಸೆ ದೀನದಯಾಳ್ ಅವರನ್ನು ಸಂಘದ ಹತ್ತಿರ ಸೆಳೆಯುತ್ತಾ ಹೋಯಿತು. ೧೯೩೯ರಲ್ಲಿ ದೀನದಯಾಳ್ ಪ್ರಥಮಶ್ರೇಣಿಯಲ್ಲಿ ಬಿ.ಎ. ಪದವೀಧರರಾದರು.

ಎಂ..ಆಗಲಿಲ್ಲ

ದೀನದಯಾಳಜೀ ಎಂ.ಎ. ಓದಲು ಕಾನಪುರದಿಂದ ಆಗ್ರಾಕ್ಕೆ ಹೋದರು. ಅವರು ಆರಿಸಿಕೊಂಡ ವಿಷಯ ಇಂಗ್ಲೀಷ ಸಾಹಿತ್ಯ. ಇದೇ ಸಮಯಕ್ಕೆ ನಾನಾಜಿ ದೇಶಮುಖ್ ಮತ್ತು ಅವರ ಸ್ನೇಹಿತರೊಬ್ಬರು ರಾಷ್ಟ್ರೀಯಸ್ವಯಂ ಸೇವಕ ಸಂಘದ ಕಾರ್ಯ ಆರಂಭಿಸಲು ಆಗ್ರಾಕ್ಕೆ ಬಂದಿದ್ದರು. ದೀನದಯಾಳಜೀ ಇವರ ಜೊತೆಗೂಡಿ ಕೆಲಸ ಮಾಡಲಾರಂಭಿಸಿದರು. ಸಂಘದ ಕೆಲಸದ ಒತ್ತಡವಿದ್ದರೂ  ಪ್ರಥಮ ಎಂ.ಎ. ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು.

ರಾಮಾದೇವಿ ಎಂಬ ಸಂಬಂಧಿಕರೊಬ್ಬರು ಕಂಡರೆ ದೀನದಯಾಳಜಿಗೆ ತುಂಬ ಆತ್ಮೀಯತೆ. ಆಕೆ ಅನಾರೋಗ್ಯದ ನಿಮತ್ತ ಆಗ್ರಾಕ್ಕೆ ಬಂದರು. ಆಕೆಯ ಶುಶ್ರೂಷೆಯ ಕೆಲಸ ದಿನದಯಾಳಜಿಯವರದೇ. ಸಂಘದ ಕೆಲಸ ಮತ್ತು ಓದುವ ಕೆಲಸದ ಜೊತೆಗೆ ಆಕೆಯನ್ನು ನೋಡುವ ಕೆಲಸ, ಮೂರು ಒಟ್ಟಾದವು. ಎಂ.ಎ. ಪರೀಕ್ಷೆ ಹತ್ತಿರ ಹತ್ತಿರ ಬರುತ್ತಿತ್ತು. ಈಗೇನು ಮಾಡುವುದು? ರಾಮಾದೇವಿಯ ಆರೊಗ್ಯ ದಿನೇ ದಿನೇ ಕ್ಷೀಣಿಸುತ್ತಿತ್ತು.  ಪರೀಕ್ಷೆಗೆ ಸಿದ್ಧರಾಗುವುದನ್ನು ಬಿಟ್ಟು ಆಕೆಯ ಶುಶ್ರೂಷನೆಯನ್ನು  ಮಾಡಲು ತೊಡಗಿದರು. ಹಗಲು ರಾತರಿ ಎನ್ನದೆ ಶ್ರಮಿಸುತ್ತಾ ಎಲ್ಲ ರೀತಿಯ ಆರೈಕೆ. ಚಿಕಿತ್ಸೆಗಳನ್ನು ಮಾಡಿದರೂ ರಾಮಾದೇವಿ ಉಳಿಯಲಿಲ್ಲ. ಮನಸ್ಸಿಗಾದ ವಿಪರೀತ ನೋವಿನಿಂದ ಪರೀಕ್ಷೆಗೆ ಕೊಡಲಿಲ್ಲ. ವಿದ್ಯಾಭ್ಯಾಸ ಕಡಿದು ಹೋಯಿತು. ಸೀಕರ್ ಮಹಾರಾಜರು ಮತ್ತು ಬಿರ್ಲಾ ಕೊಡುತ್ತಿದ್ದ ಎರಡೂ ವಿದ್ಯಾರ್ಥಿ ವೇತನಗಳೂ ನಿಂತವು.

ಸಿಕ್ಕ ಸರಕಾರಿ ಉದ್ಯೋಗ ಬೇಡ

ಸ್ವಂತ ಇಚ್ಛೆಯಿಲ್ಲದಿದ್ದರೂ ಸೋದರತ್ತೆಯ ಇಚ್ಛೆಯ  ಮೇರೆಗೆ ದೀನದಯಾಳಜೀ ಸರಕಾರದ ಪರೀಕ್ಷೆಯೊಂದಕ್ಕೆ ಕೂತರು. ಅದರಲ್ಲಿ ಭಾಗವಹಿಸಿದವರಿಗೆ ಸೂಟು ಅನಿವಾರ್ಯವಾಗಿ ಬೇಕೆಂದು ಸ್ನೇಹಿತರೆಲ್ಲ ಹೇಳಿದರು. ಆದರೆ ಇವರ ಹತ್ತಿರ ಪಾಶ್ಚಾತ್ಯ ರೀತಿಯ ಬಟ್ಟೆಯೇ ಇರಲಿಲ್ಲ. ಭಾರತೀಯ ವೇಷ ಬಿಟ್ಟು ಬೇರೆ ಬಟ್ಟೆ ಹಾಕುವುದರಲ್ಲಿ ಇಷ್ಟವೂ ಇರಲಿಲ್ಲ. ಮಾವನ ರಾಧಾರಮಣರ ಆಸೆಯಂತೆ ಎಂ.ಎ.ಪರೀಕ್ಷೆಗೆ ಕೂಡದಿದ್ದುದರಿಂದ ಅವರಿಗೆ ತುಸು ಕೋಪ ಬೇರೆ ಬಂದಿತು. ಅವರನ್ನು ಹಣ ಕೇಳುವುದು ಹೇಗೆ ? ಆದ್ದರಿಂದ ಸೋದರತ್ತೆಯ ಬಳಿ ಹೋಗಿ ಹಣ ಪಡೆದುಒಂದು ಸೂಟಿಗೆ ಬೇಕಾದ ಬಟ್ಟೆ ಕೊಂಡದ್ದಾಯಿತು. ಇಂಟರ್ ವ್ಯೂವು ದಿನಕ್ಕೆ ಬಟ್ಟೆ ಹೊಲಿದು ಕೊಡಬೇಕೆಂದು ಹೇಳಿ ದರ್ಜಿಗೆ ಕೊಟ್ಟು ಬಂದರು. ದರ್ಜಿಗಳು ದರ್ಜಿಗಳೇ. ಬಟ್ಟೆ ತರಲು ಇವರು ಹೋದರೆ ಅವನಿನ್ನೂ ಹೊಲಿದೇ ಇರಲಿಲ್ಲ. ಇಂದೇ ಹೊಲಿದು ಕೊಡುವೆನೆಂದು ಭರವಸೆ  ಕೊಟ್ಟ. ಅಷ್ಟೇ . “ಚಿಂತಿಲ್ಲ, ದೇವರ ಇಚ್ಛೆ ಹೀಗೆಯೇ ಇರಬೇಕು. ಸೂಟು ನನಗೆ ಬೇಕಿಲ್ಲ, ದೇವರ ಇಚ್ಛೆ ಹೀಗೆಯೇ ಇರಬೇಕು. ಸೂಟು ನನಗೆ ಬೇಕಿಲ್ಲ ವಾಪಸು ಕೊಡು” ಎಂದು ಹೇಳಿ ಬಟ್ಟೆಯೊಡನೆ ಮನೆಗೆ ಹಿಂದಿರುಗಿದರು.

ಇಂಟರ‍್ವ್ಯೂಗೆ ದೀನ ದಯಾಳಜೀ ಹೋದರು. ಅಲ್ಲಿ ಬಂದಿದ್ದವರೆಲ್ಲ ಒಳ್ಳೆಯ ಸೂಟು ಧರಿಸಿ ಬಂದಿದ್ದರು. ಇವರೊಬ್ಬರೇ ಧೋತಿ, ಕುರ್ತಾ, ಟೋಪಿಯಲ್ಲಿ ಬಂದಿದ್ದರು.  ಇವರನ್ನು ನೋಡಿ ಎಲ್ಲರೂ ಗೇಲಿ ಮಾಡತೊಡಗಿದರು. ತಮಾಷೆಗೆ “ಪಂಡೀತಜೀ” ಬಂದಿದ್ದಾರೆ. (ಹಳೆಯ ಕಾಲದ ಪುರೋಹಿತರಿದ್ದ ಹಾಗೆ) ಎಂದು ಚುಡಾಯಿಸಿದರು. “ಪಂಡಿತಜೀ:” ಎಂದು ಮೊದಲ ಸಾರಿಗೆ ಅವರನ್ನು ಅಂದು ಹಾಸ್ಯ ಮಾಡಲು ಕೆರೆದಿದ್ದರು. ಲಕ್ಷಾಂತರ ಜನ ಗೌರವ ಮತ್ತು ಪ್ರೀತಿಯಿಂದ ಅವರನ್ನು ಅದೇ ಹೆಸರಿನಿಂದ ಕೊನೆಯವರೆಗೆ ಕರೆದರು. ಇವರನ್ನು ಇಂಟರ್ ವ್ಯೂ ಮಾಡಿದ ವ್ಯಕ್ತಿಗಳು ಇಂಗ್ಲೀಷನನು.  ಮತ್ತು ಇವನ ಉಡುಪಾದರೋ ಹೀಗೆ. ಅಂದ ಮೇಲೆ ಫಲಿತಾಶ ಇವರ ಪಾಲಿಕೆ ಸೊನ್ನೆ ಎಂದೂ ದೀನದಯಾಳಜೀ ಎಣಿಸಿದ್ದರು. ಆದರೆ ಆರಿಸಲ್ಪಟ್ಟವರಲ್ಲಿ ಇವರ ಹೆಸರೇ ಮೊದಲನೆಯದಾಗಿರಬೇಕೆ!

ಆದರೆ ದೀನದಯಾಳಜಿಗೆ ಸರಕಾರದ ಕೆಲಸ ರುಚಿ ಇರಲಿಲ್ಲ. ಮಾವನ ಅಪ್ಪಣೆಯ ಮೇರೆಗೆ ಪ್ರಯಾಗದಲ್ಲಿ ಬಿ.ಟಿ.ತರಗತಿಗೆ ಸೇರಿದರು. ವಿದ್ಯಾರ್ಥಿನಿಲಯದಲ್ಲಿ ನಿವಾಸ.

ಬಿ.ಟಿ.ಪದವಿ ಪಡೆದಾಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯದಲ್ಲಿಯೇ ತಲ್ಲಿನರಾದರು. ೧೯೪೭ರಲ್ಲಿ ಬೇರೆಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ಸಂಘದ ಪ್ರಚಾರಕರಾದರು. ಉತ್ತರ ಪ್ರದೇಶದ ಲಖಿಮಪುರ ಜಿಲ್ಲೆಯಲ್ಲಿ ಸಂಘದ ಕೆಲಸಕ್ಕಾಗಿ ಹೋದರು.

ಮಾವನಿಗೆ ಚಿಂತೆ

ಈ ಸಮಯದಲ್ಲಿ ಸಂಪೂರ್ಣ ದೇಶ “ಕ್ವಿಟ್ ಇಂಡಿಯಾ” ಚಳುವಳಿಯಿಂದ ತುಂಬಿತು. ಬ್ರಿಟಿಷ ಸರಕಾರವನ್ನು ಈ ದೇಶದಿಂದ ಕಿತ್ತೊಗೆಯುವ ಭಾರಿ ಸಿದ್ಧತೆ ಅದು.ಎಲ್ಲೆಲ್ಲೂ ಹರತಾಳ, ಗೋಲಿಬಾರು, ಬಂಧನಗಳು, ಪ್ರದರ್ಶನಗಳು. ದೀನದಯಾಳಜಿ ಅತ್ತೇ ಮಾವನಿಗೆ ಚಿಂತೆಯಾಯಿತು.  ದೀನಾ ಬಂಧಿತನಾಗುವನೋ? ಏನಾಗುವುನೋ? ಒಂದು  ಒಳ್ಳೆಯ ಕೆಲಸಕ್ಕೆ ಸೇರಿ ಮದುವೆಯಾಗಿ ಎಲ್ಲಾಧರೂ ಸ್ಥಿರವಾಗಿ ನಿಂತರೆ ಸಾಕಪ್ಪ ಎಂದು ಮೊರೆಯಿಟ್ಟರು.  ಈ ಸೋದರಳಿಯನ ಜಾತಕ ಹಿಡಿದುಕೊಂಡು ಜ್ಯೋತಿಷಿಗಳಿಂದ ಜ್ಯೋತಿಷಿಗಳ ಹತ್ತಿರ ಪರದಾಡಿದರು. ಎಲ್ಲರೂ ಒಂದೇ ರಾಗ ಹಾಡಿದರು.  ಇವರಿಗೆ ಮದುವೆಯಾಗಲಿ, ಸರಕಾರಿ ಕೆಲಸವಾಗಲೀ ಇಲ್ಲ.ಬಲವಂತ ಮಾಡಿದರೆ ಹುಡುಗನಿಗೆ ಹಾನಿಯೇ ಆದೀತು. ಸಮಯ ಬಂದರೆ ಈತ ಜೀವವನ್ನೇ ಬಲಿದಾನ ಮಾಡಬೇಕಾಗಿ ಬಂದೀತು. ಇವೆಲ್ಲಾ ಮಾವ ರಾಧಾರಮಣರನ್ನು ಚಿಂತಾಕ್ರಾಂತರನ್ನಾಗಿ ಮಾಡಿತು.

ದೇಶವೇ ಸಂಸಾರ

ಮದುವೆಯ ಒತ್ತಾಯ ಮಾಡುವರೆಂಬ ಭಯದಿಂದ ದೀನದಯಾಳಜಿಗೆ ಮನೆಗೆ ಬರುವುದಕ್ಕೆ ಮನಸ್ಸಾಗುತ್ತಿರಲಿಲ್ಲ. ಒಂದು ಬಾರಿ ಮನೆಗೆ ಹೋಗಿ ಅತ್ತೇ ಮಾವನನ್ನೂ  ಕಂಡು ಜಾಣತನದಿಂದ ಮಾತಾಡಿ ಬಂದರು. ಅನಂತರ ಅವರು ಮದುವೆಯ ಮಾತೇ ಎತ್ತಲಿಲ್ಲ.  ಮದುವೆ ದೇಶಕಾರ್ಯವನ್ನು ಮನಸೋಕ್ತಿ ಮಾಡಲು ಅಡ್ಡಿಯೆಂದು ಅವರು ಭಾವಿಸಿದರು. ಅದಕ್ಕಗಿ ಒಂಟಿ ಜೀವನ ನಡೆಸಿದರು. ನಿರ್ವಿಕಾರ ಭಾವದಿಂದ ಅಂತರಿಕ ಪ್ರೇರಣೆಯಿಂದ  ರಾಷ್ಟ್ರಕಾರ್ಯದಲ್ಲಿ ಸೇವಾವ್ರತಿಗಳಾದರು. ನಾಗಪೂರಕ್ಕೆ ಹೋಗಿ ಅಲ್ಲಿ ನಡೆದ ಸಂಘ ಶಿಕ್ಷಾವರ್ಗದಲ್ಲಿ ಡಾಕ್ಟರ್ರ‍ ಹೆಡಗೇವಾರರನ್ನು ಕಂಡು, ಕೇಳೀ ತಮ್ಮ ಜೀವನವನ್ನು ದೇಶಕ್ಕಾಗಿ ಸಂಘದ  ಮೂಲಕ ಮುಡುಪಿಡಲು ನಿರ್ಧರಿಸಿದರು.

ದೀನದಯಾಳರು ತಾವು ಸಂಸಾರಿಗಳಾಗದೆ, ಯಾವ ಕೌಟುಂಬಿಕ ಬಂಧನಗಳಿಗೂ ಒಳಪಡದೇ ಇದ್ದರೂ ಎಲ್ಲ ಸಂಬಂಧಿಗಳೊಡನೆಯೂ ಮಧುರ ಬಾಂಧವ್ಯ ಬೆಳೆಸಿ ಕೊಂಡಿದ್ದರು. ಪ್ರವಾಶದಲ್ಲಿದ್ದಾಗ ತಮ್ಮ ಪಕ್ಷದ ಕೆಲಸಗಳೆಲ್ಲ ಮುಗಿದ ಮೇಲೆ ರಾತ್ರಿ ಹೊತ್ತಾದ ಮೇಲಾದರೂ ಅವರುಗಳು ಮನೆ ಮನೆಗೆ ಹೋಗಿ ಬರುತ್ತಿದ್ದರು. ಅವರುಗಳು ಆತ್ಮೀಯತೆಯಿಂದ ಅವರನ್ನು ಬರಮಾಡಿಕೊಳ್ಳುತ್ತಿದ್ದರು. ವಿಶೇಷ ಸಂದರ್ಭಗಳಲ್ಲಿ ಸಂಬಂಧಿಕರ ಮನೆಗೆ ಹೋಗುವುದನ್ನು ದೀನ ದಯಾಳರು ಎಂದಿಗೂ ತಪ್ಪಿಸುತ್ತಿರಲಿಲ್ಲ.

ಅವರು ಯಾವ ಮನೆಗೆ ಹೋಗಲಿ ಅವರ ಮನೆಯಲ್ಲಿ ಒಂದಾಗುತ್ತಿದ್ದರು. ಎಲ್ಲರಿಗೂ ಪ್ರೀಯರಾಗುತ್ತಿದ್ದರು.  ಅವರ ಮಾತು, ಹಾಸ್ಯ, ನಡವಳಿಕೆಯಲ್ಲಿ ಸ್ವಭಾವಿಕತೆ ಎದ್ದು ಕಾಣುತ್ತಿತು.  ಅವರ ಹೃದಯ ಎಲ್ಲರ ಕುರಿತಾಗಿ ಪ್ರೀತಿಯಿಂದ ತುಂಬಿರುತ್ತಿತ್ತು.

ರಾತ್ರಿಯೆಲ್ಲ ಮೋಳೆ ಜೋಡಿಸಿದ ಪತ್ರಿಕಾಕರ್ತ ಜನನಾಯಕ

ಪತ್ರಿಕೋದ್ಯಮ

ದೀನದಯಾಳಜೀ “ರಾಷ್ಟ್ರಧರ್ಮ ಪ್ರಕಾಶನ” ಎಂಬ ಸಂಸ್ಥೆಯನ್ನು ಲಕ್ನೋದಲ್ಲಿ ಸ್ಥಾಪಿಸಿದರು. ಇದರ ಮೂಲಕ ತಾವು ಕಂಡುಕೊಂಡಿದ್ದ ವಿಚಾರಗಳನ್ನು ಹರಡಲು :ರಾಷ್ಟ್ರಧರ್ಮ” ಎಂಬ ಮಾಸಪತ್ರಿಕೆಯನ್ನು “ಪಾಂಚಜನ್ಯ” ಎಂಬ ವಾರಪತ್ರಿಕೆಯನ್ನು ಅನಂತರ :”ಸ್ವದೇಶ್” ಎಂಬ ದಿನಪತ್ರಿಕೆಯನ್ನು ಆರಂಭಿಸಿದರು. “ಸ್ವದೇಶ್” ಇಂದೂ ಕೂಡ “ತರುಣ ಭಾರತ” ಎಂಬ ಹೆಸರಲ್ಲಿ ಪ್ರಕಟವಾಗುತ್ತಿದೆ. ಇವತ್ತಿಗೂ ಈ ಪತ್ರಿಕೆಗಳೂ ದೀನದಯಾಳಜಿಯವರ ಚಟುವಟಿಕೆ ಮತ್ತು ಸತತ ಪರಿಶ್ರಮಕ್ಕೆ ಸಾಕ್ಷಿಯಾಗಿವೆ. ಇವುಗಳನ್ನು ಕಟ್ಟಿ ಬೆಳೆಸಲು ಅವರು ಎಲ್ಲಾ ಮಟ್ಟದಲ್ಲಿಯೂ ಕೆಲಸ ಮಾಡಿದರು.  ಸಂಪಾದಕರಾಗಿ, ಮೊಳೆ ಜೋಡಿಸುವವರಾಗಿ, ಪತ್ರಿಕೆಗಳನ್ನು  ಹೊರುವವರಾಗಿ, ಏಕೆ, ಕಛೆರಿಯ ಜವಾನನಾಗಿಯೂ ಸಜ ಕೆಲಸ ಮಾಡಿದರು.  ಯಾವ ಕೆಲಸವೂ ಕೀಳಲ್ಲ. ಯಾವ ವ್ಯಕ್ತಿಯೂ ಕನಿಷ್ಠನಲ್ಲ ಎಂಬ ಭಾವವನ್ನು ಸಂಗಡಿಗರಲ್ಲೆಲ್ಲಾ ತುಂಬಿದರು. ಜೊತೆಗಾರರೆಲ್ಲ ಅವರ ಕಾರ್ಯಶ್ರದ್ಧೆಯ ಕಂಡು ಬೆರಗಾಗುತ್ತಿದ್ದರು.  ಒಮ್ಮೆ ಪತ್ರಿಕಾ ಕಟ್ಟುಗಳನ್ನು ರೈಲ್ವೆ ಸ್ಟೇಷನ್ ಗೆ ಸಾಗಿಸುವ ಹುಡುಗ ಬಾರದಿದ್ದರಿಂದ ತಾವೇ ಸೈಕಲ ಮೇಲೆ ಅವುಗಳನ್ನು ಸಾಗಿಸಿದರು. ರಾತ್ರಿಯೆಲ್ಲಾ ಮೊಳೆ ಜೋಡಿಸುತ್ತಾ ವಿಶ್ರಾಂತಿಯಿಲ್ಲದೆ ಸುಸ್ತಾಗಿ ಕೆಳಗೆ ಬಿದ್ದ ಸಂದರ್ಭಗಳೂ ಉಂಟು. ತಮ್ಮ ನಡತೆಯಿಂದ , ದುಡಿಮೆಯಿಂದ ಸುತ್ತಲಿದ್ದವರಿಗೂ ಸ್ಫೂರ್ತಿ ಕೇಂದ್ರವಾದರು. “ದುಡಿಮೆಯೇ ದೇವರೊಲುಮೆ” ಎಂಬುವುದರಲ್ಲಿ ನಂಬಿಕೆಯಿಟ್ಟ ವ್ಯಕ್ತಿ ಇವರು.

ಸ್ವಗ್ರಾಮಕ್ಕೆ ಒಮ್ಮೆ ದೀನದಯಾಳಜೀ ಹೋದರು. ಅಲ್ಲಿ ತಮ್ಮ ತಂದೆಯಂತೆ ಇದ್ದ ಪ್ರೀತಿಯ ಮಾವ ರಾಧಾರಮಣ್ ತೀರಿಹೋದರೆಂಬ ಸುದ್ಧಿ ತಿಳಿಯಿತು.ವಿಪರೀತ ದುಃಖದಿಂದ ಮಗುವಂತೆ ಅತ್ತರು. ೧೩ನೇ ದಿನದ ಕರ್ಮಗಳನ್ನು ಸ್ವತಃ ಮಾಡಿದರು.

ಚಳುವಳಿಯ ನಾಯಕ

ಮಹಾತ್ಮ ಗಾಂಧೀಜಿಯವರ ಹತ್ಯೆ ಅನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಲೆ ಸರಕಾರ  ಪ್ರತಿಬಂಧಕ ಹಾಕುವ ಸಂಘದ ಕಾರ್ಯವನ್ನು ಕಂಡು ಕರುಬಿದ್ದ ಸರಕಾರ ರಾಜಕೀಯ ಸೇಡು ತೀರಿಸಿಕೊಳ್ಳಳು ಹೂಡಿದ ಸಂಚು ಅದು ಎಂದು ಸಂಘ ದೇಶವ್ಯಾಪಿಯ ಪ್ರತಿಭಟನೆ ಹೂಡಿತು. ಉತ್ತರ ಪ್ರದೇಶದ ಸಹಪ್ರಾಂತ ಪ್ರಚಾರಕರಾಗಿದ್ದ ದೀನ ದಯಾಳಜೀ ಅಲ್ಲಿನ ಚಳುವಳಿಯ ನಾಯಕರಾಗಿದ್ದರು. ಎಲ್ಲೂ ಹಿಂಸಾಕಾಂಡ ಆಗಲಿಲ್ಲ. ಶಾಂತವಾಗಿ ಅಂದೋಲನ ನಡೆಯಿತು. ಸರಕಾರಕ್ಕೂ ಸಂಘಕ್ಕೂ ಮಾತುಕತೆ ಆಗಿ ಪ್ರತಿ ಬಂಧಕವನ್ನು ತೆಗೆಯಬೇಕಾಯಿತು.

ಈ ಚಳುವಳಿಯ ಕಾಲದಲ್ಲಿ ದೀನದಯಾಳಜಿಯ ಲೇಖನಿ ಸುಮ್ಮನೆ ಕೂರಲಿಲ್ಲ. ದೇಶಭಕ್ತಿ ಮತ್ತು ಹೋರಾಟದ ಲಾವಾರಸ ಹರಿಯಿತು. “ಪಾಂಚಜನ್ಯ”ವನ್ನು ಸರಕಾರ ನಿಲ್ಲಿಸಿತು.  ಆದರೆ ದೀನದಯಳಜಿ ಅದರ ಬದಲು “ಹಿಮಾಲಯ” ಆರಂಭಿಸಿದರು.  ಅದರ ಮೇಲೂ ಪ್ರತಿಬಂಧಕ ಬಿತ್ತು. “ರಾಷ್ಟ್ರಭಕ್ತ” ಶುರುವಾಯಿತು. ಸರ್ವಶಕ್ತ ಸರಕಾರದ ಹೊಡೆತಕ್ಕೆ ದೀದ\ನದಯಾಳಜೀ ಲೇಖನಿ ಖಡ್ಗವಾಯಿತು.

ಪಕ್ವವಾದ ವ್ಯಕ್ತಿತ್ವ

ಈಗ ದೀನದಯಾಳ್ ಉಪಾಧ್ಯಾಯರ ವ್ಯಕ್ತಿತ್ವ ಕ್ರಮೇಣ ಪಕ್ವಾಗತೊಡಗಿತು. ಸಾಧಾರಣ ಮನೆಯಲ್ಲಿ ಹುಟ್ಟಿಬೆಳೆದ ವ್ಯಕ್ತಿ ಪ್ರತಿಭಾವಂತನಾದರೂ ವಿನಯಶೀಲ, ಸಂಘದ ಒಳ್ಳೆಯ ಸ್ವಯಂ ಸೇವಕ, ಯೋಗ್ಯ ಪ್ರಚಾರಕ, ಪ್ರಭಾವಿ ಭಾಷಣಕಾರ, ವಿದ್ವಾನ್ ಲೇಖಕ, ಪ್ರಗತಿಶೀಲ ಪತ್ರಕರ್ತ ಹೀಗೆ ಅವರ ಗುಣಗಳು ಹಣ್ಣುಗೂಡುತ್ತಿದ್ದವು.  ಇವೆಲ್ಲ ಇದ್ದರೂ ಅವರ ವಿನಮ್ರತೆ ಮೋಹಕವಾಗಿ ಎದ್ದು ಕಂಗೊಳಿಸುತ್ತಿತ್ತು. ಅನೇಕಗುಣಗಳು ಕರ್ತೃದಿಂದ ಕೂಡಿದ ವ್ಯಕ್ತಿಗಳು ಸಿಗಬಹುದು. ಆದರೆ ಅವುಗಳ ಅರಿವೆ ಇಲ್ಲದ ವ್ಯಕ್ತ ಸಿಗುವುದು ಅಪರೂಪ. ಅಂಥ ಅಪರೂಪದ ವ್ಯಕ್ತಿಗಳ ಪಂಕ್ತಿಯಲ್ಲಿ ದೀನದಯಾಳ ಹೊಡೆಯುತ್ತಿದ್ದರು.

ಜನಸಂಘದ ನಾಯಕ

೧೯೪೭ರಲ್ಲಿ ಬ್ರಿಟಿಷರು ಭಾರತ ಬಿಟ್ಟು ಹೋದಾಗ ಭಾರತವನ್ನು ಒಡೆದು ಪಾಕಿಸ್ತಾನವನ್ನು ನಿರ್ಮಾಣ ಮಾಡಿದ್ದರು. ಲಕ್ಷಾಂತರ ಹಿಂದುಗಳು ನಿರಾಶ್ರೀತರಾದರು. ಪಾಕಿಸ್ತಾನ ಕಾಶ್ಮೀರದ ಮೇಲೆ ಅಕ್ರಮಣ ಮಾಡಿತು. ಹಿಂದೂಗಳ  ಹಿಂದೂಗಳ ಆಸ್ತಿ ಪಾಸ್ತಿಗಳಿಗೆ ಸಂಚಕಾಋ ಬಂಧಿದೆ, ಅವರಿಗೆ ರಕ್ಷಣೆ ಇಲ್ಲ ಎಂದು ಪಂಡಿತ ನೆಹರು ಸರಕಾರದಲ್ಲಿ ಕೈಗಾರಿಕ ಮಂತ್ರಿಗಳಾಗಿದ್ದ ಡಾಕ್ಟರ್ ಶ್ಯಾಮ ಪ್ರಸಾದ್ ಮುಖರ್ಜಿಯವರು ಅನೇಕರ ಅಭಿಪ್ರಾಯಕ್ಕೆ ಧ್ವನಿವರ್ಧಕರಾದರು. ಕಾಂಗ್ರೆಸ್ಸಿನ ನೀತಿಗಳಿಗೆ ಪ್ರತಿಯಾಗಿ ಭದ್ರ ಧ್ಯೆಯ, ಧೋರಣೆಗಳ ಆಧಾರದ ಮೇಲೆ ಅಖಿಲ ಭಾರತೀಯ ಪಕ್ಷವೊಂದನ್ನು ಕಟ್ಟಡಲು ಹವಣಿಸಿದರು. ಪ್ರತಿ ರಾಜ್ಯದಲ್ಲಿಯೂ ಚೆನ್ನಾಗಿ ಕೆಲಸ ಮಾಡಬಲ್ಲ ಪ್ರಮಾಣಿಕ ಯುವಕ ಕಾರ್ಯಕರ್ತರು ಅವರಿಗೆ ಸಹಾಯ ಮಾಡಲು ಬೇಕಾಗಿದ್ದರು. ಡಾಕ್ಟರ್ ಮುಖರ್ಜಿಯವರು ಸಂಘದ ನಾಯಕರಾದ ಶ್ರೀ ಗುರೂಜಿಯವರನ್ನು ಕಂಡರು. ದೀನದಯಾಳಜೀ ಮತ್ತು ಕೆಲವು ಆರಿಸಿದ  ಕಾರ್ಯಕರ್ತರು ಅವರಿಗೆ ಸಿಕ್ಕಿದರು. ೧೯೫೧ ಅಕ್ಟೋಬರ್ ೨೧ ರಂದು ದೆಹಲಿಯಲ್ಲಿ ಶ್ಯಾಮಪ್ರಸಾದ ಮುಖರ್ಜಿಯವರು “ಭಾರತೀಯ ಜನಸಂಘ” ಎಂಬ ರಾಜಕೀಯ ಪಕ್ಷವನ್ನು ಸ್ಥಾಪನೆ ಮಾಢಿದರು. ಮುಖರ್ಜಿಯವರಿಗೆ ಬೆಂಬಲವಾಗಿ ದೀನದಯಾಳಜೀ ಹೊರಟರು. ಇವರ ರಾಜಕೀಯ ಜೀವನ ಆರಂಭವಾಯಿತು.

೧೯೫೨ರಲ್ಲಿ ಭಾರತದ ಪ್ರಪ್ರಥಮ ಸಾರ್ವತ್ರಿಕ ಮಹಾಚುನಾವಣೆಗಳು ನಡೆದವು. ದೀನದಯಾಳಜೀ ಉತ್ತರ ಪ್ರದೆಶದಲ್ಲೆಲ್ಲ ಜನಸಂಘಕ್ಕಾಗಿ ಓಡಾಡಿದರು. ಡಾಕ್ಟರ್ ಶ್ಯಾಮ ಪ್ರಸಾದರು, ಇನ್ನಿಬ್ಬರು ಮಾತ್ರ ಲೋಕಸಭೆಗೆ ಆರಿಸಿ ಬಂದರು. ಚುನಾವಣೆಗಳು ಮುಗಿದ ಜನಸಂಘದ ಅಖಿಲ ಭಾರತೀಯ ಅಧಿವೇಶನ ಕಾನ್ಪುರದಲ್ಲಿ ೧೯೫೨ರಲ್ಲಿ ಜರುಗಿತು. ಅಲ್ಲಿ ಕಾಶ್ಮೀರದ ಸಮಸ್ಯೆಯನ್ನು ಅಂತಿಮವಾಗಿ ತೀರ್ಮಾನಿಸುವಂತೆ ಸರಕಾರವನ್ನು ಒತ್ತಾಯಿಸಲು ಸತ್ಯಾಗ್ರಹ ಹೂಡಲು ನಿರ್ಧರಿಸಲಾಯಿತು. ಡಾಕ್ಟರ್ ಮುಖರ್ಜಿಯವರೇ ಪಕ್ಷದ ಅಧ್ಯಕ್ಷರು. ಅವರು ದೀನದಯಾಳ್ ಉಪಾಧ್ಯಾಯರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದರು. ಇದೇ ಅಧಿವೇಶನದಲ್ಲಿ ಮುಖರ್ಜಿಯವರು ಅಭಿಮಾನದಿಂದ ಘೋಷಣೆ  ಮಾಡಿದರು. “ನನಗೆ ಇಂಥ ಇನ್ನಿಬ್ಬರು ದೀನ ದಯಾಳರು ಸಿಕ್ಕಿದರೆ, ನಾನು ಸಮಗ್ರ ರಾಜಕೀಯ ಭೂಪಟವನ್ನೇ ಬದಲಾಯಿಸಬಲ್ಲೆ” ಎಂದು. ಇದೇ ಅಧಿವೇಶನದಲ್ಲೇ ಕಾಶ್ಮೀರ ಸಮಸ್ಯೆಯ ಕುರಿತಾದ ಚಳುವಳಿಯ ಅಗ್ರನಾಯಕತ್ವವನ್ನು ದೀನದಯಾಳ್ಜಿಗೆ ವಹಿಸಲಾಯಿತು. ಇದರಿಂದ ಲಕ್ನೋದಿಂದ ದೆಹಲಿಗೆ ದೀನದಯಳರು ತಮ್ಮ ಕೇಂದ್ರವನ್ನು ಬದಲಾಯಿಸಿಕೊಂಡರು. ಸತ್ಯಾಗ್ರಹ ಜೋರಾಗಿ ನಡೆಯಿತು. ಡಾಕ್ಟರ್ ಮುಖರ್ಜಿಯವರು ಸತ್ಯಾಗ್ರಹಿಗಳ ತಂಡದೊಡನೆ ಕಾಶ್ಮೀರಕ್ಕೆ ನುಗ್ಗಿದರು. ಬಂಧಿತರಾದರು. ಶ್ರೀನಗರದ ಸೆರಮನೆಯಲ್ಲಿಯೇ ಕಾಲವಾದರು. ಇಡೀ ದೇಶ ಶೋಕಾ ಕುಲವಾಯಿತು.ಮುಖರ್ಜಿಯವರ ಮರಣದ ಬಗ್ಗೆ ಸಂಶಯವನ್ನು ವ್ಯಕ್ತಪಡಿಸಲಾಯಿತು. ದೇಶದಾದ್ಯಂತ ಪ್ರತಿಭಟನೆಗಳಾದವು.

ಶ್ಯಾಮ ಪ್ರಸಾದರ ನಿಧನ ಜನಸಂಘಕ್ಕೆ ದೊಡ್ಡ ಹೊಡೆತ. ಆ ಪಕ್ಷ ಇನ್ನೂ ಶೈಶವಾಸ್ಥೆ ಯಲ್ಲಿಯೆ ಇತ್ತು. ಅದನ್ನು ಬೆಳೆಸಿ, ಬಲಿಷ್ಠ ಮಾಡುವ ಹೊಣೆಗಾರಿಕೆ ಇದೀಗ ದೀನದಯಳರ ಭುಜಗಳ ಮೇಲೆ. ಅಪರಿಮಿತ ವ್ಯಾಕುಲತೆಯಿಂದ ಕೂಡಿದ್ದರೂ ಜನಸಂಘವನ್ನು ಕಟ್ಟುವ ದೃಢ ನಿರ್ದಾರ ಮಾಢಿದರು. ೧೯೫೩ರಿಂದ ೧೫ ವರ್ಷಗಳ ಕಾಲ ಅದರ ಪ್ರಧಾನ ಕಾರ್ಯದರ್ಶಿಗಳಾಗಿ, ಸಸಿಯಾಗಿದ್ದ ಆ ಪಕ್ಷವನ್ನು ೧೯೬೭ರ ಹೊತ್ತಿಗೆ ಒಂದು ಹೆಮ್ಮರವಾಗಿ ಬೆಳೆಸಿದರು. ಕಾಂಗ್ರೆಸ್ಸಿಗೆ ಸಡ್ಡು ಹೊಡೆದು ನಿಲ್ಲುವ ಪ್ರತಿಪಕ್ಷವಾಗಿ ಕಟ್ಟಿ ಬೆಳೆಸಿದರು.

ಚಿಂತನಶೀಲ

ದೀನದಯಾಳಜೀ ದೇಶದಾದ್ಯಂತ ಅನವರತ  ಪ್ರವಾಸ ಕೈಗೊಂಡರು. ಸಾರ್ವಜನಿಕ ಸಭೆ, ಕಾರ್ಯಕರ್ತರ ಬೈಠಕ, ಆನೌಪಚಾರಿಕ ಮಾತುಕತೆ, ಗಣ್ಯರೊಡನೆ ಭೇಟಿ ಮೊದಲಾದವು ನಿತ್ಯ ಜೀವನವಾಯಿತು. ಸೀದಾ ಸಾದಾ ಉಡುಪು, ನಡವಳಿಕೆಯ ಈ ಯುವಕನಲ್ಲಿ ಅಸಾಧಾರಣ ಆತ್ಮ ಹೊಕ್ಕಿದೆಯೆಂಬುವುದು ಮೇಲ್ನೋಟಕ್ಕೆ ಕಾಣುತ್ತಿರಲಿಲ್ಲ.  ರಾಷ್ಟ್ರನಿಷ್ಠೆ, ಸೇವಾ ಭಾವನೆ , ಪೌರುಷ, ಸಂಘಟನೆಯ ಕಲೆ, ಅಧ್ಯಯನ ಶಕ್ತಿ, ಪರಿಶ್ರಮ, ಸಾಮರ್ಥ್ಯ ಇವು ಒಂದೊಂದಾಗಿ ಪ್ರಕಟವಾಗತೊಡಗಿದವು. ಹತ್ತಿರದವರಿಂದ ದೂರ ಇದ್ದವರಿಗೂ ಇವುಗಳ ಚೆಲುವು ಗೋಚರಿಸತೊಡಗಿದವು. ಅವರು ದಿನ್ಕೆಕ ೧೨-೧೬ ಗಂಟೆಗಳ ಅಧ್ಯಯನದಲ್ಲಿ ತೊಗಿದರು. ರಾಜಕೀಯ, ಆರ್ಥಿಕ, ಸಾಮಾಜಿಕ ಶಾಸ್ತ್ರಗಳನ್ನು ಆಳವಾಗಿ ಕಲಿಯಲು ಆರಂಭಿಸಿದರು. ಓದುವ ಭರದಲ್ಲಿ ಅವರಿಗಾಗಿ ತಂದಿಡುತ್ತಿದ್ದ ಊಟ ತಿಂಡಿಗಳು ಅಲ್ಲಿಯೇಇರುತ್ತಿದ್ದವು. ಓದಿದ ವಿಷಯಗಳಲ್ಲಿ ಅಸ್ಪಷ್ಟವಾದವುಗಳನ್ನು ವಿಧ್ವಾಂಸ ಗೆಳೆಯರೊಡನೆ ಚರ್ಚಿಸಿ ಸ್ಪಷ್ಟ ಮಾಡಿಕೊಳ್ಳುತ್ತಿದ್ದರು. ಪೌರ್ವಾತ್ಯ ಪಾಶ್ಚಾತ್ಯ ಗ್ರಂಥಗಳನ್ನೆಲ್ಲಾ ಓದಿ ಸ್ವಂತ ಚಿಂತನೆಯಿಂದ ಜನಸಂಘದ ಆರ್ಥಿಕ ನೀತಿಯನ್ನು ರೂಪಿಸಿದರು. ರಾಜಕೀಯ ಧರ್ಮವನ್ನು ಕಟ್ಟಿದರು. ಭವಿಷ್ಯತ್ ಭಾರತದ ಜೀವನ ಹೇಗಿರಬೇಕೆಂಬುವುದರ ಕನಸು ಕಂಡರು. “ಏಕಾತ್ಮ, ಮಾವನತಾವಾದ” ಎಂಬ ಹೆಸರಿನಲ್ಲಿ ತಮ್ಮ ಆರ್ಥಿಕ, ಸಾಮಾಜಿಕ ರಾಜಕೀಯ ಸಿದ್ಧಾಂತವನ್ನು ದೇಶ ಮುಂದೆ ಮಂಡಿಸಿದರು.  ಭಾಷಣಗಳ ಮೂಲಕ, ಲೇಖನಗಳ ಮೂಲಕ ಅದನ್ನು ವಿವೇಚಿಸಿದರು.  ಅನೇಕರು ಇದೊಂದು ಮೂಲಭೂತವಾಗಿ ಯೋಜಿಸಿರುವ ರೀತಿ ಅಂದರು.

ದೀನದಯಾಳರ ವಿಚಾರಗಳು, ಸಮಾಜವಾದಿ ಪಕ್ಷಕ್ಕಿಂತ ಸಮಾಜವಾದಿ” ಎಂದರು. ಡಾಕ್ಟರ್ ರಾಮ ಮನೋಹರ ಲೋಹಿಯಾ.

ವಿಚಾರವಾದಿ ಡಾಕ್ಟರ ಸಂಪೂರ್ಣಾನಂದರು. “ಏಕತಾತ್ಮ ಮಾವನತಾವಾದ”ವನ್ನು ವಿಶ್ಲೇಷಿಸಿ ಒಂದು ಗ್ರಂಥವನ್ನು ಬರೆಯಲು ಮುಂದಾದರು.

ಪ್ರವಾಸಗಳು, ಕಾರ್ಯಕ್ರಮಗಳ ಮಧ್ಯೆ ಅವರಿಗೆ ಯೋಚಿಸಲು, ಬರೆಯಲು ಸಮಯವೇ ಸಿಕ್ಕುತ್ತಿರಲಿಲ್ಲ. ಅದಕ್ಕಾಗಿ ಅವರು ಪ್ಯಾಸೆಂಜರ್ ರೈಲಿನಲ್ಲಿ ಮೊದಲನೆ ದರ್ಜೆಯಲ್ಲಿ ಪ್ರಯಾಣ  ಮಾಡುತ್ತಿದ್ದರು. ಹೆಚ್ಚು ಪ್ರಯಾಣ, ಹೆಚ್ಚು ಸಮಯ, ಹೆಚ್ಚು ಬರವಣಿಗೆ ಆಗ. ಅವರು ಬರೆದ ಅನೇಕ ಲೇಖನಗಳು ಪ್ಯಾಸೆಂಜರ್ ರೈಲಿನಲ್ಲಿ ಬರೆದವುಗಳು.

೧೯೬೫ ಆಗಸ್ಟ್, ೧೬ ರಂದು ದೆಹಲಿಯ ರಾಜಬೀದಿಗಳಲ್ಲಿ ಸುಮಾರು ಐದಾರು ಲಕ್ಷ ಜನ “ಕರ್ಛಕರಾರನ್ನು ತಿರಸ್ಕರಿಸಿ, ಇಲ್ಲದಿದ್ದರೆ ಅಧಿಕಾರ ಬಿಡಿ” ಎಂದು  ಘೋಷಿಸಿ ಪ್ರಚಂಡ ಪ್ರದರ್ಶನ ನಡೆಸಿದರು. ಇದರ ನೇತೃತ್ವ ದೀನದಯಾಳ ಉಪಾಧ್ಯಾಯರದ್ದೇ. ಈ ಸ್ಥಿತಿಗೆ ಪಕ್ಷವನ್ನು ಎತ್ತಿದ ಕೀರ್ತಿ ಅವರ ಕರ್ತೃತ್ವ ಶಕ್ತಿಗೆ ಸಾಕ್ಷಿ.

ಮೆಚ್ಚುಗೆಯ ಕೇಂದ್ರ

ಪಂಡಿತ ದೀನದಯಾಳ್ ಉಪಧ್ಯಾಯರ ವಿಚಾರ, ವ್ಯಕ್ತಿತ್ವ ಅನೇಕ ಮುಖಂಡರನ್ನು ಅವರ ಹತ್ತಿರಕ್ಕೆ ತಂದವು. ಡಾಕ್ಟರ ಲೋಹಿಯಾ ಅವರು ಪಂಡಿತಜೀ ಅವರೊಡನೆ ಭೇಟಿಯಾಗಿ ೧೦೬೪ ಎಪ್ರೀಲ್ ೧೨ ರಂದು ಪಾಕಿಸ್ತಾನದ ಬಗ್ಗೆ ಒಂದು ಸಂಯುಕ್ತ ಹೇಳಿಕೆ ಕೊಟ್ಟರು.  ಚಕ್ರವರ್ತಿ ರಾಜ ಗೋಪಾಲಾಚಾರಿಯವರು ಅವರನ್ನು ಭೇಟಿಯಾಗಿ ಆನಂದ ಪಟ್ಟರು. ಶ್ರೀ ಗುರೂಜಿಯವರಂತೂ ಅವರ ವಿಚಾರಶಕ್ತಿ, ಕರ್ತೃತ್ವ ಶಕ್ತಿ ಕಂಡು ಮಾರು ಹೋಗಿದ್ದರು. ಅವರು ನಮಗೆಲ್ಲಾ ಒಂದು ಆದರ್ಶವಾಗಲಿ ಎಂದರು.

೧೯೬೭ ಡಿಸೆಂಬರ‍್ನಲ್ಲಿ ನಡೆದ ಜನಸಂಘದ ಕಲ್ಲೀಕೋಟೆ ಅಧಿವೇಶನದಲ್ಲಿ ಪಂಡಿತ ದಿನದಯಾಳ ಉಪಾಧ್ಯಾಯರು ಅಖೀಲ ಭಾರತೀಯ ಅಧ್ಯಕ್ಷರಾದರು. ಎಲೆಮರೆ ಕಾಯಿಯಂತೆ ಇರುತತಿದ್ದು, ಯಾವಾಗಲೂ ಸಾರಥ್ಯವನ್ನೇ ವಹಿಸುತ್ತಿದ್ದ ಈ ವ್ಯಕ್ತಿ ಅಂದು ಉನ್ನತ ಸ್ಥಾನರಹಿತವಾಗಿ ಹೋರಾಡಬೇಕಾಯಿತು.

ದೀನದಯಾಳರು ಇನ್ನಿಲ್ಲ

ಈ ಲೋಕದಲ್ಲಿ ಅತಿ ಒಳ್ಳೆಯವರು ಬೇಗ ದೇವರಲ್ಲಿಗೆ ಹೋಗುವರೆಂಬ ನಂಬಿಕೆ ಇದೆ. ದಿನದಯಾಳಜೀ ಅವರು ೧೯೬೮ ಫೆಬ್ರವರಿ ೧೧ ರಂದು ಲಕ್ನೋದಿಂದ ಪಾಟ್ನಾಗೆ ರಾತ್ರಿ ರೈಲಿನಲ್ಲಿ ಹೊರಟಿದ್ದರು. ಮಾರನೆ ಬೆಳಿಗ್ಗೆ ಮೊಗಲ್ ಸರಾಯಿ ರೈಲ್ವೆ ನಿಲ್ದಾಣದಲ್ಲಿ ಅಪರಿಚಿತ ಶವವೊಂದು ಬಟ್ಟೆಯಲ್ಲಿ ಕಟ್ಟಲ್ಪಟ್ಟು ಬಿದ್ದಿದ್ದು ಕಂಡುಬಂತು. ಯಾರದ್ದಿರಬಹುದೆಂದು ಶೋಧಿಸಲು ಶುರು ಮಾಡಿದಾಗ ಆದು ಪಂಡಿತಜೀ ಅವರದ್ದೇ ಆಗಿರಬೇಕೆ? ಸುದ್ದೀ ಹರ ಡಿತು. ಜನ ಜಂಗುಳಿ ಸೇರಿತು.  ದುಃಖದ ಬೀಡು ಬಿಟ್ಟಿತು. ಈ ಸಾಧು ವ್ಯಕ್ತಿಯನ್ನು ಯಾರು ಕೊಂದಿರಬಹುದು? ಈ ಆಜಾತ  ಶತ್ರುವಿಗೂ ಯಾರು ಶತ್ರು? ಇಂದಿಗೂ ಈ ಪ್ರಶ್ನೆ ಶೇಷ ಪ್ರಶ್ನೆಯಾಗಿಯೇ ಉಳಿದಿದೆ. ಎಲ್ಲರೊಡನೆ ಸರಳವಾಗಿ, ಆತ್ಮೀಯವಾಗಿ ಮಾತನಾಡುತ್ತಿದ್ದ, ರಾಷ್ಟ್ರವನ್ನೇ ಪರಮೇಶ್ವರನೆಂದು ತಿಳಿದು ಆತನ ಉಪಾಸನೆ ಮಾಡುತ್ತಿದ್ದ ದೀನದಯಾಳಜೀ ಆ ಶರೀರದಲ್ಲಿ ಇನ್ನಿಲ್ಲ! ರಾಷ್ಟ್ರಪತಿ, ಪ್ರಧಾನಮಂತ್ರಿಗಳಿಂದ ಹಿಡಿದು ದೂರ ದೂರಿನ ವ್ಯಕ್ತಿಗಳವರೆಗೆ ಕಣ್ಣೀರಿಟ್ಟರು. ಭಾರತ ಮಾತೆಯೇ ತನ್ನ ಒಳ್ಳೆಯ ಮಗನೊಬ್ಬನನ್ನು ನೀಗಿಕೊಂಡಿದ್ದಕ್ಕೆ ಅತ್ತಂತೆ ಭಾಸವಾಯಿತು.

‘ಗಮನಿಸಲೇಬೇಕಾಧ ವ್ಯಕ್ತಿ’

ದೀನದಯಾಳ್ ಉಪಾಧ್ಯಾಯರು ಬದುಕಿದ್ದು ಕೇವಲ ೫೨ ವರ್ಷಗಳು. ಆದರೆ ಆ ಬಾಳು ಹರಡಿದ ಕಂಪು ನೂರಾರು ವರ್ಷ ಉಳಿಯುವಂತಹದು. ಅವರ ವಿಚಾರಗಳಿಂದ , ಅವರ ನಡೆನುಡಿಗಳಿಂದ ಪ್ರಭಾವಿತರಾದವರು ಲಕ್ಷಾಂತರ ಮಂದಿ,

೧೯೬೩ರಲ್ಲಿ ದೀನದಯಾಳರು ಅಮೇರಿಕ ದೇಶಕ್ಕೆ ಹೋದರು. ಹಾಗೆಯೇ ಇಂಗ್ಲೇಂಡ್, ಪಶ್ಚಿಮ ಜರ್ಮನಿ ಮತ್ತು ಪೂರ್ವ ಅಫ್ರಿಕಾಗಳಿಗೂ ಹೋಗಿ ಬಂದರು. ಅಲ್ಲೂ ಅವರ ಉಡುಗೆ ತೊಡಿಗೆಗಳು ಭಾರತೀಯತೆಯನ್ನೇ ಎತ್ತಿ ತೋರಿಸುತ್ತಿದ್ದವು.  ಅವರ ನಡೆ-ನುಡಿ ಮಾತುಕತೆ ಎಲ್ಲರನ್ನೂ ಉತ್ಸಾಹಿತಗೊಳಿಸಿತು.  ಲಂಡನ್ ನಗರದಲ್ಲಿ ನಡೆದ ಪತ್ರಿಕಾ ಪ್ರತಿನಿಧಿಗಳ ಸಮ್ಮೆಳನದ ನಂತರ “ದಿ, ಮ್ಯಾಂಚೆಸ್ಟರ‍” ಗಾರ್ಡಿಯನ್” ಎಂಬ ಖ್ಯಾತನಾಮ ಪತ್ರಿಕೆ ಬರೆಯಿತು- “ಶ್ರೀ ಉಪಾಧ್ಯಾಯರು ಗಮನಿಸಲೇಬೇಕಾದ ವ್ಯಕ್ತಿ” ಎಂದು.

ಯೋಚಿಸಿದ್ದೀರಾ?”

ಪಂಡಿತಜೀಯವರು ಪ್ರತಿಯೊಂದು ವಿಷಯವನ್ನು ಕುರಿತು ನೋಡುತ್ತಿದ್ದ ರೀತಿಯೆ ಒಂದು ವಿಶೇಷ. ಒಮ್ಮೆ ಅವರನ್ನು ಸ್ವಾಗತಿಸಲು ಬೆಂಗಳೂರು ನಿಲ್ದಾಣಕ್ಕೆ ಹೋಗಿದ್ದೇವು. ಅವರ ಸಾಮಾನುಗಳನ್ನು ನಾವೆಲ್ಲಾ ಒಂದೊಂದಾಗಿ ರೈಲು ಡಬ್ಬಿಯಿಂದ ಇಳಿಸಿಕೊಂಡು, ಆದೆ ಇದ್ದ ಕಾರಿಗೆ ಸಾಗಿಸಲು ಅನುವಾದೆವು. ಕೂಡಲೇ ಪಂಡಿತಜೀ ಅವರು ನಮ್ಮನ್ನೆಲ್ಲಾ ತಡೆದರು. ಹಮಾಲಿಯನ್ನು ಕರೆದು, ಅವನಿಗೆ ಕೊಡಿ, ಎಂದರು.ನಾವು ಹೊರಲು ಎಷ್ಟು ಬಲವಂತ ಮಾಡಿದರೂ ನಮ್ಮನ್ನು ಬಿಡಲಿಲ್ಲ. ಕಾರಿನಲ್ಲಿ ಸಾಮಾನುಗಳನ್ನೆಲ್ಲಾ ಹಮಾಲಿ ತುಂಬಿದ ಮೇಲೆ, ಒಳಗೆ ಕುಳಿತುಕೊಂಡು ಪಂಡಿತಜೀ ತಮ್ಮ ನಿಧಾನವಾದ ಆದರೆ ಆತ್ಮೀಯ ಧ್ವನಿಯಲ್ಲಿ ಹೇಳಿದರು, “ಅರೆ ಭಯ್ಯಾ, ನೀವೇ ಸಾಮಾನುಗಳನ್ನೆಲ್ಲಾ ಹೊತ್ತರೆ, ಸಾಮಾನುಗಳನ್ನೆ ಹೊತ್ತು ಜೀವನ ಮಾಡುವ ಆ ಬಂಧುಗಳ ಗತಿಯೇನು? ಯೋಚಿಸಿದ್ದೀರಾ? “ಕೇಳಿದ ನಾವೆಲ್ಲ ಒಬ್ಬರ ಮುಖ ಒಬ್ಬರು ನೋಡಿಕೊಂಡೇವು.

‘ಮಾತೆ’

ಉತ್ತರ ಪ್ರದೇಶದ ಒಂದು ಕಾಲೇಜಿನಲ್ಲಿ ಪಂಡಿತಜೀಯವರ ಭಾಷಣ ಏರ್ಪಾಡಾಗಿತ್ತು. ಸಭಾಭವನವು ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ತುಂಬಿಹೋಗಿತ್ತು. “ಮಿತ್ರೋ ಔರ್ ಮಾತಾಜಿ “(ಗೆಳೆಯರ ಮತ್ತು ಮಾತೆಯರೇ) ಎಂದು ಪಂಡಿತಜೀ ಭಾಷಣ ಆರಂಭಿಸಿದರು.”ಮಾತೆಯರೇ” ಎಂಬುವುದನ್ನು ಕೇಳಿ ಸಭಿಕರೆಲ್ಲ ಜೋರಾಗಿ ನಗಲಾರಂಭಿಸಿದರು. ವಿದ್ಯಾರ್ಥಿನಿಯರು ಲಜ್ಜಿತರಾದರು. ಆಗ ದೀನದಯಾಳಜೀ ಯವರು, “ನಾನು ಮಾತೆ” ಎಂಬ ಪದವನ್ನು ಅಲೋಚಿಸಿಯೇ ಬಳಸಿದ್ದೇನೆ. ನಮ್ಮ ಸಂಸ್ಕೃತಿಯು ಎಲ್ಲ ಸ್ತ್ರೀಯರನ್ನು ಮಾತೆಯಂತೆ ಕಾಣಲು ಕಲಿಸುತ್ತದೆ. ಈ ಸಂಸ್ಕೃತಿಯೇ ನಮ್ಮ ಜಿವನದ ಸ್ರೋತವಾಗಿದೆ ಎಂದು ಗಂಭೀರವಾಣಿಯಲ್ಲಿ ಹೇಳಿದರು. ಎಲ್ಲ ಕಡೆಗೆ ಶಾಂತತೆ ಹರಡಿತು.

 

ಈ ಸಂಸ್ಕೃತಿಯೇ ನಮ್ಮ ಜೀವನ ಸ್ರೋತವಾಗಿದೆ

ಮೆರವಣಿಗೆಯಲ್ಲಿ

ಕಲ್ಲಿ ಕೋಟೆ ಅಧಿವೇಶನದ ಸಂದರ್ಭ. ಅಧ್ಯಕ್ಷರಾದ ಪಂಡಿತಜೀಯವರನ್ನು ಭವ್ಯ ಮೆರವಣಿಗೆಯಲ್ಲಿ ಕರೆದುಕೊಂಡು ಹೋದರು. ರಸ್ತೆಯ ಎರಡೂ ಕಡೆ ಜನ ಕಕ್ಕಿರಿದರು. ಹೂವು ಹಾರ ತುರಾಯಿಗಳ ಸುರಿಮಳೆ. ಕಿವಿಗಡಚಿಕ್ಕುವ ಜಯಕಾರಗಳು. ಆದರೆ ಈ ಮನುಷ್ಯನ ಗಮನವೇ ಬೇರೆ ಕಡೆ. ಆ ಕಡೆ- ಈ ಕಡೆಗಳಲ್ಲಿದ್ದ ಮಲಯಾಳಂ ಬೋರ್ಡಗಳನ್ನೇ ನೋಡುತ್ತಿದ್ದರು.  ಮೆರವಣಿಗೆ ಮುಗಿದು ತಮ್ಮ ನಿವಾಸ ಸ್ಥಾನಕ್ಕೆ ಬರುವ ಹೊತ್ತಿಗೆ ಮಲಯಾಳಂ ಅಕ್ಷರಗಳಿಗೂ ಉಳಿದ ಭಾರತೀಯ ಭಾಷೆಗಳ ಲಿಪಿಗಳಿಗೂ ಇರುವ ಸಾಮ್ಯವನ್ನು ಗುರುತಿಸಿದ್ದರು.ಸಹಕಾರಿಗಳು ಅಚ್ಚರಿಗೊಂಡು ಹೇಗೆ ಎಂದು ಕೇಳಿದಾಗ, “ಮೆರವಣಿಗೆಯುದ್ದಕ್ಕೂ ನನಗಿನ್ನೇನು ಕೆಲಸವಿತ್ತು” ಎಂದು ಹೇಳಿದರು. ಪ್ರತಿಷ್ಠೆ ಕೀರ್ತಿಗಳು ಅರಸಿ ಬಂದರೂ ಬೆನ್ನು ತಿರುಗಿಸುವವರಿಗೆ ಏನೆನ್ನಬೇಕು?

‘ಯಾವ ಬದಿ?

ಆ‌ಗ್ರಾದಲ್ಲಿ ಒಂದು ಶಿಶುವಿಹಾರವನ್ನು ಒಬ್ಬರು ಆರಂಭಿಸಿದ್ದರು. ಅದಕ್ಕಾಗಿ ಧ್ಯೇಯ ಚಿಹ್ನೆಯನ್ನು ಬರೆಸಬೇಕಾಗಿತ್ತು. ಕೆಲವು ಮಾದರಿ ಪ್ರತಿಗಳನ್ನು ಮಾಢಿಸಿ ತಂದಿದ್ದರು.  ಪಂಡಿತಜೀಗೆ ತೋರಿಸಲು, ಅದರಲ್ಲಿ ಒಂದು ಚಿತ್ರ ಭಾರತದ ಭೂಪಟದಲ್ಲಿ ಸಿಂಹದ ಬಾಯಿಯಲ್ಲಿ ಹಲ್ಲುಗಳನ್ನು ಎನಿಸುವ ಭರತನದಾಗಿತ್ತು. ಆ ಚಿತ್ರವನ್ನು ನೋಡುತ್ತಿದ್ದಂತೆಯೇ ಪಂಡಿತಜೀ ಭಾರತದ ಉತ್ತರದ ಗಡಿಯನ್ನು ತೋರಿಸುತ್ತಾ, “ಬ್ರಿಟಿಷರು ಗೊತ್ತು ಮಾಡಿದ ಗಡಿಯೇ ಸರಿ ಎಂದು ಒಪ್ಪುವಿರಾ? ” ಎಂದು ಕೇಳಿದರು.

“ಹಿಮಾಲಯ ಪರ್ವತ ಶ್ರೇಣಿಯನ್ನು ನಾವು ಗಡಿಯೆಂದು  ಅನೇಕ ವರ್ಷಗಳಿಂದ ಒಪ್ಪಿಕೊಂಡಿಲ್ಲವೇ?” ಎಂದು  ಹೇಳಿದರು ಬಂದಿದ್ದವರು.

“ಹಿಮಾಲಯದ ಯಾವ ಬದಿ? ದಕ್ಷಿಣದ ಭಾಗವೋ? ಉತ್ತರದ ಭಾಗವೋ? ಎಂದು ನಗು ನಗುತ್ತಾ ದೀನ ದಯಾಳಜೀ ಕೇಳಿದರು.

ಯೋಗ್ಯತೆ ಯಾರಿಗಿದೆ?

ಚೌರಿಯಾ ಎಂಬ ಊರಿನಲ್ಲಿ ಪಂಡಿತಜೀಗೆ ಪೌರ ಸನ್ಮಾನ ಏರ್ಪಡಿಸಲಾಗಿತ್ತು. ಬಿನ್ನವತ್ತಳೆಯನ್ನು ಅರ್ಪಿಸಲಾಯಿತು. ಆ ಸಂದರ್ಭದಲ್ಲಿ ಪಂಡಿತಜೀಯವರು ಮಾತನಾಡುತ್ತಾ, ” ಈ ದೇಶದಲ್ಲಿ ಈ ರೀತಿಯ ಸನ್ಮಾನಕ್ಕೆ ಅರ್ಹರಾದವರು ಯಾರಾದರೂ ಇದ್ದಾರೆಯೇ ಎಂಬ ಪ್ರಶ್ನೆ ನನಗೆ ಬರುತ್ತಿದೆ.  ಜನರಿಗೆ ಅನ್ನಕ್ಕೆ ಗತಿ ಇಲ್ಲ.ದೇಶದ ಗಡಿ ಗಳು ಅಸುರಕ್ಷಿತವಾಗಿವೆ. ದೇಶವು ಒಡೆದು ಚೂರು ಚೂರಾಗಿದೆ. ವಿದೇಶಿ ಶಕ್ತಿಗಳು ನಮ್ಮ ದೇಶದೊಡನೆ ಚಿನ್ನಾಟ ನಡೆಸಿವೆ.  ಇಂಥ ವಿಷಮ ಸನ್ನಿವೇಶದಲ್ಲಿ ಪೌರಸನ್ಮಾನ ಪಡೆಯುವ ಯೋಗ್ಯತೆಯಾದರೂ ಯಾರಲ್ಲಿದೆ?” ಎಂದರು.

ಪಂಡಿತಜೀ ಅನೇಕ ವರ್ಷಗಳಿಂದ ರಾಜಕೀಯದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ತಮ್ಮ ಹೆಸರು ಪ್ರಚಾರವಾಗಬೇಕೆಂದಾಗಲಿ, ತಮಗೆ ಸ್ಥಾನಮಾನ ಸಿಗಬೇಕೆಂದು ಆಸೆಯಾಗಲೀ ಅವರನ್ನು ಸೋಂಕಲಿಲ್ಲ. ತಾವು ಹಿಂದೆ ನಿಂತು ಸಹಕಾರಿಗಳನ್ನು ಮುಂದೆ ತರುತ್ತಿದ್ದರು. ಸ್ವತಃ ಅವರು ಪಾರ್ಲಿಮೆಂಟಿನ ಸದಸ್ಯರಾಗಿರಲಿಲ್ಲ. ಆದರೆ ಅನೇಕ ಅಂತಹ ಸದಸ್ಯರ ಸೃಷ್ಟಿಕರ್ತರಾಗಿದ್ದರು.

ಅಪೂರ್ವ ವ್ಯಕ್ತಿ

ಒಂದು ಸಾರಿ ಪಂಡಿತಜೀಯವರು ಕಾಶಿಯಿಂದ ಬಲಿಯಾಕ್ಕೆ ಪ್ರಯಾಣ ಮಾಡುತ್ತಿದ್ದರು.  ಮಲಗಿಕೊಳ್ಳಲು ಜಾಗ ಸಿಗಲಿಲ್ಲ. ಆದ್ದರಿಂದ ಸ್ಥಳಾವಕಾಶವಿದ್ದ ಉನ್ನತ ದರ್ಜೆಯ ಡಬ್ಬಿಯಲ್ಲಿ ಅವರ ಹಾಸಿಗೆಯನ್ನು ಜೊತೆಯಲ್ಲಿದ್ದ ಸಹಕಾರಿಗಳು ಹಾಸಿಕೊಟ್ಟರು.  ಬಲಿಯಾ ನಿಲ್ದಾಣ ಬಂದ ಕೂಡಲೇ ತರಬೇಕಾಗಿದ್ದ ಹೆಚ್ಚು ಹಣವನ್ನು ಟಿಕೆಟ ಕಲೆಕ್ಟರ‍್ಗೆ ಕೊಡಲು ಪಂಡಿತಜೀ ಹೋದರು. ಆತ “ನೀವು ಈ ತರಗತಿಯಲ್ಲಿ ಪ್ರಯಾಣ ಮಾಢಿದ್ದೀರಿಎಂದು ಯಾರು ನೋಡಿದ್ದಾರೆ?” ಎಂದು ಹೇಳಿ ಹೋದ. ಆದರೆ ಪಂಡಿತಜೀಯವರು ನೇರವಾಗಿ ಸ್ಟೇಷನ್ ಮಾಸ್ಟರ ಹತ್ತಿರ ಹೋದರು. ಹಣ ತೆಗೆದುಕೊಳ್ಳಲು ಆಗ್ರಹ ಮಾಡಿದರು.  ಆಗ ಆತ ಹೇಳೀದ, “ನನ್ನ ಮೂವತ್ತು ವರ್ಷಗಳ ಸೇವಾ ಅನುಭವದಲ್ಲಿ ಹೀಗೆ ಹಣ ಕೊಡಲು ಬಂದವರು ನೀವೊಬ್ಬರೇ”. ದೀನದಯಾಳರ ದೃಷ್ಟಿಯಲ್ಲಿ ಸಾರ್ವಜನಿಕ ಸೇವಾ ಅವಕಾಶಗಳನ್ನು ಅನಧಿಕೃತವಾಗಿ ಉಪಯೋಗಿಸಿಕೊಳ್ಳುವುದು ಕಳ್ಳತನವಾಗಿತ್ತು!

ಒಮ್ಮೆ ಕೆಲವು ಪ್ರಮುಖ ಕಾರ್ಯಕರ್ತರು ಒಟ್ಟಿಗೆ ಸೇರಿದ್ದರು. ಅವರಲ್ಲಿ ಒಬ್ಬರು ಮಾಂಸಾಹಾರಿಗಳೂ. ಒಂದೊಂದು ತಿಂಡಿಗಳು ಬರತೊಡಗಿದವು. ಆಗ ಪಂಡಿತಜೀಗೆ ಆ ಮಾಂಸಾಹಾರಿ ಗೆಳೆಯರ ಕುರಿತೇ ಚಿಂತೆ.  ಅವರಿಗಾಗಿ ಏನೂ ಇಲ್ಲವಲ್ಲ ಎಂದರು. ಸ್ವತಃ ಮಾಂಸಹಾರಿಗಳಲ್ಲದಿದ್ದರೂ ಅದನ್ನು ತಿನ್ನುವವರಲ್ಲಿ ನಿಕೃಷ್ಟವಾಗಿ ಎಂದೂ ಕಾಣುತ್ತಿರಲಿಲ್ಲ

ರಾಷ್ಟ್ರೀಯಸ್ವಯಂ ಸೇವಕ ಸಂಘದ ಸ್ಥಾಪಕರಾದ ಡಾಕ್ಟರ ಹೆಡಗೇವಾರರ ೫೦೦ ಪುಟಗಳ ಜೀವನ ಚರಿತ್ರೆಯು ಮರಾಠಿಯಲ್ಲಿ ಪ್ರಕಟವಾಗಿತ್ತು. ಪಂಡಿತಜೀ ಅದನ್ನು ಹಿಂದಿಗೆ ಭಾಷಾಂತರಿಸಿದರು. ಆದರೆ ಅದರಲ್ಲಿ ತಮ್ಮ ಹೆಸರನ್ನು ಪ್ರಕಟಿಸಲು ಅವರು ಒಪ್ಪಲಿಲ್ಲ. ಆ ಮಹಾಪುರುಷನಿಗೆ ನಾನು ಅರ್ಪಿಸುವ ಸಣ್ಣ ಕಾಣಿಕೆ ಇದು” ಎಂದು ಹೇಳಿ ಒಪ್ಪಿಸಿದರು.

ಪಂಡಿತಜೀ ಅವರಿಗೆ ಭಾಷೆಗಳನ್ನು ಕಲಿಯಲು ಬಲು ಇಷ್ಟ. ಪ್ರವಾಸದಲ್ಲಿ ಸಿಕ್ಕುವ ಬೋರ್ಡಗಳನ್ನು ನೋಡಿ ಅನೇಕ ಭಾರತೀಯ ಭಾಷೆಗಳನ್ನು ಮತ್ತು ಲಿಪಿಗಳನ್ನು ಕಲಿತ್ತಿದ್ದರು.  ರಾತ್ರಿ ಎಲ್ಲರೂ ಮಲಗಿದ ಮೇಲೆ ಇಡೀ ರಾತ್ರಿ ಓದುವುದು ಅವರ ಅಭ್ಯಾಸ.  ವಿದ್ಯಾರ್ಥಿಯಾಗಿದ್ದಾಗ ಲೆಕ್ಕಗಳ ಉತ್ತರಗಳು ಸಿಕ್ಕದೆ ಮಲಗಿದರೆ, ಅದನ್ನೇ  ಯೋಚಿಸುತ್ತಾ ಅವರಿಗೆ ನಿದ್ರೆಯಲ್ಲಿ ಅದರ ಉತ್ತರಗಳು ಸಿಕ್ಕಿ ಬೆಳಗ್ಗೆ ಎದ್ದ ತಕ್ಷಣ ಬರೆದಿಡುತ್ತಿದ್ದರು.  “ಸಾಮ್ರಾಟ್ ಚಂದ್ರಗುಪ್ತ”  ಎಂಬ ಪುಸ್ತಕವನ್ನು ಒಂದೇ ರಾತ್ರಿಯಲ್ಲಿ ಬರೆದು ಮುಗಿಸಿದರು. ಪುನಃ ಬೆಳಗ್ಗೆ ಅದಕ್ಕೆ ಮುನ್ನುಡಿಯನ್ನು ಕೆಲವೇ ನಿಮಿಷಗಳಲ್ಲಿ ಬರೆದಿಟ್ಟರು. ಆದರೂ ಅದರಲ್ಲಿ ಒಂದು ಅಕ್ಷರವನ್ನೂ ಬದಲಾಯಿಸುವ  ಹಾಗಿರಲಿಲ್ಲ. ಇದು ಅವರ ಲೇಖನಿಯ ಲಕ್ಷಣ. ಸಾಮಾನ್ಯ ಜನಗಳಿಗೆ ಅರ್ಥವಾಗುವಂತೆ ಮಾತನಾಡುವ ಶೈಲಿಯನ್ನು ಜನಸಂಘದ ನಾಯಕರಾದ ಮೇಲೆ ಬದಲಾಯಿಸಿಕೊಂಡರು. ಸಾಹಿತ್ಯಿಕ ಭಾಷೆ ರೂಪಾಂತರಗೊಂಡಿತ್ತು.

ವ್ಯಕ್ತಿನಿಷ್ಠವಲ್ಲ. ತತ್ವನಿಷ್ಠ.

ದೀನದಯಾಳಜೀ ಅವರನ್ನು ಕೊಲೆಗಡುಕ ನಮ್ಮಿಂದ ತೆಗೆದುಕೊಂಡು ಹೋದಾಗ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು ಹೇಳಿದ್ದನ್ನು ಕೇಳಿ,”…. ದೀನದಯಾಳಜೀ ಅವರನ್ನು ನಮ್ಮಿಂದ ಅಪಹರಿಸಿ, ನಮ್ಮ ಮುನ್ನಡೆಗೆ ತಡೆ ಹಾಕಿದ್ದೇವೆಂದುಕೊಳ್ಳುವ ಜನರು ದೀನದಯಾಳರನ್ನು ಅರಿಯರು. ಅವರ ಅನುಯಾಯಿಗಳಾದ ನಾವು ಎಂಥವರೆಂಬುವುದು ಬಹುಶಃ ಅವರಿಗೆ ಗೊತ್ತಿಲ್ಲ. ಅವರ ಕಾರ್ಯ, ವ್ಯಕ್ತಿನಿಷ್ಠ ವಾಗಿರಲಿಲ್ಲ. ತತ್ವನಿಷ್ಠವಾಗಿತ್ತು. ಆವರು ನಮಗೆ ಆದರ್ಶ, ಸಿದ್ಧಾಂತಗಳಿಗೆ ಬದುಕಲು ಕಲಿಸಿಕೊಟ್ಟರು. ಬನ್ನಿ, ಪಂಡಿತಜೀಯವರ ದೇಹದಿಂದ ಹರಿದ ರಕ್ತದ ಹನಿ ಹನಿಯನ್ನು ಹಣೆಯಲ್ಲಿ ತಿಲಕವಾಗಿ ಧರಿಸಿ, ಧ್ಯೇಯ ಪಥದಲ್ಲಿ ಧಾವಿಸೋಣ. ಅವರ ಚಿತಾಗ್ನಿಯಿಂದ ಸಿಡಿದ ಕಿಡಿ-ಕಿಡಿಯನ್ನು ಹೃದಯದಲ್ಲಿ ಉರಿಸಿ ಪರಮೋಚ್ಛ ಪರಿಶ್ರಮ ಹಾಕೋಣ. ಭಗೀರಥ ಪ್ರಯತ್ನ ಮಾಡೋಣ. ಈ ನವದದೀಚೆಯ ಮೂಳೆ ಮೂಳೆಗಳಿಂದಲೂ ವಜ್ರಾಯುಧ ಸೃಷ್ಟಿಸಿ, ಆಧುನಿಕ ವೃತ್ತಾಸುರರ ಮೇಲೆ ಎರಗೋಣ.  ಈ ನಮ್ಮ ಒಪರಮ ಪಾವನ ಮಾತೃಭೂಮಿಯನ್ನು ಸದಾಕಾಲಕ್ಕೂ ನಿಷ್ಕಂಟಕ ಗೊಳಿಸೋಣ.

“ಅಳಿದರೇನು ದೇಹವಿದು, ಧ್ಯೇಯದೀಪ ಉರಿವುದು
ನವಜನಾಂಗ ನೆಗೆದು ಬಂದು ತೈಲವದಕೆ ಸುರಿವುದು”!