ಅರವತ್ತು ವರ್ಷದ ಮುದುಕ; ಉಟ್ಟ ಬಟ್ಟೆ ಕಾವಿ ಬಣ್ಣದ್ದು, ತಲೆಯ ಮೇಲೆ ಪಂಡಿತರು ತೊಡುವಂತಹ ಕುಲಾವಿ; ಹೊಳೆಯುವ ಕಣ್ಣುಗಳು, ಬೆಳಗುವ ಮುಖ; ದಿಟ್ಟ ನಡಿಗೆ; ನಯವಾದ ಮಾತು, ನಗು ನಗುತ್ತ ಎಲ್ಲರನ್ನೂ ಬರಮಾಡಿಕೊಳ್ಳುವ ರೀತಿ. ಬಂಗಾಳದ ಕಡೆಯ ಈ ಹಿರಿಯ ಸಂನ್ಯಾಸಿಯ ಹಿಂದೆ ಟಿಬೆಟ್ ದೇಶದ ಶಿಷ್ಯರು ಭಾರತದವರೇ. ಮಗಧ ರಾಜ್ಯವನ್ನು ಬಿಟ್ಟುಈ ಸಾಹಸಿಗಳ ತಂಡ ನೇಪಾಳಕ್ಕೆ ಹೋಗಿ ಅಲ್ಲಿಂದ ಮುಂದೆ ಹಿಮಾಲಯ ಬೆಟ್ಟ ಸಾಲುಗಳನ್ನು ಕಾಲುನಡಿಗೆಯಲ್ಲೇ ದಾಟಿ ಟಿಬೆಟ್ ದೇಶವನ್ನು ಮುಟ್ಟಿತು. ದೂರದ ದೇಶ, ಬೇರೆ ಬುಡಕಟ್ಟಿನ ಜನರು; ಅವರ ಮಾತು ನೆಟ್ಟಗೆ ಬಾರದು; ಅವರ ಆಚಾರ-ವ್ಯವಹಾರಗಳು ತಿಳಿಯದು; ಕಾಡು-ಮೇಡುಗಳಲ್ಲಿ, ಬೆಟ್ಟದ ತುತ್ತ ತುದಿಗಳಲ್ಲಿ ಬೇಟೆಯಾಡುತ್ತ ಅಲೆದಾಡುವ ಮಂದಿ ಅವರು. ಕ್ರೂರಿಗಳಾದ ಬರ್ಬರ ಜನರೆಂಬ ಪ್ರತೀತಿ ಬೇರೆ! ಇಂಥ ಪರಿಸ್ಥಿತಿಯಲ್ಲಿ ಕೆಲವು ಮಂದಿ ಶಿಷ್ಯರೊಂದಿಗೆ ಯಾವ ಶಸ್ತ್ರಾಸ್ತ್ರವನ್ನೂ ಹಿಡಿಯದೆ ಯಾವ ವೀರನಾಯಕನ ರಕ್ಷಣೆಯೂ ಇಲ್ಲದೆ ಆ ದೇಶಕ್ಕೆ ತನ್ನ ಇಳಿವಯಸ್ಸಿನಲ್ಲಿ ತೆರಳಿದ ಮುದುಕ ಸಾಹಸಿಯಲ್ಲವೆ?

ವಿದ್ವಾಂಸ-ಸಂತ

ಆದರೆ ಈ ಮುದುಕ ಆ ದೇಶದೊಳಗೆ ಕಾಲಿಟ್ಟೊಡನೆ ಅಲ್ಲಿನ ಜನರೆಲ್ಲ ಸಂತೋಷದಿಂದ ಅವನನ್ನು ಬರಮಾಡಿಕೊಂಡರು; ದೇಶದ ರಾಜ ತಾನೇ ಗಡಿಗೆ ಬಂದು ಈ ಮುದುಕನ ಕಾಲುಗಳಿಗೆರಗಿ ಆದರದಿಂದ ದೇಶದೊಳಗೆ ಕರೆದೊಯ್ದ. ಈ ದೇಶಕ್ಕೆ ಬರುವ ದಾರಿಯಲ್ಲೇ ಅಷ್ಟಿಷ್ಟು ಆ ದೇಶಭಾಷೆಯಲ್ಲೇ ಧರ್ಮವನ್ನು ಜನರಿಗೆ ತಿಳಿಯಹೇಳತೊಡಗಿದ ಮೇಲಂತೂ ಆ ಜನ ಇವನನ್ನು ದೇವತೆಯೆಂದೇ ಗೌರವಿಸತೊಡಗಿದರು! ’ಅತೀಶ’, ’ಮಹಾಪ್ರಭು’ ಎಂದು ಕರೆದರು. ಮುಂದೆ ಹದಿಮೂರು ವರ್ಷಗಳ ಕಾಲ ಅವನನ್ನು ಅಲ್ಲಿಯೇ ಉಳಿಸಿಕೊಂಡರು. ಅವನು ಅಲ್ಲಿಯೇ ನೆಲೆಸಿ ಅಲ್ಲಿಯೇ ತೀರಿಕೊಂಡ.

ಈ ಮುದುಕನ ಹೆಸರು ದೀಪಂಕರ -ಶ್ರೀಜ್ಞಾನ. ಅವನು ಸೇರಿದ ದೇಶ ಹಿಮಾಲಯ ಪ್ರಾಂತದ ಟಿಬೆಟ್‌. ಅವನು ಭಾರತದೇಶವನ್ನು ಬಿಟ್ಟು ಹೊರಟಿದ್ದು ಕ್ರಿಸ್ತಶಕ೧೦೪೦ರ ಸುಮಾರಿಗೆ. ಅವನು ಟಿಬೆಟ್‌ನಲ್ಲಿ ತೀರಿಕೊಂಡುದು ೧೦೫೪ರಲ್ಲಿ,ಎಪ್ಪತ್ತನಾಲ್ಕು ವರ್ಷಗಳ ವೃದ್ಧಾಪ್ಯದಲ್ಲಿ, ಅವನು ಬೌದ್ಧಧರ್ಮದ ಮಹಾಯಾನ ಪಂಥಕ್ಕೆ ಸೇರಿದ ಸಂನ್ಯಾಸಿ. ನಾಡಿನಲ್ಲೆಲ್ಲ ಅವನಷ್ಟು ವಿದ್ವಾಂಸನಾಗಲೀ ಪ್ರತಿಭಾಶಾಲಿಯಾಗಲೀ ಇನ್ನೊಬ್ಬ ಇರಲಾರನೆಂದು ಜನರೆಲ್ಲ ತಿಳಿದಿದ್ದರು. ಎಷ್ಟು ದೊಡ್ಡ ಪಂಡಿತನೋ ಅಷ್ಟೇ ದೊಡ್ಡ ಸಂತ. ಆದುದರಿಂದಲೇ ಟಿಬೆಟ್‌ ದೇಶದ ದೊರೆ ಇವನನ್ನು ಹೇಗಾದರೂ ಮಾಡಿ ತನ್ನ ದೇಶಕ್ಕೆ ಕರೆಸಿಕೊಳ್ಳಬೇಕೆಂದು ಹವಣಿಸಿದುದು.

ನಮ್ಮ ನಾಡಿನ ಉತ್ತರ ಮೇರೆ ಹಿಮಾಲಯ ಬೆಟ್ಟಸಾಲು. ಅಲ್ಲಿರುವ ರಾಜ್ಯಗಳಲ್ಲಿ ಟಿಬೆಟ್‌ ಮುಖ್ಯವಾದುದು. ಅದಕ್ಕೆ ತನ್ನದೇ ಆದ, ಹಿಂದಿನಿಂದ ಬಂದ ಇತಿಹಾಸವಿದೆ,ಬೇರೂರಿ ಬಂದ ಸಂಸ್ಖೃತಿಯಿದೆ. ಈ ಇತಿಹಾಸದ ಮೇಲೂ ಸಂಸ್ಕೃತಿಯ ಮೇಲೂ ಭಾರತ ದೇಶದ ಪ್ರಭಾವ ಹೆಚ್ಚಿಗೆ ಬಿದ್ದಿದೆ. ಹೀಗೆ ಭಾರತೀಯ ಪ್ರಭಾವವನ್ನು ಟಿಬೆಟ್‌ನಲ್ಲಿ ಹರಡಿದ, ಬೇರೂರಿಸಿದ ನೂರಾರು ಭಾರತೀಯ ಪಂಡಿತರಲ್ಲಿ ನಳಂದಾ,ವಿಕ್ರಮಶೀಲ ವಿದ್ಯಾಲಯಗಳಿಗೆ ಸೇರಿದವರೇ ಹೆಚ್ಚು ಮಂದಿ. ಅವರಲ್ಲಿ ದೀಪಂಕರ-ಶ್ರೀಜ್ಞಾನ ಪ್ರಮುಖನಾದವನು. ಮೂರು ವಿಶ್ವವಿದ್ಯಾನಿಲಯಗಳಲ್ಲಿ ಆಚಾರ್ಯನಾಗಿದ್ದು, ಎರಡು ವಿಶ್ವವಿದ್ಯಾನಿಲಯಗಳ ಅಧ್ಯಕ್ಷನಾಗಿದ್ದ ಇವನು ಸಂಸ್ಕೃತದಲ್ಲಿ ಶಾಸ್ತ್ರಗ್ರಂಥಗಳನ್ನು ಬರೆದ. ಆ ಗ್ರಂಥಗಳನ್ನೆಲ್ಲ ಟಿಬೆಟ್‌ನ ಜನರು ತಮ್ಮ ಭಾಷೆಗೆ ಭಾಷಾಂತರ ಮಾಡಿಕೊಂಡು ತಮ್ಮ ಪವಿತ್ರ ವಾಙ್ಮಯದಲ್ಲಿ ಸೇರಿಸಿ ಗೌರವಿಸಿದ್ದಾರೆ; ಅವುಗಳ ಅಧ್ಯಯನ ಅಲ್ಲಿನ ಮಠಗಳಲ್ಲಿ ಶ್ರದ್ಧೆಯಿಂದ ನಡೆಯುತ್ತಿದ್ದಿತು. ಇಂದಿಗೂ ಆ ದೇಶದ ಜನರು ಇವನನ್ನು ತುಂಬ ಭಕ್ತಿಯಿಂದ ಕಾಣುತ್ತಾರೆ.

ಎಳೆತನದ ಬೆಳೆ

ದೀಪಂಕರ ಬಂಗಾಳದ ಪೂರ್ವ ಭಾಗಕ್ಕೆ ಸೇರಿದ ವಿಕ್ರಮಪುರ ಎಂಬಲ್ಲಿ ಕ್ರಿಸ್ತಶಕ ೯೮೨ರಲ್ಲಿ ಹುಟ್ಟಿದ. ತಂದೆಯ ಹೆಸರು ಕಲ್ಯಾಣಶ್ರೀ. ಅವನು ಸಣ್ಣ ರಾಜ್ಯವೊಂದರ ದೊರೆ. ತಾಯಿ ಪ್ರಭಾವತಿ. ಅವರ ಮೂವರು ಮಕ್ಕಳಲ್ಲಿ ಇವನು ಎರಡನೆಯವನು. ದೀಪಂಕರ ಎಂಬುದು ಅವನು ಸಂನ್ಯಾಸಿಯಾದ ಮೇಲೆ ಪ್ರಸಿದ್ಧವಾದ ಹೆಸರು; ತಂದೆ-ತಾಯಿಯರು ಇಟ್ಟಿದ್ದ ಹೆಸರು ಚಂದ್ರಗರ್ಭ ಎಂದು.

ತಂದೆ-ತಾಯಿಯರು ಬೌದ್ಧಧರ್ಮಕ್ಕೆ ಒಲಿದಿದ್ದವರು; ಧರ್ಮದಲ್ಲಿ ತುಂಬ ಆದರವನ್ನು ಇರಿಸಿಕೊಂಡಿದ್ದವರು. ಬುದ್ಧಿಶಾಲಿಯೆಂದು ಹೆಸರಾದ ಚಂದ್ರಗರ್ಭನನ್ನು ಆಚಾರ್ಯ ಜೇತಾರಿಯೆಂಬ ಪ್ರಸಿದ್ಧ ಪಂಡಿತನ ಬಳಿ ವಿದ್ಯಾಭ್ಯಾಸಕ್ಕೆಂದು ಕಳುಹಿಸಿದರು. ಜೇತಾರಿ ಊರಾಚೆ ಗುಡಿಸಿಲೊಂದರಲ್ಲಿ ವಾಸಿಸುತ್ತಿದ್ದ.ಚಂದ್ರಗರ್ಭ ಅವನನ್ನು ಭೇಟಿಯಾಗಿ ತಾನು ವಿದ್ಯಾಭ್ಯಾಸಕ್ಕೆ ಬಂದೆನೆಂದು ಹೇಳಲು ಜೇತಾರಿ “ನೀನು ಯಾರು?” ಎಂದು ಕೇಳಿದ.

ಚಂದ್ರಗರ್ಭ ಇನ್ನೂ ಹುಡುಗ, “ನಾನು ಊರ ದೊರೆಯ ಮಗ” ಎಂದ.

ಅದಕ್ಕೆ ಜೇತಾರಿ, “ನಮಗೆ ದೊರೆಯೂ ಇಲ್ಲ,  ಸೇವಕನೂ ಇಲ್ಲ; ಹೊರಡು! ಎಂದುಬಿಟ್ಟ.

ಆಗ ಚಂದ್ರಗರ್ಭ ವಿನೀತನಾಗಿ,’ ನಾನು ಸಂನ್ಯಾಸಿಯಾಗಲು ತಮ್ಮ ಬಳಿ ಬಂದಿದ್ದೇನೆ, ಕೃಪೆ ಧರ್ಮಬೋಧೆ ಮಾಡಬೇಕು” ಎಂದು ಬೇಡಿಕೊಂಡ.

ಜೇತಾರಿ ಅವನನ್ನು ಕುರಿತು, “ಒಳ್ಳೆಯದು, ಹಾಗಾದರೆ ನಳಂದಾ ವಿಹಾರಕ್ಕೆ ಹೋಗು” ಎಂದು ಅಲ್ಲಿಗೆ ಕಳುಹಿಸಿದ. ಅದೇ ಊರಿನಲ್ಲಿರದೆ ತಂದೆಯ ಮನೆಯಿಂದ ದೂರವಿದ್ದರೆ ಅವನ ಜಂಬ ಅಡಗುವುದು ಸುಲಭವೆಂದು ಜೇತಾರಿ ಈ ಸೂಚನೆಯನ್ನು ಮಾಡಿದ.

ಚಂದ್ರಗರ್ಭ ನಳಂದಾ ವಿಶ್ವವಿದ್ಯಾನಿಲಯಕ್ಕೆ ಹೊರಟ. ಇಡೀ ನಾಡಿನಲ್ಲಿ ಉತ್ತಮ ವಿದ್ಯಾಕೇಂದ್ರವೆಂದು ನಳಂದಾ ಹೆಸರಾಗಿದ್ದಿತು. ಅಲ್ಲಿ ಅವನು ಹಲವರ ಪಂಡಿತರ ಬಳಿ ಓದಿದ. ಅಲ್ಲದೆ ವಿಕ್ರಮಶೀಲ ವಿಹಾರದ ಪ್ರಸಿದ್ಧ ಗುರುಗಳ ಬಳಿಯೂ ಕಲಿತ. ಓದು ಮುಗಿದ ನಂತರ ತನ್ನ ಹತ್ತೊಂಬತ್ತನೆಯ ವಯಸ್ಸಿನಲ್ಲಿ ಸಂಸಾರವನ್ನು ಬಿಟ್ಟು ಬೌದ್ಧಸಂನ್ಯಾಸಿಯಾಗಿಬಿಟ್ಟ. ಸಂನ್ಯಾಸಿಯಾಗಿ ಚಂದ್ರಗರ್ಭ ’ದೀಪಂಕರ-ಶ್ರೀಜ್ಞಾನ’ಎಂಬ ಹೆಸರನ್ನು ತಳೆದ.

ಆ ಕಾಲಕ್ಕೆ ಬೌದ್ಧಧರ್ಮದಲ್ಲಿ ತಾಂತ್ರಿಕ ಪ್ರಭಾವ ಪ್ರಬಳವಾಗಿದ್ದಿತು. ತಾಂತ್ರಿಕ ಸಂಪ್ರದಾಯದ ದೀಕ್ಷೆಯನ್ನೂ ದೀಪಂಕರ ಪಡೆಯಲೆಂದು ಕೃಷ್ನಗಿರಿಯೆಂಬ ಬೆಟ್ಟದಲ್ಲಿರುತ್ತಿದ್ದ ರಾಹುಲ ಗುಹ್ಯವಜ್ರನ ಬಳಿ ಹೋಗಿ ’ಅಭಿಷೇಕ’ವನ್ನು ಪಡೆದ. ಈ ದೀಕ್ಷೆಯನ್ನು ಪಡೆಯುವಾಗ ’ಗುಹ್ಯಜ್ಞಾನವಜ್ರ’ ಎಂಬ ಹೆಸರನ್ನು ಗುರು ಅವನಿಗೆ ನೀಡಿದ. ಮಂತ್ರಸಿದ್ಧಿಯನ್ನು ಪಡೆದ ದೀಪಂಕರ ತಾರಾದೇವಿಯನ್ನು ಸಾಕ್ಷಾತ್ಕರಿಸಿಕೊಂಡ. ಚಿಕ್ಕಂದಿನಿಂದಲೂ ತಾರಾದೇವಿ ಅವನ ಇಷ್ಟದೇವತೆ. ತಾಂತ್ರಿಕ ವಿದ್ಯೆಗೆ ಆ ಕಾಲದಲ್ಲಿ ಹೆಸರಾಗಿದ್ದ ಉಡ್ಡೀಯಾನವೆಂಬ ದೇಶದಲ್ಲಿ ಇವನು ಮೂರು ವರ್ಷಗಳನ್ನು ಕಳೆದು ಹಲವಾರು ಸಿದ್ಧಿಗಳನ್ನು ವಶಪಡಿಸಿಕೊಂಡ.

 

‘ನಾನು ಸಂನ್ಯಾಸಿಯಾಗಲು ಬಂದಿದ್ದೇನೆ, ಕೃಪೆ ಮಾಡಬೇಕು’

ಆದರೆ ಅವನಿಗೆ  ತಂತ್ರ-ಮಂತ್ರಗಳಲ್ಲಿ ಅಷ್ಟಾಗಿ ಆಸಕ್ತಿಯಿರದೆ ಬುದ್ಧ ಬೋಧಿಸಿದ ವಿನಯದ ಬಗ್ಗೆ ಅಭಿಮಾನ ಬೆಳೆಯಿತು. ಬಿಹಾರದಲ್ಲಿರುವ ಬುದ್ಧಗಯೆಗೆ ಬಂದು ಅಲ್ಲಿದ್ದ. ವಜ್ರಾಸನ ಮಹಾವಿಹಾರದ ಅಧಿಪತಿಯಾಗಿದ್ದ ಮಹಾವಿನಯಧರ ಶೀಲರಕ್ಷಿತನ ಬಳಿ ಶಿಷ್ಯನಾಗಿ ನಿಂತು ಎರಡು ವರ್ಷ ಕಾಲ ವಿನಯಪಿಟಕವನ್ನು ಓದಿದ. ಮೂವತ್ತೊಂದು ವರ್ಷ ವಯಸ್ಸಾಗುವ ವೇಳೆಗೆ ಮೂರೂ ತ್ರಿಪಿಟಕಗಳನ್ನು (ಎಂದರೆ ಇಡೀ ಬೌದ್ಧ ವಾಙ್ಮಯವನ್ನು) ಆಳವಾಗಿ ತಿಳಿದುಕೊಂಡಿದ್ದ.

ಮುಂದೆ ಸುವರ್ಣ ದ್ವೀಪ (ಸುಮಾತ್ರಾ, ಮಲಯ) ಕ್ಕೆ ಹೋಗಿ ಅಲ್ಲಿ ಪ್ರಸಿದ್ಧ ಆಚಾರ್ಯನಾಗಿದ್ದ ಧರ್ಮ ಕೀರ್ತಿಯ ಬಳಿ ವಿಧಾನವನ್ನು ಅರಿತುಕೊಂಡು ಭಾರತಕ್ಕೆ ಹಿಂದಿರುಗಿದ. ಸುರ್ವಣದ್ವೀಪದಲ್ಲಿ ಅವನು ಒಟ್ಟು ಇದ್ದ ಸಮಯ ಹನ್ನೆರಡು ವರ್ಷಗಳ. ಭಾರತಕ್ಕೆ ಹಿಂದಿರುಗಿದುದು ಕ್ರಿಸ್ತಶಕ ೧೦೨೫ರಲ್ಲಿ. ಅಷ್ಟರ ವೇಳೆಗಾಗಲೇ ಅವನಿಗೆ ಅಧ್ಯಯನ ಧ್ಯಾನ, ಮಂಡಲ ಪೂಜೆಗಳ ಫಲವಾಗಿ ಸಂಬೋಧಿ ಒದಗಿದ್ದಿತು. (ಸಂಬೋಧಿಯೆಂದರೆ ಚೆನ್ನಾಗಿ ಅರಿಯುವುದು; ಇರುವುದನ್ನು ಇದ್ದಂತೆಯೇ ನೇರವಾಗಿ ತಿಳಿದುಕೊಳ್ಳುವುದು. ಹೀಗೆ ಅರಿತವನೇ ಜೀವನ್ಮುಕ್ತ, ಸಂಬುದ್ಧ, ಜಗತ್ತಿನ ನಾಟಕ ಅವನನ್ನು ಮರುಳು ಮಾಡಲಾರದು, ಸಾಮಾನ್ಯ ಮನುಷ್ಯರ ನೆಲೆಯನ್ನು ಮೀರಿ ಅವನು ಬದುಕತೊಡಗುತ್ತಾನೆ.) ಅವನ ಯಶಸ್ಸು ದೇಶದ ಎಲ್ಲೆಡೆಯೂ ಹರಡಿತು.

ಮಹಾಪಂಡಿತ

ಆ ಕಾಲಕ್ಕೆ ಗೌಡ ದೇಶವನ್ನು (ಎಂದರೆ ಈಗಿನ ಬಂಗಾಳ, ಬಿಹಾರ ಪ್ರಾಂತಗಳು) ಪಾಲವಂಶದ ಅರಸರು ಆಳುತ್ತಿದ್ದರು. ಈ ವಂಶದ ಮಹೀಪಾಲನೆಂಬ ರಾಜನು ರಾಜ್ಯಭಾರವನ್ನು ಮಾಡುತ್ತಿದ್ದಾಗಲೇ ದೀಪಂಕರ-ಶ್ರೀಜ್ಞಾನ ಸುವರ್ಣ ದ್ವೀಪದಿಂದ ಭಾರತಕ್ಕೆ ಹಿಂದಿರುಗಿದುದು. ಅವನ ಕೀರ್ತಿಯನ್ನು ಕೇಳಿದ್ದ ಈ ರಾಜ ದೀಪಂಕರನನ್ನು ಆದರದಿಂದ ಬರಮಾಡಿಕೊಂಡ. ರಾಜನು ದೀಪಂಕರನನ್ನು ವಿಕ್ರಮಶೀಲ ಮಹಾವಿದ್ಯಾಲಯದ ಅಧ್ಯಕ್ಷನಾಗಿರಬೇಕೆಂದು ಬೇಡಿಕೊಳ್ಳಲು ದೀಪಂಕರ ಒಪ್ಪಿಕೊಂಡ. ಆಗ ಅವನಿಗೆ ನಲವತ್ತಮೂರು ವರ್ಷಗಳು.

ವಿಕ್ರಮಶೀಲ ಮಹಾವಿಹಾರ ಈಗಿನ ಭಾಗಲಪುರದ ಬಳಿಯಿರುವ ಸುಲ್ತಾನಗಂಜ್ ಎಂಬಲ್ಲಿದ್ದಿತು; ಸಾವಿರಕ್ಕು ಹೆಚ್ಚು ವಿದ್ಯಾರ್ಥಿ ಭಿಕ್ಷುಗಳಿದ್ದರು, ೧೫೦ ಮಂದಿ ಉಪಾಧ್ಯಾಯರು ಅಲ್ಲಿ ಪಾಠ ಹೇಳುತ್ತಿದ್ದರು. ಗಂಗಾನದಿಯ ದಂಡೆಯ ಮೇಲಿದ್ದ ಈ ವಿದ್ಯಾಪೀಠವನ್ನು ಬಂಗಾಳದ ದೊರೆ ಧರ್ಮಪಾಲದೇವನೇ ಸ್ಥಾಪಿಸಿದನು, ೧೨೨೫ರ ವರೆಗೂ ಇದು ಇಡೀ ದೇಶದಲ್ಲೆಲ್ಲ ಪ್ರಸಿದ್ಧವಾದ ವಿದ್ಯಾಕೇಂದ್ರವಾಗಿದ್ದಿತು. ಅಲ್ಲಿಗೆ ವಿದ್ಯಾರ್ಥಿಗಳು ಸೇರಬೇಕಾದರೆ ಪಂಡಿತರು ನಡೆಸುತ್ತಿದ್ದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅವರನ್ನು ಸಮಾಧಾನಪಡಿಸಬೇಕಾಗಿದ್ದಿತು. ವಿಹಾರದ ನಾಲ್ಕೂ ದಿಕ್ಕುಗಳಲ್ಲಿ ನಾಲ್ಕು ಬಾಗಿಲುಗಳಿದ್ದು ಆಯಾ ದಿಕ್ಕುಗಳಿಂದ ಬಂದ ವಿದ್ಯಾರ್ಥಿಗಳನ್ನು ಪರೀಕ್ಷೆ ಮಾಡಲು ಪಂಡಿತರಿರುತ್ತಿದ್ದರು. ಇವರಿಗೆ ದ್ವಾರಪಂಡಿತರೆಂದು ಹೆಸರು. ಪೂರ್ವದ ಬಾಗಿಲಲ್ಲಿ ರತ್ನಾಕರ ಶಾಂತಿ, ಪಶ್ಚಿಮದಲ್ಲಿ ಪ್ರಜ್ಞಾಕರಮತಿ, ಉತ್ತರದಲ್ಲಿ ನಾಡಪಂಡಿತ, ದಕ್ಷಿಣದಲ್ಲಿ ವಾಗೀಶ್ವರ ಕೀರ್ತಿ ಇವರು ದ್ವಾರಪಂಡಿತರಾಗಿದ್ದರು. ಇವರೆಲ್ಲ ಮಹಾಪಂಡಿತರು, ಪ್ರಖ್ಯಾತರು. ಇವರ ಯುಗವಾದ ನಂತರ ವಿದ್ಯಾಲಯದ ಆಡಳಿತವನ್ನು ನೋಡಿಕೊಳ್ಳಲು ನೇಮಕಗೊಂಡವನು ದೀಪಂಕರ. ಇವನನ್ನು ’ಉಪಾಧ್ಯಯ’ ಎಂದು ಕರೆಯುತ್ತಿದ್ದುರ, ಎಂದರೆ ಅಧ್ಯಕ್ಷ, ಕುಲಪತಿ. ಈ ವಿದ್ಯಾಲಯವನ್ನು ನೋಡಿಕೊಳ್ಳುತ್ತಿದ್ದಾಗಲೇ ಓದಂತಪುರಿ ಮಹಾವಿದ್ಯಾಲಯದ ಆಡಳಿತವನ್ನೂ ನೋಡಿಕೊಳ್ಳುತ್ತಿದ್ದ.

ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿದ್ದ ಕಾಲದಲ್ಲಿಯೇ ದೀಪಂಕರ ಹಲವಾರು ಪುಸ್ತಕಗಳನ್ನೂ ಬರೆದ. ’ಆರ್ಯಗಣಪತಿ ಸಾಧನ’, ’ಹಯಗ್ರಿವ ಸಾಧನ’, ’ಮಹಾಸೂತ್ರಸಮುಚ್ಚಯ’, ’ಹೋಮವಿಧಿ’ ಮೊದಲಾದವು ಅವನ ಕೃತಿಗಳು. ಅವನ ಹೆಸರಿನಲ್ಲಿ ಒಟ್ಟು ಮೂವತ್ತೆಂಟು ಪುಸ್ತಕಗಳಿವೆ. ಇವೆಲ್ಲ ಅವನ ಯಶಸ್ಸನ್ನು ನಾಡಿನಲ್ಲೆಲ್ಲ ಹರಡಿದವು. ನಾಡಿನಾಚೆಯೂ ಅವನ ಹೆಸರು ಮನೆಮಾತಾಯಿತು.

ಟಿಬೆಟ್ ಕರೆ

ಹೀಗೆ ಅವನ ಹೆಸರನ್ನು ಕೇಳಿ ಅವನನ್ನು ಬರಮಾಡಿಕೊಳ್ಳಬೇಕೆಂದು ಬಯಸಿದವರಲ್ಲಿ ಟಿಬೆಟ್‌ ದೇಶದ ದೊರೆ ದೇವಗುರು-ಜ್ಞಾನಪ್ರಭನೆಂಬವನೊಬ್ಬ, ಟಿಬೆಟ್ ಭಾಷೆಯಲ್ಲಿ ಅವನ ಹೆಸರು ಲ್ಹ-ಬ್ಲಮ ಯೆ-ಶೆಸ್-ಓದ್. ಅವನೂ ಅವನ ಮೂವರು ಸೋದರಳಿಯಂದಿರೂ ಸ್ವತಃ ಪಂಡಿತರು, ಬೌದ್ಧಧರ್ಮದಲ್ಲಿ ಶ್ರದ್ಧೆಯುಳ್ಳವರು. ಆ ವೇಳೆಗಾಗಲೇ ಟಿಬೆಟ್‌ ದೇಶಕ್ಕೆ ಬೌದ್ಧಧರ್ಮ ಬಂದಿದ್ದಿತು. ಕ್ರಿಸ್ತಶಕ ೭೪೭ರಲ್ಲಿ ನಳಂದಾ ವಿಹಾರದ ಪಂಡಿತರಾದ ಶಾಂತರಕ್ಷಿತ ಮತ್ತು ಪದ್ಮ ಸಂಭವ ಟಿಬೆಟ್‌ಗೆ ಬಂದು ಅಲ್ಲಿ ಬೌದ್ಧಧರ್ಮವನ್ನು ಹರಡಲೆತ್ನಿಸಿದ್ದರು. ದೀಪಂಕರನಿಗೆ ಸುಮಾರು ಇನ್ನೂರು ವರ್ಷಗಳ ಮೊದಲಿನ ಮಾತು ಇದು. ಆದರೆ ಅವರ ಕಾಲದ ನಂತರ ಭೌದ್ಧಧರ್ಮ ಅಷ್ಟು ಚೆನ್ನಾಗಿ ಬೆಳೆಯಲಾಗಲಿಲ್ಲ, ಅದು ಉಳಿಯುವುದೂ ಕಷ್ಟವೆಂದು ತೋರಿತು. ಆ ಸಮಯದಲ್ಲಿ ದೊರೆ ಜ್ಞಾನ ಪ್ರಭ ಭಾರತದೇಶದಿಂದ ಸಮರ್ಥನಾದ ಪಂಡಿತನೊಬ್ಬನನ್ನು ಟಿಬೆಟ್‌ಗೆ ಕರೆಸಿಕೊಂಡರೆ ಒಳ್ಳೆಯದೆಂದೂ ಬೌದ್ಧಧರ್ಮ ಬೇರೂರಲು ನೆರವಾದೀತೆಂದೂ ಬಗೆದು ಎಲ್ಲರನ್ನೂ ವಿಚಾರಿಸುತ್ತಿದ್ದ. ಅವನು ಯಾರಲ್ಲಿ ಈ ವಿಚಾರವನ್ನು ಪ್ರಸ್ತಾಪಮಾಡಿದರೂ ದೀಪಂಕರನ ಹೆಸರೇ ಕೇಳಿಬರುತ್ತಿದ್ದಿತು. ದೀಪಂಕರ ಟಿಬೆಟ್‌ಗೆ ಬರುವುದಾದರೆ ತುಂಬ ಒಳ್ಳೆಯದೆಂದೂ ಟಿಬೆಟ್‌ನ ಭಾಗ್ಯೋದಯವಾದೀತೆಂದೂ ಎಲ್ಲರೂ ಬಗೆದಿದ್ದರು. ಆದರೆ ಇಷ್ಟು ದೊಡ್ಡ ಪಂಡಿತನನ್ನು ಬರಮಾಡಿಕೊಳ್ಳುವುದು ಹೇಗೆ? ವಿಕ್ರಮಶೀಲ ವಿದ್ಯಾಪೀಠದ ಕುಲಪತಿ ಸ್ಥಾನವನ್ನು ಬಿಟ್ಟು ಅವನು ಬರಲೊಪ್ಪುವನೆ? ವಿದ್ಯಾರ್ಥಿಗಳೂ ಅರಸನೂ ಅವನನ್ನು ಕಳುಹಿಸಲೊಪ್ಪುವರೆ? ದೇಶದ ಜನರು ಇಂತಹ ಮೇಧಾವಿಯನ್ನು ಬಿಟ್ಟು ಕೊಡುವರೆ? ತಾನೇ ಪರದೇಶಕ್ಕೆ ಬರಲು ಒಪ್ಪಿಯಾನೆ?

ಇಷ್ಟೆಲ್ಲ ಅಡ್ಡಿ-ಆತಂಕಗಳಿದ್ದರೂ ದೊರೆ ಆಸ್ಥಾನಪಂಡಿತನಾಗಿದ್ದ ವೀರ್ಯಸಿಂಹನೆಂಬ ಟಿಬೆಟ್‌ನ ಜಾಣ ತರುಣನನ್ನು ವಿಕ್ರಮಶೀಲ ವಿಹಾರಕ್ಕೆ ಕಳುಹಿಸಿ, ದೀಪಂಕರನ ಅಭಿಪ್ರಾಯವನ್ನು ಅರಿತುಕೊಳ್ಳಲೆತ್ನಿಸಿದ. ವೀರ್ಯಸಿಂಹನು ಟಿಬೆಟ್‌ನ ಹಲವಾರು ವಿದ್ವಾಂಸರೊಡಗೂಡಿ, ಅಪಾರ ಬಂಗಾರವನ್ನೂ ತೆಗೆದುಕೊಂಡು ಕಷ್ಟಪಟ್ಟು ಪ್ರವಾಸಮಾಡಿ ಕಡೆಗೆ ವಿಕ್ರಮಶೀಲ ವಿಹಾರಕ್ಕೆ ಬಂದ. ದೀಪಂಕರನನ್ನು ಭೇಟಿ ಮಾಡಿ, ತಾನು ತಂದಿದ್ದ ಬಂಗಾರವನ್ನು ಅವನಿಗೊಪ್ಪಿಸಿ ಟಿಬೆಟ್‌ ದೇಶದ ದೊರೆಯ ಆಸೆಯನ್ನು ಅರಿಕೆ ಮಾಡಿಕೊಂಡ. ದೀಪಂಕರ ಒಪ್ಪಲಿಲ್ಲ. “ಟಿಬೆಟ್‌ಗೆ ಹೋಗಲು ಎರಡು ಕಾರಣಗಳು-ಒಂದು ಬಂಗಾರ, ಅದರಾಶೆ ನನಗಿಲ್ಲ, ಇನ್ನೊಂದು ಕರುಣೆ–ಅದು ನನಗೆ ಸಾಲದು!” ಹೀಗೆಂದು ಬಂಗಾರವನ್ನು ವೀರ್ಯಸಿಂಹನಿಗೆ ಹಿಂದಿರುಗಿಸಿಬಿಟ್ಟ. ವಿರ್ಯಸಿಂಹ ನಿರಾಶನಾಗಿ ಅಳಲು ಮೊದಲಿಟ್ಟ. ದೀಪಂಕರನ ನಿಶ್ಚಯವೇನೂ ಬದಲಾಗಲಿಲ್ಲ. ವೀರ್ಯಸಿಂಹ ಬಂಗಾರದೊಡನೆ ಟಿಬೆಟ್‌ ದೇಶಕ್ಕೆ ಹಿಂದಿರುಗಿ ದೊರೆಗೆ ತನ್ನ ನಿಷ್ಫಲ ಪ್ರಯತ್ನದ ವಿವರಗಳನ್ನು ತಿಳಿಸಿದ. ತಾನು ದೀಪಂಕರನನ್ನು ಕಂಡಂದಿನಿಂದ ಅವನ ಬಳಿ ಶಿಷ್ಯವೃತ್ತಿ ಮಾಡಬೇಕೆಂಬ ಹಂಬಲ ಹೆಚ್ಚಾಗಿದ್ದುದರಿಂದ ವೀರ್ಯಸಿಂಹ ಭಾರತದೇಶಕ್ಕೆ ಮತ್ತೆ ಬಂದು ವಿಕ್ರಮಶೀಲ ವಿಹಾರದಲ್ಲಿ ವಿದ್ಯಾರ್ಥಿಯಾಗಿ ನಿಂತ.

ಆಗಲಿ, ಬರುತ್ತೇನೆ

ವೀರ್ಯಸಿಂಹನಿಂದ ದೀಪಂಕರ ವಿಚಾರವನ್ನು ಕೇಳಿ ತಿಳಿದುಕೊಂಡ ದೊರೆಗೆ ಹೇಗಾದರೂ ದೀಪಂಕರನನ್ನು ತನ್ನ ದೇಶಕ್ಕೆ ಕರೆಸಿಕೊಳ್ಳಲೇಬೇಕೆಂಬ ಹಂಬಲ ಮುಡಿತು. ಇನ್ನೂ ಹೆಚ್ಚು ಬಂಗಾರವನ್ನು ದೀಪಂಕರನಿಗೆ ಕಳುಹಿಸಿ ನೋಡುವ ಸನ್ನಾಹ ಮಾಡಿದ.

ಅಷ್ಟರಲ್ಲಿ ನೆರೆನಾಡಿನ ಗರ್-ಲೋಗ್ ಸೈನ್ಯ ಈ ರಾಜ್ಯದ ಮೇಲೆ ಆಕ್ರಮಣ ನಡೆಸಿ ರಾಜನನ್ನು ಕೈಸೆರೆ ಹಿಡಿಯಿತು. ಸೆರೆಯಿಂದ ರಾಜನನ್ನು ಬಿಡಬೇಕೆಂದರೆ ರಾಜ ಬೌದ್ಧಧರ್ಮವನ್ನು ಬಿಡಬೇಕು, ಇಲ್ಲವೇ ರಾಜ್ಯದ ಜನರು ರಾಜನ ಮೈತೂಕಷ್ಟು ಬಂಗಾರವನ್ನು ಒಪ್ಪಿಸಬೇಕು ಎಂದು ಷರತ್ತನ್ನು ಈ ಸೈನ್ಯದ ನಾಯಕರು ಮುಂದಿಟ್ಟರು. ರಾಜ ಬೌದ್ಧಧರ್ಮವನ್ನು ಕೈ ಬಿಡುವ ಸಂಭವವೇ ಇರಲಿಲ್ಲವಾಗಿ, ಜನರು ಅವನ ತೂಕದಷ್ಟು ಬಂಗಾರವನ್ನು ಸಂಗ್ರಹಿಸತೊಡಗಿದರು. ಅವನ ಮೈ ತೂಕದ ಬಂಗಾರವೆಂದರೆ ಸಾಮಾನ್ಯವೇ? ರಾಜನನ್ನು ಜನರು ಪ್ರೀತಿಸುತ್ತಿದ್ದುದರಿಂದ ಬೇಕಾದಷ್ಟು ಬಂಗಾರವೇನೋ ಸಂಗ್ರಹವಾಯಿತು, ಅವನ ತಲೆಯಷ್ಟು ತೂಕ ಮಾತ್ರ ಕಡಿಮೆಯಾಯಿತು. ಇಷ್ಟು ತಾನೆ? ಇನ್ನೇನು ಕೆಲವೇ ದಿನಗಳಲ್ಲಿ ಅಷ್ಟನ್ನು ಸೇರಿಸಿ ರಾಜನನ್ನು ಬಂಧನದಿಂದ ಬಿಡಿಸಿಕೊಳ್ಳುತ್ತೇವೆ ಎಂದು ಜನರು ಧೈರ್ಯ ತಂದುಕೊಂಡರು. ರಾಜನಿಗೆ ಈ ಸುದ್ದಿ ಮುಟ್ಟಿದಾಗ ರಾಜ, “ಅಯ್ಯೋ, ನನಗಾಗಿ ಇಷ್ಟು ಬಂಗಾರ ಹಾಳು ಮಾಡುವುದು ಬೇಡ. ನಾನು ಹೇಗೂ ಮುದುಕ, ಸೆರೆಯಿಂದ ಹೊರ ಬಂದರೂ ಬಹುಕಾಲ ಬದುಕಲಾರೆ. ಬದುಕಿ ತಾನೇ ನಾನು ಮಾಡುವುದು ಏನು? ಇಷ್ಟು ಬಂಗಾರವನ್ನೂ ದೀಪಂಕರನಿಗೆ ಕಳುಹಿಸಿ ಅವನು ಈ ದೇಶಕ್ಕೆ ಕಾಲಿಡುವಂತೆ ಮಾಡುವುದಾದರೆ ನನಗೂ ಸಂತೋಷ, ದೇಶಕ್ಕು ಹಿತ!” ಎಂದು ಜನರಿಗೆ ಹೇಳಿ ಕಳುಹಿಸಿದ. ಸಂದೇಶ ಜನರನ್ನು ಮುಟ್ಟುವುದರೊಳಗೆ ಸತ್ತುಹೋದ!

ರಾಜನ ಇಚ್ಛೆಯಂತೆ ದೀಪಂಕರನನ್ನು ಕರೆಸಿಕೊಳ್ಳುವ ಪ್ರಯತ್ನ ಮತ್ತೆ ನಡೆಯಿತು. ಆ ಕಾಲಕ್ಕೆ ಜಯಶೀಲನೆಂಬ ಟಿಬೆಟ್‌ನ ೨೭ವರ್ಷದ ಪಂಡಿತ ಭಾರತ ದೇಶದಲ್ಲಿಯೇ ಎರಡು ವರ್ಷಕಾಲ ಇದ್ದು ಇಲ್ಲಿನ ದೇಶಭಾಷೆಗಳನ್ನು ಕಲಿತಿದ್ದ. ಟಿಬೆಟ್‌ ರಾಜಾಸ್ಥಾನದಿಂದ ಅವನಿಗೊಂದು ಓಲೆ ಹೋಯಿತು-ವಿಕ್ರಮಶೀಲ ಮಹಾವಿಹಾರದ ದೀಪಂಕರನನ್ನು ಭೇಟಿ ಮಾಡಿ ಟಿಬೆಟ್‌ಗೆ ಬರುವಂತೆ ಬೇಡಿಕೊಳ್ಳಬೇಕು ಎಂದು. ಅವನ ನೆರವಿಗೆಂದು ಒಂದು ನೂರು ಜನರನ್ನೂ ಅಪಾರ ಬಂಗಾರವನ್ನು ಕಳುಹಿಸಲಾಯಿತು.

ಜಯಶೀಲ ಇಷ್ಟೂ ಪರಿವಾರ, ಸಾಮಗ್ರಿಗಳೊಂದಿಗೆ ಬುದ್ಧಗಯೆಗೆ ಬಂದು ಅಲ್ಲಿಂದ ವಿಕ್ರಮಶೀಲ ಮಹಾವಿಹಾರಕ್ಕೆ ಬಂದ. ಅಲ್ಲಿ ಟಿಬೆಟ್‌ನ ಇನ್ನೊಬ್ಬ ಪಂಡಿತ ವೀರ್ಯಸಿಂಹ (ಮೊದಲ ಬಾರಿ ದೀಪಂಕರನನ್ನು ಟಿಬೆಟ್‌ಗೆ ಕರೆಕೊಳ್ಳಲೆತ್ನಿಸಿ ಸೋತವನು) ದೀಪಂಕರನ ಬಳಿಯೇ ಶಿಷ್ಯನಾಗಿದ್ದ. ಜಯಶೀಲ, ವೀರ್ಯಸಿಂಹ ಇಬ್ಬರೂ ಒಂದು ರಾತ್ರಿ ದೀಪಂಕರ ತನ್ನ ಕೋಣೆಯಲ್ಲಿ ಒಬ್ಬನೇ ಇದ್ದಾಗ ಅವನನ್ನು ಕಂಡು ಲಿಖಿತ ವಿನಂತಿಯೊಂದನ್ನು ಸಲ್ಲಿಸಿದರು. ಟಿಬೆಟ್‌ನಲ್ಲಿ ಬೌದ್ಧ ಧರ್ಮ ಮೊದಲಾದುದು, ಧರ್ಮ ದುಃಸ್ಥಿತಿಗೆ ಇಳಿದುದು, ರಾಜನ ಶ್ರದ್ಧೆ ಬಹಳ ಇದ್ದು ದೀಪಂಕರನ ಟಿಬೆಟ್‌ಗೆ ಬರಲೆಂದು ತನ್ನ ಪ್ರಾಣವನ್ನೇ ಅರ್ಪಿಸಲು ಸಿದ್ಧನಾದುದು, ಟಿಬೆಟ್‌ನ ಜರನು ದೀಪಂಕರನ ಬರವನ್ನೇ ಎದುರು ನೊಡುತ್ತಿರುವುದು ಎಲ್ಲವನ್ನೂ ಅದರಲ್ಲಿ ವಿವರಿಸಿದ್ದರು. ಇದನ್ನೆಲ್ಲ ಕೇಳಿ ದೀಪಂಕರನ ಮನಸ್ಸು ಕರಗಿತು. “ನಾನು ಮುದು, ಇಲ್ಲಿನ ಹೊಣೆಯೂ ಕೆಲಸವೂ ತುಂಬ ಇದೆ. ಆದರೆ ನಿಮ್ಮ ಕಾತರವನ್ನು ನೋಡಿದರೆ ಬರಲಾರೆ ಎನ್ನಲಾರೆ. ಬರುತ್ತೇನೆ. ಆದರೆ ನೀವು ತಂದಿರುವ ಬಂಗಾರವೇನೂ ನನಗೆ ಬೇಡ” ಎಂದು ಹೇಳಿ ಬಂಗಾರವನ್ನೆಲ್ಲ ಅವರಿಗೇ ಹಿಂದಿರುಗಿಸಿ, ಟಿಬೆಟ್‌ಗೆ ಹೊರಡಲು ಸಿದ್ಧನಾದ.

ವಿಕ್ರಮಶೀಲದ ಇತರ ಪಂಡಿತರೂ ವಿದ್ಯಾಲಯದ ಅಧಿಕಾರಿಗಳೂ ರಾಜನೂ ದೀಪಂಕರನ್ನು ಬಿಟ್ಟುಕೊಡಲು ಇಷ್ಟಪಡದಿದ್ದುದು ಸಹಜವೇ. ಟಿಬೆಟ್‌ನ ವಿದ್ಯಾರ್ಥಿಗಳು ತಂಬ ಬೇಡಿಕೊಳ್ಳಲು, ದೀಪಂಕರನೂ ಒಪ್ಪಿಕೊಳ್ಳಲು ಅವರೂ ಒಪ್ಪಬೇಕಾಯಿತು. ಮಹಾ ವಿಹಾರದ ಮೇಲಧಿಕಾರಿ ರತ್ನಾಕರಶಾಂತಿಸ್ಥರವಿರನು ಟಿಬೆಟ್‌ನ ವಿದ್ಯಾರ್ಥಿಗಳೊಂದಿಗೆ ದೀಪಂಕರನನ್ನು ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಟಿಬೆಟ್‌ನಲ್ಲಿ ಉಳಿಸಿಕೊಳ್ಳಲಾಗದೆಂದೂ ಅವರೇ ಅವನನ್ನು ವಿಕ್ರಮಶೀಲ ವಿಹಾರಕ್ಕೆ ಕರೆತಂದು ಬಿಡಬೇಕೆಂದೂ ಮಾತುಮಾಡಿಕೊಂಡ. ಆದರೆ ದೀಪಂಕರ ಕೈಗೊಂಡಿದ್ದ ಕೆಲಸಗಳು ಅರ್ಧಕ್ಕೆ ಉಳಿದಿದ್ದುರಿಂದ ದೀಪಂಕರ ಹದಿನೆಂಟು ತಿಂಗಳುಗಳ ಕಾಲ ತನಗೆ ಅವಕಾಶ ಬೇಕೆಂದು ಹೇಳಲು ಟಿಬೆಟ್‌ನ ವಿದ್ಯಾರ್ಥಿಗಳು, “ಸ್ವಾಮಿ, ತಾವು ಬರುವುದಾರೆ ವರ್ಷಗಳಾದರೂ ಕಾಯುತ್ತೇವೆ” ಎಂದರು.

 

ಟಿಬೆಟ್‌ನ ರಾಜನೂ ಸಂಭ್ರಮದಿಂದ ಭಕ್ತಿಯಿಂದ ದೀಪಂಕರನನ್ನು ಬರಮಾಡಿಕೊಂಡರು

ದೀಪಂಕರನು ವಿಕ್ರಮಶೀಲ ವಿಹಾರವನ್ನು ಬಿಟ್ಟು ಟಿಬೆಟ್‌ಗೆ ಹೊರಟ ವರ್ಷ ೧೦೪೦. ಅವನೊಂದಿಗೆ ಇಪ್ಪತ್ತು ಮಂದಿ ಭಾರತೀಯ ವಿದ್ಯಾರ್ಥಿಗಳೂ ಇಬ್ಬರು ಟಿಬೆಟ್‌ನ ವಿದ್ಯಾರ್ಥಿಗಳೂ ಹೊರಟರು. ಹೀಗೆ ಮಗಧದಿಂದ ಹೊರಟ ತಂಡ ನೇಪಾಳದ ಮೂಲಕ ಟಿಬೆಟ್ ಸೇರುವುದೆಂದು ಗೊತ್ತಾಯಿತು. ಮರುವರ್ಷ ಯಾತ್ರಿಕರು ನೇಪಾಳವನ್ನು ಮುಟ್ಟಿದೊಡನೆ ವೀರ್ಯಸಿಂಹ, ದೀಪಂಕರನ ಅಚ್ಚುಮೆಚ್ಚಿನ ಶಿಷ್ಯ, ತೀರಿಕೊಂಡ, ಸಣ್ಣ ವಯಸ್ಸಿನಲ್ಲೇ ತುಂಬ ಪ್ರಭಾವಶಾಲಿಯಾಗಿದ್ದು ಧರ್ಮವನ್ನು ಆಳವಾಗಿ ಅರಿತಿದ್ದು, ಗುರುವಿಗೆ  ಕಾರ್ಯದರ್ಶಿಯಂತಿದ್ದ ವೀರ್ಯಸಿಂಹ ಹಠಾತ್ತನೆ ತೀರಿಕೊಂಡುದು ದೀಪಂಕರನಿಗೆ ಸೈರಿಸಲಾರದ ದುಃಖವಾಯಿತು.

ಅಂತೂ ಮತ್ತೊಂದು ವರ್ಷ ಪ್ರವಾಸಮಾಡಿ ೧೦೪೨ರಲ್ಲಿ ದೀಪಂಕರನ ತಂಡ ಟಿಬೆಟ್‌ ದೇಶದ ಗಡಿಯನ್ನು ಸೇರಿತು. ಅವನನ್ನು ಸ್ವಾಗತಿಸಲು ರಾಜನೇ ಮೊದಲಾಗಿ ಸಾವಿರಾರು ಪೌರರು ಅಲ್ಲಿ ಕಾದಿದ್ದು ದೀಪಂಕರನನ್ನು ಕಂಡೊಡನೆ ಎಲ್ಲರೂ ಭೂಮಿಯ ಮೇಲೆ ಅಡ್ಡಬಿದ್ದು ನಮಸ್ಕರಿಸಿದರು. ನೆರೆದವರೆಲ್ಲ ಒಕ್ಕರಲಿನಿಂದ ’ದೀಪಂಕರ ಸುತ್ತಿ’ ಯನ್ನು ಟಿಬೆಟ್‌ ಭಾಷೆಯಲ್ಲಿ ಪಠಿಸಿದರು. ಅನಂತರ ರಾಜನು ಮುಂದೆ ಬಂದು, ದೀಪಂಕರ ಗುರುವಿನ ಆಗಮನದಿಂದ ಬಹುಕಾಲದ ಕನಸು ನನಸಾಯಿತೆಂದೂ ಅವನಿಂದ ಟಿಬೆಟ್‌ ದೇಶದಲ್ಲಿ ಶಾಸ್ತ್ರ ಮತ್ತು ನೀತಿ ಇವು ಬೇರುರುವುದೆಂಬ ಭರವಸೆ ತನಗುಂಟೆಂದೂ ಹೇಳಿ ತುಂಬ ಭಕ್ತಿಯಿಂದ ದೀಪಂಕರನನ್ನು ಸ್ವಾಗತಿಸಿದನು. ದೀಪಂಕರನು ಜನರ ಭಕ್ತಿ ಭಾವವನ್ನು ಮೆಚ್ಚಿಕೊಂಡು ಅಲ್ಲಿಯೇ ಮೊದಲ ಪ್ರವಚನವನ್ನು ನಡೆಸಿದನು.

ಟಿಬೆಟ್ನಲ್ಲಿ ಕೆಲಸ

ಜನರು ಇಷ್ಟು ಆದರದಿಂದ ತನ್ನನ್ನು ಬರಮಾಡಿಕೊಂಡಿರುವುದು ತನ್ನ ಮೇಲೆ ಹೆಚ್ಚಿನ ಹೊಣೆಯನ್ನು ಹೊರಿಸಿದೆಯೆಂಬ ಅರಿವು ದೀಪಂಕರನಿಗಿದ್ದಿತು. ಟಿಬೆಟ್‌ಗೆ ಹೋಗುವುದೆಂದು ಖಂಡಿತವಾದಂದಿನಿಂದ ಆ ದೇಶದ ಭಾಷೆಯನ್ನು ಕಲಿಯತೊಡಗಿದ್ದ, ಟಿಬೆಟ್‌ನಲ್ಲಿ ಅವನ ಕೆಲಸ ಹೀಗಾಗಿ ಹಗುರವಾಯಿತು. ಬರಬರುತ್ತಾ ಆ ಭಾಷೆಯ ಮೇಲೆ ಒಡೆತನ ಕೈಗೂಡಿತು. ಹಲವಾರು ಶಾಸ್ತ್ರ ಗ್ರಂಥಗಳನ್ನು ಸಂಸ್ಕೃತದಿಂದ ಟಿಬೆಟ್‌ ಭಾಷೆಗೆ ಅನುವಾದ ಮಾಡುವುದು ದೀಪಂಕರನಿಗೆ ಸಾಧ್ಯವಾಯಿತು. ತನ್ನ ಪ್ರವಾಸ ಕಾಲದಲ್ಲಿ ಟಿಬೆಟ್‌ ಭಾಷೆಯಲ್ಲಿಯೇ ಪ್ರವಚನಗಳನ್ನು ಕೂಡ ಕೊಡುತ್ತಿದ್ದ. ಜನರೊಂದಿಗೆ ಬೆರೆತು, ಅವರ ಸ್ವಭಾವವನ್ನು ಅರಿತುಕೊಂಡು, ಅವರಿಗೆ ಸಹಾಯಕವಾಗುವಂತೆ ಧರ್ಮಬೋಧೆ ಮಾಡುತ್ತಿದ್ದುರಿಂದ ಜನರಿಗೆಲ್ಲ ತುಂಬ ಪ್ರಿಯನಾದ.

ಮೂರು ವರ್ಷಗಳ ಮಟ್ಟಿಗೆಂದು ಟಿಬೆಟ್‌ಗೆ ಬಂದ ದೀಪಂಕರ ಜನರಲ್ಲಿ ಧರ್ಮ ರೂಢಮೂಲವಾಗಲು ತನ್ನ ನೆರವು ಬೇಕಾದೀತೆಂದು ಅರಿತು ಅಲ್ಲಿಯೇ ಇರಲು ಮನಸ್ಸು ಮಾಡಿದ. ದೀಪಂಕರ ಆ ದೇಶದಲ್ಲಿ ಒಟ್ಟು ಹದಿಮೂರು ವರ್ಷಗಳನ್ನು ಕಳೆದ. ಭಾರತಕ್ಕೆ ಮರಳಲೇ ಇಲ್ಲ; ಅಲ್ಲಿಯೇ ತೀರಿಕೊಂಡ.

ಅವನ ಟಿಬೆಟ್‌ ಪ್ರವಾಸ ಕಾಲದಲ್ಲಿ ಹಲವಾರು ಸ್ವಾರಸ್ಯದ ಪ್ರಸಂಗಗಳು ಜರುಗಿದವು. ಟಿಬೆಟ್‌ಗೆ ಬಂದ ಹೊಸದರಲ್ಲಿ ಅಲ್ಲಿನ ಮಹಾಪಂಡಿತನೊಬ್ಬ, ರತ್ನಭದ್ರ ಎಂಬುವನು, ’ಈ ದೀಪಂಕರನೇನು ನನಗಿಂತ ಮೇಧಾವಿಯೆ? ನೋಡಿದರೆ ಹಾಗೇನೂ ಕಾಣುವುದಿಲ್ಲ! ಆದರೂ ರಾಜ ಇವನನ್ನು ಕರೆಸಿಕೊಂಡಿದ್ದಾನೆ. ನಾನೂ ಇವನಿಗೆ ಗೌರವವನ್ನು ತೋರಿಸುವ ನಾಟಕ ನಡೆಯಬೇಕು’ ಎಂದುಕೊಂಡು ದೀಪಂಕರನನ್ನು ಸಂದರ್ಶಿಸಿ, ಆಗ ತಾನೆ ಥೊ-ಲಿಂಗ್ ವಿಹಾರ ದೇವಾಲಯಕ್ಕೆ ಹೊರಟಿದ್ದ ದೀಪಂಕರನೊಂದಿಗೆ ತಾನೂ ಹೊರಟ. ಆ ದೇವಾಲಯದ ಗೋಡೆಗಳ ಮೇಲೆ ತಾಂತ್ರಿಕ ದೇವತೆಗಳ ಚಿತ್ರಗಳನ್ನು ಮನೋಹರವಾಗಿ ಬಿಡಿಸಿದ್ದರು. ದೀಪಂಕರ ಅವನ್ನೆಲ್ಲ ನೋಡುತ್ತ ಒಂದೊಂದು ದೇವತೆಯನ್ನು ಕಂಡಾಗಲೂ ಒಂದೊಂದು ಸ್ತ್ರೋತ್ರವನ್ನು ಹೇಳುತ್ತಿದ್ದ. ಇದನ್ನು ಕೇಳಿ ಅಚ್ಚರಿಗೊಂಡ ರತ್ನಭದ್ರ, “ಸ್ವಾಮಿ, ಈ ಸ್ತ್ರೋತ್ರಗಳು ಯಾವ ಪುಸ್ತಕದಲ್ಲಿವೆ?” ಎಂದು ಕೇಳಿದ. ಅದಕ್ಕೆ ದೀಪಂಕರ ನಸುನಗುತ್ತ, “ಇವು ಯಾವ ಪುಸ್ತಕದಲ್ಲಿಯೂ ಇಲ್ಲ. ದೇವತೆಗಳ ಅನುಗ್ರಹದಿಂದ, ಸಮಯಸ್ಫೂರ್ತಿಯಿಂದ ನಾನೇ ರಚಿಸಿದವು” ಎಂದ. ತಾನೇ ಪಂಡಿತನೆಂದು ಜಂಬಪಡುತ್ತಿದ್ದ ರತ್ನಭದ್ರ ಈಗ ವಿನಯಶಾಲಿಯಾದ.

ಬಂಗಾರವನ್ನು ಮಾರಿ ಇದ್ದಿಲು ಕೊಳ್ಳಬೇಡ

ದೇವಾಲಯವನ್ನು ನೋಡಿಯಾದ ಮೇಲೆ ದೀಪಂಕರನೂ, ರತ್ನಭದ್ರನೂ ಅಂಗಳದಲ್ಲಿ ಕುಳಿತು ಮಾತುಕತೆಯಾಡಿದರು; ನೂರಾರು ಮಂದಿ ಭಕ್ತಿಯಿಂದ ಸುತ್ತ ನಿಂತಿದ್ದರು. ದೀಪಂಕರನು ರತ್ನಭದ್ರನನ್ನು ಕುರಿತು, “ತಮ್ಮ ವಿಶೇಷವಾದ ಅಧ್ಯಯನ ಯಾವ ಶಾಸ್ತ್ರದಲ್ಲಿ”? ಎಂದು ಕೇಳಿದ. ರತ್ನಭದ್ರ ತನ್ನ ಪಾಂಡಿತ್ಯದ ಭಾಗಗಳನ್ನೆಲ್ಲ ಪಟ್ಟಿಮಾಡಿ, ತಾನು ಎಲ್ಲ ಶಾಸ್ತ್ರಗಳಲ್ಲಿಯೂ ಸಿದ್ಧಹಸ್ತನೆಂದು ಹೇಳಿಕೊಂಡ. ಅದನ್ನು ಕೇಳಿ ದೀಪಂಕರ ಕೈ ಜೋಡಿಸಿ, “ತಾವು ಇಷ್ಟು ದೊಡ್ಡ ಪಂಡಿತರು ಇಲ್ಲಿರುವಾಗ ರಾಜ ನನ್ನನ್ನು ಕರೆಸಿಕೊಂಡ ಅಗತ್ಯವೇನಿದ್ದಿತು?” ಎಂದು ಮೆಚ್ಚಿಗೆಯನ್ನು ಸೂಚಿಸಿದ. ಅನಂತರ ಧ್ಯಾನಮಾರ್ಗದ ವಿಚಾರವಾಗಿ ಒಂದು ಕ್ಲಿಷ್ಟ ಪ್ರಶ್ನೆಯನ್ನೆತ್ತಿ ಅದರ ಬಗ್ಗೆ  ರತ್ನಭದ್ರನ ಅಭಿಪ್ರಾಯವೇನೆಂದು ದೀಪಂಕರ ಪ್ರಶ್ನಿಸಿದ. ರತ್ನಭದ್ರ, “ಅದಕ್ಕೆ ಸೂತ್ರಗಳಿಂದ ಒಂದು ಸಮಾಧಾನ ತಂತ್ರಗಳಿಂದ ಇನ್ನೊಂದು ಸಮಾಧಾನ ಹೀಗೆ ಬೇರೆ ಬೇರೆ ಹೇಳಬೇಕಾಗುತ್ತದೆ” ಎಂದ. ಆಗ ದೀಪಂಕರ ನಗುತ್ತಾ, “ಈಗ ನನಗೆ ಅರ್ಥವಾಯಿತು. ರಾಜ ನನ್ನನ್ನು ಇಲ್ಲಿಗೆ ಕರೆಸಿಕೊಂಡಿರುವುದು ಏಕೆ ಎಂಬುದು” ಎಂದ. ಎಂದರೆ, ಸೂತ್ರಗಳಲ್ಲಿಯೇ (ಶಾಸ್ತ್ರಗ್ರಂಥಗಳಲ್ಲಿಯೇ) ಒಂದು ಅರ್ಥವಿದೆ, ತಂತ್ರಗಳಲ್ಲಿ (ಅನುಭವದಲ್ಲಿ) ಬೇರೊಂದು ಅರ್ಥವಿದೆ ಎನ್ನುವುದು ಸರಿಯಾದ ನಿಲುವಲ್ಲ. ಶಾಸ್ತ್ರ ಇರುವುದು ಅನುಭವಕ್ಕಾಗಿಯೇ. ಎರಡರ ನಡುವೆ ವಿರೋಧವಿದೆಯೆಂದು ಇಲ್ಲಿನ ಜನರು ಬಗೆದಿದ್ದಾರೆ, ವಿರೋಧವೇನೂ ಇರದೆಂದು ತೋರಿಸಲೆಂದೇ ರಾಜ ತನ್ನನ್ನು ಅಲ್ಲಿಗೆ ಕರೆಸಿಕೊಂಡಿರುವುದು ಎಂದು ದೀಪಂಕರನಿಗನ್ನಿಸಿತು. ನೆರೆದವರೆಲ್ಲ ನಕ್ಕರು. ರತ್ನಭದ್ರನ ಗರ್ವ ಚೂರುಚೂರಾಯಿತು.

ರತ್ನಭದ್ರ ತನ್ನ ಸಂಪತ್ತನ್ನೆಲ್ಲ ದೀಪಂಕರನ ಮುಂದಿಟ್ಟು, “ಇದನ್ನು ಗುರುದಕ್ಷಿಣೆಯನ್ನಾಗಿ ಸ್ವೀಕರಿಸಿ ನನಗೆ ಉಪದೇಶ ಮಾಡಿ” ಎಂದು ಕೇಳಿಕೊಂಡ. ದೀಪಂಕರನು, “ಇವೆಲ್ಲ ನನಗೆ ಬೇಡ, ನಾನು ಹೋದೆಡೆಯಲ್ಲೆಲ್ಲ ನನ್ನ ಬಳಲಿಯಿದ್ದು ದುಭಾಷಿಯಾಗಿ ನನಗೆ ನೆರವಾದರೆ ಸಾಕು, ಅದೇ ಗುರುದಕ್ಷಿಣೆ” ಎಂದ. ರತ್ನ ಭದ್ರ, “ಸ್ವಾಮಿ, ನನಗೆ ಮುಪ್ಪು ಅಡರಿತು, ದೇಹ ದುರ್ಬಲವಾಗುತ್ತ ಬಂದಿದೆ. ಇನ್ನು ನನಗೆ ಲೌಕಿಕ ವ್ಯವಹಾರ ಬೇಡ ಎನಿಸುತ್ತದೆ. ಪಾಮಡಿತ್ಯದ ಹೊರೆಯನ್ನು ಹೊತ್ತದ್ದಾಯಿತು, ಕೊಂಚ ಧ್ಯಾನ ಮಾಡಿ ಬದುಕನ್ನು ಕೊನೆಗಾಣಿಸುವ ಬಯಕೆಯಿದೆ. ಧ್ಯಾನಮಾರ್ಗದಲ್ಲಿ ನನಗೆ ಉಪದೇಶ ಮಾಡುವ ಕೃಪೆ ಮಾಡಿ. ತಮ್ಮಿಂದ ಕೆಲವು ಸಿದ್ಧಗಳನ್ನಾದರೂ ಕಲಿಯುವೆನು”ಎಂದ. (ಸಿದ್ಧಿಯೆಂದರೆ ದೂರದಲ್ಲಿ ಮಾತನಾಡಿದುದನ್ನು ಕೇಳಿಸಿಕೊಳ್ಳುವುದು, ಸಾಮಾನ್ಯವಾಗಿ ಜನರು ನೋಡಲಾರದುದನ್ನು ತಾನು ನೋಡುವುದು, ಗಾಳಿಯಲ್ಲಿ ಸವಾರಿ ಮಾಡುತ್ತ ಹೋಗುವುದು, ಬೇರೆಯವರ ಮನಸ್ಸಿನಲ್ಲಿರುವುದನ್ನು ನೇರವಾಗಿ ಗ್ರಹಿಸುವುದು, ಗಾಳಿಯಲ್ಲಿ ಸವಾರಿ ಮಾಡುತ್ತ ಹೋಗುವುದು, ಬೇರೆಯವರ ಮನಸ್ಸಿನಲ್ಲಿರುವುದನ್ನು ನೇರವಾಗಿ ಗ್ರಹಿಸುವುದು, ಕಬ್ಬಿಣವನ್ನು ಬಂಗಾರ ಮಾಡುವುದು, ಸತ್ತವನನ್ನು ಬದುಕಿಸುವುದು ಮೊದಲಾದ ಅಸಾಧಾರಣ ಸಾಮರ್ಥ್ಯಗಳನ್ನು ಪಡೆಯುವುದೆಂರ್ಥ) ಅದಕ್ಕೆ ದೀಪಂಕರ, “ಪಂಡಿತರೇ, ಪೂರ್ವಜನ್ಮದ ಪುಣ್ಯದ ಬಲದಿಂದ ನಿಮಗೆ ಮನುಷ್ಯ ಜನ್ಮ ಬಂದಿದೆ, ಒಳ್ಳೆಯ ವಿದ್ಯೆ ಕಲಿತಿದ್ದೀರಿ, ಬಹಳ ಪಾಂಡಿತ್ಯ ಗಳಿಸಿದ್ದಿರಿ. ಪುಣ್ಯ ದಿಂದ ಬುದ್ಧನ ಧರ್ಮವನ್ನು ಅರಿತುಕೊಳ್ಳುವ ಅವಕಾಶವೂ ಒದಗಿದೆ. ಆ ಧರ್ಮವೇ ಎಲ್ಲ ತೊಂದರೆಗಳನ್ನೂ ನೀಗಿಸುವ ಔಷಧ, ಅಮೃತ, ಅದಕ್ಕಿಂತ ಹೆಚ್ಚಿನ ಸಿದ್ಧಿ ಯಾವುದಿದೆ? ಮಂತ್ರ-ಯಕ್ಷಿಣಿ-ಮಾಯ ಇವುಗಳ ಸಿದ್ಧಿಯನ್ನು ನಂಬಿ ಕೆಡಬೇಡಿ. ನನ್ನ ಮಾತನ್ನು ಕೇಳಿ, ನಿಮ್ಮ ಧರ್ಮ ಜ್ಞಾನವೇ ಅತ್ಯುತ್ತಮವಾದ ಸಿದ್ದಿ ಇರುವ ಬಂಗಾರವನ್ನು ಮಾರಿ ಇದ್ದಿಲು ಕೊಂಡುಕೊಳ್ಳಲು ಹೋಗಬೇಡಿ!” ಎಂದು ಉಪದೇಶಿಸಿದರು.

 

ಇರುವ ಬಂಗಾರವನ್ನು ಮಾರಿ ಇದ್ದಿಲುಕೊಂಡುಕೊಳ್ಳಲು ಹೋಗಬೇಡಿ!’

ರತ್ನಭದ್ರ ಸಮ್ಮತಿಸಿ ಗುಹೆಯೊಂದರಲ್ಲಿ ಕುಳಿತು ಧ್ಯಾನ ಮಾಡತೊಡಗಿದ. ಗುಹೆಯ ಹೊರಗಡೆ ಬಾಗಿಲ ಮೇಲೆ ’ಯಾವುದಾದರೂ ಇಲ್ಲಿನ ಲೋಭ ನನ್ನನ್ನು ಸ್ವಲ್ಪವಾದರೂ ಸೆಳೆಯುವುದಾದರೆ ನನನ್ನ ತಲೆ ಒಡನೆಯೇ ಕಡಿದುರುಳಲಿ!’ ಎಂಬ ಬರಹವನ್ನು ಬರೆದು, ತಾನು ಒಳಗೆ ಹನ್ನೆರಡು ವರ್ಷಗಳ ಕಾಲ ಕುಳಿತು ಧ್ಯಾನಮಾಡಿ ’ಚಕ್ರಸಂವರಮಂಡಲ’ ಎಂಬ ಸಿದ್ಧಿಯನ್ನು ಪಡೆದ. ಅನಂತರ ಅವನು ಹೀಗೆ ಹೇಳುತ್ತಿದ್ದ- “ದೀಪಂಕರನನ್ನು ಕಾಣುವ ಮೊದಲು ಅರವತ್ತು ಮಂದಿ ಗುರುಗಳಿಂದ ನಾನು ಉಪದೇಶ ಪಡೆದಿದ್ದೆ. ಆದರೆ ದಿಟವಾದ ಸಿದ್ಧಿಯ ದಾರಿಯನ್ನು ತೋರಿಸಿದವನು ದೀಪಂಕರನೊಬ್ಬನೇ!’

ಬೌದ್ಧ ವಿಹಾರಗಳ ಸುಧಾರಣೆ

ಮಂಗ್-ಯುಲ್ ಎಂಬಲ್ಲಿ ದೀಪಂಕರನಿದ್ದಾಗ ಅವನ ಪ್ರವಚನಗಳನ್ನು ಕೇಳಿದವರಲ್ಲಿ ಜಯಾಕರ‍್ ಎಂಬ ಟಿಬೆಟ್‌ ಪಂಡಿತ ಮುಖ್ಯವಾದವನು. ದೀಪಂಕರನಿಗೆ ಪಟ್ಟಶಿಷ್ಯನೂ ಉತ್ತರಾಧಿಕಾರಿಯೂ ಆದ ಇವನು ತುಂಬ ಬುದ್ಧಿಶಾಲಿ, ವಿದ್ಯಾವಂತ, ವಿನಯಶೀಲ, ಅವನ ಆಚಾರ ಕಟ್ಟುನಿಟ್ಟಾದುದು, ಶೀಲ ಬಿಗಿಯಾದುದು, ಯಾವ ಅತಿರೇಕಕ್ಕೂ ವಡೆಯಿರದಂತಹ ಮನೋವೃತಿ ಅವನದು. ಸೂತ್ರಗಳನ್ನೂ, ತಂತ್ರಗಳನ್ನು ಓದಿ ಅರಗಿಸಿಕೊಂಡಿದ್ದ ಈತ ತನ್ನ ದೇಶದಲ್ಲಿ ಬೌದ್ಧ ಧರ್ಮದ ಹೆಸರಿನಲ್ಲಿ ಹಲವಾರು ಅನಾಚಾರಗಳು ಬೆಳೆದು ಬಂದಿರುವುದನ್ನು ಕಂಡು ಅವನ್ನು ಹೇಗಾದರೂ ತೊಡೆದು ಹಾಕಬೇಕೆಂದು ಹವಣಿಸುತ್ತಿದ್ದ.

ದೀಪಂಕರನನ್ನು ಕಂಡು ಈ ವಿಚಾರ ಪ್ರಸ್ತಾಪಿಸಿದ. ಅವರಿಬ್ಬರಿಗು ಎಲ್ಲ ವಿವರಗಳಲ್ಲಿಯೂ ಒಮ್ಮತವಿದ್ದಿತು. ಧರ್ಮ ಇರುವುದು ಜನರನ್ನು ಬೆಳಕಿನ ಕಡೆ ಒಯ್ಯಲೆಂದು; ಕತ್ತಲೆಯಲ್ಲಿ ಉಳಿಸಲೆಂದಲ್ಲ, ಧರ್ಮವನ್ನು ಜನರಿಗೆ ಮುಟ್ಟಿಸುವ ಭಿಕ್ಷುಗಳು ಸರಿಯಾಗಿ ನಡೆದುಕೊಳ್ಳದಿದ್ದರೆ ಜನರು ತಪ್ಪುದಾರಿಯನ್ನು ಹಿಡಿಯುವುದು ಸಹಜವೇ ಅಲ್ಲವೆ? ಶೀಲವಿಲ್ಲದ ಭಿಕ್ಷು ಜನರ ಜೀವನದಲ್ಲಿ ಮುಳ್ಳಿದಂತೆ. ಅಂತಹ ಭಿಕ್ಷುಗಳನ್ನು ಮಠಗಳಿಂದ ಓಡಿಸುವುದು ಅತ್ಯವೆಂದು ಬ್ರೋಮ್‌ (ಜಯಾಕರನ ಮತ್ತೊಂದು ಹೆಸರು) ಭಾವಿಸಿದ. ಟೆಬೆಟ್‌ನ ಬೌದ್ಧವಿಹಾರಗಳಲ್ಲಿ ಸುಧಾರಣೆ ತರಬೇಕೆಂದು ಅವನ ಕಾತರವಾಗಿದ್ದಿತು. ಈ ಕೆಲಸದಲ್ಲಿ ಅವನಿಗೆ ದೀಪಂಕರನಂತಹ ಹಿರಿಯನ ನೆರವು, ಬೆಂಬಲ ದೊರಕಿತು.

ತಾನು ಟಿಬೆಟ್‌ಗೆ ಬಂದ ಮೇಲೆ ಮೂರು ವರ್ಷಗಳ ಅನಂತರ ಭಾರತಕ್ಕೆ ಹಿಂದಿರುಗಬೇಕೆಂದು ದೀಪಂಕರ ಬಯಸಿದಾಗ ಬ್ರೋಮ್, “ಮಹಾಸ್ವಾಮಿ, ತಾವು ಈ ಟಿಬೆಟ್‌ನಿಂದ ಹೊರಟುಹೋದರೆ ಧರ್ಮದ ಕೆಲಸ ಇಲ್ಲಿಗೇ ನಿಂತಂತೆಯೇ! ತಾವು ಆರಂಭಿಸಿದ ಒಳ್ಳೆಯ ಕೆಲಸ ಒಂದು ರೂಪ ತಾಳುವವರೆಗೆ ದಯಮಾಡಿ ಇಲ್ಲಿಯೇ ಇರಿ. ಟಿಬೆಟ್‌ ದೇಶಕ್ಕೆ ತಮ್ಮ ಮಾರ್ಗದರ್ಶನ ಬೇಕೇ ಬೇಕು” ಎಂದು ಅಂಗಲಾಚಿ ಬೇಡಿಕೊಂಡ. ಜನರ ಒತ್ತಾಯವೂ ಒತ್ತಾಸೆಯೂ ಸೇರಿದವು. ಆಗ ದೀಪಂಕರ ಭಾರತಕ್ಕೆ ಹಿಂದಿರುಗುವ ಯೋಚನೆ ಬಿಟ್ಟು ಟಿಬೆಟ್‌ನಲ್ಲೇ ಇರಲು ಒಪ್ಪಿಕೊಂಡ. ಬ್ರೋಮ್ ದೀಪಂಕರನ ಮೇಲೆ ’ಅತೀಶಮಹಾಪ್ರಭು ಸ್ತ್ತೋತ್ರ’ ವೊಂದನ್ನು ಟಿಬೆಟ್‌ ಭಾಷೆಯಲ್ಲಿ ರಚಿಸಿದ್ದಾನೆ.

ಟಿಬೆಟ್‌ ದೇಶದ ದೊಡ್ಡ ಪಂಡಿತರೆಲ್ಲ ದೀಪಂಕರನ ಬಳಿ ಶಿಷ್ಯರಾಗಿ ನಿಂತರು. ಅವನು ಹೋದೆಡೆಯಲ್ಲೆಲ್ಲ ಜನರು ನೆರೆದು ಅವನ ಮಾತನ್ನು ಕೇಳಲು ಕಾತರರಾಗಿದ್ದರು. ಅವನು ಟಿಬೆಟ್‌ಗೆ ಕಾಲಿಟ್ಟಾಗಿನಿಂದ ಅವನು ತೀರಿಕೊಳ್ಳುವವರೆಗೂ ದೇಶದಲ್ಲೆಲ್ಲ ತುಂಬ ಸಂಭ್ರಮದ ವಾತಾವರಣ ಮೂಡಿತ್ತು. ಟಿಬೆಟ್‌ನ ಹಲವಾರು ಕಡೆ ದೀಪಂಕರನು ವಿಹಾರಗಳನ್ನು ಮಠಗಳನ್ನೂ ದೇಗುಲಗಳನ್ನೂ ಕಟ್ಟಿಸಿದ. ಶಿಷ್ಯರನ್ನು ತಯಾರು ಮಾಡಿದ, ಜನರಿಗೆ ಧರ್ಮದ ಬಗ್ಗೆ ತಿಳಿಯ ಹೇಳಿದ; ಗ್ರಂಥಗಳನ್ನು ರಚಿಸಿದ. ಜನರಿಗೆಲ್ಲ ದೀಪಂಕರನ ಮೇಲೆ ಪ್ರಿತಿಯೂ ಭಕ್ತಿಯೂ ಬೆಳೆದವು.ಪ್ರಣಿಧಾನಜ್ಞಾನನೆಂಬ ಚಿತ್ರಗಾರನೊಬ್ಬ ದೀಪಂಕರನನ್ನು ಕಂಡೊಡನೆ ಅವನ ಸೌಂದರ್ಯ-ಗಾಂಭೀರ್ಯಗಳಿಗೆ ಮನಸೋತು ಅವನೊಂದಿಗೇ ಇರುವ ಸಲುವಾಗಿ ಭಿಕ್ಷುವಾಗಿಬಿಟ್ಟ. ಸಂದರ್ಭ ಒದಗಿದಾಗಲೆ ದೀಪಂಕರನ ಭಾವಚಿತ್ರವನ್ನು ಬಿಡಿಸುತ್ತಿದ್ದ ಈ ಕಲಾವಿದ. ದೀಪಂಕರನ ಸುಮಾರು ಎಪ್ಪತ್ತು ಚಿತ್ರಗಳು ಈ ಕಲಾವಿದನ ಕುಂಚದಿಂದ ಮೈದೆಳೆದು ಟಿಬೆಟ್‌ನಲ್ಲಿ ಬಳಕೆಗೆ ಬಂದವು. ಕೆಲವು ಇಂದಿಗೂ ಉಳಿದಿವೆ.

ಅದ್ಭುತ ವಾದ ಬದುಕು

ದೀಪಂಕರನು ಟಿಬೆಟ್‌ನಲ್ಲಿ ಜರುಗಿಸಿದ ಸಾಧನೆ ದಿಟವಾಗಿ ಅದ್ಭುತವಾದುದು. ಧರ್ಮಕ್ಕೆ ಒದಗಿದ್ದ ಕೊಳೆಯನ್ನೆಲ್ಲ ತೊಡೆದುಹಾಕಿ, ಅದರ ಜಾಡ್ಯವನ್ನು ನೀಗಿಸಿ, ಹೊಸ ಕಳೆಯನ್ನೂ ಹೊಸ ಚೇತನವನ್ನೂ ಕೊಟ್ಟವನು ಇವನು. ದಿಟವಾದ ಧರ್ಮವೆಂದರೇನೆಂದು ದೀಪಂಕರ ಬಾಯಿಮಾತಿನಿಂದ ಮಾತ್ರವಲ್ಲದೆ ತನ್ನ ಬದುಕಿನಿಂದ ಟಿಬೆಟ್‌ನ ಜನರಿಗೆ ತೋರಿಸಿಕೊಟ್ಟ. ’ನುಡಿದಂತೆ ನಡೆವ, ನಡೆದಂತೆ ನುಡಿವ’ ಶೀಲವಂತ ಇವನು ಎಂದು ಟಿಬೆಟ್‌ನ ಜನರು ಹಾಡಿ ಹೊಗಳಿದರು. ಟಿಬೆಟ್‌ನಲ್ಲಿ ಅವನು ನಡೆದ ಎಡೆಯೆಲ್ಲ ಪವಿತ್ರವಾಯಿತು, ಅವನು ತಂಗಿದ ಹಳ್ಳಿಯೆಲ್ಲ ಪ್ರಸಿದ್ಧವಾಯಿತು. ನಮ್ಮ ದೇದಲ್ಲಿ ’ಇಲ್ಲಿ ರಾಮನು ಬಾಣದಿಂದ ನೀರು ತೆಗೆದ’, ಇಲ್ಲಿ ಸೀತೆ ಸ್ನಾನ ಮಾಡಿದಳು’, ಇಲ್ಲಿ ಪಾಂಡವರಿದ್ದರು’ ಎಂದು ಮುಂತಾಗಿ ಅಲ್ಲಲ್ಲಿ ಹೇಳುವ ವಾಡಿಕೆಯಿಲ್ಲವೆ? ಹಾಗೆಯೇ ಟಿಬೆಟ್‌ನಲ್ಲಿ ’ಇಲ್ಲಿಗೆ ದೀಪಂಕರ ಬಂದಿದ್ದ’, ಇಲ್ಲಿ ದೀಪಂಕರ ಪ್ರವಚನ ಮಾಡಿ’ ಎಂದು ಹೇಳುತ್ತ ಹಲವಾರು ಸ್ಥಳಗಳನ್ನು ತೋರಿಸುತ್ತಾರೆ.

ದೀಪಂಕರನ ಬದುಕನ್ನು ನಿರೂಪಿಸುವ ಟಿಬೆಟ್ ಭಾಷೆಯ ಪುಸ್ತಕಗಳು ಹಲವಾರು ಇವೆ. ಅವುಗಳಲ್ಲಿ ದೀಪಂಕರನ ಗುಣಗಳನ್ನು ಅವನ ಕಾಲದಲ್ಲಿಯೇ ಇದ್ದವರು ಬಣ್ಣಿಸಿದ್ದಾರೆ. ಇವುಗಳಿಂದ ಸ್ಪಷ್ಟವಾಗುವ ಚಿತ್ರ ಇದು. ದೀಪಂಕರನ ಸುತ್ತ ಯಾವಾಗಲೂ ಶಿಷ್ಯರು ನೆರೆದಿರುತ್ತಿದ್ದರು. ಅವನ ನಿಲುವು ಧೀರಗಂಭೀರವಾಗಿದ್ದಿತು, ನೋಡಿದೊಡನೆ ಯಾರಾದರೂ ಗೌರವದಿಂದ ನಮಸ್ಕರಿಸುವರು. ಮುಖದಲ್ಲಿ ಹೊಳೆಯುವ ಕಣ್ಣುಗಳು. ಮುದುಕನಾಗಿದ್ದರೂ ಸೌಂದರ್ಯ ಕುಂದಿರಲಿಲ್ಲ. ನಸುನಗು ಅವನ ತುಡಿಗಳ ಮೇಲೆ ಕುಣಿದಾಡುತ್ತಿದ್ದಿತು; ಅವನ ಮಾತು ತುಂಬ ನಯ. ಅವನು ಗಟ್ಟಿಯಾಗಿ ಮಾತನಾಡಿದುದನ್ನಾಗಲಿ ಗದರಿಸಿಕೊಂಡುದನ್ನಾಗಲೀ ಸಿಟ್ಟಿಗೆದ್ದುದನ್ನಾಗಲೀ ಅಪಹಾಸ್ಯ ಮಾಡಿದುದನ್ನಾಗಲೀ ಯಾರು ಕಂಡರಿಯರು. ಮಾತುಮಾತಿಗೆ ಸಂಸ್ಕೃತ ಶ್ಲೋಕಗಳನ್ನು ಉದ್ಧರಿಸುವುದು ಅವನ ವಾಡಿಕೆ. ಅವನ ಧ್ವನಿ ಮಂಜುಳವಾಗಿರುತ್ತಿದ್ದಿತು, ಮಾತು ಅಡೆ ತಡೆಯಿಲ್ಲದೆ ಹೊಳೆಯಂತೆ ಹರಿಯುತ್ತಿದ್ದಿತು. ಪದಗಳ ಉಚ್ಛಾರಣೆ ಸ್ಫುಟವಾಗಿ, ಸ್ಪಷ್ಟವಾಗಿ ಇರುತ್ತಿದ್ದಿತು. ಅವನ ತೌರೂರು ಬಂಗಾಳವಾದುದರಿಂದ ಮಾತಿನ ನಡುವೆ ಬಂಗಾಳಿಯಲ್ಲಿ ’ಅತಿ ಬಾಲ , ಅತಿ ಮಂಗಳ’ (ತುಂಬ ಒಳ್ಳೆಯದು, ತುಂಬ ಮಂಗಳ) ಎಂಬ ಬಳಕೆ ನುಸುಳಿ ಬರುತ್ತಿದ್ದಿತು. ಕೂಡುವಾಗ, ನಿಲ್ಲುವಾಗ ಪದೇ ಪದೇ ’ಆರ್ಯ-ತಾರೆ’, ’ಆರ್ಯಅಚಲ’, ಮಹಾಕಾರುಣಿಕ’, ’ಶಾಕ್ಯಮುನಿ’ ಎಂಬ ಉದ್ಗಾರ ಕೇಳಿಬರುತ್ತಿದ್ದಿತು.

ಅವನಿಗೆ ಟಿಬೆಟ್‌ ಜನ ಕುಡಿಯುತ್ತಿದ್ದ ಚಹಾ ಪಾನೀಯ ತುಂಬ ಮೆಚ್ಚುಗೆಯಾಯಿತು. ದೀಪಂಕರ ಟಿಬೆಟ್‌ ದೇಶದ ಗಡಿಯನ್ನು ಮುಟ್ಟಿದಾಗ ರಾಜನ ಪರಿವಾರದವರು ದೀಪಂಕರನಿಗೆ ಈ ಪಾನೀಯವನ್ನು ಕೊಟ್ಟು ಸ್ವಾಗತಿಸಿದರು. ಅದನ್ನು ಕುಡಿದ ನಂತರ ದೀಪಂಕರ ತನ್ನ ಜೊತೆಯಲ್ಲಿದ್ದ ಶಿಷ್ಯ ಜಯಶೀಲನನ್ನು ಕುರಿತು, “ಈ ಪಾನೀಯದ ಹೆಸರೇನು?” ಎಂದು ಕೇಳಿದ. ಜಯಶೀಲ, “ಇದನ್ನು ಚಾ ಎನ್ನುತ್ತೇವೆ, ಈ ದೇಶದಲ್ಲಿ ಸಂನ್ಯಾಸಿಗಳೂ ಇದನ್ನು ಕುಡಿಯುತ್ತಾರೆ” ಎಂದು ಹೇಳಿದ. ದೀಪಂಕರ, “ತುಂಬ ಚೆನ್ನಾಗಿದೆ. ಈ ದೇಶದ ಸಂನ್ಯಾಸಿಗಳ ಶೀಲಶುದ್ಧಿಯ ಪುಣ್ಯದಿಂದಲೇ ಈ ಪಾನೀಯ ಮೊದಲಾಗಿರಬೇಕು!” ಎಂದ. ದೀಪಂಕರನ ಈ ಪ್ರಶಂಸೆಯಿಂದ ಚಹಾ ಪಾನೀಯದ ಜನಪ್ರೀತಿ ಇನ್ನೂ ಹೆಚ್ಚಿತು! ಆ ದೇಶದ ಭಿಕ್ಷುಗಳು ದಿನಕ್ಕೆ ಏನಿಲ್ಲವೆಂದರೂ ಐವತ್ತು-ಅರವತ್ತು ಬಟ್ಟಲುಗಳಷ್ಟು ಚಹಾ ಕುಡಿಯುತ್ತಾರೆ; ಧಾರ್ಮಿಕ ವಿಧಿಗಳ ಸಂದರ್ಭದಲ್ಲಿಯೂ ಚಹಾ ಸೇವನೆ ತಪ್ಪುವುದಿಲ್ಲ.

ಅವನ ಬದುಕಿನಲ್ಲಿ ಅದ್ಭುತ ಪ್ರಸಂಗಗಳು ಹಲವಾರು ಜರುಗಿದವು ಎಂದು ಹೇಳುತ್ತಾರೆ. ದೀಪಂಕರನು ಲ್ಹಾಸಾ ನಗರದ ಪ್ರಸಿದ್ಧ ದೇವಾಲಯಕ್ಕೆ ಬಂದಾಗ ಗರ್ಭಗುಡಿಯೊಳಗಿನಿಂದ ಉದ್ದ ಗಡ್ಡದ ಮುದುಕನೊಬ್ಬ ಹೊರಬಂದು, “ಮಹಾಪಂಡಿತನಿಗೆ ಸುಸ್ವಾಗತ!ವಿಜಯಿಯಾಗುವೆ!” ಎಂದು ಹೇಳಿ ಮತ್ತೆ ಗರ್ಭಗುಡಿಯೊಳಗೆ ಹೋದ. ದೀಪಂಕರನೂ ಅವನನ್ನರಸಿ ಗರ್ಭಗುಡಿಯೊಳಗೆ ಹೋಗಲು ಆ ಮುದುಕ ಎಲ್ಲಿಯೂ ಕಾಣಲಿಲ್ಲ. ಒಳಗಿನ ಅವಲೋಕಿತೇಶ್ವರ-ಬೋಧಿಸತ್ತ್ವನ ಮೂರ್ತಿ ನಸುನಗುತ್ತಿದ್ದಿತು. ದೀಪಂಕರನ, ’ಎಂಥ ದುರ್ದೈವಿ ನಾನು! ಅವಲೋಕಿತೇಶ್ವರನನ್ನು ಸಂಧಿಸಲಾಗಲಿಲ್ಲವಲ್ಲಾ” ಎಂದು ಮರುಗಿದ.

ದೇವಾಲಯದ ಸುತ್ತ ನೋಡುತ್ತಿರುವಾಗ ಅವನ ಮನಸ್ಸಿನಲ್ಲಿ ’ಈ ಜನರು ಈ ಭವ್ಯವಾದ, ಸುಂದರವಾದ ಗುಡಿಯನ್ನು ಹೇಗೆ ಕಟ್ಟಿದರೋ?’ ಎನ್ನಿಸಿತು. ಅಷ್ಟು ಹೊತ್ತಿಗೆ ಸರಿಯಾಗಿ ಹುಚ್ಚಿಯಂತೆ ತೋರುತ್ತಿದ್ದ ಮುದುಕಿಯೊಬ್ಬಳು ಇವನ ಬಳಿ ಬಂದು, “ಈ ಗುಡಿಯನ್ನು ಕಟ್ಟಿದ ಬಗೆಯನ್ನು ತಿಳಿಯಬೇಕೆ ನೀನು?” ಎಂದು ಕೇಳಿದಳು. ತನ್ನ ಮನಸ್ಸಿನಲ್ಲಿ ಮೂಡಿದುದನ್ನು ಅರಿತುಕೊಂಡ ಈ ಮುದುಕಿ ದೇವತೆಯೇ ಆಗಿರಬೇಕೆಂದು ದೀಪಂಕರ ನಿಶ್ಚಯಿಸಿ ಮನಸ್ಸಿನಲ್ಲೇ ಆಕೆಗೆ ನಮಸ್ಕಾರ ಮಾಡಿ, ’ಹೌದು, ತಿಳಿಯುವ ಕುತೂಹವಿದೆ” ಎಂದು ಹೇಳಿದ. ಅದಕ್ಕೆ ಹುಚ್ಚಿ, “ಹಾಗಾದರೆ ನೋಡು, ಗುಡಿಯ ಇತಿಹಾಸವನ್ನು ಗುಡಿಯ ಕಳಶಸ್ತಂಭದಿಂದ ನಾಲ್ಕು ಮಾರು ದೂರದಲ್ಲಿ ಭೂಮಿಯೊಳಗೆ ಹುದುಗಿಸಿಟ್ಟಿದ್ದಾರೆ. ಆದರೆ ಈ ವಿಚಾರವನ್ನು ನೀನು ಯಾರಿಗೂ ಹೇಳಬಾರದು” ಎಂದಳು. ಅನಂತರ ದೀಪಂಕರ ಆ ಸ್ಥಳವನ್ನು ಅಗೆದು ನೋಡಿದಾಗ ಗುಡಿಯ ಇತಿಹಾಸವನ್ನು ಕುರಿತ ಪುಸ್ತಕವಿದ್ದಿತು. ಆ ಪುಸ್ತಕವನ್ನು ಕೈಗೆತ್ತಿಕೊಂಡೊಡನೆ ಭಂಡಾರದೇವತೆ, “ನೀನು ಇದನ್ನು ಓದಬಹುದು, ಬೇಕಿದ್ದರೆ ಬರೆದುಕೊಳ್ಳಲೂಬಹುದು. ಆದರೆ ಒಂದೇ ಹಗಲಲ್ಲಿ ಎಷ್ಟು ಮಾಡಬಹುದೋ ಅಷ್ಟು ಮಾತ್ರ ಮಾಡು! ಎಂದು ಹೇಳಿದಂತೆ ಕೇಳಿಸಿತು. ಒಡನೆಯೇ ದೀಪಂಕರನು ನಾಲ್ವರು ಶಿಷ್ಯರೊಂದಿಗೆ ಅದರ ಪ್ರತಿ ಮಾಡಿಕೊಳ್ಳಲು ತೊಡಗಿದ. ಒಂದು ಪ್ರಕರಣವನ್ನು ಬಿಟ್ಟು ಉಳಿದಂತೆ ಇಡೀ ಪುಸ್ತಕವನ್ನು ಪ್ರತಿ ಮಾಡಿಕೊಂಡ. ಈ ಪುಸ್ತಕ ಇಂದಿಗೂ ಟಿಬೆಟ್‌ನಲ್ಲಿ ಮಾನ್ಯವಾಗಿದೆ.

ಹೀಗೆ ಹೋದೆಡೆಯಲ್ಲೆಲ್ಲ ದೇವತೆಗಳು ಅಲ್ಲಲ್ಲಿ ಅಡಗಿದ್ದ ಸಾರಸ್ವತ ಸಂಪತ್ತನ್ನು ದೀಪಂಕರನಿಗೆ ಒದಗಿಸದರೆಂದೂ ಅವನ್ನೆಲ್ಲ ದೀಪಂಕರನು ಪ್ರತಿ ಮಾಡಿಕೊಂಡನೆಂದೂ ಪ್ರತೀತಿಯಿದೆ. ಟಿಬೆಟ್ಟಿನ ಧಾರ್ಮಿಕ ವಾಙ್ಮಯಕ್ಕೆ ದೀಪಂಕರನ ಕೊಡುಗೆ ಹೀಗೆ ಅಪಾರವಾದುದು. ಅಮೂಲ್ಯವಾದುದು.

ನಿರ್ಯಾಣ

ದೀಪಂಕರನು ತನ್ನ ಪ್ರವಾಸ ಕಾಲದಲ್ಲಿ ಭಾರತ, ನೇಪಾಳ, ಟಿಬೆಟ್‌ಗಳಲ್ಲಿ ಹಲವಾರು ವಿಹಾರಗಳಿಗೆ ಕಾರಣನಾದನು. ಅವನು ಒಂದು ಹಳ್ಳಿಯಲ್ಲಿ ಒಂದು ರಾತ್ರಿ ತಂಗಿದ್ದನೆಂದರೆ ಆ ಹಳ್ಳಿ ಅದೇ ಕಾರಣದಿಂದಾಗಿ ಪವಿತ್ರ ಕ್ಷೇತ್ರವೆನಿಸುತ್ತಿದ್ದಿತು ಮುಂದೆ ಅವನ ಶಿಷ್ಯರು ಅಲ್ಲೊಂದು ವಿಹಾರವನ್ನು ಕಟ್ಟುವರು. ಎಲ್ಲಿಯಾದರೂ ಮೂರು-ನಾಲ್ಕು ತಿಂಗಳುಗಳ ಕಾಲ ಬೀಡುಬಿಟ್ಟದ್ದನೆಂದರೆ ಅದು ಪ್ರಸಿದ್ಧ ವಿಹಾರವೇ ಆಗುವುದು.

ದೀಪಂಕರನಿಗೆ ವಿರೋಧಿಗಳಿರಲಿಲ್ಲವೆಂದಲ್ಲ. ಯಾರು ಏನು ಒಳ್ಳೆಯ ಕೆಲಸ ಮಾಡಿದರೂ ಅದನ್ನು ಸಹಿಸದವರು ಇದ್ದೇ ಇರುವುರು; ಎಲ್ಲ ಸಜ್ಜನರಿಗೂ, ಸಾಹಸಿಗಳಿಗೂ, ಸುಧಾರಕರಿಗು ಆಗದವರು ಕೆಲವರು ತೊಂದರೆ ಕೊಡುವುದು ಸಹಜವೇ. ದೀಪಂಕರನಿಗೆ ರಾಜನು, ಜನರು ಸಲ್ಲಿಸುತ್ತಿದ್ದ ಅಪಾರ ಗೌರವನ್ನು ಕಂಡು ಹಲವರು ಕರುಬಿ ಅವನಿಗೆ ಅಪಮಾನ ಮಾಡಲು ಯತ್ನಿಸುತ್ತಿದ್ದರು. ಹೇಗಾದರೂ ಮಾಡಿ ಟಿಬೆಟ್‌ನಿಂದ ಅವನನ್ನು ಓಡಿಸಿಬಿಡಲು ಹವಣಿಸುತ್ತಿದ್ದರು. ’ದೀಪಂಕರ ಇಲ್ಲಿಗೆ ಬಂದಾಗಿನಿಂದ ಹೆಚ್ಚುತ್ತಿರುವುದು ಧರ್ಮವಲ್ಲ, ರೋಗಗಳು. ಅವನ ಬೋಧೆಯಲ್ಲಿ ಏನೇನೂ ಇಲ್ಲ; ಅವನಾಗಲಿ ಅವನ ಶಿಷ್ಯರಾಗಲೀ ಧ್ಯಾನದ ನೆವದಲ್ಲಿ ಸುಮ್ಮನೆ ಕಾಲ ಕಳೆಯುತ್ತಾರೆ ಅಷ್ಟೆ, ಸಾರ್ಥಕವಾದ ಯಾವ ಕೆಲಸವನ್ನು ಮಾಡುತ್ತಿಲ್ಲ’ ಎಂದು ಮುಂತಾಗಿ ಇವರು ಅಪಪ್ರಚಾರ ಮಾಡತೊಡಗಿದರು. ಈ ಮಾತೆಲ್ಲ ದೀಪಂಕರನ ಕಿವಿಗೆ ಬೀಳದೆ ಇರುತ್ತಿರಲಿಲ್ಲ; ಆದರೆ ಅವನು, “ಇಂತಹವರಿಂದ ಒಂದು ನುರು ಯೋಜನ ದೂರವಿರಬೇಕು ಅಷ್ಟೇ, ಮತ್ತೇನೂ ಮಾಡಲು ಬಾರದು!” ಎಂದುಹೇಳಿಬಿಡುತ್ತಿದ್ದ. ಇವನನ್ನು ಕೊಲ್ಲಬೇಕೆಂದು ಕೆಲವು ಪ್ರಯತ್ನಗಳು ನಡೆದವು. ಒಂದೊಂದು ಬಾರಿ ಇವುಗಳಿಂದ ದೀಪಂಕರನಿಗೆ ಬೇಸರವೂ ಆಗುತ್ತದ್ದಿತು. ಒಮ್ಮೆ ಒಂದು ಸಭೆಯಲ್ಲಿ ಯಾರೋ ಅವನನ್ನು ಕೇಳಿದರು, “ಸ್ವಾಮಿ, ತಮ್ಮ ಮುಂದಿನ ಜನ್ಮದ ವಿಚಾರ ಏನು?” ಎಂದು. ಅದಕ್ಕೆ ದೀಪಂಕರ, “ಈ ವಿಚಾರವಾಗಿ ನಾನು ಹೇಳುವುದೇನಿದೆ? ಆದರೆ ಇಷ್ಟಂತೂ ಖಂಡಿತ, ನನ್ನ ಮುಂದಿನ ಜನ್ಮ ಟಿಬೆಟ್‌ದೇಶದಲ್ಲಂತೂ ಆಗುವುದಿಲ್ಲ!” ಎಂದು ನಗುತ್ತ ಹೇಳಿದ. ಅದೇಕೆಂದು ಕೇಳಿದುದಕ್ಕೆ ಟಿಬೆಟ್‌ನ ಜನರಾಗಿ ನಿಮಗೆ ಗುರುಗಳನ್ನು ಕಂಡುಕೊಳ್ಳುವ ಬಗೆ ತಿಳಿಯದು. ಇತರ ಮನುಷ್ಯರಂತೆಯೇ ಅವನೂ ಒಬ್ಬ ಎಂದು ತಾತ್ಸಾರ ಭಾವನೆಯಿಂದ ಕಾಣುತ್ತೀರಿ. ಅವನ ಉಪದೇಶವನ್ನು ಕೇಳುತ್ತೀರಿ ಅಷ್ಟೇ. ಅದರಂತೆ ನಡೆಯುವುದಿಲ್ಲ ಎಂದು ವಿವರಿಸಿದ.

ಆದರೆ ವಿರೋಧಕ್ಕಿಂತ ಪ್ರೀತಿಯೇ ಹೆಚ್ಚಾಗಿ ಆ ದೇಶದಲ್ಲಿ ಅನವ ಪಾಲಿಗೆ ಬಂದುದರಿಂದ ವಿರೋಧಿಗಳ ಪ್ರಯತ್ನವೇನೂ ಫಲಿಸಲಿಲ್ಲ. ವಿರೋಧಿಗಳನ್ನು ರಾಜ ಶಿಕ್ಷಿಸುವೆನೆಂದಾಗ ದೀಪಂಕರ ಬೇಡವೆಂದು ತಡೆದ. ಅವನ ಕರುಣೆ ಅಪಾರವಾಗಿದ್ದಿತು. ಕಾಲಕ್ರಮದಲ್ಲಿ ಇವರೆಲ್ಲ ಅವನ ಅನುಯಾಯಿಗಳಾಗಿ ನಿಲ್ಲುವಂತಾಯಿತು.

ದೀಪಂಕರನಿಗೆ ಎಪ್ಪತ್ತೆರಡು ವರ್ಷಗಳಾಗಲು ಅವನ ಮೈಯಲ್ಲಿ ಬಲ ಉಡುಗತೊಡಗಿತು. ತನ್ನ ಬದುಕಿನ ಅವಧಿ ಬಹಳ ಉಳಿದಿಲ್ಲವೆಂದುಕೊಂಡು ತಾನು ಆರಮಭಿಸಿದ್ದ ಕೆಲಸಗಳನ್ನೆಲ್ಲ ಪೂರ್ಣಗೊಳಿಸುವುದರಲ್ಲಿ ತೊಡಗಿದ. ತನ್ನ ಎಪ್ಪತ್ತಮೂರನೆಯ ವಯಸ್ಸಿನಲ್ಲಿ (ಎಂದರೆ ೧೦೫೪ ರಲ್ಲಿ) ಕಾಯಿಲೆ ಮಲಗಿದ. ತನ್ನ ಶಿಷ್ಯ ಬ್ರೋಮ್‌ನನ್ನು ಕರೆದು, “ನನ್ನ ಗುರುಗಳೆಲ್ಲ ತುಷಿತ ಸ್ವರ್ಗದಲ್ಲಿದ್ದಾರೆ. ಅವರನ್ನು ಕಾಣಲು ನಾನೂ ಅಲ್ಲಿಗೆ ಹೋಗಬೇಕು” ಎಂದು ಹೇಳಿದ. ಇದರ ಅರ್ಥವನ್ನು ಅರಿತು ಬ್ರೋಮ್‌ ಅಳಲು ಮೊದಲು ಮಾಡಿದ. ಅವನನ್ನು ಸಂತೈಸುತ್ತ ದೀಪಂಕರ, “ದುಃಖ ಪಡಬೇಡ, ಸಾವು ಯಾರಿಗೂ ತಪ್ಪಿದ್ದಲ್ಲ; ಮತ್ತೆ ನಾವು ಸ್ವರ್ಗದಲ್ಲಿ ಸಂಧಿಸುತ್ತೇವೆ. ನಾನು ತೀರಿಕೊಂಡ ಮೇಲೆ ನನ್ನ ಪ್ರತಿಮೆಯೊಂದನ್ನು ಮಾಡಿಸಿ ಭಾರತದೇಶಕ್ಕೆ ಕಳುಹಿಸು. ಇಲ್ಲಿ ನನ್ನ ಕೆಲಸವನ್ನು ನೀನು ಮುಂದುವರಿಸು; ಅದಕ್ಕಾಗಿ ವಿಹಾರವೊಂದನ್ನು ಏರ್ಪಡಿಸಿಕೋ. ಲೌಕಿಕ ವ್ಯವಹಾರದಲ್ಲಿ ಮಾತ್ರ ಮುಳುಗಿಬಿಡಬೇಡ! ಅದರ ಆಕರ್ಷಣೆಯಿಂದ ದುರ ಇರು” ಎಂದು ಹೇಳಿ ಸಮಾಧಾನದಿಂದ ಪ್ರಾಣಬಿಟ್ಟ.

ಬ್ರೋಮ್ ಮೊದಲಾಗಿ ಶಿಷ್ಯರು ಅವನ ಕಳೇಬರವನ್ನು ವಿಧಿಯಿಂದ ಗೌರವಿಸಿ, ಪೂಜೆಸಿ, ಬೆಂಕಿಗೆ ಒಪ್ಪಿಸಿದರು; ಅವನ ಚಿತೆಯ ಬೂದಿಯನ್ನು ಮೂಲಿಕೆಗಳೊಂದಿಗೆ ಗಂಧದ ಮರದೊಂದಿಗೆ ಬೆರೆಸಿ ಅದರ ಬಹುಭಾಗವನ್ನು ರ್ವ-ಸ್ಗ್ರೆಂಗ್ ಎಂಬ ವಿಹಾರಕ್ಕೆ ಕೊಟ್ಟರು. ಅಲ್ಲಿ ಈ ಅವಶೇಷವನ್ನು ಬಳ್ಳಿಯ ಕರಂಡದಲ್ಲಿಟ್ಟು ಅದರ ಮೇಲೊಂದು ಸ್ತೂಪವನ್ನು ಕಟ್ಟಿದರು. ಚಿತೆಯ ಬೂದಿಯನ್ನು ಕರಂಡಗಳಲ್ಲಿಟ್ಟು, ಅದರ ಸಮಾಧಿ ಮೇಲೆ ಮಂದಿರಗಳನ್ನು ಕಟ್ಟಿಸಿದರು. ಇವಕ್ಕೆ ಚೈತನ್ಯಗಳೆಂದು ಹೆಸರು. ಇದನ್ನು ಜನರು ಪೂಜಿಸಿ ದೀಪಂಕರನನ್ನು ನೆನೆಸಿಕೊಳ್ಳತೊಡಗಿದರು.

ಬ್ರೋಮ್ ಚರಮಗಿತೆಯೊಂದನ್ನು ರಚಿಸಿ, ಸ್ವಾಮಿ, ಈ ಹಿಮಾಲಯ ರಾಜ್ಯದಲ್ಲಿ ತಮ್ಮನ್ನು ನನಗಿಂತ ಹೆಚ್ಚಿನ ಶ್ರದ್ಧೆಯಿಂದ ಗೌರವಿಸುವವರಿದ್ದಾರೆ. ಆದರೂ ತಾಯಿ ತನ್ನ ಮಗುವಿನ ಮೇಲೆ ತೋರಿಸುವ ಮಮತೆಯಿಂದ ತಾವು ನನ್ನ ಎಲ್ಲ ಜನ್ಮಗಳಲ್ಲಿಯೂ ನನ್ನಗುರುಗಳಾಗಿದ್ದುಕೊಂಡು ದಾರಿ ತೋರಿಸಿ, ಮಹಾತ್ಮರೇ, ಎಲ್ಲ ಕಾಲಗಳಲ್ಲಿಯೂ ಎಲ್ಲೆಡೆಗಳಲ್ಲಿಯೂ ನನ್ನ ಒಡೆಯರಾಗಿರಿ. ಸಂಪೂರ್ಣ ಸಂಬೋಧಿಯನ್ನು ನಾನು ಪಡೆಯುವಂತೆ ಉಪದೇಶ ಮಾಡಿ.