ನಾ ಬಂದೆ-
ಮೊದಲ ಸ್ಪಂದನದಿಂದೆ,
ಅಂದಿನಿಂದಿಂದಿಗೂ ಸಾಕ್ಷಿಯೊಲು ನಿಂದೆ !

ಲಕ್ಷ ನಕ್ಷತ್ರ ನೀಹಾರಿಕಾ ನಭದ
ರಾಸಲೀಲೆಯೊಳಿದ್ದೆ ;
ಒಮ್ಮೆ, ಓ ಅಂದೊಮ್ಮೆ
ಗ್ರಹದ ಘರ್ಷಣೆಯಾಯ್ತು,
ಹುಡಿಯೊಂದು ಬಿತ್ತು.

ಗಿರಗಿರನೆ ತಿರುಗಿತ್ತು ಅಗ್ನಿ ಗೋಳದ ಬುಗುರಿ :
ಶೂನ್ಯಸಿಂಹಾಸನದಿ ಜ್ಯೋತಿಲಿಂಗ !
ಜಡೆಯ ಜ್ವಾಲೆಗೆ ಬೆದರಿ ಮತ್ತೊಮ್ಮೆ ಸ್ಪಂದಿಸಿತು
ಈ ವಿಶ್ವರಂಗ !

ಯುಗಯುಗವನೊಂದೊಂದೆ ಬೊಗಸೆಯಲಿ ಮುಕ್ಕುಳಿಸಿ
ಸಾಗಿತ್ತು ನಟರಾಜನಗ್ನಿ ನೃತ್ಯ !
ಉರಿಯ ಹೆಗ್ಗಡಲಲೆಯ ಕೋವರನ ಚಕ್ರದಲಿ
ರೂಪುಗೊಳ್ಳುತಲಿತ್ತು ಈ ಲೋಕಸತ್ಯ !
ಆದಿಕವಿ ಚಿತ್ತದಲಿ ನವಕಾವ್ಯದುದಯಕ್ಕೆ
ನಡೆಯುತ್ತಿತ್ತನಂತ ರಸಘರ್ಷಣ !
ಕಾಲಲಬ್ಧಿಗೆ ಕಾದು ಬಿಡುಗಡೆಯ ಬಯಸಿತ್ತು
ಪ್ರಾಣ ಭ್ರೂಣ !

ಇಲ್ಲಿ ನಿಂತನು ಕೆಳಗೆ ಋಷಿ ಭಗೀರಥದೇವ
ವ್ಯೋಮಕೇಶನ ಪಾದಮೂಲದಲ್ಲಿ :
“ಇಳಿದು ಬಾ ತಾಯಿ ಇಳಿದು ಬಾ.”

ಓಂ ! ಇಳಿದು ಬಂದಳು ತಾಯಿ ಆದಿಶಕ್ತಿ
ರಸಾಗ್ನಿಗಾಗಿತ್ತು ಭಾವಮುಕ್ತಿ !
ನಕ್ಕು ತಲೆದೂಗಿದವು ಖಗ ಮಿಗ ಹಸಿರು ಹೂ ಹಣ್ಣು
ಗುಡ್ಡ ಬೆಟ್ಟ,
ಬೆಳೆದು ನಿಂತವು ಎಲ್ಲ ಒಂದೊಂದು ಮಟ್ಟ ;
ನಾ ಬಂದೆ, ಎಲ್ಲ ಪರಿಣಾಮಗಳ ಜೊತೆಗೆ ಹರಿದು
ಒಳಗೆ ಬೆರೆದು !

ಕತ್ತಲೆಯೆ ಬೆಳಕಾಯ್ತೊ
ಬೆಳಕೆ ಕತ್ತಲೆಯಾಯ್ತೊ,
ಬೆಳಕು ಕತ್ತಲ ಕದನ ಮೊದಲಾಯಿತು ;
ಜೀವ ಜೀವದ ನೂರು ಹುಟ್ಟುಸಾವಿನ ಪಗಡೆ
ಸಾಗುತಿತ್ತು
*     *     *     *

ನಾ ಬಂದೆ,
ಮೊದಲ ಸ್ಪಂದನದಿಂದೆ
ಅಂದಿನಿಂದಿಂದಿಗೂ ಕಣ್ಣಾಗಿ ನಿಂದೆ !

ಇರವಿನಾಳವ ಕಡೆದು ಅರಿವ ಪಡೆದರು ಅವರು
ಆರ್ಯಕುಲಸಾಧಕರು ಮನುಮುನಿಗಳು.
“ಏಕಂ ಸತ್ ವಿಪ್ರಾ ಬಹುಧಾ ವದಂತಿ”
ಮಂತ್ರ ಹೊಮ್ಮಿತು ಮಿಡಿದು ವಿಶ್ವವೀಣೆಯ ತಂತಿ !
ಒಡನೆಯೇ-
ಒಳಗೆ ಮಲಗಿದ ಗರುಡ ಗರಿಗೆದರಿ ಬಂದ,
ಮುಗಿಲಿನಗಲದ ಗರಿಯ ಬೀಸಾಟದಿಂದ
ಕಾಡುಮೇಡಿಗೆ ದನಕೆ
ಮಿಗಕೆ ಹಕ್ಕಿಗೆ ಜನಕೆ

ಕಳಚಿತ್ತು ಬಂಧ !

ಅವತಾರ ಅವತಾರ, ಲೆಕ್ಕವಿಲ್ಲದ ನೂರು
ಅವತಾರ ಬಂತು ;
ತನ್ನ ತಾನೇ ಸೃಜಿಸಿ ತನ್ನ ತಾನೇ ಕೊಲುವ
ಲೀಲೆಗಳ ಮಣಿಯೊಳಗೆ ಉದ್ಧಾರ ತಂತು !
ನಾ ಬಂದೆ,
ಆ ಎಲ್ಲ ಕತೆಗಳನು ನಾ ಹೊತ್ತು ತಂದೆ
ಕೂರ್ಗಣೆಯ ಸುಯ್ಲುಗಳ ಕೇಳುತ್ತ ಬಂದೆ
ಇಂದು ಸಿಡಿಗುಂಡುಗಳ ಹೊಗೆಯೊಳಗೆ ನಿಂದೆ
ರಾಮ ರಾವಣರನ್ನು ನಾ ಕರೆದು ತಂದೆ.
*     *     *     *
ನನಗೆ ಹುಟ್ಟಿದ ಹಬ್ಬ !
ನನಗೆಷ್ಟು ವರುಷ ?
“ನಾ ತೊಟ್ಟ ದೇಹಗಳ ಲೆಕ್ಕ
ಇಡುವರಾ ಸೊಕ್ಕ
ಯಮಾ ನೋಡಿ ನಕ್ಕ”
ಆದರೂ ಸುರಿದಿತ್ತು ಹರಕೆಗಳ ವರುಷ !
*     *     *     *
ಬಂದ ಕರು ಬೆರಗುಗಣ್ಣನು ತೆರೆಯೆ,
ಮೇಲಿತ್ತು ನೊಗದ ನೇಣು !
ಎಲ್ಲಿ ಹೋಯಿತೊ ಏನೊ, ಮೊಲೆಯನುಣಿಸುವೆನೆಂದು
ಕನಸಿನಲಿ ನಚ್ಚಿತ್ತ ಕಾಮಧೇನು !
ಎತ್ತ ನೋಡಿದರೂನು, ಉರಿಯ ಕರೆಯುವ ಬಾನು,
ದಣಿದ ನಾಲಗೆಗಿಲ್ಲ ತೊಟ್ಟ್ಟು ಜೇನು,
ನೊಗದ ಭಾರಕೆ ಬಾಗಿ ಕತ್ತು ಉಳುಕಿದರೇನು
ಬಾಳ ಬಂಡಿಯ ಮುಂದೆ ಎಳೆಯೊ ನೀನು.

ಇಂದು ಹುಟ್ಟಿದ ಹಬ್ಬ-ಗೆಳೆಯರೆಲ್ಲರ ಹರಕೆ
ಮನದ ಬಾಗಿಲಿಗಾಯ್ತು ಹೊಸ ತೋರಣ !
(ಇಂದುವರೆಗೇನಿಲ್ಲ ; ಆದರೂ ಮುಂದೆಲ್ಲ)
ಒಳ್ಳಿತಾಗಲಿ ಎನ್ನುವ ಆಶ್ವಾಸನ !
*     *     *     *
ನಾ ಬಂದೆ,
ಮೊದಲ ಸ್ಪಂದನದಿಂದೆ-
ಮುಂದೇನು ಎಂದೆ !
ಬಾಳ ಬೀದಿಯ ಬದಿಗೆ ಬೆಳ್ಗೊಳದ ಬೆಟ್ಟದಲಿ
ಗೊಮ್ಮಟನ ಕಂಡೆ,
ಮುಗಿಲಗಲದೆದೆಯಲ್ಲಿ ಚಿಕ್ಕೆಗಳ ದಂಡೆ !
ಚಂದ್ರಹಾಸನ ಮುಂದೆ
ಹಣತೆಯೊಲು ನಿಂದೆ !