ಬೆಳಿಗ್ಗೆ ಎದ್ದಾಗಲೇ ಗಂಟುಮೋರೆ
ಹಗಲೆಲ್ಲ ದುಮುದುಮು.
ಸಂಜೆಯ ಹೊತ್ತಿಗಾಗಲೇ ನಿಟ್ಟುಸಿರು
ಇರುಳೆಲ್ಲ ಕಣ್ಣೀರು.
ಹೆಜ್ಜೆಗೆಲ್ಲಾ ಕಚಪಿಚಿ ಕೆಸರು,
ಮರಗಿಡವೆಲ್ಲ ತೊಪ್ಪಟ್ಟೆ ತೊಯ್ದು
ರೆಕ್ಕೆಮುದುರಿದ ಹಕ್ಕಿ.
ದೀಪದೀಪಗಳ ಕಣ್ಣೆಲ್ಲ ಮಂಕು
ಮಾತುಕತೆಗಳ ಸುತ್ತ ಮೌನದಾಮೆಯ ಚಿಪ್ಪು.

ಸಾಕಪ್ಪಾ ಸಾಕು, ಇವಳ ಸಹವಾಸ.
ನಿಮಿಷಕ್ಕೊಮ್ಮೆ ಬಟ್ಟೆ ಬದಲಾಯಿಸುವ
ಚಟದವಳಂತೆ, ದಿನದಿಂದ ದಿನಕ್ಕೆ
ಭಾವಗಳ ಬದಲಾವಣೆ
ನಂಬಿದರೆ, ಬಂತು ಬವಣೆ.

ನಾವು ಹೇಳಿದ ಹಾಗೆ ಇವಳು ಕೇಳುವಳಲ್ಲ ;
ಇವಳು ಹೇಳಿದ ಹಾಗೆ ನಾವು ಕೇಳದೆಯೆ
ದಾರಿಯೇ ಇಲ್ಲ.

ಇಲ್ಲದಿದ್ದರೆ ಹೀಗೆ, ಬಿಳಿಯ ಸೆರಗೆಳೆದು
ದೀಪಾವಳಿಯ ಕಣ್ತೆರೆದು ಗಂಭೀರವಾಗಿರುವ
ಹೊತ್ತಿನಲ್ಲೆ ಇವಳು ಹೀಗಾಗಬೇಕೆ
ದಾರಿಯೆಲ್ಲಾ ನಮಗೆ ಕೆಸರಾಗಬೇಕೆ ?