ಉತ್ತರದ ಗಡಿಯಲ್ಲಿ ಎತ್ತಿರುವ ಮುಡಿಯಲ್ಲಿ
ಎಚ್ಚರದ ಕಣ್ಣಿನಲಿ ದೀಪಾವಳಿ
ಕೋವಿಯಲಗಿನ ಮೇಲೆ ಸಂಜೆ ಮುಂಜಾವುಗಳ
ಬೆಳಕು ಬಿಂಬಿಸುವಲ್ಲಿ ದೀಪಾವಳಿ.

ಕೆಣಕಿದರೆ ಸಿಡಿಗುಂಡಿನುತ್ತರವ ಕೊಡುವಲ್ಲಿ
ಎದ್ದ ಕಿಡಿಯೊಳು ನಮ್ಮ ದೀಪಾವಳಿ
ಬಿದ್ದ ಒಂದೊಂದು ನೆತ್ತರ ಬಿಂದು ತಾಯ್ನೆಲಕೆ
ಕುಂಕುಮವನಿಡುವಲ್ಲಿ ದೀಪಾವಳಿ.

ಮೌನ ಶೀತಲ ಶಿಖರ ಕಾನನದ ಕಷ್ಟದಲಿ
ನಿಂತ ಧೈರ್ಯಗಳಲ್ಲಿ ದೀಪಾವಳಿ
ಹೆಜ್ಜೆ ಹೆಜ್ಜೆಗು ಜನದ ಜೀವರಕ್ತವ ತುಂಬಿ
ತೆರೆದ ಬಾವುಟದಲ್ಲಿ ದೀಪಾವಳಿ.

ನಮ್ಮ ಜನಗಣಮನದ ಅಧಿನಾಯಕ ಪ್ರಜ್ಞೆ
ಕಣ್ತೆರೆದು ನಿಂತಲ್ಲಿ ದೀಪಾವಳಿ
ಎಂದಿನಂತಲ್ಲ ಇದು ನಮಗೆ ಈ ಸಲ ಬಂದ
ಹೊಸ ಬೆಳಕಿನೆಚ್ಚರದ ದೀಪಾವಳಿ.