ಬಂದಿತು ದೀಪಾವಳಿ ಮನೆಮನೆಗೆ
ನರಕಾಸುರ ವಧೆಗೆ !
ಯುಗಯುಗದವತಾರದ ಭವ್ಯಸ್ಮೃತಿಯನು
ಉದ್ದೀಪನಗೊಳಿಸಿ,
ಕವಿಯುವ ತಮ ಹರಿಸಿ
ಇದೊ ಬಂದಿತು ದೀಪಾವಳಿ ಮನೆ ಮನೆಗೆ
ನರಕಾಸುರ ವಧೆಗೆ !

ಕತ್ತಲ ಗೋವರ್ಧನವನ್ನೆತ್ತುವ
ಸಾಸಿರ ಶ್ರೀಕೃಷ್ಣನ ಬೆರಳು,
ಗಜ ಚರ್ಮಾಂಬರ ವ್ಯೋಮಕೇಶನಾ
ಫಣಿದೊಡವಿನ ಹೆಡೆನೆರಳು,
ಕರಿಯಿರುಳಿನ ಮದಗಜವನು ತಿವಿಯುವ
ಅಂಕುಶಗಳ ಹೊಳಹು,
ಎಂಬೊಲು, ಮನೆಮನೆಯೊಳು ಸಾಸಿರ ಕಿರುಹಣತೆಯು
ಕುಡಿಯಾಡಿಪ ಚೆಲುವು !

ಹಣತೆಯ ಹಡಗಾಗಿವೆ ಮನೆ ಮನೆಯೂ
ಕತ್ತಲ ಕಡಲೊಳಗೆ !
ಆ ಎಡೆ ಈ ಎಡೆ ಬೆಳಕಿನ ನನೆಕೊನೆ
ದಾಂಗುಡಿಯಿಟ್ಟಿರೆ ಗೆಲುವಿನೆಡೆ,
ಸಿಡಿವ ಪಟಾಕಿಯ ಚಟಪಟ ದನಿಯಲಿ
ಮನೆಮಕ್ಕಳ ಎದೆ ಹಿಗ್ಗಿನ ಬುಗ್ಗೆ
ಪುಟಿಯುತ್ತಿದೆ, ಬಂದಿತು ದೀಪಾವಳಿ
ಮನೆಮನೆಗೆ
ನರಕಾಸುರ ವಧೆಗೆ !