ತಿರುಗುತ್ತಲೇ ಇದ್ದಾವೆ ಹಗಲೂ ಇರುಳು
ನಮ್ಮ ಸುತ್ತಲೂ ಅಸಂಖ್ಯಾತ
ಜ್ಯೋತಿರ್ಮಂಡಲಗಳೀ ಅಗಾಧ
ಶೂನ್ಯಗಳಲ್ಲ್ಲಿ ಅದೆಷ್ಟೋ ಶತ-

ಮಾನದಿಂದಲೂ. ಆದರೂ ನಮ್ಮೊಳಗೆ
ಮತ್ತೆ ಮತ್ತೆ ಹೇಗೋ ಕವಿಯು-
ತ್ತಿರುವ ಕತ್ತಲೆಯೊಳಗೆ ನಮ್ಮದೇ
ಆದೊಂದು ಪುಟ್ಟ ಹಣತೆಯ ನಾವು

ಹುಡುಕಿಟ್ಟುಕೊಳ್ಳೋಣ. ಇಷ್ಟೊಂದು ಬೆಳ-
ಕಿದ್ದೂ ಬಂತು ಕತ್ತಲು ಹೇಗೆ?
ಇರುವ ಈ ಬೆಳಕನ್ನೆ ಹೀಗೆ ಕತ್ತಲು
ಮಾಡಿ, ಮಾತು-ಕೃತಿಗಳ ನಡುವೆ,

ಬದುಕು-ಬರೆಹದ ನಡುವೆ, ಕನಸು-ನನ
ಸಿನ ನಡುವೆ ತೂರಿಸುವ ವಿಕೃತಿ-
ಯನ್ನೆದುರಿಸಲು ಸಾಕು ಒಂದೇ ಒಂದು
ವಾಗರ್ಥಚಂದ್ರನ ಪ್ರಣತಿ.