ಯಾರಿಗೆ ಬೇಕಿಲ್ಲ ಸುರ್ದೀ ಜೀವನ! ನೂರಹತ್ತು ವರ್ಷ ಬಾಳಿದವರೂ ಇನ್ನೊಂದಿಷ್ಟು ಕಾಲ ಜೀವಿಸಿಯೇನೇ ಎಂದು ಹಪಹಪಿಸುವುದು ತಪ್ಪುವುದಿಲ್ಲ. ಯಯಾತಿಯ ಕಥೆ ನೆನಪಾಗುತ್ತದೆಯಲ್ಲವೇ? ಇನ್ನಷ್ಟು ಕಾಲ ಜೀವಿಸಲು ತನ್ನ ಮಗನ ಆಯುಸ್ಸನ್ನೆ ಯಯಾತಿ ಹಂಚಿಕೊಂಡನಲ್ಲ! ಅತ್ಯದ್ಭುತ ವೈದ್ಯಕೀಯ ಸವಲತ್ತುಗಳು ಸಾಮಾನ್ಯರ ಜೀವಿತಾವಧಿಯನ್ನು ಹೆಚ್ಚಿಸಿವೆ ಎಂದು ಹೇಳುವ ಇಂದಿನ ದಿನಗಳಲ್ಲಿಯೂ ನೂರು ವರ್ಷದ ಬದುಕು ಅಪರೂಪದ ಸಂಗತಿ. ಇನ್ನು ಒಂದೆರಡು ಗುಳಿಗೆಗಳನ್ನು ನುಂಗಿ ಹತ್ತಾರು ವರ್ಷ ಆಯುಸ್ಸು ಹೆಚ್ಚಿಸಿಕೊಳ್ಳಬಹುದು ಎಂದರೆ ಯಾರಿಗೆ ತಾನೇ ಆಸೆಯಾಗುವುದಿಲ್ಲ!? ಇಗೋ ಇದೀಗ ಮುಪ್ಪು ಸುಧಾರಿಸಲೆಂದು ಅಮೆರಿಕೆಯ ನ್ಯಾಶನಲ್ ಇನ್ಸ್ಟಿಟ್ಯೂಟ್ ಆನ್ ಏಜಿಂಗ್ ನಡೆಸುತ್ತಿರುವ ಇಂಟರ್ವೆಂಶನ್ ಟ್ರೈನಿಂಗ್ ಪ್ರೋಗ್ರಾಮ್ ಆಯುಸ್ಸು ಹೆಚ್ಚಿಸುವ ಔಷಧವೊಂದನ್ನು ಗುರುತಿಸಿದೆಯಂತೆ. ರಪಾಮೈಸಿನ್ ಎನ್ನುವ ಈ ಔಷಧ ಇಲಿಗಳ ವಯಸ್ಸನ್ನು ಸುಮಾರು 15%ನಷ್ಟು ಹೆಚ್ಚಿಸಿದೆ ಎಂದು ಸಂಸ್ಥೆಯ ವಿಜ್ಞಾನಿಗಳು ಇತ್ತೀಚೆಗೆ ನೇಚರ್ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ.

ಕನಿಮ್ಮ ದೀರ್ಘಾಯುಸ್ಸಿನ ರಹಸ್ಯವೇನು?ಕಿ ಶತಾಯುಷಿಗಳಿಗೆ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಎಲ್ಲರೂ ಕೇಳುವ ಒಂದು ಪ್ರಶ್ನೆ. ಈ ಪ್ರಶ್ನೆಗೆ ಹಲವರು ಹಲವು ಬಗೆಯ ಉತ್ತರ ನೀಡಿದ್ದಾರೆ. ನೆಮ್ಮದಿಯ ಬಾಳೇ ತಮ್ಮ ದೀರ್ಘಾಯುಸ್ಸಿಗೆ ಕಾರಣ ಎಂದು ಕೆಲವರು ಹೇಳಿದ್ದುಂಟು. ಇನ್ನು ಕೆಲವರು ಬ್ರಹ್ಮಚರ್ಯದಿಂದ ಹಲವು ಪತ್ನಿಗಳ ಒಡೆಯನಾಗಿರುವುದೆ ತಮ್ಮ ದೀರ್ಘಾಯುಸ್ಸಿಗೆ ಕಾರಣವೆಂದು ಹೇಳಿದ್ದಿದೆ. ಜಪಾನಿನ ಒಬ್ಬ ಶತಾಯುಷಿ ಈರುಳ್ಳಿ ಸೇವಿಸದೇ ಇದ್ದದ್ದೇ ತನ್ನ ದರ್ೀಾಯುಸ್ಸಿಗೆ ಕಾರಣ ಎಂದು ಘೋಷಿಸಿಯೂ ಇದ್ದ. ಆಯುಸ್ಸಿನ ಮೇಲೆ ನಾವು ಸೇವಿಸುವ ಆಹಾರವೂ ಸಾಕಷ್ಟು ಪ್ರಭಾವ ಬೀರುತ್ತದೆ ಎನ್ನುವುದು ತುಂಬು ಬದುಕು ನೀಗಿದವರ ಅಂಬೋಣ. ಚಟುವಟಿಕೆಯ ಜೀವನ, ನಿಯಮಿತ ಉಪವಾಸ, ಕಸಾತ್ವಿಕಕಿ ಆಹಾರ ಸೇವನೆ ಹಾಗೂ ಮಿತ ಮದ್ಯಪಾನ ಬದುಕನ್ನು ಸುರ್ದೀಗೊಳಿಸಬಲ್ಲುವು ಎನ್ನುವ ಮಾತುಗಳನ್ನೂ ಕೇಳಿರುತ್ತೀರಿ.

ಏನೇ ಇರಲಿ. ಇಷ್ಟೇ ಆಯುಸ್ಸು ಎಂದು ಹೇಗೆ ನಿರ್ಧಾರವಾಗುತ್ತದೆ ಎನ್ನುವುದೂ, ಬೇಕೆಂದ ಹಾಗೆ ಆಯುಸ್ಸನ್ನು ಹೆಚ್ಚಿಸುವುದು ಹೇಗೆಂಬುದೂ ವಿಜ್ಞಾನಕ್ಕೆ ಇನ್ನೂ ಅರ್ಥವಾಗದ ವಿಷಯ. ಆದರೆ ಮುಪ್ಪು ಬಾರದಂತೆ ಅಥವಾ ಚಟುವಟಿಕೆಯ ಮಧ್ಯ ವಯಸ್ಸು ಇನ್ನಷ್ಟು ರ್ದೀವಾಗಿರುವಂತೆ ಮಾಡಿದರೆ ಬದುಕು ಹಸನಾದೀತು ಎನ್ನುವುದು ಎಲ್ಲರ ಆಶಯ. ಅಮೆರಿಕೆಯಲ್ಲಿ ಈ ನಿಟ್ಟಿನಲ್ಲಿ ಒಂದು ರಾಷ್ಟ್ರೀಯ ಕಾರ್ಯಕ್ರಮವನ್ನೇ ಹಮ್ಮಿಕೊಳ್ಳಲಾಗಿದೆ. ಮನುಷ್ಯನ ಅಥವಾ ಜೀವಿಯ ಆಯುಸ್ಸನ್ನು ಹೆಚ್ಚಿಸುತ್ತದೆನ್ನುವ ಎಲ್ಲ ಔಷಧಗಳು ಹಾಗೂ ರಾಸಾಯನಿಕಗಳನ್ನು ಯಾವುದೇ ಪೂರ್ವಾಗ್ರಹ ಅಥವಾ ನಿರೀಕ್ಷೆಯೂ ಇಲ್ಲದೆ ಪರೀಕ್ಷೆಗೊಳಪಡಿಸುವ ಕಾರ್ಯಕ್ರಮ ಇದು. ಯಾರು ಬೇಕಾದರೂ ಯಾವ ಔಷಧವನ್ನು ಬೇಕಾದರೂ ಸೂಚಿಸಬಹುದು. ಆ ಔಷಧವನ್ನು ಪರೀಕ್ಷಿಸಿ, ಆಯುಸ್ಸಿನ ಮೇಲೆ ಅದರ ಪರಿಣಾಮವೇನಾದರೂ ಇದ್ದರೆ ಹೆಚ್ಚಿನ ಪರೀಕ್ಷೆಗಳನ್ನು ನಡೆಸುವರು.  ಈ ಕಾರ್ಯಕ್ರಮದಲ್ಲಿ ಒರೆಗೆ ಬಂದ ಔಷಧಗಳಲ್ಲಿ ರಪಾಮೈಸಿನ್ ಕೂಡ ಒಂದು. ಇದು ಮುಪ್ಪು ಮುಂದೂಡುವ ಔಷಧವಾಗುವ ಮುನ್ಸೂಚನೆಯನ್ನು ನೇಚರ್ ಪ್ರಕಟಿಸಿರುವ ಸಂಶೋಧನೆ ನೀಡಿದೆ. ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಏಜಿಂಗ್ನ ಡೇವಿಡ್ ಹ್ಯಾರಿಸನ್ ಮತ್ತು ಅವರ ತಂಡ ಈ ಶೋಧ ಮಾಡಿದೆ.

ಪಾಲಿನೇಶಿಯದ ದ್ವೀಪವೊಂದರ ಮಣ್ಣಿನಿಂದ ಹೆಕ್ಕಿದ ಬ್ಯಾಕ್ಟೀರಿಯಾದ ಸ್ರಾವದಲ್ಲಿ ರಪಾಮೈಸಿನ್ ಕಂಡು ಬಂದಿತ್ತು. ಅಂಗಕಸಿ ಪಡೆದವರ ರೋಗನಿರೋಧಕತೆಯನ್ನು ಕುಗ್ಗಿಸಲು ಈ ಔಷಧವನ್ನು ಈಗ ಬಳಸಲಾಗುತ್ತಿದೆ. ರಪಾಮೈಸಿನ್ಗೆ ಮುಪ್ಪು ಮುಂದೂಡುವ ಸಾಮಥ್ರ್ಯ ಇರಬಹುದು ಎನ್ನುವ ಸಂಗತಿ ತಿಳಿದದ್ದೂ ಆಕಸ್ಮಿಕವಾಗಿ ಎನ್ನುತ್ತಾರೆ ಹ್ಯಾರಿಸನ್.  ಸೀನೋರ್ಯಾಬ್ಡೈಟಿಸ್ ಎಲಿಗನ್ಸ್ ಎನ್ನುವ ಹುಳುವಿನ ಮೇಲೆ ನಡೆಸಿದ ಪರೀಕ್ಷೆಗಳಲ್ಲಿ ರಪಾಮೈಸಿನ್ ಜೀವಕೋಶಗಳಲ್ಲಿರುವ ಸೆರಿನ್-ಯೊನಿನ್ ಕೈನೇಸ್ ಎನ್ನುವ ಕಿಣ್ವದ ಚಟುವಟಿಕೆಯನ್ನು ತಡೆಗಟ್ಟುತ್ತದೆ. ಏಕಕೋಶಜೀವಿಗಳಲ್ಲೂ, ಆನೆಯಲ್ಲೂ ಒಂದೇ ತೆರನಾಗಿ ಇರುವ ಈ ಕಿಣ್ವ ಜೀವಕೋಶಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆನ್ನುವುದು ತಿಳಿದ ಸಂಗತಿ. ಎಷ್ಟು ಆಹಾರ ಲಭ್ಯವಿದೆ ಎನ್ನುವುದನ್ನು ತಿಳಿದು ಅದಕ್ಕೆ ತಕ್ಕಂತೆ ಜೀವಕೋಶಗಳಲ್ಲಿ ಜರುಗುವ ಪ್ರೊಟೀನ್ ತಯಾರಿಕೆಯನ್ನು ಇದು ನಿಯಂತ್ರಿಸುತ್ತದೆ. ಪ್ರೊಟೀನ್ ತಯಾರಿಕೆಗೆ ಬೇಕಾದ ಕಚ್ಚಾಮಾಲು ಆಹಾರದಿಂದಲೇ ದೊರಕಬೇಕಷ್ಟೆ! ಹೀಗಾಗಿ ರಪಾಮೈಸಿನ್ ಮುಪ್ಪನ್ನು ಮುಂದೂಡುವ ಔಷಧವಾಗಬಹುದೇ ಎಂದು ಪರೀಕ್ಷಿಸಲು ಹೊರಟರು. ಆದರೆ ಆಹಾರದ ಜೊತೆಗೆ ಎಷ್ಟೇ ರಪಾಮೈಸಿನ್ ಕೂಡಿಸಿ ಇಲಿಗಳಿಗೆ ತಿನ್ನಿಸಿದರೂ, ಹೆಚ್ಚಿನ ಪಾಲು ಕೆಲವೇ ಸಮಯದಲ್ಲಿ ದೇಹದಿಂದ  ಮೂತ್ರ, ಹಿಕ್ಕೆಗಳ ಮುಖಾಂತರ ದೇಹದಿಂದ ಹೊರ ಹೋಗಿ ಬಿಡುತ್ತಿತ್ತು. ಹೀಗಾಗಿ ನಿಧಾನವಾಗಿ ಕರುಳಿನಲ್ಲಿಯಷ್ಟೆ ಬಿಡುಗಡೆಯಾಗುವಂತೆ ರಪಾಮೈಸಿನ್ನ ಸೂಕ್ಷ್ಮಗುಂಡುಗಳನ್ನು ತಯಾರಿಸಬೇಕಾಯ್ತು. ಅದಕ್ಕೆ ತಗುಲಿದ ಸಮಯ ಸುಮಾರು ಒಂದು ವರ್ಷ. ಅಷ್ಟರೊಳಗೆ ಪರೀಕ್ಷೆಗೆಂದು ಬೆಳೆಸಿದ್ದ ಇಲಿಗಳೂ ಕಮಧ್ಯವಯಸ್ಕಕಿರಾಗಿಬಿಟ್ಟಿದ್ದುವಂತೆ. ಇವುಗಳಿಗೇ ರಪಾಮೈಸಿನ್ ತಿನ್ನಿಸಿ ಪರೀಕ್ಷಿಸಲಾಯಿತು. ಫಲಿತಾಂಶ ಅಚ್ಚರಿಯದಾಗಿತ್ತು.

ಸಾಧಾರಣವಾಗಿ ಇಲಿಗಳು ಸುಮಾರು ಮೂರು ವರ್ಷ ಜೀವಿಸಿರುತ್ತವೆ. ರಪಾಮೈಸಿನ್ ಮಿಶ್ರಿತ ಆಹಾರವನ್ನು ತಿನ್ನಿಸಿದ ಇಲಿಗಳಲ್ಲಿ ಕೆಲವು ಮೂರೂವರೆ ವರ್ಷಗಳವರೆಗೂ ಬದುಕಿದ್ದುವು. ಈ ವಿಶೇಷ ಆಹಾರವನ್ನು ಸೇವಿಸಿದ ಇಲಿಗಳಲ್ಲಿ ಬಹುತೇಕ ಮೂರುವರ್ಷಗಳನ್ನೂ ಮೀರಿ ಬದುಕಿದ್ದುವು ಎನ್ನುವುದು ವಿಶೇಷ ಸಂಗತಿ. ಅಷ್ಟೇ ಅಲ್ಲ. ಮೂರು ವಿಭಿನ್ನ ಪ್ರಯೋಗಾಲಯಗಳಲ್ಲಿ ಈ ಪ್ರಯೋಗಗಳು ಜರುಗಿದ್ದುವು. ಎಲ್ಲ ಪ್ರಯೋಗಾಲಯಗಳಲ್ಲೂ ಒಂದೇ ರೀತಿಯ ಫಲಿತಾಂಶ ಕಂಡು ಬಂದಿದ್ದು, ರಪಾಮೈಸಿನ್ ಮುಪ್ಪು ಮುಂದೂಡುವುದು ಕೇವಲ ತೋರ್ಪಡೆಯಲ್ಲ ಎನ್ನುತ್ತಾರೆ ಹ್ಯಾರಿಸನ್. ಇಲಿಗಳಲ್ಲಿಯಷ್ಟೆ ಅಲ್ಲ, ಸೀನೋರ್ಹಾಬ್ಡೈಟಿಸ್ ಎಲಿಗನ್ಸ್ ಎನ್ನುವ ಹುಳು, ಹಣ್ಣು ನೊಣ ಹಾಗೂ ಬೂಸ್ಟು ಜೀವಿಗಳಲ್ಲಿಯೂ ಕೈನೇಸ್ ಕಿಣ್ವದ ಚಟುವಟಿಕೆಯನ್ನು ರಪಾಮೈಸಿನ್ ನಿಯಂತ್ರಿಸಿ ಅವುಗಳ ಆಯುಸ್ಸು ಹೆಚ್ಚಿಸಿದೆ. ಇಲಿಗಳಲ್ಲಿಯೂ ಅದೇ ಪರಿಣಾಮವನ್ನು ಈ ಔಷಧ ತೋರಿಸಿರುವುದು, ಮನುಷ್ಯರಿಗೂ ಇದು ವರವಾಗಲಿದೆ ಎನ್ನುವ ಸೂಚನೆ.  ಇಲಿಗಳಲ್ಲಿ ಕಂಡಷ್ಟೆ ಸಾಮಥ್ರ್ಯವನ್ನು ರಪಾಮೈಸಿನ್ ಮಾನವರಲ್ಲಿಯೂ ತೋರಿದರೆ, ಅರವತ್ತು ಬಾಳುವವರು ಇನ್ನೂ ಒಂದ್ಹತ್ತು ವರ್ಷ ಹೆಚ್ಚು ಬಾಳಿಯಾರು.

ನಿಜ. ಮುಪ್ಪು ಮನಸ್ಸಿಗೂ, ಮೈಗೂ ಸಂಕಟವನ್ನು ತಂದೊಡ್ಡುವ ಸ್ಥಿತಿ. ಆದರೆ ಇದನ್ನು ಮುಂದೂಡಿದರೆ ಆ ಸಮಸ್ಯೆಗಳು ಬಗೆಹರಿದಾವೇ? ಆಯುಸ್ಸು ಹೆಚ್ಚಾಗಬಹುದು. ಅದರೊಟ್ಟಿಗೇ ಮುಪ್ಪಿನ ಸಮಸ್ಯೆಗಳೂ ದೀರ್ಘವಾಗುವುದಿಲ್ಲವೇ ಎಂದಿರಾ?  ಆಗಲಿ ಬಿಡಿ. ಅದಕ್ಕೂ ಒಂದು ಔಷಧ ಹುಡುಕಿದರಾಯ್ತು. ಏನಂತೀರಿ?

1 Matt Kaeberlein and Brian K. Kennedy, A midlife longevity drug? Nature, Advanced Online Publication, 8 July 2009  DOI:10.1038/nature08246

2. David E. Harrison et al.,  Rapamycin fed late in life extends lifespan in genetically heterogeneous mice, Nature Advanced Online Publication, 8 July 2009, DOI:10.1038/nature08221