ಆದಯ್ಯ

ದುಂದುಮೆಯೆಂದೆಂದು ಪಾಡಿರಿ ಜಾಣ
ದುಂದುಮೆ ಬಸವಂತನಹಬ್ಬ                                                                     ॥

ಶಿವ ಶಿವ ಗಣನಾಥನಂದನಂದನ ತನು
ಭವಹರ ನಿರ್ಜರೊಂದಿತ ಚರಣ  ಗೌರೀ
ಧವಧವಲಾಂಗವರ್ಜಿತ ಮರಣ  ಚಂದ್ರ
ರವಿವಹ್ನಿನೇತ್ರ ಪೂರಿತ ಕರುಣ  ಸರ್ವ
ಭುವನ ಜನರ ರತಿ ಮರಿಯಾದೆ ಪಾಲಿಪ
ಭವನೆ ನಂಬಿದೆ ನಿನ್ನ ಒಲಿದೆನ್ನ ಸಲಹು                                                   ॥

ಈಶ ಮಾಹೇಶ ಗೌರೀಶ ಗಜಾಂತಕ
ನಾಶ ಮುಕ್ತೀಶ ಮಲ್ಲೇಶ್ವರನೆ  ಪುರ
ನಾಶ ಭೂತೇಶ ಸರ್ವೇಶ್ವರನೆ  ಯಮ
ನಾಶ ಗಿರೀಶ ಮದೀಶ್ವರನೆ  ಜಗ
ದೀಶ ಗಂಗಾಂಬೆಯ ತೋಷ ಭೂಷ ಅಘ
ನಾಶ ರಹಿತ ಆಶ ಸಲಹು ಸೋಮೇಶ                                                     ॥

ಆದಿಗಣೇಶನು ಹರನ ನಿರೂಪದಿ
ಮೇದಿನೀಸ್ಥಲದೊಳಗುದ್ಭವಿಸಿ  ಪರ
ವಾದಿ ಜಿನ್ನರನೆಲ್ಲ ಸಂಹರಿಸಿ  ಸೌ
ರಾಷ್ಟ್ರ ಸೋಮೇಶನ ಸ್ಥಿರಗೊಳಿಸಿ  ಮತ್ತೆ
ಈ ಧರೆಯೊಳು ತೋರಿ ಮೆರೆಸಿದಾದಯ್ಯನ
ಮೋದದಿಂದಾತನ ಕಥೆಯ ನಿರ್ವಿಪೆನು                                                 ॥

ಕರ್ತುಶಂಕರ ಸಿಂಹಪೀಠವಡರಿ ಮತ್ತೆ
ಮೋರ್ತಮಾಡಿರೆ ಸುತ್ತ ಎಡಬಲದಿ  ಲಕ್ಷ್ಮಿ
ಕರ್ತರು ಅಜರಿರ್ಪ ತರತರದಿ  ಭೃಂಗಿ
ನರ್ತನ ಗಾನವೆತ್ತುತ ಸ್ವರದಿ  ಗಣ
ದರ್ತಿಲೆ ಸಂತೋಷದಿಂದಿರ್ಪ ಸಮಯದಿ
ತುರ್ತದಿಂ ನಾರದ ಮರ್ತ್ಯದಿಂದಿಳಿದ                                                      ॥

ಆ ಕ್ಷಣ ಬಂದು ನಿರೀಕ್ಷಿಸಿ ಇಂದು ಭಾ
ಳಾಕ್ಷ ಸುಮುಕ್ಷವಾಹನ ಜಯತು  ನಿರ
ಪೇಕ್ಷ ನಿರ್ಲಕ್ಷ ನಿರ್ಮಳ ಜಯತು  ಭಕ್ತಾ
ಪೇಕ್ಷ ಮುಮುಕ್ಷದಾಯಕ ಜಯತು  ಲೋಕ
ರಕ್ಷಕ ಪಾಲಕ ಪಕ್ಷಿವಾಹನ ನುತ
ದಕ್ಷ ಸಮ್ಮಖಶಿಕ್ಷ ಜಯಯೆಂದ ಮುನಿಪ                                                  ॥

ತಪ್ತನಾಗುತ ಶಿವ ಮುನಿಸ್ತುತಿಗೆ ವಾಣೀ
ವಪ್ತರುಳನೆ ಬಂದ ಕಾರ್ಯವೇನು  ಪೇಳ್ವೆ
ಸಪ್ತಸಾಗರವನು ದಾಂಟಿದೆನು  ದ್ವಿತಿ
ಸಪ್ತಲೋಕವನೆಲ್ಲ ಚರಿಸಿದೆನು  ದೇವ
ಸಪ್ತದ್ವೀಪಾಂತರ ಸುತ್ತಿ ಬರಲು ಎಂಟು
ಸಪ್ತದೇಶದೊಳೊಂದು ಕಂಡೆ ಕೌತುಕವ                                                 ॥

ಬಲ್ಲಿದ ಪುಲಿಗೆರೆಯಲ್ಲಿ ನಿಮ್ಮಯ ಸುದ್ದಿ
ಎಲ್ಲೆಲ್ಲಿ ನೋಡೆ ಎಳ್ಳಿನಿತಿಲ್ಲವು  ಕುನ್ನಿ
ಖುಲ್ಲ ಜಿನ್ನವು ಹಚ್ಚಿಕೊಂಡಿಹವು  ಪೇಳೆ
ನಲ್ಲಿ ಶ್ರ ಗುರುಲಿಂಗಜಂಗಮವು  ಪೇಳ್ವೆ
ನಲ್ಲಮಭಕ್ತರು ಎಲೆಮರೆ ಕಾಯಂತೆ
ಅಲ್ಲಡಗಿಹರಿಭಪುರದೊಳಗೇ                                                                      ॥

ಚಿನುಮಯ ಕೇಳ್ನಿಮ್ಮ ಮತವನುದ್ಧರಿಸುವ
ದೆನಲಾದಿಗಣಪನ ನಿಟ್ಟಿಸುತ  ನಮ್ಮ
ಘನ ಶಿವಮತವನು ಹೆಚ್ಚಿಸುತ  ಪೇಳಿ
ದನು ಪೋಗಿ ಜಿನ್ನನ ಶಿಕ್ಷಿಸುತ  ಬಾಯೆಂ
ದೆನಲಾಗ ಹರಹರ ಧರೆಯೊಳು ನರನಾಗಿ
ಜನಿಸಲು ನಾ ನಿಮ್ಮ ಚರಣಗಾಂಬುವೆನೆ                                                 ॥

ಒಳಹೊರಗಿರುವೆನು ಇದಕೇಕೆ ಸಂಶಯ
ಇಳೆಗಿಳಿಯೆಂದು ಅಪ್ಪಣೆಯೀವುತ  ಪೋಗಿ
ಗಳಿಲನೆ ಸೌರಾಷ್ಟ್ರದಲಿ ಪುಟ್ಟುತ  ನಮ್ಮ
ಚಲದಂಕನಾದಯ್ಯನೆಂದೆಂಬುತ  ಘನ
ಮಲಹರ ಭಕ್ತನು ಜಿತಪಾಪ ಮುಕ್ತನು
ನಲವಿಂದೆ ಧರೆಯೊಳಗಿರ್ಪ ಸಂತೋಷದಿ                                             ॥

ಅವನಿಯೊಳ್ ಶಿವಭಕ್ತರುದರದಿ ಜನಿಸುತ
ತ್ರಿವಿಧ ಲಿಂಗದ ಕಲೆನೆಲೆ ತಿಳಿದು  ಪಂಚ
ತ್ರಿವಿಧ ಮದದ ಮೂಲಗಳನಳಿದು  ಆಗ
ತ್ರಿವಿಧ ಗುಣಂಗಳ ನೆರೆ ಕಳೆದು  ಮತ್ತೆ
ತ್ರಿವಿಧ ಮಲಂಗಳ ಸುಟ್ಟು ಬ್ರಹ್ಮವ ಕಂಡು
ತವೆ ಗುರುಕರುಣದಿಂದಿರ್ಪನಾದಯ್ಯ                                                       ॥

ಪೃಥ್ವಿಯೊಳೀತನು ಎಸಗು ವ್ಯವಹಾರವ
ಬಿತ್ತರಿಸುವೆನೀಗ ಭೂಮಿಯೊಳು  ಘನ
ರತ್ನನೀಲವು ಪಚ್ಚಪವಳಗಳು  ಸಲೆ
ಮುತ್ತುಗಳೊಜ್ರವೈಡೂರ್ಯಗಳು  ಕಾಯಿ
ಪತ್ರಿ ಲಾವಂಗವ ಲೆಕ್ಕವಿಲ್ಲದೆ ತಾನು
ಎತ್ತುಗಳ್ವೋಡಿಸಿದನಾಗ ದಕ್ಷಿಣದೇಶಕೆ                                                    ॥

ಬಂದು ಶ್ರೀ ಪುಲಿಗೆರಿ ಪುರವಳಯದಾಗ
ನಿಂದು ಬೀಡಿಕೆಯನು ಇಳುಹಿಸಿದ  ಸ್ನಾನ
ಇಂದುಧರನ ಪೂಜೆ ತೀರಿಸಿದ  ಪುರ
ವಿಂದು ನೋಡುವೆನೆಂದು ನೇಮಿಸಿದ  ಭರ
ದಿಂದ ಸಿಂಗರವಾಗಿ ತಾ ಹೊರಟನು
ನಂದದಿ ಸೂರ್ಯಚಂದ್ರರ ಬೀದಿಯೊಳಗೆ                                               ॥

ಅನಿತರೊಳೀ ಶಿವಪ್ರೇಮಿ ಬರುತಿರ್ಪ
ನನು ನೋಡಲೆನುತಲಿ ಪೇಳೆ  ಅಂದು
ಇನನಸ್ತನಾದ ಪಶ್ಚಿಮ ಚಲಕೆ  ಪದ್ಮ
ನನೆಯಾಗೆ ತಮ ಮುಸುಕಿತು ಜಗಕೆ  ತಾರೆ
ಮಿನುಗುತ ಗಗನದೋಳಲ್ಲಲ್ಲೆ ಮೂಡಲು
ವಿನಯದಿಂ ನೈದಿಲೆ ನಲಿದವಾಕ್ಷಣದಿ                                                       ॥

ಹರಭಕ್ತನಿವನ ಸಂದರುಶನಕೆಂದಾಗ
ತ್ವರಿತದಿ ಬಂದು ಪೂರ್ವದಿಸೆದಿ  ಹಿಮ
ಕಿರಣ ಪ್ರಜ್ವಲಿಸುತ ಸಮ್ಮುದದಿ  ಆಗ
ಸರಸಚಕೋರಗಳ್ ಸಂತೋಷದಿ  ಮುಂದೆ
ಬರುತಿರಲಾದಯ್ಯ ಕಳಸ ಕನ್ನಡಿ ತೋರ್ಪ
ಕರುಮಾಡಗಳ ನೋಡುತೈತರಲಾಗ                                                      ॥

ಎಲ್ಲೆಲ್ಲಿ ನೋಡಲು ಅಲ್ಲಿ ಜಿನ್ನಾಲಯ
ವೆಲ್ಲ ಜಿನ್ನರು ತುಂಬಿ ಪುರವೆಲ್ಲವು  ಮತ್ತಿ
ನ್ನೆಲ್ಲೆಲ್ಲಿ ಶಿವನಿಳಯಗಳಿಲ್ಲವು  ಇದ
ರಲ್ಲೆ ಹರನ ಭಕ್ತರಿರ ಸಲ್ಲವು  ಮನ
ದಲ್ಲಿ ಬಾಳತಿ ನೊಂದು ಮಲ್ಲಿಕಾರ್ಜುನ ಉಮೆ
ವಲ್ಲಭ ಹರಹರಯೆಂದು ಮರುಗಿದನು                                                      ॥

ಮುಂದಡಿಯಿಡುತ ನಿಟ್ಟಿಸಿ ಎಡಬಲದೊಳು
ಮಂದಿರ ಮೇಲುಮಂಟಪಗಳನು  ನಯ
ದಿಂದ ತೋರ್ಪ ಶೃಂಗಾರವನು  ಗಜ
ಮಂದಗಮನೆಯರ ವೃಂದವನು  ಭರ
ದಿಂದ ಕಂದರ್ಪನ ಮಾರ್ಬಲವೊಂದಾಗಿ
ಬಂದತ್ತ ನಯನಕೆ ರಂಜಿಸುತಿಹುದು                                                        ॥

ತಂಗಾಳಿ ತೀಡಿ ತಿಂಗಳ ಮೂಡಿ ಮನಸಿಜ
ಸಿಂಗಾಡಿವಿಡಿದನು ಕೋಪದಲಿ  ತಾಳ
ದಂಗಾನೆ ಉಡುಪನನು ಬೈವುತಲಿ  ರಾಹು
ನುಂಗಿಬಿಟ್ಟನು ಪಾಪಿಯೆಂಬುತಲಿ  ಅವ
ನಂಗುಳವ ಸುಟ್ಟುಳುಪಿದ ಶಿವನೋರ್ವಳು
ಭೃಂಗವೇಣಿಯಳು ತಾಪದಿ ಬಳಲುವಳು                                                 ॥

ಇಂದುಮುಖದಿ ಬೆಮರ್ದುಂಬಿ ನಾಸಿಕದೊಳು
ಮಂದಮಾರುತ ತೀಡೆ ಬಹುಭರದಿ  ಗಂಧ
ಚಂದನ ತಲೆಗೂಡಿ ತನ್ನುರದಿ  ಕಂಚು
ಕಿಂದು ಬಿಚ್ಚಿರೆ ಜಾರಿದಂಬರದಿ  ಅರ
ವಿಂದ ಬಾಣನ ಸಮರಂಗ ತೀರಿಸಿ ಶ್ರಮ
ದಿಂದಲಿ ಮಂದಾನಿಲನ ಬಯಸುವಳು                                                     ॥

ಕುಟಿಲಕುಂತಳೆ ತೀಡಿ ಕಟಿಗೆ ನಿರಿಗೆ ಬಿಗಿ
ದುಟಗೊಂಬುತವಳತಿ ಶೀಘ್ರದಲಿ  ದ್ವಯ
ಪಟುತರ ಕುಚಗಂಧ ಕೊಡಹುತಲಿ  ತನ್ನ
ತುಟಿಯ ಪಿಡಿದು ಜಗ್ಗಿ ನೋಡುತಲಿ  ನಾರಿ
ವಿಟನುರೆ ಬೈದು ಚಿಟಕ ಮುರಿವುತಲಿ ಸಂ
ಗಟದಿಂದ ತನ್ನ ಸದನಕೈದುತಿರಲು                                                         ॥

ಅರವಿಂದಮುಖಿಯೆ ಬಾ ಅರುಣ ಚಂದುಟಿಯೆ ಬಾ
ಗುರುಕುಚ ತಳಿರಡಿ ಸುಗುಣೆ ಬಾರೆ  ಚಲ್ವ
ಕರಿನಡೆ ಹರಿಮಧ್ಯೆ ಜಾಣೆ ಬಾರೆ  ಚಲ್ವ
ಮರಿದುಂಬಿಗುರುಳೆ ಪ್ರವೀಣೆ ಬಾರೆ  ನಿನ್ನ
ಸರಿಯ ನಾರಿಯರುಂಟೆ ಭುವನದೊಳೆಂದೋರ್ವ
ತರುಣಿಯ ಮುನಿಸು ಸಂಬಿಸುತಿರ್ದನವನು                                            ॥

ಬಲ್ಲೆನು ನಾ ನಿನ್ನ ಬಣ್ಣದ ಮಾತುಗ
ಳೆಲ್ಲ ಸಕ್ಕರೆದುಟಿ ಸವಿಯುವದು  ಕುಚ
ದಲ್ಲಿ ನಖದ ರೇಖೆಯೂರುವದು  ದ್ವಯ
ಗಲ್ಲವ ಪಿಡಿದು ಮುದ್ದಾಡುವದು  ಅವ
ಳಲ್ಲೆ ಮನಸನಿಟ್ಟು ಇಲ್ಲೆ ಬಹುರಂಗದ
ಸೊಲ್ಲಿಲೆ ಸಾಕುಸಾಕೆಂದಳು ಮುನಿದು                                                     ॥

ಚಿಕ್ಕಂದು ಮೊದಲಾಗಿ ಇವಗೆ ಮೆಚ್ಚಿಕೊಂಡು
ಸಿಕ್ಕರೆ ಬಿಡು ನೀ ತಿರಸ್ಕರಿಸಿ  ಬಹು
ರೊಕ್ಕವನೀವನ ನೀನೊಲಿಸಿ  ಈಗ
ದಕ್ಕಿಸಿಕೋ ದ್ರವ್ಯ ಸತ್ಕರಿಸಿ  ಪ್ರಾಯ
ಮಿಕ್ಕಿದ ಬಳಿಕಿನ್ನು ಗಳಿಸಿಯೆ ಮುಂದಿನ್ನು
ಮಕ್ಕಳಿಗೆ ಬುದ್ಧಿ ಹೇಳುವಳ್ಮುದಿಕಿ                                                              ॥

ನಾರಿ ನಿನ್ನಯನದಿ ಕೆಂಪೇನೆ ಮೂಗಿನೋಳ್
ಮೇರೆ ಮೀರುತ ಗಾಳಿ ತೀಡ್ವುದೇನೆ  ನಿನ್ನ
ತೋರ ಕುಚವು ಬಿದಿಗಿ ಚಂದ್ರನೇನೆ  ಫಣಿ
ಸಾರಕುಂತಳೆ ತುಟಿಯಸಿತವೇನೆ  ಯತಿ
ಸಾರೆನ್ನೇಕಾಂತದಿ ನೆರೆದು ಬಂದುದು ದಿಟ
ಭೂರಿಕೋಪದಿ ನೀರೆ ಒದೆದಳಾಳಿಯನು                                                 ॥

ಇಂತಪ್ಪ ವೈಭವವಂತಕಾಂತಕ ಭಕ್ತ
ಸಂತಸದಿ ನೋಡುತೈತರುತಾ  ತೋರ್ಪ
ಮುಂತೊಂದು ಮಂಟಪ ರಂಜಿಸಿತು ತಾ  ಭೂಮಿ
ಕಾಂತನ ಸುತೆ ಪದ್ಮವತಿ ಕಾಣುತಾ  ಮದ
ದಂತಿಗಮನೆಯಳ ಕಾಂತಿ ವರ್ಣಿಸುವಡೆ
ಅಂತಪ್ಪ ಬ್ರಹ್ಮಗಸಾಧ್ಯವಾಗಿಹುದು                                                          ॥

ಅಳಿಗಿಳಿ ಕಳಹಂಸ ತಳಿರುನಳಿನ ಸುಳಿ
ಕಳಸಕನ್ನಡಿ ಸಲೆ ಕುಂತಳವು  ನುಡಿ
ಗಳು ಕಾಮಿನಿಯ ಚಲ್ವಪದಯುಗವು  ವರ
ಕಳೆಮುಖ ನಾಭಿ ಕುಚದ್ವಯವು  ನೆರೆ
ಹೊಳೆವ ಕದಪಿನಿಂದ ಕೆಳದಿಯರೊಪ್ಪಿರ್ದ
ಎಳೆ ಚಂದ್ರಧರಭಕ್ತ ಕಂಡನಾ ಕ್ಷಣದಿ                                                        ॥

ದ್ವಿತಿಸುತನುದರದಿ ಖತಿಯಿಂದೆ ಬಿಗಿದು ಶ್ರೀ
ಪತಿ ತನ್ನ ಅವತಾರ ಇಡಲಿಕೆಂದು  ವಸು
ಮತಿಯೊಳಗೆ ತಾವಿಲ್ಲವೆಂದು  ಸ್ವರ್ಣ
ಲತದೇಹಿ ಇವಳಲ್ಲಿ ಇಟ್ಟನೆಂದು  ಮಂದ
ಗತಿ ಅತಿಜ್ಞಾನ ಸೂಮತಿ ಭೂಪಸುತೆ ಪದ್ಮ
ವತಿ ಸಣ್ಣನಡುವು ಈ ತೆರದಿ ಶೋಭಿಸಿತು                                               ॥

ವರ ಪದ್ಮವತಿಯಳ ಪರಮ ಸುಲಕ್ಷಣ
ಪರಕಿಸಲಾರೆ ಈ ಧರೆಯೊಳಗೆ  ಮತ್ತೆ
ಹರಭಕ್ತ ಭ್ರಾಂತದ ಮನದೊಳಗೆ  ಸ್ಮರ
ಸರಳು ನಡಲು ಗಾಯ ಉರದೊಳಗೆ  ಮನ
ಕರಗಿ ಅವಳ ಮುಖವೀಕ್ಷಿಸುತಿರಲಾಗ
ತರುಣಿಯಾಳಿವನ ಸಮ್ಮುಖವ ನೋಡಿದಳು                                          ॥

ಚದುರೆ ಕಾಂತನ ಕಂಡು ನದರಿಕ್ಕಿ ಆ ಸಖಿ
ಬೆದರಿದೆರಳೆಯಂತೆ ಕಂಪಿಸುತ  ಆಗ
ಮದನಮೋಹದ ಕಲೆನೆಲೆಗುಬ್ಬುತ  ಬಹು
ಹದ ಮೀರಿ ತಾಪ ರೋಮಗಳೇಳುತ  ತನ
ಗೊದಗಿದ ವಿರಹಭ್ರಾಂತಿಗಳಿಂದ ತನ್ನಯ
ಸದನದೊಳಗೆ ನಿಂತು ಪೊಗಳುತಲಿಹಳು                                               ॥

ಹರನುರಿಗಣ್ಣಿಂದ ಮಡಿದ ಮನ್ಮಥನೆಂಬ
ಬರಿಯ ವಚನ ತನ್ನ ರತಿಯಳನು  ಬಿಟ್ಟು
ಧರೆಯೊಳಗಿರ್ಪಂಥ ಸತಿಯರನು  ಸುಖ
ಸುರತಗೊಂಬುವೆನೆಂದು ಮನ್ಮಥನು  ಬಂದ
ಪರಿಯಿಂದಲ್ಲದೆ ಬೇರೆ ಹೊರತಿಲ್ಲವೆಂಬುತ
ಸರಸಿಜನೇತ್ರೆ ಈ ಪರಿಯೊಳಾಡಿದಳು                                                   ॥

ಉರ್ವಿಯೊಳೀತನು ಒಲಿಯಬೇಕಾದರೆ
ಪೂರ್ವದ ಪುಣ್ಯವಿಲ್ಲದೆ ಸಿಗನು  ಇವ
ನೋರ್ವನೆ ಸಾಕು ಸೌಭಾಗ್ಯವೇನು  ಅಳೆ
ಉರ್ವಿಸನ್ನಿಭ ಕಾಂತ ಪೇಳಲೇನು  ಈಗ
ಸರ್ವಪಾಲಿಗೆ ಬಿಟ್ಟು ಬಾರದೆ ಕರತಾರೆಂ
ದೊರ್ವಳ ಕಳುಹಿದಳವನ ಸನ್ನಿಧಿಗೆ                                                         ॥

ಬಂದು ಆದಯ್ಯನಿಗೊಂದಿಸಿ ಕರತಂದು
ಚಂದದಿಂದೀರ್ವರ ಹೊಂದಿರಿಸಿ  ಅಷ್ಟ
ಗಂಧದ್ರವ್ಯಗಳನೆಲ್ಲ ತಂದಿರಿಸಿ  ನಾರಿ
ಸುಂದರ ದೇಹದೊಳನುಲೇಪಿಸಿ  ಮಕ
ರಂದ ಸೂಸುವ ಪೂಮಾಲೆಗಳ್ಮುಡಿವುತ
ಕಂದರ್ಪ ಆಹವಕನುವಾದರಾಕ್ಷಣದಿ                                                         ॥

ಒಬ್ಬರೊಬ್ಬರ ಮುಖವ ಒಬ್ಬರೊಬ್ಬರು ನೋಡಿ
ಒಬ್ಬರೊಬ್ಬರು ತೆಕ್ಕಿಯೊಳಗವಚಿ  ಬೇಗ
ಒಬ್ಬರೊಬ್ಬರಿಗೆ ಆತುರವು ಹೆಚ್ಚಿ  ಆಗ
ಒಬ್ಬರೊಬ್ಬರು ತಾಂ ಚಂದುಟಿಯ ಕಚ್ಚಿ  ಹೀಂಗ
ಕಬ್ಬುವಿಲ್ಲನ ಕೇಳಿಯಬ್ಬರ ತೀರಿಸಿ
ಅಬ್ಜಲೋಚನೆ ಶ್ರಮದಿಂದೊರಗಿದಳು                                                       ॥

ಇವಳಿಗೆ ಇಷ್ಟಲಿಂಗವು ಉಂಟೊಯಿಲ್ಲವೊ
ವಿವರಿಸಿ ನೋಳ್ಪೆನೆಂದ್ಯೋಚಿಸಿದ  ಆಗ
ಯುವತಿಯ ಎದೆಮುಟ್ಟಿ ಈಕ್ಷಿಸಿದ  ಇಷ್ಟ
ತವೆ ಲಿಂಗವಿಲ್ಲೆಂದು ಮನ ಹೇಸಿದ  ಎದ್ದು
ಭವಿಯಿವಳ ಸಂಗ ಭವಕಾದೆನಯ್ಯಯ್ಯ
ಶಿವಶಿವಯೆಂಬುತ ನಡೆದ ಬೀಡಿಕೆಗೆ                                                         ॥

ಮಚ್ಚಗಂಗಳೆಗಾಗ ಎಚ್ಚರವಾಗುತ
ಸ್ವಚ್ಛ ಪರ್ಯಂಕದೊಳಿಲ್ಲವಾತ  ಕೂನ
ಹಚ್ಚದೆ ಪೋದನು ಎನ್ನೊಳೀತ  ಇಂಥ
ನೆಚ್ಚಿದ ಕಾಂತೆಯೊತ್ತ ಘಾತ  ಮಾಡಿ
ಮೆಚ್ಚಿಸಿ ಅಗಲಿ ತಾ ಪೋಗುವರೆ ವಿರಹದ
ಕಿಚ್ಚಿಗೆ ಗುರಿಮಾಡಿ ಇಟ್ಟನೆಲ್ಲಕ್ಕೆ                                                                  ॥

ಹಾಯೆನ್ನ ವಲ್ಲಭ ಹಾಯೆನ್ನ ಕಾಂತನೆ
ಹಾಯೆನ್ನ ಮನದ ಭಾಗ್ಯದ ಸಿರಿಯೆ  ಹಾ
ಹಾಯೆನ್ನ ಜೀವದ ಸಕ್ಕರೆಯೆ  ಹಾ
ಹಾಯೆನ್ನ ಒಲಿಸಬಲ್ಲಂಥ ದೊರೆಯೆ  ಹಾ
ಹಾಯೆಂದು ಹಂಬಲಿಸುತ ಹಳಹಳಿಸುತ
ತೋಯಜಗಂಧಿ ತಾ ಬಿದ್ದುರುಳಿದಳು                                                      ॥

ಏ ಕಾಂತನಿಲ್ಲದೆ ಈ ಕಾಯ ಉಳಿಯದು
ಏಕಾಂತ ತಾಪಕೆ ಮಾಡಲೇನು  ಅಯ್ಯ
ಈ ಕಷ್ಟ ಪೂರ್ವದ ಬರಹವೇನು  ಉರ
ಲೀ ಕೊರಳಿಗೆ ಮಾಲೆ ಹಾಕಲೇನು  ಈಕೆ
ಶೋಕವ ಸಂಬಿಸಬೇಕೆಂದು ಬಂದು ದಿ
ವಾಕರ ಮೂಡಿದ ಪೂರ್ವಪರ್ವತಕೆ                                                           ॥

ತಾವರೆ ನಗಲು ತಾರೆಗಳೆಲ್ಲಪೋಗಲು
ಕಾವಳ ಬಿಟ್ಟೋಡೆ ಕುಮುದಗಳು  ದುಗು
ಡಾವಿಲಾಸದಿ ಚಕ್ರವಾಕಗಳು  ನಲಿ
ದಾವಾಗ ಖಗ ಮೃಗ ಭೃಂಗಗಳು  ಭಾವೆ
ಭಾವಜರೂಪನ ಬಯಸಿ ಕಾಂಬುವೆನೆಂದು
ಕೋವಿನ ಕಾಂತನ ಬಳಿಗೆ ಸಾಗಿದಳು                                                      ॥

ಆ ತರುಣಿಯೇಳು ಸಂತಾಪದಿ ಬಳಲುತ
ಆತನ ಪಾದದಿ ಹಣೆಯನಿಟ್ಟು  ಇದು
ನೀತಿಯೆ ನಿನಗೆ ನಾ ಮನಸುಗೊಟ್ಟು  ಅತಿ
ಸೋತು ಬಂದವಳ ಕೂಡ್ಯಾತಕಿಷ್ಟು  ಎನ್ನ
ದಾತ ಮನ್ಮಥ ಪ್ರಖ್ಯಾತ ಭೂಮಿಯೊಳಿರ್ಪು
ದ್ಯಾತರದಯ್ಯಯ್ಯಾಘಾತಕವಿಧಿಯೆ                                                          ॥

ನಿನ್ನ ನಂಬಿದ್ದೆನು ಗನ್ನ ಘಾತಕ ಮಾಡಿ
ಇನ್ನಗಲುವರೆ ಎನ್ನೊಳನ್ಯೆ ಹೇಳು  ಕಾಂತ
ಭಿನ್ನ ಭೇದಗಳೆನಗಿಲ್ಲ ಕೇಳು  ಉಂಡ
ಅನ್ನವು ವಿಷವಾಯಿತಿನ್ನು ಏಳು  ಗುಣ
ರನ್ನ ಮೋಹನ್ನ ಸಂಪನ್ನನೆನುತಲಾಗ
ಕನ್ನೆ ಶಿರೋಮಣಿ ಕಳವಳಿಸಿದಳು                                                             ॥

ಕುವಲಯ ನೇತ್ರೆ ಕೇಳ್ ಭವಿ ಸಂಗಡ ನುಡಿ
ಭವಿಯ ಸಂಗಡ ಕೂಟ ಪವಡಿಸವು  ಮತ್ತೆ
ಭವಿಯ ಸಂಗಡ ಬಟ್ಟೆ ಗಮನಿಸವು  ಮೇಣ್
ಭವಿಯ ಸಂಗಡದಿ ಸಂಭೋಗಿಸವು  ಮುಂದೆ
ರವರವ ನರ್ಕವು ತಪ್ಪದು ಭವಿ ನೀನು
ಶಿವಭಕ್ತಜನ ನಮಗುಚಿತವಲ್ಲೆಂದ                                                             ॥

ಕಮಲಜ ಗಂಧಿ ಕೇಳ್ ಕಾರಣವೇನಿದು
ಗಮನಿಸಿ ಬಿಟ್ಟು ಹಲವು ಭ್ರಾಂತಿಯ  ಈಗ
ಮಮಕಾಂತನೆಂಬುದ ಬಿಡು ಚಿಂತಿಯ  ನಾವು
ಗಮಕಾದಿ ಪೋಪೆವೆಂಬುವ ಗ್ರಂಥಿಯ  ಉಂಟು
ನಮಗೀಗ ದಿವಸ ಸಂದಿದವೆಂಬ ವಾಕ್ಯವ
ರಮಣಿ ಶಿರೋಮಣಿ ಕೇಳಿದಳಾಗ                                                             ॥

ಏಕಾಂತ ಎನಗೆ ಬೇಕಿತ್ತು ನಿನ್ನೊಳು ಪ್ರಾಣ
ನಾ ಕೊಡುವೆನು ಸಟೆಯಲ್ಲ ಕೇಳು  ಎನ
ಗೆ ಕಟ್ಟು ಲಿಂಗವ ಹೃದಯದೊಳು  ಇಬ್ಬ
ರೇಕಾಗಿ ಇರುವದು ಭೂಮಿಯೊಳು  ಎಲೆ
ಭೂಕಾಂತಸುತೆ ನಿಮ್ಮ ಕುಲಜರು ಕೂಡ್ವರೆ
ಏಕಾಂತೆ ಶಿವಭಕ್ತಿ ಸುಲಬಲ್ಲ ಕೇಳು                                                          ॥

ವದನದ ಕುರಡಿಕುಠಾರ ಕೀಡಿಯೆಂದು ಬಿ
ಡದೆ ತನ್ನಂತೊಡಗೂಡಿದರೆ ತ  ನ್ನ ಪ
ಡೆದ ಭೂಮಿಯನದ ಬಯಸುವರೇನ  ನ್ನ ಪ
ಡೆದವರ್ಹಂಗಿಲ್ಲ ಕೂಡಿದರೆ ನೀ  ನು ಹಿ
ಡಿದುದ ಹಿಡಿವೆನು ಹೊರತಿಲ್ಲ ನಿನ್ನೊಳು
ಮೃಡ ಮೂರ್ತಿಯಾದಿಷ್ಟಲಿಂಗವ ಧರಿಸು                                                  ॥

ಮಂದಗಮನೆಗಾಗಿ ಪರಮ ಶ್ರೀ ಗುರು ಹಸ್ತ
ದಿಂದಲಿ ಇಷ್ಟಲಿಂಗವ ಧರಿಸಿ  ನಯ
ದಿಂದಲಿ ಬೇರೆ ಮಂದಿರ ರಚಿಸಿ  ನಿತ್ಯಾ
ನಂದದಿ ಚರತೀರ್ಥವನು ಸಲಿಸಿ  ಸುಖ
ದಿಂದ ಈರ್ವರ ಮನವೊಂದು ಬೆಚ್ಚಂತೆ
ಚಂದದಿ ಪುರದೊಳಗಿರಲು ಕೇಳಿತ್ತ                                                           ॥

ವರ ಪುಲಿಗೇರಿಯೊಳ್ಮೆರೆವ ಜಿನ್ನರ ಗುರು
ಬರಲಾಗ ಬಹು ಬಾಳ ಸಂಭ್ರಮದಿ  ಭೇರಿ
ಬುರುಗು ನಗಾರಿ ವಾದ್ಯದ ರವದಿ  ರಾಜ
ನರಮನೆಯೊಳು ಬಂದು ವೈಭವದಿ  ಬೇಗ
ಪರಮಾನ್ನ ಪಾಯಸ ಪಂಚಾಮೃತ ಸಹ
ಹರುಷದಿಂ ಭೋಜನಕನುವಾದರಾಗ                                                       ॥

ಚಂದದಿ ಭೋಜನ ಗೈವುತಿರಲು ಜಿನ್ನ
ವೃಂದಕೆ ಸಾಲದೆ ಬರಲನ್ನವು  ಮಗ
ಳಿಂದ ಮಾಡಿದ ಮೀಸಲಡಿಗೆಯನು  ಇನ್ನು
ತಂದು ನೀಡುವೆನೆಂದು ಬಲು  ದುಡುಕಿ
ಲಿಂದಲಿ ಮಗಳ ಮನೆಯ ಪೊಕ್ಕು ಭೂವರ ಭರ
ದಿಂದಲಿ ಒಯ್ಯಲು ಕಡುಕೋಪಿಸಿದಳು                                                     ॥

ಅನಿತರೋಳಾದಯ್ಯ ಚರಮೂರ್ತಿಗಳ ಕೂಡಿ
ಮನೆಗಾಗಿ ಬರೆ ತನ್ನ ವನಿತೆಯಳು  ಕರ
ವನು ಮುಗಿದಾಗ ತಾ ಹೇಳಿದಳು  ಮನೆ
ಸುನಿ ಬಂದು ಹೊಕ್ಕಿತು ಈಗ ಕೇಳು  ಕೆಟ್ಟ
ಬಿನಗುಮಾನವರಿವರಿರಸಲ್ಲದೈ ಸ್ವಾಮಿ
ಎನುತಲಿ ವನಜಾಕ್ಷಿ ಇನಿಯಗೆ ಪೇಳೆ                                                       ॥

ಆ ಮಾತು ಕೇಳುತ ರೋಮಾಂಚವುಬ್ಬುತ
ನಾ ಮತ್ತೆ ಜಿನ್ನನಿಕರವನು  ಕಿತ್ತು
ಗ್ರಾಮದೊಳಿವನೆಲ್ಲ ಒಡೆಸುವನು  ಈಗ
ಸೋಮನಾಥನ ತಂದು ನಿಲಿಸುವೆನು  ಅಯ್ಯ
ಈ ಮಾತು ಬಿಟ್ಟೆನಾದರೆ ಯಮಲೋಕದ
ಆ ಮಹಾಪಾತಕ ಬರಲಿ ನನಗೆಂದ                                                          ॥

ಇಂದೆಂಟು ದಿನದೊಳು ಇಂದುಧರನ ಕರೆ
ತಂದು ಉಂಬುವೆನೆಂದು ಶಪಥವನು  ಮಾಡಿ
ಮಿಂದು ಮಡಿಯನುಟ್ಟು ಮೂರ್ತಿಯನು  ಪೂಜೆ
ಚಂದದಿಂದರ್ಚಿಸಿ ಬೇಗವನು  ಕಂದು
ಕಂಧರ ಕಾಮಾರಿ ಹರಹರಯೆನುತ
ಮಂದಿರ ಪೊರಮಡಲಾ ವನಿತೆಯಳು                                                     ॥

ಬಣಗು ಜಿನ್ನನ ಕಿತ್ತು ತ್ರಿಣಯನ ನಿಲಿಸುವ
ದಣಿಯಾಗಲೆಂದು ಸೇಸೆಯನಿಟ್ಟಳು  ರತ್ನ
ಮಣಿಮಯದಾರತಿಯೆತ್ತಿದಳು  ಗುಹ
ಗಣಪರ ಜನಕನ ಸ್ತುತಿಸಿದಳು  ಒಂದು
ಕ್ಷಣಮಾತ್ರ ಆಲಸ್ಯ ಬೇಡೆಂದು ಸತಿಶಿರೋ
ಮಣಿ ತನ್ನ ಇನಿಯನ್ನ ಕಳುಹಿದಳಾಗ                                                       ॥

ಶ್ರೀ ಪುತ್ರಗರ್ವವಿಲೋಪರಹಿತ ಪಾಪ
ತಾಪತ್ರಹರ ಜಯ ಜಯಯೆನುತ  ಅಹ
ಗೋಪಸುತನೆ ಕಮಲಾಕ್ಷೆನುತ  ಗಿರಿ
ಜಾಪತಿ ಷಣ್ಮುಖ ಗಣಪಪಿತ  ಇಂದು
ಕೋಪಾಗ್ನಿನೇತ್ರ ನೀ ಗತಿಯೆಂದು ಪೊರಮಟ್ಟು
ತಾ ಪಥದೊಳಗಿಂತು ಸ್ತುತಿಸುತ ನಡೆದ                                                 ॥

ತೊಡೆಗಳದುರಿ ಬೆರಳೊಡೆದಾಗ ರಕ್ತ ಜೋ
ರಿಡುತಲಿ ಬಹು ಶ್ರಮದಿಂ ಸಾಗುತ  ದೇವ
ಕಡುಕಷ್ಟದಿಂ ನೀನೆ ಗತಿಯೆನುತ  ಬಾಳ
ನಡೆಗೆಟ್ಟೆರಡು ಮೊಣಕಾಲೂರುತ  ಅಡಿ
ಗಡಿಗೊಮ್ಮೆ ಮೃಡನೆ ಮೃತ್ಯುಂಜಯ ಹರನೆಂದು
ದೃಢದಿಂದೆ ಪೊಡವಿಯೊಳ್ನಡೆದನಾದಯ್ಯ                                              ॥

ಹೇಳಲಿನ್ನೇನು ನಾ ಬಾಳ ಶ್ರಮದಿ ಮೊಣ
ಕಾಲೊಡೆದು ರಕ್ತ ಸುರಿಯುತಲಿ  ನೋವು
ತಾಳಲಾರದೆ ದೇಹ ಕೆಡೆವುತಲಿ  ಶಂಭು
ಭಾಳಾಕ್ಷನೆಂದು ತಾನುರುಳುತಲಿ  ಹೀಂಗ
ಏಳು ದಿವಸ ಹಗಲಿರುಳು ಪೋಗಲು ಚಂದ್ರ
ಮೌಳಿಯ ಕುರುಹನು ಕಾಣದೆಯಿರಲು                                                    ॥

ಘೋರ ಬಿಡುತಲಿ ಕಾಂತಾರದೊಳಗೆ ಮನೋ
ಹಾರ ನೀ ಒಲಿಯೆಂಬೊ ಸಮಯದಲಿ  ಮದ
ನಾರಿ ಬಂದನು ವೃದ್ಧಚರ ರೂಪಿಲಿ  ಎಲೊ
ದಾರು ಎಲ್ಲಿಗೆ ಪೋಪೆ ಶ್ರಮದಿಂದಲಿ  ಗಿರಿ
ಜಾರಮಣನ ಕರೆತಹುದು ನಮಗೊಂದು
ಕಾರಣವುಂಟೆಂದೆ ಗಮಕಾದಿ ಪೋಪೆ                                                       ॥

ಅಂಬುವ ನುಡಿಗೇಳಿ ಕುಂಭಿನಿಯೊಳು ಮಹಾ
ಶಂಭು ತಾ ನಿನಗೆಲ್ಲಿ ಸಿಲ್ಕುವನೊ  ನಿನ್ನ
ಡಿಂಬವ ಕೆಡಹಿ ನೀ ಬರುವದೇನೊ  ನನ್ನ
ಅಂಬಕದಿಂ ನೋಡಿ ಮರುಗಿದೇನೊ  ತಣ್ಣ
ನಂಬಲಿಯೆನ್ನಲ್ಲೆ ಉಂಟೀಗ ಮನುಜನೆ
ಉಂಬುಣ ಹೋಗೆಂದ ವೃಷಭವಾಹನನು                                                ॥

ಏತರ ಮಾತಿದು ಮಾಡಿದ ಶಪಥಕ್ಕೆ
ನೀ ತೆವ ಆತನ ಚರಣದಲಿ  ಪ್ರಾಣ
ಘಾತವಾದರೆ ಮುಕ್ತಿ ಸ್ವರ್ಗದಲಿ  ಸೋಮ
ನಾಥನ ಬಿಡೆ ನಾನು ತಾರದಲಿ  ಉಂಬು
ವಾತುರ ಎನಗಿಲ್ಲ ಬಿಡು ಪಥಯೆಂಬುತ
ಭೂತೇಶ ಭವನಾಶನೆಂದುರುಳಿದನು                                                       ॥

ಮರಳಿ ನೋಡಲು ಚರ ಮಾಯವಾಗಿರಲಾಗ
ಹರನೆಂದರಿದು ಅಕಟೇನಾಯಿತು  ದ್ರವ್ಯ
ಕುರುಡ ಎಡಹಿದಂತೆನಗಾಯಿತು  ಭಾಗ್ಯ
ಕರ ಬಡವಗೆ ಸಿಕ್ಕು ಬಯಲಾಯಿತು  ಎಂಬ
ತೆರನ ತೋರಿದೆಯಯ್ಯ ಮುನಿದ್ಯಾ ಎನ್ನೊಡನೆಂದು
ಪರಿಪರಿ ಶೋಕದಿ ಮರುಗಿದ ಶರಣ                                                         ॥

ಕಡು ಪರದೇಶಿಯ ಹಿಡಿದು ಕಾಂತಾರದಿ
ಬಿಡುವೆ ಶಿವ ನಿಮ್ಮ ಪದಗಳಿಗೆ  ಮನ
ಸಿಡದೆ ನಾ ಪೊರೆದೆನೆಂದು ಈಗ  ತೋರಿ
ಅಡಗಿ ಪೋದೆಯಾ ಎನ್ನ ದೃಗಗಳಿಗೆ  ದುಃಖ
ನುಡಿಗೇಳಿ ಮೃಡ ತನ್ನ ನಿಜರೂಪದಲಿ ಬಂದು
ಬಿಡುಬಿಡು ಶೋಕವೆಂದ್ಹಿಡಿದು ರಂಬಿಸಿದ                                                 ॥

ಬಳಲಿದೆ ಬಾರೆಂದು ಸೆಳೆದಪ್ಪಲಾದಯ್ಯ
ಒಳಿತು ಮಾಡಿದೆ ಮುನ್ನ ಕೈಲಾಸದಿ  ವಾಕ್ಯ
ಒಳಹೊರಗಿರುವೆನೆಂಬುತ ತೋರಿದಿ  ಮುಂದೆ
ಸುಳಿದಾಡಕಾಗುದೆ ನಿರ್ದಯದಿ  ಎಲೊ
ತಿಳಿದೆನು ನಾ ನಿನ್ನ ಮನದ ಸಂಕಲ್ಪವ
ಚಲದಂತೆ ಮಾಳ್ಪೆ ನೀ ನಡೆಯೆಂದ ಹರನು                                            ॥

ಏಳು ದಿವಸ ಹೀಂಗ ಬಾಳ ಶ್ರಮದಿ ಬಂದೆ
ನಾಳೆಗೆ ನಿಲಿಸುವೆ ಶಪಥವನು  ಪಂಥ
ಬೀಳಾಗಿ ಬರುವದು ಕೊರತೆಯೇನು  ಮುಂದೆ
ಹೇಳಯ್ಯ ಬರುವಂಥ ಗುರುತವನು  ಪುರ
ದೋಳಿರು ಅಂಧಕ ಹೆಳವನಿಗೆ ಕಣ್ಣು
ಕಾಲುಗಳ್ಬಂದುದೆ ಕುರುಹು ನೋಡೆಂದ                                                  ॥

ಹೀಗೆಂಬು ವಚನವ ಕೇಳಿದಾಕ್ಷಣ ಶಿರ
ಬಾಗಿ ಶಂಕರ ನಮೊ ನಮೊಯೆನುತ  ಅನು
ರಾಗದಿ ತೊಡೆಯ ಮೇಲ್ಪವಡಿಸುತ  ಇಂಥ
ನಾಗಭೂಷಣ ಬಂದ ಸೋಮನಾಥ  ನೀವು
ಬೇಗೇಳಿರೆಂದು ಜನರನು ಎಚ್ಚರಿಸುವೋಲ್
ಕೂಗಿತು ಕುಕ್ಕುಟ ಪುರದ ಮಧ್ಯದಲಿ                                                        ॥

ಹರನ ಮಹತ್ವವನರಿವುದಿನ್ನಾರಿಗೇ
ತೆರಯಲು ಮುಸುಕ ಕಂಡನು ಪುರವ  ತನ್ನ
ಅರಮನೆಯೊಳು ಬರಲಾ ಬರವ  ಕಂಡು
ತರುಣಿಯಳು ನಮಿಸೆಯೆತ್ತುತ ಶಿರವ  ಪುರ
ಹರನ ತಂದಂಥ ವೃತ್ತಾಂತವನುಸುರಿದ
ಅರಸಿಯೊಳೊಡನೆ ತಾನತಿ ಹರುಷದಲಿ                                                ॥

ಮಲತ್ರಯ ಗೆಲಿದನು ಒಲಿಸಿದುದು ದಿಟ
ನೆಲದೊಳಗೀ ಸುದ್ದಿ ಬಾರಲೆಂದು  ಶಚಿ
ಲಲನೆಯಿವಂಥ ಡಂಗುರವುಯೆಂದು  ಪೂರ್ವ
ಚಲದಿ ದಿವಾಕರ ಮೂಡಿನಿಂದು  ಕಣ್ಗೆ
ಚಲುವಾಗಿ ತೋರಲು ಕೇಳಿತ್ತ ಪುಲಿಗೇರಿ
ಯಲಿ ಜಿನ್ನಪೂಜಕರತಿ ತವಕದಲಿ                                                             ॥

ವಾರಣದ ಮೇಲೆ ವಾರಿ ಪುಷ್ಪಾದಿಗ
ಳ್ಹೇರಿ ಬಂದರು ತೋರಬಸ್ತಿಯೊಳು  ಘನ
ದ್ವಾರ ಮುಚ್ಚಿರೆ ಅರೆಕದದೊಳು  ಬಲು
ಘೋರಬಡಲು ಎಲ್ಲಿ ಬರದಾಗಳು  ಪುಲಿ
ಗೇರಿಯನಾಳ್ವ ಪರೇಶನ ಬಳಿಗ್ಹೋಗಿ
ಸಾರಿದರಾಗ ಕೌತುಕದ ಸುದ್ದಿಯನು                                                        ॥

ಆಡಿದ ಮಾತನು ಕೇಳಿ ಪರೇಶನು
ಕೂಡಿಸಿ ಚತುರಂಗ ಮಾರ್ಬಲಲಿ  ಬಂದು
ನೋಡಿದ ಜಿನ್ನನ ಬಾಗಿಲಲಿ  ಮುಂದೆ
ತೋಡು ಮಾಡುವದೇನುಯೆಂಬುತಲಿ  ಆಗ
ಜೋಡು ಆನೆಗಳ್ಹಚ್ಚಿ ನೂಕಲೆಲ್ಲೆಲ್ಲಿ
ಕೇಡಾಗದಿರೆ ಭೂಪನಚ್ಚರಿಯ ತಾಳ್ದ                                                         ॥

ಬೆರಳ ಮೂಗಿನಲಿಟ್ಟು ಸಿರವನಲ್ಲಾಡಿಸುತ
ಬೆರಗಾಗಿ ಭೂವರನಾಡಿದನು  ಎಲೋ
ಹರಭಕ್ತನಾದಯ್ಯ ಪೋಗಿರ್ದನು  ಹೋಗಿ
ಅರಿದು ಬನ್ನಿರಿಯೆಂದು ಮನುಷ್ಯರನು  ಆಗ
ತ್ವರಿತಾದಿ ಕಳುಹಲು ಚರರಾಗ ಬಂದು ಆ
ತರುಣಿ ಶಿರೋಮಣಿಯಳ ಕೇಳುತಿಹರು                                                   ॥

ಏ ದೇವಿ ನಿನ್ನಯ ಮೋಹದ ವಲ್ಲಭನು
ಆದಯ್ಯ ಬಂದ ಹದನವ ಪೇಳು  ನಕ್ಕು
ಮೋದದಿ ಮಾತುಗಳಾಡಿದಳು  ಕಾಂತ
ಹೋದಾತ ಬಾರದೆ ನಿಂತ ಕೇಳು  ಅಂದ
ಆ ದೂತರ ಮಾತ ಕೇಳಿದಾಕ್ಷಣ ಬಂದು
ಮೇದಿನಿಪತಿಗಾಗ ಪೇಳಿದರೊಲಿದು                                                          ॥

ಬಾರದೆ ಈ ಪರಿ ತೊರೆದು ವಿಪರೀತ
ಸಾರೆಂದನಾದಯ್ಯ ಅರಮನೆಗೆ  ಪರಿ
ವಾರ ಸಹಿತ ಬಂದು ನೋಡುತಾಗೆ  ಮೃದು
ವಾರಣ ವಚನದಿ ನುಡಿಸಲಾಗೆ  ಎದ್ದು
ಆ ರಾಜನೊಡನೆ ಬರಲು ಮುಂದೆ ಹರ ಪೇಳ್ದ
ಕೇರಿಯೋಳ್ಕಂಡನು ಹೆಳವರಂಧಕರ                                                      ॥

ಒಡೆಯ ಬಂದುದು ಸತ್ಯವೆಂದರಿಯುತಲವ
ರೊಡಗೂಡಿ ಅಲ್ಲೆ ದೃಢದಿ ಬರಲು  ಬಹು
ಜಡಿದು ಕಾವಟ ಬಂಧನದಿರಲು  ಹಸ್ತ
ಇಡಲಾಗ ದ್ವಾರ ತೆರದು ನೋಡಲು  ಜಿನ್ನ
ಒಡೆದು ಬಿದ್ದಿರೆ ಬೆನ್ನೊಳಡಿಯಿಟ್ಟು ಮೃಡನಿರೆ
ಪೊಡವಿಪ ಸಹ ನಡುನಡುಗಿದರೆಲ್ಲ                                                           ॥

ಆ ಪುಲಿಗೇರಿಯೊಳ್ಸಾಸಿರದೇಳ್ನೂರು
ಆ ಪರಜಿನ್ನವನೆಲ್ಲ ವೀಕ್ಷಿಸುತೆ ಸಹ  ಜಿನ್ನ
ಲೋಪಾಗಿ ಶಿರಬಾಗಿ ಬಿದ್ದಿರಲು  ಲಿಂಗ
ಸ್ಥಾಪನೆ ಸುಸ್ಥಿರವಾಗಿರಲು  ತ್ರಾಹಿ
ಶ್ರೀಪರಮಾತ್ಮ ನಿನ್ನಯ ಸರಿಯೆಂಬುವರ್
ಪಾಪಿಗಳೈ ಹಹಯೆಂದನಾ ರಾಯ                                                           ॥

 

ಮನದೊಳು ಮರ್ದನವಾಗುತ ರಾಜನು
ಚಿನುಮಯಾತ್ಮಕ ಲಿಂಗ ದೇಹದಲಿ  ಧರಿ
ಸೆನುತಲಿಟ್ಟನು ಭಕ್ತಿಭಾವದಲಿ  ಪಾದ
ವನಜವ ಪಿಡಿಯಲು ಕರಣದಲಿ  ಪುರ
ಜನ ಸಹ ರಾಯನೆಲ್ಲರ ಗುರುಕರದಿಂದ
ಮನೋಹರವಾದಿಷ್ಟಲಿಂಗವ ಧರಿಸಿ                                                          ॥

ಧರೆಯೊಳು ಮರೆಯದೆ ಶಿವಮತ ಘನವೆಂದು
ಮೆರೆಸಿದ ಮತ್ತೆ ವೆಗ್ಗಳಿಸಿದನು  ಭೂಮಿ
ಗರಿದೆಂಬ ಮಹಿಮೆಯ ತೋರಿದನು  ಅಲ್ಲಿಂ
ದಿರದೆ ಕೈಲಾಸವ ಸಾರಿದನು  ಮಾರ
ಹರಗೆ ವಂದಿಸಲಾಗ ಕರುಣದಿಂ ತಕ್ಕೈಸಿ
ಹರುಷದಿಂ ತನ್ನಲ್ಲಿ ಇರಿಸಿದ ಶಿವನು                                                         ॥

ಆದಯ್ಯನ ಪುಣ್ಯಚರಿತೆಯ ಭಕ್ತಿ
ಯಿಂದೋದಿ ಬರೆದು ನೆರೆ ಪಠಿಸಿದರೆ  ಜನ
ರಾದವರೊಲಿದಿದ ಕೇಳಿದರೆ  ಮುಕ್ತಿ
ಸಾಧಿಸುವದು ದಿಟ ಭಜಿಸಿದರೆ  ಮತ್ತೆ
ಈ ಧರೆಯೊಳು ಕಾಮನಾಟದ ಪದಗಳ
ಸಾಧುಸಜ್ಜನರು ಸಾರಸದಿಂದ ಕೇಳಿ                                                        ॥

ಮಿತ್ರನ ಪುತ್ರ ಸಪಾತ್ರ ಹರತ್ರಯ
ನೇತ್ರ ಪರಮಗೋತ್ರ ಮಂದಿರವ  ಶತ
ಪತ್ರಜಸ್ತೋತ್ರ ಅಮೃತಕರವ  ಪುಣ್ಯ
ಕ್ಷೇತ್ರ ಶ್ರೀಕುಂದಗೋಳದಲಿರುವ  ಗುರು
ಪುತ್ರನಡಿಭೃಂಗ ಸುಪುತ್ರ ಬಸವಲಿಂಗ
ಧಾತ್ರಿಯೊಳೊರೆದ ಚರಿತ್ರೆಯ ಕೇಳಿ                                                        ॥

* * *