ಕಿತ್ತೂರ ದುಂದುಮೆ
ದುಂದುಮೆ ಕೇಳ್ರಿ ದುಂದುಮೆ ॥
ಚಂದಾದಿ ಕೇಳಿರಿ ಕಂದುಗೊರಳ ಭಕ್ತ ಮ
ಲ್ಲೇಂದ್ರನು ಗಂಧ ಸಿಂಧುರವಾಹನ
ನೆಂದು ಮರ್ತ್ಯದಲ್ಲಿ ಶಿವಕೃಪೆಯಿಂದ ಜನಿಸಿ
ಬಂದು ರಾಜಿಸುವಂಥ ದೇವೇಂದ್ರನು ॥
ಛಪ್ಪನ್ನ ದೇಶದೊಳೊಪ್ಪುವ ಕಿತ್ತೂರ
ಮುಪ್ಪಿನ ಮಡಿವಾಳ ಸ್ವಾಮಿಯರ
ಸರ್ಪಭೂಷಣ ಶಿವಭಕ್ತ ಮಲ್ಲೇಂದ್ರರ
ತಪ್ಪದೆ ಸಲಹುವಾ ಶಿವಶಂಕರ ॥
ಅರಸು ಮಲ್ಲೇಂದ್ರನ ಬರವನು ಕಂಡು
ಧರೆಯೊಳು ಕಿತ್ತೂರ ಪುರದೊಳು ದಂಡು
ಮೂರು ಪಂಚೇರಿನ ತೋಫಿನ ಗುಂಡು
ಅದರ ವಿಸ್ತಾರವು ಪರಿಪರಿದಂದು ॥
ಛತ್ರಚಾಮರ ನಿತ್ಯ ಆನೆಯಂಬಾರಿ
ಚಿತ್ರದ ಪಾಲಕಿ ಸುತ್ತ ವಿಸ್ತಾರ
ಮುತ್ತಿನ ಪಾಲಕಿ ಹತ್ತುವರಾರು
ಸತ್ಯುಳ್ಳ ಮಲ್ಲೇಂದ್ರ ಭೂಪನೆಂಬವರು ॥
ಸರಳಗಟ್ಟಿಗೆ ಸಾಲು ಕುದುರೆಯ ಮುಂದ
ನಿವಳಾಗಿ ಮುರ್ಛಾಲು ಎಡಬಲದಿಂದ
ಭೂವರ ಮಲ್ಲೇಂದ್ರ ಬರುವದು ಚಂದ
ವರ ಪುಣ್ಯ ವಿಸ್ತಾರ ಹೇಳುವೆ ಮುಂದ ॥
ಶಿವಪೂಜೆ ಸಂಭ್ರಮ ಕೇಳಿರೆಲ್ಲಾರು
ತಾವರೆ ಪುಷ್ಪವು ಮೂರು ಸಾವಿರು
ದೇವರ ಅಭಿಷೇಕ ಪರಿಪರಿ ಕ್ಷೀರು
ದೇವ ಸೇವೆ ಮಾಡುವಂಥ ಶರಣಾರು ॥
ಪರಸ್ತ್ರೀಯರೆಲ್ಲರು ತಾಯಿ ಸಮಾನ
ಪತಿವ್ರತ ಆಚಾರ ನಡಿಸುವ ನೇಮ
ಶರಧಿಯ ಧರಿಸಿದ ಭಕ್ತನ ಗ್ನಾನ
ಗುರುಸಿದ್ಧ ಚರತಿಯ ಗುರುವಿನ ಧ್ಯಾನ ॥
ಆಷಾಢ ಮುಂದಿನ ಮಾಸದ ಭಕ್ತಿ
ಲೇಸಾಗಿ ಪೇಳುವೆ ಕೇಳಿರಯ್ಯ
ಸಾಸಿರ ಸಾಕು ಕಡೆಮನಿ ವಿಲಕ್ಷಣ
ಭಿಕ್ಷೆ ನೀಡುವಂಥ ಭಕ್ತ ಕಾಣಯ್ಯ ॥
ಶ್ರಾವಣ ಮಾಸದಿ ಭಕ್ತಿಯ ನೋಡು ದೈವ
ಜಂಗಮ ಕೂಡಿ ಸಾವಿರ್ಹನ್ನೆರಡು
ಭವ ಶುದ್ಧ ಆಶೀರ್ವಾದ ಕೊಂಡು
ಭೂವರ ಮಲ್ಲೇಂದ್ರಗಿನ್ನಾರು ಜೋಡು ॥
ಮಾರಾರಿ ಭಕ್ತ ಮಲ್ಲೇಂದ್ರನು ಧೀರ
ಆರು ಆನೆಯ ದಾನ ಕೊಟ್ಟಾನು ಸೂರ
ಧರೆಯೊಳು ಮಲ್ಲೇಂದ್ರ ವರ ಪುಣ್ಯಗಾರ
ಸಿರವೈದು ಉಳ್ಳಾನ ದಯ ಪರಿಪೂರ ॥
ಚೆನ್ನಿಗ ಚೆಲ್ವಿನ ಭಕ್ತ ಪ್ರತಾಪ
ಪುಣ್ಣೇದ ಶ್ರೀಮಂತ ಕೇಳಿದಾ ಭೂಪ
ಮಾನ್ಯ ಮಾನ್ಯರೊಳು ನುಡಿದ ಶ್ರೀಮಂತ
ಆನೆ ನೆರಳ ಭೂಪ ಭೋಗ ಸುರಪ ॥
ಕಿತ್ತೂರ ನಗರಕ್ಕೆ ಹೋಗಿ ಬಾರೆಂದು
ಮುತ್ತಿನ ಮಾಲೆಯ ಸರವನು ತಂದು
ಸತ್ಯಸುವಿಚಾರನಂದು ಅಚ್ಚ ಹೊನ್ನಿನ
ಹತ್ತುಸಾವಿರ ದ್ರವ್ಯ ಹಾರಿಸುಯೆಂದ ॥
ಪಟ್ಟದ ಹಿರಿಬಾಜೀರಾಯನು ಬೇಗ
ಶ್ರೇಷ್ಠ ಕಾರಭಾರಿ ಮಾಣಿಕೇಶ್ವರನಾಗ
ಸೃಷ್ಟಿಯೊಳಗೆ ಕಿತ್ತೂರರಸಿನ ಈಗ
ಎಷ್ಟು ಹೇಳಲಿ ಅವರ ಪುಣ್ಯವಿಂದಿಗೆ ॥
ಕಾರ್ತಿಕಸ್ವಾಮಿ ಬೆಟ್ಟ ನೆವವ ಮಾಡಿ
ಹೊರಟಾನು ಮಣಿದು ಶಹರವ ಬಿಟ್ಟು
ಅರ್ತಿಯ ಎಡಬಲ ನಿತ್ಯದಿ ಪೊಗಲಾರು
ಗುರುತದ ಬಲಹೊಸ್ತು ಅಭಯವ ಕೊಟ್ಟು ॥
ರಸ್ತೆ ಮಾಧವರಾಯ ಬಂದನು ಪುಂಡ
ವಿಸ್ತಾರದಿ ಅಲ್ಲೆ ತಂದನು ದಂಡ
ಹಸ್ತಿ ಕುದುರೆ ಮಂದಿ ಕೂಡಿತು ಹಿಂಡ
ಮಸ್ತದಿ ಸಾಲಾಗಿ ನಡೆದ ಪ್ರಚಂಡ ॥
ಹೊರಟಿತು ಐವತ್ತು ಸಾವಿರ ಫೌಜು
ಪಟವರ್ಧನರೆಡಬಲ ಬಂದರು ಬಾಜು
ಆನೆ-ಕುದುರಿ-ಒಂಟಿ ಕಟ್ಟೀತು ರೇಜು
ತಾನೊಂದು ಶ್ರೀಮಂತ ಮಾಡಿದ ಮೋಜು ॥
ಪಂಢರ ಪುರದೊಳು ಕೂಡಿತು ದಂಡು
ಮಂಡಲ ಕುದುರೆಯ ದೂಡಿತು ದಂಡು
ಹೆಂಡರ ಮಕ್ಕಳನಾ ಕೂಡಿಕೊಂಡು
ಝಂಡೆಗಟ್ಟಿತು ಹಿರಿಹೊಳಿಯೊಳು ದಂಡು ॥
ನಾಲ್ಕಾರು ದಿನ ಅಲ್ಲಿ ಛಾವಣಿ ಮಾಡಿ
ಏಕಚಿಂತಾಮಣಿರಾಯನ ಕೂಡಿ
ಪಂಕ್ತಿಯ ಜೋಡಿ ಹೋಳಿಗಿ ತುಪ್ಪಾ ನೀಡಿ
ರೊಕ್ಕರೂಪಾಯಿ ವರ ಭಿಕ್ಷಾವ ಮಾಡಿ ॥
ಅಪ್ಪ ದೇಸಾಯಿ ತಾ ಬಂದಾನು ಧೀರ
ತೋಪು ತಂದಾನು ನೋಡುತ ಹದಿನಾರ
ಅಪ್ಪ ನಿಪ್ಪಾಣಿಯ ಅವ ಶಮಶೇರ
ಒಪ್ಪಿತು ಫೌಜವು ಹತ್ತು ಸಾವಿರ ॥
ನಣದಿಗೀ ಹಳ್ಳಕ ಇಳಿಸಿದ ತಂದು
ಖಣಖಣ ದ್ರವ್ಯ ನಿವಾಳಿಸಿ ನಿಂದು
ಹಣಗಳ ಸೂರಿಮಾಡಿದ ಬಾಳೊಂದು
ಜಾಣ ದೇಸಾಯಿ ಅಪ್ಪಾಸಾಹೇಬನಂದು ॥
ಎಲ್ಲಾರು ಒಂದಾಗಿ ಮುಂದಕೆ ಸಾಗಿ
ನಿಲ್ಲದೆ ಗೋಡ್ಗೇರಿಗೆ ಇದಿರಾಗಿ
ಬಲ್ಲಿದ ಚಂದಿರ ಗುಣವತಿ ಸಾಗಿ
ಇಲ್ಲೆ ಬಂದಿಳದೀತು ಹೊಂಗಲಿಗೆ ॥
ಹೊಂಗಲ ಪುರದೊಳು ಕಂಡಾನು ತೋಟ
ಮಂಗಲಕರವಾಗಿ ಕಂಡೀತು ನೋಟ
ಶೃಂಗಾರ ವನದೊಳು ಹಾಕಿದ ಊಟ
ಗಾಂಗೇಗ ಶ್ರೀಮಂತ ಆಡಿದ ಆಟ ॥
ಒಂದು ದಿನ ಅಲ್ಲಿ ಛಾವಣಿ ಮಾಡಿ
ಮುಂದಕ್ಕೆ ಕೆರೀಪಾಳೆವ ನೋಡಿ
ಬಂದಿತು ಬಾಜೀರಾಯನ ದಳಗೂಡಿ
ಚೆಂದದಿ ಕುದುರೆಯ ರಥಗಳ ಹೂಡಿ ॥
ಮರುದಿನ ಹೊತ್ತೇರಿ ಇಳಿವಿದ ದಂಡು
ಬೆರಗಾದ ಬಾಜೀರಾಯ ಪ್ಯಾಟಿಕಂಡು
ಹರದಾರಿ ಅಂಗಡಿ ಜವಳಿಯ ದಿಂಡು
ಕರೆದು ದೈವದವರ ಸೆಟ್ಳರ ಹಿಂಡು ॥
ಎಲ್ಲ ದೈವಕೆ ಕೊಂಡೆಸೆದ ವಸ್ತ್ರಪಾತ್ರಗಳ
ನಿಲ್ಲದೆ ನುಡಿಸಿದ ಭೇರಿ ಕಹಳೆಗಳ
ಅಲ್ಲಿಂದ ಸೊಂಡೂರ ದೇವ ಯತಿಗಳ
ಬಲ್ಲೀದ ಕಾರ್ತಿಕಸ್ವಾಮಿ ಜಾತ್ರೆಗಳ ॥
ಪಾರ್ವತೀ ಪುತ್ರನ ಕಂಡು ಶ್ರೀಮಂತ
ಪರ್ವತ ಗಿರಿಯನು ಹತ್ತಿದ ಸಮರ್ಥ
ಉರಗ ಭೂಷಣರೂಪ ಕಾರ್ತಿಕ ಕರ್ತ
ಬೇಕೆಷ್ಟು ಧರ್ಮ ಮಾಡಿದ ಬಾಳರ್ಥ ॥
ಬಾಜೀರಾಯನು ಭಕ್ತಿ ಮಾಡಿದ ಬಾಳ
ಮೂಜಗದೊಡೆಯನು ಮುಂದೆ ಧರ್ಮಗಳ
ರಾಜೇದ ಬ್ರಹ್ಮರಿಗೆ ಅನ್ನದಾನಗಳ
ಪೂಜಿಗಟ್ಟಿದ ಮುತ್ತುಮಾಲೆ ರತ್ನಗಳ ॥
ಅಕ್ಷರ ಮೂರುಳ್ಳ ಶಿಖರಕ್ಕೆ ಒಂದು
ಲಕ್ಷವರದ ಕಳಸ ಇಟ್ಟಾನು ತಂದು
ಸಾಕ್ಷಿ ತಾ ಕಾರ್ತಿಕೇಶ್ವರಗ ಮತ್ತೊಂದು
ಅಪೇಕ್ಷ ಮಾಡಿದ ಸುತರು ಬೇಕೆಂದು ॥
ಪುತ್ರನ ಬಯಸಿದನು ಬಾಜೀರಾಯ
ಕಾರ್ತಿಕೊಜ್ರ ಉಡುಗರೆ ತುರಾಯ
ಪ್ರಾರ್ಥನೆ ಮಾಡಿದ ಭಕ್ತಿ ಸಾರಾಯ
ಪರ್ವತ ಗಿರಿಯಿಂದ ಇಳಿದ ಮಹಾರಾಯ ॥
ರಂಗಮಂಟಪ ಚಂದ್ರ ಸತಿಗೆ ಪರಮ
ಭಂಗಾರ ಕಳಸ ಹೊಳೆವ ದೇವಾರವ
ಗಂಗಾಧರನ ವರಪುತ್ರನ ಕರವ
ಮಂಗಲ ಪದವಿಯ ಕೊಡುವನು ಪವರ ॥
ಹಂಪಸಾಗರ ನಡೆದು ಗೂಡೂರ ದಾಟಿ
ಕೆಂಪು ಕನಕಗಿರಿಯ ಹೊಸ ಪ್ಯಾಟಿ
ಅಪರಿಮಿತವಾದ ಬಾಗಡ ಕೋಟಿ
ತಪ ದೂರವಾಯಿತು ಖಾದಿಯ ಕೋಟಿ ॥
ಬೂದಿಹಾಳದ ಆಚಾರಿಯ ಕಂಡು
ಬಾದಾಮಿಯ ತಳದೊಳು ಇಳಿಸಿದ ದಂಡು
ಆ ದಿನ ಶರಣರ ಬೆಟ್ಟಿ ತಕ್ಕೊಂಡು
ಹೋದಾನು ದೀಕ್ಷಿತರ ಪಾದಕ್ಕೆಯೆಂದು ॥
ಗುರ್ಲಹೊಸೂರ ಹೊಕ್ಕ ಶ್ರೀಮಂತ
ಆರು ಮೂರು ತಾಸು ಹರುಷಾಗಿ ನಿಂತ
ಧರೆಯೊಳು ದೀಕ್ಷಿತರ ಪಾದ ಪವಿತ್ರ
ಭರ್ಜರಿ ತಸರೀಪ ಕೊಡಿಸಿದ ವಸ್ತ್ರ ॥
ಕಿತ್ತೂರ ಮಲ್ಲೇಂದ್ರ ಭೂಪನು ಕೇಳಿ
ಹತ್ತು ಸಾವಿರ ಮಂದಿ ಹಿಡಿಸಿದ ಕಾಳಿ
ಅತ್ತಿ ನೀಲವ್ವಗ ದುಃಖವ ಪೇಳಿ
ಪುತ್ರರ ಜೋಕೆಂದು ಧೈರ್ಯವ ತಾಳಿ ॥
ಅತ್ತಿಯ ಪಾದಕ್ಕೆ ವಂದನೆ ಮಾಡಿ
ಸತ್ಯುಳ್ಳ ತಾಯಿ ನೀಲವ್ವನ ಕೊಂಡಾಡಿ
ಬಂತವ್ವ ಶ್ರೀಮಂತ ಬಾಜೀರಾಯ ನೋಡಿ
ಇರಬೇಕು ಸತಿಯರು ಪ್ರೀತಿಂದ ಕೂಡಿ ॥
ಹಿರಿಯ ಬಾಪುಸಾಹೇಬನ ಕರೆದ ಮಲ್ಲೇಂದ್ರ
ಮರಗಬ್ಯಾಡ ನನ್ನ ಮಗನೆ ದೇವೇಂದ್ರ
ಬರತೀನಿ ಕೇಳೊ ಬೇಗನೆ ಅಮರಸುಂದ್ರ
ಶರಿರಕೊಪ್ಪುವ ಮುಖ ಸೂರ್ಯಚಂದ್ರ ॥
ಬರೆಸಿದ ಅರಮನಿ ಬಂದರ ಬದಕ
ವರ ವಜ್ರಮುತ್ತುಮಾಣಿಕ ದೊಡ್ಡ ಪದಕ
ಹರುಷದಿ ಗಳಿಸಿದ ಅರಮನಿ ಬದುಕ
ಕರೆದು ಒಪ್ಪಿಸಿದನು ಬಾಪುಸಾಹೇಬನ ಜರಕ ॥
ಆನೆ ಕುದುರೆ ಮಂದಿ ತೋಪೆಲ್ಲ ತರಿಸಿ
ನೀನು ಸಲಹು ಎಂದು ಹಸ್ತಾವ ಇರಿಸಿ
ಜ್ಞಾನುಳ್ಳ ಬಾಪುಸಾಹೇಬನ ಹರಸಿ
ಅನುವಾಗಿ ಮಗನಿಗೆ ಬುದ್ಧಿಯ ಸುರಿಸಿ ॥
ಚಿಕ್ಕ ತಮ್ಮರೊಳು ಪ್ರೀತಿಲಿ ಕೂಡಿ
ಅಕ್ಕರದಿಂದಲ್ಲಿ ಕೂಡಿ ಮಾತಾಡಿ
ಮಕ್ಕಳು ನೀವಿಬ್ಬರೂ ಒಡಗೂಡಿ
ದುಕ್ಕ ಸೈರಿಸೋ ನಿನ್ನ ಹಡೆದಾಕಿ ನೋಡಿ ॥
ಸತಿಯ ಚನ್ನವ್ವನ ಪ್ರೀತಿಯ ಗಂಡ
ಅತಿ ದುಃಖ ಮಾಡಿದ ಮಲ್ಲೇಂದ್ರ ಪುಂಡ
ಸತಿಯಾರು ಭೂಮಿಗೆ ಹೊರಳಿದ್ದು ಕಂಡ
ಪತಿ ಮಲ್ಲೇಂದ್ರಭೂಪ ತಾನೆತ್ತಿಕೊಂಡು ॥
ಅಳಬೇಡ ನೀ ನನ್ನ ಕಳ್ಳುಳ್ಳ ಸತಿಯೆ
ಎಳೆಯ ಮಕ್ಕಳ ಮ್ಯಾಲ ಇರಬೇಕು ರತಿಯ
ಬಳಗಕ್ಕೆ ಕುಡುತಲಿ ನೀ ಮೇಲ್ಮತಿಯ
ಬಾಳಲೋಚನ ಶಿವಪಾದವೆ ಗತಿಯ ॥
ರಾಜಲಕ್ಷ್ಮಿ ಆಳಿಕೊಂಡಿರು ನೀನು
ಬಾಜೀರಾಯನ ಕೂಡ ಹೋದೇನು ನಾನು
ಮೋಜೀನ ಹಿರಿಯತ್ತಿ ನೀಲವ್ವನು
ಭುಜಬಲ ಐದಾನು ಬಾಪುಸಾಹೇಬನು ॥
ಮಡದಿ ಕರೆದು ಅತ್ತಿಕೈಯೊಳು ಕೊಟ್ಟು
ನಡುವಿನ ಪುತ್ರನ ಕರಕೊಂಡು ಹೊಂಟು
ಗಡೆ ಕಿಲ್ಲೆದೊಳು ಶಿವಬಸಪ್ಪನ ಇಟ್ಟು
ಎಡಬಲ ಮಕ್ಕಳೊಳು ನೀನು ಶ್ರೇಷ್ಠ ॥
ಗುರುಪುತ್ರ ವೀರಪ್ಪಗ್ಹೇಳಿದ ಬುದ್ಧಿ
ಬರೆಬರೆದು ಕಳಸಯ್ಯ ಅರಮನಿ ಸುದ್ದಿ
ಪರದಂಡು ಬಂದರ ಹಾಕೈ ಗುದ್ದಿ
ಕರೆದು ಹೇಳಿದನು ಕುರುಬರಿಗೆ ಬುದ್ಧಿ ॥
ಅರಮನಿ ಅಂಗಳ ಹೊರೆಯಕ್ಕ ಬಂದು
ವರಪುತ್ರ ಬಾಪುಸಾಹೇಬನ ಕರೆತಂದು
ಹಿರಿಯಳ ವಾಕ್ಯವ ಮೀರಬೇಡೆಂದು
ಗುರುತದ ವಚನವ ತಕ್ಕೊಂಡ ನೊಂದು ॥
ಆರು ಸಾವಿರ ಫೌಜು ಕೂಡಿ ಮಲ್ಲೇಂದ್ರ
ಸ್ವಾರಿ ಹೊಂಟಿತು ಅಮರಾವತಿಯ ದೇವೇಂದ್ರ
ಏರಿದನಾನೆ ಅಂಬಾರಿಯ ನಂದ
ಭರದಿಂದ ಹೊಂಗಲಕ ಬಂದ ಮಲ್ಲೇಂದ್ರ ॥
ಹರಿಭಕ್ತ ಬಾಜೀರಾಯನು ಸಾಗಿ
ಮರಿಹಾಳ ದಾಟಿ ಇಳಿದಾನು ಹೋಗಿ
ದೊರೆ ಮಲ್ಲಸರ್ಜನು ತಾ ಇದಿರಾಗಿ
ಪರಿಗಟ್ಟಿ ನಿಂತಾನು ತಾ ಚಲುವಾಗಿ ॥
ಕಿತ್ತೂರ ದೇಸಾಯಿ ಬಂದದ್ದು ಕಂಡು
ಹಂತೇಲಿದ್ದವರನ್ನು ತಾ ಕರೆಸಿಕೊಂಡು
ಉತ್ತರದೇಶಕ್ಕೆ ನಡೆಸಿದ ದಂಡು
ಸತ್ಯುಳ್ಳ ಬೆಳಗಾವಿ ಕಿಲ್ಲೇವ ಕಂಡು ॥
ಪುಣೇದ ಮಾರ್ಗವ ಹಿಡಿಸಿದ ಫೌಜು
ಮಾನ್ಯ ಮಾನ್ಯರೆಡಬಲ್ಲ ಬಂದರು ಬಾಜು
ಆನಿ ಕುದುರಿ ಒಂಟಿ ಕಟ್ಟೀತು ರೇಜು
ತಾನೊಂದು ಶ್ರೀಮಂತ ಮಾಡಿದ ಮೋಜು ॥
ಎಡೆಯೂರ ಕೃಷ್ಣನ ಹೊಳೆಯೊಳಗೆಲ್ಲ
ಬಿಡದೆ ನಮ್ಮವರಿಗೆ ಮಾಡಿದ ಗುಲ್ಲ
ನಡುನಾಡ ಹೊಂಗಲದೊಳು ಬರಲಿಲ್ಲ
ಗೌಡ ಶೇಗುಣಿಸಿ ತಾ ಬಂದಾನಲ್ಲ ॥
ಮುಂದಕೆ ಮಿರ್ಜಿಯ ಪುರವನು ದಾಟಿ
ತಂದನು ಶೇಗುಣಿಸಿ ಗೌಡನು ಚೀಟಿ
ಚಂದುಳ್ಳ ತುರಾಯಿ ಮುತ್ತಿನ ಕಂಟಿ
ಮೂರುಸಾವಿರ ಬಿದ್ದ ಜರದ ದುಪ್ಪಟ್ಟಿ ॥
ಅಲ್ಲಪ್ಪ ಗೌಡನು ಹೇಳಿದ ವಾರ್ತಿ
ಬಲ್ಲೀದ ಕಿತ್ತೂರ ದೊರೆಗಳ ಕೀರ್ತಿ
ಎಲ್ಲರೊಳಗೆ ದಯ ಇರಬೇಕು ಪೂರ್ತಿ
ಮಲ್ಲಸರ್ಜಗ ರೊಕ್ಕ ಇಲ್ಲೆಂದ ಕೊರ್ತಿ ॥
ಶ್ರೀಮಂತ ನುಡದಾನು ಗೌಡನ ಜೋಡ
ಜುಮೇದಾರನಾಗಿ ಒಗೆದಾನು ನಾಡ
ಬ್ರಹ್ಮರು ಮರು ಒಗತಾನ ಮಾಡಿದ ಕೇಡ
ನಮ್ಮ ಜೋಯಿಸರ್ನ ಬಡಿತಾನ ನೋಡ ॥
ಸರಕಾರ ಎದುರಿನ ಬಾಕಿಯ ರಸ್ತಾ
ದರಕಾರ ಇಲ್ಲೆಂದು ಇಟ್ಟುಕೊಂಡ ಸ್ವಸ್ತಾ
ಹಿರಿಮಾಣಿಕೇಶ್ವರನೊಳು ಮಾಡಿದ ಕಸ್ತಾ
ದೊರೆ ಮಲ್ಲಸರ್ಜನು ಮಾಡಿದ ಮಸ್ತಾ ॥
ಬಾಕಿಯ ನಕಾರು ಲಕ್ಷವ ಹೊರಿಸಿ
ಹಾಕಿದ ಅಲ್ಲಪ್ಪ ಕತಬಿಯ ಬರಿಸಿ
ವಕೀಲ ಮಾಡಿದ ರಸ್ತಾವ ತರಿಸಿ
ಜೋಕಿಲೆ ಹೇಳಿದ ಮಲ್ಲಸರ್ಜನ ಕರಸಿ ॥
ಆರು ಲಕ್ಷಕ ಗೌಡ ಜಾಮೀನ ಆದ
ವೀರಪ್ಪದೇಸಾಯಿ ಭೇಟಿಗೆ ಹೋದ
ಶೂರ ಬಾಜೀರಾಯ ಕೇಳಿದ ಭೇದ
ಬಾರೆಂದು ಹಸ್ತವ ಪಡದವನಾದ ॥
ಮಲ್ಲೇಂದ್ರ ಮಗನಿಗೆ ವಸ್ತ್ರವ ಕೊಡಿಸಿ
ನೆಲ್ಲಿಕಾಯಂಥ ಮುತ್ತುಗಳಿಡಿಸಿ
ಅಲ್ಲಾಬ ಜರತರ ಡಗಲಿಯ ತೊಡಿಸಿ
ಜಲ್ಲಿ ಸತ್ತಿಗೆ ಮುತ್ತಿನ ಗೊಂಡೆ ವಹಿಸಿ ॥
ಮಲ್ಲೇಂದ್ರ ಮಗನಿಗೆ ಮೆಚ್ಚಿ ಶ್ರೀಮಂತ
ಪಾಲಕಿ ಚಾಮರ ಹಿಡಿಸಿದ ಛತ್ರ
ಇಲ್ಲಿಂದ ತಿರುಗಿ ನೀ ನಡೆಯಲೊ ಪುತ್ರ
ಬಲ್ಲೀದ ಶ್ರೀಮಂತ ಹೇಳಿದ ಉತ್ರ ॥
ಕಿತ್ತೂರ ದೊರೆಗಳಿಗೆ ಅಪ್ಪಣೆ ಕೊಟ್ಟು
ಉತ್ತಮ ಬಾಜೀರಾಯನು ದಯವಿಟ್ಟು
ಕುತ್ತೀಗಿ ಕೋದು ಹಿಂದಕ ತಾ ಹೊಂಟು
ಮತ್ತೊಂದು ಗೌಡ ಮಾಡಿದ ಬುದ್ಧಿ ಕೆಟ್ಟು ॥
ಆರು ಲಕ್ಷಕ ಎನ್ನ ಜಾಮೀನ ಕೊಟ್ಟು
ದಾರಿಯೊಳ್ಹಿಂದಕ್ಕೆ ತಿರುಗಿದಿ ಹೊಂಟು
ಬಾರಯ್ಯ ಶ್ರೀಮಂತ ಸ್ವಾರಿಯ ಗುಂಟ
ಬರುವಂತೆ ಶ್ರೀಮಂತಗೋಸ್ತ್ರವ ಕೊಟ್ಟ ॥
ಅಲ್ಲಪ್ಪಗೌಡನ ಮಾತನು ಮೀರಿ
ಮಲ್ಲೇಂದ್ರ ಹಿಂದಕ್ಕೆ ಬರಲಿಲ್ಲ ಸಾರಿ
ನಿಲ್ಲದೆ ಪಟ್ಟದ ಆನೆಯನೇರಿ
ಇಲ್ಲಿಂದ ಒದಗಿ ಬಂದಿತು ಇದಿಮಾರಿ ॥
ಅರುವತ್ತು ಸಾವಿರ ಫೌಜವ ಕೂಡಿ
ಹರಿಭಕ್ತ ಬಾಜೀರಾಯನ ಒಡಗೂಡಿ
ಸೆರೆಹೊಕ್ಕನು ಪುಣ್ಯದರವಾನೀ ನೋಡಿ
ಭೇರಿ ದುಂದುಭಿ ಕರಿ ತೋಫಿನ ಗಾಡಿ ॥
ಊರ ಬಿಟ್ಟು ಹರದಾರಿ ಇಳಿದಿತು ದಂಡು
ಘೋರಾಗಿ ಫೌಜೆಲ್ಲ ಆದೀತು ಬಂಡು
ನೂರಾರು ವೈರಿಯ ಕಣ್ಣೀಲೆ ಕಂಡು
ಪೂರ ಘಾತವ ಮಾಡಿದ ಅಲ್ಲಪ್ಪಗೌಂಡ ॥
ಸುತ್ತಿನ ದೇಶಪಾಂಡೆಯರೆಲ್ಲರು ಕೂಡಿ
ಹತ್ತು ವರ್ಷದ ಬಾಕಿ ಲೆಖ್ಖವ ಮಾಡಿ
ಎಂತೆಂಥವರಿಗೆ ಹಾಕಿದ ಬೇಡಿ
ಸತ್ತರ ಬಿಡಲಿಲ್ಲ ಕಟ್ಯಾರ ಕೂಡಿ ॥
ಬೈಲೂರ ದೇಶಪಾಡೆರೆಲ್ಲರ ಮನಹೇಸಿ
ಬಲ್ಲೀದ ಬಾಜೀರಾಯನ ಓಲೈಸಿ
ತಲೆಯ ಮೇಲಿನ ಕಳಸ ನೆಲಕ ಅಪ್ಪಳಿಸಿ
ಮಲ್ಲೇಂದ್ರ ಮಾಡಿದ ಉಪದ್ರವ ನೆನಿಸಿ ॥
ಕೇಳಿ ಶ್ರೀಮಂತನು ಆದಾನು ಸಿಟ್ಟ
ಒಳಗ ಮುದೋಳದವರ ಮನೆಯನು ಕೊಟ್ಟ
ತಿಳಿಯ ಬಂದ ಕುದುರಿಯ ಚೌಕಿಯ ಇಟ್ಟ
ಕಳೆಗುಂದಿ ಮಲ್ಲೇಂದ್ರ ಕೈಕಾಲು ಬಿಟ್ಟ ॥
ಕಿತ್ತೂರ ಪುರದೊಳು ನೀಲವ್ವ ತಾಯಿ
ಸತ್ಯುಳ್ಳ ಮಲ್ಲೇಂದ್ರ ಭೂಪಗ ಮಾಯಿ
ಮತ್ತ ಬರಲಿಲ್ಲ ಬಿಡತಾಳ ಬಾಯಿ
ಅತ್ತ ಹೋದನು ಮಲ್ಲಸರ್ಜದೇಸಾಯಿ ॥
ಮಡದಿ ಚನ್ನವ್ವನು ಚಿಂತಿಲೆ ಬಾಳ
ಸಡಗರ ಸಂಪತ್ತು ಬಿಟ್ಟು ಮನೆಯೊಳು
ಒಡೆಯ ಮಲ್ಲೇಂದ್ರನ ಒಡಸಾಗ್ಯಾಳ
ಕೂಡಿ ಮಾತಾಡಿ ಚನ್ನವ್ವತಾಯಿಗಳು ॥
ಗಂಡಮಾಲೆ ಹುಣ್ಣು ಹುಟ್ಟೀತು ಆಗ
ಬೆಂಡಾಗಿ ಒಣಗಿದ ಗೌಡನು ಬೇಗ
ಕಂಡೇನು ಶೇಗುಸಿಣಿ ಪುರವನು ಹ್ಯಾಗ
ಗಂಡುಮಕ್ಕಳ ಕಾಣದಂಗಾದೀತ್ಹೀಗ ॥
ಡೋಲಿಯೊಳಗೆ ಕುಂತು ಪುಣೇವ ಬಿಟ್ಟು
ಮಲ್ಲೇಂದ್ರ ಭೂಪನ ಪುಣ್ಯವಳವಟ್ಟು
ಆಲದ ಶೇಗುಣಿಸಿ ಪುರಕೆ ತಾ ಹೊಂಟು
ಗಲ್ಲವೊಡೆದು ಗೌಡ ತಾ ಪ್ರಾಣವ ಬಿಟ್ಟ ॥
ಶೇಗುಣಿಸಿ ಗೌಡನು ಎಂತೆಂಥ ಧನಿಕ
ಆಗ ಮಲ್ಲೇಂದ್ರನು ಮಾಡಿ ದುಃಖ
ಆಗ ಖರ್ಚಿನು ಮಾಡಬೇಕೆಂದು ರೊಕ್ಕ
ಆಗಲೆ ಹೋದನು ಕಾರಭಾರಿ ಪಕ್ಕ ॥
ಈಗ ಸಂಗಪ್ಪನು ಕರದಾನು ಭೂಪ
ಕರದಾನು ಕಣ್ಣು ಕೆಂಪಗೆ ಮಾಡಿ ಕೋಪ
ದೊರೆ ಮಲ್ಲಸರ್ಜನು ಹೇಳಿದ ಶಾಪ
ದರಬಾರಕ್ಹೋಗಂದ ದಿನ ಹತ್ತು ಕೇಪ ॥
ಮಾಣಿಕೇಶ್ವರನಲ್ಲಿ ಮುನಿದಾರು ಅವರು
ಪ್ರಾಣ ಸಂಕಟವನ್ನು ಮಾಡಿದರವರು
ಜಾಣ ಕಾರಕೂನರು ಕೊಡಲಿಲ್ಯ್ರು
ಕ್ಷೋಣಿಕ್ಷೋಣಿ ದ್ರವ್ಯ ಸೂರಿಮಾಡಿದರು ॥
ಬಾಜೀರಾಯನ ಭೆಟ್ಟಿ ಮಾಡವರಿಲ್ಲ
ರಾಜರಾಜರ ಕೂಡಿ ಬೆರಗಾದರಲ್ಲ
ತೇಜಿ ಏರಿಹೋದರ ಪರವಾನಿಗಿಲ್ಲ
ರಾಜ ಮಲ್ಲೇಂದ್ರನು ಸೊರಗಿದನಲ್ಲ ॥
ವೀರಸಂಗಪ್ಪಗ ಹೇಳಿದ ಅರಸ
ಕರ್ಹಾಡ ತಾಳದೊಳು ಆಯಿತು ಸರಸ
ವೀರಸಂಗಪ್ಪಗ ಮಾಡಿದ ಬರಸ
ಇರಬೇಕು ಮತ್ತೆ ಇನ್ನೇಸು ವರುಷ ॥
ಬಾಜೀರಾಯನು ಬಂದು ಹೊಕ್ಕಾನು ತೋಟ
ರಾಜರಾಜರು ಕೂಡಿ ಆಡಿ ನೀರಾಟ
ಮೋಜೀಲೆ ಮಲ್ಲೇಂದ್ರಗ್ಹೇಳಿದ ಊಟ
ರಾಜಾಧಿಪತಿ ಬಾಜೀರಾಯನು ಶ್ರೇಷ್ಠ ॥
ಶೀಲವಂತನು ಮಲ್ಲಸರ್ಜನು ಭೂಪ
ಒಲ್ಲೆನೂಟಕೆಂದರೆ ಬಂದೀತು ಪಾಪ
ಬಲ್ಲೀದ ಶ್ರೀಮಂತ ಮಾಡ್ಯಾನು ಕೋಪ
ಮಲ್ಲಸರ್ಜನು ಮುಂದಕ್ಹಾಕಿದ ಲಾಪ ॥
ಕಾಂತ ಶ್ರೀಮಂತನಿಗ್ಹೇಳಿದರಲ್ಲ
ಕಿತ್ತೂರ ದೇಸಾಯಿ ಊಟಕ್ಕೆ ಒಲ್ಲ
ಸತ್ಯುಳ್ಳ ಶಿವಭಕ್ತ ಉತ್ತಮ ಶೀಲ
ಮತ್ತೆ ಫರಾಳಕ್ಕೆ ಬರುವ ಕುಶಾಲ ॥
ಅರಮನೀ ರಂಗಮಂಟಪವ ಸಾರಿಸಿ
ಪರಿಪರಿಯ ಹಣ್ಣುಸಕ್ಕರಿ ತರಿಸಿ
ದೊರೆ ಮಲ್ಲಸರ್ಜನನ ಬೇಗನೆ ಬರಿಸಿ
ಪರಿಪೂರ್ಣ ಪಂಚಫಳಾರವ ಬೆರೆಸಿ ॥
ನಾಕು ಸಾವಿರ ಜನ ಮಾಡಿ ಫಳಾರ
ಫಕ್ಕನೆ ತರಿಸಿದ ಪಾತರಮ್ಯಾಳ
ಪಕ್ಕಾಕಾರಕೂನನಿಗೆ ಹೇಳಿ ಕಿವಿಯೊಳ
ಲೆಕ್ಕವಿಲ್ಲದೆ ಜನ ಕೂಡೀತು ಬಾಳ ॥
ಭರ್ಜರಿ ತಸರೀಪ ತರಿಸಿದ ಬ್ಯಾಟಿ
ಮೂರು ಸಾವಿರ ಬಿದ್ದ ಜರದ ದುಪ್ಪಟ್ಟಿ
ಸುರ್ತಿ ಜೋಡಿನೆಳಿ ಮುತ್ತಿನ ಕಂಠಿ
ಮಾಡಿದ ಮಲ್ಲಸರ್ಜಗ ಕೈಮುಟ್ಟಿ ॥
ಕನಸಿನೊಳಗೆ ಬಾಪುಸಾಹೇಬನ ಕಂಡು
ತೊನಸಿಹಾಳ ಗೌಡನ ಮಗಳನೆತ್ತಿಕೊಂಡು
ಮುನಿಸು ಮಾಡಬೇಡ ಮಗನೆ ಪ್ರಚಂಡ
ಅನುವಾಗಿ ಮದುವಿಯ ಮಾಡು ತಕ್ಕೊಂಡು ॥
ಸುಂದ್ರ ಮಲ್ಲೇಂದ್ರನ ನಡುವಿನ ಪುತ್ರ
ಚಂದ್ರಮನಕ್ಕಿಂತ ಚಲುವ ಸಮರ್ಥ
ಅಂದಳದೊಳು ತಾ ಮಾಡಿದ ಮೂರ್ತ
ತಂದನು ಕಿತ್ತೂರ ಪುರಕೊಂದು ಗುರ್ತ ॥
ವೀರಪ್ಪದೊರೆಗಳು ಬಂದದ್ದು ಕೇಳಿ
ಅರಮನಿ ಹಿರಿಯರು ಹರುಷವ ತಾಳಿ
ದೊರೆ ಮಲ್ಲಸರ್ಜನ ಬರಲಿಲ್ಲ ದಾಳಿ
ಹಿರಿಯಣ್ಣ ಬಾಪುಸಾಹೇಬನ ಕೇಳಿ ॥
ಅಳಿಯನ ಕಾಣದ ಅತ್ತೆವ್ವ ಮರುಗಿ
ಕಳೆಗುಂದಿ ಕೈಕಾಲು ಶರಿರವು ಸೊರಗಿ
ಬಳಗ ನೋಡಲಿಕ್ಕೆ ಬರಲಿಲ್ಲ ತಿರುಗಿ
ಹೊಳೆವ ಚಂದ್ರಸಾಲಿ ಮೇಲೆ ಉಪ್ಪರಗಿ ॥
ದೊಡ್ಡವ್ವನ ದನಿಯನು ಕಾಣದೆ ಮತ್ತ
ಹಿಂಡ ಮಂದಿಯ ಮುಂದೆ ನೋಡಿದಳು ಕುಂತ
ಕೆಂಡಗಣ್ಣಿನ ಶಿವ ಕರೆದಾನು ಅತ್ತ
ಮಾಡಿದ ಪ್ರಭುವಿನ ಪಾದವ ನಿತ್ಯ ॥
ಅಪ್ಪ ಮಲ್ಲೇಂದ್ರಗ ಪ್ರೀತಿಯಿಟ್ಟಳು
ಬಾಪುಸಾಹೇಬನಿಗೆ ಧೈರ್ಯ ಕೊಟ್ಟಳು
ಚಪ್ಪಳಿಕ್ಕೆ ಚೆಲು ತೊಟ್ಟಿಲ ಕಟ್ಟಿದಳು
ಮುಪ್ಪಿನತ್ತೆವ್ವ ಪ್ರಾಣ ಬಿಟ್ಟಾಳು ॥
ರುದ್ರವ್ವನ ಹೆಸರು ಅಡಗೀತು ಇಂದು
ಚಂದ್ರಕಾಂತಿವಳ ಪುತ್ರರು ಬಂದು
ಸುಂದ್ರ ಮಲ್ಲೇಂದ್ರಗ ಕಾಗದವೊಂದು
ಮಲ್ಲೇಂದ್ರನ ಕೈಯಾಗ ಕೊಟ್ಟರು ತಂದು ॥
ಬರೆದ ಕಾಗದ ಮಲ್ಲೇಂದ್ರನು ನೋಡಿ
ಧರಣಿ ಮೇಲೆ ಬಿದ್ದು ತಾ ಹೊರಳಾಡಿ
ಮೂರು ಮಕ್ಕಳ ಪರದೇಶಿ ಮಾಡಿ
ಹರನೊಳು ಅತ್ತೆವ್ವ ಹೋದಳೆ ಕೂಡಿ ॥
ಬಾದ್ದುರ ಸೆರೆಯನು ಐದಾಗ ಅತ್ತೆ
ಸಾಧಿಸಿ ಜಪತಪ ಮಾಡಿದಿ ನಿತ್ಯೆ
ಮಹದೇವನ ಪೂಜೆ ಮಾಡಿದಿ ಅತ್ತೆ
ಹೋದಂಥ ದೇಶಗತಿ ನಿಲ್ಲಿಸಿದಿ ಮತ್ತೆ ॥
Leave A Comment