ಅತ್ತತ್ತು ಮಲ್ಲೇಂದ್ರ ಬಿದ್ದನು ನೆಲಕೆ
ಮುತ್ತಿನ ಸರಗಳು ಹರದಾವು ಪದಕೆ
ಉತ್ತಮ ಶುಭಗಳು ಆಗಲಿಕ್ಕೆ
ಹತ್ತೀತು ಮಲ್ಲಸರ್ಜನ ಜೀವಕ್ಕೆ ॥
ಚಿಂತೀಲೆ ಸೊರಗಿದ ಮಲ್ಲೇಂದ್ರಭೂಪ
ನಿತ್ಯ ದಿನದಿನಕೊಂದಾದನು ರೂಪ
ಹತ್ತೀತು ಶರಿರಕ್ಕೆ ಹಿಮಜ್ವರ ತಾಪ
ಹಂತೇಲಿದ್ದವರಿಗೆ ಮಾಡಿದ ಕೋಪ ॥
ಮೂರು ವರುಷ ಕುಳಿತು ಮಲ್ಲೇಂದ್ರ ಪುಂಡ
ಮರಣ ಕಾಲಗತಿ ಬರುವದ ಕಂಡ
ದೊರೆ ಮಲ್ಲಸರ್ಜನು ಯೋಚನೆಗೊಂಡ
ಬರೆದು ಸಿಕ್ಕೇದ ಪತ್ರ ಕಳಿಸಿದ ಪುಂಡ ॥
ನೇಮದಿ ಪುಣ್ಯದ ಶಹರವ ಬಿಟ್ಟು
ರಾಮಲಿಂಗಪ್ಪನು ಅಲ್ಲಿಂದ ಹೊಂಟು
ತಮ್ಮಗಳಿಗೆ ತಿಗಡಿ ಹೊಂಗಲ ಕೊಟ್ಟು
ಬ್ರಹ್ಮ ಬರೆದ ಬಾವುಸಾಹೇಬನು ಶ್ರೇಷ್ಠ ॥
ಆರು ದಿನಕ ಬಂದು ರಾಮಲಿಂಗಪ್ಪ
ಅರಸಿ ಚನ್ನವ್ವಗ ಹೇಳಿದ ಶಾಪ
ಧರೆಗೆ ಅರಸು ಬಾಪು ಸಾಹೇಬನು ಭೂಪ
ಬಾರವ್ವ ಶಿಕ್ಕೆ ಹಾಕಿ ಹರಸೂನು ತೋಫ ॥
ವಿಸ್ತಾರ ದಿನದಲ್ಲಿ ಸದರವ ಮಾಡಿ
ಸಮಸ್ತರು ಮಕ್ಕಳು ಬಂದರು ಕೂಡಿ
ಮತ್ಸರ ತಾಯಿ ಚನ್ನವ್ವ ದಯಮಾಡಿ
ಸ್ವಸ್ತಾಗಿ ಶಿಕ್ಕೆ ಹಾಕಿ ಮಗನ ಕೊಂಡಾಡಿ ॥
ರಾಮಲಿಂಗಪ್ಪನ ಕೇಳ್ಯಾಳು ಸುದ್ದಿ
ದೊರೆ ಮಲ್ಲೇಂದ್ರಗ ಹುಟ್ಟಿತ್ಯಾಕಿಂಥ ಬುದ್ಧಿ
ಪುರದೊಳು ಮಹಾಪ್ರಸಾದವ ನೀಡಿ
ತರಿಸಬೇಕೆಂದಳು ಪುರುಷನ ಸುದ್ಧಿ ॥
ಸಕ್ಕರಿ ಹಂಚಿ ಸಿಕ್ಕೇವ ಹಾಕಿದಕ
ದುಃಖ ಮಾಡುತ ನಡದಾರು ಪುಣೇಕ
ಸುಖದಿಂದ ಅರಮನ್ಯಾಗಿರುವದಿನ್ಯಾಕ
ಗಕ್ಕನೆ ಬಂದಾರು ತಿಗಡಿಯ ಪುರಕ ॥
ಅರ್ಥ ಖರ್ಚು ಮಾಡಿ ಬೆಳದೀತು ವಿಘ್ನ
ಕಾರ್ತೀಕ ಮಾಸದಿ ತುಳಸಿಯ ಲಗ್ನ
ಕರ್ತೃ ಬಾಜೀರಾಯ ಮಾಡಿದ ಆಜ್ಞಾ
ತುರ್ತ ಪ್ರಮುಖರು ಬರುವ ಸಂಜ್ಞಾ ॥
ಹತ್ತು ಸಾವಿರ ಜನ ಬಂದೀತು ಎಲ್ಲ
ಕಿತ್ತೂರ ದೊರೆ ತಾ ನೋಡ ಬರಲಿಲ್ಲ
ಮತ್ತೆ ಶ್ರೀಮಂತನು ಮಾಡಿದ ಗುಲ್ಲಾ
ಛತ್ರಚಾಮರ ರಾಹುತರ ಕಳುಹಿದನಲ್ಲಾ ॥
ಕರೆಯ ಬಂದವರೆಲ್ಲಾ ಬೆರಗಾಗಿ ನೋಡಿ
ಶರಿರದ ನಾಡಿಯ ಹಿಡದು ಮಾತಾಡಿ
ಭರದಿಂದ ಬಂದಾರೊ ಅರಮನಿಗೋಡಿ
ದೊರೆ ಮಲ್ಲಸರ್ಜನ ಕಳುಹೊ ದಯಮಾಡಿ ॥
ಹೇಳಲಿಲ್ಯ್ಕೆಂದು ಮಾಡಿದ ಸಿಟ್ಟಾ
ಒಳ್ಳೇ ಬಣ್ಣದ ಮೇಣೇವ ಕೊಟ್ಟಾ
ಬಾಳ ರಾತ್ರಿಯೊಳು ಪುಣೇವ ಬಿಟ್ಟಾ
ತಿಳದು ಬಂದಿಳಿದಾರೊ ಖಾತ್ರಿಯ ಘಟ್ಟಾ ॥
ಸಕ್ಕರೆನೀರಿನ ಆಧಾರ ಮಾಡಿ
ಚಕ್ಕನೆ ಬಂದರು ಎಡೆಯೂರ ನೋಡಿ
ಮುಕ್ಕಣ್ಣ ವೀರಭದ್ರನ ಕೊಂಡಾಡಿ
ಲೆಕ್ಕವಿಲ್ಲದೆ ಅಯ್ಯಗೋಳಿಗೆ ನೀಡಿ ॥
ಅರಸು ಮಲ್ಲೇಂದ್ರನು ಹರುಷದಿ ಕಂಡು
ತರಿಸಿದ ಕಿತ್ತೂರ ಅರಮನೆ ದಂಡು
ವರ ಸುತಸತಿ ಸೊಸ್ತೇರ ಹಿಂಡು
ಗುರಸಿದ್ಧಪ್ಪ ನೀ ಬಾರೊ ಕರಕೊಂಡು ॥
ಶಿವಶಂಕ್ರೆಪ್ಪನ ಪುತ್ರನ ನೋಡಿ
ದೊರೆ ಬಾಪು ಸಾಹೇಬ ವತ್ರವ ಮಾಡಿ
ಹರುಷದಿ ಅಣ್ಣತಮ್ಮರ ಒಡಗೂಡಿ
ಹರ ದುರದುಂಡಿಯ ಪಾದವ ಕೊಂಡಾಡಿ ॥
ಮಡದಿ ಚನ್ನವ್ವನು ಪಾಲ್ಕಿಯನೇರಿ
ಸಡಗರ ಕುದುರೆಯ ತಿರವುತ ಪೇರಿ
ಹಿಡದಾರು ದುರದುಂಡಿ ಅರಭಾವಿ ದಾರಿ
ಒಡೆಯ ಮಲ್ಲೇಂದ್ರನ ಬಂದೀತು ಸ್ವಾರಿ ॥
ಮಕ್ಕಳ ಪಾಲಿಕಿ ಕಂಡು ಮಲ್ಲೇಂದ್ರ
ಚಕ್ಕನೆ ಮೇಣೇವ ಇಳಿಸಿ ದೇವೇಂದ್ರ
ದುಃಖ ಮಾಡಿದ ಬಾಪುಸಾಹೇಬನ ಸುಂದ್ರ
ತೆಕ್ಕಿಯೊಳಗ ಬಿಗಿದಪ್ಪಿ ಮಲ್ಲೇಂದ್ರ ॥
ಪುತ್ರರ ಮೂವರ ಮಕ್ಕಳ ಹರಿಸಿ
ಹೊತ್ತ ಸೆಲ್ಲೇದಿಂದ ಕಣ್ಣಿರ ಒರಿಸಿ
ಮುತ್ತು ಮಾಣಿಕದೊಂದು ಮಾಲಿಯ ತರಿಸಿ
ಪೃಥ್ವಿಪತಿ ಬಾಪುಸಾಹೇಬಗ ಧರಿಸಿ ॥
ಹರಹರ ಎನುತಲಿ ಒಳಿಯಾಕ ಬಂದು
ಹರ ದುರದುಂಡಿಗೆ ಕಾಣಿಕೆ ತಂದು
ವರಗಳ ಎಣಿಸಿ ತಂದಾರು ನೂರೊಂದು
ದುರದುಂಡಿ ಪಾದವ ಕಂಡೇವು ಎಂದು ॥
ಕಷ್ಟಬಿಟ್ಟು ತಾನು ತಂದಂಥ ವಾರ್ತಿ
ಅಷ್ಟುರ ಮುಂದ ತಾ ಹೇಳಿದ ವಾರ್ತಿ
ಪಟ್ಟದ ಚನ್ನವ್ವ ತಂದಳು ಆರ್ತಿ
ಇಟ್ಟರು ಮುತ್ತುಮಾಣಿಕ ಮನಪೂರ್ತಿ ॥
ಮಡದಿ ಮಕ್ಕಳು ಮಾತಾಡುತ ಕುಳಿತು
ಮಡದಿ ಚನ್ನವ್ವನು ಹೇಳ್ಯಾಳು ನಿಂತು
ಒಡೆಯ ಲಾಲಿಸು ಎನ್ನ ಕನಸಿನ ಹೊತ್ತು
ಒಡದೀತು ನತ್ತಿನ ಮೇಲಿನ ಮುತ್ತು ॥
ಸತಿಯ ಚನ್ನವ್ವನ ಪ್ರೀತಿಯ ಅರಸ
ಮತಿವಂತಿ ಕೇಳು ನಾ ಹೋಗಿ ಮೂರು ವರ್ಷ
ಮುತ್ತು ಒಡದೀತಂದರ ಕನಸೀನ ಸರಸ
ಚಿತ್ತಕ್ಕ ತಾರದೆ ಮಾಡಿದ ಹರುಷ ॥
ಹತ್ತು ಸಾವಿರ ನಿತ್ಯ ಜಂಗಮಕುಣಿಸಿ
ಬೆತ್ತಾಸ ಹಣ್ಣು ಸಕ್ಕರಿ ದಣಿದಣಿಸಿ
ಮತ್ತೊಂದು ರೂಪಾಯಿ ಎಣಿಯೆಣಿಸಿ
ಭಕ್ತಿ ಮಾಡಿದ ಜಂಗಮಜನಕೆ ಉಣಿಸಿ ॥
ಬೇಡಿದ ಬಯಕೆಯು ಮನಸಿನ ಇಚ್ಛೆ
ಕೂಡಿಸಿಕೊಟ್ಟನು ಮಹದೇವನು ಮೆಚ್ಚೆ
ನೋಡಿ ಬಂದಾರೊ ಹೊಂಗಲವನು ನೆಚ್ಚಿ
ಓಡಿ ಹೋದಾವು ಇಲ್ಲಿಗಿದಿಗಾಳು ಬಿಚ್ಚಿ ॥
ಹೊಂಗಲ ಹೊಕ್ಕಾನು ಮಲ್ಲೇಂದ್ರ ಪುಂಡ
ಜಂಗಮರೆಡಬಲ ಮಾರ್ಬಲ ದಂಡ
ಸಂಗನಬಸವನ ಶರಣರ ಹಿಂಡ
ಮಾಂಗಲ್ಯ ಆಶೀರ್ವಾದವನು ಕೈಕೊಂಡ ॥
ಬಳ್ಳೋಡಿ ವೀರನ ಪಾದಕ್ಕೆ ಬಂದು
ಬೆಳ್ಳಿ ಬಂಗಾರ ಮುತ್ತು ಕಾಣಿಕೆ ತಂದು
ಒಳ್ಳೇ ವಜ್ರಮಾಲಿ ಹಾಕಿದ ಒಂದು
ಫಾಳಲೋಚನ ಎನ್ನ ಸಲಹು ನೀನೆಂದು ॥
ನಾಲ್ಕಾರು ಸಾವಿರ ಮೂರ್ತಿಗೆ ನೀಡಿ
ರೊಕ್ಕ ರೂಪಾಯಿ ವರಭಿಕ್ಷವೀಡಾಡಿ
ಮುಕ್ಕಣ್ಣ ವೀರಭದ್ರನ ಕೊಂಡಾಡಿ
ದುಃಖ ಹೆಚ್ಚಿತು ಮಲ್ಲಸರ್ಜನ ನೋಡಿ ॥
ಶರಿರದ ವ್ಯಾಧಿ ಹೆಚ್ಚಾಗಿ ಪ್ರಬಲಾ
ದೊರೆ ಮಲ್ಲಸರ್ಜ ಆದಾನೊ ಗಾಲಮೇಲಾ
ಕರಜುರ ಪಾನ ಸಕ್ಕರೆ ತಾನು ಒಲ್ಲಾ
ಎರಡುದ್ದ ಧರಿಸಿದ ಅವಸಾನ ಕಾಲಾ ॥
ಹತ್ತು ಸಾವಿರ ಜನ ದುಃಖಿಸಿಕೊಂಡು
ಕಿತ್ತೂರ ಮಾರ್ಗವ ಹಿಡಿದೀತು ದಂಡು
ಮತ್ತ ಶಿವಬಸಪ್ಪ ತಾ ಹಣ್ಣ ತಕ್ಕೊಂಡು
ಬೆತ್ತಾಸ ಕಜ್ಜೂರ ಸಕ್ಕರಿ ಬೆಂಡು ॥
ಮಲ್ಲೇಂದ್ರಗೆರಗಿದನು ಶಿವಬಸಪ್ಪ
ಮೆಲ್ಲನೆ ಎಚ್ಚತ್ತು ಮಲ್ಲೇಂದ್ರ ಭೂಪ
ಅಲ್ಲೇ ಕೇಳಿದ ಶಿವಬಸಪ್ಪನ್ನ ಸಾಪ
ಕಿಲ್ಲೇದ ಮ್ಯಾಲ್ಯಾಕ ಹಾರತಾವು ತೋಪ ॥
ಒಡೆಯಾಗ ಮಾಡಿದ ಕುರ್ಸೆಸ ಬಗ್ಗಿ
ಒಡೆಯ ಬಂದರೆಂದು ನಾಡೆಲ್ಲ ಹಿಗ್ಗಿ
ಬಡಜಂಗಮರಿಗೆ ಆದೀತು ಸುಗ್ಗಿ
ಹೊಡಿತಾನು ಐದು ತೋಫ ಹಿಗ್ಗಿಗ್ಗಿ ॥
ಅಂತ್ಯಕಾಲಕ್ಕೆ ಭೆಟ್ಟಿ ಆದೀತು ನಿನ್ನ
ಸತ್ಯುಳ್ಳ ಬುದ್ಧಿ ಹಿಂದಾದೀತು ಎನ್ನ
ಸುತರ ಸವನ ಬ್ಯಾಗಕ್ಕಾಗೋ ನೀ ಬೆನ್ನ
ಹಿತದಿಂದ ದೇಶಗತಿ ನಡಿಸೋ ನೀ ಮುನ್ನ ॥
ಶನಿವಾರ ಸಂಜಿಕೆ ಬಂದಿತೊ ಸ್ವಾರಿ
ಚಂದುಳ್ಳ ಹೊಂಡೇದ ಬಸವಾನ ತೋರಿ
ಕಂದರ ಕಾಣದಾಂಗ ಆದೀತೊ ಮೋರಿ
ಇಂದ್ಯಾರಿಗ್ಹೇಳಲಿ ಕಂದನ ಸೂರಿ ॥
ಒಡೆಯರ ಚೌಕಿಮಠದೊಳು ಬಂದು
ನುಡಿದನು ಮಕ್ಕಳ ಕೂಡಿ ಮತ್ತೊಂದು
ಸಡಗರ ಅರಮನಿ ಹೊಗಲಿಲ್ಲ ಬಂದು
ಹಿಡಿದು ಆಕಳ ದಾನಕೊಟ್ಟ ನೂರೊಂದು ॥
ಮೂರು ತಾಸಿಗೆ ಬಂದು ಅರಮನೆ ಹೊಕ್ಕ
ಬೋರ್ಯಾಡಿ ಚನ್ನವ್ವ ಮಾಡ್ಯಾಳೊ ದುಃಖ
ಮಾರಾರಿ ಮಲ್ಲೇಂದ್ರಗ ಹತ್ತಿತೋ ಬಿಕ್ಕ
ಅರಮನಿಯವರಿಗೆಲ್ಲಾ ತಪ್ಪಿತೋ ದಿಕ್ಕ ॥
ದುಃಖ ಮಾಡಲಿಬೇಡ ಚನ್ನವ್ವ ತಾಯಿ
ಮುಕ್ಕಣ್ಣ ಮುನಿದ ಮೇಲಿಲ್ಲ ಉಪಾಯಿ
ಭಿಕ್ಷ ಕೊಡಿಸು ವಿರಕ್ತರಿಗೆ ರೂಪಾಯಿ
ಮೋಕ್ಷವಾಗಲಿ ಮಲ್ಲಸರ್ಜ ದೇಸಾಯಿ ॥
ಅಳಬೇಡೋ ನೀ ನನ್ನ ಒಡಹುಟ್ಟಿದಣ್ಣ
ಹೊಳೆವ ಗಲ್ಲ ಮೋರಿ ತೀರಿತೊ ಬಣ್ಣ
ತಳಮಗೊಳುತಲಿ ತಿರುವ್ಯಾರೊ ಕಣ್ಣ
ಬಳಗಕ್ಕ ಬ್ಯಾಗಿ ಇಕ್ಕಿದ್ಯೋ ನಮ್ಮಣ್ಣ ॥
ಎಡಬಲ ಪುತ್ರರು ಬಿಡುತಾರೋ ಬಾಯಿ
ನಡುವಿನ ಮಗನು ವೀರಪ್ಪ ದೇಸಾಯಿ
ಬಡಕೋಬ್ಯಾಡ ನನ್ನ ಹಡದಂಥ ತಾಯಿ
ಬಿಡತಾರೊ ಪ್ರಾಣ ಮಲ್ಲೇಂದ್ರ ದೇಸಾಯಿ ॥
ಅರುಣೋದಯ ಕಾಲಕ್ಕೆ ಶರಣ ಮಲ್ಲೇಂದ್ರ
ಮರಣಾದ ಮರ್ತ್ಯದರಸು ದೇವೇಂದ್ರ
ಹರಣ ಹಾರುದ ಕಂಡು ಮಗ ಮಾರಸುಂದ್ರ
ಧರೆಗೆ ಕರಗಿದಂಥ ಪೌರ್ಣಮಿ ಚಂದ್ರ ॥
ಒಡೆಯ ಮಲ್ಲೇಂದ್ರನು ಸತ್ತಾನು ಭೂಪ
ಹೊಡೆದಾರು ಎಣಿಯೆಣಿಸಿ ಐವತ್ತು ತೋಫ
ಅಡಗೀತು ಮಲ್ಲೇಂದ್ರ ಭೂಪನ ರೂಪ
ಒಡೆಯ ಶ್ರೀವೀರೇಶ ಮಾಡಿದ ಕೋಪ ॥
ಸದರಿಗೆ ತಂದಾರು ಮಲ್ಲೇಂದ್ರ ದೊರೆಯ
ಎದೆಯು ಒಡೆದು ಬಾಪುಸಾಹೇಬನು ಹಿರಿಯ
ಮದನಾರಿ ಮಹಾದೇವ ಹೋಯಿತು ಸಿರಿಯು
ಒದಗೀತು ನಿಮಗೀಗ ಮರಣದ ಪರಿಯು ॥
ಕೋರಿಮೀಸಿ ಮುತ್ತು ವಜ್ರವ ಇಡಿಸಿ
ನೂರುವರದೊಂದು ಡಗಲಿಯ ತೊಡಿಸಿ
ಸೂರತಿ ಮುತ್ತಿನ ತುರಾಯ ಮುಡಿಸಿ
ಮಾರಾಯ ಢಾಲಪಟ್ಟಿ ತಾನವ ಕೊಡಿಸಿ ॥
ಭರಿಜರಿ ಪೈಠಣಿ ಶೆಲ್ಲೇವ ಹೊಚ್ಚಿ
ಜರದ ಮುಂಡಾಸದ ಮೇಲೆ ಶಿರಪೇಚ ಹಚ್ಚಿ
ಕರದ ಮುಂಗೈಗೆ ಕಟ್ಟ್ಯಾರೊ ಪೋಚಿ
ಗುರದ ಕೊಟ್ಟಾರು ಬಲಗೈಯಗವಚಿ ॥
ಹಾರ ಹೂವಿನ ಮಾಲಿ ವಿಭೂತಿಯ ಧರಿಸಿ
ಬೆರಿಸಿ ಕಸ್ತೂರಿ ಪರಿಮಳದ ಹರಿಸಿ
ತರತರಪುದಿನ ಗಿಡವಾನು ಇರಿಸಿ
ದೊರಿ ಕದಕದ ನಗುಹಾಂಗ ಶೃಂಗರಿಸಿ ॥
ನೆರೆದ ಜಂಗಮರೆಲ್ಲಾ ಪಾದವ ಇಟ್ಟು
ದೊರೆ ಮಲ್ಲಸರ್ಜಗಾಶೀರ್ವಾದ ಕೊಟ್ಟು
ವರವಸ್ತ್ರ ವರಗಳ ಭಿಕ್ಷವ ಕೊಟ್ಟು
ವರಸುತ ಸತಿಯರು ಹೋಗುವರು ಬಿಟ್ಟು ॥
ಸತಿಯು ಚನ್ನವ್ವನು ದುಃಖವ ಮಾಡಿ
ಪತಿಯ ಪಾದದ ಮೇಲೆ ಬಿದ್ದು ಹೊರಳ್ಯಾಡಿ
ಕ್ಷಿತಿಯೊಳು ಎನ್ನನು ಪರದೇಶಿ ಮಾಡಿ
ಹಿತದಿಂದ ಹರನೊಳು ಹೋದಿರಿ ಕೂಡಿ ॥
ಸತಿಯು ಚನ್ನವ್ವನು ಕಳವಳಗೊಂಡು
ಸತಿಯರು ಒಯ್ದರು ಒಳಗೆತ್ತಿಕೊಂಡು
ಸುಂದ್ರ ಮಲ್ಲೇಂದ್ರನ ಮೋರೆಯ ಕಂಡು
ಘಾತವಾದೀತೆಂದು ಎದೆಯ ಬಡಕೊಂಡು ॥
ಕಲ್ಲುಮಠದ ಪ್ರಭುದೇವರು ಬಂದು
ಎಲ್ಲ ಮಕ್ಕಳನು ಒಳಿಯಕ್ಕ ತಂದು
ಎಲ್ಲರಿಗೆ ಬುದ್ಧಿ ಹೇಳಿದರೊಂದು
ಮಲ್ಲಸರ್ಜನು ಮುಕ್ತಿಪಡೆದನು ಇಂದು ॥
ಮುತ್ತಿನ ಸೆರಗಿನ ಸೀರೆಯನುಟ್ಟು
ಹತ್ತು ಹೊನ್ನಿನ ಜರದ ಕುಪ್ಪುಸ ತೊಟ್ಟು
ಕಸ್ತೂರಿ ತಿಲಕದ ಬೊಟ್ಟುಗಳಿಟ್ಟು
ವಸ್ತ್ರ ಆಭರಣ ಜೋಡಿಸಿ ಇಟ್ಟು ॥
ಮುತ್ತಿನ ಆರತಿ ಕೈಯಾಗ ಹಿಡಿದು
ಮತ್ತೆ ಮಲ್ಲೇಂದ್ರಗ ಬಂದಾಳೋ ನಡೆದು
ಎತ್ತಿದಳಾರುತಿ ಕೈಯಾಗ ಹಿಡಿದು
ಸತಿಯು ಸುತರ ಬಿಟ್ಟು ಹೋಗುವರೆ ಮಡಿದು ॥
ಒಡೆಯ ಚನ್ನವ್ವನ ಆರ್ಭಾಟ ಬಹಳ
ನಡುವಿನ ಪುತ್ರನು ಹಿಡಿದ ಕೈಗಳ
ಬಡಕೋಬ್ಯಾಡ ತಾಯಿ ಎದಿಯೆದಿ ಬಾಯ್ಗಳ
ನೋಡು ಮಲ್ಲಸರ್ಜನ ವದನಗಳ ॥
ಪರದೇಶಿ ವಿರಕ್ತ ಮೂರ್ತಿಗಳೆಲ್ಲ
ದೊರೆ ಮಲ್ಲಸರ್ಜಗಿರಿದಾರು ಇಲ್ಲ
ಶರಣ ಸದ್ಭಕ್ತರ ಭಕ್ತಿಯ ಬಲ್ಲ
ಹರುವಾಯಿತಿಂದಿಗೆ ಧರ್ಮಗಳೆಲ್ಲ ॥
ಕರಣಿಕ ಕುಲಕರ್ಣಿ ಕಾರಭಾರಿಯರು
ವರ ಮಕ್ಕಳೆಂಬುವ ನಿಸ್ಪಹರು
ಬೋರ್ಯಾಡಿ ಅಳತಾರೊ ಪುಣೇದವರು
ದೊರೆ ಮಲ್ಲಸರ್ಜನ ಮಕ್ಕಳೆಂಬವರು ॥
ಹತ್ತು ಸಾವಿರ ಕೂಡಿ ಮಾಡಿ ಆಳಾಪ
ಮತ್ತೆ ಸತ್ತನು ಮಲ್ಲೇಂದ್ರ ಭೂಪ
ಪುತ್ರರ ಅಗಲಿ ಹೋದುದು ಪಾಪ
ಎಂಥ ರಂಡೇರು ನಿನಗ ಕೊಟ್ಟರು ಶಾಪ ॥
ಏಳು ಉಪ್ಪರಗಿ ವಿಮಾನವ ಕಟ್ಟಿ
ಬಿಳಿಯ ಜನರ ಶಲ್ಲೆ ತಗೆದಾರೊ ಪಟ್ಟಿ
ಮೇಲೆ ಮುಚ್ಚಿದರು ಜರದ ದುಪ್ಪಟ್ಟಿ
ಬೆಳ್ಳಿ ಮುತ್ತಿನ ಗಂಟಿ ಸರಗಳ ಕಟ್ಟಿ ॥
ಕಳಸ ಇಟ್ಟನು ಸೂರ್ಯ ಚಂದ್ರರ ಸಮಾನ
ಒಳಗ ಕಟ್ಟಿದ ನಾಕಾರು ಕಮಾನ
ಇಳಿದು ಬಂದಿತೇನೋ ಕೈಲಾಸದ ವಿಮಾನ
ನಳಿನಾಕ್ಷಿಯರು ಪಾಡಿದರು ಸೋಬಾನ ॥
ಕಲ್ಲು ಮಠದೊಳು ನೆಲವನು ಅಗಿದು
ಮಲ್ಲಸರ್ಜಗ ಸಮಾಧಿಯ ತೆಗೆದು
ಬಲ್ಲಿದ ಬಸವನು ತಗದಾನು ಅಗಿದು
ಮಲ್ಲಸರ್ಜನ ಸಮಾಧಿಯು ಮುಗಿದು ॥
ಬಾಳಿಕಂಬದ ಮೇಲೆ ಹಾಕಿ ಹಂದರವ
ತಳಿರು ತೋರಣ ಕಟ್ಟಿ ಮಾಡಿ ಸುಂದರವ
ಹೊಳೆವ ನಂದಿಯ ರಚಿಸಿ ಮುಂದೆ ತಂದಿರುವ
ತಳತಳಿ ರಂಗವಾಲಿಯನು ತುಂಬಿರುವ ॥
ಸುತ್ತಲೆ ರುದ್ರಾಕ್ಷಿ ಸರವನು ಕಟ್ಟಿ
ಮತ್ತೆ ಬರೆದರೋ ಕೈಲಾಸದ ಸೃಷ್ಟಿ
ಚಿತ್ರ ಬಸವಲಿಂಗ ಕಾಗದ ಪಟ್ಟಿ
ಪತ್ರಿ ವಿಭೂತಿ ನೂರಾರು ಬುಟ್ಟಿ ॥
ಕಸ್ತೂರಿ ಸಾರಣಿ ಸುತ್ತಿನ ಗೋಡಿ
ವಿಸ್ತಾರ ಪುನಗು ಜವದಿಯ ತೀಡಿ
ಸಮಸ್ತರು ನಂದಿಮುಖ ಸುತ್ತಲು ಹೂಡಿ
ಸಮಸ್ತರು ಕ್ರಿಯೆ ಸಮಾಧಿಯ ಮಾಡಿ ॥
ನೆರೆದ ಜನರೆಲ್ಲಾ ಮರಮರ ಮರುಗಿ
ಪರಿವಾರ ಪ್ರಜೆಯೆಲ್ಲಾ ಬಂದಿತು ತಿರುಗಿ
ದೊರೆ ಮಲ್ಲಸರ್ಜ ಸಮಾನದುಪ್ಪರಿಗಿ
ಹರದಿ ಚನ್ನವ್ವ ಕಂಡು ಶವದ ಮೇಲೊರಗಿ ॥
ಪುರುಷನ ಬಿಗಿದಪ್ಪಿ ಸತಿಯು ಮುಂಡಾಡಿ
ಅರಸನ ಸ್ಥಿತಿಗತಿ ಆಗ ಕೊಂಡಾಡಿ
ವರಪುತ್ರ ಬಾಳಾಸಾಹೇಬನ ಮುಖನೋಡಿ
ಮರಣಾಗಲಿಲ್ಲವನ ಲಗ್ನವ ಮಾಡಿ ॥
ಮುತ್ತಿನ ಸೆರಗಿನ ಸೀರಿ ಜರತಾರ
ರತ್ನ ಖಚಿತವಾದ ಹೆಳಲ ಭಂಗಾರ
ಪತಿಯ ಕಳಿಸಿಕೊಟ್ಟ ವಸ್ತ ಮನಾರ
ಹಿತದಿಂದ ಇಡುವಾಭರಣ ವಿಸ್ತಾರ ॥
ಮದುವೆಯ ಸಂಭ್ರಮ ಮಾಡಿದಿ ಬಾಳು
ಸುದತಿಯ ತಕ್ಕೊಂಡಿ ಸೊಲ್ಲಾಪುರದೋಳು
ಮದುವೆಯ ಮಾಡೊಂದು ಮಾರ್ಗಶಿರದೋಳು
ಇದನೆಲ್ಲ ಹೇಳಿದಿ ಶ್ರೀಮಂತರೋಳು ॥
ಮಠದಾಗ ಹೇಳಿದಿ ಪ್ರೀತಿಂದ ಪತಿಯೇ
ಸಿಟ್ಟು ಬಿಡಿಸಿ ಬಹಳ ಮಾಡಿದಿ ರತಿಯೇ
ಸೆಟ್ಟಿ ಸೊಲ್ಲಾಪುರದ ಪಟ್ಟದ ಸತಿಯೇ
ಘಟ್ಟಿ ಮಾಡಿಸಿದೆನು ಕೇಳೊಂದ ಸತಿಯೇ ॥
ಬಂದೇರಿ ದುರದುಂಡಿ ಸ್ವಾಮಿಯ ತಳಕ
ಚೆಂದುಳ್ಳ ಬೆಳಗಾಗ ಕೂಡಿದ ಬಳಿಕ
ಚಂದ್ರಸಮಾನ ಪ್ರಭೆ ಕಂಡನು ಬೆಳಕ
ಒಂದೊಂದು ನೇತ್ರವು ತಾರೆಯ ಜುಳಕ ॥
ವಂಟಮುರಿ ಪ್ರಭುಗೊಂಡ ದೇಸಾಯಿ ಬಂದು
ಪೈಠಾಣಿ ಶೆಲ್ಲೇವ ತಸರೀಪ ತಂದು
ದಿಟವಾಗಿ ಮತ್ತೆ ಕೇಳಿದನು ಒಂದೊಂದು
ಪಟ್ಟದ ವರ್ತಮಾನವು ಹ್ಯಾಂಗ ಮುಂದು ॥
ವೀರಪ್ಪ ದೇಸಾಯಿಗ್ಹೊಂಗಲ ಕೊಟ್ಟಿ
ದೊರೆ ಬಾಳಾಸಾಹೇಬಗ ತಿಗಡಿಯ ಕೊಟ್ಟಿ
ಧರೆಗೆ ಅರಸು ಬಾಪುಸಾಹೇಬನು ಹುಟ್ಟಿ
ಹರದಿ ಸಿಕ್ಕೆ ಹಾಕಿದಳು ಕೈಮುಟ್ಟಿ ॥
ಕಲ್ಲೂರ ಚನಬಸಪ್ಪನ ಕಳುಹಿಕೊಟ್ಟು
ಸೊಲ್ಲಾಪುರದ ನಿಬ್ಬಣ ಬರಬ್ಯಾಡೊ ಬಿಟ್ಟು
ಅಲ್ಲಿಂದ ಮುಂದಕ ಬಾರೋ ನೀ ಹೊಂಟು
ಶಿವಬಸಪ್ಪಗ ಪತ್ರ ಬರೆದಿರೇಳೆಂಟು ॥
ಮದುವಿಗೆ ಬರಬೇಕೊ ವಂಟಮುರಿ ದೊರೆಯೆ
ದಾದಾಸುಬನರಾವ ಪರಿವಾರ ಪ್ರಜೆಯೆ
ಮುದದಿಂದ ಕಳುಹುವೆನು ಕರೆಯೆ
ಕದಕದ ನಗುತಲಿ ಹೇಳಿದಿ ದೊರೆಯೆ ॥
ಕಿತ್ತೂರಿಗೆ ಹೋಗಿ ಮುಹೂರ್ತವ ತೆಗೆಸಿ
ಉತ್ತರ ಕಳುಹುವೆನು ವಂಟಮುರಿಗೆ ಬರೆಸಿ
ಪಾತ್ರ ಕೇಳಿದಿ ಪುಣ್ಯದೆಂಕಾಟನರಸಿ
ಆರ್ತಿ ಮಾಡೇನು ಪುಣ್ಯದಾಕೆಯ ತರಿಸಿ ॥
ಅರ್ತಿಂದ ಮಠದಾಗ ಹೇಳಿದಿ ಭೂಪ
ವ್ಯರ್ಥ ಮಾಡಿದಿ ಎನ್ನ ಜನ್ಮದ ಪಾಪ
ಗುರ್ತ ಮರಿಯಲಾರೆ ದೊರೆ ನಿನ್ನ ರೂಪ
ಕರ್ತ ಮಲ್ಲೇಂದ್ರ ನೀ ಮಾಡಿದಿ ಕೋಪ ॥
ಹರಹರಯೆನುತಲಿ ಜನವೆಲ್ಲಾ ಬಂದು
ದೊರೆ ಮಲ್ಲಸರ್ಜನ ನೀ ಮಾನಕ್ಕೆ ತಂದು
ಗುರುಲಿಂಗಪ್ಪನ ಬಲಭಾಗದಿ ನಿಂದು
ನೆರೆದ ಜನರೆಲ್ಲಾ ಉಗೆಯುಗೆಯೆಂದು ॥
ಹಿಡಿ ತೇಜಿ ಎಡಬಲ ಚಾಮರ ಹರಸುತ
ಕಿಡಿಬಿಡಿ ಭೇರಿ ದುಂದಿಭಿ ಬಾರಿಸುತ
ನುಡಿವ ನೌಬತ್ತು ಮೇಲೆ ಏರಿಸುತ
ನುಡಿವ ನೌಬಾಜಿ ಬಿಡದೆ ಬಾರಿಸುತ ॥
ಆರ್ಭಾಟ ಇಕ್ಕೀತು ವಾದ್ಯವು ಎಲ್ಲಾ
ಶರ್ಭಾವತಾರದ್ಹಾಂಗ ವಾದ್ಯೇದ ಗುಲ್ಲಾ
ಹರದಾರಿ ಕೇಳುವದು ವಾದ್ಯೇದ ಸೊಲ್ಲಾ
ಆರ್ಭಢೋಲಿ ಫೌಜು ದೊರೆಯ ಎಡಬಲಾ ॥
ಒಡೆಯ ಚನ್ನವ್ವನ ಹಿಡಿದಾರು ಮತ್ತ
ಒಡೆಯ ಬಾಪುಸಾಹೇಬನ ದೊರೆಗಳ ಸುತ್ತ
ಬಿಡಿಮುತ್ತು ವಿಮಾನ ಮೇಲೆ ಹಾರಿಸುತ
ಎಡಬಲ ಭಟ್ಟಂಗಿ ಆಗ ಸಾರಿಸುತ ॥
ವಿಳ್ಯೇದ ಮುಸುಕಿಲೆ ಮುಚ್ಚಿತೊ ದಾರಿ
ಬೆಳ್ಳಿ ಬಂಗಾರ ಹೂವ ಮಾಡ್ಯಾರು ಸೂರಿ
ಬೆಳ್ಳಿ ಬೆತ್ತದ ಭಟ್ಟಂಗಿ ಭೇರಿ
ಮಲ್ಲಸರ್ಜಗ ಇದಿರಿಲ್ಲೆಂದು ಸಾರಿ ॥
ನೇಮದಿ ಹಡದಿಯ ಹಾಸುತ ಜನರು
ಸಮಾಧಿಯ ಕಟ್ಟೆಗೆ ಬಂದು ಎಲ್ಲಾರು
ದಮ್ಮಯ್ಯಗಳು ಒಳಗಿಳಿದಯ್ಯನವರು
ಶಂಭುರಾರಿಯ ಶತಕ ವೃತ್ತ ಓದಿದರು ॥
ಮಲ್ಲೇಂದ್ರ ಭೂಪನ ಇಳಿವ್ಯಾರು ತೆಳಗ
ಶಲ್ಲೆ ಮೆಂಡಾಸ ಅಂಗಿ ಕಳಿದಾರು ಒಳಗ
ಬೆಲ್ಲಪತ್ರಿ ಧರಿಸಿ ಪೂಜಿಗೊಳ್ವಾಗ
ಮಲ್ಲಸರ್ಜನ ಮೋರೆ ನೋಡಿರಿ ಬಳಗ ॥
ಸತಿಯು ಚೆನ್ನವ್ವನು ಪತಿ ಮೋರೆಯ ಕಂಡು
ಪತಿಯ ಮುಂದೆ ಎದೆಯ ಬಡಬಡಕೊಂಡು
ರತ್ನದ ಗುಳದಾಳಿ ಕರಿಮಣಿ ಗುಂಡು
ಹಿತವಾದ ಕಾಜಿನ ಬಳಿ ಒಡಕೊಂಡು ॥
ಉಡಿಯಕ್ಕಿ ಚಲ್ಯ್ಳು ದೊರಿಗೋಳ ಮೇಲೆ
ಹಿಡಿದು ಜಗ್ಗ್ಯಾಳು ಹೂವಿನ ದಂಡಿಯ ಮಾಲೆ
ಸಡಗರದ ಕಾಲುಂಗ್ರಾ ಅಣುಮೆಂಟಿಗಿ ಪಿಲ್ಲೆ
ಒಡೆದು ಹಾಕ್ಯಾಳು ಮಲ್ಲಸರ್ಜನ ಬಾಲೆ ॥
ಅರಸನ ಹೊಟ್ಟೀಲೆ ಹುಟ್ಟಿ ರಾಜ್ಯವ ಪಡೆದಿ
ಮೂರು ವರುಷ ಹೋಗಿ ಪುಣೇದಿ ತಡದಿ
ಎರವ ಮಾಡಿ ಈಗ ಹರನೊಳು ನಡದಿ
ಮೂರು ಬೊಗಸಿ ಮಣ್ಣ ಒಗೆದಾಳೊ ಮಡದಿ ॥
ಬಾಪುಸಾಹೇಬ ಕಂಡ ತಂದೆಯ ಮೋರಿ
ಇಪ್ಪತ್ತು ಮಂದಿಯು ಹಿಡಿದಾರು ಮೀರಿ
ಅಪ್ಪನ್ಹಂತೆಲೆ ಬೀಳಬೇಕೆಂದು ಹಾರಿ
ಬಾಪುಸಾಹೇಬನ ಪ್ರಾಣ ಹೋದೀತು ಮೀರಿ ॥
ನಡುವಿನ ಪುತ್ರನು ಮಾರಿಯ ಕಂಡ
ಒಡೆಯಗ ಮಾಡಿದಾ ದೀರ್ಘದಂಡ
ಬಿಡದೆ ಕಣ್ಣೀರು ಉದರಿಸಿಕೊಂಡ
ಬಡಕೊಂಬುವ ತಾಯಿಯ ಕೈಯ ಹಿಡಕೊಂಡ ॥
ಚಿಕ್ಕಮಕ್ಕಳ ದುಃಖ ಹೇಳಲಿನ್ನೆಷ್ಟು
ಮಕ್ಕಳೆಲ್ಲರನು ಕಳುಹಿ ತಾ ಕೊಟ್ಟು
ಮಕ್ಕಳೊಳಗೆ ಶಿವಬಸಪ್ಪನು ಶ್ರೇಷ್ಠ
ಚಕ್ಕನೆ ಮಲ್ಲೆಂದ್ರಗೆ ಮಣ್ಣಾವ ಕೊಟ್ಟ ॥
ಆಕಳ ನೂರೊಂದು ದಾನವ ಕೊಟ್ಟ
ಮಕ್ಕಳ ರಮಸಾಕ ಅರಮನೆಗೆ ಹೊಂಟ
ದುಕ್ಕ ಸೈರಿಸು ಬಾಪುಸಾಹೇಬ ಅಷ್ಟ ॥
ಹರಹರ ಎನ್ನುತಲಿ ಹರಸಿದರಾಗ
ಹರನೊಳು ಮಲ್ಲೇಂದ್ರ ಬೆರದನು ಬೇಗ
ದೊರೆಯು ಮಲ್ಲೇಂದ್ರ ಮರಣಾದನು ಹೀಗ
ಗುರು ಶಾಂತವೀರಣ್ಣ ಹೇಳಿದನೀಗ ॥
* * *
Leave A Comment