ದುಂದುಮೆ ಎಂದೆಂದು ಪಾಡಿರಿ ಜನರೆ
ದುಂದುಮೆ ಬಸವತನ ಹಬ್ಬ  ದುಂದುಮೆ
ದುಂದುಮೆ ನಿರ್ದುಮೆ ಸಾಲಗನ್ನಿರೆ
ದುಂದುಮೆ ಕೇಳ್ರಿ ದುಂದುಮೆ                            ॥

ಶ್ರೀಗುರುವೆ ನಿತ್ಯ ನಿರ್ಮಳ ನಿಜಾವರಣ ಶಿವ
ಯೋಗಿಜನ ಹೃದಯ ಮಂದಿರನೆ  ಸಕ
ಲಾಗಮ ಮುಕ್ತಿಯ ಕೊಡುವ ಸುಂದರನೆ  ಶಿವ
ಯೋಗ ಧಾರುಣ ಸುಧಾಕರನೆ
ಬೇಗದಿನ್ನುಲಿಯ ಚೆಂದಯ್ಯನಾ ಸ್ತುತಿಗೆ ದಯ
ವಾಗೆಮಗೆ ಕರುಣಸಾಗರನೆ                                                                       ॥

ಕಲ್ಯಾಣ ನಗರದೊಳಗೆಲ್ಲ ಪ್ರಮಥಾವಳಿಯೊಳು
ಉಲ್ಲಾಸದಿಂದ ಮೆರೆದಿಹನು  ಮೆದಿ
ಹುಲ್ಲ ನುಲಿ ಹೊಸೆದು ಮಾರುವನು  ಹಾಗ
ದಲ್ಲಿ ಚರತತಿಗೆ ನೀಡುವನು
ಮಲ್ಲ ಶರಹರನ ಧ್ಯಾನದೊಳು ತದ್ಗತನಾಗಿ
ಅಲ್ಲಮನ ಬರವ ಬಯಸುವನು                                                                 ॥

ಲಿಂಗಾಂಗ ಸಮರಸದೊಳಂಗಮನಭಾವದಲಿ ಸ
ರ್ವಾಂಗಮಯ ಲಿಂಗಿ ತಾನಾಗಿ  ಈತ
ರಂಗ ಭೋಗವನೆಲ್ಲ ನೀಗಿ  ತಾನು
ಮಂಗಳಾತ್ಮಕ ಮಹಿಮನಾಗಿ
ಲಿಂಗಾರ್ಚನೆಯ ಬಾಹ್ಯದಲ್ಲಿರಿಸಿ ಜಂಗಮ
ಹಿಂಗದರ್ಚಿಸುವ ನಿಜವಾಗಿ                                                                        ॥

ಹರನು ತಾನರಿದು ಈ ತೆರನ ಪ್ರಮಥರ ಮುಂದೆ
ಭರದಿಂದೆ ನೋಡಬೇಕೆಂದು  ತಾನು
ಶರಣ ಸೇವೆಯ ಮಾಡಲೆಂದು  ಇರದೆ
ಶರಣ ಮೆದಿ ಕೊಯ್ಯುತಿರಲಂದು
ಉರದ ಲಿಂಗವು ಸಡಿಲಿ ಕೆರಿಯೊಳಗೆ ಬೀಳೆ
ಶರಣ ನಡೆಯಲು ಲಿಂಗ ಬಂದು                                                               ॥

ಯಾಕೆ ನುಲಿಯ ಚೆಂದಯ್ಯಕೆ ದೃಢಭಕ್ತನೆ
ಯಾಕೆನ್ನನಗಲಿ ಹೋಗುವರೆ  ಗುರುವಿ
ನೈಕ್ಯದುಪದೇಶ ಮೀರುವರೆ  ನಿಮಗೆ
ಏಕಾತ್ಮರುಗಳು ಮೆಚ್ಚುವರೆ
ಬೇಕೆಂದು ಜಲದೊಳಗೆ ಬಡಲಿಂಗವ ಬಿಟ್ಟು
ಧಿಕ್ಕರಿಸಿ ನೀನು ಹೋಗುವರೆ                                                                     ॥

ತೆರಹಿಲ್ಲದಿಹ ಘನವು ಶರಧಿಯೊಳು ಮುಳುಗಲ್ಕೆ
ಬರಿದೆ ಬಣ್ಣಿಸಲ್ಯಾತಕಯ್ಯ  ನಾನು
ಇರದೆ ಪೂಜಿಸಲಾರೆನಯ್ಯ  ಇನ್ನು
ವರವ ಬೇಡುವರ ಕೂಡಯ್ಯ
ಚರವರತೃಪ್ತಿಗೆ ತಡೆವುದೆಂದು ಭರದಿಂದೆ
ಹೊರೆ ಹೊತ್ತು ನಡೆದ ಚೆಂದಯ್ಯ                                                              ॥

ಇಂದುಧರ ಹೆದರಿ ಮೊದಲಂದಗಳನಡಗಿಸುತ
ಮುಂದೆ ಪುರುಷಾಕಾರವಾಗಿ  ಬಿಡದೆ
ಚೆಂದಯ್ಯನ ಸೆರಗ್ಹಿಡದ ಹೋಗಿ  ಆತ
ಮುಂದಕ್ಕೆ ನಡೆದ ಶಿರಬಾಗಿ
ಇಂದು ಪ್ರಭುರಾಯನಾಣೆ ಎನಗಾವ ಗತಿ
ಹೊಂದಿಸಿ ಹೋಗೊ ನಿಜವಾಗಿ                                                                  ॥

ಯಾಕ ಮಡಿವಿಲಿ ಬಿದ್ದಿ ಯಾಕ ಬೆನ್ನಿಲಿ ಬಂದಿ
ಯಾಕ ಕಾಡಿದಿ ದೇವಯೆಂದ  ಎನ್ನ
ಧಿಕ್ಕರಿಸಿ ಹೋಗುವದು ಚೆಂದ  ಇಬ್ಬ
ರೇಕಾಕಿಯಾಗಿ ತರ್ಕೈಸುವದೆಂದ
ಆ ಕರುಣದಿಂ ಮಡಿವಾಳ ಮಾಚಿತಂದೆ ಬರೆ
ತಾ ಕಂಡು ಹರ ಮುಂದೆ ನಿಂದ                                                                ॥

ಕಡಲಜನ ಧರಿಸಿದೆನ್ನೊಡನೆ ಸಮರಸವಾದ
ಮಡಿವಾಳ ತಂದೆ ಕೇಳ್ ಮಾತ  ಈತ
ದೃಢಭಕ್ತ ಚೆಂದಯ್ಯನೀತ  ಲಿಂಗ
ಸಡಲಿದರೆ ತಗಿಯ ಪ್ರಖ್ಯಾತ
ಬಿಡದರ್ಚಿಸುವ ಘನಬಿಟ್ಟು ನಡೆವುದು ನೀತೆ
ಒಡನೆ ಕೇಳಿನ್ನು ಬಲ್ಲಾತ                                                                             ॥

ಮೃಡನು ಪೇಳ್ವುದ ಕೇಳಿ ಮುಗುಳನಗೆಯನೆ ನಕ್ಕು
ಮಡಿವಾಳ ಸ್ವಾಮಿ ತಾ ಬಂದ  ಶರಣ
ರಡಿಗೆ ಸಾಷ್ಟಾಂಗ ಶರಣೆಂದ  ಬಿಡದೆ
ದೃಢಭಕ್ತಿಯಲಿ ಬಂದು ನಿಂದ
ಅಡಿಯಿಡಲ್ ಬಾರದಾಕ್ಷಣ ಲಿಂಗವನಗಲಿ
ನಡೆವುದೆಂತೆನಗೆ ತಿಳುಪೆಂದ                                                                    ॥

ಲಿಂಗಮಧ್ಯದಿ ಜಗವು ಜಗವೆಲ್ಲ ಲಿಂಗಮಯ
ಹೀಂಗಿರುವುದೆಂತೆನ್ನಿರಯ್ಯ  ಪ್ರಾಣ
ಲಿಂಗವೇಕಾತ್ಮವೆಂದರಿಯ  ಈತ
ಭಂಗಿಸಿದನೊಂದು ಪರಿಯ
ಜಂಗಮಾರ್ಚನೆಗೆ ತತ್ಪ್ರಾಣವಾಗಿರೆ ಲಿಂಗ
ವಂಗವಾಗಿರುವದೇನಾಶ್ಚರ್ಯ                                                                  ॥

ಶರಣರಿಗೆ ಪ್ರತಿ ಉತ್ತರವೆ ನಾಯಕ ನರಕ
ಇರದೆ ನಾನಂಜುತಿಹೆನಯ್ಯ  ನಿಮ್ಮ
ಕರದೀಶನಲ್ಲವೆ ಜೀಯ  ಆವ
ಪರಿಯಾದಡೇನು ಹಿಡಿಕೈಯ
ಚರರೂಪವಾದಡೊಲ್ಲೆನು ನಾನು ಪರಶಿವನು
ಪರಮ ಗಾವುದಿಯಾದೆನಯ್ಯ                                                                    ॥

ಮಿಡಿವಡೆದ ಬೆರಳುಗಳು ಬಿಡಿಬಿಟ್ಟ ತೊಡೆತೋಳು
ನಡು ಡೊಂಕ ಬಂಕುಣಿಯ ಕಾಲು  ಹಲ್ಲು
ಕಡು ದೊಡ್ಡ ಮೀಸೆ ತುಟಿ ಜೋಲು  ತೋಳು
ನಿಡಿದಾದವೊಡಲು ಹಿರಿಕೇಲು
ಉಡುಗೆ ಅರ್ಧವನುಟ್ಟು ನಡುವಿಗರ್ಧವ ಸುತ್ತಿ
ಉಡುಪದರು ಗಾವುದಿಗೆ ಮೇಲು                                                               ॥

ಶರಣಲಿಂಗವನೊಂದು ಮಾಡಿ ಮಾಚಯ್ಯಗಳು
ಭರದಿಂದ ತಾವತ್ತ ಪೋಗೆ  ತಮ್ಮ
ಶರಣ ನುಲಿಹೊಸೆದು ಮಾರಿ ತಾ  ಬೇಗ
ಅರಮನೆಗೆ ನಡೆತಂದರಾಗ
ಹರನು ಸಣ್ಣದೊಡ್ಡ ಸಪ್ಹುರಿಯ ಗಂಟಿಕ್ಕಿ
ಭರದಿಂದ ನುಲಿ ಹೊಸೆದನಾಗ                                                                 ॥

ಕಲ್ಯಾಣಕೇರಿಯೊಳಗೆಲ್ಲ ಜನರಿಗೆ ತೋರಿ
ಒಲ್ಲೆನೆಂಬುತ ಕೂಡಲು ತಿರಿಗಿ  ನುಲಿಯ
ನಲ್ಲಲ್ಲಿ ತೋರಿ ಮನ ಮರುಗಿ  ಬಸವ
ನಲ್ಲಿಗೈತಂದು ಮನ ಸೊರಗಿ
ನಿಲ್ಲದೆ ನುಲಿ ಕೊಳ್ಳಿರೆಂದು ಮುಂದಿಡಲು
ನಿಲ್ಲು ದಾರೆಂದು ಮನ ಕರಗಿ                                                                     ॥

ಏನು ಹೇಳಲಿ ವೃಷಭ ಮೇಲು ದೇಶದೊಳೊಂದು
ಕಾನನದ ಪಳ್ಳಿ ಶಿವಪೂರ  ಗೌಡ
ಏನಿಮಯ್ಯನ ಹುಡುಗ ಪೋರ  ಕರಣಿ
ಕನು ತಲೆಯಿಲ್ಲದವನು ಅವಿಚಾರ
ಏನೆಂಬೆವೂರ ಆಚಿಲೆನ್ನ ಹೆತ್ತವರ
ಮೌನದ್ಹುಲಿ ತಿಂತು ಗಂಭೀರ                                                                    ॥

ಅಮ್ಮವ್ವೆ ಎಂಬಾಕಿ ಆಕ್ಷಣದಿ  ಕರೆದೊಯ್ದು
ಸಮ್ಮತದಿ ಸಲಹಿದಳು ಎನ್ನ  ಹೇರೂರ
ಬೊಮ್ಮನೆಂದ್ಹೆಸರಿಡಲು ಎನ್ನ  ಹೆರ ಜನರು
ಒಮ್ಮನದಲಾಡಿಸಲು ಎನ್ನ
ತಮ್ಮ ತಮ್ಮನೆಗೆ ಕರೆದೊಯ್ದು ಅನ್ನವನಿಕ್ಕೆ
ದಮ್ಮಾಯ್ತು ಹೊಟ್ಟಿಗುಣರಣ್ಣಾ                                                                   ॥

ಮದುವೆಗೋಸ್ಕರವಾಗಿ ಸದ್ಭಕ್ತ ಚಂದಯ್ಯನ
ಸದನಕ್ಕೆ ಆಳಾದೆನಲ್ಲಾ  ಸತ್ತ
ರುದಕ ನೀಡನು ಮುದುಕ ಹೊಲ್ಲ  ಎನಗೆ
ಹೊದಿಯಲಿಕ್ಕೆ ಅರಿವಿ ಮುನ್ನಿಲ್ಲ
ಮೆದಿಯ ಕೊಯ್ಯುತ್ತಿರಲು ಮಡುವಿನೊಳು ನೂಕಿ
ದನು ಮದನಾರಿ ಕೇಳ್ ಭಕ್ತ ಸೊಲ್ಲ                                                          ॥

ಶರಣರಾಳಾಗಲ್ಕೆ ಪರಿಭವಂಗಳು ತಪ್ಪಿ
ಇರದೆ ನಿಜಮುಕ್ತಿ ನಿನಗಹುದು  ನೀನು
ಶರಣ ಸೇವೆಯನಗಲದಿಹುದು  ನಿತ್ಯ
ಹುರಿಮಾಡಿ ನುಲಿಯ ತಂದಿಹುದು
ಇರದೆ ಹಾಗವನೈದು ಶರಣರಿಗೆ ಕೊಟ್ಟು ನ
ಮ್ಮರಮನೆಯೊಳುಂಡು ಸುಖಿಯಹುದು                                                 ॥

ಎಂದು ಸನ್ಮತ ಮಾಡಿ ಬಸವರಾಜೇಂದ್ರ ತಾ
ಮುಂದೆ ಸಾಸಿರ ಹೊನ್ನ ಕೊಟ್ಟು  ನುಲಿಯ
ಚಂದದಿಂದರಮನೆಯೊಳಿಟ್ಟು  ಹರನು
ಬಂದು ಬಲು ಸಂತೋಷಬಟ್ಟು
ಚೆಂದಯ್ಯ ಶಿವಧ್ಯಾನದೊಳಗೆ ಇರುತಿರಲಾಗ
ಮುಂದೆ ಸುರುಹಿದ ಗಂಟು ಬಿಚ್ಚಿಟ್ಟು                                                         ॥

ಹೊನ್ನು ಕಾಣುತ ಶರಣ ಗನ್ನಘಾತಕ ಮಾಡಿ
ಕನ್ನವಿಕ್ಕಿದನೆಂದು ತಿಳಿದು  ಎಲವೊ
ಇವನೆಲ್ಲಿ ತಂದೆ ಮನೆಯಳಿದು  ಬಸವ
ತನ್ನ ಭವನಕೆ ಕೊಟ್ಟನೊಲಿದು
ಇನ್ನು ಸಾಕಯ್ಯ ಇವ ಕೊಟ್ಟು ನುಲಿ ತಾಯೆಂದು
ಮುನ್ನ ಕಳುಹಿದ ಕೋಪ ಬಲಿದು                                                               ॥

ಬಸವ ಕೇಡು ಬಂತು ನುಲಿಯ ತಾರೈಯೆಂದು
ಅಸಮಾಕ್ಷ ಬಂದು ತಾ ನಿಂದ  ಚೆನ್ನ
ಬಸವೇಶ ಪ್ರಮಥಗಣ ವೃಂದ  ಸಹಿತ
ಅಸಮ ಭಕ್ತನ ಮನೆಗೆ ಬಂದ
ಜಸವೆತ್ತ ಜಂಗಮಪ್ರಾಣಿ ಸದ್ಗುಣಶ್ರೇಣಿ
ವಸುಧಿಪಾಲಿಪನೆ ಸಲಹೆಂದ                                                                      ॥

ಬಸವೇಶ ಪ್ರಮಥಗಣ ನಿಕರದೊಳು ಅನುಭಾವ
ಅಸಮಗುರು ಚೆಂದಯ್ಯನೆಂದ  ಆತ
ಗುಸುರಲಳವಲ್ಲ ನಾವೆಂದು  ಚೆನ್ನ
ಬಸವೇಶ ಬಲ್ಲ ಇದನೆಂದು
ಕುಶಲನಿಧಿಕೇಳಿ ಅವರಂದಮಂ ದೃಷ್ಟಮಂ
ವಸುಧಿಪಾಲಿಪನೆ ಸಲಹೆಂದ                                                                      ॥

ನೆರೆದ ಜನಸಂದೋಹಕ್ಕೆರಗಿ ಬಿನ್ನೈಸುತಲಿ ಪರಿ
ಪರಿಯ ಪ್ರಮಥತತಿಗೂಡಿ  ಪ್ರಭುವಿ
ಗಿರದೆ ಪಾದಾರ್ಚನೆಯ ಮಾಡಿ  ಗಣಕೆ
ಪರಮಾನ್ನ ಭಕ್ಷ್ಯವನು ನೀಡಿ
ಚರಣೋದಕದಿ ನುಲಿಯ ಸುವರ್ಣವನು ಮಾಡಿ
ಚರಕೆ ಕೊಡಲು ಜನರು ಕೊಂಡಾಡಿ                                                          ॥

ದಶಭುಜವು ಪಂಚಮುಖಿ ಮಿಸುಪ ಕಿಡಿಗಣ್ಣಿನಿಂದ
ಅಸಮ ಪ್ರಭು ತನ್ನ ನಿಜದೋರಿ  ಸುರಿವ
ಕುಸುಮದ ಮಳೆ ಸೂಳೈಪ ಭೇರಿ  ರವದಿ
ಎಸೆವ ಸಾಂಬವನೊಯ್ದ ಸಾರಿ
ಜಸವೆತ್ತ ಕರ್ಪುರೇಶನ ಕರುಣದಿಂ ಚೆನ್ನ
ಬಸವ ಸಾರಿದನು ನಲವೇರಿ                                                                      ॥

* * *