ದುಂದುಮೆ ಕೇಳ್ರಿ ದುಂದುಮೆ                                                                     ॥

ವಾಣಿಯ ವರದ ಕಲ್ಯಾಣಿಯ ಘನತರ
ವೇಣಿಯ ಕಡುಚಲ್ವಪಾಣಿಯಳ  ಸುಖ
ಶ್ರೇಣಿಯ ಶುಕ ಮೃದುವಾಣಿಯಳ  ಫಣಿ
ವೇಣಿಯ ಕುಶಲ ಸುಪ್ಪಾಣಿಯಳ  ಸುಪ್ರ
ವೇಣಿಯ ಬ್ರಹ್ಮನ ರಾಣಿಯ ಕಲೆ ವಿದ್ಯ
ತ್ರಾಣಿಯ ಬಿಡದಿಂಥ ಜಾಣಿಯ ಪೊಗಳ್ವೆ                                                 ॥

ತಾವರೆದಳನೇತ್ರ ದೇವಕಿವರ ವಸು
ದೇವರ ಗರ್ಭದಿ ಜನಿಸುತಲಿ  ಸರ್ವ
ದೇವತೆಗಳು ನಲಿದಾಡುತಲಿ  ಮೊಲೆ
ಸೇವಿಸಿ ಪೂತನಿ ನೀಗುತಲಿ  ಗೋವ
ಕಾವಲನಾಗಿ ಗೋಕುಲದೊಳು ನೆರೆ ಗೊಲ್ಲ
ರಾವಳಿಯೊಳು ನಲಿದಾಡಿ ಪಾಡುತಲಿ                                                    ॥

ಅರಳೆಲೆ ಬಿಂದುಲಿ ಕೊರಳ ತಾಯತ ಗೆಜ್ಜಿ
ಯೆರಡು ಕಾಲೊಳು ಝಣಝಣರೆನುತ  ರತ್ನ
ದ್ಹರಳಿನುಂಗುರ ಬೆರಳೊಳಗಿಡುತ  ಚಲ್ವ
ಮುರಲಿಯ ನಾದಿಸಿ ಸ್ವರದೋರುತ  ಬಂದು
ಮರುಳುಗೊಳಿಸಿ ತುರಗವನೇರಿ ವೃಕ್ಷದ
ನೆರಳಲಿ ಸರಿಗೆಳೆಯರ ಕುಡಿನೋಟ                                                         ॥

ಬಿಲ್ಲುಹಬ್ಬಕೆ ಪೋಗಿ ಭರದಿಂದ ದೈತ್ಯರ
ಮಲ್ಲ ಮಲ್ಲರನೆಲ್ಲ ಕೊಲ್ಲುತಲಿ  ಅಲ್ಲೆ
ಖುಲ್ಲ ಕಂಸನ ಸಂಹರಿಸುತಲಿ  ಮುತ್ಯ
ಗಲ್ಲಿಂದ ಪಟ್ಟವ ಕಟ್ಟುತಲಿ  ಮತ್ತೆ
ಬಲ್ಲಿದ ಶಕಟನ ಮುರಿದು ದನುಜರೆದೆ
ದಲ್ಲಣ ನಿರ್ಜರಪತಿ ಗರ್ವಹರಣ                                                                ॥

ಕಾಳಿಯ ಮಡುವನು ಧುಮುಕುತಲಲ್ಲಿರು
ಕಾಳೋರಗನನು ಮೆಟ್ಟುತಲಿ  ಅಲ್ಲಿ
ತಾಳಗತ್ತಿಲೆ ನಾಟ್ಯವಾಡುತಲಿ  ಮತ್ತೆ
ತೋಳದಂಡಿಗೆಯೇರಿ ಮೆರೆಯುತಲಿ  ಸಖ
ರಾಳಿಯೊಳತಿ ಚಂಡಬುತ್ತಿ ಬೊಗರಿ ಚಿಣಿ
ಕೋಲಿಂದಾಡುವುದೇನ ಬಣ್ಣಿಪೆನು                                                            ॥

ಆಲಯಗಳ ಪೊಕ್ಕು ಕುಲುಕುಲು ನಗುತಲಿ
ಬಾಲಕಿಯರ ಕಣ್ಣ ಮುಚ್ಚುತಲಿ  ಸಾಲು
ಸಾಲು ನೆಲುವ ಸರಕುಚ್ಚುತಲಿ  ಮೀಸ
ಲ್ಹಾಲು ಬೆಣ್ಣಿಗೆ ಕೈಯ ಹಚ್ಚುತಲಿ  ಸವಿ
ದಾಲಸ್ಯವಿಲ್ಲದ ಪರಿಯಲಿ ಮಾಳ್ಪ ಗೋ
ಪಾಲನ ಲೀಲೆಯಲಿಪ್ಪುದಿನ್ನು ಜನರು                                                        ॥

ಮತ್ತೇಭ ನಡೆಯರು ಮಧುರೆಗೆ ಪಾಲ್ಮೊಸ
ರ್ಹೊತ್ತು ಬರುವ ಸಲೆ ಮುತ್ತುಗಳು  ಗಳ
ಹತ್ತೆಂಟು ಸರಿಗಿ ಚಿಂತಾಕಗಳು  ನವ
ರತ್ನಖಚಿತ ಮುತ್ತಿನ್ಹಾರಗಳು  ಮೆರೆ
ವುತ್ತ ಕಂಗಳ ತಿರುವುತ್ತೆಡಬಲನಿಟ್ಟು
ಸುತ್ತಲಿ ಜತ್ತಿಲಿ ಬಂದರಾ ಪುರಕೆ                                                                ॥

ಬಾಲೇರು ಮದನನುಕೂಲೇರು ಯವ್ವನ
ಕಾಲೇರು ಕನಕ ಕಪೋಲೆಯರು  ಸುವಿ
ಶಾಲೇರು ಪಂಚಕಮಾಲೆಯರು  ಸ್ಮರ
ಲೀಲೇರು ಕಂದರ್ಪನೋಲೆಯರು  ರತಿ
ಗಾಲೇರು ಘನತರ ಲೋಲೇರು ಮೋಹನ
ಜಾಲೇರು ಸಲೆ ಸೀರಮಾಲೇರು ಬರಲು                                               8॥

ಮಜ್ಜಿಗೆ ಮೊಸರು ಪಾಲ್ಬೆಣ್ಣೆಯ ಹೊತ್ತು ಕಾ
ಲ್ಗೆಜ್ಜೆಯು ಝಣಝಣರೆನ್ನುತಲಿ  ನಯ
ಕಜ್ಜಳ ಕಣ್ಣಿಗೆ ತೀಡುತಲಿ  ಸುತ
ಸಜ್ಜೇರ ಮುನಿಗಳ ನೋಡತಲಿ  ಸಾದು
ಸಜ್ಜನರಿದ ಕೊಳ್ಳಿರೆಂದು ಮಧುರೆಪುರಿ
ಗುಜ್ಜೇರಿಯೊಳು ಬಂದು ನಿಂತರಾ ಕ್ಷಣದಿ                                               ॥

ಮೇಲುಸ್ವರಗಳೆತ್ತಿ ಕೂಗುವ ಧ್ವನಿಗಳ
ಕೇಳಿ ಬಂದನು ಕೃಷ್ಣ ತಾನಲ್ಲಿಗೆ  ಸಾಲು
ಸಾಲು ಕೊಡಗಳೆಷ್ಟು ತೋರ್ಕಣ್ಣಿಗೆ  ಸುಂಕ
ಹೇಳಿರೆಂದನು ಹೊತ್ತ ಪಾಲ್ಬೆಣ್ಣೆಗೆ  ಇಕೊ
ನಾಳಿಗೆಂದರೆ ಕೇಳಿ ಬಿಟ್ಟವನಲ್ಲ ನಿ
ಮ್ಮಾಳೆಷ್ಟು ಲೆಕ್ಕವ ಹೇಳಿ ನೀವೆನುತ                                                       ॥

ದುಡುಕು ಮಾಡುವನೀತ ಹುಡುಗನ್ಯಾರವ ನಮ್ಮ
ತಡೆವುದ್ಯಾತಕ ಹೊತ್ತಕೊಡ ಭಾರಿಯ  ಸುಂಕ
ಕೊಡುವವರಲ್ಲವು ಬಿಡು ದಾರಿಯ  ಕೇಡ
ಕೊಡುವವರಾಗೊಡೆದವು ಸೋರಿಯ  ಬಿಡು
ಗೊಡವಿಯಾತಕೆ ಹಾಲು ಕುಡಿದೆನಂದರೆ ಹಿಡಿ
ಹಿಡಿಯೆಂದು ಗಲ್ಲವ ಪಿಡಿದು ಮುದ್ದಿಸುತ                                                  ॥

ಕಣ್ಣ ಸೊನ್ನೆಗಳಿಂದ ಕೈಯ ಗಲ್ಲಕೆ ತಂದು
ಬಣ್ಣಿಸುವದ ಬಲ್ಲೆನಾ ನಿಮ್ಮದು  ಉಟ್ಟ
ಸಣ್ಣ ಸೀರಿಯ ನಿರಿಗೆ ಚಿಮ್ಮುವದು  ಹೋದ
ರಣ್ಣಪ್ಪನಾಣೈತಿ ತಾ ನಮ್ಮದು  ದಿನ
ಕಣ್ಣಿಗೆ ಕಾಣದೆ ಕದ್ದು ಹೋಗುವಿರಿಲ್ಲಿ
ಬಣ್ಣಗಾರಿಕಿ ಬಿಟ್ಟು ಕೊಟ್ಟು ಹೋಗೆಂದ                                                      ॥

ಮೊಸರು ಹಾಲಿಗೆ ಸುಂಕವ ವಸುಧೆಯೊಳ್ಕೊಡುವರೆ
ಹೆಸರೇನೊ ನಿನ್ನದು ಹೇಳೆನುತ  ಬಾಯ
ಕಿಸಿದು ಬೇಡುವದ್ಯಾಕ ಹೋಗೆನುತ  ಗಂಡ
ಅಸವಲ್ಲದವ ಕಂಡ್ಯೆ ಕೇಳೆನುತ  ಸುಳ್ಳು
ರಸಿಕಸಿ ವ್ಯಾಪಾರ ಸತಿಯರ ತಡೆವುದು
ಹಸನಲ್ಲ ದಾರಿಯ ಬಿಡುಯೆಂದರವರು                                                    ॥

ಹಿಂಡುಗೋಪಿಯರೆಲ್ಲ ಭಂಡಾಗದಿರಿ ಮತ್ತೆ
ಗಂಡ ಲೋಕಕೆ ನಾನು ತಿಳಿಯೆಂದನು  ನಿಮ್ಮ
ದುಂಡು ಕುಚವ ಕೈಯೊಳಿಡುಯೆಂದನು  ಕರ
ಕಂಡಾಕ್ಷಿಯರ ಮುದ್ದು ತಾರೆಂದನು  ಇಳ
ಕೊಂಡೆಮ್ಮ ಮನೆಯೊಳು ಉಂಡುಟ್ಟು ಶ್ರಮ ಕಳ
ಕೊಂಡು ರಾತ್ರಿಯೊಳಿದ್ದು ಹೋಗಿ ನೀವೆನಲು                                                  ॥

ಹೋರಾಟದಲಿ ಬಂದು ನಾರಿಯರಿಗೆ ಬಹು
ಭಾರಿ ಯವ್ವನ ಬಾ ಬಾ ಬಾರಂತೀದಿ  ಕೈಗೆ
ತೋರ ಕುಚವ ತಾ ತಾ ತಾರಂತೀದಿ  ಮನೋ
ಹಾರ ರತ್ನದ ಹಾ ಹಾ ಹಾರಂತೀದಿ  ಇಂಥ
ಜಾರತ್ವ ಬಿಡು ನೀ ಬಾಜಾರದೊಳ್ ನೆರೆದ ಹ
ಜಾರ ಮಂದಿಯೊಳು ಬೇಜಾರ ಮಾಡುವೆವು                                                  ॥

ಬಾ ಗೊಲ್ಲನಾರಿಯರೀ ಪ್ಯಾಟಿಯೊಳು ಒಂದು
ಸೋಗು ಸುಕಣ್ಗೆ ತೋರುವಿರೆ  ಮತ್ತೆ
ಬಾಗಿ ಬಳುಕಿ ಬಿಂಕ ಬೀರುವಿರೆ  ಮುಂದೆ
ಸಾಗುತಲಡಿಗಡಿಗ್ಹಾರುವಿರೆ  ಕಂಡು
ಹ್ಯಾಂಗ ಸೈರಿಸುವರೆ ಕೊಡು ಲೆಕ್ಕ ತೀರಿಸಿ
ಹೋಗಿರೆಂಬುತ ಸೆರಗ್ಹಿಡಿದು ನಿಲ್ಲಿಸುತ                                                    ॥

ವಾಸವುಳ್ಳವನೇನೋ ನೀ ಸೆರಗ್ಹಿಡಿಯುತ
ಲೀ ಸುಂಕ ಕೊಂಬುವನೇನೊ ಪೋರಾ  ನಿನ
ಗೇಸು ಕಣ್ಣುಗಳಿವೆ ಹೇಳೊ ಚೋರಾ  ಸುಳ್ಳೆ
ಘಾಸಿಯಾಗಲಿ ಬ್ಯಾಡ ತಿಳಿಯೊ ಸೂರಾ  ಒಂದು
ಕಾಸು ಕೊಟ್ಟಡೆ ಎದಿಮ್ಯಾಲಿದ್ದ ಕುಚ ಹೊತ್ತು
ಈಸು ನಿರಿಗಳಲ್ಲಿ ಹೋಗುಯೆಂಬವರು                                                     ॥

ಬೆಡಗಿನ ಮಾತೆಷ್ಟು ಬಡಿವಾರ ಬಿಡು ನಿಮ್ಮ
ವಡವಿವಸ್ತ್ರಗಳೆಲ್ಲ ಹರವುವೆನು  ಮುತ್ತು
ಜಡಿದಂಥ ಮುಜರಿಯ ಮುರಿಯುವೆನು  ಹೊತ್ತ
ಗಡಿಗಿಯೊಡೆದು ಹಾಲ ಸುರುವುವೆನು  ನಿರಿಗಿ
ಸಡಿಲಿಸಿ ಸೆಳೆಮಂಚಕೆಳೆದೊಯ್ದು ಎಲ್ಲರ
ಕೆಡಿಸದೆ ಬಿಟ್ಟರೆ ಹುಡುಗನೇ ಎನಲು                                                        ॥

ಚಿಕ್ಕ ಹುಡುಗ ನೀನು ತಕ್ಕಷ್ಟು ಇರು ಕಂಡ್ಯಾ
ಅಕ್ಕ ತಂಗೇರು ಬಾ ಬಾ ಮತ್ತೆನುತ  ಕೈಗೆ
ಸಿಕ್ಕದ್ಹೋಗುವ ಕರ ಕಷ್ಟೆನುತ  ಮುಸು
ಕಿಕ್ಕಿ ಸೆಳೆದು ಬಗಲೊಳಗಿಡುತ  ಇಂಥ
ಮಕ್ಕಳಾಟಿಕೆ ಬಿಟ್ಟು ಮನೆಗೆ ಹೋಗೆಂದು ಮುಂ
ದಕೆ ಹೆಜ್ಜೆಯ ಬಂದು ಮುತ್ತಿಕೊಂಡಿಹರು                                                  ॥

ಎತ್ತೆತ್ತ ನೋಡಲು ಮುತ್ತಿದ ಸಖಿಯರ
ಯೆತ್ತಿ ಸೀರೆಯ ಸೆರಗ್ಹಿಡಿಯುತಲಿ  ಮುಖ
ವೆತ್ತಿ ಮುಖಕೆ ಮುದ್ದ ನೀಡುತಲಿ  ಘನ
ವೃತ್ತಕುಚಗಳೊತ್ತಿ ಹಿಡಿಯುತಲಿ  ತನ್ನ
ಒತ್ತಿಲಿ ಸುತ್ತಿಲಿ ಜತ್ತಿಲಿ ನೆರೆ ರಂಜಿ
ಸುತ್ತಲಿ ಗೊತ್ತಿಲಿ ಅರ್ತಿಯಾಡುವನು                                                         ॥

ಆಡ್ವನು ಕೊಳಲೂದಿ ಹಾಡ್ವನು ಸತಿಯರ
ಕಾಡ್ವನು ಕಾಮಿನಿನಿಕರದೊಳು  ಚೆಂಡ
ನಾಡ್ವನು ವರ ಕುಚಗಮಕದೊಳು  ಮುದ್ದು
ಬೇಡ್ವನು ಅತಿ ಚಮತ್ಕಾರದೊಳು  ತಂತ್ರ
ಮಾಡ್ವನು ಮನದಿ ಲೋಲಾಡ್ವನು ಸಿಗದೆದ್ದು
ವೋಡ್ವನು ನಿಂತು ಮಾತಾಡ್ವನು ನಯದಿ                                              ॥

ಜಡಜಾಕ್ಷ ತಾ ನಿಂತು ಮಡದೇರೊಳಗೆ ಬಲು
ಬೆಡಗ ತೋರಿಸಿ ಸೀರಿ ಕಳೆಯುತಲಿ  ಗಜ
ನಡೆಯರೆಲ್ಲರು ಬತ್ತಲಾಗುತಲಿ  ತಮ್ಮ
ತೊಡೆತೋಳು ಕುಚನೋಡಿ ನಾಚುತಲಿ  ಕೃಷ್ಣ
ತಡೆಯದೆ ಮುಗುಳ್ನಗೆಯೊಡಗೂಡಿ ಬಂದು ತಾ
ಕಡವಾಲ ಮರನೇರಿ ಬಿಡದೆ ನೋಡುವನು                                             ॥

ಬಾಲೆರೆಲ್ಲರು ಬತ್ತಲಾಗುತ ಗಿಡದಡಿ
ಮೇಲಕೆ ಕರವೆತ್ತಿ ಪೊಗಳುತಲಿ  ಶ್ರೀ ಗೋ
ಪಾಲ ನಿಮ್ಮೊರೆಹೊಕ್ಕೆವೆಂಬುತಲಿ  ಘನ
ನೀಲಮೇಘಶ್ಯಾಮ ಕರುಣದಲಿ  ಹಿಂದೆ
ಪಾಲಿಸಲಿಲ್ಲವು ಎಂದೆಂಬರೀ ಘನ
ಶಾಲೆಯ ಕೊಟ್ಟೆಮ್ಮ ಕಾವುದೆಂದೆನಲು                                                    ॥

ದುರುಳ ದುಶ್ಯಾಸನ ನೆರೆದ ಸಭೆಯೊಳಾಗ
ತರುಣಿ ದ್ರೌಪತಿ ಸೀರೆ ಸೆಳೆಯುತಿರೆ  ಕಂಡು
ಪರಿವಾರ ಜನರೆಲ್ಲ ಮರುಗುತಿರೆ  ಕೃಷ್ಣ
ಪೊರೆಯೊ ಪೊರೆಯೊ ಎಂದು ಸ್ಮರಿಸುತಿರೆ  ಅಂದು
ಪೊರೆಯಲಿಲ್ಲವೆ ದೇವ ಪರಮ ದಯಾಳು ನೀ
ಕರುಣದಿ ಕಾಯಭಿಮಾನ ಎಂಬುವರು                                                      ॥

ಮಾರಜನಕ ಮಾಯಾಕಾರ ಮಹಿಮನೆಂದು
ನಾರೇರ ಸ್ತುತಿವಾಕ್ಯ ಸುರಿವುತಿರೆ  ಬಂದು
ಬಾರಿಬಾರಿಗೆ ಬಾಯ್ದೆರೆವುತಿರೆ  ಮನ
ಸೂರ್ಯಾಗುದೆಂದಾಲಿ ಪರಿಯುತಿರೆ  ಮತ್ತೆ
ಧಾರುಣಿಯೊಳು ಕುಂದಗೋಳ ಶ್ರೀಗುರು ಸಖ
ಭೂರುಹನಿಳಿದು ನೀರೆಯರ ರಕ್ಷಿಸಿದ                                                        ॥

* * *