ದುಂದುಮೆ ಕೇಳ್ರಿ ದುಂದುಮೆ                            ॥

ಸಬ್ಬ ದೇಶದಿ ಕಾಣೆ ಇಂಥ ಮರ್ಕಟ
ಅಬ್ಬರಿಸುತ್ತ ಹಾರ್ಯಾಡುವವು  ತಮ್ಮ
ಹುಬ್ಬು ಹಾರಿಸಿ ಹಲ್ಲು ಕಿಸಿಯುವವು  ಮತ್ತೆ
ತಬ್ಬುಬ್ಬಿ ಅಲ್ಲಲ್ಲೆ ಕೂಡುವವು  ಮೈಯ
ಉಬ್ಬುತ ಕೊಬ್ಬುತ ಹಬ್ಬುತೂರೊಳಗೆಲ್ಲ
ಹುಬ್ಬಳ್ಳಿಯೊಳು ಮಂಗ ಹುಡದಿಯಾಡಿದವು                                          ॥

ಅಂಗನೆಯರು ತಮ್ಮ ಅಂಗಳದೊಳು ಮನಿ
ಮುಂಗಡಿಯೊಳಗೆಲ್ಲ ಕೂಡಿದವು  ಮತ್ತೆ
ಹಿಂಗದ ಒಳಪೊಕ್ಕು ನೋಡಿದವು  ದೊಡ್ಡ
ಸಂಗಟಿ ಸ್ವಾರಿ ಈಡಾಡಿದವು  ಇಟ್ಟ
ಗಂಗಳ ತಂಬಿಗಿ ಆಂಬ್ರ ಚೆಲ್ಲಿದವವ್ವ
ಮಂಗಳವಾರ ಪ್ಯಾಟಿ ಮಾನಗೇಡಿ ಮಂಗ                                              ॥

ದೊಡ್ಡ ಮುಂಡಾಸ ಗಿಡ್ಡಂಗಿ ಜನಿವಾರ
ದೊಡ್ಡ ಗೊಂಗಡಿಯನ್ನು ಹಾಸಿಹರು  ಸಣ್ಣ
ಗಡ್ಡ ಹತ್ತೀ ಮೀಸಿ ಚಿನಿವಾಲರು  ಮುಂದೆ
ಅಡ್ಡ ಹಾಯ್ದರೆ ನೋಡಿ ಕರೆಯವರು  ಹೊನ್ನು
ದುಡ್ಡು ರೂಪಾಯಿ ಚೀಲ ಅಡ್ಡಡ್ಡ ಎಳೆದಾಡಿ
ಎಡ್ಡು ಹಚ್ಚಿತಲ್ಲೊ ಅಡಮುಟ್ಟು ಮಂಗ                                                       ॥

ಹಪ್ಪಳ ಸೆಂಡಿಗಿ ಶಾಂವಿಗಿ ಗುಳಗಿಯ
ಚಪ್ಪರ ಮುಂದೊಣ ಹಾಕಿಹಳು  ಒಂದು
ತುಪ್ಪದ ಚಟಿಗಿಯ ಮುಂದಿಟ್ಟಿಹಳು  ಕೈಯ
ಚಪ್ಪಳಿಕ್ಕುತ ಮಾತನಾಡುವಳು  ನೋಡಿ
ತಪ್ಪದೆ ಹೊಕ್ಕಲ್ಲಿ ತಿಂದು ತೆಕ್ಕಿಯ ಬಿದ್ದು
ಕುಪ್ಪಸ ಹರಿದಿತು ಕುಲಗೇಡಿ ಮಂಗ                                                         ॥

ಪಂಚಮಿ ಬಂತೆಂದು ಹಂಚಿಟ್ಟು ಅರಳನು
ಹಂಚಿಕೆಯಿಂದ್ಹುರಿದಿಟ್ಟಿದ್ದೆನೆ  ಆಗ
ಮುಂಚೆಳ್ಳಚಿಗಳಿ ತಂಬಿಟ್ಟು ಕಟ್ಟಿದ್ದೆನೆ  ಹೊಸ
ಕುಂಚಿಗಿ ಕುಲಾಯ ಹೊಲಿಸಿಟ್ಟಿದ್ದೆನೆ  ಮನೆಯ
ಹಂಚು ಒಡೆದೊಳಗ್ಹೊಕ್ಕೆಲ್ಲ ತಿಂದಿತು
ಕಂಚಗರೋಣಿ ಕಸವಂಟ ಮಂಗ                                                              ॥

ಅಚ್ಚ ಬಾಳಿಯ ಹಣ್ಣು ಬಚ್ಚಿಟ್ಟು ಗಲ್ಲಕೆ
ಹಚ್ಚಿತು ಕೈಯನು ಮುಂಬಿನಲಿ  ಅದು
ತಬ್ಬಿಕೊಂಡೋಡಿತು ಕುಂಬಿಯಲಿ  ಕೂತು
ಬಿಚ್ಚಿತು ತ್ವಾಟಿಯ ಕೈಯಿಂದಲಿ  ಬಾಯ್ಗೆ
ಹಚ್ಚಿತೆನ್ನಯ ಜೀವ ಕಿಚ್ಚೆದ್ದು ಹೊಯ್ಕಂಡೆ
ಹೆಚ್ಚೆಂದು ಕಾಣವ್ವ ಹಿರಿಪ್ಯಾಟಿ ಮಂಗ                                                      ॥

ನಲ್ಲೇರ ಕೈಯಾನ ರಾಟಿಯ ಒಳಗಿನ
ಚಿಲ್ಲನು ಕಿತ್ತು ಚಿಮ್ಮ್ಯಾಡಿತಲ್ಲ  ಬುಟ್ಟಿ
ಯಲ್ಲಿದ್ದ ಕುಕ್ಕಡಿ ಹಿರದೀತಲ್ಲ ಹಾಸಿ  ಗ್ಹಾರಿ
ಹಲ್ಲಿಂದ ಹರಿದೋಡಿತಲ್ಲ  ಪ್ಯಾಟಿ
ಯಲ್ಲಿಟ್ಟ ಹಣ್ಣು ಕಾಯಿ ನೀರಲ ಪೇರಲ
ಪಲ್ಲೇವ ತಿಂದಿತು ಪಡಸೆಂಟ ಮಂಗ                                                        ॥

ಎಲ್ಲಿ ಹೋದರು ತಾನು ಅಲ್ಲಿಗೆ ಬರುವದು
ಝಲ್ಲೆಂದಿತಲ್ಲ ಎನ್ನೆದಿಯೊಳಗೆ  ಪಲ್ಲೆ
ಚಲ್ಯಾಡಿತಲ್ಲಿ ಬಾಜಾರದೊಳಗೆ  ನಾನು
ತಲ್ಲಣಗೊಂಡೆನು ಮನದೊಳಗೆ  ತಾನು
ಹಲ್ಲು ಕಿಸಿದು ಕಲ್ಲಬಿಲ್ಲಿಯ ಮಾಡಿತು
ಗುಲ್ಲ ಮಾಡೋಡಿತು ಗುಣಗೇಡಿ ಮಂಗ                                                  ॥

ಬುಟ್ಟೇದ ಕುಪ್ಪಸ ಬುಗುಡಿಯಂಚಿನ ಸೀರಿ
ಉಟ್ಟು ತೊಟಗೊಂಡಿರುತ್ತಿದ್ದೆನೆ  ಅಕ್ಕಿ
ಕುಟ್ಟಿಕೊಂತ ನಾ ಕುಂತಿದ್ದೆನೆ  ಒಂದು
ಕಟ್ಟಿಗೆ ಕೋಲನ್ನು ಇಟ್ಟಿದ್ದೆನೆ  ಬಂದು
ಬಟ್ಟ ಕುಚವ ಮುಟ್ಟಿ ಕಟ್ಟಾನೆ ಕಡದೀತು
ಕಟ್ಟಾಣಿ ಹರದೀತು ಕವಡಿಯ ಮಂಗ                                                       ॥

ಬುಕ್ಕಿಟ್ಟನ ಚೀಲ ಬುಡಮೇಲು ಮಾಡಿತು
ಚಿಕ್ಕ ತಕ್ಕಂಗಡಿ ಹೊಕ್ಕಿತಲ್ಲ  ಕಲ್ಲು
ಸಕ್ಕರೆ ಚೀಲವ ನೆಕ್ಕಿತಲ್ಲ  ಮತ್ತೆ
ತಕ್ಕಡಿ ದಂಡಿಗಿ ಮುರದೀತಲ್ಲ  ಅವ
ಲಕ್ಕಿ ರೇವಡಿ ಬೆಂಡು ಬೆತ್ತಸ ಪುಟಾಣಿ
ಮಕ್ಕಳ ಕರಗೊಂಡು ಮುಕ್ಕಿತು ಮಂಗ                                                    ॥

ಪೆಟ್ಟಿಗಿಯೊಳಗಿನ ಪಟ್ಟೆದಂಚಿನ ಸೀರಿ
ಇಟ್ಟು ಬಚ್ಚಲದಾಗ ಕುಂತಿದ್ದೆನೆ  ಎನ್ನ
ಕಟ್ಟಿದ ಕೂದಲ ಬಿಚ್ಚಿದ್ದೆನೆ  ಮತ್ತೆ
ಬಟ್ಟಬತ್ತಲೆ ನಾನು ಕೂತಿದ್ದೆನೆ  ಆಗ
ತಟ್ಟಿ ಮುರಿದು ಬಂದು ಇಟ್ಟ ಸೀರೆಯ ಕೊಂಡು
ಕಟ್ಟು ಕುಲಾಯವ ಕಸಗೊಂತು ಮಂಗ                                                    ॥

ದಿಗ್ಗನೆ ಹೊಕ್ಕಿತು ಮಗ್ಗದವರ ಮನಿ
ಹುಗ್ಗಿಯ ಗಡಿಗೆಗೆ ಹಾರಿತಲ್ಲ  ಅದು
ಬಗ್ಗಿಸಿ ಬಾರಲ ಹಾಕಿತಲ್ಲ  ಬಲು
ಸುಗ್ಗಿಯಾಯಿತೆಂದು ಹಿಗ್ಗಿತಲ್ಲ  ಕುಂತು
ಬಗ್ಗಿದವರ ಮೇಲೆ ಹಗ್ಗ ಹರಿದಿಳಿದು
ನುಗ್ಗ ಮಾಡಿತವ್ವ ಅಗ್ಗದ ಮಂಗ                                                                ॥

ಹಾರಿತು ಜವಳಿಯ ಅಂಗಡಿ ಸಾಲಿಗೆ
ಬಾರಲ ಹಾಕಿತು ದೌತಿಯನು  ಕಿತ್ತು
ಈಡಾಡಿತಲ್ಲ ಜವಳಿಯನು  ಮಣಿ
ಗಾರಂಗಡಿಗಿಟ್ಟು ದಾಳಿಯನು  ಪಟ್ಟೆ
ಮಾರು ನಾರೇರ ಮಾರಿಯ ಮೇಲ್ಹೊಡೆದು
ನೀರೆಯ ಕಳೆದಿತು ಸಿರಿಗೇಡಿ ಮಂಗ                                                        ॥

ಮತ್ತೆನ್ನ ಬಸುರೆಂದು ಬುದ್ಧಿ ಬೋನವ ಮಾಡಿ
ಒತ್ತಿ ಬಳ್ಳೊಳ್ಳಿಯ ಬೆರೆಸಿದ್ದೆನೆ  ಆಗ
ಚಿತ್ತೆಲ್ಲ ನಾನಲ್ಲಿ ಇರಿಸಿದ್ದೇನೆ  ನನ್ನ
ಸುತ್ತಲೆ ಯಾರಿಲ್ಲ ಕುಳಿತಿದ್ದೆನೆ  ಓಡಿ
ಹೊತ್ತು ನೋಡಿ ಬಂದು ಮುತ್ತಿಕೊಂಡಿತೊಂದು
ತುತ್ತಾರ ಬಿಡಲಿಲ್ಲ ತುಡಗಿನ ಮಂಗ                                                         ॥

ಹುಡಗೇರುಡಲೊಳು ಕಡಲಿ ಕೊಬ್ಬರಿ ಕಬ್ಬು
ಹಿಡಕೊಂಡು ಹೋಗಲು ತುಡಕಿತವ್ವ  ಗಲ್ಲ
ಹಿಡದೆನ್ನ ಮಾರಿ ನೋಡುತವ್ವ  ಉಟ್ರ
ಸಡಿಲಿಸಿ ನಿರಿಗೆಗಳ ಕಳಚಿತವ್ವ  ದೊಡ್ಡ
ಕಡವೆಯಂತೆ ಮೂಳ ಕಾಲಾಗ ಬಂದಿತು
ಉಡಿಚೀಲ ತಕ್ಕೊಂಡು ಓಡಿತು ಮಂಗ                                                    ॥

ಲೋಕದೊಳೆಲ್ಲೆಲ್ಲಿ ನಾ ಕಾಣೆನಿಂಥಾದು
ಸಾಕು ಸಾಕಾಯಿತು ಈ ಜನ್ಮಕ  ಇದರ
ಕಟಕಟಿ ಬಹಳವ್ವ ಅದರುಷ್ಟಕ  ಬೆಂಕಿ
ಹಚ್ಚಲೆವ್ವ ಮಾಡುವ ಬಾಳ್ವೇಕ  ಮುದದಿ
ಶ್ರೀ ಕಂದಗೋಳ ಭೂಕಾಂತ ಗುರುವಿಗೆ ನಾನು
ಕಾಯ ಒಡಸೂವೆ ಸಾಯಲಿ ಮಂಗ                                                         ॥

* * *