ಪುರಾತನರ ಪೂಜೆ
ದುಂದುಮೆ ದುಮ್ಮಿ ಸೊಲ್ಲಿಗೆನ್ನಿ ರಿ
ದುಂದುಮೆ ಬಸವಂತನ ಹಬ್ಬ ॥
ಸತ್ರಗಮನ ವಂದ್ಯಗರ್ವಗಹನ ಹವಿ
ಸತ್ರಭವನ ಶಿರಃಪಾತ್ರನನೆ ಚಲ್ವ
ಪತ್ರಶರನ ಮದಲೋಪನನೆ ಉಮೆ
ಪತ್ರಾನನಕೆಸೆವ ಭ್ರಮರನನೆ ಸೋಮ
ಪತ್ರಾಪ್ತ ಪಾವಕ ತ್ರಿನೇತ್ರ ಎನ್ನತಾ
ಪತ್ರವ ಪರಿಹರಿಸೆನ್ನ ರಕ್ಷಿಪುದು ॥
ಜಗದೇಕನಾಥನೇ ಭಕ್ತಸಂಪ್ರೀತನೆ
ಅಗಜೆಯ ಕುಂಕುಮಾಂಕಿತ ವಕ್ಷನೆ ದೇವ
ಅಗಣಿತ ಮಹಿಮ ಅಸುರಶಿಕ್ಷನೆ ದಿವ್ಯ
ಸುಗುಣಗಣಾನ್ವಿತಜನ ರಕ್ಷನೆ ನಿನ್ನ
ಬಗೆಬೆಯಿಂದಲಿ ಪೊಗಳುವೆನನುದಿನ
ಸೊಗಸಿದ ಕೊಡುಯೆನ್ನ ಮತಿಗೆ ಮಂಗಳವ ॥
ಕಥೆಯಲ್ಲ ಸರ್ವರು ಕಂಡಂಥ ಮಾತಿದು
ಕ್ಷಿತಿಯೊಳಗಾದ ವಿಸ್ತಾರವನು ಬಲು
ಅತಿಚೋದ್ಯವಾದಂಥ ಪೂಜೆಯನು ಬಹು
ಹಿತದಿಂದ ಸರ್ವರಿಗೊರೆಯುವೆನು ನೀವು
ಮತಿಯುತರ್ ಮನಸಿಟ್ಟು ಕೇಳ್ವಡೆ ಮುಂದೆ ಸ
ದ್ಗತಿಯಾಗುವದು ಸತ್ಯ ತಪ್ಪದು ನೋಡಿ ॥
ಪದುಮಭವಾಂಡದೊಳೈವತ್ತುಕೋಟಿಗಾ
ವುದದೊಳು ಸಪ್ತದ್ವೀಪಾಂತರವು ಮತ್ತಿ
ನ್ನದರೊಳು ತೋರ್ಪವು ನವಖಂಡವು ಪೃಥ್ವಿ
ಯದರೊಳಗಿರುವ ಚಪ್ಪನ್ನದೇಶವು ಸಲೆ
ಯದರೊಳಗೊಂದು ರಾಷ್ಟ್ರದಿ ತೋರ್ಪ ಪುರ ಪುಣ್ಯ
ಸದನ ಸಂಶೀಪುರ ವರ್ಣಿಸಲಳವೆ ॥
ಮರೆಯದೆ ಗುರುಲಿಂಗಜಂಗಮಸೇವೆಗೆ
ಸರಿಯಾಗಿ ತನುಮನಧನಗಳನು ಅಂಗಿ
ಕರಿಸದೆ ಸವೆಸುವರೆಂಬುತ ಶಿವನು ಇದ
ಕಿರಲೆಂದು ಸವಶೆಂಬ ನಾಮವನು ಇಟ್ಟು
ಕರೆದನು ಪರಮಸಂತೋಷದಿಂದೀ ಪುರ
ಹಿರಿದು ವರ್ಣಿಸುವಡೆ ಶೇಷಂಗಸಾಧ್ಯ ॥
ತೋರುವ ಧನದ ವಿಸ್ತಾರದಿಂದಿರುವ ಕು
ಬೇರನಿರುವ ಅಳಕಾವತಿಯೊ ಚಲ್ವ
ನಾರಿಯರಿಂ ದ್ವಾರಕಾವತಿಯೊ ಭೋಗ
ವಾರದಿಂ ಮೆರೆವಮರಾವತಿಯೊ ಮಹ
ಮೇರುವೋ ಶಿವಗಣವೃಂದ ಸಹಿತ ಮನೋ
ಹಾರದಿಂ ಕಣ್ಗೆ ರಾಜಿಸುವುದೀ ಪುರುವು ॥
ಅಲ್ಲಲ್ಲೆ ಅನ್ನ ಸಂತರ್ಪಣವನುದಿನ
ಅಲ್ಲಲ್ಲೆ ನೀರಕಾರಂಜಿಗಳು ತೋರ್ಪ
ವಲ್ಲಲ್ಲೆ ಶಿವಶಾಸ್ತ್ರಗೋಷ್ಠಿಗಳು ಪಾಡ್ವ
ರಲ್ಲಲ್ಲೆ ವೀಣಾದಿನಾದಗಳು ಮತ್ತಿ
ನಲ್ಲಲ್ಲೆ ಗೀತಸಾಹಿತ್ಯ ಸುನೃತ್ಯವು
ಅಲ್ಲಲ್ಲೆ ಶೋಭನದಿಂದ ರಾಜಿಪುದು ॥
ಸಾಲ್ಮಳಿಗೆಗಳು ವಿಶಾಲದಿಂ ತೋರುವ
ಮೇಲ್ಮೇಲಂತಸ್ತದ ಮನೆಗಳಿಂದ ಇರ್ಪ
ಮಾಲ್ಮನೆ ಗೋಪುರ ಚಿತ್ರದಿಂದ ಬಹು
ಚಾಲ್ಮಹ ಮಾಟದ ಕಿಡಿಕಿಯಿಂದ ಬಿದ್ದು
ಕಾಲ್ಮುರಿದಿಹ ಸಿರಿಲೋಲ್ಮನದವನ ಪುರ
ಆಲ್ಮನಕರಿದು ವಿಶಾಲ್ಮತಿಯರ್ಗೆ ॥
ದುರುಳರು ದುಷ್ಕರ್ಮ ದುರ್ನೀತಿ ದುರ್ಮೋಹ
ಹಿರಿದಾದ ಮದಮತ್ಸರಂಗಳಿಲ್ಲಾ ನೋಡ
ಲರಿಗಳು ಕೇಡ ನುಡಿ ನೀಚರಿಲ್ಲಾ ತಾವು
ಪರರಿಗನ್ಯಾಯವ ಮಾಡ್ವರಿಲ್ಲಾ ತೊಂಟ
ಕರು ಕಂಟಿಕಿಗಳು ಕಠಿಣಹೃದಯರು ದುರಾ
ಚರಣೆ ಚಾಟಕರಿಲ್ಲ ಎಂದಿಗಾ ಪುರದಿ ॥
ಬಡಿಬಡಿಯೆಂಬುದು ಭೇರಿಯೊಳಲ್ಲದೆ
ಹೊಡಿಹೊಡಿಯೆಂಬುದು ಪೈರಿನಲಿ ಮತ್ತೆ
ಕಡಿಕಿಡಯೆಂಬುದು ನೂಲಿನಲಿ ನೆರೆ
ಮಡಿಮಿಡಯೆಂಬುದು ವಸ್ತ್ರದಲಿ ಇನ್ನು
ಸುಡುಸುಡುಯೆಂಬುದು ಮಡಕೆಯೊಳಲ್ಲದೆ
ಕೆಡೆನುಡಿ ಕಾಣೆ ಕಲ್ಯಾಣದಂತಿರಲು ॥
ಇಂತಪ್ಪ ಶುಭಕರವಾದಂಥ ಪುರದೊಳು
ಕಂತುಮರ್ದನ ಶ್ರೀಶಂಕರಲಿಂಗನು ಬಹು
ಸಂತೋಷದಿಂದಲಿ ನೆಲೆಸಿಹನು ಭಕ್ತ
ರಂತರಂಗದ ಇಚ್ಛೆ ಸಲಿಸುವನು ಇರ
ಲಿಂತು ವಿಸ್ತಾರವನಂತವಿಹುದು ಶಿವ
ಸಂತತಾತುಳ ಭಕ್ತರನು ವರ್ಣಿಪೆನು ॥
ಆರೊಳು ಕಲಹವು ತಲೆದೋರದಂತೆ ಸರ
ಕಾರ ಕಾರಭಾರ ಹುಶಾರದಿಂದ ಸುವಿ
ಚಾರ ಸದ್ಗುಣ ಮಣಿಹಾರದಿಂದ ದಯ
ಪೂರ ಸತ್ಕೀರ್ತಿ ವಿಸ್ತಾರದಿಂದ ಇರ್ಪ
ಮೇರು ಸಮಾನವು ಧೀರನು ಪರವುಪ
ಕಾರ ಹಿರೇಬಣದ ಶಿವನಗೌಡನನು ॥
ಆವ ಕಾಲದಲಿ ಸದ್ಭಾವದಿಂದಿರುವಂಥ
ಭಾವಜರೂಪವ ಪೋಲುವನು ನಿತ್ಯ
ಕೇವಲ ಭಕ್ತಿ ಪರಾಯಣನು ಮತ್ತೆ
ಸಾವಧಾನದಿ ಸತ್ಯವಾಕ್ಯವನು ತಾ ಸಂ
ಜೀವನು ಬಡಜನಕಾವನು ಜನ ಕತಿ
ಜೀವವಾಗಿರುವಂಥ ಜೀವನಗೌಡ ॥
ಸರಸಲಾವಣ್ಯದಿಂದಿರುವನು ಸಜ್ಜನ
ನೆರೆದ ಮಂಡಲಿಯೊಳು ಕೂಡಿಹನು ನಿತ್ಯ
ಹರಗುರುಭಕ್ತಿಯ ಮಾಡುವನು ಜೀವ
ಕರುಣಸಾಗರದಂತೆ ತೋರುವನು ಇಂತು
ಪರಿಯಿಂದ ಮೆರೆಯುವ ಪರಮ ಸಂತೋಷದಿಂ
ದಿರುವಂಥ ಲಿಂಗನಗೌಡನೇನೆಂಬೆ ॥
ಸಿಂಧುಸಮಾನವು ಸತ್ಕೀರ್ತಿ ನಿರುತದಿ
ಕುಂದದೆಯಿರುವ ಫಕೀರಗೌಡನು ಭಕ್ತಿ
ನಿಂದ್ರದೆ ಮಾಡ್ವ ದ್ಯಾವನಗೌಡನು ತಾವು
ಇಂದುಧರನ ಪೂಜೆ ಚಂದದಿ ಮಾಡುವ
ರಂದು ಇಂದಿಗೆ ಇವರ್ಮುವ್ವರೇನೆಂಬೆ ॥
ನೀಟಾಗಿ ಮನೆ ಬಲು ಮಾಟಾಗಿ ಮೆರೆಯುವ
ಪ್ಯಾಟಿದೈವಕೆ ಶ್ರೇಷ್ಠವೆನಿಸುವನು ಚರ
ದಾಟ ದಾಸೋಹವ ಮಾಡುವನು ನೋಡ್ವ
ನೋಟಕಚ್ಚರಿಯಾಗಿ ಬೀರುವನು ಗಣ
ಕೋಟಿ ಬರಲು ಅನ್ನವನೀವ ಕೊಟ್ಟರಶೆಟ್ಟಿ
ಗಾಟದಿಂದಿರುವಂಥ ಅನ್ನದಾನಪ್ಪ ॥
ಪಂಚಾನನರೂಪ ಜಂಗಮ ಸಮೂಹಕೆ
ಕಿಂಚಿತುಭೇದವ ಮಾಡದಲೆ ನಿತ್ಯ
ಪಂಚಭಕ್ಷಾನ್ನವ ನೀಡುತಲೆ ಮಹಾ
ಪಂಚಸೂತಕಕೆ ತಾ ಸಿಲುಕದಲೆ ತಾ ನಿ
ರ್ವಂಚಕ ಪಂಚಕ ಪರುಷ ತಾಳಿದಂಥ
ಪಂಚರೊಳಗೆ ಇರ್ಪ ಕೋರಿ ಪಂಚಪ್ಪ ॥
ಪರಮಪರ್ವತ ಕುಲಿಶದಂದದಿಯಿರ್ಪ
ಸರಿಯಾಗಿ ಪೇಳುವ ನ್ಯಾಯವನು ಸುಳ್ಳು
ಹರಕತು ಮಾತಯಿನ್ನಾಡನವನು ಬುದ್ಧಿ
ಪಿರಿದು ಸಜ್ಜನರೊಳು ಕೂಡಿಹನು ತಾ ಸು
ಚರಿತನು ದುರ್ಗುಣ ಮರತನು ಸದ್ಗುಣ
ಭರಿತನು ಕೋರಿಯ ಶಿವಲಿಂಗಪ್ಪನು ॥
ಹರಮತವಾರಿಧಿವರ್ಧನ ಚಂದ್ರಮ
ಅರಿಕುಲಕರಿಹರಿಯಂದದಲಿ ನಿತ್ಯ
ಪರತರ ಶಿವಪೂಜೆ ಸ್ಮರಣೆಯಲಿ ದಯ
ಭರಿತನು ಭಯಭಕ್ತಿಭಾವದಲಿ ಇರ್ಪ
ಮರುಳ ಶಂಕರನಂತೆ ಮೆರೆವ ಲಾವಂಗದ
ಮರುಳ ಸಿದ್ಧಪ್ಪನ ನಾನೇನ ಬಣ್ಣಿಪೆನು ॥
ಶಂಭುಶಂಕರಗತಿಪ್ರೀತಿ ಭಕ್ತರ ನಿಕು
ರಂಭರವಿಂದಕೆ ಸೂರ್ಯನನು ಸಿರಿ
ಸಂಭ್ರಮದಿಂದಲಿ ಕೂಡಿಹನು ಭಕ್ತಿ
ಡಂಭಕವಿಲ್ಲದೆ ಮಾಡುವನು ಮತ್ತೆ
ಕುಂಭಿನಿಯೊಳು ಚಲ್ವ ಕುಂಭಿಯೋಲಮೃತ
ಕುಂಭದಂತಿರುವಂಥ ಕುಂಬಿ ಫಕೀರಪ್ಪ ॥
ಮುದ್ದು ಮಾತಾಡುವ ದೊಡ್ಡ ಬಸಪ್ಪನು
ಶುದ್ಧಮನದ ಚನಬಸಪ್ಪನು ತಾ ಪ್ರ
ಸಿದ್ಧ ತೆಂಗಿನಕಾಯಿ ಫಕೀರಪ್ಪನು ನಗೆ
ಮುದ್ದು ಮೊಗದಲಿರ್ಪ ಸಂಗಪ್ಪನು ಅಲ್ಲೆ
ಯಿದ್ದ ಪಟ್ಟಣಸೆಟ್ಟಿ ಮೊದಲಾದ ದೈವವ
ಶುದ್ಧಾಗಿ ವರ್ಣಿಪೆ ಉಳಿದವರರಿಯೆ ॥
ನಾರಿಯರ್ ಬಲು ಹೊಂತಕಾರಿಯರ್ ದುರ್ಗುಣ
ದೂರೆಯರ್ ಪರಮ ಉದಾರಿಯರು ಮದ
ವಾರಣನಡೆ ಕುಚಭಾರಿಯರು ಚಲ್ವ
ವಾರಿನೋಟದ ಸುವಿಚಾರಿಯರು ತೋರ್ಪ
ವಾರಿಗಿ ಸಖಿಯರು ರತಿರೂಪ ಪೋಲುವ
ವಾರ ಸಖಿಯರಲ್ಲಿ ಶೋಭಿಸುತಿಹರು ॥
ಶಿತಿಕಂಠ ಶಿವನವತಾರ ಜಂಗಮರೂಪ
ಯತಿಗಳು ಬರಲು ಕಾಣುತಲವರು ಬಹು
ಹಿತದಿಂದ ಉಪಚಾರ ಮಾಡುವರು ಸ್ವಲ್ಪು
ಖತಿಯಿಲ್ಲದನ್ನವ ನೀಡುವರು ತಮ್ಮ
ಪತಿಸೇವೆಯಲ್ಲದೆ ಗತಿಯೆಮಗಿಲ್ಲೆಂಬ
ಸತಿಯರು ನಿರುತದಿ ಕಾಣಿಸುತಿಹರು ॥
ಪೃಥ್ವಿಯೊಳಗೆ ಜಾತಮುತ್ತಿಗೆ ತಾ ನೀರ
ಮುತ್ತು ತಂದಿಡೆ ಮುತ್ತ ಹೋಲ್ವದೆ ನವ
ರತ್ನಕೆ ಕಾಜಿನ ಮಣಿ ಹೋಲುದೆ ಗುಡಿ
ಕರ್ತೃಲಿಂಗಕೆ ಗುಡಿ ಕಲ್ಹೋಲುದೆ ಗಣ್ಣ
ಪತ್ರಕಚ್ಚರಿಯಾಗಿ ತೋರುವ ಶರಣರ್ಗೆ
ಪ್ರತ್ಯೇಕ ಜನರನುಪಮಿಸಬಹುದೆ ॥
ಪಂಕದೊಳಗೆ ಮೃದು ಪಂಕಜ ಪುಟ್ಟಿ ತಾ
ಪಂಕವ ಪಂಕಜ ಕೂಡುವದೆ ಭ್ರಮೆ
ರಂ ಕೀಟ ಸೋಂಕೆ ಕೀಟಾಗುವದೆ ಘೃತ
ಅಂಕುರ ಮರಳಿ ಪಾಲಾಗುವದೆ ತಾಸು
ಕಿಂಕರ ಶ್ರೀಗುರುಕರುಣವ ಪಡೆದರೆ
ಕಿಂಕರನಾಗಿ ತಾ ಮರಳಿ ಪುಟ್ಟುವನೇ ॥
ಇಂತು ಪ್ರಕಾರದಿ ಇರುವಂಥ ಶರಣರು
ಸಂತತ ಕಲ್ಯಾಣದಂದದಲಿ ತೋರ್ಪ
ದಂತಿರಲ್ಮುಂದೆ ಸವಿನಯದಲಿ ಪೇಳ
ನಂತಪುರದ ಸ್ವಾಮಿ ಭೂಮಿಯಲಿ ತಾ ಸ್ವ
ತಂತ್ರದಿಂದಲಿ ದೇಶ ಸಂಚಾರ ಮಾಡುವ
ದೆಂತು ಪೇಳಲಿವರನೆಂತು ವರ್ಣಿಸಲಿ ॥
ಘೋರ ಸಂಸ್ಕೃತಿಬಂಧದೂರ ಷಟುಸ್ಥಲ
ವಾರಕೆ ಕಲಶದೋಲಂದದಲಿ ನಿತ್ಯ
ಸಾರವಿಚಾರ ಸಂಪೂರದಲಿ ಭವ
ವಾರಿಧಿ ಭೈತ್ರನು ಧರಣಿಯಲಿ ಇರ್ಪ
ಧೀರ ಶಾಂತವೀರಸ್ವಾಮಿಯವರ ಚರ
ಣಾರವಿಂದವ ನಾನು ಪೊಗಳುವೆ ಮನದಿ ॥
ಆರು ವರ್ಣಿಸುವರೀ ಷಟುಸ್ಥಲ ಮೂರ್ತಿಯ
ಆರುವರ್ಗ ಹಿಟ್ಟುಗುಟ್ಟಿಹನು ಎರ
ಡಾರು ಮನವ ದೂರ ಬಿಟ್ಟಿಹನು ಮತ್ತೆ
ಮೂರು ಮಲದ ಲತೆ ಸುಟ್ಟಿಹನು ಹದಿ
ನಾರುಯಿನ್ನೂರು ಸಕೀಲವ ತಿಳಿದೊಂದು
ಮರಿದುನ್ಮನಿ ಸುಖ ಸೂರಾಡ್ವಯತಿಯು ॥
ಅಂದಳೈಶ್ವರ್ಯದಿ ಚಂದದಿ ಕುಳಿತಿಹ
ಹೊಂದಿಲೆಯಿರುವ ಅಪ್ತಾಗಿರಿಯು ಬಹು
ಅಂದವಾಗಿಹ ಛತ್ರಚಾಮರವು ಮುಂದೆ
ಸುಂದರ ತೇಜಿಗಳ್ ಹಿಡಿದಿಹವು ವಾದ್ಯ
ಸಂದಣಿಯಿಂದಲಿ ಬೆಳ್ಳಿಬೆತ್ತದವರು
ಮಂದಹಾಸದಿಂದ ಪೊಗಳುವರೆಂತು ॥
ಮಂಡಲಧೀಶ ಪ್ರಚಂಡ ಬರ್ಪ ನಿಮ್ಮ
ಮಂಡೆ ಬಾಗಿಸಿರೆಂದು ದಂಡವನು ಪಿಡ
ಕೊಂಡು ವಾದಿಸುವರ ಗಂಡವನು ಜಗ
ಭಂಡ ಕತ್ತಲೆಗೆ ಮಾರ್ತಾಂಡವನು ತಿಳ
ಕೊಂಡು ಬಾಳಿರಿ ಎಚ್ಚರೆಂದು ಕೂಗುತ ಬರ್ಪ
ದಂಡಿಗೆ ಪಾಠಕರ ನಾನೇನುಂಬೆ ॥
ಈಶನ ರೂಪನು ಪಾಪವಿಲೋಪನು
ಭಾಸುರ ಕೀರ್ತಿ ಪ್ರಕಾಸನನು ಭವ
ನಾಶನು ಮುಕ್ತಿಯ ಕೋಶನನು ಸರ್ವ
ದೇಶವನೆಲ್ಲವ ನೋಡಿದನು ಸುವಿ
ಲಾಸದಿ ಬರುತಿರೆ ಕಂಡನು ಪುಣ್ಯ ನಿ
ವಾಸವೆಂದೆನುತಲಿ ಹೊಕ್ಕನು ಸಂಶೀ ॥
ಕಂಡರು ಭಕ್ತರು ದಂಡ ಮೂರುತಿಯನು
ತಂಡ ತಂಡದಿ ಜನ ಕೂಡುತಲಿ ಇದಿ
ರ್ಗೊಂಡು ವಿರತಮಠಕಿಳಿಸುತಲಿ ಧೀರ್ಘ
ದಂಡ ನಮಸ್ಕಾರ ಮಾಡುತಲಿ ಮಹಿ
ಮಂಡಲದೊಳು ನಿಮ್ಮ ಕಂಡಕ್ಷಣವೆ ಪಾಪ
ಭಂಡಾಗಿ ಹೋಯ್ತೆಂದು ಸ್ತುತಿಯ ಮಾಡಿದರು ॥
ಬಂದಿತು ರುಧಿರೋದ್ಗರಿ ವತ್ಸರ
ವಿಂದು ಈ ಶ್ರಾವಣಮಾಸದಲಿ ಇಲ್ಲೆ
ವೊಂದು ತಿಂಗಳ ಪಾದಪೂಜಾಗಲಿ ಕಾರ್ಯ
ಕುಂದದೆ ಮಾಡುವೆವು ಭಕ್ತಿಯಲಿ ಮನ
ಸಂದೇಹವಿಲ್ಲದೆ ಆಗಲೆಂಬುತ ಭಕ್ತ
ವೃಂದವು ಕೂಡಿ ಬಿನ್ನೈಸಲಾಕ್ಷಣದಿ ॥
ಎಂದ ಭಕ್ತರ ಮಾತ ಚಂದದಿ ಕೇಳಿ ಆ
ನಂದದಿ ಬಿನ್ನಹ ಕೈಕೊಳುತ ಒಬ್ಬ
ರೊಂದೊಂದು ಪ್ರಸ್ತವ ನೇಮಿಸುತ ಮತ್ತೆ
ಹಂದರ ಹಾಕೆಂದು ಹೇಳಿಸುತ ಆಗ
ತಂದರು ಪೂಜೆ ಸಾಹಿತ್ಯವ ಇಮ್ಮಡಿ
ಯಿಂದ ಸಂಭ್ರಮವದು ನಡೆದಿತೇನೆಂಬೆ ॥
ಅಷ್ಟಮದವಿದೂರ ಆಗಮನಿಕರಕೆ
ಶ್ರೇಷ್ಠ ಮುಳಗುಂದ ಸ್ವಾಮಿಗಳವರು ಮಹಾ
ನಿಷ್ಠೆವಂತರು ಸರ್ವಗುಣಯುಕ್ತರು ಬಹು
ದುಷ್ಟನಿಗ್ರಹ ಶಿಷ್ಟ ಪ್ರತಿಪಾಲರು ಪದ
ಅಷ್ಟವಿಧಾರ್ಚನೆ ಪೋಡಶ ಉಪಚಾರು
ತ್ಕೃಷ್ಟದಿಂದಲಿ ಪೂಜೆ ನಡೆದಿತೇನೆಂಬೆ ॥
ಹರಪಾದ ಪೂಜೆಯು ಪರಮ ಸಂತೋಷದಿ
ಪರಿಯಿಂದ ಮಠದೊಳು ನಡೆಯುತಲಿ ಹೀಂಗ
ಎರಡೊಂದು ಪ್ರಸ್ತವು ಸಾಗುತಲಿ ಸುದ್ದಿ
ಪರದೇಶದೇಶಕೆ ತೀವ್ರದಲಿ ತರು
ಳರು ತರುಣೇರು ಕೂಡಿಕೊಂಡು ಜನ
ಬರುವದು ದಾರಿಯ ಹಿಡಿಯದಂದದಲಿ ॥
ಪುಂಡ ಜಂಗಮರಾಗ ಮಿಂಡಜಂಗಮರೆಷ್ಟು
ಖಂಡಿತ ಕೋಲ ತಾ ಪಿಡಿದವರು ಚೆಲ್ವ
ಮಂಡೆಯು ನಡಗುವ ವೃದ್ಧರರು ದಿನ
ಗಂಡಂಥವರು ಹಲ್ಲು ಬಿದ್ದವರು ನೆರೆ
ಜೊಂಡು ಬಿಟ್ಟಂಥವರು ಗಂಡು ಜೋಳಿಗೆ ಚರ
ತಂಡವು ದಾರಿಯೊಳ್ ಬರುತಿಹುದಾಗ ॥
ಗಡಬಡಿಯಿಂದಲಿ ಜಂಗಮ ಸಮೂಹವು
ಎಡವುತ ಬಂದು ಹೊಕ್ಕರು ಅಗಸಿ ಜನ
ಹಿಡಿಯದ್ಯಾವಲ್ಲಿ ನೋಡಿ ಸಂಶೀ ಭಿಕ್ಷ
ಕೊಡುವರು ಪಾವಲೆಂಬುತಲಾಸೆ ಮಾಡಿ
ಹುಡುಗರು ಹಿರಿಯರು ಹರೆಯದವರು ಬಂದು
ಗುಡಿ ಮಠ ಮನೆಯೊಳು ಇಳಕೊಂಡಿಹರು ॥
ಹೊತ್ತು ಆಗುವದೆಂದು ಊಟಕ್ಕೆ ಊರೊಳು
ಒತ್ತರದಲಿ ಕಂತೆಭಿಕ್ಷದಲಿ ಕಜ್ಜ
ತುರ್ತದಿ ತಂದದ ಸಲಿಸುತಲಿ ಮಧ್ಯಾ
ಹ್ನೊತ್ತಿಗೆ ಊಟಕೆ ಹೋಗುತಲಿ ಚರ
ಮೊತ್ತವು ಸುತ್ತಲೆ ಜಲ್ಲೀಲೆ ಉಣುವಂಥ
ಉತ್ತಮ ಅಡಿಗಿಯನೇನ ಬಣ್ಣಿಪೆನು ॥
ಸಂಡಿಗೆ ಶರ್ಕರ ಪರಮಾನ್ನ ಬುಂದೇದ
ಉಂಡಿಗಳ್ಗಾರಿಗೆಯ ನೀಡುವರು ಘೃತ
ಮಂಡಿಗೆ ಶಾವಿಗೆ ಮಾಡುವರು ಕಂಚಿ
ಹಿಂಡಿ ಹೋಳಿಗೆ ಹದ ಮಾಡುವರು ಮಾಲ್ದಿ
ಉಂಡಿ ಸಜ್ಜಿಕ ಬೋನಸರನು ದಿನದಿನ
ಉಂಡು ದಕ್ಷಿಣೆಯನು ತರುವದೇನೆಂಬೆ ॥
ಎಷ್ಟು ಹೇಳಲಿ ನಾನು ಕಾಡ್ವ ಜಂಗಮರನು
ಉಟ್ಟುಕೊಳ್ಳಲ್ಕೆ ಧೋತ್ರವೆಂಬುವರು ಬೇಕು
ಕಟ್ಟಲ್ಕೆ ವಸ್ತ್ರವೆಂಬುವರು ನಮ
ಗಿಷ್ಟು ಭಿಕ್ಷವು ಸಾಲದೆಂಬುವರು ಭಕ್ತಿ
ನಷ್ಟವಾಗುವದೆಂದು ಬೇಡಿದ ಬಯಕೆಯ
ಕೊಟ್ಟು ಸಮ್ಮತವನು ಮಾಡ್ವರೇನೆಂಬೆ ॥
ಇರದೊಂದು ಮಾಸವೀ ಪರಿಯಿಂದ ನಡೆದಿರೆ
ಒರೆದರೊಂದ್ಯುಕ್ತಿ ಸ್ವಾಮಿಗಳವರು ಇಲ್ಲೆ
ಅರುವತ್ತು ಮೂರು ಪುರಾತನರು ಪೂಜೆ
ತ್ವರಿತದಿಂದಾಗಬೇಕೆಂತವರು ಬೇಗ
ಕರಿಸಿ ಭಕ್ತರನೆಲ್ಲ ಪೇಳಿದರಾಕ್ಷಣ
ಹರುಷದಿಂದಾಗಲೆಂಬುತಲಿ ಪೇಳಿದರು ॥
ಒತ್ರದಿಂದಲಿ ತಮ್ಮ ಗೊತ್ತಿಲೆ ಬಿನ್ನಹ
ಪತ್ರವನಾಕ್ಷಣ ಬರೆಸುತಲಿ ಜಗ
ಕರ್ತರ ಪಾದಕೆ ಕಳಹುತಲಿ ಸುಚ
ರಿತ್ರ ಚರಮೂರ್ತಿಗಳ್ ಕೂಡುತಲಿ ತಮ್ಮ
ಮಿತ್ರ ಬಾಂಧವರನು ಕರಿಸಿಕೊಂಡಿತು ಜನ
ಚಿತ್ರದಿ ರಚಿಸುವ ಹಂದರವನೇನೆಂಬೆ ॥
ಮಾಲಿನಂದದಿ ಪೂಜೆ ಮಂಟಪದೊಳು
ಸಾಲುಸಾಲಿಂದ ತೋರುವ ಕಂಬಗಳು ಸುತ್ತ
ಜೋಲಿಟ್ಟ ಮುತ್ತ ಜಲಾರಗಳು ಜ್ಯೋತಿ
ಜಾಲ ಬೆಳಗು ಬಿಲ್ಲದ್ವಾರಗಳು ಬುದ್ಧಿ
ಸಾಲದು ವರ್ಣಕೆ ಮೇಲ ಸಮಾನ ವಿ
ಶಾಲ ಕಣ್ಣಾಲಿಗಾಶ್ಚರ್ಯವಾಗಿಹುದು ॥
ಏನೆಂಬೆ ಸುತ್ತರುವತ್ತುಮೂರ ಕಾನಿ ಕ
ಮಾನದೊಳಗೆ ಲತೆತರುಗಳಿಂದ ಮಾಲೆ
ತಾನಿಟ್ಟ ಕನ್ನಡಿಮಾಲಿನಿಂದ ಬಹು
ಚಾನವಾಗಿರುವಂಥ ಚಾನದಿಂದ ಈ ನ
ವೀನ ಮಂಟಪವ ವರ್ಣಿಸುವದಾಗದು ಧರೆ
ಮಾನವರಿಂಗೆ ಬ್ರಹ್ಮಂಗೆ ಅಸಾಧ್ಯ ॥
ಸುರಪತಿಪುರದಂತೆ ರಂಭಸಹಿತವಾಗಿ
ಹರನಂತೆ ಕುಮುದ ಶೋಭಿತಗಳಿಂದ ರತಿ
ವರನ ಅಸ್ತ್ರದಂತೆ ಕಮಲಗಳಿಂದ ಮುರ
ಹರನಂತೆ ವರ ಸುದರ್ಶನಗಳಿಂದ ಲಂಕ
ಗಿರಿಯಂತೆ ನವರತ್ನ ರಂಜಿಪ ಪಣಜೆಯ
ಮೆರೆವ ಮಂಟಪವನು ವರ್ಣಿಸಲಳವೆ ॥
ಪದುಳದಿಂ ನೋಡಲು ಮಂಟಪ ಮಧ್ಯದಿ
ಕದಳಿಯ ಫಲಗಳ ಕಟ್ಟಿಹರು ಚಲ್ವ
ಮೃದು ನಾರಿಕೇಳಿಳೆ ಬಿಟ್ಟಿಹರು ಮತ್ತೆ
ಸದಮಲ ತೋರಣ ಕಟ್ಟಿಹರು ಮತ್ತಿ
ನ್ನದರ ಮೇಲಿರುವ ಪತಾಕೆಗಳ್ ನೋಡುವ
ನೆದರಿಗೆ ಮನೋಹರವಾಗಿ ರಾಜಿಪುವು ॥
ಬಿಡದೆ ಹಂದರವು ಸಿಂಗರದಿಂದ ನಡೆದಿರೆ
ಪೊಡವಿ ದೇಶಕೆ ಸುದ್ದಿ ದೂರದಲಿ ಜನ
ಬಿಡದೆ ಬಂದಿತು ನೋಡ್ವಪೇಕ್ಷೆಯಲಿ ಬಂದ
ಗುಡಿ ಮನೆಮಾಳಿಗೆ ಸಾಲದಲಿ ಈಶ
ದೃಢ ಚರಮೂರ್ತಿಗಳ್ಮೆರವಣಿಗೆಯು ದಂಡಿ
ಗಡರಿಸಿ ಬರುವ ಸಂಭ್ರಮವೇನೆಂಬೆ ॥
ಪೊಡೆವ ತಮ್ಮಟ ಭೇರಿ ಗಿಡಿಬಿಡಿ ನಿಸ್ಸಾಳ
ಹಿಡಿವಂಥ ಕಾಳಿ ನಪೂರಿಗಳು ಕರ್ಣಿ
ನುಡಿವ ಸುಸ್ವರದ ಸ್ವದಾನಿಗಳು ಅಲ್ಲೆ
ಫಡಫಡೆಂಬುವ ಸಂಪ್ರದಾನಿಗಳು ವಾದ್ಯ
ಗಡಣದಿಂ ಪಾತ್ರಸಮ್ಮೇಳದಿ ಪುರದಿಂದ
ನಡೆದಿತು ಸಂಭ್ರಮದಿಂ ಮೆರವಣಿಗೆ ॥
ಕುಡಿಕೆ ಹೂಬತ್ತಿ ಬಿರಸು ತಾರಮಂಡಲ
ಅಡಿಗಡಿಗಲ್ಲಿಗೆ ಹಚ್ಚುವರು ಕೋಲ
ಪಿಡಿದು ಹಗಲಪ್ರಭೆ ಚುಚ್ಚುವರು ಜನ
ಹುಡುಗರು ಪರವಿಲ್ಲ ನೋಡುವರು ಚಲ್ವ
ಮಡದೇರು ತಮ್ಮಯೆದಿಯ ಮೇಲಿನ ಕುಚ
ಹಿಡಿದರೆ ಎಚ್ಚರಿಲ್ಲದಲೆ ನಿಂತಿಹರು ॥
ಧರಣಿದೇವತೆಯವಳು ಪರಮ ಸಿಂಗರವನು
ಧರಿಸಿ ಸಂಭ್ರಮವನ್ನು ಬೀರುವಳು ಇಲ್ಲಿ
ಪರಮವೈಭವವನ್ನು ನೋಡಿದಳು ಮತ್ತೆ
ನರರ ಮನಕೆಯೆಲ್ಲ ಅರಿತೆಂದಳು ಸುದ್ದಿ
ಒರೆವೆನು ಸ್ವರ್ಗದ ಪರಿಗಂಬದೋಲಾಗ
ಭರದಿಂದ ಬಾಣ ಅಂಬರಕೇರುತಿಹವು ॥
ಬಂದರು ಇಂತಪ್ಪ ವೈಭವದಿಂದಲಿ
ಹಂದರದೊಳು ತಾವು ನಿಲ್ಲುತಲಿ ಒಬ್ಬ
ರೊಂದೊಂದು ಮಂಟಪ ಹೊಂದುತಲಿ ಪೂಜಾ
ನಂದಕನನುಕೂಲವಾಗುತಲಿ ನಾವು
ಎಂದೆಂದು ಕಾಣೆವೀ ಪುರದೊಳಗೆಂಬುತ
ವೃಂದಗಣಾಧೀಶರೆಂಬುತಲಿಹರು ॥
ಮೃಡನ ರೂಪದ ಪುರತನರ ಪೂಜೆಗೆವೊಂದು
ಕಡಿಮೆಯಾಗದೆ ಬಂದು ಕೂಡುತಲಿ ಅಲ್ಲೆ
ಪೊಡೆವ ಜೇಗಟೆ ಗಂಟೆ ನಾದದಲಿ ಕಪ್ರ
ಸುಡುವರು ಧೂಪದ ಹೊಗೆಯಿಂದಲಿ ಕಾಯಿ
ಒಡೆವರು ಗಣನೆಯಿಲ್ಲದಾಶೀರ್ವಾದ
ಕೊಡುವರೀ ಪರಿ ಪೂಜೆ ಮುಗಿದಿತೇನೆಂಬೆ ॥
ಮಜ್ಜನ ನೀಡಿಸಿ ಉಳಿದಂಥ ಚರವಾಗ
ಸಜ್ಜಿಗೆ ಪಂಕ್ತಿಯ ಕೂಡ್ರುತಲಿ ಘೃತ
ಸಜ್ಜಕದುಂಡೆಯ ನೀಡುತಲಿ ತಾವು
ಹೆಜ್ಜೆಹೆಜ್ಜೆಗೆ ನಿಂತು ಕೇಳುತಲಿ ಮೋಟ
ಮರ್ಜಿಯಿಲ್ಲದೆ ಬೇಡಿದಂಥ ಪದಾರ್ಥವ
ಸಜ್ಜನರ್ನೀಡಿ ಊಟವ ಮಾಡಿಸಿದರು ॥
ಅರುವತ್ತುಮೂರು ಪುರಾತರ ಪಾದಕ್ಕೆ
ಸರಿಯಾಗಿ ಉಡುಗರೆ ಸಲ್ಲುತಲಿ ಮಿಕ್ಕ
ಚರಸಮೂಹಕೆ ಅರ್ಧಶುಭ್ರದಲಿ ಹಿಂದೆ
ಸರಿದುಳಿದವರ್ಗೆ ತಾಬಂಡಿಯಲಿ ಭಿಕ್ಷ
ಪರಿಯಿಂದ ನಾಲ್ಕು ಸಾವಿರಕಾಗ ಕೊಟ್ಟರು
ಹರಸುತ ಗಣ ಬಲು ಹರುಷದಿಂದಿಹರು ॥
ಹವಣಿಸಬಾರದು ಹಲವು ಪ್ರಕಾರದಿಂ
ಸವನಿಲ್ಲ ಸ್ವಾಮಿಗಳೆತ್ನಕಿನ್ನು ಸಾಹಿ
ತ್ಯವು ಕಡಿಮಿಲ್ಲ ಇನ್ಯಾತಕಿನ್ನು ನಿತ್ಯ
ದಿವರಾತ್ರಿಯೊಳು ನಿದ್ರೆ ದೊರಕದಿನ್ನು ಕಂಡು
ಭುವನದೊಳ್ ಪ್ರಖ್ಯಾತವಾಗಲೆಂಬುತಲೀಗ
ಅವಸರದಿಂದ ಈ ಕವಿತೆ ಮಾಡಿದೆನು ॥
ಬಿಂದು ವ್ಯಂಜನ ಅಡಿನೇಮ ಪ್ರಾಸಗಳನು
ಒಂದರಿತವನಲ್ಲ ಕಂದನನು ಮನ
ಬಂದಂತೆ ಹಾಡಿದೆ ಚರಿತೆಯನು ಇದ
ಕೊಂದಡಿ ಪ್ರಾಸಗಳ್ ಬಿದ್ದುದನು ಮುದ್ದು
ಕುಂದಗೋಳದ ಗುರುಬಸವಲಿಂಗಾಖ್ಯನ
ಕಂದನ ಜರಿಯದೆ ತಿದ್ದಿವೋದುವುದು ॥
* * *
Leave A Comment