ಕಂಡೆ
ಎಂತೆಂಥವರು ಏನೇನೋ ಆದದ್ದ ಕಂಡೆ.
ಗೊಮ್ಮಟನಾಗಿ ನಿಂತಿದ್ದ ಮಹಾ ಮೂರ್ತಿ
ಕರಗಿ ಕೊಚ್ಚೆಯಾಗಿ ಹರಿದದ್ದ ಕಂಡೆ.

ಇಂದ್ರನೈರಾವತಕ್ಕೆ ತೊಣಚಿ ಹತ್ತಿ
ಬೀದಿ ನಾಯಾಗಿ ಬೂದಿಯಲ್ಲಿ ಹೊರಳಾಡಿದ್ದ ಕಂಡೆ.

ನಿಗಿನಿಗಿ ಉರಿದ ಉಜ್ವಲವಾದ ಮಾತೆಲ್ಲ
ಬರೀ ಬೂದಿಯಾಗಿ ತೆಪ್ಪಗಾದದ್ದ ಕಂಡೆ.

ಕೊಳಕು ಮಂಡಳಕ್ಕೆ ಏಳು ಹೆಡೆ ಮೂಡಿ
ಮಾನಸ ಸರೋವರದಲ್ಲಿ ಜಲಕ್ರೀಡೆಯಾಡಿದ್ದ ಕಂಡೆ.

ಕಾವಿಯೊಳಗೇ ಕೋವಿಯೆದ್ದು
ತನ್ನನ್ನು ತಾನೇ ಕೊಂದುಕೊಂಡದ್ದ ಕಂಡೆ.

ಸರಸ್ವತೀ ಮಂದಿರದ ಶ್ವೇತ ಚಾಮರ ಕೆಲವು,
ಮಂತ್ರಿಗಳ ಮನೆಯ ಕಸಪೊರಕೆಯಾದದ್ದ ಕಂಡೆ.

ಹುತ್ತಗಳ ಸುತ್ತ ಬೆತ್ತಲೆ ನಿಂತು
ಹಾಲು ತುಪ್ಪವನ್ನೆರೆವ ಸರ್ಪಾರಾಧಕರ ಕಂಡೆ.

ಹಠಕ್ಕಾಗಿ ಮಠ ಕಟ್ಟಿ ಜಗದ್ಗುರುಗಳಾದ
ಸಾಹಿತಿಗಳನೂ ಕಂಡೆ.

ದೊಡ್ಡ ಪೀಠಗಳ ಮೇಲೆ ಸಣ್ಣ್ಣ ಜನ
ಇಲಿ ಹೆಗ್ಗಣಗಳಾಗಿ ಹರಿದಾಡಿದ್ದ ಕಂಡೆ.

ಕಂಡು ಎಚ್ಚರಗೊಂಡೆ
ಎಚ್ಚರವೆಲ್ಲ ನಿಗಿ ನಿಗಿ ಉರಿವ ಕೆಂಡದ ಉಂಡೆ.