ಕಥನ ಗೀತೆಗಳು

ನಮ್ಮವ್ವ ಕಳಸ್ಯಾಳ ಎಳ್ಳು ಸಜ್ಜಿ ರೊಟ್ಟಿ
ಎಣ್ಣಿ ಬದ್ನಿಕಾಯಿ
ಇದನುಂಟು ಹೊಳೆ ದಾಟ್ಸೋ ಅಂಬಿಗ
ಹೊಳೆದಾಟ್ಸೋ ಅಂಬಿಗ

ಹೊಳಿ ದಾಟ್ಸಾಕ ನನ್ನಿಚ್ಚಾ ನಿನ್ನಿಚ್ಚಾಯಿಲ್ಲ
ತಾಯಿ ಗಂಗವ್ವನ ಮನದಿಚ್ಚಾ
ತಾಯಿ ಗಂಗವ್ವನ ಮನದಿಚ್ಚಾ ಹೊಯ್ಮಲ್ಲಿ
ನಾ ಹ್ಯಾಂಗ ದಾಟ್ಸಲೀ…

ನಮ್ಮವ್ವ ಕಟ್ಯಾಳ ತರತರದ ಅಡಗಿ ಬುತ್ತಿ
ಇದನ್ನುಂಟು ಹೊಳೆದಾಟ್ಸೋ ಅಂಬಿಗ
ಇದನ್ನುಂಟು ಹೊಳೆ ದಾಟಿಸೋ
ತುಂಬಿಸೋ ಗೋಲ ಹರಿಗೋಳ

ಹೊಳಿ ದಾಟ್ಸಾಕ ನನ್ನಿಚ್ಚಾ ನಿನ್ನಿಚ್ಚಾಯಿಲ್ಲ
ಅವ್ವ ಗಂಗೀಯ ಮನದಿಚ್ಚಾ
ಅವ್ವ ಗಂಗೀಯ ಮನದಿಚ್ಚಾ ಮಳ್ಳೀ
ನಾ ಹ್ಯಾಂಗ ಹೊಳಿ ದಾಟ್ಸಲ್ಲೇ

ನಮ್ಮವ್ವ ಕಟ್ಯಾಳ ತರದ ಕಾರಚಿಕಾಯಿ
ಸುರಳಿಯ ಹೋಳಿಗಿ
ಇದನ್ನುಂಡು ಹೊಳೆದಾಟ್ಸೋ ಅಂಬಿಗ
ತುಂಬಿಸೋ ಹರಿಗೋಲ

ಹೊಳಿದಾಟಿಸ್ಯಾಕ ನನ್ನಿಚ್ಚಾ ನಿನ್ನಿಚ್ಚಾಯಿಲ್ಲ
ತಾಯಿ ಬಗಂಗವ್ವನ ಮನದಿಚ್ಚಾ
ತಾಯವ್ವನ ಮನದಿಚ್ಚಾ ಹೆಣ್ಹೆ
ನಾ ಹ್ಯಾಂಗ ದಾಟ್ಸಲೇ…

ತೆಂಗಿನ ಬನದಾಗ ಬಾಗಿ ಬಂತೇ ಹರಗೋಲ
ಉತ್ತಮರ ಮಗುಳು ನಾ ಅಂಬಿಗ
ದಾಟಿಸೋ ಹೊಳಿಯ ಬಲುಬೇಗ

ಹೊಳಿದಾಟಿಸ್ಯಾಕ ನನ್ನಿಚ್ಚಾ ನಿನ್ನಿಚ್ಚಾಯಿಲ್ಲ
ತಾಯಿ ಗಂಗವ್ವನ ಮನದಿಚ್ಚಾ ಮೀರಿ
ನಾ ಹ್ಯಾಂಗ ದಾಟ್ಸಲೇ ಈ ಹೊಳಿಯಾ

ಬಾಳಿಯ ಬನದಾಗ ಬಾಗಿ ಬಂತೇ
ಹರಿಗೋಲು
ನಾ ಬಾಳುಳ್ಳವ್ರ ಮಗಳು ಅಂಬಿಗ
ದಾಟಿಸು ಮುಂದಕ್ಕೆ ಹರಗೋಲಾ

ಹೊಳಿದಾಟಿಸ್ಯಾಕ ನನ್ನಿಚ್ಚಾ ನಿನ್ನಿಚ್ಚಾಯಿಲ್ಲ
ತಾಯಿ ಗಂಗವ್ವನ ಮನದಿಚ್ಚಾ
ತಾಯಿ ಗಂಗವ್ವನ ಮನದಿಚ್ಚಾ ಬಿಟ್ಟು
ನಾ ಹ್ಯಾಂಗ ದಾಟ್ಸಲೇ..

ತವರವರು ಇಟ್ಟ ಅರ ತೊಲಿ ಬಂಗಾರಾ
ಇದ ತಗೊಂಡು
ದಾಟಿಸೋ ಹೊಳಿಯಾ ಅಂಬಿಗಾ

ಹೊಳಿದಾಟಿಸ್ಯಾಕ ನನ್‌ಇಚ್ಚಾ ನಿನ್ನಿಚ್ಚಾ
ತಾಯಿ ಸಿರಿಗಂಗಿಯ ಮನದಿಚ್ಚಾ
ತಾಯಿ ಸಿರಿಗಂಗಿಯ ಮನದಿಚ್ಚಾ ಬಿಟ್ಟು
ನಾ ಹ್ಯಾಂಗ ದಾಟ್ಸಲೇ..

ಇಷ್ಟೂ ಒಡವಿಗೋಳು
ಪಟ್ಟೋಳಿ ಸೆರಗಿನ್ಯಾಗ ಕಟ್ಟಿ
ಸಿಟ್ಟೇಲಿ ಹೊಳಿ ಧುಮಕ್ಯಾಳೋ ಅಂಬಿಗ
ತುಂಬಿಸೋ ಗೋಲ ಹರಗೋಲಾ.

ನಾರಿ ಮುಣಗಿದಲ್ಲಿ ನಾಕುಬಾರಿ ಮುಣಗೆದ್ದ
ನಾರಿ ನಿನ್ ಸೆರಗ ಸಿಗಲ್ಲ
ಅಂಬಿಗಾರಣ್ಣ.. ತುಂಬಿಸೋ ಹೊರಗೋಲ

ಮಿತ್ರಿ ಮುಣಗಿದಲ್ಲಿ ಮುವ್ವತ್ತಬಾರಿ ಮುಣಗೆದ್ದ
ಕಾಲುಂಗರದ ಬೆರಳ ಸಿಗಲಿಲ್ಲೇ
ಅಂಬಿಗಾರಣ್ಣ.. ತುಂಬಿಸೋ ಹರಗೋಲಾ…

ಕಥನ ಗೀತೆಯ ಅರ್ಥ

ಹೊಳೆ ದಾಟುವ ಹಾಡು

ಇಲ್ಲಿ ಹೆಣ್ಣು ಮಗಳೊಬ್ಬಳು ಹೊಳೆಯ ತುದಿಯಲ್ಲಿ ಬಂದು ನಿಂತು ಅಂಬಿಗನನ್ನು ಹೊಲೆ ದಾಟಿಸೆಂದು, ಆಚೆ ದಡ ಸೇರಿಸೆಂದೂ ಕೇಳುತ್ತಿದ್ದಾಳೆ.  ಹೊಳೆ ದಾಟಿಸಲು ಅವನಿಗೆ ಕೊಡಲು ಅವಳಲ್ಲಿ ರೊಕ್ಕಾ ರೂಪಾಯಿ ಇರುವುದಿಲ್ಲವೇನೋ. ಅದಕ್ಕಾಗಿಯೇ ತಾನು ತಂದ ಬುತ್ತಿಯಿಂದ ಎಳ್ಳು ಹಚ್ಚಿದ ರೊಟ್ಟಿ, ಎಣ್ಣೆಗಾಯಿ ಬದನೆಕಾಯಿ ಪಲ್ಯ ಕೊಡುತ್ತೇನೆ ಅದನ್ನುಂಟು ಹೊಳೆ ದಾಟಿಸು ಅಂಬಿಗ ಅಂತ ಕೇಳುತ್ತಾಳೆ. ಆ ಹೆಣ್ಣುಮಗಳು ಮತ್ತು ಅಂಬಿಗನ ನಡುವಿನ ಸಂವಾದ ಬಲು ಸೊಗಸಾಗಿ ಈ ಕವನದಲ್ಲಿ ಮೂಡಿ ಬಂದಿದೆ.

ಹೊಳೆ ದಾಟಿಸುವುದಕ್ಕೆ ನನ್ನಿಷ್ಟ ನಿನ್ನಿಷ್ಟವಲ್ಲ, ತಾಯಿ ಗಂಗವ್ವನ ಮನದಿಷ್ಟವಾದರೆ ಮಾತ್ರ ನಾನು ನಿನ್ನನ್ನು ಹೊಳೆ ದಾಟಿಸುತ್ತೇನೆ ಹೆಣ್ಣೇ ಅನ್ನುತ್ತಾನೆ ಅವನು. ಆದರೆ ಅವಳು ಅಷ್ಟಕ್ಕೇ ಬಿಡುವುದಿಲ್ಲ. ನಮ್ಮವ್ವ ಮೊಸರನ್ನ ಮತ್ತು ಹಸರ ಲಿಂಬಿ ಹೋಳಿನ ಬುತ್ತಿ ಕಟ್ಟಿದ್ದಾಳೆ. ಕರಿದ ಕರಚಿಕಾಯಿ, ಸುರಳಿ ಹೋಳಿಗೆಯನ್ನೂ ಕಟ್ಟಿದ್ದಾಳೆ. ಅದೆಲ್ಲ ಹೊಟ್ಟೆ ತುಂಬ ಉಂಡು ನನ್ನನ್ನು ಹೊಳೆ ದಾಟಿಸೋ ಅಂಬಿಗಾ… ಹರಗೋಲ ಹಾಕು ಹೊಳೆಯಾಗ ಅಂತ ಪರಿಪರಿಯಿಂದ ಬೇಡಿಕೊಂಡರೂ ಅವನದು ಒಂದೇ ಮಾತು. ಗಂಗವ್ವ ತಾಯಿಯ ಅಣತಿಯಾಗುವವರೆಗೆ ಹೊಳೆಗೆ ಹರಿಗೋಳು ಹಾಕುವುದಿಲ್ಲ ಅನ್ನುತ್ತಾನೆ. ಆಗ ಆಕೆಗೆ ಏನು ಮಾಡಬೇಕೆಂದು ತಿಳಿಯದೆ ಕಂಗಾಲಾಗುತ್ತಾಳೆ. ಅವಳಿಗೆ ಹೇಗಾದರೂ ಮಾಡಿ ಹೊಳೆ ದಾಟಿ ಆಚೆ ದಡ ಸೇರಬೇಕಾಗಿರುತ್ತದೆ. ಅಂಬಿಗಣ್ಣಾ ನಾನು ಉತ್ತಮರ ಮಗಳಿದ್ದೀನಿ.. ನನ್ನ ತವರವರು ಮರ್ಯಾದಸ್ತರು, ದಯವಿಟ್ಟು ನನ್ನನ್ನು ಹೊಳೆ ದಾಟಿಸು’ ಅಂತ ದೈನ್ಯತೆಯಿಂದ ಬೇಡಿಕೊಳ್ಳುತ್ತಾಳೆ. ನಾನು ಮಾನುಳ್ಳವರ ಸೊಸೆ, ಮರ್ಯಾದಸ್ತರ ಮಗಳು, ಇಗೋ ನನ್ನ ತವರವರು ಕೊಟ್ಟ ಬಂಗಾರದ ಒಡವೆ ನನ್ನ ಮೈಮೇಲಿವೆ ಅವುಗಳನ್ನು ತೆಗೆದುಕೊಂಡಾದರೂ ಹೊಳೆ ದಾಟಿಸು ಮಾರಾಯಾ’  ಅಂತ ಗೋಗರೆಯುತ್ತಾಳೆ.

ಹಾಗೇ ಅತ್ತಿ ಮಾವ ಇಟ್ಟಿರೋ ಹತ್ತು ತೊಲ ಬಂಗಾರ, ಮುತ್ತಿನಹಾರ, ಏನೆಲ್ಲ ಕೊಡುತ್ತೇನೆಂದರೂ ಆ ಅಂಬಿಗರು ಹೊಳೆ ದಾಟಿಸಲು ಒಪ್ಪುವುದಿಲ್ಲ. ಆಗ ಆ ಹೆಣ್ಣು ತನ್ನೆಲ್ಲ ಒಡವೆಗಳನ್ನು ಸೀರೆಯ ಸೆರಗಿನಲ್ಲಿ ಗಂಟು ಕಟ್ಟಿಕೊಂಡು ಸಿಟ್ಟಿನಿಂದ ಹೊಳೆಗೆ ಹಾರುತ್ತಾಳೆ.

ಆಗ ಅಂಬಿಗ ಹೊಳೆಗೆ ಧುಮುಕಿ ಎಷ್ಟು ಹುಡುಕಿದರೂ ಅವಳ ಸೀರೆಯ ಸೆರಗೂ ಕೂಡ ಅವನಿಗೆ ಸಿಗುವುದಿಲ್ಲ. ಮೂವ್ವತ್ತು ಬಾರಿ ಮುಳುಗೆದ್ದರೂ ಅವಳ ಕಾಲುಗಂಗರದ ಬೆಳರು ಅವನಿಗೆ ಸಿಗುವುದಿಲ್ಲ. ಆಗ ಅಂಬಿಗ ದುಃಖದಿಂದಲೂ ಪಶ್ಚಾತ್ತಾಪದಿಂದಲೂ ನಿಟ್ಟಸಿರು ಬಿಡುತ್ತಾನೆ.

ಇದಿಷ್ಟು ಈ ಕಥನ ಕವನದ ತಾತ್ಪರ್ಯ. ಇಂಥ ಇನ್ನೂ ಅನೇಕ ಕಥನ ಕವನಗಳ ಸಾಹಿತ್ಯ ದುರಗಮುರಗಿಯ ಹೆಣ್ಣಮಕ್ಕಳಲ್ಲಿದೆ.

ಇಂಥ ಕಥನ ಗೀತೆಗಳನ್ನು ನಾಗರ ಪಂಚಮಿ ಹಬ್ಬದ ದಿನ ಹೆಣ್ಣು ಮಕ್ಕಳು ಜೋಕಾಲಿಯ ಮೇಲೆ ಕುಮತು ಜೋಕಾಲಿಯಾಡುತ್ತಾ ಹಾಡುತ್ತಾರೆ. ಹಬ್ಬ ಹರಿದಿನಗಳಲ್ಲಿ ಎಲ್ಲ ಮಹಿಳೆಯರು ದ್ವಾಮ್ಮವ್ವ., ದುರಗವ್ವ, ಲಕ್ಷ್ಮೀದೇವಿ ಮೊದಲಾದ ದೇವತೆಗಳ ಗುಡಿ  ಮುಂದಿನ ಬಯಲಲ್ಲಿ ಕೂಡಿ ಹಾಡುತ್ತಾರೆ.

ಒಗಟುಗಳು

ಬಾಯಿಲಿ ತೊಂಬೋದು ಬೆನ್ನಲಿ ಕಾರೋದು
ಬೆಳಗಾ ಮುಂಜಾನೆದ್ದು ಜೋಗುಳ ಹಾಡೋದು
ಜಾಣೆ ನೀ ಒಡೆಯೇ ಒಗಟಾ…

ಬಾಯಿಲಿ .ತಿಂಬೋದು ಬೆನ್ನಲಿ ಕಾರೋದು
ಬೆಳಗಾ ಮುಂಜಾನೆದ್ದು ಜೋಗುಳ ಹಾಡೋದು
ಬೀಸುವ ಕಲ್ಲಲ್ಲೇನೇ…       ೧

ಅರ್ಥ : ಬೀಸುವ ಕಲ್ಲು

ಅವ್ವನ ಸೀರಿ ಮಡಸವರ‍್ಯಾರು
ಅಪ್ಪನ ರೊಕ್ಕಾ ಎಣಿಸುವರ‍್ಯಾರು
ಚಿತ್ರಿ ನೀ ಒಡೆಯೇ ಒಗಟಾ…

ಅವ್ವನ ಸೀರಿ ಮಡಚಾಕ ಯಾರಿಲ್ಲ
ಅಪ್ಪನ ರೊಕ್ಕಾ ಚಿಕ್ಕಿ ಎಣಿಸುವರ‍್ಯಾರಿಲ್ಲ
ಅವು ಆಕಾಶ, ಚಿಕ್ಕಿ ನೋಡೇ           ೨

ಅರ್ಥ : ಆಕಾಶ ಮತ್ತು ಚಿಕ್ಕಿಗಳು
ಹಳದಿ ಸೀರಿ ಉಟ್ಟು ಹದಿನಾರು ನಿಲಿ ಹೊಯ್ದು
ಗಂಡನಿಲ್ಲದೆ ಬಾಲಿ ಬಸರಾಗ್ಯಳಂಬೋದು
ರಂಭಿ ನೀ ಒಡಿಯೇ ಒಗಟಾ..

ಹಳದಿ ಸೀರಿ ಉಟಟು ಉದಾನಾರು ನಿಲಿ ಹೊಯ್ದು
ಗಂಡನಿಲ್ಲದೆ ಬಾಲಿ ಬಸರಾಗ್ಯಾಳೆಂಬೋದು
ಶಾವಂತಿಗಿ ಹೂವಲ್ಲೇನೇ….           ೩

ಅರ್ಥ : ಸೇವಂತಿಗೆ ಹೂವು
ಏಳುನೂರು ಎಂಟುನೂರು ಗಂಟುನೂರು ಗಂವಾನೂರು
ಮಂಟಪನೂರು ಮನಿನೂರು ಈಊ ಕತಿಯ
ಎಂಟು ದಿನ ಆದರೊಡಿಯೇ…

ಏಳುನೂರು ಎಂಟುನೂರು ಗಂಟುನೂರು ಗಂವಾನೂರು
ಮಂಟಪನೂರು ಮನಿನೂರು ಅಂಬೋದು
ಕಲಬುರಗಿ ಶರಣಬಸವನ ತೆರಲ್ಲೇನೇ….       ೪

ಅರ್ಥ: ಕಲಬುರಗಿ ಶರಣಬಸಪ್ಪನ ಗುಡಿಯ ತೇರು

ಗಾದೆಗಳು

ಗಾದೆಗಳು ಅನುಭವದಿಂದ ಬಂದ ಸೂಕ್ತಿಗಳು, ದುರಗಮುರಗಿಯರು ಮಾತಾಡುವಾಗ, ಕುಣಿಯುವಾಗ, ನ್ಯಾಯ ಮಾಡುವಾಗ ಮೊದಲಾದ ಸನ್ನಿವೇಶಗಳಲ್ಲಿ ಗಾದೆ ಬಳಸುತ್ತಾರೆ. ಪ್ರೀತಿ-ಪ್ರೇಮ, ಸರಸ-ಸಲ್ಲಾಪ, ಬುದ್ಧಿ ಹೇಳುವಾಗ ಮನಪರಿವರ್ತನೆ ಮಾಡುವಾಗ ಗಾದೆಗಳನ್ನು ಉಪಯೋಗಿಸುತ್ತಾರೆ.

ಹಿರಿಯರ ನುಡಿಗಳಾದ ಈ ಗಾದೆಗಳೇ ಇವರಿಗೆ ಪರಮ ಸತ್ಯ ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಎಂಬ ಸಮರ್ಥನೆ ಇವರದು. ಇವರುಗಳು ತಲೆಮಾರಿನಿಂದ ತಲೆಮಾರಿಗೆ ಉಳಿಯುತ್ತ ಬೆಳೆಯುತ್ತ ಬಂದಿವೆ. ಗಾದೆಗಳು ತ್ರಿಕಾಲ ಸತ್ಯ ನುಡಿಗಳು. ಇವರ ಗಾದೆಗಳಲ್ಲಿ ಎಲ್ಲ ವಿಷಯಗಳು ಅಡಕವಾಗಿವೆ. ನಿಂದನೆ, ವ್ಯಂಗ್ಯ, ವಿಡಂಬನೆ ಕುಹಕ, ನೀತಿ, ಉಪದೇಶ, ಅವಹೇಳನ ಇತ್ಯಾದಿ ನೋಡಬಹುದು. ನವರಸಗಳ ಆಹ್ಲಾದವನ್ನು ಈ ಗಾದೆಗಳು ಹೊಂದಿವೆ. ಗಾದೆ ಗಾತ್ರದಲ್ಲಿ ಕಿರಿಯದಾದರೆ, ಅರ್ಥದಲ್ಲಿ ಬಹಳ ಹಿರಿದಾಗಿವೆ. ಗಾತ್ರದಲ್ಲಿ ಇಲಿ ಅರ್ಥದಲ್ಲಿ ಹುಲಿ. ಇವು ಒಂದು ಸಂಸ್ಕೃತಿಯ ಶಿಲಾಶಾನಗಳು. ಇತಿಹಾಸ, ಸಾಮಾಜಿಕ, ವಿಜ್ಞಾನ, ಶಾಸ್ತ್ರ ಮೊದಲಾದವುಗಳು ಒಳಗೊಂಡಿವೆ.

ಪೋತುರಾಜನ ಕುಣಿತದಲ್ಲಿ ಅವನ ಬಾಯಿಗೆ ಇವು ಸಹಜವಾಗಿ ಆವೇಶದಿಂದ ಬರುತ್ತವೆ. ಈ ಜನರಿಂದ ಕೇಳಿದ ಗಾದೆಗಳನ್ನು ಇಲ್ಲಿ ಕೊಡಲಾಗಿದೆ. ಸಾಮಾನ್ಯವಾಗಿ ಎಲ್ಲ ಬುಡಕಟ್ಟಿನ ಜನಾಂಗದವರ ಬಾಯಲ್ಲಿ ನಲಿದಾಡುತ್ತವೆ.

೧) ಕೋತಿ ಅಡಸಾಂವ ಬಿದ್ದ ಮರಗಮ್ಮಾಡಸಾಂವ ಗೆದ್ದ
ಅಗಸಾಲ್ಯಾ ಅಕ್ಕನ ಬಂಗಾರ ಬಿಡಂಗಿಲ್ಲ
ಸತ್ತೆಮ್ಮಿಗಿ ಸೇರು ತುಪ್ಪಾ
ಆಳ್ಯಾ ಇಲ್ಲ ಸ್ವಾನ ಬೊಗಳತದ
ಗಂಡ ಹೆಂಡಿರ ಜಗಳಾ ಉಂಡು ಮಲಗಾ ತನಕಾ
ಎಲ್ಲ ದೇವಿಗಿಂತ ಮರಗಮ್ಮ ದೊಡಾಕಿ
ಹತ್ರಾಗ ಹನ್ನೊಂದ್ರಾವ
ಆಚಾಋ ಹೇಳಾಂವ ಬದ್ನಿಕಾಯಿ ತಿಂತಾನ
ಹೊಳ್ಯಾಗ ಹುಣ್ಸೆಣ್ಣು ತೊಳದ್ಹಾಂಗ
ಗಂಡ ಬಿಟ್ರೂನು ಮಿಂಡ ಬಿಡಂಗಿಲ್ಲ

ಪರಾಮರ್ಶನ ಗ್ರಂಥಗಳು
ದುರಗಮುರಗಿಯವರ ಸಂಸ್ಕೃತಿ – ಗೀತಾ ನಾಗಭೂಷಣ ೧೯೯೩
ದುರಮುರಗಿಯರು : ಡಾ.ಕೆ. ದುರ್ಗಾದಾಸ
ಸಾಂಸ್ಕತಿಕ ಮುಖಾಮುಖಿ – ಡಾ. ರಂಗರಾಜ ವನದುರ್ಗ
ಜಾನಪದದ ಕೈಪಿಡಿ
ಪತ್ರಿಕೆಗಳು
ಸಂಕ್ರಮಣ
ಸಾಂಸ್ಕೃತಿಕ ಲೋಕ
ಜಾನಪದ ಲೋಕ
ಸಂದರ್ಶನ – ದುರಮುರಗಿ  ಜನಾಂಗದ ನಾಯಕನೊಂದಿಗೆ ಸಂದರ್ಶನ.

ಲೇಖಕರ ವಿಳಾಸ
೧. ಎ.ಕೆ. ರಾಮೇಶ್ವರ
ಚಿನ್ಮಯಿ ಗೋದುತಾಯಿನಗರ, ಜೀವರಗಿ ರಸ್ತೆ, ಗುಲಬರ್ಗಾ ೫೮೫೧೦೧
ದೂರವಾಣಿ : ೦೮೪೨೭-೨೩೮೩೪೦
೨. ಡಾ. ವಿ.ಜಿ. ಪೂಜಾರ
ಪ್ರಾಧ್ಯಾಪಕರು, ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಕಲಾ ನಿಕಾಯದ ಡೀನರು, ಗುಲ್ಬಗಾ ವಿಶ್ವವಿದ್ಯಾಲಯ ಗುಲಬರ್ಗಾ ೫೮೫೧೦೬
ದೂರವಾಣಿ : ೯೪೪೮೮೧೩೦೨೫

೩. ಡಾ. ಸರಸ್ವತಿ ಚಿಮ್ಮಲಗಿ
ಸರಸ್ವತಿಸದನ ವಸಂತನಗರ, ಮಿಲ್ ರಸ್ತೆ, ಗುಲಬರ್ಗಾ ೫೮೫೧೦೨
ದೂರವಾಣಿ : ೯೪೪೮೫೭೭೫೬೨

೪. ಡಾ. ಅಮೃತ ಕಟಕೆ
ಕನ್ನಡ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ
ಸೇಡಂ ರಸ್ತೆ, ಗುಲಬರ್ಗಾ
ದೂರವಾಣಿ : ೦೮೪೭೨-೨೫೩೬೫೫, ೯೪೪೮೬೫೧೯೫೮

೫. ಡಾ. ಕಾವ್ಯಶ್ರೀ ನಾಗಭೂಷಣ
ಪ್ಲಾಟ್ ನಂ. ೧೮, ಕಾವ್ಯಶ್ರೀ ಸ್ವಸ್ತಿಕ್ ನಗರ ಸೇಡಂ ರಸ್ತೆ, ಅಲಗುಂದಿ
ಲೇಔಟ್ ರಿಂಗ್ ರಸ್ತೆ, ಗುಲಬರ್ಗಾ – ೫೮೫೧೦೫
ದೂರವಾಣಿ : ೦೮೪೭೨-೨೬೫೫೭೯, ೯೮೮೦೧೨೬೭೧೩