ನ್ಯಾಯ ನಿರ್ಣಯಗಳು :

ದುರಗಮುರಗಿಯರು ತಮ್ಮದೇ ಆದ ನ್ಯಾಯ ಪದ್ಧತಿಯನ್ನು ಪಾಲಿಸಿಕೊಂಡು ಬಂದಿರುವರು. ಪ್ರತಿ ಹಳ್ಳಿಗಳಲ್ಲಿ ಪ್ರತಿ ಜನಾಂಗಗಳಲ್ಲಿ ಇರುವಂತೆ, ಇವರಲ್ಲಿಯೂ ಕೇರಿಯ ಅಥವಾ ಜನಾಂಗದ ಹಿರಿಯ ಅನುಭವಿಕನು ಮುಖಂಡನೆನಿಸುವನು ಒಂದು ಮನೆಯಲ್ಲಿ ಕುಟುಂಬದಲ್ಲಿ ಏನಾದರೂ ಜಗಳ, ಸಮಸ್ಯೆಗಳಿರಲಿ ಅಥವಾ ಹೊರಗೆ ಯಾವದೇ ರೀತಿಯ ಕಲಹಗಳುಂಟಾದರೂ ಹಿರಿಯ ಮುಖಂಡನಲ್ಲಿಗೆ ಎಲ್ಲರೂ ಮೊರೆ ಹೋಗುವರು. ಅವನ ಸಮ್ಮುಖದಲ್ಲಿಯೇ ನ್ಯಾಯ – ಅನ್ಯಾಯಗಳ ವಿಚಾರಣೆ ನಡೆಯುತ್ತದೆ. ಇತರ ಕೇರಿಯ ಮುಖ್ಯಸ್ಥರನ್ನು ಕಳುಹಿಸಿ ಒಂದು ಕಡೆ ಎಲ್ಲರೂ ಸೇರಿ ಸಮಸ್ಯೆಯ ಬಗ್ಗೆ ಚರ್ಚಿಸಿ ಪಂಚಾಯಿತಿ ಮಾಡಲಾಗುತ್ತದೆ.

ಒಂದು ಪರಿವಾರದಲ್ಲಿ ಹಿರಿಯರ ಒಪ್ಪಿಗೆಯಿಲ್ಲದೆ, ಗಂಡು – ಹೆಣ್ಣು ಪ್ರೇಮಿಸಿ ಮದುವೆಯಗುವುದು ಅಥವಾ ಪರಸ್ಪರ ಸೇರಿ ಬಾಳ್ವೆ ನಡೆಸುವ ನ್ಯಾಯ ಬಂದಾಗ ಅಲ್ಲಿ ತಪ್ಪು ಯಾರದು? ಹೇಗೆ? ಎಂಬುದನ್ನು ಸಮಕ್ಷಮ ವಿಚಾರಿಸಿ, ನಿರ್ಣಯಕ್ಕೆ ಬಂದು ಸರಿಯಾದ ತೀರ್ಪು ನೀಡಲಾಗುತ್ತದೆ. ತಪ್ಪು ಮಾಡಿದವರು ಹೆಣ್ಣೇ ಇರಲಿ, ಗಂಡೇ ಇರಲಿ, ಅವರಿಗೆ ದಂಡ ವಿಧಿಸುವ ಪದ್ಧತಿಯೂ ಇದೆ. ಒಟ್ಟಾರೆ ಒಂದು ಗಂಡು-ಹೆಣ್ಣು ಒಪ್ಪಿ ಕೂಡಿ ಬಾಳುವೆ ನಡೆಸುವುದಾದರೆ ಹಿರಿಯ ಮುಖಂಡರು ಏನೂ ಮಾಡುವಂತಿಲ್ಲ. ಅನಿವಾರ್ಯವಾಗಿ ಒಪ್ಪಿಗೆ ನೀಡಬೇಕಾಗುತ್ತದೆ. ಆ ಮಟ್ಟಿಗೆ ಸ್ವಾತಂತ್ರ‍್ಯ ಇದೆ.

ಒಬ್ಬ ವಿಧವೆ ಸ್ತ್ರೀಯನ್ನು ಪುರುಷನೊಬ್ಬ  ಪ್ರೇಮಿಸಿ ಓಡಿಸಿಕೊಂಡು ಹೋಗುವುದು ಒಂದು ಅಪರಾಧವೇ ಸರಿ. ಅದಕ್ಕೆ ಪಂಚಾಯ್ತಿ ತಪ್ಪು ದಂಡ ಹಾಕುತ್ತದೆ. ಕೆಲವು ಸಲ ಹೆಣ್ಣು ಸಹ ಅಂಥ ತಪ್ಪು ಮಾಡಿದರೆ ದಂಡ ತೆರಬೇಕಾಗುತ್ತದೆ. ಕಳ್ಳತನ, ಮೋಸ, ಹತ್ಯೆ, ಹಾದರ ಈ ಮೊದಲಾದವುಗಳು ಅಪರಾಧಗಳಾಗಿರಬಹುದು.

ಈ ಜನರಲ್ಲಿಯೂ ಜಾತಿ ಭೇದ-ಭಾವ ಕಂಡು ಬರುತ್ತದೆ. ತಮಗಿಂತ ಕೆಳಜಾತಿಯವರೊಂದಿಗೆ ಇವರು ಯಾವುದೇ ಸಂಬಂಧವನ್ನಿಟ್ಟುಕೊಳ್ಳಬಾರದು ಎಂಬ ವಿಚಾರವಾಗಿದೆ. ಮೇಲು-ಕೀಳು ಎಂಬ ಭಾವನೆ ಇವರಲ್ಲಿ ಇದೆ. ತಮಗಿಂತ ಕೆಳಜನಾಂಗ ಎಂದು ಇವರು ನಂಬಿಕೊಂಡಿರುವ ಜನಾಂಗದೊಂದಿಗೆ ಯಾವುದೇ ವ್ಯವಹಾರವಿಟ್ಟುಕೊಳ್ಳುವುದಿಲ್ಲ.

ಸಾವುಸಂಸ್ಕಾರ :

ಹುಟ್ಟು-ಸಾವುಗಳು ಪ್ರತಿ ಜನಾಂಗಗಳ ಜನರಿಗೂ ಕಟ್ಟಿಟ್ಟದ್ದೇ. ಸಾವಿಗೆ ಬಡವ-ಬಲ್ಲಿದ, ಶಿಷ್ಟರು- ಜನಪದರು, ಗುಡ್ಡಗಾಡಿನವರು, ಬುಡಕಟ್ಟಿನವರು, ಅಲೆಮಾರಿಗಳು, ಊರವರು, ಎಂಬಂಥ ಭೇದ-ಭಾವವೇ ಇಲ್ಲವಲ್ಲ, ಹುಟ್ಟಿದಾತ ಒಂದು ದಿನ ಸಾಯಲೇಬೇಕಲ್ಲ. ಆದರೆ ಒಂದೊಂದು ಸಂಸ್ಕೃತಿಯಲ್ಲಿ ಬದುಕಿನ ರೀತಿ-ನೀತಿಗಳಲ್ಲಿ ವ್ಯತ್ಯಾಸವಿರುವಂತೆ, ಸತ್ತ ನಂತರದ ಸಂಸ್ಕಾರಗಳಲ್ಲಿಯೂ ಬೇರೆ ಬೇರೆ ಶಾಸ್ತ್ರ ಸಂಪ್ರದಾಯಗಳಿವೆ. ರೂಢಿ – ರಿವಾಜುಗಳಿವೆ. ಒಂದು ಜನಾಂಗದಿಂದ ಇನ್ನೊಂದಕ್ಕೆ ಈ ಚಾಜ, ನಿಯಮಗಳು ಭಿನ್ನವಾಗಿವೆ.

ದುರುಗಮುರಗಿಯರಲ್ಲಿ ಸತ್ತ ನಂತರ ಹೆಣವನ್ನು ಚಾಪೆಯ ಮೇಲೆ ಮಲಗಿಸುತ್ತಾರೆ. ಹೆಣ್ಣುಮಗಳ ಹೆಣವಾದರೆ, ಅದಕ್ಕೆ ಮೈತೊಳೆದು ಕೆಂಪು ಸೀರೆ ಉಡಿಸಿ, ಸೀರೆಯ ಸೆರಗನ್ನು ಎದೆಗೆ ಕುಪ್ಪಸದಂತೆ ಸುತ್ತುತ್ತಾರೆ. ಶವಕ್ಕೆ ಕುಪ್ಪುಸ ತೊಡಿಸುವುದಿಲ್ಲ. ಸತ್ತವಳಿಗೆ ಗಂಡನಿದ್ದು ಮುತ್ತೈದೆ ಸಾವಾದರೆ ಹಣೆಗೆ ಕುಂಕುಮ, ಮುಡಿಗೆ ಹೂವನ್ನಿಟ್ಟು ಸಿಂಗರಿಸುತ್ತಾರೆ. ಹಣೆಗೆ ವಿಭೂತಿ ಹಚ್ಚುವುದುಂಟು. ಆರತಿ ಬೆಳಗಿ ಹೆಣವನ್ನು ಎತ್ತುತ್ತಾರೆ. ಕಟ್ಟಿಗೆಯ ಸಿದಿಗೆ ಕಟ್ಟಿ ಅದರ ಮೇಲೆ ಹೆಣವನ್ನು ಮಲಗಿಸಿ ಅದು ಅಲುಗಾಡದ ಹಾಗೆ ಹಗ್ಗದ ಹುರಿಗಳಿಂದ ಬಿಗಿಯುತ್ತಾರೆ. ಸತ್ತವರಿಗೆ ಮದುವೆಯಾಗಿಲ್ಲದಿದ್ದರೆ, ಅವರನ್ನು ಸಿದಿಗೆಯ ಮೇಲೆ ಮಲಗಿಸದೆ, ಬದಲಾಗಿ ಗೋಣಿ ತೊಟ್ಟಿನಲ್ಲಿ ಮಲಗಿಸಿಕೊಂಡು ಸುಡುಗಾಡಿಗೆ ಒಯ್ಯುತ್ತಾರೆ.

ಇಂಥ ಶವವನ್ನು ಸ್ಮಶಾನಕ್ಕೆ ಒಯ್ಯುವಾಗ ಇವರು ಅದನ್ನು ಮೆರವಣಿಗೆಯಂತೆ ಒಯ್ಯದೆ, ಹಲಗೆಗಳನ್ನು ಬಾರಿಸದೆ, ಶಾಂತವಾಗಿ ಉಳಿಯುತ್ತಾರೆ. ಹೆಣ್ಣು ಮಕ್ಕಳು ಸಹ ಶವದ ಹಿಂದೆ ಮಸೂಟಗಿಗೆ ಹೋಗುತ್ತಾರೆ.  ಎಲ್ಲ ದ್ರಾವಿಡ ಜನಾಂಗದವರಂತೆ ಇವರು ಕೂಡ ಕುಣಿ ತೋಡಿ ಹೆಣವನ್ನು ಅದರಲ್ಲಿ ಹೂಳುತ್ತಾರೆ.  ಹೆಣವನ್ನು ಕುಣಿಯಲ್ಲಿ ಕೂಡಿಸುವುದಿಲ್ಲ. ಬೋರಲು ಮಲಗಿಸುತ್ತಾರೆ. ಅದರ ಮೇಲೆ ಮಣ್ಣನ್ನು ಹಾಕಲಾಗುತ್ತದೆ. ಹೆಣದ ಮೇಲಿನ ಸೀರೆ ಅವಳ ವಾರಸುದಾರರಿಗೆ ಕೊಡುತ್ತಾರೆ. ಹೆಣಕ್ಕೆ ತುಂಡು ಬಟ್ಟೆ ಮಾತ್ರ ಹೊದಿಸಿ, ಮಣ್ಣು ಮಾಡಿ ಮುಗಿಸುತ್ತಾರೆ. ಹೆಣಕ್ಕೆ ಹೊಸ ಸೀರೆ ವ್ಯರ್ಥವೆಂದು ಅದೇ ಸೀರೆ ಇನ್ನೊಬ್ಬರಿಗೆ ಬರುತ್ತದೆಂದೂ ಇವರ ತಿಳಿವಳಿಕೆಯಾಗಿದ್ದಿರಬಹುದು. ದಾರಿದ್ರವೂ ಇದಕ್ಕೆ ಕಾರಣ. ಮೂರನೆಯ ದಿನಕ್ಕೆ ಮೂರು ಕೋಳಿ ಶಾಸ್ತ್ರ ಮಾಡಿ ಅಂದೇ ಸತ್ತವಳ ದಿನ ಮಾಡಲಾಗುತ್ತದೆ. ಮನೆ ಸಾರಿಸಿ, ಬಟ್ಟೆ ಬರೆ, ಕೌದಿ ಕಂಚಟಿಗಳೆಲ್ಲ ಒಗೆದು ಮಾಂಸದಡಿಗೆ ಮಾಡಿ ಸತ್ತವಳ ಹೆಸರಿನಲ್ಲಿ ಒಂದು ತಂಬಿಗೆ ನೀರು ತುಂಬಿಟ್ಟು ಅದಕ್ಕೆ ಪೂಜಿಸುತ್ತಾರೆ. ಎಡೆಯಿಟ್ಟು ನಮಸ್ಕರಿಸುತ್ತಾರೆ.

ಜನನದಿಂದ ಮರಣದವರೆಗೆ, ಹುಟ್ಟಿನಿಂದ ಸಾವಿನವರೆಗೆ ದುರಗಮುರಗಿಯ ಸಂಸ್ಕೃತಿಯಲ್ಲಿ ಒಂದು ಹೆಣ್ಣಿನ ಬದುಕು ಹೀಗೆ ಸಾಗಿ ಹೋಗುತ್ತದೆ. ತೀರ ಹಿಂದಿನ ಕಾಲದಲ್ಲಿದ್ದ ಮಹಿಳೆಯರ ಅಗ್ರಸ್ಥಾನ ಕ್ರಮೇಣ ಕಡಿಮೆಯಾಗುತ್ತ ಬಂದಿದ್ದು ಕಂಡು ಬರುತ್ತದೆ.

ಮೂಲದ್ರಾವಿಡದಲ್ಲಿ ಹೆಣ್ಣಿಗೆ ಗಂಡಿಗಿಂತ ಎತ್ತರದ ಸ್ಥಾನಮಾನವಿತ್ತು. ಆದರೆ ಮುಂದೆ ಆರ್ಯರ ಆಗಮನದಿಂದಾಗಿ ದ್ರಾವಿಡರು ಅವರ ಪದ್ಧತಿಗಳ ಪ್ರಭಾವಕ್ಕೊಳಪಟ್ಟು ಅವರಂತೆಯೇ ತಮ್ಮ ಬದುಕಿನ ರೀತಿ – ನೀತಿಗಳನ್ನು ರೂಪಿಸಿಕೊಂಡರು. ಅವರನ್ನೇ ಅನುಸರಿಸಿದರು. ಕ್ರಮೇಣ ಆರ್ಯರಲ್ಲಿದ್ದ ಪುರುಷ ಪ್ರಾಧಾನ್ಯತೆ – ಪ್ರಾಮುಖ್ಯತೆ ದ್ರಾವಿಡರಲ್ಲಿ ಬಂದಿರಬಹುದು. ದ್ರಾವಿಡರ ಮೂಲ ಅಸ್ತಿತ್ವವೇ ಅಳಿಸುತ್ತ ನಡೆದು ಅವರು ಕೂಡ ಹೆಣ್ಣನ್ನು ಗಂಡಿಗಿಂತ ಕಡಿಮೆಯವಳು ಅಂತ ತಿಳಿದುಕೊಂಡು ಅದೇ ತಿಳಿವಳಿಕೆಯನ್ನು ಪೋಷಿಸಿಕೊಂಡು ಬಂದದ್ದು ಕಂಡು ಬರುತ್ತದೆ. ಮನೆಯ ದೇವತೆಯಾದವಳು, ದಾಸಿಯಾದಳು, ಅರಸಿಯಾದವಳು, ಆಳಾದಳು, ಮನೆಯೊಡತಿಯಾದವಳು ಸೇವಕಿಯಾದಳು, ಕ್ರಮೇಣ ಅವಳ ಮೇಲೆ ಒಂದೊಂದಾಗಿ ಗಂಡಿನ ದೌರ್ಜನ್ಯ ದರ್ಪ, ದಬ್ಬಾಳಿಕೆ, ಶೋಷಣೆಗಳು ಶುರುವಾಗಿರಬಹುದು. ತಾನು ಶ್ರೇಷ್ಠ, ಅವಳು ಕನಿಷ್ಠವೆಂದು ಭ್ರಮಿಸಿದ್ದ ಗಂಡು ಅವಳ ಎಲ್ಲ ಹಕ್ಕುಗಳಿಗೆ ಕತ್ತರಿಹಾಕುತ್ತ ಬಂದಿರುವುದು ಐತಿಹಾಸಿಕ ಸತ್ಯವಾಗಿ ಚರಿತ್ರೆಯ ಪುಟಗಳಲ್ಲಿ ದಾಖಲಾಗಿ ನಿಂತಿದೆ.

ಹಬ್ಬ ಹರಿದಿನಗಳು :

ದುರಗಮುರಗಿಯವರು ಕಡುಬಡವರಾಗಿದ್ದರಿಂದ ಹೆಚ್ಚಾಗಿ ಹಬ್ಬಗಳನ್ನು ಆಚರಿಸುವುದಿಲ್ಲ. ಸಾಧಾರಣವಾಗಿ ಹಬ್ಬದ ದಿನ ಊರಲ್ಲಿ ಹೋಗಿ ಗುಡಿಯಿಟ್ಟು ಆಟಕಟ್ಟಿ ಹಾಡಿ ಕುಣಿದು ಹಬ್ಬದ ಭಿಕ್ಷೆ ಎತ್ತುತ್ತಾರೆ. ಆದರೆ ಈ ಜನಾಂಗದವರು ದಸರಾ ಹಬ್ಬವನ್ನು ಕಡ್ಡಾಯವೆಂಬಂತೆ ಆಚರಿಸುತ್ತಾರೆ. ದಸರೆಯನ್ನು ಸತ್ತವರ, ಹಿರಿಯರ ಹಬ್ಬವೆಂದು ಕರೆದು ಅಂದು ಸತ್ತ ತಮ್ಮ ವಂಶದ ಹಿರಿಯರನ್ನು ನೆನೆದು ಎಡೆಮಾಡುತ್ತಾರೆ. ಸಮಾಧಿಗಳಿದ್ದರೆ ಅಲ್ಲಿಗೆ ಹೋಗಿ ಪೂಜೆ ಮಾಡುತ್ತಾರೆ. ಮಹಿಳೆಯರು ಮುತ್ತೈದೆಯಾಗಿ ಸತ್ತಿದರೆ ಅಂಥವಳನ್ನು ದೇವಿಯೆಂದು ತಿಳಿದು ಪೂಜಿಸುತ್ತಾರೆ. ಇವರು ಅಲೆಮಾರಿಗಳಾದುದರಿಂದ ಇವರಲ್ಲಿ ಮರಣಿಸಿದವರ ಸಮಾಧಿಗಳಿರುವುದು ತೀರ ಅಪರೂಪ.

ಹಬ್ಬದ ದಿನದಂದು ಇವರು ಸಿಹಿ ಅಡಿಗೆಗಿಂತ, ಮಾಂಸದಡುಗೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹೆಣ್ಣು ಮಕ್ಕಳು ದಸರಾ ಹಬ್ಬದ ದಿನ ಹೊಸ ಸೀರೆ – ಕುಪ್ಪಸ ತಂದು ಮನೆಯಲ್ಲಿ ಸತ್ತ ಮುತ್ತೈದೆಯರು ಹೆಸರಿನಲ್ಲಿ ತಂಬಿಗೆ ತುಂಬಿಟ್ಟು ಪೂಜೆ ಮಾಡಿ ಸೀರೆ ಕುಪ್ಪಸವನ್ನು ಇಟ್ಟು ನೈವೇದ್ಯ ಮಾಡುತ್ತಾರೆ. ಆ ಸೀರೆಯನ್ನು ಉಟ್ಟುಕೊಂಡರೆ ಸತ್ತ ಆ ಹಿರಿಯ ಮುತ್ತೈದೆಯರ ಆಶೀರ್ವಾದ ತಮ್ಮನ್ನು ಕಾಯುತ್ತದೆ ಎಂಬುದು ಅವರ ನಂಬುಗೆ, ಅವರು ಆಚರಿಸುವ ಎಲ್ಲ ಶುಭ ಸಂದರ್ಭಗಳಲ್ಲಿಯೂ ಹಂದಿಯ ಮಾಂಸ ಮತ್ತು ಹೆಂಡವನ್ನು ಬಳಸುತ್ತಾರೆ.

ಮರಗಮ್ಮ, ದುರಗಮ್ಮ, ಕಂಚೆಮಾರಮ್ಮ, ಸೀರೆಮಾರೆಮ್ಮ, ಸುಂಕಲಮ್ಮ, ಪಾಲಕಮ್ಮ, ಸವಾರೆಮ್ಮ – ಏಳು ಮಂದಿ ಹೆಣ್ಣು ದೇವತೆಗಳು, ಈ ಜನಾಂಗದ ಶಕ್ತಿ ದೇವತೆಗಳು ಮರಗಮ್ಮ ಮೃತ್ಯುದೇವತೆ, ಸುಂಕಲಮ್ಮ ರೋಗರುಜಿನಗಳ ದೇವಿ, ಸೀಮೆ ಮಾರೆಮ್ಮ ಅವರಿರುವ ಜಾಗದ ಸೀಮೆಯ ಗುಡಿ ದೇವತೆಯಾದರೆ, ಪಾಲಕಮ್ಮ ಎಲ್ಲ ಪೀಡೆಗಳಿಂದ ಅವರನ್ನು ಕಾಪಾಡುವ ದೇವತೆ, ದುರಗಮ್ಮ ಊರಿನ ದುರ್ಗದ ದೇವತೆ, ಇವಳೇ ಅಧಿದೇವತೆ.

ಸಾಧಾರಣವಾಗಿ ಆಷಾಢಮಾಸದಲ್ಲಿ ಮರಗಮ್ಮನ ಜಾತ್ರೆ ನಡೆಯುತ್ತದೆ. ಅದು ಮೂರುವಷಕ್ಕೊಮ್ಮೆ ಮಾತ್ರ ಜರುಗುವುದು, ಅಂದು ಬೇಟೆಯಾಡಿ ತಂದ ಹಂದಿಗಳ ಮಾಂಸದ ಅಡಿಗೆ, ಪೋತುರಾಜನ ವೇಷ ಕುಣಿತ, ಬುರುಬುರು ಪೋಚಮ್ಮನ ವಾದ್ಯಶಬ್ದದ, ಹಾಡುಗಳ ಭರಾಟೆ, ಇವೆಲ್ಲವುಗಳೊಂದಿಗೆ ಜಾತ್ರೆಯ ಆಚರಣೆ ಅದ್ದೂರಿಯಾಗಿ ನಡೆಯುತ್ತದೆ.

ಗುಲಬರ್ಗಾ ಜಿಲ್ಲೆಯ ಚಿತ್ತಾಪುರ ತಾಲೂಕಿನ ಅಲ್ಲೂರು, ಆಲಹಳ್ಳಿಗಳಲ್ಲಿ ಮರಗಮ್ಮನ ಜಾತ್ರೆ ವೈಭವಯುತವಾಗಿ ನಡೆಯುತ್ತದೆ. ಈ ದೇವಿಗೆ ಇಲ್ಲಿ ಕುರಿ ಬಲಿಯನ್ನು ಕೊಡಲಾಗುತ್ತದೆ. ಅಲ್ಲೂರಿನ ದುರುಗಮ್ಮನ ಜಾತ್ರೆಗೆ ಕುರಿ-ಕೋಣ- ಕೋಳಿಗಳನ್ನು ಬಲಿಯೆಂದು ಅರ್ಪಿಸುವುದುಂಟು.

ಪ್ರದರ್ಶನಾತ್ಮಕ ಕಲೆಗಳಲ್ಲಿ ದುರಗಮುರಗಿ ಮಹಿಳೆ :

ಈ  ಜನಾಂಗದಲ್ಲಿ  ಬಯಲಾಟ, ಸಣ್ಣಾಟ. ದೊಡ್ಡಾಟ, ನಾಟಕ ಮೊದಲಾದವುಗಳು ಇಲ್ಲ, ಇವರಲ್ಲಿದ್ದ ಕಲೆಗಳೆಂದರೆ, ಭಿಕ್ಷೆ, ಬೇಟೆ, ಪೋತರಾಜನ ವೇಷಕಟ್ಟಿ ನರ್ತಿಸುವುದು. ಹೆಣ್ಣುಮಕ್ಕಳು ರಾಗಬದ್ಧವಾಗಿ ಹಾಡುವುದು, ವಾದ್ಯ ಬಾರಿಸುವುದು, ಈ ಮೊದಲೇ ಹೇಳಿದಂತೆ ಇವರು ದೇವಿಯರಾಧನೆಯನ್ನೇ ತಮ್ಮ ಕುಲಕಸುಬನ್ನಾಗಿ ಸ್ವೀಕರಿಸಿದವರು. ತಮ್ಮ ಆರಾಧ್ಯ ದೇವಿಯ ಆಟವನ್ನೇ ಒಂದು ವಿಶಿಷ್ಟಕಲೆಯನ್ನಾಗಿ ಬೆಳೆಸಿಕೊಂಡಿರುವರು. ಮನೋರಂಜನೆಗಾಗಲಿ ಅಥವಾ ಹೊಟ್ಟೆ ಹೊರೆದುಕೊಳ್ಳುವುದಕ್ಕಾಗಲಿ ಈ ಜನಾಂಗ ಬೇರೆ ಯಾವ ಕಲೆಗಳನ್ನು ರೂಢಿಸಿಕೊಂಡಿಲ್ಲ. ದೇವಿಯ ಆಟವೊಂದೇ ಅವರಿಗೆ ಎಲ್ಲವೂ ಆಗಿದೆ. ಮರಗವ್ವ, ದೇವತೆಯ ಹೆಸರಿನ ಮೇಲೆ ಮುಖಕ್ಕೆ ಬಣ್ಣ ಬಳಿದುಕೊಂಡು, ಪೋತುರಾಜನ ಭಯಂಕರ ವೇಷ ಕಟ್ಟಿಕೊಂಡು, ಕೈಯಲ್ಲಿ ಬಾರಕೋಲನ್ನು ಹಿಡಿದುಕೊಂಡು ಗಂಡಸರು ಮನೆ ಮನೆ ತಿರುಗಿ ಕುಣಿಯುತ್ತ, ಚೀರುತ್ತ ದೇವಿಯ ಮಹಿಮೆಯನ್ನು ಸಾರುತ್ತಾರೆ. ತಲೆಯ ಮೇಲೆ ಗುಡಿಯ ರೂಪದ ಪುಟ್ಟಿಯಲ್ಲಿ ದೇವಿಯ ಮೂರ್ತಿಯನ್ನು ಕುಳ್ಳಿರಿಸಿ, ಅದನ್ನು ಹೊತ್ತುಕೊಂಡು ಉರುಮೆಯನ್ನು ಬಾರಿಸುತ್ತ ಹಿಂದೆ ಹಿಂದೆ ಬರುವ ಹೆಣ್ಣು ಮಗಳು ಮುಂದೆ ಗಂಡ ತನ್ನ ಬೆತ್ತಲೆ ಮೈಗೆ ಬಾರಕೋಲಿನಿಂದ ಹೊಡೆದುಕೊಳ್ಳುತ್ತ ಆರ್ಭಟಿಸುತ್ತಾ, ಎಡಗೈಯಲ್ಲಿ ಗಂಟೆಯನ್ನು ಬಾರಿಸುತ್ತ ಹಾ… ಹಾ… ಹಾ… ಎಂದು ಕೇಕೇ ಹಾಕುತ್ತ ಇವರಿಬ್ಬರೂ ಊರನ್ನು ಪ್ರವೇಶಿಸುತ್ತಾರೆ. ಹೆಣ್ಣು ತನ್ನ ಜೋಳಿಗೆಯಲ್ಲಿ ಮಗುವನ್ನು ಹಾಕಿಕೊಂಡು ಕೈಯಿಂದ ಬುರುಬುರು ಎಂದು ಉರುಮೆಯನ್ನು ಬಾರಿಸುತ್ತ ಬರುತ್ತಾಳೆ.

ಈ ಜನಾಂಗ ಆರಂಭದಲ್ಲಿ ಅಡವಿಯಲ್ಲಿಯೇ ತಮ್ಮ ವಸ್ತಿ ಹಾಕುತ್ತಿದ್ದರು. ಹೀಗಾಗಿ ಇವರಿಗೆ ಕಾಡಲ್ಲಿಯ ಕಟ್ಟಿಗೆಯ ಗೊಂಬೆಯೇ ಮರಗವ್ವ ದೇವಿಯಾಗುತ್ತಿದ್ದಳು.

ಕ್ರಮೇಣ ಇವರು ಊರು ಪ್ರವೇಶಿಸಿದ ಮೇಲೆ ನಾನಾ ಬಗೆಯ ಲೋಹದ ದೇವಿಗಳು ಸಿದ್ಧವಾದವು. ’ಮರಗಮ್ಮ’ ಎಂಬ ಮೃತ್ಯುದೇವಿಯನ್ನು ಗುಡಿಯಲ್ಲಿ ಹೊತ್ತುಕೊಂಡು ಬಂದು ಅದನ್ನು ಕೇರಿಯ ಅಂಗಳದಲ್ಲಿ ಇಳಿಸಿ, ಈ ದೇವಿ ಕೇರಿಗೆ ಯಾಕೆ ಬಂದಳು, ಇವಳ ಇಷ್ಟಾರ್ಥಗಳೇನು? ಇವಳ ಮಹಿಮೆ ಎಂಥದ್ದು? ಇವಳ ಸಿಟ್ಟು ಆಕ್ರೋಶ ಎಂಥದ್ದು? ಎಂಬ ವಿಷಯಗಳ ಕುರಿತು  ಹಾಡುತ್ತ ನಡುನಡುವೆ ಮಾತನಾಡುತ್ತ  ಆ ಕೇರಿಯ ಮನೆಗಳಿಗೆಲ್ಲ ದೇವಿ ಬಂದಿರುವ ವಿಷಯವನ್ನು ರಾಗಬದ್ಧವಾಗಿ ತಿಳಿಸುತ್ತಾರೆ.

ಸಾವಿನ ಭಯದಿಂದಲೇ ಮರಗಮ್ಮ ದೇವಿ ಹುಟ್ಟಿರಬಹುದು. ಪ್ಲೇಗು, ದೇವಿ (ಸಿಡುಬು) ಗಳಂತಹ ಮಹಾರೋಗಗಳು ಬಂದಾಗ ಈ ದೇವಿಗೆ ನೀರು ನೀಡಿ, ಮೊಸರು ನೀರಿ ದೇವಿಯ ಹೊಟ್ಟೆಯನ್ನು ಸಿಟ್ಟನ್ನು, ತಂಪು ಮಾಡುತ್ತಾರೆ. ಅವಳ ಸಿಟ್ಟು  ಹೀಗೆ ತಣ್ಣಗಾದರೆ, ತಮ್ಮ ಆರೋಗ್ಯವನ್ನು ತಣ್ಣಗಿಟ್ಟು ರೋಗಗಳು ಬಾರದಂತೆ ಕಾಪಾಡುತ್ತಾಳೆಂಬ ನಂಬಿಕೆ ಇವರದು.

ಪೋತುರಾಜ ಕಾಲಲ್ಲಿ ಗೆಜ್ಜೆ, ಕಿವಿಯಲ್ಲಿ ಓಲೆ, ರಟ್ಟೆಯಲ್ಲಿ ಕಡಗ ನಡುವಿನ ಸುತ್ತಲೂ ಸೀರೆಯನ್ನು ನೆರಿಗೆ ಮಾಡಿ ಲಂಗದಂತೆ ಕಟ್ಟಿಕೊಂಡು ತನ್ನ ಉದ್ದನೆಯ ಕೂದಲನ್ನು ಬೆನ್ನ ಮೇಲೆ ಹರವಿಕೊಂಡು ಲಡ್ಡಿನಿಂದ ರಭಸವಾಗಿ ಹೊಡೆದುಕೊಳ್ಳುತ್ತ ಲಯಬದ್ಧವಾಗಿ ಹೆಜ್ಜೆ ಹಾಕುತ್ತಾನೆ. ತಾಯಿಯ ಮಹಿಮೆಯನ್ನು ಹಾಡುತ್ತಾನೆ. ಇಡಿಯಾಗಿ ಇವರ ಆಟ ಸಂವಾದದ ರೂಪದಲ್ಲಿರುತ್ತದೆ. ಹೆಣ್ಣು ಮಗಳು ಉರುಮೆ ಬಾರಿಸುತ್ತ ತನ್ನ ಗಂಡ ಹೇಳಿದನ್ನು ಪುನರುಚ್ಚರಿಸುತ್ತ ದನಿಗೂಡಿಸುತ್ತಾಳೆ. ಸಿಡುಬುಕ ಮೈಲಿ, ಬೇನೆಗಳನ್ನು ಅಕ್ಕ ತಂಗಿಯರೆನ್ನುವುದುಂಟು.

’ತಾಯಿ ಬಂದಾಳ ಬರ‍್ರೇ… ಮರಗವ್ವ ಬಂದಾಳ ಬರ‍್ರೇ.. ನಮ್ಮವ್ವ.. ಎಂದು ಹಾಡುತ್ತ ಹೆಣ್ಣುಮಗಳು ಕೇರಿಯಲ್ಲಾ ಒಂದೆರೆಡು ಸುತ್ತು ಸುತ್ತುತ್ತಾಳೆ. ಅವಳು ಬಾರಿಸುವ ಬುರು.. ಬುರು ಸದ್ದು ಎಷ್ಟು ತೀಕ್ಷ್ಣವಾಗಿರುತ್ತದೆ ಎಂದರೆ, ಕೇರಿಯ ಮೂಲೆ ಮೂಲೆಯ ಜನರನ್ನು ತನ್ನೆಡೆಗೆ ಆಕರ್ಷಿಸುತ್ತದೆ. ಜನ ಭಯಭಕ್ತಿಯಿಂದ ನೆರೆದು ಎರಡು ತಂಬಿಗೆ ನೀರು, ಮರದಲ್ಲಿ ಜೋಳ, ಇನ್ನಿತರ ದವಸ – ಧಾನ್ಯಗಳನ್ನು ತರುತ್ತಾರೆ. ಪೋತುರಾಜ ತನ್ನ ಮುಖಕ್ಕೆ ಮರಗವ್ವನ ರೌದ್ರರೂಪದ ಮಕ ಹಾಕಿಕೊಂಡು ಕುಣಿಯುತ್ತಾನೆ.

ಪೋತುರಾಜ : ಆಹಾ ! ತಾಯಿ ಮರಗವ್ವ ಕೇರಿಗ ಬಂದಾಳ ! ಭಕ್ತರ ಕಷ್ಟ ತಿಳಿಯಲು ಬಂದಾಳೆ !

ಹೆಣ್ಣು : ಆಹಾ ಬಾಲಾಬೇರು.

ಪೋತುರಾಜ : ಹೇ ! ಹೇ! ಸತ್ಯುಳ್ಳಾಕಿ ನಮ್ಮವ್ವ ! ನಡಕೊಂಡವರಿಗೆ ವರಾ ಕೊಡ್ತಾಳ, ನಾನು ಅಂಬುವರ ಸೊಲ್ಲು ಅಡಗಿಸ್ಯಾಳ.

ಹೆಣ್ಣು : ಆಹಾ ! ಹಾ! ಬಾಲಾಬೇರು

ಹೀಗೆ ಗಂಡು ಪೋತುರಾಜ ತಾಯಿ ಮಹಿಮೆ ಸಾರಿದರೆ ಹೆಣ್ಣು  ಪ್ರತಿ ಸಾಲಿನ ಕೊನೆಯಲ್ಲಿ ’ಆಹಾ ! ಬಾಲಾಬೇರು’ ಎಂದು ಇಂಬುಕೊಡುತ್ತಾಳೆ. ಹೀಗೆ ಇದೊಂದು ಪದ್ಧತಿಯಾಗಿ ರಂಗಪ್ರದರ್ಶನ ಕಲೆಯೇ ಆಗಿದೆ.

ಕೊಡದಾಗ ನೀರ ತಗೊಂಡು ಬರ‍್ರೆವ್ವಾ…
ತಾಯಿಗಿ ಕೈಕಾಲ ಮಾರಿಗಿ ತ್ರ‍್ರೆವ್ವ…
ಪೂಜಾಕ ಸಾಮಾನ ತರ‍್ರೆವ್ವಾ… ಉಡ್ಯಾಗ ಅನ್ನಾ ತರ‍್ರೆ….
ಬರ‍್ರೆವ್ವೋ… ತಲ್ಲೀ…. ನಮ್ಮವ್ವಾರೆ ಬರ‍್ರಿ ಬರ‍್ರಿ…..

ಹೀಗೆ ಇವಳು ಹಾಡು ಹಾಡುವಷ್ಟರಲ್ಲಿ ಊರಿನ ಜನರೆಲ್ಲ ಮೊರದಲ್ಲಿ ಜೋಳ, ತಂಬಿಗೆ ನೀರು, ಊದು – ಅರಿಶಿಣ, ಕುಂಕುಮ ತಂದು ಗುಡಿಯ ಮುಂದಿಡುತ್ತಾರೆ. ಗುಡಿ ಇಳಿಸಿದ  ಮುಂದಿನ ಜಾಗದಲ್ಲಿ ಪೋತುರಾಜ ತನ್ನ ಎದೆ ಬೆನ್ನಿಗೆ ಲಡ್ಡು ಒಡೆದುಕೊಳ್ಳುತ್ತ, ಕುಣಿಯುತ್ತಿರುತ್ತಾನೆ. ಹಿಂದೆ ಹಳ್ಳಿಗಳಲ್ಲಿ ಗೌಡ – ಕುಲಕರ್ಣಿಯವರ ಮನೆಯ ಮುಂದೆಯೇ ದೇವಿಯ ಗುಡಿಯನ್ನು ಇಳಿಸುತ್ತಿದ್ದರಂತೆ. ಆಗ ಆ ಪರಿವಾರದವರೆಲ್ಲ ಹೊರಗೆ ಬಂದು ಮುಂದಿನ ಕಟ್ಟೆಯ ಮೇಲೆ ಕುಳಿತುಕೊಂಡು ಅದನ್ನೆಲ್ಲ ನೋಡಿ ಆನಂದಪಟ್ಟು ಖುಷಿಯಾಗಿ ಅವರಿಗೆ ಬಹುಮಾನವಾಗಿ ತಮ್ಮ ಹಳೆಯ ಬಟ್ಟೆ, ಚಲ್ಲರೆ ಹಣ ಕೊಡುತ್ತಿದ್ದರು. ನಂತರ ಪೋತುರಾಜ ತನ್ನ ಕುಣಿಕೆ ನಿಲ್ಲಿಸಿ ಗುಡಿಯ ಬಾಗಿಲು ತೆರೆದು ಮರಗವ್ವನ ಪೂಜೆ ಮಾಡಲು ಅಣಿಯಾಗುತ್ತಾನೆ. ತಂಬಿಗೆಗಳಲ್ಲಿಯ ನೀರನ್ನು  ಗುಡಿಯ ಮುಂದೆಯೇ ಚೆಲ್ಲಿ, ದೇವಿಯ ಪಾದ ತೊಳೆದಂತೆ ಮಾಡಿ, ದೇವಿಯ ಮೈಮೇಲಿದ್ದ ಒಂದೊಂದು ಸಾಮಾನುಗಳನ್ನು ತೆಗೆದು ಜನಕ್ಕೆ ತೋರಿಸುತ್ತ ರಾಗವಾಗಿ ಹಾಡಲು ಆರಂಭಿಸಿದಾಗ, ಪೂಚವ್ವ ತನ್ನ ವಾದ್ಯದ ಗತಿಯನ್ನು ತೀವ್ರ ಮಾಡುತ್ತಾಳೆ.

ಗುಡಿಯೊಳಗಿದ್ದ ಬಟ್ಟಲನ್ನು ತಟ್ಟೆಯನ್ನು ತೆಗೆದು ಎಲ್ಲಿರಿಗೂ ತೋರಿಸುತ್ತ ಹಾಡ ತೊಡಗುತ್ತಾರೆ :

ಪೋತುರಾಜ : ಇದು ಗೌಡ್ರ ನಿಂಗವ್ವ ಮಾಡಿಸಿಕೊಟ್ಟಾಳ, ಬೆಳ್ಳಿ ಬಟ್ಟಲ. ಎಂದಾಗ ತಕ್ಷಣ ಅವನ ನುಡಿ ಮುಗಿಯುವಾಗ ಬುರುಬರು ಬಾರಿಸತ್ತ ಅದೇ ಸ್ವರದಲ್ಲಿ.

ಪೋಚಮ್ಮ : ತಾನೇ ತಂದಾನ.. ತಾನೇ ತಂದಾನ.. ತಂದಾನೆ ತಾನೇ ಎನ್ನುತ್ತಾಳೆ.

ಪೋತುರಾಜ : ಇನ್ನೊಂದನ್ನು ತೋರಿಸುತ್ತ ಇದು ರಾಚವ್ವ ಕೊಟ್ಟಾಳ ಬೆಳ್ಳಿ ತಾಟ…

ಪೋಚಮ್ಮ : ತಾನೇ ತಂದಾನಹ.. ತಾನೇ ತಂದಾನ… ತಂದಾನ  ತಾನೇ..

ಪೋತುರಾಜ : ಇದು ಶಾಂತವ್ವ ಗೋಡ್ತಿ ಕೊಟ್ಟಾಳ….

ಪೋಚಮ್ಮ : ತಾನೇ ತಂದಾನ.. ತಾನೇ ತಂದಾನ… ತಂದಾನ ತಾನೇ

ಪೋತುರಾಜ : ಇದು ಗೌರವ್ವ ಮಾಡ್ಸ್ಯಾಳ… ಇದು ಸಾಂತ್ತೆವ್ವ ಕೊಟ್ಟಾಳ…

ಪೋಚಮ್ಮ : ತಾನೇ ತಂದಾನ.. ತಾನೇ ತಂದಾನ… ತಂದಾನ ತಾನೇ…

ಈ ರೀತಿಯಾಗಿ ಇವರ ಹಾಡಿನ ರೂಪದ ಸಂಭಾಷಣೆ ಮುಂದುವರಿಯುತ್ತದೆ. ಬೆಳ್ಳಿಯ ಸಾಮಾನುಗಳಿವು ಎಂದು ಹೇಳಲಿಕ್ಕಾಗದು. ಪೋತುರಾಜ ಸುಳ್ಳು ಹೇಳುತ್ತಿದ್ದಾನೆ ಎಂಬ ಗುಮಾನಿ ಸುತ್ತಲಿನ ಜನಕ್ಕೆ ಬರುವಾಗಲೇ ಪೋಚಮ್ಮ ತಾನೇ ತಂದಾನ… ಎನ್ನುವ ನುಡಿ ಕೇಳಿದಾಗ ಎಲ್ಲರೂ ನಕ್ಕುಬಿಡುತ್ತಾರೆ. ಈ ಪೋತುರಾಜ ಎಲ್ಲವನ್ನೂ ತಾನೇ ತಂದಿದ್ದಾನೆ ಎಂಬರ್ಥ ಕಲ್ಪಿಸುತ್ತಾರೆ. ಆದರೆ ಅವಳು ನುಡಿಯಲ್ಲಿ ಒಂದು  ಪ್ರಾಸವನ್ನು ಕೂಡಿಸುವ ಸಂಗೀತದ ಲಯ, ಗತಿ ಇದಾಗಿರುತ್ತದೆ. ಇದೊಂದು ಸಂಗೀತದ ಅಂಶ. ಹೀಗೆ ಹಾಡುತ್ತ ಎಲ್ಲ ಸಾಮಾನುಗಳನ್ನು ತೆಗೆದು ಎಲ್ಲರಿಗೂ ತೋರಿಸಿ, ಮತ್ತೆ ನಿಧಾನವಾಗಿ ಒಳಗಿಡುತ್ತ ದೇವಿ ಪೂಜೆ ಮಾಡುತ್ತಾರೆ.  ಅರಿಶಿಣ – ಕುಂಕುಮ ದೇವಿಗೆ ಏರಿಸಿ, ಉಳಿದದ್ದನ್ನು ಒಳಗಿಡುತ್ತ ಊದಿನಬತ್ತಿ ಹಚ್ಚಿ ಬೆಳಗುತ್ತಾನೆ. ತೆಂಗಿನ ಕಾಯಿ ಒಡೆದು ನೀರು ಸಿಂಪಡಿಸಿ, ಮತ್ತೆ ಹಾಡುತ್ತ ಎದ್ದು ಕುಣಿಯಲು ಪ್ರಾರಂಭಸುತ್ತಾನೆ.

’ತಾಯಿ ಮರಗವ್ವ – ತಾಯಿ ಮರಗವ್ವಾ… ಹಾಹಾಹಾಹ” ಎಂದು ಜೋರಾಗಿ ಆರ್ಭಟಿಸಿ ಮೊರದಲ್ಲಿಯ ಜೋಳದ ಸಮೇತ ಮೊರದ ಮುಖವನ್ನು ಕೆಳಗೆ ಬಗ್ಗಿಸಿ ಹಿಡಿದು ಗರ‍್ರನೆ ಸುತ್ತಮುತ್ತ ತಿರುಗಿಸುತ್ತಾನೆ. ಹಾಗೆ ತಿರುಗಿಸುವಾಗ ಒಂದು ಕಾಳು ಕೂಡ ಕೆಳಗೆ ಬೀಳುವುದಿಲ್ಲ. ಇದನ್ನು ಕಂಡ ಜನ ಮಂತ್ರದ ಚಮತ್ಕಾರ, ದೇವಿ ಪವಾಡ ಮಹಿಮೆ ಎಂದು ತಿಳಿದು ಕೈ ಮುಗಿಯುತ್ತಾರೆ. ಭಯ – ಭಕ್ತಿಯಿಂದ ತಮ್ಮ ಗಲ್ಲಗಲ್ಲ ಬಡಿದುಕೊಳ್ಳುತ್ತಾರೆ.

ಹಾಹಾಹಾಹಾ … ತಾಯಿ ದುರ್ಗಮ್ಮ
ಕೀಣಗಿ ದುರಗವ್ವ, ಗೋಳದ ಲಕ್ಕವ್ವ
ಕಂವಟಗಿ ಮರೆಗವ್ವ ಆಲೂರ ಗೌರವ್ವ
ತಾಯಿ ಬಂದಾಳ್ರೆ… ಯವ್ವೋ… ಆ ಹಾಹಾಹಾಹಾ‌ಹ್ಹಾ ಹ್ಹಾ…

ಎಂದು ಆವೇಶದಿಂದ ಚೀರುತ್ತಾ, ವಿಚಿತ್ರ ಹಾವ ಭಾವ ಭಂಗಿಗಳಿಂದ ಎದೆ ಬೆನ್ನಿಗೆ ಹೊಡೆದುಕೊಳ್ಳುತ್ತಾ  ಸುತ್ತಲಿನ ನೋಡುಗರಿಗೆ ಭಯ ಹುಟ್ಟಿಸುತ್ತಾನೆ ಪೋತುರಾಜ. ಅವನ ಎದೆ ಬೆನ್ನುಗಳಿಂದ ರಕ್ತ ಜಿನುಗುತ್ತಿರುತ್ತದೆ. ರಕ್ತದ, ಬಣ್ಣ, ಬೆವರುಗಳಿಂದ, ಅವನ ಮೈ ಭಯಂಕರವಾಗಿ ಹೆದರಿಕೆ ಹುಟ್ಟಿಸುತ್ತದೆ. ಜಿಗುಪ್ಸೆ ಎನಿಸುತ್ತದೆ. ಭಯದ, ಕ್ರೌರ್ಯದ ವಾತಾವರಣ  ಸೃಷ್ಟಿಯಾಗುತ್ತದೆ, ಇಂಥ ಹಿಂಸೆ, ರೌದ್ರಾವತಾರಗಳನ್ನು ಕಂಡ ಗರ್ಭಿಣಿಯರಿಗೆ ಹೆದರಿಕೆಯಾಗಿ ಗರ್ಭಪಾತವಾದ ಘಟನೆಗಳೂ ಇವೆ. ಚಿಕ್ಕ ಪುಟ್ಟ ಮಕ್ಕಳೂ ಹೆದರಿ ಎಚ್ಚರ ತಪ್ಪಿ ಬಿದ್ದಿದ್ದೂ ಇವೆ. ಅರ್ಧಗಂಟೆಯವರೆಗಾದರೂ  ಪೋತುರಾಜನ ಕುಣಿತ ನಡೆದೇ ಇರುತ್ತದೆ. ಅನಂತರ ಪೋಚವ್ವ ಎಲ್ಲರ ಮೊರಗಳಿಂದ ದವಸ ಧಾನ್ಯಗಳನ್ನು ತನ್ನ ಬುಟ್ಟಿಯಲ್ಲಿ ಹಾಕಿಕೊಂಡು ಗಂಟು ಕಟ್ಟುತ್ತಾಳೆ. ರೊಟ್ಟಿಯನ್ನು ಜೋಳಿಗೆಯಲ್ಲಿ  ಹಾಕಿಕೊಂಡು, ನಂತರ ಪೋತ್ಯಾ ತನ್ನ ಮೂರು ಬೆರಳಿಗೆ ಬರುವಷ್ಟು ಜೋಳವನ್ನು ಎಲ್ಲ ಮರದಲ್ಲಿ ಹಾಕುತ್ತ, ತನ್ನ ಟೊಂಕದ ಚೀಲದಿಂದ ಅರಿಶಿಣ ಭಂಡಾರ ತೆಗೆದು ಮರಗಳಿಗೆ ಹಾಕಿ, ಹಾರೈಸುತ್ತಾನೆ. ಜನ ಅದನ್ನೆಲ್ಲ ತೆಗೆದುಕೊಂಡು ತಮ್ಮ ತಮ್ಮ ಸಾಕು ಪ್ರಾಣಿಗಳನ್ನು ಕಾಪಾಡುತ್ತದೆ ಎಂಬ ನಂಬಿಕೆಯಿದೆ. ಒಂದಿಷ್ಟು ಕಾಳನ್ನು ತಮ್ಮ ಮನೆಯ ದವಸ ಧಾನ್ಯಗಳಲ್ಲಿ ಬೆರಸುತ್ತಾರೆ. ಇದು ಮನೆಯ ಮಕ್ಕಳನ್ನು ಕಾಪಾಡುತ್ತದೆ ಎಂಬ ಆಳವಾದ ಭಾವನಾತ್ಮಕ ನಂಬಿಕೆಯಿದೆ.

ದುರುಗಮುರಗಿಯವರು ತಮ್ಮ ದೇಹವನ್ನು ದಂಡಿಸಿಕೊಂಡು ನೋಡುಗರಿಗೆ ಖುಷಿಯನ್ನೂ ಭಯವನ್ನೂ, ಹರಕೆಯನ್ನೂ ಕೊಟ್ಟು ಅವರು ನೀಡುವ ಭಿಕ್ಷೆಯಿಂದ ಹೊಟ್ಟೆ ತುಂಬಿಸಿಕೊಳ್ಳುತ್ತ ಜೀವನ ಸಾಗಿಸುವರು. ಮೇಲುವರ್ಗದ ಜನರಿಂದ ಶೋಷಣೆಗೆ, ಹಿಂಸೆಗೆ ಒಳಪಡುವ ಗುಲಾಮರ ಪ್ರಾತಿನಿಧ್ಯವನ್ನು ಸಾರುವಂತೆ ಕಂಡು ಬರುತ್ತದೆ.

ಪೋತುರಾಜನ ಕುಣಿಯುವುದರಲ್ಲಿ ಎರಡು ಬಗೆಗಳಿವೆ. ದೇವಿಯ ಗುಡಿಯ ಮುಂದೆ ವರ್ತುಲಾಕಾರವಾಗಿ ಕುಣಿಯುವುದು, ಉದ್ದಕ್ಕೆ ಹೋಗಿ, ಮುಂದಕ್ಕೆ ಹೋಗಿ ಮತ್ತೆ ಹಿಂದಕ್ಕೆ ಬರುವಂಥ ಕುಣಿತ, ಕೆಲವೊಂದು ಸಲ ಭಕ್ತರು ಕಾಣಿಕೆ ತೆರದಿದ್ದಾಗ, ಈ ಪೋತುರಾಜ ಮೊಣಕ್ಕೆ ಮೇಲೆ ಚೂಪಾದ ಕತ್ತಿ ಆಡಿಸಿ ರಕ್ತ ಚಿಮ್ಮಿಸುವ ಮೊಂಡುತನ ಮಾಡುತ್ತಾನೆ. ಇದನ್ನು ನೋಡಲಾಗದೆ ಜನ ಕಾಣಿಕೆ ಕೊಡಲು ಮುಂದಾಗುತ್ತಾರೆ.

ಇತ್ತೀಚೆಗಂತೂ ದೇವಿಯಲ್ಲಿ ನಂಬಿಕೆ ಕಡಿಮೆಯಾಗುತ್ತಿರುವುದರಿಂದ ಅವರ ಉಪಜೀವನ ಸಾಗುತ್ತಿಲ್ಲ ಎಂಬುದು ಇವರ ಅಂಬೋಣ. ಇದರಿಂದ ಹೊಸ ಪೀಳಿಗೆಯ ಜನ ದೇವಿಯ ಆಟವನ್ನು ಆಡೋದು ನಿಲ್ಲಿಸಿ, ಬೇರೆ ಬೇರೆ ವೃತ್ತಿಗಳಿಗೆ ಮೊರೆ ಹೋದರು. ಮೀನು ಬೇಟೆ, ಬೆಕ್ಕು ಹಿಡಿಯುವುದು, ಕೂಲಿ ನಾಲಿ ಮಾಡುವುದು, ಜಾತ್ರೆ ಉತ್ಸವಗಳಲ್ಲಿ ಬೆಂಡು ಬತ್ತಾಸು ಮಾರುವುದು, ದೊಡ್ಡದೊಡ್ಡ ಪಟ್ಟಣಗಳಿಗೆ ವಲಸೆ ಹೋಗಿ ದುಡಿಯುವುದನ್ನು ರೂಢಿಸಿಕೊಂಡಿರುವರು.

ಈ ತೆರನಾಗಿದ್ದ ಇದೊಂದು ಅಲೆಮಾರಿ ಜನಾಂಗ ತಮ್ಮದೇ ಆದ ದೇವರು, ಸಂಪ್ರದಾಯ, ಆಚರಣೆ, ಪ್ರದರ್ಶನ ಕಲೆಯನ್ನು ಹೊಂದಿದೆ. ಆಧರೆ ಇಂದು ಇದೆಲ್ಲ ನಶಸಿಹೋಗುತ್ತಿದೆ.

ಆಧುನಿಕತೆಯತ್ತ ದುರುಗಮುರುಗಿಯ ಮಹಿಳೆ :

ಅಲೆಮಾರಿಯಾದ ದುರಗಮುರಗಿಯರು ಮೂಲ ಊಳಿಗಮಾನ್ಯ ಪದ್ದತಿಯಿಂದ ಬಂದವರು. ಪ್ರಾರಂಭ ದೆಸೆಯಿಂದ ಇವರ ಬಡಿದಾಟ, ಸಂಘರ್ಷ ಎಲ್ಲ ತಮ್ಮ ಒಡೆಯನ ಮುಖ್ಯಸ್ಥನ ಸುಖ – ಸಂತೋಷಕ್ಕಾಗಿ. ತಮ್ಮ ಯಜಮಾನನಿಗಾಗಿ ಇವರ ಬದುಕು ಮೀಸಲಿತ್ತು. ಸ್ವಂತ ಆಸೆ, ಆಕಾಂಕ್ಷೆಗಳಿಲ್ಲದೆ ಸುಖದ ಕಲ್ಪನೆ ಇಲ್ಲದೆ, ಬೇರೆಯವರಿಗಾಗಿ ಬದುಕುತ್ತ ಬಂದ ಜೀವನ ಇವರದಾಗಿತ್ತು. ಇವರ ದುಡಿತ ಯಜಮಾನನಿಗಾಗಿಯೇ ಇವರ ಕಲೆಗಳೆಲ್ಲ ಕುಣಿತ, ವೇಷ, ಹಾಡು, ಈ ಮುಂತಾದವುಗಳೆಲ್ಲ ನಾಯಕನಿಗಾಗಿಯೇ ಮೀಸಲು. ಈ ಜನ ತಮ್ಮ ದೇಹವನ್ನು ನಾನಾ ರೀತಿಯಿಂದ ಹಿಂಸಿಸಿಕೊಂಡು, ಇತರರನ್ನು ಸಂತಸಪಡಿಸುವವರು. ತಮ್ಮ ಮೈಯಿಂದ ರಕ್ತ ಹರಿಸಿ ಇತರರಿಗೆ ಮನೋರಂಜನೆ ನೀಡುತ್ತ ಬಂದಿರುವವರು.

ಈ ಜನಂಗ ಊಳಿಗಮಾನ್ಯ ಪದ್ಧತಿಯ ಒಂದು ಪ್ರಮುಖ ದರ್ಶನ. ಇವರಿಗೆ ಯಜಮಾನನೇ ಸರ್ವಸ್ವ. ಯಜಮಾನ ತನ್ನ ಕಾಲಿಂದ ತೋರಿಸಿದ್ದನ್ನು ಇವರು ತಮ್ಮ ತಲೆಯಿಂದ ಮಾಡುವಂಥ ನಿಷ್ಟೆಯಿರುವ ಸ್ವಭಾವದವರು. ಮುಖ್ಯಸ್ಥನ ಒಂದು ಮೆಚ್ಚುಗೆಯ ಮಾತಿಗಾಗಿ ಪ್ರಾಣಿಗಳಂತೆ ಮೈ ಚರ್ಮವನ್ನು ಸುಲಿದುಕೊಳ್ಳುತ್ತ ಬಂದವರು ಇವರು. ಹೀಗೆ ಇವರ ಗತಕಾಲ ಜೀವನವಾದರೆ, ಇಂದು ಇವರ ಆ ಅಂದಿನ ನಾಯಕ ಇಲ್ಲ. ನಾಯಕನ ಎಲ್ಲ ಧೋರಣೆಗಳು ಈಗಿನ ಕಾಲದಲ್ಲಿ ಪರಿವರ್ತನೆಗೊಂಡಿವೆ. ಕಾಲಕಳೆದಂತೆಲ್ಲ ನಾಯಕನ ಸುಖ – ಸಂತೋಷ ಮನೋರಂಜನೆಯ ಪರಿಕಲ್ಪನೆಗಳು ಬೇರೆಯಾಗಿವೆ. ಮನುಷ್ಯನ ಮನೋರಂಜನೆಯ ಸಾಧನಗಳು. ಬದಲಾಗಿ ಹಳೆಯ ಕಾಲದ ಕಲೆ, ಸಾಹಿತ್ಯ, ಸಂಭಾಷಣೆ ಕುಣೀತ, ವಾದ್ಯ, ಸಂಗೀತ ಇವೆಲ್ಲ ಮೂಲೆ ಗುಂಪಾಗಿ ಬಿಟ್ಟಿವೆ.

ಪರಂಪರಾನುಗತವಾಗಿ ಬಂದಿದ್ದ ಈ ಜನಾಂಗದ ಸಂಸ್ಕೃತಿ, ಕಲೆಯೆಲ್ಲಾ ನಶಿಸಿ ಹೋಗುತ್ತಿದೆ. ದೇಸಿತೆಯ ಸತ್ವ ಕುಂದುತ್ತಿದೆ. ಸಹಜವಾಗಿದ್ದ ಮಾನವ ಕಲೆಗಳು ಹಿಂದೆ ಸರಿಯತ್ತ ಮರೆಯಾಗುತ್ತಿವೆ. ಆದ್ದರಿಂದ ಈ ಹೊಸ ನಾಯಕನಿಗೆ ದುರಗಮುರಗಿಯರ ಕಲೆ, ಕುಣಿತ ಬೇಕಾಗಿಲ್ಲ. ಇದಕ್ಕೆ ಯಾವ ಬೆಲೆಯೂ ಇಲ್ಲದಂತಾಗಿದೆ. ಹೀಗಾಗಿ ಇವರ ಬದುಕು ಬಹಳ ಗಂಭೀರವಾಗಿದೆ.

ದೇವಿಯನ್ನು ನಂಬಿ ಅವಳನ್ನು ತಲೆ ಮೇಲೆ ಹೊತ್ತುಕೊಂಡು ಅಲೆಯುವ ಇವರು ಈಗ ತುಂಬಾ ಸಂಕಷ್ಟದಲ್ಲಿದ್ದಾರೆ. ಇಂದಿನ ಆಧುನಿಕತೆಗೆ ಮಾರು ಹೋಗಿ ಅದರ ಪ್ರಭಾವದಲ್ಲಿ ಇವರ ಕಲೆ ಸಂಸ್ಕೃತಿ ಕೊಚ್ಚಿಹೋಗಿದೆ. ಈ ಅಲೆಮಾರಿಗಳು ಅಧುನಿಕತೆಗೆ ಒಪ್ಪಿ ತಮ್ಮ ಅಲೆಮಾರಿ ಜೀವನಕ್ಕೆ ವಿದಾಯ ಹೇಳಿದ್ದಾರೆ.

ಒಂದಾನೊಂದು ಕಾಲದಲ್ಲಿ ಇವರ ಆಟದ ಆನಂದವನ್ನು ಸವಿಯಲು ಜನವರ್ಗ ಇತ್ತು. ಕುಣಿತ, ಹಾಡು, ಕಥೆಗಳನ್ನು ಕೇಳಲು ನೋಡಲು ಜನರ ಗುಂಪೇ ಸೇರುತ್ತಿತ್ತು. ಈ ಜನಾಂಗದ ಒಂದು ಹೆಣ್ಣು ಬುರು ಬುರು ವಾದ್ಯವನ್ನು ಬಾರಿಸುತ್ತ ಬಂದರೆ, ಅವಳ ಹಿಂದೆ ಮಕ್ಕಳ ಗುಂಪೇ ಹೊರಡುತ್ತಿತ್ತು. ಅಲ್ಲದೆ ಅವಳ ವಾದ್ಯದ ಸದ್ದಿಗೆ ಊರ ಜನರೆಲ್ಲ ಆಟ ನಡೆದಲ್ಲಿಗೆ ಓಡೋಡಿ ಬರುತ್ತಿದ್ದರು.

’ಆ ಹೆಣ್ಣು ಮರಗವ್ವಾ ಬಂದಾಳ ಬರ‍್ರೆಯವ್ವಾ.,.. ತಾಯಿ ಬಂದಾಲ ಬರ‍್ರೆಯವ್ವಾ ನೀರ  ತರ‍್ರೆಯವ್ವಾ…”ಎನ್ನುತ್ತಿದ್ದಳು.

ಪೋತುರಾಜನ ಹಾಹಾಹಾ ಎಂಬ ಕೇಕೆಗೆ ಅವನು ಲಡ್ಡು ಹೊಡೆದುಕೊಳ್ಳುವ ಸದ್ದಿಗೆ ಜನ ಜಾತ್ರೆಯಾಗಿ ನೆರೆಯುತ್ತಿದ್ದರು.

ನಿಮ್ಮ ಕೇರಿಗೆ ಸುಕಾ.. ಊರಿನ ಸುಕಾ. ಮರಿಮಕ್ಕಳ ಪುಟಾಣಿಗಳ ಸುಖ.. ತೂಗೋ ತೊಟಿಲಿಗಿ ಸುಕಾ.. ಬರ‍್ರೆಪೋ ಬರ‍್ರೀ…. ಎಂದು ಹಾಡುತ್ತ ಗೆಜ್ಜೆ ಕುಣಿಸುತ್ತ ಕುಣಿಯಲಾರಂಭಿಸಿದರೆ ಸಾಕು, ಜನರೆಲ್ಲ ಮೊರದಲ್ಲಿ ಜೋಳ, ಅಕ್ಕಿ, ದವಸಧಾನ್ಯ ಬಟ್ಟೆಬರಿ, ಮೆಣಸಿನಕಾಯಿ, ಬೆಲ್ಲ, ತೆಂಗು ಊದುಬತ್ತಿ ತಗೊಂಡು ದೇವಿ ದರ್ಶನಕ್ಕಾಗಿ ಬರುತ್ತಿದ್ದರು. ಆಗ ಪೋತುರಾಜ ಪೋತ್ಯಾ ಆಗಿರದೇ ಪೂಜಾರಿಯಾಗಿದ್ದ. ಜನರೆಲ್ಲ ಅಂದು ಇವನ ಬಗ್ಗೆ ಗೌರವ, ಆದರ, ಭಯ – ಭಕ್ತಿಯನ್ನಿಟ್ಟುಕೊಂಡಿದ್ದರು. ಕೆಳವರ್ಗದವರಂತೂ ಇವನಿಗೆ ಕೈ ಮುಗಿದು ಕಾಲುಮುಟ್ಟಿ ನಮಸ್ಕರಿಸುತ್ತಿದ್ದರು. ಅಲ್ಲದೇ ಇವನ ಮೈ ಮೇಲೆ ದೇವಿ ಬರುತ್ತಾಳೆಂದು ನಂಬಲಾಗಿತ್ತು. ಮಕ್ಕಳಂತೂ ಇವನ ಆರ್ಭಟ ವೇಷಕ್ಕೆ, ಹಕಾರಿಗೆ ಹೆದರಿ ನಡುಗುತ್ತಿದ್ದರು. ಪೋತುರಾಜನ ಹೆಸರನ್ನೇ ಮಕ್ಕಳಿಗೆ ಹೆದರಿಸಲು ತೆಗೆದುಕೊಳ್ಳಲಾಗುತ್ತಿತ್ತು. ಹೀಗೆ ತಮ್ಮ ಉಪಜೀವನ ಸಾಗಿಸುತ್ತ ಒಂದು ರೀತಿಯಲ್ಲಿ ಇವರು ಸುಖವಾಗಿದ್ದರು. ಯಾವುದೇ ಚಿಂತೆ ಸಂಘರ್ಷಗಳಿಲ್ಲದೆ,  ನಿಶ್ಚಿಂತೆಯಿಂದ ದಿನಗಳನ್ನು ಕಳೆಯುತ್ತಿದ್ದರು.

ಇವರ ಮೂಲ ಉದ್ದೇಶ ತಮ್ಮ ಜಾತಿಯ ದೇವಿ ಪ್ರಚಾರ, ಮಹಿಮೆಯನ್ನು ಎಲ್ಲರಿಗೂ ಮನದಟ್ಟಾಗುವಂತೆ ಸಾರುವುದು ಅವಳ ಸಿಟ್ಟು, ಆಕ್ರೋಶ, ಶಾಪದ ಬಗ್ಗೆ ತಿಳಿಸುವುದು.

ಈ ರೀತಿ ಒಂದು ಕಾಲಕ್ಕೆ ಹಿಂಸೆ, ರಕ್ತ ಕಂಡು ಖುಷಿ ಪಡುವ ಜನ ಈಗ ಇಂಥದ್ದನ್ನು ಕಂಡು ಅಸಹ್ಯಪಡುತ್ತಾರೆ. ಇದನ್ನೆಲ್ಲ  ನಿಲ್ಲಿಸಲೆಂದೇ ಹಣ ಕೊಡುತ್ತಾರೆ. ಎಂದಿನಿಂದ ಈ ಜನ ಪರಿವರ್ತನೆಯ ದಾರಿ ಹಿಡಿದು ಹೊರಟರೋ, ಅಂದಿನಿಂದ ಜೀವನ ವಿಧಾನವು ಬದಲಾಯಿತು.

ಸಾಮಾಜಿಕ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡು ಅದಕ್ಕೆ ಅನಿವಾರ್ಯವಾಗಿ ತಲೆಬಾಗಿ ಬದುಕುತ್ತ ಬಂದರು.

ಮೊದಲಿನ ಹಂತದಲ್ಲಿ ದೇವಿಯನ್ನು ಒಲಿಸಿಕೊಳ್ಳುವ, ಆರಾಧಿಸುವ ಇವರ ಕಲೆ, ಹೊಟ್ಟೆಯ ಉಪಜೀವನದ ದಾರಿಯಾಯಿತು. ಆದರೆ ಇದು  ಹೊಟ್ಟೆ ತುಂಬಿಸಲು ಅಸಮರ್ಥ ಎನಿಸಿತು. ಬದಲಾದ ಸಾಮಾಜಿಕ ಸಂದರ್ಭಗಳಲ್ಲಿ ಪಾರಂಪರಿಕ ವೃತ್ತಿ ಕಲೆಗಳನ್ನು ಉಳಿಸಿಕೊಂಡು ಜೀವನ ಸಾಗಿಸಲು ಕಷ್ಟವಾಯಿತು.

ಈ ಜನಾಂಗದ ಆರ್ಥಿಕ ಸ್ಥಿತಿಗತಿಯಂತೂ ದಾರುಣವಾಗಿದೆ. ಹಣ, ಹೊನ್ನು ಸಂಗ್ರಹವಂತೂ ಮೊದಲಿನಿಂದಲೂ ಇವರಲ್ಲಿ ಇಲ್ಲ. ತಮ್ಮ ದಿನನಿತ್ಯಕ್ಕೆ ಬೇಕಾಗುವ ಆಹಾರವು ಮಾತ್ರ ಇವರ ಸಂಪಾದನೆಯಾಗುತ್ತಿತ್ತು.

ಹಳ್ಳಿಯಲ್ಲಿ ಗೌಡ ಕುಲಕರ್ಣಿಯವರು ಕೊಡುವ ಹಳೆಯ ಬಟ್ಟೆ ಬರೆಗಳನ್ನು ಉಪಯೋಗಿಸುತ್ತಿದ್ದರು. ಅಲ್ಲದೇ ದೇವಿಗೆ ಕೊಟ್ಟ ಸೀರೆ, ಕುಪ್ಪಸ ನೈವೇದ್ಯಗಳು ಸಹ ಇವರು ಬಳಸುತ್ತಿದ್ದರು. ಹರಕೆ ಹೊತ್ತವರು ದೇವಿಗೆ ಬೆಳ್ಳಿ ತೊಟ್ಟಿಲು, ಬಟ್ಟಲು, ಕಣ್ಣು ಬಟ್ಟಲು, ಬೆಳಗಳಿ ಡಾಬು, ಬೆಳ್ಳಿಪಾದ, ಕಾಲುಂಗರ, ನತ್ತು ಮೊದಲಾದವುಗಳನ್ನು ನೀಡುತ್ತಿದ್ದರು.

ಪೋತುರಾಜ ಹಾಗೂ ಅವನ ಹೆಂಡತಿ ಪೋಚಮ್ಮಳಿಗೆ ಸೀರೆ, ಗಂಟಿಸರ, ಕಾಲಿಗೆ ಗೆಜ್ಜೆಸರ ಬಹುಮಾನವಾಗಿ ಕೊಡುತ್ತಿದ್ದರು.  ಇವರು ಹಣವನ್ನು ಕೇಳುತ್ತಿರಲಿಲ್ಲ. ಒಂದು ರೀತಿಯಿಂದ ಹಾಯಾಗಿ ಸುಖದಲ್ಲಿ ನಿಶ್ಚಿಂತೆಯಿಂದ ದಿನಗಳು ಕಳೆಯುತ್ತಿದ್ದವು.

ಆಧುನಿಕ ಕಾಲದಲ್ಲಿ ದುರಗಮುರಗಿಯರು ಬದಲಾವಣೆಯತ್ತ ತಿರುಗುತ್ತಿದ್ದಾರೆ. ದೇವಿಯನ್ನು ಕುರಿತು ಭಯ, ಭಕ್ತಿ ಶ್ರದ್ಧೆಗಳು ಕಡಿಮೆಯಾಗುತ್ತಿವೆ. ಇಂದು ಈ ಜನಾಂಗ ತಮ್ಮ ಆಟವನ್ನೇ ವೃತ್ತಿಯಾಗಿ ಮುಂದುವರೆಸಿಕೊಳ್ಳುವುದು ಕಷ್ಟವಾಗಿದೆ. ದೇವಿಯನ್ನು ಹೆಂಗಸರು ತಲೆ ಮೇಲೆ ಹೊತ್ತುಕೊಂಡು ಮನೆ ಮನೆಗೆ ಹೋದರೆ ಕಾಣಿಕೆ ಬಹುಮಾನಗಳ ಬದಲಾಗಿ ಭಿಕ್ಷೆ ಕೇಳುವ ಪದ್ಧತಿ ಒದಗಿ ಬಂದಿದೆ. ಹೀಗಾಗಿ ಇವರು ತಮ್ಮ ಕಲೆಯನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಈ ಸಮಾಜದ ಬಹುಪಾಲು ಜನ ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿ ಒಂದು ರೀತಿಯಲ್ಲಿ ಹೆಚ್ಚಿನ ಸಂಪಾದನೆಯನ್ನು ಮಾಡುತ್ತಿದ್ದಾರೆ. ಅವರಲ್ಲಿಯೂ  ಕೆಲವು ಪ್ರಗತಿಪರ ವಿಚಾರವನ್ನು ಕಾಣಬಹುದು. ನಾವು ಏಕೆ ಬೇರೆ ಬೇರೆ ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳಬಾರದೆಂದು ಹೊಸ ತಲೆಮಾರಿನ ಜನ ಯೋಚಿಸಿ ತಮಗೆ ಸರಿಹೊಂದಿದ ವೃತ್ತಿಯನ್ನು ಕೈಗೊಂಡಿದ್ದಾರೆ, ಆದರೆ ಇದು ಕೂಡ ಕಷ್ಟದಾಯಕವಾಗುತ್ತಿದೆ.

ಈ ಜನ ಪರಿವರ್ತನೆಯ ದಾರಿ ಹಿಡಿದು ಹೊರಟಾಗ, ಅವರ ಜೀವನ ವಿಧಾನವು ಸಹ ಅನಿವಾರ್ಯವಾಗಿ ಬದಲಾಯಿತು.

ಇಂದಿನ ಸಾಮಾಜಿಕ ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳದೇ ಗತ್ಯಂತರವಿರಲಿಲ್ಲ. ವ್ಯವಸ್ಥೆಯನ್ನು  ಒಪ್ಪಿಕೊಂಡು, ಮೊದಲು ದೇವಿಗೆ ಸೀಮಿತವಾಗಿದ್ದ ಕಲೆಯನ್ನು ಹೊಟ್ಟೆ ಬಟ್ಟೆಗಾಗಿ ವೃತ್ತಿಯನ್ನಾಗಿಸಿಕೊಂಡು, ಸಧ್ಯ ಅದನ್ನು ಕೈ ಬಿಟ್ಟು ಬೇರೆ ಬೇರೆ ಕೆಲಸವನ್ನು ಹೊಟ್ಟೆಪಾಡಿಗಾಗಿ ನಿರ್ವಹಿಸಿಕೊಂಡಿದ್ದಾರೆ.

ಈ ಕಲೆಯಿಂದ ತನ್ನ ಕುಟುಂಬ ಬದುಕುವುದು ಅಸಾಧ್ಯವೆಂಬ ಸತ್ಯ ಮನಗಂಡು ಹೊಟ್ಟೆಗಾಗಿ ತನ್ನ ಮೂಲವನ್ನು ಬಿಟ್ಟು ಬೇರೆ ಬೇರೆ ಕಡಗೆ ಸೇರಲಾರಂಭಿಸಿದ್ದಾರೆ.

ಮೂಲ ಹಳ್ಳಿ, ತಾಲ್ಲೂಕು, ಜಿಲ್ಲೆ  ರಾಜ್ಯಗಳನ್ನು ಬಿಟ್ಟು ನೆರೆರಾಜ್ಯಗಳಲ್ಲಿ ಹೋಗಿದ್ದು ಕೆಲಸ ಮಾಡಲಾರಂಭಿಸಿದರು. ಅಲೆಮಾರಿಗಳಾದ ಇವರಿಗೆ ಗುಳೇ ಹೋಗುವುದೇನೂ ಹೊಸದಾಗಿರಲಿಲ್ಲ. ಆದರೆ ಬೇರೆ ಬೇರೆ ರಾಜ್ಯ, ಜಿಲ್ಲೆ, ಜನರ ಪರಿಸರದಲ್ಲಿ ತಕ್ಕಂತೆ ಹೊಂದಿಕೊಂಡು ಬಾಳುವ ಬವಣೆ ಪಡಬೇಕಾಯಿತು.

ಪರರಾಜ್ಯದಲ್ಲಿ ಕುಟುಂಬದೊಂದಿಗೆ ವಾಸಿಸುತ್ತ ಪರಭಾಷೆ ಕಲಿಯುತ್ತ, ಅದೇ ಭಾಷೆಯಲ್ಲಿ ಭಿಕ್ಷೆ ಬೇಡುತ್ತ, ಆಗಾಗ ಅಲ್ಲಲ್ಲಿ ತಮ್ಮ ಮೂಲ ಕಲೆಯನ್ನು ಪ್ರದರ್ಶಿಸುವುದು ಇವರಿಗೆ ಅಗತ್ಯವಾಯಿತು.