ಅಲೆಮಾರಿ ಜನಾಂಗ :

ಮೂಲತಃ ಅಲೆಮಾರಿಗಳಾದ ಈ ಜನ ಹಿಂದೆ ಯಾವುದೇ ಹಳ್ಳಿಯಲ್ಲಿ ಪ್ರವೇಶಿಸಿ ವಾಸಿಸುತ್ತಿರಲಿಲ್ಲ. ಊರ ಹೊರಗಡೆ ಬಯಲು ಪ್ರದೇಶದಲ್ಲಿ ಗುಡಿಸಲು ಹಾಕಿಕೊಂಡು ಬದುಕುತ್ತಿದ್ದರು. ಕಾಡಿನಲ್ಲಿಯೂ ಇವರು ಗುಡಿಸಲು ಹಾಕಿಕೊಂಡೇ ವಾಸಿಸುತ್ತಿದ್ದರು. ಯಾವುದೇ ಒಂದು ಊರಿಗೆ ಹೋದರೂ ಅಲ್ಲಿ ಒಂದು ವಾರ ಅಥವಾ ಹದಿನೈದು ದಿನವಷ್ಟೇ ಇದ್ದು, ಮತ್ತೆ ಮುಂದಿನ ಊರಿಗೆ ಪಯಣ. ಊರ ಹೊರಗಿನ ಬಯಲಿನಲ್ಲಿ ಡೇರೆ ಹಾಕಿಕೊಂಡು ನಂತರ ತಾವು ಬಂದ ವಿಷಯ, ತಮ್ಮ ಕುಟುಂಬದಲ್ಲಿದ್ದವರ ಸಂಖ್ಯೆ ಸಂಬಂಧ ಈ ರೀತಿಯ ವಿವರಗಳನ್ನು ಊರಿನ ಗೌಡರಿಗೆ ತಿಳಿಸಿ, ತಾವು ಇರುವಷ್ಟು ದಿವಸ ದೇವಿ ಆಟ ಆಡಿಸಿ ಭಕ್ತರಿಂದ ಬಂದ ಕಾಣಿಕೆಗಳನ್ನು ಸ್ವೀಕರಿಸಿ, ಮುಂದೆ ಬೇರೊಂದು ಊರಿಗೆ ಪಯಣ ಬೆಳೆಸುತ್ತಾರೆ. ಇವರಲ್ಲಿ ದನ, ಕರು, ಕುರಿ, ಕೋಳಿ, ಹುಂಜ ಸಾಕಣೆಯ ಪದ್ಧತಿಯೂ ಇದೆ. ಇದೆಲ್ಲ ಹೆಣ್ಣುಮಕ್ಕಳು ನೋಡಿಕೊಂಡು ಹೋಗುತ್ತಿದ್ದರು. ಚಳಿಗಾಲದಲ್ಲಿ ದವಸ-ಧಾನ್ಯಗಳಿಗೆ ರಾಶಿಗೆ ಎಂದು ಊರೂರು. ಹಳ್ಳಿ ಹಳ್ಳಿ ತಿರುಗಿದರೆ, ಬೇಸಿಗೆಯಲ್ಲಿ ಊರ ಮಧ್ಯೆ ಜನರ ಮುಂದೆ ದೇವಿ ಆಟ ಕಟ್ಟಿ ಕುಣಿದು ಭಿಕ್ಷೆ ಎತ್ತುತ್ತಾರೆ. ಒಂದು ರೀತಿಯಾಗಿ ಇವರು ಸಂಚಾರಿ – ಭಿಕ್ಷುಕರು, ಇವರಲ್ಲಿ ಮುದುಕ – ಮುದುಕಿಯರು ಗುಡಿಸಲುಗಳಲ್ಲಿಯೇ ಇದ್ದರೆ, ಹರೆಯದ ಗಂಡು ವೇಷಕಟ್ಟಿಕೊಂಡು, ಮುಖವಾಡ ಧರಿಸಿ, ಪೋತುರಾಜನಾದರೆ, ಹೆಣ್ಣುಗಳು ಡೋಲು ಬಾರಿಸುತ್ತ ಜೋಳಿಗೆ ಹಾಕಿಕೊಂಡು, ಗಂಡಸರೊಂದಿಗೆ ದುಡಿಯಲು ಹೊರಗೆ ಹೋಗುತ್ತಾರೆ. ಸಣ್ಣ ಸಣ್ಣ ಮಕ್ಕಳು ಕುಣಿಯುತ್ತಾ ತರಬೇತಿಯನ್ನು ಪಡೆಯುತ್ತಿರುತ್ತಾರೆ. ಹುಡುಗಿಯರು ಭಿಕ್ಷೆ ಬೇಡಿಕೊಳ್ಳುತ್ತ ತಮ್ಮ ತಾಯಿಗೆ ನೆರವಾಗುವರು. ಕೆಲವು ಸಲ ಎಳೆಗೂಸುಗಳನ್ನು ತಾಯಿ ಜೋಳಿಗೆಯಲ್ಲಿ ಮಲಗಿಸಿಕೊಂಡು ಹೆಗಲಿಗೆ ನೇತು ಹಾಕಿಕೊಂಡೇ ಬುರುಬುರು ವಾದ್ಯ ಬಾರಿಸುತ್ತಾಳೆ.

ಇದೊಂದು ಬುಡಕಟ್ಟು ಜನಾಂಗವಾಗಿರುವುದರಿಂದ ತಮ್ಮದೇ ಆದ ಭಾಷೆ – ವೇಷ ರೂಪ ರಚನೆ, ಆಚಾರ-ವಿಚಾರಗಳನ್ನು ರೂಢಿಸಿಕೊಂಡಿವೆ. ಒಂದೇ ಕುಟುಂಬದ ಸುಮಾರು ಮೂವತ್ತು, ನಲವತ್ತು ಜನರು ಬೇರೆ ಬೇರೆ ಗುಡಿಸಲುಗಳಲ್ಲಿ ಇರುವುದುಂಟು.

ಈ ಜನಾಂಗ ಕರ್ನಾಟಕದಲ್ಲಿ ಕಲಬುರ್ಗಿ, ಆಲಂದ, ಚಿತ್ತಾಪುರ, ಯಾದಗಿರಿ, ಶಹಾಪುರ, ಬೀರನಹಳ್ಳಿ, ಬೀದರ, ರಾಯಚೂರ ಮೊದಲಾದ ಕಡೆ ಇರುವರು. ಸಧ್ಯ ಕರ್ನಾಟಕದಲ್ಲಿ ಹತ್ತರಿಂದ ಮೂವತ್ತು ಸಾವಿರದವರೆಗೆ ಇವರ ಜನಸಂಖ್ಯೆ ಇದೆ.

ಬೇರೆಲ್ಲ ಬುಡಕಟ್ಟಿನಂತೆ ’ದುರಗಮುರಿಗಿ’ಯವರೂ ಕೂಡ (ಹಿಂದೆಲ್ಲ ಬೇಟೆಯನ್ನು ಆಹಾರದ ಮೂಲವನ್ನಾಗಿಸಿಕೊಂಡಿದ್ದರು). ಹೇಳಿ ಕೇಳಿ ಅಲೆಮಾರಿ ಜನಾಂಗ, ಕಾಡು ಹೆಚ್ಚು ಊರು ಕಡಿಮೆ ಎನ್ನುವಂತಿದ್ದ ದಿನಗಳವು. ಸಾಧಾರಣವಾಗಿ ಊರ ಮುಂದಿನ ಬಯಲಲ್ಲಿ ಕಾಡಿನ ಸೆರಗಿನಲ್ಲಿ ಇವರ ಬದುಕು. ರಾಶಿಯ ದಿನಗಳಲ್ಲಿ ಹೊಲಕ್ಕೆ ಕೆಲಸಕ್ಕಾಗಿ ಹೋಗುವುದು ಇದೆ. ರಾಶಿ ನಡೆದಲ್ಲೆಲ್ಲ ಹೋಗಿ ದೇವಿಯ ಹೆಸರಿನ ಮೇಲೆ ದವಸ ಧಾನ್ಯ ಬೇಡಿ ತರುತ್ತಾರೆ. ಕಾಡೆಲ್ಲ ಅಳೆದು ನಾಡಾಗುತ್ತಿರುವ ಈ ದಿನಗಳಲ್ಲಿ ಇವರಿಗೆ ಬೇಟೆಯಿಂದ ಬದುಕು ನಡೆಯುವುದಿಲ್ಲ. ಹೆಚ್ಚಾಗಿ ಭಿಕ್ಷೆಯನ್ನೇ ತಮ್ಮ ಬದುಕಿಗೆ ಮೂಲಾಧಾರವಾಗಿಟ್ಟುಕೊಂಡು ತಿರುಗುತ್ತಿರುತ್ತಾರೆ. ಭಿಕ್ಷೆಯಲ್ಲಿಯೂ ಮೂರು ವಿಧಗಳುಂಟು. ಗಂಡು – ಹೆಣ್ಣುಗಳಿಬ್ಬರು ಇದನ್ನು ಅನುಸರಿಸಿರುವರು. ಒಂಟಿಯಾಗಿ ಗಂಡಸು ಊರ ಸಂತೆಗಳಲ್ಲಿ ಮಾರುಕಟ್ಟೆಗಳಲ್ಲಿ, ಪ್ರಮುಖ ಬೀದಿಗಳಲ್ಲಿ ಪೋತುರಾಜನಾಗಿ ಕುಣಿದು ಆರ್ಭಟಿಸಿ ಬಾರುಕೋಲಿನಿಂದ ಮೈಗೆ ಬಡಿದುಕೊಳ್ಳುತ್ತ ಭಿಕ್ಷೆ ಕೇಳುವುದು.

ಎರಡನೆಯ ರೀತಿ  ಎಂದರೆ, ಹೆಂಗಸು ಒಂಟಿಯಾಗಿಯೇ ತಲೆಯ ಮೇಲೆ ಮರುಗಮ್ಮನ ಗುಡಿಹೊತ್ತು ಕೊಂಡು ಬುರುಬರು ವಾದ್ಯ ಬಾರಿಸುತ್ತ ಊರಲ್ಲಿಯ ಮನೆಗಳ ಮುಂದೆ ನಿಂತು ಭಿಕ್ಷೆ ಬೇಡುವುದಿದೆ. ಅವಳು ಹೆಚ್ಚಾಗಿ ಮಾರ್ಕೆಟಿಗೆ ಹೋಗುವುದಿಲ್ಲ. ನಗರದ ಗಲ್ಲಿ ಗಲ್ಲಿ, ಓಣಿ ಬೀದಿಗಳಲ್ಲಿ ತಿರುಗುತ್ತ ಪ್ರತಿಯೊಂದು ಮನೆ ಮುಂದೆ ನಿಂತು ಬೇಡಿ ಕೇಳುತ್ತಾಳೆ, ಗೋಗರೆಯುತ್ತಾಳೆ. ಇವಳನ್ನು ’ಬುರುಬುರು ಪೋಚಮ್ಮ’ ಎಂದೇ ಕರೆಯುತ್ತಾರೆ. ಇವಳು ಹೊತ್ತಿದ್ದ ದೇವಿ ಗುಡಿ ದೊಡ್ಡದಾಗಿದ್ದು ಕಟ್ಟಿಗೆಯ ಸಣ್ಣ ಅಲಮಾರುಗಳಂತೆ ಇರುತ್ತಿದ್ದವು. ಆದರೆ ಇಂದು ಈ ಗುಡಿಗಳು ತೀರ ಸಣ್ಣದಾಗಿ ಹಗುರಾಗಿ, ಹೆಣ್ಣುಮಗಳು ನಿರಾಯಾಸಾಗಿ ನೆತ್ತಿಯ ಮೇಲಿಟ್ಟುಕೊಳ್ಳಲು ಅನುಕೂಲವಾಗುವಂತೆ ಮಾಡಿರುತ್ತಾರೆ. ಬುರುಬುರು ಪೋಚಮ್ಮನ ನೆತ್ತಿಯ ಮೇಲೆ ಗುಡಿ, ಕೊರಳಲ್ಲಿ ಬುರುಬುರು ವಾದ್ಯ ಹೆಗಲಿಗೆ ಜೋಳಿಗೆ  ಇರುತ್ತದೆ. ಕೆಲವು ಸಲ ಪ್ರತ್ಯೇಕ ಜೋಳಿಗೆಯಲ್ಲಿ ತನ್ನ ಹಸುಗೂಸನ್ನು ಮಲಗಿಸಿಕೊಂಡಿರುತ್ತಾಳೆ. ಅದು ಸರಿಯಾಗಿ ಅವಳನ್ನು ಅಪ್ಪಿಕೊಂಡು ಮಲಗಿರುತ್ತದೆ.

ಮನೆಯವರಿಗೆಲ್ಲ ಕೇಳುವಂತೆ ಅವಳು ಗಟ್ಟಿ ದನಿಯಲ್ಲಿ ’ತಾಯಿ ಬಂದಾಳಪ್ಪೋ ಕೌಂಟಿಗಿ ಮರುಗಮ್ಮ ಬಂದಾಳೆವ್ವೋ… ಇವತ್ತು ಶುಕ್ರವಾರ ಅದಾ ಎವ್ವ.. ಬಾಗಿಲು ತೆಗೀರೀ.. ಜ್ವಾಳ ತಂದು ನೀಡ್ರೆವ್ವೋ ತಾಯೀ….. ನಿಮ್ಮ ಮನ್ಯಾಗ ತೊಟ್ಟಿಲು ತೂಗಲಿ, ಬೆಳ್ಳಿ ಬಟ್ಟಲಾಡಲೀ.. ಬಂಗಾಋದ ನಂದಾದೀಪ ಬೆಳಗಲೆವ್ವೋ ತಾಯೀ… ಬರ‍್ರೀ ಬರ‍್ರೀ ಭಿಕ್ಷಾ ತರ‍್ರೆವ್ವೋ.. ಎಂದು ಹಾಡುತ್ತಾಳೆ.

ಇವಳ ದನಿಯೂ ತಾರಕಕ್ಕೇರುತ್ತ, ಜೊತೆಗೆ ವಾದ್ಯದ ಕರ್ಕಶ ಸದ್ದು ದೂರ ದೂರದವರೆಗೆ ಪೋಚಮ್ಮನ ಬರುವಿಕೆಯನ್ನು ಸಾರುತ್ತದೆ. ಜನರು ಆದಷ್ಟು ಬೇಗ ಈ ಕಿರಿಕಿರಿ ತೊಲಗಿದರೆ ಸಾಕು ಎಂಬಂತೆ ಒಮ್ಮೆ ದೇವಿಯ ಭಿಕ್ಷೆಯಿಂದೆಂಬಂತೆ ಮತ್ತೊಮ್ಮೆ, ಅಂತೂ ಭಿಕ್ಷೆ ತಂದು ಹಾಕುತ್ತಾರೆ, ತನ್ನ ಜೋಳಿಗೆಯಲ್ಲಿ ಭಿಕ್ಷೆ ಬಿದ್ದಾದ ಮೇಲೆಯೂ ಒಮ್ಮೊಮ್ಮೆ ಇವಳು ಕೈ ಜೋಡಿಸಿ ಯವ್ವೋ… ಹಸಿ ಬಾಣಂತಿ ಇದ್ದೀನಿ ನಾನು. ಹಡದು ಹನ್ನೊಂದಿನ ಆಯ್ತೆವ್ವ.. ಹಸುಗೂಸಿನ ನೆತ್ತಿಗೊಂದೀಟು ಎಣ್ಣೆ ಕೊಡ್ರೀ ತಾಯೀ.. ಬಿಸಿದೊಂದು ರೊಟ್ಟಿ ಇದ್ದರ ಕೊಡ್ರೀ ನನ್ನವ್ವಾ… ತಿಂದು ನೀರು ಕುಡಿತೀನಿ…. ನೀವು ಉಟ್ಟುಬಿಟ್ಟಿರೋ ಹಳಿ ಸೀರಿ ಇದ್ರ ಕೊಡೇ ನನ್ನ ಹಡದವ್ವಾ.. ತಾಯಿ ನಿನಗ ಹರಕಿ ಕೊಡ್ತಾಳ…. ನಿನ್ನ ವಂಶದ ಬಳ್ಳಿ ಹಂದರೇರ‍್ತದ ನಿನ್ನ ಮನ್ಯಾಗ ಹಾಲುಕ್ಕಿ ಹಳ್ಳಾ ಹರೀತಾದ…. ಧರ್ಮಾ ಮಾಡವ್ವೋ ತಾಯೀ… ಎಂದು ಹಟ ಹಿಡಿಯುತ್ತಾಳೆ.

ಮೂರನೆಯ ಪದ್ದತಿಯೆಂದರೆ, ಕೆಲವೊಮ್ಮೆ ಗಂಡ-ಹೆಂಡತಿ ಇಬ್ಬರೂ ಕೂಡಿಯೇ ಭಿಕ್ಷೆಗೆ ಹೊರಡುತ್ತಾರೆ. ಯಥಾ ಪ್ರಕಾರ ಅವಳದು ವಾದ್ಯದ ಸಪ್ಪಳ, ಅವನದು ಗೆಜ್ಜೆ ಕಾಲದ ಕುಣಿತದೊಂದಿಗೆ ಹಾಹಾಹ್ಹಾ… ಎಂದು ಅಬ್ಬರಿಸುತ್ತಾ ಕೇಕೆ ಹಾಕುವ ಕರ್ಕಶ ಧ್ವನಿಗಳು ಮಕ್ಕಳನ್ನು ಹೆದರಿಸ್ತವೆ.

ಈ ದುರಗಮುರಗಿಯ ಹೆಂಗಸರು ನೆತ್ತಿಯ ಮೇಲೆ ಹೊತ್ತುಯ್ಯುವ ದೇವಿ ಗುಡಿಗಳಲ್ಲಿಯೂ ಮೂರು ವಿಧಗಳಿವೆ. ಅವು ಬುಟ್ಟಿ ದುರಗಮುರಗಿಯರು, ಪೆಟ್ಟಿಗೆ ದುರಗಮುರಗಿಯರು, ಗಾಡಿ ದುರಗಮುರಗಿಯರು.

ಬುಟ್ಟಿ ದುರಗಮುರಗಿಯರಲ್ಲಿ ಬುರುಬುರು ಪೋಚಮ್ಮ, ಎನ್ನುವವರು ಮರುಗಮ್ಮದೇವಿಯ ಮೂರ್ತಿಯನ್ನು ಬುಟ್ಟಿಯಲ್ಲಿಟ್ಟುಕೊಂಡು ತಲೆಯ ಮೇಲೆ ಹೊತ್ತುಕೊಂಡು ಭಿಕ್ಷೆಗೆ ಹೊರಡುತ್ತಾರೆ.

ಪೆಟ್ಟಿಗೆ ದುರಗಮುರುಗಿಯರಲ್ಲಿ ಬುರುಬುರು ಪೋಚಮ್ಮಳು ದುರ್ಗಮ್ಮ ದೇವತೆಯನ್ನು ಪೆಟ್ಟಿಗೆಯಲ್ಲಿಟ್ಟುಕೊಂಡು ತಲೆಮೇಲೆ ಹೊತ್ತು ಭಿಕ್ಷೆ ಬೇಡುತ್ತಾರೆ.

ಇನ್ನು ಅಲಂಕೃತ ಗಾಡಿ ದುರಗಮುರಗಿಯರಲ್ಲಿ ಸಣ್ಣ ಕೈಗಾಡಿಯೊಂದರಲ್ಲಿ ಮರುಗಮ್ಮ ದೇವತೆಯನ್ನು ಕೂಡಿಸಿಕೊಂಡು ಊರಲ್ಲಿ ಸುತ್ತುತ್ತಾರೆ. ಕೊನೆಗೆ ಊರ ಕಟ್ಟಕಡೆಯ ಅಗಸಿ ಬಾಗಿಲಲ್ಲಿ ಗಾಡಿಯನ್ನು ತರುತ್ತಾರೆ. ಹೀಗೆ ದೇವಿಯನ್ನು ಊರು ಸುತ್ತಿಸಿ ಹೊರಗೊಯ್ದರೆ ತಮ್ಮೂರಲ್ಲಿಯ ರೋಗ ರುಜಿನಗಳನ್ನೆಲ್ಲ ಮರಗಮ್ಮ ದೇವಿಯ ಗುಡಿಸಿ ಕೊಂಡೊಯ್ದು ಹೊರಹಾಕುತ್ತಾಳೆಂದೂ, ಆ ಊರಿಗೆ ಶುಭವಾಗುತ್ತದೆಂದೂ ಊರಿನವರ ನಂಬಿಕೆಯಿದೆ, ಈ ನಂಬಿಕೆಯನ್ನು ದುರಗಮುರಗಿಯರು ತಮ್ಮ ಭಿಕ್ಷೆಗಾಗಿ ಉಪಜೀವನಕ್ಕಾಗಿ ಬಳಸಿಕೊಳ್ಳುತ್ತಾರೆ.

ದುರಗಮುರಗಿಯರು ಮೂಲದಲ್ಲಿ ಬೇಟೆಯನ್ನು ತಮ್ಮದಾಗಿಸಿಕೊಂಡ ಜನಾಂಗ. ಇವರು ಸಸ್ಯಾಹಾರ ಮತ್ತು ಮಾಂಸಾಹಾರಿಗಳೂ. ಇವರಲ್ಲಿ ದೇವಿಗೆ ಕುರಿ – ಕೋಳಿಗಳನ್ನು ಬಲಿ ಕೊಡುವುದಿದೆ. ದೇವಿ ಆಟವನ್ನು ವೃತ್ತಿಯಾಗಿಸಿಕೊಂಡ ಮೇಲೂ ಸಹ ಬೇಟೆಯನ್ನು ಕೆಲವರು ಮುಂದುವರೆಸಿಕೊಂಡು ಹೋಗಿರುತ್ತಾರೆ. ಬೆಕ್ಕುಗಳನ್ನು ಹಿಡಿದು ಮಾರಾಟ ಮಾಡುವುದೂ ಇದೆ. ಮೀನು ಹಿಡಿಯುವದಂತೂ ಪಾರಂಪರಿಕ ಕಸುಬು. ಅಂತೆಯೇ ಇವರಿಗೆ ಮೀಂಗುಳಿಗರು, ಗಂಗಾಮತದವರೆಂದೂ ಕರೆಯಲಾಗಿದೆ. ಮನೆಯಲ್ಲಿದ್ದ ಸ್ತ್ರೀಯರು – ಪುರುಷರು ಹಿಡಿದು ತಂದ ಮೀನುಗಳನ್ನು ಬುಟ್ಟಿಯೊಳಗೆ ಹಾಕಿ ಸ್ವಚ್ಛ ಮಾಡುತ್ತಾರೆ. ಅವನ್ನು ಒಣಗಿಸುವ ಕೆಲಸವೆಲ್ಲ ಸ್ತ್ರೀಯರದು. ಅಲ್ಲದೇ ಮೊಲ, ಪಾರಿವಾಳ, ಕಾಡಬೆಕ್ಕು, ಬುರ್ಲಿ ಇತ್ಯಾದಿಗಳನ್ನು ಬೇಟೆಯಾಡಿ ತಂದಾಗ ಮನೆಯಲ್ಲಿ ಅದರ ಅಡಿಗೆ ಮಾಡುವುದು ಸ್ತ್ರೀಯರ ಪಾಲಿನದು. ಮಂಗಳವಾರ – ಶುಕ್ರವಾರವನ್ನು ದೇವಿ ವಾರವೆಂದು ಕರೆದು,  ಹೆಂಗಸರು ಮನೆ ಮನೆಗೆ ಹೋಗಿ ಭಿಕ್ಷೆ ಬೇಡುತ್ತಾರೆ. ಆ ದಿನ ಕೋಳಿಯನ್ನು ಬಲಿಕೊಡುವುದುಂಟು. ನಂತರ ದೇವಿ ಪೂಜೆ ಮಾಡಿ ನೈವೇದ್ಯ ಅರ್ಪಿಸಿ, ಕುಟುಂಬದ ಬಂಧು – ಬಳಗದವರೆಲ್ಲ ಸಾಮೂಹಿಕವಾಗಿ ಕುಳಿತು ಊಟ ಮಾಡುತ್ತಾರೆ.

ಆಯಾ ಪ್ರದೇಶದಲ್ಲಿನ ಪ್ರಸಿದ್ಧ ಹೆಣ್ಣು ದೇವತೆಯ ಹೆಸರಿನಲ್ಲಿ ಬಲಿಕೊಡುವ ಅಥವಾ ದೇವರು ಮಾಡುವ ಪದ್ಧತಿಯಿದೆ. ಇವರ ಮನೆಯಲ್ಲಿ ಒಳ್ಳೆಯದಾಗಲೀ ಕೆಟ್ಟದಾಗಲೀ, ಮಾಂಸ – ಹೆಂಡ -ಸಾರಾಯಿ ಅವಶ್ಯವಾಗಿ ಇರುತ್ತದೆ.

ಸದ್ಯದಲ್ಲಿ ಈ ಜನಾಂಗದ ಹೆಣ್ಣುಮಕ್ಕಳು ಬಗಲಿಗೆ ಜೋಳಿಗೆ ಹಾಕಿಕೊಂಡು ಭಿಕ್ಷೆ ಬೇಡುತ್ತಾರೆ. ಹಬ್ಬಹರಿದಿನಗಳಲ್ಲಿ ಜಾತ್ರೆ – ಉತ್ಸವಗಳಲ್ಲಿ ಮಾತ್ರ ದೇವಿಯನ್ನು ತಲೆ ಮೇಲೆ ಹೊತ್ತುಕೊಂಡು ಆಟಕ್ಕೆ ಹೋಗುತ್ತಾರೆ. ಆಗ ಮಾತ್ರ ವಿಶೇಷ ಸಂಪಾದನೆ ಆಗಿ ಮೂರು ನಾಲ್ಕು ದಿನ ನಿಶ್ಚಿಂತೆಯಿಂದ ಕಳೆಯುತ್ತಾರೆ. ಉಳಿದ ದಿನಗಳಲ್ಲಿ ಆಹಾರ ಹೊಂದಿಸುವುದು, ಮಕ್ಕಳನ್ನು ಬೆಳೆಸುವುದು ಬಹಳ ಕಷ್ಟದಾಯಕ.

ರೂಢಿರಿವಾಜುಗಳು :

ಮದುವೆ ಮತ್ತು ತೆರು ಪದ್ಧತಿ : ಹಿಂದೆ ನಮ್ಮ ಮೂಲ ದ್ರಾವಿಡ ಜನಾಂಗದಲ್ಲಿ ಇಂದಿನ ಹಾಗೆ ವರದಕ್ಷಿಣೆ ಪದ್ಧತಿ ಇರಲಿಲ್ಲ. ಅದರ ಬದಲಾಗಿ ಕನ್ಯಾದಕ್ಷಿಣೆ ಪದ್ಧತಿ ಜಾರಿಯಲ್ಲಿತ್ತು. ಮದುವೆಯಲ್ಲಿ ಹೆಣ್ಣನ್ನು ಹೆತ್ತವರಿಗೆ ಗಂಡಿನ ಕಡೆಯವರು ’ತೆರು’ (ದಕ್ಷಿಣೆ)ಯನ್ನು ಕೊಟ್ಟು ಕನ್ಯೆಯನ್ನು ತರುವ ಸಂಪ್ರದಾಯವಿತ್ತು. ವಿವಾಹದ ಪ್ರಯುಕ್ತ, ತಾಯಿ ಹೊಟ್ಟೆಯ ಸೀರೆ, ಅಜ್ಜಿ ಜವಳ ಸೀರೆ ತರಬೇಕಾದದ್ದು ಕಡ್ಡಾಯವಾಗಿತ್ತು. ಗಂಡಿನ ಕಡೆಯವರು ಮದುಮಗಳ ತಾಯಿಗೆ ಕೊಡುವ ಸೀರೆಯೇ ತಾಯಿಹೊಟ್ಟೆ ಸೀರೆ, ಇದೊಂದು ಬಹಳ ಬೆಲೆ ಬಾಳುವ ಸೀರೆಯಾಗಿರಬೇಕು. ಈ ಪದ್ಧತಿ ಈ ಸಂಸ್ಕೃತಿಯಲ್ಲಿ ಹೆಣ್ಣಿನ ಅಂದರೆ ತಾಯಿಯ ಪ್ರಾಮುಖ್ಯತೆಯನ್ನು ಎತ್ತಿ ತೋರುತ್ತದೆ. ಇನ್ನುಳಿದಂತೆ ಎಣ್ಣೆಪತ್ತಲು, ಅಕ್ಷತಾ ಸೀರೆ, ಮೆರವಣಿಗೆ ಸೀರೆ ಮೊದಲಾಗಿ ಕನಿಷ್ಟ ಒಂಬತ್ತು ಸೀರಗಳನ್ನಾದರೂ ತರಬೇಕಾಗುತ್ತಿತ್ತು. ಇಂಥ ಮದುವೆ ಪದ್ಧತಿ ದುರಗಮುರಗಿಯರಲ್ಲಿತ್ತು.

ಇವರ ಮದುವೆ ಸಾಮಾನ್ಯವಾಗಿ ಗಂಡಿನ ಮನೆಯಲ್ಲಿ ನಡೆಯುತ್ತದೆ. ಅಂದು ಐದು ದಿನಗಳ ಕಾಲ ದೀರ್ಘವಾಗಿ ಎಲ್ಲ ರೀತಿ ಸಂಪ್ರದಾಯಿಕವಾಗಿ ಮದುವೆ ನಡೆಯುತ್ತಿತ್ತು. ಒಂದೊಂದು ದಿನ ಒಂದೊಂದು ಶಾಸ್ತ್ರ. ಈ ಜನಾಂಗದಲ್ಲಿ ಒಳ್ಳು – ಒನಕೆಯ ಪೂಜೆ, ಶ್ಯಾಮಿಗೆ ಮಾಡುವ ಶಾಸ್ತ್ರ, ಬೀಸುಕಲ್ಲಿನ ಪೂಜೆ ಎಂದು ಐದು ದಿನಗಳ ಕಾಲ ನಡೆದು ಐದನೆಯ ದಿನ ಅಕ್ಕಿಕಾಳಿನ ಶಾಸ್ತ್ರ. ಅಂದು ಮದುಮಕ್ಕಳನ್ನು ಸುರಗಿಸುತ್ತಿ, ನೀರು ಹಾಕಿ, ಅರಿಶಿನ ಹಚ್ಚಿ, ಅದೇ ಬಣ್ಣದ ಪತ್ತಲನ್ನು ಹೆಣ್ಣಿಗೆ ತೊಡಿಸುತ್ತಿದ್ದರು. ಕೈಗೆ ಕಂಕಣ ಕಟ್ಟಿ ಸಂತೆ ’ಸ್ಯಾಸಿ’ಯ ಅಂದರೆ ಅಕ್ಕಿಕಾಳು ಹಾಕಿ ತಾಳಿಕಟ್ಟುವ ಚಾಜ ನೆರವೇರುತ್ತದೆ. ಇವೆಲ್ಲ ಚಾಜಾಗಳು ಬೆಳಿಗ್ಗೆ ಶುರುವಾಗಿ ಸಂಜೆಯ ಹೊತ್ತಿಗೆ ಮುಗಿಯುತ್ತಿದ್ದುದರಿಂದ ಇವರ ಮದುವೆಯ ಅಕ್ಕಿಕಾಳಿನ ಚಾಜ ಮೂರು ಸಂಜೆಯೇ ನಡೆಯುತ್ತಿತ್ತು. ಮದುವೆಯ ಮನೆಯಲ್ಲಿ ಮಹಿಳೆಯರದೇ ಹೆಚ್ಚಿನ ಕಾರುಬಾರು. ಹಾಡುವುದು, ಸುರಿಗಿ ಸುತ್ತುವುದು, ಅರಿಶಿನ ಹಚ್ಚುವುದು, ಹಸೆ ಹಾಕುವುದು, ಎಣ್ಣೆ ಹಚ್ಚುವುದು, ಹೀಗೆ ಮುತ್ತೈದೆಯರೇ ಈ ಎಲ್ಲ ಚಾಜಗಳನ್ನು ಮಾಡುತ್ತಾರೆ. ಪ್ರತಿಯೊಂದು ಚಾಜಕ್ಕೂ ಹಾಡುಗಳನ್ನು ಕಟ್ಟಿ ಹೆಣ್ಣುಮಕ್ಕಳು ಹಾಡುತ್ತಾರೆ.  ಬಹುತೇಕ ಹಾಡುಗಳೆಲ್ಲ ದೇವರ ಸ್ಮರಣೆಯಿಂದಲೇ ಆರಂಭವಾಗುತ್ತದೆ.

ಉದಾಹರಣೆಗೆ : ಮದುಮಕ್ಕಳಿಗೆ ಎಣ್ಣೆ ಹಚ್ಚಿ ನೀರೆರೆಯುವ ಹಾಡೊಂದು ಹೀಗೆ ಶುರುವಾಗುತ್ತದೆ.

ದೇವರ ದೇವರೆಣ್ಣಿ ದೇವರ ಮಾರಿಗೆಣ್ಣಿ
ಮನಿಯ ಲಗಸಿಮಿಗಿ ಮದಲೆಣ್ಣೆ
ಹರಿಹರ ನಮ್ ಸಿವಗ ನೈಯೆಣ್ಣೀ

ಮದುಮಕ್ಕಳಿಗೆ ಅಕ್ಕಿಕಾಳು ಹಾಕಿ ತಾಳಿ ಕಟ್ಟಿದ ನಂತರ ಹೆಣ್ಣಿನ ತವರವರು ಮದುಗಳನ್ನು ಗಂಡನ ಮನೆಯವರಿಗೆ ಒಪ್ಪಿಸಿಕೊಡುವ ಶಾಸ್ತ್ರವು ಇದೆ. ಆ ಮಗುವಿನ ಬಾಲ್ಯ, ಆಟಪಾಟ, ಆರೈಕೆ ಈ ಮೊದಲಾದ ಎಲ್ಲವನ್ನೂ ವಿವರಿಸುತ್ತ, ದುಃಖಿಸುತ್ತ ತಮ್ಮ ಮಗಳನ್ನು ಬೀಗರಿಗೆ ಒಪ್ಪಿಸಿಕೊಡುತ್ತಾರೆ. ಇದಕ್ಕೆ ’ಹೆಣ್ಣೊಪಿಸಿಕೊಡುವ ಚಾಜ ’ ಎಂದು ಕರೆಯುತ್ತಾರೆ.

ಈ ಜನಾಂಗದವರ ಮದುವೆಗಳಲ್ಲಿ ಆಚಾರಿಗಳಾಗಲಿ, ಪುರೋಹಿತರಾಗಲಿ, ಐನೋರಾಗಲಿ ಇರುವುದಿಲ್ಲ. ಮಂತ್ರಗಳ ಹಂಗಿಲ್ಲ, ಬಾಜಿ ಭಜಂತ್ರಿಗಳ ಆವಾಜಿಲ್ಲ, ಸನಾಧಿ ಬ್ಯಾಂಡಗಳ ಸದ್ದು ಗದ್ದಲವಿರುವುದಿಲ್ಲ ಇವರಿಗೆ ಬುರುಬುರು ವಾದ್ಯದ ಶಬ್ದದಲ್ಲಿ ಮದುವೆ ಸುಗಮವಾಗಿ ನಡೆಯುತ್ತದೆ.

ಮದುವೆಯಲ್ಲಿ ಈ ಜನಾಂಗಕ್ಕೆ ಮಾಂಸದೂಟ ಕಡ್ಡಾಯವಾಗಿರುತ್ತದೆ. ಕುರಿ ಕೋಳಿ, ಮೀನು, ಹಂದಿ ಬೆಕ್ಕು ಮಾಂಸ ಅಡಿಗೆ, ಈಚಲು ಅಥವಾ ತಾಡಿನ ಹೆಂಡದ ಕುಡಿತ ಇವೆರಡೂ ಪ್ರಮುಖ. ಮದುವೆಯ ಹೆಣ್ಣನ್ನು ಅವಳ ಸೋದರಮಾವನು ಬಗಲಲ್ಲಿ ಹೊತ್ತುಕೊಂಡು ಮದುವೆಯ ಹಂದರಕ್ಕೆ ತರಬೇಕು.

ಸಾಮಾನ್ಯವಾಗಿ ಇತರ ಜನಾಂಗಗಳಲ್ಲಿರುವ ಪದ್ಧತಿಗಳೇ ಈ ಜನಾಂಗಕ್ಕೂ ಅನ್ವಯಿಸುತ್ತವೆ. ಯಾವುದೇ ಆಢಂಬರವಿಲ್ಲದೇ, ಸರಳ ಸಾಧಾರಣ ಜನಪದ ಸಂಪ್ರದಾಯ ರೀತಿಗಳಲ್ಲಿ ಹೆಚ್ಚಿನ ಮಹತ್ವವನ್ನು ಕೊಡಲಾಗುತ್ತದೆ. ಇಂಥವುಗಳು ಅವರಿಗೆ ಬಹಳ ಮನೋರಂಜನೆಯನ್ನು ನೀಡುತ್ತವೆ. ಹೆಣ್ಣು ಮಕ್ಕಳ ಈ ಮದುವೆ ಚಾಜಾಗಳಲ್ಲಿ ಭಾಗಿಯಾಗಿರುವುದನ್ನು ಗೌರವವೆಂದು ಭಾವಿಸಿ ಸಂತಸ ಪಡುತ್ತಾರೆ.

ಬಾಲ್ಯವಿವಾಹ :

ಒಂದು ಮಗು ತಾಯಿಯ ಹೊಟ್ಟೆಯಲ್ಲಿರುವಾಗಲೇ ಹುಟ್ಟುವ ಮಗು ಹೆಣ್ಣಾದರೆ ನನ್ನ ಮಗನಿಗೇ ಕೊಟ್ಟು ಮದುವೆ ಮಾಡಬೇಕು ಎಂಬ ವಾಗ್ದಾನ ಮಾಡುವುದು ಇದೆ. ಆ ಗರ್ಭಿಣಿಯ ಹೊಟ್ಟೆಗೆ ಕುಂಕುಮ ಹಚ್ಚಿ ನಿಶ್ಚಯದ ಮಾತು ಮುಗಿಸಿ ಬಿಡುವ ಪದ್ಧತಿಯೊಂದು ಈ ಜನಾಂಗದಲ್ಲಿತ್ತು. ಇದು ಹೆಚ್ಚಾಗಿ ಹೆಣ್ಣುಮಗಳೊಬ್ಬಳು ತನ್ನ ತವರಿನಲ್ಲಿ ಅಣ್ಣನ ಹೆಂಡತಿ ಬಸುರಿಯಾದರೆ, ಈಗಾಗಲೇ ಹುಟ್ಟಿ ಬೆಳೆಯುತ್ತಿರುವ ತನ್ನ ಮಗನಿಗೆ ಅವಳು ಮುಂದೆ ಹೆರುವ ಮಗಳನ್ನು ತಂದುಕೊಳ್ಳುವುದಾಗಿ ಆ ಮನೆಯ ಹಿರಿಮಗಳು ನಿಶ್ಚಯಿಸುತ್ತಿದ್ದಳು. ತನ್ನ ತವರು ಮನೆಯ ಸಂಬಂಧ ಮುಂದುವರಿಸಿಕೊಂಡು ಹೋಗಬೇಕು ಮತ್ತು ಕಳ್ಳುಬಳ್ಳಿಯ ಸಂಬಂಧದಿಂದಾಗಿ ಮುಂದೆ ಬರುವ ಸೋದರ ಸೊಸೆಯೇ ಮನೆ ಸೊಸೆಯಾಗಿ ತನ್ನನ್ನು ಪ್ರೀತಿ ಮಮತೆಗಳಿಂದ ನೋಡಿಕೊಳ್ಳುತ್ತಾರೆ. ಎಷ್ಟಾದರೂ ಅಣ್ಣನ ಮಗಳು ಅನ್ನುವ ಅವಳೊಳಗಿನ ಸ್ವಾರ್ಥವೂ ಇಂಥ ಬಾಲ್ಯ ವಿವಾಹಗಳಿಗೆ ಕಾರಣವಾಗುತ್ತಿರಬೇಕು.

ಮೈನೆರೆಯುವದಕ್ಕೆ ಮುಂಚಿತವಾಗಿಯೇ ಮಗಳಿಗೆ ಮದುವೆ ಮಾಡುತ್ತಿದ್ದರು ಅಂಥ ಬಾಲ್ಯವಿವಾಹವೇ ಕಡ್ಡಾಯದ ಪದ್ಧತಿಯಾಗಿತ್ತು. ಯಾರ ಮನೆಯಲ್ಲಾದರೂ ಅಪ್ಪಿತಪ್ಪಿ ಮದುವೆಯಾಗದೆ ಮಗಳು ಮೈನೆರೆದಳೆಂದರೆ ಸುತ್ತಮುತ್ತಲಿನ ಕುಲದ ಮಂದಿ, ಅಂಥವರ ಮನೆ ಬಾಗಿಲಿಗೆ ಹಂಡೆ ಬಳಿಯುತ್ತಿದ್ದರು. ಅದೊಂದು ಕುಟುಂಬಕ್ಕೆ ಕಪ್ಪುಚುಕ್ಕೆ ತಮ್ಮ ಮಗಳನ್ನು ಋತುಮತಿಯಾಗುವವರೆಗೂ ಮದುವೆ ಮಾಡದೆ ಇರುವುದಕ್ಕೆ ಆ ತಾಯಿ ತಂದೆ ದಂಢ ವಿಧಿಸುತ್ತಿದ್ದರು. ಅಲ್ಲದೇ ಊರ ಪಂಚರು ಸೇರಿ ಕೆಲವೊಮ್ಮೆ ಉಗ್ರರೂಪ ತಾಳಿ ಬಹಿಷ್ಕಾರ ಹಾಕುವವರೆಗೂ ಹೋಗುತ್ತಿತ್ತು. ಹೀಗಾಗಿ ಹೆಣ್ಣು ಹೆತ್ತವರು ಮಗಳ ಮದುವೆಗಾಗಿ ಪರದಾಡುತ್ತಿದ್ದರು. ಗಂಡು ಎಂಥದ್ದಾದರೂ ಸರಿ ಮಗಳು ಮೈನೆರೆಯುವುದಕ್ಕೆ ಮೊದಲು ಮದುವೆ ಮಾಡಿ ಕೈ ತೊಳೆದುಕೊಂಡು ಬಿಡುತ್ತಿದ್ದರು. ಇಂಥ ನಂಬಿಕೆಗಳು ಬಾಲ್ಯ ವಿವಾಹಕ್ಕೆ ಇಂಬು ಕಟ್ಟಿದ್ದವೆಂದು ಕಾಣುತ್ತದೆ.

ಬಾಲ್ಯವಿವಾಹ ಪದ್ದತಿಯೊಂದು ಹೆಣ್ಣನ್ನು ಶೋಷಿಸುವ ಕ್ರೂರ ಪದ್ಧತಿ. ಇದೊಂದು ಅಂದಿನ ಸಂದರ್ಭದಲ್ಲಿ ವ್ಯವಸ್ಥೆಯಾಗಿತ್ತು. ಅಂದು ಹೆಣ್ಣಿನ ಸಂಖ್ಯೆ ಕಡಿಮೆಯಾಗಿದ್ದು ತೆರು ಪದ್ಧತಿಯಿತ್ತು. ಈ ತೆರುವಿನಲ್ಲಿ ಗಂಡಿನವರು ಹದಿನಾರು ಬೆಳ್ಳಿ ನಾಣ್ಯಗಳನ್ನು ತೆರುವಾಗಿ ಕೊಡುತ್ತಿದ್ದರು. ಆ ಮೇಲೆ ಅದು ಇಪ್ಪತ್ತೈದರಿಂದ ಮೂವ್ವತ್ತು ರೂಪಾಯಿಗಳಿಗೇರಿತ್ತು. ಆದರೆ ಈಗ ಈ ತೆರುವನ್ನು ಗಂಡಿಗೆ ಕೊಡಲಾಗಿದೆ ’ವರದಕ್ಷಿಣೆ’ ಎನಿಸಿದೆ.

ಋತುಮತಿ : ಸಾಮಾನ್ಯವಾಗಿ ದುರಗಮುರಗಿಯರಲ್ಲಿ ಒಂದು ಹೆಣ್ಣು ಮೈನೆರೆದರೆ ಮನೆಯ ಒಂದು ಮೂಲೆಯಲ್ಲಿ ಕೂಡಿಸುತ್ತಾರೆ. ಆ ಹುಡುಗಿ ಮನೆಯಲ್ಲಿ ಓಡಾಡಬಾರದು, ಯಾರಿಗೂ ಮುಟ್ಟಬಾರದು, ಹೊರಗೆ ಬರಬಾರದು. ಐದು ಜನ ಮುತ್ತೈದೆಯರು ದೂರದಿಂದಲೇ ಅವಳಿಗೆ ನೀರೆರೆಯುತ್ತಾರೆ. ಆದರೆ ಅದಕ್ಕಿಂತ ಮೊದಲು ಮನೆಯಲ್ಲಿ ಹಿರಿಯ ಹೆಣ್ಣುಮಗಳು ಆ ಮೈನೆರೆದ ಹೆಣ್ಣಿಗೆ ಮುಟ್ಟಿ ನೀರೆರೆದು ಸ್ನಾನ ಮೂಡಿಸಬೇಕೆಂಬ ರೂಢಿಯೂ ಇದೆ. ಇದಕ್ಕೆ ’ಮುಟ್ಟೆರೆಯುವುದು’ ಎನ್ನಲಾಗುವುದು. ಹಾಗೆ ಮುಟ್ಟೆರೆದವಳು ತಾನೂ ತಲೆಗೆರೆದುಕೊಂಡು ನಂತರವೇ ಮನೆಯೊಳಗೆ ಬರಬೇಕು.

ಐದು ದಿನಗಳವರೆಗೆ ಮುಡಚೆಟ್ಟೆಂದು (ಮೈಲಿಗೆ) ಆ ಹುಡುಗಿಗೆ ದೂರವೇ ಇಡಲಾಗುತ್ತದೆ. ದಿನವೂ ಆಕೆಗೆ ಕಡಬು, ಶಾವಿಗೆ, ಹುಗ್ಗೆ ಅಂತ ಸಿಹಿ ಅಡಿಗೆ, ಕೊಬ್ಬರಿ ಬೆಲ್ಲ ಬೆರೆಸಿ ತಿನ್ನಲು ಕೊಡಲಾಗುತ್ತದೆ. ಇದೆಲ್ಲ ಆಕೆಯ ದೈಹಿಕ ಸ್ಥಿತಿ ಸೂಕ್ಷ್ಮವಾಗಿರುವುದರಿಂದ, ಪೌಷ್ಠಿಕಾಂಶಗಳಾಗಿ ಕೊಡಲಾಗುತ್ತದೆ. ನಂತರ ಐದನೆಯ ದಿನ ಅವಳಿಗೆ ನೆತ್ತಿಗೆರೆದು ಹೊಸ ಸೀರೆ ಉಡಿಸಿ ಮನೆಯೊಳಗೆ ಕರೆದುಕೊಳ್ಳುತ್ತಾರೆ. ಅಂದು ಸಂಜೆ ಅವಳು ಮರಗಮ್ಮ ದೇವಿಯ ಗುಡಿಗೆ ಹೋಗಿ ಪೂಜೆ ಮಾಡಿ ನಮಸ್ಕರಿಸಿ ಬರುತ್ತಾಳೆ.

ಈ ಸಂದರ್ಭದಲ್ಲಿ ಆ ಹೆಣ್ಣಿಗೆ ಕಡುಬಿನ ಊಟ ಕೊಡುವುದಕ್ಕೂ ಒಂದು ವಿಶಿಷ್ಟ ಅರ್ಥ ಕಟ್ಟುತ್ತಾರೆ. ಈ ದಿನ ಗೋಧಿ ಹಿಟ್ಟಿನಿಂದ ಕಡಬು ಮಾಡಿ ಕುದಿಸುತ್ತಾರೆ. ಒಟ್ಟು ಐದು ಕಡಬು ಮಾಡಿ ಅವುಗಳಲ್ಲಿ ಒಂದೊಂದರಲ್ಲಿ ಅರಿಶಿಣದ ಬೋಟು, ಅಡಿಕೆ, ಬೆಳ್ಳೊಳ್ಳಿ ಉತ್ಪತ್ತಿಗಳನ್ನು ಇಟ್ಟಿರುತ್ತಾರೆ. ಒಂದನ್ನು ಮಾತ್ರ ಏನೂ ಇಡದೆ ಖಾಲಿಯಾಗಿ ಹಾಗೇ ಮಾಡಿ ತಿನ್ನಲು ಕೊಡುತ್ತಾರೆ. ಅವನ್ನು ತಿನ್ನಲು ತೆಗೆದುಕೊಂಡ ಮೊದಲ ಕಡುಬಿನಲ್ಲಿ ಮೇಲಿನ ಯಾವುದಾದರೂ ಒಂದು ಎಂದರೆ, ಅರಿಶಿನದ ಬೋಟು, ಉತ್ತತ್ತಿ, ಬೆಳ್ಳೊಳ್ಳಿ, ಅಡಿಕೆ ಇರಬೇಕು, ಹಾಗೆ ಅದು ಬಂದರೆ ಶುಭಲಕ್ಷಣವೆಂದೂ ಅವಳು ಮುಂದೆ ದೊಡ್ಡ ಹೆಂಗಸಾಗಿ ಹಣ್ಣು ನೀಡುವ ಮರದಂತೆ ಸಮೃದ್ಧಿಯಿಂದ, ಮಕ್ಕಳ ತಾಯಿಯಾಗಿ ಬದುಕುತ್ತಾಳೆ ಎಂದರ್ಥ. ಅಕಸ್ಮಾತ್ ಅವಳಿಗೆ ಮೊದಲ ಕಡಬು, ಏನನ್ನೂ ಇಡದೆ ಖಾಲಿ ಕಡಬು ಬಂದರೆ ಮುಂದೆ ಅವಳು ಫಲಕೊಡದೆ ಮರದಂತೆ ಬಂಜೆಯಾಗುತ್ತಾಳೆ ಎಂದು ನಂಬಿಕೆ ಇವರಲ್ಲಿದೆ.

ಅವಳಿಗೆ ತಿನ್ನುವುದಕ್ಕೆ ಕೊಡುವ ಈ ಕಡಬಿನ ಊಟ ಒಂದು ಸಂಕೇತವಾಗಿದೆ. ಆ ಹುಡುಗಿಯ ಹೆಣ್ತನವನ್ನು ಅಳೆಯುವ ಒಂದು ಪ್ರಮಾಣವಾಗಿದೆ. ಫಲಭರಿತ ಕಡುಬು ಅವಳ ತಾಯ್ತನದ ಸಂಕೇತ. ಹಾಗೆಯೇ ಖಾಲಿ ಕಡುಬು ಅವಳ ಬಂಜೆತನದ ಸಂಕೇತ ಎಂದು ಪರಿಗಣಿಸಲ್ಪಡುತ್ತದೆ. ಇದು ಕೂಡ ಒಂದು ಕಲೆಯೆಂದು ಹೇಳಬಹುದು. ಹೀಗೆ ಪರಿಪಾಲಿಸುವುದು ಮೂಢನಂಬಿಕೆಯಂತಾದರೂ ಆ ಜನಾಂಗದ ಸಂಸ್ಕೃತಿ ಆಚಾರವೆಂದೂ ತಿಳಿದುಕೊಳ್ಳಬಹುದು.

ತಾಯ್ತನ :

ಪ್ರತಿಯೊಂದು ಜನಾಂಗದಲ್ಲಿರುವಂತೆ ಇವರಲ್ಲಿ ತಾಯಿಯಾದ ಹೆಣ್ಣಿಗೆ ಹೆಚ್ಚಿನ ಮಹತ್ವವಿದೆ. ತಾಯ್ತನವು ಹೆಣ್ಣಿನ ಬದುಕಿಗೆ ಸಾರ್ಧಕತೆಯನ್ನು ಒದಗಿಸುತ್ತದೆ ಎಂಬ ನಂಬಿಕೆ ದಟ್ಟವಾಗಿದೆ. ಬಂಜೆ ಹೆಣ್ಣನ್ನು ಅನಾದರದಿಂದಲೇ ಕಾಣಲಾಗುತ್ತದೆ. ಬಂಜೆತನವೊಂದು ಹೆಣ್ಣಿಗೆ ನೀಡಿದ ಶಾಪವೆಂದೇ ಪರಿಗಣಿಸಲಾಗಿದೆ.

ಶಕ್ತಿಯೇ ಈ ಜನಾಂಗದವರ ಅಧಿದೇವತೆಯಾಗಿದೆ ನಿಜ. ಹಿಂದೆಲ್ಲ ಮಹಿಳೆಗೆ ಪ್ರಾಮುಖ್ಯತೆ ಇದ್ದರೂ ಕ್ರಮೇಣ ಈ ಜನಾಂಗ ಪಿತೃ ಪ್ರಧಾನವಾಗುತ್ತ ಬಂದಿದೆ. ಹೆಣ್ಣಿನ ಸ್ಥಾನ ಕುಸಿಯುತ್ತ ನಡೆದದ್ದು ಕಂಡು ಬರುತ್ತದೆ. ತಾಯಿಗಿಂತ ತಂದೆಯೇ ಶ್ರೇಷ್ಠ. ಅವನದೇ ಆಡಳಿತ, ಅಧಿಕಾರ, ದರ್ಪ, ದರ್ಬಾರು ಎಲ್ಲ. ತಾಯಿಗೆ ಎರಡನೆಯ ಸ್ಥಾನ. ಒಬ್ಬನಿಗೆ ಮಕ್ಕಳಾಗದಿದ್ದರೆ ಅದಕ್ಕೆ ಹೆಂಡತಿಯೇ ಹೊಣೆ ಎನ್ನುವ ಭಾವನೆ. ಬೇರೊಂದು ಹೆಣ್ಣನ್ನು ತಂದು ಅವನಿಗೆ ಮದುವೆ ಮಾಡುತ್ತಾರೆ. ಗಂಡಿನಲ್ಲಿ ಏನಾದರೂ ಕೊರತೆ – ದೋಷ ವಿರಬಹುದೆಂಬ ವಿಚಾರ ಅವರಿಗೆ ಬರುವುದೇ ಇಲ್ಲ. ಇವರು ವೈಜ್ಞಾನಿಕವಾಗಿ ವಿಚಾರ ಮಾಡುವ ಸಾಮರ್ಥ್ಯವಿಲ್ಲದವರು. ಕೌಟುಂಬಿಕವಾಗಿ ಏನಾದರೂ ಕೆಟ್ಟದಾದರೂ ಅದಕ್ಕೆಲ್ಲ ಹೆಣ್ಣೆ ಕಾರಣ ಎನ್ನುವ ಭಾವನೆ ಇವರಲ್ಲಿ ದೃಢವಾಗಿ ಬೇರೂರಿದೆ. ತಮ್ಮ ಮೂಲ ಆಚರಣೆಗಳನ್ನು, ನಂಬಿಕೆಗಳನ್ನು ಪಾಲಿಸಿಕೊಂಡು ಬಂದಿರುವ ಅಮಾಯಕ ಮುಗ್ಧ ಜನವರಿವರು. ಇವರಲ್ಲಿ ಅವೈಚಾರಿಕತೆ, ಮೌಢ್ಯ, ಅಶಿಸ್ತು, ಅವಿವೇಕ ಇಂಥ ಕೆಲ ದೌರ್ಬಲ್ಯಗಳು ಮನೆಮಾಡಿಕೊಂಡಿವೆ.

ಬಸಿರು ಬಾಣಂತನ :

ಒಂದು ಹೆಣ್ಣು ಬಸಿರಾದರೆ ತವರಿಗೆ ಸುದ್ದಿ ರವಾನಿಸಲಾಗುತ್ತದೆ. ತವರವರು ಬಂದು ಬೀಗರಿಗೆ ಹೆಂಡ ಕುಡಿಸಿ, ಮಗಳಿಗೂ ಕುಡಿಸಿ ತಾವೂ ಕುಡಿಯುತ್ತಾರೆ. ಮೂರು ತಿಂಗಳಲ್ಲಿ  ಕಳ್ಳ ಕುಪ್ಪಸವೆಂದು ಶಾಸ್ತ್ರ ಮಾಡುತ್ತಾರೆ. ಏಳನೆಯ ತಿಂಗಳಲ್ಲಿ ಮಗಳನ್ನು ಹೆರಿಗೆಗೆಂದು ತವರು ಮನೆಗೆ ಕರೆದೊಯ್ಯುತ್ತಾರೆ. ಅತ್ತೆ ಮನೆಯವರು ಗರ್ಭಿಣಿ ಸೊಸೆಗೆ ಉಡಿ ತುಂಬಿ ’ಗಂಡಸು ಮಗನ ತಾಯಿಯಾಗಿ ಬ” ಎಂದು ಹರಸಿ ಕಳುಹಿಸುತ್ತಾರೆ. ಆದರೆ ಗರ್ಭಿಣಿಗೆ ತಾಯಿ ಮನೆಯವರಾಗಲೀ, ಅತ್ತೆಮನೆಯವರಾಗಲೀ ಕುಪ್ಪಸದ ಶಾಸ್ತ್ರ ಮಾಡುವುದಿಲ್ಲ. ಆ ಪದ್ಧತಿಯೇ ಇವರಲಿಲ್ಲ ದಿನನಿತ್ಯ ಉಡುವ ಸೀರೆಯ ಮೇಲೆಯೇ ಅವಳು ತವರಿಗೆ ಬರುತ್ತಾರೆ.

ಸಾಧಾರಣವಾಗಿ ಈ ಜನಾಂಗದ ಮಹಿಳೆಯರೆಲ್ಲರೂ ಸೇಂದಿ, ಸಾರಾಯಿ ಕುಡಿಯುತ್ತಾರೆ. ಮಾಂಸವನ್ನೂ ತಿಂದೇ ತಿನ್ನುತ್ತಾರೆ.

ಗರ್ಭಿಣಿಯರಿಗೆ ಪಪ್ಪಾಯಿ ಹಣ್ಣು ಮತ್ತು ಬಾಳೆ ಹಣ್ಣನ್ನು ತಿನ್ನಲು ಕೊಡುವುದಿಲ್ಲ. ಹೆರಿಗೆಗೆಂದು ಇವರು ಮನೆಯ ಒಂದು ಮೂಲೆಯನ್ನು ಕಾಯ್ದಿರಿಸಿರುತ್ತಾರೆ. ಅದೇ ಮೂಲೆಯಲ್ಲಿ ಗರ್ಭಿಣಿಯನ್ನು ಕೂಡಿಸಿ ಹೆರಿಗೆ ಮಾಡುತ್ತಾರೆ. ನಂತರ ಆ ಜಾಗವನ್ನು ಹೆಂಡಿ(ಸಗಣಿ) ಹೆಂಡರಾಡಿಯಿಂದ ಸಾರಿಸುತ್ತಾರೆ. ಬಾಣಂತಿಗೆ ಹೊರಸಿನ ಮೇಲೆ ಮಲಗಿಸುತ್ತಾರೆ. ಒಂದು ಅರ್ಧ ಒಡೆದ ಬುಟ್ಟಿಯಂಥ ಮಡಿಕೆಯಲ್ಲಿ ಕುಳ್ಳು ಬಟ್ಟೆ ಬೆಂಕಿ ಮಾಡಿ ಬಾಣಂತಿಗೆ ಮೈ ಕಾಸುತ್ತಾರೆ. ನಂತರ ಆ ಅಗ್ಗಿಷ್ಟಿಕೆಯನ್ನು ಹೊರಸಿನ ಕೆಳಗಿಡುತ್ತಾರೆ. ಬಾಣಂತಿಗೆ ಬೆಚ್ಚಗಿಡಲು ಈ ಕ್ರಮ. ಬಾಣಂತಿಯ ಮೈ ಬೇಗ ಒಣಗುತ್ತದೆಂದು ಇವರ ಭಾವನೆ. ಬಾಣಂತಿಗೆ ಈ ದಿನಗಳಲ್ಲಿ ಮೈಗೆ ಬಿಸಿಯಾಗಿರಲು ಸರಾಯಿ ಕುಡಿಸುತ್ತಾರೆ. ಮಾಂಸದಡಿಗೆ ಉಣ್ಣಿಸುತ್ತಾರೆ. ಗಿಡಮೂಲಿಕೆಗಳ ಕಾಡ್ಯಾ (ಕಷಾಯ) ಮಾಡಿ ಕುಡಿಸುತ್ತಾರೆ. ಹಂದಿಯ ಮಾಂಸ, ಏಡಿಯ ಸಾರು, ಬಿಳಿಯಕ್ಕಿ ಬಾನ ಕೊಡುತ್ತಾರೆ. ಮಗುವಿಗೆ ಹಾಲು ಬರಲೆಂದು ಕೊಬ್ಬರಿ ಬೆಲ್ಲ ಕೂಡಿಸಿ ಕುಟ್ಟಿ ಬೆಳಿಗ್ಗೆ ತಿನ್ನಿಸುತ್ತಾರೆ. ಯಾವುದೇ ಕಾರಣಕ್ಕಾಗಲೀ ಬಾಣಂತಿಗೆ ಈ ದಿನಗಳಲ್ಲಿ ಸೇಂದಿ ಕುಡಿಸುವುದಿಲ್ಲ.

ಸುಮಾರಾಗಿ ಇಪ್ಪತ್ತು ದಿನಗಳವರೆಗೆ ಅವಳು ಬಿಸಿ ನೀರನ್ನೇ ಕುಡಿಯಬೇಕು. ಅವಳು ತಣ್ಣೀರು ಮುಟ್ಟುವುದಕ್ಕಿಂತ ಮೊದಲು ಯಾವುದೇ ಕೆಲಸ ಮಾಡುವುದಿಲ್ಲ. ಹೊರಬರಬೇಕಾದರೆ ಕಂಬಳಿ ಹೊದ್ದೇ ಬರಬೇಕು. ಕೈಯಲ್ಲಿ ಕುಡುಗೋಲಿರಬೇಕು. ಕಂಬಳಿ ಕುಡುಗೋಲುಗಳಿದ್ದರೆ ದೆವ್ವ – ಭೂತಗಳು ದೂರ ಇರುತ್ತವಂತೆ. ಬಾಣಂತಿಯರಿಗೆ ದೆವ್ವ ಭೂತಗಳ ಕಾಟ ಜಾಸ್ತಿಯಂತೆ, ಅವುಗಳಿಂದ ತಪ್ಪಿಸಿಕೊಳ್ಳಲು ತಮ್ಮ ಬಾಣಂತಿಯರನ್ನು  ಮಂದಿ ಹೊರಬಾರದಂತೆ ಕಟ್ಟೆಚ್ಚೆರದಿಂದ ಕಾಯುತ್ತಾರೆ. ಮನೆಯ ಮುಂದೆ ಕರಿದಾರ, ಮೆಣಸಿನಕಾಯಿ, ನಿಂಬೆಹಣ್ಣು, ಬೇವಿನಸೊಪ್ಪು, ಇತ್ಯಾದಿಗಳನ್ನು ಬಾಗಿಲ ಒಂದು ತುದಿಗೆ ಕಟ್ಟಿರುತ್ತಾರೆ. ಒಂದು ತಿಂಗಳವರೆಗೂ ಗಂಡ-ಹೆಂಡತಿ ಕೂಡುವಂತಿಲ್ಲ. ಬಾಣಂತನದ ಸಂದರ್ಭದಲ್ಲಿ ಕೂಸು ಕರುಳನ್ನು ತೊಡಕಾಗಿಸಿಕೊಂಡು ಹೊರ ಬಂದರೆ ಸೂಲಗಿತ್ತಿಗೆ ಕುತ್ತೆಂದು ತಿಳಿಯುತ್ತಾರೆ. ಇದರ ದೋಷ ಕಳೆದುಕೊಳ್ಳಲು ಕೋಳಿ ಅಥವಾ ಕುರಿ ಬಲಿಕೊಡಬೇಕು. ನೆತ್ತರು ತೋರಿಸಬೇಕು ಎಂದು ಇವರ ನಂಬಿಕೆ. ಬಾಣಂತಿಗಂತೂ ವಿಶೇಷವಾಗಿ ಮೀನು, ಮಾಂಸದ ಅಡುಗೆ ಕೊಡುತ್ತಾರೆ. ಹುಟ್ಟಿದ ಮೂರು ದಿವಸಕ್ಕೆ ಮಗುವಿಗೆ ಹೆಸರಿಡುತ್ತಾರೆ. ಹೆಸರಿಡಲು ಯಾವ ಪಂಚಾಂಗ, ಜ್ಯೋತಿಷಿಯನ್ನೂ ಹಿಂಬಾಲಿಸದೆ, ಮುಖಂಡರ ಸಲಹೆ ಪಡೆದು ಮನೆ ದೇವರ ಇಲ್ಲವೇ ಕುಟುಂಬದ ಹಿರಿಯರ ಹೆಸರಿಡುವುದು ಪದ್ಧತಿ.

ಇತ್ತಿತ್ತಲಾಗಿ ಹೆಣ್ಣಿಗೆ ಹೆರಿಗೆ ಸುಸೂತ್ರವಾದರೆ ಅಣ್ಣ -ತಮ್ಮಂದಿರಿಗೆ ಟೀಪಾರ್ಟಿ ಕೊಡುವುದುಂಟು. ಸೂಲಗಿತ್ತಿ, ಬಾಣಂತಿಗೆ ನೀರು ಹಾಕಿದವರಿಗೆ ಚಹಾ ಕೊಡುವುದುಂಟು. ಸೂಲಗಿತ್ತಿ, ಬಾಣಂತಿಗೆ ನೀರು ಹಾಕಿದವರಿಗೆ ಚಹಾ ಕುಡಿಸುವುದರೊಂದಿಗೆ, ಸಾಯಂಕಾಲ ಸಾಕಷ್ಟು ಹೆಂಡ ತರಿಸಿಕೊಟ್ಟು ಸಂತೋಷಪಡಿಸುತ್ತಾರೆ.

ಹೆಣ್ಣು ಹುಟ್ಟಿದಾಗ: ದುರಗಮುರಗಿಯ ಸಂಸ್ಕೃತಿಯಲ್ಲಿ ಉಳಿದೆಲ್ಲ ಸಂಸ್ಕೃತಿಗಳಲ್ಲಿ ಇರುವಂತೆಯೇ ಗಂಡು ಮಗು ಹುಟ್ಟಿದರೆ ಚೆಂದ ಅನ್ನುವಂಥ ಅಭಿಪ್ರಾಯವಿದ್ದರೂ ಹೆಣ್ಣು ಮಗು ಹುಟ್ಟಿದಾಗ ಅದನ್ನು ತಾತ್ಸಾರದಿಂದ ನೋಡುವುದಿಲ್ಲ. ಹೆಣ್ಣು ಹುಟ್ಟಿದಾಗ ಬಾಣಂತನ ಮಾಡಿದ ಸೂಲಗಿತ್ತಿಯು ಕೂಸನ್ನು ಮೊರದಲ್ಲಿ ಮಲಗಿಸಿ ಕುಡಗೋಲಿನಿಂದ ಅದರ ಹೊಕ್ಕಳ ಹುರಿ (ಹೊಕ್ಕಳ ಬಳ್ಳಿ) ಕತ್ತರಿಸುತ್ತಾಳೆ. ನಂತರದ ತಾಯಿಯ ಗರ್ಭದಿಂದ ಹೊರಬಿದ್ದ ಮಾಸವನ್ನು ಒಂದು ಹೊಸ ಸಣ್ಣ ಮಣ್ಣಿನ ಮಾಶಿಕ ಕುಳ್ಳಿಯಲ್ಲಿಟ್ಟು ಮುಚ್ಚುತ್ತಾಳೆ. ಆ ಮಾಶದ ಮಗಿಗೆ ಅರಿಶಿಣ ಕುಂಕುಮ ಹಚ್ಚಿ ಪೂಜೆ ಮಾಡುತ್ತಾರೆ. ನಂತರ ತಾಯಿ ಮಗುವನ್ನು ಸ್ವಚ್ಛಮಾಡಿ, ಎರೆದು ಮಲಗಿಸಿದ ನಂತರ ಹೆಣ್ಣು ಮಗುವಿನ ಮಾಸಿನ ಕುಳ್ಳಿಯನ್ನು ಅವರ ಮನೆಯ ಅಥವಾ ಗುಡಿಸಲ ಹೊರಗೆ ಒಂದು ಮೂಲೆಯಲ್ಲಿ ತಗ್ಗು ತೋಡಿ ಹೂಳಿಟ್ಟು ಮೇಲೆ ಮಣ್ಣು ಮುಚ್ಚಿ ಗಟ್ಟಿಯಾಗಿ ಸಾರಿಸುತ್ತಾರೆ. ’ಮಾಸ’ ನ್ನು ನಾಯಿನರಿಗಳು ಬಗೆದು ತಿನ್ನಬಾರದು ಎಂದು ಹೀಗೆ ಎಚ್ಚರಿಕೆ ವಹಿಸುತ್ತಾರೆ. ಹೆಣ್ಣು ಮಗು ಎಂದಿದ್ದರೂ ಕುಲಕ್ಕೆ ಹೊರಗೆ, ಅವಳು ಮುಂದೊಂದು ದಿನ ಮದುವೆಯಾಗಿ ಹೋಗಿ ಬೇರೆ ವಂಶವನ್ನು ಮುಂದುವರೆಸುವವಳು. ಅವಳು ಪರರ ಸೊತ್ತು ಎನ್ನುವ ನಂಬಿಕೆಯಿರುವ ಇವರು ಹೆಣ್ಣು ಮಗುವಿನ ಹೊಕ್ಕಳಬಳ್ಳಿಯನ್ನು ಹೊರಗಿಡುತ್ತಾರೆ. ಆದರೆ ಗಂಡು ಮಗುವಿನದು ಹೀಗಲ್ಲ, ಗಂಡು ಮಗು ಹುಟ್ಟಿದರೆ ಅದು ಅದೇ ಮನೆಯ ಸೊತ್ತು. ಅದೇ ವಂಶ ಕುಡಿ ಎಂಬ ನಂಬಿಕೆಯಿದೆ. ಆದ್ದರಿಂದ ಗಂಡು ಮಗುವಿನ ಮಾಸ ಕುಳ್ಳಿಯನ್ನು ಮನೆಯ ಅಥವಾ ಗುಡಿಸಲು ಒಳಗೆಯೇ ಒಂದು ಮೂಲೆಯಲ್ಲಿ ನೆಲ ತೋಡಿ ಹೂತಿಡುತ್ತಾರೆ.

ಹುಟ್ಟಿದ ಮಗುವಿಗೆ ಐದನೆಯ ದಿನಕ್ಕೆ ಐದೆಸೆ ಎಂದು ಆಚರಿಸುವುದುಂಟು. ಆ ದಿನ ಮನೆಯ ಕಲಿಗಲ್ಲು ಪೂಜೆ ಮಾಡಿ, ಸೆಟಿಕವ್ವನಿಗೆ ಕಡಬು, ಪುಂಡಿಪಲ್ಯ, ಹಿಂಡಿಪಲ್ಯದ ನೈವೇದ್ಯ ಹಿಡಿಯುತ್ತಾರೆ. ಅಂದು ಸೆಟವಿ ಅಂದರೆ ಬ್ರಹ್ಮನ ರಾಣಿ  ಬಂದು ಮಗುವಿನ ಹೆಣೆಯಲ್ಲಿ ಅದರ ಭವಿಷ್ಯ ಬರೆಯುತ್ತಾಳೆಂದು ಈ ಜನಾಂಗ ನಂಬಿದೆ.

ಮಗುವಿನ ಹದಿನೈದು, ಹತ್ತೊಂಬತ್ತು ಇಪ್ಪತ್ತೊಂದು, ಹಿಂಗೆ ಬೆಸ ಸಂಖ್ಯೆಯ ದಿನಗಳಲ್ಲಿ ಹೆಸರಿಡುವುದುಂಟು. ಹೆಚ್ಚಾಗಿ ಇವರಲ್ಲಿ ಪೋಚಮ್ಮ ದುರ್ಗಮ್ಮ, ಮರಗಮ್ಮ ಲಕ್ಕಮ್ಮ, ಸವಾರಮ್ಮ, ಕಾಡಮ್ಮ, ಸಂಕುಲೆಮ್ಮ – ಮೊದಲಾದ ಹೆಸರುಗಳನ್ನೇ ಇಡುವುದುಂಟು ಆದರೆ ಇವರು ತೊಟ್ಟಿಲು ಕಟ್ಟುವುದಿಲ್ಲ. ಸೀರೆಯ ಜೋಳಿಗೆಯಲ್ಲಿ ಮಗುವನ್ನು ಮಲಗಿಸುತ್ತಾರೆ.

ಬಹುಪತ್ನಿತ್ವ:

ಈ ಜನಾಂಗದಲ್ಲಿ ಏಕಕಾಲಕ್ಕೆ ಒಬ್ಬ ಗಂಡಸು ಇಬ್ಬರು ಅಥವಾ ಮೂವರು ಹೆಂಡತಿಯರನ್ನು ಹೊಂದಿರುವುದು ಕಂಡು ಬರುತ್ತದೆ. ಏಕಪತ್ನಿತ್ವತೆ ಈ ಜನಾಂಗದಲ್ಲಿ ಕಡ್ಡಾಯವಿಲ್ಲ, ಒಬ್ಬಳಿಗಿಂತ ಹೆಚ್ಚಿ ಹೆಂಡತಿಯರಿದ್ದರೆ ಗಂಡನಿಗೆ ಅನುಕೂಲ ಹೆಚ್ಚು. ಹೆಂಡತಿಯರೇ ಭಿಕ್ಷೆ ಬೇಡಿ ತಂದು ಹಾಕುತ್ತಾರೆ. ಮಂಗಳವಾರ, ಶುಕ್ರವಾರ, ಹಬ್ಬಹರಿದಿನಗಳಲ್ಲಿ ಅವನು ಪೋತುರಾಜನ ವೇಷ ಧರಿಸಿ ಭಿಕ್ಷೆಗೆ ಹೋಗುತ್ತಾನೆ. ಅಂದು ಅವನು ಅವನಿಟ್ಟಂತೆಯೇ ವಿನಃ ಯಾರ ಜೋರು ಜಬರದಸ್ತಿ ಅವನಿಗಿರುವುದಿಲ್ಲ.

ಕೂಡಿಕೆ (ಉಡಕಿಸೀರುಡಿಕೆ):

ಈ ಜನಾಂಗದಲ್ಲಿಯ ಗಂಡಹೆಂಡತಿಯರು ಯಾವುದಾದರೂ ಕಾರಣಕ್ಕೆ ಜಗಳ ಆಡಿ ಸೋಡ ಚೀಟಿ ಪಡೆದು ಮದುವೆ ಮುರಿದುಕೊಳ್ಳಬಹುದು. ಅವರಿಬ್ಬರೂ ಇನ್ನು ಮುಂದೆ ಕೂಡಿ ಬಾಳುವುದು ಸಾಧ್ಯವೇ ಇಲ್ಲ  ಎಂಬುದು ಖಾತ್ರೆ ಆದಾಗ ನ್ಯಾಯ ಪಂಚಾಯ್ತಿಗೆ ದೂರು ನೀಡಲಾಗುತ್ತದೆ. ಪಂಚಾಯ್ತಿ ನಡೆಯುತ್ತದೆ. ಅಲ್ಲಿ ನ್ಯಾಯ ತೀರ‍್ಮಾನಿಸುವವರು ಐದು ಮಂದಿ ಕೇರಿಯ ಹಿರಿಯರು, ಇವರನ್ನು ಪಂಚರು, ದೈವದವರು ಎಂದು ಕರೆಯುತ್ತಾರೆ. ಗಂಡ ಹೆಂಡತಿಗೆ ಸೋಡಚೀಟಿ ಕೊಡಬೇಕಾದರೆ ಅವಳಿಗೆ ಮದುವೆಯಲ್ಲಿ ಕೊಟ್ಟಿದ್ದ ’ತೆರು’ವಿನ ಹಣವನ್ನು ಅವಳು ಅವನಿಗೆ ವಾಪಸ್ಸು ಕೊಡಬೇಕಾಗುತ್ತದೆ. ಕೊರಳಲ್ಲಿಯ ತಾಳಿ ಕಿತ್ತುಕೊಂಡು ಅವನು ಮದುವೆಯ ಬಂಧನದಿಂದ ಬಿಡುಗಡೆ ಮಾಡುತ್ತಾನೆ. ನಂತರ ಸೋಡಚೀಟಿ ಪಡೆದ ಅಥವಾ ಹರೆಯದಲ್ಲಿಯೇ ಗಂಡ ತೀರಿಕೊಂಡ ಹೆಣ್ಣಿಗೆ ಬೇರೊಬ್ಬ ಗಂಡಸಿನೊಂದಿಗೆ ಮದುವೆ  ಮಾಡುವ ರೂಢಿಯಿದೆ. ಆದರೆ ಇದಕ್ಕೆ ಉಡಕಿ, ಕೂಡಿಕೆ ಎಂದು ಹೆಸರಿದೆ. ಮರುಮದುವೆ ಎಂದು ಕರೆಯುವುದಿಲ್ಲ. ’ತಲಾಖ:’ ಪಡೆದಾಗ ಆ ದಂಪತಿಗಳಿಗೆ ಮಕ್ಕಳಿದ್ದರೆ ಅವುಗಳನ್ನು ತಂದೆಯ ಸುಪರ್ದಿಗೆ ಕೊಡುತ್ತಾರೆ. ಪಂಚರು. ಹೆಂಡತಿಯೇನಾದರೂ ಬಸುರಿಯಾಗಿದ್ದರೆ ಮುಂದೆ ಮಗು ಹುಟ್ಟಿದಾಗ ಅದನ್ನು ಮೊದಲ ಗಂಡನಿಗೆ ಕೊಡಬೇಕಾಗುತ್ತದೆ. ಮಗುವನ್ನು ಒಂಭತ್ತು ತಿಂಗಳು ಹೊಟ್ಟೆಯಲ್ಲಿಟ್ಟುಕೊಂಡು ಬೇನೆ ತಿಂದು ಹೆರುವವಳು ತಾಯಿಯೇ ಆದರೂ ಪುರುಷ ಪ್ರಾಧಾನ್ಯತೆಯಿಂದಾಗಿ ಮಗುವಿನ ಮೇಲಿನ ಹಕ್ಕು ಮಾತ್ರ ತಂದೆಯದೇ ಆಗುತ್ತದೆ. ಇದೆಲ್ಲ ನ್ಯೂನ್ಯತೆಯಿದ್ದರೂ ಹರೆಯದ ಹೆಣ್ಣಿಗೆ ಇನ್ನೊಂದು ಮದುವೆ ಮಾಡುವ ಪದ್ಧತಿಯಿದೆ. ’ಹರೇದ ಹುಡಗಿ ಗಂಡ ಇರಲಾರದೆ ಹೆಂಗೆ ಇರಾದು’ ಎಂಬ ಅಭಿಮತ ಈ ಜನಾಂಗದ ಪಂಚರದಾಗಿದೆ. ಕೆಲವೊಮ್ಮೆ ಸ್ವತಃ ಹೆಣ್ಣು ಮೊದಲ ತಾಳಿ ಸುಡುಗಾಡಿಗೆ ಬಿಟ್ಟು ಮೇಲೆ ಮತ್ತೊಂದು ಮದುವೆ ಏಕೆ? ಎಂದು ಪ್ರಶ್ನಿಸುತ್ತಾಳೆ. ಆದರೂ ಹರೆಯದ ಸ್ತ್ರೀ ಗಂಡನನ್ನು ಕಳೆದುಕೊಂಡಾಗ ಇನ್ನೊಂದು ಮದುವೆ ಮಾಡಿಕೊಳ್ಳುವ ಅವಕಾಶವಿರುವುದು ಮುಖ್ಯ. ಇಲ್ಲಿ ಸ್ತ್ರೀ ಪರವಾದ ಕಾಳಜಿ ವ್ಯಕ್ತವಾಗುತ್ತದೆ. ಈ ಎರಡನೇ ಒಪ್ಪಂದದ ಮದುವೆ ಮಾತ್ರ ವಿಜೃಂಭಣೆಯಿಂದ ನಡೆಯದೆ ಬಹಳ ಸರಳವಾಗಿರುತ್ತದೆ. ಇದು ರಾತ್ರಿಯ ವೇಳೆಯಲ್ಲಿ ಹಾಗೂ ಸ್ಮಶಾನದಲ್ಲಿಯೇ ನಡೆಯುವುದು ಉಂಟು. ಗಂಡ ಸತ್ತ ಹೆಣ್ಣು ತನಗೆ ಇಷ್ಟವಾದ ಗಂಡನ್ನು ತಾವೇ ಹುಡುಕಿಕೊಂಡು ಸಲಿಗೆಯಿಂದಿರುವುದು ಉಂಟು. ಅದು ಹಿರಿಯರಿಗೆ ಸರಿಬರದೇ ಇರುವಾಗ ನ್ಯಾಯ ಮಾಡುವುದು ಇದೆ.

ಆದರೆ ಕೂಡಿಕೆ ಮಾಡಿಕೊಳ್ಳುವ ಗಂಡು – ಹೆಣ್ಣು ಒಪ್ಪಿಯಾದ ಮೇಲೆ ಯಾವ ನ್ಯಾಯವೂ ಏನೂ ಮಾಡಿಲಿಕ್ಕಾಗದು ಎಂಬುದು ಈ ಜನಾಂಗದ ಭಾವನೆ. ಒಟ್ಟಾರೆ ಈ ಜನರಲ್ಲಿ ಹೆಣ್ಣೂಗಳ ಬಗ್ಗೆ ಅನುಕಂಪ ಅಥವಾ ಸಡಿಲಿಕೆಯ ನೀತಿಯಿದೆ ಎನ್ನಬಹುದು.