ಪ್ರಸ್ತಾವನೆ :

ಮನಕುಲ ಇತಿಹಾಸದ ಸಂದರ್ಭದಲ್ಲಿ ಬಹಳಷ್ಟು ಪ್ರಚಲಿತವಾಗಿರುವ ಪದ ಸಂಸ್ಕೃತಿ. ಇತ್ತೀಚೆಗಂತೂ ಇದರ ಅರ್ಥವ್ಯಾಪ್ತಿ ಸಮಯ ಸಂದರ್ಭಗಳಿಗೆ ತಕ್ಕಂತೆ ವಿಶಾಲವಾಗಿದೆ.

ಪ್ರಾಚೀನ ಕಾಲದಿಂದ ಜನಾಂಗಗಳ ಸಂದರ್ಭಕ್ಕೆ ಬಂದಾಗ ದ್ರಾವಿಡ ಸಂಸ್ಕೃತಿ ಆರ್ಯರ ಸಂಸ್ಕೃತಿ, ಬೇಡರ ಸಂಸ್ಕೃತಿ ಹೀಗೆ ಹಲವಾರು ಜನಾಂಗಗಳ ಹೆಸರುಗಳ ಮುಂದೆ ಸಂಸ್ಕೃತಿ ಎಂದು ಬಳಸಲಾಗಿದೆ. ಅದರಂತೆ ಧರ್ಮಕ್ಕೆ ಸಂಬಂಧಿಸಿದ ಹಾಗೆ ಹಿಂದು ಸಂಸ್ಕೃತಿ, ಮುಸ್ಲಿಂ ಸಂಸ್ಕೃತಿ, ಸಿಖ್ ಸಂಸ್ಕೃತಿ, ಕ್ರೈಸ್ತ ಸಂಸ್ಕೃತಿ, ಹರಪ್ಪ – ಸಿಂಧೂ ಸಂಸ್ಕೃತಿ, ಬೆಬಿಲೋನಿಯಾ ಸಂಸ್ಕೃತಿ ಎಂದು ಪ್ರಸಾಪಿಸಲಾಗಿದೆ. ದೇಶಗಳ ಸನ್ನಿವೇಶದಲ್ಲಿಯೂ ಭಾರತ ಸಂಸ್ಕೃತಿ, ಬಾಂಗ್ಲಾ ಸಂಸ್ಕೃತಿ, ಅಮೇರಿಕಾ ಸಂಸ್ಕೃತಿ, ಅರಬ್ಬರ ಸಂಸ್ಕೃತಿ ಎನ್ನಲಾಗಿದೆ. ಇಷ್ಟಲ್ಲದೆ ಮನುಷ್ಯನ ಸ್ವಭಾವ ಚಿತ್ರಣ, ವ್ಯಕ್ತಿತ್ವಕ್ಕೆ ಸಂಬಂಧಿಸಿದಂತೆ ರಾಮ ರಾವಣರ ಸಂಸ್ಕೃತಿ ಸೀತಾ ಸಂಸ್ಕೃತಿ, ವೀರಪ್ಪನ್ ಸಂಸ್ಕೃತಿ ಎಂದು ವ್ಯಕ್ತಿಗತವಾಗಿ ವ್ಯವಹಾರಕ್ಕೆ ತಕ್ಕ ಹಾಗೆ ಚಾಕು ಚೂರಿ ಸಂಸ್ಕೃತಿ, ಚೈನ್ ಸಂಸ್ಕೃತಿ, ಹೊಟ್ಟೆಬಾಕ ಸಂಸ್ಕೃತಿ, ಕೊಳ್ಳುಬಾಕ ಸಂಸ್ಕೃತಿ, ಜಾಗತೀಕರಣ ಸಂಸ್ಕೃತಿ, ಕಂಪ್ಯೂಟರ‍್ ಸಂಸ್ಕೃತಿ, ಆಧೂನೀಕರಣ ಸಂಸ್ಕೃತಿ ಈ ರೀತಿಯಾಗಿ ಸಂಸ್ಕೃತಿಯ ಪದವು ಸಂಕೀರ್ಣ ಅರ್ಥದಲ್ಲಿ ಬಳಕೆಯಾಗುತ್ತಿದೆ. ಸಂದರ್ಭ – ವೇಷಭೂಷಣ, ಜಾತಿ, ಧರ್ಮ, ಪಂಗಡ, ವ್ಯಕ್ತಿ, ಸಾಧನೆ, ವ್ಯವಹಾರ, ಸ್ವಭಾವಗಳಲ್ಲಿ ಪ್ರಯೋಗ ಮಾಡುತ್ತ ಬರಲಾಗಿದೆ. ಹೀಗೆ ಸಂಸ್ಕೃತಿ ಎನ್ನುವ ಪದವನ್ನು ಬಳಸಿ, ಅದರ ಅರ್ಥವನ್ನು ನಾನಾ ಮುಖಗಳಲ್ಲಿ ಹಿಗ್ಗಿಸುತ್ತಿದ್ದೇವೆ. ಯಾವುದಕ್ಕೂ ಇದನ್ನು ಸೀಮಿತಗೊಳಿಸಿಲ್ಲ. ಕೆಲವೊಂದು ಸಲ ಈ ’ಸಂಸ್ಕೃತಿ”ಎನ್ನುವ ಪದಕ್ಕೆ ತನ್ನ ಸ್ವಂತ ಅಸ್ತಿತ್ವವೇ ಇಲ್ಲವೇ? ಎಂಬ ಗುಮಾನಿ ಬರದಿರದು. ಹಾಗೇನಾದರೂ ಆದರೆ ಯಾವುದಕ್ಕೆ ಸವಾಲುಗಳು ಮುಗಿಬೀಳುತ್ತವೆ. ಅದೇನೇ ಇರಲಿ, ಈ ಸಂಸ್ಕೃತಿ ಪದ ಸುಮಾರು ನೂರು ವರ್ಷಗಳ ಮೊದಲು ಎಲ್ಲೂ ಬಳಕೆಗೊಂಡಿರಲಿಲ್ಲ. ಇದೊಂದು ಎರವಲು ಪದ. ಈಗ ಇದು ಯಜಮಾನ್ಯ ಸಾಧಿಸುತ್ತಿದೆ ಅಂದಾಗ ಇದರಲ್ಲಿರುವ ಅಗಾಧ ಶಕ್ತಿಯೇ ಕಾರಣವಿರಬೇಕು.. ಸಂಸ್ಕೃತಿಯ ಅರ್ಥವಲಯ ಬಹಳ ಹಿರಿದಾದುದು.

ಸಂಸ್ಕೃತಿ ಮೂಲತಃ ಲ್ಯಾಟಿನ್ ಭಾಷೆಯಲ್ಲಿ cult, Cultus ಎಂಬ ಪದದಿಂದ ಬಳಕೆಯಲ್ಲಿದೆ. ಇದಕ್ಕೆ ಇಲ್ಲಿ ವ್ಯವಸಾಯ, ಕೃಷಿ, ಸೇವಿಸು, ಆರಾಧಿಸು, ಪೂಜಿಸು, ಎತ್ತು, ಬಿತ್ತು, ಹದಮಾಡು ಎಂಬ ನಾನಾ ಅರ್ಥಗಳಿವೆ. ಕ್ರಮೇಣ ಈ Cult ಮತ್ತು Cultus ಎಂಬ ರೂಪಗಳ Kultr ಬದಲಿಗೆ Culture ಎಂಬುದಾಗಿ ಬಳಕೆಗೆ ಬಂದಿತು.

ಪಾಶ್ಚಾತ್ಯರ Culture ಎಂಬುದಕ್ಕೆ ಭಾರತೀಯರು ಸಂಸ್ಕೃತಿ ಎಂದು ಸಂಪಾದಿಸಿಕೊಂಡರು. ಈ ಸಂಸ್ಕೃತಿ ಶಬ್ದವು ಸಹ ಸಂಸ್ಕೃತ ಭಾಷೆಯದು.

ಸಂಸ್ಕೃತಿ ಕುರಿತಂತೆ ನಮ್ಮಲ್ಲಿ ಇಂದು ಅನೇಕ ಜನಪ್ರಿಯ ಗ್ರಹಿಕೆಗಳು ಹಾಗೂ ಗಂಭೀರ ಚಿಂತನೆಗಳು ಇವೆ. ಸಂಸ್ಕೃತಿ ಸ್ವರೂಪದ ನಿಜನೆಲೆ ಹುಡುಕಬೇಕಾದದ್ದು ಅನಿವಾರ್ಯ.

ಒಂದು ಜನಾಂಗದ ಬದುಕಿನ ಹಿನ್ನೆಲೆಯಲ್ಲಿ ಸಮಗ್ರವಾಗಿ ಇದನ್ನು ಪರಿಭಾವಿಸಿದಾಗ ಕಂಡು ಬರುವ ಅವರ ಜ್ಞಾನ, ತಿಳವಳಿಕೆ, ನಂಬಿಕೆ, ಕಲೆ, ನೀತಿ, ಕಾನೂನು ಸಂಪ್ರದಾಯ, ಆಚರಣೆ, ಇವೆಲ್ಲವುಗಳ ಮೊತ್ತವೇ ಸಂಸ್ಕೃತಿ, ಒಂದು ಪ್ರದೇಶದಲ್ಲಿ ಒಟ್ಟಾಗಿ ಕೂಡಿ ಬಾಳುತ್ತಿರುವ ನಿರ್ದಿಷ್ಟ ಜನಾಂಗದ ಜೀವನ ಕ್ರಮವೇ ಸಂಸ್ಕೃತಿ. ಅಲ್ಲಿ ಆ ಜನಾಂಗದ ಸಾಮಾಜಿಕ ವ್ಯವಸ್ಥೆ. ಆಚಾರ – ವಿಚಾರ ಧರ್ಮಗಳು ಎದ್ದು ಕಾಣುತ್ತವೆ. ಅಲ್ಲಿನ ಮೂಲ ಸಂಸ್ಕೃತಿಯ ಸ್ವರೂಪವನ್ನು ಗುರುತಿಸುವ ಪ್ರಯತ್ನವಾಗಬೇಕು.

ಜನಾಂಗವೊಂದರ ವ್ಯವಸ್ಥಿತ ಸ್ವಭಾವಗಳ, ಭಾವನೆಗಳ, ವರ್ತನೆಗಳ ಒಟ್ಟು ಮೊತ್ತವೇ ಸಂಸ್ಕೃತಿ. ಜೀವನ ವಿಧಾನದಲ್ಲಿ ಆಯಾ ಜನಾಂಗದ ಉಡುಗೆ- ತೊಡುಗೆ, ಆಚಾರ – ವಿಚಾರ, ನಡೆ-ನುಡಿ, ಕಲೆ-ಕ್ರೀಡೆ, ಆಟ – ಪಾಠ, ಪಾತ್ರೆ – ಪದಾರ್ಥ, ನ್ಯಾಯ – ನೀತಿ, ಭಾಷೆ -ಬಂಧುತ್ವ – ಹೀಗೆ ಈ  ಎಲ್ಲ ಸಂಗತಿಗಳು ಸಮ್ಮಿಳಿತಗೊಂಡಿವೆ. ಮನುಷ್ಯ ಸಮಾಜ ಇರುವೆಡೆಯಲ್ಲೆಲ್ಲ ಒಂದು ಸಂಸ್ಕೃತಿ ಇದ್ದೇ ಇರುತ್ತದೆ. ಇಲ್ಲಿ ಆ ಮನುಷ್ಯ ಮೇಲು-ಕೀಳು, ಬಡವ- ಬಲ್ಲಿದ, ಯಾವುವೂ ಮುಖ್ಯವಲ್ಲ ಹಾಗೇ ಸಂಸ್ಕೃತಿ ಎಂಬ ಪರಿಕಲ್ಪನೆಯಲ್ಲಿ ಮೇಲು ಸಂಸ್ಕೃತಿ, ಕೀಳು ಸಂಸ್ಕೃತಿ, ಉಪಸಂಸ್ಕೃತಿ ಎಂಬುದಿಲ್ಲ. ಎಲ್ಲವೂ ಸಹ ಸಂಸ್ಕೃತಿಗಳೇ ಜನರ ಜೀವನ ವಿಧಾನವೇ ಸಂಸ್ಕೃತಿ. ಜನ ಯಾರಾದರೂ ಆಗಿರಬಹುದು, ಎಲ್ಲಾದರೂ ವಾಸಿಸುತ್ತಿರಬಹುದು, ಜನರಿದ್ದ ಕಡೆಗೆ ಸಂಸ್ಕೃತಿ ಇದ್ದೇ ಇರುತ್ತದೆ. ಒಂದೊಂದು ಜನಾಂಗಕ್ಕೆ ಒಂದೊಂದು ರೀತಿಯ ಸಂಸ್ಕೃತಿಯಿರುತ್ತದೆ. ಈ ನಿಟ್ಟಿನಲ್ಲಿ ಒಟ್ಟು ಮನುಷ್ಯ ಸಂಸ್ಕೃತಿಯಲ್ಲಿ ಒಂದು ಸಂಸ್ಕೃತಿ ಸದಾ ಉಸಿರಾಡುತ್ತಲೇ ಇರುತ್ತದೆ.

ಒಂದು ಸಂಸ್ಕೃತಿಯುನ್ನು ಅರಿಯಬೇಕಾದರೆ ಆ ಜನ ಸಮುದಾಯದ ಬದುಕಿನ ಒಟ್ಟು ಅಧ್ಯಯನದ ಅವಶ್ಯಕತೆಯಿದೆ,. ಹಿಂದೂ ಸಂಸ್ಕೃತಿ ಎಂದರೆ ಬರೀ ವೈದಿಕ ಸಂಸ್ಕೃತಿಯೊಂದೇ ಎನ್ನುವಂತೆ ಹಿಂದಿನಿಂದಲೂ ಬಿಂಬಿಸುತ್ತ ಬಂದಿದೆ. ಆದರೆ ಅದು ಸಂಪೂರ್ಣ ಸರಿಯಲ್ಲ. ಹಿಂದೂ ದೇಶದ ಸಂಸ್ಕೃತಿ ಎಂದರೆ ಕೇವಲ ವೈದಿಕ ಸಂಸ್ಕೃತಿ ಎಂದರ್ಥವಲ್ಲ. ಅಥವಾ ಅದು ಮಾತ್ರವಲ್ಲ. ನಮ್ಮ ದೇಶದಲ್ಲಿರುವ ನೂರಾರು ಸಂಸ್ಕೃತಿಗಳಲ್ಲಿ ವೈದಿಕ ಸಂಸ್ಕತಿಯೂ ಒಂದು. ಒಂದು ದೇಶದ, ರಾಷ್ಟ್ರದ ಸಂಸ್ಕೃತಿಯೆಂದರೆ, ಆ ದೇಶದಲ್ಲಿರುವ ಹಲವು ಸಂಸ್ಕೃತಿ, ಉಪಸಂಸ್ಕೃತಿಗಳೆಲ್ಲ, ಒಟ್ಟುಗೂಡಿ ಆ ದೇಶದ ಸಂಸ್ಕೃತಿಯಾಗುತ್ತದೆ ಹಾಗೆ ಆಗುವುದೇ ಸರಿ.

ನಮ್ಮ ರಾಜ್ಯದಲ್ಲಿ ನೂರಾರು ಉಪಸಂಸ್ಕೃತಿಗಳಿವೆ. ಪ್ರತಿಯೊಂದು ಜನಪದ ಸಮುದಾಯಕ್ಕೂ ಒಂದೊಂದು ಸಂಸ್ಕೃತಿಯುಂಟು. ಸಂಸ್ಕೃತಿ ಎಂಬ ಮುಖ್ಯ ವಾಹಿನಿಯಲ್ಲಿ ಈ ಎಲ್ಲ ಉಪಸಂಸ್ಕೃತಿಗಳು ಕಿರು ಝರಿಗಳಂತೆ ಹರಿದು ಬಂದು ಸೇರಿಕೊಂಡು ಮುಖ್ಯವಾಹಿನಿಯ ಆಳ ಅಗಲಗಳನ್ನು ಹೆಚ್ಚಿಸಿದೆ. ಹೀಗಾಗಿ ನಮ್ಮಲ್ಲಿ ಏಕತೆಯಲ್ಲಿ ಅನೇಕತೆಗಳ ಸಂಗಮವಿದೆ.

ಜಾತಿಗೊಂದು ಸಂಸ್ಕೃತಿ, ಸಮುದಾಯಕ್ಕೊಂದು ಸಂಪ್ರದಾಯವೆಂಬಂತೆ ನಮ್ಮ ಕರ್ನಾಟಕದಲ್ಲಿ ನೂರಾರು ಸಂಸ್ಕೃತಿಗಳು ಬೆಳೆದು ವ್ಯಾಪಿಸಿವೆ. ಇವುಗಳಲ್ಲಿ ಅರವತ್ತೈದಕ್ಕೂ ಹೆಚ್ಚಿನ ಬುಡಕಟ್ಟು ಜನಾಂಗಗಳು ಗುರುತಿಸಲ್ಪಟ್ಟಿವೆ. ಬುಡಕಟ್ಟಿನ ಜನರಲ್ಲಿಯ ಬದುಕು, ಅದು ಅಲೆಮಾರಿಯ ಬದುಕು. ಅನ್ನ ನೀರು ಹುಡುಕಿಕೊಂಡು ಬದುಕಿಗಾಗಿ ಅಲೆಯುತ್ತಾ ಅವರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಇನ್ನೊಂದರಿಂದ ಮತ್ತೊಂದಕ್ಕೆ ಅಲೆದಾಡುತ್ತಿರುತ್ತಾರೆ. ಆಯಾ ಸ್ಥಳದಲ್ಲಿ ಅಷ್ಟಷ್ಟು ಕಾಲ ವಸ್ತಿ ಹಾಕಿ ಸಮಯ ಸವೆಸಿ ದಿನಗಳೆದಂತೆ ಮುಂದಿನ ಜೀವನೋಪಾಯಕ್ಕೆ ಬೇರೆ ಯಾವುದೋ ಸ್ಥಳವನ್ನರಸುತ್ತ ಆ ಜಾಗ ಖಾಲಿ ಮಾಡಿ ಮುನ್ನಡೆಯುತ್ತಾರೆ. ಇಂಥ ಹಲವು ಹದಿನೆಂಟು ಅಲೆಮಾರಿ ಜನಾಂಗಗಳು ನಮ್ಮ ನಾಡಿನಲ್ಲಿವೆ. ಆಯಾ ಬುಡಕಟ್ಟಿನ ಜನಾಂಗಗಳಿಗೆ ಅವುಗಳದೇ ಆದ ಜೀವನ ಶೈಲಿ, ರೀತಿ – ರಿವಾಜುಗಳು, ರೂಢಿ – ಸಂಪ್ರದಾಯಗಳು, ದೇವರು, ನಂಬಿಕೆ – ಮೂಢನಂಬಿಕೆ, ವೇಷ-ಭೂಷಣ, ಆಚಾರ – ವಿಚಾರ, ಉಡುಪು – ವೇಷಭೂಷಣ, ಭಾವ ಮೊದಲಾದವುಗಳಿವೆ. ಈ ಎಲ್ಲವೂ ಅಲೆಮಾರಿ ಜನಾಂಗಗಳೆಂದರೂ, ಒಂದು ಇನ್ನೊಂದರಂತಿಲ್ಲ. ಇವರುಗಳ ಜೀವನ ವಿಧಾನದಲ್ಲಿ ಅನೇಕ ಸಾಮ್ಯ, ಅಸಾಮ್ಯಗಳು ಇವೆ. ಲಂಬಾಣಿ ಜನಾಂಗದವರಂತೆ ಕುಂಚಿ – ಕೊರವರಿಲ್ಲ, ಕುಂಚಿಕೊರವಂತೆ ಒಡ್ಡರಿಲ್ಲ, ಒಡ್ಡರಂತೆ ಕಾಡಸಿದ್ಧರಿಲ್ಲ, ಕಾಡಸಿದ್ಧರಂತೆ ಕಾಢುಗೊಲ್ಲರಿಲ್ಲ. ಹೀಗೆ ಇವೆಲ್ಲವೂ ಭಿನ್ನವಾಗಿವೆ. ಅಲ್ಲಲ್ಲಿ ಕೆಲ ಅಂಶಗಳು ಹೋಲುತ್ತವೆ. ಇಂಥದ್ದೇ ಅಲೆಮಾರಿ ಜನಾಂಗದಲ್ಲಿ ’ದುರಗಮುರಗಿಯರ’ ಜನಾಂಗಗಳು ಒಂದಾಗಿದೆ. ಸಾಧಾರಣವಾಗಿ ಬಹುತೇಕ ಜನಾಂಗಗಳೆಲ್ಲ ಹಿಂದೆ ಅಲೆಮಾರಿಗಳೇ ಆಗಿದ್ದವು. ಈ ದುರಗಮುರಗಿಯರೂ ಇದಕ್ಕೆ ಹೊರತಾಗಿಲ್ಲ.

ಈ ದುರಗಮುರಗಿ ಸಂಸ್ಕೃತಿಯ ಅಧ್ಯಯನ ಮಾಡುವಾಗ ನಾವು ಇಲ್ಲಿ ಮುಖ್ಯವಾಗಿ ಮಹಿಳೆಯರನ್ನು ಪ್ರಧಾನ ನೆಲೆಯಲ್ಲಿಟ್ಟು ಅವಳ ಬದುಕಿನ್ನು ಕಟ್ಟಿಕೊಡುವ ಅಗತ್ಯವಿರುವುದರಿಂದ ಆ ಜನಾಂಗದ ಸಂಸ್ಕೃತಿಯೊಂದಿಗೆ ಮಹಿಳೆಯ ಬದುಕಿನ ಮೇಲೆಯೇ ಹೆಚ್ಚಿನ ಬೆಳಕನ್ನು ಕೇಂದ್ರೀಕರಿಸಬೇಕಾಗಿದೆ. ಭಿಕ್ಷೆಯನ್ನು ಅವಲಂಬಿಸಿ ಬದುಕುತ್ತಿರುವ ಈ ಜನಾಂಗಕ್ಕೆ ತನ್ನದೇ ಆದ ವೈಶಿಷ್ಟ ಸಂಸ್ಕೃತಿಯಿದೆ. ಸಾಧಾರಣವಾಗಿ ಬೇರೆಲ್ಲ ಬುಡಕಟ್ಟುಗಳಂತೆಯೇ ಈ ಜನಾಂಗದಲ್ಲಿಯೂ ಆದಿಕಾಲದಲ್ಲಿ ಮಹಿಳೆಗೆ ಎಲ್ಲಕ್ಕಿಂತ ಹೆಚ್ಚಿನ ಮಹತ್ವದ ಸ್ಥಾನಮಾನವಿತ್ತು. ಮನೆಯೊಡತಿ ಹೆಣ್ಣೆ ಆಗಿದ್ದಳು. ಗಂಡನು ಹೊರಗೆ ದುಡಿಯುವುದು, ಹೆಂಡತಿ ತನ್ನ ಮನೆ ಮಕ್ಕಳನ್ನು ಬೆಳೆಸುತ್ತ ಮನೆಯೊಳಗಿನ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ, ಕೆಲವೊಮ್ಮೆ ಹೊರಗಡೆ ಗಂಡಿನ ಸಮಾನವಾಗಿ ದುಡಿಯಲು ಹೋಗುತ್ತಿದ್ದಳು. ಅಂದು ಗಂಡ – ಹೆಂಡತಿಯರ ನಡುವೆ ಒಬ್ಬರು ಶ್ರೇಷ್ಠ ಇನ್ನೊಬ್ಬರು ಕನಿಷ್ಠ ಎಂಬ ಭಾವನೆಗೆ ಆಸ್ಪದವಿರಲಿಲ್ಲ. ಅಲ್ಲದೇ ಕೌಟುಂಬಿಕ ವಲಯದಲ್ಲಿನ ಮನೆಯ ಜವಾಬ್ದಾರಿಗಳನ್ನು, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಹೆಂಡತಿಯದೇ ಒಂದು ತೂಕ ಜಾಸ್ತಿಯಾಗುತ್ತಿತ್ತು.

ಪರಿಸರ ಮತ್ತು ಕಸುಬು :

ದುರಗಮುರುಗಿಯರು ಸಾಮಾನ್ಯವಾಗಿ ಭಿಕ್ಷೆಯನ್ನು ಅವಲಂಬಿಸಿ ಬದುಕುತ್ತಿರುವ ಜನಾಂಗ. ಇವರಿಗೆ ಇವರದೇ ಆದ ವಿಶಿಷ್ಟ ಸಂಸ್ಕೃತಿಯಿದೆ. ವ್ಯಕ್ತಿಗಳು ಜಾತಿಗಳಾಗಿ ಬದಲಾವಣೆಗೊಂಡ ಸಂದರ್ಭದ ಸಂಕೇತಗಳಾಗಿ ದುರಗಮುರುಗಿ ಕಮ್ಮಾರ, ಬಹುರೂಪಿ ಮತ್ತು ಮಡಿವಾಳರಂಥ ಅನೇಕ ಜನಾಂಗಗಳಿವೆ. ಇವೆಲ್ಲ ಮೂಲದಲ್ಲಿ ಯಾವ ಜಾತಿಮತಕ್ಕೆ ಸೇರಿದ್ದವರೆಂದು ಗುರುತಿಸುವುದು ಕಷ್ಟ.

’ಕನ್ನಡ ಜಾನಪದ ವಿಶ್ವಕೋಶ’ ದಲ್ಲಿ ಈ ದುರಗಮುರುಗಿಯರ ಬಗ್ಗೆ ಈ ರೀತಿ ವಿಶ್ಲೇಷಣೆಯಿದೆ’ ದುರಗಮುರುಗಿಯರು ಉತ್ತರದಿಂದ ಬಂದವರು. ದ್ರಾವಿಡರ ಗುಂಪಿಗೆ ಸೇರಿದವರೆಂದೂ ಅಭಿಪ್ರಾಯಗಳಿವೆ. ಅಲ್ಲದೇ ಇವರು ದಕ್ಷಿಣದವರಿರಬಹುದೆಂಬ ವಾದವೂ ಇದೆ. ಇವರನ್ನು ಕುರುಬ ಜನಾಂಗದವರೆಂದು ಹೇಳಲಾಗಿದೆ. ಅಡುವಿಕುರುಬರಲ್ಲಿ ಇವರು ಬರುತ್ತಾರೆ. ಹೀಗೆ ಇವರು ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿದವರು ಎಂದು ಹೇಳಿದೆ. ’ದುರ್ಗಮ್ಮ-ಮರ್ಗಮ್ಮನನ್ನು ಕೆಳವರ್ಗದವರು ಬುಟ್ಟಿಯಲ್ಲಿಟ್ಟುಕೊಂಡು ಬೀದಿ ಬೀದಿಗೂ ಹೋಗಿ, ದೇವತೆ ಶಾಪ ಹಾಕುತ್ತಾಳೆಂದು ಜನರಲ್ಲಿ ಭಯ ಹುಟ್ಟಿಸಿ ಅವರಿಂದ ದವಸ-ಧಾನ್ಯಗಳನ್ನು ಪಡೆದು ಉಪಜೀವನ ನಡೆಸುತ್ತಿದ್ದರು’ ಎಂಬುದಾಗಿ ತಿಳಿದು ಬರುತ್ತದೆ. ಈ ಜನರ ಭಾ, ಸಾಹಿತ್ಯ -ಸಂಸ್ಕೃತಿಯ ವಿಶಿಷ್ಟತೆಗಳನ್ನು ಕುರಿತು ಕನ್ನಡದಲ್ಲಿ ಬಿಡಿ-ಬಿಡಿಯಾದ ಅಧ್ಯಯನ ಕಂಡು ಬಂದರೂ ಅದು ಅಷ್ಟು ಸಮಪರ್ಕವಾಗಿಲ್ಲ. ಕೇವಲ ಪರಿಚಯಾತ್ಮಕ ವಿವರಗಳನ್ನಷ್ಟೇ ನೀಡುತ್ತದೆಯಾದರೂ, ಇದರ ಹೊರತು ಆ ಜನಾಂಗದ ಆಳವಾದ ಅಭ್ಯಾಸವೇನೂ ನೀಡುವುದಿಲ್ಲ. ಆದ್ದರಿಂದ ಈ ಸಂಸ್ಕೃತಿಯಲ್ಲಿಯ ಮಹಿಳೆಯ ಸ್ಥಾನಮಾನದ ಸಂಪೂರ್ಣ ಚಿತ್ರವನ್ನು ನೀಡುವ, ಇದರ ಎಲ್ಲ ಮಗ್ಗುಲುಗಳನ್ನು ಸ್ಪಷ್ಟವಾಗಿ ಗುರುತಿಸುವ ಇದರ ಆಳ ಅಗಲಗಳನ್ನು ಅರಸುತ್ತ ಬೇರಿಗಿಳಿಯುವ ಅಧ್ಯಯನದ ಕೊರತೆ ಇದ್ದೇಯಿದೆ. ಹಾಗೆಂದು ಈ ಕಿರು ಲೇಖನ; ಸದರಿ ಸಂಸ್ಕತಿಯಲ್ಲಿಯ ಹೆಣ್ಣಿನ ಪೂರ್ಣ ಚಿತ್ರಣ ಕೊಡುತ್ತದೆ ಎಂದಲ್ಲ. ಆದರೆ ತಡವಾಗಿಯಾದರೂ ನಾಡಿನ ಸಂಸ್ಕೃತಿಗಳೆಲ್ಲವನ್ನೂ ಮಹಿಳಾ ಕೇಂದ್ರವಾಗಿಟ್ಟುಕೊಂಡು ಅಭ್ಯಸಿಸುವ ಹೊಸ ಪರಿಕಲ್ಪನೆಯೊಂದು ಹುಟ್ಟಿಕೊಂಡಿದೆ ಎನ್ನುವುದೊಂದು ಸಮಾಧಾನ ಸಂಗತಿ. ಮುಂಬರುವ ದಿನಗಳಲ್ಲಿ ಸಂಸ್ಕೃತಿ ಮತ್ತು ಮಹಿಳೆಯ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬಹುದೆಂಬುದಕ್ಕೆ ಆಶಾಕಿರಣವಾಗಿದೆ.

ದುರಗಮುರುಗಿಯರಲ್ಲಿ ಗಂಡ-ಹೆಂಡತಿ ಇಬ್ಬರೂ ಸಮಾನ ಸ್ಥಾನವನ್ನು ಹೊಂದಿರುವರೆನ್ನಬಹುದು. ಇಬ್ಬರೂ ಶ್ರಮಿಕರು, ಇಬ್ಬರೂ ದುಡಿಯುತ್ತಾರೆ. ತಮ್ಮ ಹಾಡು, ಕುಣಿತ, ಬುರು-ಬುರು ವಾದ್ಯದ ಬಡಿತಗಳೊಂದಿಗೆ ಜನಮನ ರಂಜಿಸುತ್ತ ಭಿಕ್ಷೆ ಬೇಡುತ್ತ ಬದುಕು ನಡೆಸುತ್ತಾರೆ. ಇಲ್ಲಿ ಪೋತುರಾಜನ ಕುಣಿತ ಮತ್ತು ಅವನ ಹೆಂಡತಿ ಪೋಚವ್ವ ನುಡಿಸುವ ಬುರು ಬುರು ವಾದ್ಯಗಳು ಮಹತ್ವದ ಪಾತ್ರ ವಹಿಸುತ್ತವೆ. ಮುಖ್ಯವಾಗಿ ಮರಗಮ್ಮ ದೇವಿಯ ಆರಾಧಕರಾದ ಇವರು ಒಂದು ಕಟ್ಟಿಗೆಯ ಗುಡಿ ತಯಾರಿಸಿ ಅದರಲ್ಲಿ ಮರಗಮ್ಮ ದೇವಿಯ ಕಟ್ಟಿಗೆ ಗೊಂಬೆಯನ್ನು ಅಥವಾ ಮುಖವಾಡವನ್ನು ಇಟ್ಟುಕೊಂಡಿರುತ್ತಾರೆ. ಹೀಗೆ ಆ ದೇವಿಯ ಮುಖವಾಡದಲ್ಲಿ ಎದ್ದು ಕಾಣುವ ದೊಡ್ಡ ದೊಡ್ಡ ಕಣ್ಣುಗಳು, ನೆಟ್ಟನೆಯ ಮೂಗು, ಮೂಗುತಿ, ಬಳೆಗಳು, ಸೀರೆ, ಕುಂಕುಮ, ಅರಿಶಿಣಗಳು ಢಾಳವಾಗಿ ಕಾಣಿಸುವಂತೆ ಮಾಡಿರುತ್ತಾರೆ. ಈ ಮುಖವಾಡವು ಭಯಂಕರವಾಗಿರುತ್ತದೆ. ಮಾರೆಮ್ಮ ಅಂದರೆ ’ಮರಗಮ್ಮ’ ಎಷ್ಟಾದರೂ ಈ ದೇವಿ ಮೃತ್ಯುದೇವತೆ. ಇವಳ ಮುಖಭಾವದಲ್ಲಿ ಕರುಣೆ, ಭಯವನ್ನೂ ಉಕ್ಕಿಸುತ್ತದೆ. ಇಲ್ಲಿ ದುರಗ ಎಂದರೆ, ದುರ್ಗಾದೇವಿ ಮತ್ತು ಮರಗಮ್ಮ ಎಂದರೆ ಪಾರ್ವತಿ ಎಂದು ಕೂಡ ಅರ್ಥೈಸಬಹುದು. ಶಕ್ತಿದೇವತೆಯಾದ ಪಾರ್ವತಿ ಎಂದೇ ಆಗುತ್ತದೆ. ಹೀಗೆ ಈ ದೇವಿಯ ಭಯಂಕರವಾದ,ಮೂರ್ತಿಯ ಮುಖಕ್ಕೆ ಕಣ್ಣು ಕುಕ್ಕುವ ನೆತ್ತರುಗುಂಪಿನ ಬಣ್ಣವಿದ್ದು ಪೋತುರಾಜ ಅದರ ಮುಂದೆ ಕೈಯಲ್ಲಿ ಲಡ್ಡು ಹಿಡಿದು ಮೈಗೆ ಜೋರಾಗಿ ಹೊಡೆದುಕೊಳ್ಳುತ್ತಾ, ಕರ್ಕಶವಾಗಿ ಆರ್ಭಟಿಸುತ್ತ ಕುಣಿತ್ತ, ತನ್ನ ವಿಶಿಷ್ಟ ಕಲೆಯನ್ನು ಪ್ರದರ್ಶಿಸುತ್ತಾನೆ. ಇದು ಅವನದೇ ಸೊತ್ತು, ಭಯವೇ ಧರ್ಮದ ಮೂಲ ಎನ್ನುವ ಮಾತಿಗೆ ತಕ್ಕಂತೆ ಈ ಜನಾಂಗ, ಇವರ ದೇವಿಗೆ ಮೊರದಲ್ಲಿ ದವಸ-ಧಾನ್ಯ ತಂದು ನೀಡುತ್ತಾರೆ. ಪೋತುರಾಜ ವೇಷದಲ್ಲಿದ್ದ ಗಂಡಸು ತನ್ನ ಸೊಂಟಕ್ಕೆ ಸಿಕ್ಕಿಸಿಕೊಂಡಿದ್ದ ಸಣ್ಣ ಕಿಸೆಯಿಂದ ಕುಂಕುಮ ತೆಗೆದು, ಕಾಳುಕಡ್ಡಿ ತನ್ನ ಜೋಳಿಗೆಯಲ್ಲಿ ಸುರಿದುಕೊಂಡು ಮೊರದಲ್ಲಿ ಆಧಾರ ಭಂಡಾರ ಎಂದು ಹಾಕುತ್ತಾನೆ. ಜನ ಅದನ್ನು ಶ್ರದ್ಧೆ – ಭಕ್ತಿಯಿಂದ  ಹಣೆಯ ಮೇಲೆ ಇರಿಸಿಕೊಳ್ಳುತ್ತಾರೆ.

ಮೂಲದಲ್ಲಿ ಈ ಜನಾಂಗದವರು ಶಕ್ತಿದೇವತೆ, ಮೃತ್ಯುದೇವತೆಯ ಆರಾಧಕರು, ಹೆಣ್ಣುದೇವರೇ ಇವರ ಕುಲದೇವತೆ. ಹೆಣ್ಣಿಗೆ ಇವರಲ್ಲಿ ಪ್ರಾಮುಖ್ಯತೆ ಹೆಚ್ಚಾಗಿದೆ.

ಭಿಕ್ಷಾಟನೆಯೇ ಇವರ ಕಸುಬಾದರೂ ಇವರು ಜನರ ಮನೆಯ ಬಾಗಿಲಿಗೆ ಬಂದು ’ಯವ್ವಾ ತಾಯೀ ಭಿಕ್ಷೇ ನೀಡ್ರೀ ’ ಎಂದು ಸೆರಗೊಡ್ಡಿ ನಿಲ್ಲುವುದಿಲ್ಲ. ನೆತ್ತಿಯ ಮೇಲೆ ಮರಗಮ್ಮನ ಗುಡಿ ಹೊತ್ತು, ಟೊಂಕಕ್ಕೆ ಬುರುಬುರು ವಾದ್ಯ ಬಿಗಿದುಕೊಂಡು ಮಗ್ಗುಲ ಜೋಳಿಗೆಯಲ್ಲಿ ಮೊಲೆ ಚೀಪುವ ಹಸುಗೂಸನ್ನು ಮಲಗಿಸಿಕೊಂಡು ಹೆಂಡತಿಯಾದವಳು ಊರ ಬೀದಿಗಳಲ್ಲಿ ಬರುತ್ತಾಳೆ. ಅವಳ ಮುಂದೆ, ಸೊಂಟಕ್ಕೊಂದು ಬಣ್ಣದ ಸೀರೆಯನ್ನು ಗಗ್ಗರಿಯಂತೆ ನೀರಿಗೆ ಮಾಡಿ ಸುತ್ತಿಕೊಂಡು ಮೇಲೊಂದು ಹಿತ್ತಾಳೆಯ ಸಣ್ಣ ಸಣ್ಣ ಗೆಜ್ಜೆ ಸರವನ್ನು ಡಾಬಿನಂತೆ ಕಟ್ಟಿಕೊಂಡು, ಬರಿ ಮೈನಲ್ಲಿ, ಕೈಲೊಂದು ಬಾರುಕೋಲು ಹಿಡಿದುಕೊಂಡು ಝಲಪಿಸುತ್ತ ಗಂಡಸು ಅವಳ ಮುಂದೆ ಮುಂದೆ.. ಹಹಹ್ಹಾ… ಹಹಹ್ಹಾ…. ಎಂದು ಕೇಕೆ ಹಾಕುತ್ತ ಕುಣಿತದ ನಡಿಗೆಯಲ್ಲಿ ನಡೆದಿರುತ್ತಾರೆ. ಅವನು ಮುಖಕ್ಕೆ ಬಣ್ಣ ಬಳಿದುಕೊಂಡು ಕಣ್ಣುಗಳಿಗೆ ಕಾಡಿಗೆ, ತುಟಿಗೆ ಕೆಂಪು, ಹಣೆ ತುಂಬ ಕುಂಕುಮ ಲೇಪಿಸಿಕೊಂಡಿರುತ್ತಾರೆ. ಇವನಿಗೆ ’ಪೋತುರಾಜ’ ಎಂದು ಕರೆಯುತ್ತಾರೆ. ಊರ ನಡುವೆ ಕೂಡು ದಾರಿಯಲ್ಲಿ ಮರಗಮ್ಮನ ಗುಡಿಯಿಟ್ಟು ಪೋತುರಾಜ ತರಾವರಿ ಸದ್ದು ಹೊರಡಿಸುತ್ತ ಬಾರುಕೋಲಿನಿಂದ ಆಗಾಗ ತನ್ನ ಬರೀ ಎದೆ, ಬೆನ್ನಿಗೆ ಹೊಡೆದುಕೊಳ್ಳುತ್ತ ರಸ್ತೆಯುದ್ದಕ್ಕೂ ಕುಣಿಯುತ್ತಾನೆ. ಇವನು ಕುಣಿದಂತೆಲ್ಲಾ ಅವನ ಹೆಂಡತಿ ಪೋಚಮ್ಮ ತನ್ನ ಬುರು ಬುರು ವಾದ್ಯವನ್ನು ಬಾರಿಸುತ್ತ ಕುಣಿತದ ಹೆಜ್ಜೆ ಹಾಕುತ್ತಿರುತ್ತಾಳೆ. ತಮ್ಮನ್ನ ತಾವು ಹಿಂಸಿಸಿಕೊಂಡು ಜನರಿಗೆ ಮನರಂಜನೆಯೊದಗಿಸುತ್ತ ಭಿಕ್ಷೆ ಬೇಡುವ ಜನಾಂಗವಿದು. ಕೆಲವೊಮ್ಮೆ ಪೋತುರಾಜ ಭಯಂಕರವಾದ ದೇವಿಯ ದೊಡ್ಡ ಮುಖವಾಡವನ್ನು ಹಾಕಿಕೊಂಡು ಕರ್ಕಶವಾಗಿ ಕೂಗುತ್ತ ಕುಣಿಯುತ್ತ ಮೈಗೆ ಬಾರುಕೋಲಿನಿಂದ ಹೊಡೆದುಕೊಂಡು ರಕ್ತ ಚಿಮ್ಮಿಸುತ್ತಾ ಆರ್ಭಟಿಸುತ್ತಾನೆ.

ಈ ಜನಾಂಗದ ಮೂಲ ದೇವತೆ ಹೆಣ್ಣು ಎಂಬುದನ್ನು ಮುಖ್ಯವಾಗಿ ಗಮನಿಸಬೇಕು.ಇವರ ಆರಾಧ್ಯದೇವರು ಶಿವನಲ್ಲ, ಪಾರ್ವತಿಯೇ ಆಗಿರುವಳು. ಗಂಡುದೇವರುಗಳಿಗೆ ವಿಶೇಷವಾದ ಸ್ಥಾನವಿಲ್ಲ, ಹೆಣ್ಣೇ ಇವರ ಕುಲದೇವತೆ. ಇವರಲ್ಲಿ ಮೊದಲು ಹೆಣ್ಣೇ ಕುಟುಂಬದ ಪ್ರಧಾನ ಸ್ಥಾನದಲ್ಲಿರುವುದರಿಂದ ಹೆಣ್ಣನ್ನೇ ಇವರು ತಮ್ಮ ಕುಲದ ಆದಿದೇವತೆಯೆಂದು ಪೂಜಿಸುತ್ತಾ ಬಂದಿರಬಹುದೇ? ಎಂಬ ಪ್ರಶ್ನೆ ಕಾಡುತ್ತದೆ.

ಅಲೆಮಾರಿಗಳಾದ ಇವರು ಊರ ಒಳಗಡೆ ವಾಸಿಸುವುದಿಲ್ಲ. ಊರ ಹೊರಗಡೆ ಬಯಲಿನಲ್ಲಿ ಡೇರೆಗಳನ್ನು ಹಾಕಿಕೊಂಡು ಬದುಕುತ್ತಾರೆ. ಮರಗಮ್ಮ ದುರಗಮ್ಮನ ಗುಡಿಗಳ ಆವರಣದಲ್ಲಿಯೂ ಇವರು ಇರುತ್ತಾರೆ. ಬಯಲಲ್ಲೇ ಮೂರು ಕಲ್ಲಿಟ್ಟು ಒಲೆ ಮಾಡಿ ಕೂಳು ಬೇಯಿಸಿಕೊಳ್ಳುತ್ತಾರೆ. ಅಲೆಮಾರಿಗಳಾದ ಇವರಿಗೆ ನೆಲವೇ ಹಾಸಿಗೆ, ಮುಗಿಲೇ ಹೊದಿಕೆ, ಸದಾ ಅಲೆದಾಡುತ್ತಲೇ ಇರುವ ಇವರು ಮಳೆಗಾಲದಲ್ಲಿ ಮಾತ್ರ ಒಂದೆಡೆ ತಂಗುತ್ತಾರೆ. ಗುಂಪು ಗುಡಿಸಲುಗಳನ್ನು ಹಾಕಿಕೊಂಡು ಹಳ್ಳಿಯ ಹೊರಗಡೆ ಇದ್ದು, ಬದುಕುತ್ತಾರೆ. ಚಳಿಗಾಲದಲ್ಲಿ ದವಸ ಧಾನ್ಯಗಳ ರಾಶಿಗೆ ಕೂಲಿನಾಲಿ ಮಾಡುತ್ತ ಊರೂರು ಹಳ್ಳಿಹಳ್ಳಿ  ತಿರುಗಿದರೆ ಬೇಸಿಗೆಯಲ್ಲಿ ಮಾತ್ರ ಊರು ನಡುವೆಯೇ ಜನರ ಮುಂದೆ ಮರಗಮ್ಮನ ಗುಡಿ ತಂದಿಟ್ಟು, ಹಾಡಿ, ಕುಣಿದು, ಭಿಕ್ಷೆ ಎತ್ತುತ್ತಾರೆ. ಇವತ್ತು ಈ ಊರು, ನಾಳೆ ಮತ್ತೊಂದೂರು, ನೆತ್ತಿಯ ಮೇಲೆ ದೇವಿಯ ಗುಡಿ ಹೊತ್ತು ಮಗ್ಗುಲಲ್ಲಿ ಮಗುವಿಟ್ಟುಕೊಂಡು ಸೊಂಟಕ್ಕೆ ಬುರುಬುರು ವಾದ್ಯ ಕಟ್ಟಿಕೊಂಡು ಈ ಜನಾಂಗದ ಮಹಿಳೆ ಗಂಡನನ್ನು ಹಿಂಬಾಲಿಸುತ್ತ ನಡೆಯುತ್ತಿರುತ್ತಾಳೆ.

ಈ ಮಂದಿ ಕರ್ನಾಟಕದ ಕಲಬುರಗಿ ಜಿಲ್ಲೆಯ, ಚಿತ್ತಾಪುರ, ಶಹಾಪುರ, ಯಾದಗಿರಿ, ಗುರುಮಿಟಕಲ್, ಸುರಪುರ, ಹತ್ತಿಕುಣಿ, ಬೀರನಳ್ಳಿ ಮೊದಲಾದ ಭಾಗಗಳಲ್ಲಿ ವಾಸಿಸುತ್ತಿದ್ದಾರೆ.

ಬೀದರ ಜಿಲ್ಲೆಯ ಹುಮನಾಬಾದ, ಔರಾದ, ಚಿಮ್ಮನಕಚೋಡ, ಸಂತಪೂರ, ಜೂಜನಾ ಮೊದಲಾದ ಸ್ಥಳಗಳಲ್ಲಿ ಗುಡಿಸಲುಗಳನ್ನು ಹಾಕಿಕೊಂಡಿರುತ್ತಾರೆ. ರಾಯಚೂರು, ಬಿಜಾಪುರ ಜಿಲ್ಲೆಗಳಲ್ಲಿ ಇವರು ಕಾಣಸಿಗುತ್ತಾರೆ. ಧಾರವಾಡ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿಯೂ ಇವರು ವಸತಿ ಇರುತ್ತದೆ. ಕರ್ನಾಟಕದಲ್ಲಿ ಸುಮಾರು ಐವತ್ತು ಸಾವಿರದವರೆಗೂ ದುರುಗಮುರುಗಿಯರ ಜನಸಂಖ್ಯೆ ಇದ್ದಿರಬಹುದೆಂದು ಅಂದಾಜು ಮಾಡಲಾಗಿದೆ.  ಇವರು ದ್ರಾವಿಡ ಜನಾಂಗಕ್ಕೆ ಸೇರಿದವರಾಗಿದ್ದು ಇವರ ಮೂಲದ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ದುರಗಮುರಗಿಯರು ಉತ್ತರದಿಂದ ಬಂದವರೆಂದೂ ದ್ರಾವಿಡ ಗುಂಪಿಗೆ ಸೇರಿದವರೆಂದೂ ಡಾ. ಚಂದ್ರಶೇಖರ ಕಂಬಾರರ ಒಂದು ಅಭಿಪ್ರಾಯವಾಗಿದೆ. (ಕನ್ನಡ ಜಾನಪದ ವಿಶ್ವಕೋಶ ಪುಟ ೧೦೩೮-೧೯೮೫)

“ಶಕ್ತಿ ಪೂಜಕರಾದ ದ್ರಾವಿಡ ಗುಂಪಿಗೆ ದುರಗಮುರುಗಿಯರು ಸೇರಿರುವುದರಿಂದ ಇವರು ದಕ್ಷಿಣದವರೇ ಆಗಿರಬಹುದು’ ಎನ್ನುವ ಡಾ. ಚಿನ್ನಣ್ಣ ವಾಲಿಕಾರದು ಇನ್ನೊಂದು ಅಭಿಪ್ರಾಯ (ಜಾನಪದ ಸಾಹಿತ್ಯ ದರ್ಶನ – ಸಂಪಾದಕರು, ಡಾ. ಎಂ.ಎಸ್. ಸುಂಕಾಪುರ ಪು.ಸಂ. ೧೫೭-೧೬೨)

ಈ ಜನಾಂಗ ಉತ್ತರದಿಂದ ಬಂದಿದ್ದು ಎನ್ನುವುದಕ್ಕಿಂತ ಹೆಚ್ಚಾಗಿ ದಕ್ಷಿಣದಿಂದಲೇ ವಲಸೆ ಬಂದಿರಬೇಕೆಂಬ ಅಭಿಪ್ರಾಯವೇ ಹೆಚ್ಚು ಸೂಕ್ತವಾಗಿದೆ. ಇವರ ಮೂಲ ಕುರುಬ ಜನಾಂಗವೇ ಆಗಿದ್ದು, ಮುಂದದೇ ಹಲವಾರು ಪಂಗಡಗಳಾಗಿ ಒಡೆದು ಬೇರೆ ಬೇರೆಯಾಗಿವೆ. ಇವರು ತಮ್ಮ ತಮ್ಮ ಬದುಕಿಗಾಗಿ ಬೇರೆ ಬೇರೆ ದಾರಿಗಳನ್ನು ಕಂಡುಕೊಂಡಿರಬಹುದು ಎನ್ನುವ ಜನಾಭಿಪ್ರಾಯವೂ ಒಂದಿದೆ. ಇನ್ನೂ ಕೆಲವರ ಆಭಿಪ್ರಾಯದಂತೆ ಶಕ್ಯಮಠ ಪ್ರಚಾರಕ್ಕೆ ಬಂದ ಮೇಲೆ ವಾಮಾಚಾರ ಜಾಸ್ತಿಯಾಯಿತಂತೆ. ಕೆಳವರ್ಗದ ಜನ ದುರ್ಗಮ್ಮ, ಮರಗಮ್ಮ ದೇವತೆಗಳನ್ನು ಬುಟ್ಟಿಯಲ್ಲಿಟ್ಟುಕೊಂಡು ಬೀದಿ ಬೀದಿ ತಿರುಗಾಡಿ ಈ ದೇವತೆಗಳು ಬಹಳ ಸಿಟ್ಟಿನವರು, ಅವರಿಗೆ ಸಂತೋಷಪಡಿಸದಿದ್ದರೆ ಶಾಪ ಕೊಡುವರೆಂದು ಬೆದರಿಕೆ ಹಾಕಿ ಜನರಿಂದ, ಜೋಳ, ಗೋಧಿ, ಹಳೇಬಟ್ಟೆ – ಬರೆ ಪಡೆದು ಹೊಟ್ಟೆ ಹೊರೆಯುವ ದಂಧೆಗೆ ಇಳಿದಿದ್ದರು ಎಂದು ಹೇಳಲಾಗುತ್ತದೆ.

ಆದರೆ ಇತ್ತೀಚೆಗೆ ಈ ಜನಾಂಗದ ಹಿರಿಯರನ್ನು ಸಂದರ್ಶನಕ್ಕಾಗಿ ಅವರು ವಾಸಿಸುವ ಕೇರಿಗಳಲ್ಲಿ ಹುಡುಕುತ್ತ ಹೋದರೆ, ತುಂಬ ಹಿರಿಯರು ಅಂದರೆ ನೂರು ವರುಷದವರಾಗಲಿ, ಅದಕ್ಕೆ ಹತ್ತಿರದವರಾಗಲಿ ಸಿಗುವುದು ಬಹಳ ಕಡಿಮೆ. ಹಾಗೊಂದು ವೇಳೆ ಒಬ್ಬೊಬ್ಬರು ಸಿಕ್ಕರೂ ಅವರಿಗೆ ತಮ್ಮ ಮೂಲಕದ ಬಗ್ಗೆ ಹೆಚ್ಚಿನ ಮಾಹಿತಿಯೇ ಇಲ್ಲ. ಮರಗವ್ವ ದೇವಿಯ ಗುಡಿ ಹೊತ್ತು ತಿರುಗುವುದು, ಬುರುಬುರು ವಾದ್ಯ ಬಾರಿಸುತ್ತ ಭಿಕ್ಷೆ ಬೇಡುವುದು ನಮ್ಮ ಕುಲಕಸಬು ಅಂತ ಹೇಳುತ್ತಾರೆಯೇ ಹೊರತು ಈ ಕಸುಬು ಹೇಗೆ ಬಂತು? ಎಂಬ ಪ್ರಶ್ನೆಗೆ ಅವರಲ್ಲಿ ಉತ್ತರವಿಲ್ಲ. ರೀತಿ-ರಿವಾಜುಗಳ ಬಗ್ಗೆ ರೂಢಿ-ಸಂಪ್ರದಾಯಗಳ ಬಗ್ಗೆಯೂ ಅವರಲ್ಲಿ ಇಂಥದ್ದೇ ಉತ್ತರಗಳಿವೆ.’ ಹಿಂದಿನಿಂದ ನಮ್ಮ ಹಿರಿಯರು ಮಾಡುತ್ತಿದ್ದರು. ಅದನ್ನು ನಾವೂ ಮಾಡುತ್ತಿದ್ದೇವೆ ’ ಎನ್ನುತ್ತಾರೆ.

ಆದರೆ ಕೆಲವರ ಹೇಳಿಕೆಯ ಪ್ರಕಾರ ತಿಳಿದು ಬಂದ ವಿಷಯವೆಂದರೆ, ಇವರು ಆಂಧ್ರ ಮೂಲದವರಾಗಿದ್ದು, ಮೆಹಬೂಬ್ ನಗರದ ಆತ್ಮಕೂಡು ತಾಲೂಕಿನ ಗೋಪನಪೇಟೆ ಎಂಬ ಹಳ್ಳಿಯೇ ಇವರ ಮೂಲ ಎಂದು ಹೇಳುತ್ತಾರೆ.

ದುರಗಮುರಗಿಯರ ಪೌರಾಣಿಕ ಹಿನ್ನೆಲೆ :

ಪ್ರತಿಯೊಂದು ಜನಾಂಗಕ್ಕೆ ಇರುವಂತೆಯೇ ಈ ಜನಾಂಗಕ್ಕೂ ಪೌರಾಣಿಕ ಹಿನ್ನೆಲೆ ಕಂಡು ಬರುತ್ತದೆ. ಡಾ. ಚಂದ್ರಶೇಖರ ಕಂಬಾರರ ಹೇಳಿಕೆಯಂತೆ ಇವರ ಅಧಿದೇವತೆಯಾಗಿರುವ ಮರಗಮ್ಮ – ದುರಗಮ್ಮರು ಪಾರ್ವತಿ ದೇವಿಯ ಅಂಶವೆಂಬುದನ್ನು ಒಪ್ಪಿಕೊಳ್ಳುತ್ತಾರೆ. ’ತಮ್ಮ ದೇವತೆ ಆದಿಶಕ್ತಿಯ ಅವತಾರವೆನ್ನುವುದು ಅವರ ಅಚಲ ನಂಬಿಕೆ’ ಈ ವಿಷಯವಾಗಿ ನಾನು ಸಂದರ್ಶಿಸಿದ ಸಿದ್ದಪ್ಪ ಮತ್ತು ಅವನ ಹೆಂಡತಿ ರಾಚವ್ವ ದಂಪತಿಗಳು ಹೇಳಿದ ಐತಿಹಾಸಿಕ ಕಥೆಯನ್ನು ನಿದರ್ಶನವಾಗಿ ತೆಗೆದುಕೊಂಡಿರುವೆ. ಸಿದ್ದಪ್ಪ ಹೇಳಿದ ಕಥೆಯನ್ನು ಈ ಕೆಳಗೆ ಕೊಡಲಾಗಿದೆ :

ಹಿಂದಿನ ಕಾಲದಾಗ ಎಂದೋ ಒಮ್ಮೆ ಸಾವಿರಾರು ವರ್ಷಗಳ ಹಿಂದೆ ಇರಬೇಕ್ರಿ. ತಂಗೀ.. ಆವಾಗ ಅಟ್ಟಟ್ಟಾರ‍್ಯಾಣದಾಗಿನ ರಾಗಸೇಸರಿಗನೂ ನಮ್ಮ ದೇವಿಗಿನೂ ಘನ ಗೋರ ಲಡಾಯಿ ಆಯಿತಂತೆವ್ವ. ರಾಗಸೇಸ್ರು ಅಂದರ ರಾಗಸೀಸರೇ ನೋಡ್ರಿ. ಅವರ ಅನ್ಯಾಯ, ಅತ್ಯಾಚಾರ, ಹಿಂಸಾಚಾರ ಭಾಳ ಬಾಳ ಆಗಿ, ಅಡವ್ಯಾಗಿನ ಮೂಕ ಪಶು ಪ್ರಾಣಿಗೋಳೂ ಮತ್ತು ಊರಾಗಿನ ನರಮನುಶ್ಯಾರೂ ನೆಮ್ದಿಯಿಂದ ಬದುಕೋದೇ ಬಾಳ ಮುಶ್ಕಿಲ್ ಆಗಿತ್ತಂತ, ಯಾವ ದೇವ್ರಿಗಿ, ದಿಂಡ್ರಿಗಿ, ದೇವಿಗಾಗಲೇ ಆ ರಾಗಸೇಸ್ರು ಮಣಿತಿರಲಿಲ್ಲಂತ. ಈ ನಮ್ಮ ದೇವರುಗಳಿಗೂ ರಾಗಸೇಸ್ರಿಗೂ ಹುಟ್ಟಾ ದುಶಮನಿಕಿ ಅದಾ ಅಂತ ಮಗಾ… ಯಾವಾಗ ನೋಡ್ದುನೂ ಇವರಿಬ್ಬರ ನಡಬರಕ ಜಗಳದ ಬೆಂಕಿ ಧಗಧಗ್ ಅಂತ ಉರ‍್ಕೋತೇ ಇರ‍್ತಿತ್ತಂತ, ಹಂತದ್ರಾಗ ಒಂದು ಬಾರಿ ದೊಡ್ಡ ಲಡಾಯಿ ಆಯ್ತು. ಆ ರಕ್ಕಸಂಗಿ ಹೊಡ್ದು ಕೊಲ್ಲಾಕ ಭಾರಿ ಭಾರಿ ಗಂಡ ದೇವರುಗೋಳೂ ಸೋತು ಕೈ ಚೆಲ್ಲಿ ಕುಂತರು. ಹರಿಹರ ಬೊಮ್ಮೆರಲ್ಲೋರೂ ಮುಂದೆನ್ಮಾಡದವಾ ಅಂತ ಚಿಂತ್ಯಾಗ ಕುಂತರು. ಈ ಯೆಲ್ಲಾ ಗಂಡು ದೇವರುಗೋಳು ಅಂಜಿ ಕುಂತಾಗ ನಮ್ಮ ದೇವಿ, ನಮ್ಮ ಆದಿ ಶಕ್ತಿ ಇದೇ ಈ ಗುಡ್ಯಾಗಿನ ಮರಗಮ್ಮ ದೇವಿ ಧಡಕ್ಕಂತ ಎದ್ದು ನಿಂತು, ಗರಾಗರಾ ಕಣ್ಣ ತಿರುಗಿಸಿ, ಮೊಳದುದ್ದು ನಾಲ್ಗಿ ಚಾಚಿ, ಕೂದಲ ಬಿಚ್ಚಿ, ಕೊಳ್ಳಾಗ ಹಾಕ್ಕೊಂಡು ಹಾಹಾಹಾಹಾ! ಅಂತ ಸಿಟ್ಟಿನಿಂದ ಆರ್ಭಟ ಮಾಡ್ಕೋತ ಹುಲಿಮ್ಯಾಲ ಸವಾರಿ ಮಾಡಿ ಕೈಯಾಗ ತಿರುಸೊಲ ಹಿಡ್ಕೊಂಡು ಯುದ್ಧ ಮಾಡಿ ಆ ರಕ್ಕಸರ ರುಂಡಾಗೋಳೂ ಚಂಡಾಡಿದಳು. ಕಚಾ ಕಚಾ ಅಂತ ಅವರ ಸಿರಗೋಳೂ ಕತ್ತಿರಸಿ, ರುಂಡಾ ಮುಂಡಾ ಬ್ಯಾರೆ ಬ್ಯಾರೆ ಮಾಡಿ ಆ ರಾಗಸಸ್ರ ಹಂತಾ ಮೈಮಾ ಈ ಮರಗವ್ವಂದು. ಇಕಿನೇ ಇಡೀ ಜಗತ್ತಿನ ದೊಡ್ಡ ದೇವತೆ ಯವ್ವಾ… ಈ ದೇವಿ ಮುಂದ ಯಾವ ಗಂಡದೇವರ ಆಟಾನೂ ನಡೆಂಗಿಲ್ಲೆವ್ವ… ಪೋತುರಾಜನ ವೇಶಾಕಟ್ಟಿ ನಮ್ಮ ಗಂಡಸರು ಮೈಗೆಲ್ಲಾ ಲಡ್ಡ ಹೊಡ್ಕೊಂಡು ಕುಣಿಕೋತ, ಮೈತುಂಬಾ ನೆತ್ತರ ಚಿಮ್ಯಾಡಾದು ಅಂದ್ರ ದೇವಿಗಿ ನರಮನಸ್ಯಾನ ನೆತ್ತರ ನೇವಾದ್ಯ ಕೊಟ್ಟಂಗಾಗಿ ಇಕಿ ಶಾಂತ ಆಗ್ತಾಳಂತ, ಇದು ನಮ್ಮ ದೇವಿ ಮರಗಮ್ಮನ ಕತಿ…

ಹೀಗೆ ಸಿದ್ದಪ್ಪ ಬಹಳ ಆವೇಶಭರಿತನಾಗಿ ಕಥೆ ಹೇಳಿದ. ಭಾವುಕನಾಗಿದ್ದ ಇವನ ಮೈ ಸಣ್ಣಗೆ ನಡುಗುತ್ತಿತ್ತು.

ದುರಗಮುರುಗಿ ಜನಾಂಗದ ಕುಲದೇವತೆಯಾಗಿರುವ ಮರಗಮ್ಮ ಬಗೆಗಿರುವ ಪೌರಾಣಿಕ ಕತೆಯಿದು. ಇವರು ಶಕ್ತಿಯ ಆರಾಧಕರು, ಎಂಬುದು ಸಂಶೋಧನೆಯಿಂದ ಸಾಬೀತಾಗಿರುವ ಸಂಗತಿ.

ಈ  ಜನಾಂಗದಲ್ಲಿದ್ದ ಐತಿಹಾಸಿಕ ಹಿನ್ನೆಲೆಯೊಂದು ಕಂಡು ಬರುತ್ತದೆ. ಹಿಂದೆ ರಾಜ ಮಹಾರಾಜರು, ಪಾಳೆಯಗಾರರೆಲ್ಲ ತಮ್ಮ ಊರ ಸುತ್ತ ರಕ್ಷಣೆಗೊಂದು ಕೋಟೆ, ದುರ್ಗ ಕಟ್ಟಿಕೊಳ್ಳುತ್ತಿದ್ದರು. ಆ ದುರ್ಗಕ್ಕೆ ಒಬ್ಬ ದೇವತೆ ಹುಟ್ಟಿಕೊಂಡಳು. ದುರ್ಗವನ್ನು ರಕ್ಷಿಸುವ ದೇವಿಯೇ ದುರಗಮ್ಮ, ಈ ದೇವತೆಯ ಆರಾಧಕರೇ ದುರಗಮುರುಗಿಯರು. ಇದು ಈ ಜನಾಂಗದ ಐತಿಹಾಸದ ಹಿನ್ನಲೆಯಾಗಿದೆ. ಹಿಂದಿನ ಕಾಲದಲ್ಲಿ ಈ ದೇವತೆಯ ಪೂಜಾಕಾರ್ಯವೆಲ್ಲ ಇದೇ ಜನಾಂಗ ನೆರವೇರಿಸುತ್ತಿತ್ತು.

ದುರಗಮುರುಗಿಯರ ಸಾಮಾಜಿಕ ಹಿನ್ನೆಲೆಯನ್ನು ನೋಡಿದಾಗ ಸಮಾಜದಲ್ಲಿ ಇವರಿಗೆ ಒಂದು ಒಳ್ಳೆಯ ಭಾವನೆ ಇತ್ತು. ಪ್ರತಿ ಊರಲ್ಲಿ ಇವರು ಮರಗಮ್ಮನ ಗುಡಿಯನ್ನು ತಲೆಯ ಮೇಲ್ಹೊತ್ತುಕೊಂಡು ಬಂದು, ಒಂದು ಪ್ರಮುಖ ಸ್ಥಳವನ್ನು ಆರಿಸಿಕೊಂಡು ಆಟ ಕಟ್ಟುತ್ತಿದ್ದರು.

ಕಲಬುರಗಿಯ ತಾರಫೈಲ್ ಕೇರಿಯಲ್ಲಿ ವಾಸಿಸುತ್ತಿರುವ ಪೋತುರಾಜ ಶಾಂತಪ್ಪನನ್ನು ಸಂದರ್ಶಿಸಿದಾಗ ಅವನು ತನ್ನ ವಂಶದವರ ಬಗ್ಗೆ ತಿಳಿದಿರುವ ಇನ್ನೊಂದು ಕಥೆಯನ್ನು ಹೇಳುತ್ತಾನೆ. ಆಂಧ್ರಪ್ರದೇಶದ ಅಂದದ ತೆಲಂಗಾಣ ಪ್ರದೇಶದ ಗೋಪನಹಳ್ಳಿಗೆ ಹತ್ತಿಕೊಂಡ ದಟ್ಟವಾದ ಅಡವಿ. ಆ ದಡ್ಡಡವಿಯಲ್ಲಿ ಹಸುರಿನ ಗರ್ಭದಲ್ಲಿ ಒಂದೇ ಒಂದು ಪುಟ್ಟ ಗುಡಿಸಲು. ಅದರಲ್ಲಿ ತಾಯಿ ಮಗ ಇಬ್ಬರೇ ವಾಸವಾಗಿದ್ದರು. ಹರೆಯ ಕಳೆದುಕೊಂಡು ಮುದುಕಿಯಾಗಿದ ತಾಯಿ ಗುಡಿಸಲಲ್ಲೇ ಇರುತ್ತಿದ್ದಳು. ಮಗ ಪೋತುರಾಜನ ವೇಷ ಧರಿಸಿ ಕಾಡಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಊರಾಡಲು ಹೋಗುತ್ತಿದ್ದ ಆ ಮಗನದು ಕಟ್ಟುಮಸ್ತಾದ ಮೈಕಟ್ಟು, ಎತ್ತರದ ನಿಲುವು, ಹರವಾದ ಎದೆಯ, ಕುಸ್ತಿಯಾಳಿನಂಥ ಗಟ್ಟಿಗ, ದೊಡ್ಡ ದೊಡ್ಡ ಗುಂಡಗಿನ ಕಣ್ಣುಗಳು, ಗರುಡಮೂಗು, ಕಲ್ಲಿದ್ದಲಿನಂಥ ಮೈಬಣ್ಣ, ಅಷ್ಟೇ ಕಪ್ಪು ಮತ್ತು ಅಷ್ಟೇ ಒರಟು ಕೂಡ. ಗೇಣುದ್ದದ ದಪ್ಪನೆಯ ಹುರಿ ಮೀಸೆ, ಮೊಳದುದ್ದ ಬೆಳೆದು ಜಡೆಗಟ್ಟಿದ ತಲೆಗೂದಲು, ಎದೆ ಕೈಕಾಲುಗಳ ಮೇಲೆಯೂ ದಟ್ಟವಾದ ಕೂದಲು ಬೆಳೆದಿದ್ದವು. ಪೋತುರಾಜನ ವೇಷತೊಟ್ಟು, ಮುಖಕ್ಕೆ ಬಣ್ಣ ಬಳಿದುಕೊಂಡು ಅವನು ಕೈಯಲ್ಲಿನ ನಾರಿನ ಹುರಿಯ ಬಾರುಕೋಲಿನಂಥ ಲಡ್ಡು ಝಳಪಿಸುತ್ತ ಧೀರ ನಡಿಗೆಯಲ್ಲಿ ಧಪ್ ಧಪ್ ಅಂತ ಹೆಜ್ಜೆ ಹಾಕುತ್ತಿದ್ದರೆ ಕಾಲ್ಗೆಜ್ಜೆಯ ಝಣಗುಟ್ಟುವ ಲಯಬದ್ಧವಾದ ಸಪ್ಪಳ ಕೇಳಿದವರ ಕಿವಿಗಳಿಗೆ ಖುಷಿ ಕೊಡುತ್ತಿತ್ತು. ಹೀಗೆ ಇಂಥ ಮೋಹಕ ಅವತಾರದಲ್ಲಿ ಆ ಯುವಕನು ಹಳ್ಳಿಗಳಿಗೆ ಹೋಗುವಾಗ ದಾರಿಯಲ್ಲಿ ಹೊಲವೊಂದರಲ್ಲಿ ಹರೆಯದ ಹೆಣ್ಣುಮಗಳೊಬ್ಬಳು ಹೊಲ ಕಾಯುತ್ತ ಕೂತಿರುತ್ತಿದ್ದಳೂ. ದಿನಾಲೂ ಆತನು ದಾರಿಯ ಮೇಲೆ ನಡೆದು ಹೋಗುತ್ತಿದ್ದ. ಅವಳು ದಿನವೂ ಅವನನ್ನು ನೋಡುತ್ತ ಅವನ ಚೆಂದದ ರೂಪವನ್ನು ಕಣ್ಣಲ್ಲಿ ತುಂಬಿಕೊಳ್ಳುತ್ತಿದ್ದಳು. ಕ್ರಮೇಣ ಅವಳು ಅವನಿಗೆ ಮನಸ್ಸು ಕೊಟ್ಟು ಪ್ರೀತಿಸತೊಡಗಿದಳು. ಒಂದು ದಿನ ಆ ತರುಣನ ದಾರಿಗಡ್ಡಲಾಗಿ ನಿಂತು ತನ್ನೆದೆಯೊಳಗಿನ ಪ್ರೇಮವನ್ನು ನಿವೇದಿಸಿಕೊಂಡಳು. ’ನಿನ್ನ ಮೇಲೆ ಮನಸ್ಸಾಗಿದೆ, ನಿನ್ನನ್ನು ಬಿಡಲಾರೆ, ನನ್ನನ್ನು ಲಗ್ನವಾಗು’ ಎಂದು  ಅವನ ಬೆನ್ನು ಬಿದ್ದಳು. ಆದರೆ ಪೋತುರಾಜ ಹೇಳಿಕೇಳಿ ಅಡವಿಯ ಕಾಡುಗಂವಾರ ಹೆಸರು ಮರಗಪ್ಪ, ಆತ ಆ ಹೆಣ್ಣನ್ನು ನೋಡಿ, ಅವಳ ಮಾತನ್ನು ಕೇಳಿ ಕಂಗಾಲಾದ, ಹೆದರಿದ ’ನಿಮ್ಮೂರಲ್ಲಿ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳು ಕಾಡು ಮನುಷ್ಯ ನಾನು, ನಮಗೆ ಊರಲ್ಲಿ ಹೊಲಮನೆ ಅಂತ ಏನಿಲ್ಲ, ನಿನ್ನನ್ನು ಲಗ್ನ ಆಗಲಾರೆ. ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡು. ದಾರಿ ಬಿಡು, ಸರಿ’ ಅಂತ ಅಂಗಲಾಚಿ ಬೇಡಿಕೊಂಡನು. ಆದರೆ ಅವಳು ದಾರಿ ಬಿಡಲಿಲ್ಲ. ಅವನ ಹಿಂದೆಯೇ ಓಡಿಬಂದಳು. ನಂತರ ಮರಗಪ್ಪ ಆ ಊರಿನ ಮುಖ್ಯಸ್ಥರಾದ ಸಾಹುಕಾರ ರೆಡ್ಡಿಗೆ ಎಲ್ಲ ವಿಷಯ ತಿಳಿಸಿದ. ’ಈ ಹೆಣ್ಣುಮಗಳು ನನ್ನನ್ನು ಲಗ್ನವಾಗೆಂದು ಪದೇ ಪದೇ ಪೀಡಿಸುತ್ತಿದ್ದಾಳೆ. ಸಾಹೇಬರೇ ಬೇಡವೆಂದು ಎಷ್ಟು ಹೇಳಿದರೂ ಕೇಳುತ್ತಿಲ್ಲ. ನಾನೇನು ಮಾಡಲಿ ಸಾಹೇಬರೆ’ ಎಂದು ತನ್ನ ಸ್ಥಿತಿಯನ್ನು ತಿಳಿಸಿ ಗೋಳಾಡಿದ. ಆಗ ಆ ಸಾಹುಕಾರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡನು. ನಂತರ ’ಅವಳಾಗಿಯೇ ನಿನ್ನನ್ನು ಮೋಹಿಸಿದ್ದಾಳೆ. ನಿನ್ನನ್ನು ಮದುವೆಯಾಗಲು ಹಟ ಹಿಡಿದಿದ್ದಾಳೆ. ಅವಳಿಗೆ ಏನು ಹೇಳಿದರೂ ಉಪಯೋಗವಿಲ್ಲ. ಒಮ್ಮೆ ಒಂದು ಹೆಣ್ಣು ಒಂದು ಗಂಡಿಗೆ ಮನಸ್ಸು ಕೊಟ್ಟರೆ ಮುಗೀತಪ್ಪ ಅವನನ್ನೇ ಲಗ್ನ ಆಗೋದು, ಇಲ್ಲವೇ ಖಂಡಿತ ಸಾಯೋದು. ಅದೇ ಅವಳ ಹಟವಾಗಿರ‍್ತದೆ’ ಅಂತ ಹೇಳಿ ಆ ಹೆಣ್ಣುಮಗಳ ಏಳು ಜನ ಅಣ್ಣಂದಿರಿಗೆ ಕರೆಸಿ, ಇದೆಲ್ಲವನ್ನು ಹೇಳೀ, ಅವರ ಮದುವೆ ಮಾಡಿಸಿದರು.

ಮುಂದೆ ಕಾಡಿನಲ್ಲಿ ಅವ್ವ, ಮಗ, ಸೊಸೆ ಒಂದೇ ಗುಡಿಸಲಿನಲ್ಲಿ ವಾಸವಾಗಿದ್ದರು. ಮುಂದೆ ಆ ದಂಪತಿಗಳಿಗೆ ಏಳು ಮಂದಿ ಹೆಣ್ಣು ಮಕ್ಕಳು ಹುಟ್ಟಿದರು. ಅವರೆಲ್ಲ ಬೆಳೆದು ದೊಡ್ಡವರಾಗಿ ಮದುವೆ ವಯಸ್ಸಿಗೆ ಬಂದರು.

ಮನೆಯಲ್ಲಿ ದನ, ಕುರಿಗಳಿದ್ದವು. ಅವರು ಅವುಗಳನ್ನು ಕಾಯಲು ಕಾಡಿಗೆ ಹೋಗುತ್ತಿದ್ದರು. ಹೀಗೆ ಕುರಿಕಾಯಲು ಹೋಗಿದ್ದ ಸಣ್ಣ ಮಗಳು ಮಣ್ಣಿನಿಂದ ಒಂದು ಗೊಂಬೆ ಮಾಡಿದಳು. ಕುರಿಗಳನ್ನು ಮೇಯಲು ಬಿಟ್ಟು ಅವಳು ಆ ಗೊಂಬೆಗೆ ಕಾಡು ಹೂವುಗಳಿಂದಲೇ ಗುಡಿಯನ್ನೂ ತಯಾರಿಸಿದಳು. ಅದನ್ನೆತ್ತಿಕೊಂಡು ತನ್ನ ತಲೆಯ ಮೇಲಿಟ್ಟುಕೊಂಡು ಎರಡೂ ಕೈಗಳಲ್ಲಿ ಎರಡು ಕಟ್ಟಿಗೆ ತುಂಡುಗಳನ್ನು ಹಿಡಿದು ಒಂದಕ್ಕೊಂದು ಬಾರಿಸುತ್ತ ಊರಿಗೆ ಬರುತ್ತಾಳೆ. ಊರ ನಡುವೆ ಅದನ್ನು ಇಳಿಸಿ ಹಾಡುತ್ತ ಅದರ ಸುತ್ತ ಕುಣಿಯುತ್ತಾಳೆ. ಊರಿನಲ್ಲಿದ್ದ ಜನರೆಲ್ಲ ಅಲ್ಲಿಗೆ ಬಂದು ಆ ಗುಡಿಯಲ್ಲಿಯ ದೇವತೆಯನ್ನು ನೋಡಿ ’ಮರಗವ್ವ’ ಎಂದು ಕರೆದು ಪೂಜಿಸುತ್ತಾರೆ.

ಕುಂಕುಮ, ಅರಿಶಿಣ, ಹೂ, ಕೋಳಿ ಮೊಟ್ಟೆ ಈ ಮೊದಲಾದವುಗಳನ್ನು ದೇವಿಗೆ ಅರ್ಪಿಸುತ್ತಾನೆ. ಅಂದಿನಿಂದ ಈ ಹೊಸ ದೇವಿ ಹುಟ್ಟಿಕೊಂಡು, ಬುರುಬರು ಪೋಚಮ್ಮ ಅಂದ್ರೆ, ಈ ಮರಗಮ್ಮ ಆಡಿಸುವವರು ಎಂಬ ಹೆಸರು ಈ ಜನಾಂಗಕ್ಕೆ ಬಂದಿತು. ಅದೇ ಕ್ರಮೇಣ ದುರಗಮುರಗಿಯರು ಎಂಬ ಹೆಸರು ಪಡೆಯಿತು.

ಇಲ್ಲಿ ಇನ್ನೊಂದು ಮುಖ್ಯ ಅಂಶವನ್ನು ಗಮನಿಸಬಹುದು. ಈ ಗುಡಿ ಮಾಡಿದವಳು ಒಬ್ಬ ಹೆಣ್ಣು, ಗುಡಿಯಲ್ಲಿರುವ ದೇವರು ಸಹ ಹೆಣ್ಣುದೇವಿಯೇ. ಅಂದಿನ ದಿನಗಳಲ್ಲಿ ಹೆಂಗಸೇ ಎಲ್ಲದಕ್ಕೂ ಕಾರಣಕರ್ತಳಾಗಿದ್ದಿರಬಹುದು ಮತ್ತು ಅವಳಿಗೆ ಗಂಡಸಿಗಿಂತ ಹೆಚ್ಚು ಪ್ರಾಮುಖ್ಯತೆಯಿತ್ತು ಎಂಬುದನ್ನು ಈ ಕಥೆ ಸೂಚಿಸುತ್ತದೆ.