ಸೂಫಿಗಳು ಅಥವಾ ದುರ್ವೇಶ್ಗಳ ಆಗಮನ:

ಮೊಹಮ್ಮದ್ ಪೈಗಂಬರ‍್ ಅವರ ನಂತರ ಹಜರತ್ ಅಬೂಬಕ್ಕರ‍್ ಸಿದ್ದೀಖಿ, ಹಜರತ್ ಉಮರ‍್ ಬಿನ್ ಫಾರೂಖ್, ಹಜರತ್ ಉಸ್ಮಾನ ಘನಿ, ಇವರಿಗೆ ಖಿಲಾಫತ್ (ಉತ್ತರಾಧಿಕಾರಿ) ದೊರೆಯಿತು. ಇವರ ಅನುಯಾಯಿಗಳ ಗುಂಪುಗಳು ಸಮುದ್ರ ಹಾಗೂ ನೆಲಮಾರ್ಗವಾಗಿ ಬೇರೆ ಬೇರೆ ಕಾಲದಲ್ಲಿ ಭಾರತಕ್ಕೆ ಬಂದರು. ಇವರಲ್ಲಿ ವ್ಯಾಪಾರಿಗಳು, ಧರ್ಮಯೋಧರು, ರಾಜಗುರುಗಳು, ತತ್ವಾರ್ಥಿಗಳು ಇನ್ನು ಮುಂತಾದವರಿದ್ದರು. ಅರಬ್ ಮತ್ತು ಭಾರತದ ಕಡಲ ವ್ಯಾಪಾರ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದು ಆರ್ಥಿಕವಾಗಿ ಬಲಿಷ್ಠವಾಗಿತ್ತು. ಅರಬ್ಬೀ ಸಮುದ್ರದ ದಂಡೆಯಲ್ಲಿದ್ದ ಕರಾಚಿ, ಕಲ್ಲಿಕೋಟೆ, ತಿರುವಾಂಕೂರು, ಮಂಗಳೂರು ಮುಂತಾದ ನಗರಗಳು ವ್ಯಾಪಾರ ಕೇಂದ್ರಗಳಾಗಿದ್ದವು. ಕೇರಳದ ಸೀಮೆಗಳಲ್ಲಿ ಇಸ್ಲಾಂ ಧರ್ಮವು ಮೊದಲು ಕಾಣಿಸಿಕೊಂಡಿತು. ಇಲ್ಲಿಯ ಮಲಬಾರರು ಅರಬ್ಬರಿಂದ ಈ ಧರ್ಮವನ್ನು ಸ್ವೀಕರಿಸಿ ಪ್ರಚಾರಕ್ಕೂ ಕಾರಣರಾದರು.

ಭಾರತಕ್ಕೆ ಬಂದ ಮೊದಲ ಗುಂಪು ಕ್ರಿ.ಶ. ೬೨೮ರಲ್ಲಿ ಹಜರತ್ ಅಬಿಯವರದಾಗಿತ್ತು. ಧರ್ಮ ಪ್ರಚಾರ ಮಾಡುತ್ತ ಬಂದು, ಚೀನಾ ದೇಶಕ್ಕೆ ಹೊರಟು ಹೋದರು. ಕ್ರಿ.ಶ. ೬೩೬ರಲ್ಲಿ ಒಟ್ಟೊಮನ್ ಥಾಖಿಫಿ ಭಾರತಕ್ಕೆ ಬಂದ ಮೊದಲ ಮುಸ್ಲಿಮ್ ಎಂದು ಹೇಳುತ್ತಾರೆ. ಬಹರೈನ್ ದೇಶದ ರಾಜ್ಯಪಾಲರಾದ ಇವರು ಮಲಬಾರಿನ “ಚೇರಮನ್ ಪೆರುಮಾಳ್‌”ನ ಆಸ್ಥಾನಕ್ಕೆ ಬಂದರೆಂದು ಸಹ ಹೇಳುತ್ತಾರೆ. ಕ್ರಿ.ಶ. ೬೩೭ರಲ್ಲಿ ಹಜರತ್ ಉಮರ್‌ರವರು ನೇತೃತ್ವದಲ್ಲಿ ಬಂದ ಗುಂಪಿನಲ್ಲಿ ವ್ಯಾಪಾರಸ್ಥರು, ಯೋಧರು, ಫಖೀರರು, ಪಂಡಿತರು ಹೆಚ್ಚಾಗಿದ್ದರು. ಇಲ್ಲಿಯ ಬಂಧರುಗಳನ್ನು ಆಕ್ರಮಿಸಿಕೊಂಡು “ಅಬಲಾ” ಎಂಬ ಪ್ರದೇಶವನ್ನು ತಮ್ಮ ವ್ಯಾಪಾರದ ಕೇಂದ್ರವನ್ನಾಗಿ ಮಾಡಿಕೊಂಡರು. ಕ್ರಿ.ಶ ೬೪೭ರಲ್ಲಿ ಉಸ್ಮಾನೇ ಘನೀಯವರ ಗುಂಪು ಬಂದಿತು. ಇಲ್ಲಿಯ ’ಸಿಂಧ್’ ಪ್ರದೇಶವನ್ನು ಆಕ್ರಮಿಸಿಕೊಂಡಿತು.

ಕ್ರಿ.ಶ. ೮೧೫ರಲ್ಲಿ ಕೋಡಂಗಲ್ಲಿನ ದೊರೆ ಇಸ್ಲಾಂ ಸ್ವೀಕಾರ ಮಾಡಿ ಮದೀನಕ್ಕೆ ಹೋಗಿ, ಮಾಲಿಕ್ ಬಿನ್ ದಿನಾರ್‌ರವರಿಗೆ ಕಳುಹಿಸಿದನು. ಇವರು ತಮ್ಮ ಅನುಯಾಯಿಗಳೊಂದಿಗೆ ಕರಾವಳಿಯುದ್ಧಕ್ಕೂ ಮತ ಪ್ರಚಾರ ಮಾಡಿದರು. ’ಚೆರ್‌ಮಾನ್ ಪೆರಮಾಳ್’ ನಂತರ ಬಂದ ಒಂದನೇಯ ಜಮ್‌ರೋನ್ ರಾಜನಿಗೆ ’ಶಖುಲ್ ಖಮರ‍್’ ಬಗ್ಗೆ ತಿಳಿದಿತ್ತು. ’ಶಖುಲ್ ಖಮರ‍್’ ಎಂದರೆ ಕವಲೊಡೆದ ಚಂದ್ರ ಎಂದು. ಪೈಗಂಬರವರು ತಮ್ಮ ಬೆರಳನ್ನು ಚಂದ್ರನಿಗೆ ತೋರಿಸಿ ಕವಲೊಡೆಯುವಂತೆ ಹೇಳಿದರೆ ಚಂದ್ರ ಕವಲಾಗಿ ಪುನಃ ಒಂದಾಗುತ್ತಿತ್ತು. ಈ ರೀತಿ ಯಾರು ವಿಭಾಗಿಸುತ್ತಿದ್ದರೆಂದು ಇವನಿಗೆ ಗೊತ್ತಿರಲಿಲ್ಲ. ಮಾಲೀಕ್ ಬಿನ್ ದಿನಾರ‍್ ಭಾರತಕ್ಕೆ ಬಂದ ನಂತರ ಜಮ್‌ರೋನ್ ರಾಜನಿಕಗೆ ಭೇಟಿ ಮಾಡಿ ’ಶಖುಲ್‌ಖಮರ‍್’ ಬಗ್ಗೆ ತಿಳಿಸಿದರು. ಇಸ್ಲಾಂ ಧರ್ಮದ ಸ್ವೀಕರಿಸಿದನು. ಹಾಗೂ ತನ್ನ ಹೆಸರನ್ನು ’ಅಬ್ದುಲ್‌ರಮಮಾನ್ ಸಾಮಾರಿ’ ಎಂದು ಬದಲಾಯಿಸಿಕೊಂಡನು. ನಂತರ ಈ ರಾಜನ ಒಪ್ಪಿಗೆ ಪಡೆದು ಮಾಲಿಕ್ ಬಿನ್ ದಿನಾರ‍್ರವರ ಧರ್ಮ ಪ್ರಚಾರ ಮಾಡಿದ್ದುದಲ್ಲದೆ ’ಕಾಸರಗೋಡ್‌’ನಲ್ಲಿ ಮಸೀದಿಯನ್ನು ಸಹ ಕಟ್ಟಿಸಿದರು.

ಹನ್ನೊಂದನೆಯ ಶತಮಾನದಲ್ಲಿ ರಾಜ್ಯ ವಿಸ್ತರಣವೇ ತಮ್ಮ ಉದ್ದೇಶವಾಗಿಟ್ಟುಕೊಂಡ ಅನೇಕರು ಅಪಘಾನಿಸ್ತಾನದ ’ಖೈಬರ‍್’ ಕಣಿವೆಯ ಮೂಲಕ ನೆಲಮಾರ್ಗವಾಗಿ ಭಾರತಕ್ಕೆ ಬಂದರು. ಇಸ್ಲಾಂ ಧರ್ಮದ ಪ್ರಚಾರವೂ ಮುಖ್ಯವಾಗಿತ್ತು. ’ಜೆಹಾದ್’ ಎಂಬ ಹೆಸರಿನಲ್ಲಿ ಸೂಫಿ ಯೋಧರು ಮುಸ್ಲಿಂ ದೊರೆಯ ರಾಜ್ಯ ವಿಸ್ತರಣೆಯು, ಧರ್ಮ ವಿಸ್ತರಣೆಯೂ ಹೌದು ಎಂದು ರಾಜರ ಸೈನಿಕ ಸೇವೆ ಮಾಡುತ್ತ ತಮ್ಮನ್ನು ಸಮರ್ಪಿಸಿಕೊಂಡರು. ಇವರು ಖಡ್ಗ ಮತ್ತು ಕುದುರೆಯ ಗೊರಸುಗಳ ಜೊತೆಯಲ್ಲಿ ಕಂಬಳ ಮತ್ತು ಕಿಶ್ತಿಯನ್ನು ಹಿಡಿದು ಕೊಂಡು ಬಂದರು. ಇವರಲ್ಲಿ ಆಪಘಾನಿಸ್ತಾನದಿಂದ ಬಂದ ಶೇಕ್ ಅಬುಲ್ ಹಸನ್ ಹುಜವೇರಿಯು ಮೊದಲಿಗರು. ಅನೇಕರು ಧರ್ಮಯುದ್ಧ ಮಾಡಿ ವೀರ ಮರಣವನ್ನು ಹೊಂದಿದರು. ಸೈಯದ್ ಅಲಿ ಶಹೇದ್, ತಾಜುದ್ದೀನ್ ಮುನಾವರ‍್ ಇವರಲ್ಲಿ ಮುಖ್ಯರು.

ರಹಮತ್‌ತರೀಕೆರೆಯವರ ಪ್ರಕಾರ ಕರ್ನಾಟಕದಲ್ಲಿ ಮೊದಲಿಗೆ ಕಾಣಿಸಿಕೊಂಡ ಸೂಫಿಗಳಲ್ಲಿ ಜಿಹಾದಿ ಸೂಫಿಗಳೆ ಪ್ರಮುಖರು. ಶೇಕ್ ಸೂಫಿ ಸರ್‌ಮಸ್ತ್, ಪೀರ‍್ ಖಂಡಾಯತ್, ಶೇಕ್ ಷಹೇದ್ ಇನ್ನು ಮುಂತಾದವರು. ರಾಜ್ಯ ವಿಸ್ತರಣಾ ಹಾದಿಯಲ್ಲಿ ಬಂದ ಅನೇಕರು ಇಲ್ಲಿಯೇ ನೆಲೆಸಿ ರಾಜ್ಯವನ್ನು ಕಟ್ಟಿ ಆಳಲು ತೊಡಗಿದರು ಮತ್ತು ಧರ್ಮ ಪ್ರಚಾರಕ್ಕು ಉತ್ತೇಜನ ನೀಡುತ್ತಿದ್ದರು. ಹೀಗೆ ಆಳುವ ರಾಜರು ಇಸ್ಲಾಂ ದೇಶಗಳಿಂದ ಅನೇಕ ಧರ್ಮಗುರುಗಳನ್ನು ಸೂಪಿಯರನ್ನು ಬರಮಾಡಿಕೊಳ್ಳುತ್ತಿದ್ದರು. ಶಹಬುದ್ದೀನ್ ಘೋರಿಯವರ ಆಹ್ವಾನದ ಮೇರೆಗೆ ಅಜ್ಮೀರದ ’ಖಾಜಾ ಗರೀಬುನ್ನವಾಜ್‌, ಮೊಯಿನುದ್ದೀನ್ ಚಿಸ್ತಿಯಾ’ರವರು ದೆಹಲಿಗೆ ಆಗಮಿಸಿದರು ಅಹಮದ್ ಷಾ-ಬಹುಮನಿಯು ಫರ್ಶಿಯದಿಂದ ನಿಯಾಮತುಲ್ಲ ಖಾದ್ರಿ’ಯವರನ್ನು ಬರಮಾಡಿಕೊಂಡರು.

ಹೀಗೆ ವಿವಿಧ ಕಾರಣಗಳಿಂದ ಭಾರತಕ್ಕೆ ಬಂದ ’ದುರ್‌ವೇಶ್‌’ ಅಥವಾ ಸೂಫಿಗಳಲ್ಲಿ ದಾದಾ ಹಯಾತ್ ಕಲಂದರ್‌ರವರು ಸಹ ಮುಖ್ಯರಾಗಿದ್ದಾರೆ. ಇವರು ತಮ್ಮ ಒಂಬೈನೂರು ಜನ ಶಿಷ್ಯರನ್ನು ಕರೆದುಕೊಂಡು ಬಂದು ತಿರುಚಿನಾಪಲ್ಲಿ, ಶಿವನಸಮುದ್ರ, ಬಾಬಾಬುಡನ್-ಗಿರಿಯಲ್ಲಿ ನೆಲೆಸಿದರು. ಇವರ ಅನೇಕ ಜನ ಶಿಷ್ಯರು ವಿವಿಧ ಹಳ್ಳಿ ಹಾಗೂ ಪಟ್ಟಣಗಳಲ್ಲಿ ವ್ಯಾಪಿಸಿಕೊಂಡಿದ್ದಾರೆ. ಇಲ್ಲೆಲ್ಲಾ ಇವರ ಗೋರಿಗಳಿವೆ. ದಾದಾ ಹಯಾತ್ ಖಲಂದರ‍್ ಅಥವಾ ಶೇಖ್ ಅಬ್ದುಲ್ ಮಕ್ಕಿ ಇವರನ್ನು ’ತಬ್‌ರೇ ಆಲಂ ಬಾದಷಾ’ ಎಂದು ಸಹ ಕರೆಯುತ್ತಾರೆ. ತಬ್‌ರೇ ಆಲಂ ಬಾದಷಾ ಹಾಗೂ ದಾದಾ ಹಯಾತ್ ಖಲಂದರ್‌ರವರು ಬೇರೆ ಬೇರೆ ವ್ಯಕ್ತಿಯೆಂದು ಹೇಳುತ್ತಾರೆ.

ಒಟ್ಟಿನಲ್ಲಿ ದಾದಾ ಹಯಾತ್ ಖಲಂದರ್‌ರವರು ಮೊಹಮ್ಮದ್ ಪೈಗಂಬರ್‌ರವರ ಕಾಲದಲ್ಲಿ ಇದ್ದರೆಂದು ಹೇಳುತ್ತಾರೆ. ’ಅಸಾಹಬೇ ಸುಫಾ’ ಎಂಬ ಹಟ್ಟಿಯಲ್ಲಿ ಪೈಗಂಬರ್‌ರವರು ಇಸ್ಲಾಂ ಧರ್ಮ ಪ್ರಚಾರ ಮಾಡುವಾಗ ದಾದಾ ಹಯಾತ್ ಖಲಂದರ್‌ರವರು ಇವರ ಧರ್ಮಬೋಧನೆ ಯನ್ನು ಆಲಿಸುತ್ತಿದ್ದರಂತೆ ಚಂದ್ರಗಿರಿಯ ಪರ್ವತದಲ್ಲಿ ಹೋಗಿ ನೆಲೆಸುವಂತೆ ಪೈಗಂಬರ್‌ರವರು ಹೇಳಿದರಂತೆ. ಆದ್ದರಿಂದ ಇವರು ಚಂದ್ರಗಿರಿಯ ಪರ್ವತವನ್ನು ಹುಡುಕಿ-ಕೊಂಡು ಭಾರತಕ್ಕೆ ಬಂದು ಬುಡೇನ್‌ಗಿರಿಯಲ್ಲಿ ನೆಲೆಸಿದರೆಂದು ಜನಪದರು ಹೇಳುತ್ತಾರೆ. ದಾದಾ ಹಯಾತ್ ಖಲಂದರ್‌ರವರು ’ಚಿರಂಜೀವಿ’ ಎಂದೂ ಇವತ್ತಿಗು ಜೀವಂತರಾಗಿದ್ದಾರೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಇವರ ಗೋರಿ ತಿರುಚಿನಾಪಲ್ಲಿಯಲ್ಲಿ ಇದೆ ಎನ್ನುತ್ತಾರೆ.

ಕೆಲ ಸೂಫಿಗಳು ಮಸೀದಿಗಳನ್ನು ಕಟ್ಟಿದರೆ, ಕೆಲವರು ಗುರು, ಶಿಷ್ಯ ಪರಂಪರೆಯನ್ನು ಬೆಳೆಸಿದರು. ಇವರಲ್ಲಿ ಅಜ್ಮೀರದ ಖಾಜಾಗರೀಬು ನವ್ತಾಜ್, ಬುಡೇನ್‌ಗಿರಿಯ ದಾದಾ ಹಯಾತ್ ಖಲಂದರ್‌ರವರು ಪ್ರಮುಖರಾದವರು.

ಜನಪದರು ಹೇಳುವಂತೆ ಭಾವ ಪ್ರಖೋದ್ದೀನ್ ರವರು ಶಿರಿಸ್ಥಾನ್ ದೇಶದ ಚಕ್ರವರ್ತಿ. ಇವರು ಆಂಧ್ರಪ್ರದೇಶದ ಪೆನ್‌ಗುಂಡಕ್ಕೆ ಬಂದು ದೇವಸ್ಥಾನದಲ್ಲಿ ನೆಲೆಸಿದರು. ದೇವಸ್ಥಾನದ ಪುರೋಹಿತರು ಬೇರೆಡೆಗೆ ಹೋಗುವಂತೆ ಹೇಳಿದರು. ಆದರೆ ಇವರು ದೇವಸ್ಥಾನದಲ್ಲಿಯೇ ವಾಸಮಾಡತೊಡಗಿದರು. ಒಮ್ಮೆ ಎತ್ತನ್ನು ಜೂಬ್ಹ ಮಾಡಿ ಅದರ ಚರ್ಮ, ಕಾಲು, ತಲೆಗಳ ಎತ್ತಿಟ್ಟು ಅದರ ಮಾಂಸವನ್ನು ಇವರು ಮತ್ತು ಇವರ ಶಿಷ್ಯರು ಅಡುಗೆ ಮಾಡಿ ತಿಂದರು. ಇದರಿಂದ ಹಿಂದೂ, ಮುಸ್ಲಿಂರಲ್ಲಿ ಗಲಾಟೆಯೇ ನಡೆಯಿತು. ತೆಗೆದಿಟ್ಟ ಎತ್ತಿನ ಭಾಗಗಳನ್ನು ಜೋಡಿಸಿ ಅದರ ಮೇಲೆ ಗಿಲೇಫ್ ಹೊದಿಸಿ, ಎದ್ದು ನಿಲ್ಲುವಂತೆ ಹೇಳಿದರು. ತಕ್ಷಣವೇ ಎತ್ತು ಎದ್ದು ನಿಂತಿತು. ಈ ಪವಾಡವನ್ನು ಕಣ್ಣಾರೆ ನೋಡಿದ ಅನೇಕರು ಇವರ ಶಿಷ್ಯರಾದರು. ಅಂದಿನಿಂದ ಪೆನ್‌ಗುಂಡವು ಫಖೀರ ಕೇಂದ್ರಸ್ಥಳವಾಯಿತು. ಈ ಸಂತರ ಉರುಸ್ ಸಂದರ್ಭದಲ್ಲಿ ಅನೇಕ ಜನರನ್ನು ಫಖೀರನನ್ನಾಗಿ ಮಾಡುವ ಸಂಪ್ರದಾಯವಿದೆ.

ಹೀಗೆ ಬೇರೆ ಬೇರೆ ಕಾಲದಲ್ಲಿ ಬಂದ ವ್ಯಾಪಾರಸ್ತರು, ಧರ್ಮಪ್ರಚಾರಕರು ಇಲ್ಲಿಯೇ ನೆಲೆಸಿ ಇಡೀ ಭಾರತದಾದ್ಯಂತ ವ್ಯಾಪಿಸಿಕೊಂಡರು. ಹಾಗೆಯೇ ಸ್ಥಳೀಯರ ಸಂಪರ್ಕ ಮತ್ತು ಸಂಬಂಧವನ್ನು ಬೆಳೆಸಿ ಇಲ್ಲಿಯ ಸ್ತ್ರೀಯರನ್ನು ಮದುವೆಯಾದರು. ಇವರು ತಮ್ಮದೇ ಆದ ಜೀವನ ವಿಧಾನ, ಆಚಾರ, ವಿಚಾರ, ಉಡುಗೆ, ತೊಡುಗೆ, ಕಲೆ, ಸಂಪ್ರದಾಯಗಳನ್ನು ಹೊಂದಿದ್ದು ವೈವಿದ್ಯಮಯವಾದ ರಂಗಿಗೆ ಕಾರಣರಾದರು.

ದುರ್ವೇಶ್ ಹೆಸರಿನ ಅರ್ಥ ಮತ್ತು ಪ್ರಾಚೀನತೆ

’ದುರ್‌ವೇಶ್‌’ ಎಂಬ ಪದ ಪಾರ್ಸಿ ಭಾಷೆಯಿಂದ ಬಂದಿದೆ. ’ದುರ್‌’ ಎಂದರೆ ಮುತ್ತು, ’ವೇಶ್‌’ ಎಂದರೆ ಅದನ್ನು ರಕ್ಷಿಸುವವನು ಎಂದು ಅರ್ಥವಿದೆ. ಒಟ್ಟಿನಲ್ಲಿ ದುರ್‌ವೇಶ್‌ಎಂದರೆ ’ಅಲ್ಹಾವಾಲ’= ಅಲ್ಹಾನಿಗೆ ಸಮರ್ಪಿತನಾಗಿರುವವನು. ಅಲ್ಹಾನ ಮಿತ್ರ ಎಂದು ಖುರಾನಿನಲ್ಲಿ ಈ ರೀತಿ ಹೇಳಲಾಗಿದೆ.

’ಅಲಾ ಇನ್ನ ಅವ್‌ಲೀಯ ಅಲ್ಲಾಹೀ ಲಾ ಖೌಫುನ್ ಅಲೇಹಿಂ ಯಹಜನೂನ್ ಗಮನವಿಟ್ಟು ಆಲಿಸಿ ಅಲ್ಹಾನ ಗಾಢ ಪ್ರೇಮಿಗಳಿಗೆ ಇಹ ಪರಗಳಲ್ಲಿ ಭಯ ಇರುವುದಿಲ್ಲ. ಅವನು ಅರಿಷಡ್ವರ್ಗಗಳಿಂದ ದೂರ ಇರುತ್ತಾನೆ.
ಅಂತವನು ದುರ್‌ವೇಶ್ ಅನ್ನಿಸಿಕೊಳ್ಳುತ್ತಾನೆ.

೧.   ಇಮಾನಿಯತ್ = ಅಲ್ಹಾನಲ್ಲಿ ಅಚಲ ನಂಬಿಕೆ ಇಡುವವನು.

೨.   ಇಬಾದತ್ = ಇಸ್ಲಾಮಿನ ಕಡ್ಡಾಯ ವಿಧಿಗಳಾದ ಕಲ್ಹಾ, ನಮಾಜ್, ರೋಜ, ಝಕಾತ್, ಹಜ್ ಇವುಗಳಲ್ಲಿ ನಂಬಿಗೆ ಇಟ್ಟು ಪಾಲಿಸುವವನು.

೩.    ಮಾಮಿಲತ್= ಸತ್ ಸಂಪನ್ನನಾಗಿ, ಲೌಕಿಕ ವ್ಯವಹಾರಗಳಲ್ಲಿ ತೊಡಗಿರುವವನು

೪.   ಮಾಶೀರತ್= ತಂದೆ, ತಾಯಿಗಳ, ನೆರೆಹೊರೆಯವರ, ಗುರು, ಹಿರಿಯವರ, ಸಂಬಂಧಿಕರ, ಸ್ನೇಹಿತರ, ಹಕ್ಕುಬಾದ್ಯತೆಗಳನ್ನು ಅರಿತು ನಡೆಯುವವನು.

೫.   ಅಖ್‌ಲಾಖ್‌= ಕೆಟ್ಟ ಚಟಗಳಿಂದ ದೂರವಿದ್ದು, ಸದ್ಗುಣಗಳನ್ನು ಪಾಲಿಸುವವನು

ಹೀಗೆ ಮೇಲಿನ ಅಂಶಗಳನ್ನು ಯಾರು ಅರಿತು ನಡೆಯುತ್ತಾನೋ ಅವನನ್ನು ದುರ್‌ವೇಶ್ ಎಂದು ಕರೆಯುಲಾಗುತ್ತದೆ.

ಉರ್ದು ವಿಶ್ವಕೋಶದಲ್ಲಿ ದುರ್‌ವೇಶ್ ಪದದ ಅರ್ಥ, ಫಖೀರ್‌, ಭಿಕ್ಷುಕ ಸಾಹೇಬ್ ಮಾರೀಫತ್ ಎಂದು ತಿಳಿಸಲಾಗಿದೆ.

ಫಖೀರ‍್ = ಈ ಪದವು ’{, ಯೇ, ಖಾ, ರೇ’ ಎಂಬ ನಾಲ್ಕು ಅಕ್ಷರಗಳನ್ನು ಒಳಗೊಂಡಿದೆ.

ಫೆ ಎಂದರೆ ಫಾಖಾ- ಹಸಿವು, ಬಾಯಾರಿಕೆ, ಕಾಮಾಸಕ್ತಿ ಇತ್ಯಾದಿ ತೃಷೆಗಳನ್ನು ನಿಗ್ರಹಿಸುವ ಶಕ್ತಿ.

ಯೇ ಎಂದರೆ ಯಾದೇ ಇಲಾಹಿ-ಅಲ್ಹಾನ ಧ್ಯಾನದಲ್ಲಿ ನಿರತನಾಗುವುದು

ಖಾ ಎಂದರೆ ಖೀನಾಯತ್-ಸಂತೃಪ್ತಿ, ಭಕ್ತನಾಗುವ ಇಚ್ಛೆ.

ರೇ ಎಂದರೆ ರಿಯಾಜ್-ಸತತ ಅಭ್ಯಾಸದಲ್ಲಿ ತೊಡಗುವುದು

ಈ ಮೇಲಿನ ನಾಲ್ಕು ಅಂಶಗಳನ್ನು ಜಯಿಸುವವನು ’ಫಖೀರ್‌’ ಎನಿಸಿಕೊಳ್ಳುತ್ತಾನ.ಎ

ಭಿಕ್ಷುಕ: ಇತ್ತೀಚಿನ ದಿನಗಳಲ್ಲಿ ಫಖೀರ‍್ ಎಂಬ ಹೆಸರಿನಲ್ಲಿ ಊರು, ಹಳ್ಳಿಗಳಿಗೆ ಹೋಗಿ ಧಾರ್ಮಿಕ ಗೀತೆಗಳನ್ನು ಹಾಡುತ್ತ ದುಡ್ಡು, ಕಾಸು, ದವಸ, ಧಾನ್ಯ ಸಂಗ್ರಹಿಸುವವನು.

ಸಾಹೇಬೆ ಮಾರೀಫತ್: ಇಸ್ಲಾಂ ಧರ್ಮದಲ್ಲಿ ಸತ್ಯಶೋಧನೆಗೆ ನಾಲ್ಕು ಮಾರ್ಗಗಳಿಗೆ. ೧) ಶರಿಯತ್, ೨) ಮಾರಿಫತ್, ೩) ತರೀಖತ್, ೪) ಹಖೀಖತ್ ಎಂದು.

೧) ಶರೀಯತ್- ಮುಸಲ್ಮಾನನ ಬದುಕು ಲೌಕಿಕ, ಬದುಕಿಗಷ್ಟೇ ಸೀಮಿತವಾಗಿರದೆ, ಇಸ್ಲಾಮಿನ ಕಡ್ಡಾಯ ವಿಧಿಗಳಾದ ಕಲ್ಮಾ, ನಮಾಜ್, ರೋಜ (ಉಪವಾಸ) ಝಕಾತ್, ಹಜ್‌ಗಳೊಂದಿಗೆ ಚಾರಿತ್ರ‍್ಯ, ಪರೋಪಕಾರ, ಸೇವೆ ಮೊದಲಾದವುಗಳನ್ನು ಒಳಗೊಂಡಿವೆ.

೨) ಮಾರೀಫತ್- ಅಲ್ಹಾನ ಸಾಮಿಪ್ಯಕ್ಕೆ ತಲುಪುವುದು ಮತ್ತು ಅವನನ್ನು ಅರಿಯುವ ಜ್ಞಾನವನ್ನು ಸಂಪಾದಿಸುವುದು. ಈ ಮಾರ್ಗದಲ್ಲಿ ಇರುವುದನ್ನು ಆರೀಫೆ ಬಿಲ್ಲಾ ಎಂದು ಸಹ ಕರೆಯುತ್ತಾರೆ.

೩) ತರೀಖತ್- ಅಲ್ಹಾನ ಸಾಮೀಪ್ಯಕ್ಕೆ ತಲುಪಲು ಮತ್ತು ಅವನನ್ನು ಅರಿಯುವ ಜ್ಞಾನವನ್ನು ಸಂಪಾದಿಸಲು ’ತರೀಖತ್’ ಎಂಬ ಮಾರ್ಗದಲ್ಲಿ ನಡೆಯಬೇಕಾಗುತ್ತದೆ. ಈ ಮಾರ್ಗದಲ್ಲಿ ನಡೆಯಬೇಕಾದರೆ, ಧಾರ್ಮಿಕ ಗುರುಗಳ ಮಾರ್ಗದರ್ಶನಬೇಕು. ಆದ್ದರಿಂದ ಇಲ್ಲಿ ಗುರು ಮತ್ತು ಶಿಷ್ಯ (ಪಿರ‍್ ಮತ್ತು ಮುರೀದ್)ರವರ ಪರಂಪರೆಯನ್ನು ಕಾಣಬಹುದು.

  • ಪೀರ‍್: (ಗುರು) ಧಾರ್ಮಿಕವಾಗಿ ಖಿಲಾಪತ್ (ನಾಯಕತ್ವ) ಪಡೆದವರು, ಧಾರ್ಮಿಕ ನಾಯಕರೆನಿಸಿಕೊಳ್ಳುತ್ತಾರೆ. ಇವರನ್ನು ಖಲೀಫೇ ಎಂದು ಸಹ ಕರೆಯಲಾಗುತ್ತದೆ.
  • ಮುರೀದ್‌(ಶಿಷ್ಯ) ಪೀರ‍್ ಮುರಿದ್ ಆಗಬೇಕಾದರೆ ಅಂತಃಕರಣ ಶುದ್ಧಗೊಳಿಸಿ ಮನಸ್ಸಿನ ಚಾಂಚಲ್ಯವನ್ನು ನಿಗ್ರಹಿಸುವ ಶಕ್ತಿ, ಗುರಿಯನ್ನು ಸಾಧಿಸುತ್ತೇನೆಂಬ ದೃಢವಿಶ್ವಾಸ, ಇಚ್ಛೆ, ಅಲ್ಹಾನ ಭಯ, ಆರಾಧನೆ, ತನ್ಮಯತೆ, ಪಾಪಗಳಿಗೆ ಪಶ್ಚಾತ್ತಾಪ, ತನ್ನನ್ನು ತಾನು ಅರಿಯುವ ಗುಣ ಮೊದಲಾದವುಗಳನ್ನು ಹೊಂದಿರಬೇಕು ಇಂಥಹ ವ್ಯಕ್ತಿ ’ಮುರೀದ್’ ಆಗುತ್ತೇನೆಂದು ಹೋದಾಗ ಅವರಿಗೆ ಮೊದಲು ’ಬಯ್ಯತ್’ ಕೊಡುತ್ತಾರೆ.
  • ಬಯ್ಯತ್-ಎಂದರೆ ಪೀರ‍್ಗಳು ನೀಡುವ ವಚನಕ್ಕೆ ಬದ್ಧರಾಗುವುದು ಅಥವಾ ದೀಕ್ಷೆ ಕೊಡುವುದು.

ವಚನ ಅಥವಾ ದೀಕ್ಷೆ

“ಮೈನೆ ಅಪ್ನೆ ಪೀರ‍್ ಸಾಬ್‌ಕೀ ತರಫ್‌ಸೇ ಗೌಸೆ ಪಾಕ್‌ಕೇ ಖಾಂದಾನ್ ಮೇ ಮುರಿದ್‌ಕಿಯಾ ಅಪ್ನೆ ಖುಬುಲ್‌ಕಿಯಾ” ನಾವು ನಮ್ಮ ಗುರುವಿನ ಮುಖಾಂತರ, ಗೌಸೇ ಪಾಕ್‌ರವರ ವಂಶದಲ್ಲಿ ನಿಮ್ಮನ್ನು ಶಿಷ್ಯರನ್ನಾಗಿ ಸ್ವೀಕರಿಸಿದ್ದೇವೆ, ಇದಕ್ಕೆ ತಮ್ಮ ಸಮ್ಮತಿ ನೀಡಿದ್ದೀರೋ?’
“ಅಲ್ಹಾಂದುಲಿಲ್ಲ ಮೈನೇ ಖುಬೂಲ್ ಕಿಯಾ”- ಹೌದು ಅಲ್ಹಾನ ನಾಮದಿಂದ ನನ್ನ ಸಮ್ಮತಿ ಇದೆ.

ಹೀಗೆ ಪೀರ್‌ರವರು ತಮ್ಮ ಗುರುವಿನ ಹಾಗೂ ಗೌಸೇಪಾಕ್‌ರವರ ವಂಶದಲ್ಲಿ ಶಿಷ್ಯರನ್ನಾಗಿ ಒಪ್ಪಿಕೊಂಡನಂತರ ಶಿಷ್ಯರನ್ನು ’ಪಿಯಾಲ’ (ಕರ್ಜೂರದ ಅಥವಾ ಕಲ್ಲುಸಕ್ಕರೆಯ ಪಾನೀಯ) ಕುಡಿಸುತ್ತಾರೆ.

ಖುರಾನಿನಲ್ಲಿಯೂ-’ಸ ಖಾಹುಫುನ್ ರಬ್ಬುಹುಂ ಶರಬನ್ ತಹೂರ ಎಂದಿದೆ.

’ಉನ್ಕೆರಬ್ನೇ ಉನ್ಕು ಶರಾಬ್ ಪಿಲಾಯ್’ ಅವರ ಭಗವಂತ ಅವರಿಗೆ ಪವಿತ್ರವಾದ ಪಾನೀಯ ಕುಡಿಸಿದರು.

ಹೀಗೆ ಕುಡಿಸಿದ ನಂತರ ಧರ್ಮ ಮಾರ್ಗದ ಮೇಲೆ ನಡೆಯುವ ಅನೇಕ ಧಾರ್ಮಿಕ ಮಜಲುಗಳನ್ನು ಹೇಳಿಕೊಡುತ್ತಾರೆ. ಇಲ್ಲಿ ಕಠಿಣ ಪರಿಶ್ರಮ ಪಡಬೇಕಾಗುತ್ತದೆ.

ಸ್ತ್ರೀಯರು ’ಪೀರ್‌’ಗಳಾಗುವ ಹಾಗಿಲ್ಲ. ಮುರಿದ್ ಆಗಬಹುದು. ’ಮುರಿದ್‌’ ಆಗಲು ಇಚ್ಚಿಸುವ ಸ್ತ್ರೀಯರು ಸಾಮಾನ್ಯವಾಗಿ ತಮ್ಮ ಗಂಡನ ಅನುಮತಿ ಕೇಳಬೇಕಾಗುತ್ತದೆ. ಅಪ್ರಾಪ್ತ ಹೆಣ್ಣು ಅಥವಾ ಗಂಡು ಮಕ್ಕಳು ಮುರಿದ್ ಆಗಬೇಕಾದರೆ ತಂದೆಯ ಅನುಮತಿ ಪಡೆಯಬೇಕು. ಪೀರ್‌ರವರ ಮುರಿದ್ ಆದ ಮೇಲೆ ’ಪೀರ‍್’ರವರು ತಂದೆಯ ಸಮಾನರಾಗುತ್ತಾರೆ. ಆದ್ದರಿಂದ ಪೀರ್‌ರವರು ತಮ್ಮ ಹೆಂಡಿತಿಯವರಿಗೆ ’ಮುರಿದ್‌’ ಮಾಡುವ ಆಗಿಲ್ಲ. ಹೆಂಡತಿಯು ಮುರಿದ್ ಆಗಲು ಬಯಸಿದರೆ ಬೇರೆ ಪೀರ್‌ಗಳಿಂದ ’ಬಯ್ಯತ್’ ತೆಗೆದುಕೊಳ್ಳಬೇಕಾಗುತ್ತದೆ. ಪೀರ್‌ರವರ ಹೆಂಡತಿಯಾದ್ದರಿಂದ ಅವರನ್ನು ’ಪೀರಾನಿಮಾ’ ಎಂದು ಕರೆಯುತ್ತಾರೆ. ಪೀರಾನಿಮಾರವರು ಯಾರಿಗೂ ’ಬಯ್ಯತ್’ಕೊಡುವ ಹಾಗಿಲ್ಲ.

ಹಖೀಖತ್

ಮೇಲಿನ ಮೂರು ಮಾರ್ಗಗಳನ್ನು ದಾಟಿದ ಮೇಲೆ ವಾಸ್ತವಿಕತೆಯ ಅರಿವು, ನೈಜಸ್ಥಿತಿಯ ಜ್ಞಾನ ಲಭ್ಯವಾಗುತ್ತದೆ. ಕ್ಷಣಿಕವಾದ ಈ ಲೌಕಿಕ ಬದುಕು ಶೂನ್ಯವಾಗಿ ಪಾರಾಮಾರ್ಥಿಕವಾದ ಶಾಶ್ವತ ಸುಖ, ಸಂತೃಪ್ತಿಯನ್ನು ಹೊಂದುತ್ತಾನೆ. ಇಲ್ಲಿ ವ್ಯಕ್ತಿ ನಿಸರ್ಗದ ರಹಸ್ಯ ಭೇದಿಸಿ ತನ್ನ ಉದ್ದೇಶ ಸಾಧಿಸಿಕೊಂಡು ಪರಿಪೂರ್ಣನಾಗುತ್ತಾನೆ. ಈ ಸ್ಥಿತಿಯಲ್ಲಿ ವ್ಯಕ್ತಿ ’ವಲೀ’ಆಗಿ ಪರಿವರ್ತಿತನಾಗುತ್ತಾನೆ. ’ವಲೀ’ ಎಂದರೆ ಅಲ್ಹಾನ ಮಿತ್ರ ಎಂಬ ಅರಿವು ಮಾಡಿಕೊಡುತ್ತಾರೆ. ಇಲ್ಲಿ ಗಂಡು, ಹೆಣ್ಣು ಎಂಬ ಭೇದ ಅಳಿಸಿ ಹೋಗಿ ಎಲ್ಲರು ಸಮಾನರಾಗುತ್ತಾರೆ. ಸಾಧನೆಯಲ್ಲಿ ತೊಡಗಿದ ’ಸ್ತ್ರೀ’ಯು ಸಹ ’ವಲೀ’ಯಾಗುತ್ತಾಳೆ.

ಪೀರ ಮತ್ತು ಪಂಗಡಗಳು

ಮೊಹಮ್ಮದ್ ಪೈಗಂಬರ‍್ರವರು ನಾಲ್ಕು ಜನರನ್ನು ಮೊದಲು ಪೀರ್‌ಗಳಾಗಿ ಮಾಡಿದರು. ಹಜರತ್ ಇಮಾಮ್‌ಹಸನ್, ಹಜರತ್ ಇಮಾಮ್ ಹುಸ್ಸೇನ್, ಹಸನ್‌ಬಸ್ತ್ರೀ, ಹಜರತ್ ಕಮಿಲ್ ಬಿನ್‌ಜಿಯಾದ್‌ರವರು. ಇವರಿಂದ ಹದಿನಾಲ್ಕು ಪಂಗಡಗಳು ಅಥವಾ ವಂಶಾವಳಿಗಳು ಬೆಳೆದವು ಅವುಗಳು ಯಾವುವೆಂದರೆ:

ಸ್ಥಾಪಕ ಮತ್ತು ವಂಶಾವಳಿಗಳು (ಪಂಗಡಗಳು)

೧.   ಹಜರತ್ ಖಾಜಾ ಅಬ್ದುಲ್ ವಾಹಿದ್‌ಬಿನ್ ಜೇದ್ ಜೇದ್‌ಯಾನ್ ಮನ್ಸೂಬ

೨.   ಹಜರತ್ ಖಾಜಾ ಫಜೀಲ್ ಬಿನ್ ಅಯಾಜ್

೩.    ಅಯಾಸಾ ಮನ್ಸೂಬ

೪.   ಹಜರತ್ ಸುಲ್ತಾನಿ ಇಬ್ರಾಹಿಂ ಅದಂ ಅದಹಂ ಮನ್ಸೂಬ

೫.   ಹಜರತ್ ಖಾಜಾ ಬೈರತ್ ಬಸ್ತ್ರೀ ಬಸ್ತ್ರೀಯ ಮನ್ಸೂಬ

೬.   ಹಜರತ್ ಖಾಜಾ ಶಂಶಾದ್ ಅಲೂವಿದ್ದೀನೂರಿ ಬಿಶ್ತೀಯ ಮನ್ಸೂಬ

೭.   ಹಜರತ್ ಖಾಜಾ ಹಬೀಬ್ ಅಜ್ಮೀ ಚಿಪ್ಪೀಯಾ ಮನ್ಸೂಬ

೮.   ಹಜರತ್ ಮೊಸಂಬ ತೇಫ್‌ರ್‌ಷಾ ತ್ರೈಫ್ರಿರೀಯಾ ಮನ್ಸೂಬ

೯.    ಹಜರತ್ ಖಾಜಾ ಮಾರುಫ್ ಕರೈಖೀ ಕರ್‌ಖೈಯಾ ಮನ್ಸೂಬ

೧೦.         ಹಜರತ್ ಖಾಜಾ ಸ್ತ್ರೀ ಅಲ್‌ಸಖ್‌ಥೀ ಸಖ್ತಿಯಾ ಮನ್ಸೂಬ

೧೧.         ಹಜರತ್ ಖಾಜಾ ಜಿನೀದಿ ಬೋಗ್ದಾದಿ ಜಿಂದೀಯ ಮನ್ಸೂಬ

೧೨. ಹಜರತ್ ಖಾಜಾ ಅಸಹಾಖ್ ಕ್ರಾಸ್ರೋನಿ ಕಾಸ್ರೋನಿಯ ಮನ್ಸೂಬ

೧೩. ಹಜರತ್ ಖಾಜಾ ಶೇಕ್ ಅಲಾವುದ್ಧೀನ್ ತಾಸಿತೋಸಿಯಾ ಮನ್ಸೂಬ

೧೪. ಹಜರತ್ ಶೇಖ್ ಜಿಯಾವುದ್ದೀನ್ ಶೇರುದ್ದಿ ಶಹೇರುದ್ದೀಯ ಮನ್ಸೂಬ

೧೫. ಹಜರತ್ ನಜಮುದ್ದೀನ್ ಕ್ರಿಬೀಯಾಯಿ ಮತ್ತು ಅಜರತ್ ಅಲಿ ಪಿರೊದ್ದೇಸಿ ಮನ್ಸೂಬ

ಈ ಮೇಲಿನ ಪಂಗಡಗಳಲ್ಲಿ ಪೀರ‍್ ಮತ್ತು ಮುರಿದ್ ಗಳಾಗುವ ಪರಂಪರೆಯು ಬೆಳೆಯಿತು.

ಇಸ್ಲಾಂ ಧರ್ಮದ ಪ್ರಕಾರ ಭೂಲೋಕದ ಮೊದಲ ಮಾನವರಾದ ’ಹಜರತ್ ಆದಮ್ ಅಲೇ ಹಿಸ್ಸಾಲಂ’ ಹಾಗೂ ’ಬೇಬಿ ಹವ್ವಾ’, ಹಜರತ್ ಆದಮ್ ಅಲೇ ಹಿಸ್ಸಾಲಾಂರವರಿಂದ ಮೊದಲುಗೊಂಡು ಮೊಹಮ್ಮದ್ ಪೈಗಂಬರ‍್ ಸಲ್ಲಾಲ್ಲಾಹು ಅಲೇಹೀನ ಸಲ್ಲಂರವರೆಗೆ ಒಂದು ಲಕ್ಷದ ಇಪ್ಪತ್ನಾಲ್ಕು ಸಾವಿರದ ಎಂಬತ್ತು ಸಾವಿದವರೆಗೆ ಪೈಗಂಬರವರು (ಅಲ್ಹಾನ ಸಂದೇಶವಾಹಕರು) ಭೂಮಿಯಲ್ಲಿ ಜನಿಸಿದ್ದಾರೆ. ಇವರಲ್ಲಿ ಮುನ್ನೂರ ಹದಿಮೂರು ಜನ ’ಮುರ್‌ಸಲೀನ್‌’ಗಳಾಗಿದ್ದಾರೆ.

’ಮುರ್‌ಸಲೀನ್’ ಎಂದರೆ ಈ ಮುನ್ನೂರ ಹದಿಮೂರು ಜನ ಪೈಗಂಬರ‍್ರವರ ಮೇಲೆ ಅಲ್ಹಾನ ಪವಿತ್ರ ಗ್ರಂಥಗಳು ಅವತೀರ್ಣಗೊಮಡಿವೆ. ’ಖುರಾನ್’ಪವಿತ್ರ ಗ್ರಂಥವು ಹಜರತ್ ಮೊಹಮ್ಮದ್ ಪೈಗಂಬರ್‌ರವ ಮೇಲೆ ಅವತೀರ್ಣಗೊಂಡಿದೆ.

ಖುರಾನಿನಲ್ಲಿ ಇಪ್ಪತ್ತೈದು ಜನ ಪೈಗಂಬರ್‌ರವರ ಪ್ರಸ್ತಾಪವಿದೆ. ಇನ್ನು ಉಳಿದ ಪೈಗಂಬರ್‌ರವರ ಪ್ರಸ್ತಾಪ ’ಹದೀಸ್‌’ನಲ್ಲಿದೆ.

’ಹದೀಸ್‌’ ಎಂದರೆ, ಮೊಹಮ್ಮದ್ ಪೈಗಂಬರ್‌ರವರು ಹೇಳಿದ ವಾಕ್ಯ ಹಾಗೂ ವಚನಗಳು.

ಸುಮಾರು ಒಂದು ಲಕ್ಷದ ಎಂಬತ್ತು ಸಾವಿರ ಪೈಗಂಬರ್‌ರವರು ಬದುಕು ’ದುರ್‌ವೇಶ್’ ರೀತಿಯಲ್ಲಿ ನಡೆದಿರುವಂತಹದ್ದು. ಇವರೆಲ್ಲರ ಸಂದೇಶವು ’ಅಲ್ಹಾನನ್ನು ಬಿಟ್ಟು ಯಾರು ಆರಾಧನೆಗೆ ಬಾಧ್ಯರಲ್ಲ. ಅವನು ಏಕೈಕನು. ಅವನನ್ನು ಮೀರಿಸುವ ಯಾವ ಶಕ್ತಿಯೂ ಇಲ್ಲ. ನಿಯಂತ್ರಿತ ಮತ್ತು ರಕ್ಷಕನಾದ ಅವನ ಇಚ್ಛೇಯ ವಿನಃ ಯಾವೊಂದು ಘಟನೆಯೂ ನಡೆಯುವುದಿಲ್ಲ.

ಹೀಗೆ ಎಲ್ಲರ ಸಂದೇಶವು ಒಂದೇ ಆಗಿದ್ದರೂ ಇಸ್ಲಾಂ ಧರ್ಮವು ಪರಿಪೂರ್ಣ ಗೊಂಡಿರಲಿಲ್ಲ. ಪೈಗಂಬರ್‌ರವರು ಹುಟ್ಟುವುದಕ್ಕಿಂತ ಮೊದಲು ಅರಬ್ ದೇಶದ ಸ್ಥಿತಿ ಅತಿನಿಕೃಷ್ಟವಾಗಿತ್ತು. ಸಮಾಜದಲ್ಲಿ ಅಜ್ಞಾನ, ಅನಾಚಾರಗಳು ತಾಂಡವವಾಡುತ್ತಿದ್ದವು. ಸ್ತ್ರೀಯರನ್ನು ಪಶುಗಳ ರೀತಿಯಲ್ಲಿ ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದರು. ಹೆಣ್ಣು ಮಕ್ಕಳು ಹುಟ್ಟುವುದೇ ಅವಮಾನವೆಂದು ಭಾವಿಸಿ ಅವುಗಳು ಜನಿಸಿದ ಕೂಡಲೇ ಸಜೀವ ಸಮಾಧಿ ಮಾಡಲಾಗುತ್ತಿತ್ತು. ಪ್ರವಾದಿ ’ಮೊಹಮ್ಮದ್ ಸಲ್ಲಾಲ್ಲಾಹು ಅಲೇಹಿವ ಸಲ್ಲಾಂ’ ರವರು ಸಮಾಜದ ಆರ್ಥಿಕ ಶೋಷಣೆ ಮತ್ತು ಭ್ರಷ್ಟಾಚಾರಗಳ ವಿರುದ್ಧ ಧ್ವನಿ ಎತ್ತಿದರು. ಸ್ತ್ರೀ ಕುಲಕ್ಕೆ ಪುರುಷನ ದಾಸ್ಯತ್ವದಿಂದ ಮುಕ್ತಿಗೊಳಿಸಿ ಮಾತಾ-ಪಿತರ ಸಂಪತ್ತಿನಲ್ಲಿ ಸ್ತ್ರೀಯರಿಗೂ ಪಾಲು ಹಾಗೂ ಸ್ವತ್ತಿನ ವಾರಸುದಾರರಾಗುವ ಹಕ್ಕನ್ನು ದೊರಕಿಸಿಕೊಟ್ಟರು. ವ್ಯಕ್ತಿ ಸ್ವಾತಂತ್ರ‍್ಯವನ್ನು ಅತಿಶ್ರೇಷ್ಠ ರೂಪದಲ್ಲಿ ಕಾರ್ಯಗತಗೊಳಿಸಿ ಗುಲಾಮಗಿರಿಯನ್ನು ತಡೆದರು. ಪ್ರವಾದಿಗಳ ಚಾರಿತ್ಯ್ರ ಹಾಗು ವಾಣಿಯಿಂದ ಪ್ರಭಾವಿತರಾಗಿ ಅಧಿಕ ಸಂಖ್ಯೆಯಲ್ಲಿ ಇಸ್ಲಾಂ ಧರ್ಮವನ್ನು ಸ್ವೀಕರಿಸುತ್ತಿದ್ದರು.

ಹೀಗೆ ಪೈಗಂಬರ್‌ರವರು ಇಸ್ಲಾಂ ಧರ್ಮಕ್ಕೆ ಚೌಕಟ್ಟನ್ನು ರೂಪಿಸಿ ಅದನ್ನು ಪರಿಪೂರ್ಣ-ಗೊಳಿಸಿದರು. ’ಮದೀನ್’ ಎಂಬಲ್ಲಿ ’ಅಸಾಹಾಬೇ ಸುಫಾ’ ಎಂಬ ಸ್ಥಳವಿದೆ. ಇದಕ್ಕೆ ’ಅಸಾಹಾಬೇಸುಫಾಕಾ ಚಬೂತ್ರ’ ಎಂದು ಸಹ ಕರೆಯುತ್ತಾರೆ. ’ಚಬೂತ್ರ’ ಎಂದರೆ ’ಹಟ್ಟಿ’ ಎಂದು ಈ ಹಟ್ಟಿಯಲ್ಲಿ ಕುಳಿತು ಪೈಗಂಬರ್‌ರವರು ತಮ್ಮ ಅನುಯಾಯಿಗಳಾದ ಎಪ್ಪತ್ತೆರಡು ಜನ ಖಲಂದರ್‌ರವರಿಗೆ ಧಾರ್ಮಿಕ ಭೋದನೆಯೊಂದಿಗೆ ಶರೀಯತ್, ಮಾರೀಫತ್, ಹಖೀಖತ್, ತರೀಖತ್ ಇವುಗಳ ಜ್ಞಾನದ ಸಂಪಾದನೆಯ ಬಗ್ಗೆ ಬೋಧಿಸುತ್ತಿದ್ದರು.

ಮಾನವರಲ್ಲಿರುವ ’ಅಹಂ’ಅನ್ನು ನಾಶಗೊಳಿಸಿ ಮಾನವೀಯತೆಯನ್ನು ಶಾಶ್ವತಗೊಳಿಸಿ ಕಾಪಾಡಲು, ನಿಸರ್ಗದ ರಹಸ್ಯ ಭೇದಿಸಿ ಸತ್ಯ ಅರಿವು ಪಡೆಯಲು ಪೈಗಂಬರ್‌ರವರು ತಮ್ಮ ಅಳಿಯರಾದ ಹಜರತ್ ಅಲೀ ಕರಿಮುಲ್ಲ ವಜ್ಹೂರವರಿಗೆ ಫಖೀರಿಯತ್‌ನ್ನು ಕೊಟ್ಟರು. ಅಂದರೆ ಪೈಗಂಬರ್‌ರವರು ’ಮೆರಾಜ್‌’ಗೆ ಹೋದಾಗ (ಸ್ವಗಾರೋಹಣ ಮಾಡಿದಾಗ) ಅಲ್ಹಾನಿಂದ ದೊರೆತ ’ಪಿರ್‌ಖಾ’, ’ಲಿಬಾಸ್‌’ಗಳನ್ನು ತಂದಿದ್ದರು. ತಮ್ಮ ಆಪ್ತ ಅನುಯಾಯಿ-ಗಳನ್ನು ಕುರಿತು ಸ್ವರ್ಗದಿಂದ ತಂದಿರುವ ಪಿರ್‌ಖಾ, ಲಿಬಾಸ್‌ನ್ನು ಕೊಡುತ್ತೇನೆ ಇದನ್ನು ತೆಗೆದುಕೊಂಡು ಏನು ಮಾಡುತ್ತೀರಿ ಎಂದು ಕೇಳಿದರು. ಅದನ್ನು ಜೋಪಾನವಾಗಿ ಇಡುತ್ತೇವೆ. ಪ್ರದರ್ಶನಕ್ಕೆ ಇಡುತ್ತೇವೆ ಹೀಗೆ ಇತ್ಯಾದಿಯಾಗಿ ಒಬ್ಬೊಬ್ಬರು ಉತ್ತರಿಸಿದರು. ಆದರೆ ಅಲೀರವರು ಇದನ್ನು ಧರಿಸಿಕೊಂಡು ಅಲ್ಹಾನನ್ನು ಅರಿಯುವ ಸೃಷ್ಟಿಯ ರಹಸ್ಯವನ್ನು ಭೇದಿಸುವ ವಾಸ್ತವಿಕತೆ ಅಥವಾ ನೈಜತೆಯ ಅರಿವನ್ನು ಮೂಡಿಸುವ ಧಾರ್ಮಿಕ ಬೋಧನೆಯನ್ನು ಮಾಡುತ್ತೇನೆ ಎಂದರು. ಆಗ ಪೈಗಂಬರ್‌ರವರು ತಮಗೆ ದೊರೆತ ’ಪಿರ್‌ಖಾ’ ಹಾಗೂ ’ಲಿಬಾಸ್‌’ನ್ನು ಹಜರತ್‌ಅಲೀಯವರಿಗೆ ಕೊಟ್ಟರು.

ಹೀಗೆ ಫಖೀರಿಯತ್ ಅಲೀಯವರಿಗೆ ಸಿಕ್ಕಿತು ಎಂದು ಹೇಳುತ್ತಾರೆ. ಇಲ್ಲಿಂದ ಮುಂದೆ ಮುಸ್ಲಿಂರಲ್ಲಿ ಧಾರ್ಮಿಕ ಉಡುಗೆಯನ್ನು ಉಟ್ಟು (ಉದ್ದವಾದ ನಿಲುವಂಗಿ, ತಲೆಗೆ ದಸ್ತರ‍್) ಆಧ್ಯಾತ್ಮಿಕ ತತ್ವೋಪದೇಶವನ್ನು ಮಾಡುವ ಒಂದು ವರ್ಗವೇ ಸೃಷ್ಟಿಯಾಯಿತು. ಇವರನ್ನು ಸೂಫಿ ಸಂತರೆಂದು, ದುರ್‌ವೇಶ್, ಮುರ್‌ಷದ್, ಫಖೀರ‍್ ಎಂಬ ನಾನಾ ಹೆಸರುಗಳಿಂದ ಕರೆಯಲಾಯಿತು.

ಇಸ್ಲಾಂ ಧರ್ಮದಲ್ಲಿ ಸಂಗೀತ ಹಾಗೂ ವಾದ್ಯಗಳು ನಿಷೇಧವಾಗಿದ್ದರೂ ಈ ಸಂತರು ವಾದ್ಯಗಳನ್ನು ಹಿಡಿದು ಭಕ್ತಿಗೀತೆಗಳನ್ನು ಹಾಡುತ್ತಾ ಅಲ್ಹಾನ ಇಷ್ಕ್‌(ಪ್ರೇಮ)ದಲ್ಲಿ ಮೈಮರೆತು ಅವನಲ್ಲಿಯೇ ಪರವಶರಾದರು. ತೋರಿಕೆ, ಢಾಂಬಿಕತೆಯನ್ನು ನಿರಾಕರಿಸಿ, ಮಸೀದಿಗಳಿಗೆ ಹೋಗುವುದನ್ನು ನಿಲ್ಲಿಸಿದರು. ಲೌಕಿಕ ಮೋಹವನ್ನು ದಮನಗೊಳಿಸಿ, ತಮ್ಮಲ್ಲಿರುವ ಸಂಪತ್ತನ್ನು ಬಡಬಗ್ಗರಿಗೆ ದಾನ ಮಾಡಿ ಬಾನ್‌ಂವೀ ಬೇಡುತ್ತ ಜೀವನ ನಿರ್ವಹಿಸಿದರು. ದರ್ಗ, ಖಾನ್‌ಖಾ, ಇಲ್ಲವೆ ಬೃಹತ್ ಅರಣ್ಯಗಳಲ್ಲಿ ವಾಸವಾಗಿದ್ದು, ಅಲ್ಹಾನ ಧ್ಯಾನ ಹಾಗು ಸಂಕೀರ್ತನೆಯಲ್ಲಿ ತೊಡಗಿದರು. ಕಾಲಾನಂತರ ಈ ದುರ್‌ವೇಶ್ ಅಥವಾ ಸೂಫಿಗಳಲ್ಲಿ ಹದಿನಾಲ್ಕು ಖಾನ್ವಾಗಳ ಅಥವಾ ಪಂಥಗಳು ಬೆಳೆದವು. ಅವುಗಳು ಯಾವುವೆಂದರೆ:

೧ ರಫಾಯಿ ಹಸಿರು ಬಟ್ಟೆ ಧರಿಸುತ್ತಾರೆ
೨. ಚಶ್ತೀಯಾ ಹಸಿರು ಬಟ್ಟೆ ಧರಿಸುತ್ತಾರೆ.
೩. ಮದಾರೀಯಾ ವೈ ರೀತಿಯ ಕೋಲು ಹಿಡಿದಿರುತ್ತಾರೆ. ಕೆಂಪು ಬಟ್ಟೆ ಧರಿಸುತ್ತಾರೆ.
೪. ಜಲಾಲಯ ನೂರ ಇಪ್ಪತ್ತೈದು ಕೆಜಿ ಕಬ್ಬಿಣ ಹೊತ್ತಿದ್ದು, ಕೆಂಪು ಬಟ್ಟೆ ಧರಿಸುತ್ತಾರೆ.
೫. ಸಹೇರೆ ವರ‍್ದಿ ಬಾನ್‌ಂವೀಗೆ ಹೋಗುವುದಿಲ್ಲ. ವಲೀಗಳ ಉತ್ಸವಗಳಲ್ಲಿ ಕೇಸರಿ ಬಟ್ಟೆ ಧರಿಸಿಕೊಂಡು ಹೋಗುತ್ತಾರೆ.
೬. ನಕ್ಷ್‌ಬಂದೀ ಬಾನ್‌ಂವೀಗೆ ಹೋಗುತ್ತಾರೆ. ಕೇಸರಿ ಬಟ್ಟೆ ಧರಿಸುತ್ತಾರೆ.
೭. ಮಶಾಯಖ್ ಹಸಿರು ಬಟ್ಟೆ ತಲೆಗೆ ಕಟ್ಟುತ್ತಾರೆ.
೮. ಖಲಂದರೀಯ ಇವರು ಸಹ ಹಸಿರು ಬಟ್ಟೆ ಧರಿಸುತ್ತಾರೆ.
೯. ಷಾ ಅಬ್ದಾಲ್ ಬಟ್ಟೆ ಧರಿಸಿ, ಟೋಂಗಿ (ಪಿಟಿಲಾಕಾರದ) ವಾದ್ಯ ಹಿಡಿಯುತ್ತಾರೆ
೧೦ ಖಾದ್ರಿ ಚಮನ್ ಹಸಿರು ಬಟ್ಟೆ ಧರಿಸಿ ಕಷ್ಟದಲ್ಲಿದ್ದವರಿಗೆ ’ದುವಾ’ (ಹಾರೈಕೆ) ಮಾಡುತ್ತಾರೆ.
೧೧. ಮಲಂಗ್ ಕೆಂಪು ಬಟ್ಟೆ ಧರಿಸುತ್ತಾರೆ
೧೨. ಷಾ-ರಫಾಯಿ ಹಸಿರು ಬಟ್ಟೆ ಧರಿಸುತ್ತಾರೆ, ಉರುಸ್‌ಗಳಲ್ಲಿ ಜರಬ್ ಮಾಡುತ್ತಾರೆ
೧೩. ಸೈಯದ್ ಖುಷಾಲಿ ಷಾ ಕೇಸರಿ ಅಥವಾ ಬಳಿ ಬಟ್ಟೆ ಧರಿಸುತ್ತಾರೆ
೧೪. ಬಾನ್ವ್‌ ಊದ್‌ದಾನಿ ಹಿಡಿದು ಬಾನ್‌ಂವೀಗೆ ಹೋಗುತ್ತಾರೆ.

ಹೀಗೆ ಮೇಲಿನಂತೆ ಅನೇಕ ಪಂಥಗಳು ಬೆಳೆದರೂ ಇವುಗಳ ಗುರಿ ಒಂದೇ ’ಸತ್ಯದ ಸಾಕ್ಷಾತ್ಕಾರ’.

ಫಖೀರ‍್ ಆಗಲು ಬಯಸುವವರು ಈ ಮೇಲಿನ ಯಾವುದಾದರು ಒಂದು ಖಾನ್ವಾದಿಂದ ದೀಕ್ಷೆ ಪಡೆಯಬೇಕು.

ಹೀಗೆ ಈ ಪರಂಪರೆಗಳು ಅರೇಬಿಯಾದಿಂದ ಪ್ರಾರಂಭವಾಗಿ ಇರಾನ್, ಇರಾಕ್, ಭಾರತ, ಚೀನಾ ಹಾಗೂ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿಯು ಹರಡಿತು. ಅದ್ವೈತ ಸಿದ್ಧಾಂತದಲ್ಲಿ ಜೀವಾತ್ಮ ಪರಮಾತ್ಮನಾಗುವಂತೆ ಈ ಫಖೀರರು ಅಲ್ಹಾನ ಮಟ್ಟಕ್ಕೆ ಏರಲು ಶ್ರಮಿಸುತ್ತಾರೆ. ಅಲ್ಹಾನನ್ನು ಒಡೆಯನೆಂದು, ತಾವು ಗುಲಾಮರೆಂದು ಪರಿಗಣಿಸದೆ ತಮ್ಮನ್ನು ದೇವರ ಒಂದು ಅಂಶವೆಂದು ಕರೆದುಕೊಂಡಿದ್ದಾರೆ.

ಭಾರತದಲ್ಲಿಯೂ ಧರ್ಮ ಪ್ರಚಾರ ಮಾಡುತ್ತಾ ಹಿಂದೂ, ಮುಸ್ಲಿಮರಲ್ಲಿ ಐಕ್ಯತೆ-ಯನ್ನುಂಟು ಮಾಡಲು ಶ್ರಮಿಸಿದರು. ಅಲ್ಹಾನು ಅನಂತ ಗುಣವುಳ್ಳವನು, ಸೌಂದರ್ಯ ಮತ್ತು ತೇಜಸ್ಸಿನಲ್ಲಿ (ನೂರ‍್) ಅಪ್ರತಿಮನು. ವಿಶಿಷ್ಟವಾದ ಶಕ್ತಿಯುಳ್ಳವನು ಎಂದು ಸಾರಿದರು. ಹಿಂದು, ಮುಸ್ಲಿಮ್ ಎಂಬ ಭೇದವಿಲ್ಲದೆ ಕಷ್ಟಗಳಲ್ಲಿ ಒಳಗಾದವರು. ಆಸ್ತಿಯ ಸಮಸ್ಯೆ, ಹುಡುಗ-ಹುಡುಗಿಯರ ಮದುವೆ, ಬಂಜೆತನ ನಿವಾರಣೆ, ದೆವ್ವಗಳನ್ನು ಬಿಡಿಸುವುದು, ಕಾಯಿಲೆಗಳನ್ನು ಗುಣಪಡಿಸುವುದ, ಕಳೆದು ಹೋದ ವಸ್ತುಗಳ ಪತ್ತೆ ಹಚ್ಚುವುದು ಹೀಗೆ ಅನೇಕ ಕಷ್ಟಗಳ ನಿವಾರಣೆಗಾಗಿ ಯಂತ್ರ, ತಂತ್ರಗಳನ್ನು ತಯಾರಿಸಿ ಕೊಟ್ಟು ಪವಾಡಗಳ ಮೂಲಕ ದೀನ ದಲಿತರ ಉದ್ಧಾರಕ್ಕಾಗಿ ಶ್ರಮಿಸಿದರು. ಇವರು ಜೀವಂತ ಇರುವಾಗ ಸಮಸ್ಯೆಗಳನ್ನು ನಿವಾರಿಸುವಂತೆ ಸತ್ತ ನಂತರವು ಕಷ್ಟಗಳನ್ನು ನಿವಾರಿಸುತ್ತಾರೆಂದು ಜನ ನಂಬಿ ಗೋರಿಗಳ ದರ್ಶನ ಪಡೆಯುತ್ತಾರೆ. ಗೋರಿಗಳಲ್ಲಿ ವಲೀಗಳು ವಾಸವಾಗಿದ್ದಾರೆ. ಜೀವಂತ ಸಮಾಧಿಯಾಗಿದ್ದಾರೆ. ಅನೇಕ ಪವಾಡಗಳನ್ನು ಮಾಡಿ ತೋರಿಸುತ್ತಾರೆಂದು ವಿಶ್ವಾಸವಿಟ್ಟಿರುತ್ತಾರೆ. ಮಕ್ಕಳಿಲ್ಲದ ದಂಪತಿಗಳು ತಮಗೆ ಮಕ್ಕಳಾದರೆ ಬೆಳ್ಳಿ ತೊಟ್ಟಿಲು, ಬೇಗನೆ ಕಂಕಣ ಬಲ ಕೂಡಿ ಬಂದರೆ ಸಹೇರಾ, ಬಳೆಗಳನ್ನು ಅರ್ಪಿಸುತ್ತೇವೆಂದು, ಕಾಯಿಲೆ ಗುಣವಾದರೆ ಮಲೀದಾ-ಗಂಜಿ ಮಾಡಿ ಫಾತೇಹ ಮಾಡಿಸುತ್ತೆವೆಂದು ಹರಕೆ ಹೊರುತ್ತಾರೆ. ಇಚ್ಛೆ ಕೈಗೊಂಡ ಮೇಲೆ ಗೋರಿ ದರ್ಶನ ಪಡೆದು ಹರಕೆ ಸಲ್ಲಿಸಿ ’ಉರುಸ್‌’ಗಳಲ್ಲಿ ಭಾಗವಹಿಸುತ್ತಾರೆ. ಉರುಸ್‌ಗಳಿಗೆ ಹೋಗಿ ಹರಕೆ ಸಲ್ಲಿಸಲು ಸಾಧ್ಯವಾಗದಿದ್ದಾಗ ಫಖೀರರ ಅಥವಾ ’ಉರುಸ್‌’ಗಳಿಗೆ ಹೋಗುವವರ ಕೈಯಲ್ಲಿ ಹರಕೆ ಹಣ ಕೊಟ್ಟು ಕಳುಹಿಸುತ್ತಾರೆ. ಕೆಲವರು ತಮ್ಮ ಮನೆಯಲ್ಲೆ ಕಡ್ಲೆ, ಸಕ್ಕರೆ, ಪಾಯಸ, ಹಾಲು ಇತ್ಯಾದಿ ಮಾಡಿ ಊದುಗಡ್ಡಿ ಹಚ್ಚಿಟ್ಟು ’ವಲೀ’ಗಳ ಹೆಸರಲ್ಲಿ ಫಾತೇಹ ಓದಿಸುತ್ತಾರೆ. ಹರಕೆ ಸಲ್ಲಿಸದಿದ್ದರೆ ಕಷ್ಟಗಳು ಮತ್ತೆ ಆವರಿಸುತ್ತದೆಂದು ಆದಷ್ಟು ಬೇಗ ಹರಕೆ ಸಲ್ಲಿಸುತ್ತಾರೆ.

ಮರುಷದ್ ಅಥವಾ ಆಗುವ ವಿಧಾನ

ಜೀವನದ ಪರಿಶುದ್ಧಿಗೂ ಆತ್ಮೋನ್ನತಿಗೂ ಫಖೀರ‍್ ಆಗಲು ಬಯಸುತ್ತಾರೆ. ಯಾರು ’ಫಖೀರ್‌’ಆಗಲು ಬಯಸುತ್ತಾರೆ ಅವರು ಸ್ವ ಇಚ್ಛೆಯಿಂದ ಬರಬೇಕು. ಮದುವೆಯಾಗಿದ್ದರೆ ’ನಿಖಾ’ದ ಸಂದರ್ಭದಲ್ಲಿ ಕಟ್ಟಿದ ’ಮೆಹಾರ‍್’ ಭತ್ಯೆಯನ್ನು ಹೆಂಡತಿಗೆ ಹಿಂದಿರುಗಿಸಬೇಕು. ಇಲ್ಲದಿದ್ದರೆ ಹೆಂಡತಿಯ ಹತ್ತಿರ ತನ್ನನ್ನು ಮೆಹಾರ‍್ ಭತ್ಯೆಯಿಂದ ಬಿಡುಗಡೆ ಮಾಡುವಂತೆ ಕೇಳಿಕೊಳಳಬೇಕು. ನಂತರ ತಾನು ಫಖೀರ‍್ ಆಗುತ್ತೇನೆಂದು ಹೆಂಡತಿಯಿಂದ ಅನುಮತಿ ಕೇಳಿಕೊಳ್ಳಬೇಕು. ಒಂದು ವೇಳೆ ಹೆಂಡತಿ ’ಫಖೀರ‍್’ ಆಗಲು ಅನುಮತಿ ನೀಡದಿದ್ದರೆ ಇವನು ಫಖೀರ‍್ ಆಗುವ ಆಗಿಲ್ಲ. ಆಗ ತನ್ನ ಹೆಂಡತಿಗೆ ’ತಲಾಖ್’ ನೀಡಬೇಕಾಗುತ್ತದೆ. ಆದರೆ ಸಾಮಾನ್ಯವಾಗಿ ಹೆಂಡತಿ ಅನುಮತಿ ನೀಡುತ್ತಾಳೆ. ಜತೆಗೆ ಹಾಲಿನ ಋಣದಿಂದ ಬಿಡುಗಡೆ ಮಾಡುವಂತೆ ತನ್ನ ತಾಯಿಯಿಂದಲೂ ಕೇಳಿಕೊಳ್ಳಬೇಕಾಗುತ್ತದೆ. ಹೀಗೆ ಎಲ್ಲರ ಒಪ್ಪಿಗೆ ಪಡೆದು ಫಖೀರನಾಗಲು ಮನೆಯಿಂದ ಹೊರಡಬೇಕು.

ಒಂದೊಂದು ಊರಿನಲ್ಲಿಯೂ ಫಖೀರನು ಸೇರುವ ಒಂದು ಪ್ರಮುಖ ಸ್ಥಾನವಿರುತ್ತದೆ. ಇದು ವಲೀಗಳ ದರ್ಗವಾಗಿರಬಹುದು ಅಥವಾ ಗೌಸೇ ಪಾಕ್‌ರವರ ಜಂಡಾ (ಭಾವುಟ) ಏರಿಸುವ ಸ್ಥಳವಾಗಿರಬಹುದು. ’ಫಖೀರ್‌’ ಆಗಲು ಬಯಸುವವನು ಈ ಸ್ಥಳಕ್ಕೆ ಬಂದು ಮುರುಷದ್(ಗುರು) ರವರನ್ನು ಭೇಟಿ ಮಾಡಿ ತನ್ನ ಇಚ್ಛೆಯನ್ನು ಪ್ರಕಟಿಸಬೇಕು. ಫಖೀರ್‌ಆಗುತ್ತೇನೆಂದು ಹೇಳುವ ವ್ಯಕ್ತಿಯನ್ನು ’ಮಸೂಮ್’ ಎಂದು ಕರೆಯುತ್ತಾರೆ. ಇವನನ್ನು ಕುರಿತು ಮೊದಲು ’ಲೌಕಿಕ ಭೋಗ ಭಾಗ್ಯಗಳಿಂದ ದೂರವಾಗಿರುವುದಕ್ಕೆ, ಪಾರಮಾರ್ಥಿಕ ಜ್ಞಾನ, ನೈತಿಕ ಪ್ರಜ್ಞೆ, ಸತ್ಯದ ಶೋಧ, ಸಂತೃಪ್ತಿಯೇ ಇಲ್ಲಿಯ ಮುಖ್ಯ ಉದ್ದೇಶ. ಇದಕ್ಕೆಲ್ಲ ನಿನ್ನ ಮನಸ್ಸು ಸಿದ್ಧಗೊಂಡಿದೆಯೇ ಎಂದು ಕೇಳುತ್ತಾರೆ. ’ಹೌದು’ ಎಂದು ಒಪ್ಪಿಕೊಂಡು ನಂತರ ಮುರುಷದ್‌ರವರು ’ತರೀಖ್‌’ ನೀಡುತ್ತಾರೆ.

ಫಖೀರರಲ್ಲಿ ಈಜ್ನಿ, ಚಾವೂಸಿ, ಭಂಡಾರಿ, ಕೊತ್ವಾಲ್‌ಎಂದು ನಾಲ್ಕು ಜನ ಫಖೀರರನ್ನು ಒಂದೊಂದು ಕೆಲಸ ಕಾರ್ಯಗಳಿಗೆ ನೇಮಿಸುತ್ತಾರೆ.

ಈಜ್ನಿ ಮತ್ತು ಚಾವೂಸಿ; ಮಾಸೂಮ್ಮಿಗೆ ಫಖೀರ್‌ಆಗಿ ಮಾಡುವವರೆಗೆ ಸಹಾಯಕರಾಗಿರುತ್ತಾರೆ.

ಭಂಡಾರಿ: ಅಡುಗೆ ಮಾಡುವ ಎಲ್ಲಾ ಜವಾಬ್ದಾರಿಯನ್ನು ನಿರ್ವಹಿಸುತಾನೆ.

ಕೊತ್ವಾಲ್: ಇಂತಹ ವ್ಯಕ್ತಿಯನ್ನು ಫಖೀರ‍್ ಮಾಡುತ್ತಿದ್ದೇನೆ ಎಂದು ಊರ ಮೇಲೆ ಹೋಗಿ ನಾಲ್ಕು ಕಡೆಯ ಫಖೀರರನ್ನು ಆಮಂತ್ರಿಸುತ್ತಾನೆ.

ನಿಶ್ಚಯಿಸಿದ ದಿನ ’ಮಾಸೂಮ್ಮಿನ’ ಕಣ್ಣಿನ ರೆಪ್ಪೆ ಮತ್ತು ಹುಬ್ಬು ಸಹ ಬಿಡದಂತೆ ದೇಹದ ಮೇಲಿನ ಪ್ರತಿಯೊಂದು ಕೂದಲನ್ನು ತೆಗೆಯಲಾಗುತ್ತದೆ. ಶವಕ್ಕೆ ಸ್ನಾನ ಮಾಡುಸುವ ಹಾಗೆ ’ಲಹಾದ್’ಮೇಲೆ ಮಲಗಿಸಿ ಮುರುಷದ್ ಅಥವಾ ಪೀರ್‌ರವರ ಮಾರ್ಗದರ್ಶನದಲ್ಲಿ ಈಜ್ನಿ-ಚಾವೂಸಿ ನೀರು ಹಚ್ಚಿ ಕೊಟ್ಟಂತೆ ಸ್ನಾನ ಮಾಡಿಸಲಾಗುತ್ತದೆ. ಹೀಗೆ ಮೈ ತೊಳೆದ ಮೇಲೆ ಶವಕ್ಕೆ ’ಕಫನ್’ ಉಡಿಸುವ ಹಾಗೆ ಉಡಿಸಬೇಕಾಗುತ್ತದೆ. ಮೊದಲಿಗೆ ಹದಿನೆಂಟು ಮೀಟರ‍್ ಬಟ್ಟೆ ಕತ್ತರಿಸಿ ಸೊಂಟದಿಂದ ಕಾಲಿನವರೆಗೆ ಲುಂಗಿಯ ರೀತಿಯಲ್ಲಿ ಕಟ್ಟಿ ಪುನಃ ಸೊಂಟದಿಂದ ಕುತ್ತಿಗೆಯವರೆಗೆ ಬಟ್ಟೆ ಸುತ್ತುತ್ತಾರೆ. ತಲೆಗೆ ಬಿಳಿ ದಸ್ತಾರ‍್ (ಬಟ್ಟೆ) ಸುತ್ತಾತ್ತಾರೆ. ಶವಕ್ಕೆ ಹಚ್ಚುವ ಸುಗಂಧ ದ್ರವ್ಯಾದಿಗಳನ್‌ಉ (ಅದೀರ‍್, ಅತ್ತರ‍್) ಲೇಪಿಸಿ, ಕಣ್ಣಿಗೆ ಸುರ‍್ಮಾ ಹಚ್ಚುತ್ತಾರೆ.

ಇಹ ಲೋಕದ ಆಸೆಯೂ ಇಲ್ಲದಂತೆ ಜೀವಂತ ಶವವಾದ ಈ ಫಖೀರನಿಗೆ;

’ಅಸ್ತ ಖುರಲ್ಲಾ ಹೀ ರಬ್ಬಿ ಮಿನ್‌ಕುಲ್ಲಿ ಜನ್’= ನಾನು ದುಶ್‌ಕೃತ್ಯಗಳಿಂದ ಮುಕ್ತಿಯನ್ನು ಬಯಸುತ್ತೇನೆ.

’ಬಿನ್ ಖತಿಯತಿನ್ ವಾತುಬು ಇಲೇಹು’= ಅಲ್ಹಾನ ಮೂಲಕ ಕ್ಷಮೆಯಾಚಿಸುತ್ತೇನೆ

ಎಂಬ ’ಸೂರ’ಮನ್ನು ಓದಿಸಿ ತಮ್ಮ ಖಾಬ್ವದ ಹೆಸರಿಡುತ್ತಾರೆ. ಆಮಂತ್ರಿತ ಎಲ್ಲಾ ಫಖೀರರಿಂದ ಒಪ್ಪಿಗೆ ಕೇಳುತ್ತಾರೆ.

’ಶಂಹಿಂಷಾವೊಂಕೇ ಶಂಹಿಂಷಾ, ಬಾದಾಷಾಂವೊಂಕೆ ಬಾದಾಷಾ, ಹೈದರ‍್ ಅಲಿ ಖಾದಿ’ ಎಂದು ಹೆಸರಿಡುತ್ತಿದ್ದೇವೆ. ಇದಕ್ಕೆ ತಮ್ಮೆಲ್ಲರ ಒಪ್ಪಿಗೆ ಇದೆಯೊ

’ಅಲ್ಲಾಹಂದುಲಿಲ್ಲ ನಮ್ಮೆಲ್ಲರ ಒಪ್ಪಿಗೆ ಇದೆ’ ಎಂದು ಎಲ್ಲಾ ಫಖೀರರು ಸಮ್ಮಿತಿಸಿದ ನಂತರ ’ಹೈದರ‍್ ಅಲಿಖಾದ್ರಿ’ ಎಂದು ನಿನ್ನ ನಾಮಕರಣ ಮಾಡಿದ್ದೇವೆ ಎಂದು ಮಾಸುಮ್ಮ್‌ನಿಗೆ ತಿಳಿಸುತ್ತಾರೆ. ನಂತರ ಬರ್‌ಬಜಿಕಾ, ಶರೀಯತ್, ಹಖೀಖತ್, ತರೀಖತ್, ಮಾರೀಫತ್ ಇವುಗಳ ಐದೈದು ಕಲ್ಮಾ ಓದಿಸಿ ’ಬಯ್ಯತ್’ ನೀಡುತ್ತಾರೆ.

ಈ ಮಾಸೂಮ್ ಮೂರು ದಿನದವರೆವಿಗೂ ಕಫನ್ ಧರಿಸಿರಬೇಕು. ಬಾಳೆಹಣ್ಣು, ಖರ್ಜೂರ, ಹಾಳು ಇಷ್ಟನ್ನೇ ಸೇವಿಸಬೇಕು. ನೈಸರ್ಗಿಕ ಕ್ರಿಯೆಗೆ ಹೊರಗೆ ಹೋಗಬೇಕಾದರೆ, ಜೊತೆಯಲ್ಲಿ ಈಜ್ನಿ ಮತ್ತು ಚಾವೂಸಿ ಇರುತ್ತಾರೆ.