ಹಖೀಖಾ
ಮಗು ಹುಟ್ಟಿದ ನಲವತ್ತು ದಿವಸಕ್ಕೆ ಈ ಕಾರ್ಯ ಆಚರಿಸಲು ಸಾಧ್ಯವಾಗದಿದ್ದರೆ ತಮಗೆ ಅನಕೂಲವಾದ ದಿನ ಆಚರಿಸಬಹುದು. ಮಗುವಿನ ತಲೆ ಕೂದಲನ್ನು ತೆಗೆದು ಕೂದಲಿನ ತೂಕದಷ್ಟು ಬೆಳ್ಳಿ ಅಥವಾ ದುಡ್ಡು ಹಂಚುವರು. ಗಂಡು ಮಗುವಾದರೆ ಎರಡು ಕುರಿ, ಹೆಣ್ಣು ಮಗುವಾದರೆ ಒಂದು ಕುರಿಯನ್ನು ಮಗುವಿನ ತಲೆಗೆ ತಾಗಿಸಿ, ಪೈಗಂಬರ್ರವರ ಹೆಸರಲ್ಲಿ ’ಜುಜ್ಹಾ’ ಮಾಡಿ ಮಾಂಸವನ್ನು ಮೂರು ಪಾಲು ಮಾಡಿ ಹಂಚುವರು ಅಥವಾ ಸಂಬಂಧಿಕರನ್ನು ಕರೆದು ’ದಾವತ್’ ಮಾಡುವರು.
ಖತ್ನಾ
ಗಂಡು ಮಗು ಹುಟ್ಟಿದ ನಲವತ್ತು ದಿವಸಕ್ಕೆ ಅಥವಾ ತಮಗೆ ಅನುಕೂಲವಾದಾಗ ಅಂದರೆ ಹುಡುಗನಿಗೆ ಮೂರು, ಐದು , ಏಳು, ಒಂಬತ್ತು, ಹನ್ನೊಂದು ವರ್ಷಕ್ಕೆ ಈ ಕಾರ್ಯ ಮಾಡುವರು. ಮೊದಲು ’ರಸಂ’ ಮಾಡಿ ಕುದುರೆಯ ಮೇಲೆ ಕೂರಿಸಿ ಮೆರಣಿಗೆ ಮಾಡುವರು. ನಂತರ ಖತ್ನಾ ಮಾಡಿಸುವರು. ಇಪ್ಪತ್ತೊಂದು ದಿನದವರೆಗೆ ಆರೈಕೆ ಮಾಡಿ ನಂತರ ಇಪ್ಪತ್ತೊಂದು ದಿನಕ್ಕೆ ಸೂತ್ಕದ ಸ್ನಾನ ಮಾಡಿಸಿ, ಪುನಃ ’ರಸಂ’ ಮಾಡುವರು. ಈ ಆಚರಣೆ ಮುಗಿದ ಮೇಲೆ ಹುಡುಗನು, ಕುರಿಜುಬ್ಹ ಮಾಡುವುದು, ಫಾತೇಹ ಓದುವುದು, ಫಖೀರ್ ಆಗುವುದು ಇತ್ಯಾದಿ ಧಾರ್ಮಿಕ ಕಾರ್ಯಗಳನ್ನು ಮಾಡಬಹುದು.
ಋತುಮತಿಯಾಗುವಿಕೆ:
ಹೆಣ್ಣು ಮಕ್ಕಳ ಜೀವನದಲ್ಲಿ ಋತುವಾಗುವಿಕೆ ಒಂದು ಮಹತ್ವದ ಘಟ್ಟ. ಮಗಳು ಋತುಮತಿಯಾದಳೆಂದು ತಿಳಿದ ಕೂಡಲೇ ಐದು ಜನ ಮುತ್ತೈದೆಯರನ್ನು ಕರೆಸಿ ನೀರು ಹಾಕುವರು. ’ಕಾಬಾ’ ದಿಕ್ಕಿಗೆ ಮುಖ ಮಾಡಿ ಮಸ್ನತ್ ಮೇಲೆ ಕೂರಿಸಿ ಬಾಳೆಹಣ್ಣು, ಎಲೆ, ಅಡಿಕೆಯೊಂದಿಗೆ ಮಡಿಲು ತುಂಬುವರು. ಸುಮಾರು ಇಪ್ಪತ್ತೊಂದು ದಿನ ಆರೈಕೆ ಮಾಡುವರು. ತಿನ್ನಲು ತುಪ್ಪ, ಗೋಧಿರೊಟ್ಟಿ, ಉದ್ದಿನ ಕಾಳು ಬೇಯಿಸಿ ಬೆಲ್ಲದೊಂದಿಗೆ ಕೊಡುವರು. ಮಾಂಸದ, ಕೋಳಿಯ ರಸ ತೆಗೆದುಕೊಡುವರು. ಇಪ್ಪತ್ತೊಂದನೆಯ ದಿನ ಸೂತ್ಕದ ಸ್ನಾನ ಮಾಡಿಸಿ ಸಂಬಂಧಿಕರನ್ನು ಕರೆದು ’ರಸ’ ಮಾಡುವರು. ಹುಡುಗಿ ’ಗೋಷಾ’ ಆದಳೆಂದು ಹೊರಗೆಲ್ಲಿಯೂ ಕಳುಹಿಸುವುದಿಲ್ಲ. ಶಾಲೆಯ ವಿದ್ಯಾಭ್ಯಾಸವನ್ನು ನಿಲ್ಲಿಸುವರು. ’ಖುರಾನ್’ ಓದುವುದನ್ನು ಕಲಿಸುವರು. ಮನೆಯ ಕೆಲಸ ಕಾರ್ಯಗಳಲ್ಲಿ ನೆರವಾಗಬೆಕು, ಆದಷ್ಟು ಬೇಗ ಇವಳ ಮದುವೆ ಮಾಡಬೇಕೆಂದು ಮನೆಯ ಹಿರಿಯರು ನಿಶ್ಚಿಯಿಸುವರು.
ವಿವಾಹ:
ವಿವಾಹ ಬಂಧನಕ್ಕೆ ವಿಶೇಷ ಪ್ರಾಶಸ್ತ್ಯವಿದೆ. ದೈವಿಕ ಘಟನೆ ಎಂಬ ನಂಬಿಕೆ ಇದೆ. ಮಧ್ಯವರ್ತಿಯ ಸಹಾಯದಿಂದ ವಂಶ ವಿಚಾರ ತಿಳಿದುಕೊಂಡು ಹೆಣ್ಣು ನೋಡಲು ಹೊರಡುವರು. ತಮ್ಮ ಮನೆಗೆ ಹೊಂದುವಂತಹ ಹೆಣ್ಣು ಎಂದು ಗೊತ್ತಾದರೆ ಆ ಹೆಣ್ಣಿಗೆ ’ಉಜಾಲ’ ಎಂದು ಹಿರಿಯರು ಮುತ್ತೈದೆಯರು ತಮ್ಮ ಶಕ್ತ್ಯಾನುಸಾರ ದುಡ್ಡು ಇಟ್ಟು ಹೂ ಮುಡಿಸಿ ತಮ್ಮ ಒಪ್ಪಿಗೆ ಸೂಚಿಸುವರು. ಈ ಮೊದಲೆ ಹುಡುಗ ’ಫಖೀರ್’ ಆಗಿದ್ದರೆ. ಈ ವಿಷಯವನ್ನು ವಧುವಿನ ಕಡೆಯವರಿಗೆ ತಿಳಿಸುವರು. ಫಖೀರ್ ಆದ ಮೇಲೆ ಧಾರ್ಮಿಕ ಉಡುಗೆ ಧರಿಸಬೇಕು. ಮಲಗುವಾಗ ಮಾತ್ರ ತಲೆಯ ’ದಸ್ತರ್’ ತೆಗೆದಿಡಬೇಕು. ಪ್ಯಾಂಟು ಇತ್ಯಾದಿ ಆಧುನಿಕ ಉಡುಗೆ ಧರಿಸುವ ಹಾಗಿಲ್ಲ.
ಮುಸ್ಲಿಂ ಸಂವತ್ಸರದ ಪ್ರಕಾರ ಮೊಹರಂ ಮತ್ತು ಸಫರ್ ತಿಂಗಳಲ್ಲಿ ಮದುವೆ ಮಾಡುವುದಿಲ್ಲ. ಉಳಿದ ಎಲ್ಲ ತಿಂಗಳಲ್ಲಿ ಮದುವೆ ಮಾಡುವರು. ವಿವಾಹ ನಿಶ್ಚಯವಾದ ವಾರದ ಮೊದಲು ಮನೆಯ ಮುಂದೆ ಚಪ್ಪರ ಹಾಕಿ ಚಪ್ಪರದ ಶಾಸ್ತ್ರ ಮಾಡುವರು. ಅರಿಶಿಣದ ಶಾಸ್ತ್ರದ ನಾಲ್ಕೈದು ದಿನ ಇದೆ ಎನ್ನುವಾಗ ಅರಿಶಿಣ, ಚಿಕ್ಯಾ ಮಲ್ವಟ್ ತಂದು ಕುಟ್ಟುವರು. ಅರಿಶಿಣದ ಶಾಸ್ತ್ರದ ದಿನ ತಾಯಿ ಮೊದಲುಗೊಂಡು ಸಹೋದರಿಯರು, ಐದು ಜನ ಮುತ್ತೈದೆಯರು ವಧುವಿನ ಮೈತುಂಬ ಅರಿಶಿಣ ಹಚ್ಚಿ, ಕೆಂಪು ಬಟ್ಟೆ ಮೇಲೆ ಹಿಡಿದು ಕೈಯಲ್ಲಿ ಎಲೆ, ಅಡಿಕೆ ಕೊಟ್ಟು ಬಚ್ಚಲು ಮನೆಯವರೆಗೆ ನಡೆಸಿಕೊಂಡು ಬಂದು ಸ್ನಾನ ಮಾಡಿಸುವರು. ನಂತರ ಹಳದಿ ಬಣ್ಣದ ಉಡುಗೆ ಉಡಿಸಿ, ಒಡವೆಗಳಿಂದ ಶೃಂಗರಿಸಿ ಒಂದು ಕಾಲು ಸೇರು ಅರಿಶಿಣದ ಅಕ್ಕಿಯಲ್ಲಿ ’ಚಾಖೀ’ ಬರೆದು ಅದರ ಮೇಲೆ ಚಾಖೀಯ ಮಣೆ ಇಟ್ಟು ವಧುವನ್ನು ಕೂರಿಸುವರು. ಹಿರಿಯ ಮುತ್ತೈದೆ ಹೂವಿನ ಹಾರ ಹಾಕಿ, ಹೂ ಮುಡಿಸಿ ಮಡಿಲು ತುಂಬುವಳು. ಆಹ್ವಾನಿತ ಹೆಂಗಸರೆಲ್ಲರೂ ಗಂಧ ಹಚ್ಚಿ, ಹೂ ಮುಡಿಸಿ, ’ರಸಂ’ ಮಾಡುವರು. ಇದೇ ರೀತಿಯಲ್ಲಿ ವರನಿಗೂ ’ರಸಂ’ ಮಾಡುವರು. ಆದರೆ ಈತ ಬಿಳಿ ಬಟ್ಟೆ ಧರಿಸಬೇಕು.
ಮೆಹೇಂದಿ ಹಚ್ಚುವ ಶಾಸ್ತ್ರ
ವಧುವಿಗೆ ಮೆಹೇಂದಿ ಹಚ್ಚುವ ಮೊದಲು ಐದು ಜನ ಮುತ್ತೈದೆಯರನ್ನು ಕರೆಸಿ ಮೊದಲು ಅವರಿಗ ಮೆಹೇಂದಿ ಹಚ್ಚಿ ನಂತರ ವಧುವಿನ ಮಡಿಲು ತುಂಬಿ ಮೆಹೇಂದಿ ಹಚ್ಚುವರು.
ಶುಕ್ರಾನದ ಶಾಸ್ತ್ರ
ಗಂಡಿನ ಕಡೆಯ ಮದುವೆಯ ದಿಬ್ಬಣ ಊರಿಗೆ ಬಂದಾಗ ಉಳಿದುಕೊಳ್ಳಳು ಮನೆಯ ವ್ಯವಸ್ಥೆ ಮಾಡಲಾಗುವುದು. ಇದನ್ನು ಬಿಡದಿ ಮನೆ ಎಂದು ಕರೆಯುತ್ತಾರೆ. ವರನ ಮನೆಯವರ ಉಟೋಪಚಾರಗಳು ಮುಗಿದ ಮೇಲೆ ವರನಿಗೆ ’ಖುರಾನ್’ ಗ್ರಂಥ ನೀಡುವುದರ ಮೂಲಕ ವರನನ್ನು ಚಪ್ಪರದ ಒಳಗೆ ಬರಮಾಡಿಕೊಳ್ಳುವರು. ಹಿರಿಯರ ಮತ್ತು ಸಂಬಂಧಿಕರ ಸಮ್ಮುಖದಲ್ಲಿ ತಂದಿರುವ ಒಡವೆ, ವಸ್ತ್ರಗಳನ್ನು ಚಪ್ಪರದ ಒಳಗೆ ಜೋಡಿಸುವರು. ಬಾಳೆಹಣ್ಣು, ಸಕ್ಕರೆಯನ್ನಿಟ್ಟು ಫಾತೇಹ ಓದಿಸಲಾಗುವುದು.
ಕರ್ಜಿಕಾಯಿ ಶಾಸ್ತ್ರ
ವಧುವಿನ ಕಡೆಯ ಸಹೋದರಿಯರು, ಮಹಿಳೆಯರು, ಮಕ್ಕಳ ಎಲ್ಲ ಸೇರಿ ಮಾಡಿರುವ ಬಿರಿಯಾನಿ, ಮೊಟ್ಟೆಸಾರು, ಬೋಟಿಸಾರು, ಕಲಿಜಿಸಾರು, ಪಲ್ಯ, ಕರ್ಜಿಕಾಯಿ, ಹಪ್ಪಳ, ಸಂಡಿಗೆ ಇತ್ಯಾದಿ ಬಗೆಬಗೆಯ ತಿಂಡಿ ತಿನಿಸುಗಳನ್ನು ’ಬಿಡದಿ’ ಮನೆಗೆ ತೆಗೆದುಕೊಂಡು ಹೋಗಿ ಜೋಡಿಸುವರು. ದೊಡ್ಡದಾದ ವೃತ್ತಾಕಾರದ ಕರ್ಜಿಕಾಯಿಯನ್ನು ವರನು ಮುರಿಯಬೇಕು. ವರನು ಕರ್ಜಿಕಾಯಿ ಮುರಿಯುವಾಗ ವಧುವಿನ ಸಹೋದರಿಯರು ಹೂವಿನಿಂದ ಅಲಂಕರಿಸಿ ಕೋಲಿನಿಂದ ಹೊಡೆಯುವರು. ಏಟಿನಿಂದ ತಪ್ಪಿಸಿಕೊಳ್ಳುತ್ತ ವರನು ಕರ್ಜಿಕಾಯಿ ಮುರಿಯುವನು. ನಂತರ ಮುರಿದ ಕರ್ಜಿಕಾಯಿಯ ಚೂರನ್ನು ವರನಿಗೆ ಈ ಸಹೋದರಿಯರು ತಿನ್ನಿಸುವಾಗ ವರನು ಅವರ ಬೆರಳನ್ನು ಕಚ್ಚುವನು. ಹೀಗೆ ಈ ಶಾಸ್ತ್ರ ಹಾಸ್ಯ, ಮನೋರಂಜನೆಯಲ್ಲಿ ನಡಯುವುದು.
ಚಾಖೀಕಾರಸಂ
ಹಸೆ ಶಾಸ್ತ್ರ ಎಂದು ಕರೆಯುವ ಈ ಶಾಸ್ತ್ರದಲ್ಲಿ ವರನ ಕಡೆಯುವರು ವಧುವಿಗೆ, ವಧುವಿನ ಕಡೆಯವರು ವರನಿಗೆ ಹಸೇ ಬರೆದು ಅದರ ಮೇಲೆ ಕೂರಿಸಿ ’ರಸಂ’ ಮಾಡುವರು. ವರನ ಕಡೆ ಹೆಂಗಸರು ಚಪ್ಪರದ ಹತ್ತಿರ ಬಂದಾಗ, ಮೇಲೆ ಕೆಂಪು ಬಟ್ಟೆ ಹಿಡಿದು, ಗಂಧ ಹಚ್ಚಿ, ಚೋಬಕೊಟ್ಟು ಒಳಬರಮಾಡಿಕೊಳ್ಳುವರು. ಎಲ್ಲರೂ ಬಂದು ಕುಳಿತ ಮೇಲೆ ತಲೆಗೆ ಎಣ್ಣೆ ಹಚ್ಚಿ, ಕನ್ನಡಿ ತೋರಿಸಿ, ಶರಬತ್ ಕೊಡುವರು. ಈ ಸಂದರ್ಭದಲ್ಲಿ ಒಬ್ಬರು ಮತ್ತೊಬ್ಬರಿಗೆ ಜರೆಯುವರು.
“ಎಣ್ಣೆ ಹಚ್ಚಿ ಎಷ್ಟು ದಿನಾಯಿತೋ, ಮುಖ ನೋಡಿ ಹೇಗಾಗಿದೆ, ಬಾಯಾರಿದ್ದರೆ ಶರಬತ್ ಕುರಿಯಿರಿ”
ಖಾವೋ ಸಮ್ದಿನ್ ಚೋಬಾ ಚೋಬೇಮೆ ಬಲ್ಲಾರ್ ಸಮ್ದೀನ್ಕು ಲೇಕೊ ಗಯಾ ಗೊಲ್ಲರ್ | ತಿನ್ನಿರಿ ಬೀಗರೆ ಚೋಬಾ ಚೋಬದಲ್ಲಿ ಸಿಕ್ಕಿತು ಅವರೇಕಾಳು ಬಿಗರಿಗೆ ಎತ್ತಿಕೊಂಡು ಹೋದ ಗೊಲ್ಲ |
ಹಾಸ್ಯದ ಹೊನಲೆ ಹರಿಯುವುದು. ಒಮ್ಮೊಮ್ಮೆ ಅತಿರೇಕಕ್ಕೂ ಹೋಗಿ ಕೋಪಿಸಿಕೊಂಡು ಹೊರಟು ಹೋದರೆ, ಸಮಾಧಾನಾಪಡಿಸಿ ಕೂರಿಸುವರು. ನಂತರ ಮುತ್ತೈದೆಯರೆಲ್ಲ ಸೇರಿ ಹಸೆ ಬರೆಯುವರು ಹಸೇ ಬರೆಯುವಾಗ ಹೀಗೆ ಹಾಡುವರು:
ಅಹ? ಕ್ಯಾ ಕಂಹು ಮೈ ರಸಂ ಮೇಜ್ ಬಾನಿಕಾ ನಬೀ ಸಾಹೇಬ್ಸೇ ಹೋ ನಿಕಾ ಆರ್ಸಾನಿಕಾ ಪಾಂಚೋ ಬಿಬೀಂಯಾ ಮಿಲ್ಕರ್..ಮಿಲ್ಕರ್ಮಂಗ್ನೀಕ ದಿನ ಆಯಾ ಹರ್ಯೇಕ್ ತನ್ಪೇ ಪೋಷಾಕ್ ತಾರಹೈ | ಅಹಾ! ಏನೆಂದು ಹೇಳಲಿ ನಾನು ಶಾಸ್ತ್ರ ವಧುವಿನ ನಬೀ ಸಾಹೇಬರವರಿಂದ ಆದ ಈ ನಿಖಾ ವಧುವಿನ ಐದು ಜನ ಮುತ್ತೈದೆಯರು ಸೇರಿ ನಿಶ್ಚಯದ ದಿನ ಬಂದಿತು. ಪ್ರತಿಯೊಬ್ಬರ ಮೈಮೇಲಿನ ಉಡುಗೆಯು ಹೊಂದುತ್ತಿದೆ. |
ಹಸಿರು ಬಣ್ಣದ ಸೀರೆ ಉಟ್ಟು ಬಂದ ವಧುವನ್ನು ’ಚೌಖೀ’ಯ ಮೇಲೆ ಕೂರಿಸಿ, ಅತ್ತೆ, ನಾದಿನಿಯರು ಸೇರಿ ಹೂವಿನ ಹಾರ ಹಾಕಿ ’ಗಲ್ಸರ್’ ಬಳೆ, ಉಂಗುರ ತೊಡಿಸುವರು. ’ಸಹೇರಾ’ ಕಟ್ಟುವಾಗ ಮೊದಲು ಐದು ಜನ ಮುತ್ತೈದೆಯರಿಗೆ ಮುಟ್ಟಿಸಿ ’ಸಹೇರಾ’ ಕಟ್ಟುವರು.
ಈ ಶಾಸ್ತ್ರ ಮುಗಿದ ಮೇಲೆ ಬೇರೆ ಸೀರೆಯನ್ನು ವಧುವಿಗೆ ಉಡಿಸುವವರೆಗೆ ಮತ್ತೊಂದು ಹಸೇ ಬರೆಯುವರು.
ಬಿಸ್ಮಿಲ್ಲಾ ಬಿಸ್ಮಿಲಾ ಹರ್ದವ್ ಮೈ ಬೋಲೂಂಗಿ | ಅಲ್ಹಾನ ನಾಮದಿಂದ ಅಲ್ಹಾನ ನಾಮದಂದ ಪ್ರತಿ ಉಸಿರಿನಲ್ಲಿಯು ನಾನು ಹೇಳುತ್ತೇನೆ |
ಸನ್ ಅವ್ರ್ ಸಿಫತ್ ಮೊಂತೀಯಾ | ಪೈಗಂಬರ್ರವರ ವಂಶ ಬಳ್ಳಿಯ |
ಮೈ ರೊಲುಂಗಿ ಬಿಸ್ಮಿಲ್ಲಾ ಬಿಲ್ಮಿಲ್ಲಾ | ಮುತ್ತುಗಳನ್ನು ಸುರಿಸತ್ತೇನೆ. ಅಲ್ಹಾನ |
ಸಿಮರನ್ ಮೇರೆ ಮನ್ಕಾ | ನಾಮದಿಂದ ಅಲ್ಹಾನ ನಾಮದಿಂದ ನನ್ನ ಮನಸ್ಸಿನ |
ಹರ್ಧಮ್ ಹೈ ವಜೀಫಾ ಇತ್ | ಪ್ರತಿ ಉಸಿರಿನಲ್ಲಿಯು ಸೊಲ್ಲು ಇರುತ್ತದೆ |
ಮೇರೆ ಸಾಜನ್ಯಾ | ನನ್ನ ಪ್ರಿಯತಮನ |
ಬಿಸ್ಮಿಲಾ ಜೋ ಭೀನಾರಿ ಏಕ್ ಬಾರ್ | ಬಿಸ್ಮಿಲಾ ಎಂದು ಯಾವ ಮಹಿಳೆಯು |
ಕಹೇಗಿ | ಒಂದು ಸಾರಿ ಹೇಳುತ್ತಾಳೆ. |
ಬದೀ ಇಸ್ಕೀ ಜರೀಭೀ ನಾ ರಹೇಗಿ | ಪಾಪ ಇವಳಲ್ಲಿ ಇರುವುದಿಲ್ಲ. |
ಹೀಗೆ ಹಾಡುವಾಗ ಬೇರೆ ಸೀರೆ ಉಟ್ಟುಕೊಂಡು ಬಂದ ವಧುವಿಗೆ ಪುನಃ ಹಸೆಯ ಮೇಲೆ ಕೂರಿಸಿ ಹಲ್ಲಿಗೆ ಹಲ್ಲಿಟ್ಟು ಹಚ್ಚುವರು. ನಂತರ ಎಣ್ಣೆಶಾಸ್ತ್ರ ಮಾಡುವರು. ವಿಳ್ಳೆದೆಲೆಯನ್ನು ಎಣ್ಣೆಯಲ್ಲಿ ಅದ್ದಿ ಐದು ಜನ ಮುತ್ತೈದೆಯರ ಸೆರಗು ಹಿಡಿದು ನಿವಾಳಿಸುವರು. ನಿವಾಳಿಸಿದ ಮೇಲೆ ಸೆರಗನ್ನು ಸುಮ್ಮನೆ ಬಿಡುವುದಿಲ್ಲ. ಒಡಪನ್ನು ಹೇಳಬೇಕು.
ಸುನ್ನೇಕಿ ಸುರಾಯಿ | ಚಿನ್ನದ ಹೂಜಿ |
ಗುಲಾಬ್ ಕಾ ಪಾನಿ | ಗುಲಾಬಿ ಪನ್ನೀರು |
ಉಸ್ಮೇ ವಜ್ಹೂಲ ಕರ್ತೀಧಿ | ಅದರಲ್ಲಿ ವಜ್ಜೂ ಮಾಡುತ್ತಿದ್ದಳು |
ಅಕ್ಬರ್ ಷರೀಫ್ಕೀ ರಾಣಿ | ಅಕ್ಬರ್ ಷರೀಫರ ರಾಣಿ |
ಗಂಡನ ಹೆಸರನ್ನು ನೇರವಾಗಿ ಹೇಳದೆ ಒಡಪನ್ನು ಕಟ್ಟಿ ಹೇಳುವಳು. ಹೀಗೆ ವರನ ಕಡೆಯ ಮಹಿಳೆಯರು, ಹೆಣ್ಣು ಮಕ್ಕಳು ಬಗೆಬಗೆಯ ಶಾಸ್ತ್ರಗಳನ್ನು ವಧುವಿಗೆ ಮಾಡುವರು.
ವಧುವಿನ ಕಡೆಯವರು ಸಹ ಬಿಡದಿ ಮನೆಗೆ ಹೋಗಿ ಹಸೆ ಬರೆದು ವರನನ್ನು ಕೂರಿಸಿ ಮಡಿಲು ತುಂಬುವರು. ಹಸೆ ಬರೆಯುವಾಗ ಮಹಿಳೆಯರು ಹಾಡುವರು. ಹಿಂದೆ ಎಂಟು, ಹತ್ತು ದಿನ ಮದುಎ ನಡೆಯುತ್ತಿದ್ದುದ್ದರಿಂದ ಒಂದೊಂದು ದಿನ ಒಂದೊಂದು ಶಾಸ್ತ್ರ ಮಾಡುತ್ತಿದ್ದರು. ಇವತ್ತಿನ ದಿನಗಳಲ್ಲಿ ಮೇಲಿನ ಎಲ್ಲ ಶಾಸ್ತ್ರಗಳನ್ನು ಇಡೀ ರಾತ್ರಿ ಮಾಡಿ ಮುಗಿಸುತ್ತಾರೆ. ಕೆಲವರು ಸಂಪೂರ್ಣವಾಗಿ ಈ ಶಾಸ್ತ್ರಗಳನ್ನು ಕೈಬಿಟ್ಟಿದ್ದಾರೆ.
ನಿಖಾ
ವಧುವಿಗೆ ವರನ ಮನೆಯಿಂದ ತಂದಿರುವ ಬೆಲೆಬಾಳುವ ಒಡವೆ, ವಸ್ತ್ರಗಳನ್ನು ಉಡಿಸಿ ತಲೆಯ ಮೇಲೆ ’ಓಡನಿ’ ಹೊದೆಸಿ ಸಂಬಂಧಿಕರ ಮತ್ತು ಮುತ್ತೈದೆಯರ ಸಮ್ಮುಖದಲ್ಲಿ ಕೆಮಪು ಬಟ್ಟೆ ಹಾಸಿ ಅದರ ಮೇಲೆ ವಧುವನ್ನು ಕೂರಿಸುವರು. ವರನಿಗೂ ಸಹೆರಾ ಕಂಗನ್ ಕಟ್ಟಿ ಕುದುರೆಯ ಮೇಲೆ ಕೂರಿಸಿಕೊಂಡು ಬಾಜಭಜಂತ್ರಿಯೊಂದಿಗೆ ಊರ ಮೆರವಣಿಗೆ ಮಾಡಿ ಚಪ್ಪರದ ಹತ್ತಿರ ಕರೆದುಕೊಮಡು ಬರಲಾಗುವುದು.
ವಧುವಿನ ಸಹೋದರ ಕುರಿಯ ತಲೆ, ಹಳದಿ ನೀರು ನಿವಾಳಿಸಿ ಕೆಂಪು ಬಟ್ಟೆ ಕಟ್ಟಿರುವ ಒನಕೆಯನ್ನು ಅಡ್ಡ ಹಿಡಿದು, ದಕ್ಷಿಣೆ ಪಡೆದು ಒಳಗೆ ಬರಮಾಡಿಕೊಳ್ಳುವನು. ಊರ ಹಿರಿಯರು, ಪ್ರಮುಖರು, ಸಂಬಂಧಿಕರು ನಿಖಾದ ಸಮಯಕ್ಕೆ ಬಂದು ಸೇರುವರು. ಇಬ್ಬರು ವಕೀಲರು, ಇಬ್ಬರು ಸಾಕ್ಷಿಗಳು ಹಾಗೂ ಖಾಜೀಯವರು ಸೇರಿ ವರನು ಕಟ್ಟುವ ’ಮಹಾರ್’ನ್ನು ನಿಶ್ಚಿಯಿಸಿ ’ನಿಖಾ’ಕ್ಕೆ ವಧುವಿನ ಒಪ್ಪಿಗೆ ಮೊದಲು ಕೇಳಿ, ’ಧಪ್ತರ್’ನಲ್ಲಿ ಸಹಿ ಮಾಡಿಸಿಕೊಳ್ಳುವರು.
ಎಲ್ಲರ ಎದುರಿನಲ್ಲಿ ಸಿದ್ಧಪಡಿಸಿರುವ ಸ್ಥಳದಲ್ಲಿ ವರನು ಬಂದು ಕುಳಿತುಕೊಳ್ಳುವನು. “ಇಂತಹವರ ಮಗಳ ಜೊತೆ, ಈ ಹೆಸರಿನ ವಧುವಿಗೆ ಇಂತಹ ಸಾಕ್ಷಿ ಮತ್ತು ವಕೀಲಿಯಿಂದ ಇಷ್ಟು ಮಹಾರ್ನಿಂದ ಬಂದಿರುವ ಹಿರಿಯ ಮುಖಂಡರುಗಳ ಸಮ್ಮುಖದಲ್ಲಿ ನಿಮ್ಮ ನಿಖಾ ಮಾಡುತ್ತಿದ್ದೇನೆ. ಇದಕ್ಕೆ ನಿನ್ನ ಮನಃಪೂರ್ವಕ ಸಮ್ಮತಿಯಿದ್ದರೆ ತಿಳಿಸೆಂದು” ವರನಿಗೆ ಖಾಜೀಯವರು ಮೂರು ಬಾರಿ ಕೇಳುವರು. ವರನು ಪ್ರತಿಭಾರಿಯು “ಅಲಾಹಂದುಲಿಲ್ಲ. ಮೈನೆ ಖುಬೂಲ್ ಕೀಯಾ” ಎಂದು ತನ್ನ ಒಪ್ಪಿಗೆ ಸೂಚಿಸುವನು. ನಂತರ ಖಾಜೀಗಳು ’ನಿಖಾ’ದ ’ಸ್ತೋತ್ರ’ ಓದುವರು. ವರನು ಒಪ್ಪಿಗೆ ನೀಡುವಾಗ ವರನ ಕಡೆಯ ಹಿರಿಯ ಮುತ್ತೈದೆ ವಧುವಿಗೆ ’ಲಚ್ಛ’ ಕಟ್ಟುವಳು.ನಂತರ ಬಾದಾಮಿ, ಕಲ್ಲುಸಕ್ಕರೆ, ಉತ್ತುತ್ತೆ ಎಸೆದು ಸಂತೋಷ ವ್ಯಕ್ತಪಡಿಸುವರು. ಆಹ್ವಾನಿತರು ಅಭಿನಂದಿಸಿ ಉಡುಗೊರೆಗಳನ್ನು ಕೊಡುವರು. ವರನು ವಧುವಿನ ಹತ್ತಿರ ಬಂದು ’ಅಲ್ಲಾಹುಮ ಸಲ್ಲೇಅಲಾ ಸೈಯದ್ದಿನಾ ಮೌಲಾನ ಮೊಹಂದಿನ್ ಬಾರಿಕೊಸಲ್ಲಿಂ’ ಎಂಬ ’ದರೂದ್’ ಸ್ತೋತ್ರ ಓದಿ ಆಕೆಯ ಬೈ ತಲೆಯ ಮೇಲೆ ಊದುವನು. ಈ ದಿನದ ಭೋಜನದ ವ್ಯವಸ್ಥೆ ಮೊದಲು ವರನ ಕಡೆಯವರಿಂದ ಏರ್ಪಡಿಸಲಾಗುತಿತ್ತು. ಈಗ ವಧುವಿನ ಕಡೆಯವರಿಂದ ಏರ್ಪಡಿಸಲಾಗುತ್ತಿದೆ.
ಪಟ್ಟಿಕಾ ಸಂದಲ್
ವಧುವಿಗೆ ತೌರು ಮನೆಯಿಂದ ಗಂಡನ ಮನೆಗೆ ಕಳುಹಿಸಬೇಕಾದುದರಿಂದ ಈ ಶಾಸ್ತ್ರಕ್ಕೆ ತೌರು ಮನೆಯ ಉಡುಗೆತೊಡುಗೆಗಳನ್ನು ಉಡಿಸಿ ಸಹೇರಾ, ಗಜ್ರೇಗಳಿಂದ ಅಲಂಕರಿಸಿ ವಧುವಿನ ತಾಯಿ, ಸಹೋದರ, ಸಹೋದರಿಯರು ಗಂಧ ಹಚ್ಚಿ ’ರಸಂ’ ಮಾಡುವರು.
ಜಲ್ವಾ
ಪಟ್ಟಿಕಾ ಸಂದಲ್ ಶಾಸ್ತ್ರ ಮುಗಿದ ಮೇಲೆ ಅಳುತ್ತಿರುವ ವಧುವನ್ನು ವರನ ಮುಂದೆ ಕೂರಿಸುವಾಗ ಕೆಂಪು ಬಟ್ಟೆ ಅಡ್ಡ ಹಿಡಿಯುವರು. ವರನ ಕೈಯಿಂದ ವಧುವಿಗೆ, ವಧುವಿನ ಕೈಯಿಂದ ವರನಿಗೆ ಅರಿಶಿಣದ ಅಕ್ಕಿಕಾಳುಗಳನ್ನು ಮೂರುಬಾರಿ ಹಾಕಿಸುವರು. ವಧು-ವರನ ಮೇಲೆ ಕಲ್ಲುಸಕ್ಕರೆಯಿಟ್ಟು ’ಅರಸ್ಮೀಠೀಕೀ ಮಿಸ್ರೀ ಮಿಠೀಕೀ’ (ವಧು ಸಿಹಿಯೋ ಕಲ್ಲು ಸಕ್ಕರೆ ಸಿಹಿಯೋ) ಎಂದು ಕೇಳುವರು. ’ಆರಸ್ಮೀಠೀ’ (ವಧು ಸಿಹಿ) ಎಂದು ಹೇಳಬೇಕು. ಹಾಗೆಯೇ ವಧುವನ್ನು ’ವರ ಸಿಹಿಯೋ ಕಲ್ಲು ಸಕ್ಕರೆ ಸಿಹಿಯೋ’ ಎಂದು ಕೇಳುತ್ತಾರೆ. ವಧು ’ವರ ಸಹಿ’ ಎಂದು ಹೇಳಬೇಕು. ಇಟ್ಟ ಕಲ್ಲು ಸಕ್ಕರೆಯನ್ನು, ಅಡ್ಡವಾಗಿ ಹಿಡಿದಿರುವ ಬಟ್ಟೆ ತೆಗೆಯುವರು. ವಧುವಿನ ಕಡೆಯವರು ದೀಪ ಕನ್ನಡ ಕೊಡಬೇಕು. ವಧು, ವರನ ತಲೆಯ ಮೇಲೆ ಅಡ್ಡವಾಗಿ ಹಿಡಿದಿದ್ದ ಬಟ್ಟೆಯನ್ನು ಹೊದಿಸಿ, ದೀಪದ ಬೆಳಕಲ್ಲಿ ವಧುವಿನ ಕಡೆಯವರು ದೀಪ ಕನ್ನಡ ಕೊಡಬೇಕು. ವಧು, ವರನ ತಲೆಯ ಮೇಲೆ ಅಡ್ಡವಾಗಿ ಹಿಡಿದಿದ್ದ ಬಟ್ಟೆಯನ್ನು ಹೊದಿಸಿ, ದೀಪದ ಬೆಳಕಲ್ಲಿ ವಧುವಿನ ಮುಖವನ್ನು ವರನಿಗೆ ತೋರಿಸುವರು. ಮುತ್ತೈದೆಯರು ಏನು ಕಾಣುತ್ತಿದೆ ಎಂದು ಕೇಳಿದರೆ, ’ಅಲ್ಹಾನ ಜ್ಯೋತಿ’ ಎಂದು ವರನು ಹೇಳಬೇಕು. ಈ ಸಂದರ್ಭದಲ್ಲಿ ಹೆಂಗಳೆಯರು ಹೀಗೆ ಹಾಡುವರು:
ದುಲ್ಹಾನ್ ಕು ಸಾತ್ ಜಾತಹೈ ದುಲ್ಹಾಲಿಯಾ ಹುವಾವಧುವನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾನೆ ವರನು
ಉಸ್ಪೇ ನಿಖಾ ಮೂಪರ್ ಪಡಾ ಹುವಾ ಬಾಂದಿಗಲೇಮೆ ಫುಲ್ ಕೀ ಅವನ ಮುಖದ ಮೇಲ ’ನಿಖಾ’ ಬಿದ್ದಿರುವುದರಿಂದ ಹಾಕಿದ್ದಾನೆ ಕುತ್ತಿಗೆಯಲ್ಲಿ ಹೂವಿನ ಹಾರ
ದುಲ್ಹಾನ್ಕೇ ಸರ್ಪೇ ಫುಲ್ ಸಹೇರಾ ಲಗಾ ಹುವಾ ವಧುವಿನ ತಲೆಯ ಮೇಲೆ ಹೂವಿನ ಸಹೇರಾ ಹಾಕಲಾಗಿದೆ.
’ನಿಖಾ’ ಮಾಡಿಕೊಂಡು ವಧುವನ್ನು ವರನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾನೆ ಎಂದು ಎಲ್ಲರೂ ಹಾಡುತ್ತಾರೆ.
ಕುಡಿಯಲು ಹಾಲು, ತುಪ್ಪ ಕೊಡುತ್ತಾರೆ. ವರನು ’ಮುದಿಖೀ’ (ಮುಖ ನೋಡಿದಕ್ಕೆ) ವಧುವಿಗೆ ಉಂಗುರ ತೊಡಿಸುತ್ತಾನೆ. ನಂತರ ವಧುವಿಗೆ ತನ್ನ ಎಡಪಕ್ಕದಲ್ಲಿ ಕೂರಿಸಿಕೊಳ್ಳಬೇಕು. ಹಿರಿಯರು, ತಂದೆ, ತಾಯಿ ಎಲ್ಲರು ಸೇರಿ ವಧುವನ್ನು ವರನಿಗೆ ಒಪ್ಪಿಸಿ “ಈ ದಿನದಿಂದ ಇವಳ ಕಷ್ಟ, ನಷ್ಟ, ಸುಖ, ಸಂವೃದ್ಧಿ ಎಲ್ಲವು ನಿಮ್ಮದೆ. ತಪ್ಪು ಮಾಡಿದರೆ ಕ್ಷಮಿಸಿಬಿಡಿ” ಹೀಗೆ ಹೇಳಿ ವಿದಾಯ ಹೇಳುವರು. ನಂತರ ವರನು, ವಧುವನ್ನು ಎತ್ತಿಕೊಂಡು ತಾನು ತಂಗಿರುವ ಸ್ಥಳಕ್ಕೆ ಕರೆದುಕೊಂಡು ಹೋಗುವನು.
ಕಾಚಿಕಾ ಬಾಸನ್:
ವಧುವನ್ನು ಬಿಡದಿ ಮನೆಗೆ ಕರೆದುಕೊಂಡು ಹೋದನಂತರ, ವಧುವಿನ ಸಹೋದರಿಯರು ಹಾಲು ಮತ್ತು ಅಕ್ಕಿ ತುರಿಯಲ್ಲಿ ಮಾಡಿದ ಸಿಹಿಯಲ್ಲಿ ಕೆಂಪು ದಾರ ಹಾಕಿ ಕೊಬ್ಬರಿ ಮೇಲೆ ಸುರಿದು ಆ ತುರಿಯಲ್ಲಿ ನವಿಲನ್ನು ಬಿಡಿಸಿ ತೆಗೆದುಕೊಂಡು ಹೋಗುವನು.
ವರನು ಹಾಕಿರುವ ದಾರವನ್ನು ತೆಗೆಯಬೇಕು. ಹೀಗೆ ತೆಗೆಯುವಾಗ ಸಹೋದರಿಯರು ಹೊಡೆಯುವರು. ಈ ಶಾಸ್ತ್ರ ಮುಗಿದ ಮೇಲೆ ವರನ ಕಡೆಯವರು ವಧುವರರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗುವರು. ವಧುವನ್ನು ಮನೆ ಒಳಗೆ ಕರೆದುಕೊಳ್ಳುವುದಕ್ಕಿಂತ ಮೊದಲ ಅರಿಶೀಣದ ನೀರನ್ನು ನಿವಾಳಿಸಿ, ತೆಂಗಿನಕಾಯಿ ಒಡೆದು, ಬಲಗಾಲಿಡಿಸಿ, ಒಳ ಬರಮಾಡಿಕೊಳ್ಳುವರು. ವಧುವನ್ನು ಹಸೆಮಣೆಯ ಮೇಲೆ ಕುಳ್ಳಿರಿಸಿ ಹಾಲಿನಿಂದ ಕಾಲು ತೊಳೆಯುವರು. ’ಮನೆಯ ಹಾಲು ಉಕ್ಕುವ ಹಾಗೆ ಉಕ್ಕಲಿ’ ಎಂದು ಸಾಮಾನ್ಯವಾಗಿ ಈ ಶಾಸ್ತ್ರ ಮಾಡುತ್ತಾರೆ. ಗೋಡೆಯ ಮೇಲೆ ವಧುವಿನ ಕೈಯಿಂದ ಗಂಧದ ಹಸ್ತಗಳನ್ನಿಡಿಸುತ್ತಾರೆ. ಅರಿಶಿಣದ ನೀರಿನಲ್ಲಿ ’ಉಂಗುರ’ ಹಾಕಿ ವಧುವರನ ಕೈಯಿಂದ ಹುಡುಕಿಸುತ್ತಾರೆ.
ಜಡೆ ಬಿಚ್ಚೋ ಶಾಸ್ತ್ರ
ವರನ ಸಹೋದರಿಯರು ವಧುವಿನ ಸಹೇರಾ ಮತ್ತು ಜಡೇ ಬಿಚ್ಚಬೇಕು. ಹೀಗೆ ಬಿಚ್ಚುವಾಗ ಸಹೋದರಿಯರು ವರನಿಂದ ದುಡ್ಡು ಕೇಳುವರು. ಈ ಸಹೋದರಿಯರು ಹೇಳಿದಷ್ಟು ದುಡ್ಡು ಕೊಡದಿದ್ದರೆ ಜಡೆಯೇ ಬಿಚ್ಚುವುದಿಲ್ಲ. ಈ ಸಂದರ್ಭದಲ್ಲಿ ವಾದ, ವಿವಾದ ನಡೆಯುವುದು. ವರನು ಸಹೋದರಿಯರನ್ನು ಕುರಿತು:
ಮೀರಿಯೇ ಆನಾ ಜಲ್ದಿ | ಜಡೆಯಲ್ಲಿ ಬರಬೇಕು |
ಖೋಲೋ ಭಾನ್ | ಬೇಗ ಬಿಚ್ಚು ಸಹೋದರಿ |
ಮೈ ಕಾಮ್ಕು ಜಾನ | ನಾನು ಕೆಲಸಕ್ಕೆ ಹೋಗಬೇಕು |
ಎಂದು ಹೇಳುವನು. ಎಲ್ಲರು ಪರಸ್ಪರ ಜರೆಯವರು. ಹಾಸ್ಯದ ಹೊನಲೆ ಹರಿಯುವುದು. ಜಡೇ ಬಿಚ್ಚಿದ ನಂತರ ಸಹೇರಾ, ಬಾಸಿಂಗ ಎಲ್ಲವನ್ನು ’ದರ್ಗಾದ’ ಹತ್ತಿರ ಬಿಡಲು ಬಹಳ ಜಾಗರೂಕತೆಯಿಂದ ಎತ್ತಿ ಇಡುವರು. ವಧುವಿನ ಕೈಯಿಂದ ಎರಡು ’ರಕಾತ್’ ಶುಕ್ರೀಯಾ ನಮಾಜ್ ಮಾಡಿಸುವರು.
ವಲೀಮಾ
ಮದುವೆಯಾದ ಎರಡು ಅಥವಾ ಮೂರನೇ ದಿನ ಈ ಶಾಸ್ತ್ರ ಮಾಡಬೇಕು. ವರನು ತನ್ನ ಖರ್ಚಿನಲ್ಲಿ ವಧುವಿನ ಕಡೆಯವರಿಗೆ ಮತ್ತು ತಮ್ಮ ಸಂಬಂಧಿಕರನ್ನು ಆಹ್ವಾನಿಸಿ, ಬಿರಿಯಾನಿ, ಮಾಂಸದ ಸಾರು, ತುಪ್ಪದ ಅನ್ನ, ವಿವಿಧ ಬಗೆಯ ಸಿಹಿ ತಿಂಡಿ, ತಿನಿಸುಗಳೆಲ್ಲವನ್ನು ಮಾಡಿಸಿ ಭೋಜನದ ವ್ಯವಸ್ಥೆ ಮಾಡಿಸುವನು. ಆಹ್ವಾನಿತರು ತಮ್ಮ ಶಕ್ತ್ಯಾನುಸಾರ ಉಡುಗೊರೆ ನೀಡುವರು.
ಐದು ಜುಮ್ಮಾಗಿ
ಐದು ಶುಕ್ರವಾರಗಳು ಎಂದು ಕರೆಯುವರು. ಸಾಮಾನ್ಯವಾಗಿ ’ವಲೀಮಾ’ ಮಾಡದಿದ್ದರೆ, ಐದು ಜುಮ್ಮಾಗಿ ಮಾಡುತ್ತಾರೆ. ಮದುವೆಯಾದ ಈ ನವದಂಪತಿಗಳು ಐದು ಶುಕ್ರವಾರಗಳಲ್ಲಿ ಮೊದಲ ಎರಡು ಶುಕ್ರವಾರಗಳು ವಧುವಿನ ತವರು ಮನೆಯಲ್ಲಿ ಇರಬೇಕು. ಪ್ರತಿ ಶುಕ್ರವಾರದ ದಿನ ಈ ದಂಪತಿಗಳನ್ನು ಹಸೆಯ ಮೇಲೆ ಕೂರಿಸಿ ಮಡಿಲು ತುಂಬುವರು. ಐದನೆಯ ಶುಕ್ರವಾರದ ದಿನ ಸಂಬಂಧಿಕರನ್ನು ಆಹ್ವಾನಿಸಿ ಊಟದ ವ್ಯವಸ್ಥೆ ಮಾಡುವರು. ಈ ದಿನ ವರನ ತಂದೆ, ತಾಯಿಯರಿಗೆ ವಧುವಿನ ಕಡೆಯವರು ಬಟ್ಟೆ ಕೊಟ್ಟು ಹಾರ ಹಾಕುವರು. ನವದಂಪತಿಗಳ ಕೈಯಲ್ಲಿ ಕರ್ಜಿಕಾಯಿ ಮಾಡಿಸುವರು. ಐದು ಶುಕ್ರವಾರದವರೆವಿಗೂ ವಧುವಿನ ಕೈಯಲ್ಲಿ ಮನೆ ಗುಡಿಸಲು, ಅಡುಗೆ ಮಾಡಲು ಹೀಗೆ ಯಾವ ಜವಾಬ್ದಾರಿಗಳನ್ನು ಹೊತ್ತು, ತವರು ಮನೆಗೂ, ಕೊಟ್ಟ ಮನೆಗೂ ಕೀರ್ತಿ ತರುವಂತೆ, ಕಷ್ಟ, ನಷ್ಟಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಜೀವನ ನಿರ್ವಹಿಸಬೇಕು.
ಸತ್ತ ನಂತರದ ಆಚರಣೆಗಳು
ವ್ಯಕ್ತಿ ಸತ್ತ ನಂತರದ ಆಚರಣೆಗಳು ಇವರಲ್ಲಿ ಬಹಳ ವಿಶಿಷ್ಟವಾಗಿದೆ. ಪುರುಷರು ಸತ್ತರೆ ಸೊಂಟದವರೆಗೆ, ಸ್ತ್ರೀ ಸತ್ತರೆ ಎದೆಯವರೆಗೆ ಗುಂಡಿ ತೆಗೆಯುವರು. ಸಮಾಧಿಯ ಎರಡು ಕಡೆ ಕಲ್ಲು ನಿಲ್ಲಿಸುವರು ಮತ್ತು ಹಸಿರು ಗಿಡ ನೆಡುವರು. ಈ ಗಿಡ ಚಿಗುರಿ ದೊಡ್ಡ ಮರವಾದರೆ ’ಸತ್ತ ವ್ಯಕ್ತಿ ಆತ್ಮಕ್ಕೆ ಶಾಂತಿ ಸಿಗುತ್ತದೆಂಬ’ ನಂಬಿಕೆ ಇದೆ. ಕೆಲವರು ತಲೆಯ ಕಡೆ ಕಲ್ಲು ನಿಲ್ಲಿಸಿ ವ್ಯಕ್ತಿಯ ಹೆಸರು, ಜನನ, ಮರಣದ ತಾರೀಖು ನಮೂದಿಸುವರು. ಚಹೇಲಂ ಆಗುವವರೆವಿಗೂ ಸಮಾಧಿ ಹತ್ತಿರ ಮನೆಯ ಗಂಡಸರು ಹೋಗಿ ಪ್ರತಿದಿನ ’ಖುರಾನ್’ ಗ್ರಂಥದ ಸೂರಗಳನ್ನು ಓದಿ, ಹೂ ಹಾಕುವರು.
ಸತ್ತ ಮೂರನೆಯ ದಿನಕ್ಕೆ ಮುಂಜಾವಿನಲ್ಲೇ ಬೂಂದಿ ಅಥವಾ ಪುರಿ, ಕಡ್ಲೆ, ಹಣ್ಣ, ಹಂಪಲುಗಳನ್ನು ಸತ್ತ ವ್ಯಕ್ತಿಯನ್ನು ಮಲಗಿಸಿದ್ದ ಸ್ಥಳದಲ್ಲಿಟ್ಟು ಫಾತೇಹ ಓದಿಸಿ, ಗಂಧ, ಪುಷ್ಪ ಹಾಕಿಸುವರು. ಏಳು ಅಥವಾ ಒಂಬತ್ತು ದಿವಸಕ್ಕೆ ಮಾಂಸದ ಸಾರು, ತುಪ್ಪದ ಅನ್ನ ಮಾಡಿ ಸತ್ತವರ ಹೆಸರಲ್ಲಿ ಫಾತೇಕ ಓದಿ ಹೂವು, ಗಂಧವನ್ನು ಸಮಾಧಿ ಸ್ಥಳಕ್ಕೆ ಹಾಕುವರು. ಹಾಗೆಯೇ ಇಪ್ಪತ್ತು ದಿನಕ್ಕೆ ಸಂಜೆಯ ಹೊತ್ತು ಸಿಹಿ ಅನ್ನು ಮಾಡಿ ಪುನಃ ಫಾತೇಹ ಓದಿ ಸೂರ್ಯ ಮುಳುಗುವುದಕ್ಕಿಂತ ಮೊದಲು ಗಂಧ, ಪುಷ್ಪಗಳನ್ನು ಹಾಕಿಸುವರು. ಸಿಹಿಯನ್ನು ಮನೆ, ಮನೆಗೂ ಹಂಚುವರು. ನಲವತ್ತು ದಿನಕ್ಕೆ ಎರಡು ದಿನ ಇದೆ ಎನ್ನುವಾಗ ಸೂತ್ಕದ ಮನೆ ಎಂದು ಸುಣ್ಣ ಬಣ್ಣ ಬಳಿದು ಮನೆ ಸ್ವಚ್ಛಗೊಳಿಸಲಾಗುವುದು. ಚಹೇಲಂ ಎಂದು ಮಾಂಸದ ಸಾರು, ತಪ್ಪದ ಅನ್ನ, ಪಾಯಸ ಮಾಡಿ ಪುನಃ ಸತ್ತವರ ಹೆಸರಲ್ಲಿ ಫಾತೇಹ ಓದಿಸುವರು. ಸಂಬಂಧಿಕರಿಗೆ, ನೆಂಟರಿಷ್ಟರಿಗೆ ಆಹ್ವಾನಿಸಿ ಊಟದ ವ್ಯವಸ್ಥೆ ಮಾಡುವರು. ಈ ಕಾರ್ಯಕ್ರಮವನ್ನು ರಾತ್ರಿಯ ಸಮಯದಲ್ಲಿ ಮಾಡುವರು. ರಾತ್ರಿ ಪೂರ್ಣವಾಗಿ ಮುರುಷದ್ರವರು ’ದಯಾರ್’ ಬಾರಿಸುತ್ತ ಹಾಡುವರು.ಎರಡನೆಯ ದಿನದ ಬೆಳಿಗ್ಗೆ ಹೂವು, ಗಂಧವನ್ನು ಸಮಾಧಿ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಹಾಕುವರು. ಹಾಗೆಯೇ ಆರು ತಿಂಗಳಿಗೆ ’ಛಮೈ’ ಒಂದು ವರ್ಷಕ್ಕೆ ’ಬರ್ಸಿ’ ಎಂದು ಮೇಲಿನ ರೀತಿಯಲ್ಲಿ ಅಡುಗೆ ಮಾಡಿ, ಫಾತೇಹ ಓದಿಸಿ ಗಂಧ, ಪುಷ್ಪಗಳನ್ನು ಅರ್ಪಿಸುವರು.
ಹಬ್ಬಗಳು
ಮೊಹರಂ
ಮುಸ್ಲಿಂ ಸಂವತ್ಸರದ ಮೊದಲ ಈ ತಿಂಗಳಲ್ಲಿ ಇಸ್ಲಾಂ ಧರ್ಮದ ಉಳಿವಿಗಾಗಿ ಪೈಗಂಬರ್ರವರ ಮೊಮ್ಮಕ್ಕಳಾದ ಹಜರತ್ ಇಮಾಮ್ ಹುಸ್ಸೇನ್, ಹಜರತ್ ಹಜರತ್ ಇಮಾಮ್ ಹಸ್ಸೇನ್ರವರ ತ್ಯಾಗ, ಬಲಿದಾನದ ನೆನಪಿಗಾಗಿ ’ಮೊಹರಂ’ ಸಂಪ್ರದಾಯವನ್ನು ಶೋಕದ ಸಂಕೇತವಾಗಿ ಹತ್ತು ದಿನಗಳವರೆಗೆ ಆಚರಿಸಲಾಗುತ್ತದೆ.
ದುರ್ವೇಶ್ಗಳಲ್ಲಿ ಮೊದಲನೆಯ ತಾರೀಖಿನಲ್ಲಿ ಪಿಠಾರ ತೆಗೆದು, ಅದರಲ್ಲಿರುವ ಪಂಜೆಗಳನ್ನು ತೊಳೆಸುತ್ತಾರೆ. ಫಖೀರರ ದೈರ ಬಾರಿಸುತ್ತ, ಹುಡುಗರು ಪಂಜೆಗಳನ್ನು ಹಿಡಿದು ’ಯಾಲಿ ದೂಲ ಹಸ್ಸೇನ್, ಹುಸ್ಸೇನ್ ಯಾಲೀ ಮಾಮ್ ದೀನ್’ ಎಂದು ಕೂಗುತ್ತ ಊರ ಮೆರವಣಿಗೆ ಮಾಡುತ್ತಾರೆ. ನಂತರ ಸಿದ್ಧಪಡಿಸಿದ ಸ್ಥಳದಲ್ಲಿ ಪಂಜೆಗಳನ್ನು ತಂದು ಇಡುತ್ತಾರೆ. ಮನೆಯಲ್ಲಿ ಹೆಂಗಸರು ಶರಬತ್ ಮಾಡಿ ಹಂಚುತ್ತಾರೆ. ಏಳನೇ ಖನ್(ದಿನ) ಎರಡು ಪಂಜೆ, ಎಂಟನೆ ದಿನ ಮೂರು ಪಂಜೆ, ಒಂಭತ್ತನೆ ದಿನ ಐದು ಪಂಜೆಗಳನ್ನು ತೆಗೆದು ಮೆರವಣಿಗೆ ಮಾಡುತ್ತಾರೆ. ಹೆಂಗಸರು ಮೂರು ಮತ್ತು ಐದನೆಯ ದಿನ ಮೇವ, ಕಿಚಡಿ ಅನ್ನ, ಪಲ್ಯ, ಶರಬತ್ ಮಾಡಿ ಹಸ್ಸೇನ್ ಹುಸ್ಸೇನ್ರವರ ಹೆಸರಲ್ಲಿ ಫಾತೇಹ ಓದಿಸುವರು. ಆರನೆಯ ದಿನ ಘೋಡೆ, ಕಿಚಡಿ ಅನ್ನ, ಪಲ್ಯ ಇತ್ಯಾದಿ ಮಾಡಿ ಪಂಜೆ ಹತ್ತಿರ ಇಟ್ಟು ಫಾತೇಹ ಓದಿಸುತ್ತಾರೆ.
ಹತ್ತನೆಯ ದಿನ ’ಷಹದತ್’ ಎಂದು ಪಂಜೆ ಇರಿಸಿರುವ ಸ್ಥಳದ ಮುಂದೆ ಅಲಾವ ತೆಗೆದು ಬೆಂಕಿ ಮಾಡಲಾಗುತ್ತದೆ. ಸಂಪ್ರದಾಯಿಕವಾಗಿ ನಡೆಸಿಕೊಂಡು ಬಂದ ಅಥವಾ ಹೊಸದಾಗಿ ಹರಕೆ ಹೊತ್ತ ಹೆಂಗಸರು ಕಟ್ಟಿಗೆ ಮತ್ತು ಉಪ್ಪನ್ನು ತಂದು ಅಲಾವದಲ್ಲಿ ಹಾಕಿ ಉರಿಸುತ್ತಾರೆ. ಪಂಚೆಗಳನ್ನು ತೆಗದುಕೊಂಡು ಹುಡುಗರು, ಪುರುಷರು ಕೆಂಡ ತುಳಿದು ಊರ ಮೆರವಣಿಗೆ ಹಾಕಿ ಉರಿಸುತ್ತಾರೆ. ಪಂಚೆಗಳನ್ನು ತೆಗೆದುಕೊಂಡು ಹುಡುಗರು, ಪುರುಷರು ಕೆಂಡ ತುಳಿದು ಊರ ಮೆರವಣಿಗೆ ಹೊಡರುವರು. ಕತ್ತಿವರಸೆ, ದೊಣ್ಣೆ ವರಸೆ ಇತ್ಯಾದಿ ಪ್ರದರ್ಶನ ಮಾಡುತ್ತಾರೆ. ನಂತರ ಪಂಜೆಗಳೆಲ್ಲವನ್ನು ತಂದು ಬಟ್ಟೆ ಸುತ್ತಿ ಇಡುತ್ತಾರೆ. ಇದನ್ನು ’ಕಫನ್’ ಎಂದು ಕರೆಯುತ್ತಾರೆ. ಮೂರನೆಯ ದಿನ ’ಜಿಯಾರತ್’ ಎಂದು ’ಮೇವಾ’ವನ್ನು ಹಂಚುತ್ತಾರೆ. ಫಾತೇಹ ಓದಿಸಿ ಪಂಚೆಗಳನ್ನು ಪೀಠಾರದಲ್ಲಿ ತೆಗೆದು ಇಡುತ್ತಾರೆ.
ರಂಜಾನ್ ಮತ್ತು ಬಕ್ರೀದ್ ಹಬ್ಬಗಳನ್ನು ಎಲ್ಲಾ ಮುಸ್ಲಿಂ ಜನರು ಆಚರಿಸುವಂತೆ ಇವರೂ ಆಚರಿಸುತ್ತಾರೆ.
ರಂಜಾನ್ ಹಬ್ಬದ ದಿನ ಶಾವಿಗೆ ಪಾಯಸ ಮಾಡಿ ಪೈಗಂಬರ್ರವರ ಹೆಸರಲ್ಲಿ ಫಾತೇಹ ಓದಿಸುತ್ತಾರೆ. ಎಲ್ಲರೂ ಹೊಸ ಬಟ್ಟೆ ಧರಿಸಿ ಸಂತೋಷ ವ್ಯಕ್ತಪಡಿಸುತ್ತಾರೆ. ಪುರುಷರು ಈದ್ಗಾ ಮೈದಾನಕ್ಕೆ ನಮಾಜಿಗೆ ಹೋಗುತ್ತಾರೆ.
ಬಕ್ರೀದ್ ಹಬ್ಬದ ದಿನ ರೊಟ್ಟಿ, ಕುಫ್ತೇ ಮಾಡಿ ಹಜರತ್ ಇಬ್ರಾಹಿಂ ಹಾಗೂ ಹಜರತ್ ಇಸ್ಮಾಯಿಲ್ರವರ ಹೆಸರಲ್ಲಿ ಫಾತೇಹ ಓದಿಸುತ್ತಾರೆ. ಪುರುಷರು ಪುನಃ ಈದ್ಗಾ ಮೈದಾನಕ್ಕೆ ಹೋಗಿ ನಮಾಜ್ ಮಾಡುತ್ತಾರೆ.
ಇತರ ಆಚರಣೆಗಳು
ಮುಟ್ಟೀಕೀ ಗ್ಯಾರ್ಂವೀ
ಮನೆಯಲ್ಲಿ ಪ್ರತಿದಿನ ಅಡುಗೆ ಮಾಡುವ ಅಕ್ಕಿಯಲ್ಲಿ ಒಂದೊಂದು ’ಮುಷ್ಠಿ’ ತೆಗೆದಿಡುತ್ತಾರೆ. ಸುಮಾರು ನಾಲ್ಕು, ಐದು ಸೇರು ಅಕ್ಕಿಯಾದಾಗ ಮುಟ್ಟೀಕೀ ಗ್ಯಾರ್ಂವೀ ಮಾಡುತ್ತೇವೆಂದು ಒಂದು ದಿನ ನಿರ್ಧರಿಸಿ ಮನೆಯನ್ನು ಸ್ವಚ್ಛಗೊಳಿಸಿ ಕಿಚಡಿ ಅನ್ನ, ಸೊಪ್ಪಿನ ಪಲ್ಯ ಮಾಡಿ ಫಾತೇಹ ಓದಿಸಿ ಸಂಬಂಧಿಕರಿಗೆ ಊಟಕ್ಕೆ ಆಹ್ವಾನಿಸುತ್ತಾರೆ.
ಗ್ಯಾರ್ಂವೀ
ದಸ್ತಗೀರ್ ತಿಂಗಳಲ್ಲಿ ’ಗೌಸ್ಪಾಕ್’ರವರ ಹೆಸರಲ್ಲಿ ಹನ್ನೊಂದು ಫಖೀರರನ್ನು ಕರೆದು ಐನೂರ ಐವತ್ತು ರೂಪಾಯಿಗಳನ್ನು ಹರಕೆ ಸಲ್ಲಿಸುತ್ತಾರೆ. ಕಿಚಡಿ ಅನ್ನ, ಪಲ್ಯ, ಪಾಯಸ ಮಾಡಿ ಫಾತೇಹ ಓದಿಸಿ ಹನ್ನೊಂದು ತಟ್ಟೆ ತೆಗೆದು ಹಂಚುತ್ತಾರೆ. ಹಸಿರು ಬಾವುಟಕ್ಕೆ ಅತ್ತರ್, ಗಂಧ ಹಚ್ಚಿ ಮೆನಯ ಛಾವಣಿಗೆ ಕಟ್ಟುತ್ತಾರೆ. ಫಖೀರರು ಮನೆಯ ಸುತ್ತ ದೈರಾ ಹೊಡೆಯುತ್ತ ಸುತ್ತುತ್ತಾರೆ. ನಂತರ ಎಲ್ಲರೂ ಊಟ ಮಾಡುತ್ತಾರೆ.
ಪೂರ್ಕೇ ಫಾತೇಹ:
ರಜಬ್ ತಿಂಗಳಲ್ಲಿ ಇಮಾಮ್ ’ಜಾಫರೇ ಸಾದಿಖ್’ ರವರ ಹೆಸರಲ್ಲಿ ಕರ್ಜಿಕಾಯಿ, ಘೋಡೆ, ಖೀರು, ತುಪ್ಪದ ಅನ್ನ, ಪಲ್ಯ ಮಾಡಿ ಪ್ರತ್ಯೇಕವಾದ ಕೊಠಡಿಯಲ್ಲಿ ಹಸಿರು ದಸ್ತರ್ ಹಾಸಿ ಅದರ ಮೇಲೆ ಮಾಡಿರುವ ಅಡುಗೆಗಳನ್ನು ಒಂದೊಂದು ತಟ್ಟೆಯಲ್ಲಿ ತೆಗೆದು ಇಡುತ್ತಾರೆ. ದ್ರಾಕ್ಷಿ ಹಣ್ಣುಗಳನ್ನು ಬಿಟ್ಟು ಎಲ್ಲಾ ತರಹದ ಹಣ್ಣು ಹಂಪಲುಗಳನ್ನು ಸಹ ಇಡುತ್ತಾರೆ. ಮುಟ್ಟು ಮೈಲಿಗೆಯಾದವರು ಬರದಂತೆ ಎಚ್ಚರಿಕೆ ವಹಿಸುತ್ತಾರೆ. ತಮ್ಮ ಕಷ್ಟ ನಿವಾರಣೆಯಾದರೆ ತಾವು ಸಹ ಪೊರ್ಕೇ ಫಾತೇಹ ಮಾಡುತ್ತೇವೆಂದು ಕೆಲವು ಹರಕೆ ಹೊತ್ತು ಈ ಸಂಪ್ರದಾಯವನ್ನು ಆಚರಿಸುತ್ತಾರೆ.
ಸಿರಾರೋಟಿಕೆ ಫಾತೇಹ:
’ಸೈಯದ್ ಅಹಮದ್ ಕಬೀರ್’ ಎಂಬ ಸೂಫಿ ನಂತರ ಹೆಸರಲ್ಲಿ ಮಾಡುವ ಈ ಆಚರಣೆ ಮುಖ್ಯವಾಗಿ ದರ್ಗಾ ಇರುವ ಮೈದಾನ ಅಥವಾ ಹೊಲಗದ್ದೆಗಳ ಮೈದಾನದ ಹತ್ತಿರ ಹೋಗಿ ಮಾವಿನ ಮರದ ಕೆಳಗೆ ಅಡುಗೆ ಮಾಡುತ್ತಾರೆ. ’ಸಫರಾ ಬರ್ನ’ ಎಂದು ಹಸಿರು ಬಟ್ಟೆ ಹಾಸಿ, ಮಾಡಿರುವ ಅಡುಗೆಯಲ್ಲಿ ಕುರಿ ತಲೆ ಸಾರು, ರೊಟ್ಟಿಯನ್ನು ದರ ಮೇಲೆ ಇಟ್ಟು ಫಾತೇಹ ಓದಿಸಿ ಸಂಬಮಧಿಕರು, ನೆಂಟರಿಷ್ಟರು ಊಟ ಮಾಡುತ್ತಾರೆ.
ಜಟ್ಪಟ್ಬೀಬಿ
’ಜಟ್ಪಟ್ ಬೀಬಿ’ ಇವರ ಹೆಸರಲ್ಲಿ ತಕ್ಷಣವೇ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಹರಕೆ ಹೊರುವ ಪದ್ಧತಿಯನ್ನು ನಮ್ಮ ಜನಪದ ಹೆಣ್ಣು ಮಕ್ಕಳಲ್ಲಿ ಕಾಣಬಹುದು. ಅಂದರೆ ಕೋಳಿ ಕಳುವಾದರೆ, ದನ, ಕರುಗಳು ತಪ್ಪಿಸಿಕೊಂಡರೆ, ಒಡವೆ, ವಸ್ತ್ರಗಳು ಎಲ್ಲೋ ಇಟ್ಟು ಆತಂಕಕ್ಕೆ ಒಳಗಾದ ಸಂದರ್ಭದಲ್ಲಿ ಹರಕೆ ಹೊರುತ್ತಾರೆ. ಇದರಿಂದ ತಕ್ಷಣವೇ ಸಮಸ್ಯೆ ಪರಿಹಾರ ವಾಗುತ್ತದೆಂಬ ನಂಬಿಕೆ ಇದೆ. ಇಚ್ಛೆ ಕೈಗೂಡಿದಾಗ ಕೂಡಲೇ ಎಲೆ, ಅಡಿಕೆ ತರಿಸಿ ಐದು ಜನ ಮುತ್ತೈದೆಯರಿಗೆ ಹಂಚುವ ಕ್ರಮ ಕಂಡುಬರುತ್ತದೆ.
ಹೀಗೆ ನಂಬಿಕೆಯನ್ನು ಬಲಗೊಳಿಸುವ ಹಬ್ಬಗಳ ಮತ್ತು ಹರಕೆಗಳು ಆಚರಣೆಗಳ ಮೂಲಕ ಚಾಲ್ತಿಯಲ್ಲಿವೆ. ಇವು ಆಯಾಯಾ ಹೊತ್ತಿಗೆ ನೆಮ್ಮದಿ ಮತ್ತು ಶಾಂತಿಯನ್ನು ನೀಡುತ್ತವೆ.
ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ
ಸೂಫಿ ಅಥವಾ ದುರ್ವೇಶ್ಗಳ ಬಗ್ಗೆ ಅನೇಕ ಕಟ್ಟಾ ಸಂಪ್ರದಾಯವಾದಿ ಮುಸ್ಲಿಮರ ವಿರೋಧವಿದೆ. ಸೂಫಿಗಳು ಧರ್ಮದ ಹೆಸರಲ್ಲಿ ಮುಗ್ಧ ಜನತೆಯನ್ನು ಮರುಳು ಮಾಡುತ್ತಿದ್ದಾರೆ. ಗೋರಿಗಳ ಹತ್ತಿರ ಹೋಗುವುದು, ಬೇಡುವುದು, ಹರಕೆ ಸಲ್ಲಿಸುವುದು, ಫಾತೇಹ ಓದಿಸುವುದು ಇತ್ಯಾದಿ ಅಂಧಾನುಕರಣೆಯಾಗಿದೆ. ’ಬೇಡುವಂತಿದ್ದರೆ ಅಲ್ಹಾನಲ್ಲಿ ನೇರವಾಗಿ ಬೇಡಬೇಕು’ ಎಂದು ಜನರನ್ನು ಎಚ್ಚರಿಸುತ್ತಿದ್ದಾರೆ. ಧರ್ಮದ ತಿರುಳನ್ನು ತಿಳಿಸುವ ’ತಬ್ಲಿಖ್, ಜಮಾತ್, ಜಮಾತೆ’ ಇಸ್ಲಾಂ ಎಂಬ ಅನೇಕ ಗುಂಪುಗಳು ರೂಢಿಗೆ ಬಂದಿದೆ.
ಇಷ್ಟೆಲ್ಲಾ ವಿರೋಧವಿದ್ದರೂ ಜನಸೇವೆಯಲ್ಲಿ ನಿರತರಾಗಿ ಜನಪ್ರಿಯರಾದ ಸೂಫಿಗಳನ್ನು ಸಂಪೂರ್ಣವಾಗಿ ಹತ್ತಿಕ್ಕಲು ಕಟ್ಟಾ ಸಂಪ್ರದಾಯವಾದಿಗಳಿಗೆ ಸಾಧ್ಯವಾಗಿಲ್ಲ. ಸತ್ತು ’ವಲೀ’ಗಳಾದ ಸೂಫಿಗಳ ದರ್ಗಾಗಳಿಗೆ ಹಿಂದೂ-ಮುಸ್ಲಿಮ್ ಎಂಬ ಭೇದವಿಲ್ಲದೆ ಎಲ್ಲಾ ಭಕ್ತಾದಿಗಳು ಹೋಗುತ್ತಾರೆ. ತಮ್ಮ ಸಂಕಷ್ಟಗಳನ್ನು ಹೇಳಿಕೊಂಡು ಹರಕೆ ಹೊತ್ತು, ಇಷ್ಟಾರ್ಥಗಳು ಪೂರೈಸಿದ ಮೇಲೆ ಅಂದುಕೊಂಡಂತೆ ಹರಕೆ ಸಲ್ಲಿಸುತ್ತಾರೆ. ಪ್ರತಿವರ್ಷವು ’ವಲೀ’ಗಳ ಹೆಸರಲ್ಲಿ ’ಉರುಸ್’ (ಉತ್ಸವ) ಗಳನ್ನು ಇವರ ಭಕ್ತರು ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿ ಮುಜಾವರ್ರವರು ಮೇಲ್ವಿಚಾರಕರಾಗಿದ್ದು, ಆತೇಕ ಓದಿಸುವುದು, ಭಕ್ತಾದಿಗಳು ತಂದುಕೊಟ್ಟ ಹರಕೆ ಸಲ್ಲಿಸುವುದು ಇತ್ಯಾದಿ ಧಾರ್ಮಿಕ ಕಾರ್ಯದಲ್ಲಿ ನಿರತರಾಗುತ್ತಾರೆ. ವಲೀಗಳ ದರ್ಗಾಗಳಲ್ಲಿ ಇರುವ ಫಖೀರರ ಬಗ್ಗೆಯು ಅನೇಕ ವಿರೋಧವಿದೆ. ’ಧರ್ಮದ ಹೆಸರಲ್ಲಿ ಭಿಕ್ಷೆ ಬೇಡುವ ಸೋಮಾರಿಗಳು’ ಎಂದು ಫಖೀರರನ್ನು ಕೆಲವರು ತಿರಸ್ಕರಿಸುತ್ತಾರೆ.
ಒಟ್ಟಿನಲ್ಲಿ ಲೌಕಿಕ ಬದುಕಿಗೆ ಅಂಟಿಯೂ ಅಂಟದಂತೆ ಧಾರ್ಮಿಕವಾಗಿ ಜೀವನ ನಿರ್ವಹಿಸುತ್ತಿರುವ ದುರ್ವೇಶ್ಗಳಲ್ಲಿ ಶ್ರೀಮಂತರು ಮತ್ತು ಕಡುಬಡವರಿದ್ದಾರೆ. ಶ್ರೀಮಂತ ವರ್ಗದವರು ಪ್ರಮುಖ ದರ್ಗಾಗಳ ಹತ್ತಿರ ವಾಸವಾಗಿದ್ದು, ಶಿಷ್ಯ ವರ್ಗವನ್ನು ರಚಿಸುತ್ತಾರೆ. ದರ್ಗಾದಿಂದ ಬರುವ ಸಂಪಾದನೆಯೊಂದಿಗೆ ಶಿಷ್ಯ ಸಮುದಾಯವು ಶಕ್ತಾನುಸಾರ ದಾನಧರ್ಮಗಳನ್ನು ’ವಲೀ’ಗಳ ಹೆಸರಲ್ಲಿ ನೀಡುತ್ತಾರೆ.
ಆದರೆ ದುರ್ವೇಶ್ ಹೆಸರಲ್ಲಿ ಫಖೀರರಾಗಿರುವವರಲ್ಲಿ ಬಹಳಷ್ಟು ಜನ ಕಡುಬಡತನದ ಜೀವನ ನಿರ್ವಹಿಸುತ್ತಿದ್ದಾರೆ. ಸೋಮವಾರ ಮತ್ತು ಗುರುವಾರ ಮಾತ್ರ ಬಾನ್ಂವೀ ಬೇಡುವುದು ಇಂದಿನ ದಿನಗಳಲ್ಲಿ ಸಾಕಾಗದೆ ಬೇರೆ ಬೇರೆ ಸಣ್ಣಪುಟ್ಟ ಉದ್ಯೋಗಗಳಲ್ಲೂ ತೊಡಗುತ್ತಿದ್ದಾರೆ. ಹೆಂಡತಿ ಮತ್ತು ಮಕ್ಕಳು ಮನೆ ಕೆಲಸಗಳಿಗೆ ಹೋಗುತ್ತಾರೆ. ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿಹ ಹಿಂದುಳಿಯುತ್ತಿರುವ ಇವರು ಮೊಹಲ್ಲಾ ಗಳಲ್ಲಿ ವಾಸಮಾಡುತ್ತಿದ್ದಾರೆ. ವಾಸ ಮಾಡುತ್ತಿರುವ ಮನೆಗಳು ಬಹಳವಾಗಿ ಶಿಥಿಲಗೊಂಡಿವೆ. ಕೆಲವು ಮನೆಗಳಿಗೆ ಮೂಲ ಸೌಕರ್ಯಗಳೂ ಇಲ್ಲವಾಗಿವೆ. ಶಾಲಾ ಶಿಕ್ಷಣವು ಇವರಲ್ಲಿ ಅತಿ ಕಡಿಮೆಯಾಗಿದ್ದು, ಪುರುಷರೆ ಪ್ರಧಾನವಾಗಿರುವ ಇವರಲ್ಲಿ ಮಹಿಳೆಯರು ಮತ್ತು ಮಕ್ಕಳು ಮಾತನಾಡಲು ಹಿಂಜರಿಯುತ್ತಾರೆ. ಹೆಂಗಸರ ಯಾವುದೇ ತೀರ್ಮಾನ ಹಾಗೂ ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದಿಲ್ಲ.
ಇಂದಿನ ಆಧುನಿಕತೆ ಹಾಗು ನಾಗರಿಕತೆಯಿಂದಾಗಿ ಯುವಕ, ಯುವತಿಯರಲ್ಲಿ ಧಾರ್ಮಿಕ ನಂಬಿಕೆಗಳು ಸಡಿಲಗೊಂಡಿವೆ. ’ಸದ್ಖಾ’ ಸಿಕ್ಕಿದ ಪದಾರ್ಥಗಳನ್ನು ಮನೆಯ ಹೆಂಗಸರು ಅಡುಗೆ ಮಾಡಿ ಊಟ ಮಾಡಲು ಕೆಲವರು ಇಷ್ಟಪಡುತ್ತಿಲ್ಲ. ಫಖೀರರಾಗಿ ಬಾನ್ಂವೀ ಬೇಡುವುದು ನಾಚಿಕೆ ತರುವಂತಹ ಕೆಲಸ ಎಂಬ ಭಾವನೆ ಯುವಕರಲ್ಲಿ ಬರುತ್ತಿದೆ. ಆದುದರಿಂದ ’ದೀಕ್ಷೆ’ ಪಡೆದು ಫಖೀರರಾಗಲು ಬಯಸುತ್ತಿಲ್ಲ. ಸಣ್ಣಪುಟ್ಟ ಉದ್ಯೋಗಗಳನ್ನು ಅರಸಿ ನಗರಗಳಲ್ಲಿ ವಾಸಮಾಡುತ್ತಿದ್ದಾರೆ. ಆದುದರಿಂದ ಇವರ ಸಂಖ್ಯೆ ಇಳಿಮುಖವಾಗುತ್ತಿದೆ.
ಶಬ್ದಾರ್ಥಗಳು
ಅಜ್ಹಾ = ನಮಾಜ್ಗಾಗಿ ಕರೆ
ಫಿರ್ಖಾ = ಪಂಗಡ, ವಂಶಾವಳಿ
ಲಿಬಾಸ್ = ವಸ್ತ್ರ
ದಸ್ತರ್ = ಬಟ್ಟೆ
ಸುರ್ಮಾ = ಕಾಡಿಗೆ, ಕಪ್ಪು
ಖಾನ್ವಾ = ಪಂಗಡ
ಕಲ್ಮಾ = ಸ್ತೋತ್ರ
ಖೈರಾತ್ = ದಾನ
ಫಾಖಾ = ಉಪವಾಸ, ಬಡತನ
ದೂವಾ = ಹಾರೈಕೆ
ಸನದ್ = ಬಯ್ಯತ್, ವಚನ, ಪ್ರಮಾಣ
ಮಲಾಯಂಕ =ದೇವದೂತರು
ಸಿಜ್ರಾ = ವಂಶಾವಳಿ
ಮುರ್ಷದ್ = ಗುರು
ಉರುಸ್ = ಉತ್ಸವ
ಕಿಶ್ತಿ = ಹಡಗು, ಭಿಕ್ಷೆ ಬೇಡುವ ವಸ್ತು
* * *
Leave A Comment