ಜಿಯಾರತ್
ಸತ್ತ ವ್ಯಕ್ತಿಗೆ ಸಂಬಂಧಿಸಿದಂತೆ ಮಾಡುವ ಎಲ್ಲಾ ಪ್ರಕಾರದ ಸಂಸ್ಕಾರಗಳು, ಈ ಮಾಸುಮ್ಮಿಗೂ ಮಾಡಲಾಗುತ್ತದೆ. ಮೂರು ದಿನ ನಂತರ ರೊಟ್ಟಿ ಮತ್ತು ಸೊಪ್ಪಿನ ಪಲ್ಯವನ್ನು ಮಾಡಿ ಅವನ ಮುಂದಿಟ್ಟು ಪಾತೇಹ ಓದುತ್ತಾರೆ. ರೊಟ್ಟಿ ಪಲ್ಯವನ್ನು ತಿನ್ನಲು ಕೊಡುತ್ತಾರೆ. ನಂತರ ಕಫನ್ ತೆಗೆದು ಲುಂಗಿ ಮತ್ತು ಜುಬ್ಬ ಧರಿಸಲು ಹೇಳುತ್ತಾರೆ. ತಲೆಗೆ ದಸ್ತರ್ ಕಟ್ಟಿರಲೇಬೇಕು. ಒಮ್ಮೆ ಲುಂಗಿ, ಜುಬ್ಬ ಧರಿಸಿದ ಮೇಲೆ ಜೀವನದಲ್ಲಿ ಯಾವಾಗಲೂ ಪ್ಯಾಂಟು ಹಾಗೂ ಆಧುನಿಕ ಉಡುಗೆ ಧರಿಸುವ ಹಾಗಿಲ್ಲ. ಫಖೀರರಾಗಲು ಬಯಸುವವನು ಎಷ್ಟೇ ಶ್ರೀಮಂತನಾಗಿದ್ದರು ಎರಡುವರೆ ಮನೆಯ ಬಾನಂವೀ ಬೇಡಬೇಕು. ಆಹ್ವಾನಿತ ಫಖೀರರು ಸಹ ತಮ್ಮ ಇಚ್ಛಾನುಸಾರ ವಾಚು, ಕೀಶ್ತಿ, ದುಡ್ಡು, ಜೋಳೀಗೆ ಇತ್ಯಾದಿ ಉಡುಗೊರೆ ಕೊಡುತ್ತಾರೆ.
ಬಾನ್ಂವೀ ಬೇಡಿದ ಪದಾರ್ಥಗಳನ್ನು ಮೂರು ಭಾಗ ಮಾಡಿ ಒಂದು ಭಾಗ ಈಜ್ನಿಗೆ ಇನ್ನೊಂದು ಭಾಗ ಚಾವೂಸನಿಗೆ ಉಳಿದದ್ದು ತಾನು ಇಟ್ಟುಕೊಳ್ಳುತ್ತಾನೆ.
ಹತ್ತು ದಿನದ ಫಾತೇಹ
ಮಾಂಸದ ಸಾರು, ತುಪ್ಪದ ಅನ್ನ, ಪಾಯಸ ಮಾಡಿ ಪುನಃ ಮಾಸುಮ್ಮಿನ ಮುಂದಿಟ್ಟು ಅವನ ಹೆಸರಲ್ಲಿ ಫಾತೇಹ ಓದಲಾಗುತ್ತದೆ. ಎಲ್ಲಾ ಫಖೀರ್ಹಾಗೂ ಮುರುಷದ್ರವರಿಗೆ ದಾವತ್ತಿಗೆ ಆಹ್ವಾನಿಸುತ್ತಾರೆ.
ಬೀಪ್ವಾ: ಮಾಂಸದ ಸಾರು, ತುಪ್ಪದ ಅನ್ನು ಮಾಡಿ ಫಾತೇಹ ಓದಿಸಿ ’ಸಿಜ್ರಾ’ ಓದಿಸಲಾಗುತ್ತದೆ.
ಚಹೇಲಂ: ಶಕ್ತ್ಯಾನುಸಾರ ಕುರಿಕುಯ್ದು ಅಡುಗೆ ಮಾಡಿ ಫಾತೇಹ ಓದಿಸಿ ಎಲ್ಲಾ ಫಖೀರರು ಸೇರಿ ಊಟ ಮಾಡುತ್ತಾರೆ. ಆಹ್ವಾನಿತ ಫಖಿರರೆಲ್ಲರು ಜೋಳಿಗೆ, ’ದಫ್’, ’ಕಿಶ್ತಿ’ ಇತ್ಯಾದಿ ಉಡುಗೊರೆಯನ್ನು ಮಾಸುಮ್ಮನಿಗೆ ಕೊಡುತ್ತಾರೆ. ಪೀರ್ ಅಥವಾ ಮುರ್ಷದ್ರವರು ಬಿಳಿ ಲುಂಗಿ, ಜುಬ್ಬ, ಹಸಿರು ದಸ್ತರ್ (ಪೇಟ) ಕೊಡುತ್ತಾರೆ. ಕಲ್ಲುಸಕ್ಕರೆಯ ಶರಬತ್ ಅಥವಾ ಹಾಲು, ನೀರನ್ನು ಸ್ವಲ್ಪ ತಾವು ಕುಡಿದು, ಮಾಸಮ್ಮನಿಗೆ ಕುಡಿಯಲು ಹೇಳುತ್ತಾರೆ. ಇವನು ಕುಡಿದ ಮೇಲೆ ಪರಿಪೂರ್ಣವಾದ ’ಮುಸ್ಲಿ’ ಆದನೆಂದು ಅಥವಾ ಫಖೀರ್ ಆದನೆಂದು ನಂಬಿಕೆ ಇದೆ. ಈ ಪೀರ್ರವರು ತೋರಿಸಿದ ಮಾರ್ಗದಲ್ಲಿ ನಡೆದು ಅವರ ಸೇವೆ ಮಾಡಿ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು. ’ಚಹೇಲಂ’ ನಂತರ ’ಫೀರ್’ ರವರ ಅನುಮತಿ ಪಡೆದು ತನ್ನ ಮನೆಗೆ ಹಿಂದಿರುಗಬಹುದು. ’ಪಖೀರ್’ ಆಗುವರೆಗಿನ ಖರ್ಚೆಲ್ಲವನ್ನು ಪೀರ್ ಹಾಗೂ ಮಾಸುಮ್ರವರೇ ಮಾಡುತ್ತಾರೆ.
ಆರು ತಿಂಗಳಿಗೆ ’ಛಮ್ಮೆ’ ಹಾಗೂ ವರ್ಷಕ್ಕೆ ’ಬರ್ಸಿ’ ಎಂಭ ಫಾತೇಹ ಮಾಡಿಸಬೇಕು. ಹೀಗೆ ಫಖೀರ್ ಆದ ನಂತರ ಇಹಲೋಕದ ಆಸೆಯನ್ನು ತ್ಯಜಿಸಿ ಅಲ್ಹಾನ ಧ್ಯಾನದಲ್ಲಿ ನಿರತನಾಗಿ, ತೃಪ್ತಿಯನ್ನು ಹೊಂದಬೇಕು. ಯಾವುದೇ ಪ್ರಚೋದನೆ, ಪ್ರಲೋಭನೆಗೆ ಒಳಗಾಗದೆ ಮನಸ್ಸನ್ನು ನಿಗ್ರಹಿಸಿ ಸಾಧನೆಯಲ್ಲಿ ತೊಡಗಬೇಕು. ಮದುವೆಯಾಗಿದ್ದರೆ ತನ್ನ ಹೆಂಡತಿ ಮಕ್ಕಳ ಜವಾಬ್ದಾರಿಯನ್ನು ಕಡೆಗಣಿಸಬಾರದು. ವಾರದಲ್ಲಿ ಸೋಮವಾರ ಮತ್ತು ಗುರುವಾರ ಹನ್ನೆರಡು ಗಂಟೆಯವರೆಗೆ ಬಾನಂವೀಗೆ ಹೊರಡಬೇಕು. ಹೀಗೆ ಹೊರಡುವಾಗ ಧಾರ್ಮಿಕ ಉಡುಗೆ ಉಟ್ಟು, ತಲೆಗೆ ಹಸಿರು ’ದಸ್ತರ್’ ಕಟ್ಟಬೇಕು. ಕೊರಳಗೆ ಕಂಠಹಾರ (ದಪ್ಪ ಕಲ್ಲಿನ ಸರ) ಕೈಯಲ್ಲಿ ಕೀಶ್ತಿ, ಜೋಳಿಗೆ ಹಿಡಿದಿರಬೇಕು.
ಧಾರ್ಮಿಕ ಪ್ರತಿನಿಧಿಯಂತೆ ಕಾಣುವ ಇವರು ಅಲ್ಹಾನ ಹೆಸರಲ್ಲಿ ’ಘಾಖಾ’ ಮಾಡುತ್ತಾರೆ. ಮುಸ್ಲಿಮರ ಮನೆಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತಾರೆ. ’ವಲೀಗಳ ಉರುಸ್ ಈ ಊರಿನಲ್ಲಿ ಈ ತಾರೀಖಿನಲ್ಲಿ ನಡೆಯುತ್ತದೆಂದು’ ಮನೆ ಮನೆಗೆ ಹೋಗಿ ಸುದ್ದಿ ಮುಟ್ಟಿಸಿ ಹರಕೆ ಹಣ ಸಂಗ್ರಹಿಸುತ್ತಾ ಪ್ರಚಾರ ಮಾಡುತ್ತಾರೆ. ಉರುಸ್ ಸಂದರ್ಭದಲ್ಲಿ ಇವರ ಪಾತ್ರ ಪ್ರಮುಖವಾಗಿರುತ್ತದೆ. ವಲೀಗಳ ಗೋರಿಗಳಿಗೆ ಗಂಧ ಏರಿಸುವುದರಿಂದ ಹಿಡಿದು ಜರಬ್ ಮಾಡುವುದೆಲ್ಲವನ್ನು ಇವರೇ ನೆರವೇರಿಸುತ್ತಾರೆ.
ಸದ್ಖಾ
ಮುಸ್ಲಿಮರಲ್ಲಿ ವ್ಯಕ್ತಿ ಅನಾರೋಗ್ಯದಿಂದ ಬಳಲುತ್ತಿದ್ದರೆ ಆಕಸ್ಮಿಕ ಅಪಘಾತಗಳು ಸಂಭವಿಸಿದರೆ ಅವರ ದೀರ್ಘಾಯುಷ್ಯಕ್ಕಾಗಿ ಮತ್ತು ಅವರ ಯಶಸ್ಸಿಗೆ ’ಸದ್ಖಾ’ ನೀಡುತ್ತಾರೆ. ಅಂದರೆ ಅಕ್ಕಿ ಮೂಟೆ, ಕರಿಯೆಳ್ಳು, ಚಿಲ್ಲರೆ ಕಾಸು, ಒಳ್ಳೆಣ್ಣೆ ಇತ್ಯಾದಿ ಸಾಮಗ್ರಿಗಳನ್ನು ತಟ್ಟೆಯಲ್ಲಿ ತೆಗೆದು ಎಣ್ಣೆಯಲ್ಲಿ ರೋಗಿಯ ಮುಖವನ್ನು ತೋರಿಸಿ, ಬಲಗೈ ತಟ್ಟೆಗೆ ಸ್ಪರ್ಶಿಸಿ ಅಥವಾ ಕರಿಕೋಳಿ ಮಾಂಸ, ಕುರಿ ತಲೆಯನ್ನು ರೋಗಿಯ ಮುಖದ ಮುಂದೆ ನಿವಾಳಿಸಿ ಪ್ರಣಕ್ಕೆ ಪ್ರಾಣ ಎಂಬಂತೆ ಫಖೀರರಿಗೆ ’ಸದ್ಖಾ’ ತೆಗೆದುಕೊಂಡ ಫಖೀರರು ತಮ್ಮ ಮನೆಗೆ ತೆಗೆದುಕೊಂಡು ಹೋಗುವವರು. ಅಡುಗೆ ಮಾಡಿ ಮನೆ ಮಂದಿಯೆಲ್ಲಾ ಊಟ ಮಾಡುವರು. ಇಂತಹ ’ಸದ್ಖಾ’ ಬೇರೆಯವರು ತೆಗೆದುಕೊಂಡು ಊಟ ಮಾಡಿದರೆ ’ಉಪದ್ರವ’ಗಳು ಕಾಡುತ್ತವೆಂದು ಹೇಳುತ್ತಾರೆ. ಆದುದರಿಂದ ಬೇರೆಯವರು ’ಸದ್ಖಾ’ ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಆದರೆ ಇವರು ಸಾವಿನ ತಿಥಿ ಊಟ ಮಾಡುವ ಹಾಗಿಲ್ಲ. ಬಾಣಂತ ಮನೆಯ ’ಖೈರಾತ್’ ತೆಗೆದುಕೊಳ್ಳುವ ಹಾಗಿಲ್ಲ.
ಮಸ್ತಾನಿಮಾ
ಇಸ್ಲಾಂ ಧರ್ಮದ ಪ್ರಚಾರ ಮತ್ತು ಜನರಲ್ಲಿ ನಂಬಿಕೆಯನ್ನು ಗಟ್ಟಿಗೊಳಿಸುವುದಕ್ಕೆ ಹಜರತ್ ದಾವೂದ್ ಅಲಹಿಸ್ಸಾಲಾಂರವರು ತಮ್ಮ ಮಗಳಿಗೆ ಬಯ್ಯಾತ್ (ದೀಕ್ಷೆ) ಕೊಟ್ಟು ’ಮಸ್ತಾನಿಮಾ’ ಮಾಡಿದರು. ಅಂದಿನಿಂದ ’ಮಸ್ತಾನಿಮಾ’ ಮಾಡುವ ಸಂಪ್ರದಾಯ ಸ್ತ್ರೀಯರಲ್ಲಿ ಬೆಳೆದು ಬಂದಿತು.
ಮಸ್ತ್+ಮಾ= ’ಮಸ್ತ್’ ಎಂದರೆ ಸಂತೃಪ್ತಿ, ’ಮಾ’ ಎಂದರೆ ಅಮ್ಮ. ಅಲ್ಹಾನ ಧ್ಯಾನದಲ್ಲಿ ಸಂತೃಪ್ತಿ ಹೊಂದುವ ಅಮ್ಮ ಎಂದು ಕರೆಯುತ್ತಾರೆ. ಸ್ತ್ರಿಯು ’ಪೀರ್’ ಹಾಗೂ ’ಫಖೀರ್’ ಆಗುವ ಹಾಗಿಲ್ಲ. ಆದರೆ ’ಮಸ್ತಾನಿಮಾ’ ಆಗಬಹುದು. ಮಸ್ತಾನಿಮಾ ಆಗಬೇಕೆಂದು ಬಯಸಿದ ಮಹಿಳೆ ಮದುವೆಯಾಗಿರಬಾರದು. ಮದುವೆಯಾಗಿದ್ದರೆ ಗಂಡನಿಗೆ ’ಖುಲ್ಹಾ’ ಕೊಡಬೇಕು. ಅಥವಾ ಗಂಡ ಸತ್ತಿರಬೇಕು. ಇಂತವರನ್ನು ’ನಾಡ್ಬಂದ್’ ಎಂದು ಕರೆಯುತ್ತಾರೆ.
ಮಸ್ತಾನಿಮಾ ಆಗುವ ವಿಧಾನ
’ಮಸ್ತಾನಿಮಾ’ ಆಗಬೇಕೆಂದು ಬಯಸಿ ಬಂದ ಮಹಿಳೆ ’ಮುರ್ಷದ್’ ರವರ ಮುಂದೆ ತನ್ನ ಇಚ್ಛೆಯನ್ನು ವ್ಯಕ್ತಪಡಿಸಬೇಕು. ಮುರುಷದ್ರವರು ಒಂದು ದಿನವನ್ನು ನಿಶ್ಚಯಿಸಿ, ಈ ಸಮಯಕ್ಕೆ ಬರಬೇಕೆಂದು ಹೇಳುವರು. ಇವಳು ಬಂಧುಮಿತ್ರರನ್ನು ಭೇಟಿ ಮಾಡಿ ತನ್ನ ಅಮ್ಮನಿಂದ ಹಾಲಿನ ಋಣವನ್ನು ಕ್ಷಮಿಸುವಂತೆ ಕೇಳಿಕೊಂಡು ನಿಶ್ಚಯಿಸಿದ ದಿನ ಹಸಿರು ಬಣ್ಣದ ಇಜಾರ್, ಕಮೀಸ್ ಧರಿಸಿ ಅದೇ ಬಣ್ಣದ ’ಜಡಣಿ’ ಹೊದ್ದುಕೊಂಡು ಫಖೀರರೆಲ್ಲರು ಸೇರುವ ಕೇಂದ್ರ ಸ್ಥಳಕ್ಕೆ ಬರುವಳು. ’ಮಣೆ ಹಾಕಿ’ ಕುಳಿತುಕೊಳ್ಳಲು ಹೇಳಿ ಈ ಮೊದೇ ಬಂದು ಸೇರಿದ ಫಖೀರರೆಲ್ಲರು ಸುತ್ತ ಕುಳಿತುಕೊಳ್ಳುವರು. ಮುರುಷದ್ರವರು ಹಸಿರುಬಣ್ಣದ ’ದಸ್ತರ್’ ತಲೆಗೆ ಕಟ್ಟುವರು. ಹಸಿರು ಬಣ್ಣದ ಬಟ್ಟೆ ಏಕೆ ಕಟ್ಟುತ್ತಾರೆಂದರೆ ಮೊಹಮ್ಮದ್ ಪೈಗಂಬರ್ರವರು ತಮ್ಮ ಮಗಳಾದ ’ಬೇಬಿಫಾತೀಮಾ’ರವರ ವಿವಾಹದ ಸಂದರ್ಭದಲ್ಲಿ ಹಸಿರು ಬಣ್ಣದ ಜಡಣಿ ಹೊದೆಸಿದ್ದರಂತೆ. ಆದುದರಿಂದ ಮಸ್ತಾನಿಮಾ ಆಗುವವರಿಗೂ ಹಸಿರು ಬಣ್ಣ ’ದಸ್ತರ್’ ಕಟ್ಟುವ ಪದ್ಧತಿ ಬಂದಿದೆ ಎಂದು ಕೆಲವರು ಹೇಳುತ್ತಾರೆ.
ನಂತರ ’ಬಯ್ಯತ್’ ನೀಡುತ್ತಾರೆ. ಎಲ್ಲಾ ಫಖೀರರ ಒಪ್ಪಿಗೆ ಕೇಳಿ ’ಸಾಹೇರಾ ಷಾ ಖಾದ್ರಿ ಅಥವಾ ಜುಬೇದಾ ಷಾ ಖಾದ್ರಿ” ಎಂದು ಆಯಾಯಾ ಖಾನ್ವಾದ ನಾಮಕರಣ ಮಾಡುತ್ತಾರೆ. ಹೀಗೆ ಇವಳು ಮಸ್ತಾನಿಮಾ ಆಗುತ್ತಾಳೆ.
ಆದರೆ ಪುರುಷನು ಫಖೀರ್ ಆಗುವಾಗ ಶವಕ್ಕೆ ಸಂಬಂಧಿಸಿದ ಸಂಸ್ಕಾರಗಳಂತೆ ಇವಳಿಗೆ ಯಾವುದೇ ಸಂಸ್ಕಾರಗಳನ್ನು ಮಾಡುವುದಿಲ್ಲ.
ಮಸ್ತಾನಿಮಾರವರ ಜೀವನ ವಿಧಾನ
ತನ್ನ ತನು, ಮನ ಎಲ್ಲವನ್ನು ಅಲ್ಹಾನಿಗೆ ಸಮರ್ಪಿಸಿದ ಮೇಲೆ ಲೌಕಿಕದ ಆಸೆ, ಆಕಾಂಕ್ಷೆಗಳೆಲ್ಲವನ್ನು ಪರಿತ್ಯಜಿಸಬೇಕು. ಬೆಲೆ ಬಾಳುವ ಒಡವೆ, ವಸ್ತ್ರ ಧರಿಸುವ ಹಾಗಿಲ್ಲ. ಶೃಂಗಾರ ಮಾಡಿಕೊಳ್ಳುವ ಹಾಗಿಲ್ಲ. ಹಿತ್ತಾಲೆ ಬಳೆ ಧರಿಸಬಹುದು. ಎಲ್ಲಾ ಫಖಿರರು ಸಹೋದರರಿಗೆ ಸಮಾನರಾಗುತ್ತಾರೆ ಅಥವಾ ಮಕ್ಕಳ ಸಮಾನರಾಗುತ್ತಾರೆ. ಆದುದರಿಂದ ’ಪರದ’ ಧರಿಸುವುದಿಲ್ಲ. ’ಬಾನಂವೀ’ ಬೇಡುವ ಹಾಗಿಲ್ಲ. ಸತ್ತವರ ಮನೆಯ ಸಾವಿನ, ತಿಥಿಯ ಊಟವನ್ನು ಸಹ ಇವರು ಮಾಡುವ ಹಾಗಿಲ್ಲ. ಧಾರ್ಮಿಕ ಜಿಜ್ಞಾಸೆಗಳಲ್ಲಿ ಪಾಲ್ಗೊಳ್ಳಬಹುದು. ಸಾಮಾನ್ಯವಾಗಿ ಮಾಸ್ತನಿಮಾ ಆದ ನಂತರ ತಮ್ಮ ಮನೆಗೆ ಹಿಂದಿರುಗಬಹುದು. ಆದರೆ ಇವರು ಊರು, ಹಳ್ಳಿಗಳನ್ನು ಸುತ್ತತ್ತ ದರ್ಗಾಗಳಲ್ಲಿ ವಾಸ ಮಾಡುತ್ತಾ ವಲೀಗಳ ಸೇವೆ ಮಾಡುತ್ತಾ ಇರುತ್ತಾರೆ. ಮದುವೆಯಾಗದ ಹೆಣ್ಣು ಮಕ್ಕಳಿಗೆ ತಮ್ಮ ಕೈಯಲ್ಲಿರುವ ಹಿತ್ತಾಳೆ ಬಳೆಯನ್ನು ತೊಡಿಸಿ ’ದೂವಾ’ ಮಾಡಿಸಿದರೆ ವಿವಾಹ ಸಂಬಂಧ ಕೂಡುತ್ತದೆಂದು ಜನಪದರು ನಂಬುತ್ತಾರೆ. ಒಟ್ಟಿನಲ್ಲಿ ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತಾ ಕಷ್ಟ ಪರಿಹಾರವಾಗಲಿ ಎಂದು ’ದುವಾ’ ಮಾಡುತ್ತಾರೆ.
ಸತ್ತಾಗ ಮಾಡುವ ಆಚರಣೆಗಳು:
’ಮಸ್ತಾನಿ ಮಾ’ ಸತ್ತರೆ ಫಖೀರ್ ಭಾಯ್ ಅಥವಾ ಸಂಬಂಧಿಕರು ಸೇರಿ ಸಂಸ್ಕಾರಗಳನ್ನು ನೆರವೇರಿಸುತ್ತಾರೆ. ಶವದ ಹತ್ತಿರ ’ಸನದ್’ ಇಟ್ಟು ಹಸಿರು ದಸ್ತರ್ ಕಟ್ಟುತ್ತಾರೆ. ಮೂರು ದಿನದ ಜೀಯಾರತ್, ಹತ್ತು ದಿನ ಫಾತೇಹ, ಬೀಂಸ್ವಾ, ಚಹೇಲಂಗಳೆಲ್ಲವನ್ನು ಫಖೀರ್ಭಾಯ್ ಅಥವಾ ಸಂಬಂಧಿಕರೇ ನೆರವೇರಿಸುತ್ತಾರೆ.
ದುರ್ವೇಶ್ ಹಾಗೂ ಮಸ್ತಾನಿಮಾ ಇವರ ಪೌರಾಣಿಕ, ಸಾಮಾಜಿಕ ಹಿನ್ನೆಲೆಗೆ ಸಂಬಂಧಿಸಿದ ಕಥೆಗಳು
ಫಖೀರರ ಮಹತ್ವವನ್ನು ಕುರಿತು ಕೆಲವು ಕಥೆಗಳು:
ಮೊದಲನೆಯ ಕಥೆ: ಹಜರತ್ ಅಲಿಯವರಿಂದ ಅನೇಕರು ’ಫಖೀರಿಯತ್’ಅನ್ನು ಪಡೆದು ಇಡೀ ಊರಿನಲ್ಲಿ ದೈರಾ ಬಾರಿಸುತ್ತ ಅಲ್ಹಾನ ಆರಾಧನೆಯಲ್ಲಿ ತೊಡಗಿದರು. ದೈರಾ ಶಬ್ದದಿಂದ ಬೇಸತ್ತ ಜನ ಹಜರತ್ ಅಲೀರವರ ಹತ್ತಿರ ದೂರು ಸಲ್ಲಿಸಿದರು. ಹಜರತ್ ಅಲೀರವರು ಎಲ್ಲಾ ಫಖೀರರನ್ನು ಬರಮಾಡಿ, ಎರಡು ಗುಂಪುಗಳನ್ನಾಗಿ ಮಾಡಿ ದಕ್ಷಿಣ ಹಾಗೂ ಪಶ್ಚಿಮ ನಾಡಿಗೆ ಹೊರಟು ಹೋಗುವಂತೆ ಹೇಳಿದರು. ಈ ಎರಡು ಗುಂಪಿನ ದುರ್ವೇಶಗಳು ಧರ್ಮ ಪ್ರಚಾರ ಮಾಡುತ್ತಾ ಹೊರಟು ಇಡೀ ಪ್ರಪಂಚದಲ್ಲಿ ವ್ಯಾಪಿಸಿಕೊಂಡರು.
ಫಖೀರರು ಊರಿನಿಂದ ಹೊರಟು ಹೋದ ಮೇಲೆ ಅನೇಕ ಕಾಯಿಲೆಗಳು ಹರಡಿದವು. ಪುನಃ ಜನರು ಅಲೀಯವರ ಹತ್ತಿರ ಬಂದು ತಮ್ಮ ಗೋಳನ್ನು ಹೇಳಿಕೊಂಡರು. ಆಗ ಹಜರತ್ ಅಲೀಯವರೇ ದೈರಾವನ್ನು ಹಿಡಿದು ಊರಿನಲ್ಲಿ ಬಾರಿಸಿದರು. ಹರಡಿದ ಕಾಯಿಲೆಗಳು ಕಡಿಮೆಯಾದವು-ಎಂದು ಫಖೀರರಿಗೆ ಸಂಬಂಧಿಸಿದ ಕಥೆ ಇದೆ ಎಂದು ಜನಪದರು ಹೇಳುತ್ತಾರೆ.
ಎರಡನೆಯ ಕಥೆ: ದುರ್ವೇಶ್ರವರಲ್ಲಿ ಬಡತನವೇ ಹೆಚ್ಚಾಗಿರಲು ಕಾರಣ ಏನೆಂದರೆ ಒಮ್ಮೆ ಒಬ್ಬ ಫಖೀರನು ಕೀಶ್ತಿಯನ್ನು ತೆಗೆದುಕೊಂಡು, ಬಾನಂವೀಗಾಗಿ ಹೊರಟು, ಹಜರತ್ ಅಲೀರವರ ಮನೆ ಮುಂದೆ ಬೇಡುತ್ತ ನಿಂತನು. ಆದರೆ ಇವರ ಮನೆಯಲ್ಲಿ ಕೊಡುವುದಕ್ಕೆ ಏನು ಇರಲಿಲ್ಲ. ಆಗ ಅಲೀರವರ ಪತ್ನಿ ಬೀಬಿ ಫಾತೀಮಾ, ಫಖೀರನಿಂದ ಕೀಶ್ತಿಯನ್ನು ಕೇಳಿ ಪಡೆದು ಅದರ ತುಂಬ ಎದೆ ಹಾಲನ್ನು ತುಂಬಿ ಕೊಟ್ಟರು. ಹಾಲು ತುಂಬಿದ ಕೀಶ್ತಿಯನ್ನು ತೆಗೆದುಕೊಂಡು ಹೋಗಿ, ಮರ ಒಂದರ ಬುಡಕ್ಕೆ ಆ ಹಾಲನ್ನೆಲ್ಲ ಸುರಿದರು. ಆದುದರಿಂದ ಇವರಲ್ಲಿ ಬಡತನವಿದೆ ಎಂದು ಹೇಳುತ್ತಾರೆ.
ಮೂರನೆಯ ಕಥೆ: ಒಬ್ಬ ಮಂತ್ರಿಯು ತನ್ನ ಮಂತ್ರಿ ಪದವಿಯನ್ನು ಬಿಟ್ಟು ಫಖೀರನಾಗಿ ಫಖೀರರ ಜೊತೆಯಲ್ಲೆ ತಾನು ವಾಸ ಮಾಡತೊಡಗಿದ. ಒಂದು ದಿನ ರಾಜನು ಮಂತ್ರಿಯನ್ನು ಕುರಿತು ’ನೀನು ಮಂತ್ರಿಯಾಗಿ ಇರುವುದನ್ನು ಬಿಟ್ಟು ಹೀಗೆ ಫಖೀರರ ಜೊತೆಯಲ್ಲಿ ಬೇಡುತ್ತ ತಿರುಗುತ್ತಿದ್ದೆಯಲ್ಲ, ನಿನಗೆ ಏನು ಸಿಕ್ಕಿತು?’ ಎಂದು ಅಣಕಿದರು. ಮಂತ್ರಿ ಹೇಳಿದನು ನನಗೆ ಐದು ಅವಕಾಶಗಳು ದೊರಕಿದವು ಅವು ಯಾವುವೆಂದರೆ-
೧) ನೀವು ಸಿಂಹಾಸನದಲ್ಲಿ ಕುಳಿತಿರುತ್ತಿದ್ದಿರಿ, ನಾನು ನಿಮ್ಮ ಆಜ್ಞಾನಪಾಲಕನಾಗಿ ಕೈಕಟ್ಟಿ ನಿಮ್ಮ ಮುಂದೆ ನಿಂತಿರುತ್ತಿದ್ದೆ. ಈಗ ಅಲ್ಹಾನ ಸಮ್ಮುಖದಲ್ಲಿ ನಾಲ್ಕು ’ರಕಾತ್’ ನಮಾಜ್ ಮಾಡುವಾಗ ಎರಡು ಬಾರಿಯಾದರು ಕುಳಿತುಕೊಳ್ಳಲು ಅಲ್ಹಾ ಅವಕಾಶ ಮಾಡಿಕೊಟ್ಟಿದ್ದಾನೆ.
೨) ನೀವು ಮಲಗಿದ್ದಾಗ ನಾನು ಎಚ್ಚರವಾಗಿದ್ದು, ನಿಮ್ಮ ರಕ್ಷಣೆ ಮಾಡುತ್ತಿದ್ದೆ. ಈಗ ನಾನು ಮಲಗುತ್ತೇನೆ, ’ಅಲ್ಹಾ’ ನನ್ನ ರಕ್ಷಣೆ ಮಾಡುತ್ತಾನೆ.
೩) ನೀವು ಭಕ್ಷ್ಯ ಭೋಜನಗಳನ್ನು ಸ್ವೀಕರಿಸುತ್ತಿದ್ದಿರಿ. ನಾನು ಅದನ್ನು ಮುಟ್ಟಿಯೂ ಕೂಡ ನೋಡುತ್ತಿರಲಿಲ್ಲ. ಈಗ ನಾನು ನನ್ನ ಇಚ್ಛೆಯಾನುಸಾರ ತಿನ್ನುತ್ತೇನೆ.
೪) ನನ್ನ ಪ್ರಾಣಕ್ಕಿಂತಲು ನಿಮ್ಮ ಪ್ರಾಣದ ಭಯ, ಭೀತಿ ನನಗೆ ಸದಾ ಇರುತ್ತಿತ್ತು. ಈಗ ನನಗೆ ಯಾರ ಭಯವು ಇಲ್ಲ.೫) ನೀವು ದಂಡಿಸುತ್ತೀರಿ ಎಂದು ಯಾವುದೇ ಕೆಲಸಕಾರ್ಯವನ್ನು ಎಚ್ಚರಿಕೆಯಿಂದ, ಜವಾಬ್ದಾರಿಯುತವಾಗಿ ಮಾಡುತ್ತಿದ್ದ.
ಈಗ ಯಾರ ಭಯವು ಇಲ್ಲ, ಅಲ್ಹಾ ಕ್ಷಮಾಮಯಿ, ತಪ್ಪನ್ನು ಕ್ಷಮಿಸುತ್ತಾನೆ. ಹೀಗೆ ನಾನು ಯಾರ ಗುಲಾಮನಾಗದೆ ಸ್ವತಂತ್ರನಾಗಿದ್ದೇನೆ ಎಂದನು.
ನಾಲ್ಕನೆಯ ಕಥೆ: ದುರಾಸೆಗೆ ಸಂಬಂಧಿಸಿದ್ದು
ಒಬ್ಬ ರಾಜನು ತನ್ನ ಮಗಳಿಗೆ ದುರ್ದೇಶ್ (ಫಖೀರ)ನಿಗೆ ಕೊಟ್ಟು ವಿವಾಹ ಮಾಡಿದನು. ಮದುವೆಯಾಗಿ ಗುಡಿಸಲಿಗೆ ಬಂದ ವಧು ತನ್ನ ಕಾಲುಚೀಲವನ್ನು ಕಳಚಿ ಇಡುತ್ತಿರುವಾಗ, ಗಂಡನಾದ ಫಖೀರನು ಒಂದು ರೊಟ್ಟಿ ತಂದು ಕೊಟ್ಟನು. ಇಷ್ಟು ಬೇಗ ಎಲ್ಲಿಂದ ತಂದಿರಿ? ಎಂದು ಕೇಳಿದಳು.
ನೆನ್ನೆ ನನಗೆ ಖೈರಾತ್ತಿನಲ್ಲಿ ಎರಡು ರೊಟ್ಟಿ ಸಿಕ್ಕಿತು. ನೆನ್ನೆ ನಾನು ಒಂದು ರೊಟ್ಟಿ ತಿಂದು, ಒಂದು ರೊಟ್ಟಿ ಎತ್ತಿಟ್ಟಿದ್ದೆ. ನೀವು ಬಹಳ ದೂರದಿಂದ ಬಂದು ಬಳಲಿದ್ದೀರಿ. ಆದುದರಿಂದ ಈ ರೊಟ್ಟಿ ತಿಂದು ಸುಧಾರಿಸಿಕೊಳ್ಳಿ ಎಂದನು.
ಇವಳು ತಕ್ಷಣವೇ ಅಳುವುದಕ್ಕೆ ಪ್ರಾರಂಭಿಸಿದಳು. ಇವನು ಗಾಬರಿಗೊಂಡು ಏನೆಂದು ವಿಚಾರಿಸದನು.
’ದುರ್ವೇಶ್ನಿಗೆ ನಾಳೆಯ ಚಿಂತೆ ಇರುವುದಿಲ್ಲ. ನಮ್ಮ ತಂದೆ ನಿನಗೆ ನನ್ನನ್ನು ಕೊಟ್ಟು ತಪ್ಪು ಮಾಡಿದರು. ನೀನು ದುರಾಸೆಗೋಸ್ಕರ ದುರ್ವೇಶ್ ಆಗಿದ್ದೀಯ, ನಿನಗೆ ದುರ್ವೇಶ್ಗಳ ಅರ್ಥವೇ ಗೊತ್ತಿಲ್ಲ. ಆದುದರಿಂದ ನಾನು ನಿನ್ನನ್ನು ಬಿಡುತ್ತೇನೆ| ಎಂದು ಹೇಳಿ ತನ್ನ ತಂದೆಯ ಹತ್ತಿರ ಹೊರಟು ಹೋದಳು ಎಂದು ಕಥೆ ಹೇಳುತ್ತಾರೆ. ಫಖೀರರಿಗೆ ಆಸೆ ಇರಬಾರದು. ತಾನು ಬೇಡಿ ತಂದಿದ್ದರಲ್ಲಿ ಅಲ್ಹಾನ ಹೆಸರಲ್ಲಿ ಇತರರಿಗೆ ಕೊಟ್ಟು ತಾನು ಉಪಯೋಗಿಸಬೇಕು. ನಾಳೆಯ ಬದುಕಿನ ಚಿಂತೆ ಇರಬಾರದು. ಇತ್ಯಾದಿ ನೈತಿಕ ಗುಣಗಳನ್ನು ಗಮನಿಸಬೇಕಾಗುತ್ತದೆ. ಹೀಗೆ ಫಖೀರರ ಮಹತ್ವವನ್ನು ಕುರಿತ ಕೆಲವು ಕಥೆಗಳಿವೆ.
ನಂಬಿಕೆಗಳು ಮತ್ತು ಆಚರಣೆಗಳು
ಮಾನವನ ಬದುಕಿನ ನಂಬಿಕೆಗಳು ಬಹುಮುಖ್ಯವಾದ ಸ್ಥಾನ ಪಡೆದುಕೊಂಡಿದೆ. ಇವು ಮಾನವನ ಬದುಕನ್ನು ನಿಯಂತ್ರಿಸುವ ಹಾಗೂ ನಿರ್ದೇಶಿಸುವ ಪ್ರಮುಖ ಶಕ್ತಿಯಾಗಿ ಜೀವನಾಡಿಯಾಗಿ, ಸಂಸ್ಕೃತಿಯ ಭಾಗವಾಗಿ ಪರಿಣಮಿಸಿದೆ. ಪರಂಪರಾಗತವಾಗಿ ಹರಿದು ಬಂದ ಇವು ಸಂಪ್ರದಾಯ ಆಚರಣೆಗಳ ಮೂಲಕ ಇಂದು ಸ್ಥಿರವಾಗಿದೆ.
೧) ಮನೆಗೆ ಬಂದ ಫಖೀರರನ್ನು ಬರಿಗೈಯಲ್ಲಿ ಕಳುಹಿಸಬಾರದು.
೨) ಅಲ್ಹಾನ ಹೆಸರಲ್ಲಿ ಬೇಡಿದರೆ ಇಲ್ಲ ಎಂದು ಹೇಳಬಾರದು.
೩) ನಾಯಿಯನ್ನು ಮನೆಯೊಳಗೆ ಸೇರಿಸಬಾರದು, (ಬೆಳಗಿನ ಹೊತ್ತು ಅಲ್ಹಾನ ಕಡೆಯ ಮಲಾಯಂಕ (ದೇವದೂತರು) ಮನೆಗೆ ಬಂದಾಗ, ನಾಯಿಗಳ ದರ್ಶನವಾದರೆ ಅವರು ಹಿಂದಕ್ಕೆ ಹೊರಟು ಹೋಗುತ್ತಾರೆ ಎಂಬ ನಂಬಿಕೆ ಇದೆ)
೪) ರೇಷ್ಮೆ ಬಟ್ಟೆ ಉಟ್ಟು ನಮಾಜ್ ಮಾಡಬಾರದು. (ರೇಷ್ಮೆ ಹುಳುವಿನ ಎಂಜಲಿಂದ ರೇಷ್ಮೆದಾರ ಉತ್ಪತ್ತಿಯಾಗಿರುತ್ತದೆ)
೫) ಪ್ರಾಣಿಪಕ್ಷಿಗಳ ಚಿತ್ರವಿರುವ ಬಟ್ಟೆಯನ್ನುಟ್ಟು ಸಹ ನಮಾಜ್ ಮಾಡಬಾರದು.
೬) ಗಡ್ಡ ಬಿಟ್ಟರೆ ಪುನಃ ಬೋಳಿಸಬಾರದು, ಧರ್ಮದ ಹೆಸರಲ್ಲಿ ಮುಸ್ಲಿಮ್ರು ಗಡ್ಡ ಬಿಡುವುದು ಪುಣ್ಯದ ಕಾರ್ಯ, ಇದನ್ನು ಬಿಟ್ಟು ಬೋಳಿಸಿದರೆ ಕಷ್ಟಗಳು ಸಂಭವಿಸುತ್ತದೆಂಬ ನಂಬಿಕೆ.
೭) ಪಶ್ಚಿಮದ ಕಡೆ ಕಾಲು ಚಾಚಬಾರದು, ಮಕ್ಕಾದಲ್ಲಿರುವ ಕಾಬಾ ಪಶ್ಚಿಮದ ಕಡೆ ಇರುವುದರಿಂದ ಆ ಕಡೆ ಕಾಳು ಚಾಚಿ ಮಲಗುವುದು ನಿಷೇಧ.
೮) ಪುರುಷರು ಮನೆಯಲ್ಲಿ ನಮಾಜ್ ಮಾಡಬಾರದು.
೯) ವಲೀಗಳ ಹರಕೆ ಹೊತ್ತರೆ ಬೇಗನೆ ತೀರಿಸಬೇಕು. ಇಲ್ಲದಿದ್ದರೆ ಕಷ್ಟಗಳು ಸಂಭವಿಸುತ್ತದೆ.
೧೦) ಹೆಂಗಸರು ಟೊಪ್ಪಿ ಹಾಕಬಾರದು, ಇದರಿಂದ ಬರಗಾಲ ಬರುತ್ತದೆ.
೧೧) ಶುಕ್ರವಾರ ದಿನ ಯಾರಿಗೂ ಹಣ ಕೊಡಬಾರದು.
೧೨) ಹೆಂಗಸರು ಸಮಾಧಿ ಸ್ಥಳಕ್ಕೆ ಹೋಗಬಾರದು.
೧೩) ಮಸೀದಿಯೊಳಗೆ ಹೋಗಿ ಹೆಂಗಸರು ನಮಾಜ್ ಮಾಡಬಾರದು.
೧೪) ಮುಟ್ಟು, ಮೈಲಿಗೆಯಾದವರು ’ಖುರಾನ್ಗ್ರಂಥ’ ಮುಟ್ಟಬಾರದು. ಹಾಗೆಯೇ ’ನಮಾಜ್’ ಕೂಡ ಮಾಡಬಾರದು.
೧೫) ಕೆಲವು ವಲೀಗಳ ದರ್ಗಾಗಳಿಗೆ ಹೆಂಗಸರು ಪ್ರವೇಶಿಸಬಾರದು.
೧೬) ಫಖೀರರು ಬಾಣಂತಿ ಮನೆಯ ಬೈರಾತ್ (ಭಿಕ್ಷೆ) ತೆಗೆದುಕೊಳ್ಳಬಾರದು.
೧೭) ಫಖೀರರು, ಮಸ್ತಾನಿಮಾ, ಇವರು ತಿಥಿ ಊಟ ಮಾಡಬಾರದು.
೧೮) ಬಾಣಂತಿಗೆ ಸೂತಕದ ಸ್ನಾನ ಮಾಡಿಸಿದ ಮೇಲೆ ಕಟ್ಟುನಿಟ್ಟಿನ ಆಚರಣೆಗಳನ್ನು ಮಾಡಬಹುದು.
೧೯) ಫಖೀರರು ಆಧುನಿಕ ಉಡುಗೆ ಉಡಬಾರದು.
೨೦) ಮಲಗುವಾಗ ಮಾತ್ರ ತಲೆಯ ದಸ್ತರ್ನ್ನು ತೆಗೆದು ಇಡಬೇಕು.
೨೧) ಉಗುರು ಕಡಿಯಬಾರದು.
೨೨) ಹೆಣ್ಣುಮಕ್ಕಳು ಸ್ನಾನ ಮಾಡಿದ ಮೇಲೆ ಮನೆಯೊಳಗೆ ಕೂದಲ ನೀರು ಬೀಳಬಾರದು.
೨೩) ಶುಭಕಾರ್ಯಗಳಿಗೆ ಹೋದಾಗ ಬೆಕ್ಕು, ಗುದ್ದಲಿ, ಖಾಲಿಕೊಡ, ಪೊರಕೆ ಇತ್ಯಾದಿ ಕಾಣಿಸಿಕೊಳ್ಳಬಾರದು.
೨೪) ತಂದೆ, ತಾಯಿ ಇಲ್ಲದ ಅನಾಥ ಮಕ್ಕಳ ರಕ್ಷಣೆ ಮಾಡಬೇಕು.
೨೫) ಅನಾಥ ಹೆಣ್ಣುಮಗಳನ್ನು ಮದುವೆ ಮಾಡಿಕೊಂಡು ಬಂದರೆ ಮನೆಯಲ್ಲಿ ಸಮೃದ್ಧಿ ಉಂಟಾಗುತ್ತದೆಂಬ ನಂಬಿಕೆ
೨೬) ವಿಧವೆಯರಿಗೆ ರಕ್ಷಣೆ ಕೊಡಬೇಕು, ಅವರನ್ನು ಅಮಂಗಳ, ಅಪಶಕುನವೆಂದು ತಿಳಿಯಬಾರದು. ಎಲ್ಲಾ ಶುಭಕಾರ್ಯಗಳಿಗೂ ಆಹ್ವಾನಿಸಬೇಕು.
೨೭) ಶ್ರೀಮಂತರು ’ಝಕಾತ್’ ಕೊಡಬೇಕು. ಇಲ್ಲದಿದ್ದರೆ ಬಡತನ ಬರುತ್ತದೆ.
೨೮) ಮಗು ಹುಟ್ಟಿದ ತಕ್ಷಣ ಹೆಸರಿಡಬೇಕು.
೨೯) ಸಂಪ್ರದಾಯವಾಗಿ ಆಚರಿಸಿಕೊಂಡು ಬಂದ ಪೂರ್ಕೇ ಫಾತೇಹ, ಗ್ಯಾರ್ಂವೀ ಮೊದಲಾದ ಆಚರಣೆಗಳನ್ನು ಮಾಡಬೇಕು. ತಪ್ಪಿಸಿದರೆ ಬಡತನ ಬರುತ್ತದೆ.
೩೦) ಮನೆಗೆ ತಂದ ಆಹಾರವನ್ನು ಬೇಡ ಎನ್ನಬಾರದು.
೩೧) ಹೊಸ್ತಿಲ ಮೇಲೆ ನಿಂತು ರೊಟ್ಟಿ ತಿನ್ನಬಾರದು. ಈ ನಂಬಿಕೆಗೆ ಸಂಬಂಧಿಸಿದಂತೆ ಒಂದು ಪೌರಾಣಿಕ ಕಥೆ ಹೀಗಿದೆ:
ಪೈಗಂಬರ್ರವರು ಕಡುಬಡತನದ ಜೀವನ ನಿರ್ವಹಿಸುತ್ತಿದ್ದರು. ಒಂದು ಹೊತ್ತು ತಿಂದರೆ ಮತ್ತೊಂದು ಹೊತ್ತು ಇರುತ್ತಿರಲಿಲ್ಲ. ಈ ಬಡತನದಿಂದ ನೊಂದು ಬೆಂದು ಸಾಕಾಗಿ ಹೋದ, ಇವರ ಮಗಳು ಬೀಬಿ ಫಾತೀಮರವರು ಪೈಗಂಬರ್ರವರನ್ನು ಕುರಿತು ’ತಾವು ಅಪೇಕ್ಷೆ ಪಟ್ಟರೆ ಇಡೀ ದೇವಲೋಕದ ಸಂಪತ್ತು ತಮ್ಮ ಸಾನಿಧ್ಯದಲ್ಲಿ ಬಂದು ಬೀಳುತ್ತದೆ. ಮತ್ತೆ ನಮಗೇಕೆ ಈ ಬಡತನ ಕಷ್ಟಗಳು’ ಎಂದು ಕೇಳಿದರು. ಆಗ ಪೈಗಂಬರ್ರವರು ಎರಡು ರಕಾತ್ ನಮಾಜ್ ಮಾಡಿ ’ಅಲ್ಹಾ’ನಲ್ಲಿ ದುವಾ ಬೇಡಿದ ತಕ್ಷಣ ಏಳು ಚಿನ್ನದ ಬೆಟ್ಟಗಳು ಮನೆಯ ಮುಂದೆ ನಿಂತಿದ್ದವು. ಇದನ್ನು ನೋಡಿ ಗಾಬರಿಗೊಂಡ ಫಾತೀಮ ಪುನಃ ತಂದೆಯ ಹತ್ತಿರ ಬಂದು ’ಇಷ್ಟು ಸಂಪತ್ತು ನಮಗೆ ಬೇಡ, ಇದೆಲ್ಲವನ್ನು ನಾನು ಹೇಗೆ ಖರ್ಚು ಮಾಡಲಿ’ ಎಂದು ಹೇಳಿದರು.
ಏಳು ರೊಟ್ಟಿ ಮಾಡಿಕೊಂಡು, ಹೊಸ್ತಿಲ ಮೇಲೆ ನಿಂತುಕೊಂಡು, ಒಂದೊಂದು ರೊಟ್ಟಿ ತಿನ್ನಿರಿ. ಒಂದೊಂದು ರೊಟ್ಟಿ ತಿನ್ನವ ಹಾಗೆ, ಒಂದೊಂದು ಚಿನ್ನದ ಬೆಟ್ಟ ಮಾಯವಾಗುತ್ತದೆ ಎಂದರು. ಫಾತಿಮರವರು ಹಾಗೆಯೇ ಮಾಡಿದರು. ಬೆಟ್ಟಗಳು ಮಾಯವಾದವು, ಆದುದರಿಂದ ಹೊಸ್ತಿಲ ಮೇಲೆ ನಿಂತು ತಿಂದರೆ ಬಡತನ ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ಇದೆ.
ಹೀಗೆ ನಂಬಿಕೆಗಳನ್ನು ಬಲಗೊಳಿಸಲು ಒಂದೊಂದು ಕಥೆಯು ಹುಟ್ಟಿಕೊಂಡು,ಜನಪದ ಬದುಕನ್ನು ನಿಯಂತ್ರಿಸುತ್ತಿವೆ. ಈ ನಂಬಿಕೆಗಳಿಂದ ಅನುಕೂಲತೆ ಹಾಗೂ ಅನಾನುಕೂಲತೆ ಎರಡೂ ಇವೆ.
ಗಾದೆಗಳು
ಜೀವನದಲ್ಲಿ ಸರ್ವವ್ಯಾಪಿಯಾಗಿ ಹರಡಿ ಕೊಂಡ ಅತ್ಯಂತ ಜನಪ್ರಿಯವಾದ ಪ್ರಕಾರ ಗಾದೆ. ಬದುಕಿನ ಅನುಭವವನ್ನು ಸ್ವಾರಸ್ಯವಾಗಿ, ಸಂಕ್ಷಿಪ್ತವಾಗಿ ಹೇಳುವ ರಸಗಟ್ಟಿಗಳು. ವ್ಯಕ್ತಿಯ ಅನುಭವದ ತಳಹದಿಯ ಮೇಲೆ ನಿಂತಿರುವ ಇವು ಸರ್ವಕಾಲಿಕ ಸತ್ಯವಾಗಿದೆ. ಕಾಲವಿಳಂಬವಿಲ್ಲದೆ ಸಂದರ್ಭೋಚಿತವಾದಿ ಪ್ರಯೋಗವಾಗುವ ಇವು ಅತ್ಯಂತ ಪರಿಣಾಮಕಾರಿಯಾಗಿರುತ್ತವೆ. ಇವು ಹಿತವಚನ, ವಿಡಂಬನೆ, ಹಾಸ್ಯ, ಉಪದೇಶ, ಎಚ್ಚರಿಕೆ, ತೀಕ್ಷ್ಣತೆ ಇತ್ಯಾದಿ ಗುಣಗಳನ್ನು ಒಳಗೊಂಡಿವೆ.
೧. ನಯೇ ಫಖೀರ್ಕು ಭೀಕ್ ಕೀ ಜಲ್ದಿ | ಹೊಸಬನಾದ ಫಕೀರನಿಗೆ ಭಿಕ್ಷೆ ಬೇಡುವ ಆತುರ |
೨. ಜನಮ್ಕೀ ಆದತ್ ಜನಾಜೇ ತಕ್ | ಹುಟ್ಟುಗುಣ ಚಟ್ಟದವರೆಗೆ |
೩. ಝಡ್ದೇಕ್ಕೊ ಚಕ್ಲ ಛೀಲೊ | ಮರವನ್ನು ನೋಡಿ ಚಕ್ಕೆ ತೆಗೆ |
೪. ಈದ್ಗೆಕೊ ಚುನ್ನಾ ಚಡೇಸರ್ಕಾ | ಈದ್ಗಾಕ್ಕೆ ಸುಣ್ಣ ಬಳಿದ ಹಾಗೆ |
೫. ಅಯ್ಯೋ ಕತೊ ಛೇ ಮಹೀನೆಂಕಾ ಪಾಂಪ್ | ಅಯ್ಯೋ ಎಂದರೆ ಆರು ತಿಂಗಳ ಪಾಪ |
೬. ಮರ್ನೆ ಕೀ ಬುಡ್ಡಿಕು ಜೀನಾಕೀ ಆಸ್ | ಸಾಯುವ ಮುದ್ಕೀಗೆ ಬದುಕುವ ಇಚ್ಛೆ |
೭. ಬೀಕ್ ದೇರೆ ಭಿಕಾರಿಕತೋ ಹಗೇ ತಕ್ ಮಾರ್ಯಾಕತೆ | ಭಿಕ್ಷೆ ಕೊಡೊ ಭಿಕಾರಿ ಅಂದರೆ ಹೇಲುವವರೆಗೆ ಹೊಡದನಂತೆ |
೮. ಫಖೀರ್ಕಾ ಹಾತ್ ಉಪರ್ ಭಿಕಾರೀಕ ಹಾತ್ ನೀಚೆ | ದಾನೀಯ ಕೈ ಮೇಲೆ ಭಿಕಾರಿಯ ಕಯ ಕೆಳಗೆ |
೯. ಜೂಟ್ ಬೋಲೋ ಹಜಾಮ್ ಕತೋ ಮಜಿಲ್ ಮೋಟೆ ಮೋಟೆ ಆಮ್ | ಸುಳ್ಳ ಹೇಳೋ ಹಜಾಮ ಅಂದ್ರೆ ಮನೆಯಷ್ಟು ದಪ್ಪ ದಪ್ಪ ಮಾವಿನ ಹಣ್ಣು |
೧೦. ಆದತ್ ನೈಸೋ ಬಾಂದ್ರಿಕು ಛಾದರ್ ದೇನೆಮೇ ಫತ್ತರ್ ಬನ್ಕೋ ಫಾಡೀ ಕತೇ | ಅನುಭವವಿಲ್ಲದ ಕೋತಿಗೆ ಬಟ್ಟೆ ಕೊಟ್ರೆ, ಕಲ್ಲು ಕಟ್ಟಿ ಹರಿದಳಂತೆ |
ಒಗಟುಗಳು
ಗಾದೆಗಳಂತೆ ಒಗಟುಗಳು ಜನಜೀವನದಲ್ಲಿ ಹಾಸು ಹೊಕ್ಕಾಗಿವೆ. ಆದರೆ ಗಾದೆಗಳಂತೆ ಇವು ಜನಪ್ರಿಯವಾಗಿಲ್ಲ. ಸಂಭಾಷಣೆಯಲ್ಲಿ ಗಾದೆಗಳು ತಾನೇ ತಾನಾಗಿ ಬರುವಂತೆ ಒಗಟುಗಳು ಬರುವುದಿಲ್ಲ. ಒಂದು ವಸ್ತುವನ್ನು ಚಮತ್ಕಾರವಾಗಿ ವರ್ಣಿಸಿ ಕೇಳುಗರ ಬುದ್ಧಿ ಭ್ರಮಿಸುವಂತೆ ಮಾಡುತ್ತವೆ.
೧. ಮಾಮು ಮಾಮು ಬಜಾರ್ಕು ಜಾಕೋ ಮೇರೆ ಜೈಸಾ ಆದ್ಮೀ ಲಾವೋ ಮಾವ, ಮಾವ ಸಂತೆಗೆ ಹೋಗಿ ನನ್ನ ಹಾಗಿರುವ ವ್ಯಕ್ತಿಯನ್ನು ತನ್ನಿ
ಹೀಗೆ ಒಗಟುಗಳು ಅರ್ಧ ಚಮತ್ಕಾರ, ಗಹನ ವಿಚಾರ, ರಹಸ್ಯಗಳನ್ನು ಒಳಗೊಂಡಿವೆ.
ಕಥೆಗಳು
ಧಾರ್ಮಿಕ ನಂಬಿಕೆಗಳನ್ನು ಬಲಗೊಳಿಸಲು ಪೌರಾಣಿಕ ಕಥೆಗಳು ನಮ್ಮ ಜನಪದರಲ್ಲಿ ಪ್ರಚಲಿತವಾಗಿದೆ. ಇವತ್ತೀಗೂ ಮನೆಯ ಹೆಂಗಸರು ಕಷ್ಟಗಳ ನಿವಾರಣೆಯಾದರೆ ತಿರ್ಗೂಡಿಕೀ ಕಹಾನಿ, ದಸ್ಬೀಬಿಂಯಾಕೀ ಕಹಾನಿ ಕೇಳುತ್ತೇವೆಂದು ಹರಕೆ ಹೊರುತ್ತಾರೆ.
ತಿಲ್ಗೂಡ್ಕೀ ಕಹಾನಿ
ಒಂದೂರಿನಲ್ಲಿ ಬಡವಿಯ ಮಗಳಿಗೆ ಮಕ್ಕಳಿರಲಿಲ್ಲ. ಇದರಿಂದ ಮನೆಯವರೆಲ್ಲರು ಬಹಳ ಆತಂಕಕ್ಕೆ ಒಳಗಾದರು. ಅಷ್ಟರಲ್ಲಿ ಬೀಬಿಸಗಟ್, ಬೀಬಿ ಅಗಟ್ರವರು ಅಲ್ಲಿಗೆ ಬಂದರು. ಆತಂಕಗೊಂಡಿರುವುದಕ್ಕೆ ಕಾರಣ ಕೇಳಿದರು. ತನ್ನ ಮಗಳಿಗೆ ಮಕ್ಕಳಿಲ್ಲದ ವಿಚಾರವನ್ನು ಹೇಳಿ ಅತ್ತಳು.
“ಮಕ್ಕಳಾದರೆ ಎಳ್ಳು ಬೆಲ್ಲ ತಂದು ಕಥೆ ಕೇಳುತ್ತೇವೆಂದು ಹರಕೆ ಹೊತ್ತು ನಮ್ಮ ಹೆಸರಲ್ಲಿ ನೀವು ಎರಡಾಣಿ ಎತ್ತಿಡಿ” ಎಂದು ಬೀಬಿ ಸಗಟ್ರವರು ಹೊರಟು ಹೋದರು. ಹುಡುಗಿಯ ತಾಯಿ ತಕ್ಷಣವೇ ವಜ್ಹೂ ಮಾಡಿ, ಹರಕೆ ಹೊತ್ತು ಎರಡಾಣಿ ಎತ್ತಿಟ್ಟಳು. ಹರಕೆ ಹೊತ್ತ ಒಂದು ವರ್ಷದೊಳಗೆ ಗಂಡು ಮಗುವಾಯಿತು. ಆದರೆ ಕಥೆ ಕೇಳಲು ಮರೆತು ಹೋದರು.
ಒಂದು ದಿನ ಮಗು ಕಳೆದುಹೋಗಿ ಸಿಗಲೇ ಇಲ್ಲ. ಎಲ್ಲಿ ಹುಡುಕಿದರು ಮಗುವಿಲ್ಲ. ಕೊನೆಗೆ ಹರಕೆ ತೀರಿಸದಿದ್ದುದು ನೆನಪಿಗೆ ಬಂದು, ತಪ್ಪೊಪ್ಪಿ ಪುನಃ ವಜ್ಹೂ ಮಾಡಿ ಸಿಕ್ಕಿದರೆ ಹರಕೆ ತೀರಿಸುತ್ತೇವೆಂದು ಕೇಳಿಕೊಂಡರು.
ಮಗು ಆಟವಾಡುತ್ತಾ ಕುಂಬಾರನ ಮನೆಯ ಒಲೆಯಲ್ಲಿ ಅವಿತು ಕುಳಿತಿತ್ತು. ಕುಂಬಾರನು ಮಡಿಕೆ ಬೇಯಿಸಲು ಬೆಂಕಿ ಹಾಕಿದನು. ಮಡಿಕೆ ಬೆಂದ ಮೇಲೆ ಒಂದೊಂದು ಮಡಕೆ ತೆಗೆದು ನೋಡುತ್ತಾನೆ. ಎಲ್ಲಾ ಮಡಕೆಗಳಿಗೂ ವಜ್ರ, ವೈಢೂರ್ಯ ಅಂಟಿದೆ, ರತ್ನದಂತಹ ಮಗುವೊಂದು ಕುಳಿತಿದೆ. ಕುಂಬಾರನು ಆಶ್ವರ್ಯಗೊಂಡು ಮಗುವನ್ನು ಎತ್ತಿಕೊಂಡನು.
ಕುಂಬಾರನ ಒಲೆಯಲ್ಲಿ ಮಗು ಸಿಕ್ಕ ವಿಷಯ ಇಡೀ ಊರಿಗೆ ಹರಡಿತು. ತಾಯಿ, ಮಗಳು ಮಗುವನ್ನು ಹುಡುಕುತ್ತ ಕುಂಬಾರನ ಮನೆಗೆ ಬಂದು ನೋಡುತ್ತಾರೆ. ಮಗು ಆಡುತ್ತ ಕುಳಿತಿದೆ. ತಮ್ಮ ಮಗುವನ್ನು ಹಿಂದಿರುಗಿಸುವಂತೆ ಕುಂಬಾರನಿಗೆ ಕೇಳಿದರೆ ’ಮಕ್ಕಳಿಲ್ಲದ ನಾನು ಈ ಮಗುವನ್ನು ಇಟ್ಟುಕೊಳ್ಳುತ್ತೇನೆಂದು’ ಹೇಳಿದನು. ಮಕ್ಕಳಿಗಾಗಿ ತಿಲ್ಗೂಡ್ಕೀ ಕಹಾನೀ ಕೇಳುವಂತೆ ಹೇಳಿ ಮಗುವನ್ನು ಎತ್ತಿಕೊಂಡು ಮನೆಗೆ ಬಂದರು.
ಇನ್ನೊಂದು ಕಥೆ ಹೀಗಿದೆ
ಹುಡುಗನಿಗೆ ಮದುವೆಯಾಗಿರಲಿಲ್ಲ. ಮದುವೆ ನಿಶ್ಚಯವಾದರೆ ನಾನು ’ತಿಲ್ಗೂಡ್ಕೀ ಕಹಾನಿ’ ಕೇಳುತ್ತೇನೆಂದು ಹರಕೆ ಹೊತ್ತನು. ಕೆಲವು ದಿನಗಳಲ್ಲಿಯೇ ಮದುವೆ ನಿಶ್ಚಯವಾಯಿತು. ಆದರೆ ಕಥೆ ಕೇಳಲು ಮರೆತುಬಿಟ್ಟನು. ಒಂದು ದಿನ ಈ ಹುಡುಗನು ವಧುವಿನ ಮನೆಗೆ ಹೋಗುತ್ತಿರುವಾಗ ಕುದುರೆಯ ಮೇಲಿಂದ ಬಿದ್ದು ಸತ್ತುಹೋದನು. ಎಲ್ಲರು ಅಳತೊಡಗಿದರು. ಅಷ್ಟರಲ್ಲಿ ಒಬ್ಬ ಮಹಿಳೆ ಬಂದು ’ನನಗೆ ಎರಡಾಣೆ ಕೊಡಿ’ ಎಂದು ಹೇಳಿ ಎರಡಾಣೆ ತೆಗೆದುಕೊಂಡು ಹರಕೆ ಹೊತ್ತಳು. ತಕ್ಷಣವೇ ನಿದ್ದೆ ಮಾಡುತ್ತಿದ್ದಂತೆ ಹುಡುಗ ಎದ್ದು ಕುಳಿತನು. ಆಗ ಎಳ್ಳು ಬೆಲ್ಲ ತಂದು ಕಥೆ ಕೇಳಿದರು.
ಮತ್ತೊಂದು ಕಥೆಯ ಪ್ರಕಾರ
ಆ ಊರಿನ ರಾಜಕುಮಾರಿಗೆ ಮದುವೆ ಆಗಿರಲಿಲ್ಲ. ರಾಜ, ರಾಣಿಯರಿಗೆ ಬಹಳ ಚಿಂತೆಯಾಯಿತು. ಒಂದು ದಿನ ಬಡವಿಯನ್ನು ಕರೆದು ಹರಕೆಯ ಮಹಿಮೆಯನ್ನು ತಿಳಿದುಕೊಂಡು ತಾವು ಹರಕೆ ಹೊತ್ತರು. ಕೆಲವು ದಿನಗಳಲ್ಲಿಯೇ ಮದುವೆಯಾಯಿತು. ಆದರೆ ಹರಕೆ ತೀರಿಸಿರಲಿಲ್ಲ. ಇದರಿಂದ ಇವರ ಸಾಮ್ಯಾಜ್ಯವೆಲ್ಲವು ಶತ್ರುಗಳ ವಶವಾಯಿತು. ತಾವು ಹರಕೆ ತೀರಿಸಲಿಲ್ಲವಾದುದ್ದರಿಂದ ಹೀಗಾಗಿದೆ ಎಂದು ಗಾಡಿಗಟ್ಟಲೇ ಬೆಲ್ಲ, ಎಳ್ಳು ತರಿಸಿ ಹರಕೆ ತೀರಿಸಿದರು. ಏನೂ ಪ್ರಯೋಜನವಾಗಲಿಲ್ಲ. ಪುನಃ ಆ ಬಡವಿಯನ್ನು ಕರೆದು ಕೇಳಿದರು. ಆ ಬಡವಿ ಎರಡಾಣೆ ಕೇಳಿ ಪಡೆದು, ಬೆಲ್ಲ, ಎಳ್ಳು ತಂದು ಕಥೆ ಕೇಳಿದಳು, ಕಳೆದು ಹೋದ ಸಾಮ್ರಾಜ್ಯವು ಪುನಃ ಪ್ರಾಪ್ತಾವಯಿತು. ನಂಬಿಕೆಯನ್ನು ಬಲಗೊಳಿಸುವ ಕಥೆಯೊಳಗಿನ ಕಥೆಗಳಿವೆ. ಅವುಗಳಲ್ಲಿ;
Leave A Comment