ತಿಲ್ಗೂಡ್ಕೀ ಕಹಾನಿಹೀಗಿದೆ

’ಪೈಗಂಬರ‍್ ಸಲ್ಲಲ್ಲಾಹು ಅಲೆಹಿವ್ವಾಸಲಾಂ’ ರವರು ಒಂದು ದಿನ ’ಮಸ್ವೀದೇ ನಬ್ಬೀ’ಗೆ ನಮಾಜಿಗೆ ಹೋಗಿದ್ದರು. ಅಲ್ಲಿಗೆ ಒಬ್ಬ ಯಹೂದಿ ಬಂದು “ತನ್ನ ಮಗಳ ಮದುವೆ ಇದೆ ಆದುದರಿಂದ ತಾವು ತಮ್ಮ ಮಗಳ ಮದುವೆಗೆ ಬರಬೇಕು” ಎಂದು ಆಮಂತ್ರಿಸಿದನು.

ಪೈಗಂಬರ್‌ರವರು ನಮಾಜ್ ಮುಗಿಸಿಕೊಂಡು ಮನೆಗೆ ಬಂದು ಮದುವೆಯ ಆಮಂತ್ರಣ ವಿಚಾರವನ್ನು ಮಗಳಿಗೆ ಹೇಳಿದರು. ಮದುವೆಗೆ ಹೋಗಲು ತಮ್ಮಲ್ಲಿ ಉತ್ತಮವಾದ ಬಟ್ಟೆ, ಒಡವೆ ಇಲ್ಲವಲ್ಲ. ಯಹೂದಿಯ ಹೆಂಗಸರು ನನ್ನನ್ನು ನೋಡಿ ನಗುತ್ತಾರೆ, ಹಾಸ್ಯ ಮಾಡುತ್ತಾರೆ. ಆದುದರಿಂದ ನಾನುಹೇಗೆ ಹೋಗಲಿ ಎಂದು ಹೇಳಿದರು. ಈ ಮಾತನ್ನು ಕೇಳಿ ಪೈಗಂಬರ್‌ರವರಿಗೆ ಕಣ್ಣೀರು ಬಂದಿತು.

ಆದರೆ ಮಗಳು ಫಾತಿಮಾ ಅದೇ ಹಳೆಯ ವಸ್ತ್ರಗಳನ್ನು ಧರಿಸಿಕೊಂಡು ಮದುವೆಗೆ ಹೊರಟರು. ಎರಡು ಹೆಜ್ಜೆ ಇಟ್ಟಿದ್ದರೋ ಇಲ್ಲವೋ, ದೇವದೂತನಾದ ’ಜಿಬ್ರಾಯಿರ್‌’ರವರು ದೇವಲೋಕದಿಂದ ಫಾತೀಮಾರವರಿಗೆ ಬಟ್ಟೆಯನ್ನು ತಂದುಕೊಟ್ಟರು ಹಾಗೂ ಅನೇಕ ಅಪ್ಸರೆಯರು ಪನ್ನೀರು ಚೆಲ್ಲುತ್ತ ಹೊರಟರು. ಮದುವೆಗೆ ಸೇರಿದ್ದ ಹೆಂಗಸರು ಅಶ್ಚರ್ಯಚಕಿತರಾಗಿ ನಿಂತರು. ಕೆಲವರು ಮೂರ್ಛೆಹೋದರು. ಮದುವೆ ಮಂಟಪದಲ್ಲಿ ಕುಳಿತಿದ್ದ ವಧೂ ಸತ್ತೇ ಹೋದಳು. ಈ ಬಗೆಯ ಅನಾಹುತಗಳನ್ನು ನೋಡಿದ ಫಾತಿಮಾ ಎರಡು ರಕಾತ್ ನಮಾಜ್ ಮಾಡಿದರು. ಸತ್ತು ಹೋದ ’ವಧು’ ಎದ್ದು ಕುಳಿತಳು. ಈ ಆಶ್ಚರ್ಯವನ್ನು ಕಣ್ಣಾರೆ ನೋಡಿದ ಹೆಂಗಸರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು.

ನಮ್ಮ ಜನಪದ ಹೆಣ್ಣು ಮಕ್ಕಳು ಕಷ್ಟ ಪರಿಹಾರಕ್ಕಾಗಿ ಹರಕೆ ಹೊರುತ್ತಾರೆ. ಇಚ್ಛೆ ಕೈಗೂಡಿದ ಮೇಲೆ ಸಂಜೆ ಹೊತ್ತಿಗೆ ಎಳ್ಳು, ಬೆಲ್ಲ ತರಿಸಿ ಸುತ್ತ ಮುತ್ತ ಇರುವ ಹೆಂಗಸರನ್ನು ಬರಮಾಡಿಕೊಂಡು ಮೇಲಿನ ಕಥೆ ಕೇಳಿ ಭಯಭಕ್ತಿಯಿಂದ ಎಳ್ಳು ಬೆಲ್ಲ ತಿನ್ನುತ್ತಾರೆ.

ದಸ್ಬೀಬಿಂಯಾಕೀ ಕಹಾನಿ

ಒಂದೂರಿನಲ್ಲಿ ಇಬ್ಬರು ಸಹೋದರರಿದ್ದರು. ಹಿರಿಯವನು ಬಹಳ ಶ್ರೀಮಂತನಾಗಿದ್ದನು. ಆದರೆ ಕಿರಿಯವನು ಬಹು ಬಡವನಾಗಿದ್ದನು. ಇವನು ಬಡತನದಿಂದ ಬೆಂದು ಅಸಹಾಯಕ ಹಾಗೂ ನಿರಾಶನಾಗಿದ್ದನು. ಒಂದು ದಿನ ತನ್ನ ಹೆಂಡತಿಯನ್ನು ಕುರಿತು ’ನಾವು ಎಷ್ಟು ದಿನ ಈ ಬಡತನದಲ್ಲಿ ಬದುಕುವುದು. ನಾನು ಪರದೇಶಕ್ಕಾದರು ಹೋಗಿ ಕೆಲಸ ಮಾಡುತ್ತೇನೆ. ಅಲ್ಲಿ ನನಗೆ ಸಂಬಂಧಿಸಿದ ಯಾವುದಾದರು ಕೆಲಸ ಸಿಗಬಹುದು’ ಎಂದು ಹೇಳಿ ಕೆಲಸ ಹುಡುಕುತ್ತ ಪರದೇಶಕ್ಕೆ ಹೊರಟುಹೋದನು. ಗಂಡ ಹೊರಟುಹೋದ ಮೇಲೆ ಇವಳು ಆತಂಕಕ್ಕೆ ಒಳಗಾದಳು. ಸದಾ ಅಲ್ಹಾನಲ್ಲಿ ’ನನ್ನ ಗಂಡ ಹೊರಟುಹೋದ. ಈಗ ನನಗೆ ಯಾರು ಗತಿ?, ಓ ಎಲ್ಲರನ್ನು ರಕ್ಷಿಸುವವನೇ ನೀನೆ ನನಗೆ ಅನ್ನದಾತ, ನೀನೆ ಕಾಪಾಡುವವನು’ ಎಂದು ತನ್ನ ಅಳಲನ್ನು ತೋಡಿಕೊಳ್ಳುತ್ತಿದ್ದಳು.

ಒಬ್ಬಂಟಿಯಾದ ಇವಳು ಏನು ಮಾಡಬೇಕೆಂದು ತೋಚದೆ ತನ್ನ ಗಂಡನ ಹಿರಿಯ ಅಣ್ಣನ ಮನೆಗೆ ಹೋಗಿ ಅಳುತ್ತ ’ಅಣ್ಣ ನಾನು ಈಗ ಎಲ್ಲಿಗೆ ಹೋಗಲಿ? ಏನು ಮಾಡಲಿ? ನಿಮ್ಮ ತಮ್ಮ ನನ್ನನ್ನು ಬಿಟ್ಟು ಹೊರಟುಹೋದರು. ನಿಮ್ಮ ಹೊರತು ನನಗೆ ನನ್ನವರು ಯಾರು ಇಲ್ಲ’ ಎಂದು ಹೇಳಿದಳು.

ಆಗ ಇವನು ತನ್ನ ಹೆಂಡತಿಯನ್ನು ಕರೆದು ’ಈಕೆ ನನ್ನ ಅತ್ತಿಗೆ ಇವಳಿಗೆ ಮನೆ ಕೆಲಸಕ್ಕೆ ಇಟ್ಟುಕೋ, ಮಕ್ಕಳು ತಿಂದು ಉಳಿದುದ್ದನ್ನು ಕೊಡು’ ಎಂದು ಹೇಳಿದನು.

ತನ್ನ ಪರಿಸ್ಥಿತಿಯಿಂದ ಈಕೆ ಇದನ್ನು ಒಪ್ಪಿಕೊಂಡು ಮನೆಯವರ ಸೇವೆ ಮಾಡತೊಡಗಿದಳು. ಮನೆಯಲ್ಲಿ ಎಷ್ಟು ಕೆಲಸ ಮಾಡಿದರೂ ಮುಗಿಯುತ್ತಿರಲಿಲ್ಲ. ತನ್ನ ಹಿರಿಯ ಓರಗಿತ್ತಿ ಸದಾ ಬೈಯುತ್ತಿದ್ದಳು. ಮಕ್ಕಳು ತಿಂದು ಉಳಿದ ಎಂಜಲು ಊಟವನ್ನು ಈಕೆಗೆ ಕೊಡುತ್ತಿದ್ದಳು. ತನ್ನ ಸ್ಥಿತಿಯಿಂದ ಹತಾಶಳಾದ ಇವಳು ಅಲ್ಹಾನಲ್ಲಿ ಕೃತಜ್ಞತೆ ಸಲ್ಲಿಸಿ ಆ ಎಂಜಲು ಊಟವನ್ನೇ ತಿನ್ನುತ್ತಿದ್ದಳು. ಹಗಲೆಲ್ಲಾ ದುಡಿದು ರಾತ್ರಿ ಮಲಗುವಾಗ ತನ್ನ ಕಷ್ಟಗಳನ್ನು ಅಲ್ಹಾನಲ್ಲಿ ಹೇಳಿಕೊಂಡು ಗಂಡನು ಬೇಗನೇ ಹಿಂತಿರುಗಿ ಬರುವಂತೆ ಪ್ರಾರ್ಥಿಸುತ್ತಿದ್ದಳು.

ಹೀಗೆ ಒಂದು ದಿನ ಮಲಗಿರಲು ಕನಸಿನಲ್ಲಿ ಒಬ್ಬ ಶ್ರೀಮಂತ ಬುರಕಧಾರಿ ಮಹಿಳೆ ಕಾಣಿಸಿಕೊಂಡು, ಈ ಬಡವಿಯನ್ನು ಕುರಿತು “ಓ ಶ್ರೀಮತಿ, ನೀನು ಗುರುವಾದ ದಿನ ’ದಸ್ ಬೀಬಿಯಾಂಕೀ ಕಹಾನೀ’ ಕೇಳು. ಇದರಿಂದ ನಿನ್ನ ಕಷ್ಟಗಳು ಪರಿಹಾರವಾಗುತ್ತದೆ” ಎಂದು ತಿಳಿಸಿ, ಆ ಹತ್ತು ಜನ ಬೀಬಿಂಯಾ ಯಾರೆಂದರೆ, ಬೀಬಿ ಫಾತೀಮಾ, ಬೀಬಿ ಹಾಜೀರ, ಬೀಬಿ ಸಾರ, ಬೀಬಿ ಮರಿಯಮ್, ಬೀಬಿ ಆಸೀಯಾ, ಬೀಬಿ ಜೈನಬ್, ಬೀಬಿ ಕುಲ್‌ಸುಮ್, ಬೀಬಿ ಫಾತೀಮಾ ಸಗೀರಾ, ಬೀಬಿ ಕುಬ್ರ, ಬೀಬಿ ಸಕೀನಾ. ಈ ನಾರಿಮಣಿಗಳ ಕಥೆಗಳು ಅತ್ಯಂತ ಪವಿತ್ರವಾಗಿದ್ದು, ಖುರಾನಿನಲ್ಲಿ ಬೀಬಿ ಮರಿಯಮ್ ಬಗ್ಗೆ ಹೀಗೆ ಹೇಳಿದೆ:

“ಖುಲ್ವು ಅಲ್ಹಾ ಹು ತಬಾರಕ ಮೌಲ ಯಾ ಮರಿಯಮ ಇನ್ನಾಲ್ಹಾ ವತಹರಾ ವ ಇಸ್ತಾಫಾಕ ಅಲ್ಹಾನ್ ಗೌರವ ಸ್ಥಾನವನ್ನು ನಿಸಾಯಿಲ್ ಅಲಾಮೀನ್” ಅಲ್ಹಾನು ಖುರಾನಿನಲ್ಲಿ ಮರಿಯಮ್ ಅಲೆಹಿಸ್ಸಲಾಂರವರಿಗೆ ಗೌಡವ ಸ್ಥಾನವನ್ನು ಕೊಟ್ಟಿದ್ದಾನೆ. ಪ್ರಪಂಚದ ಸ್ತ್ರೀಯರಲ್ಲಿ ’ಅತ್ಯುತ್ತಮ ಮಹಿಳೆ’ ಎಂದು ಆಯ್ಕೆ ಮಾಡಿದ್ದಾನೆ.

ಹೀಗೆ ಖುರಾನಿನಲ್ಲಿ ಶ್ರೀಮತಿ ಮರಿಯಮ್‌ರವರಿಗೆ ಪ್ರಮುಖ ಸ್ಥಾನವಿದೆ. ಪುನಃ ಆ ಬುರುಕಧಾರಿ ಮಹಿಳೆ ತನ್ನ ಮಾತನ್ನು ಮುಂದುವರಿಸಿ ’ಬೀಬಿ ಆಸೀಯಾ’ರವರ ಕಥೆಯನ್ನು ಹೇಳಿದರು.

ಬೀಬಿ ಅಸೀಯಾರವರು ’ಇಸ್ರಾಯಿಲ್’ ಅಲೆಹಿಸ್ಸಾಲಾಂರವರ ವಂಶದಿಂದ ಬಂದವರು. ಇವರ ತಂದೆ ಮರ್‌ಹಮ್ ಎಂದು. ಅಸೀಯಾರವರು ಬಾಲ್ಯದಿಂದಲು ಅಲ್ಹಾನ ಭಕ್ತಳಾಗಿದ್ದರು. ಇವರಿಗೆ ಫಿರೋನ್ ಎಂಬ ದುಷ್ಟ ರಾಜನ ಜೊತೆಯಲ್ಲಿ ಮದುವೆಯಾಯಿತು. ಇದೇ ಅಲ್ಹಾನ ಇಚ್ಛೆಯಾಗಿತ್ತೋ ಏನೋ?

ಮದುವೆಗಿಂತ ಮೊದಲು ಫಿರೋನ್ ಸಾಮನ್ಯ ಮನುಷ್ಯನಂತೆ ಇದ್ದನು. ಆದರೆ ಇವನು ಸಿಂಹಾಸನಾರೂಢನಾದ ಮೇಲೆ ತನ್ನನ್ನೇ ಸ್ವತಃ ಅಲ್ಹಾನೆಂದು ಹೇಳುತ್ತಿದ್ದನು. ಇವನನ್ನು ’ಅಲ್ಹಾನಲ್ಲ’ ಎಂದು ನಿರಾಕರಿಸಿದ ಪ್ರಜೆಗಳಿಗೆ ಚಿತ್ರಹಿಂಸೆ ಕೊಡುತ್ತಿದ್ದನು.

ಒಂದು ದಿನ ಬೀಬಿ ಆಸೀಯಾರವರು ಫಿರೋನ್‌ನನ್ನು ಕುರಿತು ’ಮನುಷ್ಯನಾಗಿ ಹುಟ್ಟಿ ನಾನೇ ಅಲ್ಹಾ ಎಂದು ಹೇಳಿ ಜನರಿಗೆ ಈ ರೀತಿ ಚಿತ್ರಹಿಂಸೆ ಕೊಡುವುದು ಸರಿಯಲ್ಲ. ನಿನಗೆ ಅಲ್ಹಾನ ಭಯ ಇದ್ದಿದ್ದರೆ, ಈ ಮಾತನ್ನು ಆಡುತ್ತಿರಲಿಲ್ಲ’ ಎಂದು ಬುದ್ದಿವಾದದ ಮಾತುಗಳನ್ನಾಡಿ, ಸನ್ಮಾರ್ಗದ ವಿಚಾರವನ್ನು ಹೇಳಿದರು. ಇದರಿಂದ ಕುಪಿತನಾಗಿ, ಬೆಂಕಿ ಕೆಂಡವಾದ ಫಿರೋನ್ ಹೆಂಡತಿಯನ್ನು ಅಂಗಾತ ಮಲಗಿಸಿ ಹಸ್ತ ಮತ್ತು ಪಾದಗಳಿಗೆ ಮೊಳೆಗಳಿಂದ ಜಡಿದು ಸಾಯಿಸಿದನು. ಈ ದುಷ್ಟ ಗಂಡನ ಸಹವಾಸಕ್ಕಿಂತ ಸಾವೇ ಲೇಸು ಎಂದು ಬಗೆದು ಸಾವಿಗೆ ಮಣಿದ ಆಸೀಯಾರವರ ಚಾರಿತ್ಯ ಏನೆಂದು ಹೇಳಲಿ.

ತನ್ನ ಮಾತನ್ನು ಮುಂದುವರಿಸಿ ಬೀಬಿ ಹಾಜೀರ ಹಾಗೂ ಬೀಬಿ ಸಾರರವರ ಕಥೆಯನ್ನು ಹೇಳಿದರು:

“ಹಜರತ್ ಇಬ್ರಹಿಂ ಅಲೆಹಿಸ್ಸಲಾಂರವರು ಬೀಬಿ ಸಾರ ಎಂಬ ಸುಂದರ ರಾಜಕುಮಾರಿ ಯನ್ನು ಮದುವೆಯಾದರು. ರಾಜಕುಮಾರಿಯ ಸೇವೆಗೆ ದಾಸಿ ’ಬೀಬಿ ಹಾಜಿರ‍್’ರವನ್ನು ನೇಮಿಸಲಾಗಿತ್ತು. ಎಪ್ಪತ್ತೈದು ವರ್ಷಗಳು ದಾಟಿದರೂ ಹಜರತ್ ಇಬ್ರಾಹಿಂರವರಿಗೆ ಮಕ್ಕಳಾಗಲಿಲ್ಲ. ಇದರಿಂದ ನೊಂದ ’ಸಾರ’ರವರು ತಮ್ಮ ಗಂಡನಿಗೆ ಹೇಳಿ ದಾಸಿ ಹಾಜೀರ-ರವರೊಂದಿಗೆ ವಿವಾಹ ಮಾಡಿದರು.

ಹೀಗೆ ಬೀಬಿ ಸಾರರವರ ಸಹಿಷ್ಣುತಾ ಗುಣವನ್ನು ಏನೆಂದು ಹೇಳಲಿ. ಅಷ್ಟೆ ಅಲ್ಲದೆ, ಇಬ್ರಾಹಿಂರವರ ಎಪ್ಪತ್ತೇಳನೆಯ ವಯಸ್ಸಿನಲ್ಲಿ ಬೀಬಿ ಹಾಜೀರರವರಿಂದ ಹಜರತ್ ಇಸ್ಮಾಯಿಲ್‌ರವರು ಜನಿಸಿದರು. ಪುತ್ರನನ್ನು ಪಡೆದು ಸಂತೋಷದಲ್ಲಿರುವಾಗ ಮಡದಿ ಮತ್ತು ಪುತ್ರನನ್ನು ತ್ಯಾಗ ಮಾಡುವ ಸಂಕಟದಲ್ಲಿ ಸಿಲುಕಿದರು. ಅಲ್ಹಾನ ಇಚ್ಛೆ ಹಾಗೂ ಆಜ್ಞೆಯ ಪ್ರಕಾರ ಬಹುದೂರು ಏಕಾಂತದಲ್ಲಿ ನೆರಳಿಲ್ಲದ ಬಿಸಿಲ ಧಗೆಯಲ್ಲಿ ಉರಿಯುತ್ತಿರುವ ಮರುಭೂಮಿಯಲ್ಲಿ ಮಡದಿ ಮತ್ತು ಪುತ್ರನನ್ನು ಬಿಟ್ಟು ಬಂದರು.

ಹಸಿವೆ, ಬಾಯಾರಿಕೆಯಿಂದ ತಳಮಳಿಸುವ ಕಂದನ ಸ್ಥಿತಿಯನ್ನು ನೋಡಲಾರದೆ ಕಂಗಾಲಾದ ತಾಯಿ ’ಹಾಜೀರ‍್’ ಎಲ್ಲಾದರೂ ನೀರು, ಆಶ್ರಯ ಸಿಗಬಹುದೆಂದು ಸುತ್ತಲೂ ಹುಡುಕಲು ಆರಂಭಿಸಿದರು. ಬಾಯಾರಿಕೆಯಿಂದ ಬಳಲುತ್ತಿದ್ದ ಕಂದನ ಚೀತ್ಕಾರವನ್ನು ಕೇಳಲಾಗದೆ, ’ಸಫಾ-ಮರ‍್ವಾ’ ಎಂದು ಬೆಟ್ಟ, ಗುಡ್ಡಗಳನ್ನು ಏಳೇಳು ಬಾರಿ ಹತ್ತಿ ಇಳಿದು ಕೊನೆಗೆ ಎಲ್ಲೂ ನೀರು, ಆಶ್ರಯ ಸಿಗದೆ, ಬೇಸತ್ತು ಮಗುವಿನ ಬಳಿ ಧಾವಿಸಿ ಬಂದು ನೋಡಿದರೆ ಅವರ ಆಶ್ಚರ್ಯಕ್ಕೆ ಮಿತಿ ಇರಲಿಲ್ಲ. ಏಕೆಂದರೆ ಹಸುಳೆಯ ಹಿಮ್ಮಡಿಯ ಹೊಡೆತಕ್ಕೆ ವರತೆಯಿಂದ ತೇವವಾಗಿ ನೀರಿನ ಚಿಲುಮೆ ಪುಟಿಯುತ್ತಿತ್ತು. ಇದನ್ನು ಝಮ್‌ಝಮ್ ಎನ್ನುತ್ತಾರೆ. ಪುನಃ ಹಜರತ್ ಇಬ್ರಾಹಿಂವರು ಮಡದಿ ಮಗುವಿನೊಂದಿಗೆ ಕೂಡಿಕೊಂಡು, ಆನಂದದಿಂದ ಕಾಲ ಕಳೆಯಲು ಪ್ರಾರಂಭಿಸಿದರು. ಇವರಿಗೆ ಮತ್ತೊಂದು ಪರೀಕ್ಷೆ ಕಾದಿತ್ತು. ಅಲ್ಹಾನ ಆದೇಶದಂತೆ ಅವನ ಹೆಸರಲ್ಲಿ ತಮ್ಮ ಮಗುವನ್ನು ಬಲಿಕೊಡಬೇಕೆನ್ನುವ ಕನಸನ್ನು ಕಂಡರು. ಅಲ್ಹಾನ ವಿಧೇಯರಾದ ಇವರು ತಮ್ಮ ಮಗನನ್ನು ಬಲಿಕೊಡಲು ಮಕ್ಕಾ ನಗರದ ಸಮೀಪದಲ್ಲಿರುವ ’ಮೀನಾ’ ಎಂಬ ಪ್ರದೇಶಕ್ಕೆ ಕರೆದುಕೊಂಡು ಹೋದರು. ಆಗ ಬೀಬಿ ಹಾಜೀರರವರ ಹತ್ತಿರ ಸೈತಾನ ಮಾರುವೇಶದಲ್ಲಿ ಬಂದು “ನಿನ್ನ ಮಗನನ್ನು ಬಲಿಕೊಡಲು ನಿನ್ನ ಗಂಡನು ಕರೆದುಕೊಂಡು ಹೋಗಿದ್ದಾನೆ. ಮಗನನ್ನು ಬಲಿಕೊಟ್ಟು ಹೇಗೆ ಇರುವೆ. ಹೋಗಿ ಕರೆದುಕೊಂಡು ಬಾ” ಎಂದು ಅಲ್ಹಾನನ ಇಚ್ಛೆಯ ವಿರುದ್ಧವಾಗಿ ನಡೆಯುವಂತೆ ಪ್ರೇರೇಪಿಸಿತು.

ಸೈತಾನನ ಮಾತನ್ನು ಕೇಳಿದ ಹಾಜೀರ ’ನೀನು ಈ ವಿಧವಾಗಿ ಪ್ರೇರೇಪಿಸುವುದನ್ನು ನೋಡಿದರೆ, ನೀನು ಸೈತಾನನೆ ಸರಿ, ನನ್ನ ಗಂಡ ಏನು ಕೆಲಸ ಮಾಡಿದರು, ಅಲ್ಹಾನ ಇಚ್ಛೆಯ ಪ್ರಕಾರವಾಗಿ ಮಾಡುತ್ತಾರೆ, ಥೂ ನೀನು ಇಲ್ಲಿಂದ ತೊಲಗು’ ಎಂದು ಜರಿದು ಕಳುಹಿಸಿದರು. ಇಂತಹ ಮಹಾನ್ ಸ್ತ್ರೀಯರ ಚಾರಿತ್ರ‍್ಯ ಎಷ್ಟು ಪ್ರಮುಖವಾದುದು. ಹೀಗೆ ಈ ಮಹಿಳೆಯರಿಗೂ ಕಷ್ಟ ತಪ್ಪಿದ್ದಲ್ಲ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಷ್ಟಗಳನ್ನು ಅನುಭವಿಸಿ ಜಯಿಸಿದ್ದಾರೆ. ಆದುದರಿಂದ ಈ ನಾರಿಯರ ಕಥೆಯನ್ನು ಕೇಳು, ಇದರಿಂದ ನಿನ್ನ ಕಷ್ಟಗಳು ಪರಿಹಾರವಾಗಿ ನಿನ್ನ ಗಂಡನು ಬರಬಹುದು’ ಎಂದು ಹೇಳಿ ಮಾಯವಾದರು.

ಇವಳು ಕನಸು ಕಂಡು ನಿದ್ದೆಯಿಂದ ಎಚ್ಚರವಾದಳು. ಆ ದಿನ ಗುರುವಾರವಾಗಿತ್ತು. ಮನೆಯಲ್ಲಾ ಶುದ್ಧಮಾಡಿ ತಾನು ಸ್ನಾನ ಮಾಡಿದಳು. ಮೊಹಲ್ಲದ ಹೆಂಗಳೆಯರನ್ನು ಕರೆದು ಪ್ರತಿದಿನ ಒಂದೊಂದರಂತೆ ಹತ್ತು ದಿನದವರೆವಿಗೂ ’ದಸ್ ಬೀಬಿಂಯಾ’ರವರ ಕಥೆಯನ್ನು ಕೇಳಿದಳು. ಹತ್ತನೆಯ ದಿನ ನೋಡುತ್ತಾಳೆ ಆಶ್ಚರ್ಯಕರವಾದ ರೀತಿಯಲ್ಲಿ ತನ್ನ ಗಂಡನು ಹಣ, ಸಂಪತ್ತಿನೊಂದಿಗೆ ಬಾಗಿಲಲ್ಲಿ ಬಂದು ನಿಂತಿದ್ದಾನೆ. ಈ ಬಡವಿ ಅತಿಯಾಗಿ ಸಂತೋಷ ಗೊಂಡಳು. ತಕ್ಷಣವೇ ಸ್ನಾ ಮಾಡಿ, ರೊಟ್ಟಿಯ ಹತ್ತು ಲಡ್ಡುಗಳನ್ನು ತಯಾರಿಸಿ ತನ್ನ ಸ್ನೇಹಿತೆಯರಿಗೆ ಕರೆದು ಕೊಟ್ಟಳು. ನಂತರ ತನ್ನ ಗಂಡನ ಅಣ್ಣನ ಮನೆಗೆ ತೆಗೆದುಕೊಂಡು ಹೋಗಿ, ಓರಗಿತ್ತಿಯನ್ನು ಕುರಿತು “ನಾನು ದಸ್‌ಬೀಬಿಂಯಾಕೀ ಕಹಾನಿ’ ಕೇಳಿದೆ, ನನ್ನ ಗಂಡನು ಹಿಂತಿರುಗಿ ಬಂದಿದ್ದಾನೆ. ಈ ಲಡ್ಡು ತೆಗೆದುಕೊಳ್ಳಿ” ಎಂದು ಕೊಟ್ಟಳು.

ಆಕೆ ” ಇಂತಹ ಕಲ್ಲು, ಇಟ್ಟಿಗೆಯ ಲಡ್ಡುಗಳನ್ನು ನಾವು ತಿನ್ನುವುದಿಲ್ಲ, ಇದನ್ನು ತೆಗೆದುಕೊಂಡು ಹೋಗು” ಎಂದು ಅಹಂಕಾರದಿಂದ ನುಡಿದು ಕಳುಹಿಸಿದಳು. ಈ ಬಡವಿ ಅಳುತ್ತ ಮನೆಗೆ ಬಂದು ಅಲ್ಹಾನಿಗೆ ಕೃತಜ್ಞತೆಯನ್ನು ಸಲ್ಲಿಸಿ ಆ ಲಡ್ಡುಗಳನ್ನು ತಾನೇ ತಿಂದು ನೀರು ಕುಡಿದಳು.

ಈ ಅಹಂಕಾರದ ಮಹಿಳೆಯ ಸ್ಥಿತಿ ಏನಾಯಿತು ಎಂದರೆ, ಆ ದಿನ ರಾತ್ರಿ ಮಲಗಿ ಎದ್ದು ನೋಡುತ್ತಾಳೆ ತನ್ನ ಅರಮನೆಯಂತಹ ಮಯಾವಾಗಿದೆ. ಮಕ್ಕಳೆಲ್ಲಾ ಸತ್ತುಹೋಗಿದ್ದಾರೆ. ಗಂಡ, ಹೆಂಡತಿ ಇಬ್ಬರು ಅಳಲು ಪ್ರಾರಂಭಿಸಿದರು. ನಂತರ ಅನೇಕ ಕಷ್ಟದಿಂದ ದಿನ ಕಳೆಯಲಾರಂಭಿಸಿದರು. ತಿನ್ನಲು ಏನು ಇರಲಿಲ್ಲ. ಯಾವುದೋ ಡಬ್ಬವನ್ನು ತೆಗೆದು ನೋಡಿದರೆ ಅದರಲ್ಲಿ ಗೋಧಿಯ ’ತೌಡು’ ಇತ್ತು. ಹಸಿವಿನಿಂದ ಕಂಗಲಾದ ಇವರು ಅದರಲ್ಲೆ ರೊಟ್ಟಿ ಮಾಡಿ ತಿನ್ನೋಣ ಎಂದು ಗೌಡನ್ನು ತೆಗೆದು ನೀರು ಹಾಕಿ ಕಲಸಿದರೆ ’ಹುಳು’ಗಳು ಕಾಣಿಸಿಕೊಂಡವು.

ತಂಗಿಯ ಮನೆಗಾದರೂ ಹೋಗೋಣ ಎಂದು ತನ್ನ ಹೆಂಡತಿಯನ್ನು ಕರೆದುಕೊಂಡು ಹೊರಟನು. ನಡೆಯುತ್ತ ನಡೆಯುತ್ತ ಪಾದಗಳಲ್ಲಿ ಗಾಯಗಳಾದವು. ಹಸಿವೆಯು ಅಧಿಕವಾಗುತ್ತಿತ್ತು. ದಾರಿಯಲ್ಲಿ ’ಕಡಲೆ ಕಾಳಿ’ನ ಹಸಿರು ಹೊಲ ಕಾಣಿಸಿತು. ನಾನು ಹೋಗಿ ಕಡಲೆ ಗಿಡವನ್ನು ತರುತ್ತೇನೆ, ಕಾಳನ್ನು ತಿಂದು ನೀರು ಕುಡಿದರೆ ದೇಹಕ್ಕೆ ಶಕ್ತಿಯಾದರು ಬರಬಹುದು ಎಂದು ಹೇಳಿ, ಗಿಡಗಳನ್ನು ಕಿತ್ತು ತಂದು ಹೆಂಡತಿಯ ಕೈಗೆ ಕೊಟ್ಟನು. ಇವಳು ಗಿಡಗಳನ್ನು ಮುಟ್ಟಿದ ಕೂಡಲೆ ಒಣಗಿದ ಕಡ್ಡಿಗಳಾದವು. ಆ ಕಡ್ಡಿಗಳನ್ನು ಎಸೆದು, ತಂಗಿಯ ಮನೆಗೆ ಹೋದರು. ತಂಗಿ ಇವರನ್ನು ಕೂರಿಸಿ ಒಳಗೆ ನಡೆದಳು. ಎಲ್ಲರ ಊಟವಾಯಿತು. ಆದರೆ ಇವರಿಬ್ಬರನ್ನು ಊಟಕ್ಕೆ ಕರೆಯಲು ಮರೆತಳು. ತನ್ನ ಮನೆ ಕೆಲಸದವರನ್ನು ಕರೆದು ’ಏನಾದರು ಊಟ ಉಳಿದಿದ್ದರೆ ಆ ಇಬ್ಬರಿಗೆ ಕೊಟ್ಟು ಬನ್ನಿ’ ಎಂದು ಹೇಳಿದಳು. ಕೆಲಸದವರು ಊಟ ತುಂಬಿದ ತಟ್ಟೆಗಳನ್ನು ತಂದು ಕೊಟ್ಟರು. ಅನ್ನ ನೋಡಿದ ತಕ್ಷಣ ಸಂತೋಷಗೊಂಡು ಇವರು ಕೈಕಾಲು ತೊಳೆದು ಊಟ ಮಾಡಲು ಕುಳಿತರೆ, ಅನ್ನದಲ್ಲಿ ಕೆಟ್ಟ ವಾಸನೆ ಬರುತ್ತಿದೆ. ಇಬ್ಬರು ತಲೆ ಹಿಡಿದು ಕುಳಿತರು. ’ಅಲ್ಹ ನಾವು ಎಷ್ಟು ದಿನ ಹೀಗೆ ಇರುವುದು, ನಮ್ಮ ಉಸಿರು ನಿಲ್ಲುತ್ತಿದೆ’ ಎಂದು ಅತ್ತರು. ನಂತರ ಅನ್ನವನ್ನು ಮಣ್ಣು ಮಾಡಿ, ಹಸಿವಿನಿಂದಲೇ ರಾತ್ರಿ ಕಳೆದರು. ಬೆಳಗಾಯಿತು. ಪುನಃ ಹೆಂಡತಿಯನ್ನು ಕುರಿತು ’ಈ ಊರಿನ ರಾಜನು ನನ್ನ ಸ್ನೇಹಿತನು, ಅವನಲ್ಲಿಗಾದರು ಹೋಗೋಣ ನಡಿ’ ಎಂದು ಹೆಂಡತಿಯನ್ನು ಕರೆದುಕೊಂಡು ಹೊರಟನು. ರಾಜನು ಇವನನ್ನು ಗುರುತಿಸಿ ಉಳಿದುಕೊಳ್ಳುವುದಕ್ಕೆ ಉತ್ತಮ ವ್ಯವಸ್ಥೆ ಮಾಡಿಸಿದನು. ಕೆಲಸದವರು ಏಳು ಬಗೆಯ ಭಕ್ಷ್ಯಗಳನ್ನು ತಂದು ’ದಸ್ತರ‍್’ ಮೇಲೆ ಇಟ್ಟರು. ಈ ಮಹಿಳೆ ಕೈತೊಳೆದು ಅನ್ನವನ್ನು ಮುಟ್ಟಿದ ತಕ್ಷಣ ಎಲ್ಲವೂ ಕೆಟ್ಟುಹೋಗಿ ಹುಳುಗಳು ಕಾಣಸಿಕೊಂಡವು. ಇವಳ ಗಂಡ ಆತಂಕಕ್ಕೆ ಒಳಗಾದನು. ಇಬ್ಬರು ಗಾಬರಿಗೊಂಡು ಎಲ್ಲಾ ಊಟವನ್ನು ಮಣ್ಣು ಮಾಡಿದರು.

ರಾಜನ ಹೆಂಡತಿ ಮತ್ತು ಮಗಳು ಸ್ನಾನಕ್ಕೆ ಹೋಗುವ ಮೊದಲು ತಮ್ಮ ಕತ್ತಿನ ಮುತ್ತಿನ ಹಾರವನ್ನು ಗೋಡೆಯ ಮೊಳೆಗೆ ಸಿಕ್ಕಿಸಿದರು. ಈ ಮಹಿಳೆಯ ದೃಷ್ಟಿ ಅದರ ಮೇಲೆ ಬಿದ್ದ ತಕ್ಷಣ, ಗೋಡೆಯು ಆ ಹಾರವನ್ನು ನುಂಗಿತು. ಇವಳು ಹೆದರಿ ಬಂದು ಗಂಡನಿಗೆ ಹೇಳಿದಳು. ’ನಾವಿಬ್ಬರು ಇಲ್ಲೆ ಇದ್ದರೆ ನಮಗೆ ಕಳ್ಳರೆಂದು ರಾಜನು ಸೆರೆಮನೆಯಲ್ಲಿ ಹಾಕುತ್ತಾನೆ’ ಎಂದು ಯಾರಿಗೂ ಹೇಳದೆ ಹೊರಟರು.

’ನಮ್ಮ ಮೇಲೆ ಈ ರೀತಿಯ ಪರೀಕ್ಷೆ ಉಂಟಾಗಲು ಕಾರಣವೇನು? ನಾವು ಮಾಡಿರುವ ತಪ್ಪಾದರು ಏನು?’ ಎಂದು ಹೇಳಿ ಇವನ ಗಂಡನು ಅಳಲಾರಂಭಿಸಿದನು. ಆಗ ಇವನ ಹೆಂಡತಿ ಗಂಡನನ್ನು ಕುರಿತು ’ನಿಮ್ಮ ತಮ್ಮನ ಹೆಂಡತಿ, ದಸ್ ಬೀಬಿಂಯಾಕೀ ಕಹಾನಿ ಕೇಳಿ ನನಗೆ ಲಡ್ಡುಗಳನ್ನು ತಂದುಕೊಟ್ಟಳು, ಕಲ್ಲು, ಇಟ್ಟಿಗೆಯಂತಹ ಲಡ್ಡುಗಳನ್ನು ನಾವು ತಿನ್ನುವುದಿಲ್ಲ ಎಂದು ತನ್ನ ತಪ್ಪಿಗೆ ಪಶ್ಚಾತ್ತಾಪಕ್ಕೊಳಗಾದಳು. ಎಂತಹ ತಪ್ಪು ಮಾಡಿದೆ’ ಎಂದು ಹೇಳಿ ಪುನಃ ಹೆಂಡತಿಯನ್ನು ಕರೆದುಕೊಂಡು ಸಮುದ್ರದ ಹತ್ತಿರ ಬಂದನು. ಇಬ್ಬರು ’ವಜ್ಹೂ’ ಮಾಡಿ ಮರಳಿನ ಹತ್ತು ಲಡ್ಡುಗಳನ್ನು ಮಾಡಿದರು. ಹತ್ತು ಜನ ಧಾರ್ಮಿಕ ಮಹಿಳೆಯರ ಕಥೆಗಳನ್ನು ಕೇಳಿದರು. ಮರಳಿನ ಲಡ್ಡುಗಳನ್ನೇ ತಿಂದು ನೀರು ಕುಡಿದರು. ನಂತರ ತಮ್ಮ ತಪ್ಪಿಗೆ ಕ್ಷಮೆ-ಯನ್ನು ಯಾಚಿಸಿ, ತಮ್ಮ ಮನೆಗೆ ಹಿಂತಿರುಗಿದರು. ಮನೆಯ ಹತ್ತಿರ ಬಂದು ನೋಡುತ್ತಾರೆ. ಅರಮನೆಯಂತಹ ಮನೆ ಕಂಗೊಳಿಸುತ್ತಿದೆ. ಮಕ್ಕಳು ಖುರಾನ್ ಪಠಣ ಮಾಡುತ್ತಿದ್ದಾರೆ. ಮಕ್ಕಳನ್ನು ನೋಡಿ ಸಂತೋಷಗೊಂಡು ನೆಮ್ಮದಿಯಿಂದ ಜೀವನ ನಿರ್ವಹಿಸಲಾರಂಭಿಸಿದರು.

ಹೀಗೆ ಕಥೆಯೊಳಗೆ ಕಥೆಗಳಿದ್ದು ನಂಬಿಕೆಗಳನ್ನು ಬಲಗೊಳಿಸುತ್ತವೆ. ಅಸಡ್ಡೆ ತೋರಿಸಿದರೆ, ಕಷ್ಟಗಳು ಬರುತ್ತವೆ ಎಂಬ ಭಯದಿಂದ ಬಹಳ ಭಕ್ತಿಯಿಂದ ಈ ಪೌರಾಣಿ ಕಥೆಗಳನ್ನು ಮನೆಯ ಹೆಂಗಸರು ಕೇಳುತ್ತಾರೆ.

ಸ್ತ್ರೀ ವಲೀಗಳು

ಕರ್ನಾಟಕದಲ್ಲಿ ಪುರುಷ ವಲೀಗಳಂತೆ ’ಸ್ತ್ರೀ ವಲೀ’ಗಳ ಗೋರಿಗಳಿವೆ. ತಿರುಚಿನಾಪಲ್ಲಿಯಲ್ಲಿ ಮಾಮಾಜಿಗ್ಮೀ, ಮುರುಗ್‌ಮೊಹಲ್ಲಾದಲ್ಲಿ ಅಮ್ಮಜಾನ್, ತುರ್‌ತ್ ತಾ, ತುರತ್ ಬೀಬಿ, ಬೆಂಗಳೂರಿನಲ್ಲಿ ಮಸ್ತಾನಿಮಾ ಹಾಗೂ ಸೈದಾನಿಮಾ, ಮೈಸೂರಿನಲ್ಲಿ ಸಐದಾನೀ ಬಿ, ಹಡಂಗೀಯಲ್ಲಿ ಜಮಲ್ ಬೀಬಿಮಾ, ಚಿಕ್ಕಹಡ್ರಂಗಿಯಲ್ಲಿ ಜಮಾಲ್ ಬೀಬಿಮಾಸಾಬ್, ಕುಡುಜಿಯಲ್ಲಿ ಅಮ್ಮಜಾನ್ ಹೀಗೆ ಅನೇಕ ಗೋರಿಗಳಿವೆ.

ಮಾಮಾಜಿಗ್ಮೀ, ಇಬರ ಬಗ್ಗೆ ಕಥೆ ಹೀಗಿದೆ.

ತಂಜಾವೂರಿನ ರಾಜನಿಗೆ ಮಕ್ಕಳಿರಲಿಲ್ಲವಂತೆ ಇದರಿಂದ ರಾಜನು ಬಹಳ ಚಿಂತೆಗೆ ಒಳಗಾದನು. ಒಂದು ದಿನ ರಾಜನ ಅರಮನೆಗೆ ’ತಬ್‌ರೇ ಆಲಂ ಬಾದಷಾ’ ಅಥವಾ ದಾದಾ ಹಯಾತ್ ಖಲಂದರ್‌ರವರು ಬಂದು ಚಿಂತೆಯ ಕಾರಣ ಕೇಳಿದರು. ’ತನಗೆ ಮಕ್ಕಳಿಲ್ಲದ ಬಗ್ಗೆ’ ರಾಜನು ಹೇಳಿ ನೊಂದುಕೊಂಡನು. ’ನಿನಗೆ ಮಕ್ಕಳಾದರೆ ಮೊದಲನೆಯ ಮಗುವನ್ನು ಅಲ್ಹಾನ ಹೆಸರಿನಲ್ಲಿ ಬಿಡುತ್ತೇನೆಂದು ಹೇಳಿಕೊಂಡರೆ ನಿನನಗೆ ಮಕ್ಕಳಾಗುತ್ತವೆ’ ಎಂದು ಹೇಳಿದರು. ರಾಜನು ಒಪ್ಪಿಕೊಂಡನು. ಒಂದು ವರ್ಷದೊಳಗೆ ಹೆಣ್ಣು ಮಗುವು ಜನಿಸಿತು. ಇವನು ಬಹಳ ಸಂತೋಷಗೊಂಡನು. ಆದರೆ ’ಮಗು’ವನ್ನು ಅಲ್ಹಾ ಹೆಸರಲ್ಲಿ ಬಿಡುವುದಕ್ಕೆ ಈಗ ಮನಸ್ಸಾಗಲಿಲ್ಲ. ಹೀಗಿರುವಾಗ ಒಂದು ದಿನ ಈ ಮಗುವು ಮಾಂಸದ ಮುದ್ದೆಯಾಗಿ ಬಿದ್ದಿತು. ಮಾಂಸದ ಮುದ್ದೆಯಾಗಿ ಬಿದ್ದ ತನ್ನ ಮಗುವನ್ನು ನೋಡಿ ರಾಜನು ಆತಂಕಕ್ಕೆ ಒಳಗಾದನು. ಈ ಮುದ್ದೆಯನ್ನೇ ಎತ್ತಿಕೊಂಡು ’ತಬ್‌ರೇ ಆಲಂ ಬಾದಷ’ರವರ ಹತ್ತಿರ ಕರೆದುಕೊಂಡು ಹೋದನು. ’ಮಕ್ಕಳಿಲ್ಲದ ತಾನು ಹೇಳಿದನ್ನು ಕಡೆಗಣಿಸಿ ದುರಾಸೆಗೆ ಒಳಗಾದೆ. ಹೇಗಾದರು ಮಾಡಿ ನನ್ನ ಮಗುವಿನ ಜೀವ ಉಳಿಸಿ’ ಎಂದು ಬೇಡಿಕೊಂಡನು. ದಾದಾ ಹಯಾತ್ ಖಲಂದರ್‌ರವರು ’ದುವಾ’ ಮಾಡಿದರು. ಮಾಂಸದ ಮುದ್ದೆಯಾಗಿದ್ದ ಮಗು ಜೀವಂತವಾಗಿ ಎದ್ದಿತು. ಈ ಪವಾಡವನನು ಕಣ್ಣಾರೇ ನೋಡಿದ ರಾಜನು ಮಗುವನ್ನು ಅಲ್ಹಾನ ಹೆಸರಲ್ಲಿ ಸಮರ್ಪಿಸಿ ಮಗುವನ್ನು ಬಿಟ್ಟು ಹೊರಟು ಹೋದನು.

ಅಂದಿನಿಂದ ಮಗುವನ್ನು ದಾದಾ ಹಯಾತ್ ಖಲಂದರ್‌ರವರೇ ಸಾಕಿದರು. ಮಗುವಿಗೆ ಮಿಣುಕು ಹುಳುಗಳನ್ನು ತೋರಿಸಿ ಆಟವಾಡಿಸುತ್ತಿದ್ದರು. ಆಟವಾಡುವಾಗ ಗುಂಪು ಗುಂಪಾಗಿ ಮಿಣುಕು ಹುಳುಗಳು ಬರುತ್ತಿದ್ದವಂತೆ. ಹೀಗಾಗಿ ಮಗುವಿನ ಹೆಸರು ’ಮಾಮಾಜಿಗ್ನೀ’ ಎಂದಾಯಿತು.

ಮಾಮಾಜಿಗ್ಮೀರವರು ದಾದಾ ಹಯಾತ್ ಖಲಂದರ್‌ರವರ ಜೊತೆಯಲ್ಲಿ ಬಾಬಾ ಬುಡೇನ್ಗಿರಿಯಲ್ಲಿ ನೆಲೆಸಲು ಪ್ರಾರಂಭಿಸಿದರು.

ದಾದಾ ಹಯಾತ್ ಖಲಂದರ್‌ರವರು ಗುಹೆಯ ಪಕ್ಕದಲ್ಲಿ ’ಸುಂದಲ್‌ಕಾ ಚಾಡಾ’ ಎಂಬ ಗುಹೆ ಇದೆ. ಪ್ರತಿದಿನ ಮಾಮಾಜಿಗ್ಮೀಯವರು ರೊಟ್ಟಿಗಳನ್ನು ಮಾಡಿ ಫಖಿರರಿಗೆ ಹಂಚು-ತ್ತಿದ್ದರಂತೆ. ಒಂದು ದಿನ ಒಬ್ಬ ಫಖೀರನು ರೊಟ್ಟಿ ತೆಗೆದುಕೊಳ್ಳುವಾಗ ಇವರ ಕೈಗಳ ಸೌಂದರ್ಯವನ್ನು ನೋಡಿ ಕೈಗಳನ್ನು ಹಿಡಿಕೊಂಡನಂತೆ. ಇವರು ಜೋರಾಗಿ ಕೈಗಳನ್ನು ಒದರಿದರಂತೆ. ಫಖೀರನು ದೂರದಲ್ಲಿ ಹೋಗಿ ಬಿದ್ದನಂತೆ. ಹೀಗೆ ಅನೇಕ ಐತಿಹ್ಯಗಳನ್ನು ಜನಪದರು ಹೇಳುತ್ತಾರೆ.

ಒಟ್ಟಿನಲ್ಲಿ ಬಾಬಾ ಬುಡೇನ್‌ಗಿರಿಯಲ್ಲಿ ಮಾಮಾಜಿಗ್ಮೀಯವರ ಪೀಠವಿದೆ. ಮದುವೆ ಯಾಗದ ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗಿ ಹರಕೆ ಹೊತ್ತರೆ ಬೇಗನೆ ’ಕಂಕಣ ಬಲ’ ಕೂಡಿಬರುತ್ತದೆಂದು ಹೇಳುತ್ತಾರೆ. ಈ ಹೇಳಿಕೆಗಳ ಬಗ್ಗೆ ನಂಬಿಕೆ ಇದ್ದವರು ಹರಕೆ ಹೊತ್ತು ತಮ್ಮ ಇಚ್ಛೆ ಕೈಗೂಡಿದ ಮೇಲೆ ಪೀಠದ ಹತ್ತಿರ ಹೋಗಿ ಅಲ್ಲೇ ಸಿಗುವ ಸೊಪ್ಪಿನಿಂದ ಪಲ್ಯ ಮಾಡಿ, ರೊಟ್ಟಿ ಮಾಡಿ, ವಲೀಗಳ ಹೆಸರಲ್ಲಿ ’ಫಾತೇಹಾ’ ಓದಿಸಿ ಹರಕೆ ಸಲ್ಲಿಸುತ್ತಾರೆ. ತಿರುಚಿನಾಪಲ್ಲಿಯಲ್ಲಿ ಇವರ ಗೋರಿ ಇದೆ.

ಜಮಾಲ್ಬೀ

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹಡ್ರಂಗಿ ಎಂಬ ಹಳ್ಳಿಯಲ್ಲಿ ’ಜಮಾಲ್‌ಬೀ’ ಎಂಬ ಸ್ತ್ರೀ ವಲೀಯ ಗೋರಿ ಇದೆ. ಮುಸ್ಲಿಮೇತರರು ಇದನ್ನು ಜಮಾಲ್ ಅಮ್ಮನ ಗೋರಿ ಎಂದು ಕರೆಯುತ್ತಾರೆ. ಇಲ್ಲಿ ಮುಸ್ಲಿಮರಿಗಿಂತ ಮುಸ್ಲಿಮೇತರರೆ ಅಧಿಕ ಸಂಖ್ಯೆಯಲ್ಲಿ ಒಂದು ಹರಕೆ ಸಲ್ಲಿಸುತ್ತಾರೆ. ಅಲ್ಲೇ ಮರದ ಕೆಳಗೆ ನಾಗರಹಾವು ವಾಸವಾಗಿದೆಯಂತೆ. ಇದು ಗೋರಿಯ ರಕ್ಷಣೆ ಮಾಡುತ್ತದೆಂದು ಹೇಳುತ್ತಾರೆ. ಆದುದರಿಂದ ಗೋರಿಯ ದರ್ಶನ ಪಡೆದವರು ಅಲ್ಲಿರುವ ಕಪ್ಪು ಕಲ್ಲಿನ ಮೇಲೆ ’ಹಾಲು ಮತ್ತು ಮೊಟ್ಟೆ ’ಹಾಕುತ್ತಾರೆ. ಮುಸ್ಲಿಮೇತರರ ಮನೆಯಿಂದ ಗಂಧ ಹೊರಡುತ್ತದೆಂದೂ ಸಹ ಹೇಳುತ್ತಾರೆ.

’ಜಮಾಲ್ ಬೀ’ರವರು ದಾದಾ ಹಯಾತ್ ಖಲಂದಾರ‍್ರವರ ಜೊತೆಯಲ್ಲಿ ಬಾಬ ಬುಡೇನ್‌ಗಿರಿಯಲ್ಲಿ ವಾಸವಾಗಿದ್ದರಂತೆ. ದುಷ್ಟರು ಅನೇಕ ಬಗೆಯ ತೊಂದರೆ ಕೊಟ್ಟಾಗ ದಾದಾ ಹಯಾತ್ ಖಲಂದರ್‌ರವರು ಗಿರಿಯ ಮೇಲೆ ನಿಂತು ದೂರಕ್ಕೆ ಕಲ್ಲು ಬಂಡೆಯನ್ನು ಎಸೆದರಂತೆ, ಕಲ್ಲು ಹಡ್ರಂಗಿಯಲ್ಲಿ ಬಿದ್ದಿತಂತೆ. ’ಈ ಕಲ್ಲು ಬಿದ್ದ ಸ್ಥಳಕ್ಕೆ ಹೋಗಿ ನೆಲೆಸುವಂತೆ’ ಜಮಾಲ್ ಬೀ ರವರಿಗೆ ಹೇಳಿ ಹಳುಹಿಸಿದರಂತೆ. ಅಂದಿನಿಂದ ಜಮಾಲ್ ಬೀ ರವರು ಹಡ್ರಂಗಿಯಲ್ಲಿ ನೆಲೆಸಿ, ವಲೀಗಳಾದರು ಎಂಬ ಕೆಲವು ಐತಿಹ್ಯಗಳಿವೆ. ಈ ವಲೀಗಳು ಮೈ ಮೇಲೆ ಬಂದ ಭೂತ, ಪಿಶಾಚಿ, ಗಾಳಿ, ಸೋಂಕು ಬಿಡಿಸುತ್ತಾರೆ ಹಾಗೂ ಅನೇಕ ಕಷ್ಟಗಳ ನಿವಾರಣೆ ಮಾಡುತ್ತಾರೆ ಎಂದು ಜನಪದರು ಹೇಳುತ್ತಾರೆ.

ಅಮ್ಮ ಜಾನ್

ಸುಮಾರು ೧೬೮೩ರಲ್ಲಿ ಔರಂಗಜೇಬನು ದಕ್ಷಿಣ ಭಾರತದ ಮೇಲೆ ದಂಡೆತ್ತಿ ಬಂದನು. ವಿಜಾಪುರದ ಆದಿಲ್‌ಷಾರವರ ವಂಶಸ್ಥರಾದ ಭಾವಜಾನ್‌ರವರು ತಮ್ಮಲ್ಲಿದ್ದ ಸಂಪತ್ತನ್ನು ಬಡಬಗ್ಗರಿಗೆ ದಾನ ಮಾಡಿ ಅಲ್ಹಾನ ಹೆಸರಲ್ಲಿ ಹೊರಟರಂತೆ. ಇಸ್ಲಾಂ ಪ್ರಚಾರ ಮಾಡುತ್ತಾ ಬೆಂಗಳೂರಿನ ಹತ್ತಿರವಿರುವ ಮುರುಗ್ ಮೊಹಲ್ಲಾಕ್ಕೆ ಬಂದು ಅಲ್ಹಾನ ಧ್ಯಾನದಲ್ಲಿ ನಿರತರಾದರಂತೆ. ’ಲತೀಫ್ ಷಾ ಅವ್‌ಲೀಯಾ’ ಎಂಬುವರ ಮಗಳಾದ ’ಸೈಯಾದ ಬೀಬಿ ಅಮ್ಮಜಾನ್’ ರವರನ್ನು ಮದುವೆಯಾದರಂತೆ. ಈ ದಂಪತಿಗಳು ಕಷ್ಟ ಎಂದು ಹೇಳಿಕೊಂಡು ಬಂದವರ ಕಷ್ಟಗಳನ್ನು ಪರಿಹರಿಸುತ್ತಿದ್ದರಂತೆ. ಈ ದಂಪತಿಗಳ ಗೋರಿಗಳು ಇಲ್ಲೆ ಇವೆ. ಸೈಯಾದ ಬೀಬಿರವರು ’ಅಮ್ಮಾಜಾನ್’ ಎಂಬ ಹೆಸರಲ್ಲಿ ಪ್ರಸಿದ್ಧಿಯಾಗಿದ್ದಾರೆ.

ಮುರುಗ್ ಮೊಹಲ್ಲಾದಲ್ಲೆ ತರುತ್ತಾ ತುರುತ್ ಬೀಬಿ ಎಂಬ ವಲೀಗಳು ಇದ್ದಾರೆ. ಈ ವಲೀಗಳು ಮೈಮೇಲೆ ಆವರಿಸಿರುವ ದುಷ್ಟ ಶಕ್ತಿಗಳನ್ನು ಹೋಗಲಾಡಿಸುತ್ತಾರೆ. ಇವರುಗಳ ಹೆಸರಲ್ಲಿ ಹರಕೆ ಹೊತ್ತು ಪ್ರಾರ್ಥಿಸಿಕೊಂಡರೆ ಕಷ್ಟಗಳು ನಿವಾರಣೆಯಾಗುತ್ತವೆಂದೂ ಕನಸ್ಸಿನಲ್ಲಿ ಬಂದು ಶಸ್ತ್ರ ಚಿಕಿತ್ಸೆ ಮಾಡಿ ಕಾಯಿಲೆ ಗುಣಪಡಿಸುತ್ತಾರೆಂದು ಜನಪದರು ನಂಬಿದ್ದಾರೆ.

ಮಸ್ತಾನಿಮಾ

ಬೆಂಗಳೂರಿನಲ್ಲಿ ’ಮಸ್ತಾನಿಮಾ’ ಎಂಬ ವಲೀಗಳ ಗೋರಿ ಇದೆ. ಈ ವಲೀಗಳು ೧೫೦ ಕೆ.ಜಿ ಕಬ್ಬಿಣವನ್ನು ಹೊತ್ತು ನಡೆಯುತ್ತಿದ್ದರಂತೆ. ಹೀಗೆ ವಲೀಗಳ ಬಗ್ಗೆ ಅನೇಕ ಐತಿಹ್ಯಗಳಿವೆ.

ಒಟ್ಟಿನಲ್ಲಿ ಗೋರಿಗಳ ಹತ್ತಿರ ಹಿಂದೂ, ಮುಸ್ಲಿಂ ಎನ್ನದೆ ಎಲ್ಲಾ ಜನಪದರು ಬಂದು ತಮ್ಮ ಕಷ್ಟಗಳ ನಿವಾರಣೆಗೆ ಹರಕೆ ಹೊರುವುದು, ಹರಕೆ ಸಲ್ಲಿಸುವುದು, ದರ್ಶನ ಪಡೆಯುವುದು ಇತ್ಯಾದಿ ನಡೆಸಿದಿಕೊಂಡು ಬರುತ್ತಿದ್ದಾರೆ. ಜನರು ನಂಬಲಿ, ನಂಬದೆ ಇರಲಿ ಇಲ್ಲಿ ಅನೇಕ ಪವಾಡಗಳು ಕಂಡು ಬರುತ್ತವೆ.

ಸಾಮಾನ್ಯವಾಗಿ ಗೋರಿಗಳ ಬಳಿ ’ಮುರುಷದ್ ಅಥವಾ ಫಖೀರರು’ ಮೇಲ್ವಿಚಾರಕ-ರಾಗಿ ಭಕ್ತಾದಿಗಳು ಸಲ್ಲಿಸುವ ಹರಕೆಗಳನ್ನು ಸ್ವೀಕರಿಸಿ ’ಫತೇಹಾ’ ಓದಿಕೊಡಲು ನಿರತರಾಗುವಂತೆ ಮಹಿಳೆಯರು ಸಹ ಗೋರಿಗಳ ಹತ್ತಿರ ’ಮುರ್‌ಷದ್‌ನೀಮಾ’ ಅಥವಾ ’ಮುಝವರ್‌ನೀ’ ಎಂಬ ಹೆಸರಿನಲ್ಲಿ ವಲೀಗಳ ಸೇವಾ ಕಾರ್ಯದಲ್ಲಿ ನಿರತರಾಗಿಬಿಡುತ್ತಾರೆ.

ಜನನ ಸಂಸ್ಕಾರಕ್ಕೆ ಸಂಬಂಧಿಸಿದ ಆಚರಣೆಗಳು:

ದುರ್‌ವೇಶಗಳಲ್ಲಿಯೂ ಸಹ ಚೊಚ್ಚಲು ಬಸುರಾದ ಹೆಣ್ಣನ್ನು ಏಳು ಅಥವಾ ಒಂಬತ್ತು ತಿಂಗಳಿಗೆ ತವರಿಗೆ ಕರೆತಲಾಗುವುದು. ಇದಕ್ಕೆ ಸಂಬಂಧಪಟ್ಟ ಅನೇಕ ಆಚರಣೆಗಳಿವೆ. ಬೀಗರ ಮನೆಯಿಂದ ಸೊಸೆಯನ್ನು ಕರೆದುಕೊಂಡು ಬರಬೇಕಾದರೆ ಮಗಳು ಬಯಸುವ ತಿಂಡಿ ತಿನಿಸುಗಳನ್ನು ತಿಳಿದು ಬಿರಯಾನಿ, ಕೋಳಿಸಾರು, ಕಿಚಡಿಅನ್ನ, ಉಪ್ಪಿಟ್ಟು, ಹುಳಿಯನ್ನ, ಮೊಸರನ್ನ, ಜಾಮೂನು ಇತ್ಯಾದಿ ಅಡುಗೆಗಳನ್ನು ತೆಗೆದುಕೊಂಡು, ನೆಂಟರಿಷ್ಟರೊಂದಿಗೆ ಹೋಗುತ್ತಾರೆ. ಬೀಗರ ಮನೆಯಲ್ಲಿಯೇ ಸೊಸೆಯನ್ನು ಕಳುಹಿಸಬೇಖಾಗಿರುವುದರಿಂದ ಮಾಂಸದ ಅಡುಗೆಯನ್ನು ತೆಗೆದು ಹೊಸ ಬಟ್ಟೆಯಲ್ಲಿ ಒಂದೂವರೆ ಗಂಡು ಹಾಕಿ ಕಟ್ಟುತ್ತಾರೆ. ಬಂದ ನೆಂಟರಿಷ್ಟರ ಊಟೋಪಚಾರಗಳು ಮುಗಿದ ಮೇಲೆ ಬಸುರಿಗೆ ಹಸಿರು ಸೀರೆ ಉಡಿಸಿ, ಆಕೆ ಬಯಸುವ ಒಡವೆಗಳನ್ನು ತೊಡಿಸಿ ಶೃಂಗರಿಸಿ ಕಾಬಾ ದಿಕ್ಕಿಗೆ ಮುಖ ಮಾಡಿ ’ಮಸ್ಕತ್’ ಮೇಲೆ ಕೂರಿಸುತ್ತಾರೆ. ತೆಗೆದಿಟ್ಟ ತಿನಿಸುಗಳ ಗಂಟನ್ನು ಈಕೆಯ ಕೈಯಿಂದ ’ಬಿಸ್ಮಿಲ್ಲಾ’ ಎಂಬು ಉಚ್ಛಾರಣೆಯೊಂದಿಗೆ ಬಿಡಿಸಿ ತಿನ್ನಲು ಹೇಳುತ್ತಾರೆ. ಮನೆಯ ಹಿರಿಸೊಸೆ, ಅತ್ತೆ ನಾದಿನಿಯರು ಸೇರಿ ಬಸುರಿಗೆ ಹೂವಿನ ಹಾರ ಹಾಕಿ, ಕೈಗಳಿಗೆ ’ಗಜರೇ’ ಸುತ್ತಿ ತಲೆ ತುಂಬ ಹೂ ಮುಡಿಸಿ, ಎಲೆ ಅಡಿಕೆ, ಬಾಳೆಹಣ್ಣಿನೊಂದಿಗೆ ಮಡಿಲು ತುಂಬುತ್ತಾರೆ. ಆಹ್ವಾನಿತ ಮುತ್ತೈದೆಯರೆಲ್ಲರು ಕುತ್ತಿಗೆಗೆ ಗಂಧ ಹಚ್ಚಿ ’ರಸಂ’ ಮಾಡಿದ ನಂತರ ಬಸುರಿಯು ತನ್ನ ಅತ್ತೆ, ಮಾವ ಹೀಗೆ ಹಿರಿಯರ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದಗಳನ್ನು ಪಡೆಯುತ್ತಾಳೆ. ನಂತರ ತವರು ಮನೆಗೆ ಕಳುಹಿಸಿಕೊಡಲಾಗುತ್ತದೆ.

ತವರು ಮನೆಗೆ ಬಂದ ಬಸುರಿಯನ್ನು ಹೊಸ್ತಿಲ ಹೊರಗೆ ನಿಲ್ಲಿಸಿ ಅರಿಶಿಣದ ನೀರು, ಎಲೆಗಳನ್ನು ನಿವಾಳಿಸಿ ’ಬಿಸ್ಮಿಲ್ಲಾ’ ಎಂಬ ಉಚ್ಛಾರಣೆಯೊಂದಿಗೆ ಬಲಗಾಲಿಡಿಸಿ ಮನೆಯೊಳಗೆ ಬರಮಾಡಿಕೊಳ್ಳಲಾಗುತ್ತದೆ. ಬಸುರಿಯ ಬಯಕೆ ಗಮನಿಸಿ ತಿಂಡಿ, ತಿನಿಸುಗಳನ್ನು ಮಾಡಿಕೊಡಲಾಗುತ್ತದೆ. ಆಕೆಯ ಆರೋಗ್ಯದ ಕಡೆ ಹೆಚ್ಚು ಮುತುವರ್ಜಿಯನ್ನು ವಹಿಸುತ್ತಾರೆ. ಒಳ್ಳೆಯ ಸುದ್ದಿ ಕೇಳುವಂತೆ, ಒಳ್ಳೆಯದನ್ನು ಆಲೋಚಿಸುವಂತೆ ’ಖುರಾನ್ ಗ್ರಂಥ’ ಓದುವಂತೆ ಹೇಳುತ್ತಾರೆ. ’ಹಕ್ಕಿ ಹಾರುವ ಹೊತ್ತು, ಮಗುವಿಗೆ ಹಕ್ಕಿ ಕಾಯಿಲೆ ಬರುತ್ತದೆ’ ಎಂದು ಸಂಜೆಯ ಸಮಯದಲ್ಲಿ ಸೂರಿನ ಕೆಳಗೆ ನಿಲ್ಲದಂತೆ ಎಚ್ಚರಿಸುತ್ತಾರೆ. ’ಮಗು ಅಂಗವಿಕಲ ವಾಗುತ್ತದೆ’ ಎಂದು ಸೂರ‍್ಯಗ್ರಹಣ, ಚಂದ್ರಗ್ರಹಣವಾದಾಗ ಮನೆಯ ಯಾವ ಕೆಲಸವನ್ನು ಮಾಡದಂತೆ ಆಕೆಗೆ ಹೇಳುತ್ತಾರೆ. ಆತ್ಮೀಯರು, ಸಂಬಂಧಿಕರು ಆಗಾಗ ಬಂದು ಆರೋಗ್ಯದ ಬಗ್ಗೆ ವಿಚಾರಿಸಿ, ಮಾತನಾಡಿಕೊಂಡು ಹೋಗುತ್ತಾರೆ.

ಹೀಗೆ ತವರಿನ ಆತ್ಮೀಯತೆಯಲ್ಲಿ ದಿನ ಕಳೆಯುವುದು ಅನುಭವಕ್ಕೆ ಬಾರದಿರಬಹುದು. ದಿನ ತುಂಬಿ ನೋವು ಕಾಣಿಸಿಕೊಂಡಾಗ, ಅನುಭವಸ್ಥ ಸೂಲಗಿತ್ತಿಯನ್ನು ಬರಮಾಡಿಕೊಳ್ಳುತ್ತಾರೆ. ಹೆರಿಗೆ ಸುಲಭವಾಗುತ್ತದೆಂದು ತೆಂಗಿನಕಾಯಿ, ಮೊಟ್ಟೆ, ಎಲೆಗಳನ್ನು ನಿವಾಳಿಸುತ್ತಾರೆ.

ಮಗು ಹುಟ್ಟಿದ ತಕ್ಷಣ ಮುರುಷದ್ ಅಥವಾ ಸೋದರಮಾವ ’ಅಜ್ಹಾ’ ಕೂಗಿ ಹಿರಿಯರು ಸೂಚಿಸಿದ ಹೆಸರನ್ನು ಮಗುವಿನ ಕಿವಿಯಲ್ಲಿ ಹೇಳಿದ ನಂತರ ಜೇನುತುಪ್ಪದೊಂದಿಗೆ ಉತ್ತುತ್ತೆಯನ್ನು ಕಲ್ಲಿನ ಮೇಲೆ ತೀಡಿ ತಿನ್ನಿಸುತ್ತಾರೆ. ಬೀಗರ ಮನೆಗೆ ಸುದ್ದಿ ಮುಟ್ಟಿಸಿದಾಗ ಬೀಗರ ಮನೆಯವರೆಲ್ಲರೂ ಬಂದು ಮಗುವನ್ನು ನೋಡಿ ಹಣವಿಡುತ್ತಾರೆ.

ಛಟ್ಟಿ

ಮಗು ಹುಟ್ಟಿದ ಆರು ಅಥವಾ ಹನ್ನೆರಡು ದಿವಸಕ್ಕೆ ಈ ಆಚರಣೆ ಮಾಡುತ್ತಾರೆ. ಬೀಗರ ಮನೆಯಿಂದ ಮಗುವಿಗೆ ಹೊಸ ಬಟ್ಟೆ, ಕಾಲುಗೆಜ್ಜೆ, ಉಂಗುರು, ಗಂಡು ಮಗುವಾಗಿದ್ದರೆ ’ಲಾಡು’ ಹೆಣ್ಣಾಗಿದ್ದರೆ ’ಜಹಾಂಗಿರ‍್’ ತರುತ್ತಾರೆ. ಮುಂಜಾವಿನಲ್ಲೆ ಮಗುವಿಗೆ ಸ್ನಾನ ಮಾಡಿಸಿ, ಸುಟ್ಟ ಬಜೆಯ ಕಪ್ಪಿನಲ್ಲಿ ಮಗುವಿನ ಹುಬ್ಬು ತೀಡಿ ಗಂಡನ ಮನೆಯಿಂದ ತಂದಿರುವ ಹೊಸ ಬಟ್ಟೆ ಉಡಿಸಿ, ಮುತ್ತೈದೆಯರು ಸೇರಿ ಬಾಣಂತಿಯ ಮಡಿಲಿಗೆ ಮಗುವನ್ನು ಹಾಕುವರು. ಸೊಂಟಕ್ಕೆ ಕರಿದಾರ ಕಟ್ಟಿ, ತೆಂಗಿನಕಾಯಿ ನಿವಾಳಿಸಿ ಒಡೆಯವರು, ಮಾಂಸದ ಸಾರು, ಬಿರಿಯಾನಿ, ತುಪ್ಪದ ಅನ್ನ, ಪಾಯಸ ಮಾಡಿ ಐದು ತಟ್ಟೆ ತೆಗೆದು ಹಂಚುವರು.

ಛಟ್ಟಿನ ದಿನದವರೆಗೆ ಮಗುವಿಗೆ ಹೊಸ ಬಟ್ಟೆ ಹಾಕುವುದಿಲ್ಲ. ಸಾಮಾನ್ಯವಾಗಿ ಹಳೆ ಬಟ್ಟೆಯನ್ನೇ ಹಾಕುವರು. ಆದುದರಿಂದ ಮಕ್ಕಳಿರುವ ಮನೆಗಳಿಂದ ಸಂಬಮಧಿಕರು ಮಗುವಿಗೆ ಹಳೆಬಟ್ಟೆ ತಂದು ಕೊಡುವರು.

ಛಿಲ್ಲಾ

ಮಗು ಹುಟ್ಟಿದ ನಲವತ್ತು ದಿವಸಕ್ಕೆ ’ಛಿಲ್ಲಾ’ ಎಂಬ ಆಚರಣೆ ಮಾಡುವರು. ಸೂತ್ಕದ ಮನೆ ಎಂದು ಸುಣ್ಣ ಬಣ್ಣ ಬಳಿದು ಮನೆ ಸ್ವಚ್ಛಗೊಳಿಸುವರು. ನಲವತ್ತು ದಿನದ ಬೆಳಿಗ್ಗೆ ಐದು ಗಂಟೆಯ ಸಮಯಕ್ಕೆ ಬಾಣಂತಿ ಹಾಗು ಮಗುವಿಗೆ ಸೂತ್ಕದ ಸ್ನಾನ ಮಾಡಿಸಲಾಗುವುದು. ಬಾಣಂತಿ ತವರು ಮನೆಯ ಉಡುಗೆ ಉಟ್ಟು, ಎರಡು ರಕಾತ್ ಶುಕ್ರೀಯಾ ನಮಾಜ್ ಮಾಡಿ, ಖುರಾನ್ ಗ್ರಂಥ ಓದಿ ಮೊದಲು ಮಗುವಿನ ಮುಖ ನೋಡುವಳು. ಮಗುವಿಗೂ ನಮಾಜ್ ಮಾಡಿಸುವರು. ’ಖೀರು’ ಮಾಡಿ ಪೈಗಂಬರ್‌ರವರ ಹೆಸರಲ್ಲಿ ಫಾತೇಹ ಓದಿಸಿ ಐದು ಮನೆಗಳಿಗೆ ಹಂಚುವರು.

ಛಿಲ್ಲಾದ ದಿನ ಬೀಗರ ಮನೆಯವರು ನೆಂಟರಿಷ್ಟರನ್ನು ಕರೆದುಕೊಂಡು ಬರುವರು. ಎಲ್ಲರ ಊಟೋಪಚಾರಗಳು ಮುಗಿದ ಮೇಲೆ ಸಂಜೆಯ ಹೊತ್ತಿಗೆ ಸರಿಯಾಗಿ ಗಂಡನ ಮನೆಯ ಉಡುಗೆ ಉಟ್ಟು, ಮಗುವನ್ನು ಮಡಲಲ್ಲಿ ಮಲಗಿಸಿಕೊಂಡು ಶಾಸ್ತ್ರಕ್ಕೆ ಕೂರುವಳು. ಜೊತೆಯಲ್ಲಿ ಗಂಡನೂ ಕೂರಬೇಕು. ಮಗುವಿಗೆ ತೊಟ್ಟಿಲು, ಹಾಸಿಗೆ, ಟ್ರಂಕು, ಮಿಳ್ಳೆ, ಒಳಲೆ, ಹರಿವಾಣ, ಹೊಸಬಟ್ಟೆ, ಮಗಳಿಗೆ ಉಂಗುರ, ಚೈನು, ಬಟ್ಟೆ, ಅಳಿಯನಿಗೆ ವಾಚು, ಉಂಗುರು, ದುಡ್ಡು ಇತ್ಯಾದಿ ನೀಡುವರು.

ಅತ್ತೆ, ನಾದಿನಿಯರು ಬಾಣಂತಿಗೆ ಹಾರ ಹಾಕಿ ಗಜ್‌ರೇ, ಚೊಂಡಾ ಮುಡಿಸುವರು. ಮಡಿಲ ಮೇಲೆ ಕೆಂಪು ಬಟ್ಟೆ ಹಾಸಿ ಎಲೆ, ಅಡಿಕೆ, ಬಾಳೆಹಣ್ಣುಗಳನ್ನಿಟ್ಟು ಮಡಿಲು ತುಂಬುವರು. ಆಹ್ವಾನಿತ ಮುತ್ತೈದೆಯರೆಲ್ಲರೂ ಬಾಣಂತಿ ಮತ್ತು ಆಕೆಯ ಗಂಡನಿಗೆ ಗಂಧ ಹಚ್ಚಿ, ತಮ್ಮ ಶಕ್ತ್ಯಾನುಸಾರ ಉಡುಗೊರೆ ನೀಡುವರು. ಹೂವಿನಿಂದ ಅಲಂಕರಿಸಿದ ತೊಟ್ಟಿಲಲ್ಲಿ ಮಗುವಿಗೆ ಹಾಕಿ ತೂಗುವರು. ಆ ಸಂದರ್ಭದಲ್ಲಿ ಮುತ್ತೈದೆಯರೆಲ್ಲಾ ಸೇರಿ ಹಾಡುವರು.

ಜುಲ್ಹೋ ಜುಲ್ಹೋ ರಾಜ್ ದುಲಾರೆ ನೀಂದ್ ಆಯಿ ಸೋಮೇರೆ ಪ್ಯಾರೆ ಆರೀ ನಿಂದಿಯಾ ಆರೀ ನಿಂದಿಯಾ ಜಾಗ್ ರಹೇಂಹೈ ಪ್ಯಾರೆಮೇರೆ ಖೇಲೋ ಕೂದೋ ಜೂಲ್ಹೋ ಜೂಲ್ಹೋ ಸದ್ಖೇ ತುಮ್ಹಾರೇ ಸದ್ಖೇ ತುಮ್ಹಾರೇ ಖುಷಿಸೇ ಜಾಗ್ ಉಟ್ಹೋ ತುಮ್ ಹಟ್ ನಾ ಕರೋ ತುಮ್ ಮೇರೆ ಪ್ಯಾರೆ ಹಜರತ್ ಅಲೀಕಿ ಉಮ್ಮರ‍್ ಬಡೀ ಹೋ ಕರ‍್ತೀ ದುವಾ ಹೋ ಬೇಟೆ ಮೇರೆ ಯೇ ಮೇರೆ ಪ್ಯಾರೇ, ಆಂಕೋಕೇ ತಾರೆ ತುಮ್‌ಪೇ ಸದ್‌ಖಾ ಚಾಂದ್‌ಸಿತಾರೇ  ತೂಗೋ ತುಗೋ ರಾಜನ ತೊಟ್ಟಿಲಲ್ಲಿ ನಿದ್ದೆ ಬಂದಿತು ಮಲಗು ನನ್ನ ಪ್ರಿಯ ಬಾರೇ ನಿದ್ದೆ ಬಾರೇ ನಿದ್ದೆ ಜಾಗರಣೆ ಮಾಡುತ್ತಿದ್ದಾನೆ ನನ್ನ ಪ್ರಿಯ ಆಡಿ ಕುಣಿದು ತೂಗೋ ತೂಗೋ ಸಮರ್ಪಣೆ ನಿನಗೆ ಸಮರ್ಪಣೆ ನಿನಗೆ ಸಂತೋಷದಿಂದ ಎಚ್ಚರವಾಗಿ ಎದ್ದೇಳು ಹಠಮಾಡಬೇಡ ನನ್ನ ಪ್ರಿಯಾ ಹಜರತ್ ಅಲೀಯವರ ವಯಸ್ಸು ದೊಡ್ಡದು ಶುಭ ಹಾರೈಕೆಗಳನ್ನು ನೀಡುತ್ತೇನೆ ಮಗು ನಿನಗೆ ಓ ನನ್ನ ಕಂದ ಕಣ್ಣಿನ ನಕ್ಷತ್ರ ನಿನ್ನ ಮೇಲೆ ಚಂದ್ರ, ನಕ್ಷತ್ರಗಳ ಸಮರ್ಪಣೆ

ಹೀಗೆ ರಾಜನ ತೊಟ್ಟಿಲಲ್ಲಿ ತೂಗಿ ಸಂತೋಷದಿಂದ ಮಲಗು ಕಂದ ಎಂಬ ತಾಯಿಯ ವಾತ್ಸಲ್ಯ ಭಾವನೆ ವಿಶಿಷ್ಟವಾಗಿದೆ.

ಯೇ ಚಾಂದ್ ಮೇರೆ ಸೋಜಾ ಜೋಜಾ ಮೈ ಸುಲಾಂತೀಂಹೂ ಜೂಲೇಮೇ ಜುಲಾಂತೀಂಹೂ ಅವ್‌ರ್‌ಇಸ್ ಮೇರೆ ಮುನ್ನೇಕು ಲೋರಿ ಮೈ ಸೂನಾಂತಿಂಹೂ ನನ್ಹೀ ಕಲಿಂಯಾ ಬೀ ಸೋಯೀ ಪ್ಯಾರಿ ಚೂಡಿಂಯಾಭೀ ಸೋಯೀ ಯೇ ಚಾಂದ್ ಮೇರೆ ಸೋಜಾ ಓ ನನ್ನ ಚಂದಿರಾ ಮಲಗು ಮಲಗು ನಾನು ಮಲಗಿಸುತ್ತೇನೆ ತೊಟ್ಟಿಲಲ್ಲಿ ತೂಗುತ್ತೇನೆ ನಂತರ ನನ್ನ ಕಂದನಿಗೆ ಜೋಗುಳ ಹಾಡುತ್ತೇನೆ ಚಿಕ್ಕ ಮೊಗ್ಗುಗಳು ಕೂಡ ಮಲಗಿದವು ಪ್ರೀತಿಯ ಹಕ್ಕಿಗಳು ಕೂಡ ಮಲಗಿದವು ಓ ನನ್ನ ಚಂದಿರಾ ಮಲಗು….ಮಲಗು

ಎಂದು ಮಗುವನ್ನು ಇಂದ್ರ, ಚಂದ್ರನಿಗೆ ಹೋಲಿಸಿ ಮಲಗಿಸುವ ತಾಯಿಯ ಈ ರೀತಿ ನಿಜಕ್ಕೂ ಆಶ್ಚರ್ಯವಾದದ್ದು

ಕಲ್ಮೇಕೀ ಸಹೇಲಿಂಯಾ ಆವೋ ಜೀಜೂಲೋ ಜೂಲ್ಹಾ ಜೂಲ್ಹಾನೇಮೇ ಮೈಪನ್ ಜೋಡೋ ಸಂದಖ್ ಅಪ್ನೆದಿಲ್ ಕಾ ಖೋಲೋ ಕಲ್ಮೇಕ ಕ್ಯಾ ಭೇದ್ ಹೈ ಚೋಲೋ ಅಸಲ್ ಇಮ್ಮಾನ್ ಜೂಲ್ಹಾಹೈವಲ್ಲಾ ಕಲ್ಮೇಕೀ ಸಹೇಲಿಂಯಾ ಆವೋ ಜಿ ಜುಲೋ ಕಲ್ಮಾದ ಗೆಳತಿಯರೆ ಬನ್ನಿ ತೂಗೋಣ ತೂಗೋಣ ತೊಟ್ಟಿಲು ತೂಗಲು ಅಹಂನ್ನು ಬಿಡಿ ಪೆಟ್ಟಿಗೆ ತನ್ನ ಹೃದಯವ ತೆರೆಯಿರಿ ಕಲ್ಮಾದ ಏನು ರಹಸ್ಯವಿದೆ ಎಂದು ಭೇದಿಸಿ ಸತ್ಯವಾಗಿ ಇಮ್ಮಾನ್ ತೊಟ್ಟಿಲಾಗಿದೆ ಅಲ್ಲಾ ಕಲ್ಮೆದ ಗೆಳತಿಯರೇ ಬನ್ನಿ ತೂಗೋಣ

ಹೀಗೆ ಹಾಡುವಾಗ ಹೆಣ್ಣು ಮಗಳ ಹೃದಯವಂತಿಕೆ, ಕಲ್ಪನಾ ಸಾಮ್ರಾಜ್ಯದಲ್ಲಿ ವಿಹರಿಸುವ ಪರಿ, ಧಾರ್ಮಿಕ ಭಾವನೆಯೊಂದಿಗೆ ಮಗುವಿನ ಯಶಸ್ಸನ್ನು ಬಯಸುವ ಈ ಗೀತೆಗಳು ಬಹಳ ವಿಶಿಷ್ಟವಾಗಿದೆ.

ಶಾಸ್ತ್ರ ಮುಗಿದ ಮೇಲೆ ಬಾಣಂತಿ ಹಿರಿಯರ ಪಾದ ಮುಟ್ಟಿ ನಮಸ್ಕರಿಸಿ ಶುಭ ಹಾರೈಕೆಯನ್ನು ಪಡೆಯುವಳು. ಬೀಗರ ಮನೆಯವರು ನಲವತ್ತು ದಿನದ ’ಛಿಲ್ಲಾ’ವಾದ ನಂತರ ಬಾಣಂತಿ ಮತ್ತು ಮಗುವನ್ನು ಕರೆದುಕೊಂಡು ಹೋಗುತ್ತಾರೆ ಅಥವಾ ಮೂರು, ನಾಲ್ಕು ತಿಂಗಳಿಗೆ ಕರೆದುಕೊಂಡು ಹೋಗುತ್ತಾರೆ. ಕರೆದುಕೊಂಡು ಹೋದ ದಿನ ಹೊಸ್ತಿಲ ಹೊರಗೆ ನಿಲ್ಲಿ ಹಳದಿ ಮಿಶ್ರಿತ ನೀರು, ಮೊಟ್ಟೆ, ತೆಂಗಿನಕಾಯಿ ನಿವಾಳಿಸಿ ಮೊದಲು ಬಲಗಾಲನ್ನಿಟ್ಟು ಒಳಗೆ ಬರುವಂತೆ ಹೇಳಿ ಬರಮಾಡಿಕೊಳ್ಳುವರು.

ಮಗುವಿಗೆ ನಾಲ್ಕು ತಿಂಗಳು ತುಂಬುವಂತಹ ಸಂದರ್ಭದಲ್ಲಿ ಮಗುವಿನ ಸೋದರಮಾವನು ಮಗುವಿಗೆ ಹೊಸಬಟ್ಟೆಯನ್ನು ತಂದು, ಹಾಲಿನಿಂದ ಮಾಡಿದ ಸಿಹಿಯನ್ನು ಬೆಳ್ಳಿ ಬಟ್ಟಲಲ್ಲಿ ತೆಗೆದುಕೊಂಡು ’ಬಿಸ್ಮಿಲ್ಲಾ’ ಎಂಬ ಉಚ್ಛಾರಣೆಯೊಂದಿಗೆ ಚಮಚದಲ್ಲಿ ಮೂರು ಬಾರಿ ತಿನ್ನಿಸುವನು.

ಮಗು ಮಕ್ಕಡೆಯಾದಾಗ ಮತ್ತು ಹೊಸ್ತಿಲು ದಾಟಿದಾಗ, ಹೊಸಬಟ್ಟೆ ಉಡಿಸಿ ಎರಡು ಜೊತೆ ತೆಂಗಿನಕಾಯಿಯನ್ನು ನಿವಾಳಿಸಿ ಒಡೆದು, ತೆಂಗಿನ ಚೂರನ್ನು ಬೆಲ್ಲದೊಂದಿಗೆ ಹಂಚವರು.

ಹೆಣ್ಣು ಮಗುವಾಗಲಿ ಅಥವಾ ಗಂಡು ಮಗುವಾಗಲಿ, ಮಗುವಿಗೆ ನಾಲ್ಕು ವರ್ಷ, ನಾಲ್ಕು ತಿಂಗಳು, ನಾಲ್ಕು ದಿನ ತುಂಬಿದಾಗ ’ಮಕ್‌ತಬ್’ ಎಂಬ ಆಚರಣೆ ಮಾಡುವರು. ಮುರುಷದ್‌ರವರನ್ನು ಕರೆಯಿಸಿ ’ಖುರಾನಿನ ಇಕ್‌ರಾ ಬಿಸ್ಮೀಕಾ’ ಸೂರ ಓದಿಸಿ ಖೀರು ಮಾಡಿ ಹಂಚುವರು. ಇದಾದ ನಂತರ ಮಕ್ಕಳಿಗೆ ’ಖುರಾನ್ ಪಠಣ, ನಮಾಜ್, ಉಪವಾಸ’ ಇತ್ಯಾದಿ ಧಾರ್ಮಿಕ ವಿಧಿವಿಧಾನಗಳನ್ನು ಕಲಿಸಲಾಗುವುದು.