ದುಲೀಪ್ ಸಿಂಗ್ಭಾರತದ ಪ್ರಸಿದ್ಧ ಕ್ರಿಕೆಟ್ ಆಟಗಾರ. ಅವರ ದೊಡ್ಡಪ್ಪ ರಣಜಿಯವರಂತೆ ಇಂಗ್ಲಿಷರಿಂದ ಭಾರತಕ್ಕೆ ಬಂದ ಆ ಆಟದಲ್ಲಿ ಇಂಗ್ಲೆಂಡಿನಲ್ಲೆ ಖ್ಯಾತಿ ಗಳಿಸಿದರು. ಭಾರತದಲ್ಲಿ ಹಲವರು ಕ್ರಿಕೆಟ್ ಆಟಗಾರರಿಗೆ ಶಿಕ್ಷಣ ನೀಡಿದರು. ಆಸ್ಟ್ರೇಲಿಯದಲ್ಲಿ ಭಾರತದ ಹೈಕಮೀಷನರ್ ಆಗಿ ಸೇವೆ ಸಲ್ಲಿಸಿದರು.

ದುಲೀಪ್ ಸಿಂಗ್

ಕ್ರಿಕೆಟ್ ಜನಪ್ರಿಯ ಆಟ. ಜಗತ್ತಿನಲ್ಲಿ ಕ್ರಿಕೆಟ್ ಇರುವವರೆಗೆ ರಣಜಿ ಮತ್ತು ದುಲೀಪ್ ಸಿಂಗಜಿಯವರು ಹೆಸರುಗಳು ಜೀವಂತವಾಗಿರುತ್ತವೆ.

ರಣಜಿ ಮನೆತನ

ಇಬ್ಬರೂ ರಜಪೂತ ಮನೆತನದವರು. ಮಹಾರಾಷ್ಟ್ರದಲ್ಲಿರುವ ನವಾನಗರ ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಒಂದು ಪ್ರತ್ಯೇಕ ಸಂಸ್ಥಾನವಾಗಿತ್ತು. ಜಾಮ್‌ನಗರ ಅದರ ರಾಜಧಾನಿ. ೧೯೦೭ರಲ್ಲಿ ಆಗಲೇ ಪ್ರಸಿದ್ಧ ಕ್ರಿಕೆಟ್ ಆಟಗಾರರಾಗಿದ್ದ ರಣಜಿ ನವಾನಗರದಲ್ಲಿ ಜಾಮ್ ಸಾಹೇಬರಾದರು. ಅದಕ್ಕೆ ಮೊದಲು ಅವರೆಲ್ಲ ಇದ್ದುದು ಜಾಮ್ ನಗರದ ಸಮೀಪ ಒಂದು ಹಳ್ಳಿಯಲ್ಲಿ. ಆ ಊರಿನ ಹೆಸರು ಸರೋದಾರ್. ಜವಾನ್ ಸಿಂಗ್ ಜಡೇಜಾ ರಣಜಿಯವರ ತಮ್ಮ. ಜವಾನ್ ಸಿಂಗ್‌ರ ನಾಲ್ಕನೇ ಮಗ ದುಲೀಪ್ ಸಿಂಗ್. ೧೯೦೫ರ ಜೂನ್ ೧೩ ರಂದು ದುಲೀಪ್ ಅವರು ಹುಟ್ಟಿದರು. ರಣಜಿ ಜಾಮ್ ಸಾಹೇಬರಾದ ನಂತರ ಅವರ ಪರವಾರದವರೆಲ್ಲ ರಾಜಧಾನಿ ಯಲ್ಲೇ ವಾಸಿಸುತ್ತಿದ್ದರು. ದುಲೀಪ್ ಅವರ ಮೂವರು ಹಿರಿಯಸಹೋದರರು ಶಿಕ್ಷಣಕ್ಕಾಗಿ ಬೋರ್ಡಿಂಗ್ ಶಾಲೆಗೆ ಸೇರಿದರು. ಆಗಿನ್ನೂ ದುಲೀಪರಿಗೆ ನಾಲ್ಕು ವರ್ಷ ತುಂಬಿರಲಿಲ್ಲ. ಆಗಲೇ ಮನೆಯಲ್ಲಿ ಬ್ಯಾಟ್ ಹಿಡಿದು ಶಾಲೆಯಿಂದ ಅಣ್ಣಂದಿರು ಬರುವುದನ್ನೇ ಕಾಯುತ್ತಿದ್ದರು. ಬೌಲ್ ಮಾಡುವಂತೆ ಅವರು ಬಂದ ಕೂಡಲೇ ಅಣ್ಣಂದಿರನ್ನು ಕಾಡಿಸುತ್ತಿದ್ದರು.

ದುಲೀಪ್ ಕ್ರಿಕೆಟ್‌ನ ಉನ್ನತ ಹಂತಕ್ಕೆ ಏರಿದರು. ಅವರು ಆ ಮಟ್ಟ ಮುಟ್ಟಲು ಕಾರಣರಾದವರು ಅವರ ದೊಡ್ಡಪ್ಪ ರಣಜಿ. ಇಂಗ್ಲೆಂಡ್‌ನ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ ಮತ್ತು ಇಂಗ್ಲಿಷ್ ಕೌಂಟಿಯೊಂದರ ತಂಡದ ಕ್ಯಾಪ್ಟನ್ ಆದ ಮೊದಲ ಭಾರತೀಯ ರಣಜಿ ತಮ್ಮ ತಮ್ಮನ ಮಗ ದುಲೀಪ್ ಉತ್ತಮ ಆಟಗಾರನಾಗುವನೆಂಬ ಭವಿಷ್ಯ ಕಂಡಿದ್ದರು.

ದುಲೀಪರ ಬಾಲ್ಯ ಶಿಕ್ಷಣ ಭಾರತದಲ್ಲೇ ನಡೆಯಿತು. ೧೯೧೪ರ ಜುಲೈನಲ್ಲಿ ರಾಜಕೋಟದ ಪಬ್ಲಿಕ್ ಶಾಲೆ ರಾಜ್‌ಕುಮಾರ್ ಕಾಲೇಜಿಗೆ ಸೇರಿದರು. ಅವರ ಆಟ ಮತ್ತು ಪಾಠಗಳೆರಡೂ ಒಂದೇ ದೋಣಿಯಲ್ಲಿ ಸಾಗಿದುವು. ಆ ಕಾಲೇಜಿನ ಹಿರಿಯ ಆಟಗಾರರೆಲ್ಲ ಭಾಗವಹಿಸಿದ್ದ ಉತ್ತರ ಮತ್ತು ದಕ್ಷಿಮ ವಿಭಾಗ ತಂಡಗಳ ನಡುವೆ ನಡೆದ ಪಂದ್ಯವೊಂದರಲ್ಲಿ ದುಲೀಪ್ ತಮ್ಮ ಕ್ರಿಕೆಟ್ ಜೀವನದ ಮೊದಲ ಸೆಂಚುರಿ ಬಾರಿಸಿದರು. ಆಗ ಅವರ ವಯಸ್ಸು ಕೇವಲ ಹದಿಮೂರು.

ಆಟದಲ್ಲಷ್ಟೇ ಅಲ್ಲ; ಪಾಠದಲ್ಲೂ ಅವರು ಯಾರಿಗೂ ಹಿಂದೆ ಬಿದ್ದಿರಲಿಲ್ಲ. ಮೂರು, ನಾಲ್ಕು, ಐದು ಮತ್ತು ಆರನೇ ತರಗತಿಗಳ ಅಂತಿಮ ಪರೀಕ್ಷೆಗಳಲ್ಲಿ ಮೊದಲ ಸ್ಥಾನ ಗಳಿಸಿದರು. ಅತ್ಯುತ್ತಮ ವಿದ್ಯಾರ್ಥಿಗೆ ನೀಡಲಾಗುತ್ತಿದ್ದ ವಜ್ರಮಹೋತ್ಸವ ಪ್ರಶಸ್ತಿಯನ್ನು ಅವರು ಪಡೆದರು.

ಇಂಗ್ಲೆಂಡಿನಲ್ಲಿ ಜನಪ್ರಿಯತೆ

ಆಗಿನ ಕಾಲದಲ್ಲಿ ರಾಜಮನೆತನದವರು ಮತ್ತು ಶ್ರೀಮಂತರು ತಮ್ಮ ಮಕ್ಕಳನ್ನು ಹೆಚ್ಚಿನ ವ್ಯಾಸಂಗಕ್ಕೆ ವಿದೇಶಗಳಿಗೆ ಕಳುಹಿಸುವುದು ರೂಢಿಯಾಗಿತ್ತು. ರಾಜಕುಮಾರ ದುಲೀಪ್‌ಸಿಂಗ್ ಹೆಚ್ಚಿನ ವ್ಯಾಸಂಗಕ್ಕಾಗಿ ೧೯೧೯ನೇ ಏಪ್ರಿಲ್‌ನಲ್ಲಿ ಇಂಗ್ಲೆಂಡಿಗೆ ತೆರಳಿದರು.

ಹದಿನೈದು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿದ್ದ ಅವರು ಓದಿಗಿಂತ ಕ್ರಿಕೆಟ್‌ನಲ್ಲಿ ಪ್ರಖ್ಯಾತರಾದರು. ತಮ್ಮ ಆಕರ್ಷಕ ಆಟದಿಂದ ಮಾತ್ರವಲ್ಲ, ನಯ ವಿನಯಗಳ ಸಾಕಾರ ಮೂತಿ೪ಯಾಗಿದ್ದ ಅವರು ತಮ್ಮ ಉತ್ತಮ ಗುಣ ನಡತೆಯಿಂದ ಇಂಗ್ಲಿಷ್ ಜನರ ಮನಸ್ಸನ್ನು ಸೂರೆಗೊಂಡರು.

ಇಂಗ್ಲೆಂಡ್ ಕ್ರಿಕೆಟ್‌ನಲ್ಲಿ ಅವರ ಸಾಧನೆ ಅದ್ಭುತವಾದುದು. ಆ ನೆಲದಲ್ಲಿ ಅವರು ಸುಮಾರು ೨೫೦೦ ರನ್ ಗಳನ್ನು ಹೊಡೆದರು. ಅದರಲ್ಲಿ ೪೯ ಸೆಂಚುರಿಗಳು. ಒಟ್ಟು ೨೫೨ ಕ್ಯಾಚ್‌ಗಳನ್ನು ಹಿಡಿದರು. ಅವರ ಬ್ಯಾಟಿಂಗ್ ಸರಾಸರಿ ೪೯.೬೪.

ಆದರೆ ಅವರು ಕ್ರಿಕೆಟಿನ ಉಚ್ಛ್ರಾಯ ಸ್ಥಿತಿಗೆ ಏರುತ್ತಿದ್ದಂತೆ ಶ್ವಾಸಕೋಸದ ಕಾಯಿಲೆಗೆ ಒಳಗಾದರು. ಆಡಲು ಅಶಕ್ತರಾದರು. ಇಪ್ಪತ್ತೇಳರ ಹರೆಯದಲ್ಲೇ ಕ್ರಿಕೆಟ್‌ನಿಂದ ನಿವೃತ್ತಿಯಾದರು.

ಇಂಗ್ಲೆಂಡಿನಲ್ಲಿ ವಿದ್ಯಾಬ್ಯಾಸ

ಲಂಡನ್‌ನ ಸೆಂಟ್‌ಫೇತ್ಸ್ ಶಾಲೆಯಲ್ಲಿ ದುಲೀಪ್‌ಗೆ ಪೂರ್ವಭಾವಿ ಸಿದ್ಧತಾ ಶಿಕ್ಷಣ ದೊರೆಯಿತು. ಅದರ ಅವಧಿ ಮೂರುವರ್ಷ. ಶಾಲಾತಂಡದ ಆಟಗಾರನಾಗಿ ಹಲವು ಸೆಂಚುರಿಗಳನ್ನು ಬಾರಿಸಿದರು. ಮಧ್ಯಮ ವೇಗದ ಬೌಲರ್ ಆಗಿ ಸಾಕಷ್ಟು ವಿಕೆಟ್‌ಗಳನ್ನೂ ಪಡೆದರು. ಶಾಲಾ ತಂಡ ಆ ಅವಧಿಯಲ್ಲಿ ಆಡಿದ ಬಹುತೇಕ ಪಂದ್ಯಗಳಲ್ಲಿ ಜಯಗಳಿಸಿತು. ಯಾವ ಪಂದ್ಯದಲ್ಲೂ ಸೋಲಲಿಲ್ಲ.

ದುಲೀಪರು ೧೯೨೧ ರಲ್ಲಿ ಚೆಲ್ಟನ್‌ಹ್ಯಾಮ್ ಕಾಲೇಜಿಗೆ ಸೇರಿದರು.

ಇಂಗ್ಲೆಂಡಿನಲ್ಲಿ ಕ್ರಿಕೇಟ್ ಆಟ ಪ್ರಾರಂಭ

ಸೇರಿದ ವರ್ಷವೇ ಶಾಲಾತಂಡಕ್ಕೆ ಬ್ಯಾಟ್ ಹಿಡಿದರು. ಬ್ಯಾಟಿಂಗ್ ಸರಾಸರಿಯಲ್ಲಿ ಅಗ್ರಸ್ಥಾನ ಗಳಿಸಿದರು.

೧೯೨೨ರಲ್ಲಿ ಇಂಗ್ಲೆಂಡಿನಲ್ಲಿ ಭಾರೀ ಮಳೆ ಮತ್ತು ಚಳಿಯಿಂದಾಗಿ ಕ್ರಿಕೆಟ್ ಪಂದ್ಯಗಳು ಹೆಚ್ಚಾಗಿ ನಡೆಯಲಿಲ್ಲ. ದುಲೀಪರ ಆಟದಲ್ಲಿ ಅಷ್ಟೇನೂ ಸಾಧನೆಗಳು ಕಂಡು ಬರಲಿಲ್ಲ. ಕ್ಲಿಫ್ಟನ್ ಕಾಲೇಜು ವಿರುದ್ಧ ಆಡಿದ ಒಂದು ಪಂದ್ಯದಲ್ಲಿ ಮಾತ್ರ ೭೨ ರನ್‌ಗೆ ೧೧ ವಿಕೆಟ್‌ಗಳನ್ನು ಪಡೆದರು. ಅದು ಅವರ ಆ ವರ್ಷದ ಉತ್ತಮ ದಾಖಲೆ. ಕ್ರಿಕೆಟ್ ಜೀವನದ ಬೌಲಿಂಗ್‌ನಲ್ಲೂ ಉತ್ತಮ ಸಾಧನೆ. ಚೆಲ್ಟನ್‌ಹ್ಯಾಮ್ ಕಾಲೇಜು ತಂಡದ ಬೌಲಿಂಗ್ ಸರಾಸರಿಯಲ್ಲಿ ಅವರಿಗೆ ಅಗ್ರಸ್ಥಾನ.

೧೯೨೨ರಲ್ಲಿ ದುಲೀಪ್ ಅದೇ ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದಾಗ ಕಾಲೇಜು ತಂಡದ ಕ್ಯಾಪ್ಟನ್ ಆದರು. ಇಂಗ್ಲಿಷ್ ಪಬ್ಲಿಕ್ ಶಾಲಾತಂಡವೊಂದರ ಕ್ಯಾಪ್ಟನ್ ಕಿರೀಟ ಧರಿಸಿದ ಮೊದಲ ಭಾರತೀಯರೆನಿಸಿದರು.

ತಂಡದ ಕ್ಯಾಪ್ಟನ್, ಬ್ಯಾಟ್ಸ್‌ಮನ್, ಬೌಲರ್ -ಈ ಮೂರು ಜವಾಬ್ದಾರಿ ಹೊತ್ತ ದುಲೀಪ್ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದರು. ‘‘ಇಂಗ್ಲೆಂಡಿನ ವರ್ಷದ ಉತ್ತಮ ಶಾಲಾ ಕ್ರಿಕೆಟ್‌ಪಟು’’ ಎಂದು ಅನೇಕ ಪತ್ರಿಕೆಗಳು ಶ್ಲಾಘಿಸಿದವು.

ಸೇನಾತಂಡವೊಂದರ ವಿರುದ್ಧದ ಪಂದ್ಯಕ್ಕೆ ಪಬ್ಲಿಕ್ ಶಾಲೆಗಳ ಇಲೆವೆನ್ ತಂಡಕ್ಕೆ ದುಲೀಪರು ಆಯ್ಕೆಯಾದರು. ಅದು ಅವರ ಶಾಲಾ ಜೀವನದ ಕೊನೇ ಪಂದ್ಯ. ಮೂರು ವರ್ಷಗಳ ಅವಧಿಯಲ್ಲಿ ದುಲೀಪ್ ಪ್ರತಿನಿಧಿಸಿದ ಚೆಲ್ಟನ್ ಹ್ಯಾಮ್ ತಂಡ ಆಡಿದ ಪಂದ್ಯಗಳಲ್ಲಿ ಒಂದರಲ್ಲಿ  ಮಾತ್ರ ಸೋತಿತ್ತು. ದುಲೀಪರು ಆ ವರ್ಷ ಬ್ಯಾಟಿಂಗ್ ಸರಾಸರಿಯಲ್ಲಿ ಅಗ್ರಸ್ಥಾನ (೫೬-೩೬) ಗಳಿಸಿದರು. ಶಾಲಾ ಆಟಗಾರನಾಗಿ ಆಡಿದ ೩೪ ಇನಿಂಗ್ಸ್‌ನಲ್ಲಿ ಹೊಡೆದ ರನ್‌ಗಳ ಮೊತ್ತ ೧೧೧೯. ಎರಡು ಸೆಂಚುರಿಗಳು. ಅತಿ ಹೆಚ್ಚು ಸ್ಕೋರು ೧೬೨. ಬ್ಯಾಟಿಂಗ್ ಸರಾಸರಿ ೩೭.೩೦

ರಣಜಿಯವರ ಸಲಹೆಯಂತೆ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಲು ದುಲೀಪ್ ಒಂದು ವರ್ಷ ತಡಮಾಡಿದರು. ಅಂದರೆ ೧೯೨೪ನೇ ವರ್ಷ ಸಂಪೂರ್ಣ ಬಿಡುವು ದೊರೆಯಿತು. ಯಾವುದಾದರೊಂದು ಕೌಂಟಿ ಕ್ಲಬ್‌ಗ್ ಸೇರುವ ಇಚ್ಛೆಯನ್ನು ದುಲೀಪ್ ವ್ಯಕ್ತಪಡಿಸಿದರು. ಆ ಕ್ಲಬ್‌ನ ಕ್ಯಾಪ್ಟನ್ ಎ.ಇ.ಆರ್.ಗಿಲಗನ್ ಅವರನ್ನು ರಣಜಿ ಸ್ಟೇನ್ಸ್‌ನಲ್ಲಿ ತಮ್ಮ ನಿವಾಸಕ್ಕೆ ಬರಮಾಡಿಕೊಂಡು ದುಲೀಪರ ಕ್ರಿಕೆಟ್ ಬಗ್ಗೆ ಚರ್ಚಿಸಿದರು. ‘‘ಸಸೆಕ್ಸ್ ತುಂಬು ಹೃದಯದಿಂದ ದುಲೀಪರನ್ನು ಸ್ವಾಗತಿಸುವುದು’’ ಎಂದು ಗಿಲಗನ್ ಹೇಳಿದರು.

ಸಸೆಕ್ಸ್ ಆಟಗಾರನಾಗಿ ದುಲೀಪ್ ತಮ್ಮ ಮೊದಲ ಪಂದ್ಯವನ್ನು ಕೇಂಬ್ರಿಜ್ ವಿಶ್ವವಿದ್ಯಾಲಯ ತಂಡದ ವಿರುದ್ಧ ಆಡಿದರು. ಎರಡೂ ಇನಿಂಗ್ಸ್‌ಗಳಲ್ಲಿ ವಿಫಲರಾದರು. ಸಸೆಕ್ಸ್ ಸಮಿತಿಗೆ ಅಸಮಾಧಾನವಾಗಿತ್ತು. ಕೆಲವು ದಿನಗಳಲ್ಲಿ ಅದೇ ವಿಶ್ವವಿದ್ಯಾಲಯ ತಂಡದ ವಿರುದ್ಧ ಎಂ.ಸಿ.ಸಿ. ಆಟಗಾರರಾಗಿ ಆಡಿದರು. ಮೊದಲ ಇನಿಂಗ್ಸ್‌ನಲ್ಲಿ ಕಳಂಕ ರಹಿತವಾಗಿ ಆಡಿ೯೦ ನಿಮಿಷಗಳಲ್ಲಿ ಸೆಂಚುರಿ ಬಾರಿಸಿದರು. ಆ ಸೆಂಚುರಿ ಅವರಿಗೆ ಕ್ರೀಡಾಚೇತನವನ್ನು ಚಿಮ್ಮಿಸಿತು. ಏಕೆಂದರೆ ಮೊದಲ ದರ್ಜೆ ಕ್ರಿಕೆಟ್‌ನಲ್ಲಿ ಅದು ಅವರ ಮೊದಲ ಸಂಚುರಿ. ಆ ಇನಿಂಗ್ಸ್‌ನಲ್ಲೂ ಉತ್ತಮವಾಗಿ ಆಡಿದರು. ಸಸೆಕ್ಸ್ ಸಮಿತಿಯ ಅಸಮಾಧಾನ ದೂರವಾಯಿತು. ಕ್ರಿಕೆಟ್ ವಿಮರ್ಶಕರು ‘ಅವರ ಪ್ರಾಯದಲ್ಲಿ ದುಲೀಪ್ ರಣಜಿಗಿಂತ ಉತ್ತಮ ಆಟಗಾರ’’ ಎಂದು ವಿಶ್ಲೇಷಿಸಿದರು. ವರ್ಷದ ಕೊನೇಭಾಗದಲ್ಲಿ ಬಿಡುವಿಲ್ಲದೆ ಕ್ರಿಕೆಟ್ ಕಾರ್ಯಕ್ರಮಕ್ಕೆ ವಿರಾಮ ಹಾಕಿದರು. ಆಟದಷ್ಟೇ ವ್ಯಾಸಂಗವೂ ಮುಖ್ಯವಾಗಿತ್ತು. ಕೇಂಬ್ರಿಜ್ ವಿಶ್ವವಿದ್ಯಾನಿಲ ಯಕ್ಕೆ ಸೇರಿದ ಕ್ಲೇರ್ ಕಾಲೇಜು ವಿದ್ಯಾರ್ಥಿಯಾದರು.

ಕೇಂಬ್ರಿಜ್ ವಿದ್ಯಾರ್ಥಿಯಾಗಿ

೧೯೨೫ ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿ ಪದವಿ ವ್ಯಾಸಂಗಕ್ಕೆ ದುಲೀಪರು ಪದಾರ್ಪಣ ಮಾಡಿದರು. ವಾರ್ಸಿಟಿ ತಂಡಕ್ಕೆ ಆರಂಭದ ವರ್ಷವೇ ಅವರನ್ನು ಸೇರಿಸಿಕೊಳ್ಳಬೇಕೆಂದು ಆಯ್ಕೆ ಸಮಿತಿಯವರ ಇಚ್ಛೆ. ನಿಯಮದಂತೆ ಮೊದಲು ‘ಹೊಸಬರ ಪಂದ್ಯ’ ದಲ್ಲಿ ಆಡಿ ಅರ್ಹತೆಗಳಿಸಬೇಕು. ಆಡಿದ ಆ ಮೊದಲ ಪಂದ್ಯದಲ್ಲೇ ಬಿರುಸಿನ ೯೯ ರನ್‌ಗಳನ್ನು ಬಾರಿಸಿದರು. ವಾರ್ಸಿಟಿ ತಂಡದಲ್ಲಿ ನಿರಾಯಾಸವಾಗಿ ಸ್ಥಾನ ದೊರೆಯಿತು.

ವಾರ್ಸಿಟಿ ಆಟಗಾರನಾಗಿ ತಮ್ಮ ಮೂರನೇ ಪಂದ್ಯದಲ್ಲಿ ದುಲೀಪ್ ಯಾರ್ಕ್‌ಷೈರ್ ವಿರುದ್ಧ ಔಟಾಗದೆ ೧೫೧ ರನ್‌ಗಳನ್ನು ಹೊಡೆದರು. ಆ ಅಜೇಯ ಇನಿಂಗ್ಸ್ ಅವರಿಗೆ ‘ಕೇಂಬ್ರಿಜ್ ಬ್ಲೂ’ (ವಾರ್ಸಿಟಿಯ ಖಾಯಂ ಆಟಗಾರನಾಗಿ ಆಯ್ಕೆ) ದೊರಕಿಸಿಕೊಟ್ಟಿತು. ೩೨ ವರ್ಷಗಳ ಹಿಂದೆ ಕೇಂಬ್ರಿಜ್ ಬ್ಲೂ’ ಪಡೆದಿದ್ದ ರಾಣಜಿ ಮೊದಲ ಭಾರತೀಯರಾಗಿದ್ದರು. ದುಲೀಪ್ ಎರಡನೆ ಯವರಾದರು.

ದುಲೀಪರಿಂದ ಕೇಂಬ್ರಿಜ್ ತಂಡ ತುಂಬ ಶಕ್ತವಾಯಿತು. ಆಡಿದ ಪಂದ್ಯಗಳಲೆಲ್ಲ ತಂಡ ಭಾರೀ ಮೊತ್ತದ ಸ್ಕೋರುಗಳನ್ನು ಮಾಡಿತು. ಅದರಲ್ಲಿ ದುಲೀಪರದು ಸಿಂಹಪಾಲು. ಅವರ ಕ್ರಿಕೆಟ್ ಭವಿಷ್ಯ ವಾರ್ಸಿಟಿಗಳ ಚಾಂಪಿಯನ್‌ಷಿಪ್‌ನ್ನು ಅವಲಂಭಿಸಿತ್ತು. ಜುಲೈನಲ್ಲಿ ಆಕ್ಸ್‌ಫರ್ಡ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ೧೫೦ ನಿಮಿಷಗಳಲ್ಲಿ ೯ ಬೌಂಡರಿಗಳಿದ್ದ ೭೫ ರನ್‌ಗಳನ್ನು ಹೊಡೆದರು. ವಿಕೆಟ್ ಬ್ಯಾಟಿಂಗ್‌ಗೆ ಸ್ವಲ್ಪವೂ ಸಹಾಯಕವಾಗಿರಲಿಲ್ಲ. ಆದರೂ ಅವರು ಪ್ರದರ್ಶಿಸಿದ ಆಟದ ದಿಟ್ಟತನ ಎಲ್ಲರ ಮೆಚ್ಚಿಗೆಗಳಿಸಿತು. ‘ಮೊದಲ ದರ್ಜೆ ಆಟಗಾರನ ಎಲ್ಲ ಲಕ್ಷಣಗಳೂ ಈ ವಯಸ್ಸಿನಲ್ಲಿಯೇ ಕಂಡು ಬರುತ್ತವೆ’ ಎಂದು ಅನೇಕರು ಪತ್ರಿಕೆಗಳಲ್ಲಿ ಹೊಗಳಿ ಬರೆದರು.

ಜಂಟಲ್‌ಮೆನ್ಸ್ ಇಲೆವೆನ್ ಮತ್ತು ಪ್ಲೇಯರ‍್ಸ್ ಇಲೆವೆನ್ ತಂಡಗಳ ನಡುವೆ ಒಂದು ಪಂದ್ಯ ಆಡಿಸಿ ಅದರ ಮಟ್ಟವನ್ನು ಟೆಸ್ಟ್ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವಾಗ ಗಣನೆಗೆ ತೆಗೆದುಕೊಳ್ಳುವುದು ಇಂಗ್ಲೆಂಡ್‌ನಲ್ಲಿ ಆಗ ಇದ್ದ ಒಂದು ಪದ್ಧತಿ. ಮುಂದಿನ ವರ್ಷ ಆಸ್ಟ್ರೇಲಿಯ ಟೆಸ್ಟ್ ತಂಡ ಇಂಗ್ಲೆಂಡ್‌ಗೆ ಬರುವ ಕಾರ್ಯಕ್ರಮವಿತ್ತು. ಅದಕ್ಕೆ ಪೂರ್ವಭಾವಿಯಾಗಿ ನಡೆಸಿದ ಜಂಟಲ್‌ಮೆನ್-ಪ್ಲೇಯರ‍್ಸ್ ಪಂದ್ಯಕ್ಕೆ ದುಲೀಪ್ ಆಯ್ಕೆಯಾದರು.

ಪಂದ್ಯದಲ್ಲಿ ದುಲೀಪ್ ಚೆನ್ನಾಗಿ ಆಡಿದರೆ ಇಂಗ್ಲೆಂಡ್ ತಂಡಕ್ಕೆ ಆಯ್ಕೆಯಾಗುವ ಸಂಭವ ಇದೆ ಎಂದು ಜನಪ್ರಿಯ ವಾರಪತ್ರಿಕೆಯೊಂದು ಬರೆದಿತ್ತು. ಆದರೆ ಕೆಲವು ಕ್ರಿಕೆಟ್ ಅಭಿಮಾನಿಗಳು ದುಲೀಪ್ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದರು. ಇಂಗ್ಲೆಂಡ್‌ನಲ್ಲಿ ಹುಟ್ಟಿದ ಇಂಗ್ಲಿಷ್ ಆಟಗಾರರೇ ಅರ್ಥಾತ್ ಬಿಳಿಯ ಜನರೇ ಇಂಗ್ಲೆಂಡನ್ನು ಪ್ರತಿನಿಧಿಸಬೇಕೆಂದು ಅನೇಕರು ಒತ್ತಾಯಪಡಿಸಿದರು.

ದುರದೃಷ್ಟದಿಂದ ಜಂಟಲ್‌ಮೆನ್ವ್ ಇಲೆವೆನ್‌ನ ಆಟಗಾರರಾಗಿ ದುಲೀಪ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಉತ್ತಮ ಸ್ಕೋರುಗಳಿಸಲು ವಿಫಲರಾದರು. ಟೆಸ್ಟ್ ತಂಡಕ್ಕೆ ಆಯ್ಕೆಯಾಗುವ ಪ್ರಶ್ನೆಯೇ ಬರಲಿಲ್ಲ. ದುಲೀಪ್ ಅವರಿಗೆ ತುಂಬ ನಿರಾಶೆಯಾಯಿತು.

೧೯೨೫ರಲ್ಲಿ ವಾರ್ಸಿಟಿ ಪಂದ್ಯಗಳಲ್ಲಿ ೨೧ ಇನಿಂಗ್ಸ್ ಆಡಿದ ದುಲೀಪ್ ಒಟ್ಟು ೯೩೨ ರನ್‌ಗಳನ್ನು ಮಾಡಿದರು. ಬ್ಯಾಟಿಂಗ್ ಸರಾಸರಿ ೪೯.೦೫; ಮೊದಲ ದರ್ಜೆ ಪಂದ್ಯಗಳಲ್ಲಿ ಒಟ್ಟು ೧೦೫೬ ರನ್‌ಗಳನ್ನು ಹೊಡೆದರು. ಅತಿ ಹೆಚ್ಚು ಸ್ಕೋರು ೧೩೦; ಬ್ಯಾಟಿಂಗ್ ಸರಾಸರಿ ೩೯.೧೧

ಸಸೆಕ್ಸ್ ಕ್ಯಾಪ್

೧೯೨೬ರಲ್ಲಿ ವಾರ್ಸಿಟಿ ಪಂದ್ಯಗಳಲ್ಲಿ ದುಲೀಪ್ ಅವರ ಕ್ರೀಡಾಮಟ್ಟ ಹೇಳಿಕೊಳ್ಳುವಂಥಹದೇನೂ ಆಗಿರಲಿಲ್ಲ. ಮಳೆ ಮತ್ತು ಚಳಿಯಿಂದಾಗಿ ಹೆಚ್ಚು ಪಂದ್ಯಗಳೂ ನಡೆಯಲಿಲ್ಲ. ಆದರೆ ದುಲೀಪರ ಪಾಲಿಗೆ ಅದು ‘ಸಸೆಕ್ಸ್ ಕ್ಯಾಪ್’ (ಕ್ಲಬ್‌ನ ಕಾಯಂ ಆಟಗಾರ) ಒದಗಿಸಿಕೊಟ್ಟ ಮಹತ್ವದ ವರ್ಷ. ಅದಕ್ಕೆ ಮೊದಲು ಆ ‘ಕ್ಯಾಪ್’ ಧರಿಸಿದ್ದವರಲ್ಲಿ ರಣಜಿ ಮೊದಲ ಭಾರತೀಯರಾಗಿದ್ದರು.

ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿ ಆಡಿದ ತಮ್ಮ ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ೯೭ ರನ್ ಮಾಡಿದ ದುಲೀಪ್ ಸೆಂಚುರಿ ಗಳಿಸಲು ಕೇವಲ ಮೂರು ರನ್‌ಗಳಿಂದ ವಂಚಿತರಾದರು. ಅವರ ಆಟದ ಕೌಶಲ್ಯ, ದಿಟ್ಟತನದ  ಹೋರಾಟದ ಅವರಿಗೆ ‘ಸಸೆಕ್ಸ್ ಕ್ಯಾಪ್’ ದೊರೆಯುವಂತೆ ಮಾಡಿತು.

‘ಸಸೆಕ್ಸ್ ತಂಡದಲ್ಲಿ ಎಂಥ ಬದಲಾವಣೆ’ ಎಂದು ಬರೆದಕ್ಯಾಪ್ಟನ್ ಗಿಲಿಗನ್ ‘‘ಹಿಂದೆಲ್ಲ ಬೌಲಿ (ಒಬ್ಬ ಉತ್ತಮ ಬ್ಯಾಟ್ಸ್‌ಮನ್) ಔಟಾದ ಕೂಡಲೇ ೧೦ ಮತ್ತು ೧೧ನೇ ಆಟಗಾರರು ಕಾಲಿಗೆ ಪ್ಯಾಡ್‌ಕಟ್ಟಲಾರಂಭಿಸುತ್ತಿದ್ದರು. ಆದರೆ  ಈಗ! ದುಲೀಪರ ಪ್ರವೇಶದಿಂದ ಕೊನೆಯ ಸಾಲಿನ ಆಟಗಾರರು ಸಮಾಧಾನದಿಂದ ಇರುವಂತಾಗಿದೆ. ಕೊನೆಯವರಿಗೆ ಅನೇಕ ಬಾರಿ ಬ್ಯಾಟ್ ಹಿಡಿಯುವ ಅವಕಾಶವೇ ತಪ್ಪಿಹೋಗುತ್ತಿದೆ. ದುಲೀಪ್ ಸಸೆಕ್ಸ್ ಕ್ರಿಕೆಟ್‌ನಲ್ಲಿ ಹೊಸ ಪುಟವನ್ನೇ ತೆರೆದಿದ್ದಾರೆ’’ ಎಂದು ಕೊಂಡಾಡಿದರು.

ಹ್ಯಾಂಕ್‌ಷೈರ್ ವಿರುದ್ಧ ದುಲೀಪ್ ಸೆಂಚುರಿ ಗಳಿಸಿದರು. ಕೌಂಟಿ ಲೀಗ್ ಚಾಂಪಿಯನ್‌ಪಿಷ್ಸ್‌ನಲ್ಲಿ ಅವರ ಮೊದಲ ಸೆಂಚುರಿ. ಅದು ಅವರ ಕ್ರಿಕೆಟ್ ಭವಿಷ್ಯಕ್ಕೆ ಉತ್ತಮ ಬಾವಾದಿ ಹಾಕಿಕೊಟ್ಟಿತು. ಲೀಗ್‌ನಲ್ಲಿ ಸಸೆಕ್ಸ್‌ನ ಸ್ಥಾನ ಸ್ವಲ್ಪ ಉತ್ತಮಗೊಂಡಿತು. ಚಾಂಪಿಯನ್‌ಷಿಪ್ ನಲ್ಲಿ ಆ ವರ್ಷ ಎರಡು ಸೆಂಚುರಿಗಳಿದ್ದ ಒಟ್ಟು ೭೦೯ ರನ್ನು ಗಳನ್ನು ಮಾಡಿದ ದುಲೀಪ್ ತಂಡದ ಬ್ಯಾಟಿಂಗ್ ಸರಾಸರಿಯಲ್ಲಿ ಅಗ್ರಸ್ಥಾನ ಗಳಿಸಿದರು.

ಅದೇ ವರ್ಷ ಹರ್ಟೈನ್ ಕಾಲಿನ್ಸ್ ನಾಯಕತ್ವದ ಆಸ್ಟ್ರೇಲಿಯ ತಂಡ ಇಂಗ್ಲೆಂಡಿಗೆ ಬಂದಿತ್ತು. ಅದರ ವಿರುದ್ಧ ಹಲವಾರು ಟ್ರಯಲ್ ಪಂದ್ಯಗಳಲ್ಲಿ ದುಲೀಪ್ ಆಡಿದರು. ಪ್ರತಿ ಪಂದ್ಯದಲ್ಲೂ ದುಲೀಪರ ಆಟದ ವೈಖರಿ ಕ್ರೀಡಾ ವರದಿಗಾರರಿಗೆ ವಿಶ್ಲೇಷಣೆಗೆ ಒಂದು ಮುಖ್ಯ ವಿಷಯವಾಗಿರುತ್ತಿತ್ತು. ದುಲೀಪ್ ಸಿಂಹಜಿ ಪದವನ್ನು ಉಚ್ಚರಿಸಲು ಮತ್ತು ತಪ್ಪಿಲ್ಲದೆ ಬರೆಯಲು ಪತ್ರಿಕೆಗಳ ಸಂಪಾದಕರು ಮತ್ತು ಕಂಪೋಜಿಟರುಗಳು ಕಷ್ಟಪಡುತ್ತಿದ್ದರು. ಆ ವೇಳೆಗೆ ದುಲೀಪ್‌ಗೆ ‘ಸ್ಮಿತ್’  ಎಂಬ ಅಡ್ಡ ಹೆಸರು ಸಾಕಷ್ಟು ಪ್ರಚಾರದಲ್ಲಿತ್ತು. ಕೆಲವು ಪತ್ರಿಕೆಗಳು ಕೆಲ ಸಮಯ ‘ಸ್ಮಿತ್’  ಎಂದೇ ಕರೆಯಲಾರಂಭಿಸಿದುವು.

ಇಂಗ್ಲೆಂಡ್‌ನಲ್ಲಿ ಆ ಕಾಲಕ್ಕೆ ತುಂಬ ಬೇಡಿಕೆಯಲ್ಲಿದ್ದ ಜಿ.ಎ.ಫಾಲ್ಕನರ್ ಅವರ ಕ್ರಿಕೆಟ್ ತರಬೇತಿ ಶಾಲೆಗೆ ದುಲೀಪ್ ಸೇರಿದರು. ಅಲ್ಲಿ ತಮ್ಮ ಬ್ಯಾಟಿಂಗ್ ತಂತ್ರವನ್ನು ಇನ್ನುಷ್ಟು ಉತ್ತಮಪಡಿಸಿಕೊಂಡರು.

ತರಬೇತಿಯ ನಂತರ ಮೂರನೇ ವರ್ಷದ (೧೯೨೭) ವ್ಯಾಸಂಗಕ್ಕೆ ಸೇರಿದರು. ವಾರ್ಸಿಟಿಯಲ್ಲಿ ಅವರ ಕ್ರೀಡಾಮಟ್ಟದ ಬಗ್ಗೆ ಭಿನ್ನಾಭಿಪ್ರಾಯಗಳೇ ಇರಲಿಲ್ಲ. ತಂಡದ ‘ರನ್ ಗಳಿಸುವ ಯಂತ್ರ’  ಎಂದು ಅವರನ್ನು ಪರಿಗಣಿಸಲಾಗಿತ್ತು. ವಾರ್ಸಿಟಿ ಆಟಗಾರರಾಗಿ ಆಡಿದ ಎರಡನೇ ಪಂದ್ಯದಲ್ಲಿ ಮಿಡೆಕ್ಸ್ ವಿರುದ್ಧ ಔಟಾಗದೆ ೨೫೪ ರನ್ ಪೇರಿಸಿದರು. ಕೇಂಬ್ರಿಜ್ ವಿಶ್ವವಿದ್ಯಾಲಯದ ಮೈದಾನಕ್ಕೆ ಅದು ರೆಕಾರ್ಡ್ ಸ್ಕೋರು. ‘‘ವರ್ಷದ ಅತ್ಯಂತ ಉತ್ತಮ ಆಟಗಾರ ದುಲೀಪ್’’ ಎಂದು ಪತ್ರಿಕೆಗಳು ಹೊಗಳಿದುವು.

ಆ ವರ್ಷ ಅವರು ಆಡಿದ್ದು ಕೇವಲ ೫ ಇನಿಂಗ್ಸ್. ಗಳಿಸಿದ ಒಟ್ಟು ರನ್‌ಗಳ ಮೊತ್ತ ೪೩೪; ಎರಡು ಸೆಂಚುರಿಗಳು. ಬ್ಯಾಟಿಂಗ್ ಸರಾಸರಿ ೧೦೮.೫೦. ವಾರ್ಸಿಟಿ ಸರಾಸರಿಯಲ್ಲಿ ಅಗ್ರಸ್ಥಾನ ಅವರ ಹೆಸರಿಗೇ ಉಳಿಯಿತು.

ಮೇ ಮಧ್ಯಭಾಗದಲ್ಲಿ ದುಲೀಪರ ಆರೋಗ್ಯ ಕೆಟ್ಟಿತು. ಒಂದು ಹಂತದಲ್ಲಂತೂ ಬದುಕುವರೇ ಎನ್ನುವಷ್ಟರಮಟ್ಟಿಗೆ ಕಾಯಿಲೆ ವಿಷಮಿಸಿತ್ತು. ಆರೋಗ್ಯ ಸುಧಾರಣೆಗೆ ಸ್ವಿಟ್ಜರ್ಲೆಂಡಿಗೆ ಹೋದರು. ಚಳಿಗಾಲ ಪೂರ್ತಿ ಅಲ್ಲೇ ಕಳೆದರು. ಸುಮಾರಾಗಿ ಚೇತರಿಸಿಕೊಂಡರು. ಲಂಡನ್‌ಗೆ ಬರುವ ಮುನ್ನ ಬೇಸಿಗೆಯಲ್ಲೂ ಕ್ರಿಕೆಟ್ ಆಡಕೂಡದೆಂದು ಡಾಕ್ಟರುಗಳ ಸಲಹೆ ಮಾಡಿದ್ದರು.

ಕ್ರಿಕೆಟ್ ಬಿಡುವ ಯೋಚನೆ

ಸ್ವಿಟ್ಜೆರ್ಲೆಂಡಿನಿಂದ ಬಂದ ನಂತರ ದುಲೀಪ್ ಆಡಿದ ಪಂದ್ಯಗಳಲೆಲ್ಲ ವಿಫಲರಾದರು. ಆಟದಲ್ಲಿ ಬೇಗ ಆಯಾಸ ಗೊಳ್ಳುತ್ತಿದ್ದರು. ತಮ್ಮನ್ನು ಕೇಂಬ್ರಿಜ್ ತಂಡದಿಂದ ತೆಗೆದು ಹಾಕಬೇಕೆಂದು ಕ್ಯಾಪ್ಟನ್ ಜಿಮ್ ಸೀಬ್ರುಕ್ ಅವರನ್ನು ಕೇಳಿಕೊಂಡರು. ಸೀಬ್ರುಕ್ ಮತ್ತು ಅವರ ಸಹೋದ್ಯೋಗಿಗಳು ಅದಕ್ಕೆ ಒಪ್ಪಲಿಲ್ಲ. ಕೆಲವು ದಿನಗಳು ಹೋದನಂತರ ಎಲ್ಲವೂ ಸರಿಹೋಗುತ್ತದೆ ಎಂದು ಸಮಾಧಾನ ಹೇಳಿದರು. ಆದರೂ ದುಲೀಪರ ಮನಸ್ಸಿಗೆ ನೆಮ್ಮದಿಯಿಲ್ಲ. ತಮ್ಮಿಂದಾಗಿ ಇಡೀ ತಂಡದ ಆಟ ನಿಶ್ಯಕ್ತವಾಗುತ್ತದೆ ಎಂಬುದು ಅವರ ಕೊರಗು.

ಹಲವು ದಿನಗಳಿಂದ ದುಲೀಪ್ ಆಡುವುದನ್ನು ರಣಜಿಯವರು ನೋಡಿರಲಿಲ್ಲ. ಒಂದು ದಿನ ಹೋವ್‌ಗೆ ಬಂದರು. ಆಟ ನೋಡಿದರು. ನಿರಾಶರಾದರು. ಸ್ಟೇನ್ಸ್‌ಗೆ ತಮ್ಮ ಜೊತೆ ಬರುವಂತೆ ಹೇಳಿದರು. ಕಾರು ಸುಮಾರು ದೂರ ಸಾಗಿತು. ಇಬ್ಬರೂ ಮೌನವಾಗಿದ್ದರು. ಕ್ರಿಕೆಟ್ ಬಿಡುವಂತೆ ಸಲಹೆ ಮಾಡುವರೆಂದು ದುಲೀಪ್ ನಿರೀಕ್ಷಿಸಿದ್ದರು. ಮೌನ ಒಡೆದ ರಣಜಿ ‘‘ನಾನು ನಿನ್ನ ಕ್ರಿಕೆಟ್ ಬಗ್ಗೆ ಆಳವಾಗಿ ಯೋಚಿಸುತ್ತಿದ್ದೇನೆ. ಕಾಯಿಲೆಯಿಂದ ಚೇತರಿಸಿಕೊಂಡು ಬಂದನಂತರ ನಿನಗೆ ಚೆಂಡನ್ನು ಎದುರಿಸುವುದೇ ಕಷ್ಟವಾಗುತ್ತಿದೆ. ಅದನ್ನೇ ತಲೆಗೆ ಹಚ್ಚಿಕೊಳ್ಳಬೇಡ. ಕ್ರಿಕೆಟ್ಟನ್ನು ಮುಂದುವರಿಸು. ಕೆಲ ಸಮಯದ ನಂತರ ನಿನ್ನ ಹಿಂದಿನ ಆಟ ಮತ್ತೆ ಬರುತ್ತದೆ. ಒಂದು ದಿನ ನೀನು ಇಂಗ್ಲೆಂಡ್‌ಗೆ ಆಡುತ್ತೀಯ’’ ಎಂದು ಹೇಳಿದರು.

ರಣಜಿಯವರ ಪ್ರೋತ್ಸಾಹ ಮತ್ತು ಸ್ನೇಹಿತರ ಒತ್ತಾಯಗಳು ದುಲೀಪ್‌ಗೆ ಧೈರ್ಯ ತಂದು ಕೊಟ್ಟವು. ಕ್ರಿಕೆಟ್ಟನ್ನು ಮುಂದುವರಿಸಲು ನಿರ್ಧರಿಸಿದರು. ವಾರ್ಸಿಟಿ ಪಂದ್ಯಗಳಿಗೆ ಮೊದಲು ಲಿವ್‌ಸನ್ ಗೋವರ್ಸ್ ಇಲೆವೆನ್ ತಂಡದ ವಿರುದ್ಧ ೯೬ ರನ್ ಹೊಡೆದರು. ವಾರ್ಸಿಟಿ ಆಟಗಾರನಾಗಿ ೧೬ ಇನ್ನಿಂಗ್ಸ್‌ಗಳಲ್ಲಿ ಆಡಿದರು. ಒಟ್ಟು ೪೪೪ ರನ್ ಗಳಿಸಿದರು. ಬ್ಯಾಟಿಂಗ್ ಸರಾಸರಿ (೨೯.೬೦) ಯಲ್ಲಿ ಐದನೇಯವರಾದರು.

ನಾಲ್ಕು ವರ್ಷಗಳ ಕೇಂಬ್ರಿಜ್ ಕ್ರಿಕೆಟ್ ಜೀವನದಲ್ಲಿ ಅವರು ಆಡಿದ ೫೩ ಇನ್ನಿಂಗ್ಸ್‌ಗಳಲ್ಲಿ ಗಳಿಸಿದ ರನ್‌ಗಳ ಮೊತ್ತ ೨೩೩೩. ಸರಾಸರಿ ೪೪.೦೧. ಕ್ಲೇರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರೂ ಒಂದು ಸಾರಿಯೂ ಕಾಲೇಜುತಂಡಕ್ಕೆ ಆಡಲು ಅವಕಾಶ ದೊರೆಯಲಿಲ್ಲ. ಕಾಲೇಜಿಗೆ ಸೇರಿದ ಆರಂಭದಲ್ಲಿಯೇ ವಾರ್ಸಿಟಿ ಆಟಗಾರರಾಗಿ ಆಯ್ಕೆಗೊಂಡುದರಿಂದ ವಾರ್ಸಿಟಿ ಮತ್ತು ಸಸೆಕ್ಸ್ ಕ್ಲಬ್-ಇವೆರಡನ ಕಾರ್ಯಕ್ರಮಗಳಿಂದ ಅವರಿಗೆ ಬಿಡುವೇ ಇರಲಿಲ್ಲ.

‘ಕ್ರಿಕೆಟ್ ಜಗತ್ತಿನಲ್ಲಿ ಭವ್ಯ ಭವಿಷ್ಯ ಹೊಂದಿರುವ ಆಟ ಗಾರ, ಶಿಸ್ತು-ಸಜ್ಜನಿಕೆಗಳ ಸಾಕಾರ ಮೂರ್ತಿ’ ಎಂದು ದುಲೀಪರನ್ನು ಕ್ಲೇರ್ ಕಾಲೇಜು ಬೀಳ್ಕೊಡುವಾಗ ತನ್ನ ರೆಕಾರ್ಡ್ ಪುಸ್ತಕದಲ್ಲಿ ಅವರ ಬಗ್ಗೆ ಬರೆಯಿತು.

ಚರಿತ್ರೆ ಮತ್ತು ಕೃಷಿ ವಿಷಯಗಳಲ್ಲಿ ಬಿ.ಎ.ಪದವಿ ಪಡೆದರು. ಶೈಕ್ಷಣಿಕ ಜೀವನ ಮುಗಿದನಂತರ ಸಸೆಕ್ಸ್ ಕ್ಲಬ್‌ಗೆ ನೆರವಾದರು. ಆಗಲೂ ಅವರ ಮನಸ್ಸಿನ ಅಳುಕು ಹೋಗಿರಲಿಲ್ಲ. ಮೊದಲ ಕೆಲವು ಪಂದ್ಯಗಳಲ್ಲಿ ಚೆನ್ನಾಗಿ ಆಡಲು ಸಾಧ್ಯವಾಗದಿದ್ದರೆ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದೇ ಲೇಸೆಂದು ಭಾವಿಸಿದ್ದರು.

ಆತ್ಮವಿಶ್ವಾಸ ಮರಳಿತು

ಆದರೆ ಈಸ್ಟ್‌ರ್ಬನಲ್ಲಿ ಆಡಿದ (೧೯೨೮ ರ ಸಾಲು) ಮೊದಲ ಪಂದ್ಯದಲ್ಲಿ ೬೫ ನಿಮಿಷಗಳಲ್ಲಿ ೧೦೦ರನ್ ಬಾರಿಸಿದರು. ೮೦ ನಿಮಿಷಗಳಲ್ಲಿ ೧೨೧ ರನ್ ತಲಪಿದರು. ಮನಸ್ಸಿನ ಅಳುಕು ದೂರವಾಯಿತು. ಅವರ ಬ್ಯಾಟಿಂಗ್ ಹಿಂದಿನದಕ್ಕಿಂತ ಹೆಚ್ಚು ಶಕ್ತಿಯುತವಾಗಿತ್ತು. ಚೆಂಡಿನ ನಿರೀಕ್ಷೆಗಳೆಲ್ಲ ನಿಜವಾಗತೊಡಗಿದವು. ಹೊಡೆದ ಚೆಂಡುಗಳಲ್ಲೆಲ್ಲ ರನ್‌ಗಳು ಬರಲಾರಂಭಿಸಿದುವು. ಸಸೆಕ್ಸ್ ತಂಡದ ಬ್ಯಾಟಿಂಗ್ ಉತ್ತಮಗೊಂಡಿತು. ಚಾಂಪಿಯನ್‌ಷಿಪ್ಸ್ ಲೀಗ್ ಪಟ್ಟಿಯಲ್ಲಿ ೭ನೇ ಸ್ಥಾನಕ್ಕೇರಿತು. ಆ ವರ್ಷ ಆಡಿದ ೧೯ ಇನ್ನಿಂಗ್ಸ್‌ಗಳಲ್ಲಿ ದುಲೀಪ್ ೧೦೮೨ ರನ್ ಕೂಡಿಹಾಕಿದರು. ಆರು ಸೆಂಚುರಿಗಳನ್ನು ಹೊಡೆದರು. ಬ್ಯಾಟಿಂಗ್ ಸರಾಸರಿಯಲ್ಲಿ (೬೦೧೧) ಮತ್ತೆ ಅಗ್ರಸ್ಥಾನ ಗಳಿಸಿದರು.

ಭಾರತದಲ್ಲಿ ಮೊದಲ ಪಂದ್ಯ

ಭಾರತ ಮಾತೆಯ ಹೆಮ್ಮೆಯ ಪುತ್ರ ದುಲೀಪ್, ಕ್ರಿಕೆಟ್ ಜಗತ್ತಿನ ಕಲಿ. ಆದರೆ ಅವರ ಅಮೂಲ್ಯ ಸೇವೆ ಕ್ರಿಕೆಟ್ ವೃದ್ಧಿಗಾಗಿ ಭಾರತಕ್ಕೆ ದೊರೆತದ್ದು ಕೆಲವುಕಾಲ ಮಾತ್ರ. ಕ್ರಿಕೆಟ್ ನ ಸಾಧನೆಗಳೆಲ್ಲ ಇಂಗ್ಲೆಂಡ್‌ಗೇ ಸಮರ್ಪಿತ ಆಗಿನ್ನೂ ಭಾರತದಲ್ಲಿ ಕ್ರಿಕೆಟ್ ಮೊದಲ ದರ್ಜೆಗೆ ಏರಿರಲಿಲ್ಲ. ಆದ್ದರಿಂದ ಅವರಿಗೆ ಆಟಗಾರನಾಗಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಬರಲಿಲ್ಲ.

ತಾಯ್ನಾಡು ಬಿಟ್ಟು ಸುಮಾರು ಹತ್ತು ವರ್ಷಗಳ ನಂತರ ಭಾರತಕ್ಕೆ ಬಂದರು. ಮುಂಬಯಿನ ಪಿ.ಜೆ. ಹಿಂದೂ ಜಮಖಾನ ಮೈದಾನದಲ್ಲಿ ಮೊದಲ ಪಂದ್ಯ ಆಡಿದರು. ಹಿಂದೂಗಳ ತಂಡ ಮತ್ತು ಪಾರ್ಸಿಗಳ ತಂಡಗಳ ನಡುವಣ ಪಂದ್ಯ ಅದು. ರಾಜಕುಮಾರ ದುಲೀಪ್ ಸಿಂಹಜಿಯವರ ಆಟ ನೋಡಲಿಕ್ಕೆಂದೇ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಹಿಂದೂಗಳ ತಂಡಕ್ಕೆ ಆಡಿದ ರಾಜಕುಮಾರ ಮೊದಲ ಇನಿಂಗ್ಸ್‌ನಲ್ಲಿ ೮೪ ಮತ್ತು ಎರಡನೇ ಇನಿಂಗ್ಸ್‌ನಲ್ಲಿ ೩೮ ರನ್‌ಗಳನ್ನು ಹೊಡೆದರು. ಪ್ರತಿಯೊಂದು ಸಲ ಚೆಂಡನ್ನು ಎದುರಿಸುವಾಗ ಇಂಗ್ಲೆಂಡಿನಲ್ಲಿ ಕಲಿತ ಆಟದ ವಿವಿಧ ಕಲೆಯನ್ನು ಪ್ರದರ್ಶಿಸಿದರು. ಒಂದು ಬಾರಿ ‘ಚೈನೀಸ್ ಹೊಡೆತ’ ವನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ರೋಮಾಂಚನ ಗೊಳಿಸಿದರು.

ಅದ್ಭುತ ಸಾಧನೆಯವರ್ಷ

ದುಲೀಪ್ ಇಂಗ್ಲೆಂಡಿಗೆ ಮರಳಿದರು. ೧೯೧೯ ಅವರ ಕ್ರಿಕೆಟ್‌ನ ಅದ್ಭುತ ಸಾಧನೆಯ ವರ್ಷ. ಆ ರಾಷ್ಟ್ರದಲ್ಲಿ ಆ ವರ್ಷ ನಡೆದ ಪಂದ್ಯಗಳಲ್ಲಿ ಶೇಕಡ ೭೫ರಷ್ಟರಲ್ಲಿ ಆಡಿದ ಅವರು ಇಂಗ್ಲಿಷ್ ಜನತೆಯನ್ನು ರಂಜಿಸಿದರು. ಸಸೆಕ್ಸ್ ತಂಡದ ಸದಸ್ಯರಾಗಿ ೩೯ ಇನಿಂಗ್ಸ್ ಆಡಿದರು. ಏಳು ಬಾರಿ ನೂರಕ್ಕಿಂತ ಹೆಚ್ಚು ರನ್ ಹೊಡೆದರು. ೨೪೬ ಮತ್ತು ೨೦೨ ಅವರ ಉತ್ತಮ ಸ್ಕೋರುಗಳು. ಸೇರಿದ ಒಟ್ಟು ರನ್‌ಗಳ ಮೊತ್ತ ೨೧೦೬, ಬ್ಯಾಟಿಂಗ್ ಸರಾಸರಿ (೫೫.೪೨) ಯಲ್ಲಿ ಮತ್ತೆ ಅಗ್ರಸ್ಥಾನಗಳಿಸಿದರು.

ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಂಡ ಇಂಗ್ಲೆಂಡಿಗೆ ಬಂದಿತ್ತು. ಅದರ ವಿರುದ್ಧ ಲಾರ್ಡ್ಸ್‌ನಲ್ಲಿ ಎಂ.ಸಿ.ಸಿ. ತಂಡದ ಆಟಗಾರನಾಗಿ ಆಡಿ ೯೦ ನಿಮಿಷಗಳಲ್ಲಿ ೯ ಬೌಂಡರಿಗಳಿದ್ದ ೭೪ ರನ್‌ಗಳನ್ನು ಬಾರಿಸಿದರು. ಅವರ ಆಕರ್ಷಕ ಬ್ಯಾಟಿಂಗ್ ಇಂಗ್ಲೆಂಡಿನ ಆಯ್ಕೆ ಸಮಿತಿಯವರ ಗಮನ ಸೆಳೆಯಿತು. ಭಾರತಕ್ಕೆ ಆಡಕೂಡದೆಂಬ ಷರತ್ತಿನ ಮೇಲೆ ಟೆಸ್ಟ್ ತಂಡಕ್ಕೆ ಅವರನ್ನು ಸಮಿತಿಯವರು ಆಯ್ಕೆ ಮಾಡಿದರು.

ಮೊದಲ ಬಾರಿಗೆ ಟೆಸ್ಟ್ ಆಟಗಾರನಾಗಿ ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕದ ವಿರುದ್ಧ ಆಡಿದರು. ಮೊದಲ ಇನಿಂಗ್ಸ್‌ನಲ್ಲಿ ೧೨ ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಒಂದು ರನ್‌ಗೆ ಔಟಾದರು. ದುಲೀಪ್‌ಗೆ ಮಾತ್ರವಲ್ಲ ಅವರ ಬಗ್ಗೆ ಆಶಾಗೋಪುರ ಕಟ್ಟಿದ್ದವರಿಗೆಲ್ಲ ನಿರಾಶೆಯಾಯಿತು. ಸರಣಿಯ ಉಳಿದ ಟೆಸ್ಟ್ ಗಳಿಗೆ ಅವರು ಆಯ್ಕೆಯಾಗಲಿಲ್ಲ. ಜಂಟಲ್‌ಮೆನ್ಸ್ ಇಲೆವೆನ್ ತಂಡಕ್ಕೆ ಕೂಡ ಅವರನ್ನು ಸೇರಿಸಿಕೊಳ್ಳಲಿಲ್ಲ.

ಇಂಗ್ಲೆಂಡಿನ ಕ್ರಿಕೆಟ್ ರಾಜಕೀಯದ ಬಗ್ಗೆ ಜುಗುಪ್ಸೆ ಬಂದಿತು. ವರ್ಷದ ಕಾರ್ಯಕ್ರಮಗಳು ಮುಗಿದ ನಂತರ ಭಾರತಕ್ಕೆ ವಾಪಸ್ಸಾಗಲು ನಿರ್ಧರಿಸಿದರು. ಸಸೆಕ್ಸ್‌ನ ಲೀಗ್ ಕಾರ್ಯಕ್ರಮಗಳು ಮುಗಿಯುವುದನ್ನು ಎದುರು ನೋಡುತ್ತಿದ್ದರು. ಜುಲೈ ತಿಂಗಳಲ್ಲಿ ನಾಲ್ಕು ಪಂದ್ಯಗಳನ್ನು ಆಡಿದರು. ಎಸೆಕ್ಸ್ ವಿರುದ್ಧ ೨೦೨, ಡರ್ಬಿಷೈರ್ ವಿರುದ್ಧ ೧೧೮ ಮತ್ತು ಹ್ಯಾಂಪ್‌ಷೈರ್ ವಿರುದ್ಧ ೧೧೨ ರನ್‌ಗಳನ್ನು ಹೊಡೆದರು.

ಕೆಂಟೇ ಮೇಲಿನ ಪಂದ್ಯದಲ್ಲಿ ಸಸೆಕ್ಸ್ ಒಂದು ಇನಿಂಗ್ಸ್ ಮತ್ತು ೨೭ ರನ್‌ಗಳಿಂದ ಸೋತಿತು. ದುಲೀಪ್ ಬಂದ ನಂತರ ಸಸೆಕ್ಸ್ ಇಂತ ಭಾರೀತ ಸೋಲನ್ನು ಕಂಡಿರಲಿಲ್ಲ. ವಿಕೆಟ್ ಬೌಲಿಂಗ್‌ಗೆ ಸಹಾಯಕವಾಗಿದ್ದುದನ್ನು ಅರಿಯದ ಕ್ಯಾಪ್ಟನ್ ಗಿಲಿಗನ್ ಟಾಸ್ ಗೆದ್ದು ತಮ್ಮ ತಂಡವನ್ನೇ ಬ್ಯಾಟಿಂಗ್‌ಗೆ ಕಳುಹಿಸಿದರು. ಅದು ತಂಡದ ಶೀಘ್ರಪತನಕ್ಕೆ ಕಾರಣವಾಯಿತು. ಇದರಿಂದ ಬೇಸರಗೊಂಡ ದುಲೀಪ್ ‘‘ಕೆಂಟನ್ನು ಮತ್ತೊಮ್ಮೆ ಎದುರಿಸುವಾಗ ಎರಡೂ ಇನಿಂಗ್ಸ್‌ನಲ್ಲಿ ಸೆಂಚುರಿ ಹೊಡೆಯುತ್ತೇನೆ’’ ಎಂದು ಕಾಪ್ಟನ್‌ಗೆ ಭರವಸೆ ನೀಡಿದರು.

ಎರಡು ವಾರಗಳ ನಂತರ ಸಸೆಕ್ಸ್ ಕೆಂಟನ್ನು ಮತ್ತೆ ಸಂಧಿಸಿತು. ಮೊದಲ ಇನಿಂಗ್‌ನಲ್ಲಿ ದುಲೀಪ್ ೧೦೫ ನಿಮಿಷಗಳಲ್ಲಿ ೧೧೫ ರನ್ ಹೊಡೆದರು. ಪೆವಿಲಿಯನ್‌ಗೆ ಬಂದ ನಂತರ ಎರಡನೇ ಇನಿಂಗ್ಸ್‌ನಲ್ಲಿ ಎರಡು ಸೆಂಚುರಿ ಗಳಿಸಲು ಪ್ರಯತ್ನಿಸುತ್ತೇನೆ ಎಂದ ದುಲೀಪ್ ಹಾಗೆಯೇ ಮಾಡಿದರು. ಸುಮಾರು ಮೂರು ಗಂಟೆಗಳ ಕಾಲ ಆಡಿದ ದುಲೀಪ್ ೨೪೬ ರನ್‌ಗಳನ್ನು ಕೂಡಿ ಹಾಕಿದರು. ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿ ಸಸೆಕ್ಸ್ ಒಟ್ಟು ಸ್ಕೋರು ೫೪೯. ದುಲೀಪ್ ಮಾಡಿದ್ದು ೩೬೧, ಅವರು ೬ ಸಿಕ್ಸರ್ ಮತ್ತು ೪೫ ಬೌಂಡರಿಗಳನ್ನು ಹೊಡೆದರು. ಆರು ಕಷ್ಟದ ಕ್ಯಾಚುಗಳ ಒಂದು ಕೈಯಲ್ಲಿ ಹಿಡಿದರು. ಕೆಂಟ್ ೧೬೭ ರನ್‌ಗಳಿಂದ ಪರಾಜಯಗೊಂಡಿತು.

ದುಲೀಪ್ ಆ ವರ್ಷ ೮ ಬಾರಿ ಸೆಂಚುರಿ ಹೊಡೆದರು. ಗಳಿಸಿದ ರನ್‌ಗಳ ಮೊತ್ತ ೨,೫೪೫ ಸರಾಸರಿ. ೫೩.೦೨.

ಇಂಗ್ಲೆಂಡಿನ ಕ್ರಿಕೆಟ್ ಪಂಡಿತರು, ಪತ್ರಿಕೆಯವರು ಮತ್ತು ಅಭಿಮಾನಿಗಳು ‘‘ರಾಷ್ಟ್ರದ ಉತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ದುಲೀಪ್ ಒಬ್ಬರು’’  ಎಂದು ಹೊಗಳಲು ಆರಂಭಿಸಿದರು. ಮುಂಬರುವ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಗೆ ದುಲೀಪರನ್ನು ಆಯ್ಕೆ ಮಾಡಬೇಕೆಂದು ಅನೇಕ ಕಡೆಗಳಿಂದ ಒತ್ತಾಯಗಳು ಬರತೊಡಗಿದವು. ಟೆಸ್ಟ್ ಕ್ಯಾಪ್ಟನ್ ಮ್ಯಾಕ್‌ಲಾರೆನ್ ಕೂಡ ದುಲೀಪ್ ಅವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡುವ ಬಗ್ಗೆ ಬೆಂಬಲ ವ್ಯಕ್ತಪಡಿಸಿದರು. ‘ಭಾರತದಲ್ಲಿ ಹುಟ್ಟಿದವರು’ ಎಂಬ ಕಾರಣದ ಮೇಲೆ ಅವರನ್ನು ಇಂಗ್ಲೆಂಡ್ ಕ್ರಿಕೆಟ್‌ನಿಂದ ಹೊರಹಾಕುವುದು. ಕ್ರೀಡೆಗೇ ದ್ರೋಹ ಬಗೆದಂತಾಗುತ್ತದೆ ಎಂದು ಹೇಳಿದರು.

ಎಂ.ಸಿ.ಸಿ.ಗೆ ಆಯ್ಕೆ

೧೯೨೯-೩೦ರಲ್ಲಿ ಆಸ್ಟ್ರೇಲಿಯ ಮತ್ತು ನ್ಯಾಜಿಲೆಂಡ್ ಪ್ರವಾಸ ಕೈಗೊಂಡ ಹೆರಾಲ್ಡ್ ಗಿಲಿಗನ್ ನಾಯಕತ್ವದ ಎಂ.ಸಿ.ಸಿ. ತಂಡಕ್ಕೆ ದುಲೀಪ್ ಆಯ್ಕೆಗೊಂಡರು. ಇದು ಅವರ ಕ್ರಿಕೆಟ್ ಜೀವನದ ಮೊದಲ ವಿದೇಶ ಪ್ರವಾಸ.

ಆಸ್ಟ್ರೇಲಿಯದಲ್ಲಿ ಎಂ.ಸಿ.ಸಿ. ೫ ಪಂದ್ಯಗಳನ್ನು ಆಡಿತು. ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ದುಲೀಪ್ ಔಟಾಗದೆ ೬೪ ರನ್ ಹೊಡೆದರು. ಆಡಿದ ೧೦ ಇನಿಂಗ್ಸ್ ಗಳಲ್ಲಿ ಸರಾಸರಿ ೩೮.೭೭ ಗಳಿಸಿ ಬ್ಯಾಟಿಂಗ್‌ನಲ್ಲಿ ಮೂರನೇ ಸ್ಥಾನ ಪಡೆದರು.

ನ್ಯೂಜಿಲೆಂಡ್‌ನಲ್ಲಿ ಆಡಿದ ಮೊದಲ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ವೆಲಿಂಗ್ಟನ್ ವಿರುದ್ಧ ೯೬ ರನ್ ಮಾಡಿದರು. ಎರಡನೇ ಪಂದ್ಯದಲ್ಲಿ ನೆಲ್ಸನ್ ವಿರುದ್ಧ ೧೨೭ ರನ್ ಬಾರಿಸಿದರು. ಹಾಕಿಸ್ ಟೀಮಿನ ವಿರುದ್ಧ ೧೮೯ ನಿಮಿಷಗಳಲ್ಲಿ ೪೨ ಬೌಂಡರಿಗಳಿದ್ದ ೨೪೨ ರನ್ ಹೊಡೆದರು.

ನ್ಯೂಜಿಲೆಂಡ್ ವಿರುದ್ಧ ೩ ಟೆಸ್ಟ್‌ಗಳ ಸರಣಿಯಲ್ಲಿ ಆಕ್ಲೆಂಡ್ ಪಂದ್ಯ ಮೊದಲನೆಯದು. ಶ್ರೇಷ್ಠ ಮಟ್ಟದ ಬ್ಯಾಟಿಂಗ್ ಪ್ರದರ್ಶನವಿತ್ತ ದುಲೀಪ್ ೧೩೧ ನಿಮಿಷಗಳಲ್ಲಿ ಒಂದು ಸಿಕ್ಸರ್ ಮತ್ತು ೧೧ ಬೌಂಡರಿಗಳಿದ್ದ ೧೧೭ ರನ್ ಮಾಡಿದರು. ದುಲೀಪರ ಮೊದಲ ಟೆಸ್ಟ್ ಸೆಂಚುರಿ ಅದು.

ಪ್ರವಾಸದಲ್ಲಿ ೨೮ ಇನಿಂಗ್ಸ್‌ಗಳಲ್ಲಿ ಆಡಿದ ದುಲೀಪ್ ಒಟ್ಟು ೧೪೨೧ ರನ್ ಗಳಿಸಿ ೫೯.೨೦ ಸರಾಸರಿಯೊಂದಿಗೆ ಟೀಮಿನ ಬ್ಯಾಟಿಂಗ್‌ನಲ್ಲಿ ಅಗ್ರಸ್ಥಾನಗಳಿಸಿದರು. ತಮ್ಮ ಆಯ್ಕೆಯನ್ನು ದುಲೀಪ್ ಸಮರ್ಥಿಸಿಕೊಂಡರು. ಇಂಗ್ಲೆಂಡ್ ನಲ್ಲಿ ಅವರ ಪ್ರತಿಷ್ಠೆ ಇನ್ನೂ ಹೆಚ್ಚಿತು.

ರೆಕಾರ್ಡ್ ಸ್ಕೋರು

ಇಪ್ಪತ್ತೊಂಬತ್ತು ವರ್ಷಗಳ ಹಿಂದೆ ರಣಸಿ ಸಸೆಕ್ಸ್ ಆಟಗಾರರಾಗಿ ಒಂದೇ ಇನಿಂಗ್ಸ್‌ನಲ್ಲಿ ೨೮೫ ರನ್‌ಗಳನ್ನು ಹೊಡೆದು ರೆಕಾರ್ಡ್ ಸ್ಥಾಪಿಸಿದ್ದರು. ೧೯೩೦ ರಲ್ಲಿ ಅದೇ ಸಸೆಕ್ಸ್ ನ ವೈಸ್ ಕ್ಯಾಪ್ಟನ್ ಆಗಿ ದುಲೀಪ್ ನಾರ್ತಾಂಪ್ಟನ್ ಷೈರ್ ಟೀಮಿನ ವಿರುದ್ಧ ಐದೂವರೆ ಗಂಟೆಗಳಲ್ಲಿ ೩೩೩ ರನ್‌ಗಳನ್ನು ಬಾರಿಸಿ ನೂತನ ರೆಕಾರ್ಡ್ ಸ್ಥಾಪಿಸಿದರು. ಬ್ರಾಡ್‌ಮನ್ ಲೀಡ್ಸ್‌ನಲ್ಲಿ ೩೩೪ ರನ್ ಮಾಡುವವರೆಗೆ ಟೆಸ್ಟ್ ಪಂದ್ಯಗಳಿಗೂ ದುಲೀಪರ ಸಾಧನೆಯೇ ರೆಕಾರ್ಡ್ ಆಗಿತ್ತು. ಕೌಂಟಿ ಪಂದ್ಯಗಳಲ್ಲಿ ಅದುವರೆಗೆ ಒಂದೇ ದಿನದಲ್ಲಿ ೩೩೩ ರನ್‌ಗಳನ್ನು ಯಾರೂ ಹೊಡೆದಿರಲಿಲ್ಲ.

ಆ ವರ್ಷ ಆಸ್ಟ್ರೇಲಿಯ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ದುಲೀಪ್ ಇಂಗ್ಲೆಂಡ್ ತಂಡಕ್ಕೆ ಆಯ್ಕೆಯಾಗು ವರೆಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ತಂಡ ಪ್ರಕಟವಾದಾಗ ಅವರು ಹೆಸರು ೧೩ರಲ್ಲಿ ಒಂದಾಗಿತ್ತು. ಎಲ್ಲರಿಗೂ ಆಶ್ಚರ್ಯ ಅಭಿಮಾನಿಗಳಿಗೆ ಉಂಟಾದ ನಿರಾಶೆ ಅಷ್ಟಿಷ್ಟಲ್ಲ. ಕ್ರಿಕೆಟ್ ರಾಜಕೀಯವನ್ನು ಅನೇಕರು ಕಟುವಾಗಿ ಟೀಕಿಸಿದರು.

ನಾಟಿಂಗ್ ಹ್ಯಾಮ್‌ನಲ್ಲಿ ಮೊದಲ ಟೆಸ್ಟ್. ದುಲೀಪ್ ೧೨ನೇ ಆಟಗಾರರಾಗಿದ್ದರು. ಪಂದ್ಯದ ಮೊದಲ ದಿನ ಒಂದು ತಮಾಷೆ ನಡೆಯಿತು. ಟಾಸ್‌ನಲ್ಲಿ ಸೋತ ಇಂಗ್ಲೆಂಡ್‌ನವರು ಫೀಲ್ಡ್ ಮಾಡಲು ಬಂದರು. ಮೊದಲ ಒಂದು ಓವರ್ ಬೌಲ್ ಮಾಡಿದ ಮಾರಿಸ್ ಟೇಟ್ ಉದ್ದೇಶಪೂರ್ವಕವಾಗಿ ಸ್ವೆಟರ್ ತರುವಂತೆ ಸಂಜ್ಞೆಮಾಡಿದರು. ದುಲೀಪ್ ಅವರನ್ನು ಮೈದಾನದೊಳಗೆ ಇಳಿಸುವುದಕ್ಕಾಗಿ ಟೇಟ್ ಆ ತಂತ್ರ ಹೂಡಿದ್ದರು. ದುಲೀಪ್ ಸ್ವೆಟರ್ ಹಿಡಿದು ಮೈದಾನದೊಳಗೆ ಬರುತ್ತಿದ್ದಂತೆ ಕಿಕ್ಕಿರಿದು ಕೂಡಿದ್ದ ಕ್ರೀಡಾಭಿಮಾನಿಗಳು ಒಕ್ಕೂರಲಿನಿಂದ ಅವರಿಗೆ ಸಹಾನುಭೂತಿ ವ್ಯಕ್ತಪಡಿಸಿದರು.

ಸುವರ್ಣ ದಿನ

ಎರಡನೇ ಟೆಸ್ಟ್ ಲಾರ್ಡ್ಸ್‌ನಲ್ಲಿ. ಸಟ್‌ಕ್ಲಿಫ್ ಅವರ ಕೈಗೆ ಮೊದಲ ಟೆಸ್ಟ್ ನಲ್ಲಿ ಆಗಿದ್ದ ಗಾಯ ವಾಸಿಯಾಗಿರಲಿಲ್ಲ. ಇಂಗ್ಲೆಂಡ್ ತಂಡಕ್ಕೆ ಅವರ ಬದಲು ದುಲೀಪ್ ಆಯ್ಕೆಯಾದರು.

ತೆಳುಕಾಯದ, ಉದ್ದನೆಯ ಸ್ಫುರದ್ರೂಪಿ ಭಾರತದ ರಾಜಕುಮಾರ ದುಲೀಪ್ ಬ್ಯಾಟ್ ಹಿಡಿದು ಮೈದಾನದೊಳಗೆ ಗಂಭೀರವಾಗಿ ನಡೆದು ಹೋಗುತ್ತಿದ್ದಂತೆ ಜನರಿಂದ ಹರ್ಷೋದ್ಗಾರ. ಜನರ ಪ್ರತಿಕ್ರಿಯೆಯಿಂದ ಸ್ಪೂರ್ತಿಗೊಂಡ ದುಲೀಪರು ಮೊದಲ ಇನಿಂಗ್ಸ್‌ನಲ್ಲಿ ದಿಟ್ಟತನದಿಂದ ಆಡಿದರು. ಬೌಲರ್‌ಗಳನ್ನು ಮಂತ್ರಮುಗ್ದಗೊಳಿಸಿದರು. ರನ್‌ಗಳ ಸುರಿಮಳೆಯಾಯಿತು. ೧೫೦ ನಿಮಿಷಗಳಲ್ಲಿ ಅವರು ಸ್ಕೋರು ೧೫೦ ಕ್ಕೆ ತಲುಪಿತು. ಆಸ್ಟ್ರೇಲಿಯದ ಬೌಲರ್‌ಗಳು ಎಲ್ಲ ಬಗೆಯ ತಂತ್ರಗಳನ್ನು ಬಳಸಿದರು. ದುಲೀಪ್ ಯಾವುದಕ್ಕೂ ಜಗ್ಗಲಿಲ್ಲ. ಪ್ರೇಕ್ಷಕರು ಇವರ ಆಟವನ್ನು ಕಂಡು ಕರತಾಡನ ಮಾಡಿದರು. ಅವರಿಗೆ ವಿಸ್ಮಯ ಖುಷಿ. ೨೬೫ ನಿಮಿಷಗಳ ಕಾಲ ಆಡಿದ ದುಲೀಪ್ ತಮ್ಮ ಸ್ಕೋರು ೧೭೩ ಆಗಿದ್ದಾಗ ಡಾನ್‌ಬ್ರಾಡ್‌ಮನ್‌ಗೆ ಕ್ಯಾಚಿತ್ತು ಔಟಾದರು. ದುಲೀಪರ ಕ್ರಿಕೆಟ್ ಜೀವನದ ಸುವರ್ಣ ದಿನ ಅಂದು.

ಆಸ್ಟ್ರೇಲಿಯದ ವಿರುದ್ಧ ಇಂಗ್ಲೆಂಡ್‌ನಲ್ಲಿ ರಣಜಿತ್ ಸಿಂಗ್‌ರವರು ತಮ್ಮ ಮೊದಲ ಟೆಸ್ಟ್‌ನಲ್ಲಿ (೧೮೯೬ರಲ್ಲಿ ಔಟಾಗದೇ ೧೫೪) ಸೆಂಚುರಿ ಬಾರಿಸಿದ್ದರು. ಅನಂತರ ದುಲೀಪ್ ಅವರದು ಎರಡನೇ ಸಾಧನೆ. ಇಬ್ಬರೂ ಇಂಗ್ಲೆಂಡ್ ಟೀಮಿನ ಭಾರತೀಯ ಆಟಗಾರರು.

ಕ್ರಿಕೆಟ್ ವಿಮರ್ಶಕರು ದುಲೀಪರನ್ನು ಹೊಗಳಿದ್ದೇ ಹೊಗಳಿದ್ದು. ಎರಡನೇ ಇನಿಂಗ್ಸ್‌ನಲ್ಲಿ ಉತ್ತಮವಾಗಿ ಆಡಿದರೂ ಹೆಚ್ಚು ರನ್ ಗಳಿಸಲಿಲ್ಲ. ೪೮ ರನ್‌ಗಳಿಗೆ ಔಟಾದರು. ಸರಣಿಯ ಉಳಿದ ಮೂರು ಟೆಸ್ಟ್‌ಗಳಲ್ಲಿ ದುಲೀಪ್ ಅವರ ಬ್ಯಾಟ್‌ನಿಂದ ಸೆಂಚುರಿಗಳು ಬರಲಿಲ್ಲ. ಆದರೂ ಆಸ್ಟ್ರೇಲಿಯದವರಿಗೆ ಸಿಂಹ ಸ್ವಪ್ನವಾಗಿದ್ದರು. ಸರಣಿಯಲ್ಲಿ ಒಟಟು ೪೧೬ ರನ್ ಗಳಿಸಿ ಸರಾಸರಿಯಲ್ಲಿ (೫೯.೪೨) ಎರಡನೇ ಸ್ಥಾನ ಪಡೆದರು.

ಅನಂತರ ಜಂಟಲ್‌ಮೆನ್ಸ್ ಇಲೆವೆನ್ ಮತ್ತು ಪ್ಲೇಯರ‍್ಸ್ ಇಲೆವೆನ್ ನಡುವಣ ಪಂದ್ಯವೊಂದರಲ್ಲಿ ಪ್ರತಿ ಇನಿಂಗ್ಸ್ ನಲ್ಲಿ ಸೆಂಚುರಿ (೧೨೫ ಮತ್ತು ಔಟಾಗದೆ ೧೦೩) ಹೊಡೆದರು. ಸಸೆಕ್ಸ್ ಮತ್ತು ಎಸೆಕ್ಸ್ ನಡುವಣ ಪಂದ್ಯದಲ್ಲಿ ಓಟಾಗದೆ ೧೮೫ ರನ್ ಮಾಡಿದ ದುಲೀಪ್ ಬಾರಿಸಿದ ಒಂದು ಭರ್ಜರಿ ಸಿಕ್ಸರ್ ಇಂಗ್ಲೆಂಡ್ ಕ್ರಿಕೆಟ್ ನಲ್ಲಿ ಚಿರಸ್ಮರಣೀಯ. ಅವರು ಹೊಡೆದ ಚೆಂಡು ಕ್ರೀಡಾಗಾರದ ಗೋಡೆ ದಾಟಿ ಸುಮಾರು ೧೫೦ ಗಜ ದೂರ ಹೋಯಿತಂತೆ.

ಕೌಂಟಿ ಪಂದ್ಯಗಳಲ್ಲಿ ೧೯೩೦ ರ ಸಾಲಿನಲ್ಲಿ ಒಟ್ಟು ೧೬೧೬ ರನ್ ಗಳಿಸಿದ ದುಲೀಪ್ ಬ್ಯಾಟಿಂಗ್ ಸರಾಸರಿ (೫೩.೮೬) ಯಲ್ಲಿ ಅಗ್ರಸ್ಥಾನ ಪಡೆದರು. ಮೊದಲ ದರ್ಜೆ ಪಂದ್ಯಗಳಲ್ಲಿ ೯ ಸೆಂಚುರಿಗಳಿದ್ದ ೨೫೬೨ ರನ್ ಕೂಡಿಹಾಕಿ ಸರಾಸರಿ (೫೬.೯೩) ಯಲ್ಲಿ ಎರಡನೇ ಸ್ಥಾನ ಗಳಿಸಿದರು.

ಪ್ರತಿವರ್ಷ ವಿಸ್ಡನ್ ಕ್ರಿಕೆಟ್ ಜಗತ್ತಿನಲ್ಲಿ ಉತ್ತಮ ಆಟಗಾರರನ್ನು ಆಯ್ಕೆ ಮಾಡಿ ಅವರ ಬಗ್ಗೆ  ‘ವರ್ಷದ ಕ್ರಿಕೆಟ್ ಪಟುಗಳು’ ಎಂದು ಬರೆಯುತ್ತದೆ. ‘ವಿಸ್ಡನ್’ ಗೆ ಆಯ್ಕೆಯಾಗುವುದು ತುಂಬ ಗೌರವ ಪ್ರತಿಷ್ಠೆಯ ವಿಷಯ. ಆ ವರ್ಷ ದುಲೀಪ್ ಅದಕ್ಕೆ ಆಯ್ಕೆಯಾದರು.

ಸಸೆಕ್ಸ್ ಕ್ಯಾಪ್ಟನ್

೧೯೩೦-೩೧ರ ಸಾಲಿಗೆ ದುಲೀಪ್ ಸಸೆಕ್ಸ್ ತಂಡದ ಕ್ಯಾಪ್ಟನ್ ಆದರು. ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್ ಕ್ಲಬ್ಬೊಂದರ ನಾಯಕತ್ವ ಪಡೆದವರಲ್ಲಿ ರಣಜಿ ಮೊದಲ ಭಾರತೀಯರಾಗಿದ್ದರು. ರಣಜಿ ತಮ್ಮ ೨೭ನೇ ವಯಸ್ಸಿನಲ್ಲಿ ಸಸೆಕ್ಸ್ ಕ್ಲಬ್ ನ ಕ್ಯಾಪ್ಟನ್ ಕಿರೀಟ ಧರಿಸಿದ್ದರು. ದುಲೀಪ್ ತಮ್ಮ ೨೫ನೇ ವಯಸ್ಸಿನಲ್ಲೇ ಆ ಪದವಿಗೆ ಏರಿದರು.

ನಾಯಕತ್ವದ ಜವಾಬ್ದಾರಿಯನ್ನು ದುಲೀಪ್ ಸಮರ್ಥವಾಗಿಯೇ ನಿರ್ವಹಿಸಿದರು. ಕೌಂಟ್ ಚಾಂಪಿಯನ್‌ಷಿಪ್ಸ್ ನಲ್ಲಿ ಸಸೆಕ್ಸ್ ತಂಡವನ್ನು ನಾಲ್ಕನೇ ಸ್ಥಾನಕ್ಕೆ ಏರಿಸಿದರು.

ಅದೇ ವರ್ಷ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್‌ಗೆ ಬಂದಿತ್ತು. ಆಗಲೇ ಕ್ರಿಕೆಟ್ ನ ಉನ್ನತ ಹಂತಕ್ಕೆ ಏರಿದ್ದ ದುಲೀಪ್ ಟೆಸ್ಟ್ ತಂಡಕ್ಕೆ ಸಹಜವಾಗಿ ಆಯ್ಕೆಯಾದರು. ಸರಣಿಯ ಮೂರು ಟೆಸ್ಟ್‌ಗಳಲ್ಲೂ ಆಡಿದರು. ಓವಲ್ ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ೭೫ ನಿಮಿಷಗಳಲ್ಲಿ ಬಿರುಸಿನ ಹೊಡೆತಗಳಿಂದ ೧೦೯ ರನ್ ಸೇರಿಸಿದರು. ಬೆಟನ್ ನಲ್ಲಿ ನ್ಯೂಜಿಲೆಂಡ್ ಮೇಲಿನ ಪಂದ್ಯದಲ್ಲಿನ ೧೦೩ ರನ್‌ಗಳು ಅವರ ವರ್ಷದ ೧೨ನೆಯ ಸೆಂಚುರಿಯಾಗಿತ್ತು.

ಆ ವರ್ಷ ಅವರು ಕೌಂಟಿ ಪಂದ್ಯಗಳಲ್ಲಿ ಗಳಿಸಿದ ರನ್‌ಗಳ ಮೊತ್ತ ೨೫೭೪; ಬ್ಯಾಟಿಂಗ್ ಸರಾಸರಿಯಲ್ಲಿ (೫೯.೩೫) ಮತ್ತೆ ಅಗ್ರಸ್ಥಾನ ಗಳಿಸಿದರು. ಮೊದಲ ದರ್ಜೆ ಪಂದ್ಯಗಳಲ್ಲಿ ಗಳಿಸಿದ ರನ್‌ಗಳ ಮೊತ್ತ ೨,೬೮೪; ಬ್ಯಾಟಿಂಗ್ ಸರಾಸರಿ (೫೪.೭೭) ಯಲ್ಲಿ ಇಂಗ್ಲೆಂಡ್‌ಗೆ ಏಳನೇ ಸ್ಥಾನ ಪಡೆದರು.

ಬೇಸಿಗೆ ಕಾರ್ಯಕ್ರಮಗಳು ಮುಗಿದ ನಂತರ ದುಲೀಪ್ ಭಾರತಕ್ಕೆ ಬಂದರು. ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲು ಭಾರತ ಉದ್ದೇಶಿಸಿತ್ತು. ಟೀಮನ್ನು ಆರಿಸಲು ಆಯ್ಕೆ ಸಮಿತಿಗೆ ಆಹ್ವಾನಿತ ಸದಸ್ಯರಾದರು. ದೆಹಲಿಯಲ್ಲಿ ವೈಸರಾಯ್ಸ್ ಇಲೆವೆನ್ ಮತ್ತು ರೋಷನಾರಾ ಕ್ಲಬ್ ಇಲೆವೆನ್ ನಡುವೆ ನಡೆದ ಪಂದ್ಯವೊಂದರಲ್ಲಿ ದುಲೀಪ್ ಆಡಿದರು. ಎರಡನೇ ಇನಿಂಗ್ಸ್‌ನಲ್ಲಿ ೧೭೩ ರನ್ ಹೊಡೆದರು. ರನ್ ಮೊತ್ತಕ್ಕಿಂತ ಅವರ ಆಟದ ಚುರುಕು, ಕಲಾತ್ಮಕತೆ ಜನರ ಮನಸ್ಸನ್ನು ಸೂರೆಗೊಂಡಿತು.

ದುಲೀಪ್ ಭಾರತದಲ್ಲಿದ್ದಾಗ ಇಂಗ್ಲೆಂಡ್ ನಲ್ಲಿ ಸಸೆಕ್ಸ್ ಕೌಂಟಿ ಕ್ಲಬ್ ಸಮಿತಿ ಅವರನ್ನು ಮತ್ತೆ ಕ್ಯಾಪ್ಟನ್ ಆಗಿ ಅವಿರೋಧವಾಗಿ ಆಯ್ಕೆ ಮಾಡಿತು. ದುಲೀಪರ ದಿಟ್ಟ ಬ್ಯಾಟಿಂಗ್ ನೆರವಿನಿಂದ ಸಸೆಕ್ಸ್ ಗೆಲ್ಲುತ್ತಲೇ ನಡೆಯಿತು. ಅನೇಕ ಪಂದ್ಯಗಳಲ್ಲಿ ಎರಡನೆಯ ಇನಿಂಗ್ಸ್ ಆಡುವ ಅಗತ್ಯವೇ ಬರಲಿಲ್ಲ. ಆ ವರ್ಷ ಅವರು ಐದು ಸೆಂಚುರಿಗಳನ್ನು ಹೊಡೆದರು. ಒಟ್ಟು ರನ್‌ಗಳ ಮೊತ್ತ ೧೨೮೧. ಬ್ಯಾಟಿಂಗ್ ಸರಾಸರಿ ೪೪.೧೭.

ಕಷ್ಟದ ದಿನಗಳು

ಆ ಸಾಲಿನಲ್ಲಿ ಸಸೆಕ್ಸ್ ಒಂದು ಪಂದ್ಯದಲ್ಲೂ ಸೋತಿರಲಿಲ್ಲ. ಚಾಂಪಿಯನ್ ಷಿಪ್‌ಗಾಗಿ ಯಾರ್ಕಷೈರ್ ಮತ್ತು ಸಸೆಕ್ಸ್ ನಡುವೆ ತೀವ್ರ ಹೋರಾಟ ನಡೆದಿತ್ತು. ಹೇಗಾದರೂ ಮಾಡಿ ಲೀಗ್‌ನಲ್ಲಿ ಅಗ್ರಸ್ಥಾನ ಗಳಿಸಬೇಕೆಂದು ಸಸೆಕ್ಸ್ ನಿರ್ಧರಿಸಿತ್ತು. ಆದರೆ ವಿಧಿ ಅದಕ್ಕೆ ಎರವಾಯಿತು. ಇನ್ನೇನು ಆರು ಲೀಗ್ ಪಂದ್ಯಗಳನ್ನು ಆಡಲಿಕ್ಕಿದೆ ಎನ್ನುವ ಹಂತದಲ್ಲಿ ದುಲೀಪ್ ಮತ್ತೆ ಕಾಯಿಲೆ ಬಿದ್ದರು. ಸಸೆಕ್ಸ್‌ನ ಬ್ಯಾಟಿಂಗ್ ಶಕ್ತಿ ಕುಂದಿತು. ಲೀಗ್‌ನಲ್ಲಿ ಸಸೆಕ್ಸ್ ಎರಡನೇ ಸ್ಥಾನಕ್ಕೇ ತೃಪ್ತವಾಗಬೇಕಾಯಿತು.

ಶ್ವಾಸಕೋಸಕ್ಕೆ ಸಂಬಂಧಿಸಿದ ಅವರ ಕಾಯಿಲೆ ಉಗ್ರವಾಯಿತು. ಚಿಕಿತ್ಸೆಗಾಗಿ ಸ್ವಟ್ಜರ್ಲೆಂಡಿಗೆ ಹೋದರು. ವಾಸಿಯಾಗಲು ದೀರ್ಘ ಸಮಯ ತೆಗೆದುಕೊಂಡಿತು. ಒಂದು ಕಾಲದಲ್ಲಿ ಕೇವಲ ಭಾರತೀಯರೆಂಬ ಕಾರಣದ ಮೇಲೆ ಇಂಗ್ಲೆಂಡ್ ತಂಡಕ್ಕೆ ಆರಿಸಲು ಆಯ್ಕೆ ಸಮಿತಿ ಹಿಂದೆ ಮುಂದೆ ನೋಡುತ್ತಿತ್ತು. ಮಲತಾಯಿ ಧೋರಣೆಗಳನ್ನು ಅನೇಕ ಸಂದರ್ಭಗಳಲ್ಲಿ ಅನುಸರಿಸಿತು. ಆದರೆ ಅದೇ ಸಮಿತಿ ೧೯೩೨-೩೩ ರಲ್ಲಿ ಆಸ್ಟ್ರೇಲಿಯ ಪ್ರವಾಸಕ್ಕೆ ಇಂಗ್ಲೆಂಡ್ ಟೀಮಿಗೆ ದುಲೀಪರ ಸೇವೆ ದೊರೆಯದಿದ್ದಾಗ ತೀವ್ರ ದುಃಖ ವ್ಯಕ್ತಪಡಿಸಿತು.

ಸ್ವಿಟ್ಜರ್ಲೆಂಡಿನ ಆಸ್ಪತ್ರೆಯಲ್ಲಿ ಅವರ ಕಾಯಿಲೆ ಸುಧಾರಣೆಯ ಹಾದಿ ಹಿಡಿದಿತ್ತು. ಆದರೆ ಮತ್ತೊಂದು ದುರಂತ ಎದುರಾಯಿತು. ದುಲೀಪ್ ಅವರ ಜೀವನದಲ್ಲಿ ೧೯೩೩ ರ ಏಪ್ರಿಲ್ ಎರಡು ಅತ್ಯಂತ ದುಃಖದ ದಿನ. ಕ್ರಿಕೆಟ್‌ಗಾಗಿ ಸರ್ವಸ್ವವನ್ನೂ ತ್ಯಾಗಮಾಡಿದ ನವಾನಗರದ ಜಾಮ್ ಸಾಹೇಬರಾದ ರಣಜಿತ್ ಸಿಂಹಜಿಯವರು ನಿಧನರಾದರು. ಈ ಘಟನೆ ದುಲೀಪರ ಮೇಲೆ ತೀವ್ರ ಪರಿಣಾಮ ಬೀರಿತು. ಅವರ ಕಾಯಿಲೆ ಮತ್ತೆ ಉಲ್ಬಣಿಸಿತು.  ದೊಡ್ಡಪ್ಪನವರ ನಿಧನದೊಂದಿಗೆ ತಮ್ಮ ಕ್ರಿಕೆಟ್ ಜೀವನ ಮುಗಿಯಿತೆಂದು ಜ್ವರದ ತಾಪದಲ್ಲಿ ಉದ್ಗಾರ ಮಾಡಿದರು. ಸಾವು-ಬದುಕಗಳ ನಡುವೆ ಭಾರೀ ಹೋರಾಟ ನಡೆಸಿದ ಕೆಲವು ತಿಂಗಳ ನಂತರ ಅವರು ಸುಧಾರಿಸಿದರು.

ಆದರೆ ಅವರೀಗ ಹಿಂದಿನ ದುಲೀಪ್ ಆಗಿರಲಿಲ್ಲ. ಕ್ರಿಕೆಟ್‌ನ ಉತ್ತುಂಗ ಸೋಪಾಗಳನ್ನು ಹತ್ತಿ ರಾರಾಜಿಸಿದ ದುಲೀಪ್ ತಮ್ಮ ೨೭ರ ಹರೆಯದಲ್ಲೇ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳುವುದು ಅನಿವಾರ್ಯವಾಯಿತು.

ಇಂಗ್ಲೆಂಡ್‌ಗೆ ಹಿಂದುರುಗಿದ ನಂತರ ಅವರ ಸಸೆಕ್ಸ್‌ನ ಕ್ಯಾಪ್ಟನ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜೀನಾಮೆಯನ್ನು ಭಾರವಾದ ಹೃದಯದಿಂದ ಅಂಗಿಕರಿಸಿದ ಸಸೆಕ್ಸ್ ಸಮಿತಿ ದುಲೀಪ್‌ಗೆ ‘ಸಸೆಕ್ಸ್ ಬಾಗಿಲು ಯಾವಾಗಲೂ ತೆರೆದಿರುತ್ತದೆ’ ಎಂದು ನಿರ್ಣಯ ಕೈಗೊಂಡಿತು.

‘ಕ್ರಿಕೆಟ್ ಆಟಗಾರರಲ್ಲಿ ಅತ್ಯಂತ ಸಮರ್ಥ ಆಟಗಾರ ದುಲೀಪ್ ಅತ್ಯಂತ ಮನಮೋಹಕ ವ್ಯಕ್ತಿ’  ಎಂದು ವರ್ಣಿಸಿದ ‘ವಿಸ್ಡನ್’  ‘ಇತ್ತೀಚಿನ ವರ್ಷಗಳಲ್ಲಿ ಇಂಗ್ಲೆಂಡ್ ಎಲ್ಲೂ ಕಂಡರಿಯದ ಅತ್ಯಂತ ಆಕರ್ಷಕ ಬಾಟ್ಸ್‌ಮನ್, ಕಲಾತ್ಮಕ ಆಟಗಾರ; ಅವರ ನಿವೃತ್ತಿಯಿಂದ ಸಸೆಕ್ಸ್ ಮಾತ್ರವಲ್ಲ; ಇಡೀ ಇಂಗ್ಲೆಂಡ್ ಕ್ರಿಕೆಟ್‌ರಂಗ ಬರಡಾಗಿದೆ. ಜಗತ್ತಿನಲ್ಲಿ ಕ್ರಿಕೆಟ್ ಇರುವವರೆಗೂ ಅವರ ಆಟ ಚಿರಸ್ಮರಣೀಯವಾಗಿರುತ್ತದೆ’ ಎಂದು ಬರೆಯಿತು.

ಕ್ರಿಕೆಟ್‌ಗೆ ಮಂಗಳ ಹಾಡಿ ದುಲೀಪ್ ಗೆ ಇಂಗ್ಲೆಂಡ್ ನಲ್ಲಿ ಇನ್ನೇನು ಕೆಲಸ? ಭಾರತಕ್ಕೆ ಸೇವೆ ಸಲ್ಲಿಸಬೇಕು; ಭಾರತೀಯರೊಂದಿಗೆ ಬೆರೆತು ಬಾಳಬೇಕು ಎಂದು ಅವರ ಹೃದಯ ಎಂದಿನಿಂದಲೋ ಹಾತೊರೆಯುತ್ತಿತ್ತು. ೧೯೩೪ ರಲ್ಲಿ ಇಂಗ್ಲೆಂಡ್‌ಗೆ ‘ಅಂತಿಮ ನಮಸ್ಕಾರ’ ಸಲ್ಲಿಸಿದ ದುಲೀಪ್ ಭಾರತಕ್ಕೆ ವಾಪಸಾದರು.

ಭಾರತಕ್ಕೆ ಸೇವೆ

ಭಾರತಕ್ಕೆ ಮರಳಿದ ಮೇಲೆ ದುಲೀಪರು ನವಾನಗರ ರಾಜ್ಯದ ಜಾಮ್ ಸಾಹೇಬರಿಗೆ ಆಡಳಿತದಲ್ಲಿ ನೆರವಾಗತೊಡಗಿದರು. ಆದರೆ ಕ್ರಿಕೆಟನ್ನು ಮರೆಯಲಿಲ್ಲ. ಭಾರತದಲ್ಲಿ ಕ್ರಿಕೆಟ್ ಆಟವನ್ನು ಅಭಿವೃದ್ಧಿಗೊಳಿಸಲು ತಮ್ಮ ಕೊನೆಯ ಉಸಿರಿನವರೆಗೂ ವಿವಿಧ ರೀತಿಯಲ್ಲಿ ಶ್ರಮಿಸಿದರು.

ರಣಜಿ ಟ್ರೊಫಿ ಕ್ರಿಕೆಟ್ ಟೂರ್ನಿ ಆರಂಭಿಸುವಲ್ಲಿ ಅವರು ಮಹತ್ವದ ಪಾತ್ರವಹಿಸಿದರು. ಜಾಮ್‌ನಗರದ ಪ್ರತಿಭಾವಂತ ಹುಡುಗರನ್ನೆಲ್ಲಾ ಕಲೆಹಾಕಿ ಬಿಡುವಿನ ವೇಳೆಯಲ್ಲಿ ಕ್ರಿಕೆಟ್ ಆಟದ ತಂತ್ರಗಳನ್ನು ಕಲಿಸಿದರು.

೧೯೩೬ ರಲ್ಲಿ ದುಲೀಪ್‌ಸಿಂಗರು ರಾಜ್‌ಪಿಪ್ಲಾದ ರಾಜಕುಮಾರಿ ಜಯರಾಜಕುಮಾರಿ ಅವರನ್ನು ಮದುವೆಯಾದರು.

೧೯೪೫ರಲ್ಲಿ ಆಸ್ಟ್ರೇಲಿಯದ ಸರ್ವಿಸಸ್ ತಂಡವೊಂದು ಭಾರತಕ್ಕೆ ಬಂದಿತು. ಅದಕ್ಕೆ ಭಾರತ ತಂಡವನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ದುಲೀಪರು ಸದಸ್ಯರಾಗಿದ್ದರು. ಕೆಲಕಾಲ ಭಾರತ ಕ್ರಿಕೆಟ್ ಕ್ಲಬ್ ನ ಕಾರ್ಯದರ್ಶಿಗಳಾಗಿದ್ದರು.

೧೯೪೭-೪೮ ರಲ್ಲಿ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯ ಪ್ರವಾಸ ಕೈಗೊಂಡಿತು. ತಂಡದ ಜೊತೆ ದುಲೀಪ್ ಹೋದರು. ಆಟಗಾರರಾಗಿ ಅಲ್ಲ, ರಾಯಿಟರ್ ಸುದ್ದಿ ಸಂಸ್ಥೆಯ ಕ್ರೀಡಾ ವರದಿಗಾರರಾಗಿ, ಪತ್ರಕರ್ತರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ ದುಲೀಪ್ ಭಾರತ ಆಟಗಾರರಿಗೆ ಅಮೂಲ್ಯ ಸಲಹೆಗಳನ್ನು ನೀಡುತ್ತಿದ್ದರು.

ಆಸ್ಟ್ರೇಲಿಯದಲ್ಲಿ ಹೈಕಮಿಶನರ್

ಸ್ವಾತಂತ್ರ್ಯದ ನಂತರ ೧೯೫೦ರಲ್ಲಿ ಭಾರತ ಸರಕಾರ ದುಲೀಪ್ ಅವರನ್ನು ಆಸ್ಟ್ರೇಲಿಯದ ಹೈಕಮೀಷನರ್ ಆಗಿ ನೇಮಿಸಿತು. ಆಸ್ಟ್ರೇಲಿಯದಲ್ಲಿದ್ದ ಮೂರು ವರ್ಷಗಳ ಅವಧಿ ಯಲ್ಲಿ ಭಾರತದ ಪ್ರತಿನಿಧಿಯಾಗಿ ದಕ್ಷಸೇವೆ ಸಲ್ಲಿಸಿದರು. ಭಾರತ-ಆಸ್ಟ್ರೇಲಿಯ ಸಂಬಂಧವನ್ನು ನಿಕಟ ಹಾಗು ಸುಮಧುರಗೊಳಿಸಿ ಉತ್ತಮ ರಾಜತಾಂತ್ರಿಕ ನಿಪುಣರೆನಿಸಿದರು.

ಆಗ ಆಸ್ಟ್ರೇಲಿಯದ ಪ್ರಧಾನ ಮಂತ್ರಿ ಆರ್.ಜಿ.ಮೆನ್‌ಜಿಸ್ ಅವರನ್ನು ದುಲೀಪ್ ಭೇಟಿ ಮಾಡಲು ಹೋದಾಗಲೆಲ್ಲ ಮೊದಲ ಅರ್ಧಗಂಟೆ ಕ್ರಿಕೆಟ್ ಬಗ್ಗೆ ಚರ್ಚಿಸುತ್ತಿದ್ದರು. ಅನಂತರವೇ ಇತರ ವಿಷಯಗಳನ್ನು ತೆಗೆದುಕೊಳ್ಳುತ್ತಿದ್ದರು.

೧೯೫೩ ರ ಜುಲೈನಲ್ಲಿ ಭಾರತಕ್ಕೆ ವಾಪಸ್ಸಾದ ದುಲೀಪ್ ಸಿಂಹಜೀಯವರು ೧೯೫೪ರಲ್ಲಿ ಸೌರಾಷ್ಟ್ರ ರಾಜ್ಯದ ಲೋಕ ಸೇವಾ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡರು. ಅಖಿಲ ಭಾರತ ಕ್ರೀಡಾ ಮಂಡಳಿಯ ಸದಸ್ಯರಾದರು. ರಾಜ ಕೋಟೆಯಲ್ಲಿ ಕ್ರಿಕೆಟ್ ತರಬೇತಿ ಶಿಬಿರವೊಂದನ್ನು ನಡೆಸಿಕೊಟ್ಟರು. ಕೇಂದ್ರಾಡಳಿತ ಪ್ರದೇಶವಾಗಿದ್ದ ಸೌರಾಷ್ಟ್ರ ಮುಂಬಯಿಯಲ್ಲಿ ವಿಲೀನಗಂಡ ನಂತರ ಮುಂಬಯಿ ಲೋಕಸೇವಾ ಆಯೋಗದ ಸದಸ್ಯರಾದರು. ಸರ್ವಿಸಸ್ ಕ್ರೀಡಾ ಮಂಡಳಿ ಆಶ್ರಯದಲ್ಲಿ ಖಡಕವಾಸ್ಲದಲ್ಲಿ ಒಂದು ಕ್ರಿಕೆಟ್ ಶಿಬಿರವನ್ನು ನಡೆಸಿಕೊಟ್ಟರು. ಮುಂಬಯಿಯ ಶಾಲೆಗಳಿದ ಪ್ರತಿಭಾವಂತ ಆಟಗಾರರನ್ನು ಸೇರಿಸಿ ಅವರಿಗೆ ತಾವೇ ಖುದ್ದಾಗಿ ನೆಟ್ ಅಭ್ಯಾಸ ನೀಡಿದರು. ಅಖಿಲ ಭಾರತ ಕ್ರೀಡಾ ಮಂಡಳಿಯ ಅಧ್ಯಕ್ಷರಾದರು. ತಮ್ಮ ಅಧಿಕಾರದ ಅವಧಿಯಲ್ಲಿ ರಾಷ್ಟ್ರದ ಶಾಲಾ ಕಾಲೇಜುಗಳಲ್ಲಿ ಕ್ರೀಡಾ ಚಟುವಟಿಕೆಗಳು ಜನಪ್ರಿಯವಾಗಲು ಮತ್ತು ಅವುಗಳನ್ನು ಅಭಿವೃದ್ಧಿಗೊಳಿಸಲು ಅನೇಕ ಕ್ರಮಗಳನ್ನು ಕೈಗೊಂಡರು.

ಇನಿಂಗ್ಸ್ ಮುಗಿಯಿತು.

೧೯೫೬-೬೦ ರಲ್ಲಿ ಆಸ್ಟ್ರೇಲಿಯದ ಕ್ರಿಕೆಟ್ ತಂಡ ಭಾರತಕ್ಕೆ ಪ್ರವಾಸ ಕೈಗೊಂಡಿತು. ಆಸ್ಟ್ರೇಲಿಯದವರ ಆಟವನ್ನು ನೋಡಿ ಕಲಿತುಕೊಳ್ಳಲು ಭಾರತದ ಯುವಕರಿಗೆ ದುಲೀಪ್ ಸಲಹೆ ಮಾಡಿದ್ದರು. ಆದರೆ ಆಸ್ಟ್ರೇಲಿಯದವರನ್ನು ಸ್ವಾಗತಿಸುವ ಭಾಗ್ಯ ದುಲೀಪ್ ಅವರಿಗೆ ಸಿಗಲಿಲ್ಲ. ಕೊನೆಯ ಕ್ರಿಕೆಟ್ ಶಿಬಿರವನ್ನು ಮುಗಿಸಿದ ಅವರು ಮುಂಬಯಿಯಲ್ಲಿ ೧೯೫೯ರ ಡಿಸೆಂಬರ್ ಐದರಂದು ಬೆಳಿಗ್ಗೆ ವಿಧಿವಶರಾದರು.

೧೯೬೧ ರಲ್ಲಿ ದುಲೀಪ್ ಸ್ಮಾರಕಾರ್ಥ ಭಾರತದ ಅಂತರವಲಯ ಕ್ರಿಕೆಟ್ ತಂಡಗಳ ಮಧ್ಯೆ ದುಲೀಪ್ ಟ್ರೋಫಿ ಆರಂಭವಾಯಿತು.

ದುಲೀಪ್ ಇಂದು ನಮ್ಮ ಮುಂದೆ ಇಲ್ಲ. ಆದರೆ ಕ್ರಿಕೆಟ್‌ರಂಗದಲ್ಲಿ ಅವರ ಸಾಧನೆ, ಭಾರತದ ಕ್ರಿಕೆಟ್‌ಗಾಗಿ ಅವರು ಸಲ್ಲಿಸಿದ ಸೇವೆ ಭಾರತೀಯರಿಗೆ ಚಿರಸ್ಮರಣೀಯ.