ದೊಡ್ಡಬಳ್ಳಾಪುರ ತಾಲ್ಲೂಕು ಕಸಬಾ ಪೇಟೆಯಲ್ಲಿರುವ ಶ್ರೀ ಮಧ್ವೀರಶೈವರ
ಚನ್ನಬಸವಯ್ಯನ ವರಕುಮಾರ ಮಿಠಾಯಿ ಅಂಗಡಿ ಕೆಂಪಣ್ಣನವರು

ವಿಭವ ಸಂವತ್ಸರದ ಪುಷ್ಯ ಬಹುಳ 11
ಮಂಗಳವಾರದಂದು ಪ್ರತಿ ಮಾಡಿದ್ದು

 

ಗಣಸ್ತುತಿ

ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಂ
ಅನೇಕದಂತಂ ಭಕ್ತಾನಂ ಏಕದಂತ ಮುಪಾಸ್ಮಹೇ ॥

ದರುವೂ

ಶ್ರೀ ಗೌರಿ ವರಪುತ್ರಸ್ಮಿತ ಭವ್ಯ ಚಾರಿತ್ರ
ಯೋಗಿ ಸಜ್ಜನ ಗಾತ್ರದೇವ ಗಣರಾಜ ॥
ನಿಟಿಲ ನೇತ್ರನ ಸುತನೆ ನಿಗಮಾಗಮ
ವಂದಿತನೆ ಸ್ಪಟಿಕಾನನ್ನಿಭ ಕುಂಡ ಲಧರನೆ ಗಣನಾಥ ॥
ಪೊಡವಿಯೊಳ್ ಕುಡುತನಿಯ, ವಡೆಯಾ
ಭೀಮೇಶನ ಬಿಡದೆ ಧ್ಯಾನಿಸುವೆ
ಕೊಡು ಯೆನಗೆ ಮತಿಯಾ ಗಣನಾಥ ॥

 

ಪೀಠಿಕೆ

ಕೃಷ್ಣ : ಯಲಾ ಸಾರಥಿ ಹೀಗೆ ಬಾ ಮತ್ತೂ ಹೀಗೆ ಬಾ ಯಲಾ ಸಾರಥಿ ಯಮ್ಮ ಸಮ್ಮುಖದಲ್ಲಿ ಬಂದು ನಿಂದು ಯಮ್ಮನ್ನು ಯಾವ ಸಮಸ್ಥಾನಕ್ಕೆ ಕಾರಣಕರ್ತರೆಂದು ಕೇಳುವಂಥವನಾಗುತ್ತಾ ಯಿದ್ದಿ ಆದರೆ ಯಮ್ಮ ವಿದ್ಯಮಾನವನ್ನು ಚನ್ನಾಗಿ ಪೇಳುತ್ತೇನೆ ಚಿತ್ತವಿಟ್ಟು ಕೇಳುವಂಥವನಾಗೊ ಸಾರಥಿ॥

ಅಯ್ಯ ಸಾರಥಿ, ಈರೇಳು ಲೋಕಕ್ಕೆ ಅಧಿಕವಾದ ದ್ವಾರಾವತಿಯಲ್ಲಿ ಚಾರುತರವಾದ ಗೋಪಿಕಾ ಸ್ತ್ರೀಯರೆಂಬ ತಾರಾ ಮಂಡಲದಲ್ಲಿ ನೀರಜರ ಶತ್ರುವಾದ ಧೀರಚಂದ್ರಮನಂತೆ ವಾರಿಜಾಕ್ಷಿಯರ ಸುರತದಲ್ಲಿ ಮಾರನೆಂದೆನಿಸಿ ಈ ಭೂಮಿಜನರನ್ನು ಪರಿಪಾಲಿಸುವ ಕ್ಷೀರಾಬ್ಧಿಶಯನನಾದ ಶ್ರೀಕೃಷ್ಣಮೂರ್ತಿ ನಾನೇ ಅಲ್ಲವೇನಯ್ಯ ಸಾರಥಿ.

ಸಾರಥಿ : ಈ ಸಭಾಸ್ಥಾನಕ್ಕೆ ಬಂದ ಕಾರಣವೇನಯ್ಯ ಸ್ವಾಮಿ ಭಕ್ತಜನ ಪ್ರೇಮೀ.

ದರುವೂ

ಇಂದು ವದನಾ ದೇವ ಅತಿನಂದ ॥
ಮುರಳೀಯಲೋಲಾನೆ ಮುನಿಜನ ಪಾಲನೆ
ಕರುಣ ಕೃಪಾಲನೆ ಕೌಸ್ತುಭಲೋಲನೆ ॥

ಕೃಷ್ಣ : ಯಲಾ ಸಾರಥಿ, ಈ ಲೋಕವನ್ನು ವುತ್ಪತ್ತಿ ಮಾಡುವುದಕ್ಕೆ ಬ್ರಹ್ಮನೆ ಕರ್ತನೂ ಆತನು ವುತ್ಪತ್ತಿ ಮಾಡಿದ ಸರ‌್ವ ಪ್ರಾಣಿಗಳನ್ನು ಸಂರಕ್ಷಿಸುವದಕ್ಕೆ ನಾನೇ ಕರ್ತನೂ ಪ್ರಳಯ ಕಾಲಕ್ಕೆ ರುದ್ರನೆ ಕರ್ತನೂ ಇದೂ ಅಲ್ಲದೆ ಇನ್ನೂ ವಿಸ್ತಾರವಾಗಿ ಪೇಳುತ್ತೇನೆ ಕೇಳುವಂಥವನಾಗೊ ಸಾರಥಿ॥

ದರುವೂ

ಶಂಕು ಚಕ್ರಾಂಕಿತ ರಾಕಿತವಾಗಿರೆ
ಪಂಕಜನಾಭನೆ ಪರಮವಿಲೋಲನೆ ॥

ಕೃಷ್ಣ : ಯಲಾ ಸಾರಥಿ ವಾಮನ ಅವತಾರವನ್ನೆತ್ತಿ ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದು ಬಹುದ್ಧಾವತಾರವೆತ್ತಿ ತ್ರಿಪುರಸುರರ ವ್ರತಭಂಗ ಮಾಡಿದಂಥ ನಾರಾಯಣಮೂರ್ತಿ ನಾನೇ ಅಲ್ಲವೇನಯ್ಯ ಸಾರಥಿ.

ಯಲಾ ಸಾರಥಿ, ಸಿಂಧುವಿನ ಮಧ್ಯದಲಿ ಚಂದದಿಂ ಪರಿಶೋಭಿಸುವ ಅಂದವಾದ ದ್ವಾರಾವತಿಯಲ್ಲಿ ನಂದ ಗೋಪಿಕಂದನೆಂಬುವ ಕ್ರಿಷ್ಣಮೂರ್ತಿ ನಾನೇ ಅಲ್ಲವೇನೊ ಸಾರಥಿ॥ಯಲಾ ಸಾರಥಿ ನಾವು ಬಂದು ಬಹಳ ಹೊತ್ತಾಯಿತು. ಗೋಕುಲಕ್ಕೆ ತೆರಳಿ ಹೋಗುತ್ತೇವಯ್ಯ ಸಾರಥಿ॥

ದರುವೂ

ಗೋಪಾಲ ಬಾಲ ಗೋಕುಲಕ್ಕೆ ತೆರಳಿ ಪೋದಾ

ತ್ರಿವುಡೆ

ಧರೆಯೊಳಿಂದ್ರಾಪ್ರಸ್ತ ನಗರದಿ ಮೆರೆವ ಧರ್ಮಜನಾನುರಾಗದಿ
ವಿರಚಿಸಿದ ರಾಜಾಸೂಯಾಯದ್ವರ ವಾದಿಂದಾ॥

ಮೆರೆವ ಕುರುಪತಿ ಕರ್ಣ ಗುರುಕೃಪಾಶ್ವತ್ಥಾಮಶಲ್ಯರು
ತೆರಳಿ ವೈಭವದಿಂದ ಮಾರ್ಗದಿ ಬರುವ ಸಮಯದೊಳು॥

ದೃಪದ ತನುಜೆಯು ಗೈದ ಪರಿಭವ ವಿರಳ ವಜ್ರಾಯುಧದ
ಘಾತಿಗೆ ಕಡುನಡುಗಿದ ಚಿಂತೆಯಲ್ಲಿ ಕುರುಭೂಪನು ತಾನು॥

ಮಕುಟವರ್ಧನ ಭೀಮಸೇನನು ಅಖಿಲ ಭುಜಬಲರನ್ನು ಕೆಡಹಿದ
ಪ್ರಕಟದಿಂದೆಲ್ಲರನು ಕರೆದನು ವಾಸವಾತ್ಮಜನೂ॥

ಕೌರವ : ಎಲೈ ಮಾನುಷ್ಯನೆ ಹೀಗೆ ಬರುವಂಥವನಾಗು ಎಲೈ ಮಾನುಷ್ಯನೆ ಮತ್ತೂ ಹೀಗೆ ಬರುವಂಥವನಾಗು ಎಲಾ ಸಾರಥಿ ಯನ್ನೆದುರಿನಲ್ಲಿ ನಿಂತು ಘಟಿತ ಭಯವಿಲ್ಲದೆ ಚಟುಲರತ ಮಾನುಷ್ಯನಾಗಿ ತಟಸ್ಥವಾದ ಸಭಾಮಂಟಪದೊಳ್ ನಿಟಿಲಾಂಬಕನಂತೆ ನಿಂದು ವಿವರಿಸುವ ನೀ ಧಾರೊ ನಿನ್ನ ಜನನಿ ಜನಕರು ಪೆಸರ್ ಪಿಡಿದು ಕರೆಯುವ ನಾಮಧೇಯವೇನೊ ಚಾರ ವರ ಮಣಿಹಾರ॥

ಸಾರಥಿ : ಸಾರಥಿ ಸಾರಥಿಯೆಂದು ಕರೆಯುತ್ತಾರೈ ಬುದ್ಧಿ ಭುವನಂ ಪ್ರಸಿದ್ಧಿ॥

ಕೌರವ : ಶಹಭಾಸ್ ಸಾರಥಿಯೆಂಬ ಚಾರಕುಲ ಶಿರೋಮಣಿಯೆ ನಿನಗ್ಯಾರು ಸರಿಯೆ ಹಾಗಾದರೆ ಪೇಳುವೆನು ಕೇಳು॥ಭಲಾ ಸಾರಥಿ॥ಅತಳ ವಿತಳ ಸುತಳ ಪಾತಾಳ ಭೂಲೋಕ ಭುವಲೋಕ ಸತ್ಯಲೋಕಂಗಳೆಂಬ ಚತುರ್ದಶ ಭುವನಾಂತರದೋಳ್‌ ಅಂಗ ವಂಗ ಕಳಿಂಗ ಕಾಂಬೋಜ ಕರಹಾಟ ದ್ರವಿಡ ದ್ರಾವಿಡ ಮಹಾರಾಷ್ಟ್ರ ಮಗಧ ಚೇದಿ ಪುಳಿಂದ್ರ ಮಾಳವ ನೇಪಾಳ ಗುರ್ಜರ ಕೊಂಕಣ ತೆಂಕಣ ಪಾಂಡಿ ಮರಳ ಚೋಳ ಬರ್ಬರ ತ್ರಿಗರ್ತ ಮೊದಲಾದ ಛಪ್ಪನ್ನ ದೇಶದೊಳ್ ಮಿಗಿಲೆನಿಸಿಕೊಂಡಿರುವ ಹಸ್ತಿನಾವತಿಯನ್ನು ಸ್ವಂತದಿಂ ಪಾಲಿಸುವ ಧೃತರಾಷ್ಟ್ರರಾಯನ ಪಟ್ಟದರಸಿಯಾದ ಶ್ರೇಷ್ಠ ಗಾಂಧಾರಿಯ ಗರ್ಭದೊಳ್ ಪುಟ್ಟಿ ಮಾರ್ಮಲೆವ ಅರಿರಾಯರ ಗಂಡ ಕೋದಂಡ ನಿಗಮ ಪಾಂಡಿತ್ಯದಿಂ ಗರ್ಭಕ್ಷೋಣೀಶ್ವರರ ಮಾಣದೆ ಕಾಣಿಕೆಯಂ ಕೊಂಬ ಕಲಿಯುಗದ ಭೀಮಾ ಕಾಮಿನಿಕಂದರ್ಪನೆನಿಸಿ ಹಸ್ತಿನಾವತಿಯನ್ನು ಪಾಲಿಸುವ ಕೌರವೇಶ್ವರನೆಂಬ ನಾಮಾಂಕಿತವು ಗೊತ್ತಾಗಲಿಲ್ಲವೇನೋ ಸಾರಥಿ॥

ಯಲೈ ಸಾರಥಿ ಯಮ್ಮಯ ನಾಮಾಂಕಿತವು ಚನ್ನಾಗಿ ಗೊತ್ತಾಗಲಿಲ್ಲವೇನೊ ಸಾರಥಿ॥ಭಾನುಕುಲೋದ್ಬವ ಭವಸುತ ಧೃತರಾಷ್ಟ್ರ ಮಾನಸುಧಿಯಲ್ಲಿ ಸಂಭವಿಸಿದ ಏಕಾದಶ ಅಕ್ಷೋಹಣಿಗೆ ವಲ್ಲಭನೆನಿಸಿ ಪಾಂಡವರಿಗೆ ದಾವಾನಲಭೀಮಾಗಜಸಿಂಹ ಕೌರವ ಪತಿಯೆಂಬ ನಾಮವುಳ್ಳ ಘನರಾಯ ನಾನಲ್ಲವೇನೋ ಸಾರಥಿ॥

ಸಾರಥಿ : ಅಯ್ಯ ರಾಜ ಈ ಸಭಾಸ್ಥಾನಕ್ಕೆ ಬಂದ ಕಾರಣವೇನಯ್ಯ ರಾಜ॥

ಕೌರವ : ಯಲಾ ಸಾರಥಿ, ಯೀ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ ನೆನ್ನೆ ದಿವಸದಲ್ಲಿ ನನ್ನ ತಮ್ಮನಾದ ಕರ್ಣಭೂಪಾಲನಿಗೆ ಸೇನಾಧಿಪಟ್ಟವನ್ನು ಕಟ್ಟಿದ್ದೆನಾದ ಕಾರಣ॥ನನ್ನ ತಮ್ಮನಾದ ರಾಧೇಯಕುಮಾರನನ್ನು ಅತಿಜಾಗ್ರತೆಯಿಂದ ಕರೆಸುವಂಥವನಾಗೊ ಚಾರ ವರ ಫಣಿಹಾರಾ

 

(ಕರ್ಣನ ಆಗಮನ)

ಕರ್ಣ : ಯಲಾ ಸಾರಥಿ, ಹೀಗೆ ಬರುವಂಥವನಾಗು-ಯಲಾ ಮಾನುಷ್ಯನೆ ಮತ್ತೂ ಹೀಗೆ ಬರುವಂಥವನಾಗು॥ಯಲಾ ಸಾರಥಿ, ಯೀ ಪೊಡವಿಯೋಳ್ ಉರುತರ ಪೊಡವಿಪರ ಸತ್ಯವಂ ದುಡುಕಿನಿಂದೊಡೆದು, ತಿವಿತಿವಿದು ಗಡಣದಿಂ ಪೊರಮಡಿಸುವ ದುರ‌್ಯೋಧನ ಭೂಪಾಲನ ಸಂಮುಖದೋಳ್ ಯಿರುವ ಧುರಧೀರ ಹರ ರಣಶೂರ ಗುಣಪೋರಾ ರಾಧೇಯ ಕುಮಾರ ತ್ಯಾಗದೊಳ್‌ ಪರಿಪೂರ್ಣ ಕರ್ಣನೆಂಬ ನಾಮಾಂಕಿತವೆಂದು ತಿಳಿಯಲಾ ಸಾರಥಿ.

ಭಳಿರೆ ಸಾರಥಿ, ಈ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ ನೆನ್ನೆದಿನದಲ್ಲಿ ನಮ್ಮಣ್ಣನಾದ ಕೌರವೇಶ್ವರನು ಯನಗೆ ಸೇನಾಧಿಪಟ್ಟವನ್ನು ಕಟ್ಟಿದ್ದಾನಾದ ಕಾರಣ ಬಂದು ಇದ್ದೇನೆ. ಅತಿಜಾಗ್ರತೆಯಿಂದ ಭೇಟಿಯನ್ನು ಮಾಡಿಸುವಂಥವನಾಗೋ ದೂತಾ ರಾಜ ಸಂಪ್ರೀತಾ॥

ಕರ್ಣ : ನಮೋನ್ನಮೊ ಅಣ್ಣಾ ಕೌರವ ಶಿಖಾಮಣಿ.

ಕೌರವ : ದೀರ್ಘಾಯುಷ್ಯಮಸ್ತು ಬಾರಯ್ಯ ಕರ್ಣ ವರ ಕಲ್ಪವರ್ಣ.

ಕರ್ಣ : ಅಣ್ಣ ಕೌರವ ಶಿಖಾಮಣಿ, ಯನ್ನಿಷ್ಟು ಜಾಗ್ರತೆಯಿಂದ ಕರೆಸಿದ ಕಾರ‌್ಯವೇನಯ್ಯ ಭೂಪ ಶೌರ‌್ಯಾಟೋಪ.

ದರುವೂ

ಯೇನೆಂದು ಹೇಳಾಲೈಯ್ಯ ರಾಧೇಯನೇ
ಮಾನಾಹೀನದ ಸುದ್ದಿಯಾ॥
ಮಾನವಾಗ್ರಣಿಯೆ ಕೇಳ್ ನಾನಾಡಿದರೆ
ಫಲಯೇನೆಂಬೆ ವಿಧಿಯಾ ಮಾಯಾ॥

ಕೌರವ : ಅಯ್ಯ ರಾಧೇಯನೆ, ಆ ದ್ರೌಪದಿ ಮಾಡಿದ ಅವಮಾನವು ಎಷ್ಟೆಂದು ಹೇಳಲಿ. ಆ ಅಪಮಾನವನ್ನು ನಿನ್ನೊಡನೆ ಹೇಳಿ ಫಲವೇನಯ್ಯ ರಾಧೇಯನೇ॥

ದರುವು

ಧರ್ಮಾಜನಾಧ್ವರಕೆ ಕರಿಸಲು ನಮ್ಮ
ಧರ್ಮಾದಿಂ ಪೋದುದಕೆ ದುರ್ಮದದಿಂ ದ್ರೌಪದಿಯೆ
ನಗಪಮಾನಾದಾಪೇರ್ಮೆಯಿಂ
ಮಾಡಿದಳೊ ರಾಧೇಯನೇ
ಮಾನಾಹೀನದ ಸುದ್ದಿಯಾ॥

ಕೌರವ : ಅಯ್ಯ ತಮ್ಮಾ ಹಿಂದೆ ರಾಜಸೂಯಯಾಗಕ್ಕೆ ನಮ್ಮನ್ನು ಕರೆಸಲು ನಾವು ಪೋದುದಕ್ಕೆ ವಂದಾನೊಂದು ದಿನ॥ಆ ರಾಜಭವನವಂ ನೋಡುತ್ತಾ ಬರುವಲ್ಲಿ ಕಾಲುಜಾರಿ ಬೀಳಲು ಆ ದ್ರೌಪದಿಯು ಅದನ್ನು ಕಂಡು ಸಮಸ್ತ ರಾಜಾಧಿರಾಜರ ಮುಂದೆ ಗೊಳ್‌ಯೆಂದು ನಕ್ಕು ಯನಗೆ ಅಪಹಾಸ್ಯಕ್ಕೆ ಮಾಡಿದಳಯ್ಯ ಅನುಜಾ ಸಾಮ್ರಾಜ್ಯ ತನುಜಾ॥

ಪದ

ಏಕ ಚಕ್ರಾಧಿಪಗೆ ಮಾಡಿದಪಮಾನಾ ಬೇಕಿಲ್ಲವೆ ನಿಮಗೆ॥
ಆ ಕಮಲಾಕ್ಷನು ಸಾಕಾರವಾಗಿ ನಡೆಯದೆಂಮ್ಮಯ ಶೌರ‌್ಯವೂ॥
ಯೇನೆಂದು ಹೇಳಾಲೈಯ್ಯ॥

ಕೌರವ : ಅಯ್ಯ ರಾಧೆಯನೇ, ಏಕ ಚಕ್ರಾಧಿಪನೆಂದು ಯೀ ವಸುಧೆಯೊಳ್ ಪೆಸರುಪಡೆದಿರುವ ಯನಗೆ ಮಾಡಿದ ಅಪಮಾನ ನಿನಗಿಲ್ಲವೇನಯ್ಯ ತರಣಿಜನೇ॥

ಆದರೆ ಭಂಡರಾದ ಪಾಂಡವರಿಗೆ ಪುಂಡರೀಕಾಕ್ಷನೊಲುಮೆ ಇರುವುದಾದ ಕಾರಣ ಅವರ ಮೇಲೆ ನಮ್ಮ ಶೌರ‌್ಯವು ನಡೆಯಲಾರದು ಇದಕ್ಕೆ ಧಾವ ಆಲೋಚನೆ ಮಾಡಬೇಕಯ್ಯ ಕರ್ಣ ರಿಪುಕುಲವರ್ಣ

ದರುವೂ

ಭಳಿರೆ ಮಂಡಲದೊಳು ಪಾಂಡು
ನಂದನರನ್ನು ಬಳಲಿಸುವರೇನೋ
ತಂಮಾ॥ಪುಂಡನಣಗಿಸುವೆನು ಭಂಡ ಭೀಮಾ
ರ್ಜುನರಶುಂಡಾಲಪುರ ಬಿಟ್ಟೋಡಿಸುವೆ ವೋಡಿಸುವೆ॥
ಇದಕೊಂದು ಯೋಚನೆಯು
ಮುದದಿಂದಾ ಪೇಳಯ್ಯ ಸಾಧಿಸುವೆ
ಪ್ರಸ್ತಪುರಿ ಮಾಧವನು ಬರಲಿ ತಾ ಬರಲಿ॥

ಕೌರವ : ಮಾರ್ತಾಂಡ ನಂದನನಾದ ಕರ್ಣನೆ ಕೇಳು. ದಂಡಧರ ಸುತನಾದ ಭೀಮಾರ್ಜುನ ಮಾದ್ರೆಯರು ಸಹಾ ಶುಂಡಾಲಪುರಕ್ಕೆ ಅಧ್ಯಕ್ಷಿತರಾಗಿ ಯಿರುತ್ತಾರೆ. ಇದೂ ಅಲ್ಲದೆ ಹಿಂದೆ ಯನ್ನ ತಂದೆಯಾದ ಧೃತರಾಷ್ಟ್ರ ಮಂಡಲೇಶ್ವರನ ಆಜ್ಞೆಯಂತೆ ಕಂಸ ವಿರೋಧಿಯಾದ ಯದುಪತಿಯ ದೂತರನ್ನು ಸದೆಬಡಿದು ರಾಜ್ಯವನ್ನು ಸಾಧಿಸುವ ಪರಿಯಾಯವನ್ನು ಪೇಳಬಹುದಯ್ಯ ಕರ್ಣ ವರ ಕಲ್ಪವರ್ಣ॥

ದರುವೂ

ವುಡುಪತಿ ಕುಲಜನೆ ತಡಿಯದೆ ಶಕುನಿಯ
ಬಿಡದೆ ಕರಿಸೊ ಯೀಗ ಬೇಗಾ॥ದ್ಯೂತ
ಮುಖದಿ ಅ ಪಾಂಡವರನ್ನ ಸೋಲಿಸಿ
ವಶಪಡಿಸೊ ಧರೆಯಾ ಸಿರಿಯಾ ಪೊಡವಿ
ಪ್ರಸ್ತಪುರಿ ಮೃಢಸಖಚಲಧರ ಬಿಡದೆ
ನಮ್ಮ ಪೊರೆವಾ ಬರುವಾ॥

ಕರ್ಣ : ವುಡುಪತಿ ಕುಲಾಗ್ರಣಿಯಾದ ಅಗ್ರಜನೆ ಕೇಳೂ ಬಡಪಾಂಡವರ ಅಡಿಯಿಡದಂತೆ ಯಡೆಬಿಡದೆ ಶಕುನಿಮುಖದಿಂದ ಅವರಂ ಕರೆಸಿ ದ್ಯೂತಮುಖದಿಂದ ಅವರು ಪಾಲಿಸುವ ಭೂಮಿ ಧನಕನಕ ವಸ್ತುವಾಹನಂಗಳೂ ಅವರನ್ನು ಸಾರಿ ಗೆಲ್ಲುವ ಪ್ರಯುಕ್ತ ಯಾವುದೆಂದರೆ ನಮ್ಮ ಮಾವನಾದ ಶಕುನಿಯನ್ನು ಅತಿಜಾಗ್ರತೆಯಿಂದ ಕರೆಸುವಂಥವನಾಗೈ ಕುರುಪತಿ॥

ಕೌರವ : ಅದೇ ಪ್ರಕಾರ ಕರೆಸುತ್ತೇನೆ. ನೀನು ಯೀ ಸಿಂಹ ಪೀಠವನ್ನು ಅಲಂಕರಿಸಯ್ಯ ಕರ್ಣ ಭೂಪಾಲ॥

ಕರ್ಣ : ಅದೇ ಪ್ರಕಾರ ಅಲಂಕರಿಸುತ್ತೇನಯ್ಯ ರಾಜಾ.

ಕೌರವ : ಅಯ್ಯ ಸಾರಥಿ ನಮ್ಮ ಮಾವನಾದ ಶಕುನಿಯನ್ನು ಕರೆಸುವಂಥವನಾಗೊ ಸಾರಥಿ.

ಶಕುನಿ : ಯಲೈ ಸಾರಥಿ. ಈ ನವಖಂಡ ಭೂ ಪೃಥ್ವಿಯನ್ನು ಭವಹರನ ಕೃಪೆಯಿಂದ ಪಾಲಿಸುವ ಹಸ್ತಿನಾಪುರಕ್ಕೆ ಅಧ್ಯಕ್ಷಿತರಾದ ಧೃತರಾಷ್ಟ್ರ ಪಾಂಡು ಭೂಪಾಲರ ಉದರಾಬ್ಧಿಯೊಳ್ ಸುಧಾಕರ ತೇಜೋನ್ನತರಾದ ದುರ್ಯೋಧನ ಭೀಮಾರ್ಜುನರಿಗೆ ಸೋದರಮಾವನೆಂದೆನಿಸಿಕೊಂಡಿರುವ ಶಕುನಿ ಭೂಪಾಲರಾಯನೆಂದು ತಿಳಿಯುವಂಥವನಾಗೊ ಸಾರಥಿ.

ಸಾರಥಿ : ಯೀ ಸಭಾ ಪಾಂಡಿತ್ಯದ ಬಳಿಗೆ ಬಂದ ಕಾರಣವೇನೈ ದೇವಾ ಕೀರ್ತಿ ಪ್ರಭಾವಾ.

ಶಕುನಿ : ಯಲಾ ಸಾರಥಿ. ಯೀ ಸಭಾ ಪಾಂಡಿತ್ಯರ ಬಳಿಗೆ ಬಂದ ಕಾರಣವೇನೆಂದರೆ ಯನ್ನ ಸೋದರಳಿಯನಾದ ಕೌರವ ಭೂಪಾಲನನ್ನು ಭೇಟಿ ಮಾಡಿಸೋ ದೂತ ರಾಜ ಸಂಪ್ರೀತಾ.

ಕೌರವ : ನಮೋನ್ನಮೋ ಮಾವನವರೆ……..

ಶಕುನಿ : ದೀರ್ಘಾಯುಷ್ಯಮಸ್ತು ಪೇಳುತ್ತೇನಯ್ಯ ಕೌರವ ಭೂಪಾ.

ದರುವೂ

ಧೃತರಾಷ್ಟ್ರ ತನಯ ಕೇಳೈ ಯೀ ಸಮಯದಿ
ಕ್ಷಿತಿಪ ಕರೆಸಿದ ಕಾರ‌್ಯವಾ
ಅತಿಶಯವಾಗಿಹ ವ್ಯಥೆಯ ತಿಳುಹು ನಿನ್ನ
ಹಿತನಾಗಿರುವೆ ನಾ ನಿಮ್ಮ ನಿಮ್ಮಯ
ಕಾರ‌್ಯ ಇನಿತು ಮೀರುವನಲ್ಲವೋ॥

ಶಕುನಿ : ಸೃಷ್ಠಿಪತಿಯಾದ ಧೃತರಾಷ್ಟ್ರ ಜೇಷ್ಠ ನಂದನನಾದ ರಾಜಶ್ರೇಷ್ಟನೆ ಕೇಳು. ಅಷ್ಟೈಶ್ವರ‌್ಯ ಭೋಗ ಹೃತ್ಕುಷ್ಟನಾಗಿರುವದಲ್ಲದೆ ಮತ್ತು ಭೀಷ್ಮ ದ್ರೋಣ ಅಶ್ವತ್ಥಾಮರಾದ ಗುರುಸಹಾಯಂಗಳಿರುವುದಲ್ಲದೆ ಸರ‌್ವಥಾ ಕಷ್ಟನಿಷ್ಟುರ ಕಾರ‌್ಯಕಾರಣಕ್ಕೆ ಕಾಲಾಂಕರನಂತೆ ಸಮಯಕ್ಕೆ ಕರ್ಣನಿದ್ದಾನೆ. ಇಷ್ಠು ಮಾತ್ರಕ್ಕೆ ಯನ್ನ ಏನು ನಿಮಿತ್ಯಾರ್ಥವಾಗಿ ಕರೆಸಿದ್ಧೀಯ ಪೇಳಬಹುದಯ್ಯ ಕುರುಪತಿ.

ದರುವೂ

ಮಾತು ಲಾಲಿಸೊ ಮಾವಯ್ಯ ಯಮ್ಮಯ ಕಾರ‌್ಯ ನಿಮ್ಮೊಳು
ಅರುಹುವೆ ದಮ್ಮಯ್ಯ ವಾತಸಂಭವ ಭೀಮನಗ್ರಜನೊಳು
ದ್ಯೂತ ನೆವದಿ ಗೆಲ್ಲುವೆ ರಾಜ್ಯವ
ಅತಿಹಿತನಂತೆ ವೋಗಿ ಧರ್ಮಜಗೇಳಯ್ಯ.

ಕೌರವ : ಮಾವನಾದ ಶಕುನಿ ಭೂಪಾಲನೆ ಕೇಳು. ಈ ವಸುಧೆಯೊಳ್ ಅತಿಶಯವಾಗಿ ಮೆರೆಯುವ ಬಿಸಜಾಕ್ಷನ ಸಖರೆಂದೆನಿಸಿರ್ಪ ಮತಿಹೀನರಾದ ಪಾಂಡವರೆಂಬ ಧರ್ಮಭೀಮಾದಿಗಳನ್ನು ದ್ಯೂತಮುಖದಿಂದ ಗೆಲ್ಲಬೇಕೆಂಬ ಅತಿ ಭ್ರಾಂತು ಪುಟ್ಟಿರುವುದಾದ ಕಾರಣ ಅತಿಜಾಗ್ರತೆಯಿಂದ ಪೋಗಿ ಧರ್ಮರಾಯನನ್ನು ಕರೆದುಕೊಂಡು ಬಾರಯ್ಯ ಮಾವನವರೆ-

ದರುವೂ

ಕುರುಕುಲಾಗ್ರಣಿ ಸೈರಿಸೈ ಬಳ್ಳಾ
ಪುರಿ ಹರಿಯ ಚಿತ್ತದಿ ಭಜಿಸೈಮರೆ
ಯದೀಗಲೆ ಪೋಗಿ ವರ ಧರ್ಮಜನೊ
ಳೀಗಾ ಭರದಿ ಪೋಗುವೆನೀಗಲೆ
ಕರಿಪುರ  ಧೀಪಧನಿಯ ನಾ ಕರೆತರುವೆ॥

ಶಕುನಿ : ಅಯ್ಯ ಕೌರವರಾಯನೆ, ನಿನ್ನಾಜ್ಞಾಧಾರಕನಾಗಿ ಪೋಗಿ ಬಿಸಜಾಕ್ಷಸಖರಾದ ಪಾಂಡವರನ್ನು ಅತಿಜಾಗ್ರತೆಯಿಂದ ಕರದುಕೊಂಡು ಬರುತ್ತೇನಯ್ಯ ಕೌರವ.

ಶಕುನಿ : ಯಲಾ ಸಾರಥಿ. ಯನ್ನ ಸೋದರಳಿಯನಾದ ಧರ್ಮರಾಯನನ್ನು ಅತಿ ಜಾಗ್ರತೆಯಿಂದ ಕರೆಸುವಂಥವನಾಗೊ ಸಾರಥಿ.

ಧರ್ಮರಾಯ : ಅಪ್ಪಾ ತಮ್ಮ, ಶ್ರೀಮದ್ರುಕ್ಮಿಣಿ ಕುಚ ಕುಂಕುಮಾಂಕಿತ ವೃಷ ತ್ರೈಜಗಕುಕ್ಷಿಯೊಳ್ ರಕ್ಷಣೆಯಂ ಮಾಳ್ಪ ಕ್ಷೀರದಾಯಕ ಮೋಕ್ಷದಾಯಕ ಅಮೃತಭಕ್ಷ ಆಶ್ರಿತ ಜಗದ್ರಕ್ಷ ಕೋಟಿರೂಪನಾದ॥ದ್ಯುಮಣಿಮಕುಟ ತಟಘಟಿತ ದೇದೀಪ್ಯಮಾನ ಶಟರಟ ಮೊದಲಾದ ಪಟುಭಟ ಕಿಟಿಕಾಘ್ರಣಿ ನಿಟಿಲಾಕ್ಷ ಪ್ರಯಚತ್ರಥರ ರಾಕ್ಷಸ ಜಿತರಿಪು ಮಟಭಂಜನ ದಶಕಂಟಲಾಂಟಿತ ವೈಕುಂಠನಾಯಕ ಸ್ಥಿತ ಕಂಠಪಾಲಕ ಭಾವಜಪಿತ ದೇವಕಿಸುತ ಶ್ರೀಮನ್ಮಹಾಕೃಷ್ಣ ಸಮುದ್ರದಲ್ಲಿ ಲೋಲಾಡುತ್ತಿರುವ ಹಿಮಾಂಶುಕುಲಾಂಭೋನಿಧಿ ಚಂದ್ರ ಭೂಮೇಂದ್ರ ರಿಪುಕುಲಾಂತಕ ಶಂಕು ಚಕ್ರೋದ್ಭವಗಾತ್ರ ಭ್ರಾತ್ರುನಗರಿಗೆ ಕರುಣಾಪೇಕ್ಷಿ ತ್ರೈಗೋತ್ರಾಧಿಪತಿ ಯಂದೆನಿಸುವ ಮನಹೃತ್ಕಮಲಪುತ್ರ ಪಾಂಡವರಾಯನ ಪವಿತ್ರ ನರೇಶ್ವರನೆಂದು ತಿಳಿಯಲಾ ಸಾರಥಿ॥ಮನ್ ಮನೋಳ್ ಪೂರುತಿ॥

ಸಾರಥಿ : ಯೀ ಸಭಾ ಪಾಂಡಿತ್ಯರ ಬಳಿಗೆ ಬಂದ ಕಾರಣವೇನೈ ದೇವಾ ಕೀರ್ತಿ ಪ್ರಭಾವಾ.

ಧರ್ಮರಾಯ : ಅಪ್ಪಾ ಸಾರಥಿ, ಯೀ ಸಭಾ ಪಾಂಡಿತ್ಯರ ಬಳಿಗೆ ಬಂದ ಕಾರಣವೇನೆಂದರೆ ನಮ್ಮ ಸೋದರಮಾವನಾದ ಶಕುನಿ ಭೂಪಾಲರು ಕರೆಸಿರುವರಾದ ಕಾರಣಾ ಬಾಹೋಣವಾಯ್ತು. ಅತಿಜಾಗ್ರತೆಯಿಂದ ಭೇಟಿಯನ್ನು ಮಾಡಿಸುವಂಥವನಾಗೋ ಚಾರ ವರ ಫಣಿಹಾರಾ॥

ಧರ್ಮರಾಯ : ನಮೋನ್ನಮೋ ಮಾವನವರೆ.

ಶಕುನಿ : ದೀರ್ಘಾಯುಷ್ಯಮಸ್ತು ಬಾರಯ್ಯ ಧರ್ಮರಾಯ.

ಧರ್ಮರಾಯ : ಲಂಕಾ ನಿವಾಸಿಯಾದ ದಶಕಂಠ ಭೂಪತಿಯಾ ತಮ್ಮ ಅರಿಚರಣನತಿಭರಣ ವರವಿಭೀಷಣನೂ ಕರುಣಾಸಾಗರನಾದ ರಾಮನಂಘ್ರಿಯಂ ಕಂಡು ಪರಮ ಸಂತೋಷಮಾಗಿ ಪರಿಕಿಸುವ ಯೀ ವ್ಯಾಳೆಯಲ್ಲಿ ನಮ್ಮ ಮೇಲೆ ದಯವಿಟ್ಟು ಏನು ಕಾರಣಾರ್ಥವಾಗಿ ಬಂದು ಯಿದ್ದೀರೊ ಪೇಳಬಹುದಯ್ಯ ಮಾವಾ ಕರುಣಾಕರ ಪ್ರಭಾವ.

ದರುವೂ

ಧರ್ಮರಾಯನೆ ನಿಮ್ಮೊಳ್ ಕಾರ‌್ಯ ವಂದಿವು
ದಯ್ಯ ಮರ್ಮವಿಲ್ಲದು ಕೇಳಯ್ಯ॥
ನಮ್ಮ ಕೌರವರಾಯ ನಿಮ್ಮ ಸಂಗಡ
ದ್ಯೂತ ಸಮ್ಮತಿನೊಂದಾಟವಾ ನಿಮ್ಮ ಚಿತ್ತಕ್ಕೆ
ಸರಿಬಂದರೀ ಸಮಯಾದಿ॥ಧರ್ಮನಂದನ
ನಿಮ್ಮ ದಾಯ ಗೆಲ್ಲುವದೈಯ್ಯ ಬಾರಯ್ಯ॥
ಪಕ್ಷಿವಾಹನ ಬಳ್ಳಾಪುರದ ಲಕ್ಷ್ಮೀಶನು
ರಕ್ಷಿಸುವನು ನಮ್ಮ ಅಕ್ಷಯವಾಗಲಿ
ನಿನ್ನ ಕಾರ‌್ಯವು ಈಗ ಕುಕ್ಷಿಯೊಳ್ ಯೋಚಿಸದೆ
ಕೇಳೈಯ್ಯ ಭೂಪಾ॥

ಶಕುನಿ : ಅಯ್ಯ ಧರ್ಮ ಗುಣಾಂಬುಧಿ ಪರಿಶೀಲನಾದ ಧರ್ಮರಾಯನೆ ಕೇಳು. ಪೂರ‌್ವಪತಿಯಾದ ಕುರುಕುಲೇಶ್ವರನಾದಿಯಾಗಿ ನೀವೂ ಆರೈದು ಮಂದಿಯು ಸಹಾ ನನಗೆ ಸೋದರಳಿಯರಾದ ಕಾರಣ ಯನ್ನ ಮನಸ್ಸಿಗೆ ಭೇದಸಂಶಯಂಗಳೂ ಎಷ್ಟು ಮಾತ್ರಕ್ಕೂ ಯಿಲ್ಲಾ. ಈ ವ್ಯಾಳೆಯಲ್ಲಿ ನಿಮ್ಮಲ್ಲಿ  ವಂದು ಕಾರ‌್ಯವನ್ನು ಕುರಿತು ಬಂದು ಯಿದ್ದೇನೆ. ಅದು ಹ್ಯಾಗೆಂದರೆ ಧೃತರಾಷ್ಟ್ರನ  ಜಾಣುತರಾಗಿ ದುರ‌್ಯೋದನ ಕರ್ಣ ಮುಖ್ಯ ಧಾತ್ರೀಶ್ವರರೆಲ್ಲರು ಸಹ ನೀವುಗಳೂ ಮುಖ್ಯಮಾಗಿ ವಿನೋದಕರಮಾಗಿ ಪಗಡೆಯನ್ನು ಆಡಬೇಕೆಂದೂ ಕೇಳಿ ಯಿದ್ದಾರೆ. ಆದ ಕಾರಣ ನಿಮ್ಮಗಳಿಗೆ ನಾನು ಸಹಕಾರ‌್ಯನಾಗಿ ಇದ್ದೇನೆ. ಅದರ ಪ್ರಯುಕ್ತವಾಗಿ ಜಾಗ್ರತೆಯಿಂದ ಆಡುವುದಕ್ಕೆ ದಯಮಾಡಬಹುದೈಯ್ಯ ರಾಜಾ ಹಿಮಕರತೇಜಾ॥

ದರುವೂ

ಮಾವಯ್ಯ ಕೇಳಿ ನಿಮ್ಮ ಮಧುರ ವಚನಕ್ಕೆ
ಯನ್ನ ಮನಸೂ ಭಾವಚಯಕೆ
ವಿಧಿಯ ಫಲವೂ ಮೀರಲರಿಯೆವೂ॥
ಆದಿಯುಗದ ಪರಿಯಂತ ಆಡಿ ದ್ಯೂತದಿ ತಾವೂ ಪಾಲಿಪ॥
ಮೇದಿನಿಯನು ಬಿಟ್ಟು ಅಡವಿ ಸೇರಿ ಕಷ್ಟದಿ॥
ಇಂದುವಂಶ ಜನರಿದಕೆ ಹಿಂದಾಗುವರೆ
ಮಾವೈಯ್ಯ ಬಂದ ಬಂಧನವೆಲ್ಲಾ ಪೊರೆಯೆ
ಸಿಂಧುವಂದಿತನೂ॥

ಧರ‌್ಮರಾಯ : ಆಹಾ ಮಾವೈಯ್ಯ, ನೀವು ಪಗಡೆಯನ್ನಾಡಬೇಕೆಂದು ಯನ್ನ ಕರೆಯತಕ್ಕ ಪ್ರಯುಕ್ತ ತಿಳಿದೆನೂ. ಇದಲ್ಲದೆ ಪುರಾತನ ಚಕ್ರವರ್ತಿಗಳಾದಿಯಾಗಿ ಇಂತಪ್ಪ ಪಗಡೆಯಿಂದಾಗಿ ಧನಕನಕ ವಸ್ತು ವಾಹನಗಳನ್ನು ಕಳದುಕೊಂಡು ತಾವು ಪಾಲಿಸುವ ಪಟ್ಟಣವನ್ನು ಸಹಾ ಬಿಟ್ಟು ಬೆಟ್ಟಗುಟ್ಟಗಳಲ್ಲಿ ಸಂಚರಿಸಿ ಯಿದ್ದರಾದ ಕಾರಣ ಮತ್ತು ವಿಧಿ ಫಲದಂತೆ ಅನುಭವಿಸುವರಲ್ಲದೇ ತಪ್ಪಲಾರದು. ಈಗಲು ಇಂತಪ್ಪ ಆಟಕ್ಕೆ ಹಿಂದಾಗದೆ ಆಡತಕ್ಕದ್ದೇನೋ ಸಹಜವಾಗಿರುತ್ತೆ. ಆದ ಕಾರಣ ನಿಮ್ಮ ಮಾತಿನಂತೆ ಬರುತ್ತಾ ಯಿದ್ದೇನಯ್ಯ ಮಾವಾ ಶಾಂತನಿಧಿ ಗುಣಶೋಮಾ॥

ದರುವೂ

ಪಗಡೆಯಾಡುತಿರ್ದರು ಪರರಾಯರೆಲ್ಲಾ
ಪಗಡೆಯಾಡುತಿರ್ದರು॥
ಪಗಡೆಯಾಡುತಿರ್ದರೈಯ್ಯ ಪೊಡವಿಪಾಲಕರು
ಮೃಢನ ಕರುಣತಪ್ಪಿ ಪಾಂಡವರು ಅಡವಿ
ಸೇರುವರು ಕೇಳ್ ಅಡವಿ ಸೇರುವರು॥
ಅಹಹ ದಾಯನಿಡುವೆನೀಗ ಅರ್ಥಸುತ
ಮಹಮಹೀಶ ಗೆದ್ದವರಿಗೆ
ಮಾತಿನವ್ರತ ಕೇಳ್ ಎನ್ನುತ ॥