ಪದ

ಮತ್ತೆ ಲೆತ್ತವನೆ ಹೂಡಿ ಜೂಜನಾಡಿ
ಇತ್ತೆನು ಸತೀಮಣಿಯಾ-ವ್ಯರ್ಥ
ವಾಯಿತು ನಮ್ಮ ಸತ್ಯಸಾಹಸವೆಲ್ಲಾ॥
ಮತ್ಯಾರೊ ಗತಿ ಯಮಗೆ ತಮ್ಮಾ
ಭೀಮಾ ಮಾನಹೀನದ ಸುದ್ದಿಯಾ॥

ಧರ್ಮರಾಯ : ಹೇ ತಮ್ಮಾ ಭೀಮಸೇನ, ಇದೂ ಅಲ್ಲದೆ ಮುತ್ತಿನ ಮಣಿಯಂತೊಪ್ಪುವಾ ಪಾಂಚಾಲಿಯನ್ನು ಸಹಾ ಸೋತು ಯಿದ್ದೇನಪ್ಪಾ ತಮ್ಮಾ ಭೀಮಸೇನಾ.

ಭೀಮ : ಅಣ್ಣಾ ಯಮತನಯಾ ವಿಷಪುಂಜರಂಜಿತಮಾದ ವುರುಗದ ಮರಿಯನ್ನು ತಂದು ಘೃತಕ್ಷೀರಂಗಳಿಂದ ಪೋಷಣೆಯನ್ನು ಮಾಡಿದರೆ ಅದರ ವಿಷವನ್ನು ಬಿಟ್ಟೀತೆ. ಅದರಂತೆಯೆ ಯೀ ಕುನ್ನಿ ಕೌರವನು ಅವನ ವಿಷವನ್ನು ಬಿಟ್ಟಾನೆ. ಭಲೆ ಅಗ್ರಜಾ ಯೀ ಮೂರ್ಖರು ಹಿಂದಕ್ಕೆ ಮಾಡಿದ ಕೆಟ್ಟಕೃತ್ಯಗಳನ್ನು ನೀವು ಮರೆತು ಅವರ ಮಾತಿನಂತೆಯೆ ಪೋಗಬಹುದೆ ಅಗ್ರಜಾ. ಒಂದು ಕ್ಷಣ ಅಪ್ಪಣೆಯನ್ನು ಕೊಟ್ಟಿದ್ದೇ ಆದರೆ ನಿಮಿಷ ಮಾತ್ರದೊಳ್ ಸಂಹರಿಸಿಕೊಂಡು ಬರುತ್ತೇನೆ ಜಾಗ್ರತೆಯಾಗಿ ಅಪ್ಪಣೆಯನ್ನು ಕೊಡುವಂಥವನಾಗೋ ಅಗ್ರಜಾ.

ಪದ

ಮೋಸವಾಯಿತೊ ತಮ್ಮಾ ಯೀ ಸಮಯಾದಿ
ಮೋಸ ಮಾಡಿದ ಕೌರವಾ ವಾಸವಾನುತ
ಶ್ರೀ ಭೀಮೇಶಾನ ದಯವೀಗ ಲೇಶಾವಿಲ್ಲದೆ
ವೋಯಿತೊ ತಮ್ಮ ಭೀಮಾ ಮಾನಹೀನದ ಸುದ್ದಿಯಾ॥

ಧರ್ಮರಾಯ : ಹೇ ತಮ್ಮಾ ಭೀಮಸೇನ. ವಾಸವಾನುತ ಭೀಮೇಶನ ದಯವೂ ನಮ್ಮ ಮೇಲೆ ಕಡಿಮೆಯಾದ ಕಾರಣಾ ಲೆತ್ತ ಮುಖದಿಂದಾ ಸೋತು ಯಿರುತ್ತೇನೆ. ಈ ವ್ಯಾಳೆಯಲ್ಲಿ ನೀನು ಆತುರಪಡದೆ ಅವರ ಆಜ್ಞಾನುಸಾರವಾಗಿ ಇರಬೇಕಪ್ಪಾ ತಮ್ಮಾ ಭೀಮಸೇನಾ॥

ದರುವು

ಅಗ್ರಜನೆ ಕೊಡು ನೇಮಾ ಪೋಗಿ ಬರು
ವೆನು ರಣಕೆ॥ಕೌರವನ ಬಲವೆಲ್ಲಾ
ಸಂಹರಿಪೆ ಅಂಣೈಯ್ಯ॥

ಭೀಮ : ಅಣ್ಣಾ ಯಮತನಯಾ, ಬಾಲಕರಿಗೆ ಹಾಲಿನ ಚಿಂತೆ ಪಂಡಿತರಿಗೆ ವೇದದ ಚಿಂತೆ ರಾಜರಿಗೆ ರಣಾಗ್ರದ ಚಿಂತೆಯೆಂಬ ತಾತ್ಪರ‌್ಯವಂ ತಿಳಿದು ಧರ್ಮ ಧರ್ಮವೆಂದು ಪೇಳುತ್ತಾ ಯಿದ್ದೀಯಾ. ಆದಾಗ್ಯು ಚಿಂತೆಯಿಲ್ಲ. ಒಂದು ಕ್ಷಣ ನೇಮವನ್ನು ಪಾಲಿಸಿದ್ದೇ ಆದರೆ ಭೀಮನ ಪರಾಕ್ರಮವನ್ನು ತೋರಿಸುತ್ತೇನೆ ನೇಮವನ್ನು ಪಾಲಿಸೊ ಅಗ್ರಜಾ ಶೀಘ್ರದಿಂದ ನಿಮ್ಮ ಪಾದಕ್ಕೆರಗುವೆ॥

ಪದ

ಏಕಾದಶಕ್ಷೋಹಿಣಿ ಮಾರ್ಬಲವುಳ್ಳ
ಕೌರವನ ಕ್ಷಣದೊಳು ಸಂಹರಿಪೆ
ಅಗ್ರಜನೇ ಕೊಡು ನೇಮಾ॥

ಭೀಮ : ಸೃಷ್ಠಿಪತಿಯಾದ ಧರ್ಮಜನೆ ಕೇಳು. ಯೀ ಭ್ರಷ್ಟರು ಮಾಡಿರುವ ಕೆಟ್ಟ ಯೋಚನೆಯನ್ನು ಕೇಳಿ ಸೈರಿಸಲಾರೆನು ಹಿಂದಕ್ಕೆ ಅಂಧನೃಪನು ಕಂದನಾದ ಭೀಮನೆ ಬಾಯೆಂದು ಕರೆದು ಮುಂದಿನ ಹಾಗಮಾನವಂ ಅರಿಯದೆ ವಿಷವನ್ನೆರೆದರು ಮತ್ತು ವಿಷದ ಕಜ್ಜಾಯವಂ ವುಣಬಡಿಸಿದರು. ಯಿದೂ ಅಲ್ಲದೆ ಯಾರೂ ಅರಿಯದಂತೆ ಸರುವೊತ್ತಿನಲ್ಲಿ ಅರಗಿನ ಮನೆಗೆ ಬೆಂಕಿಯನ್ನು ಹಚ್ಚಿಸಿದರು. ಅಂತಾದ್ದೆಲ್ಲ ಮರೆತು ಸುಮ್ಮನೆಯಿದ್ದರೆ ಈ ನೀಚನಾದ ಕೌರವನು ದುರಾಲೋಚನೆಯಂ ಮಾಡಿ ಯಿಂಥಾ ಮೋಸ ಕೃತ್ಯವನ್ನು ಮಾಡಿದನು. ಆದಾಗ್ಯು ಚಿಂತೆಯಿಲ್ಲ. ಈಗಿನ ವ್ಯಾಳೆಯಲ್ಲಿ ವಂದು ಕ್ಷಣ ಅಪ್ಪಣೆಯನ್ನು ಕೊಟ್ಟಿದ್ದೇ ಆದರೆ ಯಿಲ್ಲಿ ಕುಳಿತಿರುವ ನೂರೊಂದು ಮಂದಿಗಳೊಳಗೆ ಮಹಾಶ್ರೇಷ್ಠನೆಂದೆನಿಸಿಕೊಂಡಿರ್ಪಾ ಯೀ ಕಳ್ಳ ಕೌರವನ ನಡುನೆತ್ತಿಯ ಮೇಲೆ ಎಪ್ಪತ್ತೇಳೂವರೆ ಸಾವಿರ ಮಣವಿನ ಗದಾದಂಡವಂ ಜಡಿದು ಸಹಸ್ರ ಹೋಳುಗಳನ್ನು ತರುತ್ತೇನೆ. ಶೀಘ್ರದಿಂದ ನೇಮವನ್ನು ಪಾಲಿಸೋ ಅಂಣ್ಣಾ ಅಗ್ರಗಣ್ಯಾ॥

ಪದ

ದುರುಳ ದುರ‌್ಯೋಧನನಾ ಸೀಳಿ ರುಧಿರವ ಕುಡಿವೆ॥
ಕರುಳುಗಳ ವನಮಾಲೆ ಧರಿಸುವೆ ಅಣೈಯ್ಯ ॥

ಭೀಮ : ಅಣ್ಣಾ ಯಮತನಯಾ, ಯೀ ಭ್ರಷ್ಟರು ನಮಗೆ ದಾಯಾದಿಗಳೆಂದು ತಿಳಿಯದೆ ಅಲ್ಲಿಗೆ ಪೋಗಬಹುದೆ ಅಗ್ರಜಾ ಘನಪರಾಕ್ರಮಿಯಾದ ಯೀ ಭೀಮನ ಹೆಸರು ಹೇಳಿದ ಮಾತ್ರಕ್ಕೆ ವೈರಿಗಳೆಲ್ಲಾ ಧಿಘಲ್ ಧಿಘಲ್ ಭಗಲ್ ಭಗಲ್‌ಯೆಂದು ಗಾಳಿಪಟವಾಗಿ ವೋಗುವ ಕಾಲದಲ್ಲಿ, ಯೀ ನೀಚರಾದ ಕುನ್ನಿ ಕೌರವರು ಯನ್ನೆದುರಿನಲ್ಲಿ ನಿಲ್ಲುವುದುಂಟೆ ಅಗ್ರಜಾ. ಯೀಗಿನ ವ್ಯಾಳೆಯಲ್ಲಿ ಪೊಡವಿಯೋಳ್ ಕುಡುತನಿಯ ಭೀಮೇಶನಂ ಸ್ಮರಿಸುತ್ತಾ ಒಂದು ಕ್ಷಣ ಅಪ್ಪಣೆಯನ್ನು ಕೊಡುವಂಥವನಾಗೊ ಅಗ್ರಜಾ॥

ಧರ್ಮರಾಯ : ಹೇ ತಮ್ಮಾ ಭೀಮಸೇನ ಧರ್ಮವೆ ಜಯವಾಗುವದು. ಕರ್ಮವೆ ಲಯವಾಗುವದು. ಸೋಮಕುಲದವರು ತಾವಾಡಿದ ಮಾತು ತಪ್ಪಲೇಬಾರದು. ವಂದುಕ್ಷಣ ಸೈರಿಸಪ್ಪಾ ತಮ್ಮಾ ವಾಯುತನಯಾ॥

ದರುವೂ

ಪೊಡವಿಯೋಳ್ ಕುಡುತನಿಯಾ ವಡೆಯ ಭೀಮೇಶನಾ॥
ಬಿಡದೆ ಧ್ಯಾನಿಸುವೆ ಕೊಡು ನೇಮಾ ಅಗ್ರಜನೆ॥

ಭೀಮ : ಭಳಿರೆ ಅಗ್ರಜಾ ಈಗಿನ ವ್ಯಾಳೆಯಲ್ಲಿ ನಾನು ಹ್ಯಾಗೆ ಸೈರಿಸಿಕೊಂಡಿದ್ದರು ಯನ್ನ ಕರಾಗ್ರದಲ್ಲಿ ಯಿರುವ ಎಪ್ಪತ್ತೇಳೂವರೆ ಸಾವಿರ ಮಣುವಿನ ಗದಾಧಾಮನು ಸೈರಿಸಲಾರದೆ ಹೊಸಪ್ರಾಣವನ್ನು ಬೇಡುತ್ತಾ ಯಿದೆಯೋ ಅಗ್ರಜಾ.

ಧರ್ಮರಾಯ : ಅಪ್ಪಾ ವಾಯುತನಯ, ಹ್ಯಾಗಾದರು ಒಂದು ಕ್ಷಣ ಸೈರಿಸಪ್ಪಾ ತಮ್ಮಾ ಭೀಮಸೇನಾ.

ಭೀಮ : ಭಳಿರೆ ಅಗ್ರಜಾ, ತಮ್ಮ ವುತ್ತರಕ್ಕೆ ಪ್ರತ್ಯುತ್ತರವಿಲ್ಲ. ಯೀಗ ಯೇನು ಅಪ್ಪಣೆ ಆಗುತ್ತಾಯಿದೆಯೋ ಅಣ್ಣೈಯ್ಯ.

ಧರ್ಮ : ಹೇ ತಮ್ಮಾ ಭೀಮಸೇನಾ, ಯೀಗಿನ ವ್ಯಾಳೆಯಲ್ಲಿ ತೆರಳುವಂಥವನಾಗಪ್ಪಾ ವಾಯುತನಯಾ.

ಭೀಮ : ಅದೇ ಪ್ರಕಾರ ತೆರಳುತ್ತೇನೋ ಅಣೈಯ್ಯ.

ದ್ವಿಪದೆ

ಶ್ರೀ ಸರಸಿಜನೇತ್ರೆ ದ್ರೌಪದಿಯು ವಾರಿಜನಾಭನಂ ಭಜಿಸಿ
ಸರಸದಿಂ ಪಂನ್ನೀರು ಜಳಕಂಗಳಾಡಿ ಕಾಂಚನಮಯವಾದ
ಕುಪ್ಪಸವ ತೊಟ್ಟುಮಶ್ವ ಕಂಗಳೆಯು ಕುರುಳುನ್ಯಾರಿಸಿ
ದುಂಡು ಮಲ್ಲಿಗೆಯಂನ್ನು ವಿನಯದಿಂದಲಿ ಧರಿಸಿ
ಚಪಲಾಕ್ಷಿ ಕಸ್ತೂರಿ ಬೊಟ್ಟು ತಾನಿಟ್ಟು
ಚಂದ್ರಗಾವಿಯ ಶೀರೆ ಚಂದದಿಂದುಟ್ಟು
ಮಂದಗಮನೆಯು ಅರಿಶಿನವು ಪೂಸಿ
ಮಂದಿರವ ಬಿಟ್ಟು ಇಂದೀವರಾಕ್ಷಿ ಮುದದಿಂದ
ಕಾಂತನ ಮುಖ ನೋಡುವೆನೆಂದು ಧರೆಯೊಳಗೆ
ಕುಡುತನಿಯಾ ಭೀಮೇಶನ ಧ್ಯಾನಿಸುತ ಬಂದು ತೆರೆಯೊಳಗೆ ನಿಂತಳು

ದರುವೂ

ಸರಸಿಜನಯನೆ ಧರ್ಮರಾಯನ
ತೋರಿಸಮ್ಮಾ ಪುರುಷಾನ ಕಾಣದೀಗ
ಪರವಶವಾಯಿತಮ್ಮಾ॥ಝಕ್ಕ ವಾಕ್ಯ
ಗಳಿಂದಾ ಘಕ್ಕಾನೆ ಕೂಡಿಕೊಂಡು ಸೌಖ್ಯ
ವಿಲ್ಲದ ದೇಹ ಸೊಕ್ಕಿತಮ್ಮಯ್ಯ ಈಗ॥
ಬಿಂಬಾಧರೆಯು ಮೋಹಾ ದಂಬಾಲು
ಬಿಡದು ಯಮಗೆ ಅಂಬುಜಾನಯನೆ ವಿರಹ ॥
ತಡೆಯಲಾರನು ಮೋಹ ಅಡಿಯಿಡಲಾರೆನಮ್ಮಾ
ಪೊಡವಿಯೋಳ್ ಕುಡುತನಿಯಾ ಮೃಢನಾಣೆ ತಾಳಲಾರೆ॥

ಸಾರಥಿ : ಯೀಗ ಬಂದಿರತಕ್ಕಂಥವರು ದಾರಮ್ಮ.

ದ್ರೌಪದಿ : ಅಪ್ಪಾ ಸಾರಥಿ ಹೀಗೆ ಬಾ, ಅಂಣೈಯ್ಯ ಚಾರಕ ಮತ್ತೂ ಹೀಗೆ ಬಾ. ನಮ್ಮನ್ನ ಕೇಳುವುದಕ್ಕೆ ನೀ ಧಾರು ನಿನ್ನಯ ನಾಮಾಂಕಿತವೇನಪ್ಪಾ ಚಾರಾನೀತಿ ವಿಚಾರಾ.

ಅಪ್ಪಾ ಸಾರಥಿ ಈ ಚತುರ್ದಶ ಭುವನದೊಳ್ ಭೂಷಣರಾದ ಶಮಧಮ ಸತ್ಯಶಾಂತಿ ಕಾಂತಿ ಇಂದೊಪ್ಪುವ ಮೌದ್ಗಲ್ಯನೆಂಬ ಮುನಿಪಗೆ ಪೂರ್ವದಲ್ಲಿ ಧರ್ಮಪತ್ನಿಯಾಗಿ ಇಂದ್ರಸೇನೆಯೆಂಬ ನಾಮಾಂಕಿತದಿಂದಿರಲು, ಆ ಮುನಿಪನು ಕುಷ್ಟವ್ಯಾಧಿಗಳಿಂದ ಕೈಬಿಟ್ಟು ಜೀರ್ಣೀಸಿ ನಷ್ಠ ದೇಹದಿಂದಲೂ ವಂದುದಿನ ಭೋಜನ ಮಾಡುವ ಕಾಲದೊಳ್ ಆ ಬೆಟ್ಟು ನಷ್ಟವಾಗಿ ಬಿಟ್ಟಿದ್ದ ಶೇಷಾನ್ನದೋಳ್ ಬೀಳಲು, ಅದನ್ನು ಮಹಾಪ್ರಸಾದವೆಂದು ಅತಿಭಕ್ತಿಯಿಂದ ನಾನು ಭುಂಜಿಸಲು ಯನ್ನಯ ಪತಿವ್ರತೆಯ ಭಾವಕ್ಕೆ ಮೆಚ್ಚಿ ನಿನ್ನಿಷ್ಠವಂ ಬೇಡೆನಲು, ನಾನು ಸುರತ ಸುಖವನ್ನು ಬೇಡಿದ್ದರಿಂದ ವರುಷ ಸಾವಿರದೊಳ್ ಸುರತ ಸುಖವನ್ನಿತ್ತು ಹರಿಯ ತಪಸ್ಸಿಗೆ ಹೋಗಲು ಸುರತವೂ ಕೊರತೆಯಾಗಿ ಚಿಂತಿಸುತ ಅಂತರಸಿ ಪೋದನಂತರದಿ ಕಾಶೀರಾಜನಿಗೆ ಕೂಸಾಗಿ ಪುಟ್ಟಿ ಯೆಷ್ಟು ದಿನ ಕನ್ಯಾವಸ್ಥೆಯಿಂದ ಬ್ಯಾಸರಗೊಂಡು ಆ ಕೈಲಾಸವಾಸನಂ ಭಜಿಸುತ್ತಾ ಆ ದುರಿತದೂರನಂ ಪ್ರತ್ಯಕ್ಷಮಂ ಮಾಡಿಕೊಂಡು ನಯಭಯ ಭಕ್ತಯುಕ್ತಳಾಗಿ ಶಿವ ಪತಿಂದೇಹಿ ಶಂಭು ಪತಿಂದೇಹಿ ಶಂಕರ ಪತಿಂದೇಹಿ ಸರ‌್ವ ಪತಿಂ ದೇಹಿ ಸರ‌್ವಗಣ ಪತಿಂದೇಹಿ ಯಂದು ಐದು ಸಾರಿ ಬೇಡಿದ್ದರಿಂದಾ ಜನ್ಮಾಂತರಕ್ಕೆ ನಿನಗೆ ಯೈದು ಮಂದಿ ಪತಿಗಳಾಗುವರೆಂದು ಅಂತರ್ಧಾನನಾದ ಕಾರಣಾ, ತಪ್ಪದೆಂದು ದ್ರುಪದರಾಯನಿಗೆ ಸ್ವಯಂವರ ಹೋಮದ್ಯುತನುಜೆಯಾಗಿ ಪುಟ್ಟಿ ವುದ್ದಂಡ ಪರಾಕ್ರಮಿಗಳಾದ ಪಾಂಡುನಂದನರಿಗೆ ಕೋದಂಡದಿಂ ವಶವಾಗಿ ಅಸಮ ಸಾಹಸರಾದ ವಸುಮತೀಶ್ವರರಿಗೆ ಸತಿಯಾದ ಪಾಂಚಾಲಿ ಯಂಬ ನಾಮಾಂಕಿತವಲ್ಲವೇನಪ್ಪಾ ಚಾರ ನೀತಿ ವಿಚಾರ॥

ಅಣೈಯ್ಯ ಸಾರಥಿ, ಭರದಿಂದ ವರಸಭೆಗೆ ದಯಮಾಡಿಸಿದ ಕಾರಣವೇನೆಂದರೆ ಯನ್ನ ಪತಿಯಾದ ಧರ್ಮರಾಯನು ಯನ್ನ ಭಾವನಾದ ಕೌರವ ಭೂಪಾಲನು ಜೂಜನ್ನಾಡಿದರಂತೆ. ಆದ ಕಾರಣ ಯನ್ನ ಪತಿಯೊಡನೆ ಮಾತನಾಡುವ ವುದ್ದಿಶ್ಯ ಈ ಸಭೆಗೆ ಬಂದೆನು. ಧರ್ಮಭೂಪಾಲನನ್ನು ತೋರಿಸಪ್ಪಾ ದೂತಾ ರಾಜ ಸಂಪ್ರೀತಾ.

ಕೌರವ : ಭಳಿರೆ ಸಾರಥಿ, ಯನ್ನ ಬಳಿಯಲ್ಲಿರುವ ದೂತ ಶಿಖಾಮಣಿಯಾದ ಪ್ರಾತಿಕಾಮಿಯನ್ನು ಜಾಗ್ರತೆಯಿಂದ ಕರೆದುಕೊಂಡು ಬರುವಂಥವನಾಗೊ ಚಾರ ನೀತಿ ವಿಚಾರ.

ಪ್ರಾತಿಕಾಮಿ : ಯಲಾ ಮಾನುಷ್ಯನೆ ಹೀಗೆ ಬರುವಂಥವನಾಗು॥ಮತ್ತೂ ಹೀಗೆ ಬರುವಂಥವನಾಗು ಯಲೋ ಭೃತ್ಯ॥ಶ್ರೀಮದ್ರಾಜಾಧಿರಾಜ ರಣಪರಾಕ್ರಮ ಶೂರನೆಂದೆನಿಸಿ ಅಖಂಡನಾದ ಭೃತ್ಯ ವೈಭವದಿಂದ ಕಪ್ಪವಂ ತೆಗೆದುಕೊಂಡು ಶಿಷ್ಟರಕ್ಷಣೆಗೆ ಅಧ್ಯಕ್ಷಿತನಾದ ಶಕ್ಯಾತನುನಂತೆ ವಿದ್ಯಾಸ್ಯಮಾನರಾಗಿ  ಗಾಂಧಾರಿ ವುದರದೋಳ್ ಸಿಂಧುರಾಜನೋಳ್ ಚಂದ್ರನುದಿಸಿದಂತೆ ಪುಟ್ಟಿ ಜಗಜಟ್ಟಿಯಂತೆ ಮೆರೆವ ಕೌರವೇಂದ್ರನ ನಾಮಧೇಯದಿಂದ ಆ ಕೌರವರ ಶೌರ‌್ಯದಿಂದಿರುವ ಕುರುರಾಯನಾಜ್ಞೆ ಸುಜ್ಞಾನದಿಂ ನುಡಿಯುವಂಥ ನೀತಿವಂತನಾದ ಪ್ರತಿಕಾಮಿ ಎಂದು ತಿಳಿಯುವಂಥವನಾಗೊ ಚಾರ ವರ ಫಣಿಹಾರ॥

ಯಲಾ ಸಾರಥಿ ಯೀ ಸಭಾ ಪಾಂಡಿತ್ಯರ ಬಳಿಗೆ ಬರಲು ಕಾರಣವೇನೆಂದರೆ, ನಮ್ಮ ದೊರೆಯಾದ ಕೌರವೇಂದ್ರನು ಕರೆಸಿದ್ದಾನಾದ ಕಾರಣ ಬಾಹೋಣವಾಯಿತು. ಜಾಗ್ರತೆಯಿಂದ ಭೇಟಿಯನ್ನು ಮಾಡಿಸೊ ಸಾರಥಿ॥ಮನ್ಮನೋಳ್ ಪೂರುತಿ॥

ಪ್ರಾತಿಕಾಮಿ : ನಮೋನ್ನಮೋ ಹೇ ರಾಜ॥

ಕೌರವ : ದೀರ್ಘಾಯುಷ್ಯಮಸ್ತು ಪೇಳುತ್ತೇನೈಯ್ಯ ಮಗನೆ ಪ್ರಾತಿಕಾಮಿಕನೆ

ಪಟುಭಟಾಗ್ರಣಿಗಳೋಳ್, ಚಟುಲ ಪರಾಕ್ರಮವುಳ್ಳ ಪ್ರಾತಿಕಾಮಿಕನೆ ಕೇಳು. ಸತ್ಯವ್ರತಕೆ ಸಿಕ್ಕಿರುವ ವುತ್ತಮನೆಂದೆನಿಸಿಕೊಂಡಿರುವ ಧರ್ಮರಾಯನನ್ನು ಚಿತ್ತದೊಳ್ ಯಡೆಬಿಡದೆ ನಂಬಿರುವ ದ್ರುಪದಾತ್ಮಜೆಯಳಾದ ದ್ರೌಪದಿಯನ್ನು ಕಡುಸಡಗರದಿಂದೆನ್ನೆಡೆಗೆ ಕರೆದುಕೊಂಡು ಬರುವಂಥವನಾಗೊ ಮಗನೆ॥

ಪದ

ವಾರಿಜಾಕ್ಷಿಯ ತಂದು ರಾಜಸಭೆ
ಯಲಿ ನಿಲಿಸೊ ಮಾನಾಭಿಮಾನಾ
ವನುಳಿಸೊ ಹೇ ಮಗನೆ॥

ಕೌರವ : ಭಲಾ ಭಟಕುಟುಂಬಿ, ವಾರಿಜಾಕ್ಷಿಯಳಾದ ದ್ರೌಪದಿಯನ್ನು ತ್ವರಿತದಿಂದ ಕರೆದುಕೊಂಡು ಬರುವಂಥವನಾಗೊ ಮಗನೆ.

ಪದ

ಧರಣಿ ಗಂಗಾಧರನ ಕರುಣಾ ಫಲಿಸಿತು
ನಮಗೆ ಪರಿಣಾಮದಲ್ಲಿ ಕರೆತಾರೋ ಹೇ ಮಗನೆ॥

ಕೌರವ : ಭಲಾ ಮಗನೆ, ನಿಟಿಲಾಂಭಕನಾದ ಸಾಂಬ ಮೂರ್ತಿಯ ಕರುಣ ಈ ದಿನ ನಮಗೆ ಫಲಿಸಿ ಯಿರುವದಾದ ಕಾರಣ ಶಶಿಮುಖಿಯಾದ ದ್ರೌಪದಿಯನ್ನು ಯನ್ನ ಸಭಾಸ್ಥಾನಕ್ಕೆ ಕರೆದುಕೊಂಡು ಬರುವಂಥವನಾಗೊ ಪುತ್ರ ಸುಂದರಗಾತ್ರ॥

ಪ್ರತಿಕಾಮಿ : ಅದೇ ಪ್ರಕಾರವಾಗಿ ಪೋಗಿ ಆ ದ್ರೌಪದಿಯನ್ನು ಕರೆದುಕೊಂಡು ಬರುತ್ತೇನೊ ರಾಜ ಮಾರ್ತಾಂಡ ತೇಜಾ॥

ಭಳಿರೆ ಸಾರಥಿ ದ್ರೌಪದಿಯನ್ನು ಕರೆದುಕೊಂಡು ಬಾರೆಂದು ಕೌರವರಾಯ ಯನಗೆ ಆಜ್ಞೆ ಮಾಡಿ ಯಿದ್ದಾನೆ ಹ್ಯಾಗೆ ಮಾಡಬೇಕೊ ಸಾರಥಿ॥ಹಾಗಾದರೆ ಶ್ರೀಹರಿಯನ್ನು ಧ್ಯಾನಿಸುತ್ತೇನೊ ಸಾರಥಿ॥

ದರುವೂ

ಹ್ಯಾಗೆ ಮಾಡಲೊ ಶ್ರೀಹರಿಯೆ॥ವಕುಲಸಿರಿಯೆ
ಹ್ಯಾಗೆ ಮಾಡಲೊ ಶ್ರೀ ಹರಿಯೆ॥
ಪತಿಗಳಿಲ್ಲ ಕಾಲ ಸತಿ ಶಿರೋಮಣಿಶೀಲ
ಸತಿಯನು ಕರಿಯೆಂದು ಹೇಳಿದ
ಕೌರವ ಹ್ಯಾಗೆ ಮಾಡಲೊ ಶ್ರೀಹರಿಯೆ॥

ಪ್ರಾತಿಕಾಮಿ : ಅಯ್ಯ ಶ್ರೀಹರಿಯೇ ಗಂಡುಗಲಿಗಳಾದ ಪಾಂಡುನಂದನರಿಲ್ಲದ ಅರಮನೆಗೆ ಹ್ಯಾಗೆ ಪೋಗಲಿ. ಆ ಮತಿವಂತಳಾದ ದ್ರೌಪದಿಗೆ ಬಂದ ವಿಪತ್ತು ಏನೆಂದು ಹೇಳಲಿ. ಉಭಯ ಸಂಕಟವು ಬಂದು ಸಂಭವಿಸಿತಲ್ಲೊ ಸರಸಿಜನೇತ್ರಾ ಚಾರುಚಿತ್ರ.

ಪದ

ಪರಮ ಪತಿವ್ರತೆಯ ಪಾಂಡುನಂದನರ
ಸತಿಯ ಕರೆಯೆಂದು ಕರೆಯಂದು ನೇಮವ ಕೊಟ್ಟನು॥

ಪ್ರಾತಿಕಾಮಿ : ಶ್ರೀಹರಿ ದಾನವಾರಿ, ನಿನ್ನ ಅನುಜೆಯಾದ ದ್ರೌಪದಿಗೆ ಯೇನು ವಿಪತ್ತು ತಂದು ವೊಡ್ಡಿದೋ ಶ್ರೀಹರಿ.

ಪದ

ಶ್ರೀನೀಲಕಂಠ ಮಿತ್ರಾ ಲಕ್ಷ್ಮಿಯ ಕಳತ್ರ
ಭಾನು ಕೋಟಿ ಸಂಕಾಶನೇತ್ರ॥

ಪ್ರಾತಿಕಾಮಿ : ಅಯ್ಯ ಸಾರಥಿ, ಆದ್ಯಪದಾತ್ಮಜೆಯಳಿಗೆ ಬಂದ ವಿಪತ್ತು ಬಿಡಿಸುವದು ಹ್ಯಾಗೆ. ಯನ್ನೊಡಲಿನ ಬ್ಯಾನೆ ಸುಡುತ್ತಲಿರುವುದು. ಯನಗೆ ಸಂತೋಷವಾಗುವುದು ಹ್ಯಾಗೆ ಆ ಪಾಂಚಾಲಿಯನ್ನು ಕರೆ ತರಬೇಕೋ ಸಾರಥಿ॥ಮನ್‌ಮನೋಳ್ ಪೂರತಿ॥ನಮೋನ್ನಮೋ ಹೇ ಜನನೀ॥

ದ್ರೌಪದಿ : ಧೀರ್ಘಾಯುಷ್ಯಮಸ್ತು ಪೇಳಪ್ಪಾ ಮಗನೆ ಪ್ರಾತಿಕಾಮಿಕನೆ.

ಪ್ರಾತಿಕಾಮಿ : ಅಮ್ಮಾ ಜನನೀ, ನಮ್ಮ ದೊರೆಯಾದ ಕೌರವರಾಯನು ನಿಮ್ಮನ್ನು ಕರೆದುಕೊಂಡು ಬಾರೆಂದು ಆಜ್ಞೆಯಂ ಮಾಡಿದ್ದಾನಾದ ಕಾರಣಾ ಯೆಷ್ಠು ಮಾತ್ರಕ್ಕು ಚಿಂತೆಯನ್ನು ಮಾಡದೆ ಅತಿಜಾಗ್ರತೆಯಿಂದ ತೆರಳಬೇಕಮ್ಮ ತಾಯೆ ಕರುಣದಿಂ ಕಾಯೇ

ದರುವು

ಯಿಲ್ಲಿಗೆ ಬಂದು ಕರೆದಾ ಕಾರಣವಾ॥
ಮಾವ ಧೃತರಾಷ್ಟ್ರ ಯಂನ್ನಾ ಭಾವಾ
ಕೌರವಭೂಪ ಕೋವಿದ ದುಶ್ಶಾಸನ
ಕುಶಲದಿಹರೇನೊ ಮಗನೇ॥

ದ್ರೌಪದಿ : ಅಪ್ಪಾ ಪ್ರಾತಿಕಾಮಿಕನೆ ಕೇಳು, ಭೀತಿಯಿಲ್ಲದೆ ಕಾತುರದಿಂದ ಕೌರವೇಂದ್ರನ ಸಭೆಗೆ ಬಾರೆಂದು ಕರೆಯುವದು ಯಾತರ ನ್ಯಾಯ. ನಮ್ಮ ಮಾವನಾದ ಧೃತರಾಷ್ಟ್ರರಾಯನು ಭಾವನೆನಿಸುವ ಕೌರವ ಭೂಪಾಲನು ಯನ್ನ ಮೈದುನನಾದ ಕೋವಿದ ದುಶ್ಶಾಸನನು ಕ್ಷೇಮದಲ್ಲಿ ಯಿದ್ದಾರೇನಪ್ಪಾ ಮಗನೆ.

ಪದ

ಗುರು ದ್ರೋಣಭೀಷ್ಮರು ಪರಿಣಾಮ ವಾರ್ತೆಯ
ನಿರುತ ಗಾಂಧಾರಿಯು ಪರಮ ಸೌಖ್ಯವೆ
ಮಗನೆ ಬಾಲನು ಬಂದು ಕರೆದಾ॥

ದ್ರೌಪದಿ : ಅಪ್ಪಾ ಮಗನೆ, ಗುರುದ್ರೋಣ ಭೀಷ್ಮರಾದಿಯಾಗಿ ಪರಿಣಾಮವೇನೂ ಕಂದ. ನಿರುತದಲ್ಲಿ ಯಮ್ಮ ಅತ್ತೆಯಾದ ಗಾಂಧಾರಿಯು ಪರಮಸೌಖ್ಯವೇನಪ್ಪಾ ಬಾಲಾ ಸದ್ಗುಣಶೀಲಾ॥

ಪದ

ಶ್ರೀ ನೀಲಕಂಠನ ಕರುಣಾದಿ ನೀ ಯನ್ನ
ಅರಮನೆಯೊಳು ಪೊಕ್ಕು ಕರೆವುದುಚಿತವೆ
ಕಂದ ಬಾಲನು ಬಂದು ಕರೆದಾ॥

ದ್ರೌಪದಿ : ಅಪ್ಪಾ ಮಗನೆ, ಧರೆಯೊಳಧಿಕವಾದ ಕುಡುತನಿಯ ಭೀಮೇಶನ ಕರುಣದೊಳ್ ಯಿರುವ ಸಮಯದಲ್ಲಿ ಯನ್ನ ಅರಮನೆಯೊಳು ಪೊಕ್ಕು ಕರೆವುದುಚಿತವೇನೊ ಕಂದಾ ಇದು ಬಹುಚಂದಾ.

ದರುವು

ಬಾರಮ್ಮಾ ತಾಯೆ ದ್ರೌಪದಿದೇವಿ ಬಾರಮ್ಮಾ
ತಾಯೆ ದಾತ ಧರ್ಮಜ ಸೋತ ಜೂಜ
ಮುಖದಿ ಸಹೋದರರ ನಿಮ್ಮನ್ನು ಸೋತರು
ಕುರುಪತಿ ಗೆದ್ದನಂತೆ॥ಬಾರಮ್ಮಾ॥

ಪ್ರಾತಿಕಾಮಿ : ಹೇ ತಾಯಿ ಹೇ ಮಾತೆ ಹೇ ಜನನಿ ಯದುಕುಲ ಮಂದಯಾನೆ ಇಂದು ನಿಮ್ಮಯ ಸನ್ನಿಧಾನಕ್ಕೆ ನಾ ಬಂದ ಕಾರಣವೇನೆಂದರೆ, ನೆನ್ನೆ ದಿನದಲ್ಲಿ ಧರ್ಮರಾಯರೊಡನೆ ಕೌರವೇಂದ್ರನು ಲೆತ್ತ ಮುಖದಿಂದ ನಿಮ್ಮೆಲ್ಲರನ್ನು ಗೆದ್ದು ಯಿದ್ದಾನೆ. ಆದ ಕಾರಣ ನಿಮ್ಮನ್ನು ಜಾಗ್ರತೆಯಿಂದ ಹಾಜರುಮಾಡುವ ಹಾಗೆ ಆಜ್ಞೆಯನ್ನು ಕೊಟ್ಟು ಇರುವುದರಿಂದ ನಿಮ್ಮನ್ನು ಕರೆದುಕೊಂಡು ಹೋಗಲಿಕ್ಕೆ ಬಂದು ಯಿದ್ದೇನಮ್ಮಾ ಜನನಿ॥

ಪದ

ಸರಸಿಜನಯನೆ ಚಿಂತೆಯ ಮಾಡದೆ ಬೇಗ
ದಯಮಾಡು ಕೌರವರಾಯನ ಸನ್ನಿಧಿಗೆ॥

ಪ್ರಾತಿಕಾಮಿ : ಹೇ ಮಾತೆ ಹೇ ಕೃಪಾಂದೇಹಿ ಇಂದು ಯನ್ನೊಡನೆ ಅನೇಕ ವಚನಗಳೂ ಪೇಳಿದರೆ ಯನ್ನಿಂದ ಯೇನಾಗುವುದಮ್ಮಾ ಜನನಿ. ನಮ್ಮ ರಾಜಾಜ್ಞೆ ಪ್ರಕಾರ ಕರೆದೆನೂ ಯೋಚನೆಮಾಡಿ ಪ್ರಚರಿಸುವುದಕ್ಕೆ ನಿಮಗೆ ತಕ್ಕುದಲ್ಲಮ್ಮಾ ಜನನಿ

ಪದ

ಭಾಸುರಾಂಗಿಯೆ ಶಂಕೆ॥ಲೇಶವಿಲ್ಲದೆ ಕೇಳೂ
ವಾಸುಕಿಶಯನ ಶ್ರೀ ಭೀಮೇಶ ತಾ ಬಲ್ಲಾ॥

ಪ್ರಾತಿಕಾಮಿ : ಅಮ್ಮಾ ಮಾತೆ, ಈ ಧರೆಯೊಳಧಿಕವಾದ ಕುಡುತನಿಯ ಭೀಮೇಶನ ಚರಣಗಳನ್ನು ಸ್ಮರಿಸುತ್ತ ಜಾಗ್ರತೆಯಿಂದ ಸಭೆಗೆ ಕರೆದುಕೊಂಡು ಬರುವ ಹಾಗೆ ಪೇಳಿ ಯಿದ್ದಾರಮ್ಮಾ ತಾಯೆ.

ದರುವು

ದೂತಾ ಕೇಳೆಲೊ ನಮ್ಮ ದಾತ
ಸೋತಿರುವಂಥ ರೀತಿ ಯನ್ನೊಳು ಪೇಳೈಯ್ಯ
ಕೇಳಪ್ಪ ಬಾಲ ರೀತಿ ಯನ್ನೊಳು ಪೇಳೈಯ್ಯ
ಮೊದಲೇನು ವಡ್ಡಿದಾ ಮುದದಿಂದ ಪೇಳೈ
ಅದರ ಮೇಲೇನೊಡ್ಡಿದಾ ವಿಧವ
ನೆಲ್ಲವನು ತಿಳಿಸಿದರೆ ನಾ ಬರುವೆನು
ವಿಧಿ ಯನ್ನ ಕಾಯದೋಯ್ತೆ ಹೀಗಾಯಿತೆ
ವಿಧಿ ಯನ್ನ ಕಾಯದೋಯಿತೆ॥
ಮುನ್ನ ನನ್ನನು ಸೋತು ತನ್ನ ಸೋತರೆ
ನ್ಯಾಯವನ್ನು ಪೇಳುವರಿಲ್ಲವೆ
ಯಿನ್ನು ಯೀ ಸಭೆಯೊಳ್
ಸಂಪನ್ನ ಸುಜ್ಞಾನ ಹೇಳಾ ನಾ ಬರುವೆ ಮಾತಾಡುವೆ॥

ದ್ರೌಪದಿ : ಅಪ್ಪಾ ಪ್ರಾತಿಕಾಮಿಕ, ಆ ಸತ್ಯಸಂಧನಾದ ಧರ್ಮನು ಸೋತಂಥ ವಿವರವನ್ನು ಯನ್ನೊಡನೆ ವಿಸ್ತಾರವಾಗಿ ಪೇಳುವಂಥವನಾಗಪ್ಪ ಮಗನೆ.

ದರುವು

ತಾಯಿ ಬಿನ್ನವಿಸೆ ಲಾಲಿಸಿ ಕೇಳ್ ಧರ್ಮ
ರಾಯ ಸೋತಿರುವನಮ್ಮಾ ಜೂಜಿನ ನೆವದಿ
ರಾಯ ಸೋತಿರುವನಮ್ಮಾ॥
ಸಕಲ ದ್ರವ್ಯವ ಸೋತ ನಕುಲ ಸಹದೇವರ ಸೋತ॥
ಕೇಳಂಮ್ಮ ತಾಯೆ ಯಕ್ತಿಯ ತಿಳಿಯಾದೆ
ತಮ್ಮನ್ನು ಸೋತನುಆಮೇಲೆ ನಿಪುಣ
ಯಲ್ಲರನು ಸೋತ॥ಕೇಳಮ್ಮ ತಾಯೆ॥
ಕುರುರಾಯ ನಿಮ್ಮನ್ನು ಕರೆದು ತಾರೆನು
ತಾಲಿ ಭರದಿ ಕಳುಹಲು ನಾ ಬಂದೆ
ಕೇಳಮ್ಮ ॥ಬರುವಿರೊ ಬಾರಾದೆ
ಯಿರುವಿರೊ ಯನ್ನೊಳು ಹರುಷ
ದಿಂದಲಿ ಪೇಳಮ್ಮಾ ಪೇಳಮ್ಮ ತಾಯೆ॥

ಪ್ರಾತಿಕಾಮಿ : ಹೇ ತಾಯಿ ಹೇ ಮಾತೆ ಹೇ ಜನನಿ ಧರೆಯೊಳಧಿಕವಾದ ಕುಡುತನಿಯ ಭೀಮೇಶನ ಚರಣಗಳನ್ನು  ಧ್ಯಾನಿಸುತ್ತಾ ಬರುತ್ತಾ ಯಿದ್ದೀರೊ ಯಿಲ್ಲವೊ ಪೇಳಬೇಕಮ್ಮಾ ತಾಯೆ ಕರುಣದಿಂದ ಕಾಯೆ॥

ದರುವು

ಭೃತ್ಯ ಕೇಳು ಪತಿವ್ರತೆಯ ಸೋತರೆಂದು
ಸತ್ಯವಿಟ್ಟರೆನೋ ಬಾಲ ಕುರುಪತಿ
ಗೆದ್ದರೆ ತನ್ನವರೊಡನೆ ವುತ್ತರವಿದಕೇನೊ
ಕಂದ ಬಾಲ ಹೇಳು ನಾ ಬರುವುದಿಲ್ಲ
ವೆಂದು ನೀಲಕಂಠನಾಣೆ ಮಗನೆ॥