ಕೌರವ : ಅಹಹಾ ಪಾಂಡು ಪುತ್ರನಾದ ಧರ್ಮರಾಯನೆ ಕೇಳು. ಈ ಭೂಮಂಡಲದೊಳು ಇರುವ ಚಂಡ ಪ್ರಚಂಡರೆಂದೆನಿಪ ಮಂಡಲೇಶ್ವರರಾದಿಯಾಗಿ ಬಗೆಬಗೆಯ ವಿದ್ಯಗಳೂ ದ್ಯೂತ ಮುಂತಾದ ಆಟಗಳನ್ನು ಆಡುತ್ತಾರಾದ ಕಾರಣ ನಾವು ಸೋಮಕುಲದ ಕ್ಷತ್ರಿಯರಾಗಿ ನೀತಿಯನ್ನು ತಪ್ಪದೆ ನಿಮ್ಮ ಸಂಗಡ ಪಗಡೆಯನ್ನಾಡುವದಕ್ಕೆ ದಾಯವನ್ನು ಒಡ್ಡಿ ಇದ್ದೇನೆ, ಆದ ಪ್ರಯುಕ್ತ ಇಂತಪ್ಪ ದಾಯವನ್ನು ಯಾರು ಗೆಲ್ಲುತ್ತಾರೋ ಭೂಮಿಧನಕನಕ ವಸ್ತುವಾಹನಂಗಳಾದಿಯಾಗಿ ಬಿಟ್ಟುಕೊಡುವಂತೆ ಕಟ್ಟಳೆಯನ್ನು ಮಾಡಿ ಇರುತ್ತೇನಯ್ಯ ಧರ್ಮಜಾ.

ಪದ

ಈಗ ಒಡ್ಡಿ ಇರುವ ಕ್ಷಿತಿಯಾ ನಾಗಪುರಿ
ಯನು ಆಗಲದನು ಗೆದ್ದರೆ ನೀವೂ ಈಗ
ಬಿಡುವೆನೂ ಈ ಕ್ಷಿತಿಯ ಬಿಡುವೆನೂ॥

ಧರ್ಮರಾಯ : ಅಯ್ಯ ಕೌರವೇಶ್ವರ. ಈಗಲು ನಿಮ್ಮ ಮಾತಿನಂತೆ ಇಂತಪ್ಪ ದ್ಯೂತಕ್ಕೆ ನಾನು ಪಾಲಿಸುವ ಧಾತ್ರಿ ಮುಂತಾದ ವಸ್ತುವಾಹನಗಳನ್ನು ಒಡ್ಡಿ ಯಿರುತ್ತೇನಯ್ಯ ಕೌರವಭೂಪಾ॥

ಪದ

ದಂಡಧರನ ತನಯನೆ ನಿನ್ನ ಕ್ಷಿತಿಯ ಗೆದ್ದೆನೊ
ಮಂಡಲಾಧಿಪತಿಯೆ ಮುಂದೆ ಒಡ್ಡು ಪರಿ
ಯನೂ ಆಡುವೆನು ನಾನಿನ್ನು॥

ಕೌರವ : ಅಯ್ಯ ಧರ್ಮರಾಯನೆ. ನಮ್ಮ ಭರತಕುಲದಲ್ಲಿ ಸಮ್ಮತಿಸಿ ದಾವ ಕಾರ‌್ಯಗಳ್ಮಾಡಿದರು ನಡೆಸುವರಲ್ಲದೆ ಕಾರ‌್ಯಹೀನರಾಗಿ ಹಿಮ್ಮೆಟ್ಟಿ ನಡೆಯತಕ್ಕದ್ದೇನೂ ದುರ್ಲಭವಾಗಿ ಕಾಣುವರಾದ ಕಾರಣ ಈಗಲು ನೀನು ಪಾಲಿಸುವ ಕ್ಷಿತಿಗಾಗಿ ಯಿಟ್ಟ ದಾಯವನ್ನು ಗೆದ್ದು ಯಿದ್ದೇನೆ. ಇನ್ನೇನು ಒಡ್ಡುತೀಯೊ ಇಡಬಹುದೈಯ್ಯ ಧರ್ಮಜಾ.

ದರುವೂ

ಅಂಧನಂದನ ಕೇಳ್ ಸುವರ್ಣ ರಾಜಿತರತ್ನಮಂ
ಇಂದು ಒಡ್ಡಿ ಯಿರುವೆ ನಾನು ನನ್ನ
ದೇಹ ನಿರುತಮಂ ಇದು ಸತ್ಯವಚನಮಂ॥

ಧರ್ಮರಾಯ : ಅಯ್ಯ ಕುರುಕುಲೇಂದ್ರ. ಮೊದಲು ನಾನು ಒಡ್ಡಿದ್ದ ದಾಯಕ್ಕೆ ನಮ್ಮ ಕ್ಷಿತಿಯನ್ನು ಗೆದ್ದು ಯಿರುವದೇನೂ ಸಹಜವಾಗಿ ಕಾಣುತ್ತೆ. ಈಗಲು ನಮ್ಮ ಮಂದಿರದಲ್ಲಿ ವಪ್ಪಿರುವ ಧನಕನಕ ವಸ್ತುಗಳಾದಿಯಾಗಿ ನನ್ನ ದೇಹವನ್ನು ಸಹಾ ಒಡ್ಡಿಯಿರುತ್ತೇನೈಯ್ಯಿ ಕುರುಪತಿ॥

ದರುವೂ

ಭಳಿರೆ ಧರ್ಮತನಯ ನಿನ್ನ ತನುವ ಗೆದ್ದೆನೂ
ಇಳೆಯಾಧಿಪನೆ ಕೇಳು ಮುನ್ನೇನು ವಡ್ಡುವೆ ನೀನಿನ್ನು

ಕೌರವ : ಭಳಿರೆ ಧರ್ಮಜ. ಧರ್ಮಪಯೋನಿಧಿಯಂತೊಪ್ಪುವ ನಿನ್ನ ದೇಹವನ್ನು ಸಹಾ ಗೆದ್ದುಯಿದ್ದೇನೆ ಇನ್ನೇನು ವಡ್ಡುತೀಯೊ ಯಿಡಬಹುದೈಯ್ಯ ಧರ್ಮಜಾ॥

ದರುವು

ಈಗ ಮಾದ್ರಿ ಸುತರನೊಡ್ಡಿದೆ
ನಾಗವೇಣಿ ನೃಪರ ಸತಿಯಳಹವ॥

ದರುವೂ

ಕುಂತೀಕುವರ ಕೇಳು ನಿಮ್ಮಯಾರು
ಮಂದಿಯಾ ದಂತೀಪುರದರಸ
ನಿಮ್ಮ ಗೆದ್ದೆ ನಿಶ್ಚಯಂ ಎನುತ ಕೋಟಿಯಾ॥

ಕೌರವ : ಅಯ್ಯ ಧರ್ಮಜ. ಮೂರನೆಯದರಲ್ಲಿ ನೀನು ವಡ್ಡಿರುವ ನಿನ್ನ ತಮ್ಮಂದಿರಾದ ಭೀಮ ಅರ್ಜುನರನ್ನು ನಿನ್ನನ್ನು ಸಹಾ ಗೆದ್ದುಯಿದ್ದೇನೆ. ಯಿನ್ನೇನು ವಡ್ಡುತ್ತೀಯ ಒಡ್ಡಬಹುದೈಯ್ಯ ಧರ್ಮಜಾ॥

ಪದ

ಚಿಣ್ಣರೆನಿಪ ಮಾದ್ರಿಸುತರ ಅಣ್ಣ ವಡ್ಡಿದೆ
ಆಣಿಮುತ್ತಿನ ಮಣಿಯಳಂತಿಹ ಸತಿಯ
ನೊಡ್ಡಿದೆ ಪಾಂಚಾಲಿಯನೊಡ್ಡಿದೇ॥

ಧರ್ಮರಾಯ : ಅಯ್ಯ ಶ್ರೀಹರಿಯೆ, ದಾನವಾರಿಯೆ ಚಕ್ರಪಾಣಿಯೆ ಏನು ವಿಪತ್ತು ತಂದೊಡ್ಡಿದೋ ದಾನವಾರಿ. ಯನ್ನ ತರುಣಿಯಳಾದ ದ್ರೌಪದಿಯನ್ನು ಹ್ಯಾಗೆ ವೊಡ್ಡಲೊ ಹರಿಯೇ.

ಅಯ್ಯ ಕುರುಪತಿಯೇ ಮೂರನೆಯದರಲ್ಲಿ ನಾನು ಒಡ್ಡಿದ್ದ ನನ್ನ ಅನುಜರಾದ ಭೀಮ ಅರ್ಜುನರನ್ನು ಸಹಾ ಗೆದ್ದುಯಿದ್ದದ್ದು ಏನೋ ಸಹಜಾ ಈಗ ನನ್ನ ಚಿಕ್ಕ ತಮ್ಮಂದಿರಾದ ಮಾದ್ರಿಯ ಕುಮಾರರಾದ ನಕುಲ ಸಹದೇವರು, ನಮ್ಮ ಸತಿಯಳಾದ ಮುತ್ತಿನಮಣಿಯಂತೆ ವಪ್ಪುವಾ ಪಾಂಚಾಲಿಯನ್ನು ಒಡ್ಡಿರುತ್ತೇನೆ ನೀನು ಪಗಡೆಯನ್ನು ಆಡಿ ಗೆಲ್ಲಬಹುದೈಯ್ಯ ಕೌರವ ಭೂಪಾಲನೇ॥

ದರುವೂ

ಭಾನುಕ್ಷೇತ್ರ ಭಳಿರೆ ಮೆರೆವಾ ಜೆಪ್ಪ
ನಗರದೀ ಭಾನುಕುಲಜನಾಗಿ
ಪುಟ್ಟಿದ ಹರನ ಕರುಣದೀ ಗೆದ್ದಿರುವೆ
ಬೇಗದೀ॥

ಕೌರವ : ಅಯ್ಯ ಧರ್ಮಜ. ನಾಲ್ಕನೆಯ ದಾಯದಲ್ಲಿ ನೀನು ಒಡ್ಡಿಯಿದ್ದ ದಾಯವನ್ನು ಗೆದ್ದು ಇದ್ದೇನೆ. ಆದ ಕಾರಣ ನಮ್ಮ ಆಜ್ಞಾನುಸಾರವಾಗಿ ನಡೆಯಬೇಕು. ಇದೂ ಅಲ್ಲದೆ ನಿಮ್ಮ ಸತಿಯಳಾದ ದ್ರೌಪದಿಯನ್ನು ಯಮ್ಮ ಅಡಿಗೆ ಕಳುಹಿಸಬೇಕಯ್ಯ ಧರ್ಮಜಾ.

ಧರ್ಮರಾಯ : ಅಯ್ಯ ಶಕುನಿ ಭೂಪಾಲ, ನಮ್ಮ ಕಾರ‌್ಯಗಳು ನಮ್ಮ ಮಾತಿನಂತೆ ಆಯಿತು. ಯೀಗಿನ ವ್ಯಾಳೆ ನಮ್ಮ ಸಭಾಗೃಹಕ್ಕೆ ತೆರಳಬಹುದೈಯ್ಯ ಮಾವಾ  ಕರುಣಾಕರ ನರಹರಿಯ ಬೇಡಿದೆ.

ಅಯ್ಯ ಕುರುಪತಿ. ಈಗಿನ ಕಾಲಕ್ಕೆ ನರಕಾಂತಕನ ಕರುಣ ತಪ್ಪಿದ ಕಾರಣ  ಭಟ ಪರಾಕ್ರಮಿಗಳಾದ ತಮ್ಮಂದಿರನ್ನು ಸಹ ದ್ರುಪದನಂದನೆ ಮುಂತಾದ ನಾನು ನನ್ನ ಕ್ಷಿತಿಯನ್ನು ಸಹ ಸೋತುಯಿರುತ್ತೇನೆ. ಆದಕಾರಣ ಈಗಲೂ ನಿನ್ನ ಆಜ್ಞಾನುಸಾರವಾಗಿ ಇರುತ್ತೇನಯ್ಯ ಕುರುಪತಿ ॥

ದರುವೂ

ಭಳಿರೆ ದಿನಮಣಿ ಪುತ್ರ ಪಾಂಡವರ ಕುಲಮಿತ್ರ
ವುಳಿಸಲಿಲ್ಲವೆ ಅವರ ಕಷ್ಠ ಶ್ರೀ ಕೃಷ್ಣ ॥
ಭಳಿರೆ ಯೋಚನೆಯಿಲ್ಲಾ ಬಲರಾಮ ಕಾಯ್ದಿಹನೂ
ಲಲನೆ ದ್ರೌಪದಿಯ ಸಭೆಗಿನ್ನು ಕರೆಸುವೆನು ॥

ಕೌರವ : ಹೇ ರಾಧೇಯ, ಸೂರ‌್ಯರುಚಿಕಾಯ ಕರ್ಮರಹಿತನಾದ ಧರ್ಮಜನು ನಮ್ಮ ಕೂಡೆ ಜೂಜನ್ನಾಡಬೇಕೆಂದು ದೇವರ್ಕಗಳಿಂದ ವಜ್ರ ವೈಡೂರ‌್ಯ ಗೋಮೇಧಿಕ ಪುಷ್ಯರಾಗ ಪದ್ಮರಾಗ ಮರಕತ ಮುಂತಾದ ನವರತ್ನತೇಜಪುಂಜರಂಜಿತಮಾದ ಯಜ್ಞಮಂಟಪಕ್ಕೆ ನಮ್ಮನ್ನು ಕರುಣದಿಂದ ಕರೆಸಿ ಪೋದ ಸಮಯದೊಳ್ ಸ್ಥಳವೆ ಜಲರೂಪ ಸ್ಥಳವೆ ಜಲದಿವಾದಾಗಿಯ ನೋಡಿ ಚಿತ್ತ ಚಂಚಲ ವಿಮಲ ಸ್ಫಟಿಕವಾದ ಆ ದ್ರೌಪದಿ ನನ್ನ ಸಮಾನಸ್ಕಂಧ ರಾಜ ರಾಜರ ಮುಂದೆ ಕೈತಟ್ಟಿ ನಕ್ಕು ಯಮ್ಮನ್ನು ಪರಿಹಾಸ್ಯವಂ ಮಾಡಿದಳ್, ಭಲಾ ತಮ್ಮಾ ಹೇ ರಾಧೇಯ ಸೂರ‌್ಯರಚಿತಕಾಯ. ಹರಿಕಮಲಸಾಮಜ  ಆಯುಷ್ಯ ಧನಗೃಹಮಂತ್ರ ಅವುಷದ ದಾನಮಾನವಮಾನ ಹೇಮಾದಿ ವಬತ್ತನ್ನು ಆತ್ಮದಲ್ಲಿ ತುಂಬಿಡಬೇಕೆಂಬ ಧರ್ಮಶಾಸ್ತ್ರವನ್ನು ಗ್ರಹಿಸಿ ದ್ಯೂತ ಮುಖದಿಂದ ಇವರೆಲ್ಲರ ಗೆದ್ದು ಬಳಿಕ ಆ ದ್ರೌಪದಿ ನಮ್ಮ ಸ್ವಾಧೀನವಾದಳಷ್ಟೆ. ಆ ಕಡುಮೂರ್ಖಳಿಗೆ ಪ್ರತ್ಯಪಮಾನ ದಾವುದು ಮಾಡಬೇಕೊ ರಾಧೆ ಕುಮಾರಾ.

ಕರ್ಣ : ಭಳಿರೆ ಅಣ್ಣಯ್ಯ. ಆ ದ್ರೌಪದಿಯನ್ನು ಈ ಸಭಾಸ್ಥಾನಕ್ಕೆ ಕರೆಸುವಂಥವನಾಗೊ ॥ಅಣೈಯ್ಯ

ಧರ್ಮರಾಯ : ಅಪ್ಪಾ ನನ್ನ ತಮ್ಮನಾದ ಅರ್ಜುನನನ್ನು ಕರೆಸುವಂಥವನಾಗೋ ಸಾರಥಿ.

ಅರ್ಜುನ : ಯಲಾ ಸಾರಥಿ, ಹೀಗೆ ಬಾ ಯಲಾ ಮಾನುಷ್ಯನೆ ಮತ್ತೂ ಹೀಗೆ ಬಾ. ಯಲಾ ಸಾರಥಿ ಕುಬೇರನ ಮಂಟಪಕಿಂ ಮಿಗಿಲಾದ ಈ ಸಭಾಸ್ಥಳದಲ್ಲಿ ಪ್ರಭುಕರ ತೇಜದಿಂದೆಸೆವ  ರಿಪುಕುಲಭಯಂ ಕರ ವಿದುಟ ರಿಪು ಚಮತ್ಕೃತಿಯಿಂದ ಮಾತನಾಡಿಸುವ ಭಟ ನೀ ಧಾರೊ ಯನ್ನೊಡನೆ ಸಾರೊ ॥

ಯಲೊ ಮಾನುಷ್ಯನೆ ಕೌರವ ಕೌರವನೆಂದು ಯನ್ನ ಮುಂದೆ ವುಚ್ಚರಿಸಲು ಶೀಘ್ರದಿಂದ ನಿನ್ನ ಶಿರವರಿವೆ ನೋಡು ಚನ್ನಾಗಿ ಬೊಗಳು ಧಾರ ಬಳಿಯಲ್ಲಿ ಸಾರಥಿ.

ಭಳಿರೆ ಸಾರಥಿ, ಈರೇಳು ಲೋಕದಲ್ಲಿರುವ ಸಪ್ತ ಕುಲಾಚಲದ ಪರ್ವತಂಗಳೊಳ್ ಶ್ರೇಷ್ಠತರದಿಂದ ರಜತಾಚಲದಲ್ಲಿ ಅಗ್ರಜ ಭಾಗದೊಳಿರುವ ಕೈಲಾಸ ಪಟ್ಟಣವನ್ನು ದಿಟ್ಟತನದಿಂದ ಪಾಲಿಸುವಂಥ ದುಷ್ಠರನ್ನು ಕುಟ್ಟಿ ಕುಟ್ಟಿ ಬಿಸುಟು ಶ್ರೇಷ್ಠರಿಗಿಷ್ಟಾರ್ಥವನ್ನು ಕೊಡುವಂಥ ದ್ರಿಷ್ಠಿ ಮೂರುಳ್ಳ ಸಾಂಬಮೂರ್ತಿಯಂ ಮೆಚ್ಚಿಸಿ ಸಂಭ್ರಮದಿಂದ ಪಾಶುಪತಾಸ್ತ್ರವಂ ಪಡೆದು ಚಂಡ ಪ್ರಚಂಡ ತ್ರೈ ಜಗದ್ಗಂಡ ರಿವುಮದಗರ್ವಗಂಡಭೇರುಂಡ ಕನಕಾಮಣಿ ಕುಂಡಲ ಪ್ರಭಾಮಯ ಶುಂಡಾಲನಗರಾಧ್ಯಕ್ಷ ಪಾಂಡುರಾಯನ ಸುಕುಮಾರ ಗಾಂಡೀವಿಯಂದರಿಯಲಾ ಸಾರಥಿ ಮನ್ಮನೋ ಮೂರುತಿ.

ಭಳಿರೆ ಸಾರಥಿ, ರಾಜಾಧಿರಾಜ ಮಾರ್ತಾಂಡತೇಜ ಮೂರುಲೋಕದ ಗಂಡ ದ್ರೌಪದಿಗೆ ಮೋಹದ ಗಂಡ ಧರ್ಮರಾಯರ ತಮ್ಮ ಅರ್ಜುನನೆಂದು ಕಿತಾಪ್ ಮಾಡುವಂಥವನಾಗೊ ಸಾರಥಿ ಮನ್‌ಮನೋಳ್ ಪೂರುತಿ.

ಯಲೊ ಚಾರ – ಅರ್ಜುನ – ಧನಂಜಯ – ಸವ್ಯಸಾಚಿ – ಕಿರೀಟಿ – ನರ – ಗಾಂಡೀವಿ- ಫಲ್ಗುಣ – ವಿಜಯ – ಪಾರ್ಥ ಯೆಂಬ ದಶನಾಮಾಂಕಿತಗಳನ್ನು ಪಡೆದಿರುವ ಯನ್ನನ್ನು ಈ ಸಭಾಪಂಡಿತರ ಬಳಿಗೆ ಬಂದ ಕಾರಣವೇನೆಂದು ಕೇಳಿದೆ. ಯಮ್ಮಣ್ಣನಾದ ಧರ್ಮಸುತಾಗ್ರಣ್ಯನೂ ಕರೆಸಿ ಯಿದ್ದಾನಾದ ಕಾರಣಾ ಬಾಹೋಣವಾಯ್ತು. ಅತಿ ಜಾಗ್ರತೆಯಿಂದ ಭೇಟಿಯನ್ನು ಮಾಡಿಸುವಂಥವನಾಗೊ ದೂತಾ ರಾಜ ಸಂಪ್ರೀತಾ.

ಅರ್ಜನ : ನಮೋನ್ನಮೊ ಅಣ್ಣಾ ಧರ್ಮಶರಣ್ಯಾ.

ಧರ್ಮರಾಯ : ದೀರ್ಘಾಯುಷ್ಯಮಸ್ತು ಹೇಳಪ್ಪಾ ತಮ್ಮಾ ಅನುಜೇಂದ್ರಾ.

ಅರ್ಜುನ : ಅಣ್ಣಾ ಧರ್ಮನಂದನಾ, ಯಂನ್ನಿಷ್ಟು ಜಾಗ್ರತೆಯಿಂದ ಕರೆಸಿದ ಕಾರಣವೇನು. ಯಾರೊಡನೆ ಯುದ್ಧಕ್ಕೆ ಸಂನ್ನದ್ಧನಾಗಿ ಪೋಗಬೇಕು. ಧಾವ ರಾಯರ ಕಡೆಯಿಂದ ಕಪ್ಪವಂ ತಂದು ನಿಮ್ಮ ವುತ್ತಮವಾದ ಪಾದಕ್ಕೆ ವಪ್ಪಿಸಬೇಕು. ತಪ್ಪಿ ನಡೆದರೆ ಶಿಕ್ಷಿಸಿ ಒಪ್ಪಿದರೆ ವುಪೇಕ್ಷೆ ಮಾಡದೆ ರಕ್ಷಿಸೊ ಅಣ್ಣಾ ಶೀಘ್ರದಿಂದ ನಿಮ್ಮ ಪಾದಕ್ಕೆರಗುವೆನು ಅಣ್ಣಾ ॥

ದರುವೂ

ಏನು ಹೇಳಾಲೈಯ್ಯ ತಮ್ಮಾ ಮಾನಹೀನ
ಮಾಡಿದರು ಕೌರವರು ॥ಬಂದಿತೆಮಗೇ
ವಿಧಿ ಮಾಯದಿಂದಾ ವಲ್ಲೆನೆಂದಾರೆ ಬಿಡ
ದೋದ ತಮ್ಮಾ ॥

ಧರ್ಮ : ಹೇ ತಮ್ಮಾ ಅರ್ಜುನಾ, ಘನ್ನ ಘಾತಕನಾದ ಕುನ್ನಿ ಕೌರವನು ನಗುವರ ಮುಂದೆ ಕಾಲೆಡಹಿ ಬಿದ್ದಂತೆ ಮಾಡಿದ. ಮಾವ ಶಕುನಿಯು ಸಹಾ  ಯಿವರೆಲ್ಲರು ಕೂಡಿ  ಮಾಡಿದ ಮೋಸ ಬುದ್ದಿಗಳು ಏನೆಂದು ಹೇಳಲಪ್ಪ ತಮ್ಮಾ ಅರ್ಜುನ ಭೂಪಾ.

ಪದ

ಕೃತಕ ಜೂಜಾ ॥ಮೋಸಾದಿಂದಾಡಿ
ಸೋತೆನೈವರ ಈ ಸಮಯದಲಿ ॥

ಧರ್ಮರಾಯ : ಹೇ ತಮ್ಮಾ ಅರ್ಜುನಾ, ಇದೂ ಅಲ್ಲದೆ ವುತ್ತಮವಾದ ಮಾತುಗಳಿಂದ ಲೆತ್ತಮನಾಡಿಸಿ ಹತ್ತು ಕೋಟಿ ದ್ರವ್ಯವನ್ನು ಸೋತೆನೂ  ಮುತ್ತಿನ ಮಣಿಯಂತೊಪ್ಪುವಾ ಪಾಂಚಾಲಿಯನ್ನು ಸಹಾ ಸೋತೆನಪ್ಪಾ ತಮ್ಮಾ ಅರ್ಜುನಾ ॥

ಅರ್ಜುನ : ಅಹಹಾ ಯಂತಾ ಮೋಸವನ್ನು ಮಾಡಿದೊ ಅಗ್ರಜಾ. ವಿವೇಕವಿಲ್ಲದ ನೀಚನೂ ಕಸ್ತೂರಿಯಂ ತುಳಿದುಬಿಟ್ಟಾಗಾಯಿತೂ, ಹಿಂದಕ್ಕೆ ಏಕ ಚಕ್ರಾಧೀಶ್ವರಗಿಂತಲು ಈ ಲೋಕದಲ್ಲಿ ನಿಮ್ಮ ಕರುಣದಿಂದಾ ನಾವು ಶ್ರೇಷ್ಠರಾಗಿದ್ದೆವು. ಮಾತಾಪಿತರ ಪೂಜೆಯನ್ನು ಮಾಡಿದ ತಪೋಬಲದಿಂದ ಹೇಮಕೇಶನು ಕಾಮನಾಶನು ನಮಗೆ ಯಾವ ಕಾರ‌್ಯಕ್ಕು ಸಹಾಯಕರನಾಗಿ ಇದ್ದಾನೆ. ನೀನು ಮತ್ತೆ ಯೋಚನೆ ಮಾಡುವುದು ಯಾಕೆ. ಈಗ ನಮ್ಮಯ ಮನಸ್ಸು ಸೂರೆಹೋಯಿತೆ, ನಿಮ್ಮ ಮಾತು ಎಷ್ಠು ಮಾತ್ರಕ್ಕೂ ಕೇಳುವುದಿಲ್ಲಾ. ವಂದುಕ್ಷಣ ನೇಮವನ್ನು ಪಾಲಿಸೊ ಅಣ್ಣಾ ಶೀಘ್ರದಿಂದ ನಿಮ್ಮ ಪಾದಕ್ಕೆರಗುವೆನು.

ದರುವೂ

ಧರಣಿಗಧಿಕ ವಾದ ಕುಡುತನಯ ವರನ
ಕರುಣ ತಪ್ಪಿತೊಗೆ ಎಮಗೀ  ಸಮಯಾ॥

ಧರ್ಮರಾಯ : ಹೇ ತಮ್ಮಾ ಅರ್ಜುನಾ, ಈ ಪೊಡವಿಗಧಿಕವಾದ ಕುಡುತನಿಯಾ ಭೀಮೇಶನ ಕರುಣ ಈದಿನ ನಮ್ಮ ಮೇಲೆ ಕಡಿಮೆಯಾಗಿರುವುದರಿಂದ ಸೋತು ಯಿರುತ್ತೇವೆ. ವಂದುಕ್ಷಣಾ ಸೈರಿಸಪ್ಪ ತಮ್ಮ ಅರ್ಜುನಾ.

ದರುವೂ

ಧರ್ಮಾಭೂಪತಿ ಕೇಳೊ ಧೈರ‌್ಯದಿಂದಿರು
ನೀನೂ ಸವರುವೆನು ಕೌರವರ ಬಲವಾ ಅಣ್ಣಯ್ಯ॥

ಅರ್ಜುನ : ಅಣ್ಣಾ ಧರ್ಮಜ. ವಂದುಕ್ಷಣ ನೇಮವನ್ನು ಪಾಲಿಸಿದ್ದೇ ಸಹಜವಾದರೆ, ಈ ಕೌರವರ ನೂರೊಂದು ಮಂದಿಯನ್ನು ಇವರಿಗೆ ಸಹಾಯವಾಗಿ ಬಂದ ಬ್ರಹ್ಮಲೋಕದವರಾಗಲಿ ಬಂದಾಗ್ಯು ಲೆಕ್ಕಿಸದೆ ಕತ್ತರಿಸಿ ಭೂತಪ್ರೇತಪಿಶಾಚಿಗಳಿಗೆ ಹಬ್ಬವಂ ಮಾಡಿಸುತ್ತೇನೆ. ಒಂದು ಕ್ಷಣ ನೇಮವನ್ನು ಪಾಲಿಸಿ ನಿನ್ನ ಕಣ್ಣು ಅರ್ತಿಗಳಿಂದ ನೋಡುವಂಥವನಾಗೊ ಅಗ್ರಜಾ ಯೀ ಮಾತು ಸಹಜಾ.

ಪದ

ದುರಾತ್ಮ ಖಳರಾದ ಕೌರವರ ಬಲವನೆಲ್ಲಾ
ಬಲಿಯನಿಕ್ಕುವೆ ಅಪ್ಪಣೆಯನು ತಾರೊ ಅಣೈಯ್ಯ॥

ಅರ್ಜುನ : ಅಂಣಾ ಧರ್ಮಜ, ಈ ಭ್ರಷ್ಟರಾದ ಕೌರವರು ನಮ್ಮ ಮೇಲೆ ಯುದ್ಧವನ್ನು ಮಾಡಿ ಜಯಿಸಲಾರದೆ ಯಾವಾಗಲು ಇಂಥ ಮೋಸ ಕೃತ್ಯಗಳನ್ನು ಮಾಡುವರು. ನೀ ಕಂಡು ಕಂಡು ಅವರಲ್ಲಿ ನೀವೋಗಿ ಮಾತನಾಡಬಹುದೇನೊ ಅಣ್ಣಾ. ನಮಗೆ ಬುದ್ಧಿಯನ್ನು ಪೇಳುವುದಕ್ಕೆ ದಂಡಧರನಾಗಿ ನೀನಿದ್ದು ಇಂತಪ್ಪ ಕೃತ್ಯಗಳೂ ಜರುಗುವಂಥ ಕಾಲದಲ್ಲಿ ಸ್ವಲ್ಪವಾದರು ತಿಳಿಸುವುದಕ್ಕೆ ಆಗಲಿಲ್ಲವೆ ಅಣ್ಣೈಯ್ಯ॥

ಯಷ್ಠು ಮಾತ್ರಕ್ಕು ಚಿಂತೆಯನ್ನು ಮಾಡಬೇಡ. ನೀನು ಕಂದಿ ಕುಂದಿ ಬೆಂದು ಬೆಂಡಾಗಬ್ಯಾಡ. ವಂದು ಕ್ಷಣ ನೇಮವನ್ನು ಪಾಲಿಸೊ ಅಣ್ಣಾ ಧರ್ಮಶರಣ್ಯ॥

ಪದಾ

ಏಕಾದಶಕ್ಷೋಹಿಣಿ ಮಾರ್ಬಲವನೆಲ್ಲ
ಸಂಹರಿಸಿಬರುವೆನು ಅಪ್ಪಣೆಯ ತಾರೊ ಅಣ್ಣಯ್ಯ॥

ಅರ್ಜುನ : ಅಣ್ಣಾ ಧರ್ಮಜ॥ದಾಯಾದಿಯಾದ ಕೌರವನೂ ಮಾಡಿದ ದುರುಳತೆಯಾ ನೀವರಿಯದವರೇ ಭರದಿ ಸರೋವರದಲ್ಲಿ ದಟ್ಟಿರುವುದು ನೋಡಿ ನೋಡಿ ನಿಮಗೆ ಕರುಣ ಬರಬಹುದೆ ಅರಮನೆಯಿಲ್ಲದೆ ಅರಗಿನ ಮನೆಯಲ್ಲಿಟ್ಟು ವುರಿಗೊಳಿಸಿದ ದುರಾತ್ಮನ ಶಿರವ ಕೊಯ್ದು ನಂತರಾ ನಿನಗೆ ದೊರೆತನದ ಪಟ್ಟವಂ ಕಟ್ಟಿ ಲೋಕದಲ್ಲಿ ಕೀರ್ತಿ ಪಡೆಯುವೆನೂ ಅಂಣನೆ ರಾಜಾಗ್ರಣ್ಯನೆ॥

ಪೊಡವಿಯೊಳ್ ಕುಡುತನಿಯಾ-ವಡೆಯಾ
ಭೀಮೇಶನಾ ಬಿಡದೆ ಧ್ಯಾನಿಸುವೆ
ಕೊಡು ನೇಮಾ ಅಂಣೈಯ್ಯ

ಅರ್ಜುನ : ಭಳಿರೆ ಅಣೈಯ್ಯ, ಈ ಪೊಡವಿಯೊಳ್ ಕುಡುತನಿಯ ಭೀಮೇಶನ ಪಾದದಾಣೆ ಕಡುದುರುಳರ ತಲೆಯನ್ನು ಹೊಡೆದು ಭೂತಗಳಿಗೆ ವುಣಬಡಿಸುತ್ತಿದ್ದೆ. ಕಡೆಯ ಮಾತಿನ್ನೇನು ತಡಿ ನಡೆಯುವುದು ಯಂನ್ನಯ ಶಕ್ತಿ ನಿನ್ನಯ ಯುಕ್ತಿ ಅಣ್ಣಾ ಧರ್ಮಜಾ ನಾನು ಹೇಳಿಕೊಂಡಾಗ್ಯು ನಿಮ್ಮ ಮನಸ್ಸಿಗೆ ಬರಲಿಲ್ಲವೆ. ಈ ಭ್ರಷ್ಟರಾದ ಕೌರವರು ನಿಮಗೆ ಬಾಂಧವರೆಂದು ಹಿತವೇನೂ ನಮಗೆ ಯೀ ಗತಿಯೇನು ಒಳಿತಾಯಿತು ಕಡುಪರಾಕ್ರಮಿಯಾದ ಭೀಮೇಶನ ಗದೆಯೊಂದಿರಲು ಸೃಷ್ಠಿಯೊಳಗಲ್ಲ ಮೂರು ಲೋಕದಲ್ಲಿ ನಿಲ್ಲುವನೆ ಈ ಕೌರವ ಶುನಕ. ಯಮ್ಮಣ್ಣನಾದ ಭೀಮೇಶನನ್ನು ಜಾಗ್ರತೆಯಿಂದ ಕರೆಸುವಂಥವನಾಗೊ ಅಗ್ರಜಾ॥

ಭೀಮ : ಭಲಾ ನರಹುಳುವೆ ಹೀಗೆ ಬರುವಂಥವನಾಗು ಮತ್ತೂ ಹೀಗೆ ನಿಲ್ಲುವಂಥವನಾಗು. ಯಲಾ ಮಾನುಷ್ಯನೆ ಕಟಕಟಾಯಮಾನ ಕಣೋಕ್ತಿಗಳು ಚಟುಲ್ ಚಟುಲ್ ಯಂಬ ರವದಿಂ ಭಟಗಟಿತ ತಟಗಟಿತ ಮದತಿಲಕನಂತೆ ಮಾತನಾಡಿಸುವ ಭಟಾಗ್ರಣ್ಯ ನೀ ದಾರು ನಿನ್ನ ಜನನಿ ಜನಕರು ಪೆಸರ್‌ಪಿಡಿದು ಕರೆಯುವ ನಾಮಧೇಯವೆನು ಸಾಂಗವಾಗಿ ಬೊಗಳೊ ಸೂತಾಧಿಪಾ.

ಸಾರಥಿ : ಸಾರಥಿ ಸಾರಥಿಯೆಂದು ಕರೆಯುತ್ತಾರೈ ಬುದ್ಧಿ ಭುವನ ಪ್ರಸಿದ್ದಿ॥

ಭೀಮಾ : ಸಾರಥಿ ಸಾರಥಿಯೆಂಬ ಚಾರಕುಲ ಮಸ್ತಕದ ಮಣಿಯೆ ನಿನಗಾರು ಅಣಿಯೆ-ಪೇಳುವೆನು ಕೇಳೂ, ಯೀಗಾ ಘನಮಾರ್ಗದೊಳ್ ಸಂಚರಿಪ ಹಂಸ್ಯಾಸನ ಪಿತಸೇವ್ಯ ಹಂಸಕೋಟಿ ಪ್ರಭಾಮಯ ಹಿಮಾಂಶುಕುಲೋದ್ಬವ ಸ್ತಂಭೇರುಪುರಾಧಿಪಾ ಬಿರದಂ ಬೋಳಿ ವಿಶ್ವಂಭರನಾದ ಪದ್ಮರಾಯಾಬ್ದಿ ಬ್ರುಂಗಳಶಾಮಾಂಗಪಿತ ಅಂಗಜನ ಭಕ್ತ ಕಂಬು ಕಂಠೀರವ ಪಾರ್ಥಿವಗೋತ್ರ ಪಾಂಡವಾಗ್ರಂಣ್ಯಪುತ್ರ- ಶಿರೋರನ್ನಕ್ಷತ್ರ ನಭ್ರದ್ವರದೊಳ್‌ಮೋಕ್ಷ ಕಂಜಾಯತಾಕ್ಷನಾದ ಶ್ರೀಮನ್‌ಪರಮಾತ್ಮಕಾಯೈ ಅರಿವಿದ್ಯ ಜಟಾಧರ ಶಿಕ್ಷಿಸಿ ತಾಂಬ್ರಕ್ಷಕನಂತೆ ಬಂದ ರಾಕ್ಷಸರಂನ್ನು ಸೀಳಿ ಹಿಮಾಂಶುಕುಲೆರದ್ಬೂಮೀಶ್ವರರರ ಸಂಶಯವಿಲ್ಲದೆ ಕೇಳುವ ಬಡವಾ ನೀ ಧಾರು ಭಗರ್ ಬದಲುತ್ತ ವದುರು.

ಸಾರಥಿ : ಕೌರವನ ಬಳಿಯಲ್ಲಿ ಸಾರಥಿ.

ಭೀಮ : ಕೌರವ ಕೌರವಾ ಯೆಂದು ಯನ್ನ ಮುಂದೆ ವುಚ್ಚರಿಸಿದ್ದೇ ಆದರೆ, ಯಿಗೋ ನೋಡು ಯನ್ನ ಕರಾಗ್ರದಲ್ಲಿ ತಕತಕನೆ ಪಕಪಕನೆ ಕುಣಿಯುವಾ ಯಪ್ಪತ್ತೇಳೂವರೆಸಾವಿರ ಮಣವಿನ ಗದಾದಂಡದಿಂದ ನಿನ್ನ ದೊಡ್ಡ ವಟ್ಟಿಯನ್ನು ಪರ‌್ರನೆ ಶೀಳಿ, ತಿಳಿರುಧಿರವಂ ತೆಗೆದು ಮದುರವೆಂದು ನಾಂ ಗಟಗಟನೆ ಪಾನವನ್ನು ಮಾಡುವೆ. ನಿನ್ನ ಎಲುಬುಗಳನ್ನು ಮುರಿದು ವೀಳ್ಯವೆಂದು ನಾಂ ಮೆಲ್ಲುವೆ ನಿನ್ನ ಖಂಡಗಳನ್ನು ಕಿತ್ತು ವುಪ್ಪಿನ ಕಾಯಿಯೆಂದು ನಾಂ ಚಪ್ಪರಿಸುವೆ. ಸಾಂಗವಾಗಿ ಬೊಗಳೊ ಸೂತಾಧಿಪಾ.

ಸಾರಥಿ : ಧರ್ಮರಾಯರ ಬಳಿಯಲ್ಲಿ ಸಾರಥಿ.

ಭೀಮ : ಭಲಾ ಭಲಾ ನಮ್ಮ ಸಾರಥಿ ಹಾಗಾದರೆ ಹೀಗೆ ಬರುವಂಥವನಾಗು.

ಸಾರಥಿ : ಇನ್ನು ತಮ್ಮಯ ನಾಮಾಂಕಿತವು ಚನ್ನಾಗಿ ಗೊತ್ತಾಗಲಿಲ್ಲವೈ ಬುದ್ಧಿ ಭುವನ ಪ್ರಸಿದ್ದಿ.

ಭೀಮ : ಯಲೊ ಸಾರಥಿ, ಗುಡುಗುಡಾಯಮಾನ ಬೆಣೆ ಬೆಣೆ ಚಟುಲ್ ರವದಿಂದ ಪಳಾಪಳಾರ್ಭಟ ಮಾದರಟಿಯಿಂದ ದಿಗ್‌ದೇಶಂಗಳನ್ನು ದಗ್ಧಪಡಿಸಿ ಅಶನಿಯೆಂಬ ಪಶುಮಾಯುಧದಿಂದಾ ಪ್ರಸಾದಾಯಿನಿ ತೇಜೋಪುಂಜದಿಂ ಮೆರೆಯುವಾ ಸಾಂದ್ರಾನಿಂದ್ರಭರಿತಮಾದ ರಕ್ಕಸಾರಿಯೆಂಬ ಯಿಂದ್ರನ ತೇಜಮಂ ತಿರಸ್ಕರಿಸಿ ಮತ್ತವೈರಿಮದ ಗಜಕುಲಮಂತೊಪ್ಪ ಮೃಗೇಂದ್ರ ಪ್ರಿಯನಾದ ಯಮ್ಮಯ ವಿಸ್ತಾರವನ್ನು ಬಿತ್ತರಿಸುತ್ತೇನೆ ಚಿತ್ತವಿಟ್ಟು ಕೇಳೊ ಸಾರಥಿ.

ಭೀಮ : ಯಲಾ ಸಾರಥಿ ದ್ವಾರಕಾವತಿಗೆ ಅರಸು ದಾರೆಂದು ಕೇಳಿಬಲ್ಲೆ.

ಸಾರಥಿ : ಬಲಭದ್ರನೆಂದು ಕೇಳಿಬಲ್ಲೆ.

ಭೀಮ : ಅಂತಾ ಬಲಭದ್ರನಿಗೆ ಅನುಜ ಧಾರೆಂದು ಕೇಳಿಬಲ್ಲೆ.

ಸಾರಥಿ : ಕೃಷ್ಣಮೂರ್ತಿಯೆಂದು ಕೇಳಿಬಲ್ಲೆ.

ಭೀಮ : ಯಿಷ್ಠಕ್ಕು ಶ್ರೇಷ್ಠನಾದ ಅಂತೊಪ್ಪ ಕೃಷ್ಣಮೂರ್ತಿಗೆ ಭಾವಮೈದ ಧಾರೆಂದು ಕೇಳಿಬಲ್ಲೆ.

ಸಾರಥಿ : ಅರ್ಜುನನೆಂದು ಕೇಳಿಬಲ್ಲೆ.

ಭೀಮ : ಅಹಹಾ ಅರ್ಜುನಾ ಅಂತಾರ್ಜುನಾದ್ಯಕ್ಷ ಶಿರೋರತ್ನ ಭರ್ಜಿಯವರ ಪ್ರಸಾದದಿಂದ ಕುರುವಂಶ ನಿರುವಂಶಗೈಯಲ್ಕೆ ತ್ರಾಣಿ ದ್ರೋಣಾಚಾರ‌್ಯರೋಳ್‌ ಬಿಂಡಿವಾಲ ಕರಪಾಲ ಆಕರ್‌ಷನೋಚ್ಚಾಟನ ಸ್ತಂಭನಾದಿಗಳಿಂದ ಗುರುಗಳನ್ನು ದುರ್‌ಭಾಷಣೆ ನುಡಿದ ದ್ರುಪದನನ್ನು ಸೆರೆಮುಖದಿಂದ ಪರಿಭಂಗಿಸಿ ನೆಲದ ನೆರಳು ಬಲಿಯವಾದ ಮತ್ಸ್ಯಯಂತ್ರವನ್ನು ಸೂಕ್ಷ್ಮಯುಕ್ತದಿಂದ ನುಚ್ಚು ನೂರಾಗಿ ಸೀಳಿದ ಶಸ್ತ್ರಧಾರಿ ವೀರಾಧಿವೀರನ ಮಾತಂತಿರಲಿ ಅವರಗ್ರಜ ಧಾರೆಂದು ಕೇಳಿಬಲ್ಲೆ.

ಸಾರಥಿ : ಧರ್ಮರಾಯರೆಂದು ಕೇಳಿಬಲ್ಲೆ.

ಭೀಮ : ಅಹಹಾ ಸತ್ಯ ಶೌಚನಿತ್ಯಕರ‌್ಮಶಮದುಮ ಶಾಂತಿದಾಂತಿಪಾಲಕ ಪರಿಪಾಲಕ ಯುಧಿಷ್ಠಿರ ಭೂಪಾಲರ ಮಾತಂತಿರಲಿ ಧರ್ಮವೆ ಜಯವೆನಿಪ ಧರ್ಮಪಯೋನಿಧಿಗೆ ಅನುಜ ದಾರೆಂದು ಕೇಳಿಬಲ್ಲೆ.

ಸಾರಥಿ : ಭೀಮನೆಂದು ಕೇಳಿಬಲ್ಲೆ.

ಭೀಮ : ಅಹಹಾ ಭೀಮಾ ಪ್ರಬಲ ವೈರಿ ನಿರ್ನಾಮ, ಕರ ಗಧಾಧಾಮ ಮಗಧಾದಿಗಳ ಮಾನ ವೋಗಲಾಡಿಸಿ ಹಿಡಿಂಬಕಾದಿ ಭೂಪುಂಡರ ತ್ರಾಂಡ್ರವನ್ನು ಖಂಡಿಸಿದಂಥ ಭೀಮಾ ಗಜಸಿಂಹ ನೆಂದು ಯೀ ಪೊಡವಿಯ ಮೇಲೆ ಪ್ರಸಿದ್ಧಿಯಾಗುವಂಥ ಯೀ ಕುನ್ನಿ ಕೌರವನ ಮುಂದೆ ಕಿತಾಪ್ ಮಾಡಿಸುವಂಥವನಾಗೊ ಸಾರಥಿ.

ಸಾರಥಿ : ಯೀ ಸಭಾಮಂಟಪಕ್ಕೆ ಬಂದ ಕಾರಣವೇನೈ ದೇವಾ ಕೀರ್ತಿ ಪ್ರಭಾವ.

ಭೀಮ : ಯಲಾ ಸಾರಥಿ, ಯೀ ಸಭಾ ಮಂಟಪಕ್ಕೆ ಬಂದ ಕಾರಣವೇನೆಂದರೆ ಯಮ್ಮಣ್ಣನಾದ ಧರ್ಮಸುತಾಗ್ರಣ್ಯನು ಕರೆಸಿದ ಪ್ರಯುಕ್ತ ಸಾವಯಿಸಿ ಬಾಹೋಣವಾಯ್ತು ಅತಿಜಾಗ್ರತೆಯಿಂದ ಭೇಟಿಯನ್ನು ಮಾಡಿಸುವಂಥವನಾಗೋ ದೂತಾ ರಾಜಸಂಪ್ರೀತಾ.

ಭೀಮ : ನಮೋನ್ನಮೊ ಅಣ್ಣಾ ಧರ್ಮಶರಣ್ಯ.

ಧರ್ಮರಾಯ : ದೀರ್ಘಾಯುಷ್ಯಮಸ್ತು ಹೇಳಪ್ಪ ತಮ್ಮಾ ಭೀಮಸೇನಾ.

ಭೀಮ : ಭಳಿರೆ ಅಗ್ರಜಾ ಯನ್ನಿಷ್ಠು ಜಾಗ್ರತೆಯಿಂದ ಕರೆಸಿದ ಕಾರ‌್ಯಾರ್ಥವೇನೊ ದಾವ ರಾಯರ ಮೇಲೆ ಯುದ್ಧಕ್ಕೆ ಸನ್ನದ್ಧನಾಗಿ ಪೋಗಬೇಕೊ. ದಾವ ರಾಯರಿಂದ ಕಪ್ಪಕಾಣಿಕೆಯನ್ನು ತಂದು ತಮ್ಮ ವುತ್ತಮವಾದ ಪಾದಕ್ಕೆ ವೊಪ್ಪಿಸಬೇಕೊ. ಯಾರನ್ನು ಶಿಕ್ಷಿಸಬೇಕೊ ಅಥವಾ ರಕ್ಷಿಸಬೇಕೊ ಅತಿಜಾಗ್ರತೆಯಿಂದ ಅಪ್ಪಣೆಯನ್ನು ಕೊಟ್ಟು ಕಳುಹಿಸುವಂಥವನಾಗೊ ಅಣ್ಣಾ ಧರ್ಮಶರಣ್ಯ.

ದರುವೂ

ಯೇನೆಂದು ಹೇಳಲೈಯ್ಯ॥ತಮ್ಮಾ ಭೀಮಾ
ಮಾನಹೀನದ ಸುದ್ದಿಯಾ ಮಾನವಾಗ್ರಣಿಯೆ
ಕೇಳ್ ನಾನಾಡಿದರೆ ಫಲಹೀನವಾಗುವದೊ ತಮ್ಮಾ॥

ಧರ್ಮರಾಯ : ಹೇ ತಮ್ಮಾ ಭೀಮಾ ರಿಪುಕುಲ ನಿರ್ಧೂಮ ಘಾತುಕನಾದ ಕೌರವನು ಮಾವ ಶಕುನಿಯು ಸಹಾ ಮಾಡಿದ ಮೋಸಗಳೆಷ್ಟೆಂದು ಹೇಳಲಪ್ಪಾ ತಮ್ಮಾ ಭೀಮಸೇನಾ॥

ಭೀಮ : ಅಣ್ಣಾ ಧರ್ಮಜ ಅಂಥಾ ಮೋಸಗತಿಗಳೇನಿದ್ದಾಗ್ಯು ವಂಚನೆಯಿಲ್ಲದೆ ಯನ್ನೊಳು ವುಚ್ಚರಿಸಿದ್ದೆ ಸಹಜವಾದರೆ ಈ ಭೂಮಿಯನ್ನಾದರು ವಡೆದು ನಿನಗೆ ಬಂದ ಕಷ್ಟವನ್ನು ಪರಿಹಾರ ಮಾಡುತ್ತೇನೆ. ಯೇನಪ್ಪಣೆಯಾಗುತ್ತಾ ಯಿದೆಯೊ ಅಗ್ರಜಾ ಯೀ ಮಾತು ಸಹಜಾ॥

ಪದ

ರಾಜಕೌರವನಲ್ಲಿಗೆ ಯಮ್ಮಯ ಮಾವ
ಜೀಯಾ ಯನ್ನನು ಕರೆಸಿ ಸೋಜಿಗವಾದ
ಜೂಜಿನೊಳ್ ಸೋಲ್ಗೊಳಿಸಿದಾ॥
ರಾಜ ದಟ್ಟೈಶ್ವರ‌್ಯವಾ॥

ಧರ್ಮರಾಯ : ಮಂಡಲದೊಳ್ ರಿಪುಗಳ ಮಂಡೆಯನ್ನು ಖಂಡ್ರಿಸುವ ಗಂಡುಗಲಿಯಾದ ಭೀಮನೆ ಕೇಳು ನೆನ್ನೆ ದಿನದಲ್ಲಿ ಘಂನಘಾತಕನಾದ ಕುನ್ನಿ ಕೌರವನು ಮಾವ ಶಕುನಿಯು ಸಹಾ ವುತ್ತಮವಾದ ಮಾತುಗಳಿಂದ ಲೆತ್ತವನ್ನಾಡಿಸಿ ಭೂಮಿ ಧನಕನಕ ವಸ್ತುವಾಹನಗಳಾದಿಯಾಗಿ ನಿಮ್ಮ ನಾಲ್ವರು ತಮ್ಮಂದಿರನ್ನು ಸಹಾ ಸೋತು ಯಿರುತ್ತೇನಪ್ಪಾ ಭೀಮಸೇನಾ॥

ಭೀಮ : ಭಳಿರೆ ಅಗ್ರಜಾ, ಯಂಥ ಮೋಸವನ್ನು ಮಾಡಿದೊ ಅಗ್ರಜಾ, ಆದಾಗ್ಯು ಚಿಂತೆಯಿಲ್ಲಾ ವಂದು ಕ್ಷಣ ನೇಮವನ್ನು ಪಾಲಿಸೋ ಅಣ್ಣಾ ಶೀಘ್ರದಿಂದ ನಿಮ್ಮ ಪಾದಕ್ಕೆರಗುವೆನು॥