ದ್ರೌಪದಿ : ಹೇ ಕಂದ ಹೇ ಬಾಲ ಹೇ ತನಯಾ ಭೀತಿ ಇಲ್ಲದೆ ಕಾತುರದಿಂದ ಕೌರವೇಂದ್ರನ ಸಭೆಗೆ ಬಾರೆಂದು ಕರೆಯುವುದು ಯಾತರ ನ್ಯಾಯ. ಅರಸನಾದ  ಧರ್ಮಜನೂ ತನ್ನ ಸೋತ ನಂತರದಿ ಯನ್ನ ಸೋತನೆಂದು ಪೇಳುತ್ತೀಯಾ. ಅತಿಧರ್ಮಿಗಳಾದ ಗುರುದ್ರೋಣ ಭೀಷ್ಮರು ಮೊದಲಾದ ಸಜ್ಜನರು ಸಮ್ಮತಿಪಟ್ಟರೇನಪ್ಪಾ ಕಂದಾ.

ಪ್ರಾತಿಕಾಮಿ : ಸರ‌್ವರು ಸಮ್ಮತಿಪಟ್ಟರಮ್ಮ ತಾಯೆ॥

ದ್ರೌಪದಿ : ಎಷ್ಟು ಮಾತ್ರಕ್ಕು ಬರುವ ಕಾಲವಲ್ಲಪ್ಪ ಮಗನೆ॥

ಪ್ರಾತಿಕಾಮಿ : ಹೇ ರಾಜ ಆಶ್ರಿತಕಲ್ಪ ಭೋಜ, ನಿಮ್ಮಾಜ್ಞಾಧಾರಕನಾಗಿ ಪೋಗಿ ಆ ಪಾಂಚಾಲಿಯಂ ಕರೆಯಲು ಧಾತ ಧರ್ಮಜನು ಸೋತನಂತರದಿ ಯನ್ನ ಸೋತದ್ದು ಯಾತರನ್ಯಾಯ ಆದ ಕಾರಣ ಶ್ರೀ ನೀಲಕಂಠನಾಣೆ ಬರುವುದಿಲ್ಲವೆಂದು ಹೇಳಿದಳೈಯ್ಯ ರಾಜ ಮಾರ್ತಾಂಡ ತೇಜಾ॥

ಕೌರವ : ಇದಕ್ಕೆ ಹ್ಯಾಗೆ ಮಾಡಬೇಕಪ್ಪಾ ಮಗನೆ॥

ಪ್ರಾತಿಕಾಮಿ : ಅಯ್ಯ ರಾಜ, ಯನ್ನಿಂದಾ ಯೇನಾಗುವುದು ನಿಮ್ಮ ತಮ್ಮನಾದ ದುಶ್ಶಾಸನನನ್ನು ಕರೆಸಿದ್ದೇ ಆದರೆ ಆ ದ್ರೌಪದಿಯ ಜಡೆಮುಡಿಯನ್ನು ಪಿಡಿದು ಝಂಕರಿಸಿ॥ಯಳೆದುಕೊಂಡು ಬರುತ್ತಾನೈಯ್ಯಾ ರಾಜ ಮಾರ್ತಾಂಡತೇಜಾ॥

ದುಶ್ಶಾಸನ : ಭಳಿರೆ ಮಾನುಷ್ಯನೇ ಹೀಗೆ ಬರುವಂಥವನಾಗು ಭಳಿರೆ ಚಾರಕ ಮತ್ತೂ ಹೀಗೆ ಬರುವಂಥವನಾಗು ಯಲೈ ಸೂತಾಧಿಪ ರಿಪುಹ್ರುತ್ಕಂಡ ಮಂಡಲದೊಳ್ ಝಟಿಲತರಮಾದ ಸ್ತಂಭೇರುಯೆಂಬ ಕದಾಂಭಕ್ಕೆ ಘೋಷತರಮಾದ ಶತ್ರು ಮದಕುಂಭಿಣಿ ಧರಾಧರಯೆಂಬ ಸಮುದಾಯಕ್ಕೆ ಝಂಝ ಪ್ರಭಂಜಿತ ಸಭಾಮಂಟಪದೊಳ್ ನಿಂತು ಕೇಳುವ ಭಟಾಮಕುಟಾಗ್ರಣ್ಯ ನೀನಾದರೆ ಯಮ್ಮನ್ನು ಧಾರೆಂದು ಕೇಳುವುದಕ್ಕೆ ನೀ ಧಾರೊ ನಿನ್ನ ಜನನಿ ಜನಕರು ಪೆಸರ್ ಪಿಡಿದು ಕರೆಯುವ ನಾಮಧೇಯವೇನೊ ದೂತಾ ರಾಜ ಸಂಪ್ರೀತಾ

ಸಾರಥಿ : ಸಾರಥಿ ಸಾರಥಿಯೆಂದು ಕರೆಯುತ್ತಾರೈ ಸ್ವಾಮಿ ॥

ದುಶ್ಶಾಸನ : ಯಲೋ ಸಾರಥಿ ಯಾರ ಬಳಿಯಲ್ಲಿ ಸಾರಥ್ಯ ಮಾಡುತ್ತಿ ॥

ಸಾರಥಿ : ಧರ್ಮರಾಯರ ಸನ್ನಿಧಾನದಲ್ಲಿ ಸಾರಥಿ॥

ದುಶ್ಶಾಸನ : ಯಲೋ ಮೂರ್ಖ ಸಾರಥಿ, ಧರ್ಮ, ಧರ್ಮರಾಯ ಯಂದು ಯನ್ನ ಮುಂದೆ ವುಚ್ಚರಿಸಿದರೆ ಇಕೋ ನೋಡು ಯನ್ನ ಕರಾಗ್ರದಲ್ಲಿ ಇರುವ ಕತ್ತಿಯಿಂದ ಖಂಡಿತವಾಗಿ ನಿನ್ನ ಶಿರವನ್ನು ಕತ್ತರಿಸುತ್ತೇನೆ. ಸಾಂಗವಾಗಿ ಬೊಗಳು ಧಾರ ಬಳಿಯಲ್ಲಿ ಸಾರಥಿ.

ಸಾರಥಿ : ಕೌರವರ ಬಳಿಯಲ್ಲಿ ಸಾರಥಿ॥

ದುಶ್ಶಾಸನ : ಶಹಭಾಷ್ ನಮ್ಮ ಸಾರಥಿ ಶ್ರೀಮದ್‌ಬ್ರಹ್ಮಾಂಡ ಮಂಡಲದೊಳ್ ಮಂಡಿತವಾದ ಕುರುಕುಲೇಂದ್ರನ ಅನುಜನಾದ ವಿಶ್ವಾಸದಿಂ ದಿಕ್ಕು ದೊರೆಗಳ ಮುಕ್ಕರಿಪಂತೆ ಮಾಳ್ಪ ದುಶ್ಶಾಸನ ರಾಜನೆಂದು ಕಿತಾಪ್ ಮಾಡುವಂಥವನಾಗೊ ಚಾರಾ ವರ ಪಣಿಹಾರಾ॥

ಸಾರಥಿ : ಯೀ ಸಭಾ ಸ್ಥಾನಕ್ಕೆ ಬಂದ ಕಾರಣವೇನೈ ದೇವಾ ಕೀರ್ತಿ ಪ್ರಭಾವಾ.

ದುಶ್ಶಾಸನ : ಯಲೊ ಸಾರಥಿ, ಈ ವರ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ ಯಮ್ಮಣ್ಣನಾದ ಕೌರವಶಿಖಾಮಣಿ ಕರೆಸಿದ ಪ್ರಯುಕ್ತ ಬಾಹೋಣವಾಯಿತು. ಅತಿಜಾಗ್ರತೆಯಿಂದ ಭೇಟಿಯನ್ನು ಮಾಡಿಸೊ ದೂತಾ ರಾಜಸಂಪ್ರೀತಾ.

ದುಶ್ಶಾಸನ : ನಮೋನ್ನಮೋ ಅಣ್ಣಾ ಕೌರವ ಶಿಖಾಮಣಿ.

ಕೌರವ : ದೀರ್ಘಾಯುಷ್ಯಮಸ್ತು ಐಶ್ವರ‌್ಯದಿಂ ಬರುವಂಥವನಾಗೊ ಅನುಜಗಾಂಧಾರಿ ತನುಜಾ॥

ದುಶ್ಶಾಸನ : ಅಣ್ಣಾ ಕೌರವಶಿಖಾಮಣಿ, ಯನ್ನಿಷ್ಠು ಜಾಗ್ರತೆಯಿಂದ ಕರೆಸಿದ ಕಾರ‌್ಯವೇನೂ. ಯಾರೊಡನೆ ಯುದ್ಧಕ್ಕೆ ಸನ್ನದ್ದನಾಗಿ ವೋಗಬೇಕು. ಧಾವ ರಾಯರಿಂದ ಕಪ್ಪವಂ ತಂದು ನಿಮ್ಮ ವುತ್ತಮವಾದ ಪಾದಕ್ಕೆ ವಪ್ಪಿಸಬೇಕೂ. ಜಾಗ್ರತೆಯಿಂದ ಅಪ್ಪಣೆ ಪಾಲಿಸೊ ಅಣ್ಣಾ ಕೌರವ ಶಿಖಾಮಣಿ.

ದರುವು

ನಡಿ ನಡಿ ಅನುಜನೆ ತಡಿಯದೆ ಸತಿಯಳ
ಮುಡಿ ಪಿಡಿದೆಳೆತಾರೊ ತಮ್ಮಾ ಕೆಡನುಡಿ
ನುಡಿದರೆ ಅತಿತೀವ್ರದಿಂದ ಜಡೆಮುಡಿ
ಪಿಡಿದೆಳೆಯೊ ತಮ್ಮಾ॥

ಕೌರವ : ಹೇ ತಮ್ಮಾ ತೀವ್ರದಿಂದ ಪೋಗಿ ಆ ದ್ರುಪತಾತ್ಮಜೆಯಾದ ದ್ರೌಪದಿಯನ್ನು ಯನ್ನ ಸಭಾಸ್ಥಾನಕ್ಕೆ ಕರದುಕೊಂಡು ಬರುವಂಥವನಾಗೊ ತಮ್ಮಾ ದುಶ್ಶಾಸನ॥

ಪದ

ಇಂದುವದನೆ ಬಲು ಚದುರಾಮೃತದೊಳು
ವಿಧವಿಧ ಸುರಿಸುವಳು ಅವಳೂ॥

ಕೌರವ : ರಿಪು ಕುಲೋದ್ಭವ ಭೀರು ಕುಂಭಸ್ಥಳಗೆದ್ದು ಅಂಬರಕ್ಕೆ ಬಲುಗೆಂಪುಬಗೆದು ಹುಲಿಯಂತೆ ಮೆರೆಯುವ ದುಶ್ಶಾಸನನೆ ಕೇಳು. ಕೆಂಬಲುವೆಂಬ ಗರ್ವದಿ ಯಾವ ದ್ರುಪದಾತ್ಮಜೆಯು ಈ ಕುಂಭಿಣಿಯೋಳ್ ಅತಿಚೋದ್ಯವೆನಿಪ ಸುಖದ್ಯೂತದೋಳ್ ಸೋಲ್ಗೊಳಿಸಿದ ಪ್ರಯುಕ್ತ ಯುಕ್ತಿಯಿಂದ ಬಾರೆಂದು ಕರೆದರೆ ಆಯಿತಾಕ್ಷಿ ಬಾಹೋಣವಿಲ್ಲವೆಂದು ಪ್ರಾತಿಕಾಮಿಕನ ಕೂಡೆ ನಿರೂಪಿಸಿದಳಂತೆ. ತತ್‌ಪ್ರಯುಕ್ತ ಆ ಯಿಂದುವದನೆಯಾದ ದ್ರೌಪದಿಯನ್ನು ಯಾವ ವಿಧದಿಂದಲಾದರು ಯನ್ನ ಸಭಾಸ್ಥಾನಕ್ಕೆ ತಂದು ವದಗಿಸುವಂಥವನಾಗೊ ಅನುಜಾ ಗಾಂಧಾರಿ ತನುಜಾ.

ಪದ

ಯೇಸು ವಿಧದಿ ಪಾಂಚಾಲಿಯ ಮನದೊಳು
ಮೋಸಗೈವಳಂತೆ ಅಂತೆ ಬಗೆ ಬಗೆಯಲಿ
ಸುರಿಸುವಳಂಥವಳ ಸಂಕೋಚವಿಲ್ಲದೆ ತಾರೋ ತಮ್ಮಾ॥

ಕೌರವ : ಯಲಾ ತಮ್ಮನಾದ ದುಶ್ಶಾಸನನೆ ಕೇಳು. ಆ ಜಡಜಾಂಬಕಿಯಳಾದ ದ್ರೌಪದಿಯ ಜಡೆಮುಡಿಯನ್ನು ಪಿಡಿದು ಅಡಿಗಡಿಗೆ ಘುಡಿಘುಡಿಸಿ ತುಡುಕು ಬಂಧನದಿಂ ಕುರುರಾಯನಿಗೆ ಬಂದಡರುವಂತೆ ಝೇಂಕರಿಸಿ ಯಳೆದುಕೊಂಡು ಬಾರೋ ಅನುಜೇಂದ್ರ॥

ಪದ

ವಾಸವಾನುತ ಭೀಮೇಶನ ಘಾಸಿಗೆ
ಲೇಶ ಅಂಜದಿರೊ ತಮ್ಮಾ॥

ಕೌರವ : ಹೇ ತಮ್ಮನಾದ ದುಶ್ಶಾಸನನೆ ಕೇಳು. ಈ ಪೊಡವಿಯೊಳ್ ಕುಡುತನಿಯ ಭೀಮೇಶನ ಘಾಸಿಗೆ ಲೇಶಮಾತ್ರವು ಅಂಜದೆ ಆ ಮಡದಿಯಳನ್ನು ಕಡು ಸಡಗರದಿಂದೆಳೆದು ಕರೆತರುವಂಥವ ನಾಗೋ ತಮ್ಮಾ.

ದುಶ್ಶಾಸನ : ಅಣ್ಣಾ ಕೌರವ ಶಿಖಾಮಣಿಯೆ ಕೇಳು. ಆ ಪಾಂಚಾಲಿಯನ್ನು ಅತಿಜಾಗ್ರತೆಯಿಂದ ಕರೆದುಕೊಂಡು ಬರುತ್ತೇನೆ. ವಂದುಕ್ಷಣ ಸೈರಿಸುವಂಥವನಾಗೋ ಅಣ್ಣಾ ಕೌರವಶಿಖಾಮಣಿ.

ದುಶ್ಶಾಸನ : ಭಳಿರೆ ಸಾರಥಿ. ಆ ದ್ರೌಪದಿಯಿರುವ ಸ್ಥಳಕ್ಕೆ ಯನ್ನನ್ನು ಕರೆದುಕೊಂಡು ಹೋಗಿ ಬಿಡುವಂಥವನಾಗೋ ಸಾರಥಿ.

ದುಶ್ಶಾಸನ : ಭಲ್ ಭಲರೆ ಹೆಣ್ಣೆ ಅತಿಜಾಗ್ರತೆಯಿಂದ ತೆರಳುವಂಥವಳಾಗೆ ನಾರಿ ಮದನಕಠಾರಿ॥

ದರುವು

ಹ್ಯಾಗೆ ಮಾಡಲಮ್ಮಾ ಖಳ ಬಾಗಿಲೊಳಗೆ
ಬಂದು ನಿಂದ ನಾಗವೇಣಿ ತೋಚದೆ
ನಗೆ ಮುಂದಿನಾ ಪಂಥ ॥
ಕೃತಕ ಜೂಜನಾಡಿ ಧರ್ಮಜ ನೃಪರಿ
ಗೆನ್ನ ಮಾರಿದ ನಿಪುಣಕಳ್ಳರ ಕೈಯೊಳಗಿಟ್ಟು
ಸೂರೆಮಾಡಿದ॥

ದ್ರೌಪದಿ : ಅಣ್ಣೈಯ್ಯ ಸಾರಥಿ ಇದು ಯೇನು ಸೋಜಿಗವೊ ಈ ಖಳನು ಬಂದದ್ದು ಹ್ಯಾಗಂದರೆ ಹಿಂದೆ ಸೀತೆ ಯಿರುವ ಸ್ಥಳಕ್ಕೆ ರಾವಣನೆಂಬ ರಕ್ಕಸನು ಮಾಯಾವೇಷದಿಂದ ಬಂದು ಆಕೆಯನ್ನು ವ್ಯಥೆಗೊಳಿಸಿದಂಥ ರಕ್ಕಸನು ಹ್ಯಾಗೆ ಬಂದನೋ, ಅದರಂತೆ ಈ ಖಳನು ಸಿಡಿಲು ಗುಡುಗಿದಂತೆ ಬಂದಿಹನು  ಇವನು ಧಾರು ಇವನ ಹೆಸರೇನು ಇವನ ಗೊತ್ತು ತಿಳಿದು ಬಾರಪ್ಪಾ ಸಾರಥಿ ॥

ದುಶ್ಯಾಸನ : ಯಲೆ ಪಾಂಚಾಲಿ, ವಿಶ್ವಾಸದಿಂ ದಿಕ್ಕು ದೊರೆಗಳ ಮುಕ್ಕರಿಪಂತೆ ಮಾಳ್ಪ ದುಶ್ಯಾಸನ ರಾಜನೆಂದು ತಿಳಿಯುವಂಥವಳಾಗೆ ನಾರಿ ಮದನ ಕಠಾರಿ.

ಪದ

ಭೀಮ ಪಾರ್ಥರನ್ನು ಸೋತು ॥ಬರಿದೆ
ವ್ಯಥೆಯಗೊಳಿಸಿದಾ  ಕೌರವಪಾಪಿಗಳಿಗೆ
ಯಂನ್ನ ಸೂರೆ ಮಾಡಿದ ॥

ದ್ರೌಪದಿ : ಅಪ್ಪಾ ಸಾರಥಿ, ಈ ಧರ್ಮರಾಯನು ಯಂಥಾ ಮೋಸಮಾಡಿದನಪ್ಪಾ ಸಾರಥಿ. ಭೂಮಿಯನ್ನು ವಡೆದು ಟಕ್ಕಿಸಿ ಯರಡು ಭಾಗವಂ ಮಾಡಿಬಿಡುವ  ಭೀಮಾ  ಅರ್ಜುನರನ್ನು ಸೋತು ಈ ಮಹಾಷ್ಟೈಶ್ವರ‌್ಯಕ್ಕೆ ನಷ್ಟವಂ ತಂದಿಟ್ಟ ಧರ್ಮಜಗೆ ಹೊಟ್ಟೆ ಬ್ಯಾನೆ ತಣ್ಣಗಾಯಿತೇನಪ್ಪಾ ಸಾರಥಿ ॥

ಪದ

ಕ್ರೂರ ದುರ‌್ಯೋಧನನ  ಮನದಿ  ಕ್ರೂರ
ವನ್ನು ತಾಳಿದಾ  ಶ್ರೀಶ ಭೀಮೇಶ
ಯನ್ನ ದೂರ ಮಾಡಿದಾ ॥

ದ್ರೌಪದಿ : ಅಣ್ಣೆಯ್ಯೆ ಸಾರಥಿ ಹ್ಯಾಗೆ ಮಾಡಲಪ್ಪಾ. ಈ ಧರ್ಮಜನು ದುರಾತ್ಮಕನಾದ ಕ್ರೂರ ದುರ‌್ಯೋಧನಗೆ ಯನ್ನ ಮಾರಿ ಕುಳಿತಿರುವನೂ ಈ ಜನ್ಮ ಯಿದ್ದೇನು ಫಲವೊ ಸಾರಥಿ.

ದುಶ್ಯಾಸನ : ಯಲೆ ಹೆಣ್ಣೆ ನೀನು ಅತ್ತತ್ತ ನಡಿಯೆಂದರೆ  ದುರ‌್ಯೋಧನನ ತಮ್ಮಾ ದುಶ್ಯಾಸನ ರಾಜನು ಸಾರುವನಲ್ಲಾ, ಇಂಥ ಕಡುನುಡಿಗಳನ್ನು ನುಡಿದಿದ್ದೇ ಆದರೆ ನಿನ್ನ ಜಡೆಯನ್ನು ಪಿಡಿದು ಯಳೆಯದೆ ಬಿಡೆನೆ ಬಾಲೆ  ಸದ್ಗುಣಶೀಲೆ

ದರುವು

ಮುಟ್ಟದಿರೆಲೊ  ಮರುಳ  ದೂರಸಾರೆಲೊ ॥
ಮುಟ್ಟಿದಾರೆ ಯನ್ನ ವುಸುರು ತಟ್ಟದೇನೆಯೊ ॥ಭಂಡಾ ದೂರ ಸಾರೆಲೊ ॥

ದ್ರೌಪದಿ : ಯಲಾ ದುರ್ಮತಿ ಕರ್ಮಕ್ಕೆ ಕೈವಶಳಾಗಿ ಮನೋಧರ್ಮವ ತಿಳಿಯದೆ ರುತುಮತಿಯಳಾದ ಅತಿ ಚೆಲುವೆಯನ್ನು ಖತಿಯಿಂದ ಸಭಾಸ್ಥಾನಕ್ಕೆ ಯಳೆಯುವದೇನೋ ದುರುಳ  ಯನ್ನ ಮುಖವನ್ನು ನೋಡಿದರೆ ಸ್ವಲ್ಪವಾದರು ಕರುಣ ಬಾರದೇ ನಿನಗೆ ಕಾಲ ವದಗಿ ಯಿರುವದೇನೋ ಭಂಡಾ ॥

ಪದ

ರುತುಮತಿಯಳಾದ ಪತಿವ್ರತೆಯ ಸಭೆಗೆ
ಕರೆವರೇನೋ ಅತಿ ದುರಾತ್ಮಕನೆ ಕಾಲ
ಗತಿಸಿತೇನೆಲೊ ಭಂಡಾ ದೂರ ಸಾರೆಲೊ ॥

ದ್ರೌಪದಿ : ಯಲಾ ದುರುಳ, ಯೈವರು ಪತಿಗಳಲ್ಲದೆ  ಪರರನ್ನ ಅರಿಯದವಳ ಸಂಗಡ ದುರುಳತನದಿಂದ ಸರಸವೇನೊ ದುರ್ಮತಿ, ಯನ್ನಂಥ ಪತಿವ್ರತೆಯನ್ನು ಮುಟ್ಟಬೇಡವೊ ಪಾಪಿ ॥

ಪದ

ವಾಸುಕಿಶಯನ ಶ್ರೀ ಭೀಮೇಶ ಕಂಡರೀ
ಸಮಯದಿ  ಘಾಶಿಗೈವನಿದಕೆ  ಸಂಕೋಚ
ವೇನೆಲೊ ॥ದುರುಳ  ದೂರ ಸಾರೆಲೊ ॥

ದರುವು

ನಡಿನಡಿಯೆ ಸುಂದರಿ  ತಡವೇಕೆ ವೈಯ್ಯರಿ
ಪೊಡವಿಪತಿ ಕೌರವೇಂದ್ರನ  ತೊಡೆಯಾ
ಮೇಲೆ ಕುಳ್ಳಿರುವದಕ್ಕೆ  ನಡಿಯೆ ॥

ದುಶ್ಯಾಸನ : ಯಲೆ ಪಾಂಚಾಲಿ, ಮರ್ಮವನರಿಯದೆ ಧರ್ಮಜನು ನಿನ್ನ ಲೆತ್ತಕ್ಕೆ ಯಿಟ್ಟು ಸೋತ ನಂತರದಿ ವಂಶೋದ್ಭವರುಗಳೂ ಮಹಾಕ್ಷೇಮವೆಂದು ಕೇಳುತ್ತಿ. ಯಿಂಥಾ ಪ್ರಿಯ ವಚನವನ್ನು ಬಿಟ್ಟು ಖ್ಯಾತಿದೇವರಾದ ಕೌರವನ ಸನ್ನಿಧಿಗೆ ಬಾರೆಂದರೆ, ಬೇಗೆಗೊಂಡು ಕಾತರಿಸಿ ಯಾತಕ್ಕೆ ಬೊಗಳುವೆ ನಿನ್ನನ್ನು ಬಿಟ್ಟೆನೆಂದು ಯಂದಿಗು ತಿಳಿಯಬ್ಯಾಡವೆ ಮಾನಿನಿ.

ಪದ

ಪತಿವ್ರತೆಯಾದರೊಳಿತು  ನಡಿಯೆ  ಯಲೆ
ಹೆಣ್ಣೆ  ಸತತ ಕೌರವೇಂದ್ರನೊಳು ವಿಹಿತದಿ
ಸೌಖ್ಯಪಡುವುದಕ್ಕೆ ನಡಿಯೇ ॥

ದುಶ್ಯಾಸನ : ಯಲೆ ಪಾಂಚಾಲಿ, ಈ ಸಭಾ ಮಂಟಪದಿ ನಿಂತು ನಾನೇ ಪತಿವ್ರತೆಯಳೆಂದು  ಹೆಚ್ಚು ಮಾತುಗಳಾಡುತ್ತೀಯಾ. ನಿನಗೆ ವಬ್ಬರಲ್ಲದೆ ಯೈದು ಮಂದಿ ಪತಿಗಳಿದ್ದು ನೀನು ಪತಿವ್ರತೆಯಳೆಂಬ ಭಾವ ಹ್ಯಾಗೆ ತಿಳಿಯುವದೆ ಹೆಣ್ಣೆ. ನೀನು ಪತಿವ್ರತೆಯಳಾದರೆ ಚಿಂತೆಯಿಲ್ಲ. ಅತಿ ಹಿತದಿಂದ ಕುರುಕುಲೇಂದ್ರನ ಸಮ್ಮುಖಕ್ಕೆ  ಬಂದು ಅನೇಕ ವಿಧವಾಗಿ ಸೌಖ್ಯಪಡುವೆ. ಅಲ್ಲದೆ ಸಕಲಕ್ಕೂ ನೀನೆ ಅಧಿಕಾರಿಯಾಗುವೆ ಜಾಗ್ರತೆಯಿಂದಾ ತೆರಳೆ ನಾರಿ ಮದನ ಕಠಾರಿ ॥

ಪದ

ವಾಸವಾನುತ ಭೀಮೇಶ ಕೇಳಲೆ ಹೆಣ್ಣೆ ಭಾಸುರಾಂಗಿಯೆ
ಕ್ಲೇಶವ್ಯಾತಕೆ  ಲೇಸದಿಂ ಸುಖಪಡುವುದಕ್ಕೆ ನೀ ನಡಿಯೆ ॥

ದುಶ್ಯಾಸನ : ಯಲೆ ಪಾಂಚಾಲಿ, ವಿದವಿಧದಿಂ ಸರ‌್ವವನ್ನು ಮಾತನಾಡುತ್ತೀಯಾ. ಈ ಪೊಡವಿಯನ್ನು ರಕ್ಷಿಸುವ ಮೃಢನ ಮೊರೆ ವೊಕ್ಕರು ಬಿಡೆನೂ. ಯೀ ಪೊಡವಿಗೊಡೆಯನಾದ ಕೌರವೇಂದ್ರನ ತೊಡೆಯ ಮೇಲೆ ಕೂಡ್ರುವದಕ್ಕೆ ನಡಿಯೆ ಕುಡಿತೆಗಂಗಳೆ ॥

ಭೀಮ : ಯಲಾ ಭಂಡನಾದ ದುಶ್ಶಾಸನನೆ ಕೇಳು. ಯೀ ಭೂಮಂಡಲದಲ್ಲಿ ನಾನೇ ವುದ್ದಂಡನೆಂದು ನಿನ್ನ ಚಾಂಡಾಲ ನಾಲಿಗೆಯಿಂದ ಭಂಡನುಡಿಗಳನ್ನು ನುಡಿಯುತ್ತೀಯಾ. ಯೀ ಭೂಮಂಡಲದಲ್ಲಿ ನಿಂತು ಯಮ್ಮ ಪುಂಡರೀಕಾಕ್ಷಿಯಳಾದ ತರುಣಿಯಳನ್ನು ಭಂಡು ಮಾಡುವಂಥದ್ದು ಯುಕ್ತವಲಾ್ಲ. ಯಲಾ ಕುಂಭ ನೀನು ಗಂಡುಗಲಿಯಾದದ್ದೆ ಸಹಜವಾದರೆ ಪ್ರಚಂಡ ಮಾರ್ತಾಂಡನೆನಿಪ ಯನ್ನೆದುರು ನಿಂತು ನಿನ್ನ ಭುಜಭಲ ದೋರ್ದಂಡದೊಳಿರುವ ಶಕ್ತಿಯನ್ನು ಯನ್ನೆದುರಿನಲ್ಲಿ ತೋರಿಸಿದರೆ ಸಮಾ ಯಿಲ್ಲವಾದದ್ದೆ ಆದರೆ, ಇಗೋ ನೋಡು ಯನ್ನ ಕರಾಗ್ರದಲ್ಲಿ ಯಿರುವ ಈ ಗಧಾದಂಡದಿಂದ ನಿನ್ನ ಗುಂಡಿಗೆ ಎಲುಬುಗಳನ್ನು ಮುರಿದು ನಿನ್ನ ಬಾಹು ದಂಡಗಳನ್ನು ತುಂಡು ತುಂಡುಗಳಾಗಿ ಮಾಡಿ ನಿನ್ನ ಮಂಡೆಯಂನ್ನು ಕಂಡ್ರಿಸಿ ಯೀ ಭೂಮಂಡಲದಲ್ಲಿ ಯಿರುವ ನಾಡ ಭೂತಗಳ ಮಂಡಲವೆಲ್ಲಾ ತಂಡೋಪತಂಡವಾಗಿ ಬಂದು ಸಂತೋಷಪಡುವಂತೆ ಮಾಡುತ್ತೇನೆ. ಯೀ ಮಾತು ನಿನ್ನ ಮನದೊಳಿಟ್ಟುಕೊಂಡು ಯಮ್ಮ ಪುಣ್ಯಾಂಗನೆಯಳಾದ ದ್ರೌಪದಿಯನ್ನು ಬಿಟ್ಟು ಸಡಗರದಿಂದ ಯನ್ನೊಡನೆ ಯುದ್ಧಕ್ಕೆ ಸಿದ್ದನಾಗೊ ತಬ್ಬಲಿ ಭ್ರಷ್ಠಾ.

ದುಶ್ಯಾಸನ : ಯಲಾ ಭಂಡ ಭೀಮನೆ ಕೇಳೂ. ಈ ಭೂಮಂಡಲದಲ್ಲಿ ನಾನೇ ವುದ್ದಂಡನೆಂದು ನಿನ್ನ ನಾಲಿಗೆಯಿಂದ ಆಡುತ್ತೀಯಾ. ಈವಾಗ ಝೇಂಕರಿಸಿ ನಿನ್ನ ದೊಡ್ಡ ತಲೆಯನ್ನು ತಟ್ಟನೆ ಸೀಳಿ ಬೀಳ್ಕೆಡವಿ ಚಪ್ಪರಿಸಿ ಬಿಡುವೆ. ನೀನು ಕಡು ಪರಾಕ್ರಮಿಯಾದರೆ ಯೀಗ ಯನ್ನ ಎದುರು ನಿಲ್ಲಲೊ ಭಂಡಾ ನಿಂಮೈವರಿಗೆ ನಾನೇ ಮಿಂಡಾ.

ಅರ್ಜುನ : ಯಲಾ ದುರುಳನಾದ ದುಶ್ಯಾಸನನೆ ಕೇಳು, ಯನ್ನಯ ತರುಣಿಯಳಾದ ತರಳಾಕ್ಷಿಯನ್ನು ದುರುಳತನದಿಂದಾ ಜಡೆ ಮುಡಿಯನ್ನು ಹಿಡಿದೆಳೆಯುತ್ತೀಯಾ ದುರುಳಾ. ನಿನ್ನ ತರಳತನದ ಆಟಗಳನ್ನು ಬಿಟ್ಟು ತೀವ್ರದಿಂದ ಆ ಕಡೆಗೆ ತೆರಳುವಂಥವನಾಗೊ ಭ್ರಷ್ಠಾ ಹಾಗೆ ತೆರಳದೆ ಯಿದ್ದರೆ ಈ ಭೂಮಂಡಲದಲ್ಲಿ ಇರುವ ಹಿಂಡುಗಲಿಗಳೋಳ್ ಮಹಾ ಪ್ರಚಂಡನೆಂದು ತಂಡೋಪತಂಡವಾಗಿ ಕೊಂಡಾಡುವಂತೆ, ಯನ್ನ ಕರಾಗ್ರದೊಳಿರುವ ಕೂರ್ಗಣೆಗಳಿಂದ ಭೋರ್ಗರಿಸಿ ನಿನ್ನ ಯಮಪುರಿಗೆ ಸೇರಿಸುವುದಕ್ಕೆ ಮುಂಚೆ ನಿನ್ನ ಕರಚರಣಗಳೆರಡನ್ನು ಕತ್ತರಿಸಿ, ನಿನ್ನ ದೊಡ್ಡವಟ್ಟೆಯನ್ನು ಸೀಳಿ ನಿನ್ನ ಕರುಳುಗಳನ್ನು ತೆಗೆದು ಈ ಪಟ್ಟಣದ ಬಾಗಿಲಿಗೆ ಕಟ್ಟುವೆನು. ದಿಟ್ಟತನದಿಂದಾ ಯನ್ನೊಡನೆ ಯುದ್ಧಕ್ಕೆ ಬದ್ಧನಾಗಿ ನಿಲ್ಲೊ ಶುದ್ಧ ಭ್ರಷ್ಠಾ.

ದುಶ್ಯಾಸನ : ಯಲಾ ನಪುಂಸಕನಾದ ಅರ್ಜುನನೆ ಕೇಳೂ, ನಾನೇ ಬಲುಪರಾಕ್ರಮಿಯೆಂದು ಘರ್ಜಿಸಿ ನುಡಿಯುತ್ತೀಯಾ, ಜಂಬಾರಿಯ ಸಭೆಗೆ ನೀನು ಗಂಭೀರವಾಗಿ ಪೋಗಲು ಸಂಭ್ರಮದಿಂದ ಆ ಸಭಾ ಮಧ್ಯಕ್ಕೆ ಬಂದು ಪೋಗುವ ಯೀ ನಿನ್ನನ್ನು ನೋಡಿ ಅಂಬುಜನ ಬಾಣಕೇಳಿಗೆ ಬಾರೆಂದು ಕರೆಯಲು, ನಾನು ಬರುವುದಿಲ್ಲವೆಂದು ನೀನು ದುರುಳ ವಚನಗಳನ್ನು ನುಡಿಯಲು ಆ ತರಳಾಯತಾಕ್ಷಿ ಶಾಪವಂ ಕೊಡಲು, ಆ ಮುದ್ದು ಮುಖದ ನಾರಿಯು ಕೊಟ್ಟ ಶಾಪಕ್ಕೆ ಬದ್ಧನಾಗಿ ಇದ್ದ ಗಂಡುಸ್ಥನವನ್ನು ಕಳದುಕೊಂಡು, ನಾರಿಯಂದದಿ ಸೀರೆಯನ್ನುಟ್ಟು ಕುಪ್ಪಸವಂ ತೊಟ್ಟು ಬಳೆಯಂನಿಟ್ಟುಕೊಂಡು ಈ ಭೂಮಂಡಲದಲ್ಲಿ ಬಾಳುವಾಗಿಲ್ಲದ ಪೌರುಷ ಈಗ ದಾವಲ್ಲಿ ಬಂತೊ ಪಾರ್ಥ ನೀ ಬದುಕಿದ್ದೆ ವ್ಯರ್ಥ.

ಭೀಮ : ಯಲಾ ಭಂಡನಾದ ಕೌರವನೆ ಕೇಳು. ಪೂರ್ವದೊಳ್ ನಾವೆಲ್ಲರು ಬಾಲತ್ವದಲ್ಲಿ ಆಟಪಾಟಗಳನ್ನಾಡುವ ಸಮಯದಲ್ಲಿ, ನಮ್ಮ ರೂಪು ಲಾವಣ್ಯ ವಾಗ್ಜಲವನ್ನು ನೋಡಿ ಸೈರಿಸಲಾರದೆ ಗಂಡುಗಲಿಗಳಾದ ಪಾಂಡವರನ್ನು, ಯೀ ಭೂಮಂಡಲದಲ್ಲಿಯೆ ಲಾಕ್ಷಾಭವನವಂ ಕಟ್ಟಿಸಿ ಯೀ ವೂರ‌್ವಿಯೋಳ್ ಯಾರು ಅರಿಯದಂತೆ ಸರಹೊತ್ತಿನಲ್ಲಿ ಅರಗಿನ ಮನಿಗೆ ಬೆಂಕಿಯಂ ಹಚ್ಚಿಸಿದಿರಿ  ಆ ವ್ಯಾಳೆಯಲ್ಲಿ ಮುರಹರ ವೈರಿಯಾದ ಶ್ರೀ ಕೃಷ್ಣಮೂರ್ತಿಯಿಂದ ನಾವೆಲ್ಲರು ಬದುಕಿದೆವೂ ಇದನ್ನೆಲ್ಲಾ ನಮ್ಮ ಮನಸ್ಸಿಗೆ ಸೈರಿಸಿಕೊಂಡು ಯಿರುತ್ತೇವೆ. ಯಿನ್ನು ನಿನ್ನ ಘಾತಕತನವನ್ನು ಬಿಡದೆ ನಮ್ಮ ಪುಣ್ಯಾಂಗನೆಯಳಾದ ಆಯತಾಕ್ಷಿಯಳನ್ನು ಭಂಡು ಮಾಡುವುದಕ್ಕೆ ಆಜ್ಞೆಯನ್ನು ಕೊಟ್ಟು ಯಿರುತ್ತೀಯಾ. ಆದಾಗ್ಯು ಚಿಂತೆಯಿಲ್ಲ. ಯಂಮ್ಮಣ್ಣನಾಜ್ಞೆಯಂ ಸುಮ್ಮನಿದ್ದೆ. ಆದರೆ ನಿನ್ನ ಯರಡು ಕಣ್ಣುಗಳನ್ನು ಕಿತ್ತು ಯೀ ಮಣ್ಣು ಪಾಲು ಮಾಡುತ್ತೇನೊ ಅಂಧಕನ ಮಗನೆ.

ಕೌರವ : ಯಲೊ ಹಂದಿ ಭೀಮನೆ ಕೇಳು. ತಂದೆಯಿಲ್ಲದ ಮಕ್ಕಳು ಬದುಕಿಕೊಳ್ಳಲೆಂದು ಬಿಟ್ಟದ್ದಕ್ಕೆ ಹುಮ್ಮಿ ಯಮ್ಮಯ ಪರಾಕ್ರಮಕ್ಕೆ ಯದುರಾಗಿ ನಿಲ್ಲುತ್ತೀಯಾ. ಚಿಣ್ಣನೆ ನಿನಗೇನು ತಿಳಿಯುವದು. ಮೀಸೆ ಬರುವ ಪುರುಷ ದೇಶಂಗಳರಿಯ ಕುಚ ಬರುವ ನಾರಿ ಮುಂದಿನ ಆಲೋಚನೆಯನ್ನರಿಯಳು. ಪುಲಿಯಿದ್ದ ಗವಿಯೋಳ್ ಮೇಷ ರಾಜಿಯಿಸುವದೆ, ಗಂಡಭೇರುಂಡನೋಳ್ ಸಿಂಹ ರಾಜಯಿಸುವದೆ ಈಗಿನ ವ್ಯಾಳೆಯಲ್ಲಿ ಯಮ್ಮ ಸರಿಸಮಾನರಾಗಿ ವುಬ್ಬಿ ವುಬ್ಬಿ ಯಣಿಕೆ ಇಲ್ಲದೆ ಬೊಗಳುತ್ತೀಯೇನೊ ಭ್ರಷ್ಠಾ ಪರಮ ಪಾಪಿಷ್ಠಾ.

ಅರ್ಜುನ : ಯಲಾ ಗನ್ನ ಘಾತಕನಾದ ಕೌರವನೆ ಕೇಳೂ, ಯಮ್ಮಯ ಸತಿಯಳಾದ ತರಳಾಯತಾಕ್ಷಿಯಳನ್ನು ಭಂಗಮಾಡುವದು ನೋಡಿ ವುಮ್ಮಾಯದಿ ನಗುವು ನಗುತ್ತೀಯಾ. ಯಲೋ ಕುಲಗೇಡಿ. ಹಿಂದೆ ನಿನ್ನನ್ನು ಗಂಧರ್ವರು ಯಡಮುಡಿಯನ್ನು ಕಟ್ಟಿ ಯಳದೊಯ್ಯುತ್ತಿರಲು ಆವಾಗ ನಮ್ಮ ಸತಿಯಳಾದ ದ್ರೌಪದಿ ಕಣ್ಣಿನಿಂದಾ ನೋಡಿ, ಇದು ಯಾರಿಗಾದರೂ ಸಮಯ ತಪ್ಪದೆಂದು ಆ ಯಡಮುಡಿಯನ್ನು ಯಡಗಾಲಿನ ವುಂಗುಷ್ಠದಿಂದ ಬಿಚ್ಚೆ ಆಗಿಲ್ಲದ ಪೌರುಷ ಈಗ ದಾವಲ್ಲಿ ಬಂತೊ, ಕೌರವಾ ಯೀ ಸಭಾಸ್ಥಳದಲ್ಲಿ ನಿಂತು ಮುಖವ ತೋರಿಸುವದಕ್ಕೆ ನಾಚಿಕೆಯಾಗುವದಿಲ್ಲವೇನೋ ಭಂಡ  ಭೀಮಗಧೆಯು ನಿಮ್ಮ ನೂರೊಂದು ಮಂದಿಗು ಮಿಂಡಾ.

ಕೌರವ : ಯಲಾ ಅರ್ಜುನಾ ಅತಿದುರ್ಜನಾ, ಈ ಮಹಿಯೊಳು ನಾವೇ ಹಿತರು ಸತ್ಯವೆಂದು ಅರುಹಿದರಷ್ಟೆ. ನೀವು ಮಹಾ ಸತ್ಯವೆಂದು ಹೇಳುತ್ತೀರಿ. ಅದು ಹ್ಯಾಗೆ ನಿಮ್ಮ ಪಿತನಾದ ಪಾಂಡುರಾಯನು ಅತಿ ಪಾಂಡುರೋಗಿಷ್ಠನೆಂದು ಅವನಂ ಸಲಹಿದ ಭೀಷ್ಮಾಚಾರಿ ಕುಲಗೆಟ್ಟ ಕುಂತಿದೇವಿಗೆ ಸಂತಾನವಿಲ್ಲವೆಂದು ವಿವಾಹ ಮಾಡಲಾಗಿ, ಮದ್ರಾಧೀಶ್ವರನ ಮಗಳಾದ ಮದ್ರಾ ದೇವಿಯನ್ನು ಮದುವೆಯಾಗಿ ಪೂರ್ವಜನ್ಮ ಪಾಪದೆಸೆಯಿಂದ ಬಾಲೆಯರನಾಲಂಗಿಸಿದ ಕಾಲದಲ್ಲಿ, ಕಾಲನಾಲಯಕ್ಕೆ ತಂದು ಯಳೆಯಂದು ಲೋಲಶಾಪದಿಂ ಯಮಧರ್ಮರಾಯನಿಂದ ವುದಿಸಲ್‌ಪಟ್ಟ ಯೀ ಮೂಢ ಧರ್ಮಜನು ವಾಯುದೇವನಿಂದ ಜನಿಸಲ್‌ಪಟ್ಟಂಥ ಲಂಡನಾದ ಯೀ ಭೀಮನು, ಗಂಧರ‌್ವರಿಂದ ಜನಿಸಲ್‌ಪಟ್ಟಂಥ ಬಲಹೀನರಾದ ಯೀ ನಕುಲ ಸಹದೇವರು, ಇಂದ್ರನಿಂದ ಜನಿಸಲ್‌ಪಟ್ಟಂಥ ನಪುಂಸಕನಾದ ಅರ್ಜುನನು ನೀನು ಅವುದೊ ಅಲ್ಲವೊ. ನೀವು ಐದು ಮಂದಿ ಹಲವು ಜನರಿಂದುಟ್ಟಿ ಹಲವು ಮಾತಾಡಾಬ್ಯಾಡವೋ ಅಪಾದಿಂತ್ಯನೆ.

ಅರ್ಜುನ : ಯಲಾ ಅಕ್ಷಿಹೀನನ ಮಗನೆ  ಇಂದ್ರಿಯಗಳೆಂಬ ಸುಣ್ಣವನ್ನು ಹಾಕಿ ಬಣ್ಣವನ್ನು ಮಾಡಿ ಕಟುಗ್ರತರದೊಳಗೆ ನಶ್ಯಪುಡಿ ನಾಸಿಕಕ್ಕೆ ಯೇರಿಸಿ ಬ್ಯಾಸರದಿ ಕೊಲ್ಲುವೆನೂ  ಯೀ ಸಭಾ ಮಧ್ಯದೊಳಗೆ ಯುದ್ಧಕ್ಕೆ ನಿಲ್ಲುವಂಥವನಾಗೊ ಹೇಡಿ ಮುಂಡೇದೆ ॥

ಭೀಮ : ಅಣ್ಣಾ ಯಮತನಯಾ, ಯೀ ಭ್ರಷ್ಟರು ಪೊಡವಿಗಧಿಕವಾದ ಭೀಮೇಶನ ಮರೆಹೊಕ್ಕರು ಬಿಡೆನು. ಹರಿಹರಾದಿಗಳ ಮೊರೆ ಹೊಕ್ಕರು ಬಿಡೆನು. ಯೀ ಭ್ರಷ್ಟರು ಮಾಡಿರುವ ಕೆಟ್ಟ ಯೋಚನೆಯನ್ನು ನಾ ಸಹಿಸಲಾರೆನು. ಒಂದುಕ್ಷಣ ಅಪ್ಪಣೆಯನ್ನು ಕೊಟ್ಟಿದ್ದೇ ಆದರೆ ಯೀ ಗಾಂಧಾರಿಯ ವುದರದೊಳ್ ವುದ್ಭವಿಸಿದಂಥ ನೂರೊಂದು ಮಂದಿ ಕುರಿಗಳನ್ನು ಕ್ಷಣ ಮಾತ್ರದಲ್ಲಿ ಸಂಹರಿಸಿ ಯಮ್ಮ ದೊಡ್ಡಪ್ಪನಾದ ಯಮಧರ್ಮನ ಪಟ್ಟಣಕ್ಕೆ ಸೇರಿಸುತ್ತೇನೆ. ಕ್ಷಣ ಮಾತ್ರ ನೇಮವನ್ನು ಕೊಡುವಂಥವನಾಗೊ ಅಣ್ಣಾ ಅಗ್ರಗಣ್ಯ ॥

ಧರ್ಮರಾಯ : ತಮ್ಮಾ ಭೀಮಸೇನಾ, ಕ್ಷಣ ಮಾತ್ರ ಸೈರಿಸುವಂಥವನಾಗಪ್ಪಾ ವಾಯುತನಯಾ.

ಭೀಮ : ಅಣ್ಣಾ ಯಮತನಯಾ ನಾನ್ಯಾಗಾದರು ಸೈರಿಸುವೆನು. ಯನ್ನ ಕರಾಗ್ರದಲ್ಲಿ ತಕತಕನೆ ಪಕಪಕನೆ ಕುಣಿಯುವ ಎಪ್ಪತ್ತೇಳೂವರೆ ಸಾವಿರ ಮಣುವಿನ ಗಧಾಧಾಮನು ಸೈರಿಸಲಾರದೆ ವೈರಿಯನ್ನು ತಾಕಬೇಕೆಂದು ಗಸಗಸನೆ ಮಸಗುತ್ತಲಿದೆ ನಾನ್ಯಾಗೆ ತಾಳಲೊ ಅಂಣ್ಣೈಯ್ಯ.

ಧರ್ಮರಾಯ : ತಮ್ಮ ಭೀಮಸೇನಾ, ಯೀ ಸ್ಥಳದಲ್ಲಿ ಸರ್ವಥಾ ಯಿರಕೂಡದು. ಆ ಸ್ಥಳಕ್ಕೆ ತೆರಳುವಂಥವನಾಗಪ್ಪಾ ಭೀಮಸೇನಾ.

ಭೀಮ : ಭಳಿರೆ ಅಗ್ರಜಾ ತಮ್ಮ ವುತ್ತರಕ್ಕೆ ಪ್ರತ್ತುತ್ತರವಿಲ್ಲ, ಸುಮ್ಮನೆ ಯಿರಬೇಕಾಯಿತು. ಅದೇ ಪ್ರಕಾರ ತೆರಳುತ್ತೇನೊ ಅಗ್ರಜಾ.

ಕೌರವ : ಅಯ್ಯ ಧರ್ಮಜಾ, ನಿನ್ನ ತಮ್ಮಂದಿರಾದ ಕಡು ಮೂರ್ಖರು ವುಬ್ಬಿ ವುಬ್ಬಿ ಕೊಬ್ಬಿ ಕೊಬ್ಬಿ ರೋಷಾವೇಷರಾಗಿ ಬರುವರು. ನಿನ್ನ ತಮ್ಮಗಳಿಗೆ ಯಿದು ತರವಲ್ಲವೆಂದು ಬುದ್ಧಿಯನ್ನು ಪೇಳೈಯ್ಯ ಧರ್ಮಜಾ.

ಧರ್ಮರಾಯ : ಅದೇ ಪ್ರಕಾರ ಪೇಳುತ್ತೇನೈಯ್ಯ ಕೌರವರಾಯನೆ.

ಭೀಮ : ಭಲಾ ತಮ್ಮನಾದ ಅರ್ಜುನನೆ ಕೇಳು  ಕಮಲಗಂಧಿಯಾದ ದ್ರೌಪದಿಯ ಮಾನಭಂಗ ಮಾಡುವದು ನೋಡಿ ಸುಮ್ಮನೆ ಯಿರುವರೇನೈಯ್ಯ ಅನುಜಾ. ಈ ಅಣ್ಣನಾಜ್ಞೆಯೆಂಬ ಕಣ್ಣಿಯಲ್ಲಿ ಸಿಲ್ಕಿ ಇಹೆನೊ. ಈಗ ನಮ್ಮ ಪರಾಕ್ರಮ ಪಂಥವೂ ಮಣ್ಣುಪಾಲು ಆದಂತೆ ಆಯಿತೆ. ಅನುಜರಿಪು ಕುಲಜಗದ್ಗಂಡ ಮೂರುಲೋಕಕ್ಕೆ ವುದ್ದಂಡನೆನಿಸಿ  ಯೇಕಚಿತ್ತರು ಮಾನಭಂಗ ಮಾಡುವದು ನೋಡಿ ಸುಮ್ಮನೆ ಇರುವರೇನೈಯ್ಯ ಅನುಜ  ಈಗಿನ ವ್ಯಾಳೆಯಲ್ಲಿ ಪತಿಗಳೆ ಗತಿಯೆಂದು ನಂಬಿಕೊಂಡಿರುವ ಆಯತಾಕ್ಷಿಯವುದಕ್ಕೆ ನಾವೇ ಕೊರತೆ ತಂದಂಗಾಯಿತು  ವಬ್ಬರಲ್ಲದೆ ಯೈದು ಮಂದಿ ಪತಿಗಳೂ ಇದ್ದು ವಬ್ಬ ಸತಿಯ ಮಾನ ಕಾಯುವದಕ್ಕೆ ಆಗಲಿಲ್ಲವೆ. ಇಗೋ ನೋಡು ಈ ವ್ಯಾಳೆಯಲ್ಲಿ ಪರಾಕ್ರಮದಿಂದಾ ಧರ್ಮರಾಯನ ತೋಳುಗಳೆರಡನ್ನು ಕತ್ತರಿಸಿ ಬಿಡುತ್ತೇನೆ ಭೂಪಾ  ರಿಪುಕುಲ ಶಾಪಾ॥

ದರುವು

ಸೈರಿಸಗ್ರಜ ಭೀಮಾ ಅಂಣ್ಣೈಯ್ಯ  ಅಂಣ್ಣೈಯ್ಯ
ಸೈರಿಸಗ್ರಜ ಭೀಮಾ ಕರುಣವುಳ್ಳವ ನಮ್ಮ
ಅರಸ ಧರ್ಮಜನ ಮ್ಯಾಲೆರಗಿ ಕೋಪವ ಮಾಡದೆ ॥
ಸೈರಿಸಗ್ರಜ ಭೀಮಾ ಅಂಣೈಯ್ಯ ॥ಅಂಣ್ಣೈಯ್ಯ ॥

ಅರ್ಜುನ : ಭಳಿರೆ ಅಗ್ರಜಾ ॥ಅಣ್ಣನಾದ ಧರ್ಮರಾಯನ ಮ್ಯಾಲೆ  ಸರ‌್ವಥಾ ಕೈ ಮಾಡಲಾಗದೊ ಅಗ್ರಜಾ ॥

ಪದ

ಮೋಸ ಹೋಗುವನಲ್ಲವೊ  ನಂಮ್ಮಣೈಯ್ಯ
ಘಾಶಿಯಲ್ಲವೊ ಈಗಲು  ಈ ಸಮಯದಿ
ನೀನೂ  ಘಾಶಿಯ ಸೈರಿಸೂವ  ವಾಸವ
ನುತಶ್ರೀ ಭೀಮೇಶನು ಕಾಯುವ ॥

ಅರ್ಜುನ : ಭಳಿರೆ ಅಣೈಯ್ಯ, ಅಣ್ಣನಾದ ಧರ್ಮರಾಯನು ಸರ‌್ವಥಾ ಮೋಸವೋಗುವನಲ್ಲಾ. ವಿಧಿವಶದಿಂದ ಯಿಷ್ಠಾಯಿತೆ ವರ್ತು ಯೋಚಿಸದೆ ದುಡುಕು ಮಾಡಿದರೆ ನರಕಕ್ಕೀಡಾಗುವೆವಾದ್ದರಿಂದ ಸರ‌್ವಥಾ ಅಣ್ಣನ ಮ್ಯಾಲೆ ಕೈ ಮಾಡಲಾಗದೊ ಅಣ್ಣಾ ವಾಯುತನಯಾ.

ಭೀಮ : ಅಣ್ಣಾ ಧರ್ಮನಂದನ, ಯನ್ನಿಂದ ಸರ‌್ವಥಾ ತಪ್ಪಾಯಿತು. ಯನ್ನ ತಪ್ಪುಗಳನ್ನು ಕ್ಷಮಿಸಿ ಯೀಗ ಯೇನು ಅಪ್ಪಣೆಯಾಗುತ್ತಾ ಯಿದೆಯೋ ಅಗ್ರಜಾ.

ಧರ್ಮರಾಯ : ಅಪ್ಪಾ ತಮ್ಮಾ ಭೀಮಸೇನನೆ ಕೇಳು, ಆಶ್ಚರ‌್ಯಪಡಬೇಡ. ಸಜ್ಜನರಿಗೆ ಬಂದ ವಿಪತ್ತು ದುರ್ಜನರಿಗೆ ಬಂದ ಸಂಪತ್ತು ಬಹಳ ದಿವಸವಿರಲರಿಯದು  ತಾಳ್ಮೆ ತನ್ನಾಳುವುದು ತವಕವೆ ತನ್ನ ಕೆಡಿಸುವುದೂ  ನಿಧಾನವೆಂಬುದು ದೊಡ್ಡದು. ಧರ್ಮವೆ ಜಯವಾಗುವದು ಕರ್ಮವೆ ಲಯವಾಗುವದು. ಸೋಮಕುಲದವರು ನಾವಾಡಿದ ಮಾತು ತಪ್ಪಲೇ ಬಾರದು. ಈ ಕ್ಷಿತಿಯಲ್ಲಿ ಹುಚ್ಚು ತಲೆಗೇರಿದ ಮನುಜರು ಬೆತ್ತಲೆ ಕುಣಿಯುವರು. ಅವರಂತೆ ನಾವು ಕುಣಿಯುವರೇನಪ್ಪಾ ತಮ್ಮ. ಶ್ರೀ ಕೃಷ್ಣನೂ ಅಂತಃಕರುಣದಿಂದ ಯಮ್ಮನ್ನು ರಕ್ಷಿಸುವನೂ ಇಂಥಾ ಕುತ್ಸಿತಮಾತಿಗೆ ನಾವು ಕೋಪ ಮಾಡುವದು ಸಲ್ಲದು. ದಾವ ವ್ಯಾಳೆಗೆ ಏನು ಬರುತ್ತದೊ ಬಂದದ್ದು ಅನುಭವಿಸಬೇಕಲ್ಲದೆ ಇದು ಬ್ಯಾರೆ ಬಿಡಲರಿಯದು ಧರ್ಮವೆ ಜಯವಾಗುವದೂ. ವಂದು ಕ್ಷಣಾ ಸೈರಿಸಪ್ಪ ತಮ್ಮ ವಾಯುತನಯಾ ॥