ಪದ
ದ್ಯೂತ ಮುಖದಿ ಸೋತ ಪ್ರಖ್ಯಾತಿ ಪಾಂಡು
ಪುತ್ರರನ್ನು ನೀತಿ ತಪ್ಪಿ ಪೀಡಿಸುವದು ನ್ಯಾಯವಲ್ಲವೊ ॥
ಗಾಂಧಾರಿ : ಅಪ್ಪಾ ಮಗನೆ, ಸನ್ನುತಾಂಗಿಯಾದ ದ್ರೌಪದಿಯನ್ನು ಭಂಗಗೈಯುವಂಥದ್ದು ಚಂದ್ರ ವಂಶದ ರಾಜರಿಗೆ ನ್ಯಾಯವಲ್ಲ. ಪಾಂಡುವಂಶಕ್ಕೆ ಅಪಕೀರ್ತಿ ಬರುವುದೂ, ಆ ಪತಿವ್ರತೆಯಳನ್ನು ಮಾನಭಂಗ ಮಾಡಿಸಬ್ಯಾಡಪ್ಪಾ ಕಂದಾ ನೀನಾಡುವುದೇನೂ ಚಂದಾ.
ಪದ
ಧರಣಿಗಧಿಕ ಕುಡುತನಿಯ ಕಂಡರೀ
ಸಮಯದಿ ಪರಮಪತಿವ್ರತೆಯಾ
ಬಾಧೆಪಡಿಸಲಾಗದು ನ್ಯಾಯವಲ್ಲವೊ ॥
ಗಾಂಧಾರಿ : ಅಪ್ಪಾ ಮಗನೆ, ಈ ಧರೆಯೊಳ್ ಕುಡುತನಿಯ ಭೀಮೇಶನು ಅವರನ್ನು ಕರುಣದಿಂದ ಪಾಲಿಸುವನೂ, ಅಂಥವರಮ್ಯಾಲೆ ದುಡುಕು ಮಾಡುವದೂ ಸರ್ವಥಾ ನ್ಯಾಯವಲ್ಲಪ್ಪಾ ಮಗನೆ ॥
ಕೌರವ : ಅಮ್ಮಾ ಜನನಿ, ಇಂದಿನ ದಿನದಲ್ಲಿ ಆ ಮಂದಗಮನೆಯಾದ ದ್ರೌಪದಿಯೂ ಮಾಡಿರುವ ಮಾನಭಂಗಕ್ಕೆ ಅವಳನ್ನು ಯೆಷ್ಟು ಮಾತ್ರಕ್ಕೂ ಬಿಡಲಿಕ್ಕಿಲ್ಲಾ. ನೀನು ಪೇಳಬ್ಯಾಡ. ಅತಿಜಾಗ್ರತೆಯಿಂದ ಅರಮನೆಗೆ ತೆರಳುವಂಥವಳಾಗಮ್ಮ ಮಾತೆ.
ಗಾಂಧಾರಿ : ಹಾಗಾದರೆ ಪೋಗಿ ಬರುತ್ತೇನಪ್ಪಾ ಕಂದಾ.
ಗಾಂಧಾರಿ : ಅಪ್ಪಾ ಸಾರಥಿ, ಯನ್ನ ಕಂದನಾದ ದುಶ್ಯಾಸನನು ಧಾವಲ್ಲಿ ಯಿದ್ದಾನೊ ಭೇಟಿಯನ್ನು ಮಾಡಿಸಪ್ಪಾ ಸಾರಥಿ.
ದ್ರೌಪದಿ : ನಮೋನ್ನಮೋ ಅತ್ತೆಮ್ಮನವರೆ.
ಗಾಂಧಾರಿ : ಅತಿ ಐಶ್ವರ್ಯವಂತಳು ಏಳಮ್ಮ ದ್ರೌಪದಿ.
ದರುವು
ಅತ್ತೆಮ್ಮ ನೋಡಿರಮ್ಮಾ ಈವಾಗ ನಿಮ್ಮ
ಪುತ್ರ ಕಾಡುವನಲ್ಲಮ್ಮಾ ॥
ಚಿಕ್ಕಸೊಸೆಯು ನಾನಲ್ಲವೆ ಯನ್ನಂತ ಹೆಣ್ಣು
ಮಕ್ಕಳು ನಿಮಗಿಲ್ಲವೆ ಸೊಕ್ಕಿ ಕಾತುರದಿ
ಮ್ಯಾಲುಕ್ಕಿ ಬರುವನಮ್ಮಾ ಠಕ್ಕಿಸಿ ನಾನೆಲ್ಲಿ
ಹೊಕ್ಕರು ಬಿಡನಂಮ್ಮಾ ॥
ದ್ರೌಪದಿ : ಅತ್ತೆಮ್ಮನಾದ ಗಾಂಧಾರಿಯೆ ಕೇಳೂ ನಿಮ್ಮ ಮಗನಾದ ದುಶ್ಯಾಸನನು ಕೌರವನ ಮಾತುಗಳು ಕೇಳಿ ಈ ಸಭೆಯಲ್ಲಿ ಮಾನಭಂಗವನ್ನು ಮಾಡುತ್ತಾನೆ, ನೀವಾದರು ಬುದ್ಧಿಯನ್ನು ಪೇಳಮ್ಮಾ ಅತ್ಯಮ್ಮಾ॥
ಪದ
ಭಾವ ಮೈದುನರೆಲ್ಲರು ಕೇವಲ ದುಷ್ಟ
ಭಾವದೊಳಿರುತಿಹರೆ ಮಾವನಾದರು
ಮೌನದಲ್ಲಿರುತಾರೆ ಸಾವಧಾನದೊಳೆನ್ನ
ಸಲಹುವರ್ಯಾರಮ್ಮಾ॥
ದ್ರೌಪದಿ : ಅಮ್ಮಾ ಅತ್ತೆಮ್ಮನವರೆ, ಭಾವಮೈದುನರು ಮಾಡುವ ಮೋಸ ಬುದ್ದಿಗಳೂ ಎಷ್ಟೆಂದು ಹೇಳಲಮ್ಮಾ, ಅತ್ಯಮ್ಮಾ ಯಿದು ತರವಲ್ಲವೆಂದು ನೀವಾದರು ಬುದ್ಧಿಯನ್ನು ಪೇಳಬಾರದೆ ಅತ್ಯಮ್ಮಾ.
ಪದ
ಮೋಸ ಬುದ್ದಿಯೊಳಿವನು ಸಭೆಯೊ
ಳಗೆನ್ನಾ ಭಾಷೆಗೈಯ್ಯುತಲಿಹನು
ವಾಸವಾನುತ ಶ್ರೀ ಭೀಮೇಶನಾ
ಕರುಣಾವೂ ಲೇಶವಿಲ್ಲವೆ ಯಮ್ಮೊಳು
ಮೈದುನ ಮಾಳ್ಪ ಕೃತ್ಯವ ಬಿಡಿಸಿರಮ್ಮಾ ॥
ದ್ರೌಪದಿ : ಅಮ್ಮಾ ಅತ್ಯಮ್ಮ, ವಾಸವಾಸುತ ಶ್ರೀ ಭೀಮೇಶನ ಪಾದದಾಣೆ. ನಿನ್ನ ಕಂದನಾದ ದುಶ್ಯಾಸನನಿಗೆ ತರವಲ್ಲವೆಂದು ಬುದ್ಧಿಯನ್ನು ಪೇಳಮ್ಮಾ ಅತ್ಯಮ್ಮಾ.
ಗಾಂಧಾರಿ : ಅದೇ ಪ್ರಕಾರವಾಗಿ ಬುದ್ಧಿಯನ್ನು ಪೇಳುತ್ತೇನಮ್ಮಾ ದ್ರೌಪದಿ.
ದುಶ್ಯಾಸನ : ನಮೋನ್ನಮೋ ಹೇ ಜನನಿ.
ಗಾಂಧಾರಿ : ದೀರ್ಘಾಯುಷ್ಯಮಸ್ತು ಅತಿ ಐಶ್ವರ್ಯಮಸ್ತು ಬಾರಪ್ಪಾ ಕಂದಾ ನೀ ಬಹುಚೆಂದಾ.
ದುಶ್ಯಾಸನ : ಅಮ್ಮಾ ಜನನಿ, ಮುತ್ತೈದೆಯರ ಸಂಮುಖದೊಳ್ ವುತ್ತಮರು ಯೆಂದೆಣಿಸಿ ಮುತ್ತಿನ ಮಣಿಯಂತೊಪ್ಪುವ ಮಾತೆಯೆ ಕೇಳು. ಇಂದು ಯಮ್ಮಯ ಮಂದಿರದಲ್ಲಿ ಸಂದೇಹವಿಲ್ಲದೆ ಇರುವದಂ ಬಿಟ್ಟು ಇಲ್ಲಿ ಬಂದ ಕಾರಣವೇನಮ್ಮ ತಾಯೆ. ಹೀಗೆ ಬರುವದು ಸ್ತ್ರೀಯರಿಗೆ ಸರ್ವಥಾ ನ್ಯಾಯವಲ್ಲಮ್ಮ ಮಾತೆ ಸದ್ಗುಣನೀತೆ.
ದರುವು
ಮಗನೆ ಹೋಗಾನ ಬಾರೊ ಮನಿಗೆ
ಮಂಕುತನವ್ಯಾಕೊ ನಿನಗೆ ಬಾಲ ಹೋಗುವ
ಬಾರೊ ಮನಿಗೆ ॥ಪಡದಾ ಮಗನು ಯೀಗ
ಅಡವಿಪಾಲಾದರೆ ಪಡದ ಹೊಟ್ಟಿಯ ಬ್ಯಾಗೆ
ಹ್ಯಾಗೆ ತಾಳಾಲೊ ಬಾಲ ॥
ಗಾಂಧಾರಿ : ಹೇ ಕಂದ ಹೇ ಬಾಲ ಹೇ ತನಯಾ, ಸತ್ಯವಂತರಾದ ಪಾಂಡವರ ಮೇಲೆ ಕೈ ಮಾಡಿದರೆ ಕೇಡು ಬರುವುದಪ್ಪಾ ಬಾಲ ಜ್ಞಾನದಲ್ಲಿ ಸುಶೀಲಾ.
ಪದ
ತಾಯಿ ಮಾತನು ಮೀರಿ ತವಕಾದಿ ಪೋದರೆ
ತೊಲಗುವದೈಯ್ಯ ಮೃತ್ಯು ॥ಅಪಜಯವಯ್ಯ ॥
ಗಾಂಧಾರಿ : ಅಪ್ಪಾ ಮಗನೆ, ಆ ಸನ್ನುತಾಂಗಿಯ ಮೇಲೆ ಕೈ ಮಾಡಿದರೆ ಅಪಕೀರ್ತಿ ಸಂಭವಿಸುವುದಪ್ಪಾ ಕಂದಾ ನೀ ಬಹುಚಂದಾ.
ದರುವು
ಪೊಡವಿಯೊಳ್ ಕುಡುತನಿಯಾ ವಡೆಯಾ
ಭೀಮೇಶಾನು ಕಂಡರೀ ಸಮಯಾದಿ
ಕಡಿದು ಬಿಸಾಡುವ ಬಾಲಾ॥
ಗಾಂಧಾರಿ : ಹೇ ಕಂದ, ಈ ಪೊಡವಿಯೊಳ್ ಕುಡುತನಿಯಾ ಭೀಮೇಶನು ಕಂಡರೆ ನಿನ್ನ ಕಡಿದು ಬಿಡುವನೂ, ಇಂಥಾ ದುಡುಕು ಬುದ್ಧಿ ತರವಲ್ಲವಪ್ಪಾ ಕಂದ ನೀ ಬಹುಚಂದಾ ॥
ದುಶ್ಯಾಸನ : ಅಮ್ಮಾ ತಾಯೆ, ಯೆಷ್ಟು ಮಾತ್ರಕ್ಕು ಕೇಳಲಿಕ್ಕಿಲ್ಲಾ ಜಾಗ್ರತೆಯಿಂದ ತೆರಳುವೆಯೊ ಇಲ್ಲವೊ ಪೇಳಬೇಕಮ್ಮಾ ಜನನಿ.
ದರುವು
ಬ್ಯಾಡೊ ಬ್ಯಾಡೊ ಇಂಥಾ ಬುದ್ದಿ ॥ಬಾಲಾ ಬ್ಯಾಡೊ
ಬ್ಯಾಡೊ ॥ಪಾಂಡುನಂದನರು ಪ್ರಚಂಡ
ವಿಕ್ರಮರು ಕಂಡರೆ ನಿಮುಷದಲ್ಲಿ
ಖಂಡ್ರಿಸುವರೊ ಬಾಲ ॥
ಗಾಂಧಾರಿ : ಹೇ ಕಂದಾ, ಪಾಂಡವರು ಅಸಹಾಯಶೂರರೆಂದೂ ಕೇಳಿರುವೆಯಲ್ಲದೆ ತಿಳಿದಿರುವೆಯಲ್ಲ. ಅಂಥವರ ಹೆಂಡತಿ ತಂಟೆಗೆ ಹೋದದ್ದಾದರೆ ತುಂಟತನವ ತೋರುವರು. ಇಂಥಾವರ ತಂಟೆಗೆ ಹೋಗಬ್ಯಾಡಪ್ಪಾ ಕಂದಾ ನೀ ಬಹುಚಂದಾ.
ಪದ
ಧರಣಿಗಧಿಕ ಕುಡುತನಿಯ ಭೀಮೇಶಾನಾ
ಚರಣಕಮಲದಾಣೆ ಕರುಣೆಯಾ ಕಾಣಾದೆ ॥
ಗಾಂಧಾರಿ : ಅಪ್ಪಾ ಬಾಲ, ಈ ಪೊಡವಿಯೊಳ್ ಕುಡುತನಿಯ ಭೀಮೇಶನ ಪಾದದಾಣೆ. ಆ ದ್ರೌಪದಿಯ ಮಾನಭಂಗವನ್ನು ಮಾಡಬ್ಯಾಡಪ್ಪಾ ಬಾಲಾ ಕುರುಕುಲ ಲೋಲಾ.
ದರುವು
ಹೆತ್ತ ತಾಯೆ ಮಾರುತ್ತರವ ಕೊಡಬ್ಯಾಡ
ಅತ್ತತ್ತ ನಡಿಯೆಂದರಿತ್ತಿತ್ತ ಬರುವೆ ನೀ ಬರುವೆ ॥
ಸ್ಥಿರಬುದ್ಧಿಯನ್ನು ಪೇಳಿ ತೆರಳದಿದ್ದರೆ ನಿನ್ನ
ವುರುಳಿಸಿ ಕೊರಳ ಕೊಯ್ಯುವೆನೆ ಹೇ ಮಾತೆ ॥
ದುಶ್ಯಾಸನ : ಅಮ್ಮಾ ಜನನಿ, ಆ ಚಂಚಲಾಕ್ಷಿಯಾದ ಪಾಂಚಾಲಿಯ ಮಾನಭಂಗವಂ ಮಾಡದೆ ಯೆಷ್ಟು ಮಾತ್ರಕ್ಕು ಬಿಡಲಿಕ್ಕಿಲ್ಲಾ ನೀನು ಎಷ್ಟು ಮಾತ್ರಕ್ಕು ಪೇಳಬೇಡಾ, ಜಾಗ್ರತೆಯಿಂದ ನಿಮ್ಮ ಅರಮನೆಗೆ ಹೋದರೆ ಸರಿ, ಇಲ್ಲದಿದ್ದರೆ ಈ ಧರಣಿಯ ಮ್ಯಾಲೆ ನಿಮ್ಮನ್ನು ವುರುಳಿಸಿ ಕೊರಳು ಕೊಯ್ಯುತ್ತೇನಮ್ಮ ಮಾತೆ.
ಗಾಂಧಾರಿ : ಹಾಗಾದರೆ ಪೋಗಿ ಬರುತ್ತೇನೋ ದ್ರೋಹಿ ॥
ದರುವು
ಮಾನಾಭಿಮಾನ ನಿನ್ನದು ಪ್ರಾಣಕಾಂತಾ
ಮಾನಾವಾಗ್ರಣಿಯೆ ಪೂರೈಸೆನ್ನಾ ಪಂಥಾ ॥
ದುರುಳ ಸೈಂಧವನ ಅರಣ್ಯದೊಳ್ ಕೊಂದೆ
ಮೆಲ್ಲಾನೆ ದುರುಳಾನ ಕೊಂದೆ ಬಲವಂತಾ ॥
ಈಶನೆ ಕುಡುತನಿ ವಡೆಯ ಭೀಮೇಶ
ಕ್ಲೇಶಾವು ಪರಿಹರಿಸಿ ಕಾಯೋ ಸರ್ವೇಶಾ ॥
ದ್ರೌಪದಿ : ಅಯ್ಯೋ ಕಾಂತಾ, ಹಿಂದಕ್ಕೆ ಅರಣ್ಯದಲ್ಲಿ ಸೈಂಧವಾದಿಯಾಗಿ ಅನೇಕ ಜನರನ್ನು ಕೊಂದು ಯನ್ನ ಕಷ್ಟವಂ ಪರಿಹರಿಸಿದೆ. ಹೇ ರಮಣಾ ಈಗಿನ ವ್ಯಾಳೆಯಲ್ಲಿ ಈ ಲಂಡನಾದ ದುಶ್ಯಾಸನನನ್ನು ಕೊಲ್ಲುವದಕ್ಕೆ ಯಾಕೆ ಸಾವಕಾಶ ಮಾಡುತ್ತೀರಿ. ನೀವು ನೋಡುತ್ತಲೆ ಇಂಥ ಮಾನಭಂಗ ಮಾಡುತ್ತಿದ್ದರೆ ತಾವು ಕುಳಿತಿರುವದೂ ನ್ಯಾಯವೆ ಕಾಂತಾ ಸದ್ಗುಣವಂತಾ.
ಭೀಮ : ವುದಾರವುಳ್ಳ ಮನುಷ್ಯನು ಧನವನ್ನು ತೃಣವಾಗಿ ಕಾಣುವನು. ವಿರಕ್ತನಾದವನು ಸ್ತ್ರೀಯರ ಮೋಹಕ್ಕೆ ಸಿಲ್ಕನು. ತನ್ನ ಮೋಕ್ಷವನ್ನೆ ಬಯಸುವನು. ಯನ್ನಂಥ ಶೂರನಾದವನು ರಣಾಗ್ರದಲ್ಲಿ ಪ್ರಾಣವನ್ನು ತೃಣವಾಗಿ ಕಾಣುವನಾದ ಕಾರಣ ಹೇ ಸುಂದರಾಂಗಿ, ಯಿಂದಿಷ್ಠು ಬಗೆಬಗೆಯಿಂದ ಚಿಂತಿಸುವ ಸಂದೇಹಮೇನಿರುವುದಲ್ಲದೆ ಮಂದಮತಿಯಾದ ಯೀ ಖೂಳ ಕೌರವರನ್ನೆಲ್ಲಾ ವಂದೊಂದಾಗಿ ಕೊಂದು ಯೀ ಕಡು ಪಾಪಿಷ್ಠನನ್ನು ಯೀ ಕುಂಭಿಣಿಗೆ ಬಲಿಯನ್ನು ನೀಡದಿರ್ದಡೆ ಪಾಂಡುನಯನ ಸುಪುತ್ರ ನಾವಲ್ಲದೆ, ಡಾಂಭಿಕರಾದ ಯೀ ಖೂಳರಿಗೆ ಅಂಜಿ ಸಂಭ್ರಮದಿ ಸುಮ್ಮನಿರುವುದುಂಟೆ. ಯಮ್ಮಣ್ಣನಾಜ್ಞೆಯಿಲ್ಲದ್ದರಿಂದ ಸುಮ್ಮನೆ ಯಿರಬೇಕಾಯಿತು. ಹ್ಯಾಗಾದರು ಅರೆಕ್ಷಣ ಸೈರಿಸೆ ಅಂಬುಜಾಕ್ಷಿ ಅಭಿಮಾನ ರಕ್ಷಿ.
ಕೌರವ : ಯಲಾ ಭೀಮಾ ದುರ್ಬಲಧಾಮ, ಭಂಡರೊಳ್ ಅತಿಪುಂಡ ಮಂಡಲೇಶ್ವರನ ದಂಡನ್ನು ದಿಂದು ಕೆಡಹಿದ ಗಂಡನೂ ನೀನೇ ಸರಿ ಈ ಭೂಮಂಡಲದಲ್ಲಿ ಇನ್ಯಾರನ್ನು ಕಾಣಲಿಲ್ಲವಲ್ಲಾ ಭೀಮಾ, ಧರಣೀಶನಾದ ಕುರುರಾಯನು ಗೆದ್ದನಂತರದಿ ಇನ್ನೆಲ್ಲಿ ಶೌರ್ಯ ಇನ್ನೆಲ್ಲಿ ಗಾಂಭೀರ್ಯ ಇನ್ನೆಲ್ಲಿ ಚಾತುರ್ಯ ಭೀಮಾ ಪಾಂಡುಕುಲ ಅಧಮಾ ॥
ಭೀಮ : ಯಲೊ ಚಂದ್ರಕೀಲಕನೆನಿಸುವ ಶಂತನು ಚಕ್ರವರ್ತಿಯ ಪೌತ್ರನಾಗಿ ಅಧರ್ಮ ನೀ ಚಾದುರ್ಬಲ ದುರ್ಮಾರ್ಗ ಕಲಿಪುರುಷರಾದ ಕೌರವಾದಿಗಳೇ ಕೇಳಿ. ಪೂರ್ವದಲ್ಲಿ ನಾವು ನೀವು ಕೇವಲ ಬಾಲತ್ವದಿಂದಿರಲೂ ವಂದು ದಿನ ನಾವುಗಳು ಪೂರ್ವದಿಕ್ಕಿಗೆ ವೋಗಲೂ, ನೀವು ದಕ್ಷಿಣ ದಿಕ್ಕಿಗೆ ಹೋಗಲೂ ಅಲ್ಲಿ ವಂದು ಮಾಯಾಮೃಗವಿರಲೂ ಆ ಮೃಗವನ್ನೂ ಬೀಳಿಸುವದಕ್ಕೆ ನೀವು ವುದ್ಯುಕ್ತರಾಗಲೂ ಯಲೋ ಪಾಪಿಗಳಿರಾ ನಾನು ಪೂರ್ಣ ಗರ್ಭಿಣಿಯಳಾದ್ದರಿಂದ ನನ್ನ ಬಿಟ್ಟು ಮತ್ತೊಂದು ಕಾರ್ಯಕ್ಕೆ ಪ್ರಯತ್ನರಾಗೆಂದು, ಆ ಮೃಗವು ಹೇಳಲೂ ಆಗ ನೀವು ಧರ್ಮದ ಮ್ಯಾಲೆ ದ್ರಿಷ್ಠಿಯಿಡದೆ ಆ ಮೃಗವನ್ನು ಹಿಡಿ ಹಿಡಿ ಕಡಿ ಕಡಿ ಬಡಿ ಬಡಿಯೆಂದು ಹೇಳಲೂ ಆಗ ಆ ಮೃಗವೂ ಅತಿ ಬಾಧೆಪಟ್ಟು ಪೂರ್ವದಿಕ್ಕಿಗೆ ವೋಡಿ ಬಂದು ಅಹೋ ಧರ್ಮರಾಯನೆ ಯನ್ನ ಪ್ರಾಣವನ್ನು ಸಲಹಿಕೊ ಯೆಂದು ಬೇಡಿಕೊಳ್ಳಲೂ ಆ ದಯಾಕರಮೂರ್ತಿಯೆನಿಪ ಸತ್ಯಸ್ವರೂಪನಾದ ಧರ್ಮರಾಯನೂ ಅತ್ತಲಿರ್ದ ಭೀಮಾ ಪಾರ್ಥರನ್ನೂ ನೇತ್ರದ್ರಿಷ್ಠಿಯಿಂದ ನೋಡಲೂ ಆಗ ನಾನು ನಮ್ಮಗ್ರಜನಭಿಪ್ರಾಯವನ್ನು ತಿಳಿದು ಯನ್ನ ಗದೆಯನ್ನು ಜಡಿದು ಝೇಂಕರಿಸಿ ನಿನ್ನ ಮ್ಯಾಲೆ ಯುದ್ಧವನ್ನು ಮಾಡಿ ಯೀ ರಣಭೂಮಿಯಲ್ಲಿ ನಿನ್ನ ಕೆಡವಿಕೊಂಡು ನಿನ್ನ ಯದೆಯ ಮ್ಯಾಲೆ ಕುಳಿತುಕೊಂಡು, ನಿನ್ನ ನಾಲಗೆಯ ಕಿತ್ತು ನರಲೋಕವನ್ನು ಬಿಡಿಸಿ ಯಮಲೋಕಕ್ಕೆ ಹೊರಡಿಸುವ ಸಮಯದಲ್ಲಿ ಆಗ ನೀನು, ಭೀಮಾ ಬಿಡು ಬಿಡು ನಿನಗೆ ನಾನು ಶರಣಾಗತನಾಗುವೆನು ಯೆಂದು ಪರಿಪರಿ ವಿಧದಿಂದ ಬೇಡಿಕೊಂಡಿದ್ದರಿಂದ ಸುಮ್ಮನೆ ಬಿಟ್ಟೆ. ಆಗಿಲ್ಲದ ಪೌರುಷಾ ಯೀಗ ದಾವಲ್ಲಿ ಬಂತೊ ಕೌರವಾ ತೆಗೆಯುವೆ ನೋಡು ನಿನ್ನ ಜೀವಾ.
ಕೌರವ : ಭಲೆ ತಮ್ಮನಾದ ದುಶ್ಯಾಸನನೆ ಕೇಳು. ಈ ಲಂಡನಾದ ಹಂದಿಭೀಮನ ಘಾತಿಗೆ ಲೇಶ ಮಾತ್ರವು ಅಂಜದೆ ಆ ಜಲಜನೇತ್ರೆಯಾದ ದ್ರೌಪದಿ ಬಂದರೆ ಸರಿ, ಹಾಗೆ ಬಾರದಿದ್ದರೆ ಈ ಸಭಾ ಜನರ ಮುಂದೆ ಅವಳ ವಳದೊಡೆಯ ಕೆಂಪು ಕಾಣುವ ಹಾಗೆ ಅವಳು ವುಟ್ಟಿರತಕ್ಕಂಥ ಪಟ್ಟು ಪಟ್ಟಾವಳಿ ಸೀರೆಯನ್ನು ತಟ್ಟನೆ ಸೆಳೆದು ನಿಲ್ಲಿಸೊ ಅನುಜ ಗಾಂಧಾರಿ ತನುಜಾ.
ದುಶ್ಯಾಸನ : ಅದೇ ಪ್ರಕಾರವಾಗಿ ಸಿೀರೆಯನ್ನು ಸೆಳೆದು ನಿಲ್ಲಿಸುತ್ತೇನೊ ಅಣ್ಣಾ ಕೌರವ ಶಿಖಾಮಣಿ.
ದರುವು
ದಿಕ್ಕಿಲ್ಲದೋಯಿತೆ ಈವಾಗ ಯನಗೆ
ಸೊಕ್ಕಿ ದುಶ್ಯಾಸನ ಮಾನ ಸೂರೆಗೊಂಬಾನೆ ॥
ಪತಿಗಳೈವರು ಧರ್ಮವ್ರತಕೆ ಶಿಲ್ಕಿಹರೆ ॥
ಅತಿಕ್ಲೇಶ ಪಡಿಸುವರೆ ಶಕುನಿ ಪಾತಕರು
ಪೊಡವಿಗಧಿಕ ಕುಡುತನಿಯಾ ಭೀಮೇಶ
ಮಡದಿ ದ್ರೌಪದಿ ಮಾನ ಕಾಯೋ ಜಗದೀಶ ॥
ದ್ರೌಪದಿ : ಅಯ್ಯ ಸಭಾಜನರೇ, ಯಾರಿಗೆ ಹೇಳಿಕೊಂಡಾಗ್ಯು ನನ್ನ ಕಷ್ಟವಂ ಪರಿಹರಿಸುವುದಕ್ಕೆ ಆಗಲಿಲ್ಲವೆ ಸಭಾಜನರೆ.
ದರುವು
ಧರ್ಮಜಾ ಸೆರೆ ಬಿಡಿಸೊ ॥ಅಭಿಮಾನವ
ನುಳಿಸೊ ಧರ್ಮಜ ಯನ್ನಯಾ ಪೇರ್ಮತಿ
ಪಿಡಿದಿಹ ಕರ್ಮಿಯ ನೋಳ್ಪದು ಧರ್ಮವೆ ನಿನಗೆ ॥
ದ್ರೌಪದಿ : ಅಯ್ಯ ಧರ್ಮಜ ಅಭಿಮಾನವನುಳಿಸುವವರು ಯಾರು ಈ ದುರುಳನು ಯನ್ನಯ ಮಾನಾಪಹರಣ ಮಾಡಲು ಜಡೆಮುಡಿ ಹಿಡಿದೆಳೆಯುತ್ತಿದ್ದಾನೆ. ಯಾರಿಗೆ ಮೊರೆ ಬೀಳಲಯ್ಯ ಕಾಂತಾ ಸದ್ಗುಣವಂತಾ ॥
ಪದ
ಈಶ ನಿಮಗೆ ಬಲು ಬ್ಯಾಸರವಾದರೆ
ವಾಸವಾಸುತ ಭೀಮೇಶನ ಕರಿಸೊ ॥
ದ್ರೌಪದಿ : ಹೇ ಸತ್ಯನಿಧಿಯಾದ ಧರ್ಮಜನೆ ನೀವೂ ಕಣ್ಣಾರ ನೋಡಿ ಕಿವಿಯಿಂದ ಕೇಳಿ ಸುಮ್ಮನಿರುವದೇನೊ ಕಾಂತಾ, ಬೇಸರವಾದರೆ ವಾಸವಾಸುತ ಭೀಮೇಶಗೆ ಲೇಸಿನಿಂದಪ್ಪಣೆ ಕೊಡಬಾರದೆ ಕಾಂತ ಸದ್ಗುಣವಂತ.
ಧರ್ಮರಾಯ : ಹೇ ಕಾಂತೆ, ಹರಿಯಾಗಲಿ ಹರನಾಗಲಿ ಬ್ರಹ್ಮನಾಗಲಿ ಪಣೆಯೊಳಗೆ ಬರೆದ ಬರಹವನ್ನು ಮೀರುವುದು, ಪೂರ್ವಜನ್ಮದಲ್ಲಿ ಮಾಡಿದ ಕರ್ಮವೂ ನಮ್ಮನ್ನು ಕಾಡಿಸುವುದಾದ್ದರಿಂದ ಮುರಹರಿಯಾದ ಕೃಷ್ಣ ಪರಮಾತ್ಮನು ನಮ್ಮನ್ನು ರಕ್ಷಿಸುವನಾದ ಕಾರಣ ಕ್ಷಣಮಾತ್ರ ಸೈರಿಸಿಕೊಂಡಿರುವಂಥವಳಾಗೆ ಕಾಂತೆ ಸುದ್ಗುಣವಂತೆ.
ದರುವು
ಕಾಯೊ ನರಹರಿ ಕಾಯೋ ಕಂಸಾರಿ ನೀನ
ಲ್ಲದೆ ಮತ್ತಿನ್ಯಾರು ಕಾಯುವರೊ ದುರುಳ
ಸೈಂಧವನ ಅರಣ್ಯದೊಳು ಕೊಂದೆ
ತಡವು ಮಾಡದೆ ಯನ್ನ ಕಾಯೊ ಸರ್ವೇಶಾ ॥
ನಿನ್ನ ನಂಬಿ ನಾನೂ ನೀನೇ ಗತಿಯೆಂದೂ
ಧರಣಿ ವುದ್ದರಿಸೆಂದು ಸಾರಿ ಪೇಳಿದೆನೂ
ಪೊಡವಿಗಧಿಕ ಕುಡುತನಿಯ ಭೀಮೇಶಾ
ತಡವು ಮಾಡದೆ ಬಂದು ಕಾಯೋ ಸರ್ವೇಶಾ ॥
ದ್ರೌಪದಿ : ಶ್ರೀ ಮದ್ವಿರಾಜಾದ್ಗನಶ್ಯಾಮ ಲೋಕಾಭಿರಾಮ ॥ದಿವ್ಯನಾಮ ॥ಪರಂಧಾಮ ಸದ್ಗುಣಸೋಮ ನಿಶ್ಯಿಮಾ ಭಾಷಾಫಣೀಂದ್ರಾರ್ಚಿತಂಗ್ರಿ ಸರೋಜ ಸಿತಕಲ್ಪ ಭೋಜ ಪೆಸರ್ಗೊಂಡ ಮಾತ್ರಕ್ಕೆ ಕುಚೇಲಾಂಬರಿ ಕ್ಷಾಮಹಾ ಭಕ್ತ ಪ್ರಹ್ಲಾದ ಅಲ್ಪರು ಮುಖ ಅನೇಕ ಕರ್ಮಪಾಲನಂಗೈವರ ಮುರಾರೆ ದುರ್ಯೋಧನಂ ಮೋಸದಿಂ ಲೆತ್ತವನ್ನಾಡಿ ವಿತ್ತಾಪಹಾರಂಗಳಂ ಮಾಡಿ ಚಂದ್ರಾರ್ಕಮುಳ್ಳನ್ನಗಂ, ಶಾಶ್ವತೈಶ್ವರ್ಯದಿಂದಿರ್ಪ ಸಂಕಲ್ಪದಿಂ ದ್ರೋಹ ಮಾಡಿದ್ದರಿಂದೆನ್ನ ಸಾಮೀಪ್ಯದೋಳ್ ನಿಂತು ತನ್ನ ಹಸ್ತಾಬ್ಜದೊಳ್ ಮುಟ್ಟಿ ಉಟ್ಟುಕೊಂಡಿರ್ದ ವಸ್ತ್ರಂಗಳಂ ಸೂರೆಯಂ ಮಾಳ್ಪ ನೋಡೆಂದು ಪತಿವ್ರತಾ ಭಂಗವಂ ಮಾಡುತಿರ್ಪಂ ಜಗತ್ಪಾವನಲೋಕ ಸಂಭವನೆ ಯೀ ಸಭಾ ಮದ್ಯದೊಳಿರ್ಪ ಭೀಷ್ಮಾದಿ ದ್ರೋಣರ್ಗೆ ಧರ್ಮಶಾಸ್ತ್ರಂಗಳೇನಾದವೈ ಜಾನಕೀನಾಥ ಸತ್ಪುತ್ರ ಸಂತಾನದೊಳ್ ಶೂನ್ಯನಾಗೆನ್ನ ಶಾಗ್ನೆಯಂ ಪೆತ್ತು ಸಂತೋಷದಿಂ ಚಂದ್ರವಂಶಸ್ಥರಿಗಿತ್ತು ವೈವಾಹವಂ ಮಾಡಿದುತ್ಸಾಹವೇನಾಯಿತೈ, ಧರ್ಮಜಾ ಭೀಮ ಪಾರ್ಥಾದಿಗಳ್ ನೋಡಿ ನೀವ್ಯಾಕೆ ಮೌನವ್ರತದಿಂದಿರ್ಪಾ ರುದ್ಗದಾದಂಡದಿಂ ನೀಚನಂ ತಂಡೋಪತಂಡಗಳಿಂ ಗೈವ ಸಾಮರ್ಥ್ಯವೇನಿಲ್ಲವೆ ನೀ ಕೇಳು ಗಾಂಧಾರಿ ನೀನಾದರು ನಿನ್ನ ಪುತ್ರರಿಗೆ ಸನ್ಮಾರ್ಗಮಂ ಪೇಳದೆ ಪಾಪವೂ ಶತ್ರುವೂ ಕೇಳು ಮೈದುನಾ ಯನ್ನ ಮಾತೆಯಂದೆನಿಸಿ ಭಾವಿಸೈ ತಂದೆ ಮತ್ಯಾರು ನಾಂ ಪ್ರಾರ್ಥಿಪೆ ಪಾರ್ಥ ಕೇಳಿನ್ನ ಗಾಂಢೀವಿ ಶೌರ್ಯಪ್ರತಾಪಮಂ ಧಾತ್ರಿಯೊಳಿರ್ದೆಡೆ ಸಾರ್ಥಕಂ ನೀ ಯನ್ನ ರಕ್ಷಿಸೆನ್ನಪರಾಧಂಗಳಂ ನೋಡದೆ ಧಾತ್ರಿ ನಿವಾಸ ಹರೇ ಕೃಷ್ಣ ವೈಕುಂಠ ನಾರಾಯಣ ವೇದಪಾರಾಯಣ ದೀನಸಂರಕ್ಷಣ ಸತ್ಯ ಸಂಕಲ್ಪ ಸಾಕ್ಷಾತ್ ಪರಂಜ್ಯೋತಿ ಸ್ವರೂಪ ನಮಸ್ತೆ ನಮಸ್ತೆ ನಮಃ॥
ಕೃಷ್ಣ : ಅಮ್ಮಾ ತಂಗಿ, ನೀನು ಪರಿಪರಿ ವಿಧದಿಂದ ನನ್ನ ಸ್ಮರಿಸುವ ಪರಿಯಾಯವೇನಮ್ಮಾ ತಂಗಿ. ಯಮುನಾ ತೀರದಲ್ಲಿ ಕಪಿಲನೆಂಬ ಮುನಿಯು ಸ್ನಾನವಂ ಮಾಡುತ್ತಿರಲು ಕಟ್ಟಿರ್ದ ವುಡುದಾರ ವುಟ್ಟಿರ್ದ ಕಪಿನಿಯೂ ಸಹ ಹರಿದು ಆ ನದಿಯಲ್ಲಿ ಬೀಳಲೂ ಆ ಮುನಿಯು ನಾಚಿಕೆಯಿಂದ ತಲೆಯನ್ನು ಬಗ್ಗಿಸಿಕೊಂಡಿರಲು ಆಗಿನ ವ್ಯಾಳೆಯಲ್ಲಿ ಯಿದು ಧಾರಿಗಾದರೂ ಸಮಯವೆಂದರಿತು ನೀನುಟ್ಟುಕೊಂಡಿರ್ದ ವಸ್ತ್ರದ ಸೆರಗಿನಲ್ಲಿ ಅರ್ಧವಂ ಹರಿದುಕೊಡಲು ಆ ಮುನಿಯು ಅದನ್ನು ಧರಿಸಿಕೊಂಡು ಹೋದಂಥವನಾದನು ಅಮ್ಮಾ ತಂಗಿ ನಿನ್ನ ಮಾನ ಸೂರೆ ಹೋಗುವಂಥ ಕಾಲದಲ್ಲಿ ನಾನು ಬಂದು ಕಾಯುತ್ತೇನಮ್ಮ ತಂಗಿ, ಧೈರ್ಯವಂ ಬಿಡದೆ ಅಧೈರ್ಯಕ್ಕೊಳಗಾಗಬ್ಯಾಡಮ್ಮ ತಂಗಿ ನಿನಗೆ ಅಕ್ಷಯವಾಗಲಮ್ಮಾ ತಂಗಿ॥
ದುಶ್ಯಾಸನ : ಯಲೆ ಪಾಂಚಾಲಿ, ಕೃಷ್ಣ ಕೃಷ್ಣಯೆಂದು ಕೃಷ್ಣನಿಗೆ ಮೊರೆಯಿಟ್ಟರೆ ಗೊಲ್ಲರ ಮನೆಯಲ್ಲಿ ಬೆಣ್ಣೆಯನ್ನು ಕದ್ದು ತಿನ್ನುವ ಆ ಕಳ್ಳ ಕೃಷ್ಣನು ನಿನ್ನ ಸೆರೆ ಬಿಡಿಸಬಲ್ಲನೇನೆ ನಾರಿ ಮದನಕಠಾರಿ ॥
Leave A Comment