ದುಶ್ಶಾಸನ ವಧೆ

(ದುಶ್ಶಾಸನ ದ್ರೌಪದಿಯ ಸೀರೆ ಸೆಳೆಯುವುದು)

ದರುವು

ನೋಡೋ ನೋಡೋ ನೋಡೋ ಭೀಮ
ಕೇಡು ಕಾರ‌್ಯವಾ ಮಾಡುತಲಿಹನು
ಕಳ್ಳನು ಯನಗೆ ಮಾನಭಂಗವಾ  ದುಡು
ಕುತನದಿ ಜಡೆಯ ಪಿಡಿದು ಜಡಿದು
ನೂಕುವಾ  ಹಿಡಿವೆಯೆಂಬ ರಭಸದಿಂದ
ಕಡಿಗೆ ಹಾರುವಾ  ಕ್ಲೇಶನಾಶ ಶ್ರೀ ಭೀಮೇಶ
ನಂಘ್ರಿಯಾ  ನಾಶವಿಲ್ಲದೆ  ಭಜಿಪೆ
ಯನ್ನ  ಕಾಯೊ ಮುಕುಂದಾ ॥ನೋಡೋ ॥

ದರುವು

ಯಾತಕೆ ಬಿಡು ಮನದ ಚಿಂತೆ ಸತಿ ಶಿರೋ
ಮಣಿ  ಈ ಭೂತಲದೊಳಗಿಲ್ಲ ನಿನ್ನ
ಬಿಡಿಸುವಾ ಧಣಿ  ಭೀಮನೆಂದು ಕರಿಯ
ಬ್ಯಾಡೆ ಕಾಮಿನೀಮಣಿ  ಪ್ರೇಮದಿಂದ ವರಿಸು
ಯನ್ನ ಕೋಮಲಾಂಗಿಯೆ ॥

ದರುವು

ಸೆಳೆಯಲಾರೆನಂಣ್ಣಾ ನಾನು  ನಳಿನನೇತ್ರೆ
ದ್ರೌಪದಿಯಾ ಸೀರೆಯನೂ
ಇಂದುಮುಖಿಯಾ ಸೀರೆಯ ಸೆಳೆದು
ನೊಂದವೆಂನ್ನ ಭುಜದೋರ್ದಂಡಗಳೂ
ಕಳವಳಗೊಂಬುವುದೆನ್ನ ಕಾಯ
ತಿಳಿಯದೋಯಿತು ಇಂದಿಗೆ ವಿಧಿ ಮಾಯಾ
ಪೊಡವಿಗಧಿಕವಾದ ಕುಡುತನಿಯಾ  ಒಡೆಯ
ಕರುಣ ತಪ್ಪಿತೊ ಯಮಗೀ ಸಮಯಾ ॥
ಸೆಳೆಯಲಾರೆನಣ್ಣಾ ನಾನು ॥

ದುಶ್ಯಾಸನ : ಅಣ್ಣಾ ಕೌರವಶಿಖಾಮಣಿಯೆ ಕೇಳು ॥ಆ ದ್ರೌಪದಿಯ ಸೀರೆಗಳು ಸೆಳೆಯುವ ಕಾಲದಲ್ಲಿ ಹ್ಯಾಗಾಯಿತೆಂದರೆ ಕತ್ತರಿಸಿ ಕಳವಳಗೊಂಡು ನೇತ್ರಗಳೂ ವುರಿದು ಯರಡು ಭುಜಗಳೂ ಕತ್ತರಿಸಿ ಬಿದ್ದಂತಾಯಿತು. ಭೀಮೇಶನ ಅಂತಃಕರಣ ಇಲ್ಲದಾಯಿತೊ ಅಣ್ಣೈಯ್ಯ ॥

ದರುವು

ಅಂಜಬ್ಯಾಡವೊ ತಮ್ಮ ಭೂಪನೆ  ರಾಜ
ಕುಲ ವೈರಿಕೀರ್ತಿ ಪ್ರತಾಪನೆ ॥ಕುಲಗಿರಿ
ಗಳ ಕಿತ್ತಾಡುವೆ ಮಧ್ಯಜಲದೊಳಗನುಪಾನ ಮಾಡುವೆ ॥

ಕೌರವ : ಯಲಾ ತಮ್ಮನಾದ ದುಶ್ಯಾಸನನೆ ಕೇಳು  ಈ ಸ್ವಲ್ಪ ಕಾರ‌್ಯಕ್ಕೆ ಅಂಜುವರೆ ತಮ್ಮಾ, ಆ ದ್ರೌಪದಿಯ ವಸ್ತ್ರಗಳೂ ತಂದು ಯಮ್ಮ ಅರಮನೆಯ ಭಂಡಾರಕ್ಕೆ ತುಂಬುವಂಥವನಾಗೋ ಅನುಜಾ॥

ದುಶ್ಯಾಸನ : ಅದೇ ಪ್ರಕಾರ ತುಂಬುತ್ತೇನೊ ಅಂಣೈಯ್ಯ ॥

ದರುವು

ಹರಿಹರ ವಿಧಿಸುರರು ನರನಾಥ ಸುರರೆಲ್ಲಾ
ಅರಿಯುವುದೆನ್ನಯ ಪಂಥ
ಯನ್ನ ಪಂಥ ॥ಪೊಡವೀಶಾ ಕೇಳೆನ್ನ ತೊಡೆಯ
ಮೇಲೆ ಭೀಮನ ಗದೆಯು ದೃಢವಾಗಿ
ಕುಂಡ್ರುವದೂ  ನೋಡೋ ಖುಲ್ಲ ದುಶ್ಯಾಸನ ನಿನ್ಹಲ್ಲೆ
ಬಾಚಣಿಗೆಗೈದೂ ಮೆಲ್ಲಾನೆ ಬಿಡಿಸುವೆ ಮುಡಿಯಾ ॥
ಯನ್ನಾ ಮುಡಿಯಾ ॥ಯಲವೊ ನಿನ್ನಯ
ರಕ್ತ ಜಲಸ್ನಾನವನು ಮಾಳ್ಪೆ ನಲವಿಂದ
ಸಭೆಯ ಮಧ್ಯದೊಳೂ ॥ಇಷ್ಟು
ಪಂಥಗಳಿಂದ ಭ್ರಷ್ಟ ನೀನಿಂದಸುವೆ  ಶ್ರೇಷ್ಟ
ಶ್ರೀ ಗುರುಸಿದ್ದನಾಣೆ ಕೇಳಾಣೆ ॥

ದ್ರೌಪದಿ : ಯಲಾ ಕುಲಹೀನನಾದ ಕೌರವನೆ ಕೇಳು, ಯನ್ನ ಪತಿಗಳೈವರಿಂದ ನಿನ್ನ ವಂಶನಾಶನವಾಗಲಿ. ಪ್ರಚಂಡ ಮಾರ್ತಾಂಡನೆನಿಪ ಯನ್ನ ಪ್ರೇಮದ ಗಂಡನಾದ ಭೀಮಸೇನನ ಗದೆ ಬಂದು ನಿನ್ನ ತೊಡೆಯ ಮ್ಯಾಲೆ ಕುಂಡ್ರಲಿ ಹರಿಹರಾದಿಗಳಾಣೆ  ಈ ಮಾತು ವುಚಿತವೊ ದ್ರೋಹಿ ॥

ಕೌರವ : ಯಲಾ ಸಾರಥಿ. ಈ ಮೂರ್ಖಳಾದ ದ್ರೌಪದಿಯು ಯಮಗೆ ಶಾಪವಂ ಕೊಟ್ಟಿದ್ದಾಳೆ. ನಮ್ಮ ತಂದೆಯಾದ ಧೃತರಾಷ್ಠರಾಯನನ್ನು ಕರೆಸುವಂಥವನಾಗೊ ಸಾರಥಿ.

ಸಾರಥಿ : ಅದೇ ಪ್ರಕಾರವಾಗಿ ಕರೆಸುತ್ತೇನೈಯ್ಯ ರಾಜ.

ಧೃತರಾಷ್ಠ : ಯಲಾ ಸಾರಥಿ, ಈ ಮೇದಿನಿಯೋಳ್ ಹಸ್ತಿನಾವತಿಗೆ ಅರಸನಾದ ಧೃತರಾಷ್ಠ ರಾಯನೆಂದು ತಿಳಿಯಲಾ ಸಾರಥಿ ಮನ್‌ಮನೋಳ್ ಪೂರುತಿ.

ದ್ರೌಪದಿ : ನಮೋನ್ನಮೋ ಹೇ ಮಾವನವರೆ.

ಧೃತರಾಷ್ಠ : ಧೀರ್ಘಾಯುಷ್ಯಮಸ್ತು ಏಳಮ್ಮ ದ್ರೌಪದಾ.

ದ್ರೌಪದಿ : ಹೇ ಮಾವನವರೆ, ಇಂದಿನ ದಿನದಲ್ಲಿ ನಿಮ್ಮ ಮಗನಾದ ಕೌರವರಾಯನು ಯನ್ನ ಪತಿಯಾದ ಧರ್ಮಜನಲ್ಲಿ ಜೂಜನ್ನಾಡಿ ಧನಕನಕ ವಸ್ತು ವಾಹನಾದಿಗಳಾಗಿ  ಯನ್ನ ಪತಿಗಳೈವರನ್ನು ಗೆದ್ದು ಯಿದ್ದಾನೆ. ಯನ್ನ ಪತಿಗಳ ಸೆರೆಯನ್ನು ಬಿಡಿಸಬೇಕಯ್ಯ ಮಾವನವರೆ.

ಧೃತರಾಷ್ಠರಾಯ : ಅದೇ ಪ್ರಕಾರ ಪತಿಗಳೈವರನ್ನು ಬಿಟ್ಟು ಇದ್ದೇನಮ್ಮ ದ್ರೌಪದಿ.

ದ್ರೌಪದಿ : ಮತ್ತು ಯನ್ನ ಸೆರೆಯನ್ನು ಬಿಡಿಸಬೇಕಯ್ಯ ಮಾವನವರೆ.

ಧೃತರಾಷ್ಠರಾಯ : ನಿನ್ನ ಸೆರೆಯನ್ನು ಸಹಾ  ಬಿಡಿಸಿ ಇದ್ದೇನಮ್ಮ ದ್ರೌಪದಿ ॥

(ಕುರುಕ್ಷೇತ್ರ ಯುದ್ಧಭೂಮಿ)

ದರುವು

ಏನೆಂದು ಹೇಳಲೈಯ್ಯ ರಾಧೇಯ
ಮಾನಹೀನದ ಸುದ್ದಿಯಾ  ಮಾನ
ವಾಗ್ರಣಿಯೆ ಕೇಳ್ ನಾನಾಡಿದರೆ ಫಲ
ಹೀನನಾಗುವುದೈಯ್ಯ ॥ರಾಧೇಯಾನೆ ॥
ಕ್ಷಿತಿಪತಿಯೆಂದೆನಿಸಿ  ಸಾಮಾನ್ಯದಿ
ಸತಿಗೆ ಮಾನವನೊಪ್ಪಿಸಿ  ಮತಿಗೆಟ್ಟು
ಪೋದಾರೆ ಕ್ಷಿತಿಯೊಳ್ ಅಪಹಾಸ್ಯ
ಆಗುವದಯ್ಯ ನ್ಯಾಯ  ರಾಧೇಯನೆ
ಮಾನಹೀನದ ಸುದ್ದಿಯಾ ॥

ಕೌರವ : ಭಲಾ ಕರ್ಣ ವರ ಕಲ್ಪವರ್ಣ, ಈ ಕ್ಷಿತಿಯೊಳಗೆ ಅರವತ್ತಾರು ದೇಶದ ರಾಜರ ಮುಂದೆ ಅಪಹಾಸ್ಯಕ್ಕೆ ಕಾರಣವಾಯಿತಲ್ಲಪ್ಪ ಕರ್ಣ ವರ ಕಲ್ಪವರ್ಣ.

ದರುವು

ಇಷ್ಠು ಚಿಂತೆ ಯಾಕೆ ದೇವ ಇನಿತು
ಕಾರ‌್ಯಕೆ  ಕೊಟ್ಟು ಕಳುಹೋದು ಶಾಸನ
ಕದನ ರಂಗಕೆ ॥

ಪಾರ್ಥನ ಸರಿಯಾದೆನೆಂದು  ಪಂಥಗೈ
ವನೂ ॥ಕಾರ್ತವೀರ‌್ಯರಂತೆ ಜಗದಿ ಕೀರ್ತಿ
ತರುವನೂ॥

ಕರ್ಣ : ಭಳಿರೆ ಈ ಸ್ವಲ್ಪ ಕಾರ‌್ಯಕ್ಕೆ ಚಿಂತೆಯನ್ನು ಮಾಡುವರೆ, ಅನುಜನಾದ ದುಶ್ಯಾಸನನನ್ನು ರಣಾಗ್ರಕ್ಕೆ ಯುದ್ಧಕ್ಕೆ ಅಪ್ಪಣೆಯನ್ನು ಕೊಟ್ಟು ಕಳುಹಿಸುವಂಥವನಾಗೊ  ಕೌರವೇಂದ್ರ ॥

ಕೌರವ : ಭಳಿರೆ ತಮ್ಮನಾದ ದುಶ್ಯಾಸನನೇ ಕೇಳೂ  ಹಂದಿಯಂತೆ ಬಂದಿರುವ ಭಂಡ ಭೀಮನ ಮ್ಯಾಲೆ ಯುದ್ಧವನ್ನು ಮಾಡಿ ಬರುವಂಥವನಾಗೊ ತಮ್ಮ ॥

ದರುವು

ಕೊಡು ಕೊಡು ಯನಗಪ್ಪಣೆಯನು
ತಡವು ಮಾಡದೆ  ಹಿಡಿದು ಭೀಮನೊ
ಡಲ ಬಗೆದು ಕುಡಿವೆ ರುಧಿರವಾ  ಭ್ರಷ್ಠ
ನೆಂಬೊ ಅಧಮನನ್ನು ಕುಟ್ಟಿ ಕೆಡಹುವೇ
ದುರುಳ ವಾಯುತನಯನ ಕೊರಳ
ಕೊಯ್ಯುವೆ  ಕೊರಳಿಗೊನಮಾ
ಲೆಯನ್ನು ಭರದಿ ಧರಿಸುವೆ ॥

ದುಶ್ಯಾಸನ : ಭಲಾ ಅಣ್ಣಾ ಕೌರವ ಶಿಖಾಮಣಿ  ಹಂದಿಯಂತೆ ಬಂದ ಭಂಡ ಭೀಮನನ್ನು ಕೊಂದು ಯಿದ್ದೇನೆ ನೋಡುವಂಥವನಾಗೊ  ಅಗ್ರಜಾ ॥

ಕೌರವ : ಷಹಭಾಷ್ ಭಳಿರೆ ತಮ್ಮ, ಹಂದಿಯಂತೆ ಬಂದ ಲಂಡನಾದ ಭೀಮನನ್ನು ಖಂಡ್ರಿಸಿದ ಅನುಜನೆ ಕೇಳು. ಈ ಸಭಾಜನರೆಲ್ಲಾ ನೋಡಿ ಸಂತೋಷಪಡುವಂತೆ ನಿನ್ನ ಭುಜಭಲಶೌರ‌್ಯದಿಂದ ವುಳಿದ ಅರ್ಜುನ ನಕುಲ ಸಹದೇವರನ್ನು ಸಂದೇಹವಿಲ್ಲದೆ ಕೊಂದು ಯನ್ನ ಮಂದಿರಕ್ಕೆ ಬಾರಪ್ಪಾ ತಮ್ಮಾ  ದುಶ್ಯಾಸನರಾಜ ॥

(ಭೀಮಸೇನನ ಮೂರ್ಛೆ)

ದರುವು

ದುರುಳನಿಂದ ಮೈಮರೆತೆಯಾ ತಮ್ಮಾ
ಭರದಿಂದ ಧರಿಸುವರ‌್ಯಾರೊ ನಮ್ಮ ॥

ಲಾಕ್ಷಾಗೃಹದೊಳೈವರು ಮೈಮರಿಯೆ
ಈ ಕ್ಷಿತಿಯ ಪಾಲಿಸಿದಂಥ  ದೊರೆಯೆ ॥

ವರ ವಿರಾಟನಗರಿಯಾ ಸೇರೀ ಪರರ
ಸೇವೆಯ ಮಾಡಿ ಬಾಯಾರಿ ॥ಹಿಂದೆನಾಗಂಧಿ
ಯ ಬೇಡ ರಮಣಿ  ತಂದು ಬಯಕೆಯ
ಸಲಿಸಿದ ಸುಗುಣಿ ॥ಕುಂತಿಗೆಂದು ಉಸುರಲಿ
ಈ ಹದನಾ ಕಾಂತಿಹೀನವಾಯಿತೆ ನಿನ್ನ
ವದನಾ ಏಕಚಕ್ರಾಪುರಾಧಿಪನ  ಭೀಕ
ರಾಗದೆ ಸದೆಸಂಪನ್ನ ಪೊಡವಿಗಧಿಕವಾದ
ಕುಡುತನಿಯಾ  ಒಡೆಯಾ ಭೀಮೇಶಾ
ಮುನಿದಾನೀ ಸಮಯಾ ॥

ಧರ್ಮ : ಹೇ ತಮ್ಮಾ ಭೀಮಸೇನಾ, ಈ ರಣರಂಗ ಮಧ್ಯದಲ್ಲಿ ಮಲಗುವುದಕ್ಕೆ ನಿನಗೆ ಪ್ರೇಮವಾಯಿತೇನಪ್ಪಾ ಅನುಜಾ  ಹಿಂದಕ್ಕೆ ಹಿಡಿಂಬಾಸುರ ಬಕಾಸುರ ಕೀಚಕ ಮೊದಲಾದವರನ್ನು ಕೊಂದೆ. ನಿನ್ನ ಪಟುತರ ಶಕ್ತಿಯೇನಾಯಿತಪ್ಪಾ ತಮ್ಮಾ. ಕುಟಿಲ ಕುಂತಳೆಯಾದ ದ್ರೌಪದಿಯ ಪಂಥವನ್ನು ಈಡೇರಿಸುವ ಧಾತು ಇನ್ಯಾರಲ್ಲುಂಟು, ಈಗಿನ ವ್ಯಾಳೆಯಲ್ಲಿ ಯನ್ನೊಳು ವಂದು ಮಾತನಾಡಪ್ಪಾ ತಮ್ಮಾ ಭೀಮಸೇನಾ ನಿನ್ನ ಯಿಷ್ಠದಂತೆ ನೇಮವನ್ನು ಕೊಟ್ಟು ಯಿದ್ದೇನೆ. ಈ ದುಷ್ಟನಾದ ದುಶ್ಯಾಸನನನ್ನು ನಷ್ಟಗೊಳಿಸಿ ನಮ್ಮ ಸತಿಯಾದ ಪಾಂಚಾಲಿಯ ಪಂಥವನ್ನು ಈಡೇರಿಸಿ ಬಾರಪ್ಪಾ ತಮ್ಮಾ ಭೀಮಸೇನಾ॥

ಭೀಮ : ಭಳಿರೆ ಅಗ್ರಜಾ, ಈ ನೀಚನಾದ ದುಶ್ಯಾಸನನಿಂದ ಯನಗೆ ಘಾಸಿ ಸಂಭವಿಸುವುದುಂಟೆ. ಬಿಸಿಲಿನ ಛಾಯಕ್ಕೆ ಅಗ್ನಿಯು ಮುಸುಕುವದುಂಟೆ. ಭಾಸ್ಕರನಾದ ಸೂರ‌್ಯನು ಪ್ರಕಾಶಿಸುವ ಸಮಯದಲ್ಲಿ ಅಂಧಕಾರವೆಂಬ ಕತ್ತಲೆ ಕವಿಯುವದುಂಟೆ. ಪುಂಡರೀಕಾಕ್ಷನ ಭಕ್ತರಾದ ಪಾಂಡವರಿಗೆ ಬಂದ ಕಷ್ಟ ನಷ್ಟವಾಗದೆ ನಿಲ್ಲುವದುಂಟೆ. ಭಳಿರೆ ಅಗ್ರಜಾ ನಿಮ್ಮ ಆಜ್ಞೆ ಮೀರಿದ್ದರಿಂದ ಯಿಷ್ಟಾಯಿತು. ಚಿಂತೆಯಿಲ್ಲ ಈಗಲಾದರು ವಂದು ಕ್ಷಣ ನೇಮವನ್ನು ಪಾಲಿಸೊ ಅಣ್ಣಾ ಪುತ್ತಳಿಯ ಬಣ್ಣ.

ಧರ್ಮರಾಯ : ಅದೇ ಪ್ರಕಾರ ನೇಮವನ್ನು ಕೊಟ್ಟು ಯಿದ್ದೇನೆ ಯೀ ಭಂಡನಾದ ದುಶ್ಯಾಸನನನ್ನು ಕೊಂದು ಬಾರಪ್ಪಾ ಅನುಜಾ ಸಾಮ್ರಾಜ್ಯ ತನುಜಾ.

ಭೀಮ : ಅದೇ ಪ್ರಕಾರ ಕೊಂದು ಬರುತ್ತೇನೆ ನಿಮ್ಮ ಸಜ್ಜಾ ಗೃಹಕ್ಕೆ ತೆರಳುವಂಥವನಾಗೋ ಅಂಣೈಯ್ಯ.

ಭೀಮ : ಭಳಿರೆ ಸಾರಥಿ, ನಮ್ಮಣ್ಣನಾದ ಧರ್ಮರಾಯನು ಯನಗೆ ಅಪ್ಪಣೆಯನ್ನು ಕೊಟ್ಟು ಯಿದ್ದಾನೆ. ನಮ್ಮ ಸತಿಯಳಾದ ಪಾಂಚಾಲಿಯನ್ನು ಮುತ್ತಿನಾರತಿ ತೆಗೆದುಕೊಂಡು ಬರುವಂತೆ ಹೇಳೊ ದೂತಾ ರಾಜ ಸಂಪ್ರೀತಾ.

ದರುವು

ಜಯವಾಗಲೊ ಕಾಂತಾ ನಿಮಗೆ  ಜಯ
ಲಕ್ಷ್ಮಿ ಒಲಿಯಾಲಿ ಭೀಮೇಶ ನಿಮಗೆ ॥
ಮೋಸವಿಲ್ಲದೆ ಲೇಸಾಯಿತಲ್ಲಾ  ವಾಸುಕೀ
ಶಯನ ಶ್ರೀ ಭೀಮೇಶ ಬಲ್ಲಾ ॥

ದ್ರೌಪದಿ : ಹೇ ಕಾಂತ ಹೇ ರಮಣ ಹೇ ನಲ್ಲಾ. ಯೀ ಪರಿಯಿಂದ ಘರ್ಜಿಸಿದರೆ ಮೂರು ಲೋಕವೂ ತಲ್ಲಣಿಸುವುದೂ ಶಾಂತವನ್ನು ತಾಳೊ ರಮಣಾ ಸದ್ಗುಣಾಭರಣಾ.

ಭೀಮ : ಹೇ ಕಾಂತೆ ಹೇ ರಮಣಿ ಹೇ ನಲ್ಲೆ, ನಮ್ಮ ಅಣ್ಣನಾದ ಧರ್ಮರಾಯನು ಯನಗೆ ನೇಮವನ್ನು ಕೊಟ್ಟು ಯಿದ್ದಾನೆ. ಈ ಲಂಡನಾದ ದುಶ್ಯಾಸನನನ್ನು ಕೊಂದು ಇವನ ರಕ್ತದಲ್ಲಿ ನಿನಗೆ ಸ್ನಾನವನ್ನು ಮಾಡಿಸುತ್ತೇನೆ. ಅವನ ಕರುಳುಗಳನ್ನು ತೆಗೆದು ನಿನ್ನ ಚಲುವಾದ ಕೊರಳಿಗೆ ವನಮಾಲೆಯನ್ನು ಹಾಕುತ್ತೇನೆ. ಅವನ ಹಲ್ಲುಗಳನ್ನು ಕಿತ್ತು ನಿನ್ನ ಮುಡಿಯನ್ಯಾವರಿಸಿಕೊಳ್ಳುವದಕ್ಕೆ ದಂತದ ಬಾಚಣಿಗೆಯನ್ನು ಮಾಡಿಸಿಕೊಡುತ್ತೇನೆ. ಸ್ವಲ್ಪ ವಾರೆಯಾಗಿ ಇರುವಂಥವಳಾಗೆ ಕಾಂತೆ ಸದ್ಗುಣವಂತೆ.

ಭೀಮ : ಯಲೊ ಸಾರಥಿ, ಆ ದುರುಳನಾದ ದುಶ್ಯಾಸನನನ್ನು ಯುದ್ಧಕ್ಕೆ ಬರಹೇಳೊ ಸಾರಥಿ.

ದರುವು

ಬಾರೊ ಬಾರೊ ದುರುಳಾ ಬಗ್ಗಿಸಿ
ಕೊಯ್ಯುವೆ ಕೊರಳ ॥
ಅಧಮ ಬಾರೊ ಈಗ ನಿನ್ನ ನರದು ಬಿಡುವೆ
ಬೇಗದಲಿ ॥ಪೊಡವಿಗಧಿಕವಾಸ
ಕುಡುತನಿಯ ಭೀಮೇಶಾ ॥
ನೀನು ಹುಡು ಹುಡುಗಾ ರೈ ತಡೆಯನಂದರೆ ಈಗ
ಬಾರೊ ಬಾರೊ ಬಾರೊ ದುಶ್ಯಾಸನ ॥

(ದುಶ್ಶಾಸನನ ಮರಣ)

ಹೊಡಿ ನಗಾರಿ ಮ್ಯಾಲೆ ಕೈಯ್ಯ  ಬಿಟ್ಟೊಡಿ
ನಗಾರಿ ಮ್ಯಾಲೆ ಕೈಯ್ಯ ಕಡುಗಲಿ ಭೀಮನು
ಕದನವ ಮಾಡಲು  ಗಧೆಯೊಳ್
ಬಡಿಯುವೆನೆಂಬ ॥ಅಂಜನಸುತ ನೂರೊಂದು
ಮಂದಿಯೊಳು  ಬಂದ ಭೀಮನೆಂದೊಡಿ
ನಗಾರಿಮ್ಯಾಲೆ ಕೈಯಾ ॥ಈಶ ಕರುಣಿಸೊ
ಕುಡುತ ನಿವಾಸ  ದಾಸದಾಸರಾ ಪೋಷಿಸಿಂದೂ ॥
ಹೊಡಿ ನಗಾರಿಮ್ಯಾಲೆ ಕೈಯ್ಯ
ಬಿಟ್ಟೊಡಿ ನಗಾರಿ ಮ್ಯಾಲೆ ಕೈಯಾ ॥

ಭೀಮ : ಕಾಂತೆಯಾದ ದ್ರೌಪದಿಯೆ ಕೇಳೂ, ನಿನಗೆ ಕಷ್ಟವನ್ನಿತ್ತ ಈ ಭ್ರಷ್ಠನನ್ನು ಕೊಂದು ಯಿದ್ದೇನೆ ನಿನ್ನ ಛಲವಂ ಈಡೇರಿಸುವಂಥವಳಾಗೆ ಕಾಂತೆ ಸದ್ಗುಣವಂತೆ.

ದರುವು

ಯಲಾ ದುರುಳ ಕೇಳಿಂದಿಗೆ ನಿಂನಯ
ಬಲಾ ಕುಂದಿತೇನೊ ॥
ಪತಿವ್ರತೆಯು ನಾನೆಂದರೆ ಬಿಡದೆ  ವ್ಯಥೆಯಾಗೊಳಿಸಿ
ದೆಲ್ಲೊ ॥ಆಧಾರಶ್ರೀ ಭೀಮೇಶನ ಕೈಲಿ
ಮೃತಿ ಹೊಂದಿದೆಲ್ಲೊ  ದುರಾತ್ಮಕನೆ
ನಿನ್ನೆದೆ ಕೊಬ್ಬು  ಬರ್ಭರ ಕರಗಿತೇನೋ ದುರುಳಾ ॥

ದ್ರೌಪದಿ : ಯಲಾ ದುರ್ಮಾಗರ್, ಪತಿವ್ರತೆಯಳನ್ನು ಮುಟ್ಟಬೇಡವೆಂದು ಯೆಷ್ಠು ವಿಧದಿಂದ
ಪೇಳಿದಾಗ್ಯು ಕೇಳದೆ ಯನ್ನ ಪತಿಯಾದ ಭೀಮಸೇನನ ಕೈಲಿ ಮರಣವನ್ನು ಹೊಂದಿದೇನೊ ಭ್ರಷ್ಠ ಪರಮ ಪಾಪಿಷ್ಟ.

ಭೀಮ : ಹೇ ಕಾಂತೆ ಹೇ ನಲ್ಲೆ ಹೇ ರಮಣಿ, ಈ ದುಷ್ಟನ ರಕ್ತದಲ್ಲಿ ಜಲಸ್ನಾನವನ್ನು ಮಾಡು. ಈ ಕರುಳುಗಳನ್ನು ನಿನ್ನ ಕೊರಳಿಗೆ ವನಮಾಲೆ ಧರಿಸು. ಇವನ ಹಲ್ಲುಗಳನ್ನು ದಂತದ ಬಾಚಣಿಗೆಯನ್ನು ಮಾಡಿಕೊಳೈ ಕಾಂತೆ ಸದ್ಗುಣವಂತೆ.

ಮಂಗಳಾರತಿ

ಭಸಿತಾಕ್ಷ ಮಾಲೆಯಾ ಹಸನಾಗಿ ಧರಿಸಿರ್ದ
ಸರಸವಾಡುತಾವೂ ಭಕ್ತರೊಳು
ಸ್ಥಿರವಾದ ವರಗಾಳ – ಹರಸಿದ ಭಕ್ತರಿಗೆ
ಸರಸಾದಿ ಕೊಡುವಂಥ – ಸರ‌್ವಜ್ಞ ದೇವಾ ॥
ಮಂಗಳಂ – ಮಂಗಳಂ ॥

ವೃಷಭವಾಹನ ದೇವಾ – ಹಸನಾದ ದೇ
ವಾನೆ – ವಸುಧೆಗಾಸಿರಿಯಾದ ಪ್ರಭುವೆ
ನೀನೇ ಕುಸುಮ ಬಾಣನಿಗೆ ಶಿಲ್ಕದೆ ಸರ‌್ವ
ಕಾಲವು ಹಸನಾಗಿ ಚರಿಸುವ ಗುರು
ಪಕ್ಕೀರೇಶಾ – ಮಂಗಳಂ ॥

ಧರೆಯೊಳಗತ್ಯಧಿಕ   ಹಿರಿಯ
ಬಳ್ಳಾಪುರದ  ಸ್ಥಿರವಾದ ದೇಶಾದ ಮ
ಟದ ಮಧ್ಯ  ಯಿರುತಿರ್ದ ಸರ‌್ವರು ಪೊ
ರೆದು ರಕ್ಷಿಸಿ ಬಂದೆ  ಅವತಾರಯೆತ್ತಿದ
ರಘುನಾಥ ಗುರುವೆ ॥ಮಂಗಳಂ ॥

ಉರಗ ಭೂಷಣ ದೇವಾ  ವರಗರ್ವ
ನಾಶನೆ  ಹರ ಹರ ಯನ್ನನ್ನು ಸಲೆ ರಕ್ಷಿಸೊ
ಸರಸಕೋವಿದ ಸರ‌್ವ ಚಾಮರ
ತಾರನೆ ನಿರುತ ನಿಮ್ಮಯ ಧ್ಯಾನ –
ಕೊಡು ಮಹಾದೇವಾ ॥ಮಂಗಳಂ  ॥

ನಿಂಮ್ಮ ವರ್ಣಿಸುವದು – ಯಂದಿಗು
ಅಳವಲ್ಲಾ – ಶಂಭುವೆ ಕರುಣಿಸೊ
ಸರಸಿಜರೂಪಾ ॥ಮಂಗಳಂ ॥ ॥

ಇಂಬಾಗಿ ಸಕಲ ಭಾಗ್ಯವ ಕೊಟ್ಟು
ರಕ್ಷಿಸೋ ಶಂಭುವೆ ನೀನೆ ಕರಿ ವೃಷ
ಭೇಂದ್ರಾ ॥ಮಂಗಳಂ – ಮಂಗಳಂ
ಪಕ್ಕೀರೇಶಾ ॥ಮಂಗಳಂ – ಮಂಗಳಂ ॥

***