ಭೀಮ : ತಮ್ಮ ವುತ್ತರಕ್ಕೆ ಪ್ರತಿವುತ್ತರ ಬಿತ್ತರಿಸದೆ ಯಿರುತ್ತೇನೋ ಅಗ್ರಜಾ.

ಕೌರವ : ಭಲಾ ತಮ್ಮನಾದ ದುಶ್ಯಾಸನನೆ ಕೇಳೂ  ಆ ದ್ರೌಪದಿಯೆಂಬ ಹೆಣ್ಣು ಬಂದರೆ ಸರಿ ಬಾರದೆ ಯಿದ್ದರೆ ಅವಳ ಜಡೆಮುಡಿಯನ್ನು ಪಿಡಿದೂ ಝೇಂಕರಿಸಿ ಹಿಡಿದೆಳತರುವಂಥವನಾಗೂ ಅನುಜಾ॥

ದುಶ್ಯಾಸನ : ಅದೇ ಪ್ರಕಾರ ಯಳದುಕೊಂಡು ಬರುತ್ತೇನೊ ಅಣ್ಣೈಯ್ಯ ॥ಯಲೆ ಪಾಂಚಾಲಿ ಅತಿ ಜಾಗ್ರತೆಯಿಂದ ನಮ್ಮಣ್ಣನ ಸನ್ನಿಧಾನಕ್ಕೆ ಬಂದರೆ ಸರಿ. ಇಲ್ಲವಾದರೆ ನಿನ್ನ ಜಡೆಮುಡಿಯನ್ನು ಪಿಡಿದು ಯಳೆಯದೆ ಬಿಡೆನೆ ನಾರಿ ಮದನ ಕಠಾರಿ ॥

ದರುವು

ಬಿಡು ಬಿಡೊ ಯನ್ನಾ ಮರುಳಾ  ಪಾಪಿದುರುಳಾ
ಗಂಡರು ಬಿಲ್ಲೋದ್ಬಟರು  ಕಂಡರೆ ಸುಮ್ಮನಿರರೊ
ಗುಂಡಿಗೆಯನ್ನು ಬಗೆದು ಖಂಡ್ರಿಸುವರೊ
ನಿನ್ನ ಕೊರಳಾ  ಪಾಪಿ ದುರುಳಾ ॥

ದ್ರೌಪದಿ : ಹೇ ಜಡಮತಿ ಭ್ರಷ್ಟನೆ, ಯನ್ನ ಜಡೆಮುಡಿಯನ್ನು ಪಿಡಿದು ತಡವು ಮಾಡದೆ ಘುಡಿಘುಡಿಸಿ ಪಿಡಿದೆಳೆಯುತ್ತೀಯಾ. ಕಡು ಪರಾಕ್ರಮಿ ಚಂಡಪ್ರಚಂಡ ವುದ್ದಂಡರೆನಿಪ ಯನ್ನ ಗಂಡರು ನಿನ್ನ ಕಂಡರೆ ಕಡುಕೋಪದಿಂದ ನಿನ್ನ ಹಿಡಿದೂ ದಂಡ ಬಂಧನಕ್ಕೆ ಮುಂಡನಗೈದೂ ನಿನ್ನ ಕೊರಳ ಖಂಡ್ರಿಸುವರು. ಯನ್ನ ಗೊಡವೆ ಬ್ಯಾಡವೊ ದುರುಳಾ.

ದುಶ್ಯಾಸನ : ಯಲೆ ಪಾಂಚಾಲಿ. ಕಟಕಟಾಯೆಂದು ಮೊರೆ ಇಟ್ಟರೆ ನಿನ್ನ ಬಿಟ್ಟು ಹೋಗುವನಲ್ಲಾ ಜಾಗ್ರತೆಯಿಂದ ತೆರಳುವಂಥವಳಾಗೆ ಹೆಣ್ಣೆ ಗಜನಿಂಬೆ ಹಣ್ಣೆ ॥

ದರುವು

ಸುರಚಿರ ಪತಿವ್ರತೆಯ ಪರಿಪರಿ ಭಂಜಿಸು
ವೆಯಾ ॥ಪಾಪಿ ದುರುಳಾ ॥ಧುರದೊಳ್  ವನ
ಮಾಲೆ ಧರಿಸುವೆ ನಿನ್ನ ಕರುಳಾ  ಪಾಪಿ ದುರುಳಾ ॥

ದ್ರೌಪದಿ : ಹೇ ದೋಷಚರನೆ, ಸೌಂದರ‌್ಯರಸಪೂರಿತ ಕಮಲಮುಖಿಯರು ಪರಪುರುಷರನ್ನು ಕಣ್ಣೆತ್ತಿ ನೋಡದೆ ಇರುವ ಪತಿವ್ರತೆಯರ ಪರಿಪರಿಯ ಮಾನಭಂಗವನ್ನು ಗೈಯ್ಯುವದೂ  ವಿಹಿತವೇನೋ ದುರುಳ ಪರಸತಿಯರ ಸಂಗಡ ಸರಸಬ್ಯಾಡ ಸುಮ್ಮನೆ ಹೋಗೋ ದುರ್ಮಾರ್ಗ ॥

ಪದ

ಧರಣಿಗಧಿಕ ಕುಡುತನಿಯ ಭೀಮೇಶನ
ಕರುಣದೊಳಿರುವಾ  ತರುಣಿಯ ಪುಷ್ಪವತಿಯ ॥
ಕೇಳೊ ದುರುಳಾ ॥

ದ್ರೌಪದಿ : ಹೇ ದುರುಳ ಮನುಷ್ಯ  ಈ ಬ್ರಹ್ಮಾಂಡ ಮಂಡಲದೋಳ್ ಕುಕ್ಷಿಯೊಳಗಿತ್ತು ರಕ್ಷಿಸುವ ದಾನವ ಶಿಕ್ಷ ಕಮಲಾಕ್ಷನಾದ ಭೀಮೇಶನೂ ನಿನ್ನ ಭಾವಕ್ಕೆ ಅಳುಕಿ ಎಷ್ಠು ಮಾತ್ರಕ್ಕು ನಿನ್ನನ್ನು ರಕ್ಷಿಸುವನಲ್ಲಾ, ಇದೂ ಅಲ್ಲದೆ ಮಂದಮಾರುತ ಕಂದನೂ ನಿನ್ನ ಕರುಳುಗಳನ್ನು ಕಿತ್ತು ವನಮಾಲೆಯನ್ನು ಧರಿಸುವಂಥವನಾಗುತ್ತಾ ಇದ್ದಾನೆ. ಈ ಮಾತು ನಿನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಇರುವಂಥವನಾಗೊ ದುರ್ಮಾರ್ಗದ್ರೋಹಿ ॥

ದುಶ್ಯಾಸನ : ಯಲೆ ಪಾಂಚಾಲಿ, ಯೆಷ್ಠು ಮಾತ್ರಕ್ಕು ಬಿಡಲಿಕ್ಕಿಲ್ಲಾ. ನಮ್ಮಣ್ಣನ ಸನ್ನಿಧಾನಕ್ಕೆ ಜಾಗ್ರತೆಯಿಂದ ತೆರಳುವಂಥವಳಾಗೆ ಹೆಣ್ಣೆ ಸುಲಿದ ಬಾಳೆಹಣ್ಣೆ.

ದರುವು

ಸರ‌್ವರಿಗಿದು ನ್ಯಾಯವೆ ನಿಮಗೆ ಸಜ್ಜನರೊಬ್ಬರಿಲ್ಲಾ
ಸಭೆಯೊಳಗೆ ಧರ್ಮಜ ಯನ್ನಾ ಸೋತ
ನಂತವಾಗೆ  ಧರ್ಮವೆ ಯನ್ನಾ ಸೋಲ್ವುದು
ಭರದಿ ಧಾರ್ಮಿಕರೆಲ್ಲಾ ಯೋಚಿಸಿರಿ ಮನದಿ
ಧರ್ಮವೆ ಸರಿಹೇಳಿರೈ ಭರದಿ ॥

ದ್ರೌಪದಿ : ಹೇ ಪ್ರಭಾಕರ ಕಿರಣದಿಂದೊಪ್ಪುವ ಸಭಾಕಲ್ಪತರುಗಳಿರ, ಯುವರಾಜ ನಂದನ ಮೊದಲಾದ ಯೈದು ಮಂದಿ ಪತಿಗಳೂ ಯನ್ನೆದುರಾಗಿ ಯಿದ್ದು ಪರಮ ಚಮತ್ಕೃತಿಯಿಂದ ತಾನು ಸೋತಮೇಲೆ ಯನ್ನನ್ನು ಲೆತ್ತಕ್ಕೆ ಯಿಟ್ಟು ಸೋತೆನೆಂಬಾ ಮಾತು ಧರ್ಮವೆ. ಧಾರ್ಮಿಕರೆಲ್ಲಾ ಮನದಲ್ಲಿ ತಿಳಿದೂ ಧರ್ಮನೀತಿಯಿಂದ ಹೌದು ಅಲ್ಲವೆಂದು ನೀವಾದರು ಪೇಳಬಾರದೆ ತಾಯಿ ತಂದೆಗಳಿರಾ.

ಪದ

ಪುಷ್ಪವತಿಯಳಾದ ಮಾನಿನಿಯ  ಭ್ರಷ್ಠನು
ಮಾಡುವ ಘಾಶಿಯಾ ಈ ಸಮಯದಲಿ
ದುಶ್ಯಾಸನನಿಗೆ ಪೇಳಿರೈ ಮತಿಯ ದುರ್ಬಲನಿಗೆ
ತೋರಿರೈ ಗತಿಯಾ ॥

ದ್ರೌಪದಿ : ಹೇ ದೃಢ ಮಾನಸರಿರಾ  ರುತುಮತಿಯಾದವಳನ್ನು ಅತಿಭಂಗಗೈವಂಥ ಕ್ರೂರನಾದ ದುಶ್ಶಾಸನನಿಗೆ ಅತಿ ಹಿತವಂತರು ಚನ್ನಾಗಿ ಬುದ್ಧಿಯನ್ನು ಪೇಳಿ ಯನ್ನಂಥ ಬುದ್ಧಿಶೂನ್ಯಳಿಗೆ  ಗತಿ ಯಾವುದು ತೋರಿರೈಯ್ಯ ಸಭೆಗಳಿರಾ ॥

ಪದ

ದುರ‌್ಯೋಧನನಾಜ್ಞೆಯನು ಕೊಟ್ಟರೆ
ದುರುಳನು ಯನ್ನ ವೇಧಿಸುತಿರ್ಪನೆ ॥ಕಣ್ಣಲಿ
ಕಂಡೂ ಕಾಣದಂತಿಹರೆ ಕಾಮಿನಿಯಂದುಪೇಕ್ಷೆ
ಗೈಯ್ಯುವರೆ ॥

ದ್ರೌಪದಿ : ಲೋಕದಲ್ಲಿ ಆ ವಬ್ಬ ಪುರುಷನು ದೂರದಲ್ಲಿದ್ದು ಸತಿಯಳ ಭಂಗ ಕರ್ಣದೊಳ್ ಕೇಳಿದರೆ ತಕ್ಷಣದೊಳ್ ಸತಿಗಾದ ಅವಮಾನ ನನಗೆಂದು ತಿಳಿದೂ ತನ್ನ ಮನದಲ್ಲಿ ಕಳವಳಪಡುತ್ತಾರೆ. ಹೀಗಿರುವಲ್ಲಿ ಯನಗೆ ಬಂದ ಕಷ್ಠದಲ್ಲಿ ನನ್ನ ಪತಿಗಳೂ ಕಣ್ಣಾರೆ ಕಂಡು ಧರ್ಮದ ಕಣ್ಣಿಯಲ್ಲಿ ಶಿಲ್ಕಿ ಬಣ್ಣ ಬಣ್ಣದ ಭಂಗಪಡುವದು ಕಂಡೂ ಬಣ್ಣಿಸದೆ ಯಿರುವ ಪುಣ್ಯಾತ್ಮರಿಗೆ ನೀವಾದರು ಪೇಳಿರೈಯ್ಯ ಸಭಾ ಜನರೆ.

ಪದ

ಯನ್ನನು ಶ್ರೀ ಭೀಮೇಶ ನೋಡಿದರೆ
ಪರಿಪೂರ್ಣದಿ ಕಾಯಿ ಸಭಾಜನರೆ ॥

ದ್ರೌಪದಿ : ಅಯ್ಯ ಸಭಾಜನರೆ, ಅಗಣಿತ ಗಣ್ಯನಾದ ಭೀಮೇಶನು ಕಣ್ಣಿನಲ್ಲಿ ಕಂಡು ಸುಮ್ಮನಿರುವದುಂಟೆ. ಹಾ ದೈವವೆ ಯೆಷ್ಠು ಮಾತ್ರಕ್ಕು ಸೈರಿಸೆಂದು ಈ ವ್ಯಾಳೆಯಲ್ಲಿ ಯನ್ನ ತಂಟೆಗೆ ಬಾರದ ಹಾಗೆ ನೀವಾದರು ಪೇಳಬಾರದೆ ಸಭಾಜನರೆ.

ದರುವು

ಪಾಂಚಾಲಿ ಮನದ ಚಿಂತೆ ಬಿಡು ಬಿಡೂ
ಜೂಜಮುಖದಿ ನಿನ್ನ ಸೋತಾ ಧರ್ಮಜನೀಗ
ತೆರದಿ ಸುಖಪಡುವೆನೀ ಬಾ ॥

ದುಶ್ಶಾಸನ : ಹೇ ಚಂಚಲಾಕ್ಷಿಯಳಾದ ಪಾಂಚಾಲಿಯೆ ಕೇಳು. ದಿಟ್ಟನೆ ಮುಟ್ಟಬ್ಯಾಡವೆಂದು ಪಟಪಟನೆ ಗಟ್ಟಿಯಾಗಿ ನುಡಿಯುವೆ. ಯಲ್ಲಾ ವೊಳಿತಾಯಿತು. ನಿನ್ನ ಮುಟ್ಟಿ ಆಳುವ ಭೀಮನ ಕಟುಗ್ರಕ್ಕೆ ಅಂಜುವನಲ್ಲಾ ಕಂಡ್ಯಾ  ಕುಂಭಿಣಿಪಟ್ಟದ ಕೌರವನಲ್ಲಿಗೆ ಬಂಧಾನವಿಲ್ಲದೆ ಬಂದದ್ದಾದರೆ ರಂಭೆಯಂದದಿ ಸುಖಪಡುವೆ. ಜಾಗ್ರತೆಯಿಂದ ಸಂಭ್ರಮಳಾಗೆ ಅಂಬುಜಾಕ್ಷಿಯಳೆ.

ಪದ

ಚಪಳೆಯೆ ಅತಿ  ಚಿಂತಿಪು
ದ್ಯಾತಕ್ಕೆ  ಕುರುಕುಲೇಂದ್ರ ಪತಿಯ ಮಂದಿರದಿ
ಸುಖಪಡುವೆ ॥

ದುಶ್ಶಾಸನ : ಹೇ ತರುಣಿಜಾಕ್ಷಿಯಳೆ  ನಿನ್ನ ಮನಸ್ಸಿನಲ್ಲಿದ್ದ ವ್ಯಾಕುಲವನ್ನು ಬಿಟ್ಟು ಸದಾ
ಭೋಗವೆಂದು ತಿಳಿದೂ ವುಪಚಾರವಂಗೈಯುವದಕ್ಕೆ ಅತಿಜಾಗ್ರತೆಯಿಂದ ತೆರಳುವಂಥವಳಾಗೆ ನಾರಿ ನೀನೆ ವೈಯ್ಯರಿ॥

ಪದ

ತರಳಾಂಬಕೀ ಪರಿ ನಡಿಸಾದಿರಲು ವರ
ಭೀಮೇಶನು ನಿನ್ನ ಮೆಚ್ಚಾ ಕೇಳ್ ॥

ದುಶ್ಶಾಸನ : ಹರಿಣಾಕ್ಷಿಯಾದ ದ್ರೌಪದಿಯೆ ಕೇಳೂ, ನಿನ್ನ ಗಂಡಂದಿರು ಮಹಾ ಶೌರ‌್ಯವಂತರೆಂದೂ ಯನ್ನಯ ಯೆದುರಿನಲ್ಲಿ ವುಚ್ಚರಿಸಬ್ಯಾಡಾ. ಸ್ವಚಿತ್ತನಾದ ಭೀಮೇಶನ ಮಾತಿಗೆ ಯೆಷ್ಠು ಮಾತ್ರಕ್ಕು ಅಂಜಲಾರನೆ ಸಖಿಯೆ ಶುಭ್ರಾಂಶುಮುಖಿಯೆ.

ದರುವು

ಧರ್ಮರಾಯ ನಿಮ್ಮ ಮನದ ಛಲವೂ
ಮಾನಭಂಗವಾಯಿತೆ ॥

ದ್ರೌಪದಿ : ಹೇ ಧರ್ಮ ಭೂಪಾಲನೆ, ಈ ದುರ್ಬಲನು ಯನ್ನ ಮಾನವನ್ನು ಸೂರೆಗೊಂಬುವದೂ ಕಣ್ಣಿನಲ್ಲಿ ನೋಡುವದೂ ಸುಲಭವೆ. ಈ ದುಶ್ಯಾಸನನ ಸ್ವಾಧೀನಗೊಳಿಸುವಂಥದ್ದು ವಿಹಿತವೆ ಧರ್ಮಜಾ.

ಪದ

ಭೀಮಪಾರ್ಥರೈವರಿದ್ದು ವ್ಯರ್ಥವಾಯಿತೇ
ಮಾನಭಂಗವಾಯಿತೆ ॥ಪಾರ್ಥವೇಂದ್ರ
ರೊಳಗೆ ಇನಿತು ಕೀರ್ತಿ ಫಲಿಸಿತೆ
ಹರುಷವಾಯಿತೆ ॥

ದ್ರೌಪದಿ : ಖಳನು ಪರಿಪರಿಯಿಂದ ಮಾನಭಂಗವನ್ನು ಮಾಳ್ಪುದನ್ನು ಕಡೆಗಣ್ಣಿನಿಂದ ನೋಡುವ ಹಾಗಾಯಿತು. ಏನೆಂದರೆ ಕ್ಷತ್ರಿಯವಂಶದೊಳ್ ದಶರಥೋದ್ಭವನ ಲಕ್ಷ್ಮಣನ ಅಗ್ರಜನ ಸತಿಯಳಾದ ಲಕ್ಷ್ಮಿಯಂ ಕದ್ದೊಯ್ಯಲು ಲಕ್ಷ ಯಕ್ಷ ಚಾಪನಾ ಪಿತನೂ  ಲಕ್ಷ್ಮೀ ಮಾನ ರಕ್ಷಣವಾಯಿತೆಂದು ಆ ಕ್ಷಣವೆ ಲಕ್ಷ್ಮೀಪತಿಯ ರಾಕ್ಷಸೇಂದ್ರನ ಶಿಕ್ಷಿಸಿ ಲಕ್ಷ್ಮಿಯ ಮನೋವ್ಯಸನ ಬಿಡಿಸುವಂಥವನಾದರೂ ಈ ಕ್ಷಣದ ದುಷ್ಠ ಕಳ್ಳನ ಶಿಕ್ಷಿಸಿ ಯನ್ನ ಅಪೇಕ್ಷೆಯನ್ನು ತೀರಿಸುವಂಥವರಾಗಿರೈ ಸಹಾಸ್ತ್ರವಂತರೆ.

ಪದ

ಯೇಸುವಿಧದಿ ಕಳ್ಳರಿಗಭಿಲಾಷೆ
ತೋರಿತೆ ಸುಖವಿಲಾಸ ತೋರಿತೆ
ಶ್ರೀಭೀಮೇಶನ ದಯಾನುಕುಲಸಿತೆ ಆನಂದವಾಯಿತೆ ॥

ದ್ರೌಪದಿ : ಹೇ ಧರ್ಮಜಾ, ಯಿದರ ಮರ್ಮವೆಲ್ಲಾ ಕೇಳಿ ಹೇಳಿದಾಗ್ಯು ನಿನ್ನ ಮನೋ ಆನಂದಕ್ಕೆ ಬಲು ಬ್ಯಾಸರ ಬಂದರೆ ವಾಸವಾಸುತ ಭೀಮೇಶನ ಈ ಸಮಯದೊಳ್ ಕರೆಸುವಂಥವನಾಗೊ. ಕಾಂತಾ ಇನ್ಯಾರಿಗೆ ತಾನೆ ಮೊರೆ ಬೀಳಲೈ ರಮಣಾ, ಬಂಧನ ಬಿಡಿಸುವದು ಕ್ಷತ್ರಿಯರ ಧರ್ಮವಲ್ಲವೇನೋ ಕಾಂತಾ ಸದ್ಗುಣವಂತಾ.

ದರುವು

ಬರಿದೆ ದುಃಖಿಸುವರೇ ಕಾಂತೆ  ವಿಧಿ
ಬರೆದ ಬರಹವೂ ತಪ್ಪಾದಂತೆ ॥
ಹಿಂದೆ ಮಾಡಿದ ಪಾಪಾದಿಂದಾ  ಕುಂದು
ಸಂಭವಿಸಿತು ಜೂಜಿನನೆವದಿಂದಾ ॥

ಧರ್ಮರಾಯ : ಹೇ ಕಾಂತೆ, ಯಾದವಕುಲ ಶಿರೋರನ್ನೆಯಾದ ಪಾಂಚಾಲಿಯೆ ಕೇಳು, ನೀನು ಬಳಲುವದು ಯಾತಕ್ಕೆ, ಮದಗಜಗಮನೆ ದಂತಿರಕ್ಷಕನಾದ ಶ್ರೀಕಾಂತನೂ ತನಗೆ ಅತ್ಯಂತ ಪ್ರೀತಿಯುಳ್ಳ ಕಂತುಪಿತನಾದ ಮನ್ಮಥನೂ ಪುರಹರನಾದ ಶಂಕರಮೂರ್ತಿಯ ತಪಸ್ಸಿಗೆ ಸಮರ್ಪಣೆಯನ್ನು ಮಾಡಿದಂಥವನಾದರೂ ವಿಧಿ ಬರೆದಂಥ ಬರಹವನ್ನು ಮೀರುವರ‌್ಯಾರು, ಈ ಪರಿಯನ್ನು
ನೀ ನರಿಯದೆ ನಿನ್ನ ಅಂತರಂಗದಲ್ಲಿ ಸಂತಾಪದಿಂದ ಚಿಂತೆಯನ್ನು ಮಾಡುವುದಕ್ಕೆ ಕಾರಣವೇನೆ ದಂತಿಗಮನೆ. ಇದೂ ಅಲ್ಲದೆ ಪೂರ‌್ವದಲ್ಲಿ ಮಾಡಿದ ಪಾಪವೂ  ಈ ಕಾಲದಲ್ಲಿ ನಮಗೆ ಬಂದು ಸಂಭವಿಸಿತು. ಆದ ಪ್ರಯುಕ್ತ ಜೂಜನ್ನಾಡಿ ಸೋತೆನೂ, ಈ ವ್ಯಾಳೆಯಲ್ಲಿ ಅವನ ಅಧೀನರಾಗಿ ಇರಬೇಕೆ ಕಾಂತೆ ಸದ್ಗುಣವಂತೆ॥

ಪದ

ಅಸ್ಥಿರವೆಂದಿಗೂ ಕಾಯ  ಧರ್ಮ ಕೀರ್ತಿ
ಗಳೆಂದೂ  ಸ್ಥಿರವೆಂಬುದರಿಯೆ  ಅರ್ತಿ
ಗೊಂಬರೆ ನಾನಾ ಪರಿಯ  ಜಗಕರ್ತ
ಭೀಮೇಶನು ಮುನಿದಾನೀ ಸಮಯಾ ॥

ಧರ್ಮರಾಯ : ಹೇ ನಾರಿ, ಹಿಂದೆ ನಡೆದ ವೃತ್ತಾಂತವಂನ್ನು ತಿಳಿಯದೆ ಇಷ್ಟು ಪಂಥದಿಂದ ದುಃಖಿಸುವದ್ಯಾಕೆ ಕಾಂತೆ ಸದ್ಗುಣವಂತೆ.

ದ್ರೌಪದಿ : ಹೇ ಕಾಂತ ನಾನು ಹ್ಯಾಗೆ ತಾಳಲಿ  ಇನ್ಯಾರಿಗೆ ಮೊರೆಯಿಡಲೈಯ್ಯ ಕಾಂತಾ ಸದ್ಗುಣವಂತಾ.

ಧರ್ಮರಾಯ : ಹ್ಯಾಗಾದರೂ ವಂದುಕ್ಷಣ ಸೈರಿಸೆ ಕಾಂತೆ ಸದ್ಗುಣವಂತೆ.

ದುಶ್ಯಾಸನ : ಯಲೆ ಮಡದಿಯಳೆ, ಪರಿಪರಿ ವಿಧದಿಂದ ಬಾರೆಂದು ಕರೆದರೆ ದುಃಖಿಸುತ್ತಾ ನಿನ್ನೊಡೆಯನಾದ ಧರ್ಮಜನನ್ನು ಯನ್ನ ಸೆರೆಯಂನ್ನು ಬಿಡಿಸೆಂದು ಬೇಡಿಕೊಳ್ಳುತ್ತಾ ಇದ್ದಿ. ಹಿಂದಿನ ದಿನದಲ್ಲಿ ನಿನ್ನನ್ನು ಸೋತು ಕೂತುಕೊಂಡಿರುವ ಈ ನೀಚ ಧರ್ಮಜನು ನಿನ್ನ ಸೆರೆ ಬಿಡಿಸಬಲ್ಲನೇನೆ ಕುಡಿಕೆಗಂಗಳೆ, ತಡಮಾಡದೆ ಕಡುಸಡಗರದಿಂದ ಪೊಡವಿಪತಿಯಾದ ಯಮ್ಮಣ್ಣನ ತೊಡೆಯಮ್ಯಾಲೆ ಕುಳಿತು ಮುಡಿಯನ್ಯಾವರಿಸಿಕೊಳ್ಳುವದಕ್ಕೆ ಕಡುಬೇಗದಿಂದ ತೆರಳೆ ಬಡುನಡುವಿನ ಬಾಲೆ.

ದ್ರೌಪದಿ : ಇಂಥ ದುಡುಕು ಮಾತುಗಳು ತರವಲ್ಲವೊ ಭ್ರಷ್ಠಾ.

ದುಶ್ಯಾಸನ : ಯಲೆ ದೃಪದಾತ್ಮಜೆಯಳಾದ ಪಾಂಚಾಲಿಯೇ ಕೇಳು, ಅಶನಕ್ಕೆ ಮಾರ್ಗವಿಲ್ಲದೆ ತನ್ನ ಕುಶಲ ಪರಾಕ್ರಮವನ್ನು ನಡೆಸಿಕೊಂಡು ಭೂಸುರರ ಪುರದಲ್ಲಿ ನಾಚಿಕೆಯಿಲ್ಲದೆ ಯಾಚಕವನ್ನು ಮಾಡಿ ಹೊಟ್ಟೆ ಹೊರೆದುಕೊಂಡಿರುವಂಥ ಈ ನೀಚ ಧರ್ಮಜನೂ ನಿನ್ನ ಬಿಡಿಸಬಲ್ಲನೇನೆ ಹೆಣ್ಣೆ, ಬಲುಪರಾಕ್ರಮನಾದ ನಮ್ಮಣ್ಣನ ಸನ್ನಿಧಾನಕ್ಕೆ ತೆರಳುವಂಥವಳಾಗೆ ನಾರಿ ಮದನ ಕಠಾರಿ.

ದರುವು

ಯಾತಕೆ ಸುಮ್ಮಾನಿರುವಿರಿ ಪತಿಗಳಿರಾ
ದುಶ್ಯಾಸನಾ ಭೀತಿಗೆ ಭಯಪಟ್ಟಿರಾ  ॥
ಸೋತ ಧರ್ಮಜನ ಮಾತಿನ ಮೇಲಿರು
ವಿರಿ ॥ಧರ್ಮನಂದನ ನಿಮ್ಮ ಧರ್ಮವೆ
ಲ್ಲೋಯಿತು ॥ಧರ್ಮಕ್ಕೆ ಗುರಿಯಾಗಿ
ಬಾಯಿ ಬಿಡುವಿರಿ ॥ವೃಕ್ಷದ ಮೇಲಿ
ರುವ ಪಕ್ಷಿಗಳಂದದೀ ॥ಯೀ ಕ್ಷಿತಿಯೊಳು
ಬಾಯಿಬಿಡುವಿರಿ ಪತಿಗಳಿರಾ ॥

ದ್ರೌಪದಿ : ಅಯ್ಯೋ ಪತಿಗಳಿರಾ, ಈ ಶುನಕ ದುಶ್ಯಾಸನನ ಘಾತಿಗೆ ಭಯಪಟ್ಟು ಸುಮ್ಮನೆ ಯಿರುವರೇನೋ ಕಾಂತಾ, ಈ ಸೃಷ್ಠಿಯೊಳಗೆ ಒಬ್ಬ ಪತಿಯಿಂದ ಸುಖಪಡುವರು ವಬ್ಬರಲ್ಲದೆ, ಯೈದು ಮಂದಿ ಪತಿಗಳು ಇದ್ದು ಯನ್ನೊಬ್ಬ ಸತಿಯ ಮಾನ ಕಾಯುವದಕ್ಕೆ ಆಗಲಿಲ್ಲವೆ ಯಮತನಯಾ ವಾಯುತನಯಾ ॥

ದುಶ್ಶಾಸನ : ಯಲೆ ಪಾಂಚಾಲಿ, ಪರಿಪರಿ ವಿಧದಿಂದ ನಮ್ಮಣ್ಣನ ಸನ್ನಿಧಿಗೆ ಬಾರೆಂದು ಕರೆದರೆ ಬರಲಿಕ್ಕಿಲ್ಲಾ. ಲೋಕೋದ್ಭಂಡರಾಗಿ ಕುಳಿತಿರುವ ನಿನ್ನ ಗಂಡರ ಮುಂದೆ ನಿನ್ನ ಮಾನಭಂಗವನ್ನು ಮಾಡದೆ ಬಿಡೆನೆ ಹೆಣ್ಣೆ ॥

ದರುವು

ಯೇನೊ ದುರುಳ ಬಲುಹೀನ ವಚನದಿಂದ
ಮಾನ ಕಳಿಯಬ್ಯಾಡೊ  ನೋಡೂ ॥

ದ್ರೌಪದಿ : ಯಲಾ ದುಷ್ಠ ಮನುಜನೆ, ಯಿಂಥ ಕೆಟ್ಟ ವಚನದಿಂದ ದುಷ್ಠ ಮಾತುಗಳು ಆಡುವುದು ವಿಹಿತವಲ್ಲವೊ. ಭ್ರಷ್ಠ ಶ್ರೇಷ್ಠಾದ್ಯಕ್ಷನಾದ ಯನ್ನ ಪತಿ ಕಂಡರೆ ನಿನ್ನ ಶಿರವನ್ನು ನಷ್ಠಗೊಳಿಸಿ ಬಿಡುವನು ನನ್ನ ಗೊಡವೆ ಬ್ಯಾಡವೊ ದುರುಳ.

ದರುವು

ಮಡದಿ ಕೇಳೂ ಬಿಡುನುಡಿಗಳ ನುಡಿದರೆ
ಮುಡಿ ಪಿಡಿದೆಳೆಯುವೆನೆ  ನಾರಿ ॥

ದುಶ್ಶಾಸನ : ಹೇ ಜಲಜ ನೇತ್ರೆ ಬಿಡು ತವಕದಿ  ಬಿರು ನುಡಿಗಳು ನುಡಿದರೆ ನಿನ್ನ ಜಡೆ ಮುಡಿಯನ್ನು ಯಿಡಿದೆಳೆಯುವೆನೆ ನಾರಿ ಪ್ರೀತಿಯಿಂದ, ನಿನ್ನ ಪತಿಗಳೂ ನಿನ್ನ ಬಿಡಿಸಬಲ್ಲರೇನೆ ಕಾಂತೆ ॥

ದರುವು

ತಡಿಯದೆ ಯನ್ನ ಬಲು ದುಡುಕು ವಚನ
ದಿಂದ  ದುರುಳ ನುಡಿಯದಿರೊ ಸಾರೊ ॥

ದ್ರೌಪದಿ : ನಿನ್ನ ಬೀಳು ಮಾತುಗಳಿಂದ ಜಾಳು ಮಾತುಗಳಾಡಿ ಕೆಡಬ್ಯಾಡ. ಯನ್ನ ಆಳಿದವರು ಕಂಡರೆ ಸುಮ್ಮನೆ ಇರುವರೆ  ಕಲಕಿ ಗೀರ‌್ವಾಣಿಯ ಗೊಡವೆಗೆ ಬಂದನೆಂದು ಅವರ ಕಣದೋರ್ಳ್ ಕೇಳಿದರೆ ಖೂಳಾ ನಿನ್ನಯ ಪ್ರಾಣ ವುಳಿಯುವದಿಲ್ಲವೆಂದೂ  ಮನದೊಳ್ ತಿಳಿಯೊ ಭ್ರಷ್ಠಾ ಪರಮ ಪಾಪಿಷ್ಠ ॥

ದರುವು

ಕೆಟ್ಟ ವಚನದಿಂದ ಬಾರದಿದ್ದರೆ ಮುಟ್ಟಿ
ಯಳೆಯುವೆನೇ ಜಾಣೆ ॥

ದುಶ್ಶಾಸನ : ಯಲೆ ಹೆಣ್ಣೆ, ನಿನ್ನ ಯಾವ ವಿಧದಿಂದಲಾದರು ಮಾನಭಂಗವಂ ಗೈದೂ ಯಮ್ಮಣ್ಣನ ನೇತ್ರಕ್ಕೆ ಹಬ್ಬವಂ ಮಾಡಿ ತೃಪ್ತಿ ಹೊಂದುವಂತೆ ಮಾಡುತ್ತೇನೆ ಹೆಣ್ಣೆ  ನಿನ್ನ ಗಂಡರು ಲೋಕೋದ್ಭವರ ಮುಂದೆ ಯನ್ನ ಚಂಡ ಪರಾಕ್ರಮವನ್ನು ತೋರಿಸಿ ನಿನ್ನ ಮಾನಭಂಗ ಮಾಡುತ್ತೇನೆ ಹೆಣ್ಣೆ ಗಜನಿಂಬೆ ಹಣ್ಣೆ ॥