ದರುವು

ಜಡಜಾಂಬಕಿಯಾ ಗೊಡವೆ ಬರಲು ॥
ಶ್ರೀವಡೆಯ ಮೆಚ್ಚನಿನ್ನ  ಮುನ್ನ ॥

ದ್ರೌಪದಿ : ಯಲಾ ಜಡಮತಿ ಭ್ರಷ್ಟನೆ, ಅಡಿಗಡಿಗೆ ತಡಬಿಡದೆ ಜಡಜಾಂಬಕಿಯ ಗೊಡವೆಗೆ ಬರಲು ಪೊಡವಿಯೊಳ್ ಕುಡುತನಿಯ ಭೀಮೇಶನೂ ಮಾಯದೋಳ್ ಕಂಡರೆ ನಿನ್ನ ಕಡಿದು ಬಿಡುವನೋ ಭ್ರಷ್ಟಾ ಪರಮ ಪಾಪಿಷ್ಠಾ.

ದರುವು

ದಿಟ್ಟ ನಮ್ಮ ಕುರುದಿಟ್ಟನ ಬಳಿಗೆ
ತಟ್ಟನೆ ನೀ ಸಾರೆ  ನೀರೆ ॥

ದುಶ್ಶಾಸನ : ಹೇ ಪಂಚಮುಖದ ಬಾಲೆ, ಹೆಚ್ಚಿದ ಗಮನಕ್ಕೆ ಬೆಲ್ಲದ ಅಚ್ಚಿನಂದದಿ ವುಪಚರಿಸುತ್ತೀಯಾ ಯೆಷ್ಟು ಮಾತ್ರಕ್ಕು ಬಿಡೆನೆ ಹೆಣ್ಣೆ ಗಜನಿಂಬೆ ಹಣ್ಣೆ.

ದುಶ್ಯಾಸನ : ಯಲಾ ಭೀಮನೆ ಕೇಳು, ನಿನ್ನ ಹೆಂಡತಿಗೆ ನಾನು ಮಾಡುವ ಮಾನಭಂಗವನ್ನು ಕಣ್ಣಿನಿಂದಾ ನೋಡಿ ಸುಮ್ಮನೆ ಕೂತುಕೊಂಡು ಇದ್ದೀಯೇನೋ ಭ್ರಷ್ಟ ಪರಮ ಪಾಪಿಷ್ಠಾ.

ಭೀಮ : ಎಲೊ ಕ್ಷಣ ಕಾಣದ ಪರಿಯತ್ವದಿ ತ್ರಾಣಗಣದಿಂದ ಗೋಣು ಮುರಿಯುವುದಕ್ಕೆ ದ್ರಿಷ್ಠಿಯಿಂದಲೆ ಶಿಕ್ಷಿಸಿ ದುಷ್ಠ ಮನುಷ್ಯನೆಂಬ ಪ್ರಭಾವಕ್ಕೆ ದ್ರಿಷ್ಠಿಸಿದಾಗ ಜನಗಳಿಂದೊಪ್ಪುವಾ ನಿನ್ನಪ್ಪಿ ನೆಲಕ್ಕೆ ತಪ್ಪನೆ ಅತಿ ತಪ್ಪದೆ ಕಾಲುಂಗುಷ್ಠದಿಂದ ಪಂಚತ್ವವಂ ನೋಯಿಸಿ ಜನರು ಚಪ್ಪಾಳೆಯನ್ನಿಟ್ಟು ವಪ್ಪದಿಂದಾ ವ್ಯಾಪ್ತನಾದರೆ ಪಂಚ ಬ್ಯಾಸರದಿಂದ ಬಾಯಿ ವಡದೂ ನಿನ್ನ ಹಲ್ಲುಗಳನ್ನು ನುಚ್ಚು ನುಚ್ಚು ಆಗುವ ಹಾಗೆ, ಯೀ ಗಧಾದಂಡದಿಂದ ಖಂಡ್ರಿಸಿ ಬಿಡುವೆ ಆಚೆಗೆ ಹೋಗದಿರೊ ಹುಚ್ಚು ಭ್ರಷ್ಠಾ ಪರಮ ಪಾಪಿಷ್ಠಾ.

ದರುವು

ನೋಡೈಯ್ಯ ಮಾನಧಣಿಯಾ
ವಾಯುತನಯಾ ಕೇಡಿಗನು ದುಶ್ಶಾಸನ
ಮಾಡುವ ದುರುಳತೆಯಾ ॥ರಿಪುಣಕಳ್ಳರ
ಕೈಯ್ಯ  ಬಾಧಿಸುವ ಹರಿಯಾ
ವಾಯುತನಯಾ ॥

ದ್ರೌಪದಿ : ಹೇ ಕಾಂತಾ ಸದ್ಗುಣವಂತಾ, ಈ ಕೇಡಿಗನಾದ ದುಶ್ಯಾಸನನು ಯನ್ನಿಷ್ಠು ಕಷ್ಠಪಡಿಸುವದೂ ಕೇಳಿದರೆ ಯನಗೆ ದಿಟ್ಟತರವಾಗಿ ತೋರುವುದಿಲ್ಲಾ. ಇಂಥ ಮಾತುಗಳೂ ಆಡುವದೂ ಸರ‌್ವಥಾ ತರವಲ್ಲವೊ ಕಾಂತಾ ಸದ್ಗುಣವಂತ.

ಪದ

ಪತಿಯಾ ಮೂಲಕದಿ ಕುರುಪತಿಯಾ
ಕೈವಶಳಾಗಿ ಅತಿ ದುರಾತ್ಮಕನೂ  ಮಾ
ಡುವ ದುರುಳತೆಯಾ ವಾಯುತನಯಾ ॥

ದ್ರೌಪದಿ : ಅಯ್ಯ ಪತಿಗಳಿರಾ, ಯನ್ನ ಯಿಷ್ಠು ಬಾಧೆಪಡಿಸುವಂಥದ್ದು ಕಣ್ಣಿನಿಂದಾ ನೋಡಿ ಕಿವಿಯಿಂದಾ ಕೇಳಿ ಸುಮ್ಮನೆ ಕುಳಿತಿರುವದು ಇದು ಧರ್ಮವೆ  ಇದು ಸತ್ಯವೆ  ಪತಿಗಳಿರಾ ॥

ಭೀಮ : ಹೇ ಕಾಂತೆ, ಮೊದಲು ಹೇಳಿದ ಮಾತಿನಂತೆ ಶಿಷ್ಟ ರಕ್ಷ ಮೋಕ್ಷ ರಕ್ಷಕ ಕಂಜಾಯತಾಕ್ಷನಾದ ಲಕ್ಷಗುಣ ಸಂಪನ್ನನಾದ ಪಾಂಡವರ ರಕ್ಷಕನಾದ ಶ್ರೀ ಕೃಷ್ಣಮೂರ್ತಿಯ ಪಾದದಾಣೆಯು, ಯಿದೂ ಅಲ್ಲದೆ ಯಮ್ಮಣ್ಣನಾದ ಧರ್ಮರಾಯನ ಪಾದದಾಣೆ  ಹೇ ಕಾಂತೆ  ನಮ್ಮ ತಾಯಿಯಾದ ಕುಂತಿದೇವಿಯ ಪಾದದಾಣೆಯು ಹಿಡಿದ ಪಂಥವನ್ನು ಅತಿ ಸಡಗರದಿಂದ ನೆರವೇರಿಸುತ್ತೇನೆ. ಇಗೋ ನೋಡು ಯನ್ನ ಕರಾಗ್ರದಲ್ಲಿ ಇರುವ ಗಧಾದಂಡವೇ ಸಾಕ್ಷಿಯೆಂದು ತಿಳಿಯೇ ಕಾಂತೆ  ಸದ್ಗುಣವಂತೆ.

ದ್ರೌಪದಿ : ಹಾಗಾದರೆ ಯನಗೆ ಭಾಷೆಯನ್ನು ಕೊಡುವಂಥವನಾಗೈ ಕಾಂತಾ ಸದ್ಗುಣವಂತ.

ಭೀಮ : ಯಲೆ ಕಾಂತೆ, ಯನ್ನ ಕರಾಗ್ರದಲ್ಲಿ ಯಿರುವ ಯೀ ಗಧಾದಂಡವೇ ಭಾಷೆ ಯಂದು ತಿಳಿಯೆ ನೀತಿಗುಣ ಗಂಭೀರೆ॥

ಭೀಮ : ಯಲೋ ದುರುಳನಾದ ದುಶ್ಯಾಸನನೆ ಕೇಳು  ನಿಮ್ಮಣ್ಣನಾದ ಕೌರವನ ಮಾತುಗಳನ್ನು ಕೇಳಿ ನಮ್ಮ ಪುಣ್ಯಾಂಗನೆಯಾದ ದ್ರೌಪದಿಯನ್ನು ಮಾನಭಂಗವನ್ನು ಮಾಡುತ್ತೀಯ. ನಮ್ಮಣ್ಣನಾದ  ಧರ್ಮಜನು ಅಪ್ಪಣೆಯನ್ನು ಕೊಟ್ಟಿದ್ದೆ ಸಹಜವಾದರೆ ನರಕುರಿಗಳು ವುಟ್ಟಿದಂತೆ ನಿಮ್ಮ ನೂರೊಂದು ಮಂದಿ ಚಿಣ್ಣರನ್ನು ಯನ್ನ ಕರಾಗ್ರದಲ್ಲಿ ತಕತಕನೆ ಪಕಪಕನೆ ಕುಣಿಯುವ ಎಪ್ಪತ್ತೇಳೂವರೆ ಸಾವಿರ ಮಣುವಿನ ಗದಾದಂಡದಿಂದ ಹಿಂದಕ್ಕೆ ನರಸಿಂಹ ಸ್ವಾಮಿ, ದುರುಳನಾದ ಹಿರಣ್ಯಕಶ್ಯಪನನ್ನು ಸೀಳಿದ ರೀತಿಯಾಗಿ ನಿನ್ನ ದೊಡ್ಡ ಹೊಟ್ಟೆಯನ್ನು ಪಟ್ಟನೆ ಸೀಳುತ್ತೇನೆ. ಚನ್ನಾಗಿ ತಿಳಿಯೋ ಭಂಡಾ ನಿಮ್ಮ ನೂರೊಂದು ಮಂದಿಗೆ ನಾನೇ ಮಿಂಡಾ ॥

ದುಶ್ಯಾಸನ : ಯಲಾ ಕುಳ್ಳನೆನಿಸುವ ಕೋಣೋಪನೆ ಕೇಳೊ. ಹಿಂದಕ್ಕೆ ಬಕಾಸುರನಿಗೆಂದು ಕಳುಹಿಸಿದ ಬಂಡಿ ಅನ್ನವನ್ನು ತಿಂದು ಕುಂಡಿಗಳನ್ನು ಬೆಳೆಸಿಕೊಂಡಿರುವ ಖಂಡಗರ್ವ ಎಷ್ಟೆಂದು ಹೇಳಲಿ. ಈ ಪೊಡವಿಯ ಮ್ಯಾಲೆ ಯಿರುವ ಸಮಸ್ತ ಮಂಡಲಾಧಿಪರು ನಿನ್ನನ್ನು ಕಂಡು ಭಂಡನೆಂದು ನುಡಿಯುವರೆಂಬ ನಾಚಿಕೆಯು ಲೇಶ ಮಾತ್ರವೂ ಇಲ್ಲದೆ, ನಿನ್ನ ನಾಲಿಗೆಯಿಂದ ನಾನೇ ವುದ್ದಂಡನೆಂದೂ ಆಡಬ್ಯಾಡ. ಈ ಗಂಡುಗಲಿಗಳೂ ಯಲ್ಲರು ನೋಡಿ ಯನ್ನನ್ನು ಕೊಂಡಾಡುವಂತೆ ನಿನ್ನ ಮಂಡೆಯನ್ನು ತುಂಡು ತುಂಡು ಮಾಡುತ್ತೇನೆ. ನಿನ್ನ ದೊಡ್ಡ ಹೊಟ್ಟೆಯನ್ನು ಸೀಳುವೆನೂ ಕಂಡ್ಯಾ. ಹುಚ್ಚು ನಾಯಿಯಂದದಿ ಹೆಚ್ಚು ಮಾತನಾಡದೆ ದೂರ ಸಾರುವಂಥವನಾಗೋ ಹುಚ್ಚು ಭ್ರಷ್ಟ. ಅಡಿಗಡಿಗೆ ತಡಬಿಡದೆ ನಿನ್ನ ಹೆಂಡತಿಯಾದ ದ್ರೌಪದಿಯನ್ನು ಪೊಡವಿಪತಿಯಾದ ಕೌರವನ ಸನ್ನಿಧಾನಕ್ಕೆ ಕಡುಸಡಗರದಿಂದ ಯಳೆಯುತ್ತೇನೊ ಭಂಡಾ ನಿನಗೆ ನಾನೇ ಮಿಂಡಾ.

ಭೀಮ : ಭಲೆ ತಮ್ಮನಾದ ಅರ್ಜುನನೆ ಕೇಳು. ಹಿಂಡುಗಲಿಗಳಿಗೆ ಮಿಂಡಾ ಮೂರುಲೋಕಕ್ಕೆ ಗಂಡನೆಂದು ಬಿರುದಂ ಕೊಂಡಾಡಿಸಿಕೊಳ್ಳುವಂಥ ಗಾಂಡೀವಿಯೆ ಕೇಳು. ಪೂರ್ವದಲ್ಲಿ ಮಂಡಲಾಧಿಪರ ಮಂಡಲವೆಲ್ಲಾ ಮಂಡೆ ತಗ್ಗಿಸುವಂತೆ ಹರನ ಕೋದಂಡಮಂ ಮುರಿದು ಮತ್ಸ್ಯಯಂತ್ರವಂನ್ನು ಭೇದಿಸಿ ಆ ದೃಪದನಂ ಮೆಚ್ಚಿಸಿ ದ್ರೌಪದಿಯಂ ತಂದು ಪರಮ ಹರುಷವಂ ಪಡೆಯುವಂಥವನಾಗಿ ಈಗಿನ ವ್ಯಾಳೆಯಲ್ಲಿ ಯೀ ಲಂಡನಾದ ಭಂಡ ದುಶ್ಯಾಸನನು ಭಂಡು ಮಾಡುವಂಥ ಸಮಯದಲ್ಲಿ ಮಂಡೆ ತಗ್ಗಿಸಿಕೊಂಡಿರುವುದು ನಿನಗೆ ನ್ಯಾಯವೆ. ಯೀಕೆಯನ್ನು ತರುವಾಗ ಯಿದ್ದ ಪೌರುಷ ಈಗ ದಾವಲ್ಲಿ ಹೋಯಿತೊ ಪಾರ್ಥಾ ನೀ ಬದುಕಿದ್ದೆ ವ್ಯರ್ಥ.

ದುಶ್ಯಾಸನ : ಯಲಾ ಭಂಡ ಭೀಮನೆ ಕೇಳೂ, ನಿನ್ನ ಸತಿಯಳಾದ ದ್ರೌಪದಿಯನ್ನು ಬಿಡಿಸಿಕೊಂಬುವ ಸಾಮರ್ಥ್ಯ ಸಾಲದೆ ಈ ಸಭೆಯಲ್ಲಿ ನಿಂತು ನಾನೇ ಮಹಾ ಪರಾಕ್ರಮಿಶಾಲಿಯೆಂದೂ ಬೊಗಳಿಕೊಳ್ಳುತ್ತಿ. ಈ ಜಗದ್ಬಂಡನಾದ ಗಾಂಢೀವಿಗೆ ಮೊರೆಯಿಟ್ಟರೆ ನಿನ್ನ ಹೆಂಡತಿ ಸೆರೆ ಬಿಡಿಸಬಲ್ಲನೇನೊ ಹೇಡಿ ಮುಂಡೇದೆ.

ಭೀಮ : ಯಲಾ ಭಂಡನಾದ ದುಶ್ಶಾಸನನೆ ಕೇಳೂ, ಯನ್ನನ್ನು ಭಂಡನೆಂದು ನುಡಿದೆ. ನಾನು ಭಂಡನೋ ನೀನು ಭಂಡನೋ ಯೆಂಬುವದೂ ಮಾತಿನ ಪ್ರಸಂಗದಲ್ಲಿಯೆ ತಿಳಿಯುತ್ತದೆ. ಹೇ ಭ್ರಷ್ಠ ದುಶ್ಯಾಸನ ಕರುಳುಗಳನ್ನು ಈಡಾಡಿ ಮುದ್ದೆಗಳನ್ನು ಹದ್ದು ಕಾಗೆಗಳಿಗೆ ನೀಡಿ ನಿನ್ನ ವಧಿಸುವೆ. ಭ್ರಷ್ಠನೆ ಕೇಳು ಶೌರ‌್ಯವನು ತಾಳು.

ದುಶ್ಯಾಸನ : ಯಲಾ ಭ್ರಷ್ಠನಾದ ಅರ್ಜುನನೆ ಕೇಳೂ ಯನ್ನ ದರ್ಜಿಯೆಂಬ ಬೆರಳಿನಿಂದ ನಿನ್ನನ್ನು ಸಂಹರಿಸಿ ನಿನ್ನ ದೊಡ್ಡ ತಲೆಯನ್ನು ತಪ್ಪನೆ ಬೀಳ್ಕೆಡಹಿ ಯೀ ಪಟ್ಟಣದ ಬಾಗಿಲಿಗೆ ಮಕರ ತೋರಣವ ಕಟ್ಟುವೆನೂ ಯುದ್ಧಕ್ಕೆ ನಿಲ್ಲೋ ಶುದ್ದ ಭ್ರಷ್ಟನೆ.

ಅರ್ಜುನ : ಯಲೋ ನರಾಧಮ ಹೇಡಿಗಳ ಧಾಮ. ಶತ್ರುಗಳ ಕೈಕಾಲು ದಂಟುಗಳ ಕಡಿಕಡಿದು ರಕ್ತವನು ಕಾರಿಸುತ ಪ್ರಾಣವನು ಹಾರಿಸುವೆ. ಕಣ್ಣುಗಳ ಕೀಳಿಸುವೆ ಬಂದವರ ಸೋಲಿಸುವೆ. ಮರಿಯಾದೆ ನೀನರಿಯದೆಲೆ ತುಂಟತನದೊಳಗೆ ರಣದೊಳಗೆ ನೀ ಬಂದೂ ಭಂಟತನ ತೋರಿದರೆ ಬೊಬ್ಬಿಡುತ ಬೇಗ, ನಿನ್ನನ್ನು ಕೆಡವುತ್ತ ಗಂಟಲನು ಕೊರೆಕೊರೆದೂ ಮಾಂಸಗಳ ತರಿತರಿದೂ ನಿನಗಿನ್ನು ಜಂಟಿಯರು ದಾರಿರಲೂ ಜಪಿಸುತ್ತಲವರಿಗೆ ಕಂಟಕನು ನಾನಾಗಿ ನಿಲ್ಲದೆ ಕೊಲ್ಲುವೆನೊ ಭ್ರಷ್ಠಾ ಪರಮ ಪಾಪಿಷ್ಠಾ.

ಕೌರವ : ಯಲಾ ಅರ್ಜುನಾ ಅತಿ ದುರ್ಜನಾ, ಅತಿ ಹಿತದಿ ಸತಿಯಳನ್ನು ಬಿಡಿಸಿಕೊಂಬುವ ಸಾಮರ್ಥ್ಯ ನಿನಗಿಲ್ಲದೆ ನಿಮ್ಮ ಸತಿಯಳಾದ ದ್ರೌಪದಿಯು ಪರಮಪತಿವ್ರತೆಯೆಂದು ವುರ್ಗೊಳಿಸಿ ನುಡಿಯತ್ತೀಯಾ. ವಬ್ಬರಲ್ಲದೆ ಐದು ಮಂದಿ ಪತಿಗಳೂ ನೀವಿದ್ದ ಕಾರಣ ಧಾವ ವಿಧದಿಂದ ಪತಿವ್ರತೆ ಯನಿಸಿಕೊಂಬುವಳು, ಆ ಮಾತು ಹಾಗಿರಲಿ ಸತ್ಯವ್ರತಕ್ಕೆ ಸಿಲ್ಕಿರುವ ನಿಮ್ಮಣ್ಣನಾದ ಧರ್ಮಜನೂ ಭೂಮಿ ಗ್ರಾಮವು ಸಹಿತ ನಿಮ್ಮನ್ನು ಸೋತು ಯಿರುವದು ಸರಿಯಷ್ಟೆ. ಯೀಗಲಾದರು ಆತನ ಬಾಯಿಂದ ತ್ರಿಭುವನದ ರಾಜರ ಮುಂದೆ ನಾ ಸೋತಿದ್ದು ಸಟೆಯೆಂದು ನುಡಿದು ಯನಗೆ ಶರಣಾಗತನಾದರೆ ನಿಮ್ಮ ಯೈವರನ್ನು ಬಿಡುವೆನೂ, ನಿಮ್ಮ ಸತಿಯಳಾದ ದ್ರೌಪದಿಯನ್ನು ಬಿಡುವೆನೂ, ಶೀಘ್ರದಿಂದ ಈ ಮಾತು ನಿಮ್ಮ ಅಗ್ರಜನಿಗೆ ಹೇಳೊ ಮೂರ್ಖ ನನಗ್ಯಾತಕ್ಕೆ ತರ್ಕ.

ಅರ್ಜುನ : ಯಲಾ ಕುನ್ನಿ ಕೌರವನೆ ಕೇಳೂ, ಅನೂನ ಭುಜಬಲ ಗರಿಷ್ಠ ನಿಷ್ಠ ಶ್ರೇಷ್ಠನಾಗಿ ಸೃಷ್ಠಿ ಪಾಲಕರ ಅಷ್ಟ ಸಭೆಯಲ್ಲಿ ಸಮ ಪಟ್ಟಭದ್ರ ಬಲ್‌ದಿಟ್ಟ ಬಲ್‌ಗಟ್ಟಿಗನೆಂದು ಕೊಂಡಾಡಿಸಿಕೊಂಬ ನಮ್ಮ ಅಗ್ರಜನಾದ ಧರ್ಮಜನು ಧರ್ಮದ ಕಣ್ಣಿಯಲ್ಲಿ ಸಿಲ್ಕಿ ಇರುವುದಾದ ಕಾರಣ ನಮ್ಮಗ್ರಜನಾಜ್ಞೆಯಿಂದ ಯೀ ಸಭೆಯೊಳಗೆ ನಿನ್ನ ಶಿರಸನ್ನು ಉಳುಹಬೇಕಾಯಿತು ತಿಳಿಯಿತೇನೊ ಕುನ್ನಿ. ಕೌರವಾ ಯಿದೂ ಅಲ್ಲದೆ ಗಂಡುಗಲಿಯಾದ ಚಂಡ ಪ್ರಚಂಡ ದೋರ್ದಂಡ ತ್ರಿಜಗಮಿಂಡನಾದ ನಮ್ಮಣ್ಣನಾದ ಭೀಮಸೇನನ ಕರದೊಳಿರುವ ಗಧಾ ದಂಡಕ್ಕೆ ಅಪ್ಪಣೆಯನ್ನು ಕೊಟ್ಟದ್ದೇ ಆದರೆ ನರಕುರಿಗಳಂತೆ ವುಟ್ಟಿರುವ ನಿಮ್ಮ ನೂರೊಂದು ಮಂದಿಯನ್ನು ಸದೆಬಡಿದು ಯೀ ಭೂಮಂಡಲದಲ್ಲಿ ಯಿರುವ ನಾಡಭೂತಗಳೆಲ್ಲಾ ವುಂಡು ಸಂತೋಷಪಡುವಂತೆ ಮಾಡುತ್ತೇವೆ. ಚನ್ನಾಗಿ ತಿಳಿಯುವಂಥವನಾಗೊ, ಹೇಡಿ ಮುಂಡೇದೆ.

ಕೌರವ : ಅಯ್ಯ ಧರ್ಮಜ, ನಿಮ್ಮ ಸತಿಯಳನ್ನು ಬಿಡಿಸಿಕೊಂಬುವದಕ್ಕೆ ಸಾಮರ್ಥ್ಯವಿಲ್ಲದೆ ನಿನ್ನ ತಮ್ಮಂದಿರು ವುಬ್ಬಿ ವುಬ್ಬಿ ಕೊಬ್ಬಿ ಕೊಬ್ಬಿ ದೋಷಾಹಿತರಾಗಿ ಬರುತ್ತಿದ್ದಾರೆ. ಇದು ಥರವಲ್ಲವೆಂದು ನಿಮ್ಮ ತಮ್ಮಗಳಿಗೆ ಬುದ್ಧಿಯನ್ನು ಪೇಳಯ್ಯ ಧರ್ಮಜಾ.

ಧರ್ಮರಾಯ : ಅದೇ ಪ್ರಕಾರವಾಗಿ ಬುದ್ಧಿಯನ್ನು ಪೇಳುತ್ತೇನೈಯ್ಯ ಕೌರವ ಭೂಪಾಲ ॥

ಭೀಮ : ಯಲಾ ಕೋಣೋಪಮನಾದ ಕೌರವನೆ ಕೇಳೂ. ಕ್ಷಣಕಾಲದ ಪರಿಯತ್ವದ ರಣರಂಗದ ಗಧೆಯಿಂದ ನಿನ್ನಯ ಗೋಣನು ಮುರಿಯುವೆನು. ನಿನ್ನ ಹೃದಯಕ್ಕೆ ದ್ರಿಷ್ಟಿಯಂದೀಕ್ಷಿಸಿ ದುಷ್ಠ ರೂಪಾದನೆಂಬ ಪ್ರವಾಹಕ್ಕೆ ದ್ರಿಷ್ಠಿ ಇಕ್ಕಿದ ಗಧೆಯಿಂದ ನಿನ್ನ ಚಪ್ಪರಿಸಿ ನೆಲಕ್ಕೆ ಹಾಕಿ ತಪ್ಪದೆ ಕಾಲುಂಗುಷ್ಠದಿಂದ ಸೀಳಿ ನಿನ್ನ ಪಂಚತ್ವವಂ ನೋಯಿಸಿ, ಇಲ್ಲಿ ಕುಳಿತಿರುವ ಜನರೆಲ್ಲ ಚಪಚಪನೆ ಚಪ್ಪಾಳೆಯನ್ನಿಟ್ಟು ಪಕಪಕನೆ ನಗುವಂತೆ ಮಾಡುವೆ ಹೆಚ್ಚಿಗೆ ವದರದಿರೊ ಹುಚ್ಚ ಭ್ರಷ್ಠ.

ಧರ್ಮರಾಯ : ಹೇ ತಮ್ಮಾ ಭೀಮಾ ರಿಪುಕುಲ ನಿರ್ನಾಮ, ಯನ್ನಯ ಮಾತು ನಿನ್ನಯ ಮನಸ್ಸಿಗೆ ತಂದುಕೊಂಡು ಈ ಬ್ರಹ್ಮಾಂಡ ಲೋಕದೋಳ್ ನಡಿಯಲ್‌ಪಟ್ಟ ಧರ್ಮವನ್ನು ಪೇಳುತ್ತೇನೆ ಚೆನ್ನಾಗಿ ಕೇಳುವಂಥವನಾಗಪ್ಪ ತಮ್ಮಯ್ಯ.

ಶ್ಲೋಕ : ಹೇ ತಮ್ಮಾ ಭೀಮಸೇನ, ಸಿಂಹವೂ ವರ್ಷ ವಂದಕ್ಕೆ ಮೂರುಮಕ್ಕಳು ಪಡೆದುಕೊಳ್ಳುತ್ತದೆ.
ಸರ್ಪನು ವರುಷ ಒಂದಕ್ಕೆ ನೂರು ಮಕ್ಕಳೂ ಪಡೆಯುತ್ತಲಿಹುದೂ. ಹುಲಿಯು ವರ್ಷಕ್ಕೆ ಐದು ಮಕ್ಕಳು ಪಡೆಯುತ್ತದೆ. ಈ ಮೂರು ಕುಲಗಳೂ ಎಷ್ಟು ಮಕ್ಕಳು ಪಡೆದಾಗ್ಯು ಇವೂ ದುರ್ಜೀವಿಗಳಾದ ಕಾರಣ ಈ ಭೂಮಿಯಲ್ಲಿ ಯೀ ಸಂತತಿಯು ಪ್ರಬಲಿಸಬಾರದೆಂದೂ ಮಹೇಶ್ವರನೂ ನಿರ್ಣಯಿಸಿ ಯಿರುವನೂ. ಆದರೆ ಧರ್ಮಯುಕ್ತವಾದ ಗೋವುಗಳೂ ವರ್ಷಕ್ಕೆ ಒಂದು ಸಾರಿ ಪಡೆದ ಕಾಲಕ್ಕು ಯೀ ಧರಣಿಯೊಳುತ್ತಮವಾದ ಗೋವಿನ ಕುಲ, ಯೀ ಭೂಮಿಯು ಹೊರಲಾರದ ಹಾಗೆ ಎಲ್ಲಿ ನೋಡಿದರು ತಾವೇ ತಾವಾಗಿ ಇರುವವೂ. ದುರ್ಜನರಾದ ಕೌರವರು ಮಹಾ ವೂರ್ಜಿತರಾಗಿ ಫಲವೇನು. ನಾವು ಬಡವರಾದಾಗ್ಯು ನಮಗೆ ಬಂದ ಕೊರತೆಯೇನು. ನಮ್ಮಲ್ಲಿ ಧರ್ಮ ಯಿದ್ದರೆ ಉರಿಯುವ ಕಿಚ್ಚಿನೋಳ್ ಧುಮುಕಲು ತಣ್ಣನೆ ನೀರಿನೊಳ್ ಧುಮುಕಿದ ಹಾಗೆ ತೋರುವದು. ಧರ್ಮವೆ ಜಯವಾಗುವದೂ ಕರ್ಮವೆ ಲಯವಾಗುವದೂ, ಸೋಮಕುಲದವರು ತಾವಾಡಿದ ಮಾತು ತಪ್ಪಲೇಬಾರದು ಒಂದುಕ್ಷಣಾ ಸೈರಿಸಪ್ಪಾ ಭೀಮಸೇನಾ ॥

ಭೀಮ : ಅಣ್ಣ ಧರ್ಮನಂದನಾ, ನಾ ಹ್ಯಾಂಗೆ ಸೈರಿಸಲೊ ಅಗ್ರಜಾ, ಕೌರವರ ವಂಶ ನಿರ್ವಂಶ ಮಾಡಬೇಕೆಂದು ಕೋರುತ್ತಾ ಯಿದ್ದೇನೊ ಅಗ್ರಜಾ.

ಧರ್ಮರಾಯ : ಅಪ್ಪಾ ಭೀಮಸೇನ, ಈ ಸ್ಥಳದಲ್ಲಿ ಸರ‌್ವಥಾ ಇರಕೂಡದು. ಆ ಸ್ಥಳಕ್ಕೆ ತೆರಳುವಂಥವನಾಗಪ್ಪಾ ತಮ್ಮಾ.

ದರುವು

ಯಾಕೆ ಪುಟ್ಟಿದಿರಿ ಕ್ಷತ್ರಿಯರಾಗಿ
ಭೂಮಿಯೊಳು  ಸಾಕಾಯಿತೀ ಶೌರ‌್ಯ
ಧರ್ಮಜ ನಿಮಗೆ ಬೇಕಿಲ್ಲವೆ ಪಂಥವು ॥1॥

ಧರ್ಮದ ಮಡುವಿನೊಳಗೆ ಬಿದ್ದು
ಮುಳುಗಿದ ಧರ್ಮನಂದನನೀತನೂ
ಮಾರಿದನೆನ್ನ  ಧರ್ಮನೀತನೆನ್ನನು ॥

ದುರ್ಮತಿ ಖಳನೂ ಮಾಡಿದ ಮಾನಭಂಗವಾ
ಕರ್ಮಕ್ಕೆ ವಶವಾಗಿ ಬಾಯಿಬಾಯಿ
ಬಿಡುವಿರಿ  ಸಾಕಾಯಿತೆ ಶೌರ‌್ಯವು ॥

ದ್ರೌಪದಿ : ಹೇ ರಣರಂಗಧುರಧೀರರಾದ ಧರ್ಮರಾಯರೆ, ಧರ್ಮ ಮಾರ್ಗವಂ ಪಿಡಿದು ಧರ್ಮದ ಮಡುವಿನೊಳ್ ಬಿದ್ದು ವೋಲಾಡುವ ಭೀಮಾ  ಅರ್ಜುನಾ ನಕುಲ ಸಹದೇವರು ಸಹಾ ಅಸಹಾಯಶೂರರೆಂದು ಪೆಸರಿದ್ದು ಫಲವೇನೂ, ನಿಮ್ಮ ಬಿಸುಜಾಕ್ಷಿಯ ಮಾನಭಂಗಗೈವುದ ಕಂಡೂ॥ದುಶ್ಯಾಸನ ಯನಗೆ ಘಾಶಿಗೊಳಿಸುತ್ತ ಇರುವುದು ನಿಮ್ಮ ಕಣ್ಣುಗಳಿಗೆ ಬಹುಕ್ಷೇಮಕರವೆ ಕಾಂತಾ ಸದ್ಗುಣವಂತಾ.

ಧರ್ಮರಾಯ : ಯಾದವ ಕುಲ ಶಿರೋರತ್ನೆಯಾದ ಕಾಂತೆಯೆ ಕೇಳೂ, ದುಶ್ಯಾಸನನು ನನ್ನ ಮಾನ ಸೂರೆಗೊಂಬುವ ಸಮಯದಲ್ಲಿ ಸುಮ್ಮನೆ ಯಿರುವದು ನ್ಯಾಯವೆಂದು ಕೇಳುತ್ತಾ ಯಿದ್ದಿ. ಆದರೆ ಯಿನ್ನೊಂದು ವಿಚಾರವನ್ನು ಪೇಳುತ್ತೇನೆ ಕೇಳುವಂಥವಳಾಗೆ ಕಾಂತೆ ॥

ಹೇ ರಮಣಿ ಪೂರ್ವದಲ್ಲಿ ದಂತಿರಾಯನಾದ ಆನೆಯು ನಿಶ್ಚಿಂತೆಯಿಂದ ನೀರು ಕುಡಿಯುವದಕ್ಕೆ ಕೊಳದಲ್ಲಿ ಇಳಿಯಲು, ಆ ಜಲದೊಳಗಿದ್ದ ಮಕರಿಯು ಆ ಆನೆಯನ್ನು ಹಿಡಿದು ನುಂಗುವುದಕ್ಕೆ ವುಪಕ್ರಮಿಸಲು ಆ ದಂತಿಯು ಮುಂದಿನ ಯೋಚನೆಯು ತೋರದೆ ಜಗತ್ಕರ್ತನಾದ ಕೃಷ್ಣ ಪರಮಾತ್ಮನನ್ನು ಧ್ಯಾನ ಮಾಡಿದ ಮಾತ್ರದಿಂದಲೆ, ಸಾಕ್ಷಾತ್  ಚಕ್ರವು ಬಂದು ಮಕರಿಯನ್ನು ಖಂಡ್ರಿಸಿ ದಂತಿಯನ್ನು ಕಾಪಾಡಿತು. ಹೇ ಕಾಂತೆ ಈಗಿನ ವ್ಯಾಳೆಯಲ್ಲಿ ನಮ್ಮ ಯತ್ನ ಸರ‌್ವಥಾ ಸಾಗುವುದಿಲ್ಲ. ಮೋಕ್ಷದಾಯಕನಾದ ಪರಮಾತ್ಮನನ್ನು ಧ್ಯಾನಿಸಿದರೆ ನಮ್ಮ ಕಷ್ಟವನ್ನು ನಿವಾರಣೆ ಮಾಡುತ್ತಾನೆ ವಂದುಕ್ಷಣ ಸೈರಿಸು ಕಾಂತೆ ಸದ್ಗುಣವಂತೆ.

ದರುವು

ಅರ್ಜುನ ಕುಲ ವಿಕ್ರಮರೆಂಬ ಕೃತಿಯು
ಘರ್ಜಿಸಿ ಮೆರೆದದ್ದು  ಇಂದಿಗೆ
ಬಲು ವೂರ್ಜಿತವಾಗಿಹದು  ಘರ್ಜಿಸಿ
ಖಳನು ಜಡೆಯ ಪಿಡಿದೆಳೆವಾಗ  ನಿರ್ಜ
ವಿಯಂದದಿರುವಿರಿ  ಮೌನದಿಂದಿರುವಿರಿ
ಸಾಕಾಯಿತೆ ಶೌರ‌್ಯವು ॥

ದ್ರೌಪದಿ : ಹೇ ಕಾಂತ ಹೇ ರಮಣ ಹೇ ಪಾರ್ಥ, ಮೂರು ಲೋಕದ ಗಂಡನೆಂದು ಕೀರ್ತಿಯಂ ವಹಿಸಿ ಇದ್ದು ದುಷ್ಟನಾದ ದುಶ್ಯಾಸನ ಕಷ್ಟಪಡಿಸುವುದು ನೋಡಿ, ಹೋಮಕ್ಕೆ ಒಪ್ಪಿಸುವ ಪಶುವಿನಂದದಿ ಸುಮ್ಮನೆ ಇರುವುದು ನ್ಯಾಯವೇನೋ ರಮಣಾ ಸದ್ಗುಣಾಭರಣಾ.

ಅರ್ಜುನ : ಹೇ ಕಾಂತೆ ಹೇ ರಮಣಿ, ನಾನೇನು ಮಾಡಲಿ. ನನ್ನ ಯತ್ನ ಸರ‌್ವಥಾ ಸಾಗುವದಿಲ್ಲಾ. ಅಣ್ಣನಾದ ಧರ್ಮಜನು ಧರ್ಮವೆಂಬ ಹಗ್ಗದಲ್ಲಿ ಯನ್ನನ್ನು ಕಟ್ಟಿ ಯಿದ್ದಾನಾದ ಕಾರಣ ವಂದುಕ್ಷಣಾ ಸೈರಿಸು ಕಾಂತೆ  ಸದ್ಗುಣವಂತೆ॥

ದರುವು

ಭೀಮಾ ನಾಲ್ವರೊಳು ಬಲ್ಲಿದನೆಂದು
ನಿರುತದಿ  ಕಾಮಿಸಿದೆನು ಮನದಿ ॥
ಯಿಂದಿಗೆ ಯನ್ನ  ಪ್ರೇಮವ್ಯಾತಕೆ
ಮರೆತೊ  ಕಾಮಿನಿಯ ಖಳನೂ ಜಡೆ
ಪಿಡಿದೆಳೆದಾಗ ಹೋಮಕ್ಕೊಪ್ಪಿಸಿದ
ಪಶುಗಳಂತಿರುವಿರಿ  ಸಾಕಾಯಿತೆ ಶೌರ‌್ಯವು ॥

ದ್ರೌಪದಿ : ಹೇ ಕಾಂತಾ ಹೇ ರಮಣ, ಭೀಮ ಭುಜಬಲೋದ್ದಾಮನೆಂದು ಕೀರ್ತಿಯಂ ವಹಿಸಿ ಲೋಕದಲ್ಲಿ ಒಬ್ಬ ಪತಿಯಿಂದ ಯೆಷ್ಠೋ ಸುಖಪಡುವರು. ಯನಗೆ ಯೈದು ಮಂದಿ ಪತಿಗಳು ಯೆದುರಾಗಿ ಯಿದ್ದು ಯನ್ನ ಮಾನಭಂಗವನ್ನು ನೋಡುವುದು, ಏನು ಪ್ರೀತಿಯಾಗಿ ಯಿರುವುದೈಯ್ಯ ಕಾಂತಾ ಸದ್ಗುಣವಂತಾ.

ಭೀಮ : ಹೇ ಕಾಂತೆ ಹೇ ರಮಣಿ, ನಾನೇನು ಮಾಡಲಿ ನಮ್ಮಣ್ಣನಾದ ಧರ್ಮಜನು ಧರ್ಮದ ಕಣ್ಣಿಯಲ್ಲಿ ಸಿಲ್ಕಿ ಯಿರುವನು. ಹೇ ನಾರಿ, ನಿನಗೆ ಕಷ್ಟಕೊಟ್ಟ ಭ್ರಷ್ಟನನ್ನು ಇಗೋ ನೋಡು ಯನ್ನ ಕರಾಗ್ರದಲ್ಲಿ ಯಿರುವ ಯೀ ಗಧಾದಂಡದಿಂದ ಯಿವನನ್ನು ಸದೆಬಡಿದು ಯಿವನ ಹೊಟ್ಟೆಯಲ್ಲಿ ಯಿರುವ ಕರುಳುಗಳನ್ನು ತೆಗೆದು ನಿನ್ನ ಚಲುವಾದ ಕೊರಳಿಗೆ ವನಮಾಲೆಯನ್ನು ಹಾಕುತ್ತೇನೆ. ಯಿದೂ ಅಲ್ಲದೆ ಯಿವನ ಹಲ್ಲುಗಳನ್ನು ಕಿತ್ತು ನಿನ್ನ ವರಮುಡಿ ನೆರವೇರಿಸಿಕೊಳ್ಳುವುದಕ್ಕೆ ದಂತದ ಬಾಚಣಿಗೆಯನ್ನು ಮಾಡಿಸಿ ಕೊಡುತ್ತೇನೆ ಕಾಂತೆ ಸದ್ಗುಣವಂತೆ.

ದರುವು

ಮಾದ್ರಿನಂದನರ ಸಾಹಸವೆಲ್ಲಾ
ಪೋಗಿ ಸಮುದ್ರದೊಳ್ ಬೆರಸಿಹರೆ
ಇಂದಿಗೆ ಬಲು ಊರ್ಜಿತರಾಗಿಹರೆ
ಘರ್ಜಿಸಿ ಖಳನು ಜಡೆಯ ಪಿಡಿದೆಳೆವಾಗ
ನಿರ್ಜೀವಿಯಂದದಿ  ಮೂರ್ಖರಂತಿರುವಿರಿ ॥
ಸಾಕಾಯಿತೆ ಶೌರ‌್ಯವು ॥

ದ್ರೌಪದಿ : ಅಯ್ಯೋ ಪತಿಗಳಿರಾ, ಯಷ್ಠು ವಿಧದಿಂದ ಪ್ರಾರ್ಥಿಸಿದಾಗ್ಯು ನಿಮ್ಮ ಮನಸ್ಸಿಗೆ ಬರಲಿಲ್ಲವೆ ಇನ್ಯಾರಿಗೆ ಹೇಳಿಕೊಳ್ಳಲಯ್ಯ ಕಾಂತಾ ಸದ್ಗುಣವಂತಾ.

ದುಶ್ಯಾಸನ : ಯಲೆ ಪಾಂಚಾಲಿಯೆ ಕೇಳೂ. ನೀನು ಎಷ್ಟು ವಿಧದಿಂದ ಈ ಲೋಕೋದ್ಬಂಡರಾದ ನಿನ್ನ ಗಂಡಂದಿರಿಗೆ ಮೊರೆಯಿಟ್ಟರು ಬಿಡಿಸುವುದಿಲ್ಲ. ಯಮ್ಮಣ್ಣನಾದ ಕೌರವಶಿಖಾಮಣಿಯ ತೊಡೆಯ ಮ್ಯಾಲೆ ಕುಳಿತು ಮುಡಿಯನ್ಯಾವರಿಸಿಕೊಳ್ಳುವುದಕ್ಕೆ ಬಂದರೆ ಸರಿ ಇಲ್ಲದಿದ್ದರೆ ಈ ಸಭಾ ಜನರ ಮುಂದೆ ನಿನ್ನ ಮಾನಭಂಗವನ್ನು ಮಾಡುತ್ತೇನೆ, ಜಾಗ್ರತೆಯಿಂದ ತೆರಳೆ ಕುಡಿಕೆ ಕಂಗಳೆ.

ದ್ರೌಪದಿ : ಅಣೈಯ್ಯ ಭಾವನಾದ ಕೌರವ ಭೂಪಾಲನೆ ಕೇಳು. ನಿನಗೆ ನಾದುನಿಯೆಂಬ ಪ್ರೀತಿಯಿಲ್ಲದೆ ಘಾತಿಸಿ ಬಿರುನುಡಿಗಳನ್ನು ನುಡಿಯುವುದು ಯಾತರ ನ್ಯಾಯ. ಆದರೆ ಹಿಂದೆ ಗಾಂಧರ್ವರು ನಿನ್ನ ಯಡಮುಡಿಯನ್ನು ಕಟ್ಟಿ ಯಳದೊಯ್ಯುವ ಸಮಯದಲ್ಲಿ ಯನ್ನ ಕಾಂತನಾದ ಧರ್ಮರಾಯನಿಗೆ ನಿನ್ನ ಸತಿಯಳಾದ ಭಾನುಮತಿ ಬಂದು ಮೊರೆಯಿಡಲು, ಯನ್ನ ಪತಿಯಾದ ಭೀಮಸೇನನು ನಿನ್ನನ್ನು ಕಂಡು ರಾಜಸಭೆಯಲ್ಲಿ ಕೆಡವಿ, ಆ ಗಂಧರ್ವರು ಕಟ್ಟಿದ್ದ ಪಿಚಂಡಿಯು ಸರ‌್ವಥಾ ಬಿಚ್ಚುವದಿಲ್ಲವೆಂದು ಪೇಳಿದ್ದರಿಂದ ಯಾರಿಗಾದರು ಸಮಯವೆಂದು, ಯನ್ನ ಕಾಂತನಾದ ಧರ್ಮಜನು ನನಗೆ ಪೇಳಲು ಆಗ ನಾನು ನನ್ನ ಯಡಗಾಲಿನ ವುಂಗುಷ್ಠದಿಂದ ಕಟ್ಟು ಬಿಚ್ಚಿದಾಗಿಲ್ಲದ ಪೌರುಷ ಯೀಗ ಧಾವಲ್ಲಿ ಬಂತೈಯ್ಯ ಭಾವ ತಿಳಿಯಿತು ನಿನ್ನ ಸ್ವಭಾವ.

ಕೌರವ : ಯಲಾ ತಮ್ಮನಾದ ದುಶ್ಯಾಸನನೆ ಕೇಳು. ಈ ಮೂರ್ಖಳು ಆಡುವ ಮಾತು ನೋಡಿದರೆ ನನಗೆ ರೋಮ ರೋಮ ಆದ್ಯಂತವಾಗಿ ಕರ್ಣಕಠೋರವಾಗಿರುವುದು, ಈ ಜಡಮತಿಯಳಾದ ಪಾಂಚಾಲಿಯಂನ್ನು ಜಾಗ್ರತೆಯಿಂದ ಕರದುಕೊಂಡು ಬರುವಂಥವನಾಗೊ ತಮ್ಮ ಅನುಜಾ  ಗಾಂಧಾರಿ ತನುಜಾ.

ದುಶ್ಯಾಸನ : ಯಲೆ ಜಲಜನೇತ್ರೆಯಾದ ದ್ರೌಪದಿಯೇ ಕೇಳು, ನಿನ್ನ ಬಡು ಮಾತುಗಳನ್ನು ಬಿಟ್ಟು ಕಡುತವಕದಿಂ ಮೃಡನನ್ನು ಧ್ಯಾನಿಸುತ್ತಾ ನಮ್ಮಣ್ಣನ ತೊಡೆಯಮ್ಯಾಲೆ ಕೂಡ್ರುವಂಥವಳಾಗೆ ಬಾಲೆ ಬಡ ಪಾಂಡವರ ಚನ್ನೆ  ಹಿಂದಕ್ಕೆ ನಾವು ನಮ್ಮ ಪಂಚತ್ವವನ್ನು ಹಂಚಿಕೊಂಡೆವಷ್ಟೆ. ಈಗ ನಿನ್ನ ಪತಿಗಳ ಮುಂದೆ ನಿನ್ನ ಸೀರೆಯಂ ಸುಲಿದು ನಿನ್ನ ವಳದೊಡೆಯು ಕಾಣುವ ಹಾಗೆ ಈ ಸಭಾ ಜನರ ಮುಂದೆ ಮಾನಭಂಗವನ್ನು ಮಾಡುತ್ತೇನೆ ಜಲಜನೇತ್ರೆ   ಧರಣೀಶನಾದ ಕುರುರಾಯನ ವಶವಾದ ಮ್ಯಾಲೆ ಆ ಬಡಪಾಂಡವರ ಗೊಡವೆ ನಿನಗ್ಯಾತಕ್ಕೆ. ಮಡದಿಯಳೆ ಅತಿ ಜಾಗ್ರತೆಯಿಂದ ನಮ್ಮ ಅರಮನೆಯಲ್ಲಿ ದಾಸಿಯರ ತೊತ್ತಿನ ಕೆಲಸಕ್ಕೆ ನಡಿಯೆ ಪೊಡವಿಪನ ಮಡದಿಯಳೆ. ಹಿಂದಕ್ಕೆ ರಾಜಸೂಯ ಯಾಗ ಕಾಲದಲ್ಲಿ ನೀನು ಸಭೆಯವರ ಮುಂದೆ ನಮ್ಮನ್ನು ಪರಿಹಾಸ್ಯ ಮಾಡಿದ್ದಕ್ಕೆ ಇಂಥಾ ಕಷ್ಟಗಳೂ ಸಂಭವಿಸಿತಲ್ಲೆ ಮಡದಿಯಳೆ ಬಡ ಪಾಂಡವರ ಬಾಲೆ.

ದ್ರೌಪದಿ : ಅಪ್ಪಾ ಸಾರಥಿ ಇನ್ಯಾರಿಗೆ ಮೊರೆ ಇಡಲಪ್ಪಾ ಸಾರಥಿ.

ಸಾರಥಿ : ಈ ಸಭಾ ಜನರಿಗೆ ಮೊರೆಬೀಳುವಂಥವಳಾಗಮ್ಮಾ ತಾಯೆ.

ದರುವು

ಸೆರೆಬಿಡಿಸೆನ್ನಾ ತಾಯಿಗಳಿರಾ  ವರಮುಡಿ
ಪಿಡಿದೆಳೆಯುವ ಕ್ರೂರಾ ॥
ಚಿತ್ತದೊಡೆಯರೈವರು ಕುರುರಾಯಗೆ
ತೆತ್ತರು ತಮ್ಮಭಿಮಾನವನೂ ॥
ಅತ್ತೆ ಮಾವ ಭಾವ ಮೈದುನರೆಲ್ಲರು
ಬಿತ್ತಿ ಬೆಳೆದರು ವಿರೋಧವನೂ ॥

ದ್ರೌಪದಿ : ಅಯ್ಯ ಸಭಾಜನರೆ, ಯನ್ನ ಪತಿಗಳೈವರು ಪರಿಭವದ ಸೆರೆಯೊಳಿದ್ದು ಶರಸೂರೆ ಗೊಂಬುವದು ತರವಲ್ಲವೆಂದೂ, ಈ ದುಶ್ಯಾಸನನಿಗೆ ನೀವಾದರು ಹೇಳಬಾರದೆ ಸಭಾಜನರೆ.

ದುಶ್ಯಾಸನ : ಯಲೆ ಪಾಂಚಾಲಿ, ಅಕ್ಕಲಾರ ಅಮ್ಮಲಾರ ಯಂದು ಈ ಸಭಾ ಜನರಿಗೆ ಮೊರೆಯಿಟ್ಟರೆ ನಿನ್ನನ್ನು ಬಿಡಿಸಬಲ್ಲರೇನೆ ನಾರಿ. ಜಾಗ್ರತೆಯಿಂದ ತೆರೆಳುವಂಥವಳಾಗೆ ಕಾಂತೆ  ಸದ್ಗುಣವಂತೆ ॥

ಸಾರಥಿ : ಅಮ್ಮಾ ತಾಯೆ, ನಿಮ್ಮ ಅತ್ತೆಯಾದ ಗಾಂಧಾರಿಗೆ ಪೇಳುವಂಥವಳಾಗಮ್ಮಾ ತಾಯಿ.

ದ್ರೌಪದಿ : ಅದೇ ಪ್ರಕಾರ ಪೇಳುತ್ತೇನಪ್ಪಾ ಸಾರಥಿ.

ದ್ವಿಪದೆ

ಮಗನಿರುವದನೂ ಕೇಳುತಲಾಗ ಮನದಿ ಹರುಷವ ತಾಳಿ
ಅಘಹರನು ಮುನಿದನಂದದಿ ಅತಿಕ್ಲೇಶದಿಂದ
ಮಂದಿರವ ತಾ ಬಿಟ್ಟು ಇಂದುಶೇಖರನ ಚಂದದಿಂ
ತಾ ಭಜಿಸಿ ಚದುರೆ ಬೇಗದಲಿ  ಅಂಗಜಾನನ
ಮಡದಿಗಿಂ ಅತಿ ರೂಪುಳ್ಳ  ಸೀರೆಯನು ರಮಣಿ ತಾನುಟ್ಟು
ಬಂಗಾರಮಯವಾದ ಕುಪ್ಪಸವ ತೊಟ್ಟು
ಪಣೆಗೆ ಕಸ್ತೂರಿ ಬೊಟ್ಟು ವನಿತೆ ತಾನಿಟ್ಟು
ದುಂಡುಮಲ್ಲಿಗೆ ಮೊಗ್ಗು ತುರುಬಿನಲಿ ಧರಿಸಿ
ಮಗನ ವಾಲಗಕೆ ವಿನಯದಿಂ ನಾ ಪೋಪೆನೆನುತಲಾ
ಧರೆಯೋಳ್ ಕುಡುತನಿಯಾ ಭೀಮೇಶನ
ಧ್ಯಾನಿಸುತಾ ಬಂದು ತೆರೆಯೊಳಗೆ ನಿಂತಳೂ ॥

ಗಾಂಧಾರಿ : ಅಪ್ಪಾ ಸಾರಥಿ, ನಮ್ಮನ್ನು ಕೇಳುವದಕ್ಕೆ ನೀ ಧಾರು ನಿನ್ನಯ ನಾಮಾಂಕಿತವೇನಪ್ಪಾ ಚಾರಕಾ ॥ಅಂಣೈಯ್ಯ ಚಾರಕ ಈ ತ್ರಿಭುವನದೋಳ್ ವಿರಾಜಿಸುವ ಐರಾವತ ಅಮರಾವತಿಗಳಾದಂಥ ಪಟ್ಟಣಂಗಳಿಗೆ ಶ್ರೇಷ್ಠತರವಾದ ಸಿಂಧೂ ನಗರಕ್ಕೆ ಸಾಂದ್ರತರವಾದ ಮನೋದಾರ ರಸಭರಿತ  ಭಾಸುರಾತ್ಮ ಕ್ರೀಡಾ ಮನೋರಂಜಿತ  ವಜ್ರಮಣಿ ದೇದೀಪ್ಯಮಾನ ಧೃತರಾಷ್ಟ್ರರಾಯ ನರೇಶ್ವರನಿಗೆ ಅರ್ಧಾಂಗನೆಯಾದ ಗಾಂಧಾರಿಯೆಂಬಾಕೆ ನಾನೇ ಅಲ್ಲವೇನಪ್ಪಾ ಚಾರಾ ಇದೇ ನನ್ನ ವಿಚಾರ ॥

ಸಾರಥಿ : ಯೀ ಸಭಾಸ್ಥಾನಕ್ಕೆ ಬಂದ ಕಾರಣವೇನಮ್ಮಾ ತಾಯೆ ಕರುಣವಿಟ್ಟು ಕಾಯೆ ॥

ಗಾಂಧಾರಿ : ಅಪ್ಪಾ ಚಾರಕ, ಯೀ ಸಭೆಗೆ ಬಂದ ಕಾರ‌್ಯಾನುಕೂಲವೇನೆಂದರೆ ಯನ್ನ ಕಂದನಾದ ದುಶ್ಯಾಸನನು ಯನ್ನ ಜೇಷ್ಠಪುತ್ರನಾದ ಕೌರವನ ಮಾತುಕೇಳಿ ದ್ರೌಪದಿಯನ್ನು ವ್ರತಭಂಗಗೈವನಂತೆ. ಆದ ಕಾರಣ ಯನ್ನ ಕಂದನಿಗೆ ಬುದ್ಧಿಯನ್ನು ಪೇಳುವ ಪ್ರಯುಕ್ತ ಬಂದು ಯಿದ್ದೇನೆ. ಯನ್ನ ಜೇಷ್ಠ ಪುತ್ರನಾದ ಕೌರವನ ಭೇಟಿಯನ್ನು ಮಾಡಿಸುವಂಥವನಾಗಪ್ಪಾ ದ್ವಾರಾದಿಷ್ಠಾ ಬೇಡುವೆನಿಷ್ಠಾ.

ಕೌರವ : ನಮೋನ್ನಮೋ ಹೇ ಜನನಿ.

ಗಾಂಧಾರಿ : ಧೀರ್ಘಾಯುಷ್ಯಮಸ್ತು ಏಳಪ್ಪಾ ಕೂಸೆ ಲಾಲಿಸಿ ಕೇಳೆನ್ನ ಭಾಷೆ.

ಕೌರವ : ಅಮ್ಮಾ ಜನನಿ, ಇಂದು ನಿಮ್ಮಯ ಮಂದಿರದಲ್ಲಿ ಆನಂದದಿಂದಿರುವುದಂ ಬಿಟ್ಟು ಇಲ್ಲಿಗೆ ಬಂದ ಕಾರ‌್ಯಾರ್ಥವೇನಮ್ಮಾ ಮಾತೆ ಲೋಕ ಪ್ರಖ್ಯಾತೆ.

ದರುವು

ಕಂದ ಕೇಳೂ ದ್ರೌಪದಿಯೊಳಂದಗೆಡಿಪಾ
ಚಂದವೇನೊ ಇಂದುವದನೆ ತನ್ನಯ
ನತಿ  ನೊಂದುಕೊಂಬಳೊ ॥
ಸುರಚಿರಾಂಗ ಮಗನೆ ಕೇಳೊ  ಸತ್ಯವ್ರತಕೆ
ಶಿಲ್ಕಿದವಳ  ಅರ್ತಿಯಿಂದಾ
ನೋಯಿಸುವುದು ನ್ಯಾಯವಲ್ಲವೋ ॥

ಗಾಂಧಾರಿ : ಹೇ ಕಂದ  ಹೇ ಬಾಲ  ಹೇ ತನಯಾ  ಯನ್ನಯ ಮಾತು ಮನಸ್ಸಿಗೆ ತಂದುಕೊಂಡು ಮಂದಗಮನೆಯಾದ ದ್ರೌಪದಿಯನ್ನು ವ್ರತಭಂಗಗೈಯುವುದು ಚಂದವಲ್ಲಪ್ಪಾ ಕಂದಾ  ನೀ ಬಹು ಚಂದಾ ॥