ಕಾಯಕವೇ ಕೈಲಾಸ, ಜನತಾ ಸೇವೆಯೇ ಜನಾರ್ದನ ಸೇವೆ ಎಂಬಿತ್ಯಾದಿ ಘೋಷಣೆಗಳು ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ನೇತಾಡುತ್ತಿರುತ್ತವೆ. ಆದರೆ ಅದಕ್ಕೆ ಅರ್ಥ ತುಂಬಿ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ, ಕ್ರಿಯಾಶೀಲತೆಯಿಂದ ತನ್ನ ಪಾಲಿಗೆ ಒದಗಿದ ಅವಕಾಶ ಮತ್ತು  ಅಧಿಕಾರವನ್ನು ಸಾರ್ಥಕ ರೀತಿಯಲ್ಲಿ ಉಪಯೋಗಿಸುವವರು ವಿರಳ. ಈ ವಿರಳಾತಿ ವಿರಳದಲ್ಲಿ ಒಬ್ಬರು ದೂರಸಂಪರ್ಕ ಇಲಾಖೆಯ ಮೂಲಕ ದಕ್ಷಿಣಕನ್ನಡ ಜಿಲ್ಲೆಯಲ್ಲಿ ದೂರಸಂಪರ್ಕ ಕ್ರಾಂತಿ ಮಾಡಿದ ಅಬಿನವ ಸ್ಯಾನ್ ಪಿತ್ರೋಡಾ ಎಂದೇ ಹೆಸರಾದ ಕಜಂಪಾಡಿ ರಾಮ ಇವರು. ದಿ.  ರಾಜೀವ  ಗಾಂದಿಯವರು ಪ್ರಧಾನಿಯಾಗಿದ್ದ ಕಾಲದಲ್ಲಿ ದೂರಸಂಪರ್ಕ ಇಲಾಖೆಗೆ ಹೊಸಜೀವ ಸ್ಪರ್ಶವಾಯಿತು. ಹೊಸರೂಪ ಧಾರಣೆಗೆ ವ್ಯವಸ್ಥಿತ ಯೋಚನೆ, ಯೋಜನೆಯ ಚಾಲನೆ ದೊರೆಯಿತು. ಆದರೆ ಅಂತಹ ನವ ಕಾಯಕಲ್ಪದ ಕಾಯಕ ಯೋಜನೆ ಸಾಕ್ಷಾತ್ಕಾರಗೊಳ್ಳಲು ಅಚಲನಿಷ್ಠೆಯಿಂದ ದುಡಿಯುವ ಅಧಿಕಾರಿಗಳು ಬೇಕಾಗಿತ್ತು. ಪುಣ್ಯವಶಾತ್ ಸ್ಯಾನ್ ಪಿತ್ರೋಡಾ, ಕಜಂಪಾಡಿ ರಾಮರಂತಹ ಸಮರ್ಪಣಾ ಭಾವದ ಅಧಿಕಾರಿಗಳು ಇಲಾಖೆಯ ಸೇವೆಗೆ ಸಿಕ್ಕಿದರು. ಇಂದು ದೇಶದ ದೂರಸಂಪರ್ಕ ಪ್ರಗತಿಯ ಹಿಂದೆ ಅಡಿಪಾಯ ರೂಪದಲ್ಲಿ ದುಡಿದ ಸ್ಯಾನ್ ಪಿತ್ರೋಡಾ ಮತ್ತು ಟೆಲಿಕಾಂ ರಾಮರೆಂದೇ ಖ್ಯಾತರಾದ ಕಜಂಪಾಡಿ ರಾಮರ ಶ್ರಮವಿದೆ. ದೂರಗಾಮಿ ಚಿಂತನೆಯಿದೆ.

ಜಬಲ್‌ಪುರದಲ್ಲಿ ದೂರಸಂಪರ್ಕ ಸಂಬಂದಿತ ವಿಶೇಷ ತರಬೇತಿ ಪಡೆದು ದೇಶದ ಹೈದರಾಬಾದ್, ಗೋವಾ, ಪಣಜಿ, ಎರ್ನಾಕುಲಂ, ಮಧುರೈ, ಬೆಂಗಳೂರು ಮೊದಲಾದೆಡೆ ಸೇವೆ ಸಲ್ಲಿಸಿ ವಿಶೇಷವಾಗಿ ರಾಜ್ಯದ ಎರಡನೇ ಅತಿದೊಡ್ಡ ಟೆಲಿಕಾಂ ಜಿಲ್ಲೆಯಾದ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಟೆಲಿಕಾಂ ಮುಖ್ಯ ಪ್ರಬಂಧಕರಾಗಿ ಕಜಂಪಾಡಿ ರಾಮರು ಪಡೆದ ಯಶಸ್ಸು ಒಂದು ಕ್ರಾಂತಿಯ ಕಥೆ.

1990ರಲ್ಲಿ ಕಜಂಪಾಡಿ ರಾಮರು ಮಂಗಳೂರಿನ ದಕ್ಷಿಣಕನ್ನಡ ಟೆಲಿಕಾಂ ಕೇಂದ್ರಕ್ಕೆ ಕಾಲಿಟ್ಟರು. ಅದೇ ವರ್ಷ ದಕ್ಷಿಣಕನ್ನಡ ಪ್ರಮುಖ ಟೆಲಿಕಾಂ ಜಿಲ್ಲೆಯಾಗಿ ಉನ್ನತೀಕರಣಗೊಂಡಿತು. ಬಂದಾಗಲೇ ಈ ಉನ್ನತೀಕರಣದ ಭಡ್ತಿಯ ಸಂತೋಷ ಮತ್ತು ಅಗಾಧ ಜವಾಬ್ದಾರಿಗೆ ಹೆಗಲು ಕೊಡಬೇಕಾದ ಸವಾಲು ರಾಮರಿಗೆ. ಬಂದ 18 ತಿಂಗಳಲ್ಲಿಯೇ ಜಿಲ್ಲೆಯನ್ನು ಸಂಪೂರ್ಣ ದೂರಸಂಪರ್ಕ ಜಾಲಕ್ಕೆ ಒಳಪಡಿಸಿ ಮತ್ತು ಗ್ರಾಮೀಣ ಪ್ರದೇಶ ಗಳಿಗೆ ಇಲೆಕ್ಟ್ರಾನಿಕ್ ಎಕ್ಸ್‌ಚೇಂಜ್ ಮತ್ತು ಎಸ್‌ಟಿಡಿ ಸೇವೆಯನ್ನು ಒದಗಿಸಿ ದಕ್ಷಿಣಕನ್ನಡ ಜಿಲ್ಲೆ ದೇಶದ ಪ್ರಪ್ರಥಮ ಸಂಪೂರ್ಣ ಟೆಲಿಕಾಂ ಸೌಲಭ್ಯ ಸಜ್ಜಿತ ಜಿಲ್ಲೆಯಾಗಿ ಕೀರ್ತಿಯನ್ನು ಪಡೆಯಿತು. ರಾಮರು ಈ ಕೀರ್ತಿಯ ಕಿರೀಟ.

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಗ್ರಾಮದಂತಿದ್ದ ಕಜಂಪಾಡಿ ಎಂಬ ಹಳ್ಳಿಯ ಕಡುಬಡತನದ ಕುಟುಂಬವೊಂದರಲ್ಲಿ ಜನಿಸಿದ ರಾಮರು ನಿರಂತರ ಹೋರಾಟ ಮಯ ಬದುಕಿನ ಮೂಲಕ ಕಾಯಕನಿಷ್ಠೆಯ ಪರ್ಯಾಯ ರೂಪಕವೆಂಬಂತೆ ಬೆಳೆದು ನಿಂತ ರೀತಿ ಬೆರಗು ಹುಟ್ಟಿಸುವಂತದ್ದು.

ಮನುಷ್ಯರಲ್ಲಿ ಎರಡು ರೀತಿಯವರಿರುತ್ತಾರೆ. ಹಲವರು ಬದುಕುತ್ತಾರೆ. ಕೆಲವರು ಬಾಳುತ್ತಾರೆ. ದೈನಂದಿನ ಜೀವನೋಪಾಯಕ್ಕೆ ಬೇಕಾದ ಅವಶ್ಯಕತೆಗಳನ್ನು ಸುಖಕ್ಕೆ ಪೂರಕವಾದ ಅನುಕೂಲತೆಗಳನ್ನು ಹಾಗೂ ಭೋಗ ವಿಲಾಸಗಳಿಗೆ ತಕ್ಕುದಾದ ವಿಲಾಸ ಸಾಮಗ್ರಿಗಳನ್ನು ಧಾರಾಳವಾಗಿ (ಅದಕ್ಕೆ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ವಾಮ ಮಾರ್ಗ ಹಿಡಿದು) ಸಂಪಾದಿಸಿ ಮೆರೆದು ಇಲ್ಲವಾಗುತ್ತಾರೆ. ಬಹುಮಂದಿ ಇಂತಹವರು ಬದುಕುತ್ತಾರೆ ಅಷ್ಟೇ. ಬದುಕಿಗೆ ಹಣ, ಸಂಪತ್ತು, ಸಂಪಾದನೆ ಎಂಬ ಅರ್ಥವನ್ನು ನೀಡಿದರೆ ಅವರ ಜೀವನದ ಸಾರ್ಥಕ ಎನ್ನಬಹುದೇನೋ!

ಇನ್ನೊಂದು ವರ್ಗದವರು ತನ್ನ ವೈಯಕ್ತಿಕ ಬದುಕಿಗಿಂತ ಸಾರ್ವಜನಿಕ ಬದುಕು ಹಿರಿದೆಂದು ನಂಬಿ ಪರೋಪಕಾರ, ಸೇವೆಗಳಲ್ಲಿಯೇ ಬದುಕಿನ ಅರ್ಥವನ್ನು ಕಂಡುಕೊಳ್ಳು ವವರು. ಇವರು ಬದುಕಿಗೆ ಅರ್ಥ ಬರುವಂತೆ ಬಾಳಿಕೆಯ ಬದುಕನ್ನು ಬದುಕುತ್ತಾರೆ. ಸಾರ್ವಜನಿಕ ಹಿತಚಿಂತನೆಯನ್ನು ವೈಯಕ್ತಿಕ ಬದುಕಿಗಿಂತ ಹೆಚ್ಚು ಪ್ರೀತಿಸಿ ಅದರ ಸುಖಕ್ಕಾಗಿ ದುಡಿಯುವುದರಲ್ಲೇ ತೃಪ್ತಿ ಕಾಣುವ ಮಹಾನುಭಾವರು ಇವರು. ರಾಮರು ಅಂತಹ ಬಾಳ್ವೆಯನ್ನು ಕಂಡವರು. ಉಳಿದವರಿಗೆ ಮಾದರಿಯಾದವರು.

ಆಮೆ ನಡಿಗೆ, ಸೋಮಾರಿತನ, ಬೇಜವಾಬ್ದಾರಿತನಕ್ಕೆಲ್ಲ ಪರ್ಯಾಯ ಹೆಸರೆಂಬಂತೆ ಇರುವ ಸರ್ಕಾರಿ ಆಪೀಸುಗಳ ನಡುವೆ ಬೆಳಗ್ಗಿನಿಂದ ಮಧ್ಯರಾತ್ರಿಯವರೆಗೂ ಕರ್ತವ್ಯದಲ್ಲಿ ತೊಡಗಿಕೊಂಡು ಅದ್ಭುತ ಸಾಧನೆಯನ್ನು ರಾಮರು ಮಾಡಿದ್ದಾರೆ. ಮುಂದಿನ ತಲೆಮಾರಿಗೆ ಈ ಆದರ್ಶ, ಪ್ರಾಮಾಣಿಕತೆ, ಕರ್ತವ್ಯ ಪ್ರೀತಿ, ಆದರ್ಶವಾಗಬೇಕೆಂಬ ಹಂಬಲ ಈ ಕೃತಿಯದ್ದು.

ಬೆಳೆದು ಬಂದ ಬಗೆ…..

ಸಾಧಾರಣ  ಗಾತ್ರದ ಆಕೃತಿ, ನಸುಗಪ್ಪು   ಮೈಬಣ್ಣ,   ಆತ್ಮೀಯ ಎನಿಸುವ ಮಾತು, ರೂಪು, ನೇರ, ಸ್ಪಷ್ಟ, ಪ್ರೀತಿ ತುಂಬಿದ ನಡವಳಿಕೆ, ಸ್ನೇಹಕ್ಕೆ ಮಿಡಿವ,   ಕಾರ್ಯಕ್ಕೆ   ತುಡಿಯವ  ಕ್ರಿಯಾಶೀಲ ವ್ಯಕ್ತಿತ್ವ ಎಂತಹ ಹೊಣೆ ಯನ್ನಾದರೂ ಹೊರಲು ಸಿದ್ಧ ಎಂಬ ಗಟ್ಟಿತನದ ಹೆಗಲು ಇವು ರಾಮರ ವ್ಯಕ್ತಿಚಿತ್ರ.

ರಾಮರು ದೂರದವರಲ್ಲ ನಮ್ಮವರು. ಇಂದು ಕೇರಳ ರಾಜ್ಯದ ಭಾಗವಾಗಿದ್ದರೂ ಅಚ್ಚಗನ್ನಡದ ನೆಲ ವಾಗಿರುವ ಕಾಸರಗೋಡು ಜಿಲ್ಲೆಯ ಪೆರ್ಲ ಸಮೀಪದ ಪಡ್ರೆ ಗ್ರಾಮದ ಕಜಂಪಾಡಿಯಲ್ಲಿ ಇವರು  1940ರ ಜನವರಿ 9ರಂದು ಜನಿಸಿದರು. ಕಡುಬಡತನದ ಹಿಂದುಳಿದ ವರ್ಗದ ಕುಟುಂಬದಲ್ಲಿ ಕೊರಗಪ್ಪ ಮತ್ತು ಅಕ್ಕಮ್ಮ ದಂಪತಿ ಮಗನಾಗಿ ಜನಿಸಿದ ರಾಮರು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಕಜಂಪಾಡಿಯ ಸರ್ಕಾರಿ ಶಾಲೆಯಲ್ಲಿ ಪೂರೈಸಿದರು. ಅನಕ್ಷರಸ್ಥರಾದರೂ ರಾಮರ ತಂದೆಗೆ ತನ್ನ ಮಗ ಕಲಿತು ದೊಡ್ಡ ಉದ್ಯೋಗ ಪಡೆಯಬೇಕೆಂಬ ಹಂಬಲ. ಕೂಲಿನಾಲಿ ಮಾಡಿ ಸಂಸಾರ ನಡೆಸುತ್ತಿದ್ದ ರಾಮರ ತಂದೆ ಎಲ್ಲ ಆರ್ಥಿಕ ಸಂಕಷ್ಟಗಳನ್ನು ಎದುರಿಸಿಯೂ ಮಗನಿಗೆ ಒಳ್ಳೆಯ ಶಿಕ್ಷಣ  ದೊರೆಯಲಿ  ಎಂಬ ಸದುದ್ದೇಶದಿಂದ ಮಂಗಳೂರಿನ ಪದುವಾ ಹೈಸ್ಕೂಲಿಗೆ ಸೇರಿಸಿದರು. ತಂದೆಯ ಈ ತ್ಯಾಗ, ಕನಸು ತನ್ನ ಬದುಕಿನ  ಗತಿಯನ್ನೇ  ಬದಲಿಸಿತು  ಎಂದು ರಾಮರು ಈಗ ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ.

ಮುಂದೆ ಮಂಗಳೂರು ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಮತ್ತು ಬಿಎಸ್‌ಸಿ ಪದವಿಯನ್ನು ಇವರು ಪೂರೈಸಿದರು. ಬಾಲ್ಯದ ದಿನಗಳಲ್ಲೇ ಬಹುಮುಖ ಆಸಕ್ತಿಗಳನ್ನು ಹೊಂದಿದ್ದ ರಾಮರು ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸದಾ ಮುಂದು. ಹಲವು ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಬಹುಮಾನಗಳನ್ನು ಪಡೆದುದು ತನ್ನ ಬದುಕಿನಲ್ಲಿ ಏನನ್ನಾದರೂ ಸಾದಿಸಬೇಕೆಂಬ ಛಲಕ್ಕೆ ಸ್ಫೂರ್ತಿಯನ್ನು ತುಂಬಿತು ಎನ್ನುತ್ತಾರೆ ರಾಮ.

ಬಳಿಕ ಉನ್ನತ ವಿದ್ಯಾಭ್ಯಾಸಕ್ಕಾಗಿ ನವದೆಹಲಿಗೆ ತೆರಳಿದ ರಾಮರು ಅಲ್ಲಿನ IETEಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು. ಜಬಲ್‌ಪುರದಲ್ಲಿ ದೂರಸಂಪರ್ಕ ಸಂಬಂದಿತ ವಿಶೇಷ ತರಬೇತುಗೊಂಡು ಬಳಿಕ ಟೆಲಿಕಾಂ ಕ್ಷೇತ್ರದಲ್ಲಿ ಹತ್ತುಹಲವು ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ದೇಶದ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿದರು.

1967ರಲ್ಲಿ ಯುಪಿಎಸ್‌ಸಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಂು್ಕೆುಗೊಂಡು ಇಂಡಿಯನ್ ಟೆಲಿಕಮ್ಯುನಿಕೇಶನ್ ಸರ್ವೀಸ್ (ITS)ನ್ನು (Class I Service) ಸೇರಿ ಎರಡು ವರ್ಷಗಳ ಅರ್ಹತಾ ಪರೀಕ್ಷಣಾವದಿಯಲ್ಲಿ ಟ್ರಾನ್ಸ್‌ಮಿಶನ್ ವ್ಯವಸ್ಥೆಯ ಜೋಡಿಕೆ ಮತ್ತು ನಿರ್ವಹಣೆ ಕುರಿತು ತರಬೇತು ಪಡೆದರು. ಅನಂತರ 1970ರ ಜನವರಿಯಿಂದ ಎಪ್ರಿಲ್ 1972ರ ವರೆಗೆ ಅಸಿಸ್ಟೆಂಟ್ ಡಿವಿಜನಲ್ ಇಂಜಿನಿಯರ್ ಆಗಿ ಆಂಧ್ರಪ್ರದೇಶದಲ್ಲಿ ಕಾರ್ಯನಿರ್ವಹಿಸಿದರು. ಬಳಿಕ 1972ರ ಜೂನ್‌ನಿಂದ 1974ರ ಜುಲೈಯವರೆಗೆ ಅಹಮ್ಮದಾಬಾದ್‌ನಲ್ಲಿ ಡಿವಿಜನಲ್ ಇಂಜಿನಿಯರ್ ಆಗಿ ಗುಜರಾತ್, ಮಧ್ಯಪ್ರದೇಶ್ ಮತ್ತು ಮಹಾರಾಷ್ಟ್ರಗಳಲ್ಲಿ ಟೆಲಿಕಮ್ಯುನಿಕೇಶನನ್ನು ವಿಸ್ತರಿಸುವ ಜವಾಬ್ದಾರಿಯನ್ನು ನಿರ್ವಹಿಸಿದರು.

ಆಗಸ್ಟ್ 1974ರಿಂದ ಮೇ 1978ರವರೆಗೆ ಗೋವಾದ ಪಣಜಿಯಲ್ಲಿ ಮೈಕ್ರೋವೇವ್ ಪ್ರಾಜೆಕ್ಟಿನ ಡಿವಿಜನಲ್ ಇಂಜಿನಿಯರ್ ಆಗಿ ಮಹಾರಾಷ್ಟ್ರ ಮತ್ತು ಗೋವಾಗಳಲ್ಲಿ ಮೈಕ್ರೋವೇವ್ ಸ್ಕೀಂನ್ನು ಬಲಪಡಿಸುವ, ಬಳಿಕ ಮದ್ರಾಸ್‌ನಲ್ಲಿ ಡಿವಿಜನಲ್ ಇಂಜಿನಿಯರ್ ಆಗಿ ಸ್ಯಾಟಲೈಟ್ ಯೋಜನೆಯ (Satellite Communication) ಕಾರ್ಯವನ್ನು ಇವರು ನಿರ್ವಹಿಸಿದರು. ಈ ಸಂದರ್ಭದಲ್ಲಿ ಲಕ್ಷದ್ವೀಪ, ಮದ್ರಾಸ್, ಎರ್ನಾಕುಲಂನಲ್ಲಿ ಸಾಟ್‌ಲೈಟ್ ಯೋಜನೆಯನ್ನು ಕಾರ್ಯಗತಗೊಳಿಸಿದರು. 1979ರ ಡಿಸೆಂಬರಿನಿಂದ 1982 ಮೇಯವರೆಗೆ ಕೇರಳದ ಎರ್ನಾಕುಲಂನ ಟೆಲಿಕಮ್ಯುನಿಕೇಶನ್‌ನ ಜಿಲ್ಲಾ ಪ್ರಬಂಧಕರಾಗಿ ಅಧಿಕಾರ ಸ್ವೀಕರಿಸಿದ ಕೆ. ರಾಮರು 1982ರ ಜುಲೈಯಿಂದ 1985 ಮೇಯವರೆಗೆ ವಿದೇಶ ಪ್ರಯಾಣ ಬೆಳೆಸಿದರು. ಯೆಮನ್ ಅರಬ್ ರಿಪಬ್ಲಿಕ್‌ಗೆ ತೆರಳಿ ಅಲ್ಲಿನ ವಿವಿಧ ಪಟ್ಟಣಗಳಲ್ಲಿ ಅಂಡರ್‌ಗ್ರೌಂಡ್ ಕೇಬಲ್ ಡಕ್ಕ್ ಸಿಸ್ಟಂ ಮತ್ತು ಕೇಬಲ್ ನೆಟ್‌ವರ್ಕ್ ಯೋಜನೆಯನ್ನು ಅನುಷ್ಠಾನಕ್ಕೆ ತಂದರು.

ಅಲ್ಲಿಂದ ಮುಂದೆ 1985-86ರ ಕಾಲದಲ್ಲಿ ಮಧುರೆಯಲ್ಲಿ ಟ್ರಾನ್ಸ್‌ಮಿಶನ್ ಯೋಜನೆಯ ನಿರ್ದೇಶಕರಾಗಿ ತಮಿಳುನಾಡು ಮತ್ತು ಕೇರಳದಲ್ಲಿ ಡಿಜಿಟಲ್ ಮೈಕ್ರೋವೇವ್ ಸಿಸ್ಟಂನ ಪ್ರಾಯೋಯೋಗಿಕ vಪರೀಕ್ಷೆಯನ್ನು ನಡೆಸಿದರು. 1986ರಲ್ಲಿ ಬೆಂಗಳೂರಿಗೆ ಬಂದ ರಾಮರು ಟ್ರಾನ್ಸ್‌ಮಿಶನ್ ಪ್ರಾಜೆಕ್ಟಿನ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಬೆಂಗಳೂರಿನಿಂದ 1990ರಲ್ಲಿ ಮಂಗಳೂರಿಗೆ ಬಂದ ಅವರು 1996ರ ವರೆಗೆ ದಕ್ಷಿಣಕನ್ನಡ ಜಿಲ್ಲಾ ಟೆಲಿಕಾಂ ಮಹಾಪ್ರಬಂಧಕರಾಗಿ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರು ತೋರಿದ ಸಾಧನೆ ರಾಷ್ಟ್ರಮಟ್ಟದಲ್ಲಿ ಅವರಿಗೆ ಕೀರ್ತಿಯನ್ನು ತಂದುಕೊಟ್ಟಿತು.

1996ರಲ್ಲಿ ಮದ್ರಾಸ್‌ನ ಸೌತರ್ನ್ ಟೆಲಿಕಾಂ ಪ್ರಾಜೆಕ್ಟಿನ ಮುಖ್ಯ ಜನರಲ್ ಮೆನೇಜರ್ ಆಗಿ ಭಡ್ತಿ ಹೊಂದಿದ ರಾಮರು ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡುಗಳ ಹೊಣೆಯನ್ನು ನಿರ್ವಹಿಸಿದರು. 1998ರ ಜನವರಿಯಲ್ಲಿ ಟೆಲಿಕಾಂ ಇಲಾಖೆಯ ಕರ್ತವ್ಯದಿಂದ ನಿವೃತ್ತರಾದರು.

ರಾಮರು ಹೈದರಾಬಾದಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ದೂರವಾಣಿ ಇಲಾಖೆಯು ಬಹಳ ದೊಡ್ಡ ತೊಂದರೆಯನ್ನನುಭವಿಸುತ್ತಿತ್ತು. ಮಹತ್ವದ ನಗರಗಳಾದ ಹೈದರಾಬಾದ್ – ಮುಂಬಯಿ, ಹೈದರಾಬಾದ್ – ವಿಜಯವಾಡ, ಚೆನ್ನೆ  ಮೊದಲಾದ ಅತ್ಯಂತ ವಿಸ್ತತ ವಲಯದ ನಡುವೆ ಸಂಪರ್ಕ ಕಲ್ಪಿಸುವುದು ಬಹಳ ಕಷ್ಟಕರವಾಗಿತ್ತು. ಈಗಿನಂತೆ ಅಂಡರ್‌ಗ್ರೌಂಡ್ ವ್ಯವಸ್ಥೆ ಇನ್ನೂ ಬಂದಿರಲಿಲ್ಲ. ಆಗ ಓವರ್‌ಹೆಡ್ ತಂತಿಗಳನ್ನೇ ಜೋಡಿಸಬೇಕಿತ್ತು. ಈ ತಂತಿಗಳ ಮೂಲಕ ನಗರ ನಗರಗಳನ್ನು ಜೋಡಿಸುವ ಕಷ್ಟದ ಜೊತೆಗೆ ತಂತಿ ಕಳ್ಳರ ಕಾಟ ಬೇರೆ.

ತಾಮ್ರದ ತಂತಿಗಳನ್ನು ರಾತ್ರಿ ಹೊತ್ತಿನಲ್ಲಿ ಕದಿಯುವ ಕಳ್ಳರು ಹೆಚ್ಚಾದಾಗ ಸ್ವತಃ ರಾಮರೇ ಪೊಲೀಸ್ ಮತ್ತು ಸಿಬ್ಬಂದಿಗಳ ಜೊತೆಗೂಡಿ ರಾತ್ರೋರಾತ್ರಿ ಕಳ್ಳರನ್ನು ಹಿಡಿಯುವ ಕಾರ್ಯದಲ್ಲಿ ತೊಡಗಿದ್ದರು. ಹೆಂಡತಿ ಮಕ್ಕಳನ್ನು ಮನೆಯಲ್ಲಿ ಬಿಟ್ಟು ರಾತ್ರಿಯಿಡೀ ತಂತಿಗಳನ್ನು ಕಡಿದು ಒಯ್ಯುವ ಕಳ್ಳರನ್ನು ಹಿಡಿದ ಪ್ರಸಂಗಗಳು ಹಲವು. ಈ ಕಾರ್ಯಾಚರಣೆಯಿಂದ ತಂತಿಕಳ್ಳರ ಕಾಟ ಕಡಿಮೆಯಾಯಿತು. ಉನ್ನತಾದಿಕಾರಿಗಳು ಈ ಕುರಿತು ರಾಮರ ಸಾಹಸವನ್ನು ಮೆಚ್ಚಿಕೊಂಡಿದ್ದರು.

ರಾಮರು ಎಷ್ಟು ಸರಳಜೀವಿಯಾಗಿದ್ದರು ಎಂದರೆ ಹೈದರಾಬಾದಿನಲ್ಲಿ 1920-72ರ ಅವಧಿಯಲ್ಲಿ ಉನ್ನತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಸರ್ಕಾರಿ ವಾಹನದ ಸೌಲಭ್ಯ ಇದ್ದಾಗಲೂ ಕಛೇರಿಯಿಂದ ಮನೆಗೆ, ಮನೆಯಿಂದ ಕಛೇರಿಗೆ ಹೋಗು ವಾಗ ಸೈಕಲನ್ನೇ ಬಳಸುತ್ತಿದ್ದರು. ಇಂದು Family ಟೂರಿಗೂ ಸರ್ಕಾರಿ ವಾಹನಗಳನ್ನು ಬಳಸುವ ಅಧಿಕಾರಿಗಳು ರಾಮರ ಈ ನಿಷ್ಠೆಯನ್ನು ಗಮನಿಸಬೇಕು.

ರಾಮರು ದೂರದರ್ಶಿತ್ವವುಳ್ಳ ಒಬ್ಬ ಅಧಿಕಾರಿಯಾಗಿದ್ದರು. ಟೆಲಿಕಾಂನ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸಲು ಅವರು ಹೋದಲ್ಲೆಲ್ಲಾ ಪ್ರಯತ್ನಿಸಿದ್ದಾರೆ. ಪ್ರತೀ ತಾಲೂಕು ಕೇಂದ್ರಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮೈಕ್ರೋವೇವ್ ಟವರ್‌ಗಳನ್ನು ಸ್ಥಾಪಿಸಿದ್ದು ಇವರ ಕಾರ್ಯಜವಾಬ್ದಾರಿ ನಿರ್ವಹಣೆಗೆ ಸಾಕ್ಷಿಯಾಗಿವೆ. ದಕ್ಷಿಣಭಾರತದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಆಪ್ಟಿಕಲ್ ಪೈಬಲ್ ಕೇಬಲ್‌ಗಳನ್ನು ಇವರ ಕಾಲಾವದಿಯಲ್ಲಿ ಜೋಡಿಸಲಾಯಿತು. ಬೃಹತ್ ಪ್ರಮಾಣದ ಈ ಕಾಮಗಾರಿಯಿಂದ ದಕ್ಷಿಣಕನ್ನಡ ಜಿಲ್ಲೆಯಲ್ಲಿ STD ಸೇವೆಯನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲು ಸಹಕಾರಿಯಾಯಿತು. ಈ ಸಂಪರ್ಕ ವ್ಯವಸ್ಥೆಯಿಂದ ಇಂದಿನ ಮೊಬೈಲ್ ಮತ್ತು ಬ್ರಾಡ್‌ಬ್ಯಾಂಡ್ ವ್ಯವಸ್ಥೆಯನ್ನು ಗ್ರಾಮಾಂತರ ಪ್ರದೇಶಗಳಿಗೆ ತಲುಪಿಸಲು ಸಾಧ್ಯವಾಗಿದೆ. ರಾಮ ಮತ್ತು ಅವರ ತಂಡದ ಪ್ರಯತ್ನದ ಫಲವಾಗಿ ಸಾರ್ವಜನಿಕರಿಗೆ ದೂರವಾಣಿ ಸಂಪರ್ಕದ ಲಾಭ ದೊರೆಯುವಂತಾಯಿತು ಮಾತ್ರವಲ್ಲ ಇಲಾಖೆಗೂ ಆರ್ಥಿಕ ಸಂಪನ್ಮೂಲ ಹರಿದುಬಂತು.

ಗ್ರಾಮಗಳ ಕಡೆಗೆ ಗಮನ

ಗ್ರಾಮಗಳ ಅಬಿವೃದ್ಧಿಂಯೇ ಭಾರತದ ಅಭಿವೃದ್ಧಿ ಎಂಬ ಗಾಂದಿ ತತ್ವದ ಮೇಲೆ ಅಪಾರ ಗೌರವ ಹೊಂದಿದ್ದ ರಾಮರು ವೃತ್ತಿಯಲ್ಲಿರುವಾಗ ಗ್ರಾಮೀಣ ಪ್ರದೇಶದಲ್ಲಿ ಟೆಲಿಕಾಂ ವ್ಯವಸ್ಥೆಯನ್ನು ಬಲಪಡಿಸುವುದಕ್ಕೆ ವಿಶೇಷ ಆಸಕ್ತಿಯನ್ನು ತೋರಿದರು. ಮುಖ್ಯವಾಗಿ ಎರ್ನಾಕುಲಂನಲ್ಲಿ ಟೆಲಿಕಾಂನ ಜಿಲ್ಲಾ ಪ್ರಬಂಧಕರಾಗಿದ್ದಾಗ 1976-82ರ ಅವಧಿಯಲ್ಲಿ ಗ್ರಾಮೀಣ ಟೆಲಿಕಾಂ ನೆಟ್‌ವರ್ಕ್ ಯೋಜನೆಯ ಜವಾಬ್ದಾರಿ ಹೊತ್ತು ಎರ್ನಾಕುಲಂ ಜಿಲ್ಲೆಯ ಗ್ರಾಮ ಪ್ರದೇಶಗಳನ್ನು ಟೆಲಿಪೋನು ಯುಕ್ತ ಪ್ರದೇಶವಾಗಿಸಿದ್ದರು. ಅಲ್ಲದೇ ಸುತ್ತಲೂ ನೀರು ಆವರಿಸಿ ತೆಪ್ಪ, ದೋಣಿಗಳಲ್ಲೇ ಪ್ರಯಾಣಿಸಬೇಕಾದ ದ್ವೀಪದಂತಿದ್ದ ಪ್ರದೇಶಗಳಿಗೂ ಟೆಲಿಕಾಂ ಸೇವೆಯನ್ನು ತಲಪಿಸಿದ ಕೀರ್ತಿ ರಾಮರದ್ದು.

1982-85ರ ಕಾಲದಲ್ಲಿ ಯೆಮನ್ ಅರಬ್ ರಿಪಬ್ಲಿಕ್‌ನ ಆಹ್ವಾನ ಸ್ವೀಕರಿಸಿ ಅಲ್ಲಿಯೂ ರೂರಲ್ ನೆಟ್‌ವರ್ಕ್ ಯೋಜನೆಯ ಕರ್ತವ್ಯ ನಿರ್ವಹಿಸಿ ಅಲ್ಲಿನ ಸರಕಾರದ ವಿಶೇಷ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಂಗಳೂರಿಗೆ ಬಂದ ಮೇಲಂತೂ ಗ್ರಾಮ ಪ್ರದೇಶಗಳಲ್ಲಿ ಟೆಲಿಕಾಂ ಕ್ರಾಂತಿಯನ್ನೇ ರಾಮ ಮಾಡಿದರು. ದಕ್ಷಿಣಕನ್ನಡ ಟೆಲಿಕಾಂ ಜಿಲ್ಲೆಯಲ್ಲಿ 200 ಎಕ್ಸ್‌ಚೇಂಜ್‌ಗಳಲ್ಲಿ 190 ಎಕ್ಸ್‌ಚೇಂಜ್‌ಗಳು ಗ್ರಾಮೀಣ ಪ್ರದೇಶದಲ್ಲಿದೆ. ಈ ಪ್ರದೇಶಗಳಿಗೆ ಎಸ್‌ಟಿಡಿ ಸೌಲಭ್ಯಗಳನ್ನು ಒದಗಿಸಿದ ಹಿರಿಮೆಗೆ ಇವರು ಪಾತ್ರರಾದರು.

ಸಾಗರೋಲ್ಲಂಘನ

ದೇಶೀಯ ಮಟ್ಟದಲ್ಲಿ ಕಜಂಪಾಡಿ ರಾಮ ಅವರು ಮಾಡಿದ ಟೆಲಿಕಾಂ ಸಾಧನೆಯು ಸಾಗರವನ್ನು ದಾಟಿ ವಿದೇಶದವರು ಅವರನ್ನು ಬರಮಾಡಿಕೊಳ್ಳುವಂತೆ ಮಾಡಿತು. ಭಾರತ ಸರಕಾರವೂ ರಾಮರ ಸಾಧನೆಯನ್ನು ಗುರುತಿಸಿ ಅಧ್ಯಯನ ಮತ್ತು ವಿದೇಶಿ ಸಹಕಾರದ ಉದ್ದೇಶದಿಂದ ಇವರನ್ನು ವಿದೇಶದ ಟೆಲಿಕಾಂ ಅಭಿವೃದ್ಧಿ ಕಾರ್ಯಗಳಿಗೆ ಕಳುಹಿಸಿಕೊಟ್ಟಿತು.

1979ರಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಓವರ್‌ಸೀಸ್ ಟೆಲಿಕಮ್ಯುನಿಕೇಶನ್ ಕಮಿಶನ್ ಏರ್ಪಡಿಸಿದ ಏಳು ವಾರಗಳ ಉಪಗ್ರಹ ಸಂಪರ್ಕ ಕುರಿತ ವಿಶೇಷ ಅಧ್ಯಯನಕ್ಕಾಗಿ ರಾಮರು ಹೋಗಿದ್ದರು. 1995ರಲ್ಲಿ ಕೆನಡಾಕ್ಕೆ ಪ್ರಯಾಣ ಬೆಳೆಸಿದ ರಾಮರು ವಯರ್‌ಲೆಸ್ ಲೋಕಲ್ ಲೂಪ್ ಮತ್ತು ಗ್ರಾಮೀಣ ಸಂಪರ್ಕದ ಕುರಿತು ತರಬೇತಿ ಪಡೆದು TEMICಯ ಪದವಿಯನ್ನು ಪಡೆದು ಬಳಿಕ ಭಾರತದ ಇಲಾಖಾ ಸೇವೆಯಲ್ಲಿ ಅದನ್ನು ಸಮರ್ಥವಾಗಿ ಬಳಸಿಕೊಂಡರು.

1982-85ರಲ್ಲಿ ಯೆಮನ್ ಅರಬ್ ರಿಪಬ್ಲಿಕ್‌ನ ಟೆಲಿಕಮ್ಯುನಿಕೇಶನ್‌ನ ನೆಟ್‌ವರ್ಕ್ ಯೋಜನೆಯ ಜವಾಬ್ದಾರಿಯನ್ನು ನಿರ್ವಹಿಸಿದ ಇವರು 1994ರಲ್ಲಿ ಜಪಾನ್‌ನ ಟೋಕಿಯೋದಲ್ಲಿ 6 ತಿಂಗಳ ಕಾಲ ಡಿಜಿಟಲ್ ರೇಡಿಯೋ ರಿಲೆ ವ್ಯವಸ್ಥೆಯ ಪರಿಶೀಲನೆ ಯನ್ನು ನಡೆಸಿದರು. 1994-95ರಲ್ಲಿ ನೇಪಾಳದ ಕಾಠ್ಮಂಡುವಿನಲ್ಲಿ ಟೆಲಿಕಮ್ಯುನಿಕೇಶನ್ ನೆಟ್‌ವರ್ಕ್‌ನ ಯೋಜನೆಯನ್ನು ITU (International Telecommunication Unit) ಜಿನೇವಾ ಅಭಿವೃದ್ಧಿ ಯೋಜನೆಯ ವತಿಯಿಂದ ನಿರ್ವಹಿಸಿದರು. 1997 – 98ರಲ್ಲಿ ಅಂತಾರಾಷ್ಟ್ರೀಯ ಟೆಲಿಕಮ್ಯುನಿಕೇಶನ್ ಯೂನಿಯನ್‌ನ ವತಿಯಿಂದ ಕಾಠ್ಮಂಡುವಿನ ಟೆಲಿಕಾಂ ತರಬೇತಿ ಕೇಂದ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾರ್ಗದರ್ಶನ ಮಾಡಿದ್ದಾರೆ.

ವಿಶ್ರಾಂತಿಯಲ್ಲೂ ಸೇವೆ

ಟೆಲಿಕಾಂ ಇಲಾಖೆಯಿಂದ ನಿವೃತ್ತರಾದ ಬಳಿಕವೂ ತಮ್ಮ ಅನುಭವ ಮತ್ತು ಸೇವೆಯನ್ನು ದೂರಸಂಪರ್ಕ ಕ್ಷೇತ್ರಕ್ಕೆ ನೀಡುತ್ತಿರುವ ರಾಮರು 1998ರಿಂದ 2001ರ ವರೆಗೆ ಯುನೈಟೆಡ್ ಟೆಲಿಕಾಂ ಲಿಮಿಟೆಡ್‌ನ ಸಿಇಒ ಆಗಿ ಬೆಂಗಳೂರು ಕೇಂದ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. 2001ರಿಂದ 2003ರ ವರೆಗೆ ರಿಲೈಯನ್ಸ್ ಇನ್‌ಫೋ ಕಾಂ. ಲಿಮಿಟೆಡ್‌ನ ಯೋಜನಾ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. 2003ರಿಂದ 2006ರ ವರೆಗೆ ಜಿಐಜಿಎ ನೆಟ್‌ವರ್ಕ್ ಲಿಮಿಟೆಡ್‌ನ ತಾಂತ್ರಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.

ದೂರಸಂಪರ್ಕವನ್ನು ಹತ್ತಿರಕೆ ತಂದವರು

ದೂರ ದೂರದಲ್ಲಿರುವವರೊಂದಿಗೆ ಮಾತಾಡುವ ಉದ್ದೇಶದಿಂದ ಟ್ರಂಕ್‌ಕಾಲ್ ಬುಕ್ ಮಾಡಿ ನಾಲ್ಕಾರು ತಾಸು ಕಾದು ಕೊನೆಗೂ ಸಿಗದೇ ಬೇಸತ್ತು ಕಾಲ್ ಕ್ಯಾನ್ಸಲ್ ಮಾಡಿ ಮನೆಯಿಂದ ಹೊರಟರು ರಾಯರು. ಅವರು ಇನ್ನೇನೊ ತೋಟದಾಚೆಗಿನ ಬಯಲಿಗೆ ಕಾಲಿಟ್ಟಿರಬಹುದು ಅಷ್ಟೇ. ಆಗ ಕ್ಯಾನ್ಸಲ್ ಆದ ಕರೆ ಜೀವ ಪಡೆದು ಆ ಕಡೆಯಿಂದ ಆಪರೇಟರ್ ಧ್ವನಿ ‘ಹಲೋ ಟ್ರಂಕ್ ಕಾಲ್ ಮಾತಾಡಿ’ ಎನ್ನುತ್ತದೆ. ರಿಸೀವರ್ ಕೈಗೆತ್ತಿಕೊಂಡ ಮನೆಯ ಕೆಲಸದಾಳು ‘ದನಿಗಳು ಮನೆಯಲ್ಲಿಲ್ಲ’ ಎಂದು ರಿಸೀವರ್ ಕುಕ್ಕುತ್ತಾನೆ. ರಾಯರ ಲೆಕ್ಕಕ್ಕೆ ಟ್ರಂಕ್ ಕಾಲ್ ಚಾರ್ಜು ಬೀಳುತ್ತದೆ.

ಇದು ಕಾಲ್ಪನಿಕ ಕತೆಯೂ ಅಲ್ಲ. ಯಾವುದೋ ಹಳೆ ಸಿನಿಮಾದ ದೃಶ್ಯವೂ ಅಲ್ಲ. ರಾಮರು ಮಂಗಳೂರಿನ ಟೆಲಿಕಾಂ ಇಲಾಖೆಗೆ ಕಾಲಿಡುವಾಗ ಇದ್ದ ಪರಿಸ್ಥಿತಿ. ಟ್ರಂಕ್ ಕಾಲ್ ಸಿಗಲು ವಿಳಂಬ, ಕ್ರಾಸ್‌ಟಾಕ್, ಇಲಾಖೆಯ ಸಿಬ್ಬಂದಿಗಳ ಒರಟುತನ, ರಕ್ತದೊತ್ತಡ ಹೆಚ್ಚಿಸುವ ಪೋನ್ ಬಿಲ್ಲು, ರಾಂಗ್ ನಂಬರ್ ಚೇಷ್ಟೆ ಇವೆಲ್ಲವುಗಳಿಂದ ಬೇಸತ್ತ ದಕ್ಷಿಣಕನ್ನಡದ ದೂರವಾಣಿ ಬಳಕೆದಾರ ಈ ಪೋನಿನ ಸಹವಾಸ ಬೇಡಪ್ಪಾ ಎನ್ನುವಂತಾಗಿದ್ದ.

ಹೀಗೆ ಗಾಢನಿದ್ರೆಯಲ್ಲಿದ್ದ ಟೆಲಿಕಾಂ ಇಲಾಖೆಗೆ ಕಾಯಕಲ್ಪ ಸಿಕ್ಕಿದ್ದು ರಾಮ ಎಂಬ ಈ ದಕ್ಷ ಮೇಲದಿಕಾರಿ ಬಂದ ಬಳಿಕ. ರಾಮಾಯಣದಲ್ಲಿ ಒಂದು ಪ್ರಸಂಗ ಬರುತ್ತದೆ. ಕಲ್ಲಾಗಿದ್ದ ಅಹಲ್ಯೆ ಆ ದಾರಿಯಾಗಿ ಬಂದ ರಾಮನ ಪಾದ ಸ್ಪರ್ಶದಿಂದ ಶಾಪ ವಿಮೋಚನೆಗೊಂಡಳು. ಅಂತೆಯೇಯೇ ಜಡಸ್ಥಿತಿಯಲ್ಲಿದ್ದ ದಕ್ಷಿಣಕನ್ನಡ ಟೆಲಿಕಾಂ ಇಲಾಖೆಗೆ ರಾಮರ ಆಗಮನದಿಂದ ಹೊಸ ಜೀವ ಬಂತು. ‘‘ಬಳಕೆದಾರನೇ ನಿಜವಾದ ಒಡೆಯ. ನಾವು ಅವರ ಸೇವಕರು’’ ಎಂಬ ಘೋಷಣೆಗೆ ಜೀವ ಬಂದು ಬೆರಳೆಣಿಕೆಯ ವರ್ಷಗಳಲ್ಲಿ ಜಿಲ್ಲೆಯ ಪರಿಸ್ಥಿತಿಂಯೇ ಸಂಪೂರ್ಣ ಬದಲಾಯಿತು.

ಕೆ. ರಾಮ ದಕ್ಷಿಣಕನ್ನಡ ಟೆಲಿಕಾಂಗೆ ಜನರಲ್ ಮೆನೇಜರ್ ಆಗಿ ಬಂದ ಕೇವಲ 18 ತಿಂಗಳಲ್ಲಿ ಪೂರ್ಣ ಜಿಲ್ಲೆಯನ್ನು ದೂರಸಂಪರ್ಕ ಮತ್ತು ಇಲೆಕ್ಟ್ರಾನಿಕ್ ವ್ಯವಸ್ಥೆಯ ಜಾಲಕ್ಕೆ ಒಳಪಡಿಸಿದ್ದು ದೇಶದಲ್ಲೇ ಪ್ರಥಮ ಸಾಧನೆ. ಬೆರಗು ಹುಟ್ಟಿಸಿದ ಸಾಧನೆ. ನಾಗರಿಕತೆಯ ಜೀವನಾಡಿಗಳಂತೆ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಉದ್ದಗಲಕ್ಕೂ ಇಂದು ಹರಡಿಕೊಂಡಿರುವ ದೂರವಾಣಿ ತಂತಿಗಳು ರಾಮರ ಅಂದಿನ ಪರಿಶ್ರಮದ ಕತೆ ಹೇಳುತ್ತವೆ. ದಕ್ಷಿಣಕನ್ನಡದ ಬಹುತೇಕ ಹಳ್ಳಿಗಳು ಇಂದು ದೂರವಾಣಿ ವ್ಯವಸ್ಥೆಯ ಅತಿ ಆಧುನಿಕ ರೀತಿಯ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳುವಂತಾಗಲು ರಾಮರು ಮೂರು ವರ್ಷಗಳ ಕಾಲ ಹಗಲು ರಾತ್ರಿಯೆನ್ನದೇ ದುಡಿದ ಪರಿಶ್ರಮದ ಹೋರಾಟವಿದೆ.

ರಾಮರು ವಿಶೇಷತಃ STD ಸೌಲಭ್ಯ ಜಾಲದ ವಿಸ್ತರಣೆಯಲ್ಲಿ ತುಂಬ ಆಸಕ್ತಿ ವಹಿಸಿದ್ದವರು. ಬಂದವರೇ STD, ISTD ಸೌಲಭ್ಯದಂತಹ ಅತಿ ತ್ವರಿತ ಮತ್ತು ಉಳಿತಾಯದ ಉಪಯೋಗವನ್ನು ಹಳ್ಳಿಹಳ್ಳಿಗೂ ಒದಗಿಸಿದರು. ದೂರವಾಣಿ ಮನೆ ಮನೆ ಮಾತಾಯಿತು.

‘ಎಲ್ಲಾ ಮಂಡಲ ಪಂಚಾಯ್ತಿಗಳಿಗೂ 1994ರ ಒಳಗೆ ದೂರವಾಣಿ’ ಎಂಬ ಕೇಂದ್ರ ಸರಕಾರದ ಘೋಷಣೆಯನ್ನು ಎರಡು ವರ್ಷ ಮುಂಚಿತವಾಗಿ ಅಂದರೆ 1992ರ ಒಳಗೆ ಪೂರ್ಣವಾಗಿ ದ.ಕ. ಜಿಲ್ಲೆಯ ವ್ಯಾಪ್ತಿಯಲ್ಲಿ ಅಳವಡಿಸಿದ ಕೀರ್ತಿ ರಾಮ ಅವರದ್ದು. ಇದರಿಂದ ದೇಶದಲ್ಲಿ ಅತಿಶೀಘ್ರ ಗತಿಯಲ್ಲಿ ದೂರವಾಣಿಗಳನ್ನು ಪಡೆದುಕೊಂಡ ಮೊದಲ ಜಿಲ್ಲೆಯೆಂಬ ದಾಖಲೆ ದಕ್ಷಿಣಕನ್ನಡದ ಹೆಸರಿನಲ್ಲಿ ಇತಿಹಾಸದ ಪುಟ ಸೇರುವಂತಾಯಿತು. ರಾಮರು ಅಲ್ಲಿಗೇ ವಿರಮಿಸಲಿಲ್ಲ.

ಕರಾವಳಿ ಕರ್ನಾಟಕದ ಅಂಡರ್‌ಗ್ರೌಂಡ್ ಟೆಲಿಪೋನ್ ತಂತಿಗಳು ಸಮುದ್ರದ ಕಡೆಯಿಂದ ಬೀಸುವ ಉಪ್ಪು ಗಾಳಿಯ ಹವಾಮಾನದಿಂದ ತೊಂದರೆ ಅನುಭವಿಸುತ್ತಿತ್ತು. ದಕ್ಷಿಣಕನ್ನಡದಲ್ಲಿ ಒಳ್ಳೆಯ ಮಳೆಯೂ ಬೀಳುವುದರಿಂದ ಮಳೆಗಾಲ ಆರಂಭವಾಯಿತೆಂದರೆ ಬಹುತೇಕ ಗ್ರಾಮೀಣ ಪ್ರದೇಶದ ಟೆಲಿಪೋನುಗಳು ಮೌನವ್ರತ ಆಚರಿಸ ತೊಡಗುತ್ತವೆ. ಇದನ್ನು ಮನಗಂಡ ರಾಮರು ಸರಕಾರಕ್ಕೆ ನಿರಂತರ ಒತ್ತಡ ಹೇರಿ ಆರ್ಥಿಕ ಸಂಪನ್ಮೂಲವನ್ನು ಕ್ರೋಡೀಕರಿಸಿ ಈ ಸಮಸ್ಯೆಗೆ ರಾಮಬಾಣವನ್ನು ತಂದರು. ಸಮಸ್ಯೆ ನಿವಾರಣೆಗೆ ಕೇಬಲ್‌ಗಳ ವ್ಯವಸ್ಥೆಯನ್ನು ಪುನರ್‌ರೂಪಿಸಿದರು. 30 ಕೋಟಿಗೂ ಹೆಚ್ಚಿನ ವೆಚ್ಚ ತಗಲಿತಾದರೂ ಜಗತ್ತಿನ ಅತ್ಯಾಧುನಿಕ ರೀತಿಯ ಕೇಬಲ್ ಸಿಸ್ಟಂನ್ನೂ DUCT ದ.ಕ. ಜಿಲ್ಲೆಗೆ ತಂದುಕೊಟ್ಟ ಕೀರ್ತಿ ರಾಮರಿಗೆ ಸಲ್ಲುತ್ತದೆ.

ಬಳಕೆದಾರರ ಅಪೇಕ್ಷೆ, ನಿರೀಕ್ಷೆಗಳನ್ನು ಗೌರವಿಸಿ, ಸ್ಪಂದಿಸಿ ಇಲಾಖೆಯನ್ನು ಸಂಪೂರ್ಣವಾಗಿ ಬದಲಾಯಿಸಿದ್ದು ರಾಮ ಅವರ ಮಹತ್ವದ ಸಾಧನೆ. ಅವರು ಅಧಿಕಾರ ವಹಿಸಿಕೊಂಡ ಬಳಿಕ ಲಂಚವಿಲ್ಲ. ಯಾವುದೇ ವಾಮಮಾರ್ಗೀಯ ಚಟುವಟಿಕೆಗಳಿಲ್ಲ. ಬಳಕೆದಾರರಿಗೆ ಗರಿಷ್ಠ ಪ್ರಮಾಣದ ಸೇವೆ ಕೊಡುವುದೇ ನಮ್ಮ ಗುರಿ ಎಂಬುದು ರಾಮ ಮತ್ತು ಅವರ ಟೆಲಿಕಾಂ ಸಹೋದ್ಯೋಗಿಗಳ ಧ್ಯೇಯವಾಕ್ಯ. ಇದು ಇಡೀ ಇಲಾಖೆಯ ಕಾರ್ಯವೈಖರಿಯ ನಿತ್ಯಸೂತ್ರವಾಗಿತ್ತು.

ಜಿಲ್ಲೆಯ ಹೆಚ್ಚಿನ ಎಲ್ಲಾ ಎಕ್ಸ್‌ಚೇಂಜ್‌ಗಳನ್ನು ಇಲೆಕ್ಟ್ರಾನಿಕ್ ಎಕ್ಸ್‌ಚೇಂಜ್‌ಗಳಾಗಿ ಪರಿವರ್ತಿಸಿದ್ದು, STD ಸರ್ವೀಸ್ ಕೊಡಲು ಜಿಲ್ಲೆಯ 8 ತಾಲೂಕುಗಳಿಗೆ 8 ಮೈಕ್ರೋವೇವ್ ಟವರ್‌ಗಳನ್ನು ಸ್ಥಾಪಿಸಿದ್ದು, ಅತ್ಯಾಧುನಿಕ ತಂತ್ರಜ್ಞಾನದ ಓಪ್ಟಿಕಲ್ ಪೈಬರ್ ಕೇಬಲ್ ಸಿಸ್ಟಂ ಅಳವಡಿಕೆ, ದೂರವಾಣಿ ಲೈನ್‌ಗಳ ದೋಷ ಹುಡುಕಿ ಹೇಳುವ ಆಧುನಿಕ ಸಿಸ್ಟಂ ಕಂಪ್ಯೂಟರ್ ಜೋಡಣೆ, ಹೆಜ್ಜೆ ಹೆಜ್ಜೆಗೂ ಪಬ್ಲಿಕ್ ಟೆಲಿಪೋನುಗಳ ಸ್ಥಾಪನೆ, ಅದರ ಉಪಯೋಗದ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ, ದೂರವಾಣಿಗೆ ಸಂಬಂದಿಸಿದ ಅತ್ಯಾಧುನಿಕ ರೀತಿಯ ಎಲ್ಲ ಸೌಲಭ್ಯಗಳನ್ನು ಜಿಲ್ಲೆಗೆ ತಂದುದು, ದೂರವಾಣಿ ಬದುಕಿನ ಅಗತ್ಯಗಳಲ್ಲಿ ಒಂದು ಎನ್ನುವ ಪ್ರಜ್ಞೆಯನ್ನು ಸಾರ್ವತ್ರಿಕವಾಗಿ ಮೂಡಿಸಿದ್ದು, ಟೆಲಿಕಾಂ ಇಲಾಖೆಯ ನೌಕರ ಮತ್ತು ಅಧಿಕಾರಿಗಳ ಒಟ್ಟು ಔದಾಸೀನ್ಯವನ್ನು ಹೋಗಲಾಡಿಸಿ ಕ್ರಿಯಾಶೀಲತೆ, ದಕ್ಷತೆ, ಪ್ರಾಮಾಣಿಕತೆಯಿಂದ ದುಡಿಯುವಂತೆ ಮಾಡಿದ್ದು ಹಾಗೆ ನೂರಾರು ಸಾಧನೆಗಳನ್ನು ಏಕಕಾಲದಲ್ಲಿ ಸಾದಿಸಿದ್ದು ರಾಮ ಅವರ ಹೆಗ್ಗಳಿಕೆ.

ಪುಣ್ಯಕ್ಷೇತ್ರಗಳಾದ ಧರ್ಮಸ್ಥಳ, ಕೊಲ್ಲೂರು, ಉಳ್ಳಾಲ, ಅತ್ತೂರು, ಮೂಡಬಿದ್ರೆ, ಸುಬ್ರಹ್ಮಣ್ಯ ಮುಂತಾದ ಕ್ಷೇತ್ರಗಳಿಗೆ ರಾಮರು  STD ಸೌಲಭ್ಯ ಕಲ್ಪಿಸಿದ್ದಾರೆ. ಆಗಿನ ಸಂಪರ್ಕ ಖಾತೆ ಸಚಿವರ ಆದೇಶದಂತೆ 1995 ಮಾರ್ಚ್ 31ರೊಳಗೆ ಎಲ್ಲ ಗ್ರಾಮ ಪಂಚಾಯತುಗಳಿಗೆ ದೂರವಾಣಿ ಸೌಲಭ್ಯ ನೀಡಬೇಕು. ಆದರೆ 1992ರ ಮಾರ್ಚ್ ಕೊನೆಯೊಳಗೆ ಎಲ್ಲಾ 445 ಗ್ರಾಮ ಪಂಚಾಯತುಗಳಿಗೂ ಈ ಸೌಲಭ್ಯ ಲಬಿಸಿ ನಿಗದಿತ ಅವಧಿಗಿಂತ ಮೂರು ವರ್ಷ ಮುನ್ನವೇ ದ.ಕ. ಟೆಲಿಕಾಂ ಈ ಕಾರ್ಯವನ್ನು ಸಾದಿಸಿತು.

ರಾಮರು 1990ರ ಅಕ್ಟೋಬರಿನಲ್ಲಿ ಜಿಲ್ಲೆಯ ದೂರಸಂಪರ್ಕ ಇಲಾಖೆಗೆ ಬಂದು ಅಧಿಕಾರ ಸ್ವೀಕಾರ ಮಾಡುವಾಗ ಕರ್ನಾಟಕದ ಉಳಿದ ಜಿಲ್ಲೆಗಳಂತೇ ಅಭಿವೃದ್ಧಿ ಮತ್ತು ಆಧುನೀಕರಣಗೊಳ್ಳುವ ದಿಕ್ಕಿನಲ್ಲಿ ಮಂಗಳೂರು ತೆವಳುತ್ತಿತ್ತು. ಆಗ ಇದ್ದ 37,000 ಲೈನ್‌ಗಳು ರಾಮರು ಬಂದ ಬಳಿಕ ಒಂದು ಲಕ್ಷ ಲೈನ್‌ಗಳಿಗೂ ಹೆಚ್ಚು ಕಾರ್ಯ ನಿಭಾವಣೆಯ ಶಕ್ತಿ ಪಡೆಯಿತು. ಅವರು ಬರುವಾಗ ಕೇವಲ ಮೂರು ಎಲೆಕ್ಟ್ರಾನಿಕ್ ಎಕ್ಸ್‌ಚೇಂಜ್‌ಗಳಿದ್ದುದು ಎರಡೇ ವರ್ಷಗಳಲ್ಲಿ 80ರ ಗಡಿಯನ್ನು ದಾಟಿತ್ತು. 12 ಇದ್ದ STD ಸ್ಟೇಶನ್ 77 ಆಯಿತು. 47 ಇದ್ದ ಸಾರ್ವಜನಿಕ ಟೆಲಿಪೋನು ಬೂತು 300ರ ಗಡಿ ದಾಟಿತು. ಹೊಸ ಮೈಕ್ರೋವೇವ್ ಸ್ಟೇಶನ್ ಕೂಡ ಬಂತು.

ಜಿಲ್ಲೆಯ ಎಲ್ಲಾ 191 ಎಕ್ಸ್‌ಚೇಂಜ್‌ಗಳಲ್ಲಿ ಸಂಪೂರ್ಣವಾಗಿ STD/ISD ಸೇವೆ ಲಭ್ಯವಾಗುವಂತೆ ಮಾಡಿರುವುದು ಒಂದು ಮೈಲಿಗಲ್ಲು. ಮಾತ್ರವಲ್ಲ ಎಲ್ಲ Exchange ಗಳನ್ನು ಇಲೆಕ್ಟ್ರಾನಿಕ್ ಎಕ್ಸ್‌ಚೇಂಜ್‌ಗಳಾಗಿ, STD ಸೇವೆಯನ್ನೊಳಗೊಂಡ exchange ಗಳಾಗಿ ಪರಿವರ್ತಿಸಲಾಯಿತು. ಸಿ. ಡಾಟ್ ತಾಂತ್ರಿಕತೆಯನ್ನು ಅಳವಡಿಸಲಾಯಿತು.
ಸಿ. ಡಾಟ್ ಬರುವ ಮೊದಲು ಇಲಾಖೆಯಲ್ಲಿ ಐಟಿಐ ಉಪಕರಣಗಳನ್ನು ಬಳಸಲಾಗುತ್ತಿತ್ತು. ಆದರೆ ಅದಕ್ಕಿಂತ ವಿಬಿನ್ನವೂ ಉತ್ಕೃಷ್ಟವೂ ಆದ ಸಿ.ಡಾಟ್ ಯಂತ್ರೋಪಕರಣವನ್ನು ರಾಮರ ಅವಧಿಯಲ್ಲಿ ತರಲಾಯಿತು. 1984ರಲ್ಲಿ ದೇಶದಲ್ಲಿ ಸ್ಯಾನ್ ಪಿತ್ರೋಡಾ ಅವರು ಮೊದಲು ಸಿ.ಡಾಟ್ ತಂತ್ರಜ್ಞಾನವನ್ನು ಬಳಕೆಗೆ ತಂದರು. ರಾಮರು ಅದರ ಸತ್ಯಾಂಶವನ್ನು ಮನಗಂಡು ತಮ್ಮ ಅದಿಕಾರಾವದಿಯಲ್ಲಿ ಸಿ. ಡಾಟ್ ತಾಂತ್ರಿಕತೆಯನ್ನು ಜಿಲ್ಲೆಯಲ್ಲಿ ಅಳವಡಿಸಿದರು.

ಕೈಗೆತ್ತಿಕೊಂಡ ಕಾರ್ಯವನ್ನು ಪೂರ್ಣವಾಗಿಸುವ ಅವರ ಇಚ್ಛಾಶಕ್ತಿಗೆ ಕದ್ರಿಯಲ್ಲಿ ಸ್ಥಾಪಿಸಿದ ಟೆಲಿಕಾಂ ಕಟ್ಟಡವೇ ಸಾಕ್ಷಿ. ಕರ್ನಾಟಕ ಸರ್ಕಾರದ ಅದೀನದಲ್ಲಿದ್ದ ಮುಕ್ಕಾಲು ಎಕ್ರೆ ಜಾಗವನ್ನು ನೀಡಲು ತೋಟಗಾರಿಕಾ ಇಲಾಖೆಯಿಂದ ವಿರೋಧ ವ್ಯಕ್ತವಾದಾಗ ಉನ್ನತ ಅಧಿಕಾರಿಗಳನ್ನೂ ಒಪ್ಪಿಸಿ ಜಿಲ್ಲೆಯ ಜನತೆಗೆ ಈ ಕಟ್ಟಡದಿಂದ ಆಗುವ ಉಪಕಾರವನ್ನು ವಿವರಿಸಿ ಕಟ್ಟಡದ ಕಾರ್ಯವನ್ನು ತಾವೇ ನಿಂತು ಪೂರ್ಣಗೊಳಿಸಿದರು. ರಾಮರು ತಂದುಕೊಟ್ಟ ಈ ಟೆಲಿಕಾಂ ಪ್ರಗತಿ ಹಲವು ಯುವಕರ ಬದುಕಿಗೆ ದಾರಿದೀಪವಾಯಿತು. ಅನೇಕ ನಿರುದ್ಯೋಗಿಗಳು ಮತ್ತು ಅಂಗವಿಕಲರು ಪಬ್ಲಿಕ್ ಟೆಲಿಪೋನು ಬೂತ್‌ಗಳನ್ನು ಆರಂಬಿಸಿ ದುಡಿಮೆಗೆ ಹೀಗೂ ಒಂದು ದಾರಿಯಿದೆ ಎಂದು ತೋರಿಸಿ ಅವರಲ್ಲಿ ಆತ್ಮವಿಶ್ವಾಸವನ್ನು ರಾಮರು ತುಂಬಿದ್ದಾರೆ. ಟೆಲಿಕಾಂ ಇಲಾಖೆ ಬಳಕೆದಾರನ ಸುಖಕ್ಕಾಗಿ, ಸೇವೆಗಾಗಿ ಎಂದು ಬಲವಾಗಿ ನಂಬಿದ್ದ ರಾಮರು ಕಣ್ಣಿಗೆ ಎಣ್ಣೆ ಹಾಕಿಕೊಂಡು ಕಾಯುವಂತೆ ಗ್ರಾಹಕನಿಗೆ ಒಂಚೂರು ತೊಂದರೆಯಾಗದಂತೆ ವೃತ್ತಿ ಪ್ರಜ್ಞೆಯನ್ನು ಮೆರೆದರು. ಜತೆಗಿರುವ ಇಲಾಖಾ ಸಿಬ್ಬಂದಿಗಳನ್ನು ಅದಕ್ಕೆ ಅಣಿಗೊಳಿಸಿದರು. ಗ್ರಾಹಕರ ದೂರುಗಳನ್ನು ಆಲಿಸಲೆಂದೇ ಪ್ರತ್ಯೇಕ ವಿಭಾಗವೊಂದನ್ನು ಮಂಗಳೂರಲ್ಲಿ ತೆರೆದರು.

ಗ್ರಾಹಕ ಜಾಗೃತಿಗೆ ವಿನೂತನ ಪ್ರಯತ್ನ

ಸ್ವಾತಂತ್ರ್ಯ ಸಿಕ್ಕಿದಂದಿನಿಂದ ಇದುವರೆಗೂ ಸರ್ಕಾರಿ ಇಲಾಖೆಗಳ ಬಗೆಗೆ ಸಾರ್ವಜನಿಕರದು ಒಂದೇ ದೂರು. ‘ನಮ್ಮ ಸಮಸ್ಯೆಗಳಿಗೆ ಸ್ಪಂದನ ವಿಲ್ಲ’ ಎಂಬುದು.  ಸಮಸ್ಯೆಗಳನ್ನು ಕೇಳುವವರೇ  ಇಲ್ಲ.  ಇನ್ನು  ದೂರು ತೆಗೆದುಕೊಂಡು ಇಲಾಖಾ ಕೇಂದ್ರಗಳಿಗೆ ಹೋದರೂ ನಾಳೆ ಬಾ, ನಾಳದು ಬಾ ಎಂಬ ಉಡಾಫೆಯ ಮಾತು. ಜನರ ದೈನಂದಿನ ಬದುಕಿನ ಸಮಸ್ಯೆಗಳಿಗೂ ನಮಗೂ ಸಂಬಂಧವೇ ಇಲ್ಲ ಎನ್ನುವ ಭಾವ ಸರ್ವತ್ರ.

ಇಂತಹ ಸರ್ಕಾರಿ ಇಲಾಖೆಗಳೂ, ಅಧಿಕಾರಿಗಳೂ ರಾಮರಿಂದ ಕಲಿಯಬೇಕಾದ್ದು ಬಹಳ ಇದೆ. ಇವರು 1990ರಲ್ಲಿ ಅಧಿಕಾರ ಸ್ವೀಕರಿಸಿ ಇಲಾಖಾ ಸಿಬ್ಬಂದಿಗಳ ಜತೆಗೆ ಮಾತನಾಡುತ್ತಾ ಹೇಳಿದ ಮೊದಲ ಮಾತೇ ‘ಗ್ರಾಹಕ ನಮ್ಮ ದೊರೆ. ಆತನನ್ನು ಸಂತೋಷ ವಾಗಿಟ್ಟರೆ ನಮಗೆ, ನಮ್ಮ ಇಲಾಖೆಗೆ ನೆಮ್ಮದಿ, ಕೀರ್ತಿ.’ ಈ ಮಾತು ಕೇವಲ ಮಾತಾಗದೇ ಕೃತಿ ರೂಪಕ್ಕೆ ಬಂತು.

ಮಂಗಳೂರಿನ ಟೆಲಿಕಾಂ ಹೌಸ್‌ನ ತನ್ನ ಕಛೇರಿಯಲ್ಲಿ ಬೆಳಗ್ಗೆ 8.30ರಿಂದ ರಾತ್ರಿ 9-10ರ ವರೆಗೂ ಸುತ್ತಲೂ ನಾಲ್ಕಾರು ಟೆಲಿಪೋನುಗಳನ್ನಿರಿಸಿಕೊಂಡ ರಾಮರ ದುಡಿಮೆ. ಗ್ರಾಹಕ ಯಾರು ಬೇಕಿದ್ದರೂ ರಾಮರನ್ನು ನೇರವಾಗಿ ಸಂಪರ್ಕಿಸಬಹುದು. ಸಮಸ್ಯೆಯನ್ನು ತೋಡಿಸಿಕೊಳ್ಳಬಹುದು. ಕೇವಲ ದೂರು ದಾಖಲಿಸಿಕೊಳ್ಳುವುದಲ್ಲ. 24 ಗಂಟೆಯೊಳಗೆ ಸಮಸ್ಯೆಗೆ ಪರಿಹಾರ. ಅಂತಹ ನೂರಾರು ಪ್ರಕರಣಗಳನ್ನು ಅವರ ನಿಡುಗಾಲದ ಒಡನಾಡಿ ನಂದಳಿಕೆ ಬಾಲಚಂದ್ರ ರಾವ್ ನೆನಪಿಸಿಕೊಳ್ಳುತ್ತಾರೆ. ಅವರ ವ್ಯಾಪ್ತಿಯಲ್ಲಿ ಅಷ್ಟೇ ಅಲ್ಲ ಹೊರ ಇಲಾಖೆಗೆ ಸಂಬಂದಿಸಿದ ವ್ಯಕ್ತಿಯಾದರೂ ಸರಿ. ಗ್ರಾಹಕನ ಸಮಸ್ಯೆ ತನ್ನ ಸಮಸ್ಯೆ ಎಂಬಂತೆ ಮಿಡಿವವರು ರಾಮ.

ಜನಸಾಮಾನ್ಯರೊಂದಿಗೆ, ಬಳಕೆದಾರರೊಂದಿಗೆ ರಾಮರು ಹೇಗೆ ಸ್ಪಂದಿಸುತ್ತಾರೆ ಎನ್ನುವುದಕ್ಕೆ ಒಂದು ಸ್ವಾರಸ್ಯಕರ ಘಟನೆಯನ್ನು ಉದಾಹರಿಸಬಹುದು.

ಒಂದು ಸಲ ರಾಮರು ಬೆಂಗಳೂರಿನಿಂದ ಮಂಗಳೂರಿಗೆ ರೈಲಿನಲ್ಲಿ ಬರುವಾಗ ಕಾಸರಗೋಡಿನ ಸಾಹಿತಿ, ಐಕ್ಯಗಾನದ ಕವಿ ಕಯ್ಯರ ಕಿಂಞ್ಞಣ್ಣ ರೈ ಕಾಣಸಿಕ್ಕಿದರಂತೆ. ಲೋಕಾಬಿರಾಮವಾಗಿ ಮಾತನಾಡುವಾಗ ‘ನನ್ನ ಮನೆ ಪೋನು ಕೆಟ್ಟು ವಾರದ ಮೇಲಾಯ್ತು. ಎಷ್ಟು ಸಾರಿ ಹೇಳಿದರೂ ದುರಸ್ತಿಯಾಗಿಲ್ಲ’ ಎಂದರಂತೆ ಕಯ್ಯರರು. ರೈಲಿಳಿದು ತನ್ನ ಕಚೇರಿಗೆ ಬಂದ ರಾಮ ನೇರವಾಗಿ ಕಾಸರಗೋಡಿನ ಇಲಾಖಾ ವರಿಷ್ಟರಲ್ಲಿ ಮಾತನಾಡಿ ಕಯ್ಯರರ ಪೋನನ್ನು ಸುಸ್ಥಿತಿಗೆ ತರುವಂತೆ ವಿನಂತಿಸಿಕೊಂಡರು. ಕಯ್ಯರರು ಪೆರಡಾಲದ ತಮ್ಮ ಮನೆಗೆ ತಲಪುವ ಮೊದಲೇ ಲೈನ್‌ಮ್ಯಾನ್‌ಗಳು ಮನೆಗೆ ಆಗಮಿಸಿಯಾಗಿತ್ತು. ಸಂಜೆಯಾಗುವುದರೊಳಗೆ ಮೂರು ಮಂದಿ ಬೇರೆ ಬೇರೆ ಹೊತ್ತಲ್ಲಿ ಬಂದು ಪೋನಿನ ಯೋಗಕ್ಷೇಮ ವಿಚಾರಿಸಿಕೊಂಡು ಹೋದರಂತೆ.

ಇದನ್ನು ಪುತ್ತೂರು ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದ ಕಯ್ಯರರು ಗ್ರಾಮಾಂತರ ಪ್ರದೇಶದಲ್ಲಿ ಟೆಲಿಪೋನು ಸೌಕರ್ಯ ಹೆಚ್ಚುವಂತಾಗಲು ಬಹಳಷ್ಟು ಸಹಾಯ ಮಾಡಿದ್ದ ಟೆಲಿಕಾಂ ಸಲಹಾ ಸಮಿತಿಯ ಸಕ್ರಿಯ ಸದಸ್ಯರೊಬ್ಬರಿಗೆ ಹೇಳಿ ‘ಸ್ವಾಮಿ ರಾಮ ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ಮೂರು ಮೂರು ಜನ ಬಂದು ನನ್ನ ಪೋನಿನ ಬಗ್ಗೆ ವಿಚಾರಿಸಿಕೊಂಡು ಹೋದರು’ ಎಂದು ಅವರಿಗೆ ತಿಳಿಸಿಬಿಡಿ ಎಂದರಂತೆ. ನಿಷ್ಠೆ, ಗ್ರಾಹಕ ಪ್ರೀತಿ ಎಂದರೆ ಇದು.

ಟೆಲಿಕಾಂ ಸಲಹಾ ಸಮಿತಿಯ ಜತೆಗೆ ಆತ್ಮೀಯ ಸಂಬಂಧ ಹೊಂದಿದ್ದ ರಾಮರು ಆ ಸಮಿತಿಯ ಕ್ರಿಯಾಶೀಲ ಸದಸ್ಯರಾದ ನಂದಳಿಕೆ ಬಾಲಚಂದ್ರರಾಯರಂತವರ  ಒಡನಾಟ ದೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಟೆಲಿಕಾಂ ವಿಸ್ತರಣೆಗೆ ವಿಶೇಷ ಪ್ರಯತ್ನ ನಡೆಸಿ ಯಶಸ್ವಿಯಾದರು. ವಿಸ್ತರಣೆ ಮಾತ್ರವಲ್ಲ ಊರು ಊರುಗಳಲ್ಲಿ ದೂರವಾಣಿ ಬಳಕೆದಾರರ ಸಮಸ್ಯೆಗಳನ್ನು ಕುಂದುಕೊರತೆಗಳನ್ನು ಆಲಿಸಿದರು. ಅದಕ್ಕಾಗಿಂಯೇ ಯೇ ಗ್ರಾಹಕ ಜಾಗೃತಿ ಸಮಿತಿಗಳು, ಗ್ರಾಹಕವಾಣಿ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯಿತು.

ಕೆದಿಂಜೆ, ನಿಟ್ಟೆ, ಬೆಳುವಾಯಿ, ಕಾರ್ಕಳ, ಅಜೆಕಾರು ಕೇಂದ್ರಗಳ ಬಗೆಗೆ, ಅಲ್ಲಿ ದೂರವಾಣಿ ಸೌಲಭ್ಯ ಹೆಚ್ಚಿಸುವ ಬಗ್ಗೆ ಸಲಹಾ ಸಮಿತಿ ಸಭೆಗಳಲ್ಲಿ ಚರ್ಚೆ ನಡೆಯಿತು. ಅದರಂತೆ 1992ರ ಆಗಸ್ಟ್ ತಿಂಗಳಲ್ಲಿ ಮೊದಲ ‘ಗ್ರಾಹಕವಾಣಿ’ ಕಾರ್ಯಕ್ರಮ ನಡೆಯಿತು. ಆ ದಿನ ಜಡಿಮಳೆಯ ನಡುವೆಯೂ ರಾಮರು ಬಂದು ಸಭೆಯ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂದಳಿಕೆಯ ಮುದ್ದಣ ಸಭಾಭವನದಲ್ಲಿ ಕಾರ್ಯಕ್ರಮ ಕೇಂದ್ರವಾಗಿ ಪರಿವರ್ತಿಸುವ ಘೋಷಣೆ ಮಾಡಿದರು. ಭರವಸೆ ಸುಳ್ಳಾಗಲಿಲ್ಲ ರಾಮರ ಅವಧಿಯಲ್ಲಿಯೇ ಇದು ಸಾಧ್ಯವಾಯಿತು.

ಅನಂತರ ‘ಗ್ರಾಹಕವಾಣಿ’ ಕಾರ್ಯಕ್ರಮ ಅಲ್ಲಲ್ಲಿ ನಡೆಯಿತು. ತುಂಬು ಯಶಸ್ಸನ್ನು ಪಡೆಯಿತು. ಇದು ಮಾತ್ರವಲ್ಲದೇ ಗ್ರಾಹಕರಿಂದ ಯಾವುದೇ ಪತ್ರ ಬರಲಿ ಅಂದೇ ಅವರಿಗೆ ರಾಮರು ಉತ್ತರ ನೀಡುತ್ತಿದ್ದರು. ಮುಖತಃ ಭೇಟಿಯಾಗಲು ಬಂದವರಿಗೆ ಯಾವ ಸಬೂಬೂ ಹೇಳದೇ ಸಮಯದ ಮಿತಿ ಇಲ್ಲದೇ ಅವಕಾಶ ಕಲ್ಪಿಸುತ್ತಿದ್ದರು. ಎಂತಹ ಸಂದಿಗ್ಧ ಸನ್ನಿವೇಶ ಎದುರಾದಾಗಲೂ ತಾಳ್ಮೆಗೆಡದೆ, ಗ್ರಾಹಕನಿಗೆ ನೋವಾಗುವಂತೆ ವರ್ತಿಸದೆ ಜನಾನುರಾಗಿಯಾದರು ರಾಮರು.

ಗ್ರಾಹಕವಾಣಿ ಕಾರ್ಯಕ್ರಮದಲ್ಲಿ ಪ್ರತೀ ಎರಡು ತಿಂಗಳಿಗೊಮ್ಮೆ ನಾಲ್ಕೆ ದು ಎಕ್ಸ್‌ಚೇಂಜ್‌ಗಳ ಗ್ರಾಹಕರು ಒಂದೆಡೆ ಸಭೆ ಸೇರುತ್ತಾರೆ. ಆ ಸಭೆಯ ಅಧ್ಯಕ್ಷತೆ ರಾಮರದ್ದು ಟೆಲಿಕಾಂ ವಿಭಾಗೀಯ ಇಂಜಿನಿಯರ್ ಮತ್ತಿತರ ಅಧಿಕಾರಿಗಳು ಆ ಸಭೆಯಲ್ಲಿ ಕಡ್ಡಾಯ ಹಾಜರಿರುತ್ತಾರೆ. ಸಭೆಗೆ ಬಂದ ಗ್ರಾಹಕರು ಆರಂಭದಲ್ಲಿ ತಮ್ಮ ಬೇಡಿಕೆ, ಅಗತ್ಯ, ಸಮಸ್ಯೆಗಳನ್ನು ಹೇಳುತ್ತಾರೆ. ಅದಕ್ಕೆ ಸಂಬಂದಿತ ಅಧಿಕಾರಿಗಳು ಉತ್ತರಿಸುತ್ತಾರೆ. ಕೊನೆಯಲ್ಲಿ ರಾಮರು ಎಲ್ಲವನ್ನು ಆಲಿಸಿ ಪ್ರತಿಯೊಂದಕ್ಕೂ ತಕ್ಕುದಾದ ಪರಿಹಾರ ಕಾರ್ಯಗಳನ್ನು ಸೂಚಿಸುತ್ತಾರೆ. ಇಂತಹ ಸಭೆಗಳು ಜಿಲ್ಲೆಯ ಅಲ್ಲಲ್ಲಿ ನಡೆದು ಊರವರಲ್ಲಿ ಟೆಲಿಕಾಂ ಸಂಸ್ಥೆಯ ಬಗೆಗೆ ವಿಶ್ವಾಸ ಮಾಹಿತಿ ದೊರೆಯುವಂತಾಯಿತು. ಅಧಿಕಾರಿಗಳು, ಸಹೋದ್ಯೋಗಿಗಳು ಚುರುಕಿನಿಂದ, ಪ್ರಾಮಾಣಿಕವಾಗಿ ದುಡಿಯುವಂತಾಯಿತು. ಗ್ರಾಹಕವಾಣಿ ಕಾರ್ಯಕ್ರಮಗಳ ಮೂಲಕ ಸರಕಾರಿ ಇಲಾಖೆಗಳು ಸಾರ್ವಜನಿಕರೊಂದಿಗೆ ನಡೆದುಕೊಳ್ಳಬೇಕಾದ ರೀತಿಗೆ ರಾಮರು ಹೊಸದಾರಿ ತೋರಿದರು. ಇಂದಿಗೂ ನಮ್ಮ ಕೆಇಬಿ, ಟೆಲಿಕಾಂ ಮತ್ತಿತರ ಇಲಾಖೆಯವರು ಸಮರ್ಪಕವಾಗಿ ಇಂತಹ ಕಾರ್ಯಕ್ರಮವನ್ನು ಅಳವಡಿಸಿಕೊಂಡರೆ ಅದ್ಭುತ ಪ್ರಗತಿ ಸಾಧ್ಯ. ಆದರೆ ಇವರಿಗೆಲ್ಲ ರಾಮರ ಇಚ್ಛಾಶಕ್ತಿ, ಗ್ರಾಹಕ ಪ್ರೀತಿ ಇರಬೇಕಲ್ಲ!

ರಾಮರ ಕರ್ತವ್ಯಪ್ರಜ್ಞೆ ಮತ್ತು ಗ್ರಾಹಕ ಗೌರವ ಎಷ್ಟಿತ್ತೆಂದರೆ ಕುಗ್ರಾಮವಾದ ದಿಡುಪೆ ಎಂಬ ದ್ವೀಪ ಪ್ರದೇಶದಿಂದ ದೂರವಾಣಿ ಮನವಿ ಬಂದಾಗ ಸ್ಪಂದಿಸಿದ ರೀತಿಂಯೇ ಸಾಕ್ಷಿ.

ದಿಡುಪೆ ಬೆಳ್ತಂಗಡಿ ತಾಲೂಕಿನ ಒಂದು ಕುಗ್ರಾಮ. ಈ ಗ್ರಾಮ ಸುತ್ತ ಜಲಾವೃತ ವಾಗಿದ್ದು ಅಲ್ಲಿಗೆ ತಲುಪಲು ತೆಪ್ಪದಲ್ಲೇ ಹೋಗಬೇಕು. ಅಲ್ಲಿರುವ ತೆಪ್ಪವೊಂದೇ ದಿಡುಪೆಯನ್ನು ಉಳಿದ ಜಗತ್ತಿನೊಂದಿಗೆ ಸಂಪರ್ಕಿಸುವ ಸಾಧನ. ಅಲ್ಲಿಗೆ ಭೇಟಿ ನೀಡಿದ ರಾಮರು ತುರ್ತು ಅಗತ್ಯಗಳಿಗೆ ದಿಡುಪೆಗೆ ದೂರವಾಣಿ ಸಂಪರ್ಕ ತೀರಾ ಅಗತ್ಯ ಎಂದು ಮನಗಂಡು ಬೆಳ್ತಂಗಡಿ ಯಿಂದ ವಯರ್‌ಲೆಸ್ ಕಮ್ಯುನಿಕೇಶನ್ ಮೂಲಕ 1993ರಲ್ಲಿ ಸಂಪರ್ಕ ಕಲ್ಪಿಸಿದರು. ತೆಪ್ಪದಲ್ಲಿ ಸ್ವತಃ ರಾಮರೇ ದಿಡುಪೆಗೆ ಹೋಗಿ ಟೆಲಿಪೋನು ಕೊಟ್ಟು ಬಂದ ಕ್ಷಣ ಅವಿಸ್ಮರಣೀಯ ಎನ್ನುತ್ತಾರೆ ಅವರ ಅಬಿಮಾನಿಗಳು. ಈ ಕುರಿತು ಧರ್ಮಸ್ಥಳದ ಧರ್ಮಾದಿಕಾರಿ ಡಾ. ವೀರೇಂದ್ರ ಹೆಗ್ಡೆ ಪ್ರಶಂಸೆ ವ್ಯಕ್ತಪಡಿಸಿ ಇಲಾಖೆಗೆ ಪತ್ರ ಬರೆದಿದ್ದರು.

ಸಾರ್ವಜನಿಕರಲ್ಲಿ ಟೆಲಿಕಾಂ ಡಿಪಾರ್ಟ್‌ಮೆಂಟ್ ಬಗೆಗೆ ಜಾಗೃತಿ ಹುಟ್ಟಿಸುವ ಉದ್ದೇಶದಿಂದ ಜನಸಂದಣಿ ಸೇರುವಲ್ಲಿ ಟೆಲಿಕಾಂ ಮಾಹಿತಿ ನೀಡಿಕೆ ಕೇಂದ್ರಗಳನ್ನು ತೆರೆಯುವ ಕಾರ್ಯವನ್ನೂ ರಾಮರು ಮಾಡಿದ್ದಾರೆ. ಕರಾವಳಿ ಉತ್ಸವ, ಜನ ವಿಜ್ಞಾನ ಮೇಳ, ವಿವಿಧ ಕಾಲೇಜುಗಳಲ್ಲಿ ಮತ್ತು ಉಡುಪಿ ಪರ್ಯಾಯ ಉತ್ಸವ ಮೊದಲಾದ ಜನಸಂದಣಿ ಸೇರುವ ಸಂದರ್ಭಗಳಲ್ಲಿ ಟೆಲಿಕಾಂ ಮಾಹಿತಿ ಮತ್ತು ಪ್ರದರ್ಶನ ನಡೆಸಿ ಜನತೆಯ ಹತ್ತಿರ ಹೋಗುವ ಪ್ರಯತ್ನಗಳೂ ನಡೆದಿವೆ. ರಾಮರ ವಿಶೇಷ ಆಸಕ್ತಿಯಿಂದ ಮೈಸೂರು ದಸರಾ ಉತ್ಸವದಲ್ಲಿ ಟೆಲಿಕಾಂನ ಕುರಿತು ಇಲಾಖಾ ಸಿಬ್ಬಂದಿಗಳೇ ಸೇರಿ ಸ್ಥಬ್ದ ಚಿತ್ರ ಪ್ರಥಮ ಬಹುಮಾನ ಪಡೆಯಿತು. ಇದಲ್ಲದೇ ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆಯುವ ಪೆರೇಡ್‌ನಲ್ಲಿ ಟೆಲಿಕಾಂ ಇಲಾಖೆಯ ಪರವಾಗಿ ದಕ್ಷಿಣಕನ್ನಡ ಟೆಲಿಕಾಂ ಜಿಲ್ಲೆ ಇದೇ ಸ್ಥಬ್ದಚಿತ್ರ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರವಾಗಿತ್ತು.

ರಾಮರು  ಕಛೇರಿಯಲ್ಲೂ,  ಮನೆಯಲ್ಲೂ  ಸದಾ  ಟೆಲಿಕಾಂ  ಬಗೆಗೆ ಯೋಚಿಸುತ್ತಿದ್ದರು. ಕಾಯಕವೇ ಕೈಲಾಸ ಎಂಬ ಅವರ ಟೇಬಲ್ ಮೇಲೆ ಇದ್ದ ವಾಕ್ಯ ಅವರ ಜೀವನವೇ ಆಗಿತ್ತು. ಮಂಗಳೂರಿನಲ್ಲಿದ್ದಾಗಂತೂ ದಕ್ಷಿಣ ಕನ್ನಡವನ್ನು ಟೆಲಿಕಾಂ ನಕಾಶೆಯಲ್ಲಿ ಅದ್ವಿತೀಯಗೊಳಿಸುವ ಬಗ್ಗೆ ಸದಾ ಯೋಚಿಸುತ್ತಿದ್ದರು. ತನ್ನ ಹುಟ್ಟೂರು ಎಂಬ ಅಬಿಮಾನ, ಜಿಲ್ಲೆಯ ಭೌಗೋಳಿಕ ಪರಿಚಯ ಇದಕ್ಕೆ ಕಾರಣ ಇದ್ದಿರಬಹುದು. ‘‘ಆಗೆಲ್ಲಾ ರಾಮ ಅವರ ದಿನಚರಿ ಮುಂಜಾನೆ ಐದು ಗಂಟೆಗೆ ಆರಂಭ. ಮುಂಜಾನೆ 5ರಿಂದ 6ರ ವರೆಗೆ ಮೈದಾನದ ಸುತ್ತ ವಾಕಿಂಗ್. 9.30ಕ್ಕೆ ಆರಂಭವಾದ ಕಛೇರಿಯ ಕೆಲಸ-ಗ್ರಾಹಕರ ಭೇಟಿ ಸಂಜೆ 3ರ ವರೆಗೂ ಮುಂದುವರಿಯುತ್ತಿತ್ತು. ರಾಮರು ಮಧ್ಯಾಹ್ನದೂಟಕ್ಕೆ ಏಳುವಾಗ ಸಂಜೆ 3.45 ಆಗುತ್ತಿತ್ತು. ಮತ್ತೆ ಕೆಲಸದಲ್ಲಿ ಮುಳುಗಿದರೆಂದರೆ ಮಲಗುವಾಗ ನಡುರಾತ್ರಿ’’ ಎಂದು ನೆನಪಿಸಿಕೊಳ್ಳುತ್ತಾರೆ. ರಾಮರ ಒಡನಾಡಿಗಳು.

ಸಿಬ್ಬಂದಿಗಳೂ ಪ್ರೀತಿಸಿದರು

ಸಾಮಾನ್ಯವಾಗಿ ಸರ್ಕಾರಿ ಕೇಂದ್ರಗಳಲ್ಲಿ ದಕ್ಷ, ಪ್ರಾಮಾಣಿಕ, ಕರ್ತವ್ಯನಿಷ್ಠ ಮೇಲದಿಕಾರಿ ಗಳು  ಬಂದಾಗ  ಉಳಿದ  ಸಿಬ್ಬಂದಿಗಳು ಗೊಣಗುತ್ತಾ, ಅಸಹನೆ ವ್ಯಕ್ತಪಡಿಸುವುದನ್ನು ಕಾಣುತ್ತೇವೆ. ಆದರೆ ರಾಮರು ಕಛೇರಿಯಲ್ಲಿ ಒಂದು ಆತ್ಮೀಯ ಪ್ರಭೆಯನ್ನು ಬೀರಿದವರು. ತನ್ನ ಸಹೋದ್ಯೋಗಿಗಳಲ್ಲಿ ದುಡಿಯುವ ಹುಮ್ಮಸ್ಸು, ಸೇವಾಭಾವವನ್ನು ಅದ್ಭುತವೆನ್ನುವ ರೀತಿಯಲ್ಲಿ ಉಂಟುಮಾಡಿದ ರಾಮರು ಕಚೇರಿ ಕೆಲಸವನ್ನು ವೈಯಕ್ತಿಕ ಕೆಲಸಕ್ಕಿಂತ ಹೆಚ್ಚು ಪ್ರೀತಿ ಗೌರವದಿಂದ  ಕಾಣುವಂತೆ  ಟೆಲಿಕಾಂ ಇಲಾಖೆಯ  ಸಿಬ್ಬಂದಿಗಳನ್ನು  ರೂಪಿಸಿದ ಆದರ್ಶ ಅಧಿಕಾರಿ. ಅವರ ನೋವು, ಕಷ್ಟ, ನಷ್ಟ ಗಳನ್ನು ವೈಯಕ್ತಿಕವಾಗಿ ವಿಚಾರಿಸಿ ಸ್ಪಂದಿಸುತ್ತಿದ್ದ ರಾಮರು ಸ್ನೇಹಿತನಂತೆ ವರ್ತಿಸುತ್ತಿದ್ದರು. ಆದ್ದರಿಂದಲೇ ಗ್ರಾಹಕರ ಪಾಲಿಗೆ ಆಪ್ತರಾಗಿದ್ದ ರಾಮರು ಇಲಾಖೆಯ ಸಿಬ್ಬಂದಿಗಳ ಕಣ್ಮಣಿಯೂ ಆಗಿದ್ದರು.

ಅವರಿಗೆ ತಮ್ಮ ಜತೆ ದುಡಿಯುತ್ತಿದ್ದ ಸಿಬ್ಬಂದಿಗಳ ಜತೆಗೆ ಎಂಥ ಪ್ರೀತಿ ಇತ್ತು ಎಂಬುದಕ್ಕೆ ಹಲವು ನಿದರ್ಶನಗಳನ್ನು ನೀಡಬಹುದು.

ರಾಮರು ದ.ಕ. ಜಿಲ್ಲೆಯಲ್ಲಿ ಜನರಲ್ ಮ್ಯಾನೇಜರ್ ಆಗಿದ್ದಾಗ ಟೆಲಿಕಾಂ ಕೇಬಲ್ ನಿರ್ವಹಣೆ ವಿಚಾರದಲ್ಲಿ ತಜ್ಞರು ಮತ್ತು ಹಿಡಿದ ಕಾರ್ಯವನ್ನು ಏಕಾಗ್ರಚಿತ್ತದಿಂದ ನಿರ್ವಹಿಸುವ ಛಲ ಹೊಂದಿದ್ದ ಅಧಿಕಾರಿಗಳಿದ್ದರು. ರಾತ್ರಿಯಿಡೀ ನಿದ್ದೆಗೆಟ್ಟು ನಿಗದಿತ ಸಮಯದೊಳಗೆ ಕೇಬಲ್ ಹಾಕುವ ಕಾರ್ಯ ಮುಗಿಸಬೇಕೆಂದು ಲೆಕ್ಕಹಾಕಿದ ಅವರು ಹರಸಾಹಸಪಟ್ಟು ಅದನ್ನು ಮುಗಿಸುತ್ತಿದ್ದರು. ಆದ್ದರಿಂದ ಇಲಾಖೆಯ ಕಾರ್ಮಿಕ ಸಿಬ್ಬಂದಿಗಳು ಹೊಂಡ ತೋಡುವ, ಕೇಬಲ್ ಜೋಡಿಸುವ ಕಾರ್ಯವನ್ನು ರಾತ್ರಿಯಿಡೀ ಮಾಡುತ್ತಿದ್ದರು. ಅಂತಹ ದಿನಗಳಲ್ಲಿ ಜನರಲ್ ಮ್ಯಾನೇಜರ್ ಎಂಬ ಪ್ರತಿಷ್ಠಿತ ಹುದ್ದೆಯಲ್ಲಿದ್ದ ರಾಮರು ಸ್ವತಃ ಬೆಳಗಿನ ಜಾವ 5 ಗಂಟೆಗೆ ಕೆಲಸಗಾರರ ತಂಡಕ್ಕೆ ಟೀ-ಕಾಪಿಯನ್ನು ತಂದು ಕೊಡುತ್ತಿದ್ದರು. ಮೇಲದಿಕಾರಿಯೊಬ್ಬನಿಗೆ ಇಲಾಖೆೆಯ ಇತರ ಕಾರ್ಮಿಕರ ಜತೆಗೆ ಈ ರೀತಿಯ ಪ್ರೀತಿಯಿರುವುದನ್ನು ಇಂದು ಊಹಿಸಲಾದರೂ ಸಾಧ್ಯವೇ?

ಆಪೀಸಿನಲ್ಲಿ ದುಡಿಯುವ ಮಹಿಳಾ ಸಿಬ್ಬಂದಿಗಳ ಮಕ್ಕಳಿಗಾಗಿಂಯೇ ಕಛೇರಿಯ ಬಳಿಯಲ್ಲಿಯೇ ‘ಶಿಶುಕೇಂದ್ರ’ವೊಂದನ್ನು ಆರಂಬಿಸಿ, ಅಲ್ಲಿ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಆಯವೊಬ್ಬರನ್ನು ರಾಮರು ನಿಯಮಿಸಿದ್ದರು. ಅಷ್ಟೇ ಅಲ್ಲ 2 ಗಂಟೆಗೊಮ್ಮೆ ಮಗುವಿನ ಹತ್ತಿರ ತಾಯಿ ಹೋಗಿ ಬರುವುದಕ್ಕೆ ಅವಕಾಶ ಕಲ್ಪಿಸಿದ್ದರು. ಸಣ್ಣ ಮಗುವನ್ನು ಮನೆಯಲ್ಲಿ ಬಿಟ್ಟು ಬಂದ ತಾಯಿ ಆತಂಕ ಒತ್ತಡಗಳ ನಡುವೆ ಕಾರ್ಯವೆಸಗುವಂತಾಗಬಾರದು ಎಂಬುದು ಅವರ ಆಶಯವಾಗಿತ್ತು. ಕಛೇರಿಯಲ್ಲಿ ಒಂದು ಮನೆಯ ಪ್ರೀತಿ, ವಾತ್ಸಲ್ಯದ ಪರಿಸರವನ್ನು ದೊಡ್ಡಣ್ಣನ ಸ್ಥಾನದಲ್ಲಿ ನಿಂತು ಇವರು ನಿರ್ವಹಿಸಿದ್ದಾರೆ.

ಟೆಲಿಕಾಂ ಇತಿಹಾಸದಲ್ಲೇ ಒಳ್ಳೆಯ ಕೆಲಸಗಾರರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಇವರು ಮಾಡಿದ್ದಾರೆ. ಡಿಪಾರ್ಟ್‌ಮೆಂಟ್ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ ‘ಸಂಚಾರ ಸಾರಥಿ ಪ್ರಶಸ್ತಿ’ಯನ್ನು ನೀಡುವ ಕಾರ್ಯಕ್ರಮ ರಾಮರ ಕಾಲಾವದಿಯಲ್ಲಿ ಆರಂಭವಾಯಿತು. ಸಾರ್ವಜನಿಕ ಸೇವೆಯ ಧ್ಯೇಯಗಳಿರುವ ಟೆಲಿಸಂಪರ್ಕ ಇಲಾಖೆಯ ತಳಮಟ್ಟದ ನೌಕರನ ಉತ್ತಮ ಸೇವೆಯೂ ಗುರುತಿಸಲ್ಪಡಬೇಕು, ಗೌರವಿಸಲ್ಪಡಬೇಕು ಎಂಬ ಘನ ಉದ್ದೇಶದಿಂದ ‘ಸಂಚಾರ ಸಾರಥಿ ಪ್ರಶಸ್ತಿ’ಯನ್ನು ಆರಂಬಿಸಲಾಯಿತು. 1992ರಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ರಾಮರು ‘‘ಜನರಿಗೆ ಬೇಕಾಗುವ ನಗುಮೊಗದ ಸೇವೆಂಯೇ ನಿಜವಾದ ಪ್ರಶಸ್ತಿ ಎಂದು ತಿಳಿದು ಕಾರ್ಯವೆಸಗುವ’’ ಎಂದಿದ್ದರು.

ಸಿಬ್ಬಂದಿಗಳ ಜತೆಗಿನ ಈ ಆತ್ಮೀಯ ಸಂಬಂಧದಿಂದಾಗಿ ರಾಮರ ಅವಧಿಯಲ್ಲಿ ಕಾರ್ಮಿಕ ಮುಷ್ಕರವಾಗಲೀ, ಪ್ರತಿಭಟನೆಗಳಾಗಲೀ ಇರಲಿಲ್ಲ. ಇಡೀ ಟೆಲಿಕಾಂ ಇಲಾಖೆ ಸಹಕಾರ-ಪ್ರೀತಿಯಿಂದ ತಮ್ಮ ಕಾರ್ಯವನ್ನು ಆನಂದಿಸುವ ವಾತಾವರಣದಿಂದಿತ್ತು.

ಸರಕಾರಿ ಇಲಾಖೆಗಳೆಂದರೆ ಹಳದಿ ಬಣ್ಣ ಮೈಗೆ ಬಳಿದುಕೊಂಡ ಬೋಳು ಬೋಳಾದ ಕಟ್ಟಡ ನಮ್ಮ ಕಣ್ಣೆದುರು ಬರುವುದು ಸಾಮಾನ್ಯ. ಆದರೆ ರಾಮರು ಮಂಗಳೂರಿಗೆ ಬಂದ ಬಳಿಕ ಟೆಲಿಕಾಂ ಹೌಸ್ ಇದಕ್ಕಿಂತ ತೀರಾ ಬಿನ್ನವಾಗಿ ಬಂದವರ ಮನಕ್ಕೆ ಮುದ ನೀಡುವ, ಕಣ್ಣಿಗೆ ಸಂತೋಷ ನೀಡುವ ಸುಂದರ ತಾಣವಾಯಿತು. ಮಂಗಳೂರಿನ ಓಲ್ಡ್ ಕೇಂಟ್ ರಸ್ತೆಯಲ್ಲಿರುವ ದೂರಸಂಪರ್ಕ ಇಲಾಖೆಯ ಟೆಲಿಕಾಂ ಹೌಸ್ ರಾಮರ ಕಾಲದಲ್ಲಿ ಒಂದು ಕನಸಿನ ಲೋಕದಂತಿತ್ತು. ಟೆಲಿಕಾಂ ಈ ಜಿಲ್ಲಾ ಕಚೇರಿ ರಾಮರ ಕಾರ್ಯದಕ್ಷತೆ, ಸೂಕ್ಷ ್ಮತೆ, ಸ್ವಚ್ಛತೆ, ಸೌಂದರ್ಯಪ್ರಜ್ಞೆ ಮತ್ತು ಬಳಕೆದಾರರ ಮೇಲಿನ ಪ್ರೀತಿಗೆ ಹಿಡಿದ ಕನ್ನಡಿಯಂತಿತ್ತು. ಇದು ಸರಕಾರಿ ಕಚೇರಿಯಂತಿರದೆ ದಕ್ಷತೆ, ಶಿಸ್ತುಗಳಿಂದ ಕೂಡಿದ ಖಾಸಗಿ ಆಪೀಸಿನಂತಿತ್ತು. ಟೆಲಿಕಾಂ ಹೌಸ್‌ನ ನಾಲ್ಕು ಬದಿಗಳಲ್ಲಿ ಬಗೆಬಗೆಯ ಹೂವಿನ ಗಿಡಗಳನ್ನೂ ನೆಡಲಾಗಿತ್ತು. ಈ ಅಲಂಕಾರದ ನಡುವೆ ಮೊದಲಿಗೆ ಕಾಲಿಟ್ಟವರಿಗೆ ಯಾರಿಗೇ ಆದರೂ ಗಾರ್ಡನ್‌ಗೆ ಬಂದಿದ್ದೇವೆಂಯೇ ಎನಿಸುವಷ್ಟು ಅಚ್ಚುಕಟ್ಟು, ಚಂದ. ಆಗಿನ ಜಿಲ್ಲಾದಿಕಾರಿ ಭರತ್‌ಲಾಲ್ ಮೀನಾ ಅವರು ಸರ್ಕಾರಿ ಆಪೀಸು ಹೇಗಿರಬೇಕು ಎಂಬುದಕ್ಕೆ ದ.ಕ. ಟೆಲಿಕಾಂ ಹೌಸ್ ಮಾದರಿ, ಮಾರ್ಗದರ್ಶಿ ಎಂದಿದ್ದರು.

ಟೆಲಿಕಾಂ ಹೌಸ್‌ನ ಆರಂಭದಲ್ಲಿ ಭವ್ಯವಾದ ಬಳಕೆದಾರರ ಅಂಗಣ. ಅಲ್ಲೇ ಬಳಕೆದಾರರು ಬಿಲ್ಲುಗಳನ್ನು ಪಾವತಿಸಲು ಅವಕಾಶ. ಎಡ ಮಗ್ಗುಲಿಗೆ ತಿರುಗಿದರೆ ರಿಸ್ಪೆಷನ್ ಕೌಂಟರ್, ನೆಲದಲ್ಲಿ ರತ್ನಗಂಬಳಿ, ಒಳ ಹೋದಂತೆ ಮೂಲೆ ಮೂಲೆಗಳಲ್ಲಿ ಸ್ವಾಗತಿಸುವ ಮನಿಪ್ಲ್ಯಾಂಟುಗಳು. ಒಂದು ಚೂರು ಕಸವಿಲ್ಲ, ಕೊಳಕಿಲ್ಲ. ಪ್ರತಿಯೊಂದು ಕೊಠಡಿಯನ್ನು ಆತ್ಮೀಯ ಎನಿಸುವಂತೆ ಅಲಂಕರಿಸಲಾಗಿತ್ತು. ಈ ಹೌಸ್‌ಗೆ ಬರುವುದೇ ಗ್ರಾಹಕರಿಗೆ ಆನಂದ. ರಾಮ ಅವರು ಕುಳಿತಿದ್ದ ಕೊಠಡಿಯಲ್ಲಿ ಸುಂದರವಾಗಿ ಜೋಡಿಸಿಟ್ಟ ವಿವಿಧ ವಿನ್ಯಾಸದ ದೂರವಾಣಿಗಳು, ನೋಡಲು ಆಕರ್ಷಕ. ಸರ್ಕಾರಿ ಆಪೀಸುಗಳ ಅನ್ಯಮನಸ್ಕತೆ, ಉಡಾಫೆಗೆ ಇಲ್ಲಿ ಅವಕಾಶವಿಲ್ಲ. ಎಲ್ಲರೂ ಗ್ರಾಹಕರ ಅವಶ್ಯಕತೆಗಳಿಗೆ ಸ್ಪಂದಿಸುತ್ತಿದ್ದರು. ಇದೊಂದು ಮನೆ, ಅರಮನೆ, ಆದರ್ಶ ಕಛೇರಿ ಎಲ್ಲವೂ ಆಗಿತ್ತು ಎನ್ನುತ್ತಾರೆ ಅಂದಿನ ಗ್ರಾಹಕರೊಬ್ಬರು.

ಸಾರ್ವಜನಿಕರೊಂದಿಗೆ, ಗಣ್ಯರೊಂದಿಗೆ ರಾಮರಿಗೆ ಉತ್ತಮ ಬಾಂಧವ್ಯ ಇತ್ತು. ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ, ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಶಿವರಾಮ ಕಾರಂತ, ಕವಿ ಕಯ್ಯರ ಕಿಞ್ಞಣ್ಣ ರೈ, ಡಾ. ಬಿ.ಎಂ. ಹೆಗ್ಡೆ, ಮಣಿಪಾಲದ ಕೆ.ಕೆ. ಪೈ, ಉಡುಪಿ ಎಲ್ಲಾ ಮಠಗಳ ಸ್ವಾಮೀಜಿಗಳು, ಕು.ಶಿ. ಹರಿದಾಸ ಭಟ್ಟ, ಪತ್ರಕರ್ತ ಮಿತ್ರರು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಪುಟಗಟ್ಟಲೆ ಹೇಳಬಹುದಾದ ಹೆಸರುಗಳು. ಇವರೆಲ್ಲರೊಂದಿಗೆ ರಾಮರಿಗೆ ಆತ್ಮೀಯ ಒಡನಾಟ. ಅವರಿಗೂ ರಾಮರೆಂದರೆ ಅಬಿಮಾನ. ತನ್ನ ಇಲಾಖೆಯಿಂದ ನೀಡಬಹುದಾದ ಸಹಾಯವನ್ನು ಅತ್ಯಂತ ಮುತುವರ್ಜಿ ಯಿಂದ ಇಂತಹ ಸಮಾಜ ಗುರುತಿಸಿ ಗೌರವಿಸುವ ವ್ಯಕ್ತಿಗಳಿಗೆ ರಾಮರು ಮಾಡುತ್ತಿದ್ದರು.

ಸಾಹಿತಿ ಶಿವರಾಮ ಕಾರಂತರು ದಿನವಿಡೀ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದರಿಂದ ಅವರಿಗೆ ಇಲಾಖೆ ವತಿಯಿಂದ ಟೆಲಿಪೋನು ಒಂದನ್ನು ನೀಡಲಾಯಿತು. ಆದರೆ ಕರೆಯು ಕಾರಂತರಿಗೆ ಕಿರಿಕಿರಿಯಾಗಿ ‘ಪುರೋಹಿತನಾಗಲಿಕ್ಕೆ ನಾನು ತಯಾರಿಲ್ಲ’ ನಿಮ್ಮ ಪೋನು ತೆಗೆದುಕೊಂಡು ಹೋಗಿ ಎಂದು ಹೇಳಿದಾಗ ಒಳಬರುವ ಕರೆಯ ಸೌಲಭ್ಯವನ್ನು ಪೂರ್ಣವಾಗಿ ನಿರ್ಬಂದಿಸಿ ಹೊರಹೋಗುವ ಕರೆಯನ್ನು ಮಾತ್ರ ನೀಡುವ ವಿಶೇಷ ಸೌಲಭ್ಯವನ್ನು ರಾಮರು ಒದಗಿಸಿದ್ದರು. ಮಾತ್ರವಲ್ಲ ಒಬ್ಬರು ಸಿಬ್ಬಂದಿ ಪ್ರತಿದಿನ ಹೋಗಿ ಕಾರಂತರ ಪೋನನ್ನು ಚೆಕ್ ಮಾಡಿ ಬರುವಂತೆ ಆದೇಶಿಸಿದ್ದರು.

ಹೆಸರಾಂತ ಹೃದಯತಜ್ಞ ಡಾ. ಬಿ.ಯಂ. ಹೆಗ್ಡೆ ಅವರು ದೂರವಾಣಿ ಸ್ಥಳಾಂತರಕ್ಕೆ ಅರ್ಜಿ ನೀಡಿ ಹಿಂದಿರುಗಿ ಮನೆ ಸೇರುವಷ್ಟರಲ್ಲಿ ದೂರವಾಣಿ ಸ್ಥಳಾಂತರವಾಗಿತ್ತು. ಎಡನೀರು ಮಠದ ಸ್ವಾಮಿಗಳು ಒಂದು ಸಮಾರಂಭದಲ್ಲಿ ಮಠಕ್ಕೆ ಟೆಲಿಪೋನು ಮತ್ತು STD ಸೌಲಭ್ಯ ಸಂಪರ್ಕದ ಕುರಿತು ಕೇಳಿದ್ದಕ್ಕೆ ಅದು ಕೇರಳದಲ್ಲಿದ್ದರೂ ವಿಶೇಷ ಅನುಮತಿ ಪಡೆದು ಮಠಕ್ಕೆ ರಾಮರು ಟೆಲಿಪೋನು ಒದಗಿಸಿದ್ದರು. ಅದಕ್ಕಾಗಿ ಚೆರ್ಕಳ ಎಕ್ಸ್‌ಚೇಂಜನ್ನು ಮಂಗಳೂರಿನ ವ್ಯಾಪ್ತಿಗೆ ಸೇರಿಸಬೇಕಾಗಿತ್ತು.

ಒಮ್ಮೆ ಹಟ್ಟಿಯಂಗಡಿ ದೇವಸ್ಥಾನಕ್ಕೆ ಹೋಗಿದ್ದಾಗ ಪೂಜೆಯ ವೇಳೆ ಬಲಮುರಿ ಗಣಪತಿಯ ಬಲಗಡೆಯಿಂದ ಮಲ್ಲಿಗೆಯ ಹಾರ ಜಾರಿ ಬಿತ್ತು. ಇದು ದೇವರ ದಂಯೆ, ಪ್ರಸಾದ, ಸೂಚನೆಂಯೆಂದು ತಿಳಿದು ಸ್ಥಳದಲ್ಲೇ ಹಟ್ಟಿಯಂಗಡಿಯಲ್ಲಿ ಹೊಸ ಎಕ್ಸ್‌ಚೇಂಜ್ ಆರಂಭಕ್ಕೆ ಇವರು ಸೂಚಿಸಿದ್ದರು.

ಇಂತಹ ಒಂದಲ್ಲ ಎರಡಲ್ಲ…. ಹತ್ತಾರು ಘಟನೆಗಳನ್ನು ನೆನಪಿಸಬಹುದು. ರಾಮರಿಗೆ ಸಮಾಜದ ಗೌರವಕ್ಕೆ ಪಾತ್ರರಾದವರ ಬಗೆಗಿದ್ದ ಅಬಿಮಾನ ದೇವರ ಮೇಲಿದ್ದ ಭಕ್ತಿಗೆ ಈ ಘಟನೆಗಳು ಅಪೂರ್ವ ನಿದರ್ಶನಗಳಾಗಿ ನಿಲ್ಲುತ್ತವೆ.

ರಾಮ ಅವರ ಮಾನವೀಯ ಮನಸ್ಸಿಗೆ, ಹೃದಯವಂತಿಕೆಗೆ ಒಂದು ಸಾಕ್ಷಿ ಇಲ್ಲಿದೆ. ಪತ್ರಕರ್ತ ನಿತ್ಯಾನಂದ ಪಡ್ರೆಯವರ ಪುತ್ರ ಬೆಂಕಿ ಆಕಸ್ಮಿಕಕ್ಕೆ ತುತ್ತಾಗಿ ಕೆ.ಎಂ.ಸಿ. ಆಸ್ಪತ್ರೆಯ ಬರ್ನ್ಸ್‌ವಾರ್ಡ್‌ನ ಇಂಟೆನ್ಸಿವ್‌ಕ್ಯಾರ್ ವಿಭಾಗದಲ್ಲಿ ದಾರುಣ ಸ್ಥಿತಿಯಲ್ಲಿದ್ದಾಗ ಅದನ್ನು ನೋಡಿ ಕಣ್ಣೀರಿಟ್ಟ ರಾಮ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ತಾನೇ ಠೇವಣಿ  ಭರಿಸಿ 12 ಗಂಟೆಗಳೊಳಗೆ ದೂರವಾಣಿ ಸೌಲಭ್ಯವನ್ನು ಆಸ್ಪತ್ರೆಯಲ್ಲಿ ಮಗು ಇದ್ದಲ್ಲಿಗೆ ಒದಗಿಸಿದರು. ಇದರಿಂದಾಗಿ ಬರ್ನ್ಸ್‌ವಾರ್ಡ್‌ನೊಳಗೆ ಹೋಗಿ ಮಗುವನ್ನು ನೋಡಲಾಗದಿದ್ದರೂ ಮಗು ವಿನೊಂದಿಗೆ ಪೋನಿನಲ್ಲಿ ಸಂಭಾಷಣೆ ಮಾಡುವ ಅವಕಾಶ ತಂದೆ-ತಾಯಿಗಳಿಗೆ ಸಿಕ್ಕಿತು.

‘ಈ ಸಂದರ್ಭದಲ್ಲಿ ನಾನು ಮಾಡಬಹುದಾದ ಉಪಕಾರ ಇದೊಂದೇ. ಬೇರೆ ಏನು ಮಾಡಲಿ’ ಎಂಬುದಷ್ಟೇ ರಾಮ ಆಡಿದ ಮಾತು.

ಸ್ಪಂದನ ಮಾಸಪತ್ರಿಕೆ

ಸ್ಪಂದನ ಕೆ. ರಾಮರ ವಿಶಿಷ್ಟ ಚಿಂತನೆಯ ಕೂಸು. ಗ್ರಾಹಕರು ಮತ್ತು ಇಲಾಖೆಯ ನಡುವೆ ತಿಳುವಳಿಕೆಯನ್ನು ಹಂಚಿಕೊಳ್ಳುವ ಹಾಗೂ ಇಲಾಖೆಯ ಸಾಧನೆ, ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆ, ಅವರೊಳಗಿನ ಸುಪ್ತ ಪ್ರತಿಭೆ ಇವುಗಳಿಗೆ ವೇದಿಕೆಯೊದಗಿಸುವ ಮಾಸಪತ್ರಿಕೆ. ದಕ್ಷಿಣ ಕನ್ನಡ ಟೆಲಿಕಾಂ ಇಲಾಖೆ ಹೊರಡಿಸಿದ ಪತ್ರಿಕೆಯಿದು. ಇಲಾಖೆಯ ಬೆಳವಣಿಗೆಯನ್ನು ಯೋಜನೆಗಳನ್ನು ಬಳಕೆದಾರರಿಗೆ ತಲಪಿಸುವ, ಜನರಲ್ ಮ್ಯಾನೇಜರ್
ಕೆ. ರಾಮ ಅವರು ಮನಬಿಚ್ಚಿ ಮಾತಾಡುವ ವೇದಿಕೆಯೂ ಹೌದು. ಅದರ ಆರಂಭದ ಸಂಚಿಕೆಯಲ್ಲಿ ರಾಮರು ಪತ್ರಿಕೆಯ ಧ್ಯೇಯೋದ್ದೇಶಗಳನ್ನು ಹೀಗೆ ಹೇಳಿದ್ದರು.

‘Spandana has opened up a new and exiting channel of communication with our staff as well as our valued customers. We would all leave no stone unturned in strengthening and enhancing the two way communication in order to make the purpose of our house journal really effective.’

ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಕಡಲ ತೀರದ ಭಾರ್ಗವ ಶಿವರಾಮ ಕಾರಂತರು 26-01-1992ರಂದು ಸ್ಪಂದನದ ಮೊದಲ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ‘‘ಜಗತ್ತಿನ ದೂರವನ್ನು ಸಮೀಪವಾಗಿ ಮಾಡಿ ಮನುಷ್ಯನ ತಿಳಿವಿನ ಎಟುಕನ್ನು ವಿಸ್ತರಿಸಬಲ್ಲ ಈ ಸಂಪರ್ಕ ಸಾಧನ ನಮ್ಮ ಬದುಕಿನ ವಿವಿಧ ಬೆಳವಣಿಗೆಗೆ ನೆರವಾಗಲಿ. ತಿಳಿವನ್ನೂ ಹಿಗ್ಗಿಸಿ ಅವನನ್ನು ಜ್ಞಾನಿಯನ್ನಾಗಿ ಮಾಡಲಿ. ರಾಮ ಮತ್ತು ಅವರ ತಂಡದವರಿಗೆ ಒಳ್ಳೆಯದಾಗಲಿ’’ ಎಂದು ಶುಭ ಹಾರೈಸಿದ್ದರು.

ಅದರ ಮೊದಲ ಸಂಚಿಕೆಯನ್ನು ಓದಿ ಪ್ರತಿಕ್ರಿಯಿಸಿದ್ದ ಸಾಹಿತಿ ಡಾ. ನಾ. ಮೊಗಸಾಲೆ ಯವರು ‘ಈಚೆಗಿನ ದಿನಗಳಲ್ಲಿ ಮಾನ್ಯ ಶ್ರೀ. ಕೆ. ರಾಮ ಅವರು ದೂರಸಂಪರ್ಕ ಇಲಾಖೆಯ ಜನರಲ್ ಮ್ಯಾನೇಜರ್ ಆಗಿ ನಮ್ಮ ಜಿಲ್ಲೆಗೆ ಆಗಮಿಸಿದ ಮೇಲೆ ಪವಾಡ ಸದೃಶವಾದ ಅನೇಕ ಬದಲಾವಣೆಗಳು ಇಲಾಖೆಯಲ್ಲಿ ಆಗಿರುವುದು ಸಂತೋಷದ ವಿಷಯ. ಜನರ ಮತ್ತು ಇಲಾಖೆಯ ಮಧ್ಯೆ ಸ್ನೇಹ ಉತ್ಸಾಹದಿಂದ ಹುಟ್ಟಿದ ಈ ಸ್ಪಂದನ ಸದಾ ಸ್ಪಂದಿಸುವ ಜೀವಂತ ಪತ್ರಿಕೆಯಾಗಿ ಬೆಳೆಯಲಿ’ ಎಂದು ಹಾರೈಸಿದರು.

ಸ್ಪಂದನದಲ್ಲಿ ಜಿಲ್ಲೆಯ ಟೆಲಿಕಾಂ ಇಲಾಖೆಯ ಮಾಹಿತಿ, ಪ್ರಗತಿ, ಇಲಾಖೆಯ ವತಿಯಿಂದ ನಡೆದ ವಿವಿಧ ಕಾರ್ಯಕ್ರಮಗಳ ವರದಿ, ಪ್ರಕಟಣೆಗಳು, ಗ್ರಾಹಕರಿಂದ ಬಂದ ದೂರು, ಬೇಡಿಕೆ, ಪ್ರಶಂಸೆಗಳು, ಇಲಾಖಾ ಸಿಬ್ಬಂದಿಗಳು ಮತ್ತು ಗ್ರಾಹಕರ ಕವಿತೆ, ಕತೆ, ಪುಟ್ಟ ಪುಟ್ಟ ಲೇಖನ ಇತ್ಯಾದಿ ಬರವಣಿಗೆಗಳು ಹಾಗೂ ಇಲಾಖಾ ಚಟುವಟಿಕೆಗಳ ಸಚಿತ್ರ ವರದಿಗಳನ್ನು ಸ್ಪಂದನ ಒಳಗೊಂಡಿರುತ್ತದೆ. ಆರಂಭದಲ್ಲಿ ಯು.ಎಸ್. ಕೃಷ್ಣಮೂರ್ತಿ ಯವರು ಸಂಪಾದಕರಾಗಿ, ಎಸ್.ಎಂ. ಹೆಗ್ಡೆಯವರ ಸಹ ಸಂಪಾದಕರಾಗಿದ್ದರು.

ಇಲಾಖಾ ಸಿಬ್ಬಂದಿಗಳ ಸೇವೆಯನ್ನು ಗುರುತಿಸುವ ಪ್ರಯತ್ನವನ್ನು ಸ್ಪಂದನ ಮಾಡುತ್ತಿತ್ತು. ಉದ್ಯೋಗದಲ್ಲಿ ಭಡ್ತಿ ಸಿಕ್ಕಾಗ, ವಿಶೇಷ ಸಾಧನೆ ಮಾಡಿದಾಗ, ವೃತ್ತಿಯಿಂದ ನಿವೃತ್ತಿ ಹೊಂದಿದಾಗ, ಇಲಾಖೆಯ ಸಿಬ್ಬಂದಿ ಮತ್ತು ಅವರ ಕುಟುಂಬ ವಿಶೇಷ ಸಾಧನೆ ಮಾಡಿದಾಗ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮೆರೆದಾಗ ಅಂತಹ ಉದ್ಯೋಗಿಗಳ ಭಾವಚಿತ್ರವನ್ನು ಹಾಕಿ ಅಬಿನಂದಿಸುವ ಸದ್ಪರಂಪರೆಯನ್ನು ಸ್ಪಂದನ ಆರಂಬಿಸಿತ್ತು. ಹಾ.ಮಾ. ನಾಯಕರಂತಹ ಲೇಖಕರೂ ಸ್ಪಂದನಕ್ಕೆ ಲೇಖನಗಳನ್ನು ಬರೆದಿದ್ದರು ಎಂಬುದೇ ಸ್ಪಂದನದ ಗುಣಮಟ್ಟ ಹೇಗಿತ್ತು ಎಂಬುದಕ್ಕೆ ಸಾಕ್ಷಿ. ಸಾಹಿತಿ ಯು.ಆರ್. ಅನಂತಮೂರ್ತಿಯವರು ಸ್ಪಂದನದ ಸಂಚಿಕೆಗಳನ್ನು ನೋಡಿ ಮೆಚ್ಚಿಕೊಂಡಿದ್ದರು.

ಟೆಲಿಕಾಂ ಕುಟುಂಬದ ಸಾಂಸ್ಕೃತಿಕ ಸೌರಭ

ಮೂಲತಃ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಆಸಕ್ತಿಯಿದ್ದಂತಹ ರಾಮರು ತನ್ನ ಇಲಾಖೆಯ ಸಿಬ್ಬಂದಿಗಳೂ ಪರಸ್ಪರ ಪ್ರೀತಿ ಸ್ನೇಹಮಯ ವಾತಾವರಣದೊಂದಿಗೆ ಬೆರೆಯಬೇಕೆಂಬ ಉದ್ದೇಶದಿಂದ ಎಲ್ಲರೂ ಒಂದುಗೂಡುವ ಒಂದು ವೇದಿಕೆಯನ್ನು ರಚಿಸಿದರು. ಮಹಿಳಾ ದಿನಾಚರಣೆ, ಸಿಬ್ಬಂದಿಗಳೇ ನಿರ್ದೇಶಿಸಿ ನಟಿಸಿದ ನಾಟಕಗಳು, ಸಿಬ್ಬಂದಿಗಳ ಮಕ್ಕಳಿಂದ ನೃತ್ಯಾದಿ ಕಾರ್ಯಕ್ರಮಗಳು, ಟೆಲಿಕಾಂನಿಂದಲೇ ನಡೆಸಲ್ಪಡುತ್ತಿದ್ದ ಶಿಶುಕೇಂದ್ರದ ಪುಟಾಣಿಗಳಿಂದ ಮಕ್ಕಳ ದಿನಾಚರಣೆ, ಗಾಯನ, ನೃತ್ಯ, ಛದ್ಮವೇಷ ಇತ್ಯಾದಿ ಸ್ಪರ್ಧೆಗಳು, ಉದ್ಯೋಗಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಮಹಿಳಾ ಪ್ರಗತಿ ಕುರಿತ ಸಂಗೀತ ರೂಪಕಗಳು, ವರದಕ್ಷಿಣೆ ವಿರೋದಿ ಪ್ರಹಸನಗಳು ಹೀಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ಗಳು ಇಲಾಖೆ ವತಿಯಿಂದ ರಾಮರ ಮುತುವರ್ಜಿಯಲ್ಲಿ ಆಗಾಗ ನಡೆಯುತ್ತಿತ್ತು.

ಒಟ್ಟಿನಲ್ಲಿ ರಾಮರಿಗೆ ಕರ್ತವ್ಯದ ಜತೆಗೆ ಮಾನವೀಯ ಸಂಬಂಧಗಳು ಗಟ್ಟಿಗೊಳ್ಳಬೇಕು. ಮನುಷ್ಯ ಮನುಷ್ಯನನ್ನು ಅರಿಯುವ, ಸಂಬಂಧಗಳ ಮಹತ್ವವನ್ನು ತಿಳಿಯಪಡಿಸುವ ಕಾಳಜಿಯಿತ್ತು ಎಂಬುದು ಇದರಿಂದ ವಿದಿತವಾಗುತ್ತದೆ.

ಗ್ರಾಹಕರಿಗಾಗಿ ಅಲ್ಲಲ್ಲಿ ವಿಚಾರಸಂಕಿರಣಗಳು, ಮಾಹಿತಿ ಸಭೆಗಳನ್ನು ರಾಮರು ಸಂಘಟಿಸಿದ್ದರು. ಹಿರಿಯ ಸಾಹಿತಿಗಳು, ನಾಡಿನ ಗಣ್ಯರು ಇಂತಹ ಸಭೆಗಳಲ್ಲಿ ಭಾಗವಹಿಸುತ್ತಿದ್ದರು. 1992ರಲ್ಲಿ ಕುಕ್ಕುಜಡ್ಕದಲ್ಲಿ ಗ್ರಾಮಾಬಿವೃದ್ಧಿಯಲ್ಲಿ ದೂರಸಂಪರ್ಕದ ಪಾತ್ರ ಎಂಬ ವಿಷಯದ ಕುರಿತು ನಡೆದ ರಾಜ್ಯಮಟ್ಟದ ವಿಚಾರಸಂಕಿರಣದಲ್ಲಿ ಡಾ. ಕೆ. ಶಿವರಾಮ ಕಾರಂತರು ಉಪನ್ಯಾಸ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಸುಬ್ರಾಯ ಚೊಕ್ಕಾಡಿ, ಶಿವರಾಮ ಪೈಲೂರು ಮೊದಲಾದವರು ಇಂತಹ ಸಭೆಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಸಂಸ್ಕೃತಿ ಪ್ರೀತಿ

ಬಾಲ್ಯದ ಶಾಲಾ ದಿನಗಳಿಂದಲೇ ಕಲೆ, ಸಾಹಿತ್ಯ, ಸಂಸ್ಕೃತಿ ಕುರಿತು ವಿಶೇಷ ಆಸಕ್ತಿ ಹೊಂದಿದ್ದ ರಾಮರು  ಬಳಿಕ  ಟೆಲಿಕಾಂ ಡಿಪಾರ್ಟ್‌ಮೆಂಟ್‌ಗೆ ಬಂದ ಮೇಲೆ ಅನೇಕ ಬರಹಗಾರರ ಜತೆಗೆ ಕಲಾವಿದರೊಂದಿಗೆ  ನಿಕಟ ಸಂಪರ್ಕ ಹೊಂದಿದ್ದರು.  ಡಾ. ಶಿವರಾಮ ಕಾರಂತರಿಂದ ತೊಡಗಿ ಚೆನ್ನೆಯ ಡಾ. ಕೃಷ್ಣಭಟ್ ಅರ್ತಿಕಜೆಯವರವರೆಗೆ ನೂರಾರು ಸಾಹಿತಿಗಳೊಂದಿಗೆ ಹತ್ತಿರದ ಒಡನಾಟ ರಾಮರಿಗಿತ್ತು. ಅವರು ಮಂಗಳೂರಿನಲ್ಲಿದ್ದ ಅವಧಿಯಲ್ಲಂತೂ   ಸಾಹಿತಿ,   ಸಂಘಟಕ ನಂದಳಿಕೆ   ಬಾಲಚಂದ್ರರಾವ್ ಅವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದರು. ರಾಮರು ಹೋದಲ್ಲಿ ನಂದಳಿಕೆ; ನಂದಳಿಕೆ ಕರೆದಲ್ಲಿಗೆ ರಾಮರು ಹೀಗೆ ಅನ್ಯೋನ್ಯ ಪ್ರೀತಿಯ ಬೆಸುಗೆ ಇವರಿಬ್ಬರ ನಡುವೆ. ನಂದಳಿಕೆ ಬಾಲಚಂದ್ರರಾಯರು ಟೆಲಿಕಾಂ ಸಲಹಾ ಸಮಿತಿ ಸದಸ್ಯರಾಗಿ 4 ಬಾರಿ ನೇಮಕಗೊಂಡು ಗ್ರಾಮೀಣ ಪ್ರದೇಶದಲ್ಲಿ ಟೆಲಿಕಾಂ ವಿಸ್ತರಣೆಗೆ ರಾಮರೊಂದಿಗೆ ಹೆಗಲೆಣೆಯಾಗಿ ನಿಂತಿದ್ದರು. ಮೊದಲ ‘ಗ್ರಾಹಕವಾಣಿ’ ಕಾರ್ಯಕ್ರಮವೂ ನಂದಳಿಕೆಯ ಮುದ್ದಣ ಸಭಾಭವನದಲ್ಲಿ ನಡೆದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಕೇವಲ ಟೆಲಿಕಾಂ ವಿಭಾಗದ ಕಾರ್ಯಗಳಿಗೆ ಮಾತ್ರ ಸೀಮಿತಗೊಳ್ಳದೇ ರಾಮರು ಸಮಾಜಸೇವೆ, ಸಾಹಿತ್ಯಿಕ, ಸಾಂಸ್ಕೃತಿಕ ಕ್ಷೇತ್ರಗಳಿಗೆ ಸಂಬಂದಿಸಿದ ಕಾರ್ಯಗಳಲ್ಲಿ ಸದಾ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಅಂತಹ ಕಾರ್ಯಕ್ರಮಗಳಿಗೆ ಸಹಾಯ ಸಹಕಾರ ತುಂಬು ಹೃದಯದ ಪ್ರೋತ್ಸಾಹ ನೀಡುತ್ತಿದ್ದರು.

1996ರಲ್ಲಿ ಚೆನ್ನೆ ನ ಕರ್ನಾಟಕ ಸಂಘದಲ್ಲಿ ನಡೆದ ‘ಮುದ್ದಣ ನೆನಪು’ ಕಾರ್ಯಕ್ರಮದಲ್ಲಿ ರಾಮರದ್ದೇ ಮುಂದಾಳ್ತನ. ಡಾ.ಬಿ.ಎ. ವಿವೇಕ ರೈ ಅವರ ಅಧ್ಯಕ್ಷತೆಯಲ್ಲಿ ಆ ತುಳು ಸಮ್ಮೇಳನವು ಅಭೂತಪೂರ್ವ ಯಶಸ್ಸು ಪಡೆಯಿತು. ದೂರ ದೂರಿಂದ ಬಂದ ಅತಿಥಿಗಳನ್ನು ರೈಲ್ವೆ ನಿಲ್ದಾಣದಲ್ಲಿ ತಾವೇ ಬರಮಾಡಿಕೊಂಡು ಸರಿಯಾದ ಆದರಾತಿಥ್ಯ ನೀಡಿ ಕಾರ್ಯಕ್ರಮದ ಬಳಿಕ ರೈಲ್ವೆ ನಿಲ್ದಾಣದವರೆಗೆ ಹೋಗಿ ತಾವೇ ಸ್ವತಃ ಅವರನ್ನು ಬೀಳ್ಕೊಟ್ಟಿದ್ದರು. ಇದು ರಾಮರ ಸಹೃದಯತೆಗೆ ಸಾಕ್ಷಿ.

1997ರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಚೆನ್ನೆನ ಕರ್ನಾಟಕ ಸಂಘದಲ್ಲಿ ನಡೆದ ತುಳು ಸಮ್ಮೇಳನದ ಸಮಾವೇಶ ಸಮಿತಿಯ ಸ್ವಾಗತಾಧ್ಯಕ್ಷರಾಗಿ ಅವರು ಸಮಾವೇಶವನ್ನು ಅಚ್ಚುಕಟ್ಟಾಗಿ ನೆರವೇರಿಸಿದ್ದನ್ನು ಈಗಲೂ ಕೆಲವರು ನೆನಪಿಸಿಕೊಳ್ಳುತ್ತಾರೆ. ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗ, ಅಯನಾವರಂ ಕನ್ನಡ ಸಂಘ, ಕರ್ನಾಟಕ ಸಂಘ ಮುಂತಾದ ಚೆನ್ನೆ ನ ನಗರದ ಹಲವು ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಪ್ರೋತ್ಸಾಹಿಸುತ್ತಿದ್ದರು ಎಂಬುದನ್ನು ಡಾ. ಕೃಷ್ಣ ಭಟ್ ಅರ್ತಿಕಜೆ ನೆನಪಿಸಿಕೊಳ್ಳುತ್ತಾರೆ.

ಅರಸಿ ಬಂದ ಗೌರವಗಳು

ಕೆಲವರಿಗೆ ಗೌರವ ಬರುವುದು ಪ್ರಶಸ್ತಿ ಪುರಸ್ಕಾರಗಳಿಂದ. ದೊಡ್ಡ ಮಟ್ಟದ ಅಬಿನಂದನಾ ಸನ್ಮಾನ ಸಮಾರಂಭಗಳಿಂದ. ಆದರೆ ತಮ್ಮದೇ ಆದ ಪ್ರತಿಭೆ ಸಾಧನೆಗಳ ಮುಖಾಂತರ ಸಿದ್ಧಿ ಪ್ರಸಿದ್ಧಿ ಪಡೆದುಕೊಂಡ ಹಿರಿಯರು ಎಷ್ಟು ಔನ್ನತ್ಯ ಹೊಂದುತ್ತಾರೆಂದರೆ ಪ್ರಶಸ್ತಿಗೆ ಅವರು ಮರ್ಯಾದೆ ತಂದು ಕೊಡುತ್ತಾರೆ. ರಾಮರು ಅಂತಹ ಹಿರಿತನದ ವ್ಯಕ್ತಿತ್ವ ಹೊಂದಿದವರು.

ಜನರ ಪ್ರೀತಿ ಗೌರವಗಳೇ ಬಹುದೊಡ್ಡ ಗೌರವ ಎಂದು ಭಾವಿಸಿದ್ದ ಕೆ. ರಾಮರಿಗೆ ಸಂದ ಗೌರವಗಳು ಸನ್ಮಾನಗಳು ಹಲವು. ಅವುಗಳಲ್ಲಿ ಶಿಖರಪ್ರಾಯ ವಾದುದು ದೂರವಾಣಿ ಕ್ಷೇತ್ರದಲ್ಲಿ ಅವರು ಸಾದಿಸಿದ ಅನನ್ಯ ಸಾಧನೆಗಾಗಿ ಭಾರತ ಸರ್ಕಾರ 1997ರಲ್ಲಿ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಆಗಿನ ಭಾರತದ ರಾಷ್ಟ್ರಪತಿ ಶಂಕರ್‌ದಯಾಳ್ ಶರ್ಮ ಅವರು ಪ್ರಶಸ್ತಿ ಪ್ರದಾನ ಮಾಡಿದ್ದರು. ಅದಲ್ಲದೇ 1995ರಲ್ಲಿ ಬೆಂಗಳೂರಿನಲ್ಲಿ ದೊರೆತ ಕರ್ನಾಟಕ ರಾಜ್ಯಮಟ್ಟದ ಸಂದೇಶ ಪ್ರಶಸ್ತಿ, ಉಡುಪಿ ಅಷ್ಟಮಠದ ಪರ್ಯಾಂಯೋತ್ಸವ ಸಂದರ್ಭದಲ್ಲಿ 1992, 1994, 1996 ಹಾಗೂ 1998ರಲ್ಲಿ ಸತತವಾಗಿ ನಾಲ್ಕು ಬಾರಿ ಪುತ್ತಿಗೆ ಶ್ರೀ, ಶಿರೂರು ಶ್ರೀ, ಸೋದೆ ಶ್ರೀ ಮತ್ತು ಕಾಣಿಯೂರು ಮಠದ ಸ್ವಾಮಿಗಳಿಂದ ಕೃಷ್ಣಾನುಗ್ರಹ ಪ್ರಶಸ್ತಿಗೆ ರಾಮರು ಭಾಜನರಾಗಿದ್ದಾರೆ.

ದೇಶದ ಪ್ರಪ್ರಥಮ ಸರ್ವಾಂಗೀಣ ಅಭಿವೃದ್ಧಿಗೊಂಡ ಟೆಲಿಕಾಂ ಜಿಲ್ಲಾ ಸಾಧಕ ರೆಂದು ಗುರುತಿಸಿ 1996ರ ಫೆಬ್ರವರಿಯಲ್ಲಿ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮತ್ತು ಮಣಿಪಾಲ ಅಕಾಡೆಮಿ ಗೌರವ ಫೆಲೋಶಿಪ್ ಪ್ರದಾನ ಮಾಡಿತ್ತು. ಶಾಲು ಹೊದಿಸಿ, ಹಾರ ಹಾಕಿ, ಗಂಧದ ಕರಂಡಕದಲ್ಲಿ ಫೆಲೋಶಿಪ್ ಪ್ರಶಸ್ತಿಯನ್ನಿಟ್ಟು ಗೌರವ ಪ್ರದಾನ ಮಾಡಿದ ಕೆ.ಕೆ. ಪೈಯವರು

‘‘ರಾಮ ಅವರು ಜಿಲ್ಲೆಯ ಟೆಲಿಕಾಂ ಜನರಲ್ ಮ್ಯಾನೇಜರ್ ಆಗಿ ಬಂದ ಈ ಐದು ವರ್ಷಗಳಲ್ಲಿ ಅವರ ಆದರ್ಶ ಕರ್ತವ್ಯ ನಿಷ್ಠೆಯಿಂದ ಯಾವುದೇ ವೇಳೆಯಲ್ಲಿ ಯಾರು ಅವರ ಭೇಟಿಗೆ ಹೋದರೂ ದಣಿವರಿಯದ ಉಲ್ಲಾಸದ ಮುಗುಳ್ನಗೆಯೊಡನೆ ಸ್ನೇಹಪೂರ್ಣವಾಗಿ ಮಾತಾಡಿಸಿ, ನಿಯಮದ ವ್ಯಾಪ್ತಿಯೊಳಗೆ ಅಗತ್ಯವಾದ ಕಾರ್ಯಗಳನ್ನು ವಿಳಂಬವಿಲ್ಲದೇ ಅನುಷ್ಠಾನಕ್ಕೆ ತರುತ್ತಿದ್ದರು. ಸರಕಾರಿ ರಂಗವಿರಲಿ, ಖಾಸಗಿ ರಂಗವಿರಲಿ ನಿಯೋಜಿತ ಗುರಿ ಸಾಧನೆಗೆ ಹೇಗೆ ಕಾರ್ಯವೆಸಗಬೇಕೆಂಬುದಕ್ಕೆ ರಾಮರು ಮಾದರಿ’’ ಎಂದಿದ್ದರು.

ರಾಮರು ಮಂಗಳೂರು ಬಿಟ್ಟು ಚೆನ್ನೆ ಗೆ ತೆರಳುವ ಸಂದರ್ಭವಂತೂ ಇಡೀ ಜಿಲ್ಲೆಯಲ್ಲೇ ಬೇಸರದ ವಾತಾವರಣ. ಆ ಸಂದರ್ಭದಲ್ಲಿ ಅವರಿಗಾದ ಬೀಳ್ಕೊಡುಗೆ ಸಮಾರಂಭಗಳೆಷ್ಟೋ, ಇಲಾಖೆ ವತಿಯಿಂದ, ಸಿಬ್ಬಂದಿಗಳ ವತಿಯಿಂದ, ಗ್ರಾಹಕರು, ಸಾರ್ವಜನಿಕರ ವತಿಯಿಂದ ಅಲ್ಲಲ್ಲಿ ಗೌರವಗಳು ಸಂದವು. ಇಡೀ ಜಿಲ್ಲೆಯ ನಾಗರಿಕರ ಪರವಾಗಿ 14-02-1996ರಂದು ಮಂಗಳೂರು ಪುರಭವನದಲ್ಲಿ ಅದ್ದೂರಿಯ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಶ್ರೀ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ, ಪೇಜಾವರ ಮಠ ಇವರ ಸಾನಿಧ್ಯದಲ್ಲಿ ಸನ್ಮಾನ ನಡೆಯಿತು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದ ಡಾ. ಎಸ್.ಗೋಪಾಲ್, ಕಟೀಲು ಅಸ್ರಣ್ಣರು, ಕಾರ್ಪೋರೇಶನ್ ಬ್ಯಾಂಕಿನ ಅಧ್ಯಕ್ಷ  ಕೆ.ಆರ್. ರಾಮಮೂರ್ತಿ, ಡಾ. ಬಿ.ಎಂ. ಹೆಗ್ಡೆ, ಅನಂತರಾಮ ರಾವ್, ಹರಿಕೃಷ್ಣ ಪುನರೂರು ಮೊದಲಾದವರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಸನ್ಮಾನ ಸಮಾರಂಭಕ್ಕೆ ಸೇರಿದ್ದ ಬೃಹತ್ ಜನಸ್ತೋಮ ರಾಮರ ಕರ್ತವ್ಯನಿಷ್ಠೆಗೆ ಸಂದ ಗೌರವವೇ ಸರಿ.

ಅಂತೆಯೇ ದೂರವಾಣಿ ಸಲಹಾ ಸಮಿತಿಯ ವತಿಯಿಂದ 9-2-1996ರಂದು ಹೃದಯಸ್ಪರ್ಶಿ ಬೀಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು. ಉದಯವಾಣಿ ಪತ್ರಿಕೆಯ ಸಂಪಾದಕ ಟಿ. ಸತೀಶ್ ಪೈ, ಆಗಿನ ಸಾಂಸದ ಧನಂಜಯಕುಮಾರ್ ಮೊದಲಾದವರು ಇದರಲ್ಲಿ ಭಾಗವಹಿಸಿದ್ದರು.

ರಾಮರ ಸೇವೆಯನ್ನು ಗುರುತಿಸಿ ಲಯನ್ಸ್ ಜಿಲ್ಲೆ 324-D4ನವರು 1992ನೇ ವರ್ಷದ ಜಿಲ್ಲೆಯ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಅಂದಿನ ಜಿಲ್ಲಾ ಗವರ್ನರ್ ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡಿದ್ದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ದೆಹಲಿಯ ತುಳುನಾಡ್ ಡೆವಲಪ್‌ಮೆಂಟ್ ಪೋರಂ ಜತೆಗೂಡಿ ಫೆ.16, 2003ರಲ್ಲಿ ದೆಹಲಿಯಲ್ಲಿ ನಡೆಸಿದ ತುಳುವರ ರಾಷ್ಟ್ರೀಯ ಸಮಾವೇಶದಲ್ಲಿ ‘ವೃತ್ತಿ ನೈಪುಣ್ಯ ಮತ್ತು ಸಮಾಜಸೇವೆ’ ರಂಗದಲ್ಲಿ ವಿಶೇಷ ಸೇವೆ ಸಲ್ಲಿಸಿದ್ದಕ್ಕಾಗಿ ಕಜಂಪಾಡಿ ರಾಮ ಅವರನ್ನು ಸನ್ಮಾನಿಸಿತು.

ಸಂಪರ್ಕ ಅಬಿನಂದನಾ ಅಭಿನಂದನಾ ಗ್ರಂಥ

ಬಹುಮುಖಿ ನೆಲೆಯ ಸಾಧನೆಯನ್ನು ಮಾಡಿರುವ ರಾಮರಿಗೆ ಒಂದು ಪೂರ್ಣ ಪ್ರಮಾಣದ ಅಬಿನಂದನಾ ಗ್ರಂಥ ಕರ್ನಾಟಕದಲ್ಲಿ ಸಮರ್ಪಿತವಾಗಿಲ್ಲ ಎಂಬುದು ವಿಷಾದದ ಸಂಗತಿಂಯೇ ಸರಿ. ದೂರದ ಚೆನ್ನೆ ಯಲ್ಲಿ ಅವರು ಸೇವೆಯಿಂದ ನಿವೃತ್ತರಾದ ಸಂದರ್ಭ 27-06-1998ರಲ್ಲಿ ಹಬೀಬುಲ್ಲಾ ರಸ್ತೆಯ ಯು. ರಾಮರಾವ್ ಕಲಾಮಂಟಪದಲ್ಲಿ ಅದ್ದೂರಿಯಾಗಿ ರಾಮರಿಗೆ ಸನ್ಮಾನ ಸಮಾರಂಭ ಏರ್ಪಡಿಸಿದರು. ಆ ಸನ್ಮಾನ ಸಮಿತಿಯವರು ‘ಸಂಪರ್ಕ’ ಎಂಬ ಹೆಸರಿನಲ್ಲಿ ಒಂದು ಪುಟ್ಟ ಅಬಿನಂದನಾ ಗ್ರಂಥವನ್ನು ಸಮರ್ಪಿಸಿದ್ದಾರೆ. ಈ ಸಮಾರಂಭದಲ್ಲಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿದ್ದರು. ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಧರ್ಮಸ್ಥಳದ ಧರ್ಮಾದಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಈ ಕೃತಿಯನ್ನೂ ಬಿಡುಗಡೆಗೊಳಿಸಿದರು. ಡಾ. ಕೃಷ್ಣ ಭಟ್ ಅರ್ತಿಕಜೆ, ಸಾಂಸದ ಧನಂಜಯ ಕುಮಾರ್, ಉದಯವಾಣಿಯ ನಿತ್ಯಾನಂದ ಪಡ್ರೆ, ಮನೋಹರ ಪ್ರಸಾದ್, ನಂದಳಿಕೆ ಬಾಲಚಂದ್ರರಾವ್ ಮತ್ತು ವಸಂತ ಶೆಟ್ಟಿ ಬೆಳ್ಳಾರೆಯವರು ಬರೆದ ಲೇಖನಗಳನ್ನು ಈ ಸಂಚಿಕೆ ಒಳಗೊಂಡಿದೆ. ಎಂ. ಮೋಹನ ಭಂಡಾರಿ ಈ ಕೃತಿಯ ಸಂಪಾದಕ. ಆ ಸಮಾರಂಭದಲ್ಲಿ ಪೇಜಾವರ ಮಠದ ಹಿರಿಯ ಸ್ವಾಮೀಜಿಗಳಾದ ವಿಶ್ವೇಶತೀರ್ಥರು  ‘‘ಆ ರಾಮ ಲಂಕೆಗೆ ಸೇತುವೆ ನಿರ್ಮಿಸಿದ. ಈ ರಾಮ ಗ್ರಾಮ ಗ್ರಾಮಗಳಿಗೆ ದೂರವಾಣಿ ಸಂಪರ್ಕ ಸೇತುವೆಯನ್ನು ನಿರ್ಮಿಸಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ’’  ಎಂದಿದ್ದರು.

1993ರ ವರ್ಷದ ವ್ಯಕ್ತಿ

ದಕ್ಷಿಣಕನ್ನಡ ಜಿಲ್ಲೆಯ 1993ರ ವರ್ಷದ ವ್ಯಕ್ತಿಯನ್ನಾಗಿ ಕರಾವಳಿಯ ಜನಪ್ರಿಯ ಪತ್ರಿಕೆಯಾಗಿದ್ದ ಕನ್ನಡ ಜನ ಅಂತರಂಗ ಏರ್ಪಡಿಸಿದ್ದ ಜನಮತ ಗಣನೆಯಲ್ಲಿ ಓದುಗರು ದ.ಕ. ಟೆಲಿಕಾಂ ಜಿಲ್ಲೆಯ ಕೆ. ರಾಮ ಅವರನ್ನು ಆರಿಸಿದ್ದರು. ಪತ್ರಿಕೆ ಫೆಬ್ರವರಿ 2, 1994ರ ಸಂಚಿಕೆಯಲ್ಲಿ ಇದನ್ನು ಘೋಷಿಸಿದ್ದು ಮಾತ್ರವಲ್ಲ ಸಂಪಾದಕೀಯ ಪುಟದ ತುಂಬ ಓದುಗರು ರಾಮರ ಕುರಿತು ಮೆಚ್ಚಿಗೆಯಿಂದ ಬರೆದ ಪತ್ರಗಳನ್ನೂ ಪ್ರಕಟಿಸಿದೆ. ರಾಮರಿಗೆ  ಎಲ್ಲಾ ಪತ್ರಿಕೆ ಮತ್ತು ಮಾದ್ಯಮಗಳ ಜೊತೆಗೆ ಆತ್ಮೀಯ ಸಂಬಂಧವಿತ್ತು. ಟೆಲಿಕಾಂ ತಂತ್ರಜ್ಞಾನವನ್ನು ಬಳಸಿಕೊಂಡು ಅನೇಕ ಮಹತ್ವದ ಕಾರ್ಯಕ್ರಮಗಳನ್ನು ತಕ್ಷಣ ಸುದ್ದಿ ಮಾಡುವುದಕ್ಕೆ ರಾಮರು ಮಾದ್ಯಮ ಪ್ರತಿನಿದಿಗಳಿಗೆ ಸಹಕರಿಸುತ್ತಿದ್ದರು.

ಒಂದು ಉದಾಹರಣೆ ಕೊಡಬಹುದಾದರೆ ಧರ್ಮಸ್ಥಳದಲ್ಲಿ ಮಹಾಮಸ್ತಕಾಬಿಷೇಕದ ಸಮಯ. ಅಬಿಷೇಕದ ಸಚಿತ್ರ ವರದಿ ಮರುದಿನ ಎಲ್ಲಾ ಪತ್ರಿಕೆಗಳಲ್ಲಿ ಬರುವಂತೆ  ಮಾಡಲು ಮಾದ್ಯಮ ಕೇಂದ್ರವನ್ನು ತೆರೆಯಲಾಗಿತ್ತು. ಅಲ್ಲಿನ ಕಲರ್ ಫೋಟೋಗಳನ್ನು ಕಳುಹಿಸುವ ಕುರಿತು ಫ್ಯಾಕ್ಸ್ ಯಂತ್ರವೊಂದನ್ನು ಅಳವಡಿಸಲಾಗಿತ್ತು. ಚೆನ್ನೆ ಯಿಂದ ಪ್ರಕಟಗೊಳ್ಳುವ ಹಿಂದೂ ಪತ್ರಿಕೆಯಲ್ಲೂ ಮರುದಿನವೇ ಕಲರ್ ಫೋಟೋ ಸಹಿತ ಸುದ್ದಿ ಪ್ರಕಟಗೊಂಡದನ್ನು ರಾಮರು ನೆನಪಿಸಿಕೊಳ್ಳುತ್ತಾರೆ.

ಅನನ್ಯ ಸಾಧಕನಿಗೆ ಕೃತಜ್ಞತೆಯ ಕರಕಮಲ

ಪ್ರೀತಿ, ವಾತ್ಸಲ್ಯದ ಮನಸ್ಸು, ಸದಾ ಕ್ರಿಯಾಶೀಲ, ಅಚ್ಚುಕಟ್ಟಿಗೆ ಹಂಬಲಿಸುವ ನಿಷ್ಠಾವಂತ ಅಧಿಕಾರಿ ಕೆ. ರಾಮ. ಅವರು ಅಧಿಕಾರಿಯಾಗಿ ಬಂದಾಗ ಎಲ್ಲಾ ರೀತಿಯ ಹೊಸ ಆವಿಷ್ಕಾರಗಳು, ತಂತ್ರಜ್ಞಾನಗಳು ಬೆಳೆಯುತ್ತಾ ಬಂದಿದ್ದವು. ಅದನ್ನು ಸಮರ್ಥ ರೀತಿಯಲ್ಲಿ ಬಳಸಿಕೊಳ್ಳುವ ಆಸಕ್ತಿ ಮತ್ತು ಧೈರ್ಯವನ್ನು ರಾಮರು ತೋರಿದರು.

ದೂರಸಂಪರ್ಕ ಇಂದು ಅಗಾಧವಾಗಿ ಬೆಳೆದಿರುವ, ಬೆಳೆಯುತ್ತಿರುವ ಕ್ಷೇತ್ರ. ದೂರ ದೂರದ ವಿಶ್ವವನ್ನೇ ಮನೆಬಾಗಿಲಿಗೆ ತಂದಿರಿಸಿದ ಅಮೂಲ್ಯ ತಂತ್ರಜ್ಞಾನ ವಿಜ್ಞಾನದ ವರ. ಎಂತೆಂತಹ ವಾರ್ತೆಗಳನ್ನು, ಸಂದೇಶಗಳನ್ನು ಹೊತ್ತೊಯ್ಯುವ ಸಾಧನ. ಮನಸ್ಸಿಗೆಟುಕದಷ್ಟು ದೂರ ದಲ್ಲಿರುವ ಆಪ್ತರನ್ನು ಕಣ್ಣೆವೆ ಮಿಟುಕಿಸು ವುದರೊಳಗೆ ಕಿವಿಯೊಳಗೆ ತಂದಿಡುವ ಸ್ನೇಹತಂತು. ಸುಖವಿರಲಿ, ದುಃಖವಿರಲಿ, ರಾಜಕಾರ್ಯವಿರಲಿ, ರಾಜಿ ಸಂಧಾನವಿರಲಿ, ವ್ಯವಹಾರ ವಿರಲಿ, ವಿಷಯ ವಿರಲಿ, ಕ್ಷೇಮ ಸಮಾಚಾರವಿರಲಿ, ಪ್ರಿಯರೊಡನೆ ಪ್ರೇಮ ಸಂಭಾಷಣೆಯಿರಲಿ ದೂರವಾಣಿ ಎಲ್ಲರಿಗೂ ಕೊರಳಾಗುವ ಕೊಳಲು.

ರಾಮರು ಆಗಮಿಸುವ ಪೂರ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೂರವಾಣಿ ಶ್ರೀಮಂತರ ಸ್ವತ್ತಾಗಿತ್ತು. ಜನಸಾಮಾನ್ಯರಿಗೆ ಅದೊಂದು ವಿಸ್ಮಯದ ಸಂಗತಿಯಾಗಿತ್ತು. ರಾಮರು ಬಂದ ಒಂದೇ ವರ್ಷದಲ್ಲಿ ಹಳ್ಳಿ ಹಳ್ಳಿಯ ರೈತನೂ ಒಂದು ಬಾರಿ ರಿಸೀವರನ್ನು  ಕಿವಿಗೊಟ್ಟು  ಪುಳಕಗೊಂಡಿದ್ದ. ಕ್ರಮೇಣ ಅದರ ಬಳಕೆಯ ಕುರಿತು ರಾಮರ ನೇತೃತ್ವದಲ್ಲಿ ಗ್ರಾಮ ಗ್ರಾಮಗಳಲ್ಲಿ ಜಾಗೃತಿ ಉಂಟಾಯಿತು. ರಾಮರು ದಕ್ಷಿಣ ಕನ್ನಡ ಬಿಡುವ ವೇಳೆಗೆ ದೂರವಾಣಿ ಶ್ರೀಮಂತಿಕೆಯ ಕುರುಹಾಗಿರಲಿಲ್ಲ. ಬದಲಾಗಿ ಅತೀ ಸಾಮಾನ್ಯ ವ್ಯಕ್ತಿಯೂ ತನ್ನ ಅವಶ್ಯಕತೆ ಎಂದು ಮನಗಂಡು ದೂರವಾಣಿಗಾಗಿ ಹಂಬಲಿಸಿ, ಪಡೆದ.

ಕರಾವಳಿಯ ಜಿಲ್ಲೆಯಾದ ದಕ್ಷಿಣ ಕನ್ನಡ ಜಿಲ್ಲೆಯು ಬ್ಯಾಂಕಿಂಗ್, ಸಾಕ್ಷರತೆಯಲ್ಲಿ ರಾಷ್ಟ್ರದಲ್ಲೇ ಹೆಸರು ಪಡೆದಿದೆ. ರಾಮರ ಸಾಹಸದಿಂದ ದೂರಸಂಪರ್ಕ ಕ್ಷೇತ್ರದಲ್ಲೂ ಅದ್ವಿತೀಯ ಸಾಧನೆ ಮಾಡಿ ರಾಷ್ಟ್ರದ ಗಮನ ದಕ್ಷಿಣ ಕನ್ನಡ ಜಿಲ್ಲೆಗೆ ಮತ್ತೊಮ್ಮೆ ಕರೆಯುವಂತಾಯಿತು.

ಜಿಲ್ಲೆಯ ದೂರಸಂಪರ್ಕ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಒಂದು ನೋಟ

1. 1994ರ ಮಾರ್ಚ್ ವೇಳೆಗೆ ಎಲ್ಲ ತಾಲೂಕು ಕೇಂದ್ರಗಳಿಗೂ ಎಸ್.ಟಿ.ಡಿ. / ಐ.ಎಸ್.ಡಿ. ಸೌಲಭ್ಯ ಒದಗಿಸಬೇಕೆಂಬ ಕೇಂದ್ರ ಸರಕಾರದ ಗುರಿಯನ್ನು 1991ರ ಮಾರ್ಚ್ ಅಂತ್ಯದೊಳಗೆ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ತಾಲೂಕು ಕೇಂದ್ರಗಳಿಗೂ ವಿಸ್ತರಿಸಿ ಎಸ್.ಟಿ.ಡಿ. / ಐ.ಎಸ್.ಡಿ. ಸೌಲಭ್ಯ ಕಲ್ಪಿಸಿದ ರಾಜ್ಯದ ಪ್ರಥಮ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾದುದು.

2.    ಹೆದ್ದಾರಿಯಲ್ಲಿ ಪ್ರತೀ 10 ಕಿ.ಮೀ.ಗೆ ಒಂದು ಎಸ್.ಟಿ.ಡಿ./ ಐ.ಎಸ್.ಡಿ., ಸಾರ್ವಜನಿಕ ದೂರವಾಣಿ ಸೌಲಭ್ಯ ಒದಗಿಸಬೇಕೆಂಬ ಕೇಂದ್ರ ಸರಕಾರದ ಗುರಿಯನ್ನು 1993ರೊಳಗೆ ಸಾಧ್ಯವಾಗಿಸಿದ್ದು. ಕೇರಳದ ಗಡಿ ತಲಪಾಡಿಯಿಂದ ಶಿರೂರಿಗೆ 160 ಕಿ.ಮೀ. ದೂರ ರಾಷ್ಟ್ರೀಯ   ಹೆದ್ದಾರಿ   17ರಲ್ಲಿ   50ಕ್ಕೂ   ಅಧಿಕ ಎಸ್.ಟಿ.ಡಿ. / ಐ.ಎಸ್.ಡಿ., ಸಾರ್ವಜನಿಕ ದೂರವಾಣಿ ಒದಗಿಸಿದ್ದು ಆ ಕಾಲದಲ್ಲಿ ಒಂದು ವಿಶಿಷ್ಟ ಸಾಧನೆಯಾಗಿತ್ತು.   ಇದೇ   ರೀತಿ   ರಾಷ್ಟ್ರೀಯ ಹೆದ್ದಾರಿ  48ರಲ್ಲಿಯೂ ಜಿಲ್ಲಾವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಸಾಧನೆ ಮಾಡಲಾಗಿತ್ತು.

3. 1995ರ ಮಾರ್ಚ್ ವೇಳೆಗೆ ಎಲ್ಲಾ ಗ್ರಾಮ ಪಂಚಾಯತುಗಳಲ್ಲಿ ದೂರವಾಣಿ ಸೌಲಭ್ಯ ಒದಗಿಸಬೇಕೆಂಬ ಕೇಂದ್ರದ ಆದೇಶವನ್ನು 1992ರ ಮಾರ್ಚ್ ಅಂತ್ಯದೊಳಗೆ ಜಿಲ್ಲೆಯ 445 ಗ್ರಾಮ ಪಂಚಾಯತುಗಳಿಗೂ ಒದಗಿಸಿದ ಪ್ರಥಮ ಜಿಲ್ಲೆ ಎಂಬ ಕೀರ್ತಿ ದಕ್ಷಿಣ ಕನ್ನಡ ಜಿಲ್ಲಾ ಟೆಲಿಕಾಂನದ್ದು. ರಾಮರ ಮತ್ತು ಇಲಾಖೆಯವರ ಆಸಕ್ತಿಯಿಂದ ಇದು ಸಾಧ್ಯವಾಯಿತು.

4. ಸರ್ವಧರ್ಮ ಕ್ಷೇತ್ರಗಳಿಗೆ ತ್ವರಿತವಾಗಿ ಎಸ್.ಟಿ.ಡಿ. / ಐ.ಎಸ್.ಡಿ. ಸೌಲಭ್ಯ ಒದಗಿಸಬೇಕೆಂಬ ಸರಕಾರದ ಗುರಿಯನ್ನು 1992 ಮಾರ್ಚ್‌ನ ಒಳಗೆ ಜಾರಿಗೊಳಿಸಿ ಉಡುಪಿ,    ಧರ್ಮಸ್ಥಳ,   ಕೊಲ್ಲೂರು,   ಸುಬ್ರಹ್ಮಣ್ಯ,  ಕಟೀಲು,  ಮೂಡುಬಿದಿರೆ,  ಉಳ್ಳಾಲ  ಕ್ಷೇತ್ರಗಳಿಗೆ ಎಸ್.ಟಿ.ಡಿ. / ಐ.ಎಸ್.ಡಿ. ಸೌಲಭ್ಯ ಒದಗಿಸಿದ್ದು.

5. ಜಿಲ್ಲೆಯಲ್ಲಿದ್ದ 173 ದೂರವಾಣಿ ಕೇಂದ್ರಗಳಲ್ಲಿ ಹೆಚ್ಚಿನ ಕೇಂದ್ರಗಳಿಗೆ ಎಸ್.ಟಿ.ಡಿ. / ಐ.ಎಸ್.ಡಿ. ಸೌಲಭ್ಯ ಒದಗಿಸಿದ್ದು ಇವರ ಸಾಧನೆ. 1990ರ ಅಕ್ಟೋಬರ್‌ನಲ್ಲಿ ಕೇವಲ 14 ಕೇಂದ್ರಗಳಲ್ಲಿ ಮಾತ್ರ ಎಸ್.ಟಿ.ಡಿ. / ಐ.ಎಸ್.ಡಿ.  ಸೌಲಭ್ಯ ಇತ್ತೆಂಬುದನ್ನು ಗಮನಿಸಿದರೆ ರಾಮರು ಎರಡು ವರ್ಷಗಳಲ್ಲಿ ಸಾದಿಸಿದ ಸಾಧನೆಯ ಮಹತ್ತು ಅರಿವಾದೀತು.

6. ಇದಲ್ಲದೆ ಬೃಹತ್ ಪ್ರಮಾಣದಲ್ಲಿ ದೂರವಾಣಿ ಕೇಂದ್ರ ಗಳನ್ನು ಆಧುನಿಕ ವಿದ್ಯುನ್ಮಾನ ಕೇಂದ್ರಗಳಾಗಿ ಪರಿವರ್ತಿಸಿದ್ದು 1992ರ ಮಾರ್ಚ್ ಒಳಗೆ ರಾಜ್ಯದಲ್ಲಿಯೇ ಅತೀ ಹೆಚ್ಚು ಎಸ್.ಟಿ.ಡಿ. / ಐ.ಎಸ್.ಡಿ.  ಸೌಲಭ್ಯವನ್ನು ಪಡೆದ ತಾಲೂಕುಗಳಲ್ಲಿ ಮಂಗಳೂರೂ ಒಂದು ಎಂಬ ಕೀರ್ತಿಗೆ ತಂದಿತ್ತವರು ರಾಮರು.

7. ಅನೇಕ ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಹಕರೊಡನೆ ಮುಖಾಮುಖಿ ಕಾರ್ಯಕ್ರಮ ಆಯೋಜಿಸಿ ದೂರಸಂಪರ್ಕ ಬಳಕೆದಾರರ ಕುಂದುಕೊರತೆಗಳನ್ನು ಆಲಿಸಿ ಅವರ ಆಶೋತ್ತರಗಳಿಗೆ ಸ್ಪಂದಿಸಿ ಇಲಾಖೆಯ ಬಗ್ಗೆ ವಿಶ್ವಾಸ ಹುಟ್ಟಿಸುವ ಕಾರ್ಯ ಮಾಡಿದ್ದಾರೆ.

8.    ಬೃಹತ್ ವಿಸ್ತರಣಾ ಕಾರ್ಯಕ್ರಮಗಳ ಜೊತೆಗೆ ಸೇವೆಯ ಗುಣಮಟ್ಟವನ್ನು ಸುಧಾರಿಸಲು ಅನುವಾಗುವಂತೆ ಅನೇಕ ಕಾರ್ಯಯೋಜನೆಯನ್ನು ಇವರು ರೂಪಿಸಿದ್ದಾರೆ. ‘ಭೂಗತ ಡಕ್ಕಿಂಗ್ ಕೇಬಲ್’ ವ್ಯವಸ್ಥೆಯನ್ನು ಅಳವಡಿಸಿದ್ದು ಅಂತಹ ಒಂದು ದಿಟ್ಟ ಹೆಜ್ಜೆ.

8. ಫಾಲ್ಟ್ ರಿಪೇರಿ ಸರ್ವಿಸಸ್ (1998) ಮತ್ತು ಡೈರೆಕ್ಟರಿ ಸೇವೆ (1997) ಕಂಪ್ಯೂಟರೀಕರಣ

ಇಂತಹ ಹತ್ತಾರು ಪ್ರಗತಿಪರ ಕಾರ್ಯಗಳನ್ನು ರಾಮರು ತಾವು ದಕ್ಷಿಣ ಕನ್ನಡ ಜಿಲ್ಲೆಯ ಟೆಲಿಕಾಂ ಮಹಾಪ್ರಬಂಧಕರಾಗಿ ಮಾಡಿದರು. ರಾಮರು ಎಂದರೆ ಒಂದು ಶಕ್ತಿ. ಇಡೀ ಟೆಲಿಕಾಂ ಇಲಾಖೆಯ ಸಹೋದ್ಯೋಗಿಗಳು ಅವರ ಬೆನ್ನೆಲುಬಾಗಿದ್ದರು. ಕುಟುಂಬ ಪ್ರೀತಿಯ ಸಂಘಟಿತ ಪ್ರಯತ್ನಕ್ಕೆ ರಾಮರು ನೇತಾರರಾಗಿದ್ದರು.

ತಾವು ದುಡಿಯುತ್ತಾ, ತನ್ನ ಸಹೋದ್ಯೋಗಿಗಳನ್ನು ದುಡಿಯಲು ಹುರಿದುಂಬಿಸುತ್ತಾ ದುಡಿಮೆಗೆ ತಾವೇ ಮಾದರಿ ಎನ್ನುವಂತೆ ಇದ್ದವರು ರಾಮರು. ಜಿಲ್ಲೆಯ ಸಾಮಾನ್ಯ ಪತ್ರಿಕೆಯಿಂದ ತೊಡಗಿ ಬಳಕೆದಾರ, ಹಿರಿಯ ರಾಜಕಾರಣಿ, ಅಧಿಕಾರಿಗಳು, ಸಾಮಾಜಿಕ ಮುಖಂಡರು ಎಲ್ಲರೊಡನೆಯೂ ಇವರು ಆತ್ಮೀಯ ಸಂಪರ್ಕ ಹೊಂದಿದ್ದವರು.

ಬಡತನದ ಬಯಲಿಂದ ಚಿಗುರಿ ಬೆಳೆದುನಿಂತು ಪರಿಶ್ರಮ, ಕಾಯಕ ಮತ್ತು ಸ್ವಾವಲಂಬನದ ಬದುಕಿಗೆ ಪರ್ಯಾಯವೆಂಬಂತೆ ಬದುಕಿದ ಹೃದಯದ ತುಂಬ ಸಮಾಜಪ್ರೀತಿಯ ಆಶಯವನ್ನು ಹೊಂದಿದ್ದ ಈ ಆದರ್ಶ ಅಧಿಕಾರಿಯ ಅನನ್ಯ ಸಾಧನೆಗೆ ನಾಡಿನ ಕೈಮುಗಿದ ನಮಸ್ಕಾರ.

ಸಂತೃಪ್ತ ಸಂಸಾರ

ಕಡು ಬಡತನದ ಹಿಂದುಳಿದ ವರ್ಗದ ಕುಟುಂಬವೊಂದರಲ್ಲಿ ಕೊರಗಪ್ಪ ಮತ್ತು ಅಕ್ಕಮ್ಮ ದಂಪತಿಯ ಮಗನಾಗಿ ಜನಿಸಿದ ರಾಮರು ಕಠಿಣ ಪರಿಶ್ರಮದ ಮೂಲಕ ವಿದ್ಯಾಭ್ಯಾಸ ಮತ್ತು ತರಬೇತಿ ಪಡೆದು ಉದ್ಯೋಗಕ್ಕೆ ಕಾಲಿಟ್ಟರು. ಪುತ್ತೂರಿನ ಬಡ ಕುಟುಂಬ ವೊಂದರ ದೇವಕಿ ಎಂಬವರನ್ನು ವಿವಾಹವಾದರು. ದೇವಕಿ ಯವರು ಸೈಂಟ್ ಪಿಲೋಮಿನಾ ಕಾಲೇಜು ಪುತ್ತೂರಿನಲ್ಲಿ ಬಿ.ಎ. ಪದವಿ ಪಡೆದ ಬಳಿಕ ಮಂಗಳೂರಿನಲ್ಲಿ ಬಿ.ಎಡ್. ಪದವಿ ಗಳಿಸಿದರು. ದೇವಕಿಯವರು ಆಗಿನ ಕಾಲದಲ್ಲಿ ತಮ್ಮ ಸಮಾಜದಲ್ಲಿ ಎರಡು ಪದವಿಗಳನ್ನು ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಕೆಲಕಾಲ ಹೈಸ್ಕೂಲೊಂದರಲ್ಲಿ ಸೇವೆ ಸಲ್ಲಿಸಿದ ಅವರು ವಿವಾಹಾನಂತರ ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗಿಯಾಗಿ ಸೇರಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂನಿವೃತ್ತಿ ಪಡೆದರು.

ಗೃಹಿಣಿಯಾಗಿ ಮತ್ತು ಉದ್ಯೋಗಸ್ಥ ಮಹಿಳೆಯಾಗಿ ತನ್ನ ಕರ್ತವ್ಯವನ್ನು ಅತ್ಯಂತ ಶ್ರದ್ಧೆ, ಪ್ರೀತಿಯಿಂದ ನಡೆಸುತ್ತಿದ್ದ ದೇವಕಿಯವರು ರಾಮರ ಯಶಸ್ಸಿಗೆ ಸತತ ಪ್ರೋತ್ಸಾಹ ಹಾಗೂ ಬೆಂಬಲ ನೀಡಿದರು.

ಒಬ್ಬ ಪುತ್ರ ಮತ್ತು ಒಬ್ಬಳು ಪುತ್ರಿಯನ್ನು ಪಡೆದ ಚಿಕ್ಕ ಸಂತೃಪ್ತ ಸಂಸಾರ ರಾಮರದ್ದು. ಪುತ್ರ ಡಾ. ಶಶಿಪ್ರಸಾದ್ ಪ್ರತಿಷ್ಠಿತ ಪಾಂಡಿಚೇರಿ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಯಸ್. ಮುಗಿಸಿ ದೇಶದ ಪ್ರಸಿದ್ಧ ಸಂಸ್ಥೆಯಾದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ್ಯೂಡೆಲ್ಲಿ (AIIMS)ನಿಂದ MS ಪದವಿ ಗಳಿಸಿದ್ದಾರೆ. ಬಳಿಕ ಅಪೋಲೋ ಆಸ್ಪತ್ರೆಯಲ್ಲಿ ಸಹಪ್ರಾಧ್ಯಾಪಕರಾಗಿ ದುಡಿದಿದ್ದಾರೆ. ಚೆನ್ನೆ , ಪಾಂಡಿಚೇರಿ ಹಾಗೂ ಕೆ.ಎಂ.ಸಿ. ಮಣಿಪಾಲ ಆಸ್ಪತ್ರೆಗಳಲ್ಲಿ ಕೆಲಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅನಂತರ ಇಂಗ್ಲೆಂಡ್‌ನ ಎಡಿನ್‌ಬರ್ಗ್‌ನಲ್ಲಿ FRCS ಪರೀಕ್ಷೆ ಪಾಸು ಮಾಡಿ ಪ್ರಸ್ತುತ ಇಂಗ್ಲೆಂಡಿನಲ್ಲಿ ಉದ್ಯೋಗದಲ್ಲಿದ್ದಾರೆ. UK ಸರಕಾರ ಅವರನ್ನು USAಗೆ ಕಳುಹಿಸಿ ತಲೆ ಮತ್ತು ಕೊರಳಿನ ಕ್ಯಾನ್ಸರ್‌ನ ಚಿಕಿತ್ಸೆಯ ನ್ಯಾನೋ ಟೆಕ್ನಾಲಜಿಯಲ್ಲಿ ವಿಶೇಷ ತಜ್ಞತೆಯನ್ನು ಪಡೆಯುವುದಕ್ಕೆ ಅವಕಾಶ ಕಲ್ಪಿಸಿದೆ.

ರಾಮ ಅವರ ಮಗಳು ಶಶಿಪ್ರಭಾ ಅವರೂ ಪ್ರತಿಭಾನ್ವಿತೆ. ತಮ್ಮ ಕಲಿಕಾ ಸಾಮರ್ಥ್ಯದಿಂದ KREC ಸುರತ್ಕಲ್‌ನಲ್ಲಿ (ಈಗ NIT ಸುರತ್ಕಲ್) ಕಲಿಯುವ ಅವಕಾಶವನ್ನು ಪಡೆದು BE ಪದವಿ ಗಳಿಸಿದ್ದಾರೆ. ಕೆಲಕಾಲ ಅಬುದಾಬಿಯಲ್ಲಿ ಕಾರ್ಯನಿರ್ವಹಿಸಿ ಈಗ ಬೆಂಗಳೂರಿನ ಸಾಪ್ಟ್‌ವೇರ್ ಕಂಪೆನಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ರಾಮರು ಮಕ್ಕಳ ಬೆಳವಣಿಗೆ ಮತ್ತು ಮಡದಿ ದೇವಕಿ ಅವರ ಪ್ರೀತಿ ವಿಶ್ವಾಸಗಳ ನಡುವೆ ತೃಪ್ತಿಯ ವಿಶ್ರಾಂತ ಬದುಕನ್ನು ಪ್ರಸ್ತುತ ಬೆಂಗಳೂರಿನ   ಆರ್.ಟಿ. ನಗರದಲ್ಲಿರುವ  ತಮ್ಮ  ಮನೆಯಲ್ಲಿ ನಡೆಸುತ್ತಿದ್ದಾರೆ.

ದೂರವಾಣಿ ಸಂಖ್ಯೆ : 080 23438899

ಗಣ್ಯರು ಕಂಡಂತೆ
ಪತ್ರಿಕೆಗಳು ಕಂಡಂತೆ
ಟೆಲಿಕಾಂ : ಅಗ್ರಸ್ಥಾನ

ಕಳೆದ ವರ್ಷ ಟೆಲಿಕಾಂ ಇಲಾಖೆಯ ಸಾಧನೆ ಅದ್ಭುತವೆಂಬ ಶ್ಲಾಘನೆಗೆ ಪಾತ್ರವಾಗಿತ್ತು. ಈ ವರ್ಷ ದಕ್ಷಿಣ ಕನ್ನಡ ಟೆಲಿಕಾಂ ವಿವಾದಾತೀತವಾಗಿ ಅಗ್ರಸ್ಥಾನದಲ್ಲಿದೆ. ಅದ್ಭುತವೆಂಬ ವಿಶೇಷಣವನ್ನು ಮೀರಿದ ಸಾಧನೆಯನ್ನು ದಾಖಲಿಸಿದೆ.

ಜಿಲ್ಲಾ ಟೆಲಿಕಾಂ ಜನರಲ್ ಮ್ಯಾನೇಜರ್ ಕೆ. ರಾಮ ಅವರ ನೇತೃತ್ವದಲ್ಲಿ ಇಲಾಖೆ ಗುರಿ ಮೀರಿದ ಸಾಧನೆ ಮಾಡಿದೆ. ಡಿವಿಜನಲ್ ಇಂಜಿನಿಯರ್ ಯು.ಎಸ್. ಕೃಷ್ಣಮೂರ್ತಿ ಹಾಗೂ ಸಿಬ್ಬಂದಿಯವರು ರಾಮ ಅವರ ನಾಯಕತ್ವದಲ್ಲಿ ಎಲ್ಲರ ಗೌರವಾದರಗಳಿಗೆ ಪಾತ್ರರಾಗಿದ್ದಾರೆ. ಸರಕಾರೀ ಇಲಾಖೆಯೊಂದು ಕಾರ್ಯತತ್ಪರತೆಗೆ ಇನ್ನೊಂದು ಹೆಸರಾದ ಅಪರೂಪದ ನಿದರ್ಶನ ಈ ಮಂದಿಗೆ ಸಂದಿದೆ.

ದಕ್ಷಿಣ ಕನ್ನಡ ಜಿಲ್ಲೆ ಈಗ ಎಸ್‌ಟಿಡಿ ಕೇಂದ್ರಗಳ ಸಂಖ್ಯೆಯಲ್ಲಿ ಅಜೇಯ ಶತಕ ತಲುಪುವ ಹೊಸ್ತಿಲಲ್ಲಿದೆ. ಈ ಸಂಖ್ಯೆ 91 ತಲುಪಿದ್ದು ಆರ್ಥಿಕ ವರ್ಷಾಂತ್ಯದಲ್ಲಿ ಇನ್ನೂ 32ರ ಸೇರ್ಪಡೆಯಾಗುತ್ತದೆ.

1000 ಜನಸಂಖ್ಯೆಗೆ 18.17 ದೂರವಾಣಿ ಸಂಪರ್ಕದ ಹೆಗ್ಗಳಿಕೆ. 91 – 92ರಲ್ಲಿ 23.04 ಕೋಟಿ ರೂ. ರೆವಿನ್ಯೂ ಸಂಗ್ರಹಣೆ, 48909ಲೈನ್‌ಗಳು, 293 ಎಸ್‌ಟಿಡಿ – ಐಎಸ್‌ಡಿ ಕೇಂದ್ರಗಳ ಮೂಲಕ ದಕ್ಷಿಣ ಕನ್ನಡ ಈಗ ಕ್ಷಣಮಾತ್ರದಲ್ಲಿ ಜಗತ್ತಿಗೆ ಲಭ್ಯ! ನಂತೂರು ಇಲೆಕ್ಟ್ರಾನಿಕ್ ಎಕ್ಸ್‌ಚೇಂಜ್‌ನಲ್ಲಿ 4016 ಹೊಸ ಲೈನ್‌ಗಳ ಸಾಧನೆ, ಪಾಂಡೇಶ್ವರದಲ್ಲಿ 984 ಲೈನ್‌ಗಳ ಹೊಸ ಕೇಂದ್ರ, 19 ಕಡೆ 128 ಫೋರ್ಟ್‌ಸಿಡಾಟ್, 3 ಕಡೆ ಎಂಐಎಲ್‌ಟಿ, 11 ಕಡೆ ಇಲೆಕ್ಟ್ರಾನಿಕ್ ಕೇಂದ್ರಗಳ ವಿಸ್ತರಣೆ, 7 ಕಡೆ ಇಲೆಕ್ಟ್ರೋ ಮೆಕ್ಯಾನಿಕಲ್ ಕೇಂದ್ರಗಳು, 14 ಕಡೆ ಹೊಸ ಎಸ್‌ಟಿಡಿ ಕೇಂದ್ರಗಳು, ಕಾರ್ಕಳದಲ್ಲಿ ಗ್ರಾಹಕರ ಸೇವಾ ಕೇಂದ್ರ.

ದಕ್ಷಿಣ ಕನ್ನಡದ ಎಲ್ಲಾ 445 ಗ್ರಾಮ ಪಂಚಾಯತ್‌ಗಳು (ನಿಕಟಪೂರ್ವ) ಟೆಲಿಫೋನ್ ಸಂಪರ್ಕ ಹೊಂದಿವೆ. ಮಾರ್ಚ್ 95ರ ಈ ಗುರಿ ಮಾರ್ಚ್ 92ರೊಳಗೇ ಸಾಧನೆಯಾಗಿದೆ. 664 ಗ್ರಾಮಗಳ ಪೈಕಿ 639 ಗ್ರಾಮಗಳು ಟೆಲಿಫೋನ್ ಹೊಂದಿವೆ. ಇದು 2000ನೇ ಇಸವಿಯ ಗುರಿ. ಉಡುಪಿ – ಮಂಗಳೂರು ನಡುವೆ ಆಪ್ಟಿಕಲ್ ಫೈಬರ್ ಕೇಬಲ್ ವ್ಯವಸ್ಥೆ, ಮಂಗಳೂರು, ಉಡುಪಿ, ಪುತ್ತೂರುಗಳಲ್ಲಿ ಕೇಬಲ್ ಡಕ್ಟಿಂಗ್… ಹೀಗೆ ಟೆಲಿಸಂಪರ್ಕ ಜಾಲಕ್ಕೆ ಸಂಬಂದಿಸಿ ದಕ್ಷಿಣ ಕನ್ನಡ ಜಿಲ್ಲೆ ಈಗಾಗಲೇ 21ನೇ ಶತಮಾನ ಪ್ರವೇಶಿಸಿದೆ.

ಉದಯವಾಣಿ, 6-1-1993

ಜಿಲ್ಲೆಯ ಅಭಿವೃದ್ಧಿಗೆ ಖಚಿತ ಸ್ವರೂಪ, ಹೊಸ ಆಯಾಮ

ಸರಕಾರಿ ಅಧಿಕಾರಿಗಳೆಂದರೆ ಲಂಚಕೋರರು, ಅಧಕ್ಷರು, ಐಷಾರಾಮಿಗಳು ಎಂಬ ಅಬಿಪ್ರಾಯ ಸಾರ್ವತ್ರಿಕವಾಗಿ ವ್ಯಾಪಿಸಿರುವ ಈ ದಿನಗಳಲ್ಲೂ ಈ ಮಾತಿಗೆ ಅಪವಾದವಾಗಿ ನಿಲ್ಲುವ ವ್ಯಕ್ತಿಗಳು ಅಲ್ಲೊಬ್ಬರು ಇಲ್ಲೊಬ್ಬರು ಇರುವುದು ಜನತೆಯ ಸೌಭಾಗ್ಯ. ದ.ಕ. ಟೆಲಿಕಾಂ ಜನರಲ್ ಮೆನೇಜರ್ ಆಗಿ ದುಡಿದು, ಇದೀಗ ದಕ್ಷಿಣ ವಲಯದ ಮುಖ್ಟ ಮಹಾ ಪ್ರಬಂಧಕರಾಗಿ ಭಡ್ತಿ ಪಡೆದು ಮದ್ರಾಸಿಗೆ ತೆರಳುತ್ತಿರುವ ಕಜಂಪಾಡಿ ರಾಮ ಅಂತಹವರಲ್ಲೊಬ್ಬರು. ಒಬ್ಬ ಸರಕಾರಿ ಅಧಿಕಾರಿ ಮನಸ್ಸು ಮಾಡಿದರೆ ತನ್ನ ಹಮ್ಮು-ಬಿಮ್ಮುಗಳನ್ನು ಮರೆತು ನಿಷ್ಠೆ ಹಾಗೂ ಪ್ರಾಮಾಣಿಕತೆ ಯಿಂದ ಶ್ರಮಿಸಿದರೆ ಆತ ಇಲಾಖೆಯ ಗುಣಮಟ್ಟವನ್ನು ರಕ್ಷಿಸುವುದಲ್ಲದೆ ಜನತೆಯ ಅಪಾರ ಪ್ರೀತಿ ವಿಶ್ವಾಸಗಳನ್ನು ಹೇಗೆ ಪಡೆಯಬಹುದು ಎನ್ನುವುದಕ್ಕೆ ಕೆ. ರಾಮ ಅವರು ಒಂದು ಉಜ್ವಲ ದೃಷ್ಟಾಂತ.

ಲೋಕೋಪಯೋಗಿ ಇಲಾಖೆ, ವಿದ್ಯುತ್ ಇಲಾಖೆ, ನೀರು ಸರಬರಾಜು ಇಲಾಖೆ ಮುಂತಾದ ಸರಕಾರಿ ಇಲಾಖೆಗಳಿಗೆ ಅಂಟಿರುವ ಅದಕ್ಷತೆ ಹಾಗೂ ಭ್ರಷ್ಟಾಚಾರದ ಹಣೆಪಟ್ಟಿ ದ.ಕ. ಜಿಲ್ಲೆಯಲ್ಲಿ ಕೆಲವು ವರ್ಷಗಳ ಹಿಂದೆ ಟೆಲಿಕಾಂ ಇಲಾಖೆಗೂ ಅಂಟಿದ್ದು ವಿಶೇಷವೇನಲ್ಲ. ಈಗ ಉಳಿದೆಡೆಗಳಲ್ಲಿರುವಂತೆ ದ.ಕ. ಜಿಲ್ಲೆ ಕೂಡ ಟೆಲಿಫೋನ್ ಇಲಾಖೆಯ ಅಸಮರ್ಪಕ ಕಾರ್ಯನಿರ್ವಹಣೆಯಿಂದ ಬೇಸತ್ತು ಹೋಗಿತ್ತು. ಆದರೆ ಕಳೆದೈದು ವರ್ಷಗಳಿಂದ ದ.ಕ. ಟೆಲಿಕಾಂ ಇಲಾಖೆ ಸಾದಿಸಿರುವ ಪ್ರಗತಿ ಅದ್ಭುತ. ಈ ಕರಾವಳಿ ಜಿಲ್ಲೆಯ ಪ್ರತಿಯೊಂದು ಗ್ರಾಮಕ್ಕೂ ಟೆಲಿಫೋನ್ ಸೌಲಭ್ಯವಲ್ಲದೆ ನೂರಕ್ಕೂ ಹೆಚ್ಚು ದೂರವಾಣಿ ವಿನಿಮಯ ಕೇಂದ್ರಗಳು ಲಬಿಸಿವೆ. ದ.ಕ. ಜಿಲ್ಲೆಯ ಯಾವ ಮೂಲೆಯಿಂದಲಾದರೂ ದೂರದ ಊರುಗಳಿಗೆ, ವಿದೇಶಗಳಿಗೆ ದೂರವಾಣಿ ಮೂಲಕ ಸುಲಭ ಸಂಪರ್ಕ ಸಾಧ್ಯ. ಇಡೀ ದೇಶಕ್ಕೇ ದ.ಕ. ಟೆಲಿಕಾಂ ಜಿಲ್ಲೆ ಈಗ ಮಾದರಿ. ಹೀಗಾಗುವುದಕ್ಕೆ ಕೆ. ರಾಮ ಅವರ ನಿಸ್ಪೃಹ ಸೇವೆ, ಕ್ರಿಯಾಶೀಲತೆಗಳೇ ಕಾರಣವೆಂದು ಇಲ್ಲಿನ ಜನರೇ ಹೇಳುತ್ತಾರೆ.

ಒಂದು ಇಲಾಖೆಯಲ್ಲಿ ಅಭಿವೃದ್ಧಿ ಕೆಲಸಗಳು ತ್ವರಿತಗತಿಯಲ್ಲಿ ಸಾಗುತ್ತಿರುವಾಗ ಕೆಲವು ಅನಿರೀಕ್ಷಿತ ತೊಂದರೆಗಳು ಉದ್ಭವಿಸುವುದು ಸಹಜ. ಟೀಕೆ ಟಿಪ್ಪಣಿಗಳೂ ಅಷ್ಟೇ ಸ್ವಾಭಾವಿಕ. ಪತ್ರಿಕೆಗಳು ಇಂತಹ ಟೀಕೆಗಳಿಗೆ ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಚಾರ ಮಾಡಿದಾಗ ಕುಪಿತ ರಾಗುವ ಅಧಿಕಾರಿಗಳಿಗೇನೂ ಕೊರತೆ ಇಲ್ಲ. ಕೆ. ರಾಮ ಈ ವಿಷಯದಲ್ಲೂ ಇತರರಿಗಿಂತ ಬಿನ್ನವಾಗಿ ವರ್ತಿಸಿದ್ದಾರೆ.  ಪತ್ರಿಕೆಗಳಲ್ಲಿ ಟೆಲಿಕಾಂ ಇಲಾಖೆಯ ಕಾರ್ಯವೈಖರಿಗಳ ಬಗ್ಗೆ ಸಾರ್ವಜನಿಕರ ಟೀಕೆ, ದೂರುಗಳು ಪ್ರಕಟ ವಾದಾಗ ಅದಕ್ಕೆ ಪ್ರತಿಕ್ರಿಯಿಸಿ ಸಮಸ್ಯೆಯನ್ನು ಪರಿಹರಿಸಿದ ನಿದರ್ಶನಗಳು ಸಾಕಷ್ಟಿವೆ. ಪತ್ರಿಕೆಗಳ ಪ್ರೋತ್ಸಾಹವೇ ನನ್ನ ಯಶಸ್ಸಿಗೆ ಕಾರಣ ಎಂದು ಹೇಳುತ್ತಾರೆ. ಆದರೆ ಪತ್ರಿಕೆಗಳ ಜೊತೆ ರಾಮ ಉತ್ತಮ ಸಂಬಂಧವಿರಿಸಿ ಕೊಂಡಿದ್ದರು. ಒಬ್ಬ ಸಾಮಾನ್ಯ ವರದಿಗಾರನೊಂದಿಗೂ ವಿನಯದಿಂದಲೇ ಅವರು ವ್ಯವಹರಿಸುತ್ತಿದ್ದರು ಎಂಬುದು ಹೆಚ್ಚು ಉಲ್ಲೇಖನೀಯ.

ತನ್ನ ಬಳಿ ಬಂದು ಅಹವಾಲು ತೋಡಿಕೊಂಡವರನ್ನು ರಾಮ ಅವರು ಅವಗಣಿಸಿದ ನಿದರ್ಶನವೇ ಇಲ್ಲ. ಯಾರೇ ಬರಲಿ, ಅವರಿಗೆ ಸಾಧ್ಯವಾಗಬಹುದಾದ ಸ್ವಾರ್ಥರಹಿತ ಸೇವೆ ಸಲ್ಲಿಸಲು ರಾಮ ಅವರಿಗೆ ತನ್ನ ಪದವಿ ಸರಕಾರಿ ಅಧಿಕಾರ ಯಾವುದೂ ಅಡ್ಡಿಂಯೆನಿಸಲಿಲ್ಲ. ಆದುದರಿಂದಲೇ ರಾಮ ಅವರು ಇತರ ಸರಕಾರಿ ಅಧಿಕಾರಿಗಳಿಗಿಂತ ಬಿನ್ನವಾಗಿ ಕಾಣುತ್ತಾರೆ.

ಒಬ್ಬ ಸರಕಾರಿ ಅಧಿಕಾರಿಗೆ ಭಡ್ತಿ ದೊರೆತು ವರ್ಗವಾದರೆ ಹೆಚ್ಚೆಂದರೆ ಆತನ ಇಲಾಖೆಯ ಸಿಬ್ಬಂದಿ ವರ್ಗ ಮುಲಾಜಿಗಾಗಿ ಒಂದು ಬೀಳ್ಕೊಡುಗೆ ಕಾರ್ಯಕ್ರಮ ಏರ್ಪಡಿಸಿ ಸದ್ಯ ತೊಲಗಿದರಲ್ಲ ಎಂದು ನಿಟ್ಟುಸಿರು ಬಿಡುವುದು ಸಾಮಾನ್ಯ. ರಾಮ ಅವರಿಗೆ ಅವರ ಇಲಾಖೆ ಬೀಳ್ಕೊಡುಗೆ ನೀಡುವುದಕ್ಕಿಂತ ಮುನ್ನವೇ ಇಡೀ ಜಿಲ್ಲೆಯ ಹಲವು ಸಂಘ ಸಂಸ್ಥೆಗಳು, ಸಾರ್ವಜನಿಕ ಸಮಿತಿಗಳು ಬೀಳ್ಕೊಡುಗೆ ಏರ್ಪಡಿಸಿ ಗೌರವಿಸಿವೆ. ಗೌರವಿಸುತ್ತಲೇ ಇವೆ. ದೂರವಾಣಿ ಸೌಲಭ್ಯ ಪಡೆಯಲು ಸರದಿ ಸಾಲಲ್ಲಿ ಕಾಯಬೇಕಾಗಿರುವಂತೆ ರಾಮ ಅವರಿಗೆ ಸನ್ಮಾನಿಸಲು ಸಂಘ ಸಂಸ್ಥೆಗಳು ಕಾಯಬೇಕಾಗಿರುವ ಸ್ಥಿತಿ ಇದೀಗ ನಿರ್ಮಾಣವಾಗಿರುವುದು ಅವರ ಪ್ರಾಮಾಣಿಕ, ಪಾರದರ್ಶಕ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ.

ಜಡ್ಡುಗಟ್ಟಿದ ಸರಕಾರಿ ಇಲಾಖೆಗಳ ಕಾರ್ಯವೈಖರಿ ಬದಲಾಯಿಸಲು ಸಾಧ್ಯವೇ ಇಲ್ಲ ಎಂಬ ಮಾತಿನಲ್ಲಿ ಹುರುಳಿಲ್ಲ. ರಾಮ ಅವರಂತಹ ಅಧಿಕಾರಿಗಳಿದ್ದರೆ ಯಾವುದೇ ಇಲಾಖೆಯನ್ನು ಉತ್ಕರ್ಷದತ್ತ ಕೊಂಡೊಯ್ಯ ಬಹುದು. ಜಡತ್ವ ನಿವಾರಿಸಿ ಜನಪರ ಇಲಾಖೆಯನ್ನಾಗಿ ಮಾಡಬಹುದು. ಕಾದಿದ್ದಾರೆ ಜನರು ರಾಮ ಅವರಂತಹ ಅಧಿಕಾರಿಗಳು ಬರಲೆಂದು, ಗಾಂದೀಜಿಯ ರಾಮರಾಜ್ಯದ ಕನಸು ನನಸಾಗಲೆಂದು.

ಹೊಸ ದಿಗಂತ, 16-8-1996