ದೆವ್ವ ಇಡೀ ಪ್ರಪಂಚದ ತುಂಬ ಮನುಷ್ಯನ ಮೆದುಳು, ಮನಸ್ಸುಗಳನ್ನು ಆವರಿಸಿಕೊಂಡು ಬಂದ ಒಂದು ನಂಬುಗೆ. ದೆವ್ವದ ಕಲ್ಪನೆ ಇಲ್ಲದ ಜನಾಂಗವೇ ಇಲ್ಲವೆಂದು ತೋರುತ್ತದೆ. ಮನುಷ್ಯ ನಂಬಿದ ಸಾವಿರಾರು ನಂಬುಗೆಗಳಲ್ಲಿ ದೇವರು ಮತ್ತು ದೆವ್ವ ಅತ್ಯಂತ ಅಪಾಯಕಾರಿ ಮತ್ತು ಅನರ್ಥಕಾರಿ ನಂಬುಗೆಗಳು. ಇವು ಮನುಷ್ಯನ ದೇಹ, ಮನಸ್ಸು ಮತ್ತು ಸಂಪತ್ತನ್ನು ಹಾಳು ಮಾಡುವ ಪ್ರಮುಖ ನಂಬುಗೆಗಳಾಗಿವೆ.

ಸತ್ತವರು ದೆವ್ವಾಗುವುದು :

ಸತ್ತವರು ಕೂಡಲೇ ದೆವ್ವವಾಗುತ್ತಾರೆ ಎಂಬ ನಂಬುಗೆಯ ಹಿನ್ನಲೆಯಲ್ಲಿಯೇ ಜನಪದ ಕಥೆಗಳಲ್ಲಿ ಅಲ್ಲಲ್ಲಿ ಕೆಲಘಟನೆಗಳು ಬರುತ್ತವೆ. ಮೂರನೆಯ ಕಡುಬು ಯಾರು ತಿನ್ನಬೇಕೆಂಬ ಶರತ್ತಿನಲ್ಲಿ ಗಪ್ಪಾಗಿ ಮಲಗಿದ ಗಂಡಹೆಂಡತಿಯರನ್ನು ಸತ್ತರೆಂದೇ ಭಾವಿಸಿದ ಜನ ಅವರನ್ನು ಸ್ಮಶಾನಕ್ಕೆ ಒಯ್ದು ಉರಿ ಹಚ್ಚಿದಾಗ ಅವರು ಎದ್ದು ಬರಲು ದೆವ್ವಗಳೇ ಎದ್ದು ಬಂದವೆಂದು ಜನ ಓಡಿ ಹೋಗುವುದು ದೆವ್ವದ ಬಗೆಗಿನ ನಂಬುಗೆಯ ವಿವರಣೆಯೇ ಆಗಿದೆ.

ದೆವ್ವದ ಕಲ್ಪನೆ ಸತ್ತವನ ಆತ್ಮ ತೊಡುವ ರೂಪ-ಎಂಬಂತೆ ಇದೆ. ಅತಿಲೋಭಿ, ಸಂಸಾರದಲ್ಲಿ ಆಸೆವುಳ್ಳವನು, ಮದುವೆಯಾದ ಯುವಕ-ಯುವತಿ, ಬಾಣಂತಿ, ತೀರ ಕೆಟ್ಟ ಸ್ವಭಾವದವರು, ಲಂಬಾಣಿ ಹೆಂಗಸು -ಇವರೆಲ್ಲ ತೀರಿಕೊಂಡರೆ ದೆವ್ವವಾಗುತ್ತಾರೆಂಬ ಸಾಮಾನ್ಯ ನಂಬುಗೆ ಇದೆ. ಮತ್ತು ಯಾರೇ ಆಗಲಿ ಅಕಾಲಿಕ ಅಥವಾ ದುರ್ಮಣಕ್ಕೆ ಈಡಾದರೆ ಅಂಥವರ ಆತ್ಮಗಳು ಅತ್ಯಂತ ಕೆಟ್ಟ ದೆವ್ವಗಳಾಗುತ್ತವೆ ಎಂದು ಜನರ ವಿಶ್ವಾಸ.

ಈ ಮೇಲೆ ಉಲ್ಲೇಖಿಸಿದವರು ತೀರಿಕೊಂಡು, ಶವಸಂಸ್ಕಾರ ಆದ ಹೊಸದರಲ್ಲಿ ಅಂದರೆ ಅದೇ ದಿನದಿಂದಲೇ ಆಗಬಹುದು – ದೆವ್ವಾಗಿ ಪರಿಣಮಿಸುತ್ತಾರೆಂಬ ನಂಬುಗೆ ಬಲವಾಗಿದೆ. ಹೀಗೆ ಸತ್ತವರು ಬೇರೆ ಯಾವುದೋ ಆಕಾರದಲ್ಲಿ ಕಾಣದೆ ಅವೆಲ್ಲಿ ತಮ್ಮ ಜೀವಂತ ಅವಧಿಯಲ್ಲಿದ್ದ ಸಮೀಪದ ಸಂಬಂಧಿಗಳನ್ನು ಬಡಿದುಕೊಳ್ಳುತ್ತವೆ. ಇದಕ್ಕೆ ದೆವ್ವ ಮೈಮೇಲೆ ಬರುವುದು ಎನ್ನುತ್ತಾರೆ. ಆ ಕುಣಿಯ ಸಮೀಪದಿಂದ ಹಾಯ್ದು ಹೋಗುವಾಗ ಯಾರ್ಯಾದರೂ ಹೆದರಿಕೊಂಡರೆ ಅಂಥವರಿಗೆ ದೆವ್ವ ಬಡಿದುಕೊಳ್ಳುತ್ತದೆ ಎನ್ನುತ್ತಾರೆ. ವಿಶೇಷವಾಗಿ ಯುವಕ ಯುವತಿಯರು ಮದುವೆ ಇಲ್ಲದೆ ತೀರಿಕೊಂಡಾಗ -ಜೀವನದಲ್ಲಿ ತಾನು ಬಯಸಿದ ಆ ವ್ಯಕ್ತಿಯನ್ನೇ ದೆವ್ವಾಗಿ ಕಾಡುತ್ತಾರೆ. ಲೋಭಿ ತಾನು ಸಾಲ ಕೊಟ್ಟವರನ್ನು ಬಡಿದುಕೊಳ್ಳುತ್ತಾನೆ. ಬಾಣಂತಿ ಮನೆಯರಿಗೆ ಬಡಿದುಕೊಂಡು ತನ್ನ ಮಗುವಿನ ಜೋಪಾನದ ಬಗ್ಗೆ ಎಚ್ಚರಿಕೆ ಕೊಡಬಹುದು. ಇಲ್ಲವೆ ಆ ಮಗುವನ್ನೇ ತನ್ನತ್ತ ಕರೆದುಕೊಂಡು ಹೋಗಬಹುದಾಗಿದೆ.

ಹೀಗೆ ಸತ್ತವರು ಕೂಡಲೇ ದೆವ್ವಾಗುವ ನಂಬುಗೆಯ ಒಂದು ಪ್ರಕಾರವಿದ್ದು, ಕೆಲ ಸುಲಭವಾದ ಪರಿಹಾರದ ಮಾರ್ಗಗಳೂ ಇವೆ.

೧. ಹೆಣಹೂಳುವಾಗ ಅವರ ಬಯಕೆಯ ಪದಾರ್ಥಗಳನ್ನು ಕುಣಿಯಲ್ಲಿಯೇ ಹಾಕುವುದು.
೨. ಬಯಕೆಯ ಪದಾರ್ಥಗಳನ್ನು ನೈವೇದ್ಯ ರೂಪದಲ್ಲಿ ಅರ್ಪಿಸುವುದು.
೩. ಕುಣಿಯ ಮೇಲೆ ಯಾವುದಾದರೂ ಸಸ್ಯ ನೆಡುವುದು. ಸತ್ತವರ ಆತ್ಮಗಳು ಈ ವೃಕ್ಷದಲ್ಲಿಯೇ ವಾಸವಾಗುವದು ಎಂಬ ನಂಬುಗೆ ಇದೆ.

ದೆವ್ವವೇ ಮಗುವಾಗಿ ಜನಿಸುವುದು :

ಅಪರೂಪಕ್ಕೆ ದೆವ್ವಗಳೇ ಮಕ್ಕಳ ಹುಟ್ಟುವವೆಂಬ ನಂಬುಗೆಯೂ ಕಾಣಿಸುತ್ತದೆ. ಮಹಾರಾಷ್ಟ್ರದ ನಿಲಂಗಾ ತಾಲೂಕಿನ ಸಂಗಾರೆಡ್ಡಿವಾಡಿ ಎಂಬ ಊರಿನ ವೃತ್ತಾಂತ ಒಂದು ಹೀಗಿದೆ. ಒಬ್ಬ ಹೆಣ್ಣು ಮಗಳಿಗೆ ಚೊಚ್ಚಲ ಮಗುವೊಂದು ಜನಿಸಿತು. ತಿಂಗಳೊತ್ಪತ್ತು. ಕಳೆದ ಮೇಲೆ, ತಾಯಿ ಊಟ ಮಾಡಲು ಕುಳಿತಾಗ ಒಂದು ದಿನ ಇದ್ದಕ್ಕಿದ್ದಂತೆ ಕೂಸು ಬೃಹತ್ತಾಕಾರ ತಾಳಿ, ತಾಯಿಯ ಊಟವನ್ನು ತಾನೇ ತಿಂದಿತು. ಮತ್ತೆ ಈ ಸಂಗತಿ ಯಾರ ಮುಂದಾದರೂ ಹೇಳಿದರೆ, ನಿನ್ನನ್ನೇ ತಿನ್ನುವುದಾಗಿ ಹೆದರಿಸಿತು ಮತ್ತೆ ಕೂಸಿನ ರೂಪ ತಾಳಿತು.

ಪ್ರತಿದಿನವೂ ಅದು ಊಟದ ವೇಳೆಯಲ್ಲಿ ಹೀಗೆಯೇ ಆಕಾರ ತಾಳಿ, ತಾಯಿಯ ಊಟ ತಿನ್ನುತ್ತ ನಡೆಯಿತು. ಅವಳ ದೇಹ ಕೃಶವಾಗತೊಡಗಿತು. ಇದನ್ನು ಗಮನಿಸಿದ ಆ ಹೆಣ್ಣು ಮಗಳ ತಾಯಿ ಕಾರಣ ಕೇಳಿದಾಗ, ‘ನಾನು ಏನನ್ನೂ ಹೇಳಲಾರೆ ನಾನು ಊಟಕ್ಕೆ ಕುಳಿತಾಗ ಬಾಗಿಲು ಸಂದಿಯಿಂದ ಗಮನಿಸು’ ಎಂದಳು. ತಾಯಿ ಹಾಗೇ ಮಾಡಿದಳು. ಕೂಸು ದೆವ್ವಾಗಿ ತನ್ನ ಮಗಳ ಆಹಾರ ತಿನ್ನುವುದನ್ನು, ನಂತರ ಮಗುವಾಗುವುದನ್ನು ಗಮನಿಸಿದಳು. ಅತ್ಯಂತ ಚಾಣಾಕ್ಷತನದಿಂದ ಕೂಸಿಗೆ ಎರೆಯುವ ನೆಪದಲ್ಲಿ, ಕುದಿಯುವ ನೀರು ಹಾಕಿ, ತುತ್ತಿಗೆ ಹಿಸುಕಿ ಕೂಸನ್ನು ಕೊಂದಳು. ಹೀಗೆ ದೆವ್ವನಿಂದ ಮಗಳನ್ನು ಪಾರು ಮಾಡಿದಳು.

ಇಂತಹ ರೋಚಕವಾದ ಪ್ರಚಲಿತ ನಂಬುಗೆಗಳನ್ನು ಮೀರಿದ, ಅರ್ಥೈಸಲು ಬಾರದ ದೆವ್ವದ ಬಗೆಗಿನ ಕಥೆಗಳು ನಮ್ಮಲ್ಲಿ ಸಾಕಷ್ಟು ದೊರೆಯುತ್ತವೆ. ಇಂಥಲ್ಲಿ ನಮ್ಮ ತರ್ಕವೂ ಒಂದು ಕಡೆ ನಿಲ್ಲುವ ಸಾಧ್ಯತೆ ಇದೆ. ಈ ಬಗೆಯ ಘಟನೆಗಳನ್ನು ವ್ಯಾಪಕವಾಗಿ ಸಂಗ್ರಹಿಸಿ, ಅಭ್ಯಸಿಸಿದರೆ ಈ ಪರಿಕಲ್ಪನೆಯ ಬಗ್ಗೆ ಅರಿತುಕೊಳ್ಳಲು ನಮಗೆ ಸಹಾಯವಾಗುತ್ತದೆ.

ದ್ರವ್ಯದೆವ್ವವಾಗುವುದು

ದ್ರವ್ಯದ ಮೇಲೆ ಆಸೆವುಳ್ಳವರು ದೆವ್ವಾಗಿ ಮನೆಯಲ್ಲಿಯೇ ವಾಸಿಸುವರೆಂಬ ನಂಬುಗೆಯ ಜೊತೆಗೆ, ಹೂಳಿಟ್ಟ ಸಂಪತ್ತೇ ಬಹಳ ವರ್ಷಗಳ ನಂತರ ದೆವ್ವಾಗಿ ಪರಿಣಮಿಸುವುದೆಂಬ ನಂಬುಗೆಯೂ ಇದೆ. ಅಂಥ ದ್ರವ್ಯವಿರುವ ಸ್ಥಳದಿಂದ ಯಾರಾದರೂ ಹಾಯ್ದು ಹೋಗುತ್ತಿದ್ದರೆ, ನಾ ಬರ್ತಿನಿ ನಾ ಬರ್ತೀನಿ ಎಂದು ಕೂಗುತ್ತದಂತೆ ಸಾಮಾನ್ಯವಾಗಿ ಅದು ಕೂಗುವುದು ರಾತ್ರಿ ಹಾಗೂ ನಡು ಮಧ್ಯಾಹ್ನದಲ್ಲಿ ಧೈರ್ಯವಿಲ್ಲದವರು ಈ ಕೂಗು ಕೇಳಿ ದೆವ್ವೆಂದು ತಿಳಿದು ಹೆದರಿಕೊಂಡರೆ ಅಂಥವರು ಜ್ವರ ಬಂದು ಹಾಸಿಗೆ ಹಿಡಿಯುತ್ತಾರಂತೆ. ಧೈರ್ಯವಿದ್ದವರು ಏನ ತಿಂದು ಬರ್ತೀನಿ ಎಂದು ಕೇಳುತ್ತಾರಂತೆ. ಅದು ತನಗೆ ಬೇಕಾದುದನ್ನು ಹೇಳುತ್ತದಂತೆ ಕುರಿ, ಕೋಳಿ ಅಥವಾ ವಿಶೇಷವಾದ ಆಹಾರ ಕೇಳಬಹುದು. ಅದನ್ನು ಅರ್ಪಿಸಿದಾಗ ಗಂಟು ಕಾಣಿಸಿಕೊಳ್ಳುತ್ತದೆ ಇಲ್ಲವೆ ಅಗೆದು ತೆಗೆಯಬೇಕು.

ಈ ಸಮಯದಲ್ಲಿ ಹೆದರಿಕೊಂಡರೆ ದೆವ್ವ ಹಿಡಿಯುತ್ತದೆ ಎಂಬ ನಂಬುಗೆ ಇದೆ. ಈ ಬಗೆಯ ದ್ರವ್ಯಕ್ಕಾಗಿ ಮನುಷ್ಯನೇ ಬಲಿಕೊಟ್ಟ ಕಥೆಗಳೂ ದೊರೆಯುತ್ತವೆ.

ಹಳೆಯ ದೆವ್ವಗಳು

ಇವುಗಳನ್ನು ಭೂತಗಳು, ಪಿಶಾಚಿಗಳು, ಪ್ರೇತಗಳು ಎಂಬ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಭೂತಗಳು ಮಾಟಬಲ್ಲವಾಗಿ ಮಾಟಗಾರರ ಕೈವಶವಾಗಿರುತ್ತವೆಂಬ ನಂಬುಗೆ ಇದೆ. ಪಿಶಾಚಿಗಳು -ಮಧ್ಯರಾತ್ರಿ ತಿರುಗಾಡುವ, ಜನರನ್ನು ಪ್ರೀತಿಸುವ, ಹಿಂಸಿಸುವ ಕಲ್ಪನೆಯಲ್ಲಿವೆ. ಪ್ರೇತಗಳು ಸ್ಮಶಾನದಲ್ಲಿ ವಾಸವಾಗುವವು ಎಂಬಂತೆ ಕಲ್ಪನೆ ಇದೆ.

ಇಂತಹ ಹಳೆಯ ದೆವ್ವಗಳ ನೂರಾರು ಕಥೆಗಳು ನಮಗೆ ಕೇಳಲು ದೊರೆಯುತ್ತವೆ. ದೆವ್ವಗಳ ಪಾದಗಳು ಹಿಂದು ಮುಂದಾಗಿರುತ್ತವೆ. ಬೇಕಾದ ಆಕಾರಗಳನ್ನು ಪಡೆಯುತ್ತವೆ. ಹೆಚ್ಚಾಗಿ ಎಮ್ಮೆ, ಕೋಣ, ಕುರಿ ಮುಂತಾದ ಆಕಾರಗಳಲ್ಲಿ ಕಾಣುತ್ತವೆ. ಹುಣಸೆಮರ, ಆಲದಮರ, ಹಳೆಯ ಬಾವಿ, ನಾಲಾಗಳು ಮುಂತಾಗಿ ನೀರಿರುವ ಸ್ಥಳಗಳಲ್ಲಿ ವಾಸಿಸುತ್ತವೆ. ದೆವ್ವಗಳು ಒಲಿಸಿಕೊಂಡ ಜನರ ಗುಲಾಮಗಳಾಗಿ ಬೇಡಿದ್ದನ್ನು ತಂದುಕೊಡುತ್ತಿರುತ್ತವೆ. ಮೆಳ್ಳಗಣ್ಣಿನವರಿಗೆ, ಕಾಲು ಮುಂದಾಗಿ ಹುಟ್ಟಿದವರಿಗೆ ಕಾಣುತ್ತವೆ. ಮುಂತಾಗಿ ನೂರಾರು ಸಾವಿರಾರು ನಂಬುಗೆಗಳು ಇಂತಹ ದೆವ್ವಗಳಿಗೆ ಸಂಬಂಧಿಸಿ ದೊರೆಯುತ್ತವೆ.

ಇಂತಹ ಹಳೆಯ ದೆವ್ವಗಳಿಗೆ ಸಂಬಂಧಿಸಿದ ನಂಬುಗೆಗಳು ಆಶಯಗಳ ರೂಪಗಳಲ್ಲಿ ಜನಪದ ಕಥೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ದೆವ್ವದ ಬಗೆಗಿನ ಅನೇಕ ನಂಬುಗೆಗಳನ್ನು, ಘಟನೆಗಳನ್ನು ಸಂಗ್ರಹಿಸುತ್ತ ಹೋದಂತೆ ಜನಪದ ಕಥೆಗಳಲ್ಲಿ ಕಾಣಿಸುವ ಅನೇಕ ಪಾತ್ರಗಳು, ಘಟನೆಗಳು – ನನ್ನ ನೆನಪಿಗೆ ಬರುತ್ತ ಹೋದವು. ನಾವು ಅರ್ಥ ಬರೆಯಲು ಸಾಧ್ಯವಾಗದ ಅನೇಕ ಪಾತ್ರಗಳು, ಘಟನೆಗಳು -ದೆವ್ವದ ಸ್ವಭಾವ ಮತ್ತು ಕ್ರಿಯೆಗಳ ಅಭ್ಯಾಸದ ಹಿನ್ನೆಲೆಯಲ್ಲಿ ಒಂದು ಅರ್ಥ ಪಡೆಯಬಹುದೆಂದು ಅನ್ನಿಸತೊಡಗಿತು. ಆ ವ್ಯಕ್ತಿತ್ವಗಳೂ ದೆವ್ವದ ಕಲ್ಪನೆಗಳಂತೆ ಮಾನವನ ಮನಸಿಕ ವಿಭ್ರಮಗಳೇ ಇರಬೇಕೆಂಬ ಅನುಮಾನ ನನ್ನದು. ಆದರೆ ಜನಪದರು ಅವುಗಳನ್ನು ಅತ್ಯಂತ ಕಲಾತ್ಮಕವಾಗಿ ಕಥೆಗಳಲ್ಲಿ ನಿರೂಪಿಸಿರುವುದು ನಮಗೆ ಅಚ್ಚರಿಯನ್ನುಂಟು ಮಾಡುವಂತಿದೆ. ಜಲಗನ್ನೆಯರು, ನೆಲಗನ್ನೆಯರು, ವೃಕ್ಷಗನ್ನೆಯರು, ದೇವಗನ್ನೆಯರು, ಗಂಧರ್ವ ಸ್ತ್ರೀಯರು – ಈ ಎಲ್ಲಾ ವ್ಯಕ್ತಿತ್ವಗಳು ಆದಿಮಾನವನ ಯಾವುದೋ ಕಾಲದ ದೆವ್ವಿನಂತಹ ಹಳೆಯ ಆತ್ಮದ ಪ್ರತೀಕಗಳ ಕಲ್ಪನೆಗಳೇ ಆಗಿರಬೇಕೆನಿಸುತ್ತದೆ.

ಅವೆಲ್ಲವುಗಳನ್ನು-ಹಳೆಯ ದೆವ್ವಗಳ ಬಗೆಗೆ ನಮ್ಮ ಜನಪದರಲ್ಲಿರುವ ಸಾವಿರಾರು ನಂಬಿಗೆ ಮತ್ತು ಘಟನೆಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಬಹುದೆನಿಸುತ್ತದೆ.

ಎಣ್ಣೆ ಮತ್ತು ದೆವ್ವ :

ಎಣ್ಣೆಯ ಪದಾರ್ಥಗಳಿಗೂ ದೆವ್ವಿಗೂ ನಂಟು ಕಲ್ಪಿಸುವ ಅನೇಕ ಕಲ್ಪನೆಗಳು ಜನಪದರಲ್ಲಿವೆ. ಗಾಣಿಗರು ಗಾಣ ಹೂಡುವಲ್ಲಿ ದೆವ್ವಗಳು ವಾಸಿಸುತ್ತವೆ ಎಂಬ ನಂಬುಗೆ ಇದೆ. ಅದರಲ್ಲೂ ಹಾಳುಬಿದ್ದ ಗಾಣಬರಿಗಳಲ್ಲಿ ದೆವ್ವಗಳು ವಾಸವಾಗಿರುತ್ತವಂತೆ ಅದಕ್ಕಾಗಿ ಎಣ್ಣೆ ಪದಾರ್ಥಗಳು ಹೊರಗಿನಿಂದ ಮನೆಯಲ್ಲಿ ತರುವಾಗ, ವಿಶೇಷವಾಗಿ ಸೀಮೆದಾಟಿ ಬರುವಾಗ ಒಮ್ಮೆಲೇ ಮನೆಯಲ್ಲಿ ತರಬಾರದು, ಬರಬಾರದು. ಕಟ್ಟೆಯ ಮೇಲೆ ಇಟ್ಟು ಕೈಕಾಲು ತೊಳೆದುಕೊಂಡು, ಸ್ವಲ್ಪ ಹೊತ್ತು ಕುಳಿತು -ನಂತರ ಒಳಗೆ ಬರಬೇಕು ಎಂಬ ನಂಬುಗೆ ಇದೆ. ದೆವ್ವಗಳು ಬಡಿದುಕೊಂಡಾಗ, ಅವುಗಳು ವಾಸವಾಗಿರುವವೆಂಬ ಸ್ಥಳದಲ್ಲಿ ವಿಶೇಷವಾಗಿ ಎಣ್ಣೋಳಗಿ ನೈವೇದ್ಯ, ಎಣ್ಣೆದೀಪ, ಅರ್ಪಿಸುವ ನಂಬುಗೆ ನಮ್ಮಲ್ಲಿದೆ. ಒಂದು ಕಥೆಯಲ್ಲಿ ಒಬ್ಬ ಸಾಹುಕಾರನ ಆಳುಗಳು ಎಣ್ಣೆ ಡಬ್ಬಗಳನ್ನು ಹೊತ್ತು ತರುತ್ತಿದ್ದರು. ಬಿಸಿಲಿನಲ್ಲಿ ಎಣ್ಣೆ ಕರಗಿ, ತಿಳಿಯಾಗಿ ಅಲುಗಾಡಿ ಸಪ್ಪಳವಾಗಲು, ಡಬ್ಬಿಯಲ್ಲಿ ದೆವ್ವವೇ ಹೊಕ್ಕಿದೆ ಎಂದು ತಿಳಿದ ಆಳುಗಳು, ಡಬ್ಬಗಳನ್ನು ಒಗೆದು, ಕಲ್ಲುಹಾಕಿ ಮನೆಗೆ ಬಂದರು. ಇನ್ನೊಂದು ಸಲ ಕಣಕಿ ಹೇರಿದ ಗಾಡಿಗಳು, ಗಾಲಿಗೆ ಎಣ್ಣೆ ಕಡಿಮೆಯಾಗಿ ಸಪ್ಪಳವಾಗುತ್ತಿರಲು ದೆವ್ವ ಹೊಕ್ಕಿದೆಯೆಂದು ಭಾವಿಸಿ ಕಣಿಕಿ ಗಾಡಿಗೆ ಉರಿ ಹಚ್ಚಿದರು. ಮಾದರಿ (೧೦೦೨)

ಲೋಹ ಮತ್ತು ದೆವ್ವ :

ದೆವ್ವವು ಲೋಹಕ್ಕೆ ಹೆದರುವುದು ಎಂಬ ನಂಬಿಕೆ ಸಾಮಾನ್ಯವಾಗಿದೆ. ಬಾಣಂತಿಯ ಮಗ್ಗುಲಿಗೆ ಲೋಹದ ಅಸ್ತ್ರವಿಡುವುದು, ಮದುಮಕ್ಕಳ ಕೈಯಲ್ಲಿ ಲೋಹದ ಸಾಮಾನು ಕೊಡುವುದು, ಭೂಮ ಒಯ್ಯುವ ಸಮಯದಲ್ಲಿ ಕೊಡ್ಲಿ, ಹತಿಯಾರದಂತಹ ವಸ್ತುವನ್ನು ಬಗಲಲ್ಲಿ ಹಿಡಿಯುವುದು, ಎಣ್ಣೋಳಗಿ ಇತ್ಯದಿ ಎಣ್ಣಿ ಪ್ರಮುಖ ಬುತ್ತಿಯಲ್ಲಿ ಲೋಹದ ಚೂರು, ಇದ್ದಲಿ ಮುಂತಾದವನ್ನು ಇಡುವುದು ಇವೆಲ್ಲಾ ಲೋಹಕ್ಕೂ ದೆವ್ವಿಗೂ ಇರುವ ಸಂಬಂಧವನ್ನು ಹೇಳುತ್ತವೆ. ಒಂದು ಜನಪದ ಕಥೆಯಲ್ಲಿ ದಾರಿಯಲ್ಲಿ ನಾವಿದನೊಬ್ಬನಿಗೆ ದೆವ್ವ ಗಂಟು ಬೀಳಲು, ಮೂಗು ಕೊಯ್ಯುತ್ತೇನೆಂದು ಚಾಕು ತಗೆದಾಗ ದೆವ್ವ ಅಂಜಿ ಓಡಿಹೋದ ಕಥೆ ದೆವ್ವವು ಲೋಹದ ಅಸ್ತ್ರಗಳಿಗೆ ಹೆದರುತ್ತದೆ ಎಂಬ ನಂಬುಗೆಯನ್ನವಲಂಬಿಸಿದೆ.

ವೃಕ್ಷಗನ್ನಕಿಯರು ಮತ್ತು ದೆವ್ವ :

ದೆವ್ವಗಳು ವೃಕ್ಷದಲ್ಲಿ ವಾಸವಾಗುತ್ತವೆ ಎಂಬ ಸಾಮಾನ್ಯ ನಂಬುಗೆ ಇದೆ. ಆಲದ ಮರ, ಹುಣಸೆಮರ, ಜಾಲಿಮರಗಳಲ್ಲಿ ವಾಸವಾಗಿರುವ ಸಂಗತಿ ಸಾಮಾನ್ಯ ಈ ನಂಬುಗೆಯ ಕಾರಣದಿಂದಾಗಿಯೇ. ಅನೇಕ ಜನಪದ ಕಥೆಗಳಲ್ಲಿ ವಿಶೇಷವಾಗಿ ಮಲತಾಯಿ ಮಕ್ಕಳಿಗೆ ಕಾಡುತ್ತಿದ್ದರೆ, ಅಂತಹ ಮಕ್ಕಳ ‘ಸತ್ತ ತಾಯಿ’ ವೃಕ್ಷದಿಂದ ಬಂದು ಅವರು ಬೇಡಿದ್ದನ್ನು ಕೊಡುವ, ಅವರ ಸಹಾಯಕ್ಕೆ ನಿಲ್ಲುವ ಘಟನೆಗಳುಳ್ಳ ಕಥೆಗಳು ನಮ್ಮಲ್ಲಿ ಸಾಕಷ್ಟು ದೊರೆಯುತ್ತವೆ. ಹೆಣ್ಣು ಸಿಂಡ್ರೆಲ್ಲಾ ಮತ್ತು ಗಂಡು ಸಿಂಡ್ರೆಲ್ಲಾ ಎರಡೂ ಬಗೆಯ ಕಥೆಗಳಲ್ಲಿ ಮಲತಾಯಿಯ ಸಹಾಯಕ್ಕೆ ಬರುವ ಅತಿಮಾನುಷ ಹೆಣ್ಣು ಗಿಡದಿಂದ ಪ್ರತ್ಯೇಕ್ಷವಾಗಿ ಸಹಾಯ ಮಾಡುತ್ತಾಳೆ.

ಸಿಂಡ್ರೆಲ್ಲಾ (೫೧೦A) ಕಥೆಯಲ್ಲಿ ರಾಜಕುಮಾರನೊಬ್ಬ ಹೆಂಡತಿಯನ್ನಾರಿಸಲು ಚಲುವೆಯರ ಸಭೆ ಕೂಡಿಸುತ್ತಾನೆ. ಸಹಾಯಕ್ಕೆ ಬಂದ ಹೆಣ್ಣು (ದೇವಿ) ಮಲಮಗಳಿಗೆ ಹೊಳೆಯುವ ಉಡುಗೆ-ತೊಡುಗೆ ಒದಗಿಸಿ, ರಥ ಏರಿಸಿ ರಾಜಕುಮಾರ ಕರೆದ ಸುಂದರಿಯರ ಸಭೆಗೆ ಕಳುಹಿಸುತ್ತಾಳೆ.

ಮಾದರಿ ೫೧೧ – ಒಕ್ಕಣ್ಣು ಇಕ್ಕಣ್ಣು ಮುಕ್ಕಣ್ಣು ಎಂಬಲ್ಲಿ ಮಲಮಗಳನ್ನು ಮಲತಾಯಿ ಕಾಡುತ್ತಾಳೆ. ಮಲಮಗಳು ಅಡವಿಯಲ್ಲಿ ದನಕಾಯುತ್ತಿರುವಾಗ ಶಿವಪಾರ್ವತಿ ಬಂದು ಅಲ್ಲಿರುವ ಬೇವಿನ ಗಿಡ-ಬೇಕಾದುದನ್ನು ಪೂರೈಸುವುದು ಎಂದು ಹೇಳಿಹೋಗುತ್ತಾರೆ. ಗಿಡದಿಂದ ಒಬ್ಬ ಹೆಣ್ಣುಮಗಳು ಬಂದು ಹುಡುಗಿಗೆ ಬೇಡಿದ್ದನ್ನು ಪೂರೈಸುತ್ತಿದ್ದಳು. ಮಲತಾಯಿ ಆ ಗಿಡವನ್ನು ಕಡಿಸಿದಳು. ಮತ್ತೊಮ್ಮೆ ಹೆಣ್ಣುಮಗಳು ಬಂದು ಮಲಮಗಳ ಎಡಗೈಯ ಅಂಗೈಯಲ್ಲಿ ಬಯಸಿದ್ದನ್ನು ಕೊಡುವಂತೆ ಬರೆದು ಹೋಗುತ್ತಾಳೆ.

ಹೀಗೆ ಅಸಾಮಾನ್ಯ ಸಹಾಯಕರು ಸಹಾಯಕ್ಕೆ ಬಂದಾಗ ಅವನ್ನು ‘ದೆವ್ವ’ ಎಂಬ ಹೆಸರಿನಿಂದ ಕರೆಯದಿದ್ದರೂ ದೆವ್ವದ ನಂಬುಗೆಗಳನ್ನು ಗಮನಿಸಿದರೆ ಅವು ಕೂಡ ದೆವ್ವದ ಪುರಾತನ ನಂಬುಗೆಗಳಂತೇ ತೋರುತ್ತವೆ.

ಈ ಹಿನ್ನೆಲೆಯಲ್ಲಿ ಸುಂದರ ಸ್ತ್ರೀಯರು ವೃಕ್ಷದಲ್ಲಿ ವಾಸವಾಗಿರುವ ಕಥೆಗಳು ಕೂಡ ದೆವ್ವದ ನಂಬುಗೆಗಳ ಹಿನ್ನೆಲೆಯಲ್ಲಿಯೇ ಅರ್ಥೈಸಿಕೊಳ್ಳಬಹುದೇನೋ ಎನಿಸುತ್ತದೆ.

ರಾಜಕುಮಾರಿ ಗಿಡದಲ್ಲಿ ವಾಸವಾದಳು(೮೫೦B) ಎಂಬ ಮಾದರಿಯಲ್ಲಿ ರಾಜಕುಮಾರಿ ತೋಟದ ಗಿಡವೊಂದರ ಬೊಡ್ಡೆಯಲ್ಲಿ ವಾಸವಾದಳು. ಈಗೆ ರಾತ್ರಿ ಸಮಯದಲ್ಲಿ ಗಿಡದಿಂದ ಹೊರಗೆ ಬಂದು ತೋಟದಲ್ಲಿ ಸಂಚರಿಸುತ್ತ, ಅಲ್ಲಿಯ ಹೆಣ್ಣು ಹಂಪಲು ತಿಂದು, ಬಾವಿಯ ನೀರು ಕುಡಿದು ಹೋಗುತ್ತಿದ್ದಳು. ತನ್ನ ತೋಟದ ಹಣ್ಣುಗಳು ಹೇಗೆ ಮಾಯವಾಗುತ್ತಿವೆ ಎಂಬುದನ್ನು ಕಂಡುಹಿಡಿಯಲು ಬಯಸಿದ ಮಾಲಿಕ ರಾತ್ರಿ ಗಿಡ ಏರಿ ಕುಳಿತರು. ಈ ಹೆಂಗಸು ಗಿಡದಿಂದ ಹೊರಗೆ ಬಂದು ಹಣ್ಣು ತಿಂದು ನೀರು ಕುಡಿಯಲು ಬಂದಾಗ, ಸೆರಗು ಹಿಡಿದು ಮದುವೆಯಾಗಲು ನಿಶ್ಚಯಿಸಿದನು. ಮದುವೆ ಗಿಡದೊಂದಿಗೇ ನಡೆಯಬೇಕೆಂದು ಕರಾರು ಹಾಕಿದಳು. ಅದರಂತೆ ಆಕೆ ವಾಸವಾಗಿದ್ದ ಬಾಳೆಗಿಡದೊಂದಿಗೇ ಮದುವೆ ನಡೆಯಿತು. ಬೀಗರೆಲ್ಲ ಊಟಕ್ಕೆ ಕುಳಿತಾಗ ‘ಬಾಳಿಗಿಡದ ಬಾಲಾವತಿ ತುಪ್ಪ ನೀಡು ಬಾ’ ಎಂದಾಗ ಗಿಡದ ಬೊಡ್ಡೆಯಿಂದ ಸುಂದರವಾದ ಹೆಣ್ಣು ಬಂದು ತುಪ್ಪ ನೀಡಿದಳು. ಇದನ್ನು ಗಮನಿಸಿದ ಒಬ್ಬ ತಾನೂ ತನ್ನ ಹೊಲದಲ್ಲಿಯ ಜಾಲಿಯ ಮರಕ್ಕೆ ಮದುವೆಯಾಗಲು ಬಯಸಿದ. ಮದುವೆಯಾಗಿ, ಜಾಲಿಗಿಡದಾನ ಜಾಲಾವತಿ ‘ತುಪ್ಪ ನೀಡು ಬಾ’ ಎಂದರೆ ಗಿಡದಲ್ಲಿನ ದೆವ್ವ ಬಂದಿತ್ತು ಎಂದು ಕಥೆ ವಿವರಣೆ ನೀಡುತ್ತದೆ.

ವೃಕ್ಷದಲ್ಲಿ ವಿಶೇಷವಾಗಿ ಹುಣಸೆಮರ, ಜಾಲಿಮರಗಳಲ್ಲಿ ದೆವ್ವಗಳು ವಾಸವಾಗಿರುತ್ತವೆ ಎಂಬ ನಂಬುಗೆಯ ಹಿನ್ನೆಲೆಯಲ್ಲಿ ಮತ್ತು, ಪರಸ್ಪರ ಬಯಸಿದ ಯುವಕ ಯುವತಿಯರಲ್ಲಿ ಒಬ್ಬರು ತೀರಿಕೊಂಡಾಗ, ದೆವ್ವಾಗಿ ತಾನು ಬಯಸಿದವರನ್ನು ಬಡಿದುಕೊಳ್ಳುತ್ತದೆ ಎಂಬ ನಂಬುಗೆಗಳ ಹಿನ್ನೆಲೆಯಲ್ಲಿ ಈ ವಿವರಗಳನ್ನು ಗಮನಿಸಿದಾಗ ಕಥೆಯ ಕಲಾತ್ಮಕತೆಯಲ್ಲಿ ದೆವ್ವದ ಪರಿಕಲ್ಪನೆಯೇ ಹುದುಗಿದೆ ಎನಿಸುತ್ತದೆ. ಬಾಳಿಗಿಡದ ಬಾಲಾವತಿ, ರಾತ್ರಿ ಮಾತ್ರ ಸಂಚರಿಸುವುದು. ಹತ್ತಿರದಲ್ಲಿಯೇ ಬಾವಿ ಇರುವುದೂ ಗಮನಿಸಬೇಕಾದ ಸಂಗತಿಗಳು. ದೆವ್ವಗಳು ರಾತ್ರಿ ಸಂಚರಿಸುತ್ತವೆ, ಗಿಡದಲ್ಲಿ ಮತ್ತು ನೀರಿರುವ ಪ್ರದೇಶ ದೊಡ್ಡ ಬಾವಿಗಳಲ್ಲೂ ವಾಸವಾಗುತ್ತವೆ ಎಂಬ ನಂಬುಗೆಗಳ ಹಿನ್ನೆಲೆಯಲ್ಲಿ ಈ ಕಥೆಯ ಕಲ್ಪನೆಗೊಂದು ಅರ್ಥ ಬರುತ್ತದೆ ಎನಿಸುತ್ತದೆ.

ನೀರು ದೆವ್ವ
ಜಲಗನ್ನೆಯರು, ನೆಲಗನ್ನೆಯರು ಮತ್ತು ದೆವ್ವ

ದೆವ್ವಕ್ಕೂ ನೀರಿಗೂ ಸಂಬಂಧಿಸಿದ ಅನೇಕ ನಂಬುಗೆಗಳು ನಮ್ಮಲ್ಲಿವೆ. ದೆವ್ವಗಳು ವಾಸ ಮಾಡುವ ಪ್ರಮುಖ ಸ್ಥಳಗಳಲ್ಲಿ ಈ ನೀರಿನ ಸ್ಥಳಗಳೂ ಪ್ರಮುಖವಾದವುಗಳು. ಬೃಹತ್ತಾದ ಬಾವಿ, ನಿರ್ಜನ ಪ್ರದೇಶದ ಹಳ್ಳಗಳು, ವಿಶಾಲವಾದ ಸರೋವರಗಳು ಇವುಗಳಲ್ಲಿ ದೆವ್ವಗಳು ವಾಸವಾಗಿಸುತ್ತವೆ ಎಂಬ ಸಾಮಾನ್ಯ ನಂಬುಗೆ ಇದೆ. ಸುಮಾರಿಗೆ ಮಧ್ಯಾಹ್ನದ ಹೊತ್ತಿನಲ್ಲಿ ಯುವಕ ಯುವತಿಯರು ಅಲ್ಲಿಂದ ಹಾಯ್ದರೆ, ಅಲ್ಲಿಗೆ ಹೋದರೆ ಅವು ಬಡಿದುಕೊಳ್ಳುತ್ತವೆ ಎಂದು ನಂಬಲಾಗುತ್ತದೆ.

‘ಏಳು ಮಕ್ಕಳ ತಾಯಿ’ ದೆವ್ವಿನ ಕಲ್ಪನೆಯೊಂದಿದ್ದು, ಅದು ನಿರ್ಜನ ಪ್ರದೇಶದಲ್ಲಿ ನೀರಿರುವ ಸ್ಥಳದಲ್ಲಿ ವಾಸವಾಗಿರುತ್ತದೆ ಎಂಬ ನಂಬುಗೆ ಇದೆ. ಈ ನೀರಿನಲ್ಲಿರುವ ದೆವ್ವಗಳು ಹೆಚ್ಚಾಗಿ ಯುವಕರನ್ನು ಬಡಿದುಕೊಳ್ಳುತ್ತವೆ ಎಂಬ ಹಿನ್ನೆಲೆಯಲ್ಲಿ ಅನೇಕ ಘಟನೆಗಳು ಪ್ರದೇಶದಿಂದ ಪ್ರದೇಶಕ್ಕೆ ದೊರೆಯುತ್ತವೆ.

ಈ ‘ಏಳು ಮಕ್ಕಳ ತಾಯಿ’ ದೆವ್ವದ ಕಲ್ಪನೆಯ ಆಧಾರದ ಮೇಲೆಯೇ ಜನಪದ ಕಥೆಗಳಲ್ಲಿ ಬರುವ ಜಲಗನ್ನೆಯರ (ಜಕಣಿಯರು) ಮತ್ತು ನೆಲಗನ್ನೆಯರ ಕಲ್ಪನೆಗಳು ಹುಟ್ಟಿಕೊಂಡಿರಬೇಕೆಂಬ ಸಂಶಯ ಬರುತ್ತದೆ. ಈ ಜಲ ಮತ್ತು ನೆಲಗನ್ನೆಯರು ಪುರಾತನ ದೆವ್ವನ ಕಲ್ಪನೆಗಳೇ ಆಗಿರಬೇಕೆನಿಸುತ್ತದೆ.

ದೆವ್ವಿನ ಕಲ್ಪನೆ ‘ಏಳು ಮಕ್ಕಳ ತಾಯಿ’ ಎಂದಾದರೆ ಜಲ, ನೆಲಗನ್ನೆಯರ ಕಲ್ಪನೆ ಏಳು ಜನ ಮಕ್ಕಳ ಕಲ್ಪನೆಗೆ ಸಂಬಂಧಿಸಿದಂತಿದೆ. ಇವರು ಏಳು ಜನ ಅಕ್ಕತಂಗಿಯರು (ಮಾದರಿ ೫೯೦):

i. ಒಂದು ಕೆರೆಯ ದಂಡೆಯ ಮೇಲೆ ಬೀಡುಬಿಟ್ಟ ಮದುವೆಯ ದಿಬ್ಬಣದಲ್ಲಿಯ ಕಿರಿಯ ರಾಜಕುಮಾರನನ್ನು ಮೋಹಿಸಿ ಕದ್ದೊಯ್ಯುತ್ತಾರೆ. ಅವನ ಹೆಂಡತಿ ಹುಡುಕಲು ಬಂದಾಗ ಅವನನ್ನು ಅನೇಕ ಕಡೆ ಸಾಗಿಸುತ್ತಾರೆ. (ಮಾದರಿ : ೩೧೬)
ii. ಒಂದು ಕಡೆ ರಾಜನೊಬ್ಬ ಮೋಹಿಸಲು ಒಬ್ಬ ಜಲಕನ್ಯ ಮದುವೆಯಾಗಿ ರಾಣಿಯಾಗಿ ಇರುತ್ತಾಳೆ. ಮಾನವರ ಕೈಹಿಡಿದ ಮೇಲೆ ಜಕಣಿಯರೂ ಸಾಮಾನ್ಯ ಹೆಂಗಸರಂತೆಯೇ ವರ್ತಿಸುತ್ತಾರೆ. (ಮಾದರಿ ೫೧೬)
iii. ತಾವು ವಾಸಿಸುವ ನೀರಿನ ಕೊಳದ ಹತ್ತಿರ ಒಂದು ಹೆಂಗಸಿನ ಅಳುವ ಧ್ವನಿ ಕೇಳುತ್ತದೆ. ಅವಳನ್ನು ಸಂತೈಸಿ, ತಮ್ಮಲ್ಲಿಯೇ ಇಟ್ಟುಕೊಳ್ಳುತ್ತಾರೆ.
iv. ಮತ್ತೊಂದು ಕಡೆ ಮಲತಾಯಿ ರಾಜಕುಮಾರನ ಹೆಂಡತಿಯಾದ ತನ್ನ ಮಲಮಗಳನ್ನು ಬಾವಿಗೆ ಹಾಕುತ್ತಾಳೆ. ಅಲ್ಲಿ ನೆಲೆಸಿರುವ ಏಳುಜನ ನೆಲಗನ್ನೆಯರು ಅವಳನ್ನು ತಮ್ಮಲ್ಲಿಯೇ ಇಟ್ಟುಕೊಂಡು ಸಂರಕ್ಷಿಸುತ್ತಾರೆ. ಬಾಣಂತನ ಮಾಡುತ್ತಾರೆ. ಅವಳ ಗಂಡ ಬರಲು ಅವನಿಗೆ ಒಪ್ಪಿಸುತ್ತಾರೆ (ಮಾದರಿ ೪೩೧ಸಿ)
v. ಒಂದು ಕಡೆ ಸವತಿಗೆ ಜನಿಸಿದ ಕೂಸುಗಳನ್ನು ಒಬ್ಬಾಕೆ ಚೂರ ಚೂರು ಮಾಡಿ ಗಂಟು ಕಟ್ಟಿ ಸಮುದ್ರಕ್ಕೆ ಎಸೆಯುತ್ತಾಳೆ. ಅಲ್ಲಿ ವಾಸವಾದ ನೆಲಗನ್ನೆಯರು ಆ ಗಂಟನ್ನು ಹಿಡಿದು ಕೂಸುಗಳ ಅವಯವಗಳನ್ನು ಜೋಡಿಸಿ, ಜೀವತುಂಬಿ ಸಾಕುತ್ತಾರೆ. ರಾತ್ರಿ ಆ ಕೂಸುಗಳ ತಾಯಿಯಲ್ಲಿಗೆ ಒಯ್ದು ಮೊಲೆಯುಣಿಸಿಕೊಂಡು ಬರುತ್ತಿರುತ್ತವೆ.

ಈ ಮೇಲಿನ ವಿವರಗಳೆಲ್ಲ ಅಗಲಿದ ಆತ್ಮಗಳ ಚಟುವಟಿಕೆಗಳಂತೆಯೇ ತೋರುತ್ತವೆ. ಇವುಗಳನ್ನು ಜ್ಞಾಪಿಸಿಕೊಳ್ಳುತ್ತ ಈ ಕೆಳಗಿನ ದೆವ್ವದ ಬಗೆಗಿನ ನಂಬುಗೆಗಳನ್ನು ಗಮನಿಸಬೇಕು.

೧. ನೀರಿರುವ ಕಡೆಯಲ್ಲಿ ಏಳು ಮಕ್ಕಳ ತಾಯಿ ವಾಸಿಸುತ್ತದೆ.
೨. ದೆವ್ವಗಳು ರಾತ್ರಿ ಅಡ್ಡಾಡುತ್ತವೆ.
೩. ಮದುವೆಯ ಸಂದರ್ಭದಲ್ಲಿ ದಂಪತಿಗಳು ಕಂಕಣ ಕಟ್ಟಿದ ಬಳಿಕ ದೆವ್ವ ಬಡಿಯುತ್ತದೆ. ಅದಕ್ಕಾಗಿ ಹತ್ತಿರ ಲಿಂಬೆ ಹಣ್ಣು, ಕೊಡಲಿ, ಹತಿಯಾರ ಇರಬೇಕೆಂದು ಜನನಂಬುತ್ತಾರೆ.
೪. ಹರೆಯದ ಯುವತಿಯರು ಮದುವೆಯಾಗದೆ ತೀರಿಕೊಂಡರೆ, ದೆವ್ವಾಗಿ ತಾನು ಬಯಸಿದವರನ್ನು ಕಾಣಿಸಿಕೊಳ್ಳುತ್ತಾರೆ.
೫. ಸತ್ತವರು ದೆವ್ವಾಗಿ ತಮಗೆ ಬೇಕಾದವರ ಸಹಾಯಕ್ಕೆ ಬರುತ್ತಾರೆ.

ಗಾಳಿ ಮತ್ತು ದೆವ್ವ

ದೆವ್ವ ಬಡಿದುಕೊಂಡವರಿಗೆ ‘ಗಾಳಿಶಕ’ ವಾಗಿದೆ ಎಂಬ ಮಾತನ್ನು ಬಳಸಲಾಗುತ್ತದೆ. ಸುಂಟರಗಾಳಿಯನ್ನು ‘ದೆವ್ಗಾಳಿ’ ಯೆಂತಲೂ ಕರೆಯುತ್ತಾರೆ. ದೆವ್ಗಾಗಳಿಯಲ್ಲಿ ಹಾರಿಹೋದ ಬಟ್ಟೆಗಳನ್ನು ಪುನಃ ಮನೆಯಲ್ಲಿ ತರಬಾರದು ತಂದರೆ ಅವುಗಳ ಜೊತೆ ಮನೆಯಲ್ಲಿ ದೆವ್ವ ಬರುತ್ತದೆ. ಎಂಬ ನಂಬುಗೆ ಇದೆ.

ದೆವ್ವಗಳು ಗಾಳಿಯಲ್ಲಿ ಚಲಿಸುತ್ತವೆ ಎಂದೂ ನಂಬಲಾಗುತ್ತದೆ. ಹೀಗಾಗಿ ಗಾಳಿಯಲ್ಲಿ ವಾಸಿಸುವ ದೆವಗನ್ನಕಿ ಮತ್ತು ಗಂಧರ್ವ ಸ್ತ್ರೀಯರ ವ್ಯಕ್ತಿತ್ವಗಳು ಜನಪದ ಕಥೆಗಳಲ್ಲಿ ಬರುವುದನ್ನು ಗಮನಿಸಿದರೆ ಮಾನವನ ಈ ಅತಿಮಾನುಷ್ಯ ದೆವ್ವದ ಕಲ್ಪನೆಯಂತಿರುವುದೆಂದೇ ಭಾಸವಾಗುತ್ತದೆ. ಇವರು ಭೂಲೋಕದಿಂದ ಕಲ್ಪಿತ ಗಂಧರ್ವಲೋಕಕ್ಕೆ ಅಲೆದಾಡುತ್ತಿರುತ್ತಾರೆ. ಭೂಲೋಕದ ನಿರ್ಜನ ಪ್ರದೇಶದ ನೀರಿನ ಸ್ಥಳಗಳಿಗೆ ಬಂದು ಬೆತ್ತಲೆಯಾಗಿ ಈಜಾಡುತ್ತಿರುತ್ತಾರೆ. ಈ ಸಮಯದಲ್ಲಿ ಭೂಲೋಕದ ಗಂಡಸರ ಜೊತೆ ಸಂಬಂಧವನ್ನು ಬೆಳೆಸುತ್ತಾರೆ. (೩೦೩, ೪೪೮). ಅತ್ಯಂತ ಸುಂದರ ಸ್ತ್ರೀಯರು ಇವರಾಗಿದ್ದಾರೆ. ಇವರ ಪಾತ್ರಗಳು ಬಂದಾಗಲೆಲ್ಲ ಯಾವುದೋ ಕಾಲದ ಹಳೆ ದೆವ್ವದ ಕಥೆಗಳೇ ಇವಾಗಿರಬೇಕೆಂಬ ಭಾಸ ಉಂಟಾಗುತ್ತದೆ.

ಜಲಗನ್ನೆಯರು, ನೆಲಗನ್ನೆಯರು-ಜಲದಲ್ಲಿ ವಾಸಮಾಡುವರು, ದೇವಗನ್ನಿಕೆಯರು, ಗಂಧರ್ವಸ್ತ್ರೀಯರು ಗಾಳಿಯಲ್ಲಿ ವಾಸಮಾಡುವವರು, ವೃಕ್ಷಗನ್ನಿಕೆಯರು ಗಿಡಗಳಲ್ಲಿ ವಾಸ ಮಾಡುವವರು. ಇವೆಲ್ಲಾ ಸತ್ತ ಸ್ತ್ರೀಯರ ಆತ್ಮದ ಪ್ರತೀಕಗಳೇ ಆಗಿರಬೇಕೆಂದೆನಿಸುತ್ತವೆ.

ಪರಿಹಾರ :

ದೆವ್ವ ಬಡಕೊಂಡಾಗ ಪರಿಹಾರಕ್ಕಾಗಿ ಆಹಾರ ಅರ್ಪಿಸುವುದೇ ಜಾಸ್ತಿಯಾಗಿ ಕಾಣುತ್ತದೆ. ಎಣ್ಣೋಳ್ಗಿ, ಅನ್ನ, ತೆಂಗು ಮುಂತಾದವುಗಳನ್ನರ್ಪಿಸಲು ರಾತ್ರಿಯಾದ ಮೇಲೆ ವಯಸ್ಸಾದವರೇ ಒಯ್ಯಬೇಕು. ಯಾರ ಜೊತೆಯೂ ಮಾತನಾಡಬಾರದು. ನೈವೇದ್ಯ ಅರ್ಪಿಸಿ ಬರುವಾಗ ಹಿಂದಕ್ಕೆ ತಿರುಗಿ ನೋಡಬಾರದು. ಮನೆಯ ಮಕ್ಕಳು, ಯುವಕರು ಎದುರಾಗಬಾರದು. ದೆವ್ವಿಗೆ ಅರ್ಪಿಸಿದ ಆಹಾರವನ್ನು ತಿನ್ನಲು ಬಯಸುವವರೂ ಇದ್ದಾರೆ. ಕೈಯಿಂದ ಆಹಾರ ತೆಗೆದುಕೊಳ್ಳಲು ಹೋದರೆ ಕೈಗಳೇ ಮೇಲೇಳದ ಕಥೆಗಳಿವೆ. ಎರಡೂ ಕೈಗಳನ್ನು ನೆಲಕ್ಕೆ ಊರಿ ನೇರವಾಗಿ ಬಾಯಿಯಿಂದಲೇ ದೆವ್ವಿನ ಆಹಾರ ಸೇವಿಸಬೇಕೆಂಬ ನಂಬಿಕೆ ಇದೆ.

ಕೆಲವು ಕಡೆ ದೆವ್ವದ ಪೀಡೆ ಬಿಡಿಸುವವರೂ ಇರುತ್ತಾರೆ. ಯಂತ್ರ, ಮಂತ್ರಗಳ ಸಹಾಯದಿಂದ ದೆವ್ವ ಹೋಗುವುದೆಂಬ ನಂಬುಗೆ ಜನಮನದಲ್ಲಿದೆ.

ಕೊನೆಯದಾಗಿ ಇಂದಿನ ವಿಜ್ಞಾನಿಗಳ ತರ್ಕಬದ್ಧವಾದ ದೆವ್ವದ ಕಲ್ಪನೆ ಕುರಿತ ಮಾತುಗಳನ್ನು ನಾವು ಗಮನಿಸಲೇಬೇಕು. ಅವರ ಪ್ರಕಾರ ಅದೊಂದು ವಿಭ್ರಮೆ (Hallucination) ಇಲ್ಲದ್ದನ್ನು ಇದ್ದಂತೆ ಕಾಣುವ ಮನಸ್ಥಿತಿ ಡಾ. ಚಂದ್ರಶೇಖರ ಅವರು ಹೀಗೆ ಬರೆಯುತ್ತಾರೆ. “ಭಯಭೀತ ಮನಸ್ಸು ಪರಿಸರದಲ್ಲಿರುವ, ನಡೆಯುವ ಸಂಗತಿಗಳನ್ನು ದೆವ್ವ, ಭೂತ ಎಂದು ತಪ್ಪಾಗಿ ಅರ್ಥೈಸುತ್ತದೆ. ಸಹಿಸಲಾಗದ ಕಷ್ಟ ಸಮಸ್ಯೆಗಳು ಎದುರಾಗಿ ಅಸಹಾಯಕತೆ ಆವರಿಸಿದಾಗ ವ್ಯಕ್ತಿಯ ಮನಸ್ಸು ಈ ನಂಬಿಕೆಗಳನ್ನುಪಯೋಗಿಸಿಕೊಂಡು, ಇತರರ ಗಮನ ಸೆಳೆಯಲು ಅವರ ಸಹಾಯ ಸಹಾನುಭೂತಿಯನ್ನು ಪಡೆಯಲು ಯತ್ನಿಸುತ್ತದೆ. ವ್ಯಕ್ತಿಯು ಅದುವರೆಗೆ ಉಪಯೋಗಿಸದೇ ಇರುವ ಆತನ ಮೀಸಲು ಶಕ್ತಿ ಸಾಮರ್ಥ್ಯಗಳನ್ನು ಸುಪ್ತ ಮನಸ್ಸು ಉಪಯೋಗಿಸಿಕೊಂಡು ಈ ಅವಧಿಯಲ್ಲಿ ಕೆಲವು ಸಾರಿ ಅತಿಮಾನುಷ ಅಥವಾ ನಂಬಲಸಾಧ್ಯವೆನಿಸುವ ಕಾರ್ಯಗಳನ್ನು ಮಾಡಿ ತೋರಿಸುತ್ತದೆ. ಇದರಿಂದ ದೆವ್ವ ಅಥವಾ ಮಾಟ ಮಂತ್ರದಲ್ಲಿ ಜನರ ನಂಬಿಕೆ, ಮತ್ತಷ್ಟು ಹೆಚ್ಚುತ್ತದೆ” ನಿರ್ಭೀತವಾಗಿ ಆಲೋಚಿಸುವ ಪ್ರವೃತ್ತಿ ಇದಕ್ಕೆ ಇತಿಶ್ರೀ ಹಾಡಬಲ್ಲದು.*{* ಸೃಷ್ಟಿಯ ಅದ್ಭುತ ಮಿದುಳು, ಡಾ. ಸಿ. ಆರ್. ಚಂದ್ರಶೇಖರ ಪು. ೧೦೯, ೧೧೦}