ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಕನ್ನಡಿಗರ ಸಂಘಟನೆ ದೆಹಲಿ ಕರ್ನಾಟಕ ಸಂಘ 1948ರಲ್ಲಿ ಆರಂಭವಾಯಿತು.

ಹೊರನಾಡಿಗೆ ಬದುಕನ್ನು ಅರಸಿ ಬಂದ ಕನ್ನಡಿಗರು ಆರಂಭಿಸಿದ ದೆಹಲಿ ಕರ್ನಾಟಕ ಸಂಘ ಈಗ ನವದೆಹಲಿಯ ರಾಮಕೃಷ್ಣ ಪುರಂನ ಸೆಕ್ಟರ್ 12ರ ಮೋತಿಬಾಗ್ ಬಳಿ ಬೃಹತ್ ಸಮುಚ್ಛಯದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಕನ್ನಡಿಗರ ಮನೆಯಲ್ಲಿ ಆಗಾಗ ನಡೆಯುತ್ತಿದ್ದ ಸಂಘದ ಚಟುವಟಿಕೆಗಳು ಅಧಿಕೃತವಾಗಿ ದೆಹಲಿ ಕರ್ನಾಟಕ ಸಂಘವೆಂದು ನೊಂದಣೆಗೊಂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತ ಬಂದಿದೆ. ಕೇಂದ್ರ ಸಚಿವರಾಗಿದ್ದ ಕೆ.ಸಿ. ರೆಡ್ಡಿ ಅವರು 1953 ರಲ್ಲಿ ಲೋಧಿ ಎಸ್ಟೇಟ್‌ನಲ್ಲಿ ಸಂಘಕ್ಕಾಗಿ ನಿವೇಶನವನ್ನು ಒದಗಿಸಿಕೊಡಲು ಸಹಾಯ ಮಾಡಿದರು. ಅಲ್ಲಿ ಸಂಘದ ಜೊತೆಗೆ ಕನ್ನಡ ಶಾಲೆಯೂ ಕಾರ್ಯಾರಂಭ ಮಾಡಿತು.

ಕಾಲ ಕ್ರಮೇಣ ದೆಹಲಿ ಕರ್ನಾಟಕ ಸಂಘಕ್ಕಾಗಿ ಪ್ರತ್ಯೇಕ ನಿವೇಶನವನ್ನು ಸಂಸದರೂ, ಕೇಂದ್ರ ಸಚಿವರೂ ಆಗಿದ್ದ ಡಾ. ಸರೋಜಿನಿ ಮಹಿಷಿ ಅವರು ಒದಗಿಸಿ ಕೊಡುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದರು.

ಬಹುಬಾಷಾ ಜನರು ವಾಸಿಸುವ, ಬಹು ಸಂಸ್ಕೃತಿ ಇರುವ ನವದೆಹಲಿಯಲ್ಲಿ ವಾಸಿಸುತ್ತಿರುವ ಕನ್ನಡ ಭಾಷಿಕರು ವಿವಿಧೋದ್ದೇಶದ ಬೃಹತ್ ಸಮುಚ್ಛಯವನ್ನು ನಿರ್ಮಿಸುವ ಕನಸು ನನಸಾಗಿದ್ದು 2005ರ ಏಪ್ರಿಲ್ 16ರಂದು.

ಐ. ರಾಮಮೋಹನರಾವ್, ಕೆ.ಆರ್. ನಾಗರಾಜ್, ಪುರುಷೋತ್ತಮ ಬಿಳಿಮಲೆ, ಎಸ್.ಜಿ. ಹೆಗಡೆ, ಸರವು ಕೃಷ್ಣಭಟ್ ಅವರ ಮುಂದಾಳತ್ವದಲ್ಲಿ ನೂತನ ಸಾಂಸ್ಕೃತಿಕ ಸಮುಚ್ಛಯ ನಿರ್ಮಾಣಗೊಂಡಿದ್ದು ಇದೀಗ ಅದು ಕನ್ನಡಿಗರ ಸಂಸ್ಕೃತಿ ತಾಣವಾಗಿ ಕಾರ್ಯನಿರ್ವಹಿಸುತ್ತಿದೆ.

ಸಾಂಸ್ಕೃತಿಕ ವಾತಾವರಣ ಹಾಗೂ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ದೆಹಲಿ ಕರ್ನಾಟಕ ಸಂಘದ ಕೊಡುಗೆ ಅಪಾರ. ರಂಗ ಚಟುವಟಿಕೆಗಳು, ಸಂಗೀತ ನೃತ್ಯ ಕಾರ್ಯಕ್ರಮಗಳು ಹಾಗೂ ಆರ್ಟ್ ಗ್ಯಾಲರಿಗಳಿಂದ ಗಮನ ಸೆಳೆದಿರುವ ಸಂಘ ತನ್ನ ‘ಅಭಿಮತ‘ ಮಾಸ ಪತ್ರಿಕೆಯ ಮೂಲಕ ಸಂಘದ ಚಟುವಟಿಕೆಗಳ ವರದಿಗಳ ಜೊತೆಗೆ ಸೃಜನಶೀಲ ಬರಹಗಳಿಗೆ ಪ್ರೋತ್ಸಾಹ ನೀಡುತ್ತಿದೆ.

ಇನ್ಫೋಸಿಸ್ ಫೌಂಡೇಶನ್ ಗ್ರಂಥಾಲಯವನ್ನು ಹೊಂದಿರುವ ಸಂಘವು ಅತ್ಯಮೂಲ್ಯ ಗ್ರಂಥಗಳನ್ನು ಹೊಂದಿದ್ದು ಆಧುನಿಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಕರ್ನಾಟಕದಿಂದ ದೆಹಲಿಗೆ ಬಂದು ನೆಲೆಸಿರುವ ಕನ್ನಡಿಗರು ಒಂದೆಡೆ ಸೇರಿ ವಿಭಿನ್ನ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುವಂತೆ ಸುಸಜ್ಜಿತ ಸಭಾಂಗಣವನ್ನು ಹೊಂದಿದ್ದು ದೆಹಲಿಗೆ ಭೇಟಿ ನೀಡುವ ಕನ್ನಡಿಗರಿಗೆ ವಸತಿ ಸೌಲಭ್ಯವನ್ನು ಒದಗಿಸುತ್ತಿದೆ.

ಮನರಂಜನೆ ಹಾಗೂ ಮನೋವಿಕಾಸ ಚಟುವಟಿಕೆಗಳೊಂದಿಗೆ ಸಾಮಾಜಿಕ ಕಳಕಳಿಯ ಹತ್ತು ಹಲವು ಕಾರ್ಯಕ್ರಮಗಳು ನಡೆದಿರುವ ಇಲ್ಲಿ ಕರ್ನಾಟಕ ಪುಡ್ ಸೆಂಟರ್ ಸ್ಥಾಪನೆಗೆ ಸಂಘ ನೆರವಿತ್ತಿದೆ.

ಕರ್ನಾಟಕ ಹಾಗೂ ಕನ್ನಡದ ಸಮಗ್ರ ಅಭಿವೃದ್ಧಿಯ ಹಿತ ಚಿಂತಿಸುವ ಹೊಣೆ ಹೊತ್ತಿರುವ ದೆಹಲಿ ಕರ್ನಾಟಕ ಸಂಘವು ರಾಷ್ಟ್ರ ರಾಜಧಾನಿಯಲ್ಲಿ ಕನ್ನಡಿಗರ ಸಾಂಸ್ಕೃತಿಕ ಪ್ರತಿನಿಧಿಯಾಗಿದೆ.

ಅಮರೇಶ ಎಸ್.
ದೊಡಮನಿ