ದೇವೇಗೌಡ ಜವರೇಗೌಡರು ಹುಟ್ಟಿದ್ದು ಚನ್ನಪಟ್ಟಣ ತಾಲ್ಲೂಕು ಮುಡಿಗೆರೆಯಲ್ಲಿ. ಇವರು ಕುವೆಂಪುರವರ ಮಾರ್ಗ ದರ್ಶನದಿಂದ ಅವರ ಶಿಷ್ಯರಾಗಿ ತಮ್ಮ ವಿದ್ಯಾಭ್ಯಾಸವನ್ನು ಮಾಡಿ ಕನ್ನಡದ ಹೆಸರಾಂತ ಗದ್ಯಲೇಖಕರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ದೇಜಗೌ ಎಂಬ ಸಂಕ್ಷಿಪ್ತ ನಾಮದಿಂದಲೇ ಪ್ರಸಿದ್ದರಾಗಿದ್ದಾರೆ. ಇವರದು ಕನ್ನಡಕ್ಕೆ ಸೂಕ್ತ ಸ್ಥಾನ ಮಾನವನ್ನು ದೊರಕಿಸಿಕೊಡುವ ಪ್ರಯತ್ನದಲ್ಲಿ ಇವರ ಪಾತ್ರ ಹಿರಿದು. ಕನ್ನಡ ಆಡಳಿತಭಾಷೆಯಾಗಬೇಕು, ಕನ್ನಡ ಮಾಧ್ಯಮವಾಗಬೇಕು, ಕನ್ನಡ ಸಂಸ್ಕೃತಿ ಇತಿಹಾಸ, ಕಾವ್ಯ ಪರಂಪರೆಯಿಂದ ಕನ್ನಡಿಗರು ಚೈತನ್ಯ ತುಂಬಿಕೊಂಡು ರಾಷ್ಟ್ರದಲ್ಲಿ ತಲೆಯೆತ್ತಿ ಮೆರೆಯಬೇಕು, ಕನ್ನಡಕ್ಕೆ ವಿಶ್ವಮಾನ್ಯತೆ ದೊರೆಯಬೇಕು ಎಂಬ ಹಂಬಲವನ್ನು ತುಂಬಿಕೊಂಡು ಅವಿರತವಾಗಿ ಶ್ರಮಿಸಿದ ಕೀರ್ತಿ ಇವರದು.

ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ಕೃತಿರಚನೆ ಮಾಡಿರುವ ಇವರು ೫೦ ಕ್ಕೊ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಹೋರಾಟದ ಬದುಕು ಇವರ ಪ್ರಾಮಾಣಿಕ ಚಿತ್ತವನ್ನು ನೀಡುವ ಗಮನಾರ್ಹ ಕೃತಿ. ದೇಜಗೌ ಹಲವಾರು ಜೀವನ ಚರಿತ್ರೆಗಳನ್ನೂ, ವಿಮರ್ಶಾಗ್ರಂಥಗಳನ್ನೂ ಬರೆದಿದ್ದಾರೆ. ಆಲ್ಬರ್ಟ್ ಐನ್‌ಸ್ಟೈನ್, ತೀ.ನಂ.ಶ್ರೀ, ನಂಜುಂಡಕವಿ, ರಾಷ್ಟ್ರಕವಿ-ಕುವೆಂಪು, ಬೆಂಗಳೂರು ಕೆಂಪೇಗೌಡ, ಕಡುಗಲಿ ಕುಮಾರರಾಮ, ಮೊದಲಾದುವು ಇವರ ಕೃತಿಗಳು. ಇದಲ್ಲದೆ ದೇಜಗೌ ಕೆಲವು ಶ್ರೇಷ್ಟ ಕೃತಿಗಳನ್ನು ಭಾಷಾಂತರಿಸಿದ್ದಾರೆ.

ಇವುಗಳಲ್ಲಿ ಕೃಷ್ಣಾಹತೀಸಿಂಗರ, ನೆನಪು ಕಹಿಯಲ್ಲ, ಟಾಲ್‌ಸ್ಟಾಯವರ ಪುನರುತ್ಥಾನ ವಾರ್ ಅಂಡ್ ಪೀಸ್, ಅನ್ನಾಕರೇನಿನಾ, ಜೇನ್ ಆಸ್ಟಿನ್ ಕೃತಿ ಹಮ್ಮು ಬಿಮ್ಮು, ಗಮನಾರ್ಹವಾದವು. ಕಬ್ಬಿಗರ ಕಾವ ಜೈಮಿನಿಭಾರತಸಂಗ್ರಹ, ಶ್ರೀರಾಮಯಣ ದರ್ಶನಂ ಉಪನ್ಯಾಸ ಮಾಲೆ ಹೊಸಗನ್ನಡ ಕಥಾಸಂಗ್ರಹ, ಮೊದಲಾದ ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಇವರು ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದಾಗ ಮಾಡಿರುವ ಕಾರ್ಯಗಳು ಮಹನೀಯವಾದವು. ಇವರ ಕುಲಪತಿಯ ಭಾಷಣಗಳು, ಕುಲಪತಿಯ ಪತ್ರಗಳು, ಮುಂತಾದ ಆರು ಸಂಪುಟಗಳ ಬರಹಗಳಲ್ಲಿ ಕಾಣಬಹುದು. ಮೈಸೂರು ವಿಶ್ವವಿದ್ಯಾನಿಲಯ ಮತ್ತು ಕನ್ನಡ ಅಧ್ಯಯನ ಸಂಸ್ಥೆಗಳ ಬೆಳವಣಿಗೆಗೆ ದೇಜಗೌ ಅವರ ಪಾತ್ರ ಹಿರಿದಾದುದು. ಕನ್ನಡ ವಿಶ್ವಕೋಶಗಳು, ಎಪಿಗ್ರಪಿಯಾ ಕರ್ನಾಟಕ ದಂಥ ಕೋಶಗಳ ರಚನೆ, ಹಲವು ಬಗೆಯ ವಿಚಾರ ಸಂಕೀರಣಗಳು, ಸಮ್ಮೇಳನಗಳು ಮತ್ತು ಪುಸ್ತಕಗಳ ಪ್ರಕಟಣೆ ಜಾನಪದವನ್ನು ೧೯೬೬ ರಲ್ಲಿ ಕನ್ನಡ ಎಂ.ಎ ತರಗತಿಗಳಲ್ಲಿ ವಿಶೇಷ ಅಧ್ಯಯನವನ್ನಾಗಿ ಅಳವಡಿಸಿದರು. ಸ್ವತಃ ಜಾನಪದ ಅಧ್ಯಯನ ವೆಂಬ ಬೃಹತ್ ಗ್ರಂಥವನ್ನು ರಚಿಸಿದರು. ಜಾನಪದ ವಸ್ತು ಸಂಗ್ರಹಾಲಯದ ಅಬಿವೃದ್ದಿಗೆ ಪ್ರೋತ್ಸಾಹಿತರಾಗಿ ಕರ್ನಾಟಕ ಜಾನಪದಕ್ಕೆ ಅಧ್ಯಯನದ ಅರ್ಹತೆಯನ್ನು ತಂದುಕೊಟ್ಟರು. ಇವರು ಸ್ಥಾಪಿಸಿರುವ ಕುವೆಂಪು ವಿದ್ಯಾವರ್ಧಕ ಟ್ರಸ್ಟ್, ಅವರ ಕನಸಿನ ಕುಡಿ. ದೇಜಗೌ ರವರ ಈ ಎಲ್ಲಾ ಸೇವೆಯನ್ನುಗಮನಿಸಿ ಕರ್ನಾಟಕ ವಿಶ್ವವಿದ್ಯಾಲಯ ೧೯೭೫ ರಲ್ಲಿ ಗೌರವ ಡಾಕ್ಟರೇಟ್ ಹಾಗೂ ಜಾನಪದ ಕ್ಷೇತ್ರದ ಸೇವೆ ಗಮನಿಸಿ ಅದೆ ವಿಶ್ವವಿದ್ಯಾಲಯದ ಮೂರನೇ ಜಾನಪದ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಆರಿಸಿತು.