ಕ್ರಿ.ಶ. ೧೭೮೩ರಲ್ಲಿ ಮದ್ರಾಸ್ ಪ್ರಾಂತದ ಪ್ರದೇಶ ವೀಕ್ಷಣಾಧಿಕಾರಿಯಾಗಿ ಬಂದ ಮೆಕೆಂಜಿ ಕೊನೆಗೆ ಭಾರತದ ‘ಸರ್ವೇಯರ್ ಜನರಲ್’ ಆದ. ದಕ್ಷಿಣ ಭಾರತದ ಸುಮಾರು ೪೦ ಸಾವಿರ ಮೈಲಿ ಪ್ರದೇಶ ತಿರುಗಿ ತನ್ನ ಸರ್ವೇ ಕೆಲಸದ ಜತೆ ಶಾಸನ, ಹಸ್ತಪ್ರತಿ, ಐತಿಹ್ಯ, ಸ್ಥಳಪುರಾಣ ಮುಂತಾದವನ್ನು ಸಂಗ್ರಹಿಸುತ್ತಿದ್ದ ಈತ ೧೮೦೪ರಲ್ಲಿ ಕನಕಗಿರಿಗೆ ಬಂದಾಗ ದೇವಚಂದ್ರನನ್ನು ಭೇಟ್ಟಿ ಮಾಡಿ ಅವನನ್ನು ಎರಡು ತಿಂಗಳು ತನ್ನ ಜತೆಗಿಟ್ಟುಕೊಂಡು (ಪ್ರತಿದಿನ ಒಂದು ಕಣ ನೀಡುತ್ತ) ಅವನಿಂದ ಪೂರ್ವದ ವಾರ್ತೆಗಳನ್ನು ಮತ್ತು ಜಾತಿ ಭೇದಗಳನ್ನು ತಿಳಿದುಕೊಳ್ಳುತ್ತಿದ್ದ. ಬಂಗಾಲಕ್ಕೆ ಕರೆದೊಯ್ಯಬೇಕೆಂದು ಯತ್ನಿಸಿದ. ಕರ್ನಾಟಕ ದೇಶದ ಸಮಾಚಾರ ಸಂಗ್ರಹಿಸಿ ತಂದರೆ ಭಾರಿ ಸಂಬಂಧ ಮಾಡಿಸಿಕೊಡುವುದಾಗಿ ಹೇಳಿ ಹೋದವ ತಿರುಗಿ ಬರಲಿಲ್ಲ. ಅಂತೂ ಲಕ್ಷ್ಮಣರಾಯರ ಮೂಲಕ ೨೫ ಕುಂಪಣಿ ರೂಪಾಯಿ ಕೊಡಿಸಿದ್ದ. (ವಿವರಗಳಿಗೆ ನೋಡಿ: ‘ಹೊಸಗನ್ನಡ ಅರುಣೋದಯ’ ಶ್ರೀನಿವಾಸ ಹಾವನೂರು)

ರಾಜಾವಳಿ ಕಥೆಯ ವಿರಚಿತ: ‘ರಾಜಾವಳಿ ಕಥಾಸಾರ’ ಸಂ: ಬಿ.ಎಸ್.ಸಣ್ಣಯ್ಯ ಮೈ.ವಿ.ವಿ ೧೯೮೮. ೧೧ನೇ ಅಧಿಕಾರ ಪು ೩೭೫) ತನಗೆ ಮೈಸೂರು ಕೃಷ್ಣರಾಜ ಒಡೆಯರ ರಾಜಾಶ್ರಯ ದೊರಕೀತೆಂದು ಮೂರು ವರ್ಷ ಪ್ರಯತ್ನಿಸಿ ವಿಫಲನಾದರೂ ಮಹಾಮಾತು ಶ್ರೀ ದೇವಿರಾಂಬೆಯ ಆಶ್ರಯ ಕುಂಪಣಿ ಸರಕಾರದ ಪರವಾದ ತನ್ನ ನಿಲುವನ್ನು ಎರಡು ಪದ್ಯಗಳಲ್ಲೂ ಸ್ಪಷ್ಟಪಡಿಸುತ್ತಾನೆ. ಅವು

 || ಅರಿಭೂಪಾಲ ಮಹಾಂಬುದಾಳಿ ಪವನಾಘಾತರ್ ಪ್ರತಿಪಕ್ಷತೀ
ಶ್ವರ ಭೂಭೃದ್ವಿಲಯಾಶನಿ ಪ್ರತಿನಿಧಿ ಪ್ರತ್ಯರ್ಥಿ ಭೂಪಾಲ ವಿ
ಸ್ಫುರಿತಾರಣ್ಯದವಾಗ್ನಿ ವೈರಿವನಿತಾ ವೈಧ್ಯಮ್ಯ ದೀಕ್ಷಾಗುರು
ಸ್ಥಿರ ಸಾಮ್ರಾಜ್ಯ ವಿರಾಜಮಾನ ಜಗದೀಶರ್ ಕುಂಪಣೀ ಭೂಮಿಪರ್

ಮಾಲಿನಿ  || ರಚಿತ ಚತುರುಪಾಯ ಪ್ರಾಪ್ತ ಸಪ್ತಾಂಗರಾಜ್ಯರ್
ನಿಚಿತ ಸುಗುಣ ಷಟ್ಕಸ್ತುತ್ಯ ರಾಜ ಪ್ರಪೂಜ್ಯರ್
ಪ್ರಚಲಿತರಿವು ದುರ್ನಷ್ಟ ಪ್ರಾಪ್ತ ಷಡ್ವೈರಿವರ್ಗರ್
ಸುಚರಿತರುಪಕಾರರ್ ಕುಂಪಿಣೀಭೂಮಿಪಾಲರ್(ಪು ೩೧೩)

ಊಳಿಗಮಾನ್ಯ ಪ್ರಭುತ್ವದ ಜನವಿರೋಧಿ ಮತ್ತು ಘಾತುಕ ರಾಜಕೀಯಾರ್ಥಿಕ ಸ್ಥಿತಿಯನ್ನು ಪ್ರಾಸಂಗಿಕವಾಗಿ ಅಲ್ಲಲ್ಲಿ ಪ್ರಸ್ತಾಪಿಸುವ ಲೇಖಕ ವಸಾಹತುಶಾಹಿ ಸುಲಿಗೆಗೆ ನಿಂತಿದ್ದ ಕಂಪನಿ ಸರಕಾರವನ್ನು ಶ್ಲಾಘಿಸುತ್ತಿರುವುದು ಆಶ್ಚರ್ಯಕರವಲ್ಲವೇ? ಫ್ಯೂಡಲ್ ವ್ಯವಸ್ಥೆಯನ್ನು ಅಷ್ಟಷ್ಟೇ ನಾಶಪಡಿಸುತ್ತ ಆಗಮಿಸುತ್ತಿದ್ದ ವಸಾಹತು ಬಂಡವಾಳಶಾಹಿಯ ವಾಸ್ತವ ಚಿತ್ರವನ್ನು ನೀಡುವ ಈತ ತನಗರಿವಿಲ್ಲದೆ ಅದರ ಇತ್ಯಾತ್ಮಕ ಧೋರಣೆಯನ್ನು ನಿರೂಪಿಸುತ್ತಾನೆ.

“ರಾಜ ಮನೆರಡು ತುಕ್ಕಡಿಯಾಗೆ ಬೆಂಗಳೂರು ತುಕ್ಕಡಿಯೊಳು ಕಮಿಸ ಕಚೇರಿಯ ನಿಲಿಸಿ ಮೈಸೂರೊಳೆ ಸುಪ್ರಿಂಟ್ಯ ಕಚೇರಿಯಂ ಮಾಡಿ ಅಲ್ಲಿಗೆ ಸರದಾರರನ್ನು ಗೊತ್ತು ಮಾಡಿ ಪ್ರಜೆಗಳಂ ಕರುಣವಿಡಿದು ರಕ್ಷಿಸಲು ಕೊಟ್ಟೆಂದು ನಿರ್ಮಿಸಿ ರಾಜ್ಯದೊಳು ಅನ್ಯಾಯಂ ನಡೆಯದಂತೆ, ಒಬ್ಬರನೊಬ್ಬರು ಕೊಲ್ಲದಂತೆ, ಬೈಯದಂತೆ, ಉಪವಾಸಮಿರಿಸದಂತೆ, ಪುಸಿಯ ನುಡಿಯದಂತೆ ಒಬ್ಬರ ವಸ್ತುವನೊಬ್ಬ ಕೊಳ್ಳದಂತೆ ಕಳವರ ಮಾಡದಂತೆ, ಸತ್ಯದಿಂದಿಪ್ಪುದೆಂದು ಇಸ್ತ್ಯಾರು ಶಾಸನಮಂ ಬರೆಯಿಸಿಕೊಟ್ಟು ಬೂಸಾ ಜಿನಸಿಗೆ ಸುಂಕಮಂ ಇರುಳು ತಪ್ಪು ಮೊದಲಾಗೆ ಅಪರಾಧ ಜಾತಿವರಿ ಮೊದಲಾದವಂ ಬಿಟ್ಟು ಸರ್ವೇಜನರು ಸುಖದಿಂ ಬಾಳ್ವುದೆಂದು ನಡೆಸಿದೊಡಂ, ಅಧಿಕಾರ ಮಾಡುವ ಕರ್ನಾಟಕ ಜನರ ದಯಕ್ಕೆ ಪಾತ್ರರಾಗುವೆನೆಂದು ಪೂರ್ಣಯ್ಯಂ ಮಾಡಿದ ಮುಗಂ ಜಾಸ್ತಿಯೆಲ್ಲಮಂ ಸೇರಿಸಿ ಕಾಳಯುಕ್ತಿಯ ಬೇರೀಜೆಂದು ಗ್ರಾಮ ಗುತ್ತಿಗೆಯಂ ಹೆಚ್ಚಿಸಿ ಕಂದಾಯಕ್ಕೆ ಸೇರಿಸಿ ಒಂದಕ್ಕೆ ಮೂರು ನಾಲ್ಕು ಕಂದಾಯಮಾಗೆ ಸರದಾರರಿಗೆ ಸಹಜವೆಂದು ಅರಿಕೆ ಮಾಡುತ್ತ ತಮ್ಮ ಕಾರ್ಯಕ್ಕಾಗಿ ಪ್ರಜೆಗಳಂ ಬಾಧಿಸಿ ನೋಯಿಸುವರಲ್ಲದೆ ಸರದಾರರ ದೋಷ ಸ್ವಲ್ಪ ಮಾತ್ರವೂ ಇಲ್ಲ”

ಪೂರ್ಣಯ್ಯನ ಆಡಳಿತವನ್ನು ಆಕ್ಷೇಪಿಸುತ್ತಿರುವ ಲೇಖಕ ಬ್ರಿಟೀಶ ಸರದಾರರ ತಪ್ಪು ಎಳ್ಳಷ್ಟೂ ಇಲ್ಲ ಎಂದು ಹೇಳುತ್ತಿರುವುದನ್ನು ಗಮನಿಸಬೇಕು. ಹೈದರ ಮತ್ತು ಟಿಪ್ಪುಗಳ ಆಡಳಿತವನ್ನು ಟೀಕಿಸುವ ದೇವಚಂದ್ರ ಬ್ರಿಟೀಶರ ಬೆಂಬಲಿಸುತ್ತಾನೆ. ಸಾಂಸ್ಕೃತಿಕವಾಗಿ ಯಾವ ಕಾರ್ಯವನ್ನೂ ಸಾಧಿಸಲು ಶಕ್ಯವಿಲ್ಲದೆ ನಿರಂತರ ಆತಂಕ ಆಭದ್ರತೆ, ಅನಿಶ್ಚಿತತೆ, ಮೋಸ, ವಂಚನೆಗಳಲ್ಲಿದ್ದ ಪ್ರಭುತ್ವಗಳ ಕಾಲ ಅದು. (ವಿವರಗಳಿಗೆ ‘ಕರ್ನಾಟಕ ಚರಿತ್ರೆ’ ಸಂ: ೫, ೬, ಕ.ವಿ.ವಿ ಹಂಪಿ. ನೋಡಬಹುದು)

ಊಳಿಗಮಾನ್ಯ ಪ್ರಭುಗಳು ಜನಸಾಮಾನ್ಯರನ್ನು ತುಂಬ ನಿರ್ದಯವಾಗಿ, ಅಮಾನವೀಯವಾಗಿ ನಡೆಸಿಕೊಳ್ಳುತ್ತ ಅವರ ಮೇಲೆ ಹೇರುತ್ತಿದ್ದ ವಿಪರೀತ ಕರ ಕಂದಾಯದ ಹೊರೆಯ ನಗ್ನ ಚಿತ್ರವನ್ನು ಮತ್ತೊಂದೆಡೆ ಹೀಗೆ ಪ್ರಸ್ತಾಪಿಸುತ್ತಾನೆ ದೇವಚಂದ್ರ

“ಚಿಕ್ಕದೇವರಾಯ ನಿಂದಿತ್ತಲು ಪ್ರಜೆಗಳ್ಗೆ ತೆರಿಗೆ ಹೆಚ್ಚಿದವು. ಅವಾವೆಂದೊಡೆ ಎರೆ ಹೊಲದ ಕಂದಾಯ ಕೆಬ್ಬೆ ಆಡು ಹೊರೆಕೊಟ್ಟಿಗೆ  ಹಿತ್ತಲು ತೋಟ ಬಂಜಲಭೂಮಿ ಚೌಳುಮಣ್ಣು ಹಟ್ಟಿ ಮೊದಲಾದವರ ಕಂದಾಯ, ದೀಪಾವಳಿ ಯುಗಾದಿ ಬೇಡಿಗೆ ವ್ಯವರಣೆ ನಾಣ್ಯತುಂಡು ನಾಣ್ಯವಟ್ಟಿ ಹುಲ್ಲಸರತಿ, ವರಹಸರತಿ, ವಿನಾಯಕನ ಕಾಣಿಕೆ, ಶಾನಾಯ ವಿಭೂತಿ ಕಾಣಿಕೆ ನಾಮಗಾಣಿಕೆ, ಅಂಗಡಿತೆರಿಗೆ, ಬಣಜ ಹತ್ತಿಪೊಮ್ಮು ಹೊಗೆಹಣ, ಹೊಗೆಪೊಮ್ಮು ಸಂಬಳ ಸರತಿ ಜಾತಕೋಟಿ ತರಗು ಚೌರಿಗೆ, ಉಪ್ಪಿನಕಾವಲಿ, ಉಬ್ಬೆ ತರಿಗೆ ಚಕ್ಕದೆರಿಗೆ ಹಡಪ, ಕುಮಟ, ಕುಲುಮೆ, ಮಗ್ಗ ಮಾದರಿಕ ಚರ್ಮತೆರಿಗೆ ಕಡ್ಡಾಯ ಕಾಣಿಕೆ, ಸುಣ್ಣದ ಗೂಡು, ಚಾವಡಿಕಾಣಿಕೆ, ಚಪ್ಪಗಾಣಿಕೆ, ಕೈವಾಡ ಅಟ್ಟವಣೆ ತೆರಿಗೆಗಳು ಮತ್ತಂ ವಿಂಗಡಮಣೆಯ ಸುಂಕ ಏರು ಬಾಗಿಲು ಪೊಮ್ಮ ಗಳುವಿನ ಗುತ್ತಿಗೆ ಅರಶಿನ ದುಂಡಗೆ ಮಸಗೋಲು, ಪಟ್ಟಡಿ ಮಾರ್ಗಸುಂಕ, ತುಂಬೊಳಿ ಕರಗಪಡಿ ಮದುವೆ ಕೂಡೊಳಿ ಜೀತಸುಂಕ, ಕಂಬಳದೆರಿಗೆ ಜಾತಿಮಣೆಯ ಶೇಂದಿಗುತ್ತಿಗೆ, ಸಾರಾಯಿ ಹೊಗೆಸೊಪ್ಪು, ಕೆಂಪಿನ ನೂಲು ಪಸಾರಿ ಗಿಡಕಾವಲು ಅಡಕೆಗುತ್ತಿಗೆ ಎಲೆಗುತ್ತಿಗೆ ಗಂಧದ ಮಣೆಯ ಮೊದಲಾದ ತೆರಿಗೆಗಳು ಕಂದಾಯ ತೆರಿಗೆ ಸಮಪೈರು ಹಣ ಇದರ ಮೇಲೆ ಗುತ್ತಿಗೆ ಕೈವಳಿ ಸಹಿತ ತೆಗೆವರಲ್ಲದೆ ಚರದಾಯ ಮೆಂದು ಬಾಯಿತಪ್ಪು, ಕೈತಪ್ಪು ಇರುಳತಪ್ಪು ತೊಂಡು ಮೊದಲಾಗಿ ಲೆಕ್ಕದೊಳು ಸಾಗುವಳಿ ಸಂತವಳಿ ಉಟ್ಟವಳಿ, ಕಟ್ಟುವಳಿ ಪತ್ತುವಳಿಯೆಂದಾದಿಯಾಗಿ ಅನೇಕ ತೆರಿಗೆಯಾಗಲು”

ಈ ಭಾರವನ್ನು ತಾಳಲಾಗದೆ ರೈತರು ದಂಗೆಯೆದ್ದ ವಿವರವನ್ನು ಮೂದೆ ನಿರೂಪಿಸುತ್ತಾನೆ, “ಬಡಗ ಸೀಮೆಯ ರೈತರು ತಾಲೋಕಿನ ಅಮಲದಾರರು ಮಾಳ್ಪಪದ್ರಕ್ಕಾರದೆ ಕೂಟಮೆದ್ದು ಮೂವರು ರೆಡ್ಡಿ ಒಕ್ಕಲಿಗರ ಮುಂದು ಮಾಡಿಕೊಂಡು ಕಂಬಳಿ ನಿಶಾನಿವೆರಸು ಸಾವಿರ ಜನದವರಿಗೆ ಕರಿಘಟ್ಟದ ಬಳಿಯೊಳು ನಿಂತು ಪೊಳೆಪರ‍್ಯಂತರವಾಟ ದೊರೆ ಪರ‍್ಯಂತರ ದೂರೆಂಬುದರಿಂದ ಸುಲತಾನಂಗೆ ತಮ್ಮಿರಮಂ ಪೇಳಲವರಂ ಮನ್ನಿಸಿ ಪ್ರಜಾಕ್ಷೋಭಮಂ ಮಾಡಿದುದಕ್ಕೆ ಸರ್ವಾಧಿಕಾರಿಗಳ್ ಮೊದಲಾದಧಿಕಾರಿಗಳ ಮೇಲೆ ಕೋಪಿಸಿ ಪ್ರಜೆಗಳ್ಗೆ ಸರಾಗಂ ಮಾಡಿ” ಕಳುಹಿಸುತ್ತಾನೆ. ಆದರೆ ಮೀರಸಾಬಿ ಎಂಬ ಸರ್ವಾಧಿಕಾರಿ ಮೂವರ ಮೇಲೆ ಇಲ್ಲಸಲ್ಲದ ಆರೋಪ ಕಲ್ಪಿಸಿ ಆ ಮೂವರಿಗೂ ಕಂಠಿಪಾಶವನ್ನಿಕಿಸಿ ಕೊಂದು ರಾಜ್ಯದ ಎಲ್ಲ ಗ್ರಾಮಗಳಿಗೆ ತೆರಿಗೆ ಹೆಚ್ಚಿಸುತ್ತಾನೆ. ಇದರಿಂದ ಬೇಸತ್ತ ಕೆಲ ರೈತರು ದೇಶಾಂತರ ಹೋದರೆ ಕೆಲವರು ಜಲಪಾತ ಮೊದಲಾದವರಿಂದ ಸತ್ತು ಹೋಗುತ್ತಾರೆ. (ಪು ೩೦೮)

ಫ್ಯೂಡಲ್ ಕಾಲದ ಜನರ ಜೀವನ ಎಷ್ಟೊಂದು ಭೀಕರವಾಗಿತ್ತು, ಅಭದ್ರವಾಗಿತ್ತು ಶೋಷಕ ದೊರೆ ಮತ್ತು ಅಧಿಕಾರಿಗಳ ನೀಚ ಕ್ರೌರ್ಯದಿಂದ ತುಂಬಿತ್ತೆಂಬುದನ್ನು ಕಣ್ಣಾರೆ ಕಂಡಿದ್ದ ದೇವಚಂದ್ರ, “ಸರ್ವೇಜನರು ಸುಖದಿಂದ” ಬಾಳುವಂತೆ ಆಡಳಿತ ನಡೆಸಬಲ್ಲರೆಂಬ ನಿರೀಕ್ಷೆಯಿಂದ ಕಂಪನಿ ಆಡಳಿತವನ್ನು ಸ್ವಾಗತಿಸುತ್ತಾನೆ.

“ಕುಂಪಣಿ ಸರದಾರರು ಲೋಕೋಪಕಾರ ಮಾಡಲು ತಮ್ಮ ಕಡೆಯ ಡಾಕತರರೆಂಬ ವೈದ್ಯ ಪರೀಕ್ಷಾಕುಶಲರನ್ನು ಸಂಬಳಗೊಟ್ಟು ಅಲ್ಲಲ್ಲಿ ಇರಿಸಿದರು” (ಪು.೩೧೦) ಗಿಡ, ಹಳ್ಳ, ಬೆಟ್ಟಗಟ್ಟಗಳ ಸಮಮಾಡಿ ರಸ್ತೆ ಮಾಡಿಸಿ ಬಂಗಲೀಗಳಂ ಮಾಡಿ ಗಮನಾಗಮನಕ್ಕೆ ಸರಾಗ ಮಾಡಿದರು. (ಪು.೩೧೧) ಗ್ರಾಮಾನುಗ್ರಾಮಗಳಿಗೆ ಮುಳ್ಳು ಬೇಲಿ, ಪೋಲಿಸ ಚಾವಡಿ ನೇಮಿಸಿದರು” (ಅದೇ)

ಬ್ರೀಟೀಶ ವಸಾಹತುಶಾಹಿಯ ನಿರ್ದಯ ಸುಲಿಗೆಯ ಕತೆ ಗೊತ್ತಿರುವ ನಮಗೆ ದೇವಚಂದ್ರನ ಸದಭಿಪ್ರಾಯವನ್ನು ಒಪ್ಪಲು ಸಾಧ್ಯವಿಲ್ಲ. ಆದರೆ ಬ್ರೀಟೀಶರೆದುರು ಹೋಲಿಸಿದರೆ ದೇಶೀರಾಜರ ಅಮಾಣವೀಯ ಸುಲಿಗೆ ಕ್ರೌರ್ಯ ಹೆಚ್ಚಿತ್ತೆಂಬ ಅಂಶವನ್ನು ಅಲ್ಲಗಳೆಯಲು ಸಾಧ್ಯವಾಗದು. ಇದರ ವಿವರಗಳನ್ನು ಕೃತಿಯ ಅನೇಕ ಕಡೆ ಓದಬಹುದು ನಿದರ್ಶನಕ್ಕೆ

೧. ಜಳಮಂಡಳನೆಂಬ ಅರಸ ತನ್ನ ರಾಜ್ಯದಲ್ಲಿ ಜಿನ ಮುನಿಗಳು ಅಸಾಧ್ಯರೆಂದು ತಿಳಿದು ಅವರು ಚರಿಗೆಗೆ ಬಂದಾಗ ಮೊದಲ ತುತ್ತು ಸುಂಕವೆಂದು ನೇಮಿಸುತ್ತಾನೆ. (ಪು.೭೪)

೨. ಪಾಟಲೀಪುತ್ರದಲ್ಲಿ ದುರ್ಭಿಕ್ಷವಾಗಲು ಹೂ, ಹಣ್ಣು, ಕಾಯಿ, ಬೀಜ ಏನೂ ಇಲ್ಲದೆ ಜನ ಕೂಳಿಲ್ಲದೆ ಸಾಯುತ್ತಾರೆ. ಆದರೆ ಶ್ರೀಮಂತ ಶ್ರಾವಕರು ಜೈನಯತಿಗಳಿಗೆ ಅನ್ನ ನೀಡುತ್ತಿರುತ್ತಾರೆ. ಒಂದು ದಿನ ಚರಿಗೆಗೆ ಹೋಗಿ ಬರುತ್ತಿದ್ದ ಮುನಿಯನ್ನು ಹಿಡಿದು ಬಣಗುಗಳು (ಜನ ಸಾಮಾನ್ಯರು) ಹೊಟ್ಟೆಸೀಳಿ ಅಲ್ಲಿರುವ ಅನ್ನವನ್ನು ತೋಡಿ ತಿನ್ನುತ್ತಾರೆ. (ಪು.೮೯)

ಸಾಹಿತ್ಯ ಚರಿತ್ರೆಯ ಆರಂಭದ ಹಂತದಿಂದಲೂ ನಮ್ಮಲ್ಲಿದ್ದ ಚಾರಿತ್ರಿಕ ದೃಷ್ಟಿಕೋನ ೧೯ನೇ ಶತಮಾನದಿಂದ (ರಾಮರಾಯನ ಬಖೈರು, ಕುಮಾರರರಾಮನ ಸಾಂಗತ್ಯ, ಕಂಠೀರವ ನರಸರಾಜ ವಿಜಯ, ಚಿಕ್ಕದೇವರಾಜ ವಂಶಾವಳಿ, ಕೆಳದಿ ನೃಪವಿಜಯ ಮುಂತಾದವು.) ಬದಲುತ್ತಿರುವ ಸಂಕ್ರಮಣ ಘಟ್ಟವನ್ನು ಸೂಚಿಸುತ್ತದೆ. ಇದಕ್ಕೆ ಕಾರಣ ಬ್ರಿಟೀಶ್ ವಸಾಹತುಶಾಹಿ ನೀತಿಯೇ.

ಪ್ರಭುನಿಷ್ಠೆಯ ಸ್ಥಾನದಲ್ಲಿ ಜನನಿಷ್ಠೆಯ ಮನೋಭಾವವಿದ್ದರೂ ದೇವಚಂದ್ರನಲ್ಲಿ ಪರಂಪರಾಗತ ಮತನಿಷ್ಠೆ ಗೈರು ಹಾಜರಾಗಲಿಲ್ಲ. ಜೈನೀಯ ಚಾರಿತ್ರಿಕ ಮತ್ತು ತತ್ವಶಾಸ್ತ್ರೀಯ ಮನಸ್ಸಿನ ಪೂರ್ವಗ್ರಹಗಳಿಂದ ಬಾಧಿತನಾದ ಆತ ಸಾಮಾಜಿಕ ವಸ್ತುಸ್ಥಿತಿಯನ್ನು ದೂರಕಾಲದ ಚರಿತ್ರೆಗೆ ಜೈನ ಮತ್ತು ಹಿಂದೂ ಪುರಾಣಗಳನ್ನು ಅವಲಂಬಿಸುವ ದೇವಚಂದ್ರ ಸಮಿಪಕಾಲದ ಚರಿತ್ರೆಯನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸುವಲ್ಲಿ ಮುಲಾಜಿಗೇನೂ ಬೀಳಲಾರ. ಸತ್ಯಗಳನ್ನು ಮರೆಮಾಚಿ ಬರಿ ಇತ್ಯಾತ್ಮಕಾಂಶಗಳನ್ನು ಅತಿಶಯವಾಗಿ ವರ್ಣಿಸುವ ಕವಿಗಳ ಕ್ರಮದ ಬದಲಿ ಆತ ಸಮಾಜಶಾಸ್ತ್ರೀಯ ಶಿಸ್ತಿಗೆ ಒಳಪಟ್ಟವನಂತೆ ವಿಷಯಗಳನ್ನು ಸಂಗ್ರಹಿಸುತ್ತಾನೆ.

ಇದ್ದುದನಿದ್ದಂತೊರೆದೆನು
ಸಿದ್ಧರ್ಮದ ಮಾರ್ಗವಿಡಿದ…
ಇಲ್ಲದ ಸಂಗತಿಯಂತಾ
ಬಲ್ಲಂದದಿ ಕವಿತೆಯಿಂದಮದ್ಭುತಮಾಗಿಯು
ಸೊಲ್ಲಿಸಿದುದಲ್ಲ ಸಜ್ಜನ
ರೆಲ್ಲರು ಲಾಲಿಪುದು ಮುದದಿ ರಾಜಾವಲಿಯಂ (ಪು. ೩೬೪)

ಎಂದು ಹೇಳಿಕೊಂಡಿದ್ದಾನೆ. ಆದರೆ ಆಗಲೆ ಹೇಳಿರುವಂತೆ ಜೈನೀಯ ದೃಷ್ಟಿ ಅವನ ಬರವಣಿಗೆಯ ಗಂಭೀರ ಮಿತಿ

ಜೈನಮಠಗಳಿಗೆ ಮತೀಯ ಪಟ್ಟಕಟ್ಟುವ ಸಂದರ್ಭದಲ್ಲಿ ಸಮಕಾಲೀನ ಜೈನ ಸಮಾಜ ಎದುರಿಸಿದ ಜಾತಿ ಸಮಸ್ಯೆ ಲೇಖಕನ ಕೃತಿ ರಚನೆಯ ಒತ್ತಡಗಳಲ್ಲಿ ಮುಖ್ಯವಾದ ಒಂದು ಸಂಗತಿಯಾಗಿತ್ತು. ೧೩ನೇ ಅಧಿಕಾರದಲ್ಲಿ ಈ ವಿಷಯವನ್ನು ದೀರ್ಘವಾಗಿ ಚರ್ಚಿಸಿದ್ದಾನೆ; ಚರ್ಚಿಸಿದವರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾನೆ.

ಸೋದೆಯ ಪಟ್ಟಾಚಾರ್ಯರಾದ ಅಕಳಂಕಸ್ವಾಮಿಗಳು ಸ್ವರ‍್ಗಸ್ಥರಾದಾಗ ಅವರ ಬಳಿ ಓದಿಕೊಂಡಿದ್ದ ಪಂಚಮ ಕುಲದ ಯತಿಯೊಬ್ಬ ತಾನು ದೀಕ್ಷೆ ಪಡೆದು ಪಟ್ಟಕ್ಕೇರಬೇಕೆಂದು ಆಪೇಕ್ಷಿಸಿದಾಗ ಜೈನ ಸಮಾಜ ವರ್ಣತ್ರಯರಲ್ಲಿ (ಜೈನ, ಬ್ರಾಹ್ಮಣ, ಜೈನ ಕ್ಷತ್ರಿಯ, ಜೈನ ವೈಶ್ಯ) ದೊಡ್ಡ ಚರ್ಚೆ ಸುರುವಾಗುತ್ತದೆ. (ಪು.೩೭೧)

ಕೊನೆಗೆ ಅವರು ಪಂಚಮರಿಗೆ ಪಟ್ಟವಾಗಬಾರದೆಂದು ನಿರ್ಣಯಿಸುತ್ತಾರೆ. ಆದರೆ ಬೇರೊಂದು ಸಂದರ್ಭದಲ್ಲಿ ಪಂಚಮರು ಪ್ರಬಲರಾಗಿರುವುದರಿಂದ ದೀಕ್ಷೆ ಕೊಡಬಹುದು ಎಂದು ಕೆಲವು ಜೈನರ ಅಭಿಪ್ರಾಯವಾಗಿ, ಅವರಿಗೆ ಅಣುವ್ರತ, ಕ್ಷುಲ್ಲಕ ದೀಕ್ಷೆಗಳನ್ನು ಮಾತ್ರ ಕೊಡಲು ನಿಶ್ಚಯಿಸುತ್ತಾರೆ. (ಪು.೩೭೪) “ಚತುರ್ಥ ಪಂಚಮಿ ಶೂದ್ರರು ಸಂಸ್ಕಾರಹೀನರಾದುದರಿಂದ ಚತುರ್ವಿಧ ದಾನ, ಅಧ್ಯಯನ ಶ್ರವಣಕ್ಕೆ ಮಾತ್ರ ಅರ್ಹರು ಯಾಚಕದಾರಿ ಅಧ್ಯಯನ ಮಾಡಿ ಬೇರೆಯವರಿಗೆ ಉಪದೇಶಿಸಿ ಆಶೀರ್ವಾದ ಕೊಡಲು ಯೋಗ್ಯರಲ್ಲ ಎಂದು ಶಾಸ್ತ್ರವಿದೆ” (ಪು.೩೭೫) ಎಂಬ ನಿಲುವಿಗೆ ಅಂಟಿಕೊಳ್ಳುತ್ತಾರೆ.

ನಮ್ಮ ಜಾತಿ ಸಮಾಜದ ಸೂಕ್ಷ್ಮಗಳನ್ನು ತಿಳಿಯಬಯಸುವವರು ಕುತೂಹಲ ಮತ್ತು ಆಸಕ್ತಿಯನ್ನು ಕೆರಳಿಸುವಂತೆ ಇರುವ ಈ ಕೃತಿಯನ್ನು ಓದಿದರೆ ೧೮ನೇ ಶತಮಾನದ ದಕ್ಷಿಣ ಕರ್ನಾಟಕದ ಒಂದು ಸ್ಥೂಲವಾದ ಕಲ್ಪನೆ ಬರುವಂತಾಗುತ್ತದೆ.

ಚಿಕದೇವರಾಜ ಜಾತಿಗಳಲ್ಲಿ ಯಾವ ಜಾತಿ ಉತ್ಕೃಷ್ಟವಾದುದು ಎಂದು ತಿಳಿಯಲು ಎಲ್ಲ ಜಾತಿಗಳಲ್ಲಿರುವ ಶ್ರೇಷ್ಠರನ್ನು ಆಹ್ವಾನಿಸುತ್ತಾನೆ. ಈ ಸಂದರ್ಭದಲ್ಲಿ ತಮ್ಮ ಜಾತಿಯೆ ಆದಿಮ ಮತ್ತು ಶ್ರೇಷ್ಠವೆಂದು ಪಂಚಾಳ, ಕುಂಬಾರ, ಕಿರಾತ, ಕುರುಬ, ದೇವಾಂಗ, ಒಕ್ಕಲಿಗ, ಗಾಣಿಗ, ಗೊಲ್ಲ, ಉಪ್ಪಲಿಗ, ಕೆಲಸಿ, ಅಗಸ, ಒಡ್ಡ ದೊಂಬ, ಪೊಲೆಯ, ಮಾದಿಗ ಕುಲದವರು ಪುರಾಣ ಅಪರೂಪದ್ದು, ಕೆಲಸಿ, ಅಗಸ, ಒಡ್ಡ ದೊಂಬ, ಪೊಲೆಯ, ಮಾದಿಗ ಕುಲದವರು ಪುರಾಣ ಅಪರೂಪದ್ದು. ವಸಾಹತಪೂರ್ವ ಕನ್ನಡದ ಯಾವ ಕೃತಿಯಲ್ಲೂ ಕಾಣದಿರುವ ಇಂಥ ವಿವರಗಳು ನಮ್ಮ ಸಮಾಜದ ಅಧ್ಯಯನಕ್ಕೆ ತುಂಬ ಉಪಯುಕ್ತ ಮಾಹಿತಿಗಳಾಗಿವೆ. (ಪು.೨೯೨-೨೯೯) ಪ್ರತಿ ಜಾತಿಯೂ ಸಮಾಜದಲ್ಲಿರುವ ತನ್ನ ವೃತ್ತಿಯ ಅಗತ್ಯತೆಯನ್ನು, ಅನಿವಾರ್ಯತೆಯನ್ನು ಆಧರಿಸಿ ಕಟ್ಟಿರುವ ಕತೆಗಳು ತರ್ಕಬದ್ಧವೆನ್ನುವಂತಿವೆ. ಇಲ್ಲಿರುವ ಈ ಜಾತಿ ಪುರಾಣಗಳು ಜಾತಿ ಸಂಸ್ಕೃತಿಯ ಪರಂಪರಾಗತ ಗ್ರಹಿಕೆಗಳು ನಿದರ್ಶನಗಳು. ಜಾತಿ-ಧರ್ಮ-ವರ್ಣ ವ್ಯವಸ್ಥೆಯ ಶ್ರೇಣೀಕೃತ ರಚನೆಯನ್ನು ಗಟ್ಟಿಯಾಗಿ ಪ್ರಶ್ನಿಸುವಂತಿರುವ ಇಂಥ ವಿವರಗಳಿಗೆ ಕಾರಣ ದೇವಚಂದ್ರನ ಜೈನೀಯ ತಾತ್ತ್ವಿಕ ಅರಿವೇ. ಒಂದು ಪ್ರಸಂಗದಲ್ಲಿ ಬ್ರಾಹ್ಮಣ, ಕ್ಷತ್ರೀಯ, ವೈಶ್ಯ, ಶೂದ್ರ ಈ ಕ್ರಮದಲ್ಲಲ್ಲ ಕ್ಷತ್ರಿಯ, ಬ್ರಾಹ್ಮಣ, ವೈಶ್ಯ, ಶೂದ್ರ ಈ ಕ್ರಮದಲ್ಲಿ ವರ್ಣವ್ಯವಸ್ಥೆಯಿದೆ ಎಂದು ಹೇಳಬೇಕೆನ್ನುತ್ತಾನೆ.

ಉಮೆಯ ಮೊಲೆಯಲ್ಲಿ ಕಡೆಗೆ ಹುಟ್ಟಿ, ಕುಲದಲ್ಲಿ ಶ್ರೇಷ್ಠನಾಗಿ ಶಿವನ ಬಲದ ಭುಜವಾಗಿ ತನ್ನ ವಂಶದಲ್ಲಿ ಋಷಿಗಳಿಂದ ಹೊಗಳಲ್ಪಟ್ಟವ ಹೊಲೆಯ ಅವನ ಮಗಳ ವಂಶದಲ್ಲಿ ಅನೇಕ ಋಷಿಗಳು ಹುಟ್ಟಿದರು. ಬಸವಣ್ಣನ ಸೃಷ್ಟಿಯಲ್ಲಿ ಹೊನ್ನ ಎಂಬಾತ ಅತಿ ಶ್ರೇಷ್ಠನಾದ್ದರಿಂದ ಬಣ್ಣದಲ್ಲಿ (ಪಣ) ಪೊಲೆಯನೇ ದೊಡ್ಡವನು, (ಪು. ೨೯೯) ಎನ್ನುವ, ಮಾದಿಗ ಭೂಮಿಗೆ ಏಳು ದಿನ ಹಿರಿಯನಾಗಿ ಹುಟ್ಟಿದ್ದರಿಂದ ಇವನು ಉಂಡ ಎಂಜಲವನ್ನೇ ಎಲ್ಲರಿಗೂ ಯೋಗ್ಯವಾಗುವಂತೆ ಮಾಡಿದ (ಪುಟ೨೯೯) ಎನ್ನುವ ವಿಷಯ ಒಂದೆಡೆಯಿದ್ದರೆ “ಅಂತರಾಂತರಂ ಭೇದಮಾಗೆ ಜೀವದನದ ಮಾಂಸಮಂ ಸೇವಿಸುವುದರಿಂದೆ ಪೊಲೆ ಮಾದಿಗರೆಂಬರ್. ನರಮಾಂಸ ಭಕ್ಷಣಂ ಗೆಯ್ಯೆ ರಾಕ್ಷಸರೆಂಬರ್” (ಪು.೬೧) ಎಂದು ಹೇಳುತ್ತಾನೆ. ‘ಬ್ರಾಹ್ಮಣರು ಗೋಮಾಂಸ ತಿಂದು ಸುರೆ ಕುಡಿದರೆ ಪೊಲೆಯರಾಗುವರು’ (ಪು.೬೧) ಎಂಬ ಮಾತೂ ಇದೆ.

ಎಲ್ಲ ಜಾತಿಗಳ ಮೂಲ ಜೈನಮತ ಎಂದು ಸಾಧಿಸುವ ದೇವಚಂದ್ರ ದುರ್ಭಿಕ್ಷದಂಥ ಕಾಲ ಸಂದರ್ಭಗಳು, ಅನೇಕ ಜಾತಿಗಳ ಹುಟ್ಟಿಗೆ ಕಾರಣವೆಂದು ಸೂಚಿಸುತ್ತಾನೆ. ಉದಾ: ವಿಜಯನಗರದಲ್ಲಿ ೫ ವರ್ಷ ದುರ್ಭಿಕ್ಷ ಬರುವುದನ್ನು ತಿಳಿದು ಮುನಿಚಂದ್ರದೇವ ೭೭೫ ಜೈನ ಬ್ರಾಹ್ಮಣರು ಕೆಲ ಶ್ರಾವಕರು ಕ್ಷತ್ರಿಯರು ೬೦ ಒಕ್ಕಲು ಸಹಿತ ಉತ್ತರಕ್ಕೆ ಹೋಗುತ್ತಾರೆ…ಕಡಿಮೆ ಬ್ರಾಹ್ಮಣರು ೭೦೦ ಒಕ್ಕಲು ಎಲ್ಲಿಯೂ ಹೋಗದೆ ಇಲ್ಲೇ ಉಳಿದು ಚಾರತ್ರ್ಯ ಕೆಟ್ಟು ಸಾಂಖ್ಯ, ಚಾರ್ವಾಕ, ಯೋಗ, ಮೀಮಾಂಸೆಗೆ ಮೊದಲಾದ ಒಂದೊಂದು ಮತದಲ್ಲಿ ೬೪ ಭೇದ ಹುಟ್ಟಿದವು. ಆರೆ, ರಜಪುತ್ರ, ಮರಾಟ, ನಾಯಕ, ಗೌಡರಾಜ, ತೆಲುಗ, ಸೆಕುಲಿಗ, ಭಂಟ, ಭಾರಜ ಮಲೆಯಾಳ, ಲಾಳ ಮೊದಲಾದ ಜಾತಿ ಹುಟ್ಟಿದವು. (ಪು.೧೬೧) ಇತ್ಯಾದಿ.

ದೇಶದ ಜೈನರ ಚರಿತ್ರೆಯೆಂದರೆ ಕರ್ನಾಟಕದ ಜೈನರೆದ್ದೆಂದು ಖ್ಯಾತಿಯಿದ್ದ ಸಮಾಜದಿಂದ ಬಂದ ದೇವಚಂದ್ರ ಅದರ ಕೊನೆಯ ಘಟ್ಟದ ಅವನತಿಗೆ ಸಾಕ್ಷಿ ಎಂಬಂತಿದ್ದಾನೆ. ಹಿಂದಿನೆಲ್ಲ ಜೈನ ಕೃತಿಗಿಂತ ಇದು ಭಿನ್ನವಾಗಲು ಇದೂ ಒಂದು ಕಾರಣ. ಕರ್ನಾಟಕದ ಜಾತಿ ಸಮಾಜದ ವಿಕೃತಿಗಳನ್ನು, ಕತೆಗಳ ಮೂಲಕ ವಿವರಿಸುತ್ತ ಸಮಾಜಶಾಸ್ತ್ರಜ್ಞರಿಗೆ ಸವಾಲು ಹಾಕುತ್ತಾನೆ. ಬಸವ, ಮಾಧ್ವ, ಶಂಕರರ ಮತಗಳ ಕತೆಗಳನ್ನು ಸಂಗ್ರಹಿಸಿ ಬಹುತೇಕ ಜೈನ ಸಮಾಜದಲ್ಲಿ ಇವುಗಳ ಬಗೆಗಿದ್ದ ಕಥಾನಕಗಳನ್ನು ಸಂಗ್ರಹಿಸುತ್ತಾನೆ. ಚಾರಿತ್ರಿಕ ಸಂಗತಿಗಳು ಪಲ್ಲಟಗೊಂಡು ಕಲಸುಮೇಲೋಗರವಾಗಿ ಕೃತಿ ಸಂಕೀರ್ಣಗೊಂಡಿದೆ.

೧೦ನೇ ಆಶ್ವಾಸದ ಖಾದಿರಲಿಂಗನ ಕಥೆಯಂತೂ ವಿಶೇಷ ಉಲ್ಲೇಖಾರ್ಹವಾಗಿದೆ. ಆರು ಮತದವರ ಗುರುತುಗಳನ್ನು ಖಾದಿರಲಿಂಗ ತನ್ನ ಕಾಲುಗಳಿಗೆ ಕಟ್ಟಿಕೊಂಡು, ಮತಗಳಲ್ಲೆಲ್ಲ ಇಸ್ಲಾಂ ಮತವೇ ಶ್ರೇಷ್ಠವೆಂದು ಸಾರುತ್ತ, ಪವಾಡಗಳನ್ನು ಮೆರೆಯುತ್ತ, ಮತಾಂತರಗೊಳಿಸುತ್ತ ಅಲೆಯುತ್ತಾನೆ. ಅವನು ಪ್ರಬಲವಾಗಿ ಎದುರಿಸುವುದು ವೀರೈಶವರನ್ನು. ಒಂದು ಸಂದರ್ಭದಲ್ಲಿ ‘ರಾಜ್ಯಗಳಲ್ಲಿ ಹಿಂದೂ ಎಂಬ ಚಿಪ್ಪಿನಲ್ಲಿ ಮುಸಲಮಾನನೆಂಬ ಮುತ್ತು ಪುಟ್ಟಿ ಅದರಿಂದ ತುರುಕರು ಶ್ರೇಷ್ಠರು’ (೨೪೨) ಎಂಬ ಮಾತು ಬರುತ್ತದೆ.

ಸ್ತ್ರೀಯರ ಬಗ್ಗೆ ದೇವಚಂದ್ರನ ನಿಲುವು ಸಂಪ್ರದಾಯವಾದಿ ವೈದಿಕರಿಗಿಂತ ನಿಕೃಷ್ಟವಾಗಿದೆ. ಹಾದರ ಮಾಡುವ ಅನೇಕ ದುಷ್ಟ ಬ್ರಾಹ್ಮಣ ಸ್ತ್ರೀಯರ ಕತೆ ಹೇಳಿ (೩೦೨, ೩೦೩ ಪುಟಗಳಲ್ಲೂ ಇಂಥ ಕತೆಗಳಿವೆ) “ಮೋಕ್ಷದ ದಾರಿಗೆ ಮುಳ್ಳುಗಳಂತಿರುವೆ” (೨೫೬) ಸ್ತ್ರೀಯರು ‘ಮುಕ್ತಿ ಮಾರ್ಗದ ಕಾಪಿನ ನಾಯ್ಗಳು’ ಎಂದು ಹೇಳುತ್ತಾನೆ.

ಪ್ರಾಸಂಗಿಕವಾಗಿ ಬಳಸುವ ಗಾದೆಗಳು, ನುಡಿಗಟ್ಟುಗಳು ಲೇಖಕನ ಕಾಲದ ಜನಜೀವನಕ್ಕೆ ಹಿಡಿದ ಕನ್ನಡಿಯಂತಿವೆ. ಬಲ್ಲಿದನು ಹೇಲು ತಿಂದರೆ ಔಷಧಿ ತಕ್ಕೆಂಡನೆನ್ನುತ್ತಾರೆ, ಬಡವ ತಿಂದರೆ ಹೊಟ್ಟೆಗಿಲ್ಲದೆ ತಿಂದನೆನ್ನುತ್ತಾರೆ (೨೭೦). “ಏನೋ ನಿನ್ನ ಗೌಡಂಗೆ ಕುಂಡೆ ಕಡಿಯುತ್ತಿದೆಯೋ? ಹೇಳಿ ಕಳುಹಿಸಿದರೆ ಬಾರದಿದ್ದಾನೆ” (೨೧೪)

ಜನಬಲ, ಧನಬಲ, ಅಧಿಕಾರಬಲ ಉಳ್ಳವರು ಹಿಡಿದ ಅನ್ಯಾಯವೇ ಕಾಳದೋಷದಿಂದ ನ್ಯಾಯವಾಗುವುದು, ಸತ್ಯವಾದಿಯ ಮಾತು ಬೋಡ ಔಡುಗಚ್ಚಿದಂತೆ ನಿಲ್ಲದು (೨೭೦)

‘ನಾರುವುದರ ಮೇಲೆ ನಾಯಿ ವಿಷ್ಟಿಸಿದಂತೆ’ (೩೦೮) ‘ಜಂಗಮರ ಕಾಟ, ಗೌಡಗಳ ಕೂಟ, ಬೇಲಿವಿಡದೋಟ  ಮುಂದೆ ಪ್ರಜೆಗಳ್ಗೆ ಗುದದ ಗೂಟ’ (೩೪೮)

ವೈಜ್ಞಾನಿಕವಾಗಿ ಅಸಂಬದ್ಧವೆನಿಸುವ ಲೋಕಗಳ ಹುಟ್ಟಿನ ಪೌರಾಣಿಕ ಚರಿತ್ರೆಯಿಂದ ಈ ಕೃತಿ ಪ್ರಾರಂಭವಾಗುತ್ತದೆ. ವರ್ಣಗಳಲ್ಲಿ ಬ್ರಾಹ್ಮಣರೇ ಶ್ರೇಷ್ಠರೆಂಬ ಗ್ರಹಿಕೆಯಿದ್ದರೂ ಅವರು ಲೇಖಕನ ಪ್ರಕಾರ ಜೈನ ಬ್ರಾಹ್ಮಣರೇ. ಶೂದ್ರರಲ್ಲಿ ಸತ್‌ಶೂದ್ರರು, ಅಸತ್ ಶೂದ್ರರೆಂದು ವಿಭಾಗಿಸುವುದು, ಅಂತ್ಯ ಬ್ರಹ್ಮನಾದ ಭರತನ ಮಗ ಮರೀಚಿ ಸ್ವಯಂ ಬುದ್ಧನಾಗಿ ಕಪಿಲ ಸಿದ್ಧಾಂತವನ್ನು ಹೇಳಿ ಸಮಾಜವನ್ನು ಕೆಡಿಸಿದನೆಂದು ವಿವರಿಸುವುದು (ಈ ವಿಷಯ ಗ್ರಂಥದ ಪು.೮, ೨೬೭, ೩೧೯, ೩೬೮, ೩೭೦, ೩೭೯ರಲ್ಲಿ ಪುನರುಕ್ತವಾಗಿದೆ) ಷಣ್ಮತಗಳ ತಾತ್ವ್ತಿಕ ಚರ್ಚೆ (ಪು.೭೯,೧೮೦), ವೀರಶೈವ ಬ್ರಾಹ್ಮಣ ಪುರಾಣಗಳ ಕತೆಗಳನ್ನು ವಿಡಂಬಿಸುವುದು, ರಾಜವಂಶಗಳ ದಾಖಲಾಗದ ವಿಶೇಷ ಮಾಹಿತಿಗಳನ್ನು ನಿರ್ಭೀತಿಯಿಂದ ನಿರೂಪಿಸುವುದು, ಜನಪದ ಕತೆಗಳನ್ನು ಸಂಗ್ರಹಿಸುವುದು, ಬಸವಣ್ಣ, ಖಾದಿರಲಿಂಗದ ಪ್ರಸಂಗಗಳು, ಮಾದೇಶ್ವರ ಮಾದಿಗರ ಹುಡುಗನೆಂಬ ವಿವರ (೨೦೩) ಪಣವ್ಯಾಜ್ಯದ ವಿವರಗಳು (೯ನೇ ಅಧಿಕಾರ) ಇಂಥ ಅನೇಕಾನೇಕ ಸ್ವಾರಸ್ಯಕರ ಪ್ರಸಂಗಗಳನ್ನು ಕತೆಗಳಾಗಿ ಹೇಳಿಕೊಂಡು ಹೋಗುವ ರಾಜಾವಳಿ ಕಥೆ ಬಹುಮುಖೀ ವ್ಯಾಸಂಗಕ್ಕೆ ತುಂಬ ಮಹತ್ವದ ಆಕರವಾಗುತ್ತದೆ.

ಬ್ರಾಹ್ಮಣ ಸ್ಮೃತಿಗಳು ವರ್ಣವ್ಯವಸ್ಥೆಯ ಕುರಿತು ಹೇಳುವುದಕ್ಕೂ ಜೈನರ ವರ್ಣಪದ್ಧತಿಯ ಪರಿಕಲ್ಪನೆಗೂ ಮುಖ್ಯ ವ್ಯತ್ಯಾಸಗಳಿವೆ. ವರ್ಣ ಸಂಕರದಿಂದ ಬೇರೊಂದು ಬಗೆಯ ಕೀಳುವರ್ಣಗಳು ಹುಟ್ಟುತ್ತವೆಂದು ವೈದಿಕ ಪರಂಪರೆ ಭಾವಿಸಿದರೆ (ವಿವರಕ್ಕೆ ‘ಮನುಸ್ಮೃತಿ’ ನೋಡಬಹುದು) ಜೈನ ದೇವಚಂದ್ರ ವರ್ಣತ್ರಯರು ತಮ್ಮಲ್ಲಿ ಕೊಳುಕೊಡೆ ಮಾಡಿದರೆ ‘ಸಜಾತಿ’ ಎಂಬುದು ಎಂದು ತಿಳಿಸಿ ಬ್ರಾಹ್ಮಣನಲ್ಲಿ ಕ್ಷತ್ರಿಯ ವೈಶ್ಯ ಕನ್ನೆಗೆ ಹುಟ್ಟಿದ ಮಕ್ಕಳು ಕ್ಷತ್ರಿಯ ವೈಶ್ಯರಾಗುತ್ತಾರೆ ಕ್ಷತ್ರಿಯನಲ್ಲಿ ಬ್ರಾಹ್ಮಣಿಯಿಂದ ಹುಟ್ಟಿದ ಮಗು ಕ್ಷತ್ರಿಯನಾಗುತ್ತಾನೆಂದು (೩೭೦) ಕಲ್ಪಿಸುತ್ತಾನೆ.

ಪ್ರಭುತ್ವದನ್ನು ನಾನಾ ನೆಲೆಗಳಲ್ಲಿ ವಿರೋಧಿಸುತ್ತಿದ್ದ ಜನ ಸಮುದಾಯಗಳ ಹೋರಾಟದ ಕೆಲವು ಪ್ರಸಂಗಗಳು ಈ ಕೃತಿಯ ಮಹತ್ವದ ಭಾಗಗಳು. ೧೦ನೇ ಅಧಿಕಾರದಲ್ಲಿ ವಿಜಯನಗರ ಅರಸರ ಪಟ್ಟಿಕೊಟ್ಟು ಕೊನೆಗೆ ಭರ್ತೃಹರಿ ಎಂಬ ಮೀಮಾಂಸಕ ಅರಸನ ಕತೆ ಪ್ರಾರಂಭಿಸುತ್ತಾನೆ. ಸಂಸ್ಕೃತದಲ್ಲಿ ಶತಕತ್ರಯಗಳನ್ನು ರಚಿಸಿದ ಈ ಭರ್ತೃಹರಿಯ ಕುರಿತ ಈ ಕತೆ ಎಷ್ಟು ಸತ್ಯವೊ ಗೊತ್ತಾಗದು. ಆದರೆ ಇದರ ಪ್ರತಿಭಟನೆಯ ವಿವರಗಳು ಅಸತ್ಯವೆನಿಸರಲಾರವು. ಭರ್ತೃಹರಿ ಅತ್ಯಂತ ಸಾತ್ವಿಕ ದೊರೆ. ಪ್ರಜೆಗಳಿಗೆ ಅತ್ಯಂತ ದಯಾಪರ. ಒಂದು ಸಲ ಪ್ರಜೆಗಳು ಸಿದ್ಧಾಯ ಕೊಡಲಿಲ್ಲ. ಅವರು, ‘ನಾವೆಲ್ಲರೂ ಭೂಮಿ ಉತ್ತು ಕಷ್ಟಪಟ್ಟು ನಿಮಗೇಕೆ ಹಣ ಕೊಡಬೇಕು’ ಎಂದು ತಕರಾರಿಸುತ್ತಾರೆ. ರಾಜರು ಭೂಮಿಪತಿಗಳಾದ್ದರಿಂದ ಭೂಮಿಗೇನಾದರೂ ಕಂದಾಯವನ್ನು ಕೊಟ್ಟಿಲ್ಲದೆ ಉಳಲಾಗದು ಎಂದು ಮಂತ್ರಿ, ಸಾಮಂತರು ಸಮಜಾಯಿಸುತ್ತಾರೆ. “ಕಂದಾಯ ಕೊಡುವುದಿಲ್ಲ, ಈಭೂಮಿಯೇ ಬೇಡ. ಅರಣ್ಯದಲ್ಲಿ ಬೆಳೆಸು ಮಾಡುವೆವು”

‘ಅರಣ್ಯ ಪರ್ವತ ನದಿಗಳೆಲ್ಲ ಸ್ವಾಮಿಗೆ ಸಲ್ಲುವವು ನೀವು ಎಲ್ಲಿ ಬೆಳೆಯ ಮಾಡಿದರೂ ಬಂದ ಧಾನ್ಯದೊಳು ಅದರಲ್ಲಿ ಒಂದು ಭಾಗ ಪ್ರಭುವಿಗೆ ಒಪ್ಪಿಸಿ ಬಾಳಿ’

‘ನಾವು ಮಾಡುವ ಭೂಮಿಯಲ್ಲಿ ಅದರಲ್ಲಿ ಒಂದು ಭಾಗ ಬೆಳಸು ಮಾಡಿ ಅರ್ಧ ಕೊಡುತ್ತೇವೆ. ಅದರಲ್ಲಿ ಮೇಲಿನ ಭಾಗ ಕೊಡಬೇಕೋ ಕೆಳಗಿನ ಭಾಗವನ್ನೊ?’

ಧಾನ್ಯ ಬೆಳೆಯುತ್ತಾರೆಂದು ಭಾವಿಸಿ ಮಂತ್ರಿ ಸಾಮಂತರು ‘ಧಾನ್ಯ ದೊರೆಗೆ, ಹುಲ್ಲು ನಿಮಗೆ, ಆದ್ದರಿಂದ ಮೇಲಿನ ಭಾಗ’ ಒಪ್ಪಿಸಿ ಎಂದು ಆಜ್ಞಾಪಿಸುತ್ತಾರೆ. ಆ ವರ್ಷ ಎಲ್ಲ ರೈತರು ಸುಂಠಿ, ಅರಿಶಿನ, ಗೆಣಸು ಮೂಲಂಗಿ, ಈರುಳ್ಳಿ, ಬೆಳ್ಳುಳ್ಳಿ ಬೆಳೆದು ಮೇಲಿನ ಸೊಪ್ಪನ್ನು ಅರಸನಿಗೆ ಒಪ್ಪಿಸುತ್ತಾರೆ. ‘ಕೆಳಗನ ಬೆಳೆ ಬೇಕು’ ಎಂದಾಗ ಧಾನ್ಯ ಬಿತ್ತಿ ಹುಲ್ಲು ಕೊಡುತ್ತಾರೆ. ಮತ್ತೆ ರೈತರನ್ನೆಲ್ಲ ಕರೆಸಿ ೩೦೦ ಮಾರಿಗೆ ೧ ಹೊನ್ನಿಗೆ ನಿಯಮ ಮಾಡುತ್ತಾರೆ. ಅರ್ಧ, ಕಾಲು ಬೆಳೆಯಾದರೆ ಅರೆಹೊನ್ನು, ಕಾಲು ಹೊನ್ನು ಕೊಡಲಿ ಎಂದು ಅರಸನ ಆಜ್ಞೆಯಾಗುತ್ತದೆ. (೧೮೫)

ಒಂದು ಸಲ ಅರಸ ಗ್ರಾಮಗಳಿಗೆ ಪ್ರಯಾಣ ಬಂದಾಗ ಜನ ಎರಡೂ ಕಾಲು ನೀಡಿ ತೆಗೆಯದೆ ಹಾಸ್ಯ ಮಾಡುತ್ತಾರೆ. ಯಾಕೆಂದು ಕೇಳಿದರೆ ದೊರೆ ಎಂದು ನಮಗೆ ಹೇಗೆ ತಿಳಿಯಬೇಕು? ಇನ್ನು ಮುಂದೆ ‘ದೊರೆ ನಡುವಿಗೆ ಗಂಟೆ ಕಟ್ಟಿಕೊಂಡು ದನಿ ಮಾಡುತ್ತ ಬಂದರೆ ತಿಳಿದುಕೊಳ್ಳುತ್ತೇವೆ’ ಎನ್ನುತ್ತಾರೆ. ಅದರಂತೆ ದೊರೆ ೬ವರ್ಷ ಗಂಟೆ ಕಟ್ಟಿಕೊಂಡು ರಾಜ್ಯವಾಳುತ್ತಾನೆ. ಕೊನೆಗೆ ಸನ್ಯಾಸಿಯಾಗಿ ಮಗನಿಗೆ ರಾಜ್ಯ ಒಪ್ಪಿಸಿ ಶೃಂಗಾರ, ನೀತಿ, ವೈರಾಗ್ಯ ಶತಕಗಳನ್ನು ಬರೆಯುತ್ತಾನೆ. (೧೮೬)

ಇಂಥದೇ ಮತ್ತೊಂದು ಪ್ರಸಂಗ ಮೈಸೂರು ಅರಸರ ಆಳ್ವಿಕೆಯ ಕಾಲದಲ್ಲಿ ನಡೆಯುತ್ತದೆ. ಆ ರಾಜ್ಯದ ತೆಂಕಣ ನಾಡ ಪ್ರಜೆಗಳನ್ನು ಮಠದ ಒಡೆಯರು ಪ್ರೇರಿಸಿ ಸಿದ್ಧಾಯವನ್ನು ಕೊಡದಂತೆ ತಡೆಯುತ್ತಾರೆ. ರಾಜ ವಿಚಾರದ ರಾಘವಯ್ಯನೆಂಬುವನನ್ನು ಕಳಿಸಿದಾಗ ರೈತರು “ನಮ್ಮ ಒಡೆಯರು ನಮ್ಮ ಗುರುಗಳು ಅವರಿಗೆ ಕೊಡುವೆವಲ್ಲದೆ ನಿಮಗೇಕೆ?” ಎಂದು ಪ್ರತಿಭಟಿಸುತ್ತಾರೆ. ‘ಅರಸುಗಳು ಭೂಮಿಯೆಲ್ಲವನ್ನೂ ನಿಮಗೆ ಕೊಟ್ಟಿರುವುದರಿಂದ ಭೂಮಿಯಲ್ಲಿ ಪೈರುಮಾಡಿ ಅನುಭವಿಸುವುದರಿಂದ ಸಿದ್ಧಾಯವನ್ನು ಭೂಮೀಶ್ವರನಿಗೆ ಕೊಟ್ಟು ಬಾಳಬೇಕಾದುದು ಪ್ರಜೆಗೆ ನ್ಯಾಯ’ ಎನ್ನುತ್ತಾನೆ ರಾಘವಯ್ಯ. ಕೆಲವು ವಿವೇಕ ಶೂನ್ಯರು “ಭೂಮಿಯನ್ನು ನಮಗೆ ಕೊಟ್ಟು ಆ ಭೂಮಿಯಲ್ಲಿ ಹಜಾರ ಮಾಡಿಸಿ ಕೂತುಕೊಂಡಿದ್ದಾನೆ. ಅದನ್ನು ಉತ್ತು ಬೆಳಸು ಮಾಡುವೆವು” ಎಂದು ಗಡಿಯ ಹಜಾರವನ್ನು ಉಳಲು ಮುಂದಾಗುತ್ತಾರೆ. ಈ ಸುದ್ದಿ ತಿಳಿದು ೨೦೦ ಕುದುರೆ ಕಳಿಸಿ ೧೦೦ ಪ್ರಜೆಗಳನ್ನು ಹಿಡಿತರಿಸಿ, ಕಾವಲಲ್ಲಿಡುತ್ತಾರೆ. ಅಧಿಕಾರಿಗಳು ಅವರಿಗೆ “ಅಪರಾಧ ಕೊಡು” ಎಂದಾಗ ಅವರು ‘ಹಣ ಎಲ್ಲಿದೆ’? ಎನ್ನುತ್ತಾರೆ. ವರ್ಷ ಒಂದಕ್ಕೆ ಎಳ್ಳು ಬೆಳೆದವರು ಒಂದು ಕೊಳಗ, ಎಮ್ಮೆ ಕರೆದವರು ೧ ಕೊಳಗ ಬೆಣ್ಣೆ ಕೊಡಬೇಕೆಂದು ನಿಯಮಿಸುತ್ತಾರೆ.(೨೩೦)

ಮೈಸೂರು ಚಿಕ್ಕದೇವರಾಯನ ಕಾಲದಲ್ಲಿ ನಡೆದ ಜಂಗಮರ ಹಾವಳಿಯ ಕುರಿತು ೧೧ನೇ ಆಶ್ವಾಸದಲ್ಲಿ (ಪು.೨೮೪) ವಿವರಿಸಿದ್ದಾನೆ. ದೊರೆ ಬಲಾತ್ಕಾರದಿಂದ ಜನರನ್ನು ಮತಾಂತರ ಮಾಡಲು ಕೊಪ್ಪರಿಕೆಯಲ್ಲಿ ನಾಮ ತುಂಬಿಸಿ ಜನರ ಹಣೆಗಳಿಗೆ ಒತ್ತಾದಿಂದ ಇಡಿಸುತ್ತಿದ್ದ ಪ್ರಸಂಗ ಮುಸ್ಲಿಂ ದೊರೆಗಳ ಬಲವಂತ ಮತಾಂತರದ ಪ್ರತೀತಿಗಳನ್ನು ನಾಚಿಸುವಂತಿದೆ. (ಪು.೨೮೫)

ಮರಾಠಿಗಳ ದಂಡು ಬಂದು ರಾಜ್ಯದೊಳಿರ್ದ ಪ್ರಜೆಗಳೆಲ್ಲಾ ಹಿಂಸೆಯನೆಸಗಿ ಸರ‍್ವಸ್ವಮಂ ಸುಲಿದು ಸೂರೆಗೊಂಡು ಕೊಂದು ಕೂಗಿದಡೆ ನಿಂದಲ್ಲಿ ನಿಲ್ಲದೆ ಸರ‍್ವರು ಅನ್ನ ನೀರಂ ಕಾಣದೆ ಸತ್ತು ಕೆಟ್ಟು ಪೋದರ್ ಈ ಸ್ಥಿತಿ ಪ್ರತಿ ವರ್ಷ ತಪ್ಪಲಿಲ್ಲ. ಜನ ಸಾಮಾನ್ಯರ ಸಂಕಷ್ಟಗಳ ಕುರಿತು ಯಾವ ಚರಿತ್ರಕಾರರೂ ಬರೆಯದೆಯಿದ್ದ ಸಂದರ್ಭದಲ್ಲಿ ದೇವಚಂದ್ರ ಇಂಥ ಹಲವಾರು ವಿವರಗಳನ್ನು ನೀಡಿ ಸಂಕಷ್ಟಗಳ ಬಗ್ಗೆ ಮರುಗಿದ್ದಾನೆ.

ಹೈದರ ಮತ್ತು ಟಿಪ್ಪು ದಕ್ಷ, ಸಮರ್ಥ ಆಡಳಿತಗಾರರೆಂದು ಈಚಿನ ಚರಿತ್ರಕಾರರು ಹೇಳುತ್ತಿದ್ದರೆ (ನೋಡಿ: ಹಂಪಿ ಕ.ವಿ.ವಿ. ಪ್ರಕಟಣೆ: ‘ಕರ್ನಾಟಕ ಚರಿತ್ರೆ’ ಸಂ,೫,೬) ದೇವಚಂದ್ರ ಅವರಿಬ್ಬರ ಬಗ್ಗೆ ಸದಭಿಪ್ರಾಯ ಹೊಂದಿಲ್ಲ. ಹೈದರಖಾನ ಜನಗಳಿಗೆ ಮಾಡಬಾರದ ಹಿಂಸೆ ಮಾಡುತ್ತಿದ್ದ ಬಗ್ಗೆ ಹತ್ತಾರು ವಿವರಗಳನ್ನು ದಾಖಲಿಸಿದ್ದಾನೆ. (ಪು.೩೦೫-೩೦೬) ಬಾಯಿ, ಗುದ, ಯೋನಿಗಳಿಗೆ ಹಾರೆ ಹಾಕುವುದು ಇತ್ಯಾದಿ. ‘ಆಗ ಪ್ರಜೆಗಳನ್ನು ವಿಪರೀತಿ ಸುಲಿದರು. ಆ ಕಾಲದಲ್ಲಿ ಹಣಕ್ಕೊಂದುಕೊಳಗ ಧಾನ್ಯ ಮಾರಲು ಜನ ಹೊಟ್ಟೆಗಿಲ್ಲದೆ ಚೀಲದ ಕಾಯಿ, ಹುಣಿಸೀಬೀಜ, ಹತ್ತಿಬೀಜ, ಹುಳುವಿನಸೊಪ್ಪು ಮುಂತಾದ್ದು ತಿಂದು ಜೀವಿಸಿದರು’. (೩೦೬) ಟಿಪ್ಪು ಇಸ್ಲಾಮೀಕರಣಮಾಡುತ್ತಿದ್ದ ವಿವರ (೩೦೭) ಅವನ ಮಕ್ಕಳ ಒತ್ತೆಯಿಟ್ಟು ಬಿಡಿಸಿಕೊಂಡ ವರ್ಷ ಕ್ಷಾಮ ಬಂದು ಪ್ರಜೆಗಳೆಲ್ಲ ತಿರ‍್ರನೆ ತಿರುಗಿಗ್ರಾಸವಿಲ್ಲದೆ ಕೈಯೊಳ್‌ಕರಟಮಂ ಪಿಡಿದು ನೆಲದೊಳ್ ಬಿದ್ದು ಧಾನ್ಯ ತಿರುಗಿ ಗ್ರಾಸವಿಲ್ಲದೆ ಕೈಯೊಳ್ ಕರಟಮಂ ಪಿಡಿದು ನೆಲದೊಳ್ ಬಿದ್ದು ಧಾನ್ಯ ಮೊದಲಾದುವನ್ನು ಆಯ್ದುಕೊಳ್ಳುತ್ತೆ ಜೀವನವಿಲ್ಲದೆ ನಿಂತಲ್ಲಿ, ಬಿದ್ದಲ್ಲಿ ಸಾಯುತ್ತಿದ್ದರು. (೩೦೭)

ಕಾವ್ಯದ ಯಾವುದೇ ನಿರ್ದಿಷ್ಟ ಚೌಕಟ್ಟನ್ನು ಇಟ್ಟುಕೊಳ್ಳದೆ ಅನೇಕ ವಿಷಯಗಳನ್ನು ಮನಸ್ಸಿಗೆ ಬಂದಂತೆ ಸಂಗ್ರಹಿಸುವ ಕೆಲಸ ಮಾಡಿದ್ದಾನೆ. ಲೇಖಕ. ತತ್ತ್ವ ಶಾಸ್ತ್ರ, ವಿಚಾರಗಳನ್ನು ಪ್ರಚೋದಿಸದಂತೆ ಸಾಂಪ್ರದಾಯಿಕ ಶಿಸ್ತಾಗಿ ಹೋದರೆ ಅದು ಜಡವಾಗುತ್ತದೆ. ಕಾಲದೇಶ ಸ್ಥಿತಿಗೆ ಅಪ್ರಸ್ತುತವಾದರಂತೂ (ಆಂದರೆ ಆಚಾರ ವಿಚಾರದಲ್ಲಿ ಅಂತರ ಅಗಾಧವಾಗಿದ್ದರೆ) ಅದು ನಗೆಪಾಟಲಾಗುತ್ತದೆ. ದೇವಚಂದ್ರ ತನ್ನ ಮತದ ಮೌಢ್ಯಗಳನ್ನು ಸಮರ್ಥಿಸುತ್ತ, ಅನ್ಯಮತಗಳನ್ನು ಕಟುವಾಗಿ ಟೀಕಿಸುವುದು, ಅಪಹಾಸ್ಯ ಮಾಡುವುದು ವೈಚಾರಿಕವೆಂದಾಗಲಾರದು. ಇಂಥ ಕೆಲಸಗಳನ್ನು ಹರಿಹರಾದಿ ವೀರಶೈವ ಕವಿಗಳೂ ಮಾಡುತ್ತಾರೆ. ಮತೀಯ ಅಸಹನೆ, ಸ್ವಮತ ಪ್ರತಿಷ್ಠಾಪನೆಯ ಅತಿರೇಕಳಿದ್ದ ಫ್ಯೂಡಲ್ ಕಾಲದ ವಿಕೃತಿಗಳಿವು.

ವರ್ಣ-ಜಾತಿ-ವ್ಯವಸ್ಥೆಯ ಕುರಿತು ಜೈನರಿಗಿದ್ದ ಪರಿಕಲ್ಪನೆ ಅದರಲ್ಲೂ ದೇವಚಂದ್ರನ ಕಾಲಕ್ಕೆ ಅದು ಪಡೆದಿದ್ದ ಆಯಾಮಗಳನ್ನು ಗಮನಿಸಿದರೆ ವೈದಿಕಶಾಹಿಗಿಂತ ಹೆಚ್ಚು ಮಾನವೀಯವೆನಿಸುತ್ತದೆ. “ಮನುಷ್ಯ ಜಾತಿ ಒಂದೇ ಆದರೂ ವೃತ್ತಿ ಭೇದದಿಂದ ೧೮ ಜಾತಿಗಳಾದವು” (ಪು.೭) ಎಂಬ ಕಲ್ಪನೆ ಇದೆ. ೬ನೇ ಅಧಿಕಾರದಲ್ಲಿ ೭೯೦ ಜಾತಿಗಳು, ಅನೇಕ ಒಳಭೇದಗಳು ಹುಟ್ಟಿದವೆನ್ನುತ್ತಾನೆ. (ಪು.೭೬) ಇವನ ದೃಷ್ಟಿಯಲ್ಲಿ ಮುಸಲ್ಮಾನ ಮತವೂ ಜೈನ ಮೂಲದ್ದೇ! ಪಾರ್ಶ್ವಭಟಾರಕ ತನ್ನ ೫೦೦ ಶಿಷ್ಯರ ಜತೆಗೂಡಿ ಅಜ್ಞಾನ ಮಿಥ್ಯವನ್ನು ಸವೀಕರಿಸಿ ಮಸ್ಕರೀಪೂರಣವನ್ನು ಅನುಸರಿಸಿ ‘ಅಲ್ಲಾಕುದ’ನೆಂದು ಹೊಸ ಮತವನ್ನು ನಿರ್ಮಿಸಿದ. (ಪು.೭೭) ಅದಕ್ಕೆ ತಕ್ಕ ಸೂತ್ರಗಳನ್ನು ಕಲ್ಪಿಸಿ ವೇಷ, ಭಾಷೆ, ನಡೆ ಎಲ್ಲವೂ ಹೊಸದಾಗಿ ಮಾಡಿ ‘ಪಾರ್ಶಿಯೊಳರಿಪು ಮೊದಲಾಗೆ ವರ್ಣಾಂಶಗಳಂ’ ಮಾಡಿ ಮಕ್ಕಾದೇಶದ ಪೈಗಂಬರ ಮಹಮ್ಮದರೆಂದು ಬೌದ್ಧಾಚಾರವುಳ್ಳ ನಾಲ್ಕು ದೊರೆಗಳನ್ನು ವಶ ಮಾಡಿಕೊಂಡು (೭೭) ಮಂತ್ರ ಪೂರ್ವಕರ ಜೀವಮಂ ಕೊಂದು ತಿಂದರೂ ಪಾಪವಿಲ್ಲವೆಂದು (ವೇದಗಳಂತೆ) ಹೇಳಿದ. (೭೭)

ಪಾರ್ಶ್ವಭಟ್ಟನ ಶಿಷ್ಯ ಮಲ್ಲಿಭಟ್ಟ ಮುಲ್ಲಾಶಾಸ್ತ್ರ ಮಾಡಿದ. ಮುಸಲ್ಮಾನರು ನಾಲ್ಕಾಗಿ ೧೮ ಭೇದವಾದವು. (೭೮)

ಕಾಲವಾದ ಈಶ್ವರವಾದ, ಆತ್ಮವಾದ, ನಿಯತಿವಾದ, ಸ್ವಭಾವವಾದ ಎಂದು ಐದು ಬಗೆಯ ತತ್ತ್ವಜ್ಞಾನಗಳನ್ನು ಹೇಳುತ್ತಾನೆ. ಈ ವಾದಗಳ ವಿಚಾರಗಳನ್ನು ಹೇಳುವ ಸಂಸ್ಕೃತ, ಶ್ಲೋಕ, ಗದ್ಯ ಭಾಗಗಳನ್ನು ಉದ್ಧರಿಸುತ್ತಾನೆ. (ಪು.೧೪) ತಾತ್ತ್ವಿಕ ಚರ್ಚೆಯ ದೃಷ್ಟಿಯಿಂದ ಮುಖ್ಯವಾದ ಈ ಭಾಗದಲ್ಲಿ ಭೌತಿಕವಾದಕ್ಕೆ ಸಮೀಪ ಬರುವ ಹಲವು ವಿಚಾರಗಳೂ ಪ್ರಸ್ತಾಪವಾಗುತ್ತವೆ.

ಕೃತಿಯ ಹಲವಾರುಕಡೆ ಪ್ರಸ್ತಾಪವಾಗುವ ಷಣ್‌ಮತಗಳೆಂದರೆ ದೇವಚಂದ್ರನ ಪ್ರಕಾರ ೧. ನಯ್ಯಾಯಿಕೆ ೨. ಕಣಾದ ೩. ಮೀಮಾಂಸಕ ೪. ಸಾಂಖ್ಯ ೫. ಬೌದ್ಧ ೬. ಚಾರ್ವಾಕ (ಪೊಉ.೧೪, ೪೩) ಇವುಗಳ ವಿವರಗಳನ್ನೂ ಉದ್ಧರಿಸುತ್ತಾನೆ. ಈ ಪಟ್ಟಿಯಲ್ಲಿ ಜೈನರ ಹೆಸರಿಲ್ಲದಿದ್ದರೂ ಇವೆಲ್ಲ್ಕಿಂತ ಜೈನ ಮತವೇ ಸತ್ಯವೆಂದು ಸಾರುತ್ತಾನೆ. (೭೯) ನಾಸ್ತಿಕ, ಶೂನ್ಯವಾದ, ಲೋಕಾಯುತ, ಚಾರ್ವಾಕ ಇವೆಲ್ಲ ಒಂದೇ ಎಂದು ಹೇಳುತ್ತ ಇವು ದೇವ, ಜೀವ, ಪಾಪ, ಪರಲೋಕ, ಮೋಕ್ಷಗಳಿಲ್ಲ ಎಂದು ಪ್ರತಿಪಾದಿಸುತ್ತಾನೆ. (೧೫) ಜೀವಂಧರನ ಆಸ್ಥಾನದಲ್ಲಿ ಬೌದ್ಧಾದಿ ಆರು ಮತಗಳನ್ನು ಆಯಾ ಮತದ ನೇತಾರರು ವಿವರಿಸುವಾಗ ಮೊದಲು ಚರ್ಚೆ ಪ್ರಾರಂಭವಾಗುವುದೇ ಚಾರ್ವಾಕ ಮತದವನಿಂದ. ಅದಕ್ಕೆ ಶೂನ್ಯವಾದವೆಂದು ಹೇಳಲಾಗಿದೆ. (೪೩)

ರೇಣುಕೆ, ಗಣಪತಿ, ಕೃಷ್ಣ, ಮಲ್ಲಿಕಾರ್ಜುನ, ಮಾರಿಯಾರು ಮೊದಲಾದ  ಹಿಂದೂ ದೈವಗಳ, ದೀಪಾವಳಿ, ನಾಗಪೂಜೆ, ಲಿಂಗಪೂಜೆ ಮತ್ತಿತರ ಹಬ್ಬಗಳ ಹುಟ್ಟಿನ ಕುರಿತು ಹೇಳುವ ಕತೆಗಳೆಲ್ಲ ಅಸಂಬದ್ಧವಾಗಿವೆ, ಅವೈಜ್ಞಾನಿಕವಾಗಿವೆ. (೧೭, ೧೮) ಅವೆಲ್ಲವನ್ನೂ ಲೇಖಕ ಜೈನ ಮೂಲದವೆನ್ನುತ್ತಾನೆ. ಫ್ಯೂಡಲ್ ಕಾಲದ ಅಗ್ರಹಾರಗಳ ಬಗ್ಗೆ ಬಂದಿರುವ ಒಂದೆರಡು ಪ್ರಸಂಗಗಳು ಒಂದು ಈ ರೀತಿ ಇದೆ.

ಶ್ರೇಣಿಕ ನಂದಿಗ್ರಾಮದ ಬ್ರಾಹ್ಮಣರ ಹತ್ತಿರ ಬಂದು ‘ನಾವು ಅರಮನೆಯ ಮನುಷ್ಯರು, ರಾಜಕಾರ್ಯಕ್ಕೆ ಹೋಗುತ್ತಿದ್ದೇವೆ, ನಮಗೆ ಭೋಜನ ನೀಡಿ’ ಎಂದು ವಿನಂತಿಸುತ್ತಾನೆ. ಅದಕ್ಕೆ ಬ್ರಾಹ್ಮಣರೆಲ್ಲ ನಕ್ಕು, ‘ಇದು ಸರ್ವಮಾನ್ಯದಗ್ರಹಾರ ಎಂತಪ್ಪ ಬಲ್ಲಿದಂ ಬಂದೊಡಂ’ ನೀರು ಕುಡಿಯಲು ಕೊಡಲಾರೆವು.

ಅಗ್ರಹಾರ ಬ್ರಾಹ್ಮಣರ ದುರಹಂಕಾರ, ಅಮಾನವೀಯತೆ, ಸೊಕ್ಕು, ಸ್ವಪ್ರತಿಷ್ಠೆಗಳನ್ನು ಇಲ್ಲಿ ಗುರುತಿಸಬಹುದು. ಅಗ್ರಹಾರಗಳ ಅಬಾಧಿತ ಸ್ಥಿತಿ, ದೊರಗಳಿಂದ ಸಿಗುತ್ತಿದ್ದ ಬೆಂಬಲ ಅವರಿಗೆ ಈ ಬಗೆಯ ನಿರ್ಭಯತ್ವ ಉಂಟಾಗಲು ಕಾರಣ. ಕನ್ನಡ ಸಂಶೋಧಕರು ಇಂಥ ಸೂಕ್ಷ್ಮ ಸಂಗತಿಗಳ ಆಧಾರದಲ್ಲಿ ಅಗ್ರಹಾರಗಳ ನಿಜವಾದ ಶೋಷಣೆಯ ಕ್ರೌರ್ಯದ ಚಿತ್ರವನ್ನು ಕೊಡಬೇಕಾಗಿದೆ.(ಪು.೨೮, ೨೯) ಜಠರಾಗ್ನಿ ಎಂಬ ಬ್ರಾಹ್ಮಣನ ಮನೆಗೆ ಬಂದು ಶ್ರೇಣಿಕ ಅನ್ನ ಕೊಟ್ಟರೆ ರೊಕ್ಕ ಕೊಡುತ್ತೇನೆಂದು ಹೇಳಿದಾಗ ಅವನಿಗೆ ಅನ್ನ ನೀರು ಸಿಗುತ್ತವೆ. ಶ್ರೇಣಿಕ ಮುಂದೆ ಮಹಾರಾಜನಾದಾಗ ನಂದಿಗ್ರಾಮವನ್ನು ಕೆಡಿಸಲು ಯೋಚಿಸುತ್ತಾನೆ. (ಪು.೩೧) ಆದರೆ ಅವನ ಮಗನ ಜಾಣ್ಮೆಯಿಂದ ಗ್ರಾಮ ಉಳಿಯುತ್ತದೆ. ಅನ್ನ ಹಾಕಿದ್ದರಿಂದ ನಂದಿಗ್ರಾಮದ ಮಠಪತಿಯಾದ ಭಾಗವತ ಜಠರಾಗ್ನಿಯನ್ನು ದೊರೆ ರಾಜಗುರುವಾಗಿ ನೇಮಿಸಿಕೊಳ್ಳುತ್ತಾನೆ.(೩೨)

ಕೃತಿಯ ಅನೇಕ ಕಡೆ ಉಳಿದೆಲ್ಲ ಜಾತಿಯವರಿಗಿಂತ ಬ್ರಾಹ್ಮಣರನ್ನು ಕತೆಗಳಲ್ಲಿ ಹೆಚ್ಚು ವಿಡಂಬಿಸುತ್ತಾನೆ. (ಪು.೪೪, ೪೫, ೬೮, ೬೯ಇತ್ಯಾದಿ)

ಹಿಂದಲ ಕನ್ನಡ ಜೈನ ಕೃತಿಗಳಲ್ಲಿ ಬರಿ ಉತ್ತರ ಭಾರತದ ಜೈನ ಪುರಾಣ ಕತೆಗಳ ಓದು ತಲೆ ಚಿಟ್ಟೆನ್ನುವಂತಾಗಿರುವಾಗ ದೇವಚಂದ್ರ ದಕ್ಷಿಣ ಭಾರತದ ಜೈನ ಅರಸರ, ಋಷಿಗಳ ಕತೆಗಳನ್ನು ಹೇಳಿ ಕುತೂಹಲ ಕೆರಡಳಿಸುತ್ತಾನೆ. ಪೂಜ್ಯಪಾದ, ನಾಗಾರ್ಜುನ, ಧರಸೇನ, ಭೂತಬಲಿ, ಪುಷ್ಪದಂತ, ಕುಂದಕುಂದಾಚರ್ಯ, ಶ್ಯಾಮಕುಂದ, ತುಂಬಲೂರಾಚಾರ್ಯ, ಸಮಂತಭದ್ರ, ಪಂಪ, ಕಂತಿ, ಮುಂತಾದವರ ವಿವರಗಳು ಇಲ್ಲಿ ದಾಖಲಾಗಿವೆ.

ದೇವಚಂದ್ರನಲ್ಲಿ ಬರುವ ಬಸವಣ್ಣನ ಚರಿತ್ರೆ ಅಧ್ಯಯನದ ದೃಷ್ಟಿಯಿಂದ ಮಹತ್ವವಾಗಿದೆ. ಜೈನರಂಥ ವೀರಶೈವೇತರರ ದೃಷ್ಟಿಯಲ್ಲಿ ಶರಣ ಚಳುವಳಿಯ ಸ್ವರೂಪವನ್ನು ತಿಳಿಯುವುದು ಅದರ ಬೇರೊಂದು ಮುಖವನ್ನು ದರ್ಶಿಸಿದಂತೆ ಆಗುತ್ತದೆ. ಬಸವನ ಹಿರಿಯರು ಜೈನ ಬ್ರಾಹ್ಮಣರು ಬಸವ ಮಂತ್ರವಾದ ಕಲಿತು, ವಶ್ಯ, ಆಕರ್ಷಣಾದಿ ಆರು ವಿಯ ಕಲಿತಿದ್ದ. ಆರು ಮತಗಳನ್ನು ದೂಷಿಸಿ ಒಂದು ಮತ ಮಾಡಲು ಹದಿನೆಂಟು ಜಾತಿಗೂ, ಹೊಲೆಯ, ಮಾದಿಗರಿಗೂ, ನಾಯಿ ಕುನ್ನಿಗಳಿಗೂ ಲಿಂಗ ಧರಿಸಿದ. (೧೩೦) ೧೭೦೦ ಬಸದಿಗಳನ್ನು ಹಾಳು ಮಾಡಲಾಯಿತು ಇತ್ಯಾದಿ.

ಪಣವ್ಯಾಜ್ಯದ ಪ್ರಸಂಗ ದೇವಚಂದ್ರನ ಕೃತಿಯಲ್ಲಿ (ನವಮಾಧಿಕಾರ) ಕರ್ನಾಟಕದ ಆಖ್ಯಾಯಿತೆಯಂತೆ ವಿವರಿಸಲ್ಪಟ್ಟಿದೆ. ಇದರಲ್ಲಿ ಸುಳ್ಳೆಷ್ಟೊ, ಸತ್ಯವೆಷ್ಟೊ ಬೇರೆ ಆಕರಗಳನ್ನು ಆಧರಿಸಿ ನಿಶ್ಚಯಿಸಬೇಕಾಗುತ್ತದೆ. ಈ ಕತೆಯಲ್ಲಿ ಪಂಚಾಳ, ಶೆಟ್ಟಿ ಬಣಜಿಗ, ಬೆಸ್ತ, ಹೊಲೆಯ ಮಾದಿಗ ಕುಲಗಳು ಮಧ್ಯೆ ಪಣವ್ಯಾಜ್ಯ ಬೆಳೆಯುತ್ತ ಹೋಗುವ ವಿವರಗಳಿವೆ. ಅತಿ ಪ್ರಬಲರಾಗಿದ್ದ ಹೊಲೆಯರು, ಅರಸನಿಂದ ಬ್ರಾಹ್ಮಣರು ದಾನವಾಗಿ ಪಡೆದು ಒಯ್ಯುತ್ತಿದ್ದ ಬಂಗಾರದ ಗೋವು ತಮಗೆ ಸಲ್ಲತಕ್ಕದೆಂದು ಒಯದು ಹಂಚಿಕೊಂಡದ್ದು, ಅದರ ಕ್ರಯ ೧೨೦೦ ವಾದ್ದರಿಂದ ಹೊಲೆಯರು ಹನ್ನೆರಡು ಸಾವಿರದವರಾದರು ಪಂಚಾಳರ ವಿರುದ್ಧ ಬಣಜಿಗರು ಹೊಲೆಯರನ್ನು ಛೂ ಬಿಟ್ಟಿದ್ದು, ಕೊನೆಗೆ ಹೊಲೆಯರಿಗೂ, ಮಾದಿಗರಿಗೂ ಜಗಳ ಕೇಂದ್ರೀಕೃತವಾಗುವುದು ಮುಂತಾದ್ದು ಕರ್ನಾಟಕದ ಸಂದರ್ಭದ ದೊಡ್ಡ ಪಣವ್ಯಾಜ್ಯದ ಸತ್ಯ ಘಟನೆಯಾಗಿರುವಂತೆ ಇದೆ. (೧೫೯)

ಒಂದೆಡೆ ೬೩ ಪುರಾತನ ಶಿವಭಕ್ತರ ಕತೆಗಳನ್ನು ಸಂಕ್ಷಿಪ್ತವಾಗಿ ನಿರೂಪಿಸಿ (೨೮೮, ೨೮೯) ಕೊನೆಗೆ ‘ರಾಗ ದ್ವೇಷಮಯಮಪ್ಪ ಕತೆಗಳಂ ಕಲ್ಪಿಸಿ ಪೇಳುವರ್ಗಂ ಕೇಳುವರ್ಗಂ, ಭಾವಿಸುವರ್ಗಂ ಪಾಪಾಸ್ರ ವಮಲ್ಲದೆ ಪುಣ್ಯಾಶ್ರವಮಾಗದು’ (೨೯೧) ಎನ್ನುತ್ತಾನೆ. ಅವನ ಪ್ರಕಾರ ಶಿವಭಕ್ತರ ಕತೆ ಕೇಳುವುದೆಂದರೆ ವಿಷವನ್ನು ಉಂಡು ಬದುಕುವೆವು ಎಂಬಂತೆ. (೨೯೨)

* * *