ಕನ್ನಡ ಭಾಷೆ ಮತ್ತು ಸಾಹಿತ್ಯ ವಿಭಾಗದ ಮಹತ್ವಾಕಾಂಕ್ಷೆಯ ಮಾಲೆಯಾದ ‘ಪ್ರಾಚೀನ ಕೃತಿಗಳ ಸಾಂಸ್ಕೃತಿಕ ಮುಖಾಮುಖಿ’ ಸಂವಾದ ಕಾರ್ಯಕ್ರಮಕ್ಕೆ ಕಳೆದ ವರ್ಷ ದೇವಚಂದ್ರನ ‘ರಾಜಾವಳಿ ಕಥೆ’ಯನ್ನು ಆಯ್ಕೆ ಮಾಡಲಾಯಿತು. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ‘ರಾಜಾವಳಿ ಕಥೆ’ ಉಲ್ಲೇಖವಾಗಿದ್ದರೂ. ಅದರಲ್ಲಿ ‘ಸಾಹಿತ್ಯಕ ಗುಣ ಕಡಿಮೆ’ ಎನ್ನುವ ದೃಷ್ಟಿಕೋನದ ಹಿನ್ನೆಲೆಗಳನ್ನೂ ಕುರಿತು ಚರ್ಚೆಯಾಗಬೇಕೆಂದು ಈ ಸಂವಾದ ಕಾರ್ಯಕ್ರಮದ ಆಶಯಗಳಲ್ಲಿ ಒಂದಾಗಿತ್ತು. ೨೦ನೇ ಶತಮಾನ ಮುಗಿದಿರುವ ಹಾಗೂ ಜಾಗತೀಕರಣ ಪ್ರಕ್ರಿಯೆ ಹೆಚ್ಚಾಗಿರುವ ಈ ಹೊತ್ತಿನಲ್ಲಿ ನಮ್ಮ ಪ್ರಾಚೀನ ಕೃತಿಗಳನ್ನು ಹೊಸದೃಷ್ಟಿಯಿಂದ ನೋಡುವ ಅಗತ್ಯವಿದೆ ಎಂಬುದು ಈ ಯೋಜನೆಯ ನಂಬಿಕೆ. ಪ್ರಾಚೀನ ಕೃತಿಯನ್ನು ಅದು ರೂಪುಗೊಂಡ ಕಾಲದ ಸಾಂಸ್ಕೃತಿಕ ಪರಿಸರದ ಹಿನ್ನೆಲೆಯಲ್ಲಿ ಗಮನಿಸುವುದು ಒಂದು ಕ್ರಮವಾದರೆ, ಕೃತಿ ಸಮಕಾಲೀನ ಸಂದರ್ಭದಲ್ಲಿ ಎಷ್ಟು ಪ್ರಸ್ತುತ ಎಂದು ನೋಡುವುದು ಇನ್ನೊಂದು ಕ್ರಮ. ಈ ಸಂವಾದ ಕಾರ್ಯಕ್ರಮದಲ್ಲಿ ಮಂಡಿತವಾದ ಪ್ರಬಂಧಗಳಲ್ಲಿ ಈ ಎರಡೂ ಅಂಶಗಳು ಸೇರಿವೆ.

ದೇವಚಂದ್ರನ ‘ರಾಜಾವಳಿ ಕಥೆ’ ಕರ್ನಾಟಕ ಚರಿತ್ರೆಯ ಒಂದು ಸಂಘರ್ಷ ಗಳಿಗೆಯಲ್ಲಿ ಹುಟ್ಟಿದ ಸಂಕೀರ್ಣ ಪಠ್ಯ. ನಮ್ಮ ಪಾರಂಪರಿಕ ರಾಜಾಡಳಿತಗಳು ಕೊನೆಗೊಂಡು, ವಸಾಹತುಶಾಹಿ ಆಳ್ವಿಕೆ ಪ್ರಾರಂಭವಾಗುತ್ತಿದ್ದ ಮೊದಲ ಘಟ್ಟದಲ್ಲಿ ಈ ಕೃತಿ ರೂಪ ತಳೆದಿದೆ. ಕೃತಿಯ ಪ್ರಕಾರ – ಸ್ವರೂಪದಲ್ಲೇ ಈ ಸಂಕರೆದ್ದು ಕಾಣುತ್ತದೆ. ದೇವಚಂದ್ರ ಈ ಕೃತಿಯನ್ನು ಬರೆಯುವ ಪ್ರಾರಂಭದಲ್ಲಿ ಅದರ ರೂಪ ಕುರಿತು “ಶಬ್ದದೋಷಂತಿದ್ದಿ ಬುಧರ್ಗರಿವಂತ ಪೇಳ್ವದೆಂದವರಂ ನುತಿಸಿ ಹೊಸ ಗನ್ನಡ ವ್ಯಾಕಗಳಿಂ ರಚಿಸುವೆ (ಪುಟ:೩) ಎಂದು ಹೇಳಿ ಕೃತಿಯನ್ನು ಮುಗಿಸುವಾಗ

ಹಳಗನ್ನಡ ಬೆಳುಗನ್ನಡ
ಒಳುಗನ್ನಡವಚ್ಚಗನ್ನಡಂ ಪೊಸತೆಂಬುದಂ
ತೆಳುಗನ್ನಡ ಮಿಶ್ರದಿನಿದ
ನಿಳೆಯೊಳು ಸತ್ಪುರುಷರೋದಿ ಕೇಳ್ವುದು ಸತತಂ. (ಪು:೩೮೨)

ಎನ್ನುತ್ತಾನೆ. ಅಂದರೆ ಕೃತಿಯು ಒಳಗೊಳ್ಳುವ ವಸ್ತು, ವಿಷಯ ಪ್ರಪಂಚುಗಳು ಹಿಂದಿನ ಪಾರಂಪರಿಕ ಪ್ರಕಾರನಿಷ್ಠೆಯನ್ನು ದಾಟಿ ಬೆಳೆದಿವೆ. ಆರ್. ನರಸಿಂಹಚಾರ್‌ರವರು ತಮ್ಮ ಕವಿಚರಿತೆಯಲ್ಲಿ ಇದನ್ನು ಜೈನಸಾಹಿತ್ಯ ಚರಿತ್ರೆಯೆಂದು ಹೆಸರಿಸಿದ್ದರೂ, ಮುಂದಿನ ಸಾಹಿತ್ಯಾಧ್ಯಯನಕಾರರು ಈ ಕೃತಿಯನ್ನು ಗಂಭೀರವಾಗಿ ಪರಿಗಣಿಸದೇ ಇದ್ದುದ್ದಕ್ಕೆ ಕಾರಣ, ಆ ಕೃತಿ ತನ್ನ ಪೂರ್ವಪ್ರಕಾರ ನಿಷ್ಠೆಯನ್ನು ಮೀರಿದ್ದೆ ಆಗಿದೆ.

ಆದರೆ ಇಂದು ಸಾಹಿತ್ಯ ಅಧ್ಯಯನಗಳು ‘ಶುದ್ಧ ಸಾಹಿತ್ಯ’ ಎನ್ನುವಷ್ಟಕ್ಕೆ ಸೀಮಿತವಾಗಿಲ್ಲ. ಬಹುಶಿಸ್ತೀಯ ಅಧ್ಯಯನಗಳ ಹಿನ್ನೆಲೆಯಲ್ಲಿ ಸಾಹಿತ್ಯ ಕೃತಿಗಳನ್ನು ಗಮನಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ‘ರಾಜಾವಳಿ ಕಥೆ’ ಎರಡು ಶತಮಾನಗಳ ಹಿಂದೆಯೇ ನಡೆದ ಒಂದು ಪ್ರಯತ್ನವಾಗಿದೆ. ಈ ಕೃತಿಯ ವೈಶಿಷ್ಟ್ಯವೆಂದರೆ ಆಗ ಪ್ರಚಲಿತದಲ್ಲಿದ್ದ ಮೌಖಿಕ ಪರಂಪರೆಯ ಅನೇಕ ಐತಿಹ್ಯಗಳನ್ನು ಆಕರವಾಗಿ ಬಳಸಿಕೊಂಡು ರಚನೆಯಾಗಿರುವುದು. ಈಗ ಬಹು ಚರ್ಚಿತವಾಗಿರುವ ನೀಲಗಾರ ಪರಂಪರೆ, ದೇವರಗುಡ್ಡದ ಪರಂಪರೆಗಳನ್ನು ಮೊಟ್ಟ ಮೊದಲಿಗೆ ದಾಖಲಿಸುತ್ತದೆ. ಇದಲ್ಲದೆ ಮಧ್ಯಕಾಲೀನ ಅನೇಕ ಸಾಂಸ್ಕೃತಿಕ ಪಂತಗಳ ಬಗ್ಗೆ, ಧರ್ಮಗಳ ಬಗ್ಗೆ, ಕುಲ-ಜಾತಿಗಳ ಬಗ್ಗೆ ಕುತೂಹಲಕರ ದಾಖಲಾತಿ ಹಾಗೂ ವಿಶ್ಲೇಷಣೆ ಇಲ್ಲಿದೆ. ಮೈಸೂರು ಒಡೆಯರು ಹಾಗೂ ಬ್ರಿಟಿಷರು ಸ್ನೇಹ, ತಿಕ್ಕಾಟಗಳ ನಡುವೆ ಸಿಲುಕಿದ್ದ ಸಂಕ್ರಮಣ ಹೊತ್ತಿನಲ್ಲಿ ರಚನೆಯಾದ ಈ ಕೃತಿ, ದಕ್ಷಿಣ ಕರ್ನಾಟಕ ರಾಜಕಾರಣವನ್ನು ವಿಶ್ಲೇಷಣೆ ಮಾಡಲು ಮಹತ್ವದ ಸೂಚನೆ ಕೊಡುತ್ತದೆ. ಈ ಎಲ್ಲ ಪೂರ್ವಸೂಚನೆಗಳ ಹಿನ್ನೆಲೆಯಲ್ಲಿ ಕೃತಿಯನ್ನು ಸಂವಾದಕ್ಕೆ ಆಯ್ಕೆ ಮಾಡಲಾಯಿತು.

ಸಾಹಿತ್ಯಕ, ಚಾರಿತ್ರಿಕ, ಜಾನಪದ, ಧಾರ್ಮಿಕ ಈ ನಾಲ್ಕು ದೃಷ್ಟಿಕೋನಗಳ ಹಿನ್ನೆಲೆಯಲ್ಲಿ ಪ್ರಬಂಧಗಳನ್ನು ಮಂಡಿಸಿ ನಂತರ ಸಂವಾದಕರ ‘ರಾಜಾವಳಿ ಕಥೆ: ನನ್ನ ಓದು’ ಎನ್ನುವ ಟಿಪ್ಪಣಿಗಳ ಹಿನ್ನೆಲೆಯಲ್ಲಿ ಚರ್ಚಿಸುವಂತೆ ಕಾರ್ಯಕ್ರಮ ರೂಪಿಸಲಾಗಿತ್ತು. ಸಂವಾದ ಕಾರ್ಯಕ್ರಮದಲ್ಲಿ ಸ್ಥೂಲವಾಗಿ ಈ ಕೆಳಕಂಡ ವಿಷಯಗಳು ಚರ್ಚೆಯಾದವು.

೧. ರಾಷ್ಟ್ರೀಯ ಇತಿಹಾಸ ಕಲ್ಪನೆಗೆ ಒಗ್ಗಿಹೋಗಿರುವ ನಮಗೆ, ರಾಜಾವಳಿ ಕಥೆ ಪೂರ್ವಾಗ್ರಹ, ಸುಳ್ಳುಗಳ ಕಂತೆ ಎಂದೆನಿಸಿಬಿಡುವ ಅಪಾಯವಿದೆ. ಸುಳ್ಳು, ಪೂರ್ವಾಗ್ರಹಗಳ ಸಮಸ್ಯೆ ಕೇವಲ ರಾಜಾವಳಿ ಕಥೆಗಷ್ಟೆ ಅಲ್ಲ, ಅದು ರಾಷ್ಟ್ರೀಯ ಇತಿಹಾಸಕ್ಕೂ ಅನ್ವಯಿಸುತ್ತದೆ. ಆದ್ದರಿಂದ ‘ರಾಜಾವಳಿ ಕಥೆ’ ಕೊಡುತ್ತಿರುವ ದಾಖಲೆಗಳು ಚರಿತ್ರೆಯ ಪುನರ್‌ವ್ಯಾಖ್ಯಾನಕ್ಕೆ ಬೇಕಾಗುತ್ತದೆ.

೨. ಅಧೋಗತಿಯ ಅಂಚಿಗೆ ಸರಿಯುತ್ತಿರುವ ಸಮುದಾಯಗಳ ಕಷ್ಟಕಾರ್ಪಣ್ಯಗಳಿಗೆ ಕಾರಣ ರಾಜ ಮಹಾರಾಜರೋ, ಧಾರ್ಮಿಕ ಮತಾಚಾರ್ಯರೋ, ಅಥವಾ ಕಾಲದೋಷವೋ, ಎಂಬ ಪ್ರಶ್ನೆಯನ್ನು ದೇವಚಂದ್ರ ಎದುರಿಸಿದ್ದಾನೆ. ಧರ್ಮರಾಜಕಾರಣದ ಪರಿಹಾರೋಪಾಯ ಗಳಿಗೆ ಜನ ತಾಂತ್ರಿಕವಾದ ಅರಿವಿನ ಪಠ್ಯವಾಗಿ ‘ರಾಜಾವಳಿ ಕಥೆ’ಯನ್ನು ನೋಡುವ ಸಾಧ್ಯತೆಯನ್ನು ಕುರಿತು ಚರ್ಚಿಸಲಾಗಿದೆ.

೩. ‘ರಾಜಾವಳಿ ಕಥೆ’ ಸಾಹಿತ್ಯ ಅಧ್ಯಯನಕಾರರ, ಇತಿಹಾಸ ಅಧ್ಯಯನಕಾರರ ಅವಜ್ಞೆಗೆ ಗುರಿಯಾಗಿದೆ ಎಂದರೆ ಆ ಅಧ್ಯಯನ ಹಿಂದಿನ ತಾತ್ವಿಕತೆ ಏನಿತ್ತು ಎಂಬುದನ್ನು ಕುರಿತು ಚರ್ಚೆ.

೪. ಇಂದಿನ ಕೆಳಸಮುದಾಯಗಳ, ದಲಿತರ ಸಾಂಸ್ಕೃತಿಕ ಚರಿತ್ರೆಯನ್ನು ರೂಪಿಸುವಲ್ಲಿ ‘ರಾಜಾವಳಿ ಕಥೆ’ ಆಕರವಾಗಿ ಬಳಸುವ ಬಗ್ಗೆ.

೫. ದೇವಚಂದ್ರ ವೀರಶೈವ, ಶ್ರೀವೈಷ್ಣವ, ಶಂಕರಾಚಾರ್ಯರ ಅದ್ವೈತ ಸಿದ್ಧಾಂತಗಳನ್ನು ಮರುವ್ಯಾಖ್ಯಾನಕ್ಕೆ ಒಳಪಡಿಸಿದ್ದಾನೆ. ಜಿನಮತವೇ ‘ಆದಿಮತ’ ಎಂಬುದನ್ನು ಸಾಬೀತು ಪಡಿಸಲು ಈ ಮೇಲ್ಕಂಡ ಧರ್ಮಗಳ ಆಕ್ರಮಣಗಳನ್ನು ಮಾತ್ರ ಮುಖ್ಯವಾಹಿನಿಗೆ ತರುತ್ತಾನೆ. ಈ ಕುರಿತ ಸರಿ-ತಪ್ಪುಗಳ ಚರ್ಚೆ.

೬. ಜಾತಿ-ಕುಲ ವಾಜ್ಯಗಳನ್ನು ಕುರಿತಂತೆ ದೇವಚಂದ್ರನು ಕೊಡುವ ಆಕರಗಳನ್ನು ಸಮಾಜ ಶಾಸ್ತ್ರೀಯ ಅಧ್ಯಯನಗಳ ಆಕರಗಳಾಗಿ ಬಳಸುವ ಬಗ್ಗೆ.

೭. ನೀರೀಶ್ವರವಾದ, ಜೈನಧರ್ಮ – ವೈದಿಕಧರ್ಮದ ಆಕರ ಗ್ರಂಥಗಳ ತಾತ್ವಿಕತೆಯ ಹುಡುಕಾಟ ಇತ್ಯಾದಿ.

ಇವೆಲ್ಲ ಚರ್ಚೆಗಳ ಪರಿಣಾಮವಾಗಿ ಈ ಕೃತಿ ಮೈದಳೆದಿದೆ. ಇದುವರೆಗೆ ಕೆಲವು ಸಾಹಿತ್ಯ ಚರಿತ್ರಕಾರರು ‘ರಾಜಾವಳಿ ಕಥೆ’ಯನ್ನು ಉಲ್ಲೇಖ ಮಾಡುವಷ್ಟರಲ್ಲೇ ತೃಪ್ತರಾಗಿದ್ದರು. ಇದುವರೆಗೂ ದೇವಚಂದ್ರನ ಕುರಿತು ಒಂದು ಸುದೀರ್ಘ ಸಂಶೋಧನ ಪ್ರಬಂಧ ಮಂಡನೆಯಾಗಿಲ್ಲ. ಇಷ್ಟೆಲ್ಲಾ ಕೊರತೆಗಳಿದ್ದರೂ ಈ ಉಪೇಕ್ಷಿತ ಕೃತಿಗೆ ಇಷ್ಟು ದೊಡ್ಡ ಚರ್ಚೆಯಾಗಿರುವುದು ನಮಗೆ ತೃಪ್ತಿ ತಂದಿದೆ.

ಈ ಕಾರ್ಯಕ್ರಮವನ್ನು ರೂಪಿಸಿ, ಯಶಸ್ವಿಯಾಗಿ ನಡೆಸಿ, ಪುಸ್ತಕವಾಗಿ ಹೊರಬರಲು ಸಹಕರಿಸಿದ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳು, ಕುಲಸಚಿವರು, ಕನ್ನಡ ಭಾಷೆ ಮತ್ತು ಸಾಹಿತ್ಯ ವಿಭಾಗದ ಮುಖ್ಯಸ್ಥರಾದ ರಹಮತ್ ತರೀಕೆರೆಯವರು, ವಿಭಾಗದ ಸದಸ್ಯರಾದ ಡಾ. ಅಮರೇಶ ನುಗಡೋಣಿ, ಡಾ. ಶಿವಾನಂದ ವಿರಕ್ತಮಠ, ಡಾ. ಬಿ.ಎಂ.ಪುಟ್ಟಯ್ಯ, ಶ್ರೀಮತಿ ಪಾರ್ವತಿ, ಶ್ರೀ ಭೀಮೇಶ ಇವರಿಗೆಲ್ಲಾ ಕೃತಜ್ಞನಾಗಿದ್ದೇನೆ.

ದೇವಚಂದ್ರನ ಹುಟ್ಟೂರು, ಹಾಗೂ ನನ್ನ ಜಿಲ್ಲೆಯೇ ಆದ ಚಾಮರಾಜನಗರದಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರೊ. ಮಲೆಯೂರು ಗುರುಸ್ವಾಮಿಯವರಿಗೆ ಕೃತಜ್ಞನಾಗಿದ್ದೇನೆ.

ಕನಕಗಿರಿ ಸಿದ್ಧಕ್ಷೇತ್ರದ ಸ್ವಾಮಿಗಳಾದ ಶ್ರೀ ಭುವನಕೀರ್ತಿ ಭಟ್ಟಾರಕರಿಗೆ ಕೃತಜ್ಞನಾಗಿದ್ದೇನೆ. ಪ್ರಬಂಧಗಳನ್ನು ಮಂಡಿಸಿ ಬರೆದು ಕೊಟ ಎಲ್ಲ ವಿದ್ವಾಂಸರಿಗೂ ಕೃತಜ್ಞನಾಗಿದ್ದೇನೆ.

ರಾ. ವೆಂಕಟೇಶ ಇಂದ್ವಾಡಿ