ದೇವಚಂದ್ರನ ರಾಜಾವಳಿ ಕಥಾಸಾರವನ್ನು ಒಂದು ಸಲ ಅವಲೋಕಿಸಿದಾಗ ನಮಗೆ ಅವನ ತಿಳಿವಳಿಕೆಯ ವ್ಯಾಪಕತೆ ಗಮನಕ್ಕೆ ಬರುತ್ತದೆ. ಅವನ ಸ್ಮೃತಿ ಅಗಾಧವಾಗಿದೆ ಎನ್ನಿಸುತ್ತದೆ. ತಾನು ಕಂಡು-ಕೇಳಿದ, ಓದಿ-ಬಲ್ಲ ಎಲ್ಲವನ್ನೂ ಒಂದೆಡೆ ಹೇಳಿ ಮುಗಿಸಬೇಕೆಂಬ ಅವನ ಅದಮ್ಯ ಉತ್ಸಾಹ ಕೃತಿಯ ತುಂಬ ಕಾಣಿಸುತ್ತದೆ. ಆದರೆ ಏನು ಹೇಳಬೇಕು, ಎಷ್ಟು ಹೇಳಬೇಕು, ಹೇಗೆ ಹೇಳಬೇಕು ಎಂಬ ಜಾಣತನ ಕವಿಯಲ್ಲಿ ಕಾಣುವುದು ಕಡಿಮೆ. ಆತ ತನಗೆ ಗೊತ್ತಿದ್ದುದನ್ನೆಲ್ಲವನ್ನೂ ಕಥೆ ಮಾಡಿ ಹೇಳಬೇಕೆಂದು ಹೊರಟರೂ ಅವನ ಕಥನಶೈಲಿ ಆಕರ್ಷಕವೆನಿಸುವುದಿಲ್ಲ. ಹೀಗಾಗಿ ಇಡೀ ಕೃತಿಯನ್ನು ಒತ್ತಾಯದಿಂದಲೇ ಓದಬೇಕಾಗುತ್ತದೆ.

ದೇವಚಂದ್ರನ ರಾಜಾವಳಿ ಕಥಾಸಾರವನ್ನು ಜಾನಪದ ದೃಷ್ಟಿಯಿಂದ ನೋಡುವಾಗ, ಕವಿ ತನಗೆ ಗೊತ್ತಿರುವ ಎಲ್ಲವನ್ನೂ ಹೇಳಿ ಬಿಡಬೇಕೆಂಬ ಹಂಬಲದವನಾಗಿ, ಒಬ್ಬ ಜಾನಪದ ವಕ್ತಾರನಂತೆಯೇ ಕಾಣುತ್ತಾನೆ. ಎಲ್ಲವನ್ನೂ ಮೌಖಿಕ ಪರಂಪರೆಯ ವಕ್ತಾರನಂತೆಯೇ ದಡದಡನೆ ಒಪ್ಪಿಸುತ್ತ ಹೋಗುವ ಓಘದಿಂದಾಗಿಯೇ ಬಹುಶಃ ಅವನಿಗೆ ಬರವಣಿಗೆಯ ನಯಗಾರಿಕೆಯೆಡೆಗೆ ಲಕ್ಷ ಕೊಡಲು ಸಾಧ್ಯವಾಗಿಲ್ಲವೆನಿಸುತ್ತದೆ.

ಆತನಿಗೆ ಧಾರ್ಮಿಕ ಕೃತಿಗಳ ಓದಿನ ತಿಳುವಳಿಕೆ ಖಂಡಿತವಾಗಿಯೂ ಇದೆ. ಜತೆಗೆ ಅವನ ಧಾರ್ಮಿಕ ಮನೋಭಾವ ಹಾಗೂ ಅರಮನೆಯ ಸಂಪರ್ಕಗಳು ಮತ್ತು ಪಾಂಡಿತ್ಯದ ಕಡೆಗಿನ ಒಲವು ಇವೆಲ್ಲ ಒಟ್ಟಿಗೇ ಅವನನ್ನು ಕೈ ಹಿಡಿದು ಎಳೆಯುತ್ತವೆ. ಹೀಗಾಗಿಯೇ ಏನು ಹೇಳಲಿ, ಏನು ಬಿಡಲಿ ಎಂಬ ಎಳೆದಾಟದಲ್ಲಿ ಸ್ಪಷ್ಟತೆಯ ಕೊರತೆ ಎದ್ದು ಕಾಣುತ್ತದೆ.

ಜಾನಪದ ಪಠ್ಯವಾಗಿ ರಾಜಾವಳಿ ಕಥಾಸಾರವನ್ನು ನೋಡುವಾಗ ಈ ಕೃತಿಯ ೪, ೫, ೬ ಹಾಗೂ ೧೦ನೇ ಅಧ್ಯಾಯಗಳು ಗಮನಾರ್ಹವಾಗಿವೆ. ಇಲ್ಲೆಲ್ಲ ನಾವು ಕಾಣುವುದು ಜನಪದ ಕಥೆಗಳ ಸರಮಾಲೆಗಳನ್ನೆ ಗಾದೆ ಪಡೆನುಡಿಗಳನ್ನು ಈತ ಬಳಸಿಕೊಂಡದ್ದು ಕಡಿಮೆ. ಕತೆಗಳ ಹಿನ್ನೆಲೆಯಾಗಿ ಆತ ಹೇಳುವುದು ಮತ್ತೆ ಧರ್ಮದ ಚೌಕಟ್ಟಿನ ಒಳಗಿನ ಮಾತುಗಳನ್ನೇ. ‘ಸ್ತ್ರೀ ಬುದ್ಧಿ ಚಾತುರ್ಯವನಾರ್ ಅರಿವರ್’ ಎಂಬ ಮಾತಿನ ಕೆಳಗೆ ಜಾರತನಕ್ಕೆ ಸಂಬಂಧಿಸಿದ ಹತ್ತಾರು ಕಥೆಗಳನ್ನು, ‘ಬುದ್ಧಿವಂತರು ಧರ್ಮವನ್ನು ಕೊಳ್ವಲ್ಲಿ ಪರೀಕ್ಷಿಸಿಕೊಳ್ಳಬೇಕು’- ಎಂಬ ಮಾತಿನ ಕೆಳಗೆ ಮತ್ತೆ ಹತ್ತಾರು ಕಥೆಗಳನ್ನು ಹೇಳುತ್ತಾನೆ. ಸಹಜವಾಗಿಯೇ ಜೈನಧರ್ಮದ ಒಂದು ಎಳೆಯ ತಂತ್ರದಲ್ಲಿ ಇಲ್ಲಿನ ಕಥೆಗಳನ್ನೆಲ್ಲ ಪೋಣಿಸಿರುವುದು ಗಮನಾರ್ಹ ಸಂಗತಿ.

‘ಕೂಗಿ ಮಾರಿಯಂ ಕರೆತೆಂದನೆಂಬಂತೆ’, ‘ಪಾಲಿಂಗೆ ಪುಳಿಸೇರಿ ಕೆಟ್ಟಂತೆ’, ‘ಪಂದಿಯೊಡನಾಡಿದ ಕೆಂದಗರು ಪೇಲ ತಿಂದುದೆಂಬಂತೆ’, ‘ಪರಿಪರ್ಮಿರ್ದಲ್ಲಿ ಪಾತಾಳವೆಂಬಂತೆ’, ‘ಪರುಷಮಾದುದರಿಂದ ಲೋಹಮಂ ಸೋಂಕಲ್ ಪೊನ್ನಪ್ಪುದು’- ಎಂಬತಹ ಗಾದೆ ಮಾತುಗಳನ್ನು ಹೇಳಿಕೊಂಡು ಹೋಗುತ್ತಾನೆ. ಕಾಲ್ಕೆರೆಯುತ್ತೆ ಬರಲ್ ಮುಂತಾಗಿ ಅಲ್ಲಲ್ಲಿ ಕೆಲ ನಾಣ್ಣುಡಿಗಳನ್ನು ಬಳಸಿದ್ದರೂ ಕವಿಗೆ ಅವುಗಳ ಕಡೆ ಸರಿಯಾದ ಲಕ್ಷವೇ ಇಲ್ಲ.

ಅವನಿಗೆ ಏನಿದ್ದರೂ ಕಥೆಗಳನ್ನು ಹೇಳುವ ಇಲ್ಲವೆ ಕಥೆಮಾಡಿ ಹೇಳುವ ಬಯಕೆ ಹೆಚ್ಚು. ಹೀಗೆ ಕಥೆಗಳನ್ನು ಹೇಳುವಲ್ಲಿ ಜನಪದ ಕಥೆಗಳ ಬಳಕೆ ಒಂದು ಕಡೆಯಾದರೆ, ಐತಿಹ್ಯಗಳನ್ನು, ಐತಿಹ್ಯಗಳಂತಹ ಘಟನೆಗಳನ್ನು ಇನ್ನೊಂದು ಕಡೆ ಹೇಳುತ್ತಾನೆ. ಆತನು ಐತಿಹ್ಯಗಳಂತಹ ಘಟನೆಗಳನ್ನು ಬಿತ್ತರಿಸುವಾಗ ಧಾರ್ಮಿಕ ಸಂಗತಿಗಳನ್ನೂ ಐತಿಹಾಸಿಕ ಘಟನೆಗಳೆಂಬತೆ ಹೇಳುತ್ತಾನೆ. ಇಂಥವನ್ನು ನಂಬುವುದು, ಚರ್ಚಿಸುವುದು ಸರಿಯಾದ ಪರೀಕ್ಷೆ ಇಲ್ಲದೆ ತೊಂದರೆ ಎನಿಸುತ್ತದೆ. “ಶ್ರವಣಬೆಳ್ಗೊಳಕ್ಕೆ ಬೆಳ್ಗುಳ ಎಂಬ ಹೆಸರು ಹೇಗೆ ಬಂದಿತು ಎಂದು ಹೇಳುವುದು ಶುದ್ಧ ಐತಿಹ್ಯವಾಗಿದೆ.-‘ಕೂಷ್ಮಾಂಡಿನಿ ದೇವಿ ವೃದ್ಧೆಯಾಗಿ ಗುಳ್ಳಕಾಯಲ್ಲಿ ಹಾಲನ್ನು ತಂದು ಜಿನಪ್ರತಿಮೆಗೆ ಅಭಿಷೇಕ ಮಾಡಿದಾಗ, ಅದು ಪ್ರತಿಮೆಯೆಲ್ಲ ಆವರಿಸಿ, ಗುಡ್ಡದಲ್ಲೆಲ್ಲ ಹರಿದು, ಊರೆಲ್ಲ ಹರಡಿ-ಬೆಳ್ಳಗೆ ಕಂಡಿದ್ದರಿಂದ ಬೆಳ್ಗುಳ ಎಂಬ ಹೆಸರು ಆ ಊರಿಗೆ ಹೊಸದು, ಅದು ಗುಡ್ಡದ ಮಗ್ಗುಲಲ್ಲಿದೆ, ಆ ಗುಡ್ಡದ ತುದಿಯಲ್ಲಿ ಜಿನಪ್ರತಿಮೆ ಇದೆ-ಹೀಗೆ ಐತಿಹ್ಯದಲ್ಲಿ ಸತ್ಯಸಂಗತಿಗಳು ಅಡಗಿರುವುದನ್ನು ಸರಳವಾಗಿ ಗುರುತಿಸಬಹುದಾಗಿದೆ.

ಹೀಗೆಯೇ ಪೊಂಬುಚ್ಚಪುರ ಎಂಬ ಊರಿನ ಐತಿಹ್ಯವನ್ನು ಯಾವುದೇ ಆತಂಕವಿಲ್ಲದೆ ಪರಿಶೀಲಿಸಬಹುದಾಗಿದೆ. ‘ಲಕ್ಕೀ ವನದಲ್ಲಿ ದೇವಿಯ ಬಂಗಾರದ ಪ್ರತಿಮೆ ಕಂಡು ಅದನ್ನು ಎತ್ತಲು ಹೋದಾಗ ಸಾಧ್ಯವಾಗಲಿಲ್ಲ. ಆತನ ಸ್ವಪ್ನದಲ್ಲಿ ದೇವಿ-ಪದ್ಮಾಂಬೆ-ನಾನು ಇಲ್ಲಿಎಯೇ ಇರುತ್ತೇನೆ ಎಂದುದರಿಂದ, ಜಿನದತ್ತನು ಕಾಡನ್ನು ಕಡಿದು, ಪಟ್ಟಣ ಮಾಡಿದನು. ಪದ್ಮಾಭೆ ವಾಸಗಿರುವ ಆ ಊರು ಪೊಂಬುಚ್ಚಪುರ ಎಂದು ಹೆಸರಾಯಿತಂತೆ” ಈ ಐತಿಹ್ಯದಲ್ಲಿ ಹೊಸ ಊರುಗಳು ನಿರ್ಮಾಣವಾಗುವ ಗುಟ್ಟಿದೆ. ಒಬ್ಬೊಬ್ಬ ಶೂರನು ತನ್ನ ಅನುಯಾಯಿಗಳೊಂದಿಗೆ ಅರಣ್ಯದಲ್ಲಿ ಉಲಿದು, ತಾನು ಆರಾಧಿಸುವ ದೇವರನ್ನು ಅಲ್ಲಿ ಪ್ರತಿಷ್ಠಾಪಿಸಿ, ಅದರ ಸುತ್ತಮುತ್ತಲಿನ ಗಿಡ-ಗಂಟಿಗಳನ್ನು ಕಡಿದು, ನಗರ ನಿರ್ಮಾನ ಮಾಡುವ ಕಥೆ ರೋಚಕವಾಗಿದೆ. ಇಂತಹ ಇನ್ನೂ ಅನೇಕ ಐತಿಹ್ಯಗಳು ಈ ಕೃತಿಯಲ್ಲಿ ದೊರೆಯುತ್ತವೆ. ಆದರೆ ಶಂಕರಚಾರ್ಯರು ಮೂಲದ ಜಿನಪ್ರತಿಮೆ ತೆಗೆಸಿ ಸರಸ್ವತಿ ಸ್ಥಾಪಿಸಿದರು. ಎಂಬಂತಹ ಸಂಗತಿಗಳು ನಮಗೀಗ ಐತಿಹ್ಯಗಳಾಗಿ ಕಂಡರೂ ಅವನ್ನು ಶೋಧಿಸುವಲ್ಲಿ ಮೈತುಂಬಾ ಎಚ್ಚರ ವಹಿಸಬೇಕಾಗುತ್ತದೆ.

ಹೀಗೆಯೇ ಮಲೆಯ ಮಾದೇಶ್ವರರಿಗೆ ಸಂಬಂಧಪಟ್ಟ ಸಂಗತಿ: ‘ದಕ್ಷಿಣದ ಸೀಮೆಯಿಂದ ಒಬ್ಬ ಮಾದಿಗರ ಹುಡುಗ ಬಂದು, ತನ್ನ ಗುರುವಿಗೆ ದೊರೆತನವನ್ನು ದೊರೆಯುವಂತೆ ಮಾಡಿದ್ದು, ತಾನು ಆತನ ಭಕ್ತನಾಗಿದ್ದು, ಆ ನಾಡಿನ ಅರಸನಾದ ಅಭಿಚಂದ್ರನನ್ನು ಕಪಟದಿಂದ ಸಿಂಹಾಸನದಿಂದ ಕೆಳಗಿಳಿಸಿದ್ದು, ಭಾನುಕೀರ್ತಿಯೆಂಬ ಜೈನಮುನಿಯನ್ನು ಸಂಹರಿಸಿದ್ದು, ಹೊಳೆಗೆ ಕಟ್ಟೆಕಟ್ಟುವಾಗ ಅವನಿಗೆ ಒಬ್ಬ ಕಲ್ಲು ಹಾಕಿ ಕೊಂದದ್ದು, ನಂತರ ವ್ಯಂತರನಾಗಲು, ಸರಗೂರ ಉಪ್ಪಲಿಗರು ಅವನ ಗುಡ್ಡರಾಗಿ ಏಳುಮಲೆಯ ಮಧ್ಯದಲ್ಲಿ ಪಶ್ಚಿಮಾಭಿಮುಖವಾಗಿ ಗುಡಿಕಟ್ಟಿ, ಮಾದೇಶ್ವರನಾಗಿದ್ದು’ ಇವೆಲ್ಲವನ್ನೂ ನೇರವಾಗಿ ಶುದ್ಧ ಐತಿಹ್ಯದಂತೆ ಸ್ವೀಕರಿಸಿ, ನಂಬುವುದು ದುಸ್ತರವೆನಿಸುತ್ತದೆ.

ಆದರೆ ತಾನು ಕಂಡು ಕೇಳಿದ ಹಲವಾರು ಗುಡಿಗುಂಡಾರಗಳು, ಊರುಗಳು ಹೇಗೆ ನಿರ್ಮಾನವಾದವು ಎಂಬ ವದಂತಿಗಳನ್ನು ಹತ್ತನೇ ಅಧ್ಯಾಯದ ಪ್ರಾರಂಭದಲ್ಲಿ ಪುಂಖಾನು ಪುಂಖವಾಗಿ ಹೇಳುತ್ತ ಹೋಗುತ್ತಾನೆ. ಇವು ಅಧ್ಯಯನ ಯೋಗ್ಯ ಸಂಗತಿಗಳೆನಿಸುತ್ತವೆ. ಹೀಗೆ ಈ ಐತಿಹ್ಯಗಳನ್ನು ಹೇಳುವಲ್ಲಿಯೂ ಆತ ಧಾರ್ಮಿಕ ಭಾವನೆಯಿಂದ ಬಿಡುಗಡೆ ಹೊಂದಿಲ್ಲದಂತೆ ಕಾಣುತ್ತಾನೆ. ಈ ಐತಿಹ್ಯಗಳಲ್ಲೆಲ್ಲ ಸಾಮಾನ್ಯವಾಗಿ ಕಾಣುವ ಸಂಗತಿಯೆಂದರೆ ಅಲ್ಲಲ್ಲಿ ದೇವರ ಪ್ರತಿಮೆಗಳು ಕಾಣಿಸಿಕೊಳ್ಳುವುದು, ಈ ಪ್ರತಿಮೆಗಳು ಕಾಣಿಸಿಕೊಂಡಲ್ಲಿಯೇ ಗುಡಿಗಳನ್ನು ನಿರ್ಮಿಸುವುದು ಮತ್ತು ಊರುಗಳು ಬೆಳೆದು ನಿಲ್ಲುವುದು. ಈ ಹಿಂದೆಯೇ ಪೊಂಬುಚ್ಚಪುರ ಎಂಬ ಊರಿನ ನಿರ್ಮಾಣದ ಪ್ರಸಂಗದಲ್ಲಿ ಇಂತಹ ಲಕ್ಷಣವನ್ನು ಕಂಡಿದ್ದೇವೆ.

೧. ನಿಕ್ಷೇಪಯಕ್ಷಿ ಬಿಂಬ-ಸಿದ್ಧಬಿಂಬ ತಿಪ್ಪೆಯಲ್ಲಿ ದೊರೆಯಲು ಅಲ್ಲಿ ಗುಡಿಯನ್ನು ಕಟ್ಟಿಸಿ, ತಿಪ್ಪಾದೇವಿಯೆಂದು ಹೆಸರಿಟ್ಟರು. (ಅ.೧೦, ಪು.೨೦೩).

೨. ಆಂಗೀರಸ ಸಂವತ್ಸರ ಆಷಾಢ ಬಹುಳ ೨ ಆರಭ್ಯ ಶ್ರೀ ರಂಗರಾಯನು ಶ್ರೀ ರಂಗಪಟ್ಟಣವನ್ನು ನಿರ್ಮಿಸುವಾಗ, ಅಲ್ಲಿ ದೊರೆತ ಜ್ವರಮಾರಾಚಾರ್ಯ ರಚಿತ ಪುರಪರಮೇಶ್ವರ ಬಿಂಬ, ರಂಗ ಪ್ರತಿಮೆ, ವೀರಭದ್ರ ಪ್ರತಿಕೃತಿ ಈ ಮೂರಕ್ಕೆ ಮೂರು ದೇವಾಲಯಗಳನ್ನು ನಿರ್ಮಿಸಿ, ಕಾವೇರಿ ಮಧ್ಯದಲ್ಲಿ ಪಟ್ಟಣವನ್ನು ಮಾಡಿಸಿದನು (ಅ-೧೦,ಪು.೨೦೩)

೩. ತಲಕಾಡಿನಲ್ಲಿ ಒಂದು ಆನೆ ದಿನವೂ ನೀರನ್ನು, ತಾವರೆ ಹೂವನ್ನು ತಂದು ಹುತ್ತಿನಲ್ಲಿ ಇಟ್ಟು ಪೂಜಿಸುತ್ತಿರುವುದು ದನಕಾಯುವವರಿಂದ ವಿಜಯ ಎಂಬ ಅರಸನು ಕೇಲಿ, ಶೋಧಿಸಲಾಗಿ ವೃಷಭ ಜಿನಪ್ರತಿಮೆ ಇರುವುದನ್ನು ಕಂಡು, ಅಲ್ಲಿಯೇ ಬಸದಿಯನ್ನು ಮಾಡಿಸಿದನು. ಮಗ್ಗುಲಲ್ಲಿ ಊರನ್ನು ನಿರ್ಮಿಸಿ ರಾಜಧಾನಿಯನ್ನಾಗಿಸಿ ಅರಸನು ಅಲ್ಲೇ ಇರಹತ್ತಿದನು. ಅಲ್ಲಿ ಅನೇಕ ದೇವಸ್ಥಾನಗಳಾಗಲು ದೇವರುಗಳಿಗೆ ಒಂದೊಂದಕ್ಕೆ ಸೊಲಗೆ ಅಕ್ಕಿಯನ್ನು ಪಡಿತರ ಕೊಟ್ಟನು. ದೇವರಿಗೆ ದಿನವೂ ಸಣ್ಣಕ್ಕಿಯನ್ನು ಮಾಡಿಸಿಕೊಡುತ್ತ ಕಡೆಗೆ ಜಂಗಮಭಕ್ತನಾಗಿ ಲಿಂಗಧಾರಿಯಾದನು.

ಒಂದು ದೇವತೆಗೆ ತಿಪ್ಪಾದೇವಿ ಎಂದು ನಾಮಕರಣವಾದುದು, ಶ್ರೀರಂಗಪಟ್ಟಣದಲ್ಲಿ ಮೂರು ಗುಡಿಗಳಿದ್ದುದ್ದು, ತಲಕಾಡಿನಲ್ಲಿ ವೃಷಭಜಿನ ಬಸದಿ ನಿರ್ಮಾನವಾದದ್ದು ಈ ಮೇಲಿನ ಐತಿಹ್ಯಗಳಲ್ಲಿ ದೊರೆಯುವ ಮಹತ್ವದ ಸಂಗತಿಗಳು. ತಲಕಾಡಿನ ಆನೆಯೊಂದು ದಿನವೂ ನೀರನ್ನು, ತಾವರೆ ಹೂವನ್ನು ತಂದೂ ಹುತ್ತಿನಲ್ಲಿಟ್ಟು ಪೂಜಿಸುವ ಸಂಗತಿ ಶುದ್ಧ ಜನಪದ ಆಶಯವಾಗಿದೆ. ಆನೆ, ತಾವರೆಯ ಹೂ ಇರುವಲ್ಲಿ ಅರಸನೊಬ್ಬನ ಸಂಬಂಧ ಬರುವುದು ಸಾಮಾನ್ಯ. ಜನಸಾಮಾನ್ಯನೊಬ್ಬನ ಸಂಬಂಧ ಬರುವಲ್ಲಿ ಆಕಳು ಹಾಲುಗರೆಯುವ ಸಂಗತಿ ಬರುತ್ತದೆ.

ವೀರರ ಸ್ಮಾರಕಗಳ ಬಗ್ಗೆಯೂ ಕವಿ ಬರೆಯುತ್ತಾನೆ: ಭುಜಂಗರಾಯನೆಂಬ ಅರಸು ಮಡಿದಾಗ, ಊರಮಧ್ಯದಲ್ಲಿ ಹೂಳಿ ಗುಡಿಕಟ್ಟಿ ಪೂಜಿಸಿದರು (ಅ-೧೦, ಪು-೨೦೮) ಎಂಬ ಸಂಗತಿ, ತೆಳ್ಳನೂರ ವೀರಲಕ್ಷ್ಮಿ ಎಂಬುವಳು ಕಿಚ್ಚಿನಿಂದ ಸತ್ತು ಹುರಿಕಾತಿಯಾದಳು (ಅ-೧೦, ಪು.೨೦೮) ಎಂಬುವು ವೀರರ ಬಗೆಗೆ ಹೇಳಿದ ಮಾತುಗಳಾಗಿವೆ.

ಇಂತಹ ವೀರರ ಜೀವನದ ಬಗೆಗೆ ಕವಿಗೆ ಗೌರವಭಾವನೆಯೂ ಇದೆ. ವೀರರು ಇದ್ದಾಗಲೂ ಜನರನ್ನು ರಕ್ಷಿಸುವವರು, ಅವರು ಸ್ವರ್ಗವಾಸಿಗಳಾದಾಗಲೂ ರಕ್ಷಿಸುವವರು ಎಂಬ ಭಾವನೆ ಕವಿಗಿದೆ. ಈ ಮಾತಿಗೆ ಉದಾಹರಣೆಯಾಗಿ ಆತ ಹೇಳುವ ಒಂದು ಸಂಗತಿಯನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. ‘ನರಮಾರಿ ಗೋಮಾರಿ ಮುಂತಾದ ಮಾರಿಗಳು ಹುಟ್ಟಿ ಜನರೆಲ್ಲಾ ಲಯವಾಗುತ್ತಿದ್ದಾಗ, ಊರೂರಲ್ಲಿ ಹಿಂದೆ ಕಾಳಗದಲ್ಲಿ ಮಡಿದ ವೀರರ ಪತ್ನಿಯರು ಕೊಂಡ ಹಾಯ್ದು ಸತಿಹೋದುದನ್ನು ಶಿಲೆಯಲ್ಲಿ ಬರೆಯಿಸಿ, ವೀರಜಡೆ, ನಿಂಬೆಹಣ್ಣು, ಒಕ್ಕಲು ಪ್ರತಾಪಾದಿಗಳನ್ನು ಕಲ್ಪಿಸಿ, ಪ್ರತಿ ಗ್ರಾಮದ ಅಗಸಿಬಾಗಿಲಲ್ಲಿ ಶಿಲಾ ಪ್ರತಿಮೆ ಮಾಡಿಸಿ, ಪೂಜಿಸಿ ಹಬ್ಬ ಮಾಡುವರು. ಅಲ್ಲದೆ ಗ್ರಾಮದ ಮುಂದೆ ಒಂದೊಂದು ಗುಡಿಯನ್ನು ಕಟ್ಟಿಸಿ, ಕಾಳದೇವರೆಂದು ಪ್ರತಿಷ್ಠೆ ಮಾಡಿ ಪೂಜಿಸಿ ಕೊಂಡಗಳನ್ನು ಮಾಡುತ್ತ ಬಂದರು (ಅ-೧೦, ಪು.೨೦೭). ಇಂತಹ ತಾನು ಕಂಡು ಕೇಳಿದ ಸಂಗತಿಗಳನ್ನು ಒಂದೇ ಸಮನೆ ಹೇಳುತ್ತ ಹೋಗುವ ಕವಿಯು ಜನಪದ ಮನಸ್ಸಿನವನೇ ಎನಿಸುತ್ತದೆ. ಆದರೆ ಅವನ ಪ್ರತಿಭೆಗೆ ಅರಮನೆಯ ಸ್ಪರ್ಶ-ಆಶೆಗಳು, ಧಾರ್ಮಿಕ ಶ್ರದ್ಧೆಗಳು ಆಡಚಣೆಯನ್ನೊದಗಿಸಿವೆ.

ಸಾಮಾನ್ಯ ನಂಬುಗೆ ಸಾಮಾನ್ಯ ಸಂಗತಿಗಳನ್ನೆಲ್ಲ ಬಲ್ಲ ಕವಿ, ಜನಸಾಮಾನ್ಯರಿಗೆ ಆತಂಕಕಾರಿಯಾದ ಸಂಗತಿಗಳನ್ನೆಲ್ಲ ಬಿತ್ತರಿಸುವ ಮನಸ್ಸು ಮಾಡುತ್ತಾನೆ., ‘ಭುಜಂಗರಾಯನು ನಂಜನಗೂಡಿಗೆ ಬರುತ್ತಿರುವಲ್ಲಿ ದಾರಿಯ ಗಿಡದಲ್ಲಿ ತೊರೆಯ ಜಾತಿ ಸ್ತ್ರೀ ಮೂತ್ರಿಸಿ, ರಾಯನ ಕುದುರೆ ಅದನ್ನು ಮೂಸಿನೋಡಿ ಮುಂದೆ ಸಾಗದೆ ನಿಂತಿತು. ಆಕೆಯನ್ನು ಕರೆಸಿ, ಕುದರೆ ಜೊತೆ ಸಂಗಮಾಡಲು ಆಕೆ ಸತ್ತು ವ್ಯಂತರಿಯಾಗಿ, ರಾಯನ ಸೈನ್ಯವನ್ನೆಲ್ಲ ಕೊಲ್ಲಲ್ಲು ಪ್ರಾರಂಭಿಸಿತು. ಆಗ ಅರಸನು, ಆಕೆಯನ್ನು ಪ್ರಾರ್ಥಿಸಿಕೊಂಡು ಗೊಣಗನ ಹಳ್ಳಿಯೊಳು ಗುಡಿಯನ್ನು ಮಾಡಿಸಿ, ಮಾರಿ ಎಂದು ಹೆಸರಿಟ್ಟು ಜಾತ್ರೆಯನ್ನು ಪ್ರಾರಂಭಿಸಿದನು’ (ಅ. ೧೦, ಪು.೨೦೮).

ಸಾಮಾನ್ಯ ಜನರ ತೊಂದರೆಗಳಿಗೆ ಅರಸ ಸ್ಪಂದಿಸಿದ ಸಂಗತಿಯನ್ನು ಈ ಐತಿಹ್ಯ ಬಿತ್ತರಿಸುತ್ತಿರುವುದು ಸರಿ. ಬಹುಶಃ ಈ ಉದ್ದೇಶದಿಂದಲೇ ಈ ಪ್ರಚಲಿತ ಸಂಗತಿಯನ್ನು ಕವಿ ಹೇಳಲು ಹೊರಟಿರಬೇಕು. ‘ಹೆಂಗಸೊಬ್ಬಳ ಮೂತ್ರ ವಿಸರ್ಜನೆಯ ವಾಸನೆಗೆ ಕುದುರೆ ಮೂಸಿ ನೋಡಿ ನಿಲ್ಲುವುದು’ ಜನಪದ ಆಶಯವಾಗಿದ್ದು, ಅದು ಸಾಂಕೇತಿಕವಾಗಿ ಅರಸನ ಲೈಂಗಿಕ ಪ್ರವೃತ್ತಿಯನ್ನು ಬಿತ್ತರಿಸುತ್ತದೆ. ಆದರೆ ಕವಿ ಅದನ್ನು ಸರಳಗೊಳಿಸಿ ಕುದುರೆಯ ಜೊತೆಗೆ ಹೆಣ್ಣೊಬ್ಬಳ ಸಂಬಂಧವನ್ನು ಹೇಳುವುದು ಅವನ ಔಚಿತ್ಯ ಪ್ರಜ್ಞೆಗೆ ಪ್ರಶ್ನೆಯಾಗಿ ನಿಲ್ಲುತ್ತದೆ.

ಆದರೆ ಈ ಭುಜಂಗರಾಯನ ಕುಮಾರ ದೇವರಾಯನ ಸಂಗತಿ ಹೇಳುವಾಗ ಮಾತ್ರ ನೇರವಾಗಿ ದೇವರಾಯ ಸೂಳೆಗಾರಿಕೆಗೆ ಬಿದ್ದು, ಹುಣ್ಣು ಹತ್ತಿ ಸತ್ತು ಹೋದುದನ್ನು ಹೇಳುತ್ತಾನೆ. ನಂತರ ಅರಸ ಸೂಳೆಯರಿಗೆ ಎಚ್ಚರಿಕೆ ಕೊಟ್ಟರೂ ಸವಂತಿ ಎಂಬಾಕೆ ಅರಸನ ಮಾತನ್ನು ಲಕ್ಷಿಸದೇ ಇದ್ದಾಗ, ಆತ ಕ್ರೂರ ಹಿಂಸೆ ಕೊಟ್ಟು ಕೊಲ್ಲಿಸಿದ ಅರಸನ ವರ್ತನೆ, ಹಿಂದಿನ ಮೂತ್ರ ವಿಸರ್ಜನೆಯ ಹೆಂಗಸಿನ ಸಂಬಂಧದಲ್ಲಿಯ ಆತನ ನಡತೆಯನ್ನು ಗ್ರಹಿಸಿಕೊಳ್ಳಲು ನಮಗೆ ಅನುಕೂಲ ಮಾಡಿಕೊಡುತ್ತದೆ.

ಅರಸನ ಕ್ರೂರ ಹಿಂಸೆಗೆ ತುತ್ತಾಗಿ ಮಡಿದ ವಸಂತಿ ಎಂಬ ಸೂಳೆಯು ವ್ಯಂತರೆಯಾಗಿ ಊರಿನ ಜನರನ್ನು ಉರಿಜ್ವಾಲೆಯಿಂದ ಕಾಡತೊಡಗಿದಳು. ಆಕೆಯ ಆವೇಶವನ್ನು ಕರೆದು ಕೇಳಲು ತನ್ನನ್ನು ಪೂಜಿಸಿ, ಸುಡಗಾಡ ಕೊಳ್ಳಿಯಿಂದ ಬೆಂದ ಕೂಳು ಹಾಗೂ ದಾಸಾಳ ಹೂವಿನಿಂದ ಪೂಜಿಸಲು, ಶಾಂತವಾಗುವೆನು ಎಂದಳು. ಅದರಂತೆ ಆಕೆಯ ಗುಡಿಕಟ್ಟಿಸಿ, ಹುರಿಕಾತಿಯೆಂದು ಸ್ಥಾಪಿಸಿ, ರಕ್ತಗೂಳ ಮುದ್ದೆಯನ್ನು ಆಕಾಶಕ್ಕಿಟ್ಟು ದೇವತೆ ಮಾಯವಾಗಲು ಪ್ರತಿ ವರುಷ ಜಾತ್ರೆಯನ್ನು ಮಾಡುವರು. (ಅ.೧೦, ಪು.೨೦೮). ಅಂತಹ ಸಂಗತಿಗಳನ್ನೆಲ್ಲ ಕವಿ ಹೇಳುವಲ್ಲಿ ಅವನ ಎಗ್ಗಿಲ್ಲದ ವಿವರಣೆಗಳು ನಮಗೆ ಹಿಡಿಸುತ್ತವೆ.

ಈ ಕೃತಿಯಲ್ಲಿ ಬಹುಪಾಲು ಎದ್ದು ಕಾಣುವ ಜಾನಪದ ಸಂಗತಿಗಳೆಂದರೆ ಜನಪದ ಕಥೆಗಳು. ೪,೫,೬ ಹಾಗೂ ೧೦ನೇ ಅಧ್ಯಾಯಗಳಲ್ಲಿ ಕಥೆಗಳಿಗೇ ಪ್ರಧಾನ ಸ್ಥಳ ದೊರಕಿದೆ. ಒಂದು ಸಾಮಾನ್ಯ ಓದಿಗೆ ಈ ಕೃತಿಯಲ್ಲಿ ಸು.೪೦ ರಿಂದ ೫೦ ಕಥೆಗಳಿರುವುದು ಸಹಜ ಲೆಕ್ಕಕ್ಕೆ ದೊರೆಯುತ್ತವೆ.

ಈ ಕೃತಿಯ ೪ನೇ ಅಧ್ಯಾಯದ ಕಥೆ ಶ್ರೇಣಿಕ ಮಹಾರಾಜ ಮತ್ತು ಅವನ ಮಗ ಅಭಯಕುಮಾರನಿಗೆ ಸಂಬಂಧಿಸಿದ ಕಥೆಯಂತೂ ಜೈನಧರ್ಮದ ಪ್ರಾಚೀನ ಕೃತಿಗಳಲ್ಲಿ ಸ್ಥಾನಪಡೆದ ಕಥೆಯಾಗದೆ. ಹರಿಷೇಣನ ಬೃಹತ್ ಕಥೆಯಿಂದಲೇ ಅದಕ್ಕೆ ಸ್ಥಾನ ದೊರಕಿದೆ. ಶ್ರೀಚಂದ್ರನ ‘ಅಪಭ್ರಂಶ ಕಥಾಕೋಶ’, ಗುಣಭದ್ರರ ಸಂಸ್ಕೃತ ‘ಉತ್ತರ ಪುರಾಣ’ ಮತ್ತು ನಾಗರಾಜನ ‘ಪುಣ್ಯಸ್ರವ’ (೧೨೨೧) ಈ ಮುಂತಾದ ಕೃತಿಗಳಲ್ಲಿ ಶ್ರೇಣಿಕ ಅವನ ಹೆಂಡತಿ ಮತ್ತು ಮಗ ಅಭಯಕುಮಾರರ ಕಥೆಗಳು ಸೇರಿಕೊಂಡಿವೆ. ೫ನೇ ಅಧ್ಯಾಯದ ಮುಖ್ಯ ಕಥೆ ಧನ್ವಂತರಿ ಮತ್ತು ವಿಶ್ವಲೋಮರ ಕಥೆ ಮತ್ತು ೬ನೇ ಅಧ್ಯಾಯದ ಸುಮಾರು ೧೩-೧೪ ಕಥೆಗಳೆಲ್ಲ ನಯಸೇನನ ಧರ್ಮಾಮೃತದಲ್ಲಿ (೧೧೧೨) ಕಾಣಿಸುವ ಕಥೆಗಳಾಗಿವೆ. ನಂತರದ ೧೦ನೇ ಅಧ್ಯಾಯದ ಸುಮಾರು ೨೦ಕ್ಕೂ ಮೇಲ್ಪಟ್ಟ ಕಥೆಗಳಲ್ಲಿ ಕೆಲವು ಕಥೆಗಳ ಮೂಲ ಸಹಜ ಪ್ರಯತ್ನಕ್ಕೆ ನಿಲುಕುತ್ತಿದ್ದು, ಅವೆಲ್ಲ ವಡ್ಡಾರಾಧನೆ, ಧರ್ಮಾಮೃತ ಮತ್ತು ಧರ್ಮಪರೀಕ್ಷೆ ಈ ಕೃತಿಗಳಲ್ಲಿ ಕಾಣಿಸುತ್ತವೆ. ಹೆಚ್ಚಿನ ಪ್ರಯತ್ನ ಮಾಡಿದರೆ ಈ ಅಧ್ಯಾಯದ ಕಥೆಗಳ ಮೂಲವನ್ನು ಸರಳವಾಗಿ ಗುರುತಿಸಬಹುದೆನಿಸುತ್ತದೆ.

ಹೀಗಾಗಿ ಐತಿಹ್ಯ ಮತ್ತು ಪ್ರಚಲಿತ ಕೆಲ ಸಂಗತಿಗಳನ್ನು ಬಿಟ್ಟರೆ ವ್ಯಾಪಕವಾಗಿ ಬಳಸಿಕೊಂಡ ಕಥೆಗಳಂತೂ ಈಗಾಗಲೇ ಜೈನಧರ್ಮದ ಧಾರ್ಮಿಕ ಕೃತಿಗಳಲ್ಲಿ ಸ್ಥಾನ ಪಡೆದವುಗಳಾಗಿದ್ದು, ಕಥೆಗಳ ಆಯ್ಕೆಗೆ ಮೂಲ ಜೈನಧರ್ಮ ಗ್ರಂಥಗಳೆಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಹೀಗಾಗಿ ದೇವಚಂದ್ರನಲ್ಲಿ ಮೌಖಿಕ ಪರಂಪರೆಯ ಧಾರೆ ಕಾಣಿಸಿಕೊಂಡರೂ ಆ ಧಾರೆಯ ಬೇರುಗಳೆಲ್ಲ ಜೈನಧಾರ್ಮಿಕ ಕೃತಿಗಳಲ್ಲಿಯೇ ಕಾಣಿಸುತ್ತವೆ. ಆದುದರಿಂದ ಈ ಕವಿ ಮೌಖಿಕ ಪರಂಪರೆಯ ಜೊತೆ ಅಭ್ಯಾಸ ಬಲವುಳ್ಳ ಕವಿಯಾಗಿದ್ದಾನೆಂಬುದು ನಿರ್ವಿವಾದ ಸಂಗತಿ ಎನಿಸುತ್ತದೆ.

ದೇವಚಂದ್ರ ಕವಿ ತನ್ನ ರಾಜಾವಳಿ ಕಥಾಸಾರದಲ್ಲಿ ಬಳಸಿಕೊಂಡ ಕಥೆಗಳನ್ನು ಗಮನಿಸಿದರೆ ಅವೆಲ್ಲ ಜನಪದ ಕಥೆಗಳ ಈ ಕೆಳಗಿನ ಗುಂಪುಗಳಿಗೆ ಸಂಬಂಧಿಸಿದ ಕಥೆಗಳಾಗಿವೆ: ೧. ಮೂರ್ಖರ ಕಥೆಗಳು, ೨. ಜಾಣತನದ ಕಥೆಗಳು, ೩. ಕಳ್ಳರ ಕಥೆಗಳು, ೪. ಜಾಣತನ ಪರೀಕ್ಷೆಯ ಕಥೆಗಳು, ೫. ಹಿರಿಯರ ಹಿತನುಡಿಗಳು, ೬. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಹೀಗೆ ಸುಮಾರಾಗಿ ಈ ಆಶಯಗಳುಳ್ಳ ಕಥೆಗಳೇ ಈ ಕೃತಿಯಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಈ ಎಲ್ಲ ಕಥೆಗಳನ್ನು ಗಮನಿಸಿದರೆ, ಅವೆಲ್ಲ ಹೆಚ್ಚಾಗಿ ಪ್ರವಚನಕಾರರು, ಪುರಾಣಕಾರರು, ಕೀರ್ತನಕಾರರು ಬಳಸಿಕೊಳ್ಳುವ ಹಾಡುಗತೆಗಳೇ ಆಗಿವೆ. ಇವುಗಳ ಸ್ವರೂಪ ಹೇಗಿರುತ್ತದೆಂದರೆ, ನೇರವಾಗಿ ಈ ಕಥೆಗಳೇ ಒಂದು ಧರ್ಮತತ್ವವನ್ನು ಹೇಳಲಾರವು. ಬದಲಾಗಿ ಧರ್ಮತತ್ವ, ನೀತಿಯನ್ನು ಹೇಳುವ ಪ್ರವಚನದ ಧಾರೆಯಲ್ಲಿ ದೃಷ್ಟಾಂತಗಳಾಗಿ ಸಹಾಯವಾಗುತ್ತವೆ. ಹೀಗಾಗಿ ಇವು ಕೇವಲ ಉದಾಹರಣೆಗಳೇ ಹರತಾಗಿ ಇವೇ ಧಾರ್ಮಿಕ ತತ್ವಗಳನ್ನು ಹೊತ್ತು ಪ್ರಸಾರ ಮಾಡುವುದಿಲ್ಲ.

ಜನಪದ ಸಾಹಿತ್ಯ ಪ್ರಕಾರಗಳ ಸಾಮಾನ್ಯ ಸ್ವರೂಪ ಹೇಗಿರುತ್ತದೆಂದರೆ, ಅದಕ್ಕೆ ಯಾವುದೇ ಬಣ್ಣ ಇರುವುದಿಲ್ಲ. ಯಾರು ಬೇಕಾದರೂ ತಮ್ಮ ಉದ್ದೇಶಕ್ಕೆ ತಕ್ಕಂತೆ ಬದಲಾಯಿಸಿಕೊಂಡು ಹೇಳಬಹುದಾದ ಸಾಮಾನ್ಯ ಗುಣ ಇವುಗಳದಾಗಿರುತ್ತದೆ. ಮದುವೆಯ ಒಂದು ಎಣ್ಣೆ ಹಚ್ಚುವ ಹಾಡು ಆಯಾ ಮದುಮಕ್ಕಳ, ಬೀಗರ ಹೆಸರುಗಳನ್ನು ಸೇರಿಸಿ ಹಾಡಲು ಸಾಧ್ಯವಿರುವಂತೆ ದೃಷ್ಟಾಂತಗಳಾಗಿ ಪ್ರಯೋಗವಾಗುವ ಯಾವುದೇ ಕಥೆಯು ಹೀಗೆ ಬದಲಾವಣೆಗೆ ಒಳಗಾಗಬಹುದಾಗಿದೆ.

ಈ ಮಾತಿಗೆ ಉದಾಹರಣೆಯಾಗಿ ಒಂದು ಕಥೆಯನ್ನು ನೋಡಬಹುದಾಗಿದೆ. ರಾಜಾವಳಿ ಕಥಾಸಾರದಲ್ಲಿ ವ್ರತದ ಮಹಿಮೆ ಹೇಳಲು ೫ನೇ ಅಧ್ಯಾಯದ ‘ಧನ್ವಂತರಿ ಮತ್ತು ವಿಶ್ವಾಲೋಮ’ ಎಂಬ ಇಬ್ಬರು ಕಳ್ಳರ ಕಥೆಯಲ್ಲಿ ಈ ಕಥೆ ಬಳಕೆಯಾಗಿದೆ. ಧನ್ವಂತರಿ ಎಂಬ ಕಳ್ಳ ಮುನಿಗಳಿಂದ ಒಂದು ವ್ರತಬೇಡಲು, ಆತ ದಿನವೂ ಒಂದು ಬೋಳಮಂಡೆ ನೋಡಿ ಉಣ್ಣುವುದು ಎಂದು ಹೇಳಿದನು. ಧನ್ವಂತರಿ ತಾನು ಇಳಿದುಕೊಂಡ ಮನೆಯ ಮಗ್ಗಲು ಇರುವ ಕುಂಬಾರನ ಬೋಳುತಲೆ ನೋಡಿ ಉಣ್ಣುತ್ತಿದ್ದನು. ಒಂದು ದಿನ ಧನ್ವಂತರಿ ಅವನನ್ನು ಹುಡುಕುತ್ತಾ ಹೋದನು. ಈತನನ್ನು ನೋಡಿದ ಕುಂಬಾರ ಮರೆಯಾಗಲು ಪ್ರಯತ್ನಿಸಿದಾಗ, ಧನ್ವಂತರಿ ಅವರ ತಲೆ ನೋಡಿದವನೆ ‘ನೋಡಿರಿ ಬಿಡು’ ಎಂದನು. ಅಷ್ಟರಲ್ಲಿ ಕುಂಬಾರನಿಗೆ ನಿಕ್ಷೇಪ ದೊರಕಿದ್ದು, ಅದನ್ನೇ ಧನ್ವಂತರಿ ನೋಡಿದನೆಂದು ತಿಳಿದು, ದೊರೆತ ನಿಕ್ಷೇಪದಲ್ಲಿ ಅರ್ಧವನ್ನು ಆತನಿಗೆ ಒಯ್ದು ಕೊಟ್ಟನು. ಇದು ವ್ರತದ ಫಲ.

ಇದೇ ಕಥೆಯನ್ನೇ ವೀರಶೈವ ಪುರಾಣಕಾರರೂ ಬಳಸಿಕೊಳ್ಳುವುದನ್ನು ಸಾಮಾನ್ಯವಾಗಿ ಕಾಣುತ್ತೇವೆ. ದಿನವೂ ಮುಂಜಾನೆ ವಿಭೂತಿ ಹಚ್ಚಿಕೊಳ್ಳುವವನ ಮುಖ ನೋಡಬೇಕು ಎಂಬ ಮಾತಿಗೆ ಒಬ್ಬನು ತನ್ನ ಮಗ್ಗಲುಮನೆಯ ಕುಂಬಾರನ ಹಣೆ ನೋಡುತ್ತಿದ್ದನು ಎಂದು ಪ್ರಾರಂಭವಾಗುವ ಈ ಕಥೆ ಮುಂದೆ ಒಂದೇ ಬಗೆಯಾಗಿ ಸಾಗುತ್ತದೆ.

ಈ ಕಥೆಗಳು ಬಳಕೆಯಾಗುವ ಸಂದರ್ಭಗಳಲ್ಲಿ ಬೋಳು ಮಂಡೆಯನ್ನು, ವಿಭೂತಿ ಧರಿಸಿದ ಹಣೆಯನ್ನು ನೋಡಿದರೆ ಅನಾಯಾಸ ದ್ರವ್ಯ ಪ್ರಾಪ್ತಿಯಾಗುವುದಾದರೆ, ಸ್ವತಃ ವಿಭೂತಿ ಧರಿಸಿದವನಿಗೆ, ಮಂಡೆ ಬೋಲಿಸಿಕೊಂಡವನಿಗೆ ಪ್ರಾಪ್ತಿಯಾದುದರಲ್ಲಿ ಅರ್ಧ ಕಳೆದುಕೊಳ್ಳುವ ದೌರ್ಭಾಗ್ಯ ಬಂದಿತಲ್ಲ ಎಂದು ಯಾರಾದರೂ ಕೇಳಿದರೆ ಅದಕ್ಕೆ ಉತ್ತ ದೊರೆಯಲಾರದು. ಆದರ ಸಾಮಾನ್ಯ ಜನರನ್ನು ಧಾರ್ಮಿಕತತ್ವಗಳ ಕಡೆಗೆ, ಆ ಮೂಲಕ ಸನ್ಮಾರ್ಗದ ಕಡೆಗೆ ಸೆಳೆಯುವ ಮಹತ್ವದ ಉದ್ದೇಶ ಇವುಗಳ ಹಿಂದೆ ಇರುತ್ತದೆ.

ಅದೇನೇ ಇದ್ದರೂ ಜೈನರಲ್ಲಿ ಒಂದು ತತ್ವ ಹೇಳಲು ಒಂದರೊಳಗೊಂದು ಪೋಣಿಸಿದಂತೆ ಹಲವಾರು ಕಥೆಗಳನ್ನು ಹೇಳುತ್ತ ಹೋಗುವ ತಂತ್ರವನ್ನು ಕಾಣುತ್ತೇವೆ. ರಾಜಾವಳಿ ಕಥಾಸಾರದಲ್ಲೂ ಈ ತಂತ್ರವಿದೆ. ಆದರೆ ವಡ್ಡಾರಾಧನೆಯಲ್ಲಿಯ ಕಥೆಗಾರನು ಜನಪದ ಕಥೆಗಳನ್ನು ಬೇಕಾದ ಹಾಗೆ ಮಾರ್ಪಡಿಸಿಕೊಳ್ಳುತ್ತಾನೆ. ಹೀಗಾಗಿ ಅನೇಕ ಜನಪದ ಕಥೆಗಳು ಅವನ ಕೈಯಲ್ಲಿ ಜೀವ ಕಳೆದುಕೊಂಡು ನಿಂತಿರುವುದು ಅಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ರಾಜಾವಳಿ ಕಥಾಸಾರದ ಕವಿ ಅಂತಹ ಕೆಲಸವನ್ನೇನೂ ಮಾಡುವುದಿಲ್ಲ. ಆತ ಹಿಂದಿನಿಂದಲೂ ಬಂದ ಕಥಾಸಂಪ್ರದಾಯವನ್ನು ಪುನಃ ಹೇಳುವ ಕೆಲಸ ಮಾಡಿದ್ದಾನೆ.

ರಾಜಾವಳಿ ಕಥಾಸಾರದಲ್ಲಿ ಬಳಕೆಯಾಗದ ಕಥೆಗಳಿಗೆ ಜೈನ ಕೃತಿಗಳಲ್ಲಿ ಬಳಕೆಯಾದ ಕಥಾಪರಂಪರೆ ಆಧಾರವಾಗಿದ್ದರೂ ಈ ಎಲ್ಲ ಕೃತಿಗಳ ಕಥೆಗಳು ಜನಪದ ಕಥೆಗಳೇ ಆಗಿವೆ. ಮೌಖಿಕ ಪರಂಪರೆಯ ಜನಪದ ಕಥೆಗಳಿಗೆ ಬರವಣಿಗೆ ಮಾಧ್ಯಮದಲ್ಲಿ ವ್ಯಾಪಕವಾದ ಸ್ಥಳಾವಕಾಶ ಒದಗಿಸಿಕೊಂಡು ಓದುವ ಮಾಧ್ಯಮದ ಸಹೃದಯರ ಗಮನಕ್ಕೂ ಈ ಕಥೆಗಳು ಬರುವಂತೆ ಮಾಡಿದ್ದು, ಜೈನಕವಿಗಳ ಮಹತ್ವದ ಕೊಡುಗೆ ಎಂದೇ ಹೇಳಬೇಕು. ಈ ಕೆಲಸವನ್ನು ಕನ್ನಡದ ಭೇರೆ ಮತದ ಕವಿಗಳಿಂದ ಇಷ್ಟೊಂದು ವ್ಯಾಪಕವಾಗಿ ಆಗಲಿಲ್ಲವೆಂಬುದು ಸತ್ಯ ಸಂಗತಿ. ಧಾರ್ಮಿಕ ಶ್ರದ್ಧೆಯ ಹಿನ್ನೆಲೆಯಲ್ಲಾದರೂ ಓದುವ ಬಳಗದ ನಡುವೆ ಕಥೆ ಉಳಿದದ್ದು, ಮೌಖಿಕ ಪರಂಪರೆಯ ಜೊತೆಗೆ ಲಿಖಿತ ಮಾಧ್ಯಮದಲ್ಲೂ ಜನಪದ ಕಥೆಗಳು ಪ್ರಸಾರ ಹೊಂದಲು ಅನುಕೂಲವಾದದ್ದು ದೊಡ್ಡ ಕೆಲಸವೇ.

ಈ ಹಿನ್ನೆಯಲ್ಲಿ ರಾಜಾವಳಿ ಕಥಾಸಾರದಲ್ಲಿ ಬಳಕೆಯಾದ, ನೈಜವಾದ ಚರಿತ್ರೆಗಳೆಂದು ಜೈನರು ನಂಬುವ ಶ್ರೇಣಿಕ ಮಹಾರಾಜನ ಕಥೆಯನ್ನೇ ಇಲ್ಲಿ ಪರೀಕ್ಷೆಗೆ ಎತ್ತಿಕೊಳ್ಳಬಹುದಾಗಿದೆ. ‘ಶ್ರೇಣಿಕನು ಮಗಧ ದೇಶ ದೊಡ್ಡ ದೊರೆ. ಇವನನ್ನು ಚರಿತ್ರೆಯಲ್ಲಿ ಬಿಂಬಸಾರ ಎಂದು ಕರೆದಿದೆ… ಜೈನ ಬೌದ್ಧ ಗ್ರಂಥಗಳೆರಡರಲ್ಲೂ ಇವನ ಉಲ್ಲೇಖಕವಿದೆ.’[1] ‘ಮಹಾವೀರನ ಸಮಕಾಲೀನ ರಾಜರಲ್ಲಿ ಚೇಟಕ ಮತ್ತು ಶ್ರೇಣಿಕ ಇವರಿಬ್ಬರೂ ಪ್ರಮುಖರು., ಶ್ರೇಣಿಕ ಬಿಂಬಸಾರ ಮತ್ತು ಮಹಾವೀರರ ಸಮಕಾಲಿಕತೆ ೧೩ ವರ್ಷಗಳದ್ದು ಮಾತ್ರ. ಶ್ರೇಣಿಕನ ರಾಜಧಾನಿ ರಾಜಗೃಹದಲ್ಲಿ ಮಹಾವೀರರು ಅನೇಕ ಚಾತುರ್ಮಾಸಗಳನ್ನು ಕಳೆದರು… ಶ್ರೇಣಿಕನು ಜೈನಧರ್ಮ ಸ್ವೀಕರಿಸಿದ ಬಂಧುಗಳಿಗೆ ನೆವು ನೀಡುವ ರಾಜಾಜ್ಞೆ ಹೊರಡಿಸಿದನು’.[2] ಈ ಮುಂತಾದ ಐತಿಹಾಸಿಕ ಸಂಗತಿಗೂ ಶ್ರೇಣಿಕ ಮಹಾರಾಜನಿಗೆ ಸಂಬಂಧಪಟ್ಟಂತೆ ದೊರೆಯುತ್ತದೆ.

ಪ್ರಸ್ತುತ ‘ರಾಜಾವಳಿ ಕಥಾಸಾರ’ದ ನಾಲ್ಕನೇ ಅಧ್ಯಾಯದಲ್ಲಿ ನಿರೂಪಿತಗೊಂಡ ಈ ಕಥೆಗೆ ಲಿಖಿತ ಮಾಧ್ಯಮದಲ್ಲಿ ಒಂದು ದೊಡ್ಡ ಪರಂಪರೆಯೇ ಇರುವುದನ್ನು ಹಿಂದೆಯೇ ಉಲ್ಲೇಖಿಸಿದೆ. ಈ ಕಥೆಯನ್ನು ಗಮನಿಸಿದರೆ ಸುದೀರ್ಘವಾದ ಈ ಕಥೆ ಒಂದು ಜನಪದ ಸಂಕೀರ್ಣ ಕಥೆಯಂತೆಯೇ ಬೆಳೆದು ನಿಂತಿದೆ.

ಉಪಶ್ರೇಣಿಕ ಮಹಾರಾಜನಿಗೆ ಪಟ್ಟದರಸಿ ಇಂದ್ರಾಣಿ ಮೊದಲಾಗಿ ಅನೇಕ ಜನಹೆಂಡಂದಿರು ಇರಲಿಕ್ಕಾಗಿಯೂ ಅರಸನು ಸುಂದರಿಯಾದ ತಿಲಕಾವತಿಯನ್ನು ಮೆಚ್ಚಿ, ಆಕೆಗೆ ಹುಟ್ಟಿದ ಮಗನಿಗೇ ಪಟ್ಟಗಟ್ಟುವುದಾಗಿ ಹೇಳಿ ಮದುವೆಯಾದನು. ಈಕೆಯ ಹೊಟ್ಟೆಯಲ್ಲಿ ಒಬ್ಬ ಮಗ ಹುಟ್ಟಿ ಬೆಳೆಯಲು, ಪಟ್ಟದರಾಣಿ ಇಂದ್ರಾಣಿಯ ಮಗ ಶ್ರೇಣಿಕ ಮೊದಲಾಗಿ ತನ್ನ ಗಂಡುಮಕ್ಕಲ್ಲಿ ಯಾರು ರಾಜ್ಯವನ್ನಾಳುವರು ಎಂಬುದನ್ನು ಪರೀಕ್ಷಿಸಿ ನೋಡಲು ಬಯಸಿದನು. ಪರೀಕ್ಷೆಗಳು: ೧. ಸಕ್ಕರೆ ಕೊಡಗಳನ್ನು ಹಂಚುವುದು, ೨. ಇಬ್ಬನಿ ನೀರನ್ನು ಕೊಡ ತುಂಬಿ ತರುವುದು, ೩. ಪಾಯಸ ಉಣಲು ಕೊಟ್ಟು ನಾಯಿ ಮರಿಗಳನ್ನು ಬಿಡುವುದು ೪. ಅರಮನೆಗೆ ಬೆಂಕಿ ಹತ್ತಿದಾಗ ಗಮನಿಸುವುದು. ಈ ಎಲ್ಲ ಪರೀಕ್ಷೆಗಳಲ್ಲಿ ಶ್ರೇಣಿಕನೇ ಜಯಶಾಲಿಯಾಗುತ್ತಾನೆ. ಇಲ್ಲಿಗೆ ಒಂದು ಸರಳ ಕಥೆಯ ಪಾಠ ಪೂರ್ತಿ ಮುಗಿದಂತಾಗುತ್ತದೆ.

ಯೋಗ್ಯನನ್ನು ಸಿಂಹಾಸನಕ್ಕಾಗಿ ಆರಿಸುವ ಪರೀಕ್ಷೆಗಳು ಮತ್ತು ಇರುವ ಒಬ್ಬ ರಾಜಕುಮಾರಿಗಾಗಿ ವರನ ಶೋಧಕ್ಕಾಗಿ ನಡೆಯುವ ಶರತ್ತು ಪೂರೈಕೆ ರೂಪದ ಪರೀಕ್ಷೆಗಳು ಭಾವೀ ರಾಜನ ಶೋಧದ ಉದ್ದೇಶವನ್ನು ಹೊಮದಿರುತ್ತವೆ. ಒಂದು ಶೋಧದ ಪರೀಕ್ಷೆ ಮುಗಿದ ನಂತರ, ಪರೀಕ್ಷೆಯ ಫಲ ಗೆದ್ದವನಿಗೆ ದೊರೆಯುತ್ತದೆ.

ಈ ಬಗೆಯ ಕಥೆಗಳು-ಆರ್ನೆ-ಥಾಮ್ಸನ್ ಮಾದರಿಸೂಚಿಯಲ್ಲಿ ‘ಜಾಣತನದ ನಟನೆ ಮತ್ತು ಮಾತುಗಳು’ (ಮಾದರಿ ೯೨೦-೯೨೯ವರೆಗಿನ) ಎಂಬ ವಿಭಾಗದಲ್ಲಿ ನೋಡಲು ದೊರೆಯುತ್ತವೆ. ಶ್ರೇಣಿಕನ ಕಥೆಯಲ್ಲಿಯ ಪರೀಕ್ಷೆಗಳು ಕೂಡ ಜನಪದ ಕಥೆಗಳಲ್ಲಿ ಬರುವ ಪರೀಕ್ಷೆಗಳಿಗಿಂತ ಭಿನ್ನವಾಗಿಲ್ಲ.

ಆದರೆ ತಂದೆಯೇ ಕುಳಿತು ಯಶಸ್ವೀ ಮಗನನ್ನು ಮನೆಯಿಂದ ಹೊರದೂಡುವ ಕ್ರಿಯೆ ಜಾನಪದಕ್ಕೆ ವ್ಯತಿರಿಕ್ತವಾಗಿದೆ. ಇದು ಒಂದು ಕಥೆಯೊಂದಿಗೆ ಇನ್ನೊಂದು ಕಥೆಯನ್ನು ಬೆಸೆಯುವ ಕೊಂಡಿ ವಿವರಣೆ ಮಾತ್ರ ಆಗಿದೆ.

ಮುಂದೆ ಶ್ರೇಣಿಕನು ನಂದಿಗ್ರಾಮದ ಬ್ರಾಹ್ಮಣರ ಮಠವೊಂದರ ಮುಂದೆ ಕುಳಿತಾಗ, ಅಲ್ಲಿಗೆ ಬಂದ ಇಂದ್ರದತ್ತನೆಂಬ ಬ್ರಾಹ್ಮಣನಿಗೆ ಶ್ರೇಣಿಕನು ‘ಮಾಮ’ ಎಂದು ಕರೆಯುತ್ತಾನೆ. ತನ್ನ ಮಗಳಾದ ಆನಂದಶ್ರೀಗೆ ವರ ಹುಡುಕುತ್ತಿದ್ದ ಆತ, ಸಂತೋಷ ಪಟ್ಟು ಮನೆಗೆ ಕರೆದೊಯ್ಯುತ್ತಾನೆ. ಹೀಗೆ ಹೋಗುವಾಗ ‘ಎಲೆ ಮಾವ ನಾಲಗೆಯ ಬಂಡಿ ಏರಿ ಹೋಗೋಣ’ ಎಂದನು. ನದಿ ದಾಟುವಾಗ ಪಾದರಕ್ಷೆ ಹಾಕಿಕೊಂಡು ನಡೆದನು. ಮರದಡಿಯಲ್ಲಿ ಕೊಡೆಯನ್ನು ಹಿಡಿದು ಹೋದನು. ದಾರಿಯಲ್ಲಿಯ ಊರು ಕಂಡು ಊರೋ ಹಾಳೂರೋ ಎಂದನು. ಒಬ್ಬನು ಹೆಂಡತಿಯನ್ನು ಹೊಡೆಯುತ್ತಿರಲಾಗಿ ‘ಕಟ್ಟಿ ಹೊಡಿಯುತ್ತಿದ್ದಾನೊ ಕಟ್ಟದೆ ಹೊಡೆಯುತ್ತಿದ್ದಾನೋ’ ಎಂದನು. ಹೆಣ ಒಂದನ್ನು ಕಂಡು ‘ಇಂದು ಸತ್ತವನೋ ಅಂದೇ ಸತ್ತವನೋ’ ಎಂದನು. ಹೊಲ ಉಳುವುದನ್ನು ಕಂಡು ಇಂದು ‘ಈ ನೇಗಿಲಿಗೆ ಎಷ್ಟು ಹೆಂಟೆ’ ಎಂದೂ ಬೆಳೆದ ಹೊಲವನ್ನು ಕಂಡು ‘ಇವನು ಹಿಂದೆ ಉಂಡವನೂ ಮುಂದುಣ್ಣುವವನೋ’ ಒಂದು ಮರ ಕಂಡು ‘ಏರದ ಮರಕ್ಕೆ ಮುಳ್ಳುಗಳೆಷ್ಟು?’ ಎಂದೂ ಮಾತನಾಡಿದನು. ಬ್ರಾಹ್ಮಣನಿಗೆ ಆಶ್ಚರ್ಯವಾಗಿ, ಈತ ಮರುಳನಿರಬೇಕೆಂದು ಬಗೆದು, ಊರ ಹೊರಗೆ ಇರಿಸಿ ಮನೆಗೆ ಬಂದನು.

ಈ ಬ್ರಾಹ್ಮಣನು ಮನೆಗೆ ಹೋಗಿ ತನ್ನ ಮಗಳಾದ ಆನಂದಶ್ರೀಗೆ ಶ್ರೇಣಿಕನ ಮಾತುಗಳ ಬಗ್ಗೆ ಹೇಳುತ್ತಾನೆ. ಆಕೆ ಆತ ಮರುಳನಲ್ಲವೆಂದು, ತನ್ನ ಸಖಿಯ ಸೆಳ್ಳುಗುರಲ್ಲಿ ಗಂಧದೆಣ್ಣೆ ಕಳುಹಿ ‘ಮಿಂದು ಬಾ’ ಎಂದ್ಹೇಳು ಎನ್ನುತ್ತಾಳೆ. ಸಖಿ ಎಂದು ವಿಷಯ ತಿಳಿಸಲು, ಆತ ಮಣ್ಣಿನಲ್ಲಿ ತನ್ನ ಹಿಮ್ಮಡಿಯನ್ನು ಒತ್ತಿ, ಆ ಕುಳಿಯಲ್ಲಿ ನೀರು ತುಂಬಿ, ಎಣ್ಣೆ ಅದರಲ್ಲಿ ಬಿಟ್ಟು ಹೋಗೆನ್ನುತ್ತಾನೆ. ಆಕೆ ಹಾಗೆ ಮಾಡುತ್ತಾಳೆ. ನಿನ್ನೊಡತಿಯ ಮನೆ ಎಲ್ಲಿದೆ ಎನ್ನುವುದಕ್ಕೆ ಆಕೆ ತನ್ನ ಕವಿಯನ್ನು ಮುಟ್ಟಿಕೊಳ್ಳುತ್ತ ಹೋಗುತ್ತಾಳೆ.

ಆನಂದಶ್ರೀಯು ತಾಳೆಮರದ ಮನೆಯವಳೆಂದು ಬಗೆದು, ಹುಡುಕುತ್ತ ಬರುವಾಗ, ಆಕೆ ಗಿಡಕಡಿದು ಹಾಕಿಸಿ, ಮನೆಯ ಮುಂದೆ ಕೆಸರು ಮಾಡಿದಳು. ಮಗ್ಗುಲಲ್ಲಿ ಜಾರುಗಲ್ಲುಗಳನ್ನು ಹಾಕುವಳು. ಆತ ಕೆಸರಲ್ಲಿ ನಡೆದು ಬಂದು ಆಕೆಗೆ ಭೇಟಿಯಾಗುವನು. ಸಣ್ಣ ಚೆಂಬಿನ ನೀರೆನಲ್ಲೇ ಕಾಲು ತೊಳೆದುಕೊಂಡು ಉಳಿದ ನೀರನ್ನು ಹಿಂತಿರುಗಿಸುವನು. ಈ ಬಗೆಯ ಹಲವಾರು ಪರೀಕ್ಷೆಗಳ ನಂತರ ಆನಂದಶ್ರೀಯ ಇಚ್ಛೆಯ ಮೇರೆಗೆ ಇಬ್ಬರ ಮದುವೆ ನಡೆಯುವುದು.

ಶ್ರೇಣಿಕನು ಆನಂದಶ್ರೀಯ ತಂದೆಗೆ ಭೇಟಿಯಾಗಿ, ಅವಳನ್ನು ವರಿಸುವವರೆಗಿನ ಘಟನೆಗಳ್ಳುಳ್ಳ ಜನಪದ ಪ್ರಚಲಿತದಲ್ಲಿವೆ. ಇಡೀ ಕಥೆಯ ಸಂವಾದ ಸಾಂಕೇತಿಕ ಮಾತುಗಳ ಮೂಲಕವೇ ನಡೆಯುವುದು ಇಲ್ಲಿ ಮುಖ್ಯಸಂಗತಿ. ಇಂತಹ ಪ್ರತ್ಯೇಕ ಕಥೆಗಳ ಗುಂಪು `The clever peasant Girl’ (type 875) ಈ ಮಾದರಿಯ ಗುಂಪಿಗೆ ಸೇರಬೇಕು. ಅದು ನೇರವಾಗಿ `The clever Girl at the End of the Journey’ (type 875D) ಎಂಬ ಮಾದರಿಯ ವಿವರವೇ ಈ ಮೇಲಿನ ಘಟನೆಯಾಗಿದೆ. ಇದು ಭಾರತದಲ್ಲಿ ದೊರೆಯುವ ಪ್ರಸಿದ್ಧವಾದ ಕಥೆ ಅಷ್ಟೇ ಅಲ್ಲ ಫಿನ್‌ಲ್ಯಾಂಡ್, ಐಸ್‌ಲ್ಯಾಂಡ್‌ಗಳಲ್ಲೂ ದೊರೆಯುತ್ತದೆಂಬ ಉಲ್ಲೇಖ ಆರ್ನೆ-ಢಾಮ್ಸನ್ನರ ಮಾದರಿ ಸೂಚಿಯಲ್ಲಿ ದೊರೆಯುತ್ತದೆ.

ಶ್ರೇಣಿಕನಿಗೆ ಸಂಬಂಧಿಸಿದ ಈ ಕಥೆ ಮುಂದುವರೆಯುವುದು ಹೀಗೆ ನಂದಶ್ರೀ ಗರ್ಭವತಿಯಾಗಿ ಅಭಯಕುಮಾರನನ್ನು ಜನ್ಮವಿತ್ತಳು. ಈ ಕಡೆ ಶ್ರೇಣಿಕನ ತಂದೆ ವಚನ ಕೊಟ್ಟಂತೆ ತನ್ನ ಕಿರಿಯ ರಾಣಿಯ ಪುತ್ರ ಚಿಳಾತಿಪುತ್ರನಿಗೆ ಪಟ್ಟಗಟ್ಟಿ ಪರಲೋಕವಾಸಿಯಾದನು. ಚಿಳಾತಿಪುತ್ರ ಜನಗಳಿಗೆ ತೊಂದರೆ ಕೊಡುತ್ತಿರಲು, ಮಂತ್ರಿಮಹೋದಯರೆಲ್ಲ ಶ್ರೇಣಿಕನಲ್ಲಿಗೆ ಬಂದು ಮೊರೆಹೋದರು. ಶ್ರೇಣಿಕನು ತನ್ನ ಅನುಯಾಯಿಗಳೊಂದಿಗೆ ಏರಿಬರಲು, ಇಳಾತಿಪುತ್ರ ಸಿಂಹಾಸನ ಬಿಟ್ಟು ಓಡಿ ಹೋದನು. ಶ್ರೇಣಿಕನಿಗೆ ಪಟ್ಟಾಧಿಕಾರ ದೊರೆಯಿತು.

ಇಲ್ಲಿಯವರೆಗಿನ ಕಥೆಯನ್ನು ಗಮನಿಸಿ ಹೇಳುವುದಾದರೆ ಶ್ರೇಣಿಕನಿಗೆ ಸಂಬಂಧಿಸಿದ ಸಂಗತಿ ಮೌಖಿಕ ಪರಂಪರೆಯಲ್ಲಿ ಸಾಗಿಬರಲು, ಎರಡು ಪ್ರಮುಖವಾದ ಜನಪದ ಕಥೆಗಳು ಸಹಾಯ ಮಾಡಿವೆ ಎನಿಸುತ್ತದೆ. ಅದೊಂದು ವೇಳೆ ಇತಿಹಾಸ ಅಡಗಿದ್ದರೆ ಅದರ ಸಂಗತಿ ಇಷ್ಟು: ‘ಶ್ರೇಣಿಕನು ಉಪಶ್ರೇಣಿಕನ ಪಟ್ಟದ ರಾಣಿಯ ಮಗ. ಆದರೆ ಕಿರಿಯ ಹೆಂಡತಿಯ ಮಗನಿಗೇ ಪಟ್ಟಗಟ್ಟುವ ಸಂಗತಿ ಎದುರಾಗಿ ಶ್ರೇಣಿಕನು ಮನೆ ಬಿಡುವ ಪ್ರಸಂಗ ಬಂದಿತು. ಹೀಗೆ ಹೊರಗಾದ ಆತ ಚಲುವೆಯೂ ಜಾಣಳೂ ಅದ ಬ್ರಾಹ್ಮಣ ಕುಮಾರಿಯನ್ನು ಮದುವೆಯಾಗಿ ಅವರಲ್ಲಿಯೇ ಉಳಿದನು. ಮಕ್ಕಳನ್ನು ಪಡೆದನು. ಆದರೆ ಚಿಳಾತಿಪುತ್ರನ ಅರಾಜಕತೆಯಿಂದ ಇಡೀ ಆಡಳಿತದ ಜನರೆಲ್ಲ ಬಂದು ಕರೆಯಲು, ಚಿಳಾತಿಪುತ್ರನಲ್ಲಿಗೆ ಹೋದನು. ಆತ ಓಡಿಹೋಗಲು ತಾನೇ ಅರಸನಾದನು.

ಉಳಿದಂತೆ ಎಲ್ಲ ಘಟನೆಗಳು ಜಾನಪದ ಆಶಯಗಳು ನಿರ್ಮಿಸಿದ ಘಟನೆಗಳಾಗಿವೆ:

೧. ಪ್ರಾರಂಭದಲ್ಲಿ ನಡೆಯುವ ರಾಜಕುಮಾರರ ಜಾಣತನದ ಪರೀಕ್ಷೆ, ೨. ನಂತರ ಆನಂದಶ್ರೀಯ ತಂದೆ ಭೇಟಿಯಾದ ನಂತರ ಅವನ ಜೊತೆ, ಸಖಿಯ ಜೊತೆ ಕೊನೆಯ ಆನಂದಶ್ರೀಯ ಜೊತೆಗೆ ನಡೆದ ಸಂವಾದದ ಘಟನೆ. ಹೀಗೆ ಇಲ್ಲಿ ಎರಡು ಪ್ರಮುಖ ಕಥೆಗಳು ಜೋಡಣೆಯಾಗಿವೆ.

ಶ್ರೇಣಿಕನ ಮಗ ಅಭಯಕುಮಾರನ ವೃತ್ತಾಂತವಂತೂ ಸಂಪೂರ್ಣವಾಗಿ ಅನೇಕ ಜನಪದ ಕಥೆಗಳ ಜೋಡಣೆಯೇ ಆಗಿದೆ. ನಂತರ ಅವನ ಹೆಂಡತಿ ಮತ್ತು ಮಗ ಅಭಯಕುಮಾರರು ನಂದಿಗ್ರಾಮದಲ್ಲಿಯೇ ಉಳಿದರು. ಶ್ರೇಣಿಕನು ಈ ನಂದಿಗ್ರಾಮದಲ್ಲಿಯೇ ಉಳಿಲದರು. ಶ್ರೇಣಿಕನು ಈ ನಂದಿಗ್ರಾಮದ ಬ್ರಾಹ್ಮಣರು ಹಿಂದೆ ತನ್ನನ್ನು ನಿರಾಕರಿಸಿದ್ದರಿಂದ ಅವರನ್ನು ಕಾಡಲು ತೊಡಗಿದನು. ಒಂದು ಎಳಗರುವನ್ನು ಕಳುಹಿ, ಅದು ವರ್ಷ ಕಳೆದರೂ ದಪ್ಪವಾಗಬಾರದು, ಸೊರಗಬಾರದು ತಪ್ಪಿದರೆ ಶಿಕ್ಷೆ ಕೊಡುವೆನೆಂದು ಹೇಳಿದನು. ಮುಂದೆ ಒಂದಾದನಂತರ ಒಂದರಂತೆ ಕಪ್ಪುರದ ಬಾವಿ ತರಲು, ಆನೆಯ ತೂಕ ಮಾಡಲು, ಒಂದೇ ಕೋಳಿಯನ್ನು ಕಾದಿಸಲು ಮುಂತಾಗಿ ಹೇಳುತ್ತಾನೆ. ಇವಕ್ಕೆಲ್ಲ ಅಭಯಕುಮಾರನು ಸೂಕ್ತ ಉತ್ತರದ ವ್ಯವಸ್ಥೆ ಮಾಡುತ್ತಾನೆ. ಕೊನೆಗೆ ಅರಸ ಮಗನನ್ನು ಕರೆಸಿಕೊಂಡು, ಮಗನಿಗೆ ಪಟ್ಟಗಟ್ಟುವನು.

ಈ ಘಟನೆಗಳನ್ನು ಹೊತ್ತು ಪ್ರಸಿದ್ಧ ಮಾದರಿ `The son of the (Solomon) and of the smith’ (type 920) ಎಂದಿದೆ. ಅಭಯಕುಮಾರನ ವೃತ್ತಾಂತ ಈ ಕಥಾಮಾದರಿಗೆ ತಕ್ಕುದಾಗಲು ಶ್ರೇಣಿಕನು ತಾನೇ ಹೋಗಿ ಅರಸನಾದರೂ ತನ್ನ ಹೆಂಡತಿ ಮತ್ತು ಮಗನನ್ನು ನಂದಿಗ್ರಾಮದಲ್ಲಿಯೇ ಬಿಟ್ಟು ಹೋದನು ಎಂಬ ವಿವರಣೆ ಕಾರಣವಾಗುತ್ತದೆ. ಇದು ಈ ಕಥೆಯ ಬೆಳವಣಿಗೆ ಎಂಬಂತೆ ಬೆಸೆಯುವ ಜೋಡಣೆಯಾಗಿದೆ. ಅಭಯಕುಮಾರನ ಜಾಣತನ ಹೇಳುವ ಘಟನೆಹೊತ್ತ ಕಥೆಗಳಂತೂ ಜಗತ್ತಿನ ತುಂಬ ದೊರೆಯುತ್ತವೆ.

ಮತ್ತೆ ಅಭಯಕುಮಾರನು ಅರಸನಾದ ನಂತರದ ಅವನ ನ್ಯಾಯನಿರ್ಣಯದ ಚಾತುರ್ಯವನ್ನು ಹೇಳುವ ಘಟನೆಗಳಂತೂ ಪ್ರತ್ಯೇಕ ಜನಪದ ಕಥೆಗಳಾಗಿಯೇ ನಮ್ಮಲ್ಲಿ ಪ್ರಚಲಿತದಲ್ಲಿವೆ: ೧. ಇಬ್ಬರು ತಾಯಂದಿರಲ್ಲಿ ಕೂಸು ಯಾರದು ಎಂದು ನಿರ್ಧರಿಸುವ (೯೨೬), ಒಂದೇ ರೂಪದವರಲ್ಲಿ ನಿಜವಾದ ಗಂಡನಾರೆಂದು ನಿರ್ಧರಿಸುವ (೯೨೬ ಎ) ಇನ್ನೂ ಮುಂತಾದ ಇಂತಹ ಕಥೆಗಳು ಭಾರತದಲ್ಲಷ್ಟೇ ಅಲ್ಲ. ಇಟಲಿ, ಸ್ಪೇನ್, ಅಮೇರಿಕಾ ಮುಂತಾದ ದೇಶಗಳಲ್ಲಿ ದೊರೆಯುತ್ತವೆ.

ಹೀಗಾಗಿ ಜನಪದ ಕಥೆಗಳ ನಡುವೆಯೂ ಚಾರಿತ್ರಿಕ ಎಳೆಗಳು ಸೇರಿಕೊಂಡಿವೆ ಎಂಬುದು ಗಮನಾರ್ಹ ಸಂಗತಿ. ದೇವಚಂದ್ರನು ತನ್ನ ‘ರಾಜಾವಳಿ ಕಥಾಸಾರ’ದ ಮೂಲಕ ಜನಪದ ಕಥೆಗಳನ್ನು ಲಿಖಿತ ಮಾಧ್ಯಮದ ಮೂಲಕ ಪ್ರಸಾರಗೊಳಿಸುವ ಜೈನಕವಿಗಳ ಪರಂಪರೆಯನ್ನು ಮುಂದುವರೆಸಿದ್ದಲ್ಲದೆ, ಮೌಖಿಕ ಪರಂಪರೆಯಲ್ಲಿ ಉಳಿದುಬಂದ ಅನೇಕ ಸಂಗತಿಗಳನ್ನು ದಾಖಲಿಸುವ ಮೂಲಕ ಮಹತ್ವದ ಕೆಲಸ ಮಾಡಿದ್ದಾನೆಂದೇ ಹೇಳಬಹುದಾಗಿದೆ.

* * *

 

[1]ಜೈನ ಕಥಾಕೋಶ, ಸಂ. ಡಾ.ಹಂ.ಪ.ನಾಗರಾಜಯ್ಯ,ಪು.೪೦

[2]ಜೈನ ಕಥಾಕೋಶ, ಸಂ. ಡಾ.ಹಂ.ಪ.ನಾಗರಾಜಯ್ಯ,ಪು.೪೦