ಹೊಲೆಯರು ಹನ್ನೆರಡು ಬಣ್ಣದವರು, ಎಲ್ಲರಿಗಿಂತ ಶ್ರೇಷ್ಟರು ಎಂಬುದಕ್ಕೆ ಕಾರಣಗಳೆನ್ನುವಂತೆ ರಾಜಾವಳಿ ಕಥೆಯ೯ನೇ ಮತ್ತು ೧೧ನೇ ಅಧಿಕಾರದಲ್ಲಿ ಎರಡು ಉಲ್ಲೇಖಗಳಿವೆ. ಕಾಳಿಂಗರಾಯನೆಂಬ ಉಪ್ಪಲಿಗ ಅರಸು ಬ್ರಾಹ್ಮಣರಿಗೆ ಒಮ್ಮೆ ಸುವರ್ಣಮಯ ಗೋದಾನ ಮಾಡುತ್ತಾನೆ. ಬ್ರಾಹ್ಮಣರು ಹಂಚಿಕೊಳ್ಳುತ್ತಾರೆ. ಅದರ ಬೆಲೆ ಹನ್ನೆರಡು ಸಾವಿರ ಹೊನ್ನಾದುದರಿಂದ ಹೊಲೆಯರು ಹನ್ನೆರಡುಸಾವಿರದವರು, ಹನ್ನೆರಡು ಬಣ್ಣಕ್ಕೆ ಸಲ್ಲುವವರು. ಅವರು ಬಿರುದು, ಬಂಕುಳ್ಳವರು ಎಂದು ಗುರುತಿಸಿಕೊಳ್ಳುತ್ತಾರೆ ಎಂದು ರಾಜಾವಳಿ ಕಥೆ ಉಲ್ಲೇಖಿಸುತ್ತದೆ.

ಬಸವಣ್ಣನ ಸೃಷ್ಟಿಯಲ್ಲಿ ‘ಹೊನ್ನ’ ನೆಂಬುವವನು ಅತಿ ಶ್ರೇಷ್ಠನಾದುದರಿಂದ ಬಣ್ಣದಲ್ಲಿ ಹೊಲೆಯನೆ ದೊಡ್ಡವನಾದನು ಎಂದು ಉಲ್ಲೇಖವಿದೆ. ಈ ಎರಡು ಉಲ್ಲೇಖಗಳನ್ನು ಗಮನಿಸಿದರೆ ಹೊಲೆ, ಹೊಲೆಯ ಎಂಬುದು ಜಾತಿಯ ಸೂಚಕ ಪದವಲ್ಲ ಎಂಬಂತೆ ತೋರುತ್ತದೆ. ಹೊಲೆ ಎಂದರೆ ಹೊಲಸು, ಹೊಲೆಯ ಎಂದರೆ ಅಸ್ಪೃಶ್ಯ, ಕೀಳಾದವನು, ಮುಟ್ಟಿಸಿಕೊಳ್ಳಲಾಗದನು ಎಂಬ ಹೀನಾರ್ಥಗಳು ಇತ್ತೀಚೆಗೆ ಆರೋಪಗೊಂಡಿರುವುದು ಎಂಬುದು ಸೃಷ್ಟವಾಗುತ್ತದೆ. ಕಥಾಸಾರದಲ್ಲಿ ಉಲ್ಲೇಖವಾಗುವ ಈ ಘಟನೆಗಳು ಚಾರಿತ್ರಿಕ ಇರಬಹುದೆ? ಈ ಘಟನೆಗಳ ನಂತರ ‘ಹೊಲೆಯ’ ಪದ ಚಾಲ್ತಿಗೆ ಬಂದಿರಬಹುದೆ? ಹೊನ್ನ, ಎಂದರೆ ಶ್ರೇಷ್ಠ, ಹೊಲೆಯ ಎಂದರೆ ದೊಡ್ಡವನು, ಎಂಬುದು ಹೊನ್ನ ಅಥವಾ ಹೊನ್ನಯ್ಯನೆಂಬ ಶರಣನು ಹೊಂದಿದ್ದ ಸ್ಥಾನಮಾನಗಳಿಂದ ಈಪದ, ಪರಿಕಲ್ಪನೆ ಚಾಲ್ತಿಗೆ ಬಂದಿರಬಹುದೆ?

‘ರಾಜಾವಳಿ ಕಥಾಸಾರ’ ಅತ್ಯಂತ ಮಹತ್ವದ ಕೃತಿ ಯಾಕೆಂದರೆ ಬೇರಾವ ಕೃತಿಯು ಒಳಗೊಳ್ಳದ ನಿರ್ಲಕ್ಷಿತ ಜನಸಮುದಾಯಗಳ ಕುರಿತು ಈ ಕೃತಿ ಯಾಕೆಂದರೆ ಬೇರಾವಕೃತಿಯು ಒಳಗೊಳ್ಳದ ನಿರ್ಲಕ್ಷಿತ ಜನಸಮುದಾಯಗಳ ಕುರಿತು ಈ ಕೃತಿ ಮಾತನಾಡುತ್ತದೆ. ಚರಿತ್ರೆಯ ಪುಟಗಳಲ್ಲಿ ಎಲ್ಲೂ ಕಾಣಿಸದ ಹೊಲೆಯ, ಮಾದಿಗ, ಕುರುಬ, ಕುಂಬಾರ, ಉಪ್ಪಲಿಗ, ತೊರೆಯ, ಮಡಿವಾಳ, ವಡ್ಡಕೆಲಸಿ ಮೊದಲಾದ ಜನಸಮುದಾಯಗಳ ಜೀವನ, ಸಂಸ್ಕೃತಿ, ರಾಜಕೀಯ, ಜಾಣಪದಗಳ ಬಗೆಗೆ ಕಥಾಸಾರ ವಿವರಿಸುತ್ತದೆ. ಕೃತಿಯ ಪ್ರಾಮುಖ್ಯತೆಗೆ ಇದೇ ಮುಖ್ಯಕಾರಣ. ಕನ್ನಡದ ಬಹುಮುಖ್ಯ ಜನಪದ ಮಹಾಕಾವ್ಯ ನಾಯಕರಾದ ಮಾದೇಶ್ವರ, ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿಯವರ ಬಗೆಗೆ, ಅವರು ನೆಲೆಸಿದ ಕೇಂದ್ರಗಳ ಬಗೆಗೆ ಕಥಾಸಾರದ ೧೦ನೇ ಅಧಿಕಾರದಲ್ಲಿ ಉಲ್ಲೇಖಿಸಲಾಗುತ್ತದೆ.

ಹದಿನಾಡು (ಯಳಂದೂರು) ಮೊದಲಾದ ಆರುನಾಡುಗಳನ್ನು ಅಭಿಚಂದ್ರ ಆಳುತ್ತಿದ್ದಾಗ, ಕುಂತೂರು ಮಠದಲ್ಲಿ ನಂಜಯ್ಯ ಎಂಬ ಚೋಳಿಗೆ ಒಡೆಯನಿರುತ್ತಾನೆ. ಬಡಗಸೀಮೆಯಿಂದ (ಉತ್ತರದೇಶ) ಬರುವ ಮಾದಿಗರ ಹುಡುಗ ಆ ಮಠ ಸೇರುತ್ತಾನೆ. ಅವನು ರಾಜ, ಪ್ರಧಾನಿ ಮಂತ್ರಿಗಳ ಸ್ನೇಹ ಸಂಪಾದಿಸಿ ರಾಜನನ್ನೇ ಕೊಂದು ಜೋಳಿಗೆ ಒಡೆಯರಿಗೆ ಪಟ್ಟಕಟ್ಟುತ್ತಾನೆ. ಕ್ರಮೇಣ ತಾನೇ ಅರಸನಾಗಿ ‘ಮಾದರ’ನೆಂದು ಪ್ರಸಿದ್ಧನಾಗುತ್ತಾನೆ. ಗುಡ್ಡನಾಗಿ, ಮಂತ್ರಶಕ್ತಿ ತಿಳಿದು, ತನ್ನ ಹೆಸರಿನಲ್ಲಿ ಕಟ್ಟೆಯೊಂದನ್ನು ಕಟ್ಟಿಸುವಾಗ ಮೃತನಾಗುತ್ತಾನೆ. (ಕೊಲ್ಲಲ್ಪಡುತ್ತಾನೆ) ಸರಗೂರ ಉಪ್ಪಲಿಗರು ಅವನ ಗುಡ್ಡರಾಗಿ, ಏಳುಮಲೆಯಲ್ಲಿ ಅವನಿಗೆ ಗುಡಿ ಕಟ್ಟಿಸಿ ಮಾದೇಶ್ವನೆಂದು ಹೆಸರಿಡುತ್ತಾನೆ. ಮುಂದೆ ಈತನು ಜಗತ್ಪ್ರಸಿದ್ಧನಾದನೆಂದು ಕಥಾಸಾರದ ಹತ್ತನೇ ಅಧಿಕಾರದಲ್ಲಿ ಬರುತ್ತದೆ.

ಮಾದಿಗರ ಹುಡುಗನೊಬ್ಬ ತನ್ನ ಶಕ್ತಿಸಾಮರ್ಥ್ಯದಿಂದ, ಜನಕಲ್ಯಾಣ ಕಾರ್ಯದಿಂದ ಜನಪದ ದೇವನಾಗಿ ಕರ್ನಾಟಕದಲ್ಲಿ ಒಂದು ದೊಡ್ಡ ಪರಂಪರೆಯನ್ನು ಹುಟ್ಟುಹಾಕುತ್ತಾನೆ. ಎಲ್ಲಾ ಜಾತಿ ಜನಸಮುದಾಯಗಳನ್ನು ಸಂಘಟಿಸಿ ಜಾತ್ಯಾತೀತ ‘ಒಕ್ಕಲು ಸಂಸ್ಕೃತಿ’ಯನ್ನು ಕಟ್ಟುತ್ತಾನೆ.

ಇದೇ ೧೦ನೇ ಅಧಿಕಾರದಲ್ಲಿ ಮಂಟೇಸ್ವಾಮಿ ಪರಂಪರೆ ಬಗೆಗೂ ಉಲ್ಲೇಖವಿದೆ. ಕಪ್ಪಡಿ ಸಂಗಮೇಶ್ವರನೆಂದು ಪೂರ್ವ ಬಸವಣ್ಣ ಉಳುಮೆ ಮನೆಹೊಕ್ಕು ಏಲೆರಾಜಯ್ಯ, ಸಂಗಯ್ಯ, ರುದ್ರದೇವರು ಜೀವಸಹಿತವಾಗಿ ಕಪ್ಪಡದೊಳೊರಗಿ ಪರವಶವಾದರು. ಅಲ್ಲಿ ಗದ್ದುಗೆಯಿಟ್ಟು ಪೂಜಿಸುತ್ತಾ ಬಂದ ಪ್ರಕಾರ ಬೊಪ್ಪ ಗವುಡನಪುರ ಮೊದಲಾದ ಗ್ರಾಮಾಂತರಗಳಲ್ಲಿ ಮಂಟೇದುದ್ದಯ್ಯ, ಸಿದ್ಧಯ್ಯ, ರಾಜಯ್ಯ ಎಂಬಿವರು ಗದ್ದುಗೆಯಿಟ್ಟು ಪೂಜಿಸುತ್ತ ಹರಕೆ ಪ್ರಾರ್ಥನೆ ಮಾಡುತ್ತಾ ಬಂದರು. ಮತ್ತೊಬ್ಬ ಸಿದ್ಧಯ್ಯ ಹೊಣೆಯಾಗಿ ಸತ್ತು ಗಿಡದ ಮಧ್ಯದಲ್ಲಿ ವ್ಯಂತರದೇವನಾಗಿ ಬಾಧಿಸುತ್ತಿದ್ದನು. ಇದರ ನಿವಾರಣೆಗಾಗಿ ಅಲ್ಲಿ ಗುಡಿಕಟ್ಟಿ ಹೊಣೆಗಾರ ಸಿದ್ಧೇಶ್ವರನೆಂದು ಪೂಜಿಸಿದರು. ಎಂದು ವಿವರಣೆ ಇದೆ. ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ಧಪ್ಪಾಜಿ, ಫಲಾರದಯ್ಯ, ನಿಂಗಯ್ಯ, ಚನ್ನಯ್ಯ ೧೫-೧೬ನೇ ಶತಮಾನದ ಕಾಲಜ್ಞಾನ ವಚನಕಾರರು. ಮಂಟೇಸ್ವಾಮಿ ಗುಲ್ಬರ್ಗ ಜಿಲ್ಲೆ ಸುರಪುರ ತಾ., ಕೊಡೇಕಲ್ಲ ಬಸವಣ್ಣನವರಿಂದ ‘ಸಿದ್ಧಿ’ ಪಡೆದ ದಕ್ಷಿಣ ಮೂಲದ ಅವರ ಶಿಷ್ಯ. ರಾಚಪ್ಪಾಜಿ ಕೊಡೇಕಲ್ಲ ಬಸವಣ್ಣನ ಮಗ, ಮಂಟೇಸ್ವಾಮಿಯ ಶಿಷ್ಯ, ಸಿದ್ಧಪ್ಪಾಜಿ ಹಲಗೂರು ಪಂಚಾಳನಾಗಿದ್ದು ಮಂಟೇಸ್ವಾಮಿಗಳಿಂದ ಸಿದ್ದಿಪಡೆದು ಸಿದ್ಧಪ್ಪಾಜಿಯಾದ. ರಾಚಪ್ಪಾಜಿ ಕಪ್ಪಡಿಯಲ್ಲು, ಮಂಟೇಸ್ವಾಮಿ ಬೊಪ್ಪೇಗೌಡನ ಪುರದಲ್ಲೂ ಸಿದ್ಧಪ್ಪಾಜಿ ಚಿಕ್ಕಲ್ಲೂರಲ್ಲೂ, ನಿಂಗಯ್ಯಚನ್ನಯ್ಯ ಕುರುಬನ ಕಟ್ಟೆಯಲ್ಲಿ ನೆಲೆಸುತ್ತಾರೆ. ಇವರೇ ದೇವಚಂದ್ರ ಉಲ್ಲೇಖಿಸುವ ರಾಜಯ್ಯ, ಮಂಟೇದುದ್ದಯ್ಯ, ಸಿದ್ಧಯ್ಯ, ಮೊದಲಾದವರು. ಮಂಟೇಸ್ವಾಮಿ ಮತ್ತವರ ಶಿಷ್ಯರು ಕುಲೇಳು ಹದಿನೆಂಟು ಜಾತಿಗಳನ್ನು ಒಗ್ಗೂಡಿಸಿ ಜಾತಿ, ಮತ ಪಂಥ, ಪಂಗಡಗಳನ್ನು ಮೀರಿ ಮಾನವತೆ, ಸಮಾನತೆ, ಐಕ್ಯತೆಗೆ ಹೆಸರಾದ ನೀಲಗಾರ ಪರಂಪರೆಯನ್ನು ಕಟ್ಟುತ್ತಾರೆ.

ಈ ರೀತಿ ನಿರ್ಲಕ್ಷಿತರಾದ ಇಂತಹ ಹೊಲೆಯ ಮಾದಿಗ ಉಪ್ಪಲಿಗರ ಸಾಂಸ್ಕೃತಿಕ ಚರಿತ್ರೆಯನ್ನು ದಾಖಲಿಸುವುದರಿಂದಲೇ ನನಗೆ ರಾಜಾವಳಿ ಕಥಾಸಾರ ಅತ್ಯಂತ ಮಹತ್ವದ ಕೃತಿಯಾಗಿಯು, ಚರಿತ್ರಾಹೀನರ ಚಾರಿತ್ರಿಕ ಪಠ್ಯವಾಗಿಯು ಕಾಣುತ್ತದೆ.

ಮೈಸೂರಿಗೆ ಸೇರಿದ ಮುವತ್ತುಮೂರು ಹಳ್ಳೀಗಳನ್ನು ಕಾರುಗಳ್ಳಿಯ ರಾಜರು ಆಳುತ್ತಿದ್ದು, ಆ ವಂಶದಲ್ಲಿ ಹುಟ್ಟಿದ ಹೆಣ್ಣು ಮಗುವನ್ನು ತೊರೆಯ ನಾಯಕನು ಮದುವೆಯಾಗಿ, ಮೈಸೂರು ಒಡೆಯರ ಅಧಿಕಾರ ಕಬಳಿಸುವ ಸಂಚು ಮಾಡಲಾಗುತ್ತದೆ. ಅಷ್ಟರಲ್ಲಿ ವಿಜಯನಗರದಿಂದ ಬಂದ ಇಬ್ಬರು ಅರಸು ಮಕ್ಕಳು ನಾಯಕರ ತಂತ್ರವನ್ನು ವಿಫಲಗೊಳಿಸಿ ಮೈಸೂರು ಒಡೆಯರನ್ನು ರಕ್ಷಿಸಿದರು ಎಂಬುದಾಗಿ ೧೦ನೇ ಅಧಿಕಾರದಲ್ಲಿ ಮತ್ತೊಂದು ಉಲ್ಲೇಖ ಬರುತ್ತದೆ. ಈ ಘಟನೆ ಮಂಟೇಸ್ವಾಮಿ, ಮೈಸೂರು ಒಡೆಯ, ಕಾರುಗಳ್ಳಿ ಮಾರನಾಯಕರ ಚರಿತ್ರೆಗೆ ಸಂಬಂಧಿಸಿದ್ದಾಗಿದೆ. ಮಂಟೇಸ್ವಾಮಿ ರಾಚಪ್ಪಾಜಿಯವರು ಕೊಡೇಕಲ್ಲಿನಿಂದ ವಿಜಯನಗರ ಹಾದು ಮೈಸೂರಿಗೆ ಬರುತ್ತಾರೆ. ಮೈಸೂರು ಒಡೆಯರ ರಾಜಪುತ್ರಿಯನ್ನು ಮದುವೆಯಾಗಿ, ಕಾರುಗಳ್ಳಿ ಮಾರನಾಯಕ ಅಧಿಕಾರವನ್ನು ಕಬಳಿಸಲು ಪ್ರಯತ್ನಿಸುವಾಗ ಮಂಟೇಸ್ವಾಮಿ, ರಾಚಪ್ಪಾಜಿ ಅವನನ್ನು ಕೊಂದು ಮೈಸೂರು ಒಡೆಯರ ಅಧಿಕಾರ ಉಳಿಸಿ ಒಡೆಯರ ಒಕ್ಕಲು ಪಡೆದರು ಎಂಬುದೇ ಕಥಾಸಾರದ ಉಲ್ಲೇಖವಾಗಿದೆ. ಈ ಘಟನೆಯನ್ನೇ ನೀಲಗಾರರು ‘ಮೈಸೂರು ಮಾರಾಣಿ ಮನೆಯ ಮೊದಲ ಭಿಕ್ಷೆ’, ‘ಅರಸಿ ಅರಮನೆಗೆ ಕಂಡಾಯ ಕೊಟ್ಟಸಾಲು’, ‘ಮೈಸೂರು ಮಾರಾಜರ ಒಕ್ಕಲು ಪಡೆದ ಸಾಲು’ ಎಂಬುದಾಗಿ ಮಂಟೇಸ್ವಾಮಿ ಕಾವ್ಯದಲ್ಲಿ ಹಾಡುತ್ತಾರೆ.

ಉಮ್ಮತ್ತೂರಲ್ಲಿ ಭುಜಂಗರಾಯನು ಆಳುತ್ತಿರಲು, ರಾಯರ ಅಪ್ಪಾಜಿ ಎಂಬ ಬ್ರಾಹ್ಮಣ ೩೩ ಹಳ್ಳಿಯರ ಹುಡುಗ ಬಂದು ತನ್ನ ಬುದ್ಧಿ ಚಾತುರ್ಯ, ವಿನಯ, ವಿವೇಕಗಳ ಪ್ರಕಟಿಸಿ, ಅಪ್ಪಾಜಿ ದೀಕ್ಷಿತ ಅವನ ಬುದ್ಧಿಗೆ ಮೆಚ್ಚಿ ಅವನಿಗೆ ಮಗಳನ್ನು ಮದುವೆಮಾಡಿಕೊಟ್ಟನು. ಅವನಿಗೆ ‘ಸೋಮಯಾಜಿ’ ಎಂದು ಹೆಸರಿಟ್ಟು ಅಗ್ರಹಾರದಲ್ಲಿ ಮಧ್ಯ ಇರಿಸಿ ಪೂಜ್ಯನನ್ನಾಗಿ ಮಾಡಿದನು. ಕಪಿನೀತೀರದಲ್ಲಿ ‘ಗರಳಪುರಿ’ ಎಂಬ ಪುರವನ್ನು ಉದ್ಧರಿಸಿದನು ಎಂದು ಕಥಾಸಾರದ ೧೦ನೇ ಅಧಿಕಾರದಲ್ಲಿ ಉಲ್ಲೇಖವಿದೆ.

ಈ ಹೊಲೆಯರ ಹುಡುಗ ಯಾರು? ಕಥಾಸಾರದ ಈ ಘಟನೆ ಹುಟ್ಟುವ ಭೌಗೋಳಿಕ ಪರಿಸರವನ್ನು ನೋಡಿದರೆ ಇದು ನಂಜನಗೂಡ ನಂಜುಂಡನ ಕುರಿತಾದ ವಿವರ ವಿರಬಹುದೆ?

ಮಲೆಮಾದೇಶ್ವರ ಮಾದಿಗರ ಹುಡುಗ ನೆಂಬುದು ಸ್ಪಷ್ಟವಾಗುವಂತೆ ಮಂಟೇಸ್ವಾಮಿ ದಲಿತ ಮೂಲದವರೆ? ಎಂಬುದು ಸ್ಪಷ್ಟವಾಗುವುದಿಲ್ಲ. ಮಂಟೇಸ್ವಾಮಿ ಸಂಪ್ರದಾಯ ಅಥನ ನೀಲಗಾರ ಪರಂಪರೆ ದಲಿತ ಬಹುಜನ ಪರಂಪರೆ  ಎಂಬುದು ಸರಿ ಇದ್ದರು, ಮಂಟೇಸ್ವಾಮಿ ದಲಿತ ಮೂಲದವರು ಎಂಬುದಕ್ಕೆ ರಾಜಾವಳಿ ಕತೆ ಸ್ಪಷ್ಟತೆ ನೀಡಲಾರದು. ಮಂಟೇಸ್ವಾಮಿ ತನ್ನ (ದಲಿತ) ಶಿಷ್ಯರಾದ ನಿಂಗಯ್ಯ ಚನ್ನಯ್ಯರನ್ನು ಮೆರೆಯುವ ದೇವರು ಮಾಡಿ, ತಾನು ಮರೆತು ಲೋಕದಲ್ಲಿ ಮರೆಯಾಗುವುದಾಗಿ ನೀಲಗಾರರು ಕಾವ್ಯದಲ್ಲಿ ಉಲ್ಲೇಖಿಸುತ್ತಾರೆ. ಹಾಗೇ ಕೊಡೇಕಲ್ಲಿನಲ್ಲಿ ದೊರೆತಿರುವ ಮಂಟೇಸ್ವಾಮಿ ವಚನಗಳನ್ನೂ ಅಧ್ಯಯನ ಮಾಡಿದರೆ, ಮಂಟೇಸ್ವಾಮಿ ನೆಲೆಗೊಂಡದ್ದು, ಮತ್ತು ಅವರಚಳುವಳಿಯನ್ನು ನೋಡಿದರೆ ಅವರು ಬಲಗೈನವರೇ ಎಂಬ ಪ್ರಶ್ನೆ ನನ್ನನ್ನು ಕಾಡುತ್ತದೆ.

ಈ ಪ್ರಶ್ನೆಗೆ ಕಥಾಸಾರ ಮೌನವಾಗುವುದು ಕುತೂಹಲ ಹುಟ್ಟಿಸುತ್ತದೆ. ಈ ಕುರಿತು ಪ್ರತ್ಯೇಕ ಚರ್ಚೆ ಆಗಬೇಕು. ಹಳ್ಳಿ ಹಳ್ಳಿಗಳಲ್ಲಿ ಮಾರಿದೇವತೆ, ಗ್ರಾಮದೇವತೆಗಳಿದ್ದು ಹಬ್ಬಳನ್ನು ಮಾಡುವ ನಮ್ಮ ಗ್ರಾಮೀಣ ಸಂಸ್ಕೃತಿಯ ಹುಟ್ಟು, ಬೆಳವಣಿಗೆಗೆ ಸಂಬಂಧಿಸಿದ ಉಲ್ಲೇಖಗಳನ್ನು ಕಥಾಸಾರದ ೧೦ನೇ ಅಧಿಕಾರದಲ್ಲಿ ಕಾಣಬಹುದು. ಉಮ್ಮತ್ತೂರ ಭುಜಂಗರಾಯನ ಮಗ ದೇವರಾಯನು ಸೂಳೆಗಾರನಾಗಿ ‘ವಸಂತಿ’ ಎಂಬ ಸೂಳೆಯ ಸಂಗ ಮಾಡಿ ಹುಣ್ಣು ಹತ್ತಿ ಸಾಯುತ್ತಾನೆ. ಆ ಸೂಲೆಯನ್ನು ಹಾರೆಯಿಂದ ಕೊಲ್ಲಲು ಆಕೆ ‘ಮಾರಿ’ಯಾಗಿ ಊರ ಜನರಿಗೆ ಉರಿಜ್ವಾಲೆಕೊಡುತ್ತಾ ಕಾಡುತ್ತಿದ್ದಳು. ತನ್ನನ್ನು ಪೂಜಿಸಿ ಸುಡುಗಾಡಕೊಳ್ಳಿಯಿಂದ ಬೆಂದ ಅನ್ನವನ್ನು ದಾಸವಾಳದ ಹೂವಿನಿಂದ ಅರ್ಪಿಸಿದರೆ ಶಾಂತವಾಗುವುದಾಗಿ ಹೇಳುತ್ತಾಳೆ. ಅದರಂತೆ ಗುಡಿಕಟ್ಟಿಸಿ ಹರಿಕಾತಿ (ಉರಿಕಾತಿ) ಎಂಬ ಹೆಸರಿನಿಂದ ಅವಳನ್ನು ಸ್ಥಾಪಿಸಿ ಪೂಜಿಸಿ ಪ್ರತೀ ವರ್ಷ ಹಬ್ಬ, ಜಾತ್ರ ಮಾಡಲಾಗುತ್ತದೆ.

ಅನಂತರ ಉಮ್ಮತ್ತೂರ ಭುಜಂಗರಾಯ ಮೃತನಾಗುತ್ತಾನೆ. ಆ ಊರ ಮಧ್ಯದಲ್ಲಿ ನಿಕ್ಷೇಪಮಾಡಿ ಅಲ್ಲಿ ಗುಡಿ ನಿರ್ಮಿಸಿ ಭುಜಂಗೇಶ್ವರನೆಂದು ಸ್ಥಾಪಿಸಿ ಪೂಜಿಸಲಾಗುತ್ತದೆ. ತೆಳ್ಳನೂರ ವೀರಲಕ್ಷ್ಮಿ ಎಂಬುವವಳು ಕಿಚ್ಚಿನಿಂದ ಸತ್ತು ‘ಉರಿಕಾತಿ’ಯಾಗಿ ಹಬ್ಬ ಮಾಡಿಸಿಕೊಳ್ಳುತ್ತಾಳೆ. ಹೀಗೆ ಕಥಾಸಾರದಲ್ಲಿ ಉಲ್ಲೇಖಗಳಿವೆ. ಇವುಗಳ ಪ್ರಕಾರ ಪಾಳೇಗಾರನಾಗಿದ್ದ ಭುಜಂಗರಾಯ, ಸೂಳೆ ವಸಂತಿ, ವೀರಲಕ್ಷ್ಮಿ ಇವರುಗಳು ಗ್ರಾಮದೇವತೆಗಳಾಗಿ ಇವರಿಗೆ ಮಾಡುವ ವಾರ್ಷಿಕ ಆಚರಣೆಗಳು ಮಾರಿಹಬ್ಬಗಳಾಗಿ, ಜಾತ್ರೆಗಳಾಗಿರುವುದು ಸ್ಪಷ್ಟವಾಗುತ್ತವೆ.

ಆ ಕಾಲದಲ್ಲಿ ನರಮಾರಿ ಗೋಮಾರಿ ಮುಂತಾದ ಮಾರಿ ಹುಟ್ಟಿ ಜನರೆಲ್ಲಾಲಯವಾಗುತ್ತಿದ್ದರು. ಅದಕ್ಕಾಗಿ ಗ್ರಾಮಾನುಗ್ರಾಮದಲ್ಲಿ ಹಿಂದೆ ಕಾಳಗದಲ್ಲಿ ಸತ್ತ ವೀರರನ್ನು ಮತ್ತು ಕಿಚ್ಚೂ ಹಾಯ್ದು ಸತ್ತ ಸ್ತ್ರೀಯರನ್ನು ಶಿಲೆಯಲ್ಲಿ ಬರೆಯಿಸಿದರು. ಅವುಗಳಿಗೆ ವೀರಜಡೆ, ನಿಂಬೆಹಣ್ಣು, ಒಕ್ಕಲು ಪ್ರಾತಾಪಾದಿಗಳನ್ನು ಕಲ್ಪಿಸಿ ಬರೆಯಿಸಿ ಗ್ರಾಮ ಗ್ರಾಂದ ಹೆಬ್ಬಾಗಿಲ್ಲಲಿ ಶಿಲಾಪ್ರತಿಷ್ಟೆ ಮಾಡಿಸಿದರು. ಅವುಗಳನ್ನು ಪೂಜಿಸಿ ಹಬ್ಬವನ್ನು ಮಾಡುತ್ತಾ ಬಂದರಲ್ಲದೆ ಗ್ರಾಮಗಳ ಮುಂದೆ ಒಂದೊಂದು ಗುಡಿಕಟ್ಟಿಸಿ ಕಾಳದೇವರೆಂದು ಪ್ರತಿಷ್ಠೆಮಾಡಿ ಪೂಜಿಸಿ ಕೊಂಡಗಳನ್ನು ಮಾಡುತ್ತಾ ಬಂದರೆಂದು ದೇವಚಂದ್ರ ಗ್ರಾಮದೇವತೆಗಳ ಬಗ್ಗೆ ಸ್ಪಷ್ಟವಾಗಿ ಬರೆದಿದ್ದಾನೆ. ಮಾರಮ್ಮ, ಗ್ರಾಮದೇವತೆ ಹಬ್ಬಗಳ ಹುಟ್ಟು ಬೆಳವಣಿಗೆ ಬಗ್ಗೆ ಈ ಮೊದಲೇ ಇದ್ದ ನನ್ನ ಚಿಂತನೆ, ಆಲೋಚನೆಗಳಿಗೆ ರಾಜಾವಳಿ ಕಥೆಯ ಓದು ಸ್ಪಷ್ಟ ಆಧಾರಗಳನ್ನು ನೀಡಿತು.

ಭಗೀರಥನು ಕೈಲಾಸದಿಂದ ಗಂಗೆಯನ್ನು ಭೂಲೋಕಕ್ಕೆ ಕರೆತಂದ ಪುರಾಣ ಕಥಾಸಾರದ ೨ನೇ ಅಧಿಕಾರದಲ್ಲಿ ಉಲ್ಲೇಖವಾಗುತ್ತದೆ. ವಿಜಯಸಾಗರ ರಾಜನ ಮಗ ಸಗರರಾಜ, ಇವನಿಗೆ ಭಗೀರಥ ಮತ್ತು ಅರವತ್ತು ಸಾವಿರ ಮಕ್ಕಳಾದರು. ಭಗೀರಥ ಕೈಲಾಸ ಪರ್ವತವನ್ನು ಎಂಟು ಕಾಲುವೆಯಾಗಿ ಮಾಡಿ ಗಂಗಾನದಿ ಭೂಲೋಕಕ್ಕೆ ಹರಿದು ಬರುವಂತೆ ಮಾಡಿದನು. ಅದೇ ನದಿದಡದಲ್ಲಿ ತಪಸ್ಸು ಮಾಡಿ ಭಗೀರಥ ‘ಮಹರ್ಷಿ’ಯಾಗಿ ಪೂಜಿತನಾದನು. ಇದು ೨ನೇ ತೀರ್ಥಂಕರರು ಅವತರಿಸಿದ ಕಾಲದ ಸಂದರ್ಭವೆಂದು ರಾಜಾವಳಿ ಕಥೆಯ ಉಲ್ಲೇಖಿಸುತ್ತದೆ.

ಉಪ್ಪಲಿಗರು ತಮ್ಮ ಕುಲದ ಮೂಲ ಪುರುಷನೆಂದು ನಂಬುವ ಭಗೀರಥ ಮಹರ್ಷಿಯ ಈ ಕಥೆ ಒಂದು ಚಾರಿತ್ರಿಕ ಘಟನೆಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಪುರಾಣವಾಗಿರಬಹುದೆ? ಕೈಲಾಸ ಪರ್ವತವೆಂಬುದು ಹಿಮಾಲಯ ಪರ್ವತವಾಗಿದ್ದು ಅಲ್ಲಿ ಹುಟ್ಟುವ ಗಂಗಾನದಿಗೆ ಭಗೀರಥ ಕಾಲುವೆಗಳನ್ನು ನಿರ್ಮಿಸಿ ಹಿಮಾಲಯದಿಂದ ಉತ್ತರದಿಂದ ಬಯಲಿಗೆ ಹರಿಯುವಂತೆ ಮಾಡಿರಬಹುದೆ? ಈ ಹಿನ್ನೆಲೆಯಿಂದಲೆ ಗಂಗಾ, ಕಾವೇರಿ ನದಿಗಳಿಗೆ ‘ಭಾಗೀರಥಿ’ ಎಂಬ ಹೆಸರು ಬಂದಿರಬಹುದೆ? ಎಂಬ ಈ ಪ್ರಶ್ನೆಗಳ ಕುರಿತು ಹೆಚ್ಚಿನ ಅಧ್ಯಯನ ಮಾಡುವುದರಿಂದ ಭಗೀರಥ ಮಹರ್ಷಿ ಮತ್ತು ಉಪ್ಪಲಿಗ ಸಮುದಾಯದ ಚರಿತ್ರೆ, ಸಂಸ್ಕೃತಿಯನ್ನು ಬೆಳಕಿಗೆ ತರಬಹುದು.

ರಾಜಾವಳಿ ಕಥೆ ಓದುವಾಗ ನನ್ನನ್ನು ಚಕಿತಗೊಳಿಸಿದ ಸಂಗತಿಗಳಲ್ಲಿ ಬಸವಣ್ಣನ ಜೀವನ ಚಿತ್ರಣವು ಒಂದು. ಬಸವಣ್ಣನ ಬಗ್ಗೆ ಅಘಾತ ಉಂಟುಮಾಡುವ ವಿವರಣೆಗಳು ಕಥಾಸಾರದ ೨ನೇ ಅಧಿಕಾರದಲ್ಲಿ ಉಲ್ಲೇಖವಾಗುತ್ತದೆ. ಬಸವಣ್ಣ ಅಕ್ಕನಾಗಮ್ಮ, ಮಾದಿರಾಜ, ಮಾದಲೆಯರ ಮಕ್ಕಳೆಂದು ಇವರು ಮೂಲದಲ್ಲಿ ಜೈನ ಬ್ರಾಹ್ಮಣರಾಗಿದ್ದು ನಂತರದಲ್ಲಿ ಶೈವ ಬ್ರಾಹ್ಮಣರಾದರು. ಅಕ್ಕನಾಗಮ್ಮ, ಬಿಜ್ಜಳನನ್ನು ಮದುವೆಯಾಗುತ್ತಾಳೆ. ಬಸವಣ್ಣ ಕೋಶಾಧ್ಯಕ್ಷನಾಗಿ ನಂತರ ಪ್ರಧಾನಮಂತ್ರಿಯಾಗಿ ರಾಜ್ಯದ ಒಡೆಯನಾಗುತ್ತಾನೆ. ಬಸವಣ್ಣ ಎಲ್ಲಾ ಧರ್ಮಗಳನ್ನು ಅಲ್ಲಗಳೆದು ತಾನೇ ಒಂದು ವೀರಶೈವ ಮತ ಸ್ಥಾಪಿಸುತ್ತಾನೆ. ಹೊಲೆ ಮಾದಿಗರನ್ನೊಳಗೊಂಡು ೧೮ ಜಾತಿಗಳಿಗೂ ಲಿಂಗಧಾರಣೆಮಾಡಿ ಜನರಲ್ಲಿ ಮರಣ ಭಯ ಹುಟ್ಟಿಸಿ, ಲಿಂಗಪೂಜೆ ಮಾಡಿಸುತ್ತಾ, ತನ್ನಾಜ್ಞೆಯನ್ನು ಮೀರಿದವರನ್ನು ಕೊಲ್ಲಿಸುತ್ತಿದ್ದನು. ಭಂಡಾರದ ಹಣವನ್ನು ವೆಚ್ಚಮಾಡಿ ಎರಡು ಲಕ್ಷ ಜನರಿಗೆ ಲಿಂಗದೀಕ್ಷೆ, ಊಟ, ಬಟ್ಟೆ ಕೊಡಿಸುತ್ತಾನೆ. ಈ ತಪ್ಪಿಗೆ ಶಿಕ್ಷೆಯಾಗಿ ಬಸವಣ್ಣ ಭಂಡಾರಕ್ಕೆ ಹಣತುಂಬಿಸುವವರೆಗೆ ತಲೆಯ ಮೇಲೆ ದೊಡ್ಡಕಲ್ಲನ್ನು ಹೊತ್ತುಕೊಂಡಿರುತ್ತಾನೆ. ಎರಡು ಲಕ್ಷ ಜನರು ಆ  ಕಲ್ಲಿನ ಬಾರವನ್ನು ಹಂಚಿಕೊಂಡು ಸಣ್ಣಸಣ್ಣ ಕಲ್ಲುಗಳಾಗಿ ಮಾಡಿಕೊಂಡು ತಮ್ಮ ಕೊರಳಿಗೆ ಕಟ್ಟಿಕೊಳ್ಳುತ್ತಾರೆ.

ಕೊನೆಗೆ ಬಸವಣ್ಣ ತನ್ನ ಕಡೆಯವರಿಂದ ಬಿಜ್ಜಳನನ್ನು ಕೊಲ್ಲಿಸಿ, ಅಕ್ಕನಾಗಮ್ಮನಿಗೆ ಹುಟ್ಟುವ ಮಗುವಿಗೆ ಚನ್ನಬಸವಣ್ಣನೆಂದು ಹೆಸರಿಟ್ಟು ಅವನಿಗೆ ಲಿಂಗಧಾರಣೆ ಮಾಡುತ್ತಾನೆ. ೧೭೦೦ ಬಸದಿಗಳನ್ನು ಹಾಳುಮಾಡಿ, ಬಸವಣ್ಣ ತಪಸ್ವಿಗಳನ್ನು ಕೊಲ್ಲುತ್ತಾನೆ. ಹೀಗೆ ದೇವಚಂದ್ರ ತುಂಬಾ ವಿಭಿನ್ನವಾಗಿ ಬಸವಣ್ಣನನ್ನು ಚಿತ್ರಿಸುತ್ತಾನೆ.

ಬಸವಣ್ಣ ಪ್ರಶ್ನಾತೀತರು ಇರಬಹುದು. ಆದರೆ ಕಲ್ಯಾಣ ಕ್ರಾಂತಿಯ ನಂತರ ವೀರಶೈವ ಪಂಥ ನಡೆದು ಕೊಂಡಿರಬಹುದಾದ ಸಾಧ್ಯತೆಯನ್ನು ಜೈನರ ಬಗ್ಗೆ ತಳೆದಿದ್ದ ನಿಲುವನ್ನು ಕಥಾಸಾರ ಬಸವಣ್ಣನ ಹೆಸರಿನಲ್ಲಿ ಹೀಗೆ ದಾಖಲಿಸಿರಬಹುದು? ಜೈನ ಬಸದಿಗಳನ್ನು ಹಾಳುಮಾಡಿ, ಜೈನಧರ್ಮೀಯರನ್ನು ಕೊಂದು ವೀರಶೈವೀಕರಣ ಮಾಡಿದ ಏಕಾಂತರಾಮಯ್ಯನ ಉದಾಹರಣೆ ರಾಜಾವಳಿ ಕಥೆ ಈ ಉಲ್ಲೇಖನವನ್ನು ಸಮರ್ಥಿಸುತ್ತದೆ. ಅನಾಮತ್ತಾಗೆ ಬಸವಣ್ಣ ಹೀಗೆ ಇದ್ದನೆಂದು ಹೇಳುವುದು ಉತ್ಪ್ರೇಕ್ಷೆಯಾದರೂ, ಬಸವಣ್ಣನ ಮತಾಂಧತೆ, ಮತಾಂತರ, ಮರಣದ ಕುರಿತು ಉಲ್ಲೇಕವಾಗುವ ರಾಜಾವಳಿ ಕಥೆಯ ಅಂಶಗಳ ಕುರಿತು ಮರುಚಿಂತನೆ ಮಾಡಬೇಕಾಗುತ್ತದೆ. ಮಂಟೇಸ್ವಾಮಿಯನ್ನು ಕಲ್ಯಾಣಕ್ಕೆ ಪ್ರವೇಸ ಕೊಡದ ಲಿಂಗವಂತರ ಲಿಂಗಗಳನ್ನು ಮಂಟೇಸ್ವಾಮಿ ಮಾಯಮಾಡಿ, ಗುರುವಿಲ್ಲದ ಗುಡ್ಡನಾದ ಬಸವಣ್ಣನಿಗೆ ಗುರುವಾಗಿ, ಕಲ್ಯಾಣಪಟ್ಟಣದಲ್ಲಿ ವಂಚನೆ ಇರುವುದನ್ನು ತೋರಿಸುವ ಮಂಟೇಸ್ವಾಮಿಗಳು ಕಲ್ಯಾಣವನ್ನು ಬರಿದು ಮಾಡುತ್ತಾರೆ. ಕಾವ್ಯದ ಮೂಲದ ನೀಲಗಾರರು ಬಸವಣ್ಣನನ್ನು ಮುಖಾಮುಖಿಯಾಗಿ ಪ್ರಶ್ನಿಸುತ್ತಾರೆ. ಅದೇ ಕಾವ್ಯದಲ್ಲಿ ಅಕ್ಕನಾಗಮ್ಮನ ಬಸಿರು ‘ಕಳ್ಳಬಸಿರು’ ಎಂದು ಹೇಳುತ್ತಾರೆ. ಮಂಟೇಸ್ವಾಮಿ ಕಾವ್ಯ ಎತ್ತುವ ಈ ಪ್ರಶ್ನೆಗಳು ಸಹ ಕಥಾಸಾರದ ಪ್ರಶ್ನೆಗಳಂತೆ ಇವೆ. ವೀರಶೈವಪಂಥ ಜೈನ, ದಲಿತ್ಯ, ಹಿಂದುಳಿದ ಮತ ಪಂಥಗಳ ಜೊತೆಗೆ ನಡೆದುಕೊಂಡು ರೀತಿಯನ್ನು, ಮಾಡಿರುವ ಆಕ್ರಮಣಗಳನ್ನು ನೀಲಗಾರರು, ದೇವಚಂದ್ರರು ಈ ರೀತಿ ಪ್ರಶ್ನಿಸುತ್ತಾರೆ. ಶಿವಪ್ರಕಾಶರ ಮಹಾಚೈತ್ರ, ಲಂಕೇಶರ ಸಂಕ್ರಾಂತಿ, ಕರ್ನಾಡರ ತಲೆದಂಡ ನಾಟಕಗಳು ಸಹ ಕಲ್ಯಾಣದ ಕ್ರಾಂತಿ ಮತ್ತು ವಚನಕಾರರ ಚರಿತ್ರೆಯನ್ನು ವಿಭಿನ್ನವಾಗಿ ಕಟ್ಟಿಕೊಡುತ್ತವೆ. ಇವುಗಳ ಹಿಂದೆ ಸಹ ವೀರಶೈವ ಮತ್ತು ವಚನಕಾರರ ಬಗೆಗೆ ಪ್ರಶ್ನೆಗಳು, ವಿಭಿನ್ನ ಚಿಂತನೆಗಳಿರುವುದು ವ್ಯಕ್ತವಾಗುತ್ತವೆ.

ಕಥಾಸಾರದ ೬ನೇ ಮತ್ತು ೧೨ನೇ ಅಧಿಕಾರದಲ್ಲಿ ಉಲ್ಲೇಕವಾಗುವ ಅಶೋಕನ ಮೊಮ್ಮಗ ಚಂದ್ರಗುಪತನು ಕಾಣುವ ಹದಿನಾರು ಸ್ವಪ್ನಗಳು ತಟ್ಟನೆ ನಮ್ಮ ಇಂದಿನ ವ್ಯವಸ್ಥೆಯೊಳಗಿನ ಘಟನೆ ಮತ್ತು ಸವಾಲುಗಳನ್ನು ನೆನಪಿಸುತ್ತವೆ. ಸಮಾಜದಲ್ಲಿ ಮಾನವೀಯತೆ ಮುಳುಗಿ ಹೋಗುತ್ತಿರುವುದು, ನುಸಿಪೀಡೆಯಂತಹ ಕೃಷಿರೋಗಗಳ ಉಲ್ಬಣ, ಫೆಂಟಗಾನ್ ಧ್ವಂಸ, ಸಂಸತ್ ಭವನದದಾಳಿ, ಮುಸ್ಲಿಂ, ಕ್ರೈಸ್ತ, ಹಿಂದೂ, ಬೌದ್ಧ ಮತ ಸಂಘರ್ಷ, ಅಮೆರಿಕ ಅಪಘಾನ್ ಯುದ್ಧಗಳು, ಕ್ಷಾಮ ಬರಗಾಲ, ಪರಿಸರ ನಾಶ, ಪ್ರಧಾನಮಂತ್ರಿ, ಮುಖ್ಯಮಂತ್ರಿ, ಸಚಿವರುಗಳ ಜಾತಿ, ಮತ, ಸ್ವಾರ್ಥ ಪರ ಆಡಳಿತ, ಮಂದಿರಕಟ್ಟಲು ಕಂಕಣ ಬದ್ಧರಾಗಿರುವ ಸಾಧುಸಂತರು, ಬಾಲಕಾರ್ಮಿಕ ಪದ್ಧತಿ, ಹುಡುಗಿಯರ ಕಾಡುವ ತುಡುಗು ಹುಡುಗರು, ಏಡ್ಸ್‌ರೋಗ, ಉದಾರೀಕರಣ, ಖಾಸಗೀಕರಣ, ಜಾಗತೀಕರಣ, ಇವೇ ಮೊದಲಾದ ಇಂದಿನ ಸಮಸ್ಯೆಗಳನ್ನು ಆ ಹದಿನಾರು ಸ್ವಪ್ನಗಳು ಸಂಕೇತಿಸುತ್ತವೆ.

ಪ್ರತಿಯೊಂದು ಊರಿನ ಹುಟ್ಟು ಮತ್ತು ಆ ಊರಿನ ಹೆಸರಿಗೆ ಸಂಬಂಧಿಸಿದಂತೆ ಯಾವುದಾದರು ಒಂದು ಪುರಾಣ, ಐತಿಹ್ಯ, ಚಾರಿತ್ರಿಕ ಘಟನೆಗಳು ಇದ್ದೇ ಇರುತ್ತವೆ. ಇವು ಕೆಲವು ವೇಳೆ ವಾಸ್ತವವೂ, ಕಾಲ್ಪನಿಕವೂ ಆಗಿರುತ್ತವೆ. ಯಾವುದೇ ಸ್ಥಳಪುರಾಣ ಐತಿಹ್ಯಗಳು ಇಲ್ಲದ ಊರುಗಳು ಇರಲಾರವು. ಒಂದು ಸಣ್ಣ ಹಳ್ಳಿ ತೆಗೆದುಕೊಂಡರು ‘ತರಗು ಗೂಸಿ ಮನೆ ಮಾಡಿ, ಊರು ಕಟ್ಟಿದವರ ಕುರಿತು ಕಥೆ’ ಇದ್ದೇ ಇರುತ್ತದೆ. ಇಂತಹ ಸಂಗತಿಗಳು ಕಥಾಸಾರದಲ್ಲಿ ಕುತೂಹಲಕಾರಿಯಾಗಿವೆ. ಕಥಾಸಾರ ಓದುತ್ತಾ ಹೋದರೆ ಅನೇಕ ಊರು, ನಗರ, ಪಟ್ಟಣ, ರಾಜ್ಯ ಸಾಮ್ರಾಜ್ಯಗಳು ಹುಟ್ಟಿ ಬೆಳೆದ ಬಗೆಗೆ ಹೊಸ ಹೊಸ ಅಂಶಗಳು ತೆರೆದು ಕೊಳ್ಳುತ್ತಾ ಹೋಗುತ್ತವೆ.

ಕರ್ನಾಟಕದ ಅನೇಕ ಊರು, ನಗರಪಟ್ಟಣಗಳು ಜೈನ ಸಂಸ್ಕೃತಿಯ ಹಿನ್ನೆಲೆ ಮತ್ತು ಹೆಸರುಗಳನ್ನು ಹೊಂದಿವೆ. ಹಾಗೇ ಕಾಲಾಂತರದಲ್ಲಿ ಆಳುವ ದೊರೆಗಳು ತಾವು ಅನುಸರಿಸಿದ ಧರ್ಮ ಸಂಸ್ಕೃತಿ ಪರಂಪರೆಗೆ ಪೂರಕವಾಗಿ ಊರುಗಳನ್ನು ಕಟ್ಟಿಸುವುದು ರಾಜಾವಳಿ ಕಥೆಯಿಂದ ತಿಳಿಯುತ್ತದೆ. ರಾಜಾವಳಿ ಕಥೆಯ ೧೦ನೇ ಅಧಿಕಾರದಲ್ಲಿ ವಿಶ್ವವಿಖ್ಯಾತ ಮೈಸೂರು ಮತ್ತು ಚಾಮುಂಡಿಬೆಟ್ಟದ ಉಗಮದ ಬಗ್ಗೆ ಉಲ್ಲೇಖವಿದೆ. ಕಾರುಗಳ್ಳಿಯಲ್ಲಿದ್ದ ‘ವೀರಸೂರ್’ ನೆಂಬುವನು ಮಹಾಪರಾಕ್ರಮಿಯಾಗಿದ್ದು, ಕೆಲವು ರಾಜ್ಯಗಳನ್ನು ಗೆದ್ದು, ‘ವಾಸಂತಿಕಾದೇವಿ’ಗೆ ‘ಚಾಮುಂಡಿ’ ಎಂದು ಹೆಸರಿಟ್ಟು, ಮಹಾ ಘೋರಾರಣ್ಯದಲ್ಲಿ ಪರ್ವತದ ಮೇಲೆ ಸ್ಥಾಪಿಸಿದನು. ಆ ದೇವಿಯ ವರದಿಂದ ಮಹಿಷಾಸುರನೆಂದಿದ್ದ “ಮಹಾವನ ಮಹಿಷ”ನನ್ನು ಕೊಂದು ‘ಮಹಿಷಾಪುರ’ ಎಂಬ ಪಟ್ಟಣವನ್ನು ಮಾಡಿದನು ಎಂದು ದೇವಚಂದ್ರ ಚಿತ್ರಿಸುತ್ತಾನೆ.

ಇಂದಿನ ಮೈಸೂರ ಚಾಮುಂಡಿ ಬೆಟ್ಟವು ಪೂರ್ವದಲ್ಲಿ ‘ವಾಸಂತಿದೇವಿ’ ಎಂಬ ಜೈನ/ಬೌದ್ಧ ಮೂಲದ ದ್ರಾವಿಡ ಮಾತೃದೇವತಾ ಸಂಸ್ಕೃತಿಯ ಕೇಂದ್ರವಾಗಿದ್ದು, ಕಾರುಗಳ್ಳಿಯ ‘ವೀರಸೂರ’ ಅದನ್ನು ಹಿಂದೂ/ವೈದಿಕ ಚಾಂಮುಂಡೇಶ್ವರಿಯಾಗಿ ಪರಿವರ್ತಿಸಿರುವುದು ಸ್ಪಷ್ಟವಾಗುತ್ತದೆ. ಹಾಗೇ ಮಹಾಘೋರಾರಣ್ಯವೆಂಬ ಮಹಾವನದ ಮಹಿಷ (ರಾಕ್ಷಸ)ನನ್ನು ಚಾಮುಂಡಿಯ ವರದಿಂದ ವೀರಸೂರನು ಕೊಂದಿರುವುದನ್ನು ಸಹ ಕಥಾಸಾರ ಸ್ಪಷ್ಟಪಡಿಸುತ್ತದೆ.

ಮಹಾವನ ಮಹಿಷನನ್ನು ಕೊಲ್ಲುವ ಘಟನೆ ಒಂದು ಯುದ್ಧವನ್ನು ಸಂಕೇತಿಸುತ್ತಿದ್ದು, ಚಾಮುಂಡಿಯ ‘ವರ’ವೆಂಬುದು ಸಹ ವೀರಸೂರನಿಗೆ ಸಿಕ್ಕಿರುವ ಪರಕೀಯ ವೈದಿಕ ಹಿಂದೂ ಧರ್ಮಸಂಸ್ಕೃತಿ ಮೂಲದ ರಾಜಕೀಯ ಹಿತಾಶಕ್ತಿಯ ಪಿತೂರಿಯಾಗಿರುವುದನ್ನು ಗ್ರಹಿಸಬೇಕು. ಈ ಹಿನ್ನೆಲೆಯ ವೀರಸೂರನ ಮಹಿಷನ ವಿರುದ್ಧದ ವಿಜಯದ ಸಂಕೇತವೆ ಇಂದಿನ ಮೈಸೂರು ದಸರ, ಆಯುಧ ಪೂಜೆ, ಜಂಬೂಸವಾರಿಎಂಬ ವಿಜಯೋತ್ಸವಗಳು. ನಂತರದ ದಿನಗಳಲ್ಲಿ ಇದಕ್ಕೆ ವಿಜಯನಗರದ ಮಹಾನವಮಿ ಉತ್ಸವದ ಲಿಂಕ್ ಕೂಡ ಆಗಿರಬಹುದು. ಮಹಾವನ ಮಹಿಷ ಅಸುರ, ರಾಕ್ಷಸ ಎಂಬ ಬುಡಕಟ್ಟುಗಳ ಮುಖ್ಯಸ್ಥನಾಗಿದ್ದು, ತನ್ನಿಂದ ಆಳಲ್ಪಡುತ್ತಿದ್ದ ಮಹಿಷಮಂಡಲದ ರಾಜನಾಗಿದ್ದನಂಬ ಸುಳಿವನ್ನು ಸಹ ನಾವಿಲ್ಲಿ ಕಾಣಬೇಕು. ಈ ಮಹಿಷನನ್ನು ಕೊಂದ ನಂತರ ವಿಜಯದ ಸಂಕೇತವಾಗಿ ಮಹಿಷಮಂಡಲವನ್ನು ವೀರಸೂರ ‘ಮಹಿಷಪುರ’ವನ್ನಾಗಿ ಮಾಡಿದ್ದಾನೆ. ಮಹಿಷಮಂಡಲ ಮಹಿಷಪುರವಾಗಿ, ಮಹಿಷಪುರ, ಮಹಿಸೂರು, ಮೈಸೂರು ಆಗಿರುವುದು ಪುರಾಣವೂ ಅಲ್ಲ, ಐತಿಹ್ಯವೂ ಅಲ್ಲ ಇದೊಂದು ಧರ್ಮ ಸಂಸ್ಕೃತಿ ರಾಜಕೀಯ ಹಿತಾಶಕ್ತಿಗಳ ಉಳಿವಿಗಾಗಿ ನಡೆದ ಚಾರಿತ್ರಿಕ ಸಂಘರ್ಷದ ಫಲ ಎನಿಸುತ್ತದೆ.

ಕಥಾಸಾರದ ೬ನೇ ಅಧಿಕಾರದಲ್ಲಿ ಶ್ರವಣಬೆಳಗೂಳ ನಿರ್ಮಾಣದ ಬಗೆಗೆ ಉಲ್ಲೇಖವಿದೆ. ಸಿಂಹರಾಜನ ಮಗನಾದ ‘ಭಾಸ್ಕರ ರಾಜ’ ಮೌರ್ಯ ಸಾಮ್ರಾಟ ಅಶೋಕ ಚಕ್ರವರ್ತಿಯ ವಂಶಜ. ಈತ ಪಾಟಲೀಪುತ್ರದಿಂದ ಗುರು ಭದ್ರಬಾಹು ಸ್ವಾಮಿಯ ನಿಷಿದ್ಧಿಸ್ಥಾನದ ವಂದನಾರ್ಥ ದಕ್ಷಿಣಕ್ಕೆ ಬರುತ್ತಾನೆ. ಅವನು ಭದ್ರಬಾಹುವನ್ನು ಅಲ್ಲಿಯೆ ಇದ್ದ ಚೈತ್ಯಾಲಯಗಳನ್ನು ಕಟ್ಟಿಸುತ್ತಾನೆ. ಅಲ್ಲಿ ನೆಲೆನಿಂತಿದ್ದ ಭಾಸ್ಕರರಾಜ ಆ ಗಿರಿಯ ಸಮೀಪ ಒಂದು ಪಟ್ಟಣವನ್ನು ನಿರ್ಮಿಸುತ್ತಾನೆ. ಆ ಪಟ್ಟಣವೆ ಕೆಲದಿನಗಳನಂತರ ‘ಬೆಳಗೊಳ’ವೆಂದು ಹೆಸರಾಗಿದೆ ಎಂಬುದಾಗಿ ಕಥಾಸಾರ ವಿವರಿಸುತ್ತದೆ. ಮೈಸೂರು ಒಡೆಯರ ಮೊದಲ ರಾಜಧಾನಿ ಶ್ರೀರಂಗಪಟ್ಟಣ. ಕಾವೇರಿ ನದಿ ಮಧ್ಯದಲ್ಲಿ ಶರೀರಂಗರಾಯರಿಂದ ನಿರ್ಮಾಣಗೊಂಡ ಪಟ್ಟಣವೆ ಶ್ರೀರಂಗಪಟ್ಟಣವಾಗಿದೆ. ಚಾಮರಾಜನಗರ ಚಾಮರಾಜ ಒಡೆಯರ ಹುಟ್ಟೂರು. ಕೃಷ್ಣರಾಜ ಒಡೆಯರು ತಮ್ಮ ಆಳ್ವಿಕೆ ಕಾಲದಲ್ಲಿ ತಮ್ಮತಂದೆಯ ನೆನಪಿಗಾಗಿ ‘ಅರಿಕುಠಾರ’ ಎಂದಿದ್ದ ಊರಿಗೆ ಚಾಮರಾಜನಗರ ಎಂಬುದಾಗಿ ಹೆಸರಿಟ್ಟು, ಅಲ್ಲಿ ಚಾಮರಾಜೇಶ್ವರ ದೇವಾಲಯವನ್ನು ಕಟ್ಟಿಸುತ್ತಾರೆ. ಕಂಠೀರವ ನರಸರಾಜ ಒಡೆಯರು ಹೆಗ್ಗೂಡೆದೇವನಿಗೆ ಉಂಬಳಿ ಕೊಟ್ಟದ್ದು ಹೆಗ್ಗಡದೇವನಕೋಟೆಯಾಗಿದೆ. ಶಕವರ್ಷ ೬೦೦ರಲ್ಲಿ ಕುಡುಗಲೂರಿಗೆ ತೆರಕಣಾಂಬಿ ಎಂದು ನಾಮಾಂಕಿತವಾಗಿದೆ. ಹದಿನಾಡು ಅಥವ ಯಳವಂದೂರ ಹನ್ನೆರಡು ಸಾವಿರ ಎಂಬುದೇ ಇಂದಿನಯಳಂದೂರು. ಬಾಲಚಂದ್ರ ಮುನಿಗಳ ಹೆಸರಿನಲ್ಲಿ ಸ್ಥಾಪಿತವಾದ ಬಾಲಚಂದ್ರಪುರ (ಬಾಲ= ಎಳೆಯ, ಚಂದ್ರ=ಇಂದು, ಪುರ=ಊರು=ಎಳೆಯ ಇಂದು ಊರು=ಯಳಂದೂರ)ವೇ ಇಂದಿನ ಯಳಂದೂರ ಎಂಬುದಾಗಿಯು ತಿಳಿದುಬರುತ್ತದೆ.

ದೇವಚಂದ್ರ ಶಿಷ್ಟಸಮುದಾಯದ ಜೈನಬ್ರಾಹ್ಮಣನಾಗಿದ್ದರು ಆತನ ಚಿಂತನೆ, ಬರವಣಿಗೆ, ಅವನ ಕಳಕಳಿ ಗಮನಿಸಿದರೆ ಅವನೊಬ್ಬ ಜನಪದಕವಿಯು, ಜನಪದ ಬರಹಗಾರನಾಗಿಯು ಕಾಣುತ್ತಾನೆ. ಆ ಕಾಲದ ಪ್ರಗತಿಪರನೂ, ಬಂಡಾಯ ಬರಹಗಾರನೂ, ದನಿ ಇಲ್ಲದವರ ದನಿಯೂ ಆಗಿಹೊಮ್ಮುತ್ತಾನೆ. ದೇವಚಂದ್ರನ ರಾಜಾವಳಿ ಕಥಾಸಾರವು ಮುಚ್ಚುಮರೆ ಇಲ್ಲದ ಶಿಷ್ಟ ಪರಿಶಿಷ್ಟವೆನ್ನದ, ಇದ್ದದ್ದನ್ನು ಇದ್ದ ಹಾಗೇ ದಾಖಲಿಸುವ ಮುಕ್ತವೂ, ಸೃಜನಾತ್ಮಕವೂ ಆದ ಕೃತಿಯಾಗಿದೆ. ದೇವಚಂದ್ರನೂ ಅಂತ ಲೇಖಕನಾಗಿದ್ದಾನೆ. ದೇವಚಂದ್ರ ಸಂಸ್ಕೃತಿ ಶ್ಲೋಕಗಳನ್ನು ಉಲ್ಲೇಕ ಮಾಡುವಷ್ಟೇ ಮುಖ್ಯವಾಗಿ ಮತ್ತು ಸಹಜವಾಗಿ ಜನಪದರ ಆಡುನುಡಿಗಳನ್ನು, ಗಾದೆ ನಂಬಿಕೆಗಳನ್ನು ಉಲ್ಲೇಖಿಸುತ್ತಾನೆ. ವ್ಯವಸ್ಥೆಯನ್ನು ವಿಡಂಬನೆ, ವಿಮರ್ಶೆ ಮಾಡಲು, ತಾತ್ವಿಕವಾಗಿ ತೂಗಿನೋಡಲು ಅವನು ಬರೆಯುವ ವಾಕ್ಯಗಳು ನನ್ನನ್ನು ಚಕಿತಗೊಳಿಸಿದವು.

‘ಹಂದಿಯೊಂದಿಗಾಡಿ ಕೆಂದಗರು ಹೇಲು ತಿಂದಾಗೆ’, ಎಂಬ ಗಾದೆಯನ್ನು ಕೆಟ್ಟವನ ಜೊತೆ ಒಬ್ಬ ಒಳ್ಳೆಯವನು ಸೇರಿ ಕೆಟ್ಟು ಹೋಗುವುದನ್ನು ಗ್ರಾಮೀಣರು ಹೀಗೆ ಹೇಳುತ್ತಾರೆ. ಬಲ್ಲಿದನು ಹೇಲನ್ನು ತಿಂದರೆ ಔಷಧಿ ತೆಗೆದುಕೊಂಡು ಎನ್ನುತ್ತಾರೆ. ಅದೇ ಬಡವ ತಿಂದರೆ ಹೊಟ್ಟೆಗಿಲ್ಲದೆ ತಿಂದನೆನ್ನುತ್ತಾರೆ. ಎಂಬ ಈ ಮಾತು ಶ್ರೀಮಂತರು ಎಷ್ಟು ಅಸಹ್ಯವಾದ ಕೃತ್ಯ ಮಾಡಿದರು ವ್ಯವಸ್ಥೆ ಅದನ್ನು ಅವರಿಗೆ ಪೂರಕವಾಗಿ ಸಮರ್ಥನೀಯವಾಗಿ ನೋಡುತ್ತದೆ. ಅದೇ ಬಡವರು ಮಾಡಿದರೆ ಅದು ಅವರಿಗೆ ತಕ್ಕದೆಂಬಂತೆ ಆಡಿಕೊಳ್ಳುತ್ತದೆ, ಎಂಬುದನ್ನು ದೇವಚಂದ್ರ ಸೂಚ್ಯವಾಗಿ ಹೇಳುತ್ತಾ ಬಡವರ ಪರವಾಗಿ ನಿಲ್ಲುತ್ತಾನೆ. ‘ನನಗೂ ನಿನಗೂ ಗೊತ್ತು ಮಣ್ಣು’, ‘ಅನ್ನ ತಿನ್ನದೆ ಮಣ್ಣು ತಿನ್ನುತ್ತಾನೊ’, ‘ಇರುವೆಗೆ ಮೂತ್ರವೇ ಪ್ರಳಯ ಜಲ’, ‘ಆರು ತಿಂಗಳಿಂದ ಉಪ್ಪಿಗೂ ಕಾಸಿಲ್ಲದೆ, ಸಪ್ಪೆಯನ್ನು ತಿನ್ನುತ್ತಿರುವೆ’, ‘ಲಿಂಗಕ್ಕೆ ಹೊಲೆಯಿಲ್ಲ ಜಂಗಮಕ್ಕೆ ಪಾಪವಿಲ್ಲ’ ಎಂಬ ಈ ವಾಕ್ಯಗಳು ಜನರ ಆಡುನುಡಿಗಳಾಗಿವೆ. ಇರುವೆಗೆ ಮೂತ್ರವೇ ಪ್ರಳಯ ಜಲವೆಂಬುದು ಅತ್ಯಂತ ಸೂಕ್ಷ್ಮಸಂವೇದನೆಯುಳ್ಳ ಬರಹಗಾರನ ಪ್ರಜ್ಞೆಯನ್ನು ನೆನಪಿಗೆ ತರುತ್ತವೆ. ಉಪ್ಪಿಗೂ ಕಾಸಿಲ್ಲದೆ ಸಪ್ಪೆ ತಿನ್ನುವ ಬ್ರಾಹ್ಮಣ ಹೆಂಗಸಿನ ಬಡತನ ಸೂಚಕ ವಾಕ್ಯ ಇಂದಿನ ಕಾಲಕ್ಕೂ ಕನ್ನಡಿ ಹಿಡಿಯುತ್ತದೆ. ದೇವಚಂದ್ರ ಬಸವಣ್ಣನ ಕುರಿತು ಕ್ರೋಧಕೊಂಡರು. ಬಸವಣ್ಣನ ಚಳುವಳಿಯ ಆಶಯವನ್ನು, ವೀರಶೈವಿಸಂನ ಮೂಲ ಮಾತನ್ನು ಹಿಡಿದಿಟ್ಟಿರುವ ‘ಲಿಂಗಕ್ಕೆ ಹೊಲೆಇಲ್ಲ, ಜಂಗಮಕ್ಕೆ ಪಾಪವಿಲ್ಲ’ ಎಂಬ ಸಾಲು ಆತನ ಜಾನಪದ ಮತ್ತು ಕಾವ್ಯಮಯತೆ ರಾಜಾವಳಿ ಕಥೆಯ ಸೃಜನಾತ್ಮಕ ಸಾಹಿತ್ಯದ ಗುಣವನ್ನು ತೋರುತ್ತದೆ. ಹೀಗೆ ಬರೆಯುವ ಮೂಲಕ ದೇವಚಂದ್ರ ತಾನೊಬ್ಬ ಆಸ್ಥಾನದ ಹೊಗಳು ಭಟ್ಟನಲ್ಲ. ಈ ಕೃತಿ ಅರಮನೆ, ಅಂತಃಪುರಗಳಲ್ಲಿ ಅರಳಿದ ಅನುಭವ ಮಾತ್ರವಲ್ಲ ಊರು ಕೇರಿಯ ಪಡಸಾಲೆ, ಅರಳೀಕಟ್ಟೆ, ಬೀದಿ ಬಯಲಲ್ಲಿ ಹುಟ್ಟಿದ ಜನಪರ ಕಥಾಸಾರ ಎಂಬುದನ್ನು ತೋರಿಸುತ್ತಾನೆ.

‘ನವಣಕ್ಕಿ ಹಿಟ್ಟಿನ ಪತ್ಯದಿಂದ ಪಿತ್ತ ನಿವಾರಣೆಯಾಗುತ್ತದೆ., ಅಮೇಧ್ಯದ ಮೇಲೆ ಉಗುಳಿದರೆ ಗಂಟಲು ನೋವು ನಿವಾರಣೆಯಾಗುತ್ತದೆ.’ ಎಂಬ ಈ ವಾಕ್ಯಗಳು ಜನಪದರ ವೈದ್ಯ ನಂಬಿಕೆಗಳು. ‘ಈತ ನನ್ನ ತುಣ್ಣೆಯನ್ನು ಉಂಡು ಹೋಗುವನೆ?’ ‘ಏನೋ ನಿನ್ನ ಗೌಡನಿಗೆ ತಿಕ ಕಡಿಯುತ್ತಿದೆಯ?’ ಎಂಬ ಇಂತಹ ವಾಕ್ಯಗಳನ್ನು ಓದಿದರೆ ನಾವು ನಮ್ಮ ಕೇರಿಯಲ್ಲೆ ಕುಳಿತು ಹರಟಿದಂತೆ ಅನಿಸುತ್ತದೆ. ದೇವಚಂದ್ರ ನಮ್ಮಟ್ಟಿಯಲ್ಲಿ ಹುಟ್ಟಿ ಬೆಳೆದ ಮಗನೇನೋ, ರಾಜಾವಳಿ ನಮ್ಮಟ್ಟಿಯಲ್ಲಿ ಹುಟ್ಟಿ ದೇಶಾದ್ಯಾಂತ ಹರಡಿದ ಕಥೆ ಏನೋ ಎನಿಸುತ್ತದೆ. ದೇವಚಂದ್ರನ ತಿರುಗಾಟ, ದೇವಚಂದ್ರನ ಕಿವಿಯ ಬಾಗಿಲು ಎಲ್ಲಿಯವರೆಗೆ ತೆರೆದಿತ್ತು ಎಂದು ಬೆರಗುಹುಟ್ಟಿಸುತ್ತದೆ. ಆಗಾಗಿ ಕಥಾಸಾರ ನನ್ನ ಓದು ಮಾತ್ರವಲ್ಲ, ಕಥಾಸಾರದ ನನ್ನ ಓದು ಪ್ರಪಂಚದ ಓದು. ನನ್ನ ಚರಿತರೆ, ಕಾವ್ಯ, ಬೆಡಗು ಬಿಣ್ಣಾಣದ ಓದಾಗಿದೆ.

ದೇವಚಂದ್ರ ಬಳಸುವ ಇಂತಹ ಅನೇಕ ಸಂಗತಿಗಳು ಆಶ್ಲೀಲ, ಅಸಭ್ಯವೆನಿಸಬಹುದು? ಗ್ರಾಮೀಣ ಜನರ ಒಳಿತು ಕೆಡಕು, ಸಭ್ಯ ಅಸಭ್ಯ, ಶ್ಲೀಲ, ಅಶ್ಲೀಲ, ಶಿಷ್ಟ ಪರಿಶಿಷ್ಟಗಳೆಲ್ಲವನ್ನು ಮಡಿವಂತಿಕೆ ಇಲ್ಲದೆ ‘ಮನುಷ್ಯ’ ಸಹಜ ಜೀವನವನ್ನಾಗಿಸಿರುವ ರಾಜಾವಳಿ ಕಥೆ ಮತ್ತು ದೇವಚಂದ್ರನು ಇಂದಿಗೂ ಅನುಕರಣೀಯರಾಗಿ ಕಾಣುತ್ತಾರೆ. ಹೇಳು, ಉಚ್ಛೆ, ತುಣ್ಣೆ, ತಿಕ ಎಂದು ಸಾಹಿತ್ಯ ಸೃಷ್ಟಿಸುವುದು ಅಸಭ್ಯವೆಂದು ಪರಿಗಣಿಸುವುದು ಇಂದಿಗೂ ಇದೆ. ಎಷ್ಟು ಜನ ಶಿಷ್ಟ, ಜೈನ ಬ್ರಾಹ್ಮಣ ಕವಿಗಳಿಗೆ, ಯಾರಿಗೆ ಆಗಲಿ ಹೀಗೆ ಬರೆಯಲು ಸಾಧ್ಯವಾಗಿದೆ. ಹೀಗೆ ಬರೆಯುವ ಮೂಲಕ ದೇವಚಂದ್ರ ಆಸ್ಥಾನದ ಪಂಡಿತನಾಗದೆ, ಊರು ಕೇರಿಯ, ಮನೆಮನೆಯ ಜಗಲೀಕಟ್ಟೆಯ ಕವಿಯಾಗಿ ಉಳಿಯುತ್ತಾನೆ. ಎಲ್ಲ ಕಟ್ಟುಪಾಡು, ಶಿಷ್ಟ ಮಾನದಂಡಗಳನ್ನು ಮೀರಿನಿಲ್ಲುತ್ತಾನೆ.

ರಾಜಾವಳಿ ಕಥಾಸಾರದ ಓದು ಆಪ್ಯಾಯಮಾನವಾದದ್ದೂ. ಒಂದು ಓದಿಗೆ ದಕ್ಕಲಾಗದಷ್ಟು ವಿಷಯಗಳು ಈ ಕೃತಿಯಲ್ಲಿವೆ. ಪ್ರತೀ ಓದಿಗೂ ಒಂದೊಂದು ಹೊಸದನ್ನು ತೆರೆದು ತೋರಿಸುತ್ತಲೇ ಹೋಗುವ ಈ ಕೃತಿ ಮತ್ತೆ ಮತ್ತೆ ಓದಿಕೊಳ್ಳಲು ಒತ್ತಾಯಿಸುತ್ತದೆ. ಇದನ್ನು ಒಮ್ಮೆ ಓದಿ ಮುಚ್ಚಿಟ್ಟುಕೂರಲಾಗುತ್ತಿಲ್ಲ. ನನ್ನನ್ನು ಸದಾ ಚಿಂತಿಸುವಂತೆ ಹುಡುಕಾಡುವಂತೆ, ಹಲವು ಅಧ್ಯಯನಕ್ಕೆ ತೊಡಗುವಂತೆ ಪ್ರೇರೇಪಿಸುತ್ತಿದೆ. ಯಾವಾಗಲು ಕ್ರಿಯಾಶೀಲವಾಗಿರಲು ಈ ಕೃತಿ ನನ್ನನ್ನು ಓದುತ್ತಲೇ ಹೋಗುವಂತೆ ಮಾಡಿದೆ. ಇವು ರಾಜಾವಳಿ ಕಥಾಸಾರದ ನನ್ನ ಮೊದಲ ಮಾತುಗಳು ಮಾತ್ರ.

* * *