ದೇವಚಂದ್ರನ ರಾಜಾವಳಿ ಕಥಾಸಾರ ಪ್ರಾಚೀನ ಸಾಹಿತ್ಯ ಕೃತಿಗಳಲ್ಲಿ ಒಂದು ಮಹತ್ವದ ಕೃತಿ, ಭಾರತ, ಕರ್ನಾಟಕ ಚರಿತ್ರೆ, ಸಂಸ್ಕೃತಿ, ಸಾಹಿತ್ಯ ಜಾನಪದ, ಸಾಮಾಜಿಕ, ರಾಜಕೀಯದ ಬಗೆಗೆ ಸಂಶೋಧನೆ ಬೋಧನೆ ಮಾಡುವ ಯಾರೇ ಆದರೂ ಮುಖ್ಯವಾಗಿ ಒಮ್ಮೆ ಓದಲೇ ಬೇಕಾದ ಒಂದು ಅಮೂಲ್ಯ ಕೃತಿ. ನಾನು ಇತಿಹಾಸದ ಉಪನ್ಯಾಸಕನಾಗಿ ಪದವಿ ತರಗತಿಯ ವಿದ್ಯಾರ್ಥಿಗಳಿಗೆ ಭಾರತದ ಚರಿತ್ರೆ ಹಾಗೂ ಕರ್ನಾಟಕದ ಚರಿತ್ರೆ ಪಾಠಮಾಡುವಾಗ ಸಾಹಿತ್ಯಾಧಾರಗಳಲ್ಲಿ ‘ದೇವಚಂದ್ರನ ರಾಜಾವಳಿ ಕಥಾಸಾರ’ವನ್ನು ಕೋಟ್ ಮಾಡುತ್ತಿದ್ದೆ. ನಮ್ಮ ಚರಿತ್ರೆಯ ಅಧ್ಯಯನ ಮತ್ತು ರಚನೆಗೆ ಇದು ಒಂದು ಮುಖ್ಯ ಸಾಹಿತ್ಯ ಆಧಾರ ಎಂದಷ್ಟೆ ಗೊತ್ತಿತ್ತು, ಇತಿಹಾಸದ ಉಪನ್ಯಾಸಕನಾಗಿದ್ದವರು ಇದಕ್ಕಿಂತ ಹೆಚ್ಚಾಗಿ ಇನ್ನೇನು ಗೊತ್ತಿರಲಿಲ್ಲ.

ದೇವನೂರು ಮಹಾದೇವ ಅವರು ತಮ್ಮ ಕುಸುಮಬಾಲೆ ಕೃತಿಯನ್ನು ಮಾದಾರ ಮಲೆಮಾದೇಶ್ವರನಿಗೆ ಅರ್ಪಿಸಿರುವುದು ಓದಿದಾಗ ದಿಗಿಲಾಯಿತು. ಡಾ. ಪಿ.ಕೆ. ರಾಜಶೇಖರರವರ ಮಲೆಮಾದೇಶ್ವರ ಕಾವ್ಯವನ್ನು, ತಲಕಾಡು ಪರಶಿವಮೂರ್ತಿಯವರ ಧರೆಗೆ ದೊಡ್ಡವರ ಕಾವ್ಯವನ್ನು ಓದುವಾಗ ಮಾದಾರ ಮಾದೇಶ್ವರನ ಬಗೆಗೆ, ಅದನ್ನು ಉಲ್ಲೇಖಿಸುವ ದೇವಚಂದ್ರನ ರಾಜಾವಳಿ ಕಥಾಸಾರದ ಬಗೆಗೆ ಮೊದಲಿಗೆ ತಿಳಿಯಿತು. ಇತ್ತೀಚಿಗೆ ನಾನು ‘ಮಂಟೇಸ್ವಾಮಿ ಮೂಮೆಂಟ್’ ಕುರಿತು ಅಧ್ಯಯನ ಕೈಗೊಂಡಾಗಲೂ ಸಹ ನೇರವಾಗಿ ‘ರಾಜಾವಳಿ ಕಥಾಸಾರ’ ಕೃತಿಯನ್ನು ಓದಿರಲಿಲ್ಲ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಕೃತಿಗಳ ಸಾಂಸ್ಕೃತಿಕ ಮುಖಾಮುಖಿ ಈ ಸಂವಾದ ಕಾರ್ಯಕ್ರಮದ ನಿಮಿತ್ತ ನೇರವಾಗಿ ‘ದೇವಚಂದ್ರನ ರಾಜಾವಳಿ ಕಥಸಾರ’ ಕೃತಿಯನ್ನು ಓದುವ ಸೌಭಾಗ್ಯ ಒದಗಿ ಬಂತು.

ಈ ಸಂವಾದಕ್ಕೆ ಸಿದ್ದವಾಗುವ ಸಲುವಾಗಿ ನಾನು ಈ ಕೃತಿಯನ್ನು ಹುಡುಕಿ ಓದತೊಡಗಿದ್ದೇ ಒಂದು ರೋಚಕ ಅನುಭವ. ನಿಜವಾಗಿಯು ಈ ಕೃತಿಯನ್ನು ಓದುವಾಗ ಹಳೇ ಮೈಸೂರು ಸೀಮೆಯ ಗತಕಾಲದ ಕಾಡುನಾಡುಗಳಲ್ಲಿ, ರಾಜರಾಣಿಯರ ಅರಮನೆ ಅಂತಃಪುರಗಳಲ್ಲಿ, ಹೊಲೆಮಾದಿಗರ, ತೊರೆಯ ಉಪ್ಪಲಿಗರ ಊರು ಕೇರಿಗಳಲ್ಲಿ ಸ್ವತಃ ಅಲೆದಾಡಿ ಬಂದ ಹಾಗೆ ಅನಿಸಿತು.

ದೇವಚಂದ್ರ ಚಾಮರಾಜನಗರ ಜಿಲ್ಲೆಯ ಮಲೆಯೂರಿನವನು, ರಾಜಾವಳಿ ಕಥಾಸಾರ ನಮ್ಮ ಜಿಲ್ಲೆಯ ಕೃತಿ ಎಂಬುದು ನಮಗೆ ಹೆಮ್ಮೆಯ ಸಂಗತಿ. ಜೈನ ಬ್ರಾಹ್ಮಣನೆಂದು ಹೇಳಿಕೊಳ್ಳುವ ದೇವಚಂದ್ರನು ದೇವಯ್ಯ, ಕುಸುಮಾಜಮ್ಮ ಎಂಬ ದಂಪತಿಗಳ ನಾಲ್ಕನೇ ಮಗ. ಹದಿನಾಲ್ಕನೇ ವಯಸ್ಸಿಗೆ ಕರಣಿಕಾಗ್ರಗಣ್ಯನೆನಿಸಿ, ಕವಿ ಗಮಕಿ ವಾಗ್ಮಿತ್ವದಿ ಸಜ್ಜನನೆನಿಸಿ ಬಾಳಿದವನು. ಇವನ ಕಾಲ ೧೭೭೦ರಿಂದ ೧೮೩೧. ಮೈಸೂರು ಅರಸು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೂ, ಕರ್ನಲ್ ಮೆಕಂಜಿಯವರಿಗೂ ಒಪ್ಪಿಸುವ ಉದ್ದೇಶದಿಂದ ಈ ಕೃತಿ ರಚಿಸಿದುದಾಗಿ ದೇವಚಂದ್ರನೇ ಹೇಳಿಕೊಂಡಿದ್ದಾನೆ. ಅಲ್ಲದೆ ಈ ಕೃತಿ ಬರೆಯಲು ಜೈನ ವಿಪ್ರ ಸೂರಿಪಂಡಿತ ಹಾಗೂ ಮೆಕೆಂಜಿಯವರು ಕಾರಣವೆಂದು ತಿಳಿಸುತ್ತಾನೆ. ಈ ಕೃತಿಯನ್ನು ಬರೆದು ಮೈಸೂರು ಒಡೆಯರ ಕೃಪೆಗೂ, ಮೆಕೆಂಜಿಯ ಕೃಪೆಗೂ ಪಾತ್ರನಾಗಿ ತನ್ನ ಬಡತನವನ್ನು ನೀಗಿಕೊಳ್ಳುವುದು ದೇವಚಂದ್ರನ ಉದ್ದೇಶವಾಗಿದ್ದಂತೆಯು ತಿಳಿದು ಬರುತ್ತದೆ.

ರಾಜಾವಳಿ ಕಥಾಸಾರವನ್ನು ದೇವಚಂದ್ರ ‘ಅಧಿಕಾರಂ’ ಎಂಬ ಹದಿಮೂರು ಅಧ್ಯಾಯಗಳಾಗಿ ವಿಂಗಡಿಸಿ ರಚಿಸಿದ್ದಾನೆ. ರಾಜಮಹಾರಾಜರ ಯುದ್ಧ, ದಾನದತ್ತಿಗಳು, ಮೇಲುವರ್ಗಗಳ ಚರಿತ್ರೆಯನ್ನೇ ಚಿತ್ರಿಸುವ ಬಹುತೇಕ ಸಾಹಿತ್ಯ ಕೃತಿಗಳ ನಡುವೆ ರಾಜಾವಳಿ ಕಥಾಸಾರವು ತುಂಬಾ ವಿಭಿನ್ನವಾದ ಕೃತಿಯಾಗಿ ಕಾಣುತ್ತದೆ. ಭಾರತದ ಚರಿತ್ರೆಯನ್ನು ಕೇಳಿದರೆ ಭಾರತೀಯರು ಇತಿಹಾಸವನ್ನು ಬರೆದಿಡುವ ಪ್ರಜ್ಞೆ ಇರಲಿಲ್ಲ ಎಂಬ ಪಾಶ್ಚಾತ್ಯವಿದ್ಯಾಂಸರ ಹೇಳಿಕೆಗೆ ‘ಕಥಾಸಾರ’ ಅಪವಾದವಾಗಿ ನಿಲ್ಲುತ್ತದೆ.

‘ರಾಜಾವಳಿ ಕಥಾಸಾರ’ ನನ್ನ ಊರಿನ, ನನ್ನ ಜನರ, ಮತ ಪಂಥಗಳ ಚರಿತ್ರೆ ಎನಿಸುತ್ತದೆ. ಕಾವೇರಿ ತೀರದಲ್ಲಿ ಹುಟ್ಟಿ ಬೆಳೆದ ರಾಜ್ಯ ಸಾಮ್ರಾಜ್ಯಗಳ, ಊರುಕೇರಿಗಳ ಕತ್ತಲರಾಜ್ಯದ ಕಥೆ ಇದಾಗಿದೆ. ೧೭-೧೮ನೇ ಶತಮಾನದ ಕಾಲಘಟ್ಟದಲ್ಲಿ ನಿಂತು ಇದರ ಹಿಂದು ಮುಂದಿನ ಕಾಲಗಳ ಹಳೇ ಮೈಸೂರು ಪ್ರಾಂತ್ಯದ ಸೂಕ್ಷ್ಮ ಸಂಗತಿಗಳು ಇಲ್ಲವೆ೩. ಕಥಾಸಾರವನ್ನು ಓದುತ್ತಿದ್ದರೆ ನಮ್ಮ ಸುತ್ತಮುತ್ತಲ ಜನ ಸಮುದಾಯಗಳ ಬದುಕು, ಭಾವನೆ, ಸಂಸ್ಕೃತಿಯ ದಟ್ಟ ಸೊಗಡು ರಾಚುತ್ತದೆ.

ನಮ್ಮ ಹತ್ತಿರದ ಊರುಗಳಲ್ಲೇ ಬದುಕಿದ್ದ ಕೊಳ್ಳೇಗಾಲದ ಪೂಜ್ಯಪಾದ, ನಾಗಾರ್ಜುನ, ಮುಡಿಗುಂಡದ ಪಾಣಿನ್ಯಾಚಾರ್ಯ, ಯಳಂದೂರಿನ ಷಡಕ್ಷರಿ, ವಿಶಾಲಾಕ್ಷ ಪಂಡಿತ ತಿರುಮಲಾಚಾರ್ಯ, ಹರವೆಯ ಸೂರಿಪಂಡಿತ ಮೊದಲಾದವರ ಬಗೆಗೆ ಬರೆದಿರುವ ದೇವಚಂದ್ರನ ಬಗ್ಗೆ ಅಪಾರ ಪ್ರೇಮ ಹುಟ್ಟುತ್ತದೆ. ಇದು ನನ್ನ ಮಣ್ಣಿನ ಮನುಕುಲದ ಚರಿತ್ರೆಯ ದಾಖಲಾತಿ.

ರಾಜಾವಳಿ ಕಥಾಸಾರ ಕೃತಿಯು ಮುಖ್ಯವಾಗಿ ಶ್ರೀರಂಗಪಟ್ಟಣ, ಮೈಸೂರು, ಕಾರುಗಹಳ್ಳಿ, ಕಪ್ಪಡಿ, ಬೊಪ್ಪಣ್ಣಪುರ, ಮೇಲುಕೋಟೆ, ಬೆಳಗೊಳಗಳ ಕಟ್ಟಿಕೊಂಡು ಮಲೆಯೂರು, ಹರವೆ, ಚಾಮರಾಜನಗರ, ಗುಂಡ್ಲಪೇಟೆ, ತೆರಕಣಾಂಬಿ, ಕುದೇರು, ಉಮ್ಮತ್ತೂರು, ಯಳಂದೂರು, ನಂಜನಗೂಡು, ಬಿಳಿಕಲ್ಲ ಬೆಟ್ಟಸಾಲುಗಳನ್ನು ನೆಲೆಮಾಡಿಕೊಂಡು ಮೂಗೂರು, ಕುಂತೂರು, ಮುಡಿಗುಂಡ, ಬಸದೀಪುರ, ಕೊಳ್ಳೇಗಾಲ, ಸತ್ತೇಗಾಲ, ಸೋಸಲೆ, ಶಿವನಸಮುದ್ರ, ಬಂಡಳ್ಳಿ ಏಳುಮಲೆಯ ಮಾದೇಶ್ವರ ಬೆಟ್ಟ ಸಾಲುಗಳವರೆಗೆ ಕಾವೇರಿ ನದಿಯಿಂದ ಮೂಡಲಮಲೆನಾಡುಗಳ ಎಟಕಿಸಿಕೊಂಡು ಹುಟ್ಟಿ ಭಾರತದ ಅಗಲಕ್ಕೆ ವ್ಯಾಪಿಸಿಕೊಳ್ಳುತ್ತಾ ‘ಕರ್ನಾಟಕ’ದ ಜನರ ಬದುಕು ಭಾವನೆಗಳ ಮೇಲೆ ಬೆಳೆದದ್ದು ಈ ಕೃತಿ. ಇದೊಂದು ಪುಟ್ಟ ವಿಶ್ವಕೋಶ. ಭಾರತದ ಯಾವುದೇ ಭಾಷೆಗಳಲ್ಲೂ ದೊರೆಯದಂತಹ ಅಪರೂಪದ ಕೃತಿ.

ಹೊಲೆ ಮಾದಿಗ, ಕುರುಬ, ಕುಂಬಾರ, ಉಪ್ಪಾರ ತೊರೆಯ, ಅಗಸ ವಡ್ಡನಿಂದ ಹಿಡಿದು ಜೈನ, ಬೌದ್ಧ, ಕ್ರೈಸ್ತ, ಇಸ್ಲಾಂ ಒಳಗೊಂಡು ಶೈವ, ವೈಷ್ಣವ, ನಾಥ, ಸೂಫಿ, ಸಿದ್ದ, ಹಾರುವ, ಒಕ್ಕಲಿಗ, ಶಿವಾಚಾರದವಗೆ ರಾಜ, ಸಾಮ್ರಾಜ್ಯಗಳಿಂದ ಸಾಮಾನ್ಯ ಬಹುಜನರ ಊರು ಕೇರಿಗಳನ್ನೆಲ್ಲಾ ಸುತ್ತಿ ಸುಳಿದು ಮಾತನಾಡುವ ರಾಜಾವಳಿ ಕಥಾಸಾರ ನಿಜ ಅರ್ಥದಲ್ಲಿ ಒಂದು ಮಾನವ ಪ್ರಪಂಚದ ಕಥಾಸಾರವಾಗುತ್ತದೆ. ದೇವಚಂದ್ರ ಏನೇನು ಬರೆಯುತ್ತಾನೆ, ಎಂದರೆ ಮನುಷ್ಯನ ಮೈಮೇಲಿನ ಕೂದಲಕಾಡಿನೊಳಗೆ ವಾಸಿಸುವ ಕೂರೆಮರಿ, ಸೀರುಗಳ ಬಗ್ಗೆಯೂ ಬರೆಯುತ್ತಾನೆ. ಎಂತಹ ಸೂಕ್ಷ್ಮವಾದ ಸಂಗತಿ ಅಲ್ಲವೆ?

ಒಮ್ಮೆ ಶಿವ ಮಡಿವಾಳನನ್ನು ಪರೀಕ್ಷೆಗೆ ಗುರಿಮಾಡುತ್ತಾನೆ. ತನ್ನಬಟ್ಟೆಯ ಕೂರೆಮರಿ, ಸೀರುಗಳು ಒಂದೂ ಸಾಯದಂತೆ ‘ಮಡಿ’ ಮಾಡಿತರಬೇಕೆಂದು ಹೇರುತ್ತಾನೆ. ಅದರಂತೆ ಮಡಿವಾಳ ಒಂದು ಕೂರೆಮರಿ, ಸೀರೂ ಸಾಯದಂತೆ ಮಡಿಮಾಡಿ ಕೊಡುತ್ತಾನೆ. ಕಥಾಸಾರದ ೧೧ನೇ ಅಧಿಕಾರದಲ್ಲಿ ಈ ಉಲ್ಲೇಖವಿದೆ. ಇಲ್ಲಿ ಮಡಿವಾಳರಿಗೆ ಕಸುಬಿನಲ್ಲಿರುವ ಕುಶಲತೆ, ಜೈನಧರ್ಮದ ಅಹಿಂಸಾಮಾರ್ಗಕ್ಕೆ ಪೂರಕವಾಗಿ ಶಿವನು, ಮಡಿವಾಳನು ಅನುಸರಿಸುವ ಅಹಿಂಸಾಮಾರ್ಗ, ಮೆರೆಯುವ ಮಾನವೀಯತೆ ಇವನ್ನು ದಾಖಲಿಸುವಲ್ಲಿ ದೇವಚಂದ್ರನು ತೋರುವ ಕಳಕಳಿ ಮನೋಜ್ಞವಾದದ್ದು.

ಕಥಾಸಾರದ ನನ್ನ ಓದು ಅನೇಕ ಪ್ರಶ್ನೆಗಳಿಗೆ ಉತ್ತರ ದೊರಕಿಸಿತು. ಹಾಗೇ ಅನೇಕ ಪ್ರಶ್ನೆಗಳು ಹುಟ್ಟಿಕೊಂಡವು. ಕಥಾಸಾರ ತನ್ನನ್ನು ಮತ್ತೆ ಮತ್ತೆ ಓದುವಂತೆ, ಹೆಚ್ಚಿನ ಅಧ್ಯಯನ, ಸಂಶೋಧನೆಗೆ ತೊಡಗುವಂತೆ ನನ್ನನ್ನು ಒತ್ತಾಯಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಥಾಸಾರದ ಓದಿನಿಂದ ನನಗೆ ಸಿಕ್ಕಿದ ಉತ್ತರಗಳನ್ನು ನನ್ನೊಳಗಿನ ಪ್ರಶ್ನೆಗಳನ್ನು, ಸಿಕ್ಕಿದ ದಕ್ಕಿದ ಕೆಲ ವಿಚಾರಗಳನ್ನು ನಾನಿಲ್ಲಿ ಹೇಳಿಕೊಳ್ಳುತ್ತೇನೆ.

ನಮ್ಮೂರು ಶಂಕನಪುರದ ಪೂರ್ವಕ್ಕೆ ಮತ್ತು ಬಲಭಾಗಕ್ಕೆ ಒಂದೆರಡು ಫರ್ಲಾಂಗು ಅಂತರದಲ್ಲಿರುವ ಕೊಳ್ಳೇಗಾಲ ಮತ್ತು ಮುಡಿಗುಂಡಗಳು ಪೂಜ್ಯಪಾದ, ನಾಗಾರ್ಜುನ, ಪಾಣಿನ್ಯಾಚಾರ್ಯರು ಬದುಕಿದ್ದ ಊರುಗಳೆಂದು ಓದುವಾಗ ನಾನು ಇಂತಹ ಪ್ರಾಚೀನ ಸಂತ ಕವಿಗಳ ನೆರೆಯೂರಿನವನು ಎನಿಸಿ ಪುಳಕಿತನಾದೆ. ಕೊಳ್ಳೇಗಾಲದ ಮಾಧವ ಭಟ್ಟ, ಶ್ರೀದೇವಿಯರ ಮಗನಾದ ಪೂಜ್ಯಪಾದನದು ಜೈನಧರ್ಮ ಮತ್ತು ಸಾಹಿತ್ಯದಲ್ಲಿ ಒಂದು ದೊಡ್ಡ ಹೆಸರು. ಕಥಾಸಾರದಲ್ಲಿ ಚಿತ್ರಿಸಿರುವುದನ್ನು ನೋಡಿದರೆ ಈತ ಅಲ್ಲಮ, ರೇವಣ್ಣ ಸಿದ್ದರಂತೆ ಒಬ್ಬ ಸಿದ್ಧನಾಗಿರಬಹುದೇ ಎನಿಸುತ್ತದೆ? ಬಾಲ್ಯದಲ್ಲಿ ಜಿನದೀಕ್ಷೆ ಪಡೆದು ಜೈನಶಾಸ್ತ್ರ ಪಾರಂಗತನಾಗುವ ಪೂಜ್ಯಪಾದ ದಕ್ಷಿಣ ಭಾಗದ ಗಿರಿಯೊಂದರಲ್ಲಿ ತಪಮಾಡಿ ಸಿದ್ದಿ ಪಡೆದಂತೆ ತಿಳಿಯುತ್ತದೆ. ಮುಡಿಗುಂಡದ ತನ್ನ ಸೋದರ ಮಾವನಾದ ಪಾಣಿನ್ಯಾಚಾರ್ಯ ಕಾಲವಾದ ಮೇಲೆ ಅವನು ಆರಂಭಿಸಿದ್ದ ವ್ಯಾಕರಣ ಶಾಸ್ತ್ರವನ್ನು ಪೂರೈಸಿ ಪೂಜ್ಯಪಾದನು ‘ಜೈನೇಂದ್ರ ವ್ಯಾಕರಣ ಸೂತ್ರವನ್ನು’ ರಚಿಸಿದನೆಂಬುದನ್ನು ಕಥಾಸಾರದ ೮ನೇ ಅಧಿಕಾರದಲ್ಲಿ ವಿವರಿಸಲಾಗುತ್ತದೆ.

ಆಶ್ವರ್ಯವನ್ನು, ಕುತೂಹಲವನ್ನು ಹುಟ್ಟಿಸಿದ್ದೆಂದರೆ ಕೊಳ್ಳೇಗಾಲದ ನಾಗಾರ್ಜುನನ ಸಂಗತಿ. ಪೂಜ್ಯಪಾದ ಸಕಲ ವಿದ್ಯಾಪಾರಂಗತನಾಗಿ ಯೋಗ, ಸಿದ್ದಿ ಸಾಧನೆಗಳ ನಂತರ ಮತ್ತೆ ಕೊಳ್ಳೇಗಾಲಕ್ಕೆ ಬಂದಾಗ ನಾಗಾರ್ಜುನ ಅವನಿಂದ ಉಪದೇಶ ಪಡೆಯುತ್ತಾನೆ. ನಾಗಾರ್ಜುನ ಪೂಜ್ಯಪಾದನ ಮೊದಲ ತಂಗಿಯ ಮಗ. ಗಂಡನನ್ನು ಕಳೆದುಕೊಂಡು ಬಡತನದಲ್ಲಿ ಪೂಜ್ಯಪಾದನ ತಂಗಿ ತನ್ನ ಮಗನನ್ನು ಬ್ರಾಹ್ಮಣರೆ ಮನೆಯ ದನಗಳನ್ನು ಕಾಯಲು ಹಾಕಿದ್ದಳು. ತನ್ನ ಕಡು ಬಡತನವನ್ನು ನಿವಾರಿಸುವಂತೆ ತಂಗಿ ಸಿದ್ದಿ ಸಾಧಕನಾಗಿದ್ದ ಅಣ್ಣ ಪೂಜ್ಯಪಾದನನ್ನು ಕೇಳಿಕೊಳ್ಳುತ್ತಾಳೆ. ನಾಗಾರ್ಜುನನಲ್ಲಿ ಉಣ್ಣಲು ಇದ್ದ ಒಂದೇ ಒಂದು ಕಬ್ಬಿಣದ ಬಟ್ಟಲನ್ನು ಪೂಜ್ಯಪಾದ ಸುವರ್ಣವಾಗಿಸುತ್ತಾನೆ. ಇದನ್ನು ನೋಡುವ ನಾಗರ್ಜುನ ಈ ವಿದ್ಯೆಯನ್ನು ತನಗೂ ಕಲಿಸಿಕೊಡಬೇಕೆಂದು ಪೂಜ್ಯಪಾದನನ್ನು ಕಾಡುತ್ತಾನೆ. ಆಗ ಪೂಜ್ಯಪಾದ ಅವನಿಗೆ “ಪದ್ಮಾವತಿಯ ಮಂತ್ರಕ್ಷರ” ವನ್ನು ಜಪಿಸೆಂದು ಉಪದೇಶ ಮಾಡುತ್ತಾನೆ. ಬಳಿಕ ನಾಗಾರ್ಜುನ ಚಂಚಲ ಚಿತ್ತನಾಗಿ ‘ದೇಶಾಟನ’ ಮಾಡುತ್ತಾ ಉತ್ತರ ಕರ್ನಾಟಕದ ಮಧ್ಯದ ಪರ್ವತ ಒಂದಕ್ಕೆ ಹೋಗುತ್ತಾನೆ. ಅಲ್ಲಿ ಪದ್ಮಾವತಿ ಪ್ರತ್ಯೇಕಳಾಗಿ “ಸಿದ್ಧರಸ” ಪ್ರಯೋಗವನ್ನು ತೋರಿಸಲು ನಾಗಾರ್ಜುನ ಆ ಪರ್ವತವನ್ನೇ ಕನಕಗಿರಿ ಮಾಡತೊಡಗುತ್ತಾನೆ. ಅನಂತರ ಅವನು ಕೆಲವು ದೇಶಗಳಿಗೆ ಪ್ರಭುವಾಗಿ ಯಂತ್ರ ಮಾಡತೊಡಗುತ್ತಾನೆ. ಅನಂತರ ಅವನು ಕೆಲವು ದೇಶಗಳಿಗೆ ಪ್ರಭುವಾಗಿ ಯಂತ್ರ ಮಂತ್ರಾದಿಗಳನ್ನು ಕಲ್ಪಿಸಿ ‘ಸಿದ್ಧನಾಗಾರ್ಜುನ’ ಎಂದು ಕೀರ್ತಿ ಗಳಿಸುತ್ತಾನೆ. ಕಥಾಸಾರದ ೮ನೇ ಅಧಿಕಾರದಲ್ಲಿ ಹೀಗೆ ಉಲ್ಲೇಖ ಬರುತ್ತದೆ.

ಪೂಜ್ಯಪಾದನ ತಂಗಿಯ ಮಗನಾಗಿ, ಕೊಳ್ಳೇಗಾಲದವನೆಂದು ಗುರುತಿಸಿಕೊಂಡು ಉತ್ತರಕರ್ನಾಟಕದ, ಪರ್ವತದ ಮೇಲೆ ಪದ್ಮಾವತಿಯಿಂದ ಸಿದ್ಧಿ ಪಡೆದು ‘ಸಿದ್ಧನಾಗಾರ್ಜುನ’ ನಾಗುವ ಈತ ಯಾರು? ಬೌದ್ಧ ಧರ್ಮದ ಹೀನಯಾನ ಮಹಾಯಾನ ಪಂಥಗಳಲ್ಲಿ ನಾಗಾರ್ಜುನ ಎಂಬುವವನು ಮಹಾಯಾನ ಪಂಥದ ಮೂಲಪುರುಷ. ಈತ ಬೌದ್ಧಸಿದ್ಧ ಅಥವಾ ವಜ್ರಾಯಾನ ಪಂಥವು ನಾಥ, ಸೂಫಿ, ಶೈವ ಪಂಥಗಳ ಜೊತೆ ಸಂಕರವಾಗಿ ಬೇರೆ ಬೇರೆ ರೂಪುಗಳನ್ನು ಪಡೆಯುತ್ತದೆ. ಈ ನಾಗಾರ್ಜುನನ ಪಂಥ ಕರ್ನಾಟಕದ ಉತ್ತರ ದಕ್ಷೀಣ ಭಾಗದಲೆಲ್ಲಾ ಹರಡಿ ಬೇರೆ ಬೇರೆ ರೂಪದಲ್ಲಿ ಮುಂದುವರಿಯುತ್ತದೆ. ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಕಡೆ ಪ್ರಚಲಿತದಲ್ಲಿರುವ ಮಂಟೇಸ್ವಾಮಿ ಮಲೇಮಾದೇಶ್ವರ, ಮುಡುಕುತೊರೆ ಮಲ್ಲಪ್ಪನ ಪರಂಪರೆಗಳು ಈ ಹಿನ್ನೆಲೆಯ ಪಂಥಗಳಾಗಿವೆ.

ಕಥಾಸಾರದಲ್ಲಿ ಉಲ್ಲೇಖವಾಗುವ ಕೊಳ್ಳೇಗಾಲದ ನಾಗಾರ್ಜುನನಿಗೂ, ಈ ವಜ್ರಯಾನಿ ನಾಗಾರ್ಜುನನಿಗೂ ಮತ್ತವನ ಪಂಥ ಪರಂಪರೆಗಳಿಗೂ ಏನಾದರೂ ಸಂಬಂಧವಿದೆಯೆ? ಕೊಳ್ಳೇಗಾಲದ ನಾಗಾರ್ಜುನ ಸಹ ಕರ್ನಾಟಕದ ದಕ್ಷಿಣ-ಉತ್ತರ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತಾ ‘ಸಿದ್ದ’ನಾಗಿ ಗುರುತಿಸಿಕೊಳ್ಳುತ್ತಿರುವುದು ಅತ್ಯಂತ ಕುತೂಹಲಕಾರಿ ಸಂಗತಿಯಾಗಿದೆ. ಈ ಇಬ್ಬರು ಬೇರೆ ಬೇರೆ ನಾಗಾರ್ಜುನರೆ? ಅಥವ ಒಬ್ಬ ನಾಗಾರ್ಜುನನೇ ಬೇರೆ ಬೇರೆ ಕಾಲಘಟ್ಟಗಳಲ್ಲಿ, ಬೇರೆ ಬೇರೆ ಸ್ಥಳಗಳಲ್ಲಿ ಗುರುತಿಸಿಕೊಂಡಿರುವನೆ? ಅಥವಾ ಬೌದ್ಧಸಿದ್ಧನಾಗಾರ್ಜುನನ ಮುಂದುವರಿಕೆಯಾಗಿ ಮತ್ತೊಬ್ಬ ‘ಸಿದ್ಧ’ ಅದೇ ಹೆಸರಿನಲ್ಲಿ ಮರುಹುಟ್ಟು ಎಂಬಂತೆ ಕೊಳ್ಳೇಗಾಲದಲ್ಲಿ ಕಾಣಿಸಿಕೊಂಡಿರುವನೆ ಇವೇ ಮೊದಲಾದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ದೇವಚಂದ್ರನ ಒಬ್ಬ ಜೈನಕವಿ, ರಾಜಾವಳಿ ಕಥಾಸಾರ ಒಂದು ಜೈನ ಕೃತಿ ಎನಿಸಿದರು, ದೇವಚಂದ್ರ ತನ್ನನ್ನು ಒಬ್ಬ ‘ಜೈನ ಬ್ರಾಹ್ಮಣ’ ಎಂದು ಗುರುತಿಸಿಕೊಳ್ಳುವುದು ಗಮನಾರ್ಹ. ಅದೇ ರೀತಿ ರಾಜಾವಳಿಕತೆಯಲ್ಲಿ ಯಾವುದು ಜೈನಧರ್ಮದ ತತ್ವವೆಂದು ಪ್ರತಿಪಾದನೆಯಾಗಿದಿಯೋ ಅದು ಹಿಂದೂ ಅಥವಾ ವೈದಿಕ ಧರ್ಮದ ಪ್ರತಿಪಾದನೆಯಾಗಿಯೂ ಕಾಣುತ್ತದೆ.

ಬ್ರಾಹ್ಮಣರು ಆದಿ ಬ್ರಹ್ಮನ ಮುಖದಿಂದ ಹುಟ್ಟಿದರು. ಕ್ಷತ್ರಿಯರು ಬ್ರಹ್ಮನ ಭುಜದಿಂದ ಹುಟ್ಟಿದರು, ವೈಶ್ಯರು ಕಾಲುಗಳಿಂದಲೂ, ಶೂದ್ರು ಪಾದಗಳಿಂದಲೂ ಹುಟ್ಟಿದರು. ಮಾವನ ಜಾತಿ ಒಂದೇ ಆದರೂ ಅವರವರ ವೃತ್ತಿ ಭೇದದಿಂದ ಬ್ರಾಹ್ಮಣರೇ ಮೊದಲಾದ ೧೮ ಜಾತಿಗಳಾದವು ಎಂಬುದಾಗಿ ‘ಪ್ರಥಮ’ ಅಧಿಕಾರದಲ್ಲಿ ಉಲ್ಲೇಖ ಬರುತ್ತದೆ. ಹಾಗೇ ಬ್ರಾಹ್ಮಣ ಗಂಡಿಗೂ ಕ್ಷತ್ರೀಯ ವೈಶ್ಯ ಹೆಣ್ಣಿಗೂ ಹುಟ್ಟುವ ಮಗು ಕ್ಷತ್ರಿಯ ವೈಶ್ಯ ಆಗುತ್ತದೆ. ಕ್ಷತ್ರಿಯ ಗಂಡಿಗೂ ಬ್ರಾಹ್ಮಣ ಹೆಣ್ಣಿಗೂ ಹುಟ್ಟುವ ಮಗು ಕೇವಲ ಕ್ಷತ್ರಿಯ ಆಗುತ್ತದೆ. ವೈಶ್ಯ ಗಂಡಿಗೂ, ಕ್ಷತ್ರೀಯ ಹೆಣ್ಣಿಗೂ ಹುಟ್ಟುವ ಮಗು ಕ್ಷತ್ರೀಯ, ವೈಶ್ಯ ಆಗುತ್ತದೆ. ಉತ್ತಮ ವರ್ಣದವರು, ಅದಮ ವರ್ಣದವರು ಸೇರಿ ಹುಟ್ಟುವ ಮಗು ವರ್ಣಕ್ಕೆ ಸೇರುವುದಿಲ್ಲ ಎಂದು ಕಥಾಸಾರದ ೧೨ನೇ ಅಧಿಕಾರದಲ್ಲಿ ಉಲ್ಲೇಖವಿದೆ.

ಈ ರೀತಿಯ ಜಾತಿಯ ಹುಟ್ಟು ಮತ್ತು ವರ್ಣಸಂಕರ ಕುರಿತ ಪ್ರತಿಪಾದನೆಯ ಜೈನಧರ್ಮದ ತತ್ವ ಸಿದ್ಧಾಂತಗಳ ಪ್ರತಿಪಾದನೆ ಅಲ್ಲ. ಇವು ಯಥಾವತ್ತಾಗಿ, ಹಿಂದೂ ಅಥವಾ ವೈದಿಕ ಧರ್ಮದ ಪ್ರತಿಪಾದನೆಯಂತಿದೆ. ತಾನೊಬ್ಬ ‘ಜೈನಬ್ರಾಹ್ಮಣ’ನೆಂದು ಗುರುತಿಸಿಕೊಳ್ಳುವ ಈತ ವೈದಿಕ ಮೂಲವನ್ನೇ ಹೇಳಿಕೊಳ್ಳುತ್ತಿರುವುದೇ ಆಗಿದೆ. ಇದು ಜೈನಧರ್ಮದ ಹೆಸರಿನಲ್ಲಿ ಹಿಂದೂ, ವೈದಿಕ ಧರ್ಮಸಂಸ್ಕೃತಿ ತತ್ವ ಪ್ರತಿಪಾದಿಸಿದಂತೆ ಕಾಣುತ್ತದೆ.

ರಾಜಾವಳಿ ಕಥಾಸಾರ ತಣ್ಣನೆ ಹರಿಯುತ್ತಾ ಅಲ್ಲಲ್ಲಿ ಮೊರೆವ ತೊರೆಯಂತೆ ಉಗ್ರವೂ, ವ್ಯಗ್ರವೂ, ಕಠೋರವೂ ಏನಿಸುವ ಧಾರ್ಮಿಕ ಸಂಘರ್ಷಗಳಲ್ಲಿ ಹರಡಿಕೊಳ್ಳುತ್ತಾ ಹೋಗುತ್ತದೆ. ರಾಜಾವಳಿಕತೆ ಓದುತ್ತಿದ್ದರೆ ‘ಭಾರತ ಒಂದು ಧರ್ಮ ಸಮರ ನಿರತನಾಡು’ ಎಂಬ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್‌ರವರ ಒಂದು ಮಾತು ನೆನಪಿಗೆ ಬರುತ್ತದೆ. ಬಾಬ್ರಿಮಸೀದಿ ದ್ವಂಸದಿಂದ ಇಂದಿನ ಗುಜರಾತ್ ಗಲಭೆಯವರೆಗಿನ ಘಟನೆಗಳು ಕಣ್ಮುಂದೆ ಬರುತ್ತವೆ.

ಜೈನ ಮತಾಂಧನಂತೆ ಕಾಣಿಸಿಕೊಳ್ಳುವ ದೇವಚಂದ್ರ ಜೈನಧರ್ಮವೇ ಮೂಲವೂ, ಪ್ರಾಚೀನವೂ, ಶ್ರೇಷ್ಟವು ಎಂದು ಹೇಳುವ ಪ್ರಯತ್ನಿಸುತ್ತಾನೆ. ಹಾಗೇ ತನ್ನ ಜೈನಧರ್ಮದ ಮೇಲಾದ ಆಕ್ರಮಣಗಳನ್ನು, ಇತರ ಧರ್ಮ, ಮತಪಂಥಗಳ ಮತೀಯ ಸಂಘರ್ಷಗಳನ್ನು ಕುರಿತು ಬರೆದುಕೊಳ್ಳುತ್ತಾನೆ.

ಬೌದ್ಧರು ರಾಜ್ಯದಲ್ಲಿ ಎಲ್ಲಾ ವಿದ್ಯೆಗಳಿಂದ ಅತ್ಯಂತ ಪ್ರಬಲರಾಗಿ ಸಂಖ್ಯಾದಿ ಮತಗಳನ್ನು ವಾದದಿಂದ ಗೆದ್ದು ವೀರಶೈವರ ಮತವನ್ನು ಹಿಡಿದು ನೀವು ಲಿಂಗವನ್ನೇಕೆ ಕಟ್ಟುರಿವಿರಿ ಇದರ ಮಹತ್ವವನ್ನು ವಿವರಿಸಿದಿದ್ದಲ್ಲಿ ಈ ಲಿಂಗವನ್ನು ಕಿತ್ತು ಬಿಸಾಡಬೇಕೆಂದು ವಾದ ಮಾಡುತ್ತಾರೆ. ಬೌದ್ಧರು ಸಂಘವನ್ನು ನೋಡಿ ಶ್ರವಣರೆಂದು ತಿಳಿದು ಬಹಳವಾದ ದ್ವೇಷವನ್ನು ಹೊಂದಿ ಜೈನರ ಹೆಸರಿಲ್ಲದಂತೆ ಮಾಡಬೇಕೆಂದು ಬುದ್ಧನ ಭಕ್ತನಾದ ಹಿಮಶೀತಳ ಮಹಾರಾಜನಲ್ಲಿಗೆ ಹೋದರು. ಅಲ್ಲಿ ಅವರು ಜೈನರಿಗೂ ನಮಗೂ ವಿವಾದ ಉಂಟಾಗಿರುವುದರಿಂದ ಅಕಲಂಕರನ್ನು ಕರೆಸಬೇಕೆಂದು ಹೇಳಿ ಕರೆಸಿಕೊಂಡರು. ವಾದದಲ್ಲಿ ಜೈನರು ಸೋತರೆ ಅವರನ್ನು ನಿಶ್ಯೇಷವಾಗುವಂತೆ  ಮಾಡಿ ಕರ್ನಾಟಕ, ಆಂಧ್ರ, ತುಳುವ, ಪಾಂಡ್ಯ, ಚೋಳ ಮೊದಲಾದ ದೇಶದಿಂದ ಹೊರದೂಡುವುದು. ಅಂತೆಯೇ ಬೌದ್ಧರು ಸೋತಲ್ಲಿ ಅವರಿಗೂ ಹಾಗೇ ಮಾಡುವುದೆಂದು ಭಾಷಾ ಪತ್ರ ಬರೆಸಲಾಗುತ್ತದೆ. ಅದರಂತೆ ಬೌದ್ಧರು ಸೋತಮೇಲೆ ದೇಶದಿಂದ ಹೊರಕ್ಕೆ ಅಂತರ ದೀಪಗಳಾದ ಸಿಂಹಳ ದೀಪ, ಹಂಸದೀಪಗಳಿಗೇ ಓಡಿಸದೇಶದಿಂದ ಹೊರಕ್ಕೆ ಅಂತರ ದೀಪಗಳಾದ ಸಿಂಹಳದೀಪ, ಹಂಸದೀಪಗಳಿಗೇ ಓಡಿಸಲಾಯಿತು. ಕೊನೆಗೆ ಹಿಮಶೀತಲರಾಜ ಜೈನನಾಗುತ್ತಾನೆ. ಇದು ಬೌದ್ಧ ಜೈನರ ಸಂಘರ್ಷ.

ಈ ಕಡೆ ಮದುರಾಪುರದಲ್ಲಿ ಕೂನಪಾಂಡ್ಯನು ಜಿನಧರ್ಮ ದ್ವೇಷಿಯಾಗಿ ತನ್ನ ದೇಶದಲ್ಲಿದ್ದ ೯೮೫ ಚೈತ್ಯಾಲಯಗಳನ್ನು ಮಧುರೆಯಲ್ಲಿ ೫೦ ಬಸದಿಗಳನ್ನು ತೆಗೆಯಿಸಿ, ಪಾಂಡ್ಯ ವಂಶದ ಕುಲಸ್ವಾಮಿಯಾದ ನೇಂಇಶ್ವರ ಮಹಾಚೈತ್ಯಾಲಯದ ಮೂಲ ಸ್ವಾಮಿಯನ್ನು ಮರೆಸಿ, ಕೂಷ್ಮಾಂಡಿನಿದೇವಿ ಪ್ರತಿಮೆಗೆ ಮೀನಾಕ್ಷಿ ಎಂಬ ಹೆಸರನ್ನಿಟ್ಟು ಅಲ್ಲಿದ್ದ ಜಿನಮುನಿಗಳನ್ನು ಕೊಲ್ಲಿಸುತ್ತಾನೆ. ಕಥಾಸಾರದ ೮ ಮತ್ತು ೯ನೇ ಅಧಿಕಾರಗಳಲ್ಲಿ ಈ ಘಟನೆಗಳ ಉಲ್ಲೇಖ ಬರುತ್ತದೆ.

ಬೌದ್ಧರು ವೀರಶೈವರನ್ನು ಹೀಯಾಳಿಸುವುದು, ಜೈನರು ಬೌದ್ಧರನ್ನು ದೇಶಬಿಟ್ಟು ಓಡಿಸುವುದು, ಕೂನಪಾಂಡ್ಯ ನೇಮಿನಾಥ ಬಸದಿಯನ್ನು ಮಧುರೆ ಮೀನಾಕ್ಷಿ ದೇವಾಲಯ ಮಾಡಿ, ಜೈನರನ್ನು ಕೊಲ್ಲಿಸುವುದು ಅತ್ಯಂತ ಭೀಕರವೂ, ಮತಾಂಧತೆಯಾಗಿಯೂ ಕಾಣುತ್ತದೆ. ರಾಜಾವಳಿಕತೆಯ ಈ ಮತ ಸಂಘರ್ಷಗಳನ್ನು ನೆನಪಿಗೆ ತರುತ್ತವೆ.

ಇಂದು ಯಾರು ಭಾರತದಲ್ಲಿನ ಮುಸ್ಲಿಮರನ್ನು, ಕ್ರೈಸ್ತರನ್ನು ಮತಾಂಧರು, ಮತಾಂತರಿಗಳು ಭಯೋತ್ಪಾದಕರುಗಳೆಂದು ಬ್ರಾಂಡ್ ಮಾಡುತ್ತಾ ಆಕ್ರಮಣ ಮಾಡಹೊರಟಿದ್ದಾರೋ ಅವರ ವಿಕೃತ ಧರ್ಮಾಂಧತೆಯ ಅಟ್ಟಹಾಸದ ಕರಾಳ ಮುಖಗಳನ್ನು ರಾಜಾವಳಿಕತೆಯಲ್ಲಿ ಕಾಣುತ್ತವೆ.

ಸ್ಮಾರ್ತ ಬ್ರಾಹ್ಮಣನಾದ ಶಂಕರಾಚಾರ್ಯನು ಜೈನೋಪಾಧ್ಯಾಯರಲ್ಲಿಯೇ ವಿದ್ಯಾಭ್ಯಾಸ ಮಾಡಿ ವೇದ ವೇದಾಂಗಾದಿ ಸಕಲಶಾಸ್ತ್ರ ಪ್ರವೀಣನಾಗುತ್ತಾನೆ. ಆತನು ದೇವತಾ ಪ್ರಸನ್ನತೆಯನ್ನು ಹೊಂದಿ ಶುದ್ಧ ಶೈವಾಚಾರದಲ್ಲಿ ಪ್ರವರ್ಧಮಾನವಾಗಿ ಶೃಂಗೇರಿ ಬಸದಿಯಲ್ಲಿ ಜಿನಪ್ರತಿಮೆಯನ್ನು ಮರೆಮಾಡಿ ಸರಸ್ವತಿ ಎಂದು ಹೆಸರಿಟ್ಟು ಪೂಜಿಸಿದನು. ಅನಂತರ ಅಲ್ಲಿಯೇ ಮಠವನ್ನು ಕಟ್ಟಿಸಿ ಅನೇಕ ಶಿಷ್ಯರನ್ನು ಮಾಡಿಕೊಂಡು ಪ್ರಸಿದ್ಧನಾಗುತ್ತಾನೆ.

ರಾಮಾನುಜನು ಸರ್ವಕ್ಕೂ ‘ತಿರು’ ಎಂಬ ಶಬ್ದವ ಮೊದಲಾಗಿ ಹೇಳಿಸುತ್ತಾ, ತಿರುಪತಿಗೆ ಹೋಗಿ ಅಲ್ಲಿಯ ಅನೇಕ ಜನರನ್ನು ಶ್ರೀವೈಷ್ಣವರನ್ನಾಗಿ ಮಾಡಿದನು. ಅಲ್ಲಿಂದ ಕಾಶಿಗೆ ಹೋಗಿ ಅಲ್ಲಿ ಅವನು ವಿಷ್ಣುಮೂರ್ತಿಯನ್ನು ಸ್ಥಾಪಿಸಿ ಮುಂದಕ್ಕೆ ಹೋಗಲು ಜನರೆಲ್ಲಾ ಹಿಂದಾದರು. ಆಗ ಸಾವಿರಾರು ಜನ ಹೊಲೆಯರು ಜೊತೆಯಲ್ಲಿ ನಡೆಯಲು ಅವರನ್ನು ತಿರುಕುಳದಾಸರೆಂದು ಶಂಖ, ಜಾಗಟೆ ಕೊಟ್ಟನು, ಅನಂತರ ಮೇಲುಕೋಟೆಯನ್ನು ಸೇರಿ ಮಧ್ಯಪ್ರದೇಶದಲ್ಲಿದ್ದ ಜಿನಾಲಯವನ್ನು ಮರೆಸಿ ಚಲುವರಾಯನೆಂದು ಸ್ಥಾಪಿಸಿದನು. ಬಸದಿಗಳಲ್ಲಿದ್ದ ಹೇಮರಜತ ಮಯೋಪಕರಣಗಳ ಪ್ರತಿಮೆಗಳನ್ನು ಕಳ್ಳ ಭಂಟರಿಂದ ತರಿಸಿ ವಿಷ್ಣುಗೃಹದಲ್ಲಿ ಪ್ರತಿಮೆಗಳನ್ನು ಮಾಡಿಸುತ್ತಿದ್ದನು. ಅನಂತರ ಬಿಳಿಯಕಲ್ಲು ಬೆಟ್ಟದಲ್ಲಿ ರಂಗಾಲರಯೋದ್ಧರಣ ಮಾಡಿ ತಿರುಕುಲ ದಾಸರಿಂದ ಪೂಜೆ ಮಾಡಿಸಿ ವೈಷ್ಣವ ಮತೋದ್ಧಾರಕನಾದನು. ಶಂಕರ, ರಾಮಾನುಜರ ಈ ಕುಕೃತ್ಯಗಳನ್ನು ಕಥಾಸಾರದ ೯ನೇ ಅಧಿಕಾರದಲ್ಲಿ ವಿವರಿಸಲಾಗುತ್ತದೆ.

ಶಂಕರಾಚಾರ್ಯರು, ರಾಮಾನುಜಾಚಾರ್ಯರು ಹಿಂದೂ ಅಥವಾ ವೈದಿಕ ಧರ್ಮದ ಪುನರುಜ್ಜೀವಕರು ಎನಿಸಿದ್ದಾರೆ. ಈ ಆಚಾರ್ಯರು ಮಾಡಿರುವ ಹಿಂದೂ ಧರ್ಮ ಪುನರುಜ್ಜೀವನ ಏಂತಾದ್ದು? ಇಂದು ಮುಸ್ಲಿಮರು, ಕ್ರೈಸ್ಥರು, ಬೌದ್ಧರು ಮಾಡಹೊರಟಿದ್ದಾರೆಂದು ಹೇಳುತ್ತಿರುವ ಕೆಲಸವನ್ನೇ ಅಥವ ‘ಮಂದಿರ’ ಕಟ್ಟುವಂತ ಕೆಲಸವನ್ನೇ ಆಚಾರ್ಯರು ಮಾಡಿದ್ದಾರೆ. ಶಂಕರಾಚಾರ್ಯ ಶೃಂಗೇರಿಯ ಜೈನಬಸದಿಯನ್ನು ನಾಶಗೊಳಿಸಿ ಶಾರದಾದೇವಸ್ಥಾನವಾಗಿ ಪರಿವರ್ತಿಸಿ ವೈದಿಕ ಧರ್ಮ ಪುನರುಜ್ಜೀವನಗೊಳಿಸಿದ್ದಾನೆ. ರಾಮಾನುಜಾಚಾರ್ಯ ಮಾಡಿದ್ದಾರೆ. ಶಂಕರಾಚಾರ್ಯ ಶೃಂಗೇರಿಯ ಜೈನಬಸದಿಯನ್ನು ನಾಶಗೊಳಿಸಿ ಶಾರದಾದೇವಸ್ಥಾನವಾಗಿ ಪರಿವರ್ತಿಸಿ ವೈದಿಕ ಧರ್ಮ ಪುನರುಜ್ಜೀವನಗೊಳಿಸಿದ್ದಾನೆ. ರಾಮಾನುಜಾಚಾರ್ಯ ತಿರುಪತಿಯಲ್ಲಿದ್ದ ಬೌದ್ಧವಿಹಾರವನ್ನು ವೈಷ್ಣವೀಕರಿಸಿ ವೆಂಕಟರಮಣನೆಂದು ಮಾಡಿ, ಕಾಶಿ, ಮೇಲುಕೋಟೆ, ಬಿಳಿಕಲ್ಲು ಬೆಟ್ಟಗಳಲ್ಲಿದ್ದ ಜೈನ, ಬೌದ್ಧ ಮಂದಿರಗಳನ್ನು ವೈಷ್ಣವೀಕರಿಸಿ ವೈದಿಕ ಧರ್ಮ ಪುನರುಜ್ಜೀವಗೊಳಿಸಿದ್ದಾನೆಂಬುದನ್ನು ಕಥಾಸಾರ ಸ್ಪಷ್ಟವಾಗಿ ಹೇಳುತ್ತದೆ. ತಿರುಪತಿ ವೆಂಕಟರಮಣರಾಯ, ಕಾಶಿ ರಾಮೇಶ್ವರಾಯ, ಮೇಲುಕೋಟೆ ಚೆಲುವರಾಯ, ಬಿಳಿಗಿರಿರಂಗನ ಬೆಟ್ಟದಲ್ಲಿ ಬಿಳಿಗಿರಿರಂಗರಾಯನೆಂದು ವೈಷ್ಣವ ಕೇಂದ್ರಗಳಾಗಿ ಪರಿವರ್ತನೆಯಾದದ್ದು ರಾಮಾನುಜರಿಂದ. ಭಾರತದಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಸ್ವಾತಂತ್ರ್ಯ, ಸಮಾನತೆ, ಅಹಿಂಸೆ, ಶಾಂತಿ, ಸಂದೇಶಗಳನ್ನು ಸಾರಿದ ಧರ್ಮಗಳೆಂದರೆ ಜೈನ ಮತ್ತು ಬೌದ್ಧಧರ್ಮಗಳು. ಈ ಧರ್ಮಗಳ ಪ್ರಾಚೀನ ಜಿನಾಲಯ, ವಿಹಾರಗಳನ್ನು ಹಿಂದೂಧರ್ಮ ಸುಧಾರಕರು ಶೈವ, ವೈಷ್ಣವ,ಹಿಂದೂ ದೇವಾಲಯಗಳನ್ನಾಗಿ ಮಾರ್ಪಡಿಸಿರುವುದು ಸ್ಪಷ್ಟವಾಗುತ್ತದೆ. ರಾಜಾವಳಿ ಕಥಾಸಾರದ ಈ ಉಲ್ಲೇಖಗಳೇ ಇದಕ್ಕೆ ಪುರಾವೆಗಳು. ಇಂತಹ ಹಿಂದೂಧರ್ಮ ಮತ್ತು ಧರ್ಮಸುಧಾರಕರು ಹೇಗೆ ಪರಮತ ಸಹಿಷ್ಣುಗಳಾಗುತ್ತಾರೆ? ಇಂತಹ ವಿಕೃತ ಧರ್ಮ ಸಂಸ್ಕೃತಿಯ ಪರಂಪರೆಯನ್ನು ಹೊಂದಿರುವ ಆರ್.ಎಸ್.ಎಸ್., ವಿ.ಹೆಚ್.ಪಿ., ಹಿಂದೂ ಧಾರ್ಮಿಕ ಸಂಘಟನೆಗಳು, ಸಾಧುಸಂತರು ಬಾಬ್ರಿಮಸೀದಿ ಉರುಳಿಸಿ ರಾಮಮಂದಿರ ಕಟ್ಟಲು ಅರ್ಹರೆ?

ಅದೂ ಅಲ್ಲದೆ ಬಾಬರನ್ನು ಕಟ್ಟಿಸಿದ ಮಸೀದಿಸ್ಥಳದಲ್ಲಿ ಹಿಂದೆ ಹೀದೂ ದೇವಾಲಯವಿತ್ತು ಎಂಬುದರಲ್ಲಿ ಎಷ್ಟು ಸತ್ಯವಿದೆ? ಅಲ್ಲಿ ರಾಮ ಹುಟ್ಟಿರುವುದಕ್ಕೆ ಏನು ಪುರಾವೆ ಇದೆ? ಪ್ರಾಕ್ತಾನ ಶಾಸ್ತ್ರಾಧಾರಗಳು ಹೇಳುವ ಪ್ರಕಾರ ಅಯೋಧ್ಯೆಯಲ್ಲಿ ಮೊದಲಿದ್ದದ್ದು ಬೌದ್ಧ ವಿಹಾರಗಳು ಎಂದು ತಿಳಿದುಬರುತ್ತದೆ. ಬಾಬರ್ ಮಸೀದಿ ಕಟ್ಟಿಸುವ ಮುಂಚೆ ಹಿಂದೂ ದೇವಾಲಯ ಎನ್ನುವುದಾದರೆ ಆ ಹಿಂದೂ, ಶೈವ, ವೈಷ್ಣವ ದೇವಾಲಯಗಳಿಗೂ ಮೊದಲು ಅಲ್ಲಿ ಬೌದ್ಧವಿಹಾರಗಳಿದ್ದು ಆ ಬೌದ್ಧ ವಿಹಾರವನ್ನು ವೈದಿಕ ಧರ್ಮ ಸುಧಾರಕರಂತವರು ಹಿಂದೂ ದೇವಾಲಯವಾಗಿ ಪರಿವರ್ತಿಸಿರುವುದು ಸ್ಪಷ್ಟ. ಹೀಗಿರುವಾಗಿ ರಾಮ ಹುಟ್ಟಲು ಅಯೋಧ್ಯೆಯಲ್ಲಿ ಸ್ಥಳವೆಲ್ಲಿತ್ತು? ಡಾ. ಜಮಾನ್ ದಾಸ್ ಹೇಳುವಂತೆ ತಿರುಪತಿ ಬಾಲಾಜಿ ದೇವಸ್ಥಾನ ಹಿಂದೆ ಬುದ್ಧನ ವಿಹಾರವಾಗಿದ್ದು ಅದನ್ನು ವೈಷ್ಣವ ದೇವಾಲಯ ಮಾಡಿದ್ದಾರೆಂದು ತಿಳಿದು ಬರುತ್ತದೆ. ಕಾಶಿ, ಮೇಲುಕೋಟೆ, ಬಿಳಿಗಿರಿರಂಗನ ಬೆಟ್ಟದ ಜಿನಾಲಯ, ವಿಹಾರಗಳನ್ನು ಸಹ ರಾಮಾನುಜರು ವೈಷ್ಣವೀಕರಣ ಮಾಡಿರುವುದನ್ನು ಕಥಾಸಾರ ಸ್ಪಷ್ಟಪಡಿಸುತ್ತದೆ.

ಹಿಂದೂ ಅಥವಾ ವೈದಿಕ ಧರ್ಮ ಸಂಸ್ಕೃತಿ ಸಮುದಾಯಗಳ ಮೇಲೆ ಮುಸ್ಲಿಂ ಕ್ರೈಸ್ತ ದೊರೆಗಳು ಆಕ್ರಮಣಮಾಡಿ ತಮ್ಮ ಧರ್ಮ ಸಂಸ್ಕೃತಿಯನ್ನು ಸ್ಥಾಪಿಸಿಬಿಟ್ಟಿದ್ದಾರೆ. ಆದ್ದರಿಂದ ಆ ಚರಿತ್ರೆಯನ್ನು ಅಳಿಸಿ ಹಾಕಿ ಹಿಂದೂಗಳು ತಮ್ಮ ಧರ್ಮ ಸಂಸ್ಕೃತಿಯನ್ನು ಕಟ್ಟಬೇಕು ಎನ್ನುವುದಾದರೆ, ಈ ದೇಶದ ಜೈನರು, ಬೌದ್ದರು ಇಲ್ಲಿನ ಹಿಂದೂ, ವೈದಿಕ, ಶೈವ, ವೈಷ್ಣವ ಪಂಥಗಳ ವಿರುದ್ಧ ಹೋರಾಡಿ ತಮ್ಮ ಧರ್ಮ ಸಂಸ್ಕೃತಿಯನ್ನು ಪುನರ್ ರಚಿಸುವುದು ನ್ಯಾಯತಾನೆ?

ಈ ತಿರುಕುಳ ದಾಸರ ಬಗ್ಗೆ ಬರೋಣ. ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆಗಳ ಕಡೆ ಇಂದಿಗೂ ದಲಿತ ಸಮುದಾಯದಲ್ಲಿ (ಹೊಲೆಮಾದಿಗರು) ವೈಷ್ಣವ ಲಾಂಛನವೆನಿಸಿದ ಕೆಂಚಣ್ಣ ಕರಿಯಣ್ಣರೆಂಬ ರಾಕ್ಷಸರೂಪದ ನಾರಾಯಣನ ಮುಖವಾಡಗಳನ್ನು ಪೂಜಿಸುತ್ತಾ ತಮ್ಮನ್ನು “ದಾಸರು” ಎಂದು ಕರೆದುಕೊಳ್ಳುವ ಒಂದು ಸಂಪ್ರದಾಯವಿದೆ. ಈ ದಾಸರು ಯಾರು? ರಾಮಾನುಜರ ದೆಸೆಯಿಂದಾಗಿ ವೈಷ್ಣವರಾದ ಸಾವಿರಾರು ಜನ ಹೊಲೆಯರೇ ಕಥಾಸಾರದ ೯ನೇ ಅಧಿಕಾರದಲ್ಲಿ ಉಲ್ಲೇಖವಾಗುತ್ತಿರುವ ತಿರುಕುಳ ದಾಸರು. ಅವರ ಬಳಿ ಇರುವ ಶಂಖ, ಜಾಗಟೆ, ನಾಮ, ಮುದ್ರೆ, ವೈಷ್ಣವ ಲಾಂಛನಗಳು ಇವು ರಾಮಾನುಜರು ಕೊಟ್ಟ ಲಾಂಛನಗಳು ಎಂಬುದು ಸಹ ಕಥಾಸಾರದಿಂದ ಸ್ಪಷ್ಟವಾಗುತ್ತದೆ. ಬಿಳಿಗಿರಿರಂಗನ ಬೆಟ್ಟವನ್ನು ವೈಷ್ಣವೀಕರಿಸಿ ಮೊದಲಿಗೆ ಅಲ್ಲಿ ಪೂಜಾರಿಗಳಾಗಿ ನೇಮಕ ಗೊಂಡವರು ತಿರುಕುಳದಾಸರೆಂಬ ಹೊಲೆಯರು ಎಂಬುದು ಸಹ ಕಥಾಸಾರದಲ್ಲಿ ಉಲ್ಲೇಖವಾಗುತ್ತದೆ. ಆದರೆ ದಲಿತರು ವೈಷ್ಣವೀಕರಣವಾಗಿ ಹಿಂದೂಗಳಾದರೂ ಸಹ ಆ ಧರ್ಮದಲ್ಲಿ ಸಮಾನತೆ ಸಿಗದೆ ಅಲ್ಲಿಯೂ ಅಸ್ಪೃಶ್ಯರಾಗಿ, ಗುಲಾಮರಾಗಿ, ದಾಸರಾಗೇ ಉಳಿದು ಕೊಂಡಿರುವುದು ವೈದಿಕ ಮತಾಂತರದ ಚಾರಿತ್ರಿಕ ವ್ಯಂಗ್ಯವಾಗಿದೆ.

ಹೊಲೆಮಾದಿಗರ ಹುಟ್ಟು, ಶ್ರೇಷ್ಟತೆ, ಮತ್ತು ‘ಹೊಲೆಯರು ಹನ್ನೆರಡು ಬಣ್ಣದವರು’ ಎಂದು ಇಂದಿಗೂ ನಂಬುವ ದಲಿತ ಸಮುದಾಯದ ನಂಬಿಕೆಗಳಿಗೆ ಸಂಬಂಧಿಸಿದಂತೆ ಕುತೂಹಲಕಾರಿ ಚರಿತ್ರೆಯನ್ನು ರಾಜಾವಳಿ ಕಥೆ ಉಲ್ಲೇಖಿಸುತ್ತದೆ.

ಹೊಲೆಯನು ಉಮೆಯ ಮೊಲೆಯಲ್ಲಿ ಕಡೆಯಲಿ ಹುಟ್ಟ ಕುಲದಲ್ಲಿ ಶ್ರೇಷ್ಟನಾಗಿ ಶಿವನ ಬಲಭುಜವಾಗಿ ಋಷಿಗಳಿಗೆ ಸ್ತುತ್ಯನೆನಿಸಿದನು. ಆತನ ಮಗಳ ಸಂತಾನದಲ್ಲಿ ಋಷಿಗಳು ಅನೇಕರಾದರು.

ಮಾದಿಗನು ಏಳುದಿನ ಹಿರಿಯನಾಗಿ ಭೂಮಿಗೆ ಬಂದುದರಿಂದ ತಾನುಂಡ ಎಂಜಲನ್ನು ಎಲ್ಲರಿಗೂ ಯೋಗ್ಯವೆಂದು ಮಾಡಿದನು. ಅಲ್ಲದೆ ಆತನು ಗಂಗಾಧರನಿಗೆ ಗಜಚರ್ಮಪಾದುಕೆಗಳನ್ನು ಕೊಟ್ಟುದರಿಂದ ಆತನಿಗೆ ‘ಮಾತಂಗ’ನೆಂಬ ಹೆಸರಾಯಿತು. ಭಾಗವತದ ಮಾದಿಗ ವೇಷವನ್ನು ಪುರಾಣದಲ್ಲಿ ಸವಿಸ್ತಾರವಾಗಿ ಹೇಳಿದುದರಿಂದ ತಾನೇ ಹೆಚ್ಚೆಂದು ಹೇಳಿದನು. ಎಂಬುದಾಗಿ ಹೊಲೆಮಾದಿಗರ ಕುರಿತು ಕಥಾಸಾರದ ೧೧ನೇ ಅಧಿಕಾರದಲ್ಲಿ ವಿವರಿಸಲಾಗುತ್ತದೆ.

ದಲಿತರು ತಾವು ಶಿವಪಾರ್ವತಿಯ ಒಕ್ಕಲಿನವರು, ನಾವು ಅವರ ಮಕ್ಕಳು ಎಂದು ಇಂದಿಗೂ ನಂಬುತ್ತಾರೆ. ಹೊಲೆಮಾದಿಗರು ಬಲಗೈ, ಎಡಗೈನವರು, ತಾವೇ ‘ಆದಿಜನರು’ (ಆದಿಕರ್ನಾಟಕ, ಆದಿಜಾಂಬವ, ಆದಿದ್ರಾವಿಡ ಹೀಗೆ) ಎಂದು ನಂಬುತ್ತಾರೆ. ಉಮೆಯ ಮೊಲೆಯಲ್ಲಿ ಕಡೆಯಲ್ಲಿ ಹುಟ್ಟಿದ್ದು, ಶಿವನ ಬಲ, ಎಡಭುಜ ಎಂಬುದು, ಭೂಮಿಗೆ ಏಳುದಿನಕ್ಕೆ ಹಿರಿಯರು ಮಾದಿಗರು ಎಂಬ ಈ ಎಲ್ಲಾ ನಂಬಿಕೆಗಳು ಮತ್ತು ಕಥಾಸಾರದ ಈ ಉಲ್ಲೇಖಗಳು ಚಾರಿತ್ರಿಕ ಘಟನೆಗಳ ಹಿನ್ನೆಲೆಯಿಂದ ಹುಟ್ಟಿದ್ದು, ಶಿವ ದಲಿತರ ಮೂಲಪುರಷ ಎನಿಸುತ್ತದೆ.