ವಸಾಹತೋತ್ತರ ಚಿಂತನೆಗಳಲ್ಲಿ ಹೋಮಿಭಾಭಾನ “Hybridity” ಯ ಪರಿಕ್ಪನೆ ಬಹಳ ಮುಖ್ಯವಾದದ್ದು. ಎರಡು ಸಂಸ್ಕೃತಿಗಳು ಮುಖಾಮುಖಿಯಾದಾಗ ಅವುಗಳ ಚಕಮಕಿಯಲ್ಲಿ ಹಾರುವ ಕಿಡಿಗಳು ಎರಡು ಸಂಸ್ಕೃತಿಗೂ ಸೇರದೆ ಮೂರನೆಯದೊಂದು ಅಕಾರವನ್ನು ಆಕೃತಿಯನ್ನು ಪಡೆಯುತ್ತವೆ. ಈ ಪರಿಕಲ್ಪನೆ ನಮ್ಮನ್ನು ವಸಾಹತು ಸಂದರ್ಭದ ಮುಗ್ಧವಾದ ವಸಾಹತು ವಿರೋಧಿ ವಸಾಹತುಪೂರ್ವ ಸಂಬಂಧಕ್ಕೆ ಹೋಗಬಹುದೆಂದು ನಂಬುವ ಅಥವಾ ವಸಾಹತು ಸಂದರ್ಭದ ರಾಷ್ಟ್ರೀಯತಾ  ವಿಚಾರಧಾರೆ, ವಸಹಾತು ವಿಚಾರಧಾರೆಗಿಂತ ಭಿನ್ನವಾದದ್ದು ಮತ್ತು ಅದನ್ನು ಸಮರ್ಥವಾಗಿ ವಿರೋಧಿಸುವಂತದ್ದು ಎಂಬ ಕಲ್ಪನೆಯನ್ನು ಅಲ್ಲಗಳೆಯುವುದರೊಂದಿಗೆ, ವಸಾಹತುಶಾಹಿ ತನ್ನ ಉದ್ದೇಶಗಳನ್ನು ಮೀರಿ ತೃತೀಯದಾದೊಂದನ್ನು ಕಲ್ಪಿಸುವುದಕ್ಕೆ ಅವಕಶ ಮಾಡಿಕೊಡುತ್ತದೆ. ಆದರೆ ಈ ಸಂಕರತೆ (hybridity)ಯನ್ನು ಹೋಮಿಭಾಭಾನಂತೆ ವಸಾಹತೋತ್ತರ ಸಂದರ್ಭದ ಸ್ಥಿತಿ ಎಂದೂ ಅದು ಸಕರಾತ್ಮಕವಾದದ್ದು ಎಂದು ನೋಡುವ ಅಪಾಯವಿರುತ್ತದೆ. ಈ ಪ್ರಸ್ತುತ ಲೇಖನದಲ್ಲಿ ದೇವಚಂದ್ರ ಹೆಣೆದಿರುವ “ರಾಜಾವಳಿ” ಪಠ್ಯವನ್ನು ಒಂದು ಸಂಕರ ಪಠ್ಯವಾಗಿ ವಿಶ್ಲೇಷಿಸಿ ವಸಾಹತುಶಾಹಿ ಆರಂಭದ ಸಂದರ್ಭದಲ್ಲೇ ಒಂದು ‘ಸಂಕರ ಪಠ್ಯ’ ಹುಟ್ಟು ಸಂಭಾವ್ಯತೆಯನ್ನು ಮತ್ತು ಅದು ಹೇಗೆ ತನ್ನ ಕಾಲದಿಂದ ಒಂದು ಶತಮಾನಕ್ಕೂ ಹೆಚ್ಚಿನ ಅವಧಿಯಲ್ಲಿ ರೂಪುಗೊಂಡ ರಾಷ್ಟ್ರೀಯ ವಿಚಾರಧಾರೆಯ predecessor ಆಗಿಯೂ ಅದಕ್ಕಿಂತ ಭಿನ್ನವಾದ, ಆದರೆ ನಂತರ ಅಂಚಿಗೆ ಸರಿಯಲ್ಪಟ್ಟ ಧಾರೆಯ ಪಠ್ಯ ಎಂದು ಗುರುತಿಸಲು ಪ್ರಯತ್ನಿಸಲಾಗಿದೆ.

ಹಿನ್ನೆಲೆ

ಎಡ್ವರ್ಡ್ ಸಯ್ಯದ್ ತನ್ನ Orientalish ಪುಸ್ತಕದಲ್ಲಿ ಪೌರ್ವಾತ್ಯವಾದ ಮತ್ತು ವಸಾಹತು ಅಧಿಕಾರದ ಸಂಬಂಧಗಳನ್ನು ಕುರಿತು ವಿಶ್ಲೇಷಿಸಿದ್ದಾನೆ. (Said, 1978) ಈ ವಿಶ್ಲೇಷಣೆಗೆ ಆತ ಪ್ರಮುಖವಾಗಿ ಡೆರ‍್ರಿಡಾನ “Representaion” (ಪ್ರತಿನಿಧೀಕರಣ) ಮತ್ತು ಫೂಕೋನ ಜ್ಞಾನ/ಅಧಿಕಾರ (Power/knowledge) ದ ಪರಿಕಲ್ಪನೆಗಳನ್ನು ಬಳಸಿದ್ದಾನೆ. ಇದೇ ದಿಕ್ಕಿನಲ್ಲಿ ಭಾರತ ಮತ್ತು ವಸಾಹತುಶಾಹಿ ಜ್ಞಾನವನ್ನು ಕುರಿತು Bernard S. Cohn ಎಂಬ ವಿದ್ವಾಂಸ Colonialism and Its Forms of Knowledge : The British in India (1997) ಎಂಬ ಪುಸ್ತಕದಲ್ಲಿ ವಿಶ್ಲೇಷಣೆ ನಡೆಸಿದ್ದಾನೆ. ಈ ಅಧ್ಯಯನಗಳ ಹಿನ್ನೆಲೆಯಲ್ಲಿ ವ್ಯಕ್ತವಾಗುವ ಅಂಶವೆಂದರೆ ವಸಾಹತುಶಾಹಿ ತಾನು ಆಳುವ ಜನರ ಸಮ್ಮತಿಯನ್ನು ತನ್ನ ಪ್ರಭುತ್ವಕ್ಕೆ ಪಡೆದು ಅವರನ್ನು ಬ್ರಿಟಿಷ್ ಸಾಮ್ರಾಜ್ಯದ ಪ್ರಜೆ ಎಂಬ ವ್ಯಕ್ತಿತ್ವಸ್ಥಾನಕ್ಕೆ (Subject position) ರೂಪಿಸಿದ್ದು ಬಲಪ್ರಯೋಗದಿಂದಲ್ಲ ಬದಲಿಗೆ ಅವರ ಬಗ್ಗೆ ಮಾಹಿಸಿ ಸಂಗ್ರಹಿಸಿ ಅದನ್ನುತ ನ್ನದೇ ಆದ ಪರಿಪ್ರೇಕ್ಷ್ಯದಲ್ಲಿ ಕಟ್ಟಿ ತಾನಾಳುವ ಜನರು ಅದನ್ನು ಒಪ್ಪಿಕೊಳ್ಳುವಂತೆ ಮಾಡುವ ಮೂಲಕ.

ದಕ್ಷಿಣ ಭಾರತದಲ್ಲಿ ಬ್ರಿಟಿಷರಿಗೆ ಪ್ರಮುಖ ಸವಾಲಾಗಿದ್ದು ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್. ಟಿಪ್ಪುಸುಲ್ತಾನ್ ಫ್ರೆಂಚರೊಂದಿಗೆ ಸ್ನೇಹದಿಂದ ಇದ್ದು ಬ್ರಿಟಿಷರಿಗೆ ಬದ್ಧ ವೈರಿಯಾಗಿದ್ದ. ಬ್ರಿಟಿಷರು ೧೭೯೯ರಲ್ಲಿ ಟಿಪ್ಪುವನ್ನು ಸೋಲಿಸಿ ಪಶ್ಚಿಮ ಕರಾವಳಿಯಿಂದ ಪೂರ್ವ ಕರಾವಳಿಯವರೆಗೆ ತಮ್ಮ ಅಧಿಕಾರವನ್ನು ವಿಸ್ತರಿಸಿದ ನಂತರ ಆ ಪ್ರದೇಶವನ್ನು ತಮ್ಮ ಆಳ್ವಿಕೆಗೆ ಒಳಪಡಿಸಿದರು. ಈ ಸಂದರ್ಭದಲ್ಲಿ ತಮ್ಮಿಂದ ಆಳಿಸಿಕೊಳ್ಳುವ ಜನರು ಮತ್ತು ಆ ಭೂಭಾಗದ ಬಗೆಗೆ ಅವರಿಗೆ ಅಪಾರವಾದ ಮಾಹಿತಿಯ ಅಗತ್ಯವಿತ್ತು. ಕಂಪನಿ ಸರಕಾರ ಮೈಸೂರು ಪ್ರಾಂತ್ಯ ತಮ್ಮ ವಶಕ್ಕೆ ಬರುತ್ತಿದ್ದಂತೆ ಅದರ ಭೂಭಾಗವನ್ನು ಸರ್ವೇಕ್ಷಣೆ ಮಾಡಲು ಕರ್ನಲ್ ಮೆಕೆಂಜಿಯನ್ನು ನೇಮಿಸಿದರು. ಕರ್ನಲ್ ಮೆಕೆಂಜಿ ಈಗಾಗಲೇ ಉತ್ತರ ಭಾರತದ ಸಿಕ್ಕಿಂ ಮುಂತಾದ ಪ್ರದೇಶಗಳಲ್ಲಿ ಯಶಸ್ವಿ ಸರ್ವೇಕ್ಷಣೆ ನಡೆಸಿದ್ದ. ಕರ್ನಲ್ ಮೆಕೆಂಜಿ ತನ್ನ ಸಹಾಯಕ್ಕೆ ಕೆಲವು ಸ್ಥಳೀಯ ಪಂಡಿತರನ್ನು ಬಳಸಿಕೊಂಡಿದ್ದ. ಆತ ತಾನು ಹೋದೆಡೆಯೆಲ್ಲಾ ಭೂ ಸರ್ವೆಕ್ಷಣೆಯ ಜೊತೆಗೆ ಅಲ್ಲಿನ ಜನರ/ಸಮುದಾಯಗಳ ಬಗೆಗೆ ಆ ಹಳ್ಳಿ/ಪಟ್ಟಣ/ಊರಿನ ಇತಿಹಾಸ, ಐತಿಹ್ಯಗಳನ್ನು ಸಂಗ್ರಹಿಸುತ್ತಿದ್ದ. ಆತ ಹೋದ ಕಡೆ ಅಲ್ಲಿನ ಜನರಿಗೆ ತಮ್ಮ ಊರಿನ, ಸಮುದಾಯದ ಬಗ್ಗೆ ಮಾಹಿತಿ ನೀಡಲು ಕೇಳುತ್ತಿದ್ದ ಮತ್ತು ಆ ಸಂಬಂಧಿಸಿದ ಆಕರ ಸಾಂಗ್ರಿಗಳೇನಾದರೂ ಇದ್ದರೆ ಅದನ್ನೂ ಸಂಗ್ರಹಿಸುತ್ತಿದ್ದ. ಕರ್ನಲ್ ಮೆಕಂಜಿ ಈ ರೀತಿಯಾಗಿ ಬರೆಸಿದ ಕೈಫಿಯತ್ತುಗಳು ಸುಮಾರು ೨೦೭೦, ಸಂಗ್ರಹಿಸಿದ ಹಸ್ತಪ್ರತಿಗಳು ೧೫೮೬ ಮತ್ತು ನಕಲು ಮಾಡಿಕೊಂಡ ಶಾಸನಗಳು ೮೦೭೦! (ಹೆಚ್ಚಿನ ಮಾಹಿತಿಗೆ ಮತ್ತು ಕರ್ನಾಟಕದ ಕೈಫಿಯತ್ತುಗಳು ಪರಿಶೀಲನೆಗೆ ನೋಡಿ: ಎಂ.ಎಂ. ಕಲ್ಬುರ್ಗಿ, ೧೯೯೪). ಈ ಕೈಫಿಯತ್ತುಗಳು ಒಂದು ರೀತಿಯ ಸ್ಥಳ ಪುರಾಣಗಳು, ಸಮುದಾಯ ಪುರಾಣಗಳೂ ಆಗಿದ್ದವು. ಕೈಫಿಯತ್ತು ಪ್ರಕಾರವೇ ಒಂದು ಸಂಕರ ಪ್ರಕಾರ. ಭಾರತದಲ್ಲಿ ಮುಸ್ಲಿಂ ಆಳ್ವಿಕೆಯ ಸಂದರ್ಭದಲ್ಲಿ ವಿವರವಾದ ಲಿಖಿತ ದಾಖಲೆಗಳನ್ನು ಕೈಫಿಯತ್ತು ಎಂದು ಕರೆಯುತ್ತಿದ್ದರು. ಅದಲ್ಲದೆ ನಮ್ಮಲ್ಲಿ ಬಹುತೇಕರು ತಿಳಿದಿರುವಂತೆ ಚಾರಿತ್ರಿಕ ದಾಖಲೆಗಳ ನಿರ್ಮಾಣ ಯುರೋಪಿಯನ್ನರ ಆಳ್ವಿಕೆಯಿಂದ ಏನೂ ಪ್ರಾರಂಭವಾಗಿಲ್ಲ. ರಾಜನಿಷ್ಠ ಚರಿತ್ರೆಗಳು ಮತ್ತು ಅವರ ಆಳ್ವಿಕೆಗೆ ಸಂಬಂಧಿಸಿದ ದಾಖಲೆಗಳು ಹೇರಳವಾ ಮೊಗಲ್, ಬಹುಮನಿ ಕಾಲದಲ್ಲಿ ಇವೆ. ಇವುಗಳ ಪ್ರಭಾವ ಇತರೆ ರಾಜರ ಮೇಲೂ ಆಗಿದೆ, ಅವುಗಳು ವಸಾಹತು ಪೂರ್ವದಲ್ಲ ಈಗಿನ ಕರ್ನಾಟಕದಲ್ಲಿ ಪ್ರಚಲಿತವಾಗಿದ್ದಂತೆ ಕಾಣುತ್ತದೆ. ಪುರಾಣ ಕಾವ್ಯಗಳನ್ನು ಹೇಳುವುದಕ್ಕೆ ಸಮಕಾಲೀನ ಅಂಶಗಳನ್ನು ಮೇಳೈಸಿಕೊಳ್ಳುವುದು ಪಂಪನ ವಿಕ್ರಮಾರ್ಜುನ ವಿಜಯ ದಿಂದಲೇ ಕನ್ನಡ ಸಾಹಿತ್ಯದಲ್ಲಿ ಕಂಡುಬರುತ್ತದೆ. ಆದರೆ ಕಾವ್ಯಪ್ರಕಾರವನ್ನು ಚಾರಿತ್ರಿಕ ಸಂಗತಿಗಳನ್ನು ದಾಖಲಿಸುವುದಕ್ಕೆಂದೇ ಬಳಸಿಕೊಂಡಿರುವುದು ೧೭ ಮತ್ತು ೧೮ನೇ ಶತಮಾನದಲ್ಲಿ ಮಾತ್ರ. ಕುಮಾರರಾಮ ಸಾಂಗತ್ಯ, ಚಿಕ್ಕದೇವರಾಜ ವಿಜಯ, ರಣಧೀರ ಕಂಠೀರವ ನರಸರಾಜ ವಿಜಯ, ಕೇಳದಿನೃಪ ವಿಯ ಇವುಗಳನ್ನು ಇಲ್ಲಿ ಗಮನಿಸಬಹುದು. ಇವುಗಳಿಗೆ ಮುನ್ನ ಮುಲ್ಲಾ ನುಸ್ರುತಿಯ ತಾರೀಖೆ-ಇಸ್ಕಂದರಿ, ಮಹಮದ್ ಇಬ್ರಾಹಿಂ ಜುಬೇರಿಯ ಬಸಾತಿನುಸ್ಸಲಾಕೀನ್ ಎಂಬ ಪಠ್ಯಗಳು ಇದ್ದವು ಎಂಬುದನ್ನು ಗಮನಿಸಬೇಕು (ಗಮನಿಸಿ, ಗುಂಡಾಜೋಯಿಸ್, ೧೯೭೬; ಮ.ಭಾ.ಭೋಯಿ ೧೯೯೯; ಗಾಯಕ್ವಾಡ್, ೨೦೦೦).

ಇವುಗಳನ್ನೆಲ್ಲಾ ಸಂಗ್ರಹಿಸುತ್ತಿದ್ದ ಮೆಕೆಂಜಿ ಜೊತೆಗೇ ಹೊಸದಾಗಿ ಮಾಹಿತಿ ಸಂಗ್ರಹಿಸಲು ಕೈಫಿಯತ್ತುಗಳನ್ನು ಬರೆಸುತ್ತಿದ್ದ. ರಾಜಾವಳಿಯಲ್ಲೇ ಉಲ್ಲೇಖಗೊಂಡಿರುವಂತೆ ಲಕ್ಷ್ಮಣ ರಾಯನ ಜೊತೆ ಕನಕಗಿರಿಗೆ ಬಂದ ಮೆಕೆಂಜಿ ದೇವಚಂದ್ರನನ್ನು “ಸ್ಥಳ ಪುರಾಣಮುಂಟೆ” ಎಂದು ಕೇಳುತ್ತಾಣೆ. ನಂತರ ದೇವಚಂದ್ರ ನೀಡಿದ ಮಾಹಿತಿಗಳನ್ನು/ಕಥಾನಕಗಳನ್ನು ಕೇಳಿ (ಜಾತಿಭೇದಂಗಳು, ಜಾತಿ, ಕೋಮದಾರು, ಜಮಾಬಂದಿ, ನಕ್ಷೆಗಳು ಇತ್ಯಾದಿ), ಕರ್ನಾಟಕದಲ್ಲಿ ನಡೆದ “ಪ್ರಪಂಚು”ಗಳನ್ನೆಲ್ಲಾ ಕಾಗದದಲ್ಲಿ ಬರೆದುಕೊಂಡೆಂದು ಕೇಳುತ್ತಾನೆ. ಬರೆದುಕೊಟ್ಟರೆ ಹಣವನ್ನು ನೀಡುವುದಾಗಿಯೂ ಹೇಳುತ್ತಾನೆ. ಹೀಗೆ “ರಾಜಾವಳಿ”ಯ ಉದಯವಾಗುತ್ತದೆ. ಆದರೆ ದೇವಚಂದ್ರ ಅದನ್ನು ಬರೆದು ಮುಗಿಸುವಷ್ಟರಲ್ಲಿ ಮೆಕೆಂಜಿ ಬಂಗಾಳಕ್ಕೆ ಹೋಗಿರುತ್ತಾನೆ.

ರಾಜಾವಳಿಯ ಆಕೃತಿ

ರಾಜಾವಳಿಯ ಆಕೃತಿ ಮೇಲ್ನೋಟಕ್ಕೆ ಕಾವ್ಯಪ್ರಕಾರ ಎಂದೆನಿಸಿದರೂ ಅದು ಬಹಳ ಸಂಕೀರ್ಣವಾದದ್ದಾಗಿದೆ. ಮೆಕೆಂಜಿಗೆ ಬೇಕಾದದ್ದು Facts (ಸಂಗತಿ). ನಿರ್ದಿಷ್ಟವಾದ ಚಾರಿತ್ರಿಕ ವಿವರಗಳ ಮಾಹಿತಿ. ದೇವಚಂದ್ರ ಹಿಂದೆ ಈಗಾಗಲೇ ಒಂದು ಜೈನ ಪುರಾಣದ ಚರಿತ್ರೆಯನ್ನು ಕಾವ್ಯ ಪ್ರಕಾರದಲ್ಲಿ ರಚಿಸಿದ್ದರಿಂದ ರಾಜಾವಳಿಯನ್ನೂ ಕಾವ್ಯದಲ್ಲೇ ಬರೆಯಲು ಮೊದಲು ಮಾಡುತ್ತಾನೆ. ಆದರೆ ಅದು ಇತರೆ ಕಾವ್ಯಗಳಂತೆ ಒಂದು ನಿರ್ದಿಷ್ಟ ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ವ್ಯಕ್ತಿಯ ಮನೆತನದ ಕಥೆಯನ್ನು ಹೇಳುತ್ತಿಲ್ಲ. ಗತಿಸಿದ ಹಲವಾರು ರಾಜರುಗಳ ಚರಿತ್ರೆಯನ್ನೂ, ಜಾತಿ/ಮತಗಳ ಉಗಮಗಳ ಕಥೆಯನ್ನು ಕ್ರಮಬದ್ಧವಾಗಿ, ಕಾಲಬದ್ಧವಾಗಿ ನಿರೂಪಿಸಬೇಕಾಗಿದೆ. ಇದರಿಂದ ಕಾವ್ಯ ಪ್ರಕಾರಕ್ಕೂ ವಸ್ತುವಿಗೂ ಒಂದು ಸಂಘರ್ಷ ಏರ್ಪಡುತ್ತದೆ. ಈ ಸಂಘರ್ಷದಲ್ಲಿ ರಾಜಾವಳಿಯ ಆಕೃತಿ ಸಂಕೀರ್ಣವಾಗುತ್ತಾ ಹೋಗುತ್ತದೆ. ಹಿಂದೆ ಉದಾಹರಿಸಿದ ಕನ್ನಡದಲ್ಲಿನ ಚಾರಿತ್ರಿಕ ಕಾವ್ಯಗಳು ದೇವಚಂದ್ರನ ಮುಂದಿದ್ದಿರಬಹುದು. ಆದರೆ ಅವುಗಳು ವ್ಯಕ್ತಿ ಕೇಂದ್ರಿತವಾದದ್ದರಿಂದ ಅವುಗಳ ಆಕೃತಿ ಈತನ ಆಶಯಕ್ಕೆ ಹೊಂದುವುದಿಲ್ಲ. ರಾಜಾವಳಿ ಹೆಸರನ್ನು ಗಮನಿಸಿದರೆ ಜೈನರಲ್ಲಿ ಭವಾವಳಿ ಎಂಬ ಕಥನ ಪ್ರಕಾರದ ರೂಪಾಂತರದಂತೆ ಕಾಣುತ್ತದೆ. ಕಾವ್ಯ ಪ್ರಕಾರ ಮತ್ತು ಭವಾವಳಿ ಪ್ರಕಾರದ ಒಂದು ಸಂಕರ ಆಕೃತಿಯಾಗಿ ರಾಜಾವಳಿ ಕಾಣುತ್ತದೆ. ಇದಲ್ಲದೆ ಈ ಪಠ್ಯದ ಉದ್ದೇಶ ರಾಜಾವಳಿಯನ್ನು ನಿರೂಪಿಸುವುದಾದರೂ, ಜೈನಧರ್ಮದ ನೀತಿಬೋಧೆಯ ಕಥೆಗಳು ಹೆರಳವಾಗಿ ನುಸುಳುತ್ತಾ ಹೋಗುವುದನ್ನು ಪಠ್ಯದುದ್ದಕ್ಕೂ ನೋಡಬಹುದು. ಅಧಿಕಾರಗಳಲ್ಲಿ ಬರುವ ಕಥೆ ಒಳಗಿನ ಕಥೆಗಳು ನೀತಿಬೋಧನೆಯ ಪ್ರಕಾರದ್ದಾಗಿ ಕಂಡುಬರುತ್ತವೆ. ದೇವಚಂದ್ರನಿಗೆ ತನ್ನ ಮುಂದಿದ್ದ ಹಿಂದಿನ ಮಾದರಿಗಳು ಮತ್ತು ಮೆಕೆಂಜಿ ಆಪೇಕ್ಷೆ ಪಟ್ಟ ಮಾದರಿಯ ನಡುವೆ ಹೊಂದಾಣಿಕೆ ಮಾಡಿಕೊಳ್ಳುವ ತುರ್ತು ಎದುರಾದಂತೆ ಕಾಣುತ್ತದೆ. ಈ ಹೊಂದಾಣಿಕೆಯ ಪ್ರಯತ್ನದಲ್ಲಿ ರಾಜಾವಳಿಯ ಆಕೃತಿ ಸಂಕೀರ್ಣವಾದದ್ದೂ, ಸಂಕರವೂ ಆಗುತ್ತದೆ.

ಭಾಷೆ

ದೇವಚಂದ್ರನ ಕಾಲದ ಸಾಹಿತ್ಯ ಆಡುಕನ್ನಡದಲ್ಲಿ ಬರೆಯಬೇಕೆಂಬ ಕಾಲದ್ದಲ್ಲ. ಸಾಹಿತ್ಯ ರಚನಗೆ ತನ್ನದೇ ಆದ ವಿಶಿಷ್ಟ ಭಾಷೆ (ಹಳೆಗನ್ನಡ ಎಂದು ನಾವು ಸಾಮಾನ್ಯವಾಗಿ ಕರೆಯುವ) ಇದ್ದ ಕಾಲ ಆದಾಗಿತ್ತು. ಕಥೆಯ ಆರಂಭದಲ್ಲೇ ಕಥೆಯ ಕೇಳುಗ/ಓದುಗರಿಗೆ ವಿನಂತಿಸಿ ಕೊಳ್ಳುವಾಗ “ಹೊಸಗನ್ನಡ ವಾಕ್ಯಂಗಳಿಂ ವಿರಚಿಸುವೆಂ” ಎಂದು ಹೇಳುವ ದೇವಚಂದ್ರ, ನಂತರ ತನ್ನ ಘೋಷಿತ ಉದ್ದೇಶಕ್ಕೆ ವಿರುದ್ಧವಾಗಿ ಸಾಗುತ್ತಾನೆ. ಕೊನೆಯ ಹಂತಕ್ಕೆ ಬರುವಷ್ಟರಲ್ಲಿ ಅದು ಆತನಿಗೇ ಅರಿವಾಗುವುದರಿಂದ ಕೊನೆಯಲ್ಲಿ ಹಳಗನ್ನಡ, ಬೆಳುಗನ್ನಡ, ಅಚ್ಚ ಕನ್ನಡಗಳನ್ನೆಲ್ಲಾ “ಮಿಶ್ರಯಾಗಿ”ಸಿ ಹೇಳಿದ್ದೇನೆ ಎನ್ನುತ್ತಾನೆ. ಅಲ್ಲಲ್ಲಿ ಸಂಸ್ಕೃತದ ವಾಕ್ಯಗಳನ್ನು ಯಥಾವತ್ತಾಗಿ quote ಮಾಡುತ್ತಾ ಸಾಗುತ್ತಾನೆ. ಸಂಗತಿಗಳನ್ನು ದಾಖಲಿಸಲು ಬೇಕಾದ ಭಾಷೆ ಮತ್ತು ವರ್ಣನಾತ್ಮಕ, ಭಾವನಾತ್ಮಕ ಭಾಷೆ (ಕಾವ್ಯಾತ್ಮಕ) ಬೇರೆ. ಮೆಕೆಂಜಿಯ demandಗೂ ದೇವಚಂದ್ರನ ಕಾವ್ಯ ಭಾಷೆಗೂ ನಡೆಯುವ ಸಂಘರ್ಷದಲ್ಲಿ ಭಾಷೆ ಸಂಕರವಾದಂತೆ ಕಾಣುತ್ತದೆ.

ವಸ್ತು ಮತ್ತು ವಿಸ್ತಾರ

ಏಕ ವಸ್ತು ಕೇಂದ್ರಿತ ಕಥನವಲ್ಲ ರಾಜಾವಳಿ. ಅದರ ಉದ್ದೇಶ ವ್ಯಾಪ್ತಿ ಎನ್‌ಸೈಕ್ಲೋ ಪೀಡಿಯಾಕ್ ಆದ್ದದ್ದು. ಪ್ರಭುತ್ವಗಳ ಉಗಮ, ಬದಲಾವಣೆಗಳನ್ನು ವಿವರಿಸುವುದರೊಂದಿಗೇ, ಜನರ ಜೀವನಗಳನ್ನು ನಿಯಂತ್ರಿಸುತ್ತಿರುವ ಸಾಮಾಜಿಕ, ಧಾರ್ಮಿಕ ಸಂಸ್ಥೆಗಳ ಉಗಮವನ್ನೂ, ಅವುಗಳ ನಡುವಿನ ಸಂಘರ್ಷವನ್ನೂ ನಿರೂಪಿಸುವಂತಹ ವಿಸ್ತಾರವನ್ನು ದೇವಚಂದ್ರ ತನ್ನ ಮೇಲೆ ಹೇರಿಕೊಂಡಂತೆ ಕಾಣುತ್ತದೆ. ಜೈನಧರ್ಮದಲ್ಲಿ, ಮೈಸೂರಿನ ಕನಕಗಿರಿಯಲ್ಲಿ locate ಆಗಿದ್ದುಕೊಂಡು, ಅದರ ಗಾಜಿನಿಂದ ಇಡೀ ಬ್ರಹ್ಮಾಂಡವನ್ನು ಅರ್ಥಮಾಡಿಕೊಳ್ಳುವ/ಕೊಂಡಿರುವ ಪರಿ ಇಲ್ಲಿ ಕಾಣುತ್ತದೆ. ಈ ಅರ್ಥಮಾಡಿಕೊಳ್ಳುವ ಪರಿ ನಾವಿಂದು ಓರಿಯಂಟಲಿಸ್ಟ್, ಯುರೋ-ಕೇಂದ್ರಿತ ಎಂದು ಕರೆಯುವ ಪರಿಗಿಂತ ಭಿನ್ನವಾದದ್ದು. ದೇವಚಂದ್ರ ವಸಾಹತು demandಗೆ ತನ್ನನ್ನು ತೆತ್ತುಕೊಂಡರೂ ಅದರ ಪರಿಪ್ರೇಕ್ಷ್ಯದಲ್ಲಿ ಪ್ರವೇಶಿಸಿಲ್ಲ ಎಂಬುದು ಈ ಪರಿಯನ್ನು ಗಮನಿಸಿದಾಗ ಅರಿವಾಗುತ್ತದೆ.

ದೇವಚಂದ್ರ ತನ್ನ ಸುತ್ತಲಿನ ಸಾಮಾಜಿಕ/ಧಾರ್ಮಿಕ ಸಂಸ್ಥೆಗಳನ್ನು ಅರ್ಥಮಾಡಿಕೊಂಡಿರುವ ‘ಪರಿ’ ಮತ್ತಷ್ಟು ಸೂಕ್ಷ್ಮವಾಗಿ ಗುರುತಿಸಲು ಸಾಧ್ಯವಾಗುವುದಾದರೆ naive ಆಗಿ ವಸಾಹತುಪೂರ್ವದ ದೃಷ್ಟಿಕೋನಕ್ಕೆ ಹಿಂದಿರುಗಲು ಸಾಧ್ಯ ಎಂದು ಭಾವಿಸುವ ಅಥವಾ ವಸಾಹತ್ತೋತ್ತರ ದೃಷ್ಟಿಕೋನವನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ಸೈದ್ಧಾಂತಿಕ ಪ್ರಯತ್ನಗಳಿಗೆ ಹೊಸ ಸವಾಲನ್ನೋ, ದಾರಿಯನ್ನೋ ತೋರಬಲ್ಲದು ಎನ್ನಿಸುತ್ತದೆ. ದೇವಚಂದ್ರನ ‘ಪರಿ’ ಮೆಕೆಂಜಿಯ demandಗೆ ಹೊಂದಿಕೊಳ್ಳುವ ಪ್ರಯತ್ನದಲ್ಲಿ ಹುಟ್ಟಿರುವುದೋ ಅಥವಾ ಅದು ಆಗಿನ ಕನಕಗಿರಿಯ ಜೈನಧರ್ಮೀಯ ತನ್ನ ಸುತ್ತಮುತ್ತಲಿನ ವ್ಯವಹಾರಗಳನ್ನು ಅರ್ಥಮಾಡಿಕೊಳ್ಳುವ ಒಂದು ಸಾಮಾನ್ಯವಾದ ಜನಜನಿತವಾಗಿದ್ದ ಪರಿಯೇ ಎಂಬುದನ್ನು ಇನ್ನಷ್ಟು ಪರಿಶೀಲಿಸಬೇಕಾಗುತ್ತದೆ. ಆತ ಇಸ್ಲಾಂ ಧರ್ಮವನ್ನು ಕುರಿತು ನೀಡುವ ವಿವರಣೆಯ ಪರಿ ನಮ್ಮ ಇಂದಿನ Post-orientalist, non-communal ಹುಡುಕಾಟಗಳಿಗೆ ಉತ್ತರವಾಗಬಹುದು. ಅದೇ ರೀತಿ ಆತ ಮತಧರ್ಮಗಳ ನಡುವಿನ ಸಂಘರ್ಷಗಳನ್ನು ಉಲ್ಲೇಖಿಸುವುದು ವಸಾಹತುಪೂರ್ವವನ್ನು ಕೋಮುಸಂಘರ್ಷರಹಿತ ಎಂದು ರೋಮ್ಯಾಂಟಿಕ್ ಆಗಿ ನೋಡುವ ಕೆಲವರ ಪ್ರಯತ್ನಗಳನ್ನು ಕುರಿತು ಸಂದೇಹಗಳನ್ನು ಎಬ್ಬಿಸುತ್ತದೆ.

ಅಂಚಿಗೊತ್ತಲ್ಪಟ್ಟ ರಾಷ್ಟ್ರೀಯವಾದಿ (?) ವಿಚಾರಧಾರೆಯ ಪಠ್ಯ

ವಿಸ್ತಾರದ ದೃಷ್ಟಿಯಿಂದ ಈ ಪಠ್ಯ ನಾವು ಇಂದು ರಾಷ್ಟ್ರೀಯವಾದಿ ಚರಿತ್ರೆಯೆಂದು ಗುರುತಿಸುವುದರ ಲಕ್ಷಣಗಳನ್ನು ಪಡೆದುಕೊಳ್ಳುವ ಆದ್ಯಕಾಲದ ಪಠ್ಯವಾಗಿ ಕಾಣುತ್ತದೆ, ಏಕೆಂದರೆ ಹಲವಾರು (ಪ್ರ)ದೇಶಗಳ “ಚರಿತ್ರೆ”ಯನ್ನು ಒಂದೆಡೆ ತರುವ ಪ್ರಯತ್ನ ಮತ್ತು ಅದನ್ನು ಒಂದು (ಪ್ರ)ದೇಶವಾಗಿಸುವ ಪರಿಣಾಮ ಇಲ್ಲಿ ಕಾಣುತ್ತದೆ. ಪಾರ್ಥಾ ಚಟರ್ಚಿ ರಾಷ್ಟ್ರೀಯವಾದಿ ಚರಿತ್ರೆಯ ಆದ್ಯಕಾಲದ ಚರಿತ್ರೆ ಬರವಣಿಗೆಗಳನ್ನು ವಿಶ್ಲೇಷಿಸುತ್ತಾ ಬಂಗಾಳದಲ್ಲಿ ಮುಸ್ಲಿಂ ಧರ್ಮದ ಬರಹಗಾರ ಕೂಡ ಹೇಗೆ ಹಿಂದೂ ರಾಷ್ಟ್ರೀಯವಾದಿ ಚರಿತ್ರೆಯನ್ನು ಬರೆಯುತ್ತಾ “ಭಾರತ” ಎಂಬ ಕಲ್ಪಿತ ಸಮುದಾಯವನ್ನು ಉತ್ಪಾದಿಸುತ್ತಾನೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ತನ್ನ ಹರವಿನಲ್ಲಿ ‘ರಾಜಾವಳಿ’ ಒಂದು ರಾಷ್ಟ್ರೀಯ ಭಾರತೀಯ ಚರಿತ್ರೆಯ ಮೊದಲ ಲಕ್ಷಣಗಳನ್ನು ಒಳಗೊಂಡ ಪಠ್ಯವಾದರೂ, ಅದರ ‘ಪರಿ’ ಹಿಂದೆ ಹೇಳಿದಂತೆ ಹಿಂದೂ ಅಲ್ಲ, ಜೈನಧರ್ಮದ್ದೆಂದು ಹೇಳಬಹುದಾದರು, ಅದೂ ಸೀಮಿತವಾದ ವಿವರಣೆಯಾಗುತ್ತದೆ. ತನ್ನ ಮುಂದಿನ ಪ್ರಶ್ನೆಗಳನ್ನು ಒಂದು ಸುಗಮವಾದ ಕಥಾನಕವಾಗಿಸಲು ದೇವಚಂದ್ರ ಸಂಸ್ಕೃತ, ವೈದಿಕ, ಜೈನ, ಜಾನಪದ, ಕಲ್ಪನೆ ಇತ್ಯಾದಿಗಳೆಲ್ಲವನ್ನೂ ಬಳಸಿಕೊಳ್ಳುತ್ತಾನೆ. ರಾಜಾವಳಿಯಲ್ಲೆಲ್ಲೂ ಒಂದು “ರಾಷ್ಟ್ರೀಯ ಸ್ವ” (Nationalist-self) ವ್ಯಕ್ತಿತ್ವ ಸ್ಥಾನ ಸೃಜಿಸುವ ವಿಚಾರಧಾರೆಗೆ ಅಗತ್ಯವದ ‘ಅನ್ಯ’ ವಸಾಹತುಶಾಹಿ ಕಾಣಬರುವುದಿಲ್ಲ. ಇಲ್ಲೇನಾದರೂ ‘ಅನ್ಯ’ ಎನ್ನುವುದಿದ್ದರೆ ಅದು ವೀರಶೈವವೋ ಮತ್ತಾವುದೋ ಎನ್ನಬೇಕಾಗುತ್ತದೆ. ದೇವಚಂದ್ರ ಪರಂಗಿ ಮತವನ್ನು ಕುರಿತು ಸಹ ವಿವರಣೆ ನೀಡಲು ಉದ್ಯುಕ್ತನಾಗುತ್ತಾನೆ, ಅಷ್ಟರ ಮಟ್ಟಿಗೆ ಅದರ ಹರವು ವಿಸ್ತಾರವಾದದ್ದಾಗಿದೆ. ಸಂಘರ್ಷಗಳ ನಡುವೆಯೂ, ಅವುಗಳನ್ನು ಮೂಲೆಗುಂಪಾಗಿಸದೆ, ಒಂದು ಬಹುಸಂಸ್ಕೃತಿಯ (ಶ್ರೇಣೀಕೃತವೂ ಹೌದು) ಕಥಾನಕ ಇದಾಗಿದೆ. ಜೈನಮತದ ಪರಿ (ಹಿಂದೆ ಹೇಳಿದಂತೆ ವಿಭಿನ್ನವೂ ಸಂಕೀರ್ಣವೂ ಆದದ್ದು) ಈ ಪ್ರದೇಶವಾಳಿ/ಸಮುದಾಯಾವಳಿ ಕಥಾನಕದ ಹಿಂದೆ ಕೆಲಸ ಮಾಡಿದ್ದು ಅದು ಮುಖ್ಯಪ್ರವಾಹದ ರಾಷ್ಟ್ರೀಯವಾದಿ ಚರಿತ್ರೆಗಿಂತ ಭಿನ್ನವಾಗಿದೆ. ಮತ್ತು ಈ ಕಾರಣಕ್ಕೇ ವಿದ್ವಾಂಸರ ಅನಾಸಕ್ತಿಗೆ ಇದುವರೆಗೂ ಒಳಿಗಾಗಿರಬಹುದು.

ದೇವಚಂದ್ರನು ರಾಜಾವಳಿ ಕಥಾಸಾರವನ್ನು ಮುಗಿಸುವಷ್ಟರಲ್ಲಿ ಮೆಕೆಂಜಿ ಹೊರಟು ಹೋಗಿದ್ದನು. ದೇವಚಂದ್ರನಿಗೆ ಯಾವುದೇ ಹಣ ಸಿಗದೆ ನಿರಾಶೆಯಾಯಿತು. ನಂತರ “ಮಹಿಸೂರ ಮಹಾರಾಜಾಧಿರಾಜರುಗಳ ವಂಶಾವಳಿ ಗುಣಾವಳಿ ಬಿರುದಾವಳಿ”ಗಳನ್ನು ಬರೆದು ಹನ್ನೆರಡನೆ ಅಧಿಕಾರವಾಗಿ ಮೊದಲಿನ ಹನ್ನೊಂದು ಅಧಿಕಾರಗಳಿಗೆ ಸೇರಿಸಿ, ರಾಜಮಾತೆಗೆ ಒಪ್ಪಿಸಿದ್ದಾನೆ ಹಣಕ್ಕಾಗಿ. ಆದರೆ ಅವನಿಗೆ ರಾಜನ ದರ್ಶನ ಸಿಗದೆ ಹೋಗಿರುತ್ತದೆ. ಹೀಗೆ ಎಲ್ಲಾ ಕಡೆ ಕೈಗೆ ಬಂದರೂ ಬಾಯಿಗೆ ಬಂದಿಲ್ಲದಂತಾಗಿದೆ ಅವನ ಸ್ಥಿತಿ. ಹಿಂದೆ ಈಗಿನ ಕರ್ನಾಟಕದ ಪ್ರದೇಶದಲ್ಲಿ ಪ್ರವರ್ಧಮಾನವಾಗಿದ್ದ ಜೈನಮತ ಮತ್ತು ಸಾಹಿತ್ಯವನ್ನು ಶೈವ ಮತ್ತು ವೈದಿಕ ಮತಗಳು ಹಾಳುಗೆಡವಿರುವ ವಿಷಾದ, ಕಥೆಯ ಉದ್ದಕ್ಕೂ ಕಾಣುತ್ತದೆ. ಈ ಕಥೆಯನ್ನು ಮೆಕೆಂಜಿಗೆ ಮುಟ್ಟಿಸಲಿಕ್ಕಾಗಲಿಲ್ಲ, ರಾಜನಿಗೆ ಮುಟ್ಟಿಸಲಿಕ್ಕಾಗಿಲಿಲ್ಲ ದೇವಚಂದ್ರನಿಂದ, ಹೀಗೆ ಕೊನೆಗೆ ಈ ಕಥೆ ಅಂದೂ ಪ್ರತಿಬಾರಿ ಅಂಚಿಗೊತ್ತಲ್ಪಟ್ಟಿದೆ ಮತ್ತು ನಂತರದ ಮುಖ್ಯವಾಹಿನಿಯ ರಾಷ್ಟ್ರೀಯ ವಿಚಾರಧಾರೆ ಈ ರಾಜಾವಳಿ ರೀತಿಯ ಪಠ್ಯಗಳು ರೂಪಿಸುವ/ರೂಪಿಸಬಹುದಾಗಿದ್ದ ಬಹುಸಂಸ್ಕೃತಿಯ (ಜೈನಸಂಸ್ಕೃತಿ ಕೇಂದ್ರಿತವಾಗಿದ್ದರೂ ಮತ್ತು ಶ್ರೇಣೀಕೃತ ವ್ಯವಸ್ಥೆಯನ್ನು ಒಪ್ಪಿದ್ದಾಗಿದ್ದರೂ) ಚರಿತ್ರೆಯನ್ನು ಹಿಂದಕ್ಕಿಕ್ಕಿವೆ. ವಸಾಹತು ಪ್ರಭುತ್ವದ ಸಾಮೀಪ್ಯ/ಕಟಾಕ್ಷ ದೊರೆಯದ, ರಾಜನ ಸುತ್ತಲ್ಲಿದ್ದ ವೈದಿಕ ಪಂಡಿತರು ಅಂಚಿಗೆ ತಳ್ಳಿದ ರಾಜಾವಳಿ ಇಂದಿಗೂ ಅಂಚಿನಲ್ಲಿದೆ. ಈ ರಾಜಾವಳಿಯಲ್ಲಿ ಹಿಂದೆ ಹೇಳಿದಂತೆ ಮುಸ್ಲಿಂರನ್ನು ಅಥವಾ ವಸಾಹತುಶಾಹಿ ಪ್ರಭುತ್ವವನ್ನು ‘ಅನ್ಯ’ (Other)ವಾಗಿಸಿ ಹಿಂದೂ ರಾಷ್ಟ್ರೀಯ ಅಥವಾ ಜಾತ್ಯಾತೀತ (?) ಸ್ವ(Self) ಸ್ಥಾಪಿಸುವ ಯಾವುದೇ ಯತ್ನಗಳು ಕಂಡುಬರುವುದಿಲ್ಲ. ತನ್ನ ಹರವಿನಲ್ಲಿ ವ್ಯಾಪ್ತಿಯಲ್ಲಿ ಮಾತ್ರ ಇದು ರಾಷ್ಟ್ರೀಯ ಚರಿತ್ರೆಯ ಆದ್ಯಕಾಲದ ಬರವಣಿಗೆಯ ಲಕ್ಷಣಗಳನ್ನು ತೋರ್ಪಡಿಸಿಕೊಳ್ಳುತ್ತದೆ. ಆದರೆ ಹಿಂದೆ ಹೇಳಿದಂತೆ ಇದು ಸಂಕರ ಪಠ್ಯ, ವಿಚಾರಗಳು, ಆಕೃತಿ-ಆಶಯಗಳು ಪರಸ್ಪರ ಢಿಕ್ಕಿ ಹೊಡೆದುಕೊಂಡು-ಮಥನಗೊಂಡು ಹೊಸದಾಗಿ ಇನ್ನೇನೊ ಆಗುತ್ತಿದ್ದ ಸಂದರ್ಭದ ಸಂಕರ ಪಠ್ಯ.

***

ಉಲ್ಲೇಖಗಳು

೧. Bhabha, Hormi K. 1994. Location of Culture, London/New York: Routledge.

೨. Chatretee, Partha 1994, Nation and Its Fragments, New Delhi : OUP

೩. Cohn, Bernard S. 1997. Colonialism and Its Forms of Knowledge, New Delhi L OUP

೪. Rabinow, Paul ed, 1984. Foucault Reader, New York: Panthean

೫. Said, Edward, 1978, Orientalism, London : Pengain

೬. ಭೋಯಿ ಮ.ಭಾ. ಅನು. ೧೯೯೯. ತಿರುಮಲಾರ್ಯ ವಿರಚಿತ ಚಿಕ್ಕದೇವರಾಯ ವಂಶಾವಳಿ, ಬೆಂಗಳೂರು : ಕ.ಸಾ.ಪ

೭. ಬಿ.ಎಸ್. ಸಣ್ಣಯ್ಯ, ಸಂ. ೧೯೮೮, ದೇವಚಂದ್ರನ ರಾಜಾವಳಿ ಕಥಾಸಾರ, ಮೈಸೂರು: ಕನ್ನಡ ಅಧ್ಯಯನ ಸಂಸ್ಥೆ.

೮. ಗಾಯಕ್ವಾಡ್, ವಿಠಲರಾವ್, ಅನು. ೨೦೦೦. ತಾರೀಖೆ ಇಸ್ಕಂದರಿ (ಮರಾಠಿ ಅನುವಾದ ಆಧರಿಸಿ) ವಿದ್ಯಾರಣ್ಯ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೯. ಗುಂಡಾಜೋಯಿಸ್, ಕೆಳದಿ. ಅನು. ೧೯೭೬ (೧೯೯೯), ಲಿಂಗಣ್ಣ ಕವಿಯ ಕೆಳದಿನೃಪವಿಜಯ (ಗದ್ಯಾನುವಾದ), ಬೆಂಗಳೂರು : ಕ.ಸಾ.ಪ

೧೦. ಕಲಬುರ್ಗಿ ಎಂ.ಎಂ. ಸಂ. ೧೯೯೪, ಕರ್ನಾಟಕ ಕೈಫಿಯತ್ತುಗಳು, ವಿದ್ಯಾರಣ್ಯಳ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೧೧. ಸಣ್ಣಯ್ಯ, ಬಿ.ಎಸ್. ೨೦೦೦. ದೇವಚಂದ್ರನ ರಾಜಾವಳೀ ಕಥಾಸಾರ (ಹೊಸಗನ್ನಡ ಗದ್ಯಾನುವಾದ), ಮಲೆಯೂರು: ಶ್ರೀ ಕನಕಗಿರಿ ಪ್ರಕಾಶನ.

***