ದೇವಚಂದ್ರನ ‘ರಾಜಾವಳಿ ಕಥಾಸರ’ದ ಒಡಲಲ್ಲಿ ಅಡಗಿರುವ ವ್ಯಥೆಗಳಲ್ಲಿ ಕೆಲವನ್ನು ತೋರಿಸುವುದೇ ಈ ಲೇಖನದ ಉದ್ದೇಶ. ಮೊದಲಿಗೆ ದೇವಚಂದ್ರನ ಜೈನಧಾರ್ಮಿಕತೆ ಸ್ವರೂಪವನ್ನೇ ನೋಡೋಣ. ದೇವಚಂದ್ರ ಮೂಲತಃ ಧರ್ಮಪರಾಯಣ. ಜೈನಧರ್ಮ ಶ್ರದ್ಧೆಯೇ ಅವನ ಅಸ್ತಿತ್ವದ ಜೀವಾಳ. ಇದಕ್ಕೆ ತಳುಕುಹಾಕಿಕೊಂಡಂತೆ ಜೈನ ಬ್ರಾಹ್ಮಣರ ಶ್ರೇಷ್ಠತೆಯ ಪ್ರತಿಪಾದನೆ ಅವನಲ್ಲಿ ಧಾರಾಳವಾಗಿಕಂಡು ಬರುತ್ತದೆ. ಧರ್ಮಗಳಲ್ಲಿ ಜೈನಧರ್ಮವೇ ಶ್ರೇಷ್ಠ. ಅದೇ ಉಳಿದ ಮತಧರ್ಮಗಳಿಗೆ ಮೂಲ ಬೇರು ಎಂಬ ಅಂಶವನ್ನು ಅವನು ಕೃತಿಯಲ್ಲಿ ಅಲ್ಲಲ್ಲಿ ಹೇಳಿದ್ದಾನೆ. ಸಂದರ್ಭ ದೊರೆತಾಗಲೆಲ್ಲ ಜೈನ ಬ್ರಾಹ್ಮಣತ್ವದ ಶ್ರೇಷ್ಠತೆಯ ಪ್ರತಿಪಾದನೆಯನ್ನೂ ದೇವಚಂದ್ರ ಸಾಂಗವಾಗಿ ನಡೆಸುತ್ತಾನೆ. ಭಾರತದಂಥ ದೇಶದಲ್ಲಿ ಜಾತಿಗೂ ಧರ್ಮಕ್ಕೂ ಗೆರೆಕೊಯ್ದು ‘ಇದು ಇಲ್ಲಿ ನಿಲ್ಲುತ್ತದೆ, ಇನ್ನೊಂದು ಇಲ್ಲಿಂದ ಪ್ರಾರಂಭವಾಗುತ್ತದೆ ಎಂದು ಹೇಳುವುದು ಹೆಚ್ಚು ಕಡಿಮೆ ಅಸಾಧ್ಯ.

ವೈದಿಕರಿಗೆ ವೇದವು ಪ್ರಾಮಾಣ್ಯವಾದಂತೆ ಜೈನರಿಗೆ ಆಗಮಗಳು ಪ್ರಾಮಾನ್ಯ. ದೇವಚಂದ್ರ ಜೈನ ಆಗಮಗಳನ್ನು ಮುಂದಿಟ್ಟುಕೊಂಡು, ವೇದಸಾಹಿತ್ಯದ ಪೊಳ್ಳುತನವನ್ನು, ಅಪೌರುಷೇ ಯತ್ವದ ಹೆಮ್ಮೆಯನ್ನು ಬುಡಮೇಲು ಮಾಡಲು ಯತ್ನಿಸುತ್ತಾನೆ. ಇಲ್ಲಿ ಮುಖ್ಯವಾದ ಒಂದು ಅಂಶವನ್ನು ಪ್ರಸ್ತಾಪಿಸಲು ಯತ್ನಿಸುತ್ತಾನೆ. ಜೈನಧರ್ಮ, ಅದರ ದರ್ಶನ ಇವು ನಾಸ್ತಿಕ ನೆಲೆಗಟ್ಟಿನವು. ಡಿ.ಆರ್. ನಾಗರಾಜ್ ತಮ್ಮ ಲೇಖನವೊಂದರಲ್ಲಿ (‘ಭಾರತೀಯ ನಾಸ್ತಿಕ ದರ್ಶನಗಳು’) ಪ್ರಸ್ತಾಪಿಸುವಂತೆ ಭಾರತದಲ್ಲಿ ದೇವರು ಅನ್ನುವವನು ಇಲ್ಲವೇ ಇಲ್ಲ ಎಂದು ಹೇಳುವ ನಾಸ್ತಿಕವಾದವೂ ಇತ್ತು. ದೇವರು ಈ ಜಗತ್ತನ್ನು ಸೃಷ್ಟಿಮಾಡಿಲ್ಲ ಎಂದು ಹೇಳುವ ನಿರೀಶ್ವರವಾದಿ ದರ್ಶನಗಳೂ ಇದ್ದವು. ಆದರೆ ಈ ನಿರೀಶ್ವರವಾದಿ ದರ್ಶನದ ನೆಲೆಗೆ, ಈ ಅರ್ಥದಲ್ಲಿ ನಾಸ್ತಿಕ ದರ್ಶನಕ್ಕಿಂತಲೂ ನಿಕಟವಾದ ಜೈನಧರ್ಶನದಲ್ಲಿ, ‘ಸಮ್ಯಕ್ ದರ್ಶನ’ ಎಂಬ ಒಂದು ತತ್ವವಿದೆ. ಇದು ಜೈನರೀತಿಯ ಬೋಧನೆಯಲ್ಲಿ ಶ್ರದ್ಧೆ ಇರಿಸುವುದಕ್ಕೆ ಸಂಬಂಧಿಸಿದ್ದು. ಅಂದರೆ ಒಂದಲ್ಲ ಒಂದು ರೀತಿಯಲ್ಲಿ ತಮ್ಮ ತತ್ವಕ್ಕೆ ಶ್ರೇಷ್ಠತೆಯನ್ನು ಕಲ್ಪಿಸಿಕೊಡುವ ಪ್ರಯತ್ನವನ್ನು ಜೈನರು ಹಿಂದಿನಿಂದಲೂ ಮಾಡಿದ್ದಾರೆ. ದೇವಚಂದ್ರ ಆ ಕ್ರಿಯೆಯ ಮುಂದುವರೆದ ಭಾಗವಾಗಿ ಜಯನ ಆಗಮಗಳೇ ನಿಜವಾದ ವೇದಗಳು, ವೈದಿಕರು ಹೇಳುವ ವೇದಗಳು ಮಿಥ್ಯೆ ಎಂದು ಪ್ರತಿಪಾದಿಸುತ್ತಾನೆ.

ಈ ಸಂದರ್ಭದಲ್ಲಿ ಬೆಲ್ಜಿಯಂನ ಚಿಂತಕ ಕೊಯೆನ್‌ರಾಜ್ ಎಲ್‌ಸ್ಟ್‌ನ `Ayodhya and after’ ಕೃತಿಯ ಒಂದು ಸಂದರ್ಭ ನೆನಪಿಗೆ ಬರುತ್ತದೆ. ಅದರಲ್ಲಿ ಅವನು ಇಂದಿನ ಹಿಂದೂ ಮಾನಸಿಕತೆಯನ್ನು ವಿಶ್ಲೇಷಿಸುತ್ತಾ ಒಂದು ಮಾತು ಹೇಳ್ತಾನೆ. ಆಗ್ರಾದಲ್ಲಿರುವ ತಾಜ್ಮಹಲ್ ಹಿಂದೂ ದೇವಾಲಯ ಆಗಿತ್ತು ಅಂತ ಸಂಶೋಧನೆ ಮಾಡಿ ಬರೀತಾನೆ. ಆದರೆ ಮುಸ್ಲಿಂ ಆಳ್ವಿಕೆ ಕಾಲದಲ್ಲಿ ಉತ್ತರ ಭಾರತದಲ್ಲಿ ಬೇಕಾದಷ್ಟು ಕಟ್ಟಡಗಳು ಹಾಳಾದವು. ಅದರ ಬಗ್ಗೆ ಅವರು ಯಾಕೆ ಗಮನ ಕೊಡೋದಿಲ್ಲ ಅಂತ. ಈ ಪ್ರಸಂಗವನ್ನು ಉಲ್ಲೇಖಿಸಿದ್ದರ ಉದ್ದೇಶವೆಂದರೆ ದೇವಚಂದ್ರ ಎದುರಿಸುತ್ತಿರುವ ಬಿಕ್ಕಟ್ಟನ್ನು ಚರ್ಚಿಸುವುದು. ವೇದ ಪ್ರಮಾಣ್ಯದ ಪ್ರಶ್ನೆಯನ್ನೇ ಆತ ಯಾಕೆ ಜೈನ  ಆಗಮ ಪ್ರಾಮಾಣ್ಯಕ್ಕೆ ಪರಿವರ್ತಿಸುತ್ತಾನೆ? ಪ್ರಾಯಃ ಅವನು ಕೇವಲ ಜೈನ ಬ್ರಾಹ್ಮಣನೂ ಆಗಿದ್ದದ್ದೇ ಇದಕ್ಕೆ ಕಾರಣ ಅಂತ ನನ್ನ ಅನ್ನಿಸಿಕೆ. ಶಾಸ್ತ್ರದ ಬೆಂಬಲದಿಂದ ಒಂದು ವಿಷಯ ಹೇಳಬಹುದು ಅನ್ನೋಭಾವನೆ ನಮ್ಮ ದೇಶದಲ್ಲಿ ಹಿಂದೆ ಇತ್ತು. ಅದಕ್ಕೆ ಮೀಮಾಂಸಕರು, ಅದ್ವೈತಿಗಳು, ವೇದಾಂತಿಗಳು, ಬೌದ್ಧರು ಶತಮಾನಗಳ ಕಾಲ ಚರ್ಚೆಗಳಲ್ಲಿ ತೊಡಗಿದ್ದರು. ವೇದಾಂತಿಗಳು, ವೈದಿಕರು ಮಾತ್ರವೇ ಶ್ರೇಷ್ಠ, ಉಳಿದವರ ಮಾತುಗಳು, ವಾದಗಳು ಅಂತಿಮವಾಗಿ ವೇದಾಂತಿಗಳ ವಾದಕ್ಕೆ ಹೋಲಿಸಿದರೆ ಎರಡನೆಯ ಸಾಲಿನಲ್ಲಿ ನಿಲ್ಲುತ್ತವೆ ಅನ್ನುವ ಭಾವನೆ ಹಿಂದೆ ಇರಲಿಲ್ಲ. ಅಂದರೇನು? ವೇದದ ಪ್ರಮಾಣ್ಯ ಎನ್ನುವುದು ಈ ದೇಶದಲ್ಲಿ ಯಾವುದೇ ಕಾಲದಲ್ಲೂ ಸರ್ವಜನ ಮಾನ್ಯವಾದ ಸ್ಥಿತಿ ಅಂತ ಬಂದಿರಲಿಲ್ಲ. ದೇವಚಂದ್ರ ಕೂಡ ಹಿಂದೆ ಹೇಳಿದಂತೆ ಜೈನಾಗಮಗಳನ್ನು ವೇದಕ್ಕಿಂತ ಶ್ರೇಷ್ಠ ಎಂದು ಹೇಳುವುದರ ಮೂಲಕ ಈ ಚರ್ಚೆಯನ್ನು ಮುಂದುವರಿಸುತ್ತಾನೆ. ಆದರೆ ಅವನು ಈ ಕೃತಿ ಬರೆದ ಕಾಲಕ್ಕೆ indology ಎಂಬ ಯುರೋಪ್‌ನಿಂದ ಹುಟ್ಟಿದ ಶಾಸ್ತ್ರ, ಭಾರತವನ್ನು ಪಶ್ಚಿಮದ ಅಧ್ಯಯನ ಕ್ರಮಗಳ ಮೂಲಕ ಅರಿಯುವ ಕ್ರಮ ಆಗ ತಾನೆ ಆರಂಭವಗಿತ್ತು. ದೇವಚಂದ್ರನಲ್ಲೇ indology ಓದಿನ ಕ್ರಮ ಸ್ವಲ್ಪ ಕಾಣಿಸುತ್ತದೆ. ಅವನು ಕಾಲಾನುಕ್ರಮಣಿಕೆ ಇಟ್ಟು ಕೊಂಡು ರಾಜರ ಬಗ್ಗೆ ಮಾತನಾಡೋದು, ಪೌರಾಣಿಕ ವಿಷಯಗಳನ್ನು ಹೇಳಿದ ನಂತರ ಚರಿತ್ರೆಗೆ ಹತ್ತಿರವಾದ ರಾಜರ ಬಗ್ಗೆ ಹೇಳೋದು ಮತ್ತು ಕೆಲವು ಕಡೆಗಳಲ್ಲಿ ತನ್ನ ವಾದಕ್ಕೆ ಪೂರಕವಾಗಿ ಹಲವು ಶಾಸನಗಳನ್ನುಹೆಸರಿಸುವುದು, ನೇರವಾಗಿ ಉಲ್ಲೇಖಿಸುವುದು ಇವೆಲ್ಲಾ ಈ ಮಾತಿಗೆ ಆಧಾರಗಳು ಅಂತ ನನ್ನ ಭಾವನೆ.

ಆದರೆ ಇವತ್ತು ಏನಾಗಿದೆ? ಈ indology ಕ್ರಮ ನಮ್ಮ ನವೋದಯದ ಕಾಲದ ವಿವಿಧ ಶಾಸ್ತ್ರಗಳ ವಿದ್ವಾಂಸರನ್ನ ಪ್ರಭಾವಿಸಿದ ಮೇಲೆ ನಮ್ಮಲ್ಲಿನ ಓದಿನ ಕ್ರಮವೇ ಬೇರೆ ಆಗಿಬಿಡ್ತು. ಮೊದಲು ವೇದಾಂತ ಅಂತ ಹೇಳಿದರೆ ದ್ವೈತ, ವಿಶಿಷ್ಟಾದ್ವೈತಗಳನ್ನೂ ಹೇಳೇತೀರಬೇಕಿತ್ತು. ಆದರೆ ಕಳೆದ ಶತಮಾನದ ಮೊದಮೊದಲಂತೂ ವೇದಾಂತ ಅನ್ನೋ ಪದ ಕೇವಲ ‘ಅದ್ವೈತ’ಕ್ಕೆ ಸೀಮಿತಗೊಂಡು ಬಿಟ್ಟಿತ್ತು. ವೈದಿಕ ವಾರ್ಗಯದ ಕತೆ ಇರಲಿ, ಅವೈದಿಕ ಅಧ್ಯಯನಗಳನ್ನೂ ನೋಡಿದರೂ ಈ ವಿಸಂಗತಿ ಒಡೆದು ಕಾಣುತ್ತೆ.

ಯುರೋಪಿಯನ್ನರ ಪರಕಾರ ಜೈನಧರ್ಮ ಅಂದರೆ ಬೌದ್ಧ ಧರ್ಮದ ಒಂದು ಅಂಗ ಅನ್ನೋ ಭಾವನೆ ಇದ್ದಿತು. ಕರ್ನಾಟಕದಲ್ಲಿ ಆ ವೇಳೆಗಾಗಲೇ ಜೈನರು ಸಾಹಿತ್ಯ ರಚಿಸಲು ತೊಡಗಿ ಕನಿಷ್ಟ ೮೦೦ ವರ್ಷಗಳಾದರೂ ಆಗಿತ್ತು. ಆದರೂ ದೇವಚಂದ್ರನ ಕಾಲದ ಪಂಡಿತರಲ್ಲಿ ಜೈನಧರ್ಮ ಬೌದ್ಧರದ್ದೇ ಒಂದು ಶಾಖೆ ಅನ್ನೋ ಅಭಿಪ್ರಾಯ ಸ್ಥೂಲವಾಗಿಯಾದರೂ ಇತ್ತು. ಚರ್ತುಮುಖಶಾಸ್ತ್ರಿ ಅನ್ನುವ ಜೈಪಂಡಿತನೊಬ್ಬ ಮೈಸೂರಿನ ರಾಜನ ಆಸ್ಥಾನದಲ್ಲಿ ವಾದ ಮಾಡುವಾಗ ಈ ಚರ್ಚೆ ಮೇಲೇಳುತ್ತದೆ. ಆಗ ಆ ಪಂಡಿತ ಜೈನಧರ್ಮವೇ ಉಳಿದ ಧರ್ಮಗಳಿಗೆ ಮೂಲ, ಬೌದ್ಧಧರ್ಮ ಜೈನಧರ್ಮದ ಮೂಲ ಅಲ್ಲ ಎಂಬುದನ್ನು ತಿಳಿಸಿಕೊಡಲು ಪಾಡುಪಡ್ತಾನೆ. “ಅನಾದಿಮಪ್ಪಾರ್ಹಮತಮಂ ಬೌದ್ಧಮತಮೆಂದು ವಿಚಾರವಿಲ್ಲದೆ ಮಾತನಾಡಿದರೆ ಹ್ಯಾಗೆ” ಎಂಬ ಅವನ ಮಾತಿನಲ್ಲಿ ಇದು ಸ್ಪಷ್ಟವಾಗಿ ಬಂದಿದೆ. ಇಲ್ಲಿ ದೇವಚಂದ್ರ ವಿಶೇಷ ಇಕ್ಕಟ್ಟಿನಲ್ಲಿ ನಿಂತು ಒಂದು ತಂತ್ರ ರೂಪಿಸಿದ್ದಾನೆ ಅಂತ ನನ್ನ ಅನ್ನಿಸಿಕೆ.

ಅದೆಂದರೆ ಪ್ರಭುತ್ವದ ಬದಲಾದ ಕೇಂದ್ರ ಮತ್ತು ಜ್ಞಾನದ ತಿಳುವಳಿಕೆಯ ಸಮಸ್ಯೆಗಳನ್ನು ಕುರಿತದ್ದು, ಅವನು ‘ರಾಜಾವಳಿ ಕಥಾಸಾರ’ ಬರೆಯೋ ವೇಳೆಗೆ ಬ್ರಿಟಿಷರ ಪ್ರಭಾವ, ಆಡಳಿತದ ಮೇಲೆ ಸಾಕಷ್ಟು ಆಗಿತ್ತು. ಅವನು ತುಂಬಾ ಸೂಕ್ಷ್ಮ ಸಂವೇದನೆಗಳಿದ್ದ ವ್ಯಕ್ತಿ. ಪಾಂಡಿತ್ಯ, ಧಾರ್ಮಿಕಶ್ರದ್ಧೆ ಎರಡೂ ಅವನಲ್ಲಿ ಮೇಳೈಸಿತ್ತು ಎಂಬುದಕ್ಕೆ ಕೃತಿಯಲ್ಲಿ ಬೇಕಾದಷ್ಟು ಪುರಾವೆಗಳಿವೆ. ನಾನು ಆ ಅಂಶವನ್ನು ಹೇಳೋದಿಕ್ಕೆ ಹೋಗಲ್ಲ. ಆದರೆ ವರ್ತಮಾನದಲ್ಲಿ ಆಗುತ್ತಿದ್ದ ಅಲ್ಲೋಲಕಲ್ಲೋಲಗಳ ಬಗ್ಗೆ, ಹೊಸ ಸುಧಾರಣೆಗಳ ಬಗ್ಗೆ ಅವನಿಗೆ ಅಪಾರವಾದ ವಿಸ್ಮಯ ಇತ್ತು ಅಂತ ನನಗೆ ಅನ್ನಿಸುತ್ತೆ. ಏಕೆಂದರೆ ಜೈನದೃಷ್ಟಿಯ ಪ್ರಕಾರ ಈ ಜಗತ್ತು ಅನಾದಿ, ಅದಕ್ಕೆ ಯಾರೂ ಸೃಷ್ಟಿಕರ್ತರಿಲ್ಲ, ಅದು ಅನಂತ. ಅಂದ ಮೇಲೆ ಅದಕ್ಕೆ ವಿನಾಶ ಅನ್ನೋದು ಇಲ್ಲ. ಜೈನಧರ್ಮವೂ ಕೂಡ ಹಾಗೇ ಅದಕ್ಕೆ ನಾಶ ಅನ್ನೋದು ಇಲ್ಲ. ಉತ್ಸರ್ಪಿಣಿ ಕಾಲದಲ್ಲಿ ಅದರ ವಿಕಾಸ, ಪ್ರಚಾರ, ಪ್ರಭಾವ ಇರುತ್ತದೆ. ಅವಸರ್ಪಿಣಿ ಬಂದಾಗ ಅದೆಲ್ಲ ವಿರುದ್ಧ ಗತಿಯಲ್ಲಿ ಚಲಿಸುತ್ತವೆ. ಅಂದರೆ ಆಗ ಜೈನಧರ್ಮ ತನ್ನ ಶ್ರೇಷ್ಠ ಸ್ಥಿತಿಯಿಂದ ಕಳಮುಖವಾಗಿ ಚಲಿಸಬೇಕಾಗುತ್ತದೆ. ನನ್ನ ಪ್ರಕಾರ ಚರಿತ್ರೆಯ ಗತಿಯನ್ನು, ಏರಿಳಿತಗಳನ್ನು ಅರ್ಥಮಾಡಿಕೊಳ್ಳೋದಕ್ಕೆ ಜೈನರಲ್ಲಿರುವ ಮತ್ತು ದೇವಚಂದ್ರನೂ ಉಲ್ಲೇಖಿಸುವ ಈ ಕಾಳದ ಪರಿಕಲ್ಪನೆ ತುಂಬಾ ಪ್ರಯೋಜನಕಾರಿ. ಪ್ರಾಯಃ ಜೈನರು ಹೆಚ್ಚು ವಾಸ್ತವವಾದಿಗಳು ಅಂತ ಹೇಳೋದಿಕ್ಕೂ ಈ ದೃಷ್ಟಿಕೋನವೇ ಕಾರಣ.

ದೇವಚಂದ್ರನಲ್ಲಿ ದೊಡ್ಡ ವಿಸ್ಮಯ ಇತ್ತು ಎಂದು ಹೇಳಿದೆ. ಅವನು ಅಧಿಕಾರದ ಹಸ್ತಾಂತರದ ಸಂದರ್ಭದಲ್ಲಿ ಜೀವಂತ ಇದ್ದವನು. ಸ್ವತಃ ಅರಮನೆಯ ಒಳರಾಜಕೀಯಗಳನ್ನು, ಸಂಚಿನ ಸುಳಿಗಳನ್ನು ಹತ್ತಿರದಿಂದ ಕಂಡವನು. ಅಲ್ಲದೆ ತಾನು ಬರೆದ ಕೃತಿಯನ್ನು ಅರಸನಿಗೆ ಒಪ್ಪಿಸಲು ಕಡೆಗೂ ಅವನಿಗೆ ಸಾಧ್ಯವಾಗದೇ ಹೋಯಿತು ಎಂಬ ಅಂಶ ತುಂಬಾ ಮಹತ್ವದ್ದು. ಕರ್ನಾಟಕದ ಸಾಹಿತ್ಯ ಸಂಸ್ಕೃತಿ ಚರಿತ್ರೆಯಲ್ಲಿ ಕವಿಯೊಬ್ಬ ಪ್ರಭುತ್ವದ ಗಮನವನ್ನು ತನ್ನ ಕಡೆ ಸೆಳೆಯಲು ವಿಫಲನಾದ ಘಟನೆ ತುಂಬಾ ಮಹತ್ವದ್ದೆನಿಸಿಕೊಳ್ಳುತ್ತದೆ. ಆದರೆ ನಾವು ೧೯ನೇ ಶತಮಾನದ ಸಾಹಿತ್ಯ ಚರಿತ್ರೆಯನ್ನು ಇನ್ನೂ ಆಳವಾಗಿ ಅಧ್ಯಯನ ನಡೆಸಲು ಹೋಗಿಲ್ಲ. ರಾಜಕೀಯದ ದೃಷ್ಟಿಗಿಂತಲೂ, ನಮ್ಮ ಸಾಮಾಜಿಕ, ಸಾಂಸ್ಕೃತಿಕ ಜಗತ್ತು ಪಲ್ಲಟಗೊಂಡ ದೃಶ್ಯಗಳು ನಮಗೆ ಬೇಕು ಎನ್ನಿಸಿದರೆ ೧೯ನೆಯ ಶತಮಾನವನ್ನು ನಾವು ಅನುಸಂಧಾನಿಸದೆ ಬೇರೆ ದಾರಿಯಿಲ್ಲ.

ದೇವಚಂದ್ರ ಮೈಸೂರು ರಾಜರನ್ನು ಕುರಿತಂತೆ ತನ್ನ ಈ ಕೃತಿಯಲ್ಲಿ ಬೇಕಾದಷ್ಟು ವಿಷಯಗಳನ್ನು ಹೇಳಿದ್ದಾನೆ. ಆದರೆ ಆತನ ಬರವಣಿಗೆ ಎಲ್ಲಾ ಸಂಪೂರ್ಣವಾಗಿ ‘ಅರಮನೆ ಸಾಹಿತ್ಯ’ವಾಗಿ ಬಿಡುವುದಿಲ್ಲ. ಚಿಕ್ಕದೇವರಾಜ ಒಡೆಯರ ಪ್ರಸಂಗ, ಮುಮ್ಮಡಿ ಕೃಷ್ಣರಾಜ ಒಡೆಯರ ಆಡಳಿತದ ವೈಖರಿ ಈ ಭಾಗಗಳು ಮೈಸೂರಿನ ಅರಸರಲ್ಲಿ ಅಭಿಮಾನ ಇಟ್ಟಿರುವದರ ಪಾಲಿಗೆ ನುಂಗಲಾರದ ‘ಗಂಟಲಗಾಳ’ಗಳೇ ಆಗಿವೆ. ಈ ದೃಷ್ಟಿಯಿಂದ ದೇವಚಂದ್ರ ಇಲ್ಲೆಲ್ಲಾ ತೋರಿಸುವ ನಿಷ್ಠುರ ವಾಸ್ತವಿಕ ಪ್ರಜ್ಞೆ, ನವೋದಯದಲ್ಲಿ ಮೈಸೂರು ಇತಿಹಾಸ ರಚಿಸಿದ ವಿದ್ವಾಂಸರಿಗಿಂತ ಕಡಿಮೆ ಮಟ್ಟದ್ದಲ್ಲ. ನವೋದಯ ಹಿರಿಯ ವಿದ್ವಾಂಸರು, ಸಂಶೋಧಕರು ದೇವಚಂದ್ರನನ್ನು ಸಂಪೂರ್ಣವಾಗಿ ತಮ್ಮ ಅಧ್ಯಯನ ಕೊಠಡಿಗೆ ಬಿಟ್ಟುಕೊಳ್ಳದೆ ಕನ್ನಡ ಸಾಹಿತ್ಯ, ಸಂಸ್ಕೃತಿಗೆ ಮಾಡಿದ ಅನ್ಯಾಯದ ಬಗ್ಗೆ ವಿಸ್ತಾರವಾಗಿ ಚರ್ಚಿಸಲು ಮತ್ತೊಂದು ಪ್ರಬಂಧವೇ ಬೇಕು. ಈ ವಿಷಯ ಹಾಗಿರಲಿ.

ದೇವಚಂದ್ರ ಬ್ರಿಟಿಷರ ಆಳ್ವಿಕೆಯ ವೈಖರಿಯನ್ನು ಗಮನಿಸಿದ್ದ. ಅವರ ಕಾಲದಲ್ಲಿ ಹೊಸ ಆಡಳಿತ ವಿಭಾಗಗಳು ಆದದ್ದು, ರಸ್ತೆ ನಿರ್ಮಾಣ, ಪೊಲೀಸು ವ್ಯವಸ್ಥೆ, ಪುಂಡರ ದಮನ ಮೊದಲಾದ ಅಂಶಗಳನ್ನು ಮೆಚ್ಚಿ ಮುಕ್ತವಾಗಿಯೇ ಅವರ ಪ್ರಶಂಸೆ ಮಾಡುತ್ತಾನೆ. ಈ ಭಾಗ ವಸಾಹತು ಶಾಹಿ ಆಡಳಿತವನ್ನು ೧೯ನೇ ಶತಮಾನದ ಮೊದಲರ್ಧದಲ್ಲಿ ಇದ್ದ ಕವಿ ಹೇಗೆ ಕಂಡ ಅನ್ನುವುದಕ್ಕೆ ದೊಡ್ಡ ಸಾಕ್ಷಿ. ಸ್ವತಃ ಅರಮನೆಯಿಂದ ಮನ್ನಣೆ ದೊರಕಲಿಲ್ಲ ಎಂಬ ಒಂದು ಕಾರಣವನ್ನೇ ಮುಂದೊಡ್ಡಿ, ಈ ಅಭಿಪ್ರಾಯವನ್ನು ವೈಯಕ್ತಿಕ ಪ್ರತಿಕ್ರಿಯೆ ಎಂದು ತೀರ್ಮಾನಿಸುವುದು ಸರಿಯಲ್ಲ.

ಇವತ್ತು ಜಾಗತೀಕರಣದ ಬಗ್ಗೆ ಎದ್ದಿರುವ ಪರ-ವಿರೋಧದ ನೆಲೆಯ ಭಿನ್ನ ಭಿನ್ನ ಅಭಿಪ್ರಾಯ ವಾದಗಳನ್ನು ನೆನಪಿಸುವಂಥ ‘ಪ್ರಳಯ’ ಸ್ಥಿತಿ ಅವತ್ತು ನಡೆದಿತ್ತು ಎಂದು ಅನ್ನಿಸುತ್ತದೆ. ದೇವಚಂದ್ರನಲ್ಲಿ ಒಂದು ಕಡೆ ಹಿಂದಿನ ಪ್ರಭುತ್ವಕ್ಕೆ, ಸಿಂಹಾಸನಕ್ಕೆ ನಿಷ್ಠೆ ಇದೆ. ಆದರೆ ಮತ್ತೊಂದು ಕಡೆ ಕುಂಪಣಿ ಸರ್ಕಾರದ ಬಗ್ಗೆ ಮೆಚ್ಚುಗೆ ಇದೆ. ಪ್ರಾಯಶಃ ದೇವಚಂದ್ರ ಬ್ರಿಟಿಷ್ ಸರ್ಕಾರದ ಕಡೆಗೇ ಹೆಚ್ಚು ವಾಲುತ್ತಾನೆ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ. ಇದಿಷ್ಟು ದೇವಚಂದ್ರನ ಪ್ರಭುತ್ವನಿಷ್ಠೆಗೆ ಸಂಬಂಧಿಸಿದ ವಿಚಾರ. ದೇವಚಂದ್ರನ ಈ ನಿಲುವು ಸಾಹಿತ್ಯ ಚರ್ಚೆಯ ದೃಷ್ಟಿಯಿಂದ ಮಾತ್ರವಲ್ಲ, ಒಬ್ಬ ಕವಿ ಪ್ರಭುತ್ವವನ್ನು ಸಂದೇಹ, ಮೆಚ್ಚುಗೆ, ವಿಸ್ಮಯ, ಆತಂಕಗಳಿಂದ ನೋಡಿದ ಮೇಲೂ ಅಂತಿಮವಾಗಿ ಯಾವ ನೆಲೆಗೆ ಬಂದು ನಿಲ್ಲಬಲ್ಲ ಎಂಬ ದೃಷ್ಟಿಯಿಂದ ತುಂಬ ಕುತೂಹಲಕಾರಿ. ನವವಸಾಹತು ಶಾಹಿಯನ್ನು ಕುರಿತ ಚರ್ಚೆಗಳು ಅಕಡೆಮಿಕ್ ವಲಯವನ್ನೂ ಮೀರಿ, ಪೇಟೆ ಧಾರಣೆಯನ್ನು ನಿಯಂತ್ರಿಸುತ್ತಿರುವ ಈ ಕಷ್ಟಕಾಲದಲ್ಲಿ ದೇವಚಂದ್ರನ ಮರು ಓದು ಅತ್ಯಂತ ಸ್ವಾಗತಾರ್ಹ, ಅರ್ಥಪೂರ್ಣ. ಒಂದು ಜೀವಂತ ಸಂಸ್ಕೃತಿಯೊಡನೆ ಸಂವಾದ ನಡೆಸುತ್ತಾನೆ ಎಂಬುದೇ ದೇವಚಂದ್ರನ ಹೆಗ್ಗಳಿಕೆ. ಇತಿಹಾಸವನ್ನು ಕುರಿತು ರೂಢಿಗತವಲ್ಲದ ರೀತಿಯಲ್ಲಿ ಮಾತನಾಡುವ ದೇವಚಂದ್ರ, ಇತಿಹಾಸದ ಕಲ್ಲು ನೀರು ಕರಗುವ ಈ ಹೊತ್ತಿನಲ್ಲಿ ನಮಗೆ ಬೇಕು.

***