ರಾಜಾವಳಿ ಕಥಾಸಾರವು ಆರ್. ನರಸಿಂಹಾಚಾರ್ಯರ ಕವಿಚರಿತೆಯ ಸಂದರ್ಭದಲ್ಲಿಯೇ ಪ್ರಸ್ತಾಪಗೊಂಡಿದ್ದರೂ, ಹೆಚ್ಚಿನ ಚರ್ಚೆಗೆ ಒಳಗಾಗಿಲ್ಲವೆಂಬುದು ಪ್ರಸ್ತುತದ ಸಂವಾದಕ್ಕೆ ಅನುಕೂಲವೂ ಹೌದು, ತೊಂದರೆಯೂ ಹೌದು. ಹಸ್ತಪ್ರತಿಯಲ್ಲಿದ್ದ ಕೃತಿಯು ಅಚ್ಚಾದುದೇ ೧೯೮೮ರಲ್ಲಿ ಎನ್ನುವುದು ಇದಕ್ಕೊಂದು ಪ್ರಮುಖ ಕಾರಣವಾದರೂ, ಈ ಅಂಶದ ಹಿಂದೆ ಕೂಡ ನಮ್ಮ ಸಾಹಿತ್ಯ ಚರಿತ್ರೆಗಳು ಪ್ರಚುರ ಪಡಿಸಿದ ಅಭಿಪ್ರಾಯಗಳು ಪ್ರಭಾವ ಬೀರಿರುವುದನ್ನು ನಾವು ಊಹಿಸಬಹುದಾಗಿದೆ. ಅಂದರೆ ಪ್ರಾಚೀನ ಕನ್ನಡ ಹಸ್ತಪ್ರತಿಗಳ ಮುದ್ರಣದ ಆಯ್ಕೆಯ ಸಂದರ್ಭದಲ್ಲಿ ಕನ್ನಡ ವಿಮರ್ಶೆಗಳ ನಿಲುವುಗಳು ಕೆಲಸ ಮಾಡಿವೆ ಎನ್ನುವುದನ್ನು ಸ್ವೀಕರಿಸುವುದಾದರೆ ಪ್ರಸ್ತುತ ಕೃತಿಯ ತಡವಾದ ಮುದ್ರಣಕ್ಕೆ ಕೂಡ ಕೆಲವು ಸುಳಿವುಗಳು ದೊರೆಯುತ್ತವೆ. ಹಾಗಾಗಿ ಈ ಕೃತಿಯ ಬಗ್ಗೆ ಬಂದಿರುವ ಅಭಿಪ್ರಾಯಗಳನ್ನು ಮುಖ್ಯವಾಗಿ ಸಾಹಿತ್ಯ ಚರಿತ್ರೆಗಳ ಪ್ರಸ್ತಾಪ-ಮೊದಲಿಗೆ ಕ್ರೋಡೀಕರಿಸಿಕೊಳ್ಳುವ ಅಗತ್ಯವಿದೆ,.

ಅದರಲ್ಲಿನ ಪ್ರಮುಖ ಅಶಂಗಳು ಈ ಕೆಳಗಿನಂತಿವೆ.

೧. ಈ ಕೃತಿ ಚಾರಿತ್ರಿಕ ದೃಷ್ಟಿಯಿಂದ ಹೆಚ್ಚು ಮಹತ್ವದ್ದಾಗಿದೆ.

೨. ಕಾಲ್ಪನಿಕ ಅಂಶಗಳಿಂದ ಮಿಶ್ರವಾಗಿರುವುದರಿಂದ ಇದರಲ್ಲಿನ ಚಾರಿತ್ರಿಕ ಸತ್ಯವನ್ನೂ ಶೋಧಿಸಿ ಸ್ವೀಕರಿಸಬೇಕಾಗುತ್ತದೆ.

೩. ಸಾಂಸ್ಕೃತಿಕ ಅಧ್ಯಯನದ ಮಹತ್ವದ ಆಕರ ಗ್ರಂಥವಾಗಿದೆ.

ಮೇಲಿನ ಅಂಶಗಳನ್ನು ಗಮನಿಸುವುದಾದರೆ ಪ್ರಸ್ತುತ ಕೃತಿಯನ್ನು ಸಾಹಿತ್ಯ ಚರ್ಚೆಯ ದೃಷ್ಟಿಯಿಂದ ಪ್ರಮುಖವಾದುದೆಂದು ಎಲ್ಲಿಯೂ ಪರಿಗಣಿಸಿಲ್ಲವೆಂಬುದು ಅರಿವಿಗೆ ಬರುತ್ತದೆ. ಇದಕ್ಕೆ ಕಾರಣವೇನು? ಬಹುಶಃ ರಾಜಾವಳಿಯಂತಹ ಹಲವಾರು ಕೃತಿಗಳನ್ನು ಕನ್ನಡ ಸಾಹಿತ್ಯ ಚರಿತ್ರೆಯ ಆಕರ ಸಾಮಾಗ್ರಿಯಾಗಿ ಬಳಸಿಕೊಳ್ಳುತ್ತಲೇ, ಸಾಹಿತ್ಯ ಚರಿತ್ರಕಾರರು ಆ ಕೃತಿಗಳನ್ನು ಕಾವ್ಯಮೀಮಾಂಸೆಗೆ ಅನುಗುಣವಾದ ಅಥವ ಅಪವಾದವಾದ ರಚನೆಗಳು ಎಂಬ ನೆಲೆಯಲ್ಲಿ ಗ್ರಹಿಸಿ ಮೌಲ್ಯಮಾಪನ ಮಾಡಿದ್ದೇ ಆಗಿದೆ. ಅಂದರೆ ಪ್ರಾಚೀನ ಕನ್ನಡ ಕಾವ್ಯಗಳ ಹಿಂದೆ ಭಾರತೀಯ ಕಾವ್ಯಮೀಮಾಂಸೆಯ ಪ್ರಭಾವ ಹೆಚ್ಚಿನದು ಎಂಬುದರೊಂದಿಗೆ ಅದು ಪ್ರಶ್ನಾತೀತವಾದದು ಎಂದು ನಂಬಿದ್ದೂ ಆಗಿದೆ. ವಾಸ್ತವದಲ್ಲಿಯಾದರೆ ಕನ್ನಡದಲ್ಲಿ ಕಾವ್ಯ ಮೀಮಾಂಸೆಯ ಚೌಕಟ್ಟಿಗೆ ಒಳಪಟ್ಟ ರಚನೆಗಳು ಅಲ್ಪ ಸಂಖ್ಯಾತವಾಗಿದ್ದು, ಈ ಬೆರಳೆಣಕೆಯ ಕೃತಿಗಳು ಕನ್ನಡ ವಿಮರ್ಶೆಯನ್ನು ಕೇಂದ್ರೀಕರಿಸಿವೆ. ಅದರಿಂದಾಗಿ ರಾಜಾವಳಿಯಂತಹ ಕೃತಿಗಳೂ ತಮ್ಮ ಐತಿಹಾಸಿಕ ಸಂವೇದನೆಗೆ ಪ್ರಶಂಸೆಯನ್ನು ಗಳಿಸುತ್ತನೇ ಸಾಹಿತ್ಯ ಚರಿತ್ರೆ/ವಿಮರ್ಶೆಗಳ ಜಗತ್ತಿನಲ್ಲಿ ಎರಡನೆ ದರ್ಜೆಯ ಕೃತಿಗಳಾಗಿ ಉಳಿದಿವೆ. ತಮ್ಮ ಅಧ್ಯಯನಕ್ಕೆ ಬೇಕಾದ ಸಲಕರಣೆಗಳನ್ನು ಆವಿಷ್ಕರಿಸಿಕೊಳ್ಳುವುದರಲ್ಲಿ ಸೋಲುವುದರೊಂದಿಗೆ, ಸಾಹಿತ್ಯ ಚರಿತ್ರೆಯ ಪಟ್ಟಿಯಲ್ಲಿ ಸೇರ್ಪಡೆಗೊಂಡೂ ಇಡಿಹಾಸಕಾರರಿಗೆ ಉಪಯುಕ್ತವಾದ ಕೃತಿ ಎಂಬ ಹಣೆಪಟ್ಟಿಯನ್ನು ಹಚ್ಚಿಕೊಂಡಿವೆ. ಈ ಬಗೆಯ ಸಾಹಿತ್ಯ ಚರಿತ್ರೆಗಳ ವಿಮರ್ಶಾ ನಿಲುವುಗಳ ಬಹುದೊಡ್ಡ ವ್ಯಂಗ್ಯವೆಂದರೆ, ಸಾಹಿತ್ಯ ಚರಿತ್ರೆಯ ನಿರ್ಮಾಣವೆಂಬುದು ಕೃತಿಯೊಂದರ ಚಾರಿತ್ರಿಕಾಂಶವನ್ನು ನೇತ್ಯಾತ್ಮಕ ಅಂಶವಾಗಿ ಭಾವಿಸಿದ್ದು, ಓದುಗರ  ಅಭಿರುಚಿಯನ್ನು ನಿಯಂತ್ರಿಸಿದ್ದು ಆಗಿದೆ.

ಮೇಲಿನದಕ್ಕೆ ಪ್ರತಿಯಾಗಿ ಐತಿಹಾಸಿಕ ನೆಲೆಯಿಂದ ಹೊರಟ ರಾಜಾವಳಿಯ ಓದು ತನ್ನ ನಿರೀಕ್ಷೆಗಳನ್ನು ಮಂಡಿಸಿದ ಕ್ರಮವಾದರು, ಇನ್ನೊಂದು ಬಗೆಯದಾಗಿದೆ. ಅದು ಭಾರತೀಯರು ಹೇಳುವ ಕತೆಗಳಲ್ಲಿ ಚಾರಿತ್ರಿಕ ಸತ್ಯ ಎಷ್ಟಿರಬಹುದು ಎಂಬ ಹುಡುಕಾಟದಲ್ಲಿ ತೊಡಗಿದ್ದು, ಸಾಹಿತ್ಯ ಚರಿತ್ರೆಕಾರರು ಬರೆದ ‘ಇತಿಹಾಸಕ್ಕೆ ಉಪಯುಕ್ತವಾದ ಕೃತಿ’ ಎಂಬ ಪರಕ್ಕೆ ಪ್ರತಿಯಾಗಿ ರಾಜಾವಳಿಯಂತಹ ‘ಕಥನ’ಗಳು ಇತಿಹಾಸದ ಆಕರ ಸಾಮಗ್ರಿಯಾಗುವ ಬಗ್ಗೆ ತಮ್ಮ ತೀವ್ರ ಅನುಮಾನಗಳನ್ನು ಎತ್ತಿದವು. ಸಾಹಿತ್ಯವು ‘ಇತಿಹಾಸ’ವನ್ನು ತೊಡಕಾಗಿ ಭಾವಿಸಿದಂತೆ, ಇತಿಹಾಸವು ‘ಕಥನ’ವನ್ನು ತೊಡಕಾಗಿ ಪರಿಗಣಿಸಿತು.

ಅಧ್ಯಯನ ಕ್ಷೇತ್ರಗಳ ಈ ಸೀಮಿತ ನಿಲುವಿನಿಂದಾಗಿ ರಾಜಾವಳಿಯಂತಹ ಕೃತಿಗಳ ಸಂವಾದದ ದಾರಿಗಳು ನಿಯಂತ್ರಣಗೊಂಡವು. ಈ ಅರ್ಥದಲ್ಲಿ ರಾಜಾವಳಿ ಕೃತಿಯ ಮುಖಾಮುಖಿಯು ಕೇವಲ ಪ್ರಾಚೀನ ಪಠ್ಯವೊಂದರ ಮುಖಾಮುಖಿಯಾಗದೆ ಸಾಹಿತ್ಯ ಹಾಗೂ ಚರಿತ್ರೆಗಳೆಂಬ ಎರಡು ಜ್ಞಾನಶಾಖೆಗಳ ಮುಖಾಮುಖಿಯೇ ಆಗುತ್ತದೆ. ಭಾರತೀಯ ಸಮಾಜಕ್ಕಿದ್ದ ಶುದ್ದ ಚಾರಿತ್ರಿಕ ಪ್ರಜ್ಞೆ ಹಾಗು ಕತೆ ಹೇಳುವ ಪ್ರತಿಭೆಗಳ ನಡುವಿರುವ ಒತ್ತಡವನ್ನು ಮುಂಚೂಣಿಗೆ ತರುತ್ತದೆ.

ಇತಿಹಾಸ  ಹಾಗೂ ಕಥನಗಳ ಕುರಿತಂತೆ ಆಧುನಿಕ ವಸಾಹತುಶಾಹಿ ಕಾಲಘಟ್ಟವು ಸೃಷ್ಟಿಸಿದ ನಿಲುವುಗಳಿಂದು ಶಿಥಿಲಗೊಳ್ಳುತ್ತಿವೆ. ಆಧುನಿಕೋತ್ತರ ಚಿಂತನೆಗಳು ಕಥನಗಳನ್ನು ಇತಿಹಾಸ ರಚನೆಯ ಅಕರಗಳಾಗಿ ಸ್ವೀಕರಿಸಬೇಕಾದ ಅಗತ್ಯವನ್ನು ಒಪ್ಪಿ ಅದಕ್ಕೆ ಬೇಕಾದ ಅನುಸಂಧಾನದ ಮಾರ್ಗಗಳನ್ನು ರೂಪಿಸುತ್ತಿವೆ. ಇದೇ ಸಂದರ್ಭದಲ್ಲಿ ಶುದ್ಧ ಸಾಹಿತ್ಯಿಕ/ಕಾವ್ಯಮೀಮಾಂಸೆಯ ನಿಲುವುಗಳೂ ಸೋತು ಪಠ್ಯವೊಂದರ ರಾಜಕೀಯ ಓದು, ಸಾಂಸ್ಕೃತಿಕ ಗ್ರಹಿಕೆ ಅತ್ಯುಪಯುಕ್ತವಾದುದು ಎಂಬುದನ್ನು ಸ್ವೀಕರಿಸಿವೆ. ಈ ಪಲ್ಲಟಗಳ ಹೆಗ್ಗುರುತಾಗಿ ರಾಜಾವಳಿಯಂತಹ ಕೃತಿಗಳು ಯಾವ ಸಾಂಸ್ಕೃತಿಕ ಚರಿತ್ರೆಯನ್ನು ಕಥನವಾಗಿ ಕಟ್ಟುತ್ತಿವೆ ಎಂಬುದರತ್ತ ತನ್ನ ಗಮನವನ್ನು ಕೇಂದ್ರೀಕರಿಸುವ ಅಗತ್ಯವಿದೆ.

ಪ್ರಾಚೀನ ಪಠ್ಯವೊಂದರ ಸಾಂಸ್ಕೃತಿಕ ಮುಖಾಮುಖಿಯು ‘ಕಾಲ’ವನ್ನು ಹಿನ್ನೆಲೆಯಲ್ಲಿಟ್ಟುಕೊಂಡೇ ನಡೆಯುವುದಾಗಿರುತ್ತದೆ. ಪ್ರಾಚೀನ ಎಂಬ ಪದವೇ ಕಾಲದ ಚೌಕಟ್ಟನ್ನು ಅದಕ್ಕೆ ಒದಗಿಸುತ್ತದೆ. ಸಾಹಿತ್ಯವು ತನ್ನನ್ನು ತಾನು ಕಾಲಾತೀತವಾದ ನೆಲೆಯಲ್ಲಿ ಪ್ರತಿಪಾದಿಸಿಕೊಳ್ಳಲು ಹವಣಿಸಿದರೂ ರಾಜಾವಳಿಯಂತಹ ಕೃತಿಗಳು ಅದನ್ನು ಮೀರಿ ಸಾಹಿತ್ಯವನ್ನು ಇಕ್ಕಟ್ಟಿಗೆ ಸಿಲುಕಿಬಿಡುತ್ತವೆ. ಹಾಗೆಯೇ ಭಾರತೀಯರಿಗೆ ಚಾರಿತ್ರಿಕ ಪ್ರಜ್ಞೆ ಅಷ್ಟಾಗಿ ಇರಲಿಲ್ಲ… ಅವರು ಕತೆ ಹೇಳಲು ಆರಂಭಿಸುತ್ತಿದ್ದರು. ಎಂಬ ಐರೋಪ್ಯರ ಅಪವಾದಗಳು ಈ ಖೃತಿಯು ಪ್ರಕಟಿಸುವ ಐತಿಹಾಸಿಕತೆಯ ಹಿನ್ನೆಲೆಯಲ್ಲಿ ಪುನರ್‌ವಿಮರ್ಶೆಗೆ ಒಳಪಡಬೇಕಾಗುತ್ತದೆ. ಮೆಕೆಂಜಿಯಂತಹ ವಿದೇಳಿ ವಿದ್ವಾಂಸರೂ ಇಲ್ಲಿನ ಪ್ರಪಂಚಿಕೆಯನ್ನು ಅರಿಯಲು ಅವಲಂಬಿಸಿದ್ದು, ಇಂತಹ ಕಥನಕಾರರನ್ನೇ ಎಂಬ ವಿಚಾರವು ಆಧುನಿಕ ಇತಿಹಾಸವೂ ಕೂಡ ಒಂದು ಕಥನವೇ ಎಂಬ ಚರ್ಚೆಯನ್ನು ಪುಷ್ಟೀಕರಿಸುವುದಾಗುತ್ತದೆ. ಈ ಹಿನ್ನೆಲೆಯಲ್ಲಿ ಗ್ರಹಿಸುವುದಾದರೆ ರಾಜಾವಳಿಯಂತಹ ಪ್ರಾಚೀನ ಪಠ್ಯದೊಂದಿಗಿನ ನಮ್ಮ ಮುಖಾಮುಖಿಯಲ್ಲಿ ಅತ್ಯಂತ ಸಮರ್ಥವಾಗಿ ಈಹೊತ್ತಿನ ಸಾಂಸ್ಕೃತಿಕ ಸಂದರ್ಭವನ್ನು ವಿವರಿಸಿಕೊಳ್ಳುವುದೂ ಸಾಧ್ಯವಿದೆ. ಇತಿಹಾಸದ ಪುನಾರಚನೆಯ ವಾಗ್ವಾದದ ಈ ಹೊತ್ತಿನಲ್ಲಿ ಪ್ರಸ್ತುತ ಕೃತಿ ಹಾಗು ನಮ್ಮ ಸಾಂಸ್ಕೃತಿಕ ಸಂದರ್ಭಗಳೆರಡೂ ಸಂಧಿಸುತ್ತವೆ.

ಪ್ರಾಥಮಿಕ ವಿವರಗಳಲ್ಲಿಯೇ ದೊರಕುವ ಹಾಗೆ ಕೃತಿಯು ಹನ್ನೊಂದು ಅಧಿಕಾರಗಳಲ್ಲಿ ರಚಿತವಾದುದು. ನಂತರದ ೧೨ ಮತ್ತು ೧೩ನೆಯ ಅಧಿಕಾರಗಳು ವಿಭಿನ್ನ ಅಗತ್ಯಗಳಿಗೆ ಅನುಗುಣವಾಗಿ ರಚಿಸಿ ಸೇರಿಸಿದ್ದಾಗಿದೆ. ತನ್ನ ಬಹು ಅಗತ್ಯಗಳನ್ನು ದೇವಚಂದ್ರ ಮುಚ್ಚು ಮರೆಯಿಲ್ಲದೆ ಹೇಳಿಕೊಳ್ಳುವುದೇ ಕನ್ನಡ ಕಾವ್ಯದ ಸಂದರ್ಭದಲ್ಲಿ ಅತ್ಯಂತ ಕುತೂಹಲಕಾರಿಯಾದ ಅಪರೂಪದ ಸಂಗತಿದ್ದು, ಇದು ಭಾರತೀಯ ಕಾವ್ಯ ಮೀಮಾಂಸೆಯು ಮಂಡಿಸುವ ‘ಸಾಹಿತ್ಯ ಕಥನ’ವನ್ನು ಭಗ್ನಗೊಳಿಸುತ್ತದೆ. ಮೀಮಾಂಸೆಯ ವಿವಿಧ ಪ್ರಸ್ಥಾನಗಳಾದ ಅಲಂಕಾರ, ಗುಣ, ರಸ, ಧ್ವನಿ, ಔಚಿತ್ಯ, ಸಹೃದಯ ಇತ್ಯಾದಿ ಒಂದೊಂದು ಅಂಶವೂ ಲೆಕ್ಕಕ್ಕೇ ಸಲ್ಲಿದಂತೆ ‘ಕಥಾಸಾರ’ ರೂಪುಗೊಂಡಿದೆ. ದೇವಚಂದ್ರನ ‘ಅಗತ್ಯ’ಗಳು ಅದನ್ನು ಮೀರಿದ ನಡೆಯೊಂದನ್ನು ಕೃತಿಗೆ ಒದಗಿಸಿದೆ.

ಭಾರತೀಯ ಕಾವ್ಯಮೀಮಾಂಸೆಯಲ್ಲಾಗಲಿ, ಕನ್ನಡ ಕವಿಗಳ ಸಂದರ್ಭದಲ್ಲಾಗಲಿ ಕಾವ್ಯದ ಓದುಗರು/ಆಶ್ರಯದಾತರು ಅತ್ಯಂತ ಪ್ರಮುಖ ಸ್ಥಾನದಲ್ಲಿ ನಿಲ್ಲುವವರು ದೇವಚಂದ್ರನ ಕಾವ್ಯದಲ್ಲಾದರೋ ಕನಿಷ್ಠ ಮೂರು ಮುಖ್ಯ ಓದುಗ/ಆಶ್ರಯದಾತರನ್ನು ನಾವು ಕಾಣಬಹುದು. ಒಂದು, ವಿದ್ಯಾವಿಶಾರದರೂ, ವಿಚಾರ ದಕ್ಷರು, ಬುಧರೂ ಆಗಿರುವವರು. ಇವರು ಭಾರತೀಯ ಕಾವ್ಯಮೀಮಾಂಸೆ ಕಂಡುಕೊಂಡ ಆದರ್ಶ/ಕಲ್ಪಿತ ಓದುಗರು. ಎರಡು, ಸೂರಿ ಪಂಡಿತರು, ಮೆಕೆಂಜಿ ಸರದಾರ, ಮಹಾಮಾತುಶ್ರೀ ದೇವಿರಾಂಬಿಕೆ ಮುಂತಾದವರು. ದೇವಚಂದ್ರನ ಕಾವ್ಯವನ್ನು ನಿಜವಾದ ಅರ್ಥದಲ್ಲಿ ಪ್ರಭಾವಿಸಿರುವವರು ಇವರು. ಈ ಓದುಗ/ಆಶ್ರಯದಾತರನ್ನು ಪಡೆಯುವುದಕ್ಕೆ ಪಟ್ಟ ಪಾಡನ್ನು ದೇವಚಂದ್ರನೇ ವಿವರಿಸಿದ್ದಾನೆ. ಮೂರು, ಮೋಹ ತಿಮಿರಕ್ಕೆ, ವೈಷಮ್ಯಕ್ಕೆ, ಭ್ರಾಂತಿಗೆ ಒಳಗಾದವರು. ಇವರು ಜೈನಧರ್ಮದ ಸತ್ವ ಮಹತ್ವಗಳನ್ನು ಅರಿಯದವರು. ಈ ಮೂರು ಭಿನ್ನ ಜನವರ್ಗದ ಅಗತ್ಯಗಳಾಗಿ ಸತ್ಯ ಪ್ರವಚನ, ಪ್ರಪಂಚು, ಹರಿವಂಶ ಲಲಾಮರ ವಂಶ ಪಂಕ್ತಿ, ಜಾತಿನಿರ್ಣಯ ಇತ್ಯಾದಿಗಳಲ್ಲೆವು ಇವೆ. ಆ ಅಗತ್ಯಗಳನ್ನು ಅರಿತವನಾಗಿ ದೇವಚಂದ್ರ ತನ್ನ ಕಾವ್ಯವನ್ನು ನಿರೂಪಿಸಿದ್ದಾನೆ. ಹಾಗಾಗಿ ಆತನ ಕಾವ್ಯ ಇತಿಹಾಸ, ಧರ್ಮ, ಐತಿಹ್ಯ, ಇತ್ಯಾದಿಗಳೆಲ್ಲದರ ಮಿಶ್ರಣದ ‘ಕಥನ’ವಾಗಿ ರೂಪುಗೊಂಡಿದೆ. ಈ ಮಿಶ್ರಣವೂ ಅತ್ಯಂತ ಗೊಂದಲ, ಪುನರುಕ್ತಿಗಳಿಗೆ ಒಳಗಾಗಿವೆ. ನಿಶ್ಚಿತ ಓದುಗರನ್ನು ಕಲ್ಪಿಸಿಕೊಳ್ಳಲಾಗದ/ಹೊಂದಲಾಗದ ಸಂದಿಗ್ಧದಲ್ಲಿ ಕಾವ್ಯವಿದೆ.

ವಾಸ್ತವವಾಗಿ ದೇವಚಂದ್ರನ ಈ ಸಂದಿಗ್ಧವೆಂಬುದು ೧೮ನೇ ಶತಮಾನದ ಕನ್ನಡ ಕಾವ್ಯದ ಸ್ಥಿತಿಯೇ ಆಗಿದೆ. ಈ ಅರ್ಥದಲ್ಲಿ ದೇವಚಂದ್ರನ ಕಾವ್ಯದ ಸಂದಿಗ್ಧವೆನ್ನುವುದು ಹೊಸ ಓದುಗರನ್ನು/ಆಶ್ರಯದಾತರನ್ನು ಕನ್ನಡ ಕಾವ್ಯ ಜಗತ್ತಿಗೆ ಹುಡುಕಿಕೊಡುವ ಸಂಕ್ರಮಣ ವ್ಯವಸ್ಥೆಯ ಪರಿಶ್ರಮವಾಗಿ ಕಂಡುಬರುತ್ತದೆ. ಆದ್ದರಿಂದಲೇ ಇಲ್ಲಿ ಪ್ರಾಚೀನ ಕನ್ನಡ ಕಾವ್ಯಪರಂಪರೆಯನ್ನು ಪೋಷಿಸಿಕೊಂಡು ಬಂದಿದ್ದ ಪ್ರಭುತ್ವದ ಪ್ರತಿನಿಧಿಗಳಾಗಿ ಮೆಕೆಂಜಿ ಸರದಾರ, ಶ್ರೀ ದೇವಿರಾಂಬೆಯರಿದ್ದಾರೆ. ಆದರೆ ಅವರ ನಿರೀಕ್ಷೆಗಳು, ಅಣತಿಗಳು ಭಿನ್ನವಾಗಿ ಹೆಚ್ಚು ಸ್ಪಷ್ಟವಾಗಿವೆ. ವಸಾಹತುಶಾಹಿ ಪ್ರಭುತ್ವ ‘ಪ್ರಪಂಚು’ವನ್ನು ಕೇಳುತ್ತದೆ. ಮೈಸೂರ ಅರಸುಮನೆತನ ತನ್ನ ವಂಶಾವಳಿಯನ್ನು ಬೇಡುತ್ತದೆ. ಹಾಗೆಯೇ ಕನ್ನಡ ಕಾವ್ಯ ಪರಂಪರೆ ಗೌರವಿಸುತ್ತಿದ್ದ ‘ಬುಧರೂ’ ಇಲ್ಲಿದ್ದರೆ ಆದರಿವರೂ ಪೂರ್ವದೊಳ್ ನಡೆದ ಪ್ರಪಂಚವನ್ನು ಮುಖ್ಯವಾಗಿ ಜಾತಿನಿರ್ಣಯವನ್ನು ತಿಳಿದು ತನ್ನ ಮೋಹತಿಮಿರ ಭ್ರಾಂತಿಯನ್ನು ತೊರೆದು ಜೈನಧರ್ಮಾನುಸಾರಿಯದ ‘ಸತ್ಯ’ವನ್ನು ಅರಿಯಬೇಕಿದೆ. ಹೀಗೇ ಕನ್ನಡ ಕಾವ್ಯದ ಅಪೇಕ್ಷಿತ ಸಮುದಾಯ ಸಂಕ್ರಮಣಾವಸ್ಥೆಯಲ್ಲಿದೆ. ಹಾಗಾಗಿ ತನ್ನ ಕಾವ್ಯದ ವಸ್ತು, ರೀತಿಗಳು ಬದಲಾಗಬೇಕಾದ ಅಗತ್ಯ, ಅನಿವಾರ್ಯಗಳು ದೇವಚಂದ್ರನಿಗೆ ಗೋಚರವಾಗಿದೆ. ಅದು ಆತನ ಉಳಿದ ಕಾವ್ಯಗಳ ಹಿನ್ನೆಲೆಯಲ್ಲಿಯೂ ಸ್ಪಷ್ಟಗೊಳ್ಳುತ್ತದೆ. ಈ ಕಾವ್ಯದ ಸಂದರ್ಭದಲ್ಲಿ ಈ ಬದಲಾವಣೆಯನ್ನು ಆತ ಸ್ವೀಕರಿಸಿದ್ದಾನೆ ಸಹ. ಅದರೆ ಹೇಗೆ ಬದಲಾಗಬೇಕೆಂಬ ಬಗ್ಗೆ ಮಾತ್ರ ಸ್ಪಷ್ಟ ನಿಲುವಿಗೆ ಬರಲಾರದವನಾಗಿದ್ದಾನೆ. ಪರಿಣಾಮವಾಗಿ ವಡ್ಡಾರಾಧನೆಯಿಂದ ಹಿಡಿದು ಬ್ರಹ್ಮ ಶಿವನವರೆಗಿನ ಜೈನ ಕಾವ್ಯದ ಎಲ್ಲ ಬಗೆಯನ್ನು ಛಾಯಾಸ್ವರೂಪದಲ್ಲಿ ತರುತ್ತಿದ್ದಾನೇನೋ ಎನ್ನಿಸುವ ಹಾಗೆ ತನ್ನ ಕಥನದ ಮಾದರಿ ರೂಪಿಸಿಕೊಂಡಿದ್ದಾನೆ. ಹೀಗಾಗಿ ಜೈನ ಪುರಾಣಗಳ ಸೃಷ್ಟಿಯ ವರ್ಣನೆ, ಜೈನ ಕಥನಗಳ ಐತಿಹಾಸಿಕ, ಜಾನಪದೀಯ ಸಂವೇದನೆಗಳಿಂದ ಹಿಡಿದು ಆದಿಕಾವ್ಯಗಳ ಜೈನಪರ ನಿರ್ವಚನ ಹಾಗು ಅನ್ಯಮತ ಖಂಡನೆಯವರೆಗೆ ಎಲ್ಲ ಕನ್ನಡ ಜೈನ ಕಾವ್ಯದ ಬಹುಮುಖ್ಯ ಘಟ್ಟಗಳು ಇಲ್ಲಿ ಇಣಕು ಹಾಕುತ್ತವೆ.

ರಾಜಾವಳಿ ಕಥಾಸಾರವು ಮೇಲುನೋಟಕ್ಕೆ ಇತಿಹಾಸ, ಐತಿಹ್ಯ, ಜಾನಪದ, ಪುರಾಣ ಇತ್ಯಾದಿಗಳನ್ನೆಲ್ಲಾ ಹೇಗೆಂದರೆ ಹಾಗೆ ಬೆರಸಿ, ಬಳಸಿದ ಗೊಂದಲಮಯ ಕಥಾನಕವಾಗಿ ಕಂಡುಬಂದರೂ, ಆಳದಲ್ಲಿ ಅದು ತನ್ನದೇ ಆದ ನಿರ್ದಿಷ್ಟ ಧೋರಣೆಯನ್ನು ಹೊಂದಿದೆ. ಕಾವ್ಯದ ಹಿಂದೆ ಮೆಕೆಂಜಿ, ದೇವಿರಾಂಬೆಯರ ನಿರ್ದೇಶನಗಳಿದ್ದರೂ ಅದನ್ನು ದೇವಚಂದ್ರ ತನ್ನದೇ ಆದ ರೀತಿಯಲ್ಲಿ ಗ್ರಹಿಸಿದ್ದಾನೆ. ತನ್ನೆಲ್ಲ ಲೌಕಿಕ ಒತ್ತಡಕ್ಕೆ ಮಣಿಯುತ್ತಲೂ ‘ಪ್ರಪಂಚು’ ಎಂಬ ಮಾತನ್ನು ಭಾರತದಲ್ಲಿನ ಪ್ರಭುತ್ವ ಹಾಗು ಧಾರ್ಮಿಕ ಸ್ಥಿತ್ಯಂತರಗಳ ಹಿನ್ನೆಲೆಯಲ್ಲಿ ಗ್ರಹಿಸಿದ್ದಾನೆ. ತನ್ನ ಕಥಾನಕವನ್ನು ಸೃಷ್ಟಿ ವರ್ಣನೆಯ ಜೈನ ಪೌರಾಣಿಕತೆಯಿಂದಲೇ ಆರಂಭಿಸಿದರೂ, ಆರಂಭದಲ್ಲಿಯೇ ವರ್ಣಾಶ್ರಮದ ಪ್ರಸ್ತಾಪವನ್ನು ಮಾಡುವ ಮೂಲಕ ಅದನ್ನು ಸಮಾಜೀಕರಣಗೊಳಿಸುತ್ತಾನೆ. ಭಾರತದ ಸಂದರ್ಭದಲ್ಲಿ ಧರ್ಮವನ್ನು ಚಾತುರ‍್ವರ್ಣ ನೆಲೆಯಲ್ಲಿ ವಿವರಿಸಿಕೊ‌ಳ್ಳುವುದೆಂದರೆ ಅದು ಏಕಕಾಲಕ್ಕೆ ಆರ್ಥಿಕ, ರಾಜಕೀಯ, ಸಾಮಾಜಿಕ ಆಯಾಮಗಳನ್ನು ಆಹ್ವಾನಿಸುವುದೇ ಆಗಿರುತ್ತದೆ. ಆದ್ದರಿಂದಲೇ ದೇವಚಂದ್ರನ ಜೈನಧಾರ್ಮಿಕ ಪ್ರತಿಪಾದನೆಯು ಅಂತಿಮವಾಗಿ ಜಾತಿನಿರ್ಣಯವನ್ನು ಮಂಡಿಸುವುದೇ ಆಗಿರುತ್ತದೆ ಎಂಬಂತೆ ಪರಿವರ್ತನೆಗೊಳ್ಳುತ್ತದೆ. ಅದಕ್ಕೆ ಪೂರಕವಾಗುವಂತೆ ಪ್ರಭುತ್ವ ಹಾಗು ಧಾರ್ಮಿಕ ಸ್ಥಿತಂತ್ಯರ ನೆಲೆಯಲ್ಲಿ ಹೊರಟ ವಿಚಾರವು ಮೈಸೂರು ಅರಸರ ಹೊತ್ತಿಗೆ ಜಾತಿ ಹಾಗೂ ಪ್ರಭುತ್ವದ ಸಂಗತಿಯಾಗಿ ಸ್ಪಷ್ಟಗೊಳ್ಳುತ್ತದೆ.

ದೇವಚಂದ್ರ ತನ್ನ ಕಾವ್ಯಕ್ಕೆ ರಾಜಾವಳಿ ಎಂಬ ಹೆಸರಿಟ್ಟರೂ ಅದರ ಮುಖ್ಯಧಾರೆ ಧರ್ಮ ಮತ್ತು ಪ್ರಭುತ್ವಗಳೆರಡನ್ನೂ ಒಳಗೊಂಡದ್ದಾಗಿದೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಅವೆರಡೂ ಪರಸ್ಪರರನ್ನು ಪ್ರಭಾವಿಸುತ್ತಿದ್ದುದನ್ನು ದಾಖಲಿಸುವುದಾಗಿದೆ. ಆಧುನಿಕ ಕನ್ನಡ ಕಾವ್ಯ ಹಾಗು ವಿಮರ್ಶಿಗಳಾದರೋ ತಮ್ಮ ಅತ್ಯುತ್ತಮ ನಿಲುವಾಗಿ ಸೆಕ್ಯುಲರ್ ಮೌಲ್ಯ ಹಾಗು ಮೀಮಾಂಸೆ / ವಿಮರ್ಶೆಯ ಆಶಯಗಳನ್ನು ಗಟ್ಟಿಯಾಗಿ ಹಿಡಿದಿದ್ದರಿಂದ ಅದಕ್ಕೆ ಸಹಜವಾಗಿಯೇ ಈ ಕೃತಿಯ ಬಗ್ಗೆ ಹೆಚ್ಚಿನ ಯಾವ ಆಸಕ್ತಿಗಳೂ ಕಾಣಲಿಲ್ಲ. ಈ ಕೃತಿಯ ಗ್ರಹಿಕೆಗೆ ಬೇಕಾದ ದಾರಿಗಳನ್ನು ಆವಿಷ್ಕಾರಿಸಿಕೊಳ್ಳಲಾಗಲಿಲ್ಲ. ಸಾಹಿತ್ಯ ಕೃತಿಯೊಂದರಲ್ಲಿ ಉಂಟಾಗುವ ಶಿಥಿಲಬಂಧ, ಢಾಳಾಗಿ ಕಾಣುವ ಸಾಹಿತ್ಯೇತರ ಪ್ರಭಾವಗಳು ಕೂಡ ವಿಶಿಷ್ಟವಾದ ರೀತಿಯಲ್ಲಿ ಸಾಹಿತ್ಯ ಚರ್ಚೆಯನ್ನು ಮುನ್ನಡೆಸಬಹುದು ಎಂಬುದು ಸ್ಪಷ್ಟಗೊಳ್ಳಲಿಲ್ಲ. ಆದರೆ ಬದಲಾಗುತ್ತಿರುವ ಈ ಹೊತ್ತಿನ ಸಾಹಿತ್ಯಿಕ ಓದಿನ ಬಹುಶಿಸ್ತೀಯ ದಾರಿಗಳು ದೇವಚಂದ್ರನ ಕಾವ್ಯದ ಶಿಥಿಲ ಬಂಧ, ಐತಿಹಾಸಿಕಾಂಶಗಳ ಬಳಕೆ, ಪೋಷಕರಿಗಾಗಿ ಹುಡುಕಾಟ, ಪ್ರಭುತ್ವದ ಅಣತಿಯಂತೆ ಕೈಗೊಳ್ಳುವ ಕಾವ್ಯರಚನೆ- ಪುನಾರಚನೆಯ ಸ್ವರೂಪ, ಢಾಳಾಗಿ ಕಾಣುವ ಜಾತಿಪ್ರಸ್ತಾಪ ಇತ್ಯಾದಿ ಅಂಶಗಳು ಕನ್ನಡ ಕಾವ್ಯ ಚರ್ಚೆಯ ಅತ್ಯಂತ ಗಂಭೀರ ಘಟ್ಟಗಳಾಗಬಲ್ಲದು ಎಂಬುದನ್ನು ಅರಿಯತೊಡಗಿದೆ. ಪ್ರಾಚೀನ ಕಾವ್ಯದ ಮುಖಾಮುಖಿಯ ಸಂದರ್ಭದಲ್ಲಿ ಸಾಹಿತ್ಯ ಚರಿತ್ರೆಯಲ್ಲಿ ಅಗ್ರಪಂಕ್ತಿ ಪಡೆಯುವ ‘ಪಂಪ’ನಷ್ಟೇ ಕೊನೆಗೆ ನಿಲ್ಲುವ ದೇವಚಂದ್ರನೂ ಮುಖ್ಯನಾದವನು ಎಂಬ ನಿಲುವಿಗೆ ಬರತೊಡಗಿವೆ. ಹೀಗೆ ಬದಲಾಗುತ್ತಿರುವ ಪ್ರಸ್ತುತದ ಸಾಹಿತ್ಯ ವಿಮರ್ಶೆಯ ಸಂದರ್ಭಕ್ಕೆ, ಸಂಕ್ರಮಣಾವಸ್ಥೆಯಲ್ಲಿ ನಿಂತು ಕಾವ್ಯ ರಚಿಸಿದ ದೇವಚಂದ್ರನ ಸಾನಿಧ್ಯ ಹೆಚ್ಚು ಉಪಯುಕ್ತ ಎನಿಸುತ್ತಿದೆ. ಈ ಅರ್ಥದಲ್ಲಿ ದೇವಚಂದ್ರ ತನ್ನ ಕಾಲಕ್ಕಷ್ಟೇ ಅಲ್ಲದೆ ಈ ಹೊತ್ತಿನ ಮಹತ್ವದ ಜವಾಬ್ದಾರಿವೊಂದನ್ನು ಸ್ವೀಕರಿಸಿದವನಂತೆ ಕಾಣುತ್ತಾನೆ. ಒಂದೇ ಮಾತಿನಲ್ಲಿ ಹೇಳುವುದಾದರೆ ರಾಜಾವಳಿ ಕತೆ ಇದುವರೆಗಿನ ಕನ್ನಡ ವಿಮರ್ಶೆ ಕೈಗೊಂಡ ಹಲವಾರು ನಿಲುವುಗಳನ್ನು ಮರುಪರಿಶೀಲನೆಗೊಡ್ಡುವಂತೆ ಒತ್ತಾಯಿಸುತ್ತದೆ ಎಂಬ ಅಂಶವೇ ಈ ಕೃತಿಯ ಸಾಂಸ್ಕೃತಿಕ ಮುಖಾಮುಖಿಯ ಅಗತ್ಯವನ್ನು ಮಹತ್ವವನ್ನೂ ತೋರಿಸುತ್ತದೆ.

***