ಕನ್ನಡ ಭಾಷೆ ಮತ್ತು ಸಾಹಿತ್ಯ ವಿಭಾಗವು ಮಹತ್ವಾಕಾಂಕ್ಷೆಯಿಂದ ರೂಪಿಸಿರುವ ಯೋಜನೆಗಳಲ್ಲಿ ‘ಪ್ರಾಚೀನ ಕೃತಿಗಳ ಸಾಂಸ್ಕೃತಿಕ ಮುಖಾಮುಖಿ’ಯು ಒಂದು. ೨೧ನೇ ಶತಮನವು ಆರಂಭವಾಗುತ್ತಿರುವ ಹೊತ್ತಿನಲ್ಲಿ ಪ್ರಾಚೀನ ಸಾಹಿತ್ಯ ಕೃತಿಗಳನ್ನು ಹೇಗೆ ಅರ್ಥಪೂರ್ಣವಾಗಿ ಮುಖಾಮುಖಿ ಮಾಡಬೇಕು ಎಂಬುದನ್ನು ಕುರಿತು ವಿಭಾಗವು ಮಾಡಿದ ಚರ್ಚೆಯ ಫಲವಾಗಿ ಈ ಯೋಜನೆ ರೂಪುಗೊಂಡಿತು.

‘ಕನ್ನಡದಲ್ಲಿ ಪ್ರಾಚೀನ ಸಾಹಿತ್ಯ ಕೃತಿಗಳ ಅಧ್ಯಯನಗಳಿಗೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಕಾಣುವ ನೋಟವೆಂದರೆ, ಕೃತಿಗಳನ್ನು ಕುರಿತು ಈಗಾಗಲೇ ಸಾಹಿತ್ಯ ಚರಿತ್ರೆ ಹಾಗೂ ವಿಮರ್ಶೆಯ ಬರೆಹಗಳಲ್ಲಿ ಬಂದಿರುವ ಅಭಿಪ್ರಾಯಗಳನ್ನೆ ಎತ್ತಿಕೊಂಡು ಚರ್ಚೆ ಮಾಡುವುದು. ಕೃತಿಗಳನ್ನು ಹೊಸ ಸಂವೇದನೆಯಿಂದ ಆಪ್ತವಾಗಿ ಆಧುನಿಕ ಮನಸ್ಸಿನಿಂದ ಮುಖಾಮುಖಿ ಮಾಡುವ ಗುಣ ಕಡಿಮೆಯಾಗುತ್ತಿರುವುದು. ಇದರಿಂದ ಪ್ರಾಚೀನ ಕೃತಿಗಳ ಜತೆ ಸಮಕಾಲೀನವಾದ ಸಂವಾದ ಸಾಧ್ಯವಾಗುತ್ತಿಲ್ಲ. ಹೊಸ ತಲೆಮಾರಿನವರು ಪ್ರಾಚೀನ ಕೃತಿಗಳನ್ನು ಜರೂರಾಗಿ ಮುಖಾಮುಖಿ ಮಾಡಬೇಕಿದೆ. ಈ ಮುಖಾಮುಖಿಯು ನಮ್ಮ ಹಿರೀಕರು ಮಾಡಿದ ಅಧ್ಯಯನಗಳ ಅರ್ಥಪೂರ್ಣ ಮುಂದುವರಿಕೆಯಾಗಿ ಇರಬೇಕು. ಮಾತ್ರವಲ್ಲ, ನಮ್ಮ ಸಾಹಿತ್ಯ ಪರಂಪರೆಯನ್ನು ಮತ್ತೆಮತ್ತೆ ಓದಿಗೆ ಒಳಪಡಿಸುವ ಪ್ರಯತ್ನವೂ ಆಗಿರಬೇಕು. ನಮ್ಮ ಕಾಲದ ಕನಸು ತಲ್ಲಣಗಳನ್ನು ನಾವೇ ಕಂಡುಕೊಳ್ಳುವುದಕ್ಕಾಗಿ ಹಾಗೂ ಹೊಸ ಶತಮಾನವನ್ನು ಎದುರಿಸಲು ತಾತ್ವಿಕ ಸಿದ್ಧತೆ ಮಾಡಿಕೊಳ್ಳುವುದಕ್ಕಾಗಿ ಕೂಡ ಈ ಮುಖಾಮುಖಿ ಅಗತ್ಯವಾಗಿದೆ.’ – ಇವು ಈ ಯೋಜನೆಯ ಮುಖ್ಯ ಆಶಯಗಳು. ಈ ಆಶಯಗಳನ್ನು ಇಟ್ಟುಕೊಂಡು ಶುರುವಾದ ಯೋಜನೆಯು ತನ್ನ ಕಾರ್ಯಕ್ರಮವನ್ನು ಹೀಗೆ ರೂಪಿಸಿಕೊಂಡಿದೆ:

ಅ) ಪ್ರತಿವರುಷ ಒಂದು ಅಥವಾ ಎರಡರಂತೆ ಪ್ರಾಚೀನ ಕನ್ನಡ ಸಾಹಿತ್ಯದ ಕೃತಿಯನ್ನು ಸಂವಾದಕ್ಕೆ ಆರಿಸಿಕೊಳ್ಳಬೇಕು.

ಆ) ಆಯ್ಕೆ ಮಾಡಿಕೊಳ್ಳುವ ಕೃತಿಯು ಸಾಹಿತ್ಯಕವಾಗಿ ಮಾತ್ರವಲ್ಲ, ಸಾಂಸ್ಕೃತಿಕವಾಗಿಯೂ ಮುಖ್ಯ ಅನಿಸುವಂತಿರಬೇಕು.

ಇ) ಅದು ಬಹುಚರ್ಚಿತವಾಗಿರುವುದು ಆಯ್ಕೆಗೆ ಕಾರಣವಾಗಬೇಕಿಲ್ಲ. ಬದಲಾಗಿ ಅದರ ಮೇಲೆ ಹೆಚ್ಚಿನ ಚರ್ಚೆಗಳು ಆಗದಿರುವುದೂ ಆಯ್ಕೆಗೆ ಕಾರಣವಾಗಬಹುದು.

ಈ) ಸಂವಾದ ಕಾರ್ಯಕ್ರಮಕ್ಕೆ ನಾಡಿನ ಸಂವೇದನಶೀಲರಾದ ಚಿಂತಕರನ್ನು ಕರೆಯಿಸಿ, ಅವರ ಜತೆ ವಿಶ್ವವಿದ್ಯಾಲಯದ ಅಧ್ಯಾಪಕರು ಸೇರಿಕೊಂಡು, ಅರ್ಥಪೂರ್ಣವಾದ ಸಂವಾದ ಏರ್ಪಡಿಸಬೇಕು. ಈ ಸಂವಾದವು ಮಾಮೂಲಿ ವಿಚಾರ ಸಂಕಿರಣಗಳಿಗಿಂತ ಭಿನ್ನವಾಗಿಯೂ ಸಾಧ್ಯವಾದಷ್ಟು, ಅನೌಪಚಾರಿಕವಾಗಿಯೂ ಇರಬೇಕು.

ಉ) ಈ ಚರ್ಚೆ ಕೇವಲ ಅಕೆಡಮಿಕ್ ಸ್ವರೂಪದಲ್ಲಿ ಇರಬಾರದು. ಬದಲಿಗೆ ಅದು ಕನ್ನಡ ಕರ್ನಾಟಕ ಕನ್ನಡಿಗರ ಬದುಕಿಗೆ ಲಗತ್ತು ಪಡೆಯಬೇಕು. ಕೃತಿಯ ಓದು ಸಮಕಾಲೀನ ವಿದ್ಯಮಾನಗಳನ್ನು ಒಳಗೊಂಡಂತೆ ಒಂದು ಸಾಂಸ್ಕೃತಿಕ ಸ್ಪರ್ಶವನ್ನು ಪಡೆದುಕೊಳ್ಳುವಂತೆ ಇರಬೇಕು.

ಊ) ಸಂವಾದ ಕಾರ್ಯಕ್ರಮ ನಡೆದ ಬಳಿಕ ವಿದ್ವಾಂಸರು ಲೇಖನರೂಪದಲ್ಲಿ ಸಿದ್ಧಪಡಿಸಿಕೊಡುವ ಬರೆಹಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಬೇಕು. ಸದರಿ ಪುಸ್ತಕವನ್ನು ಮುಂದಿನ ಸಂವಾದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಬೇಕು.

ಮೇಲ್ಕಾಣಿಸಿದ ಆಶಯ ಹಾಗೂ ಕಾರ್ಯಕ್ರಮ ಮೂಲಕ ಮೊದಲೇ ವರ್ಷ (೧೯೯೮) ‘ಕವಿರಾಜಮಾರ್ಗ’ವನ್ನು ಕುರಿತು ಸಂವಾದ ಕಾರ್ಯಕ್ರಮ ಏರ್ಪಡಿಸಲಾಯಿತು. ನಂತರ ‘ವಡ್ಡಾರಾಧನೆ’ ‘ಶೂನ್ಯ ಸಂಪಾದನೆಗಳು’ ದೇವಚಂದ್ರನ ‘ರಾಜಾವಳಿ ಕಥೆ’ ಹರಿಹರನ ‘ರಗಳೆ’ಗಳು- ಇವನ್ನು ಆರಿಸಿಕೊಂಡು, ಕ್ರಮವಾಗಿ ಹಂಪಿ ಮೈಸೂರು ಚಾಮರಾಜನಗರ ಹಾಗೂ ಕೋಲಾರಗಳಲ್ಲಿ ಸಂವಾದ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದ ಫಲವಾಗಿ ಪ್ರಕಟವಾದ ಪುಸ್ತಕಗಳಿಗೆ ಸಾಹಿತ್ಯ ಅಧ್ಯಯನದಲ್ಲಿ ತೊಡಗಿರುವವರು ಸ್ವಾಗತಿಸಿದ್ದಾರೆ. ಕನ್ನಡದ ಪ್ರಾಚೀನ ಪಠ್ಯಗಳನ್ನು ಹೊಸಬಗೆಯ ಓದಿಗೆ ಒಳಪಡಿಸುವ ಅಗತ್ಯವಿದೆಯೆಂದೂ ಅವನ್ನು ಸಾಂಸ್ಕೃತಿಕ ಆಯಾಮದ ವಿಶ್ಲೇಷಣೆಗೆ ಒಡ್ಡುವ ಜರೂರು ಇದೆಯೆಂದೂ, ಚರ್ಚೆಯ ಬಳಿಕ ಅವು ಪ್ರಾಚೀನ ಕೃತಿಗಳು ಅನಿಸದೆ ನಮ್ಮ ಕಾಲದ ಸುಖದುಃಖಗಳನ್ನು ಬಿಂಬಿಸುವ ಸಮಕಾಲೀನ ಕೃತಿಗಳು ಅನಿಸುತ್ತಿವೆಯೆಂದೂ ಎಂದು ಓದುಗರು ಪರಿಭಾವಿಸಿದ್ದಾರೆ. ಇದು ನಮಗೆ ಈ ಯೋಜನೆಯನ್ನು ಮುಂದುವರೆಸಲು ಸಿಕ್ಕ ಉತ್ತೆಜನ ಹಾಗೂ ನೈತಿಕ ಬೆಂಬಲವಾಗಿದೆ.

ನಮ್ಮ ಸಂವಾದ ಕಾರ್ಯಕ್ರಮದ ಪುಸ್ತಕಗಳು, ಏನಾದರೂ ಹೊಸ ಚರ್ಚೆಯನ್ನು ಹುಟ್ಟುಹಾಕುವ ಸಂಗತಿಗಳನ್ನು ಒಳಗೊಂಡಿದ್ದರೆ, ಇದಕ್ಕೆ ಕಾರಣ, ನಮ್ಮ ಕಾಲದ ಚಾರಿತ್ರಿಕ ಬೆಳವಣಿಗೆ ಹಾಗೂ ಬದಲಾದ ಸಂಶೋಧನ ವಿಧಾನಗಳು ಹಾಕಿರುವ ಒತ್ತಾಯಗಳು. ಬೇರೊಂದು ಕಾಲದಲ್ಲಿ ರಚಿತವಾದ ಕೃತಿಯು ಮೇಲುನೋಟಕ್ಕೆ ಸ್ಥಾವರದಂತೆ ತೋರುತ್ತದೆ. ಆದರೆ ಅದಕ್ಕೆ ಪ್ರತಿಕ್ರಿಯಿಸುವ ಸಮುದಾಯಗಳು ಸದಾ ಜಂಗಮಗೊಳ್ಳುತ್ತಿರುತ್ತವೆ. ಅವುಗಳ ಚಾರಿತ್ರಿಕ ಒತ್ತಡಗಳು ಆದ್ಯತೆಗಳು ಕನಸುಗಳು ಬೇರೆ ಬೇರೆ ಆಗುತ್ತವೆ. ಇದರಿಂದ ಅವುಗಳ ಪ್ರತಿಕ್ರಿಯೆಗಳು ಕೂಡ ಸಹಜವಾಗಿ ಬದಲಾಗುತ್ತಿರುತ್ತವೆ. ಹೀಗೆ ಬದಲಾಗುವ ತಮ್ಮ ಪ್ರತಿಕ್ರಿಯೆಗಳ ಮೂಲಕ ಸಮುದಾಯಗಳು ತಾವೂ ಬೆಳೆಯುತ್ತ ಕೃತಿಯನ್ನೂ ಬೆಳೆಸತೊಡಗುತ್ತವೆ. ಆಗ ಕೃತಿ ಕೇವಲ ಪ್ರಾಚೀನವಾಗಿ ಉಳಿದಿರುವುದಿಲ್ಲ. ಅದು ಕಾಲದ ಹಂಗನ್ನು ಹರಿದುಕೊಂಡು ಜತೆಗಿರುವ ಸಂಗಾತಿಯಾಗುತ್ತದೆ. ಇದನ್ನು ‘ಪ್ರಾಚೀನ’ ಕೃತಿಯು ನವೀನಗೊಳ್ಳುವುದು ಎಂದು ವಿಭಾಗವು ಭಾವಿಸಿದೆ.

ವಾಸ್ತವವಾಗಿ ಈ ಯೋಜನೆಯು ನಮ್ಮ ನಾಡಿನ ವಿದ್ವಾಂಸರು ಮಾಡುತ್ತಿರುವ ಕೂಡುಚಿಂತನೆಯ ಪ್ರಯೋಗ. ಇದಕ್ಕೆ ಕನ್ನಡ ವಿಶ್ವವಿದ್ಯಾಲಯ ಹಾಗೂ ನಮ್ಮ ವಿಭಾಗವು ವೇದಿಕೆ ಒದಗಿಸುವ ಕೆಲಸವನ್ನಷ್ಟೆ ಮಾಡುತ್ತಿವೆ. ಈ ತನಕ ಈ ಸರಣಿಯಲ್ಲಿ ನಾಡಿನ ಅತ್ಯುತ್ತಮ ವಿದ್ವಾಂಸರು ಭಾಗಿಯಾಗಿದ್ದಾರೆ. ಮುಂದಿನ ವರುಷಗಳಲ್ಲಿ ಈ ಯೋಜನೆಯು ನಾಡಿನ ಎಲ್ಲ ಸಂವೇದನಶೀಲ ಚಿಂತಕರನ್ನು ವಿದ್ವಾಂಸರನ್ನು ಒಳಗು ಮಾಡುವ ಹಂಬಲ ಇರಿಸಿಕೊಂಡಿದೆ. ‘ಆದಿಪುರಾಣ’ ‘ಜೈಮಿನಿಭಾರತ’ ‘ಕುಮಾರರಾಮನಸಾಂಗತ್ಯ’ ‘ಸಮಯಪರೀಕ್ಷೆ’ ‘ಮಂಟೆಸ್ವಾಮಿ ಕಾವ್ಯ’ ಬಸವಣ್ಣನವರ ‘ವಚನ’ಗಳು ‘ಕೊಡೇಕಲ್ಲು ಸಾಹಿತ್ಯ’- ಮುಂತಾದ ಕೃತಿಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಇದನ್ನೊಂದು ಸರಣಿಯನ್ನಾಗಿ ಮುಂದುವರೆಸುವ ಉದ್ದೇಶವನ್ನೂ ಇರಿಸಿಕೊಂಡಿದೆ. ನಮ್ಮ ಸಂವಾದ ಕಾರ್ಯಕ್ರಮಗಳನ್ನು ತಂತಮ್ಮ ಊರುಗಳಲ್ಲಿ ನಡೆಯಿಸಲು ಅನೇಕ ಸಾಹಿತ್ಯಾಸಕ್ತರು ಸಂಘಸಂಸ್ಥೆಗಳು ಆಸಕ್ತಿ ತೋರುತ್ತಿರುವುದು ನಮ್ಮ ಭಾಗ್ಯವಾಗಿದೆ. ಇದಕ್ಕಾಗಿ ಮತ್ತೊಮ್ಮೆ ಕನ್ನಡ ವಿದ್ವಾಂಸರ ಹಾಗೂ ಸಮಸ್ತ ಓದುಗರ ವಿಮರ್ಶೆಯನ್ನೂ ಸಹಾಯವನ್ನೂ ವಿಭಾಗದ ಪರವಾಗಿ ಕೋರುತ್ತೇನೆ.

ನಮ್ಮ ಸಾಹಿತ್ಯಕ ಮಾನದಂಡಗಳು ಮುಖ್ಯವೆಂದು ಗ್ರಹಿಸದ ಕೃತಿಗಳಲ್ಲಿ ಒಂದಾಗಿರುವ ‘ರಾಜಾವಳಿಕಥೆ’ಯು ಕನ್ನಡದ ಸಂಕೀರ್ಣ ಪಠ್ಯಗಳಲ್ಲಿ ಒಂದಾಗಿದೆ. ಈ ಸಂಕೀರ್ಣತೆಯ ಹಿಂದೆ ಕೆಲಸ ಮಾಡಿರುವುದು ದೇವಚಂದ್ರನ ವಿಕ್ಷಿಪ್ತ ವ್ಯಕ್ತಿತ್ವ ಮಾತ್ರವಲ್ಲ, ೧೯ನೇ ಶತಮಾನದಲ್ಲಿ ನಮ್ಮನ್ನಾಳಲು ಹೊಳಹು ಹಾಕುತ್ತಿದ್ದ ಬ್ರಿಟಿಶರು ನಿರ್ಮಿಸಿದ್ದ ಒತ್ತಡಗಳು ಕೂಡ. ನೆಲವನ್ನು ಅಳೆದು ಮೋಜಣಿ ಮಾಡಲೆಂದು ಬಂದ ಮೆಕೆಂಜಿ ಎಂಬ ಬ್ರಿಟಿಷ್‌ಅಧಿಕಾರಿಯ ಬೇಡಿಕೆಯಿಂದ ಹುಟ್ಟಿದ ಕೃತಿಯಿದು. ಇಂತಹದೊಂದು ವಿಶಿಷ್ಟ ಪಠ್ಯದ ಬಗ್ಗೆ ಮೊಟ್ಟ ಮೊದಲನೇ ಬಾರಿಗೆ ಸಂವಾದ ಕಾರ್ಯಕ್ರಮವು ದಿನಾಂಕ: ೨೪, ಫೆಬ್ರವರಿ ೨೦೦೨ ರಂದು ಚಾಮರಾಜ ನಗರದಲ್ಲಿ ನಡೆಯಿತು. ಇದಕ್ಕೆ ನಿಜವಾಗಿ ಕಾರಣರಾದವರು ದೇವಚಂದ್ರನ ಊರಿನವರೇ ಆದ ಪ್ರೊ. ಮಲೆಯೂರು ಗುರುಸ್ವಾಮಿಯವರು. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿರುವ ಮಲೆಯೂರು ಗುರುಸ್ವಾಮಿ ಅವರು, ಪರಿಷತ್ತಿನ ಸಹಯೋಗದೊಂದಿಗೆ ತಮ್ಮ ಊರಿನಲ್ಲಿ ಪ್ರಾಚೀನ ಕೃತಿಗಳ ಸಾಂಸ್ಕೃತಿಕ ಮುಖಾಮುಖಿ ಸರಣಿಯ ಒಂದು ಕಾರ್ಯಕ್ರಮ ನಡೆಯಿಸಿಕೊಡಬೇಕೆಂದು ಆಸೆ ವ್ಯಕ್ತಪಡಿಸಿದವರು. ಮಾತ್ರವಲ್ಲ, ವಿಭಾಗವು ಒಪ್ಪಿದ ಬಳಿಕ, ಈ ಕಾರ್ಯಕ್ರಮವನ್ನು ಅದ್ಭುತವಾಗಿ ಸಂಘಟಿಸಿಕೊಟ್ಟರು. ಮಲೆಯೂರಿನ ಅತಿಶಯ ಸಿದ್ಧಕ್ಷೇತ್ರದವರು ಹಾಗೂ ಚಾಮರಾಜ ನಗರದ ಜನರು ಇದಕ್ಕೆ ವಿಶೇಷ ಸಹಕಾರ ನೀಡಿದರು. ಇವರೆಲ್ಲರ ಸಹಾಯ ಹಾಗೂ ಪ್ರೀತಿಯನ್ನು ಆದರದಿಂದ ನೆನೆಯುತ್ತೇನೆ.

ಕರ್ನಾಟಕದ ಗಡಿಯಂಚಿನ ಚಾಮರಾಜನಗರದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಬಂದು, ತಮ್ಮ ಚಿಂತನೆಗಳನ್ನು ಹಂಚಿಕೊಂಡ ಹಾಗೂ ತಮ್ಮ ಪ್ರಬಂಧಗಳನ್ನು ಸಿದ್ಧಪಡಿಸಿಕೊಟ್ಟ ಇಲ್ಲಿನ ವಿದ್ವಾಂಸರನ್ನು ನೆನೆಯುತ್ತೇನೆ. ನಮ್ಮ ವಿಭಾಗದ ಕಾರ್ಯಕ್ರಮಗಳಿಗೆ ಎಲ್ಲ ಬಗೆಯ ಸ್ವಾತಂತ್ರ್ಯವನ್ನು ಕೊಟ್ಟು, ಪ್ರೋತ್ಸಾಹಿಸುವ ಮಾನ್ಯ ಕುಲಪತಿಯವರಾದ ಎಚ್‌ಜೆ ಲಕ್ಕಪ್ಪಗೌಡರ ವಿಶ್ವಾಸ ದೊಡ್ಡದು.  ಕಾರ್ಯಕ್ರಮಕ್ಕೆ ಅವರೂ ಬಂದು ಭಾಗವಹಿಸಿದ್ದರು. ಅವರನ್ನು ನೆನೆಯುತ್ತೇನೆ. ನಮ್ಮ ವಿಭಾಗದ ಗೆಳೆಯರಾದ ಅಮರೇಶ ನುಗಡೋಣಿ, ಶಿವನಾಂದ ವಿರಕ್ತಮಠ, ಬಿ.ಎಂ.ಪುಟ್ಟಯ್ಯ ಅವರು ಹೆಗಲು ಕೊಡುವುದರಿಂದ ಇಂತಹ ಕಾರ್ಯಕ್ರಮಗಳನ್ನು ದಣಿವಿಲ್ಲದೆ ಮಾಡಲು ಸಾಧ್ಯವಾಗಿದೆ. ಸಂವಾದ ಕಾರ್ಯಕ್ರಮದಲ್ಲಿ ಮಂಡನೆಯಾದ ಲೇಖನಗಳನ್ನು ಸಂಕಲಿಸಿ, ಪ್ರಸ್ತಾವನೆ ಬರೆದು ಸಂಪಾದಿಸಿಕೊಟ್ಟಿರುವ ವೆಂಕಟೇಶ ಇಂದ್ವಾಡಿ ಅವರು ಇದೇ ಚಾಮರಾಜನಗರ ಜಿಲ್ಲೆಗೆ ಸೇರಿದವರು. ಮಂಟೆಸ್ವಾಮಿ ಪರಂಪರೆಯ ವಿದ್ವಾಂಸರು. ಅವರು ಈ ಕೃತಿಯನ್ನು ಶ್ರದ್ಧೆಯಿಂದ ಸಂಪಾದಿಸಿ ಕೊಟ್ಟಿದ್ದಾರೆ. ವಿಭಾಗದ ಕಛೇರಿಯ ಪಾರ್ವತಮ್ಮ ಹಾಗೂ ಭೀಮೇಶ ದುಡಿದಿದ್ದಾರೆ. ಕಲಾವಿದರಾದ ಮಕಾಳಿ ಅವರು ಮುಖಚಿತ್ರ ಬರೆದಿದ್ದಾರೆ. ಪ್ರಸಾರಾಂಗದ ಪ್ರಕಟಣ ವಿಭಾಗದವರು ಇದನ್ನು ಸುಂದರವಾಗಿ ಪ್ರಕಟಿಸುತ್ತಿದ್ದಾರೆ. ಇವರೆಲ್ಲರಿಗೆ ವಿಭಾಗದ ಪರವಾಗಿ ನಮಿಸುತ್ತೇನೆ.

ರಹಮತ್ ತರೀಕೆರೆ
ಜನವರಿ ೨, ೨೦೦೩