ದೇವಚಂದ್ರನ ‘ರಾಜಾವಳಿ ಕಥಾಸಾರ’ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಿಕ್ಕಿರುವ ಅದ್ಭುತ ಕೃತಿ. ಓದುಗನ ಮನಸ್ಸನ್ನು ಸೆಳೆವ, ಜ್ಞಾನವನ್ನು ವಿಸ್ತರಿಸುವ, ಮತಿ ವಿಚಕ್ಷಣತೆಗೊಳಪಡಿಸುವ ಅಪರೂಪದ ಕೃತಿ. ಈ ಹೊತ್ತು ನಾವು ನೋಡುವ ವಿಶ್ವಕೋಶದ ಸ್ವರೂಪ, ವಿಷಯ ನಿರ್ದಿಷ್ಟತೆ,ಅವುಗಳಿಗೆ ಸಂಬಂಧಿಸಿದ ವಿಸ್ತೃತ ವಿವರಗಳು ಕಾಲಾನುಕ್ರಮಣಿಕೆ ಇತ್ಯಾದಿ ಗುಣಲಕ್ಷಣಗಳು ಇಲ್ಲಿ ಇಲ್ಲ, ನಿಜ. ಆದರೆ ಒಬ್ಬ ಸಾಂಸ್ಕೃತಿಕ ಪ್ರಜ್ಞಾವಂತ ವ್ಯಕ್ತಿ ತನ್ನ ಪರಿಸರ ಪರಿವೇಶ ಪ್ರದೇಶಗಳನ್ನು ತಾನು ನೋಡಿದಂತೆ, ಕೇಳಿದಂತೆ, ಗ್ರಹಿಸಿದಂತೆ ನೂರಾರು ವಿಷಯಗಳನ್ನು ಪ್ರಸ್ತಾಪಿಸುವಂಥ ಕೃತಿಯಿದು. “ಇದ್ದುದುದ್ದಂ ತೊರೆದೆನು ಸದ್ಧರ್ಮದ ಮಾರ್ಗವಿಡಿದು ಬುಧಜನರರಿಯಲ್” ಎಂದು ಅವನೇ ಹೇಳಿಕೊಂಡಿದ್ದಾನೆ. ಹಾಗೆಯೇ “ಇಲ್ಲದ ಸಂಗತಿಯಂ ತಾ ಬಲ್ಲಂದದಿ ಕವಿತೆಯಿಂದ ಮದ್ಭುತ ಮಾಗಿಯು ಸೊಲ್ಲಿಸಿದುದಿಲ್ಲ” ಎಂಬ ಪ್ರಾಮಾಣಿಕತೆಯನ್ನೂ ಪ್ರಕಟಪಡಿಸುತ್ತಾನೆ. ಹೀಗಾಗಿ ಕೃತಿಯಲ್ಲಿ ಕಂಡುಬರುವ ಸಂಗತಿ ಸನ್ನಿವೇಶ ಘಟನಾವಳಿಗಳು ಸಹಜಸ್ಥಿತಿಯಲ್ಲಿ ದಕ್ಕಿದಂಥವು ಆಗಿವೆ. ಬೌದ್ಧಿಕ ನಿಕಷಮತಿತ್ವಕ್ಕೆ ಒಳಗಾಗದ ಯಥಾರೂದ, ಜನಪದರ ಒಡಲಿನಲ್ಲಿ ಗರ್ಭೀಕೃತವಾಗಿರುವಂಥವು. ಅವನ್ನು ಕವಿ “ಕರ್ನಾಟಕ ದೇಶದೊಳು ನಡೆವ ಪ್ರಪಂಚುಗಳೆನ್ನೆಲ್ಲಾ ಕ್ರೋಢೀಕರಿಸಿ” “ಕಥಾಸಂಗ್ರಹ”ವಾಗಿ ನಮ್ಮ ಕೈಗಿತ್ತಿದ್ದಾನೆ. ಕವಿ ತನ್ನೀ ಉದ್ದೇಶಕ್ಕೆ ಜಾನಪದ ಮಾಧ್ಯಮವನ್ನು ದುಡಿಸಿ ಕೊಂಡಿದ್ದಾನೆ. ಇದು ಅವನಿಗೆ ಅನಿವಾರ್ಯವೂ ಆಗಿತ್ತು. ವರ್ತಮಾನದಲ್ಲಿ ನಿಂತು ಭೂತವನ್ನು ಕೆದುಕುವಾಗ ಕವಿ ನಿರೂಪಕನಾಗೇ ಕೆಲಸ ಮಾಡಬೇಕಾಗುತ್ತದೆ. ಎಂದೋ ನಡೆದ ಸಂಗತಿಗಳನ್ನು ಇಂದೇ ನಡೆದಂತೆ ಕಾಣಿಸುವಾಗ ಸಶಕ್ತವಾಗಿ ಬಳಕೆಯಾಗುವುದು, ರಚಕನ ಸಹಾಯಕ್ಕೆ ನಿಲ್ಲುವುದು ಜಾನಪದ ಮಾಧ್ಯಮ ಮಾತ್ರ. ಇಷ್ಟಕ್ಕು ನಮ್ಮ ಸಂಸ್ಕೃತಿಯ ಪಳೆಯುಳಿಕೆಗಳನ್ನು ಇಂದಿಗೂ ಜೀವಂತವಾಗಿರಿಸಿಕೊಂಡಿರುವುದು ಜನಪದವೇ ಎಂಬ ಪ್ರಜ್ಞೆ ಕವಿಗಿದ್ದೇ ಇದೆ. ಹೀಗಾಗಿ ಕಥನ ಮಾದರಿಯಲ್ಲೇ ತನ್ನ ಉದ್ದೇಶವನ್ನು ಸಾಧಿಸ ಹೊರಡುತ್ತಾನೆ.

ವಸಾಹತುಶಾಹಿಯ ಪ್ರಭಾವದಿಂದ ಕರ್ನಾಟಕವನ್ನು ಒಳಗೊಂಡಂತೆ ಭಾರತದಲ್ಲಿ ಚರಿತ್ರೆಯನ್ನು ಪುನರ್‌ರಚಿಸುವ ಪ್ರಕ್ರಿಯೆ ಪ್ರಾರಂಭವಾಯಿತು. ಕರ್ನಾಟಕದಲ್ಲಿಯೂ ರೈಸ್, ಪ್ಲೀಟ್, ಬುಕನನ್ ಮುಂತಾದವರು ಈ ದಿಕ್ಕಿನಲ್ಲಿ ಕಾರ್ಯತತ್ಪರರಾದರು. ರೈಸರ ‘ಎಪಿಗ್ರಾಫಿಯಾ ಕರ್ನಾಟಕಾ’ ಸಂಪುಟಗಳು, ಫ್ಲೀಟರ “ಇಂಡಿಯನ್ ಆಂಟಿಕ್ಯೊರಿ” ಸಂಪುಟಗಳು ಇದಕ್ಕೆ ನಿದರ್ಶನ. ಇವರು ಹಸ್ತಪ್ರತಿ, ನಾಣ್ಯ ವಿಶೇಷವಾಗಿ ಶಾಸನಗಳನ್ನು ಆಧರಿಸಿ ಚರಿತ್ರೆಯನ್ನು ಕಟ್ಟಿಕೊಡಲು ಪ್ರಯತ್ನಿಸಿದವರು, ಆದರೆ ಇವರಿಗೆಲ್ಲ ಲಿಖಿತ ದಾಖಲೆಯ ಮಹತ್ವ ತಿಳಿದಿದ್ದಂತೆಯೇ ಅಲಿಖಿತ ದಾಖಲೆಗಳ ಅಂದರೆ ವಾಕ್ ಸಂಪ್ರದಾಯ ಸಂಗತಿಗಳ ಮಹತ್ವ ತಿಳಿದಿತ್ತು. ಪರಿಣಾಮ ರಾಜಕೀಯ ಚರಿತ್ರೆಗೆ ಕೊಟ್ಟಷ್ಟೇ ಸಾಂಸ್ಕೃತಿಕ ಚರಿತರೆಯ ಕಡೆಗೂ ಗಮನ ಹರಿಸಿದರು. ಕಿಟಲ್ ಗಾದೆಗಳನ್ನು, ಫ್ಲೀಟ್‌ಲಾವಣಿಗಳನ್ನು ಬುಕನನ್ನ ಸ್ಥಳಪುರಾಣಗಳನ್ನು ಸಂಗ್ರಹಿಸಿದರು. ಆ ಬಗೆಯ ಸಂಗ್ರಹಕಾರ್ಯವನ್ನು ಸಾಂಸ್ಕೃತಿಕವಾದ ಎಲ್ಲಾ ಕ್ಷೇತ್ರಗಳಿಗೆ ವಿಸ್ತರಿಸುವ ಹಂಬಲ ಅವರಿಗೆ ಅಂಥವನ್ನು ಸಂವಾದದ ಮೂಲಕವೇ ಸಂಗ್ರಹಿಸಬೇಕಾದ ಅನಿವಾರ್ಯತೆ, ಭಾಷೆಯ ತೊಡಕು ಅವರನ್ನು ನಿರುತ್ತೇಜನಗೊಳಿಸಿತು. ಅದಕ್ಕಾಗಿ ಅನ್ಯರನ್ನು ಸಂಗ್ರಹಕಾರ್ಯಕ್ಕೆ ಬಳಸಿಕೊಳ್ಳಬೇಕಾದ ತುರ್ತು ಅವರನ್ನು ಕಾಡಿತು. ಆಗ ಕಾಣಿಸಿಕೊಂಡವನು, ನೆರವಿಗೆ ಬಂದವನು ಬಹುಭಾಷಾತಜ್ಞ ದೇವಚಂದ್ರ.

ದೇವಚಂದ್ರನನ್ನು ಓದುಗರಿಗೆ ಕಾಣಿಸಲು ಮೂಲಕಾರಣ ಕರ್ನಲ್ ಮೆಕೆಂಜಿ ಕರ್ನಲ್ ಮೆಕೆಂಜಿಯವರು ಟಿಪ್ಪುಸುಲ್ತಾನನ ಪತನಾನಂತರ ಸರ್ವೇಯರ್ ಜನರಲ್(ಪರಿವೀಕ್ಷಣಾಧಿಕಾರಿ) ಆಗಿ ಮೈಸೂರು ಮತ್ತು ಸುತ್ತಮುತ್ತಲಿನ ಪ್ರಾಂತ್ಯಕ್ಕೆ ನೇಮಕಗೊಂಡರು. ನಾಣ್ಯ, ಶಾಸನ, ಹಸ್ತಪ್ರತಿಗಳನ್ನು ಸಂಗ್ರಹಿಸುತ್ತಿದ್ದ ಇವರು ಆಕಸ್ಮಿಕವಾಗಿ ದೇವಚಂದ್ರನನ್ನು ಭೇಟಿಯಾದರು. ದೇವಚಂದ್ರ ಹೇಳುತ್ತಿದ್ದ ವಾಕ್ ಸಂಪ್ರದಾಯದ ಘಟನೆಗಳನ್ನು ಕೇಳಿ ಅವನ್ನು ಸಂಗ್ರಹಿಸುವಂತೆ ಸೂಚಿಸಿದರು. ಅಲಿಖಿತ ದಾಖಲೆಗಳಲ್ಲಿ ಸಾಂಸ್ಕೃತಿಕ ಸತ್ಯಗಳಿರುತ್ತವೆ ಎಂದು ಮೆಕೆಂಜಿ ತಿಳಿದವರಾಗಿದ್ದರು. ವೈಯಕ್ತಿಕ ಲಾಭಕ್ಕಾಗಿ ದೇವಚಂದ್ರ ಇಂಥ ಸಾಹಸಕ್ಕೆ ಕೈಹಾಕಿದರೂ ಸಾಧ್ಯವಾಗದೆ ಹೋಯಿತು. ಆಗ ವಸ್ತುತಃ ಅವನ ನೆರವಿಗೆ ಬಂದವನು ಸೂರಿ ಪಂಡಿತ. ಸೂರಿ ಪಂಡಿತ ಪ್ರೋತ್ಸಾಹ ಪ್ರೇರಣೇ ಒತ್ತಾಸೆಗಳೇ ರಚನೆಯ ಸಂಪೂರ್ಣ ತೆಗೆ ಹಾದಿ ಮಾಡಿಕೊಟ್ಟಂಥವು. ಹಾಗೆ ನೋಡಿದರೆ ಅವನ ಜೀವಿತಾವಧಿಯ ತುಂಬೆಲ್ಲ ನೆರವಿಗೆ ನಿಂತವನೇ ಸೂರಿ ಪಂಡಿತ. ಹೀಗಾಗಿ ಮೆಕೆಂಜಿ ಮತ್ತು ಸೂರಿ ಪಂಡಿತನ ಬೆಂಬಲದಿಂದ ದೇವಚಂದ್ರನ ‘ರಾಜಾವಳಿ ಕಥಾಸಾರ’ ಕನ್ನಡ ಸಾಹಿತ್ಯದ ಓದುಗನಿಗೆ ದಕ್ಕಿತು. ಆ ಮೂಲಕ ನಾಡಿನ ಚರಿತ್ರೆಯ ಮೇಲೆ ಹೊಸ ಬೆಳಕು ಚೆಲ್ಲುವಂತಾಯಿತು.

ದೇವಚಂದ್ರ ಜೈನಕವಿ. ಧರ್ಮನಿಷ್ಠ, ಕಟ್ಟಾ ಅಭಿಮಾನಿ, ಪಾಲಕ. “ಜಿನಮತ ಶಾಸ್ತ್ರಮೆ ಶಾಸ್ತ್ರಂ, ಜಿನೇಶ್ವರನೆ ಪ್ರಾಣಿಗಳ್ಗೆ ಪರಮಾಪ್ತಂ ಜಿನತಪಸ್ವಿಗಳೇ ತಪಸ್ವಿಗಳ್” (೧೪೪) ಎಂದು ನಂಬಿದ್ದವನು. “ಲಾಭಾಂತರಾಯ ಕರ್ಮೋದಯದಿಂ” ಎಂದೇ ಭಾವಿಸಿದ್ದವನು. ಪಿಂಚಣಿ ಹಣ ಬರುವ ಸಾಧ್ಯತೆಯಿದ್ದಾಗಲೂ “ಆ ಕರ್ಮಿಕ ಮೌನವ್ರತಧಾರಿಯಾಗಿದ್ದು, ಪೂಜಾಹವ್ಯಾಸದೊಳಿದ್ದು” (೩೬೨) ಕಳೆದುಕೊಂಡವನು. ಆದ್ದರಿಂದಲೇ ಕೃತಿಯುದ್ದಕ್ಕು ಜೈನಮತ ಶ್ರೇಷ್ಠವೆಂದೇ ಪ್ರತಿಷ್ಠಾಪಿಸ ಹೊರಡುತ್ತಾನೆ. ಬಹುತೇಕ ಕೃತಿಯ ವಸ್ತುವಿಷಯವನ್ನು ಜೈನತ್ವದ ಪರಿವೇಶದಲ್ಲಿಟ್ಟೇ ನೋಡಲು ಪ್ರಯತ್ನಿಸುತ್ತಾನೆ. “ಶಾಸನ ಸಮುದಿತ ಪ್ರಥಮಾನುಯೋಗ ಕಥಾಸಾರಾಮೃತ ಪಾರವಾರದ ಕಥಾವತಾರದೊಳೊಂದು ಬಿಂದುವಂತೋರ್ವಂತೆ ಸ್ವಲ್ಪವಾಗಿ ಗುರುತು ಮಾತ್ರಮಂ ತೋರುವೆನ್” (ಪು.೩). ಇದನ್ನು ಹೊಸಗನ್ನಡದಲ್ಲಿ ರಚಿಸುತ್ತಿದ್ದೇನೆ ಎಂದು ಕವಿ ಹೇಳಿದ್ದಾನೆ. ಪ್ರಥಮಾನುಯೋಗ ಎಂಬುದು “ಜೀವಂಗಳ್ ಸಮ್ಯಕ್ವಗ್ರಹಣಾದಿ ಮುಕ್ತಿಯಂ ಪಡೆವ ಪರ್ಯಂತಮವರ ಕಥಾಪ್ರಪಂಚಮಂಪೇಳ್ವುದು” (೬೩). ಆದರೆ ಕೃತಿ ಅಷ್ಟಕ್ಕೆ ಸೀಮಿತಗೊಳ್ಳುವುದು. ಜೈನತ್ವಕ್ಕೆ ಸಂಬಂಧಿಸಿದಂತೆಯೂ ಉಳಿದೆಲ್ಲ ಅನುಯೋಗಗಳ ಅಂಶಗಳು ಭಾಗಶಹವಾಗಿ ಬಂದಿವೆ. ಕೃತಿ ವಿಷಯ ನಿರೂಪಣೆಯಲ್ಲಿ ಸಾಂದರ್ಭಿಕವಾಗಿ ಸಾಕಷ್ಟು ಪ್ರಮಾಣದಲ್ಲೇ ಪ್ರವೇಶ ಪಡೆದುಕೊಳ್ಳುತ್ತವೆ. ಆ ಕಾರಣಕ್ಕಾಗೇ ಪ್ರಸ್ತುತ ಕೃತಿ ಉಳಿದ ಜೈನಕಾವ್ಯಗಳಿಗಿಂತ ಭಿನ್ನವಾಗುತ್ತದೆ; ಇಷ್ಟವಾಗುತ್ತದೆ. ಜೈನಕಾವ್ಯ ನಿರ್ಮಿತಿಗೆ ಒಂದು ಕ್ರಮವಿದೆ; ಎರಕವಿದೆ; ಪರಂಪರೆಯ ಸಿದ್ಧ ಮಾದರಿ ಇದೆ. ಪಂಚಕಲ್ಯಾಣಗಳು ತಪ್ಪದೆ ಬರುತ್ತವೆ. ಕಥಾನಕ ಸಿದ್ಧಪುರುಷರಿಂದ ಆರಂಭವಾಗಿ ಲೋಕಾಕಾರ ವರ್ಣನಾ ಭಾಗವನ್ನು ಒಳಗೊಂಡಂತೆ ಕಥಾನಾಯಕರ ಶೃಂಗಾರ ವೈರಾಗ್ಯಗಳನ್ನು ಭವಾವಳಿಗಳಮೂಲಕ ಚಿತ್ರಿಸುತ್ತವೆ. ಭೋಗಬಂಧನ, ಭೋಗವಿಮುಕ್ತಿ ಅಥವಾ ಬಿಡುಗಡೆಗಳ ನಡುವೆ ಜೀವನ ವ್ಯಾಪಾರವನ್ನು ಪೃಥಕ್ಕರಿಸುತ್ತವೆ. ಹೀಗೆ ಮಾಡುವಾಗಲೂ ಪಾತ್ರಗಳು ಅರಮನೆಯ ಪರಿವೇಶದಲ್ಲಷ್ಟೇ ನಡೆದಡುತ್ತವೆ. ಶೃಂಗಾರ ವೈರಾಗ್ಯಗಳ ಎತ್ತರವನ್ನು ಅಲ್ಲಿಂದಲೇ ಸಾಧಿಸುತ್ತವೆ ಅಥವಾ ನಿರ್ದೇಶಿತಗೊಳ್ಳುತ್ತವೆ. ಹಾಗೇ ನೋಡಿದರೆ ಶೃಂಗಾರ, ವೈರಾಗ್ಯಗಳ ಎತ್ತರವನ್ನು ಅಲ್ಲಿಂದಲೇ ಸಾಧಿಸುತ್ತವೆ ಅಥವಾ ನಿರ್ದೇಶಿತಗೊಳ್ಳುತ್ತವೆ. ಹಾಗೆ ನೋಡಿದರೆ ಶೃಂಗಾರ, ವೈರಾಗ್ಯಗಳು ಜೀವನದ ಬಹುದೊಡ್ಡ ಸತ್ಯ ಸಂಗತಿಗಳೇ. ಆದರೆ ಆ ಎತ್ತರ ಜಿನರಿಗೆ ಮಾತ್ರ ನಿಲುಕುಂಥದು. ಸಾಮಾನ್ಯ ಬದುಕಿಗೆ ಬಹುದೂರದವು. ಆದ್ದರಿಂದ ಜೈನದರ್ಶನದ ಎತ್ತರದಲ್ಲೇ ಅವನ್ನಿಟ್ಟು ಗ್ರಹಿಸಬೇಕಾಗುತ್ತದೆ. ಪ್ರಥಮಾನುಯೋಗದ ಕಥಾಬಿತ್ತಿಯೇ ಹಾಗೆ. ಆ ಚೌಕಟ್ಟು ದೇವಚಂದ್ರನಲ್ಲಿ ಇಲ್ಲ. ಅವನು ತನ್ನ ಉದ್ದೇಶವನ್ನು ಮರೆತ್ತಿದ್ದಾನೆಂದು ಇದರರ್ಥವಲ್ಲ. ಕೃತಿಯಾರಂಭವನ್ನು ಗಮನಿಸಿದರೆ ಲೋಕಾಕಾರ ಪರಿಕಲ್ಪನೆ, ಕಾಲನಿರ್ಣಯ, ಮನುಗಳ ಪ್ರಸ್ತಾಪ, ವೃಷಭಾದಿ ತೀರ್ಥಂಕರ ಚರಿತೆ, ಭರತ ಸಗರಾದಿ ಚಕ್ರವರ್ತಿಗಳ ಕಥನ, ಬಾಹುಬಲಿ ಜೀವಂಧರ ಜಂಬೂಸ್ವಾಮಿಗಳಂಥ ಜೈನಕಾಮದೇವರ ವಿವರ, ಕರ್ಮಸಿದ್ಧಾಂತ, ಅಹಿಂಸಾದಿ ವ್ರತಗಳ ಪ್ರಭಾವ ಮತ್ತು ಪರಿಣಾಮ, ತ್ರಿಮೂಢತೆಗಳ ಪ್ರಸ್ತಾಪ ಮುಂತಾಗಿ ಜೈನತ್ವವನ್ನು ಪ್ರತಿನಿಧಿಸುವ ಅಂಶಗಳನ್ನು ಸಾಕಷ್ಟು ಪ್ರಮಾಣದಲ್ಲಿಯೇ ತಂದಿದ್ದಾನೆ. ಆದರೆ ಅವನ ಉದ್ದೇಶ ಇದಿಷ್ಟೇ ಅಲ್ಲ. ಪ್ರಥಮಾನುಯೋಗದಲ್ಲಿನ ಬಿಂದು ಮಾತ್ರ ಇದು. ಉಳಿದಂತೆ ಕರ್ನಾಟಕ ಪ್ರಪಂಚವನ್ನು ಕಥಾರೂಪದಲ್ಲಿ ಹೇಳುವುದು, ಅವನ ಮುಖ್ಯ ಉದ್ದೇಶ. ಹೀಗಾಗಿ ಕವಿಯ ನಿರೂಪಣೆಯಲ್ಲಿ ವಸ್ತುವಿಷಯದ ಯಾದೃಚ್ಛಿಕತೆಯಿದೆ. ಧರ್ಮ, ಸಾಹಿತ್ಯ, ಪುರಾಣ, ಐತಿಹ್ಯ ಇತಿಹಾಸ, ಜೀವನದೃಷ್ಟಿ ಧೋರಣೆಗಳು, ಆಚಾರ ಪದ್ಧತಿಗಳು ಹಬ್ಬಹರಿದಿನಗಳು, ತಾತ್ತ್ವಿಕ ಚಿಂತನೆ, ನೀತಿ ರೀತಿಗಳು, ರೂಢಿಗಳು, ರೂಢಿಗತ ಮೌಲ್ಯಗಳು ಮುಂತಾಗಿ ಅನೇಕಾನೇಕ ಸಂಗತಿಗಳು ಕವಿಯ ಪ್ರಸ್ತಾಪಕ್ಕೆ ಒಳಪಟ್ಟಿವೆ. ರಾಜಕೀಯವನ್ನು ಬಿಡದಂತೆ ತತ್ಕಾಲೀನ ಅನೇಕ ಅಂಶಗಳು, ಮರೆಯಾಗಿ ಹೋಗಬಹುದಾದ ಮಹತ್ವದ ವಿಷಯಗಳೂ ಇಲ್ಲಿ ದಾಖಲಾಗಿದೆ. ಪರಿಣಾಮ ಇಡೀ ಕೃತಿಯನ್ನು ನಿರ್ದಿಷ್ಟವಾಗಿ ಒಂದೇ ವಿಷಯ ಪ್ರಕಾರಕ್ಕೆ ಮುದ್ರೆ ಹಾಕುವಂತಿಲ್ಲ. ಆ ನೆಲೆಯಲ್ಲಿ ಇದೊಂದು ಸಂಕೀರ್ಣ ಕೃತಿ. ಓದುಗರ ಆಸಕ್ತಿಗೆ ತಕ್ಕಂತೆ ಸಾಕಷ್ಟು ಮಾಹಿತಿಗಳನ್ನು ಒದಗಿಸುವ ವಿಶಿಷ್ಟ ಕೃತಿ. ಓದುಗ ಮತ್ತು ತನ್ನ ನಡುವೆ ಅನನ್ಯತೆಯನ್ನು ಕಾಯ್ದುಕೊಳ್ಳುವ ‘ರಾಜಾವಳಿ ಕಥಾಸಾರ’ ಅಷ್ಟರಮಟ್ಟಿಗೆ ಒಂದು ಸಾಂಸ್ಕೃತಿಕ ವಿಶ್ವಕೋಶ: ಸಾಂಸ್ಕೃತಿಕ ಕಥಾ ಕೋಶ.

ದೇವಚಂದ್ರ ಜೈನ ಬ್ರಾಹ್ಮಣ ಮನೆತನದಿಂದ ಬಂದವನು. ಸಹಜವಾಗಿ ಅಕ್ಷರಸ್ಥ. ಮನೆಯ ವಾತಾವರಣವೇ ಹಾಗಿತ್ತು. ಚಿಕಕಂದಿನಿಂದಲೇ “ಅನೇಕ ಶಾಸ್ತ್ರಾವಲೋಕನದಿಂ ಲೌಕಿಕ ಪಾರಮಾರ್ಥಿಕಮಂ ತತ್ವ ನೀತಿ ವೈದ್ಯ ಜ್ಯೋತಿಷ ಮಂತ್ರವಾದಾದಿ ವಿದ್ಯೆಂಗಳಂ” (೩೧೪) ಎನ್ನಿಸಿಕೊಂಡಿದ್ದವನು. ಆದ್ದರಿಂದಲೇ ದೇವಚಂದ್ರ “ಕ್ರೋಧಮಾನಮಾಯಾ ಲೋಭ ಮೋಹಂಗಳಂ ಬಿಟ್ಟು ಯಥಾತಥ್ಯಮಂ ನಂಬುವುದು ಪಂಡಿತಲಕ್ಷಣಂ” (೪೪) ಎಂಬ ತಿಳಿವಳಿಕೆವುಳ್ಳವನಾಗಿದ್ದ. ಹೀಗಾಗಿ ಕವಿ ಜೈನನಾಗಿದ್ದು ಜೈನಮತಾಂಧನಾಗಿರಲಿಲ್ಲ. ಅನ್ಯಮತದ ಶಾಸ್ತ್ರ ಪುರಾಣ ದರ್ಶನಾದಿ ಗ್ರಂಥ ಪಠನದಲ್ಲಿ ಮಡಿವಂತಿಕೆ ಇಟ್ಟುಕೊಂಡಿರಲಿಲ್ಲ. ಒಬ್ಬ ಪ್ರಾಜ್ಞನಂತೆ ನಡೆದುಕೊಳ್ಳುತ್ತಾನೆ. ತನ್ನವಿಷಯ ನಿರೂಪಣೆಗೆ ಬೇಕಾಗುವಂತೆ ವಿಫುಲ ಸಾಮಗ್ರಿಗಳನ್ನು ಕಲೆಹಾಕುತ್ತಾನೆ. ಅವನ ಕೃತಿಯನ್ನು ಒಮ್ಮೆ ಕಣ್ಣು ಹಾಯಿಸಿದರೆ ಸಾಕು. ನೂರಾರು ಗ್ರಂಥಗಳ, ಕವಿಗಳ ಉಲ್ಲೇಖಗಳು ಸಿಗುತ್ತವೆ. ಕನ್ನಡ ಕೃತಿಗಳಿಗೇ ಸಂಬಂಧಿಸಿದಂತೆ ಆದಿಪುರಾಣ, ಹರಿವಂಶಪುರಾಣ, ವಡ್ಡಾರಾಧನೆ, ಧರ್ಮಾಮೃತ, ಭರತೇಶವೈಭವ, ಕುಮಾರರಾಮ ಸಾಂಗತ್ಯ, ಚಾಮುಂಡರಾಯ ಪುರಾಣ, ಸನತ್ಕುಮಾರ ಚರಿತೆ, ಜಿನದತ್ತರಾಯ ಚರಿರೆ, ಜೀವಂಧರ ಚರಿತ್ರೆ, ದ್ವಾದಶಾನುಪ್ರೇಕ್ಷೆ, ಲೀಲಾವತಿ, ಕಾದಂಬರಿ, ನೇಮಿನಾಥ ಪುರಾಣ, ಪ್ರಭಂಜನನ ಕಥೆ, ಸಾರಂಗಧರನ ಕಥೆ, ಶ್ರೀಪಾಲಚರಿತೆ, ಜಯಕುಮಾರ ಚರಿತೆ, ಬಿಜ್ಜಳರಾಯ ಪುರಾಣ, ಕರ್ನಾಟಕ ಪಂಚತಂತ್ರ, ಸಮ್ಯಕ್ತ್ವಕೌಮುದಿ, ವರನಂದೀ ಚರಿತೆ, ಸಾನಂದಗಣೇಶ ಚರಿತೆ, ಚಂದ್ರಪ್ರಭ ಚರಿತೆ, ರಾಜಶೇಖರ ವಿಳಾಸ, ಬೆಟ್ಟವರ್ಧನರಾಯ ಚರಿತೆ, ಭಕ್ತವಿಲಾಸ, ಮುಲ್ಲಾಶಾಸ್ತ್ರ, ಮುಂತಾದ ಕೃತಿಗಳ ಉಲ್ಲೇಖವನ್ನು ಪ್ರತ್ಯಕ್ಷವಾಗಿ ಕೆಲವೊಮ್ಮೆ ಕಥಾಗತಿಯ ಮೂಲಕ ಪರೋಕ್ಷವಾಗಿ ನಿರೂಪಿಸಲಾಗಿದೆ. ಹಾಗೆ ಜೈನಕವಿಗಳಾದ ಅಗ್ಗಳ, ರನ್ನ, ಪೊನ್ನ, ಜನ್ನ, ಕರ್ಣಪಾರ್ಯ, ಮಧುರ ರಾಜಹಂಸ, ಬಂಧುವರ್ಮ, ನಾಗವರ್ಮ, ನೇಮಿಚಂದ್ರ, ಕೇಶವ, ನಯಸೇನ, ವೃತ್ತವಿಲಾಸ, ಭಟ್ಟಾಕಳಂಕ, ಪಾರ್ಶ್ವಪಂಡಿತ, ಬ್ರಹ್ಮಸೂರಿ, ರತ್ನಾಕರ ಮೊದಲಾದವರನ್ನು, ಜೈನಾಚಾರ್ಯ ಪರಂಪರೆಯ ವೀರಾಚಾರ್ಯ ಪೂಜ್ಯಪಾದ, ಜಿನಸೇನಾಚಾರ್ಯ ಗುಣಭದ್ರಸೂರಿ, ವಸುನಂದಿ, ಅಭಯಚಂದ್ರಸೂರಿ ಕುಂದಕುಂದಾಚಾರ್ಯ, ವಿಜಯಕೀರ್ತಿ, ಲಲಿತಕೀರ್ತಿ, ಮಹೇಂದ್ರಕೀರ್ತಿ ಮುಂತಾದ ಆಚಾರ್ಯರನ್ನು ದೇವಚಂದ್ರ ಸಾಂದರ್ಭಿಕವಾಗಿ ಉಲ್ಲೇಖಿಸುತ್ತಾನೆ. ಈ ದೃಷ್ಟಿಯಿಂದ ಗಮನಿಸಿದಾಗಲೂ ಅವನ ಮನಸ್ಸು ಜೈನತ್ವದ ಕಡೆಗೆ ಸದಾ ವಾಲಿರುವುದು ಗೋಚರಿಸುತ್ತದೆ. ಆದ್ದರಿಂದಲೇ ಸಮಯಬಂದಾಗಲೆಲ್ಲ ಅದನ್ನು ತಾನು ಮಾತ್ರನಲ್ಲದೆ ಅನ್ಯರು ಒಪ್ಪಿ ದನಿಗೂಡಿಸುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾನೆ. ಕೆಲವನ್ನಿಲ್ಲಿ ಗಮನಿಸಬಹುದು.

ಚೇಳಿನ ಮತ್ತು ಜಠರಾಗ್ನಿಯ ಕಥನ, ದಯಮಿತ್ರ ವಸೂಭೂತಿಯರ ಪ್ರಸಂಗದಲ್ಲಿ ನೇರವಾಗಿ ವೈದಿಕರ ಅಹಂನ್ನು, ಅನ್ಯಧರ್ಮದ ಟೀಕೆಯನ್ನು ತಿಳಿಸುವ ದೃಷ್ಟಾಂತಗಳು. ಬತ್ತಲು ಎನ್ನುವುದು ಬದುಕಿನ ನಿರ್ವಿಕಾರಕ್ಕೆ ವೈರಾಗ್ಯದ ಎತ್ತರಕ್ಕೆ ಸಂಬಂಧಿಸಿದ ವಿಷಯ. ಇದನ್ನು ಸಾಧನೆಯಿಂದ ಗಳಿಸಬೇಕು. ಅದನ್ನು ತಿಳಿಯದೆ ಹಿಯಾಳಿಸ ಹೋಗಿ ಅವಮಾನಿತನಾಗುವ ಜಠರಾಗ್ನಿ, ಜೈನಧಾರ್ಮಿಕ ಆಚಾರಗಳನ್ನು ಟೀಕಿಸ ಹೋಗಿ ತಾನೇ ಜೈನತ್ವವನ್ನು ಒಪ್ಪಿಕೊಳ್ಳುವ ವಸುಭೂತಿ ಇಬ್ಬರೂ ವರ್ಗದ ಶ್ರೇಷ್ಠತೆಯಲ್ಲಿ ನಂಬಿಕೆಯಿಟ್ಟವರೇ ಹೊರತು ಸ್ವಭಾವತಃ ಹಾಗೆ ನಡೆದುಕೊಂಡವರಲ್ಲ ತ್ರಿಕಾಲಜ್ಞಾನದ ಪ್ರಯೋಗವಷ್ಟೇ ಇದ್ದರೆ, ಜೈನರಲ್ಲಿ ಮತಿ ಶ್ರುತ ಅವಧಿ ಕೇವಲ ಮನಃಪರ್ಯಾಯ ಜ್ಞಾನಗಳು ಇದೆ. ಒಂದೊಂದು ಸಾಧನೆಯಿಂದ ಎಂಥವರೂ ಸಿದ್ಧಿಸಿಕೊಳ್ಳಬಹುದೆಂಬುದು ಜೈನರ ನಿಲುವು. ಹೀಗಾಗಿ ಚೇಳಿನಿಯಂಥ ಗೃಹಸ್ಥೆಯೂ ಮತಿಜ್ಞಾನಿ ಎನ್ನಿಸುತ್ತಾಳೆ. ಅಂಥವಳಿಂದ ಗುರು ಎನ್ನಿಸಿದ್ದ ಜಠರಾಗ್ನಿ ಸೋಲುತ್ತಾನೆ. ಅಷ್ಟರಮಟ್ಟಿಗೆ ಅವಮಾನಿತನಾಗುತ್ತಾನೆ. ಗುರು ಸಮಷ್ಠಿಯ ಪ್ರತಿನಿಧಿ, ಜನಾಂಗಿಕ ಪ್ರತಿನಿಧಿ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇನ್ನು ವಸುಭೂತಿ ಜೈನಾಚಾರವನ್ನು ಸ್ವೀಕರಿಸ ಹೊರಟದ್ದು ಕೇವಲ ಧನದಾಸೆಗಾಗಿ. ವೈದಿಕನ ಸ್ವಭಾವ ಯಾವುದರ ಪರ ಇರುತ್ತದೆ ಎಂಬುದನ್ನು ಈ ಪಾತ್ರ ಸೂಚಿಸುವಂತಿದೆ. ವೈದಿಕರ ಹುಟ್ಟಿನ ಶ್ರೇಷ್ಠತೆಯನ್ನು ಚೈನಾಚಾರವಿಲ್ಲಿ ಇಲ್ಲವಾಗಿಸುತ್ತದೆ. ಆ ಮೂಲಕ ಜೈನಮತ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತದೆ. ಕಾಷ್ಟತಟುವಿನ ಪ್ರಸಂಗ ಇದಕ್ಕಿಂತ ಭಿನ್ನ. ಅಹಿಂಸೆಯನ್ನು ಪಾಲಿಸಬೇಕಾದ ಜೈನಮತೀಯ ನಂದಿಮಿತ್ರ ಹಣಕ್ಕಾಗಿ ಶ್ರಮಜೀವಿ ಕಾಷ್ಠತಟುವನ್ನು ಶೋಷಿಸುವ ರೀತಿಯೇ ಧರ್ಮದ ವಿಡಂಬನೆಯಾಗಿ ಕಾಣಿಸಲಾಗಿದೆ. ಅವನ ವಿರುದ್ಧವಾಗಿ ಜೀವಪರ ದಯೆ ಔದಾರ್ಯ ಮೃದುತ್ವವನ್ನು ವಾಸ್ತವವನ್ನು ಒಪ್ಪಿಕೊಂಡೇ ವ್ಯಕ್ತಪಡಿಸುವ ನಂದಿಮಿತ್ರನ ಮಡದಿ, ಜೈನಳಲ್ಲದಿದ್ದರೂ ಧರ್ಮ ಮತ್ತು ಆಚಾರನಿಷ್ಠೆಯನ್ನು ಪ್ರತಿನಿಧಿಸುವ ಕಾಷ್ಠತಟು ಮತ್ತವನ ಮನುಷ್ಯಪರ ಕಾಳಜಿ ಹೀಗೆ ಏಕಕಾಲದಲ್ಲಿಹಲವು ಸಂಗತಿಗಳ ಸಂಗಮವಾಗಿ ಕಾಷ್ಠತಟುವಿನ ಪ್ರಸಂಗ ವಿಶ್ಲೇಷಣೆಗೊಳಪಡುತ್ತದೆ. ಲೋಕರೂಢಿಯಲ್ಲಿ ಜೈನವ್ರತಗಳನ್ನು ನಿತ್ಯಜೀವನ ನಿರ್ವಹಣೆಯಲ್ಲಿ ಅಳವಡಿಸಿಕೊಳ್ಳುವುದು, ಅನುಸರಿಸುವುದು ಕಷ್ಟ ಎಂದೇ ಭಾವನೆ ಇದೆ. ಅಂಥ ಭಾವನೆ ತಪ್ಪು ಎಂಬುದು ಕಾಷ್ಠತಟುವಿನ ಮೂಲಕ ಧ್ವನಿಸುವ ಕಿರು ಪ್ರಯತ್ನವೂ ಇಲ್ಲಿದೆ ಎನ್ನಿಸುತ್ತದೆ.

ಹಾಗೆ ನೋಡಿದರೆ ಬಹುತೇಕ ಉಲ್ಲೇಖಗಳು ಮತಾಂತರ ಪ್ರಕ್ರಿಯೆಗೆ ಸಂಬಂಧಿಸಿದವೇ ಆಗಿವೆ. ಅದಕ್ಕಾಗಿ ದೇವಚಂದ್ರ ಪ್ರಚಲಿತವಾಗಿದ್ದ ಐತಿಹ್ಯ ಇತಿಹಾಸದ ಘಟನೆಗಳನ್ನು ಪ್ರಾಸಂಗಿಕವಾಗಿ ದುಡಿಸಿಕೊಳ್ಳುತ್ತಾನೆ. ಸಮಂತಭದ್ರ, ಹಿಮಶೀತಲ ಮಹಾರಾಜ ಮಾನತುಂಗರ ಪ್ರಸಂಗಗಳು ಪ್ರಸಿದ್ಧ ಐತಿಹ್ಯಗಳು. ಸಮಂತಭದ್ರರ ವಿಚಾರವನ್ನು ಜೈನರು ಇತಿಹಾಸವೆಂದೇ ನಂಬುತ್ತಾರೆ. ಆದರೆ ಪೂರಕ ಪುರಾವೆಗಳು ಮಾತ್ರ ಇಲ್ಲಿತನಕ ದೊರೆತಿಲ್ಲ. ವೀರಶೈವಧರ್ಮದ ಚೋಳರಾಜ ಶಿವಕೋಟಿ, ಬೌದ್ಧಧರ್ಮದ ಹಿಮಶೀತಲರಾಜ ಶಯವನಾದ ಬೋಜರಾಜರನ್ನು ಜೈನಮತಕ್ಕೆ ಸ್ಥಿತ್ಯಂತರಗೊಳಿಸುವುದರ ಮೂಲಕ ಮತಶ್ರೇಷ್ಠತೆಯನ್ನು ಮತ್ತೊಮ್ಮೆ ಪ್ರಚುರ ಪಡಿಸುವ ಕೆಲಸ ದೇವಚಂದ್ರ ಮಾಡುತ್ತಾನೆ. ಕೂನಪಾಂಡ್ಯನದೂ ಹೊರನೋಟಕ್ಕೆ ಮತಾಂತರದ ಕಥನವೇ ಆಗಿದ್ದರೂ, ವಾಸ್ತವದಲ್ಲದು ಮತಶೋಧಿತ ಪ್ರಸಂಗವೇ. ಮೂಲತಃ ಜೈನಧರ್ಮಿಯಾದ ಕೂನಪಾಂಡ್ಯರಾಜ, ಅನ್ಯರ ಬೋಧನೆಯಿಂದ ವೀರಶೈವನಾಗಿ ಮತ್ತೆ ಜಿನಮತ ಸ್ವೀಕಾರ ಮಾಡಿದ ಪರಿವರ್ತಿತ ಕ್ರಿಯೆ ಇಲ್ಲಿನದು. ಮುಖ್ಯವಾಗಿ ಇಲ್ಲಿ ದೇವಚಂದ್ರ ವೀರಶೈವ ಜಿನಮತಗಳನ್ನು ಮುಖಾಮುಖಿಯಾಗಿಸಿ ಜೈನಮತ ಶ್ರೇಷ್ಠತೆಯನ್ನು ನಿರ್ದೇಶಿಸುತ್ತಾನೆ ಎಂದೆನ್ನಿಸುತ್ತದೆ.

ಹೀಗೆ ದೇವಚಂದ್ರ ಜೈನಧರ್ಮದ ಶ್ರೇಷ್ಠತೆಯನ್ನು ಸಮರ್ಥಿಸುವ ಕೆಲಸವನ್ನು ಉದ್ದಕ್ಕೂ ಮಾಡುತ್ತಾ ಹೋಗುತ್ತಾನಾದರೂ, ಪೂರ್ವಗ್ರಹವಿಟ್ಟುಕೊಂಡೇ ನಡೆದುಕೊಳ್ಳದಿರುವುದು ಸ್ವಾರಸ್ಯದ ಸಂಗತಿ. ಅಂಥ ಸನ್ನಿವೇಶಗಳು ಎದುರಾದಾಗಲೂ ಸಮಚಿತ್ತತೆಯಿಂದ ವ್ಯವಹರಿಸುತ್ತಾನೆ. ವಿಡಂಬನೆಯನ್ನೇ ಉದ್ದೇಶವಾಗಿಟ್ಟುಕೊಂಡು ಕಾವ್ಯರಚಿಸಿದ ಎಷ್ಟೋ ಜೈನ ವೀರಶೈವ ಕವಿಗಳಿಗಿಂತ ಇವನು ವಾಸಿ. ಎಲ್ಲೂ ಧರ್ಮಾಂಧನಾಗಿ ವರ್ತಿಸುವುದಿಲ್ಲ; ಉದ್ವೇಗದಿಂದ ವ್ಯವಹರಿಸುವುದಿಲ್ಲ. ಜೈನನಾದ ಬಾಹುಬಲಿಯ ಕಥೆಯನ್ನು ಹೇಳುವ ಸಾಧಾರಣದ ರೀತಿಯಲ್ಲಿ ವೈಷ್ಣವಪಾರಮ್ಯದ ಕೃಷ್ಣಕಥೆಯನ್ನು ಇವನು ಹೇಳಬಲ್ಲ. ಅತಿರಂಜಕತೆಗೆ ಅಸ್ಪದವಿಲ್ಲ, ಎರಡು ಕಥಾಭಾಗಗಳನ್ನು ಅಕ್ಕಪಕ್ಕದಲ್ಲಿಟ್ಟು ನೋಡಿದರೆ ಬಹುಶಃ ಕಥೆ ಹೇಳುವುದಷ್ಟೇ ಅವನ ಉದ್ದೇಶವಾಗಿರುವಂತೆ ತೋರುವುದಿಲ್ಲ:

ಭರತರಾಜಂಗೆ ಚಕ್ರರತ್ನಂಪುಟ್ಟೆ ಚತುರ್ದಶರತ್ನ ನವನಿಧಿಗಧೀಶ
ನಾಗಿ ದಿಗ್ವಿಜಯಂಗೆಯ್ದ ಷಟ್ಖಂಡಮಂ ಬಾಳಿಸಿ ಬಪ್ಪಲ್ಲಿ ಆತನ
ನುಜಪ್ಪ ಬಾಹುಬಲಿರಾಜಂ ಪೌದನಪುರದೊಳಿರ್ದು ಹುಂಡಾವಸರ್ಪಿ
ಣಿಕಾಲದೋಷದಿಂದಿರೊಡ್ವಿ ನಿಂದು ದೃಷ್ಟಿಯುದ್ಧ ಜಲಯುದ್ಧ ಮಲ್ಲ
ಯುದ್ಧಂಗಳಿಂದಣ್ಣನಂ ಗೆಲ್ದು ನಿರ್ವೇಗಂ ಪುಟ್ಟಿ ದೀಕ್ಷೆಗೊಂಡು…”(ಪು ೭)

ಕೃಷ್ಣ ಬಾಲ್ಯಾರಂಭದಿಂ ತನ್ನ ಶಕ್ತಿಯೋಳೆ ಪೂತನಿ ಮೊದಲಾದ ದೇವತೆಗಳಂ
ಗೆಲ್ದು ಗೋವರ್ಧನ ಪರ್ವತ ಮನೆಡೆಗೆಯ್ಯೊಳೇಳು ದಿವಸಂಬರಂ ಪಿಡಿದಿರ್ದು
ಕಾಳಾಹಿಯಂ ಕೊಂದು ಕಮಲಮಂ ತಂದು ವ್ಯಾಲಶಯನಮವೇರಿ ಕಾಲದಂಡೋಪ
ಮ ಶಾರ್ಙ್ಗಮೆಂಬ ಚಾಪಮನೇರಿಸಿ ಪಾಂಚಜನ್ಯಮೆಂಬ ಪಂಚಮುಖ ಶಂಖ
ಮನೂದಿ ಮದದಾನೆಯ ಕೊಂಬಂ ಕಿಳ್ತು ಚಾಣೂರ ಜಗಜಟ್ಟಿ ಮೊದಲಾದ
ಮಲ್ಲರನಪ್ಪಳಿಸಿ ತನ್ನ ಮೇಲ್ವಾಯ್ದು ಕಂಸನ ಮಿದುಳಂ ಕಿತ್ತು..” (ಪು ೨೪)

ಒಂದೊಂದೇ ಪದದಲ್ಲಿ ಒಂದೊಂದು ಘಟನೆಯನ್ನೇ ಹೇಳುವ ದೇವಚಂದ್ರ ಇವೆಲ್ಲವನ್ನು ಮನುಷ್ಯರ ಕಥೆಯನ್ನು ಹೇಳಿದಷ್ಟೇ ಸರಾಗವಾಗಿ, ಹಗುರವಾಗಿ ಹೇಳುತ್ತಾನೆ. ನೆನ್ನೆ ಮೊನ್ನೆ ನಡೆದಂತೆ ಕಣ್ಣಿಗೆ ಕಟ್ಟಿಸುತ್ತಾನೆ. ಇವರೆಡನ್ನು ಗಮನಸಿದರೆ ಸಾಕು ದಂತಕಥೆ ಪುರಾಣಕಥೆ, ಐತಿಹಾಸಿಕ ಘಟನೆ, ಜನಪದ ಕಥೆ ಎಲ್ಲವೂಒಂದೇ ಅವನಿಗೆ, ವ್ಯತ್ಯಾಸವೇ ಇಲ್ಲ ಅವನಲ್ಲಿ. ಎಲ್ಲಾ ಕಥೆಗಳು, ಎಲ್ಲಾ ಪಾತ್ರಗಳು ಅವನಿಗೆ ಜೀವಂತವೇ. ರಾಮಾನುಜಾಚಾರ್ಯರ ಹಿಂದೆ ಹತ್ತು ಸಾವಿರ ಹೊಲೆಯರು ಇದ್ದರೆಂಬುದನ್ನು ಹೇಳಿದಂತೇ ಬಸವಣ್ಣರನ್ನೂ ಕುರಿತು ಹಾಗೇ ಹೇಳುತ್ತಾನೆ. ಅವರಿಬ್ಬರು ತಮ್ಮ ತಮ್ಮ ಧರ್ಮಕ್ಕೆ ಜನರನ್ನು ಹೇಗೆ ಸೆಳೆಯುತ್ತಿದ್ದರೆಂಬುದನ್ನು ಅಷ್ಟೇ ದಿಟ್ಟತನದಿಂದ ಹೇಳುತ್ತಾನೆ. ಇವರಿಬ್ಬರು ಹೆಚ್ಚು ಕಡಿಮೆ ಸಮಕಾಲೀನರು. ಒಂದು ಕಡೆ ವೈಷ್ಣವಧರ್ಮ ಪ್ರಚಾರ, ಇನ್ನೊಂದೆಡೆ ವೀರಶೈವ ಧರ್ಮ ಪ್ರಚಾರ ನಡೆಯುತ್ತಿದ್ದುದು ಇತಿಹಾಸ ಸತ್ಯ. ವಚನಗಳಲ್ಲೇ ಶರಣರ ಬಗ್ಗೆ ಅನೇಕ ವಿರೋಧಾಭಾಸಗಳು ಸಿಗುತ್ತವೆ. ಮಹಾಮನೆಯ ಕಿತ್ತಾಟವನ್ನು ದಾಖಲಿಸುವ ಅಂಬಿಗರ ಚೌಡಯ್ಯನ ವಚನಗಳೇ ಇದಕ್ಕೆ ಸಾಕ್ಷಿ. ಬಹುಶಃ ನಾವಿಂದು ನೆನೆವಂತೆ ಅಂದು ಮತಪ್ರಚಾರ ಅಷ್ಟು ಸುಸೂತ್ರವಾಗಿ ನಡೆದಿರಲಿಲ್ಲ ಎಂಬುದರ ಪ್ರತೀಕ ಇವು. ದೇವಚಂದ್ರ ಬೌದ್ಧ, ವೈಷ್ಣವ, ವೈದಿಕ, ಮಾಧ್ವ, ವೀರಶೈವ, ಇಸ್ಲಾಂ ಧರ್ಮಗಳಿಗೆ ಸಂಬಂಧಿಸಿದಂತೆ ಇಂಥ ಅನೇಕ ಮಾಹಿತಿಗಳನ್ನು ಒದಗಿಸುತ್ತಾನೆ. ಇಂಥವನ್ನು ನಿರೂಪಿಸುವ ಮಗ್ಗುಲಲ್ಲೇ ಆಯಾಯ ಧರ್ಮಿಕರ ದ್ವಂದ್ವ, ಪರಿಣಾಮ ಹೋಳಾದ ಗುಂಪುಗಳ ವಿವರವನ್ನು ಕೊಡುವುದನ್ನು ಗಮನಿಸಬೇಕು. ಮತಸಂಘರ್ಷದ ಸನ್ನಿವೇಶಗಳನ್ನು ಅಭಿವ್ಯಕ್ತಿಸುವ ಸಂದರ್ಭದಲ್ಲೂ ಅಷ್ಟೇ, ವರ್ಗದ್ವೇಷಕ್ಕೆ ಅವಕಾಶವಿಲ್ಲದಂತೆ ತಣ್ಣಗೆ ನಿರೂಪಿಸುವ ದೇವಚಂದ್ರ ವೀರಶೈವ ಮತದ ವಿಚಾರಕ್ಕೆ ಮಾತ್ರ ಹೆಚ್ಚು ಸಾತ್ವಿಕ ಕೋಪವನ್ನು ಪ್ರಕಟಿಸುತ್ತಾನೆ. ಜೈನಧರ್ಮದ ಇಳಿಮುಖಕ್ಕೆ ಅನ್ಯಧರ್ಮಗಳಿಗಿಂತ ವೀರಶೈವದ ಧರ್ಮ ಮುಖಾಮುಖಿ ಜಿದ್ದಿಗೆ ನಿಂತದ್ದನ್ನು ಕವಿಮನಸ್ಸು ಮರೆತಿಲ್ಲ ಎಂಬುದನ್ನು ಸೂಚಿಸುವಂತಿದೆ.

೧. ಸಪ್ತವ್ಯಸನಗಳನ್ನು ಕುರಿತ ಜೈನಧೋರಣೆ ಬ್ರಾಹ್ಮಣರ ಚರ್ಚಿತ ವಿಷಯವಾಗಿ ವಿಪರೀತಕ್ಕಿಟ್ಟುಕೊಂಡಿತು. ಹಿಂಸೆಯಿಲ್ಲದಿರುವುದೇ ಧರ್ಮ, ಆತ್ಮಯಜ್ಞ ಧಾನ್ಯದ ಲಕ್ಷಣ; ಮುಕ್ತಿ ಸಾಧನ ಇತ್ಯಾದಿ ಶಾಸ್ತ್ರ ಸಮ್ಮತ ವಿಚಾರಗಳ ಬಗ್ಗೆ ಪರವಿರೋಧಗಳು ಬೆಳೆದು ತೀರ್ಮಾನಕ್ಕೆ ರಾಜ ವಿಶ್ವಸೇನನಲ್ಲಿಗೆ ಹೋಗುತ್ತಾರೆ. ಸತತ ಏಳುದಿನ ಚರ್ಚೆನಡೆಯುತ್ತದೆ. ಅದೇ ಸಂದರ್ಭದಲ್ಲಿ ವಿಪರೀತ ಬ್ರಾಹ್ಮಣರ ನಡವಳಿಕೆಯಿಂದ ಜಿನದಾಸನ ಕೊಲೆಯಾಗುತ್ತದೆ. ಕುಪಿತ ರಾಜ ಅಂಥ ಬ್ರಾಹ್ಮಣರನ್ನು ಓಡಿಸುತ್ತಾನೆ. ಅಲ್ಲಿಂದ ಮೊದಲಾಗಿ ಬ್ರಾಹ್ಮಣರಲ್ಲೇ ಎರಡು ಹೋಳಾಯ್ತು. ಜಿನಮತಕ್ಷಯವಾಗಲೆಂದು ಅನ್ಯಮತ ದೂಷಣೆಯಲ್ಲೇ ಒಂದು ವರ್ಗ ನಿಂತಿತು. ಮೂಲಶಾಸ್ತ್ರವನ್ನು ಗಮನಿಸುವುದೇ ನಿಷಿದ್ಧವೆಂದು ಭಾವಿಸಿತು. ಬ್ರಾಹ್ಮಣರು ವಿಭಾಗವಾಗುವಾಗ “ಆನೆಯಟ್ಟಿದೊಡಂ ಜಿನಾಲಯಮಂ ಪುಗಲಾಗದು, ಜೈನರೊಳ್ ಸಂಭಾಷಣಮಂ ಮಾಡಲಾಗದೆಂದು ಪ್ರತಿಜ್ಞೆಯಂ ಮಾಡಿ ವಿಂಗಡಿಸಿಕೊಂಡರ್”. (ಪು.೨೭-೨೮) ಇಲ್ಲಿ ಕವಿ ಜೈನಮತೀಯನೇ ಆಗಿದ್ದು ಜೈನರ ಬಗೆಗಿನ ಅಭಿಪ್ರಾಯವನ್ನೂ ಬಿಡದೆ ದಾಖಲಿಸುವುದನ್ನು ಗಮನಿಸಬೇಕು. ಅಷ್ಟರಮಟ್ಟಿಗೆ ಅವನು ಪ್ರಜ್ಞಾವಂತ ಪ್ರಾಮಾಣಿಕ ಕವಿ. ಆದರೆ ಇಂಥದೇ ಮಾತುಗಳನ್ನು ದೇವಚಂದ್ರ ರಾಮಾನುಜಾಚಾರ್ಯರ ಪ್ರಸಂಗದಲ್ಲೂ ಬಳಸುತ್ತಾನೆ. ಇವರು “ಆನೆಯಟ್ಟಿ ಬಂದರು ಶಿಲಾಯಮಂ ಪುಗಲಾರದೆಂದು ಐನೂರ್ವರ್ ಶಿಷ್ಯರ್ಗೆಲ್ಲ ಮುಪದೇಶಂಗೆಯ್ದುಯ್ದ” (ಪುಟ ೧೭೭)ರೆಂದು ದೇವಚಂದ್ರ ಹೇಳಿರುವುದನ್ನು ನೋಡಿದರೆ, ಈ ಬಗೆಯ ಮಾತುಗಳು ಜಾನಪದ ಆಶಯಗಳಾಗೋ ಇಲ್ಲವೇ ಜನಪದರಲ್ಲಿ ನಂಬಿಕೆ ಹುಟ್ಟಿಸಿದ ಕಾರಣಾರ್ಥ ಬಳಕೆಗೆ ಬಂದಿರಬೇಕು.

೨. ದೇವಚಂದ್ರನ ಪ್ರಕಾರ ವೀರಶೈವ ಸ್ಥಾಪಕ ಬಸವಣ್ಣ. ಷಣ್ಮತಗಳ ಬಗ್ಗೆ ಸಂದೇಹ ಹುಟ್ಟಿದ್ದು ಇದಕ್ಕೆ ಕಾರಣ, ಮತಸ್ಥಾಪನೆ ಪೂರ್ವ ಬಸವಣ್ಣ “ವಿಪರೀತ ಕರ್ಮಜನಿತ ಶೈವಾಚಾರದೊಳೆ ನಂಬುಗೆ ಪುಟ್ಟೆ ಜನರೆಲ್ಲರಂ ವಶಗತರ್ಮಾಡಿ ತನ್ನ ವಿದ್ಯದಿಂದನೇ ಕಾಶ್ಚರ್ಯ” (ಪು.೧೨೮)ಗಳನ್ನು ತೋರಿದ. “ಇಂದ್ರಜಾಲ ಮಹೇಂದ್ರಜಾಲವಂ ತೋರಿಸುತ್ತುಂ ಬಲಾತ್ಕಾರದಿಂದ ಜೈನಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರಾದಿಗಳಂ ಲಿಂಗ ಧಾರಿಗಳ್ ಮಾಡಿ ಪರಸಮಯಗಳಂ ಪದಿನೆಂಟು ಜಾತಿಗಳಂ ಬಯಸಿದುದಂ ಕೊಟ್ಟು ಲಿಂಗಮಂ ಧರಿಸಿ ನೀಚ ಜಾತಿಗಳನ್ನು ಕೂಡ ನುತಿಸುತ್ತ.. ಲಿಂಗಕ್ಕೆ ಪೊಲೆಯಿಲ್ಲ ಜಂಗಮಕ್ಕೆ ಪಾಪಮಿಲ್ಲೆಂದು” (ಪು ೧೨೯) ಸಾರಿದ. ಪರಿಣಾಮ ಜನರು ವೀರಶೈವ ಧರ್ಮಕ್ಕೆ ಮುಗಿಬಿದ್ದರು. ದೇವಚಂದ್ರ ಬಸವಣ್ಣ ಮತಾಂತರಿಗಳಿಗೆ ಬಯಸಿದ್ದನ್ನು ಕೊಟ್ಟ ಎಂಬ ಮಾತಿಗೆ ಮುಂದೆ ಪುರಾವೆಗಳನ್ನು ಕೊಡುತ್ತಾನೆ. “ಕೆಲವರಾಸೆವಟ್ಟು ಕಲ್ಲು ಅಡಕೆ ಬದನೆಕಾಯಿ ಮೊದಲಾದುವಂ ಕಟ್ಟಿಕೊಂಡು ಬಂದು ಬಸವನಿಂ ದ್ರವ್ಯಮಂಪಡೆವರ್… ಒಬ್ಬ ಬಳ್ಳಮಂ ಕವಚಿಕ್ಕಿ ಲಿಂಗಮೆಂದರ್ಚಿಧರ್ಚಿಸಿ ಧನಮಂ ಪಡೆದಂ ಕಾರೆಗೊಟ್ಟೆಗನೆಂಬ ಗೊಲ್ಲನಾಡಿನ ಹಿಕ್ಕೆಯಂ ಲಿಂಗಮೆಂದರ್ಚಿಸಿ ಬಸವನಿಂ ಸಿರಿಯಂ ಪಡೆದಂ, ಬಾಗೂರ ಬೊಮ್ಮಂ ಚೋಳದ ರಾಶಿಯನರ್ಚಿಸಿ ಭಾಗ್ಯವಂತನಾದಂ ಲಿಂಗಮಜ್ಜನಕ್ಕೆ ಪಾಲಂ ತಪ್ಪ ಸ್ತ್ರೀಯು ನಾಯನೆಡಹಿ ಬೀಳಲವಳಂ ಬಸವನೆತ್ತಿಕೊಂಡು ಬಂದು ಸಾಲ್ವನಿತು ಪೊನ್ನಂ ಕೊಟ್ಟಂ… ಮಿಂಡ ಜಂಗಮಂ ಸೂಳೆಯ ಕುಂಚಂಗಳಂ ಲಿಂಗಮೆಂದರ್ಚಿಸಿ ಪೊಡೆವಟ್ಟು ತಕ್ಕೈಸಿದನೆಂದೊಡಾತಂಗೆ ಕೈಲಾಸವಾಯ್ತೆಂದು ನಂಬುವಂ” (ಪುಟ ೧೩೦). ವೀರಶೈವ ಧರ್ಮದ ಬಗ್ಗೆ ಜನಾಭಿಪ್ರಾಯ ಹೇಗಿತ್ತು ಎಂದರೆ “ಬೇವಿನ ಬೀಜದನಿತು ಲಿಂಗಮುಳ್ಳಂಗಾವ ದೋಷಂಗಳ್ ಪೊರ್ದವಾತಂ ಕೈಲಾಸಕ್ಕೆ ಸಲ್ಗುಂ” (ಪುಟ ೧೩೦) ಎಂಬ ನಂಬಿಕೆಯಿತ್ತು. ಈ ಬಸವಣ್ಣನಾದರೋ ಮತಪ್ರಸಾರದ ನೆಪದಲ್ಲಿ “ಜಾತಿಭೇದಂಗಳಂ ಯೋಚಿಸದೆ ವೀರಶೈವಮೆಂದುದ್ದಂಡ ವೃತ್ತಿಯೊಳ್ ನಡೆಯುತ್ತಂ ಸ್ವಯಂಬದ್ಧರಾಗಿ ತಾ ಪಿಡಿದುದೆ ಧರ್ಮವೆಂದು ಕುಬುದ್ಧಿಯಿಂಮತಮತಂಗಳೊಳ್ ವಾದಿಸುತ್ತೆ ಸಾವಿರದೇಳುನೂರು ಬಸ್ತಿಯಂ ಕಿತ್ತು ತಪಸ್ವಿಗಳನಕರಂ ವಧಿಯಿಸಿ” (ಪುಟ ೧೩೨)ದರೆ, ಮರಿಬಿಜ್ಜಳನು ಅರಸಿಕೆರೆ ಹಾನೆಕೆರೆ ಕೊಪಣಾ ಕೊಲ್ಲಾಪುರ ಲಕ್ಷೇಶ್ವರ ಹಂಪೆ ಮುಂತಾದ ಅನೇಕ ಸ್ಥಳದೊಳಿರ್ದ ಜಿನಾಲಯಂಗಳಂ ಮುರಿದು ಅಲ್ಲಲ್ಲಿ ಲಿಂಗದ ಗುಡಿ (ಪುಟ-೧೩೨)ಗಳೆಂದು ಹೆಸರಿಟ್ಟನು.

ಇಲ್ಲಿ ದೇವಚಂದ್ರ ವೀರಶೈವ ಧರ್ಮವನ್ನು ಕುರಿತು ವ್ಯಂಗ್ಯವಾಡಿದ್ದರೂ ಅದನ್ನು ಸಂಪೂರ್ಣ ಅಸತ್ಯವೆಂದು ತಳ್ಳಿ ಹಾಕುವಂತಿಲ್ಲ. ಬಸವಣ್ಣನಿಗೆ ಸಂಬಂಧಿಸಿದ ಪವಾಡಗಳನ್ನು ಮೇಲೆ ಮೇಲಿನ ಮಾಹಿತಿ ಬೆಳಕು ಚೆಲ್ಲುತ್ತದೆ. ಅದೇ ಸಂದರ್ಭದಲ್ಲಿ ಬಸವಣ್ಣನಲ್ಲಿದ್ದ ಸ್ವಧರ್ಮ ನಿಷ್ಠೆ, ಆ ನಿಷ್ಠೆಯನ್ನು ನಂಬಿ ನಡೆಯುತ್ತಿದ್ದ ಜನಪರವಾಹ, ಅಣ್ಣನ ಬಗೆಗಿನ ಜನಪ್ರೀತಿ ಹಾಗೂ ಜನಪ್ರಿಯತೆ, ಭಕ್ತಿಯ ಬಗೆಗಿನ ಜನರ ಪರಿಭಾವನೆಯ ಪರಿಚಯವೂ ಆಗುತ್ತದೆ. ವೀರಶೈವ ಧರ್ಮ ಬರುವ ಮುನ್ನ ಕರ್ನಾಟಕದಲ್ಲಿ ತನ್ನ ದೃಢ ಹೆಜ್ಜೆ ಗುರುತು ಹಚ್ಚಿದ್ದ ಜೈನಧರ್ಮವನ್ನು ಬಸವಣ್ಣ ಯಾವಾವ ರೀತಿಯಲ್ಲಿ ಇಳಿಮುಖವಾಗಿಸಿರಬೇಕು ಎಂಬುದರ ಮೇಲೆ ಕ್ಷಕಿರಣ ಬೀಳುವ ಸಾಧ್ಯತೆಯಿದೆ. ಬಸವಣ್ಣ ಜೈಣ ಬಸದಿಗಳನ್ನು ಹಾಳುಗೆಡವಿದ ಎಂಬುದರ ಬಗ್ಗೆ ಐತಿಹಾಸಿಕತೆ ಅಲಭ್ಯವಾಗಿದ್ದರು ಅವನ ಅನುಯಾಯಿಗಳು, ಏಕಾಂತ ರಾಮಯ್ಯನಂಥವರು ಅದನ್ನು ಆಗು ಮಾಡಿದ್ದರು ಎಂಬುದಕ್ಕೆ ಅಬ್ಬಲೂರಿನ ಶಾಸನಾದಿಗಳು ಸಾಕ್ಷಿ ಒದಗಿಸುತ್ತವೆ ಎಂಬುದನ್ನು ಮರೆಯುವಂತಿಲ್ಲ. ಹಾಗೆಯೇ ಬಸವಣ್ಣನ ಸಾಮಾಜಿಕ ಕ್ರಾಂತಿಯು ಜಾತ್ಯತೀತವಾಗಿತ್ತೆಂಬುದನ್ನು ಸ್ವತಃ ದೇವಚಂದ್ರನೇ ಒಪ್ಪಿಕೊಳ್ಳುವುದರಿಂದ, ಕವಿಯ ಆಕ್ರೋಶ ವೀರಶೈವ ಧರ್ಮದ ತಾತ್ವಿಕತೆಯ ಮೇಲಲ್ಲ. ಬದಲಾಗಿ ಅನುಯಾಯಿಗಳ ನಡವಳಿಕೆಯ ಬಗೆಗೆ ಮಾತರ. ಏಕೆಂದರೆ ಇದೇ ಕವಿ ಲಿಂಗಧರಿಸುವಿಕೆಯನ್ನು ಭಟ್ಟಾಕಲಂಕರಿಂದ ಸಮರ್ಥಿಸುತ್ತಾನೆ. ಲಿಂಗದ ಬಗೆಗಿನ ಗೌರವವನ್ನು ವ್ಯಕ್ತಪಡಿಸುತ್ತಾನೆ. ಬೌದ್ಧರಿಂದ ವೀರಶೈವರು ಲಿಂಗ ವಿವೇಚನೆಗೆ ಸಂಬಂಧಿಸಿದಂತೆ ಪರಾಜಿತರಾದಾಗ ಭಟ್ಟಾಕಲಂಕರ ಮೊರೆಹೋಗುತ್ತಾರೆ. ಭಟ್ಟಾಕಲಂಕರು ಸುಧಾಪುರ ಸಿಂಹಾಸನಾಧೀಶ್ವರರಾಗಿರುತ್ತಾರೆ. ವೀರಶೈವರ  ಪರವಾಗಿ ಬೌದ್ಧಸಭೆಯಲ್ಲಿ ವಕಾಲತ್ತುವಹಿಸುತ್ತಾರೆ. “ಲಿಂಗಮೆಂದೊಡೆ ಅಂಕಮದು ಭಗವತ್ಸ್ವ ರೂಪನ ಮೂರ್ತನಾದ ಬಿಂದು ಕಳಾಯುಕ್ತ ಮೋಂಕಾರ ಪ್ರಣವಮದು ಪದಸ್ಥಿಪಿಂಡ ಸ್ವರೂಪಸ್ಥ ರೂಪಾತೀತದಿಂ ನಾಲ್ಕು ತೆರದ ಧ್ಯಾನಮಿದು ಸರ್ವಜ್ಞ ಪರಮಾತ್ಮಂ ಕ್ರಮದಿಂದ ಪದಸ್ಥಾದಿ ಧ್ಯಾನಗೋಚರ ನಪ್ಪುದರಿಂದಾ ನಿತ್ಯನಿರಂಜನ ನಿರ್ವಿಕಲ್ಪ ನಿರುಪಮ ನಿರುಪಾಧಿ ಜ್ಞಾನತೆ ಮೂರ್ತಿ ಯಪ್ಪುದರಿಂದಾ ಮೂರ್ತನಾದ ಚಿದಾತ್ಮಧ್ಯಾನಮುಂ ಬೆಂದು ಬಾಹ್ಯಚಿಹ್ನೆ ಕಾಣ್ಬುದಕ್ಕೋಸ್ಕರ ವ್ಯವಹಾರವಿಲ್ಲದೆ ನಿಶ್ಚಯಮಾದುದರಿಂ ಜ್ಞಾನಲಿಂಗದೊಳೆ ಪರಮಾತ್ಮನೈಕ್ಯಮೆಂದು ಪೊರಗೆ ಶರೀರದೊಳೆ ಲಿಂಗಮಂ ಧರಿಸಿ ಭಕ್ತಿಗೆಯ್ಯಲ್ವೇಳ್ವುದುದು” (ಪುಟ ೧೩೯) ಭಟ್ಟಾಕಲಂಕರ ಈ ಮಾತಿನಲ್ಲಿ ಇಷ್ಟಲಿಂಗದ ಅರ್ಥವಿಸ್ತಾರವನ್ನು ಗ್ರಹಿಸಬಹುದು. ಬಹುಶಃ ಲಿಂಗಧರಿಸುವಿಕೆ ಶಿವಭಕ್ತಿಯ ಸಂಕೇತವಾಗಿರಲಿಲ್ಲ. ಜನಾಪೇಕ್ಷೇಗಾಗಿ ಕಾಲಾಂತರದಲ್ಲಿ ಬಳಕೆಗೊಂಡಿರಬೇಕು. ಶಿವಭಕ್ತರೆಲ್ಲರು ಒಂದೇ ಎಂಬ ಬಸವಣ್ಣಾದಿ ಶಿವಶರಣರ ನಿಲುವು ವಿರೋಧಭಾವಕ್ಕೆ ಅವಕಾಶ ಕಲ್ಪಿಸಿದ್ದು, ಅದರಿಂದ ಪಾರಾಗಲು ಅಥವಾ ಭವಿಯ ಏಕಾಗ್ರತೆಯನ್ನು ಸಾಧಿಸಲು “ಲಿಂಗ” ಪರ್ಯಾಯ ಮಾಧ್ಯಮವಾಗಿ ಬಳಕೆಯಾಗಿರಬೇಕು. ಇದನ್ನು ಅನ್ಯಧರ್ಮಿಯರಲ್ಲದೆ ಮೂಲಭೂತವಾದಿಗಳು ಪ್ರಶ್ನಿಸಿರಲು ಸಾಕು. ಅದಕ್ಕೆ ಉತ್ತರವನ್ನು ಬಸವಣ್ಣ ಕೊಡುವುದಕ್ಕೆ ಬದಲು ಭಟ್ಟಾಕಲಂಕ ಅದರಲ್ಲೂ ಆತ ಭಟ್ಟಾರಕನಾಗಿದ್ದವನಿಂದ ಕೊಡಿಸಿದ್ದಾನೆ. ಇದು ತಾತ್ವಿಕತೆಯ ಬಗೆಗೆ ನಮ್ಮ ದಾರ್ಶನಿಕರಲ್ಲಿದ್ದ ಸಹಮತವನ್ನು ಸೂಚಿಸುತ್ತದೆ. ಇಷ್ಟಕ್ಕು ನಮ್ಮ ಭಾರತೀಯದರ್ಶನ ಉಪನಿಷತ್ತಿನ ತಳಹದಿಯ ಮೇಲೆ ನಿಂತಿರುವಂಥದು ಎಂಬ ವಾಸ್ತವಸತ್ಯ ನಮ್ಮ ಮುಂದೆ ಇದ್ದೆ ಇದೆ. ಹೀಗಾಗಿ ಯಾವುದೋ ಒಂದು ನೆಲೆಯಲ್ಲಿ ಎಲ್ಲ ಧರ್ಮಗಳು ಮನುಷ್ಯ ಬದುಕಿನ ಸುಖಶಾಂತಿಯನ್ನು ಪ್ರತಿಬಿಂಬಿಸುವಲ್ಲಿ ಒಂದಾಗಿಯೇ ಕಾಣಿಸಿಕೊಂಡಿರುವುದು ಸುಳ್ಳಲ್ಲ.

೩. ದೇವಚಂದ್ರನ ಪ್ರಕಾರ ಶಂಕರಾಚಾರ್ಯರು ಜೈನ ಉಪಾಧ್ಯಾಯರಿಂದ ವಿದ್ಯಾಭ್ಯಾಸ ಮಾಡಿದವರು. ಮುಂದೆ ಶೈವಾಚಾರ ಪ್ರವರ್ಧಮಾನರಾಗಿ ಶೃಂಗೇರಿ ಬಸದಿಯಲ್ಲಿದ್ದ ಜಿನಪ್ರತಿಮೆಗೆ ಸರಸ್ವತಿಯೆಂದು ಹೆಸರಿಟ್ಟು ಪೂಜಿಸಿದವರು. ರಾತ್ರಿ ಭೋಜನ ಪ್ರಿಯರಾದ ಅರಿಕುಠಾರದ ಜೈನ ಒಕ್ಕಲು ಬಹುತೇಕರು ಇವರಲ್ಲಿ ಶಿಷ್ಯತ್ವವನ್ನು ಸ್ವೀಕರಿಸಿದರು (ಪುಟ೧೬೫-೬೬) ಎಂದು ಹೇಳುವ ದೇವಚಂದ್ರ ಅರಿಕುಠಾರವು ಆ ಹೊತ್ತಿನಲ್ಲಿ ಹೊಯ್ಸಳ ಸಾಮ್ರಾಜ್ಯಕ್ಕೆ ಸೇರಿದ್ದು, ಬಲ್ಲಾಳರಾಯನು ಆಳುತ್ತಿದ್ದನೆಂದು, ಪಾಂಡ್ಯದೇಶದಿಂದ ಬಂದು ಆ ರಾಜನಲ್ಲಿ ಉದ್ಯೋಗಸ್ಥರಾದ ಜೈನವಿಪ್ರರಿಗೂ, ಸ್ಥಳೀಯ ಜೈನವಿಪ್ರರಿಗೂ ರಾತ್ರಿ ಭೋಜನ ಸಂಬಂಧ ವಾದವಿವಾದ ಏರ್ಪಟ್ಟಿದನ್ನು ಹೇಳುತ್ತಾನೆ. ಹಾಗೇ ಹೊಯ್ಸಳ ಪ್ರದೇಶಕ್ಕೆ ಸೇರಿದ ಸಾಲಿಗ್ರಾಮದಲ್ಲಿ ಬ್ರಾಹ್ಮಣರಿಗೂ, ಜೈನರಿಗೂ ಯಜ್ಞಸಂಬಂಧವಾಗಿ ಸಂವಾದ ನಡೆದದ್ದು, ಬಲಿಗಾಗಿ ೨೧ ಮೇಕೆಗಳನ್ನು ಸೋಮಯಾಜಿ ವೇದಾಂತಿಗಳು ಮುಖಂಡತ್ವದಲ್ಲಿ ತಂದದ್ದು, ಜೈನರ ಅಹಿಂಸಾ ಸಮರ್ಥನೆ ಇತ್ಯಾದಿ ವಿಚಾರಗಳನ್ನು ದೇವಚಂದ್ರ ದಾಖಲಿಸುತ್ತಾನೆ. ಹಾಗೆಯೇ ಮಾಧ್ವಮತ ಸ್ಥಾಪನೆಮಾಡಿದ್ದು, ಪರಿಣಾಮವಾಗಿ ಜೈನವೈಶ್ಯರಲ್ಲಿ ಚತುರ್ಥರು ಇಲ್ಲವೆ ಪಂಚಮರು ಎನ್ನಿಸಿದ್ದು, ಗೌಡದೇಶದ ಕಡೆಯಲ್ಲಿ ಒಂದೇ ಮನೆಯಲ್ಲಿ ಜಾತಿ ಭೇದವಿಲ್ಲದೆ ಜೈನಶ್ರಾವಕ, ಶಿವಭಕ್ತ ವಿಷ್ಣುಭಕ್ತರಿದ್ದದು, ಜೈನಗೌಡರು ಕರ್ಣಾಟ ಪ್ರದೇಶದಲ್ಲಿ ಲಿಂಗಧಾರಿಗಳಾದುದು ಇತ್ಯಾದಿ ಮಾಹಿತಿಗಳೂ ಇವೆ (೧೬೬).

ಶಂಕರಾಚಾರ್ಯರು ನಮಗೆ ಗೊತ್ತಿರುವಂತೆ ಅದ್ವೈತ ಸಿದ್ಧಾಂತಿ. ಸುಮಾರು ೬ ಅಥವಾ ೭ನೇ ಶತಮಾನದಲ್ಲಿದ್ದ ವ್ಯಕ್ತಿ. ಹೊಯ್ಸಳ ಸಾಮ್ರಾಜ್ಯ ಚಾಲೂ ಆಗುವುದೇ ೧೦ನೇ ಶತಮಾನದ ತರುವಾಯ. ಇವೆರಡರ ನಡುವೆ ಸುಮಾರು ೪೦೦ ವರ್ಷಗಳ ಅಂತರವಿದ್ದು, ಅದನ್ನು ಸಮೀಕರಿಸುವುದು ಕಷ್ಟ. ಜೊತೆಗೆ ಜೈನರು ದಟ್ಟವಾಗಿರುವ ಪ್ರದೇಶದಲ್ಲಿ ವೈಷ್ಣವ ಮತಕ್ಕೆ ಪರಿವರ್ತನೆಗೊಂಡವರೆ ಅಧಿಕ ಎಂಬುದು ಇತಿಹಾಸ ಸತ್ಯ. ಪ್ರಾಯಶಃ ದೇವಚಂದರ ಶೃಂಗೇರಿ ಮಠದ ಯಾವುದೋ ಸ್ವಾಮಿಗಳನ್ನು ಗಮನದಲ್ಲಿಟ್ಟುಕೊಂಡು ಹೇಳಿರುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಒಂದು ಮಠದ ಪಟ್ಟವನ್ನು ಯಾರೇ ಏರಿದ್ದರೂ ಅವರನ್ನು ಮಠದ ಮೂಲಸ್ವಾಮಿಗಳ ಹೆಸರಿನ ಮೂಲಕ ಗುರುತಿಸುವುದು ಸಂಪ್ರದಾಯ. ಹಾಗೇ ಇಲ್ಲಿಯೂ ನಿರೂಪಿತವಾಗಿರಬೇಕು. ಇಂಥವರು ದೇವಚಂದ್ರನ ಪ್ರಕಾರ “ಹಳಗನ್ನಡಿಗರ್ ತಸ್ಯರು ಮಾರಕರು” (ಪು.೧೬೫). ಬಹುಶಃ ಇವರೇ ಹೊಯ್ಸಳ ಕರ್ನಾಟಕದವರು. ಏಕೆಂದರೆ ಹೊಯ್ಸಳರಕಾಲದಲ್ಲಿ ಪಾಂಡ್ಯದಿಂದ ಬಂದಂಥ ಸ್ಮಾರ್ತರು ಇವರೇ ಇರಬೇಕು ಎನ್ನಿಸುತ್ತದೆ. ಯಜ್ಞಬಲಿಯನ್ನು ಕುರಿತು ಹೇಳುವುದಾದರೆ ಇದು ಸರ್ವಮಾನ್ಯ ಕ್ರಮವಾಗಿತ್ತು. ವೈದಿಕರಲ್ಲಿ ಜೈನಧರ್ಮ ಹಿಂಸಾ ವಿರೋಧಿಯಾದುದು ಜೀವಪರ ಕಾಳಜಿವುಳ್ಳದ್ದು. ಸೂಕ್ಷ್ಮಾತಿ ಸೂಕ್ಷ್ಮನೆಲೆಯಲ್ಲಿ ಅಹಿಂಸೆಯನ್ನು ಜೈನಧರ್ಮ ಪರಿಗಣಿಸುತ್ತದೆ. ರಾತ್ರಿ ಭೋಜನತ್ಯಾಗ ಆ ಅನುಸರಣೆಯ ಒಂದು ಮುಖ, ಆಚರಣೆ ಜೈನರಲ್ಲಿ ಸಂಪ್ರದಾಯ ಅಲ್ಲ ಜೀವನಕ್ರಮ. ಆ ಕ್ರಮವಿಪರ್ಯಯವನ್ನು ಅವರೆಂದೂ ಸಹಿಸಿರು. ಅದ್ದರಿಂದಲೇ ನಿಷ್ಠ ಜೈನ ಒಕ್ಕಲಿಂದ ತಿರಸ್ಕಲಿಸಲ್ಪಟ್ಟ ಇಂಥ ಒಂದು ವರ್ಗ ಶಂಕರಾಚಾರ್ಯರ ಅನುಯಾಯಿಗಳಾಗಿರಬಹುದು. ಆದರೆ ಐತಿಹಾಸಿಕವಾಗಿ ಇವರಾರೆಂದೇ ಸಿದ್ಧಪಡಿಸುವುದು ಕಷ್ಟಕರ. ಇಷ್ಟಂತೂ ನಿಜ, ದೇವಚಂದ್ರನ ಈ ಪ್ರಸ್ತಾಪದಿಂದ, ಹೊಯ್ಸಳರ ಕಾಲದಲ್ಲೇ ಜೈನಧರ್ಮ ಇಳಿಮುಖವಾಗ ಹತ್ತಿತ್ತು ಮಾತ್ರವಲ್ಲ ಜೈನರ ಆಚಾರ ವಿಚಾರಗಳಲ್ಲಿ ಸಡಿಲಿಕೆಗಳು ಸಾಮಾನ್ಯವಾಗಿತ್ತು. ಅಂತಃಕಲಹ ಹೆಚ್ಚಿ ಧಾರ್ಮಿಕ ಶ್ರದ್ಧೆಗಳಿಂದ ಜೈನರು ದೂರಸರಿಯುತ್ತಿದ್ದರೆಂಬುದು ಸ್ಪಷ್ಟವಾಗುತ್ತದೆ.