ಚಾಮರಾಜನಗರ ಜಿಲ್ಲೆಯ ಸುಪ್ರಸಿದ್ಧ ಜೈನಕ್ಷೇತ್ರವೆಂದರೆ ಮಲೆಯೂರು ಸಮೀಪದಲ್ಲಿರುವ ಕನಕಗಿರಿ, ಈ ಪುಣ್ಯಕ್ಷೇತ್ರದಲ್ಲಿ ಹಲವಾರು ಜೈನಮುಮನಿಗಳು ನೆಲಸಿದ್ದು ಅನೇಕ ಧಾರ್ಮಿಕ ಮತ್ತು ಇತರ ಗ್ರಂಥಗಳ ರಚನೆ ಮಾಡಿರುವುದುಂಟು. ಹಾಗೆಯೆ ಕೆಲವು ರಾಜರು ತಮ್ಮ ಇಷ್ಟಾರ್ಥಗಳ ನೆರವೇರಿಕೆಯಿಂದ ಸಂಪ್ರೀತರಾಗಿ ಇಲ್ಲಿನ ವಿಜಯ ಪಾರ್ಶ್ವನಾಥರ ಬಸದಿಗೆ ಕೆಲವು ದತ್ತಿ-ದಾನಗಳನ್ನು ನೀಡಿರುವುದುಂಟು. ಮಹಾನ್ ವೈದ್ಯಗ್ರಂಥವೆಂದು ಪರಿಗಣಿತವಾಗಿರುವ ‘ಕಲ್ಯಾಣಕಾರಕ’ ಗ್ರಂಥವನ್ನು ರಚಿಸಿದ ಪೂಜ್ಯ ಪಾದರು ಇಲ್ಲಿದ್ದರು ಎಂಬುದು ಹೆಮ್ಮೆಯ ವಿಷಯವಾಗಿದೆ. ಇಲ್ಲಿನ ಪಾರ್ಶ್ವನಾಥ ಸ್ವಾಮಿಯ ಪೂಜಾಕೈಂಕರ್ಯವನ್ನು ಮಾಡಿಕೊಂಡು ಬಂದ ಹಿರಿಯರಲ್ಲಿ ಹಲವಾರು ಹಿರಿಯ ವಿದ್ವಾಂಸರಾಗಿದ್ದಾರೆ. ಅಂತಹವರ ಸಾಲಿನಲ್ಲಿ ವಿರಾಜಮಾನನಾಗಿರುವ ದೇವಚಂದ್ರನು ರಚಿಸಿರುವ ಕೃತಿಗಳಲ್ಲಿ ಪ್ರಮುಖ ಸ್ಥಾನದ ಹೆಗ್ಗಳಿಕೆಯನ್ನು ಪಡೆದ ಕೃತಿಯೆಂದರೆ ರಾಜಾವಳಿ ಕಥೆ ಅಥವಾ ರಾಜಾವಳಿ ಕಥಾಸಾರ

ಈ ಗ್ರಂಥ ರಚನೆಗೆ ಯಾವುದೇ ಆಕರ ಸೂಚಿಸದಿದ್ದರೂ ಹಲವಾರು ಸಂಸ್ಕೃತ ಪ್ರಾಕೃತ ಕನ್ನಡ ಗ್ರಂಥಗಳ ಸಹಾಯ ಪಡೆದಿರುವುದಲ್ಲದೆ ಐತಿಹಾಸಿಕ ಗ್ರಂಥಗಳನ್ನೂ ಸ್ಥಳಪುರಾಣಗಳನ್ನೂ ಜಾನಪದ ಕಥೆಗಳನ್ನೂ ಬಳಸಿಕೊಂಡಿದ್ದಾನೆ. ಹೀಗೆ ವಿವಿಧ ಮೂಲಗಳನ್ನು ಆಶ್ರಯಿಸಿರುವುದರಿಂದ ವಿಷಯ ನಿರೂಪಣೆಯಲ್ಲಿ ಕೆಲವು ವ್ಯತ್ಯಾಸಗಳು ಕಂಡು ಬರುವುದುಂಟು. ಲೋಕಸೃಷ್ಟಿಯಿಂದ ಜಾತಿನಿರ್ಣಯದವರೆಗೂ ಹಬ್ಬಿರುವ ವಿಷಯ ನಿರೂಪಣೆಯಲ್ಲಿ ಪೌರಾಣಿಕ ಚಾರಿತ್ರಿಕ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ವಿಷಯಗಳು ಅಡಕವಾಗಿವೆ. ಇಲ್ಲಿನ ಮತಾಂತರಗಳು, ಜಾನಪದ ಕಥೆಗಳು, ಮತ ವಿಡಂಬನೆಗಳು ದೇವಚಂದ್ರನ ನಿರೂಪಣಾ ಶಕ್ತಿಯನ್ನು ಕಲ್ಪನಾ ಸಾಮಥ್ಯವನ್ನು ಸಾದರಪಡಿಸುತ್ತವೆ. ಇಂತಹ ಹಿರಿಯ ವಿದ್ವಾಂಸರನೇಕರಿಗೆ ಆಶ್ರಯ ನೀಡಿದ ಕನಕಗಿರಿಯ ವಿಷಯವನ್ನು ಹೇಗೆ ವಿಸ್ತರಿಸಿದ್ದಾನೆ ಎಂಬುದನ್ನು ನೋಡುವ ಪ್ರಯತ್ನವನ್ನಿಲ್ಲಿ ಮಾಡಲಾಗಿದೆ.

“ದಕ್ಷಿಣ ದೇಶದ ಪುಷ್ಕರಾವತೀನಗರದ ಅಭಿಚಂದ್ರಮುನಿ ಬಿಲಸಂಘ ಸ್ಥಾಪನೆಯಂಮಾಡಿದಂ” (ಪು ೯೨) ಎಂದು ಹೇಳಿದ ದೇವಚಂದ್ರನು ಇದರಲ್ಲಿ ಮತಮತಾಂತರಗಳಾಗಿ ೮೪ ಗಚ್ಛಗಳಾದುವು: ಹಲವಾರು ಗಣಗಳಾದುವು ಎಂದು ತಿಳೀಸಿದ್ದಾನೆ. ಅನಂತರ “ಬಲತ್ಕಾರ ಗಣದ ಶುಕ್ರವಾರ ಗಟ್ಟಲೆಯ ಸಿಂಹಸಂಘ ದೇಸಿಗಣ ಪುಸ್ತಕಗಚ್ಛದಚ್ವರು ದಿಳ್ಳಿಸೋದೆ ಗೇರಸೊಪ್ಪೆ ಸಂಗೀತಪುರ ಸುಧಾಪುರ ಕನಕಾದ್ರಿ ಹನಸೋಗೆ ಬೆಳ್ಗುಳಸಿಂಹಾಸನಗಳಲ್ಲುಳಿದರು” ಎಂದಿರುವುದರಿಂದ ಕನಕಾದ್ರಿ ಅಥವಾ ಕನಕಗಿರಿಯಲ್ಲಿ ಒಂದು ಗುರುಪೀಠ ಇತ್ತು ಎಂಬುದು ಖಚಿತವಾಗುತ್ತದೆ. ಕನಕಗಿರಿಯು ಪ್ರಸ್ತಾಪ ಹೀಗೇ ಪ್ರಾರಂಭವಾಗುತ್ತದೆ. ಮುಂದೆ ಛತ್ರತ್ತಯಪುರದ ಚಂದ್ರನಾಥಾದಿ ಸುತರ್ ಕನಕಗಿರಿಯೊಳ್ ನಿಂತರ್(೧೭೯) ಎಂಬ ಹೇಳಿಕೆಯಿದೆ. ಇವರು ವೈದ್ಯ ಜ್ಯೋತಿಷ್ಯಾದಿ ಶಾಸ್ತ್ರಗಳನ್ನು ರಚಿಸಿದರು.

ಬುಕ್ಕರಾಯನ ರಾಜ್ಯವಾದ ನಂತರ ಪ್ರೌಢದೇವರಾಯ ಮೊದಲಾದವರು ರಾಜ್ಯವಾಳಿದರು. ವಿಜಯನಗರದ ಮುಟ್ಟುಗವುಡಿ ಹಂಡೆಕುರುಬರ ಜಾತಿ ದೀಪದ ಮಲ್ಲಿಯಲ್ಲಿ ಹುಟ್ಟಿದ ಕೃಷ್ಣರಾಯನು ಆನೆಗೊಂದಿ ಸಂಸ್ಥಾನವನ್ನು ಪರಾಕ್ರಮದಿಂದ ವಶಪಡಿಸಿಕೊಂಡು ರಾಜ್ಯವಾಳುತ್ತಿದ್ದನು. ಅವರಲ್ಲಿ ಹರಿಹರರಾಯ ದೇವಣ್ಣರಾಯ ಭುಜಂಗರಾಯರೆಂಬ ಮೂವರಿಗೆ ದಕ್ಷಿಣದೇಶದ ಪ್ರಭುತ್ವವನ್ನು ಕೊಟ್ಟು ಕಳುಹಿಸಿದರು. ಇವರು ತೆರಕಣಾಂಬಿಗೆ ಬಂದು ನಿಂತರು. ಈ ವಂಶದಲ್ಲಿ ಬಂದ ವೀರರಾಯನು ತಗಡೂರಿನಲ್ಲಿ ಪ್ರಭುವಾಗಿದ್ದು ಆನೆಗೊಂದಿರಾಯನಿಗೆ ಶತ್ರುಗಳ ಉಪಟಳವೆಂದು ತಿಳಿದು ಅಲ್ಲಿಗೆ ಹೋಗಲೆಂದು ಕನಕಗಿರಿ ಸಮೀಪಕ್ಕೆ ಬರುವಷ್ಟರಲ್ಲಿ ಸಂಜೆಕಾಲದ ದೇವಭೋಗದ ಘಂಟೆಯ ಧ್ವನಿ ಕೇಳಿಸಿತಂತೆ. ಆ ರಾಜನು “ನನ್ನ ರಾಜ್ಯಂ ನನಗೆ ನಿಂತೊಡೆ ಈ ಮಲೆಯೂರ ಗ್ರಾಮಮ್ ಈ ಗಿರಿಯ ವಿಜಯಜಿನ ಪ್ರತಿಮೆಯು ಪೂಜಾರ್ಥವಾಗಿ ಸರ್ವಮಾನ್ಯವಾಗಿ ಕೊಡುವೆನೆಂದು ಪರಿಸಿಕೊಂಡು ಪೋಗೆ” ಎಂಬ ಮಾತುಗಳಿಂದ ವೀರರಾಯನು ಮಲೆಯೂರು ಮೊದಲಾದ ಗ್ರಾಮಗಳಿಗೆ ಒಡೆಯನಾಗಿದ್ದನು. ದೇವರಿಗೆ ಹರಕೆ ಹೊತ್ತು ಹೋದ ಆತನ ಆಸೆ ಈಡೇರಿತು. ಇದರಿಂದ ಸಂತಸಗೊಂಡ ಆತನು ಹಿಂದಿರುಗಿ ಬಂದು “ಕನಕಗಿರಿಯ ವಿಜಯ ದೇವರಿಗೆ ಮಲೆಯೂರು ಗ್ರಾಮವನ್ನು ಶಾಸನದತ್ತವಾಗಿ ಕೊಟ್ಟನು” ಇದಕ್ಕೆ ಒಂದು ಶಾಸನವನ್ನು ಹಾಕಿಸಿದ್ದಾನೆ. ಅದು ದೇವಚಂದ್ರನು ದಾಖಲಿಸಿರುವಂತೆ ಈ ರೀತಿಯಾಗಿದೆ:.

ಶ್ರೀಮತ್ಪರಮಗಂಭೀರ ಸ್ಯಾದ್ವಾದಾಮೋಘಲಾಂಛನಮ್
ಜೀಯಾತ್ರೈ ಲೋಕ್ಯನಾಥಸ್ಯ ಶಾಸನಂ ಜಿನಶಾಸನಮ್”

ಸ್ವಸ್ತಿ ಸಮಸ್ತ ಪ್ರಶಸ್ತೋತ್ರತ ಶಾಲಿವಾಹನ ಶಕವರುಷ ೧೩೪೪ನೆಯ ಶುಭಕೃತು ಸಂವತ್ಸರದ ಶ್ರಾವಣ ಶುದ್ಧ ೧೫ಯಲ್ಲು ಶ್ರೀಮದ್ರಾ ರಾಜಾಧಿರಾಜ ಶ್ರೀವೀರದೇವರಾಯ ಮಹಾರಾಯರ ಕುಮಾರ ಹರಿಹರರಾಯರು ಸೋಮಗ್ರಹಣದಲ್ಲು ಕನಕಗಿರಿ ವಿಜಯದೇವರ ಶ್ರೀ ಕಾರ್ಯದ ಅಂಗರಂಗ ವೈಭವ ಮೊದಲಾದ ದೇವತಾ ವಿನಿಯೋಗಕ್ಕೆ ಮಲೆಯೂರ ಗ್ರಾಮದ ಚತುಸ್ಸೀಮೆಯೊಳಗಾದ ಗದ್ದೆಬೆದ್ದಲು ತೋಟ ತುಡಿಕೆ ಸುಂಕ ಸುವರ್ಣಾದಯ ತಳವರಿಕೆ ಅಕ್ಷಣಿ ಆಗಾಮಿ ಸರದಿ ಜಲಪಾಷಾಣ ಸಿದ್ಧಪಾಷಾಣ ಸಿದ್ಧಸಾಧನೆ ನಿಧಿ ನಿಕ್ಷೇಪ ಸರ್ವಾದಾಯ ಸರ್ವಸ್ವಾಮ್ಯ ಸಹಿತವಾಗಿ ಧಾರಾಪೂರ್ವಕಮಾಗಿಯಾ ಮಲೆಯೂರ ಗ್ರಾಮವನ್ನು ಶಾಸನದತ್ತವಾಗಿ ಕೊಟ್ಟ ದತ್ತಿ.

ಸ್ವದತ್ತಾಂಪರದತ್ತಾಂ ವಾಯೋ ಹರೇತ ವಸುಂಧರಾಂ
ಷಷ್ಠಿರ್ವರ್ಷಂ ಸಹಸ್ರಾಣಿ ವಿಷ್ಠಾಯಾಂ ಜಾಯತೇ ಕ್ರಿಮಿಃ”

ಎಂದು ಶಿಲಾಶಾಸನಮಂ ಬರೆಯಿಸಿ ತಾಮ್ರದ ಚಪ್ಪೋಡಿನೊಳಾ ಗ್ರಾಮದ ಎಲ್ಲೆ ಸಿದ್ಧಾಯ ಹುಟ್ಟುವಳಿ ಬರೆಯಿಸಿ ತ್ರಿಯಂಬಕೇಶ್ವರಿ ಸಾಕ್ಷಿಯಿಂ ಹಿರಣ್ಯೋದಕ ಧಾರಪೂರ್ವಕಂ ಕೊಟ್ಟು ಜಿನಧರ್ಮಮೆ ಸತ್ಯವೆಂದು ಹರಿಹರರಾಯಂ

ಬಸದಿಗೆ ಕೊಟ್ಟೀ ಧರ್ಮವ ಪಿಸುಣನು | ತಾಣಾಗಿಯಳಿಪಲಾಯುಂ ಶ್ರೀಯುಂ
ಕುಸಿದು ನರಕಾದಿ ದುಃಖವ | ಶಶಿ ರವಿಯುಳ್ಳನಕಮುಂಡು ನವೆಯುತ್ತಿಪ್ಪರ್
ಎಂದು ದೃಢ ಚಿತ್ತನಾಗಿರ್ದಂ”  (೨೦೧)

ಎಂಬಿವೇ ಮಾತುಗಳಲ್ಲಿ ಮಲೆಯೂರು ಗ್ರಾಮವನ್ನು ಕನಕಗಿರಿಯ ಸೇವಾರ್ಥಕ್ಕೆ ಮುಡಿಪಾಗಿ ಬಿಟ್ಟಿರುವುದು ಖಚಿತವಾಗಿದೆ. ಹೀಗೆ ಕನಕಗಿರಿ ಇಷ್ಟಾರ್ಥಗಳನ್ನು ನೆರವೇರಿಸುವ ಒಂದು ಶಕ್ತಿದೇವತೆಯಾಗಿ ಮೆರೆದಿರುವುದೂ, ಅದರಿಂದ ಸಂತುಷ್ಟರಾದ ರಾಜರು ಅದರ ಉದ್ಧಾರಕ್ಕೆ ನೆರವಾಗಿರುವುದೂ ಕಂಡುಬರುತ್ತದೆ. ಇಂತಹ ಹಲವಾರು ಕೈಂಕರ್ಯಗಳು ನಡೆದಿರಬಹುದಾದರೂ ರಾಜರೇ ಮೊದಲಾದ ಹಿರಿಯರು ಮಾಡಿದ ಸೇವಾಕಾರ್ಯ ಮಾತ್ರ ಇಲ್ಲಿ ದಾಖಲಾಗಿದೆಯೆಂದೆ ತೋರುತ್ತದೆ.

ಮುಂದೆ “ಹಿಂದೆ ಅರುವತ್ತೇಳನೆಯ ವರುಷದಂದು (ಎಂದರೆ ಇದು ೧೨೬೭ ಇರಬಹುದು. ಏಕೆಂದರೆ ಇದರ ಮುಂದೆ ೧೨೭೭ ಎಂದಿದೆ) ಶ್ರೀ ರಾಮನ ಪಟ್ಟಸ್ತ್ರೀಗೆ ವ್ಯಂತರಂ ಜನ್ಮಾಂತರ ಕಾರಣದಿಂದ ಬಾಧಿಸುತ್ತಿರಲಾ ಕಾಲದೊಳ್ ಕನಕಗಿರಿಯೊಳಿರ್ದ ಲಲಿತಕೀರ್ತಿಗಳ ಬರಿಸಲಿಲ್ಲಿ ಬಸ್ತಿಯಂ ಕಟ್ಟಿಸಿ ಜಿನಪ್ರತಿಷ್ಠೆಯಂ ದೇವಪ್ಪಗಳ ಪ್ರಪೌತ್ರನಿಂ ಮಾಡಿಸಿ ರಾಯನ ದೆವ್ವಮಂ ಬಿಡಿಸಿ ಸ್ವಾಸ್ಥ್ಯಮಾನ್ಯಮಂ ಬಿಡಿಸಿರ್ದರು. ಶಕವರುಷ ೧೨೭೭ನೆಯ ಮನ್ಮಥನಾಮ ಸಂವತ್ಸರದ ಚೈತ್ರದಲ್ಲಿ ಕನಕಗಿರಿಯೊಳ್ ತಮ್ಮ ನಿಷಿಧಿಯ ದೀಪಮಾಲೆಯ ತೋರಣ ಕಂಬಂಗಳಂ ಮಾಡಿಸಿ ಚತುಸ್ಸಂಗಮಂ ಪಾರ್ಶ್ವ ಪ್ರತಿಮೆಯೆಂಬ ಪ್ರತಿಮೆಯಂ ಚತುಸ್ಸಂಗಸಹಿತಂ ಮಾಡಿಸಿದರ್” (೨೦೧) ಎಂಬ ವರ್ಣನೆಯಿದೆ.

ಇಲ್ಲಿ ಬರುವ ರಾಯ ಯಾರೆಂಬುದು ನಮಗೆ ಅಷ್ಟು ಮುಖ್ಯವಲ್ಲ. ಆದರೆ ಆತನು ತನ್ನ ರಾಣಿಗೆ ಒದಗಿಬಂದಿದ್ದ ವ್ಯಂತರನಿಂದ ಬಿಡುಗಡೆ ಹೊಂದಲು ಕನಕಗಿರಿಯಲ್ಲಿದ್ದ ಲಲಿತಕೀರ್ತಿಗಳನ್ನು ಬರಮಾಡಿಕೊಂಡದ್ದು, ಅವರಿಂದ ಅದು ನಿವಾರಣೆಯಾಗಿ ಆತನು ಬಸ್ತಿಯನ್ನು ಕಟ್ಟಿಸಿ ಜನಪ್ರತಿಷ್ಠೆಯನ್ನು ಮಾಡಿಸಿ ಅದರ ನಿರ್ವಹಣೆಗೆ ಬೇಕಾದ ಸ್ವಾಸ್ಥ್ಯಮಾನ್ಯಗಳನ್ನು ಬಿಡಿಸಿದುದು, ಅಲ್ಲಿ ನಿಷಿಧಿಯ ದೀಪಮಾಲೆಯ ತೋರಣ ಗಂಬಗಳನ್ನು ನಿರ್ಮಿಸಿದುದು ಮುಖ್ಯವಾದ ವಿಷಯವಾಗಿದೆ. ಎಂದರೆ ಈ ಮೊದಲು ಇಲ್ಲಿ ಸಣ್ಣ ಗುಡಿಯಂತಿದ್ದ ದೇವಾಲಯವನ್ನು ದೊಡ್ಡದಾಗಿ ಕಟ್ಟಿಸಿ ಜನಪ್ರತಿಷ್ಠೆಯನ್ನು ಮಾಡಿದಂತೆ ತಿಳಿಯಬಹುದಾಗಿದೆ. ಇದು ಆದದ್ದು ಶಕ ೧೨೭೭ರಲ್ಲಿ ಎಂದರೆ ಕ್ರಿ.ಶ. ೧೩೫೫ರಲ್ಲಿ.

ಇಲ್ಲಿಂದ ಮುಂದೆ ಶಕವರುಷ ೧೪೮೬ರವರೆಗೂ ಕನಕಗಿರಿಯ ಬಗೆಗೆ ಯಾವ ಪ್ರಸ್ತಾಪವೂ ಬರುವುದಿಲ್ಲ. “ಆನೆಗೊಂದಿ ತೆಲುಗು ಪಟಲಂಗಳೊಳು ಅಚ್ಯುತರಾಯನಾಳಿದ ಮೇಲೆ ಕ್ಷತ್ರಿಯ ಪಟಲದ ತಿರುಮಲರಾಯ ಸದಾಶಿವರಾಯನಿಂದಿತ್ತಲು ರಾಮರಾಜಯ್ಯ ನಾಳ್ದು ಶಕವರುಷ ಸಾವಿರದ ನಾನೂರೆಂಬತ್ತಾರನೆ (೧೪೮೬) ರಕ್ಷಾಕ್ಷಿ ಸಂವತ್ಸರದ ಮಾರ್ಗಶಿರ ಶುದ್ಧಂ ೧ರಲ್ಲು ಮೃತವಾಗೆ ಶ್ರೀರಂಗನಾಯಂ ಪ್ರಬಲನಾಗಿ ಆಂಗೀರಸ ಸಂವತ್ಸರದಾರ ಶ್ರೀರಂಗಪಟ್ಟಣದೊಳಿರ್ದಂ” (೨೧೨) ಹೀಗೆ ಶ್ರೀರಂಗಪಟ್ಟಣದಲ್ಲಿದ್ದ ಕೆಲವು ಸಂಸ್ಥಾನ ಗಳನ್ನು ವಶಮಾಡಿಕೊಂಡಿರಲು, ಮಹಿಸೂರ ರಾಜಗೌಡನು ಇವನಿಗೆ ವಿರುದ್ಧವಾಗಿ ನಿಂತನು.

ಈ ರಾಜಗೌಡನನ್ನು ವಶಮಾಡಿಕೊಳ್ಳಬಯಸಿದ ಶ್ರೀರಂಗರಾಯನನ್ನು ಯಾವ ರೀತಿಯಿಂದಲಾದರೂ ಸಮಾಧಾನಪಡಿಸಬೇಕೆಂದು ಯೋಚಿಸಿದನು. ಅದಕ್ಕಾಗಿ ದೊಡ್ಡ ಶಾಂತಯ್ಯನು ಶ್ರೀರಂಗಪಟ್ಟಣಕ್ಕೆ ಹೋಗಿ ಶ್ರೀರಂಗರಾಯನನ್ನು ಒಲಿಸಿಕೊಂಡನು. “ರಾಯಂಗೆ ಕರುಣಂ ಪುಟ್ಟಿ ಕೈಯೊಳಿರ್ದನಂ ಬಿಡಲಾಗದಾತನೆ ಎಮ್ಮಂ ಕಂಡು ಬಾಳ್ವನಲ್ಲದೆ ಪೆರತಿಲ್ಲೆಂ ದಷ್ಟ ಗ್ರಾಮದ ಕಾಲೈಯಿಂದಾಗ ತಕ್ಕ ಬತ್ತದ ಗದ್ದೆಗಳೋಳ್ ಸಾವಿರ ಖಂಡಗಂ ಬೀಜವರಿಯಂ ಮಹಿಸೂರು ಹವಾಲುಮಾಡಿ ನಿರೂಪವನ್ನು ಬರೆಸಿಕೊಟ್ಟು ಭಾರಿ ಧೋತ್ರ ಜೋಡಿಯಂ ಶಾಂತಯ್ಯಂ ಗುಡುಗೊರೆಕೊಟ್ಟು ನಿನ್ನಂತಪ್ಪನಿಯೋಗಿಯಿಲ್ಲೆಂದು ನಿಮ್ಮ ರಾಜನುಂ ನೀನು ನೆಲ್ಲನ್ನವನುಂಡು ಸುಖಮಿಪ್ಪು ದೆಂದು ಹೇಳಿ ಕಳುಹಿಸಿದಾಗಳೆ ಬಪ್ಪುದೆಂದು ಪ್ರಿಯಮಂ ನುಡಿಯೆ” (೨೧೫) ಎಂಬ ಹೇಳಿಕೆಯಿದೆ.

ಹೀಗೆ ರಾಜಗೌಡನ ಕಾರ್ಯನಿರ್ವಾಹಕನಿಗೆ ಹೋದ ಶಾಂತಯ್ಯನು ಜಯಶೀಲನಾಗಿ “ಮೈಸೂರಿಗೆ ಬರೆ ರಾಜೊಡೆಯಂ ಸಂತೋಷದಿಂದ ಬಿಗಿಯಪ್ಪಿ ನೀನೇ ಎನ್ನ ತಂದೆ ಎನ್ನ ಭಾಗಕ್ಕೆ ನೀನೆ ಸಹಕಾರಿ ನಿನಗೇನಂ ಮಾಳೈನೆಂದಾಕ್ಷಣಮೆ ಗ್ರಾಮಕ್ಕೆ ಬಂದು ಒಕ್ಕಲುಮೇರೆ ಮೂವತ್ತುಮೂರು ಒಕ್ಕಲಂ ಶಾಂತಯ್ಯಂಗೆ ಧರ್ಮಶಾನಮಂ ಬರೆಯಿಸಿಕೊಟ್ಟು ಅವನ ದೇವರಿಪ್ಪ ಕನಕಗಿರಿಯ ಬಸ್ತಿಪ್ರಾಕಾರಾದ ಎಳಸಬೇಲಿ ತೆಗೆಯಿಸಿ ಕೋಟೆಯಂ ಹಾಕಿಸಿದಂ” (೨೧೬) ಎಂಬ ವರ್ಣನೆಯಿದೆ. ಮೇಲಣ ಹೇಳಿಕೆಯಲ್ಲಿ ಬರುವ ರಾಜಗೌಡನು ರಾಜೊಡೆಯನೇ ಆಗಿದ್ದಾನೆ. ಶ್ರೀರಂಗರಾಯನು ತನ್ನಹೊರತು ಉಳಿದ ರಾಜರೆಲ್ಲರೂ ಗೌಡರೆಂದೂ ಪರಿಗಣಿಸಿದುದರಿಂದ ಅದನ್ನೇ ದೇವಚಂದ್ರನು ಅನುಸರಿಸಿದ್ದಾನೆ. ಕನಕಗಿರಿಯಲ್ಲಿದ್ದ ಎಸಳ ಬೇಲೆಯನ್ನು ತೆಗೆಯಿಸಿ ಕೋಟಿ ಕಟ್ಟಿಸಿದ ಎಂಬ ಹೇಳಿಕೆಯಿಂದ ಯಾರೂ ಭಾರಿಕೋಟೆ ಎಂದು ಭಾವಿಸಬಾರದು. ಈ ಕಂಡುಬರುವ ಕಲ್ಲುಗಳಿಂದ ಕಟ್ಟಿರುವ ಗೋಡೆಯನ್ನೇ ಕೋಟೆ ಎಂದು ಹೇಳಿರಬಹುದೇ ಹೊರತು ಬೇರೆ ಕೋಟೆಯ ಯಾವ ಕುರುಹುಗಳೂ ಇಲ್ಲಿ ಕಂಡುಬರುವುದಿಲ್ಲ. ಇದು ನಡೆದದ್ದು ಶಕ ೧೪೧೯ ಎಂದರೆ ಕ್ರಿ.ಶ ೧೫೬೪ರಲ್ಲಿ.

೧೬ನೆಯ ಶತಮಾನದಲ್ಲಿಯೇ ಕನಕಗಿರಿಯಲ್ಲಿ ನಡೆದಂತಹ ಮತ್ತೊಂದು ಘಟನೆಯನ್ನೂ ದೇವಚಂದ್ರನು ದಾಖಲಿಸಿದ್ದಾನೆ. “ಒಂದಾನೊಂದು ಕಾರಣದಿ ನೀಲಗಿರಿ ಶಿಖರದೊಳಿರ್ದ ಉರಿಸಿಂಗಿಯೆಂಬ ಮಹಾಸರ್ಪ ಜ್ವಾಲಾಮಾಲಿನೀ ಮಹಾದೇವಿಯ ಸೇವೆಯೊಳಿರ್ದು ಪೊರುಮಟ್ಟು ಕನಕಗಿರಿಗೆ ಬಂದಿಪ್ಪದೆಂಬ ವಾರ್ತೆಯಂ ಕೇಳಿ” (೨೨೩) ಎಂಬ ಮಾತುಗಳಿಂದ ತಿಳಿದುಬರುವ ಅಂಶವೆಂದರೆ ನೀಲಗಿರಿಬೆಟ್ಟದಲ್ಲಿದ್ದ ಉರಿಸಿಂಗಿ ಎಂಬ ಘಟಸರ್ಪವು ಕಾರಾಣಾಂತರದಿಂದ ಕನಕಗಿರಿಗೆ ಬಂದಿತು. ಇದನ್ನು ತಡೆಯಲು ಯತ್ನಿಸಿದ ಪ್ರಸಿದ್ಧ ಮಂತ್ರವಾದಿ ಅಂತಪ್ಪರನನ್ನು ಅದು ಕಚ್ಚಲು ಆತನು ಸಾಯುತ್ತಾನೆ. ಸಾವುದಕ್ಕೆ ಮುಂಚೆ ಆತನು “ಒಂದು ಶೀಲೆಯಂತರಿಸಿ ಮಂತ್ರಪೂತಂ ಮಾಡಿಯಾ ಊರ ಮುಂಗಡೆಯೊಳ್ ನಿಲಿಸಿ ಆರಾದೊಡಂ ಸರ್ಪದಷ್ಟ ಮಾದರೀ ಶಿಲೆಯಂ ಮುಟ್ಟಲ್ ವಿಷಂ ತೀರ್ಗುಮೆಂದು” ಹೇಳಿಸತ್ತನು. ಈ ಐತಿಹಾಸಿಕ ಶಿಲೆ ಇಲ್ಲಿ ಈಗಲೂ ಇದೆಯೆ? ಎಂಬುದನ್ನು ಪರಿಶೀಲಿಸಬೇಕಾಗಿದೆ.

ಈ ಕಾಲದಲ್ಲಿಯೇ ‘ಅರಿಕುಠಾರದ ಛತ್ರತ್ರಯಪುರದ ಚಂದ್ರಪ್ರಭಸ್ವಾಮಿಯ ಸೇವೆಯಲ್ಲಿದ್ದ ಚಂದ್ರನಾಥ ಮೊದಲಾದ ಎಂಟು ಜನರು ಕನಕಗಿರಿ ಕೆಲಸೂರಾದಿ ಸ್ಥಳಗಳಲ್ಲಿ ನೆಲಸಿದರು. ದೇವಚಂದ್ರನು ಹೇಳುವಂತೆ “ಪಿತಾಮಹಂ ದೇವರಸಂ ಕನಕಗಿರಿಯ ಪದ್ಮಾವತೀ ಮಹಾದೇವಿಯೆ ಎಮಗಿಷ್ಟದೇವರಾದುದರಿಂ ದೇವರ ಸೇವೆಯಂ ಮಾಡಿ ಬರುವಲ್ಲಿ ನೇರಳೆಯಂತಪ್ಪರಸನಿಂ ವಿಷಹರಮಂತ್ರ ಬೀಜಾಕ್ಷರ ಸಂಪೂರ್ಣಮಾಗಿ ಯುಪದೇಶಂ ಗೊಂಡು ಬಂದರಾ ಮಾಂತ್ರದಿಂ ಶಾಂತಯ್ಯ ಪೇಳೆ ರಾಜಂ ಕೇಳ್ದು” (೨೨೪) ಎಂಬ ದೇವಚಂದ್ರನ ವಿವರಣೆಯಿಂದ ಶಾಂತಯ್ಯನಿಗಿಂತ ಮೊದಲೇ ಈ ಹಿಂದಣ ಉರಿಸಿಂಗ ಸರ್ಪದ ಘಟನೆ ನಡೆದಿರಬಹುದು. ಇದನ್ನೆಲ್ಲಾ ಕೇಳಿದ ರಾಜನು ಆಶ್ಚರ್ಯಗೊಂಡು ಜೈನಮತ ಶ್ರೇಷ್ಠವೆಂದು ಆ ಧರ್ಮವನ್ನು ಅನುಸರಿಸಿದಂತೆ ಹೇಳಲಾಗಿದೆ.

ಆನಂತರ ಜಿನಾಲಯವನ್ನುದ್ದರಿಸಿದುದನ್ನು ದೇವಚಂದ್ರನು ತಿಳಿಸಿದ್ದಾನೆ. ಅದು ನಡೆದದ್ದು ಚಿಕ್ಕದೇವರಾಜರಸನ ಅನಂತರ, ಕಂಠೀರವರಾಜನ ಕಾಲದಲ್ಲಿ, ಮೂಲದಲ್ಲಿರುವಂತೆ “ಚಿಕ್ಕದೇವರಾಜರಸಂ ತಾರಣ ಸಂವತ್ಸರದೊಳೆ ಲೋಕಾಂತರಿ ತನಪ್ಪುದುಂ ಕಂಠೀರವಯ್ಯರಸಂಗೆ ಪಟ್ಟಮಾಗೆ ಈ ವ್ಯಯಸಂವತ್ಸರದೊಳು ತೆಂಕಸೀಮೆಗಿಡ ದೊಳಾನೆಯಂ ಪಡಿಯಳ್ ಸಮರ್ಥರಾರೆನೆ ಅಣ್ಣಯ್ಯಶೆಟ್ಟಿ ಗಪ್ಪಣೆಯಂ ಕೊಡುವುದೆಂದು ವೈಕ್ಷಮ್ಯದಿಂದರ ಸಂಗರಿಸಿ ಕಳುಹಿಸಿಲಾತಂ ಮಲೆಯೂರ ಮಾರ್ಗಮಾಗಿ ಬಂದು ತಳುಗಿದೊಡಾ ರಾತ್ರಿ ಪದ್ಮಾವತಿ ಮಹಾದೇವಿ ಸ್ವಪ್ನದೊಳೆರೆದ ಕ್ರಯದೊಳೆ ಅತಿ ಚಲ್ವನಪ್ಪ ಐದಾನೆ ಬಂದು ಧನಲವರ್ಣ ದ್ವಿರದ ಸಹಿತಂ ಕೊಂಡು ಪೋಗಿ ರಾಜಂಗಿತ್ತೊಡತಿ ಪ್ರೀತಿಯಿಂದಾತಂಗೆ ಟಂಕಸಾಲೆಯ ಸರ್ವಾಧ್ಯಕ್ಷತ್ವಮ ನಿತ್ತೋಡಾತಂ ನೂತನತರವಾದ ಸುವರ್ಣಾಭರಣಮಂ ಮಾಡಿಸಿ, ತಿರುಮಲೆಯಾರ್ಯನ ಧರ್ಮಪತ್ನಿಗೊಪ್ಪಿಸಿ ಕೇಳಿಕೊಂಡಾಕೆ ತನ್ನ ಪತಿಯೊಳು ಭರವಶಂಗೊಂಡು ಅಣ್ಣಯ್ಯನ ಕುಲದೇವರಾದ ಕನಕಗಿರಿಯ ಬಸ್ತಿಗ್ರಾಮವನ್ನು ಪ್ರಾಕುಮೇರೆ ಸರ್ವಮಾನ್ಯವಾಗಿ ಬಿಟ್ಟುಕೊಟ್ಟು ಆ ದೇವರ ಪೂಜೆ ಮಾಡಿಸುವುದೆಂದು ರಾಜನ ನಿರೂಪಮಂ ಮಾಡಿಸಿ ಕೊಟ್ಟೊಡಾ ಶೆಟ್ಟಿಯು ಮಲೆಯೂರು ಬೆಟ್ಟವೆರಡರ ಜಿನಾಲಯ ಮನುದ್ಧರಿಸಿ ಬಾಚಹಳ್ಳಿ ಕಿರುಗುಂದದಿಂ ಮೂಲಬಿಂಬಂಗಳಂ ತಂದಿಟ್ಟ ಶಕವರುಷಂಗಳು ೧೬೨೯ನೆಯ ಸರ್ವಜಿತು ಸಂವತ್ಸರದಕ್ಷ ತ್ರಿತಯದೊಳು ಪ್ರತಿಷ್ಠೆ ಮಾಡಿಸಿ ಬಳಿಕಾ ಕ್ರೋಧಿ ಶುಭಕೃತುವರೆಗೆ ವಚನಗನಹಳ್ಳಿ ಕೆಲಸೂರು ಮೊದಲಾಗೆ ಏಳೆಂಟು ಚೈತ್ಯಾಲಯಂಗಳ ನುದ್ದರಿಸಿದಂ” (೨೮೯-೮೭)

ಇದರಿಂದ ತಿಳಿದುಬರುವ ಅಂಶವೆಂದರೆ ಕಂಠೀರವ ರಾಜನ ಕಾಲದಲ್ಲಿ ಅಣ್ಣಯ್ಯಶೆಟ್ಟಿಯು ಕನಕಗಿರಿಯ ಪದ್ಮಾವತಿಯ ಅನುಗ್ರಹದಿಂದ ರಾಜನ ಮನ್ನಣೆಗೆ ಪಾತ್ರನಾದನು. ಇದರಿಂದ ಈತನು ರಾಜರಿಂದ ಅನೇಕ ಸವಲತ್ತುಗಳನ್ನು ಪಡೆದು ತನ್ನ ಕುಲದೇವರಾದ ಕನಕಗಿರಿಯ ಬಸದಿಯು ಜೀರ್ಣೋದ್ಧಾರ ಮಾಡಿ ಬೇರೆಡೆಯಿಂದ ಮೂಲಬಿಂಬಗಳನ್ನು ತರಿಸಿ ಪ್ರತಿಷ್ಠೆ ಮಾಡಿಸಿದರು. ಇಲ್ಲಿ ಬಿಂಬಗಳನ್ನು ಸ್ಥಾಪಿಸಿದುದಲ್ಲದೆ ಬೇರೆ ಊರುಗಳಲ್ಲಿಯೂ ಜಿನಾಲಯಗಳನ್ನು ಮಾಡಿಸಿದಂತೆ ಕಂಡುಬರುತ್ತದೆ. ಇದು ನಡೆದದ್ದು ಶಕ ೧೯೧೯ ಎಂದರೆ ಕ್ರಿ.ಶ. ೧೭೦೭ರಲ್ಲಿ.

ಹೀಗೆ ಹಂತ ಹಂತವಾಗಿ ಉದ್ಧಾರಗೊಂಡು ಬಂದ ಕನಕಗಿರಿಯ ಬಸದಿಗೆ ಜೀರ್ಣೋದ್ಧಾರಕ್ಕಾಗಿ ಕೃಷ್ಣರಾಜಮಹಾರಾಜರು “ಬೆಳ್ಗುಳದ ದೇವರಿಗೆ ಏಳುನೂರು ವರಹದ ಗ್ರಾಮ ಮೂರನ್ನು ಸರ್ವಮಾನ್ಯವಾಗಿ ಕೊಟ್ಟು ಅಲ್ಲಿಯ ಸುಂಕದ ಬಗೆ ಐವತ್ತು ವರಹವಂ ಕನಕಗಿರಿಯ ಬಸ್ತಿಪಡಿತರ ಜೀರ್ಣೋದ್ಧಾರಕ್ಕಂ ಮಾಡಲು ತಾಜ ಸನ್ನದು ಶಾಸನಮಂ ಬರೆಯಿಸಿಕೊಟ್ಟರು”. (೩೧೨)

ಅನಂತರ ಕಂಡುಬರು ಕನಕಗಿರಿಯ ವಿಷಯವೆಂದರೆ ದೇವಚಂದ್ರನ ವಂಶಸ್ಥರು ಕನಕಗಿರಿಯಲ್ಲಿ ನೆಲೆಗೊಂಡರು. ಇದು “ಕಥಕನ ವಂಶಾವಳಿಯೆಂತೆಂದೊಡೆ” ಎಂದು ಪ್ರಾರಂಭಿಸಿ “ಶ್ರೀ ಗುಣಭದ್ರ ಶಿಷ್ಯ ಶ್ರೀವತ್ಸಗೋತ್ರದ ಗೋಪಾಚಾರ್ಯಪುತ್ರ ಹಸ್ತಿಮಲ್ಲಿ ಷೇಣಸೂನು ಪಾರ್ಶ್ವಪಂಡಿತ ಚಂದಪಾರ್ಯವಂಶಜ ಚಂದ್ರನಾಥಂ ಕನಕ ಗಿರಿಯೊಳ್ ನಿಂತನಾ ವಂಶಪರಂಪರೆಯೊಳೆ” (೩೧೪) ಬಂದಂತಹ “ದೇವಂದ್ರನೆಂಬಂ ವಿಕೃತು ವತ್ಸರದಾಷಾಢ ಶುದ್ಧ ಪೌರ್ಣಮಿಯೊಳ್ ಪುಟ್ಟಿ ಪದಿನಾಲ್ಕು ವರ್ಷದಾರಭ್ಯದಿಂ ಕರಣಿಕಾಗ್ರಗಣ್ಯನೆನಿಸಿ ಕವಿ ಗಮಕ ವಾಗ್ಮಿ ತ್ವದಿಂ ಸಜ್ಜನನೆನಿಸಿಪ್ಪಿನಂ” (೩೧೪) ಎಂದು ತನ್ನನ್ನು ಬಣ್ಣಿಸಿಕೊಳ್ಳುವ ಹಿರಿಯ ವಿದ್ವಾಂಸನೂ ದೈವಭಕ್ತನೂ ಆದಂತಹ ದೇವಚಂದ್ರನ ಬಗೆಗೆ ತಿಳಿದುಕೊಳ್ಳುವ ಎಷ್ಟು ಹೆಮ್ಮೆಯೆನಿಸುವುದೋ ಹಾಗೆಯೇ ಆತನ ರಾಜಾವಳೀ ಕಥಾಸಾರದ ಬಗೆಗೂ ಅತೀವ ಅದರಾಭಿಮಾನಗಳನ್ನು ತಳೆಯುವುದು ಸಹಜವಾಗಿದೆ.

* * *